ಚಿಕ್ಕಮಗಳೂರು: ಜನಪದ ಸೊಗಡಿನ ಕನ್ನಡ ಸಂಸ್ಕೃತಿ ಎತ್ತಿ ಹಿಡಿಯುವ ಉದ್ದೇಶದಿಂದ ತಾಯಿ-ಮಗನ ಭಾಂದವ್ಯದ ಕಥಾ ಹಂದರ ಹೊಂದಿರುವ ನಿಂಬಿಯಾ ಬನಾದ ಮ್ಯಾಗ ಕನ್ನಡ ಚಲನಚಿತ್ರ ಏಪ್ರಿಲ್ ೪ ರಂದು ರಾಜ್ಯಾದ್ಯಾಂತ ತೆರ ಕಾಣಲಿದೆ ಎಂದು ವರನಟ ಡಾ.ರಾಜ್‌ಕುಮಾರ್ ಅವರ ಮೊಮ್ಮಗ ಹಾಗೂ ನಟ ಷಣ್ಮುಖಗೋವಿಂದ್‌ರಾಜ್ ತಿಳಿಸಿದರು.
ಇಂದು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಶೇ.೮೦ ರಷ್ಟು ಚಿತ್ರೀಕರಣ ಮಾಡಲಾಗಿದ್ದು, ಈ ಚಲನಚಿತ್ರ ಸುಮಾರು ೭೦ ಚಿತ್ರ ಮಂದಿರಗಳಲ್ಲಿ ಬಿತ್ತರಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯ ಮಲೆನಾಡಿನ ಬೆಂಗಾಡಿ ಗ್ರಾಮದ ಜಮೀನ್ದಾರ್ ಕುಟುಂಬದ ರಾಘವೇಂದ್ರ ಮತ್ತು ವರಲಕ್ಷ್ಮೀ ದಂಪತಿಗೆ ೧೦ ವರ್ಷಗಳ ನಂತರ ಒಂದು ಗಂಡು ಮಗು ಜನಿಸುತ್ತದೆ. ಮಗು ಜನಿಸಿದ ಸ್ವಲ್ಪ ದಿನಗಳಲ್ಲೇ ತಂದೆ ನಿಗೂಢವಾಗಿ ಮೃತಪಡುತ್ತಾರೆ.
ಈ ಸಂದಂರ್ಭದಲ್ಲಿ ಮಗುವಿನ ಪ್ರಾಣಕ್ಕೆ ಆಪತ್ತು ಆಗಬಹುದೆಂದು ಎಂದು ಭಾವಿಸಿ ತಾಯಿ ದೂರದ ಪಟ್ಟಣದಲ್ಲಿರುವ ಪರಿಚಯಸ್ತರಿಗೆ ಮಗವನ್ನು ಒಪ್ಪಿಸಿ, ಮಗು ಪ್ರಾಣಾಪಾಯದಲ್ಲಿದೆ ಎಂಬ ವಿಷಯ ತಿಳಿಸಿ, ನಾನು ಬರುವವರೆಗೂ ಮಗು ನಿಮ್ಮ ಬಳಿ ಇರಲಿ ಎಂದು ಹೇಳಿ, ಈ ಮಗುವಿನ ರಹಸ್ಯವನ್ನು ಯಾರಿಗೂ ತಿಳಿಸದಂತೆ ಆಣೆ ಮಾಡಿಸಿ, ಊರು ತಲುಪುವ ಕಥಾ ಹಂದರವನ್ನು ಚಿತ್ರದಲ್ಲಿ ಮನೋಜ್ಞವಾಗಿ ಚಿತ್ರೀಕರಿಸಲಾಗಿದ್ದು, ಪ್ರೇಕ್ಷರಿಗೆ ಮನರಂಜನೆ ಖಂಡಿತ ಲಭ್ಯವಾಗಲಿದೆ ಎಂದರು.
ಇದು ನನ್ನ ಮೊದಲ ಚಿತ್ರವಾಗಿದ್ದು, ಮಲ್ಲಂದೂರು, ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿ, ಕಳಸಾಪುರ ಮತ್ತಿತರರೆಡೆ ಚಿತ್ರೀಕರಣಗೊಂಡಿರುವ ಈ ಚಿತ್ರಕ್ಕೆ ಅಶೋಕ್ ಕಡಬ ಇವರು ನಿರ್ದೇಶಿಸಿದ್ದು, ನಿರ್ಮಾಪಕರಾಗಿ ಮಾದೇಶ್, ಸಂಗೀತ ನಿರ್ದೇಶಕ ಆರ್.ಎಮ್ ಕಾರ್ತಿಕ್ ಸಂಗೀತ ನೀಡಿದ್ದು, ನಾಯಕಿ ತನುಶ್ರೀ, ಹಿರಿಯ ಕಲಾವಿದರಾದ ಪದ್ಮಾವಾಸಂತಿ, ಸುರೇಶ್, ಸಂದೀಪ್ ಮಲಾನಿ, ಸ್ಥಳೀಯ ಕಲಾವಿದರಾದ ಎ.ಎನ್ ಮೂರ್ತಿ ಸೇರಿದಂತೆ ಹಲವರು ತಾರಗಣದಲ್ಲಿದ್ದಾರೆ ಎಂದು ವಿವರಿಸಿದರು.
ನಿರ್ದೇಶಕ ಅಶೋಕ್ ಕಡಬ ಮಾತನಾಡಿ, ಜಮೀನ್ದಾರ್ ಕುಟುಂಬದಲ್ಲಿ ಜನಿಸಿದ ಮಗು ನಾಪತ್ತೆಯಾಗಿ, ೨೫ ವರ್ಷಗಳ ಬಳಿಕ ಸ್ವಂತ ಮನೆ ಸೇರುವ ಕಥೆಯನ್ನು ಆಧರಿಸಿ, ಚಿತ್ರ ನಿರ್ಮಾಣ ಗೊಂಡಿದ್ದು, ಇದೊಂದು ಕುಟುಂಬ ಸಮೇತರಾಗಿ ಕುಳಿತು ವೀಕ್ಷಿಸಬಹುದಾದ ಸಾಂಸಾರಿಕ ಚಿತ್ರವಾಗಿದೆ. ವಜ್ರೇಶ್ವರಿ ಕಂಬೈನ್ಸ್ ರವರ ಬ್ಯಾನರ್‌ನಲ್ಲಿ ಮೂಡಿ ಬರುತ್ತಿರುವ ಚಿತ್ರದಲ್ಲಿ ಮುಕುಂದಯ್ಯ ಪಾತ್ರವನ್ನು ರಘು, ಜಮೀನ್ದಾರ್ ಪಾತ್ರವನ್ನು ಎ.ಎನ್ ಮೂರ್ತಿ ನಿರ್ವಹಿಸಿದ್ದಾರೆ ಎಂದರು.
ಸುಮಾರು ೭೦ ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಚಲನಚಿತ್ರದಲ್ಲಿ ೪ ಗೀತೆಗಳು ಇವೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮೇಘಮಾಲೆ ಚಿತ್ರದ ನಾಯಕ ಸುನಾದ್‌ರಾಜ್, ನಿರ್ಮಾಪಕ ಮಾದೇಶ್, ತರೀಕೆರೆ ರಘು, ಎ.ಎನ್ ಮೂರ್ತಿ ಉಪಸ್ಥಿತರಿದ್ದರು.
Kannada movie Nimbiya Banada Maga to be released across the state on April 4