April 17, 2025
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ದಶಧರ್ಮ ಸೂತ್ರಗಳು ಜೀವನ ವಿಕಾಸಕ್ಕೆ ಅಡಿಪಾಯ

ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ

ಚಿಕ್ಕಮಗಳೂರು: :  ಭಾವೈಕ್ಯತೆ ಮತ್ತು ಆಧ್ಯಾತ್ಮ ಜ್ಞಾನ ಭಾರತದ ಉಸಿರು. ಸಮಸ್ತ ಜನರ ಭೋಗ ಮೋಕ್ಷಗಳಿಗೆ ಧರ್ಮವೇ ಮೂಲ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಅಹಿಂಸಾದಿ ಧ್ಯಾನ ಪರ್ಯಂತರವಾದ ದಶ ಧರ್ಮ ಸೂತ್ರಗಳು ಜೀವನದ ವಿಕಾಸಕ್ಕೆ ಭದ್ರ ಬುನಾದಿಯಾಗಿವೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಮಂಗಳವಾರ ಅಜ್ಜಂಪುರ ತಾಲೂಕಿನ ಗಡಿಗಿರಿಯಾಪುರ ಶ್ರೀ ಸಿದ್ದೇಶ್ವರಸ್ವಾಮಿ ಬಯಲು ಸಭಾಂಗಣದಲ್ಲಿ ಜರುಗಿದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಧರ್ಮ ಮತ್ತು ದೇಶ ಮನುಷ್ಯನ ಎರಡು ಕಣ್ಣು. ಸಾತ್ವಿಕ ಮತ್ತು ತಾತ್ವಿಕ ಚಿಂತನೆಗಳ ಪರಿಪಾಲನೆಯಿಂದ ಜೀವನ ಉಜ್ವಲಗೊಳ್ಳುವುದು. ಪರಿಶುದ್ಧವಾದ ಪವಿತ್ರವಾದ ಜೀವನ ರೂಪಿಸಿಕೊಳ್ಳಲು ಧರ್ಮಪ್ರಜ್ಞೆ ಅವಶ್ಯಕ. ಬದುಕಿನ ಹಿರಿಮೆ ಮತ್ತು ರಹಸ್ಯ ಬೋಧಿಸುವುದೇ ನಿಜವಾದ ಧರ್ಮ. ತಾನು ಎಲ್ಲರಿಗಾಗಿ ಅನ್ನುವುದು ಧರ್ಮ. ಎಲ್ಲರೂ ತನಗಾಗಿ ಅನ್ನುವುದು ಅಧರ್ಮ. ತತ್ವವನ್ನು ಅರಿತವನಿಗೆ ಸತ್ಯದ ಬೆಳಕು ಗೋಚರಿಸುತ್ತದೆ. ಕಾಯಕ ಮತ್ತು ದಾಸೋಹದ ಮೂಲಕ ಅತ್ಯದ್ಭುತ ಯಶಸ್ಸು ಸಾಧಿಸಲು ಸಾಧ್ಯವೆಂಬುದನ್ನು ಬೋಧಿಸಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಗಂಡು ಹೆಣ್ಣು, ಉಚ್ಛ ನೀಚ ಬಡವ ಬಲ್ಲಿದ ಎನ್ನದೇ ಸರ್ವರಿಗೂ ಸಮಾನವಾದ ಅವಕಾಶವನ್ನು ಕೊಟ್ಟವರು ಯುಗಪುರುಷರಾದ ಶ್ರೀ ಜಗದ್ಗುರು ರೇಣುಕಾಚಾರ್ಯರೆಂಬುದನ್ನು ಮರೆಯಬಾರದು. ಗ್ರಾಮ ಚಿಕ್ಕದಾದರೂ ಬಹು ದೊಡ್ಡ ಕಾರ್ಯಕ್ರಮ ಹಮ್ಮಿಕೊಂಡಿರುವುದು ತಮ್ಮೆಲ್ಲರ ಧರ್ಮ ನಿಷ್ಠೆಗೆ ಗುರು ಪೀಠಾಭಿಮಾನಕ್ಕೆ ಸಾಕ್ಷಿಯಾಗಿದೆ ಎಂದು ಹರುಷ ವ್ಯಕ್ತಪಡಿಸಿದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಡಿ.ಸಿ.ಸಿ.ಬ್ಯಾಂಕ ಜಿಲ್ಲಾಧ್ಯಕ್ಷರು-ಮಾಜಿ ಶಾಸಕರಾದ ಡಿ.ಎಸ್.ಸುರೇಶ್ ಅವರು ಧರ್ಮ ದರ್ಶನಗಳ ಜ್ಞಾನದ ಅರಿವಿಗಾಗಿ ಸಂಸ್ಕೃತಿ ಜ್ಞಾನ ಅವಶ್ಯಕ. ಸದೃಢ ಸಮೃದ್ಧಿ ನಾಡು ಕಟ್ಟುವುದೇ ಧರ್ಮದ ಪರಮ ಗುರಿ. ಆದರ್ಶ ಗುಣ ಮೌಲ್ಯಗಳ ಧರ್ಮ ವೀರಶೈವ. ವ್ಯಕ್ತಿತ್ವ ವಿಕಾಸಕ್ಕೆ ಶ್ರೀ ಜಗದ್ಗುರು ರೇಣುಕಾಚಾರ್ಯರು ಕೊಟ್ಟ ಕೊಡುಗೆ ಅಪಾರವಾದುದೆಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಎಡೆಯೂರು ಬಾಳೆಹೊನ್ನೂರು ಖಾಸಾ ಶಾಖಾ ಮಠದ ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಶಿವಾಗಮಗಳು ವೀರಶೈವ ಧರ್ಮ ಸಂಸ್ಕೃತಿಯ ಬೇರುಗಳು. ಶಿವಾಗಮಗಳಲ್ಲಿ ವೀರಶೈವ ಧರ್ಮದ ಹಿರಿತನ ಮತ್ತು ಪ್ರಾಚೀನ ಇತಿಹಾಸ ಕಾಣಬಹುದಾಗಿದೆ. ಗುರುವು ಜ್ಯೋತಿಯಂತೆ ಬೆಳಕು ನೀಡಿ ಪ್ರಗತಿ ಪಥದತ್ತ ಮುನ್ನಡೆಸಲು ಸಮರ್ಥನಾಗಿರುವನು. ನೊಂದವರ ಬೆಂದವರ ಬಾಳಿಗೆ ಬೆಳಕು ತೋರಿದ ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಚಾರ ಧಾರೆಗಳು ನಮ್ಮೆಲ್ಲರ ಬಾಳ ಬದುಕಿಗೆ ಶ್ರೇಯಸ್ಸನ್ನು ಉಂಟು ಮಾಡುತ್ತವೆ ಎಂದರು.

