ಚಿಕ್ಕಮಗಳೂರು: ಪುರುಷ ಪ್ರಧಾನವಾದ ನಮ್ಮ ಸಮಾಜದಲ್ಲಿ ಮಹಿಳೆಯರು ತಮ್ಮ ಒಳತುಮುಲಗಳನ್ನು ಬಹಿರಂಗವಾಗಿ ಹೇಳಿಕೊಳ್ಳಲಾಗದ ಸಂದಿಗ್ಧ ಪರಿಸ್ಥಿತಿಯನ್ನು ರಂಗದ ಮೇಲೆ `ಕಾಣೆಯಾದ ನೀಲಾ… ಕಂಡಿರೇ..’ ನಾಟಕ ಯಶಸ್ವಿಯಾಗಿ ಬಿಂಬಿಸಿದೆ ಎಂದು ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ ವಿಶ್ಲೇಷಿಸಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಭಾನುವಾರ ಸಂಜೆ ಕಲ್ಕಟ್ಟೆ ಪುಸ್ತಕದ ಮನೆ, ಕಲಾ ಸೇವಾ ಸಂಘ, ಬಿಲೀವ್ ಫಿಸಿಯೋಥೆರಪಿ ಕ್ಲಿನಿಕ್ ಹಾಗೂ ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್ ಸಹಯೋಗದಲ್ಲಿ ಪ್ರದರ್ಶನಗೊಂಡ ನಾಟಕ ವೀಕ್ಷಿಸಿದ ಬಳಿಕ ಅವರು ಮಾತನಾಡಿದರು.
ಹೊರ ಹಾಕಲಾಗದ ತಮ್ಮ ಎಲ್ಲಾ ಭಾವನೆಗಳನ್ನು ನೀಲಾಳ ಮೂಲಕ ಇಬ್ಬರು ಮಹಿಳೆಯರು ಪ್ರಸ್ತುತಪಡಿಸುತ್ತಾರೆ. ಯಾವತ್ತೂ ನೀಲಾ ಕಾಣೆಯಾಗುವುದಿಲ್ಲ. ಅನೇಕ ಹೆಣ್ಣು ಮಕ್ಕಳು ತಮ್ಮ ನೈಜ ಭಾವನೆಗಳನ್ನು, ಕನಸುಗಳನ್ನು ಅರಳಿಸಿಕೊಳ್ಳಲಾಗದೆ ಹಿಂಜರಿಯುತ್ತಾ ತಾವೇ ಕಾಣೆಯಾಗುತ್ತಾರೆ. ಈ ಒಂದು ಗಂಟೆಯ ಈ ನಾಟಕ ಪುರುಷರಲ್ಲಿ ವೈಚಾರಿಕತೆಯ ಚಿಂತನೆಯನ್ನು ಹುಟ್ಟು ಹಾಕುತ್ತದೆ ಎಂದರು.
ಹಿರಿಯ ಕಲಾವಿದ ಚಂದ್ರಮೂರ್ತಿ ಮಾತನಾಡಿ ನಾಟಕ ಉತ್ತಮವಾಗಿ ಮೂಡಿ ಬಂದಿದೆ. ಕಲಾವಿದರಿಬ್ಬರ ನಟನೆ ಸಹಜವಾಗಿತ್ತು. ಪ್ರಣಮ್ಯ ಕಶ್ಯಪ್ ಅವರ ಸಂಗೀತ ಉತ್ತಮವಾಗಿತ್ತು. ಇದು ರಾಜ್ಯ, ರಾಷ್ಟ್ರದ ಎಲ್ಲೆಡೆ ಪ್ರದರ್ಶನಗೊಳ್ಳಲಿ ಎಂದು ಆಶಿಸಿದರು.
ಕ್ಯಾತನಬೀಡು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ರವೀಶ್ ಬಸಪ್ಪ ಮಾತನಾಡಿ, ಬೆಳಕು ವೇದನೆಯ ಆಲಾಪನೆ ಸಂದರ್ಭಕ್ಕನುಗುಣವಾಗಿ ಅಗತ್ಯವಿತ್ತು. ಆಂಗಿಕ ಅಭಿನಯ ಇನ್ನೊಂದಷ್ಟು ಬೇಕಿತ್ತು. ರಂಗದ ಮೇಲಿನ ಮೊದಲನೇ ಪ್ರಯೋಗ ಇದು. ಇನ್ನೆರಡು-ಮೂರು ಪ್ರಯೋಗವಾದ ಬಳಿಕ ಪರಿಪಕ್ವತೆಯಿಂದ ಜನಮೆಚ್ಚುಗೆಗೆ ಪಾತ್ರವಾಗುವ ಎಲ್ಲಾ ವಿಶ್ವಾಸವನ್ನು ಈ ನಾಟಕ ಮೂಡಿಸಿದೆ ಎಂದು ಹೇಳಿದರು.
