ಚಿಕ್ಕಮಗಳೂರು: ಪಂಚಗ್ಯಾರಂಟಿ ಯೋಜನೆ ಸದ್ಬಳಕೆಯಲ್ಲಿ ಜಿಲ್ಲೆ ಪ್ರಥಮ ಸ್ಥಾನಲ್ಲಿದ್ದು,ಪ್ರಥಮ ಸ್ಥಾನದಿಂದ ಕೈಜಾgದಂತೆ ವಿವಿಧ ಇಲಾಖೆ ಅಧಿಕಾರಿ ವೃಂದದೊಂದಿಗೆ ಸಭೆ ನಡೆಸಿ ಸಾಧಕ-ಬಾಧಕ ಚರ್ಚಿಸಲಾಗುತ್ತಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿಯ ಗ್ಯಾರಂಟಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಇಂದು ಅವರು ಮಾತನಾಡಿ ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ರಾಜ್ಯ ಸರ್ಕಾರ ೫೧ ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿಗೆ ಮೀಸಲಿಟ್ಟು ಬಹುದೊಡ್ಡ ತೀರ್ಮಾನ ಕೈಗೊಂಡಿದೆ. ಅಲ್ಲದೇ ಜಿಲ್ಲೆಯ ಪ್ರತಿ ತಾಲ್ಲೂಕು ಮಟ್ಟದಲ್ಲೂ ಅಧ್ಯಕ್ಷರು ಸಭೆಗಳನ್ನು ನಡೆಸಿ ಜನಸಾಮಾನ್ಯರಿಗೆ ಗ್ಯಾರಂಟಿ ಯೋಜನೆಗಳ ಸೌಲಭ್ಯಗಳ ಕುರಿತು ಮಾಹಿತಿ ನೀಡುತಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯಾದ್ಯಂತ ಏಪ್ರೀಲ್ ೨೦೨೪ರ ರಿಂದ ೨೦೨೫ ವರೆಗೆ ಗೃಹಲಕ್ಷ್ಮಿ ಯೋಜನೆಯಡಿ ೨,೭೦,೨೭೩ ಫಲಾನುಭವಿಗಳು ನೋಂದಾಯಿಸಿಕೊಂಡಿದ್ದ್ದು ಒಟ್ಟು ರೂ. ೫೨,೨೫,೧೮,೦೦೦ ಗಳನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾಹಿಸಲಾಗಿದೆ. ಎಂದ ಅವರು ವಿವಿಧ ತಾಂತ್ರಿಕ ಸಮಸ್ಯೆಗಳಿಂದ ಬಾಕಿ ಇರುವ ಫಲಾನುಭವಿಗಳಿಗೆ ಹಣ ವರ್ಗಾಹಿಸಲು ಅಗತ್ಯ ಕ್ರಮವಹಿಸಿ ಎಂದರು.
ಶಕ್ತಿ ಯೋಜನೆಯು ಮಹಿಳಾ ಸಬಲೀಕರಣದ ಮಹತ್ವದ ಯೋಜನೆಯಾಗಿದ್ದು, ಈ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ಒಟ್ಟು ೩,೬೪,೯೯,೫೩೬ಅಭ್ಯರ್ಥಿಗಳು ಉಚಿತವಾಗಿ ಪ್ರಯಾಣಿಸುವ ಮೂಲಕ ಯೋಜನೆಯ ಸೌಲಭ್ಯ ಪಡೆದಿದ್ದಾರೆ. ನಿರುದ್ಯೋಗ ಸಮಸ್ಯೆ ಹೋಗಲಾಡಿಸುವ ಉದ್ದೇಶದಿಂದ ಜಾರಿಗೆ ತಂದಿರುವ ಯುವನಿಧಿ ಯೋಜನೆಯಡಿ ಜಿಲ್ಲೆಯಾದ್ಯಂತ ಒಟ್ಟು ೩,೯೩೫ ನೋಂದಾಯಿತ ಫಲಾನುಭವಿಗಳು ಒಟ್ಟು ೪,೭೦,೯೫,೫೦೦ ಯೋಜನೆಯ ಲಾಭ ಪಡೆದಿದ್ದಾರೆ ಎಂದ ಅವರು ಪ್ರತಿ ತಿಂಗಳು ಸಾರ್ವಜನಿಕರನ್ನೊಳಗೊಂಡ ಸಭೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿ ವಿವಿಧ ತಾಂತ್ರಿಕ ದೋಷಗಳಿಂದ ಪಂಚಗ್ಯಾರಂಟಿ ಯೋಜನೆಯಿಂದ ವಂಚಿತರಾಗಿರುವವರನ್ನು ಗುರುತಿಸಿ ಅರ್ಹರಿಗೆ ಯೋಜನೆಯ ಫಲ ದೊರಕುವಂತೆ ಕ್ರಮವಹಿಸಿ ಎಂದರು.
