ಚಿಕ್ಕಮಗಳೂರು: ನಲ್ಲೂರು ಮಠ ವರ್ಸಸ್ಸ್ ಬಡಮಕಾನ್ ತೆರವು ವಿವಾದ ಪ್ರಕರಣ ಕೈಗೊಳ್ಳುವ ಪೂರ್ವದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡದೆ, ಸೂಕ್ತ ಪೊಲೀಸ್ ಭದ್ರತೆ ಪಡೆಯದೆ, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ರೀತಿಯಲ್ಲಿ ನಡೆದುಕೊಂಡ ಆರೋಪದ ಹಿನ್ನೆಲೆಯಲ್ಲಿ ವಕ್ಫ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.
ಚಿಕ್ಕಮಗಳೂರು ನಗರದ ಜಾಮೀಯಾ ಮಸೀದಿಗೆ ಸೇರಿದ ಬಡಾ ಮಕಾನ್ ವಕ್ಸ್ ಆಸ್ತಿಯಲ್ಲಿಎನ್. ಎಂ. ಕಮಲಮ್ಮ ಹಾಗೂ ಇತರರು ಮತ್ತು ವಕ್ಫ್ ಮಂಡಳಿ ಹಾಗೂ ಜಾಮೀಯಾ ಮಸೀದಿ ಆಡಳಿತ ಸಮಿತಿ ಮಧ್ಯೆ ನ್ಯಾಯಾಲಯದಲ್ಲಿ ವಿವಾದ ನಡೆಯುತ್ತಿದೆ.
ಎನ್. ಎಂ. ಕಮಲಮ್ಮ ಹಾಗೂ ಇತರರನ್ನು ವಿವಾದಿತ ಸ್ಥಳದಿಂದ ತೆರವುಗೊಳಿಸದಂತೆ ತಡೆಯಾಜ್ಞೆ ನೀಡಿ ಪ್ರಧಾನ ಜಿಲ್ಲಾ ನ್ಯಾಯಾಲಯ, ಚಿಕ್ಕಮಗಳೂರು ದಿನಾಂಕ.30.10.2017 ರಂದು ಎಂ.ಎ. ಸಂಖ್ಯೆ. 18/2016 ರಲ್ಲಿ ತೀರ್ಪು ನೀಡಿದೆ. ಜಾಮೀಯಾ ಮಸೀದ್, ಚಿಕ್ಕಮಗಳೂರು ಆಡಳಿತ ಮಂಡಳಿ,ಚಿಕ್ಕಮಗಳೂರು ಘನ ಉಚ್ಚ ನ್ಯಾಯಾಲಯದಲ್ಲಿ ರಿಟ್ ಪಿಟಿಷನ್ ನಂ.55686/2017 (GM-PP) ರಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಅನುಮತಿಸಿ ದಿನಾಂಕ.28.01.2025 ರಂದು ಆದೇಶ ಹೊರಡಿಸಿರುತ್ತದೆ.
ವಕ್ಫ್ಅಧಿಕಾರಿ ಸೈಯದ್ ಸತ್ತಾರ ಹುಸೇನಿ,ಬಸವನಹಳ್ಳಿ, ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇರುವ ಬಡಾ ಮಕಾನ್ ದರ್ಗಾ ಮತ್ತು ಮಸಿದ್ ಸ್ಥಳದ ಪಕ್ಕದಲ್ಲಿ ಇರುವ ವಿವಾದಿತ ಸ್ಥಳದಲ್ಲಿ ತೆರವು ಕಾರ್ಯಾಚರಣೆ ಕೈಗೊಳ್ಳುವ ಪೂರ್ವದಲ್ಲಿ ಅಧಿಕಾರ ವ್ಯಾಪ್ತಿ ಬಗ್ಗೆ ಸರಿಯಾಗಿ ಮಾಹಿತಿ ಹೊಂದಿಲ್ಲ ಎಂದು ಜಿಲ್ಲಾಧಿಕಾರಿಗಳು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದರು.
ತೆರವು ಕಾರ್ಯಚರಣೆ ಹೊರಡಿಸುವ ಮುನ್ನ ಸ್ಥಳೀಯ ನಗರಸಭೆ ಆಯುಕ್ತರಿಗೆ ಮಾಹಿತಿ ನೀಡಿಲ್ಲ, ಸ್ಥಳೀಯ ಪೊಲೀಸ್ ಠಾಣೆಗೆ ಸೂಕ್ತ ಬಂದೋಬಸ್ತ್ ಒದಗಿಸಲು ಮಾಹಿತಿ ನೀಡಿಲ್ಲ ಎಂದು ತಿಳಿಸಿದ್ದಾರೆ. ದಾಖಲಾತಿ ಪರಿಶೀಲಿಸದೆ ಏಕಾಏಕಿ ನಡೆಸಿದ ತೆರವು ಕಾರ್ಯಚರಣೆ ಹಾಗೂ ಬೇಜವಾಬ್ದಾರಿ ನಡೆಯಿಂದ ವಿವಾದಿತ ಪ್ರದೇಶದ ವ್ಯಾಪ್ತಿಯಲ್ಲಿ ಪಕ್ಷುಬ್ಬ ವಾತಾವಾರಣ ಉಂಟಾಗಿರುಲು ಕಾರಣರಾಗಿರುತ್ತಾರೆ ಎಂದು ಹೇಳಿದ್ದಾರೆ.
ಏಕಾಏಕಿ ತೆರವು ಕಾರ್ಯಾಚರಣೆಯಿಂದ ಚಿಕ್ಕಮಗಳೂರು ನಗರದಲ್ಲಿ ಉಂಟಾದ ಪಕ್ಷುಬ್ಧ ವಾತಾವರಣ ಉಂಟಾಗಿದ್ದು, ಈ ಬಗ್ಗೆ ಅಧಿಕಾರಿಯನ್ನು ಪ್ರಶ್ನಿಸಿದಾಗ ಸಮರ್ಪಕ ದಾಖಲೆಯನ್ನು ನೀಡದೆ ಉಡಾಫೆ ಉತ್ತರ ನೀಡಿ ಉದ್ಧಟತನ ಪ್ರದರ್ಶಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಮ್ಮ ವರದಿಯಲ್ಲಿ ಆರೋಪಿಸಿದ್ದಾರೆ.
Nallur Math-Badamkan building clearance dispute case – Waqf officer suspended