ನಿವೃತ್ತ ಕನ್ನಡ ಉಪನ್ಯಾಸಕಿ ಭಾರತಿ ಮಾತನಾಡಿ, ವಿಶಿಷ್ಟತೆಯನ್ನು, ತನ್ನೊಳಗಿನ ಅನನ್ಯತೆಯನ್ನು ಕಟ್ಟಿಕೊಟ್ಟ ನಾಟಕ ಇದು. ಹೆಣ್ಣಿನ ಅಸ್ಮಿತೆಯನ್ನು ವಿಶಿಷ್ಟ ರೀತಿಯಲ್ಲಿ ತೆರೆದಿಡುವುದರ ಜೊತೆಗೆ ತನ್ನೊಳಗಿನ ಬದುಕಿನ ಅದರಾಚೆಯ ನಡುವಿನ ಎಲ್ಲಾ ಭಾವನೆಗಳನ್ನು ಈ ನಾಟಕ ವ್ಯಕ್ತಪಡಿಸುತ್ತದೆ. ನೀಲಾ ಎಲ್ಲೋ ಒಬ್ಬಳಲ್ಲ. ಪುರುಷ ಪ್ರಧಾನ ವ್ಯವಸ್ಥೆಯ ನಡುವೆ ತನ್ನೊಳಗಿನ ಎಲ್ಲಾ ತುಮುಲಗಳನ್ನು, ಪಾತ್ರಗಳನ್ನು ತನ್ನದಲ್ಲದ ಬದುಕಿನ ನಡುವೆ ವಾಸ್ತವತೆಯನ್ನು ಸಾಕ್ಷೀಕರಿಸುವ ಪ್ರಯತ್ನ ಇದರಲ್ಲಿದೆ. ಹಾಗೆಯೇ ರಂಗ ಹಿನ್ನೆಲೆಯ ಹಾಡುಗಳು ಗಮನ ಸೆಳೆದಿವೆ ಎಂದರು.
ನಾಟಕ ನಿರ್ದೇಶಕ ನಂದಕುಮಾರ್ ಮಾತನಾಡಿ, ಇದೊಂದು ಉತ್ತಮ ರಂಗ ಪ್ರಯೋಗ. ಚಿಕ್ಕಮಗಳೂರಿನಲ್ಲಿ ಇಂದಷ್ಟೇ ಕಲ್ಕಟ್ಟೆ ರಂಗ ಪಾದಾರ್ಪಣೆ ಮಾಡಿದೆ. ಇಂತಹ ಪ್ರದರ್ಶನಗಳು ಇಲ್ಲಿ ಇನ್ನೂ ಹೆಚ್ಚಾಗಬೇಕು. ಮಹಾಭಾರತವನ್ನು ಬರೆದವರು ವ್ಯಾಸರು. ಅದರಲ್ಲಿ ಕುಂತಿ ಹಾಗೂ ಗಾಂಧಾರಿಯ ವೇದನೆಗಳನ್ನು ತುಮುಲಗಳನ್ನು ಅಚ್ಚುಕಟ್ಟಾಗಿ ಚಿತ್ರಿಸಲಾಗಿದೆ. ಹಾಗೆಯೇ ರಾಮಾಯಣದಲ್ಲಿ ಸೀತೆ ಆಗಿರಬಹುದು, ಕೈಕೇಯಿ ಆಗಿರಬಹುದು. ಅದೇ ರೀತಿಯಲ್ಲಿ ನೀಲಾ ಕೂಡ ತನ್ನ ನೋವನ್ನು ತಾನು ಹೇಳಿಕೊಂಡಿದ್ದಾಳೆ. ಆಧುನಿಕ ರಂಗಭೂಮಿಯಲ್ಲಿ ಇದನ್ನು ಕಟ್ಟಿಕೊಟ್ಟಿದ್ದಾರೆ ಎಂದರು.