ಜಿಲ್ಲೆಯಲ್ಲಿ ಒಟ್ಟು ೨,೫೯,೬೩೪ ಪಡಿತರ ಚೀಟಿದಾರರಿದ್ದಾರೆ ಇವುಗಳಲ್ಲಿ ೨,೪೯,೪೮೧ ಪಡಿತರ ಚೀಟಿಗಳು ಡಿಬಿಟಿ ಯೋಜನೆಗೆ ಅರ್ಹವಾಗಿದೆ. ಮಾರ್ಚ್ ತಿಂಗಳಿಂದ ಫೆಬ್ರವರಿ ಹಾಗೂ ಈ ತಿಂಗಳ ಪಡಿತರವನ್ನು ಹಣದ ಬದಲಾಗಿ ಪ್ರತಿ ವ್ಯಕ್ತಿಗೆ ೧೦ ಕೆ.ಜಿ ಅಕ್ಕಿ ವಿತರಿಸಲು ಸರ್ಕಾರ ಮುಂದಾಗಿದೆ,
ಯಾವ ಯಾವ ಪಡಿತರದಾರರಿಗೆ ಅನ್ನಭಾಗ್ಯ ಯೋಜನೆಯ ಹಣ ವರ್ಗಾವಣೆಯಾಗಿಲ್ಲ ಅಂತಹ ಪಡಿತರದಾರರ ಹಾಗೂ ಅವರುಗಳು ಯಾವ ನ್ಯಾಯಬೆಲೆ ಅಂಗಡಿ ವ್ಯಾಪ್ತಿಗೆ ಬರುತ್ತಾರೆಂಬ ಮಾಹಿತಿಯನ್ನು ಆಯಾ ಭಾಗದ ಪ್ರಾಧಿಕಾರದ ಪ್ರತಿನಿಧಿಗಳಿಗೆ ನೀಡಬೇಕು, ಪ್ರತಿನಿಧಿಗಳಿಗೆ ಯೋಜನೆ ಸಂಬಂಧ ಸಹಕರಿಸುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಮಾಹಿತಿಯನ್ನು ಜಿಲ್ಲೆಯ ಪ್ರತಿ ನಾಗರೀಕರಿಗೂ ತಲುಪಿಸಲು ಕಾರ್ಯಕ್ರಮಗಳನ್ನು ಆಯೋಜಿಸಿ ವ್ಯಾಪಕ ಪ್ರಚಾರ ಮಾಡಿ ಅರಿವು ಮೂಡಿಸಲಾಗುತ್ತಿದೆ. ಯುವ ಜನತೆಗೆ ಉದ್ಯೋಗ ಸೃಷ್ಠಿಸಿ ಹಾಗೂ ಸ್ವಾವಲಂಭಿ ಬದುಕು ನಿರ್ಮಿಸಿಕೊಡುವ ಉದ್ದೇಶದಿಂದ ಆಸಕ್ತಿ ಇರುವ ಕ್ಷೇತ್ರಗಳಲ್ಲಿ ತರಬೇತಿ ನೀಡಿ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಕ್ರಮವಹಿಸಲಾಗುತ್ತಿದೆ ಎಂದ ಅವರು ಸಾರ್ವಜನಿಕ ಸ್ಥಳಗಳಲ್ಲಿ ಭಿತ್ತಿ ಪತ್ರಗಳು ಹಾಗೂ ಬ್ಯಾನರ್‌ಗಳನ್ನು ಆಳವಡಿಸಿ ಯೋಜನೆಗಳ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದರು.
ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ ೩,೧೧,೪೦೯ ಫಲಾನುಭವಿಗಳಿದ್ದು ಒಟ್ಟು ೧೧೮,೨೯೩,೯೬೦ ರೂಗಳಷ್ಟು ವೆಚ್ಚ ಭರಿಸಲಾಗಿದೆ.೩,೫೩,೧೯೦ ಆರ್ಹಫಲಾನುಭವಿಗಳಿದ್ದಾರೆ. ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಸಮಿತಿ ಉಪಾಧ್ಯಕ್ಷರು, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
District ranks first in the use of guarantee scheme