ಮನಶ್ಯಾಸ್ತ್ರದ ವಿದ್ಯಾರ್ಥಿನಿ ಚಿನ್ಮಯಿ ಮಾತನಾಡಿ, ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಮಕ್ಕಳು ವಿವರಿಸಲು ಸಾಧ್ಯವಾಗದೇ ಇರುವ ಪರಿಸ್ಥಿತಿಯಲ್ಲಿ ಇದ್ದಾರೆ. ಈ ಕ್ರಮಕ್ಕೆ ತಡೆಯೊಡ್ಡಬೇಕಾಗಿರೋದು ನಾವೆ. ಇದು ರಂಗರೂಪದಲ್ಲಿದೆ. ದಿನನಿತ್ಯದ ಜೀವನದಲ್ಲಿ ನಮ್ಮ ಹೆಣ್ಣು ಮಕ್ಕಳ ಭಾವನೆಗಳಿಗೆ ಮನ್ನಣೆ ನೀಡಿ ಕಿವಿಯಾದಲ್ಲಿ ದೊಡ್ಡ ಬದಲಾವಣೆ ತರಬಹುದು ಎಂದರು.
ರಂಗ ನಿರ್ದೇಶಕಿ ಶ್ವೇತಾ ವಿನೀತ್‌ಕುಮಾರ್ ಮಾತನಾಡಿ, ಪುರುಷ ಪ್ರಧಾನ ಸಮಾಜ ಇರುವುದು ಸರಿ. ಆದರೆ ಈ ವ್ಯವಸ್ಥೆ ಹೆಣ್ಣು ಮಾತ್ರ ಶೋಷಿತೆಯಲ್ಲ. ಇಬ್ಬರೂ ಕೂಡ ಸಮಾನವಾಗಿ ಶೋಷಿತರೆ. ಪ್ರಧಾನ ವ್ಯವಸ್ಥೆ ಎನ್ನುವುದು ಬರಿಯ ಮನಸ್ಸಿದೆಯಷ್ಟೆ. ಅದು ಗಂಡಿಂದಾಗಲಿ, ಹೆಣ್ಣಿಂದಾಗಲಿ ಸೃಷ್ಟಿಯಾಗಿರುವುದಲ್ಲ. ಗಂಡಿನಲ್ಲಿ ಇರಬಹುದಾದ ಎಲ್ಲಾ ಆರ್ದ್ರಾ ಗುಣಗಳನ್ನು ಈ ವ್ಯವಸ್ಥೆ ತುಂಡರಿಸುತ್ತಿದೆ. ಅದನ್ನು ಸರಿಪಡಿಸುವುದು ಇಬ್ಬರ ಕರ್ತವ್ಯ ಎಂದರಲ್ಲದೆ ಈ ನಾಟಕ ಇನ್ನಷ್ಟು ಪ್ರದರ್ಶನಗಳನ್ನು ಕಾಣಲಿ ಎಂದು ಆಶಿಸಿದರು.
ಸಂಗೀತ ನಿರ್ದೇಶಕ, ಗಝಲ್ ಗಾಯಕ ಇಮ್ತಿಯಾಜ್ ಸುಲ್ತಾನ್ ಮಾತನಾಡಿ, ಈ ರಂಗ ಪ್ರಯೋಗ ಅತ್ಯುತ್ತಮವಾಗಿ ಮೂಡಿ ಬಂದಿದೆ. ಮುಂಬಯಿ ಕನ್ನಡ ಸಂಘ ಮತ್ತು ದೆಹಲಿ ಕನ್ನಡ ಸಂಘದಲ್ಲಿ ಕೂಡ ಈ ಪ್ರಯೋಗ ಯಶಸ್ವಿಯಾಗಲಿ ಎಂದು ಹಾರೈಸಿದರು.
ಶಿಕ್ಷಕಿ ಅನಿತಾ ಮಾತನಾಡಿ, ನೀಲಾ ಕಾಣೆಯಾದ ವಿಚಾರ ಬಂದಾಗ ದುಃಖದ ಆಲಾಪನೆ ಇನ್ನೂ ಪರಿಣಾಮಕಾರಿಯಾಗಿ ಮೂಡಿಬರಬೇಕಿತ್ತು. ಕಾಣೆಯಾಗಿರುವ ನೋವು ಕಾಣಿಸಬೇಕಿತ್ತು. ಕಲಾವಿದರ ಅಭಿನಯ ಉತ್ತಮವಾಗಿ ಮೂಡಿ ಬಂದಿದೆ. ಎಲ್ಲರ ಒಳಗೂ ನೀಲಾ ಕಳೆದು ಹೋಗಿರುವುದು ಗೊತ್ತಾಗಿರುತ್ತೆ. ನಾವು ನಮ್ಮೊಳಗೆ ಕಳೆದಿರುವ ನೀಲಾಳನ್ನು ಗುರುತಿಸಿಕೊಟ್ಟಿದ್ದೀರಾ ಎಂದರು.
ರಂಗ ನಿರ್ದೇಶಕ ನೀನಾಸಂನ ಎಂ.ವಿನೀತ್‌ಕುಮಾರ್ ಮಾತನಾಡಿ, ಈ ನಾಟಕವನ್ನು ಕಲಾವಿದರನ್ನು ಅವಲಂಬಿಸಿ ಪ್ರದರ್ಶಿಸಲಾಗಿದೆ. ಯಾವುದೇ ಸ್ಪರ್ಧೆಗಲ್ಲ. ವಿವಿಧ ವಿನೋದಾವಳಿಗಳನ್ನು ಹಾಗಾಗಿ ಅವುಗಳ ಬಗ್ಗೆ ತಮಗೆ ಒಲವಿಲ್ಲ. ಹಾಗೆಂದು ಹೇಳಿದ್ದನ್ನೆಲ್ಲ ಸ್ವೀಕರಿಸಿದ್ದೇನೆ. ಆದರೆ ಅದನ್ನು ಅಳವಡಿಸಿಕೊಳ್ಳುವುದು, ಬಿಡುವುದು ಮುಂದಿನ ವಿಚಾರ. ರಂಗಭೂಮಿಯಲ್ಲಿ ನಟರನ್ನು ನಂಬಬೇಕೇ ಹೊರತು ವಿವಿಧ ವಿನೋದಾವಳಿಗಳಲ್ಲ ಎಂದರು.
ಸವಿತಾ ನಾಗಭೂಷಣ್ ಕಥೆಯಾಧರಿತ ಈ ನಾಟಕಕ್ಕೆ ನಗರದ ಜೆ.ವಿ.ಎಸ್. ಶಿಕ್ಷಣ ಸಂಸ್ಥೆಯ ರಂಗಶಿಕ್ಷಕ ನೀನಾಸಂನ ಎಂ.ವಿನೀತ್‌ಕುಮಾರ್ ರಂಗಪಠ್ಯ, ವಿನ್ಯಾಸ ಮತ್ತು ನಿರ್ದೇಶನ ನೀಡಿದ್ದು, ಕಲ್ಕಟ್ಟೆ ಪುಸ್ತಕದ ಮನೆಯ ರೇಖಾ ನಾಗರಾಜರಾವ್ ಹಾಗೂ ಅಪೂರ್ವ ವೆಂಕಟೇಶ್ ರಂಗದ ಮೇಲೆ ಮನೋಜ್ಞವಾಗಿ ಅಭಿನಯಿಸಿದರು. ಪೂರ್ವಿ ಕಲ್ಯಾಣಿ ಸಂಗೀತ ಸಂಯೋಜನೆಯಲ್ಲಿ ಪ್ರಣಮ್ಯ ಕಶ್ಯಪ್ ಉತ್ತಮ ಹಿನ್ನೆಲೆ ಗಾಯನ ನೀಡಿ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ನಿರ್ದೇಶಕರು ಹಾಗೂ ಕಲಾವಿದರನ್ನು ಗೌರವಿಸಲಾಯಿತು.
ನಾಟಕ ಪ್ರದರ್ಶನವನ್ನು ಕಲಾ ಸೇವಾ ಸಂಘದ ಅಧ್ಯಕ್ಷ ಕೆ.ಮೋಹನ್ ಉದ್ಘಾಟಿಸಿದರು. ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ, ಮಕ್ಕಳ ವೈದ್ಯ ಡಾ.ಜೆ.ಪಿ.ಕೃಷ್ಣೇಗೌಡ, ಸುರೇಂದ್ರ ಶೆಟ್ಟಿ, ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್, ವೈಷ್ಣವಿ ಎನ್.ರಾವ್ ಮಾತನಾಡಿದರು. ಬಿಲೀವ್ ಫಿಸಿಯೋ ಥೆರಪಿ ಕ್ಲಿನಿಕ್‌ನ ಜಿ.ರಮೇಶ್, ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್ ಮುಖ್ಯಸ್ಥ ಮಲ್ಲಿಗೆ ಸುಧೀರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊರಗಪ್ಪ ಪೂಜಾರಿ, ಎಐಟಿ ಕಾಲೇಜಿನ ಪ್ರಾಚಾರ್ಯ ಡಾ.ಸಿ.ಟಿ.ಜಯದೇವ್, ಟೈಲರ್‍ಸ್ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷ ಅಶೋಕ್ ಶೆಟ್ಟಿ, ಹಿರೇಮಗಳೂರು ರಾಕೇಶ್, ಪಂಚಮಿ ಚಂದ್ರಶೇಖರ್ ಮತ್ತಿತರರಿದ್ದರು. ನಾಗರಾಜರಾವ್ ಕಲ್ಕಟ್ಟೆ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
The missing ‘Neela Kandire’ is a successful stage experiment