ಪವಿತ್ರ ಸಮಾರಂಭದ ಸಮ್ಮುಖವನ್ನು ಹುಲಿಕೆರೆ ದೊಡ್ಡಮಠದ ವಿರೂಪಾಕ್ಷಲಿಂಗ ಶಿವಾಚಾರ್ಯರು, ತರೀಕೆರೆ ಜಗದೀಶ್ವರ ಶಿವಾಚಾರ್ಯರು, ಹುಣಸಘಟ್ಟದ ಗುರುಮೂರ್ತಿ ಶಿವಾಚಾರ್ಯರು, ಬಿಳಕಿ ರಾಚೋಟೇಶ್ವರ ಶಿವಾಚಾರ್ಯರು, ಕೆ.ಬಿದರೆ ಪ್ರಭುಕುಮಾರ ಶಿವಾಚಾರ್ಯರು, ತೆಂಡೇಕೆರೆ ಗಂಗಾಧರ ಶಿವಾಚಾರ್ಯರು, ಬೀರೂರು ರುದ್ರಮುನಿ ಶಿವಾಚಾರ್ಯರು, ತಾವರೆಕೆರೆ ಡಾ.ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಹಾಗೂ ಹಣ್ಣೆ ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯರು ವಹಿಸಿದ್ದರು. ನಂದೀಪುರ ಹಿರೇಮಠದ ನಂದೀಶ್ವರ ಶಿವಾಚಾರ್ಯ ಸ್ವಾಮಿಗಳು ಸಮಾರಂಭದ ನೇತೃತ್ವ ವಹಿಸಿ ಅಂತರಂಗದ ಅಂಧಕಾರ ನಿವಾರಣೆ ಶ್ರೀ ಗುರುವಿನಿಂದ ಮಾತ್ರ ಸಾಧ್ಯ. ಶ್ರೀ ಜಗದ್ಗುರು ರೇಣುಕಾಚಾರ್ಯರ ಮಾನವೀಯ ಆದರ್ಶ ಮೌಲ್ಯಗಳು ಸಕಲರ ಬಾಳಿನಲ್ಲಿ ಆತ್ಮ ವಿಶ್ವಾಸ ಮೂಡಿಸುತ್ತವೆ ಎಂದರು.

ಅಜ್ಜಂಪುರ ತಾಲ್ಲೂಕು ಜಂಗಮ ಸಮಾಜದ ಅಧ್ಯಕ್ಷ ಎನ್.ವಿ.ಗಂಗಾಧರಯ್ಯ ಪ್ರಾಸ್ತಾವಿಕ ನುಡಿಯಲ್ಲಿ ಸಮರ ಜೀವನವನ್ನು ಅಮರ ಜೀವನದೆಡೆಗೆ ಕರೆದೊಯ್ಯುವುದೇ ಗುರು ಧರ್ಮ. ಮಾನವೀಯ ಸಂಬಂಧಗಳು ಶಿಥಿಲಗೊಳ್ಳುತ್ತಿರುವ ಸಂದರ್ಭದಲ್ಲಿ ಆದರ್ಶ ಮೌಲ್ಯಗಳ ಪರಿಪಾಲನೆ ಮತ್ತು ಚಿಂತನೆಗಳು ಅವಶ್ಯಕವಾಗಿವೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಯುಗಪುರುಷರಾಗಿ ಸರ್ವರಿಗೂ ಅನ್ವಯಿಸುವ ಧಾರ್ಮಿಕ ಚಿಂತನಗಳನ್ನು ಬೋಧಿಸಿರುವುದು ನಮ್ಮೆಲ್ಲರ ಬಾಳಿಗೆ ಬಲ ಮತ್ತು ಬೆಳಕು ಉಂಟು ಮಾಡುತ್ತವೆ ಎಂದರು. ಶಿವಮೊಗ್ಗದ ನಿವೃತ್ತ ಪ್ರಾಚಾರ್ಯ ಹೆಚ್.ಬಿ.ಪಂಚಾಕ್ಷರಯ್ಯ ಶ್ರೀ ಜಗದ್ಗುರು ರೇಣುಕಾಚಾರ್ಯರ ಧಾರ್ಮಿಕ ಹಾಗೂ ಸಾಮಾಜಿಕ ಸತ್ಕ್ರಾಂತಿ ಕುರಿತು ಉಪನ್ಯಾಸವನ್ನಿತ್ತರು.

ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಜಿ.ಪಂ.ಮಾಜಿ ಸದಸ್ಯರಾದ ಕೆ.ಆರ್.ಆನಂದಪ್ಪ ಮತ್ತು ಶಂಭೈನೂರು ಆನಂದಪ್ಪ, ಕುಮಾರಿ ರಚನಾ ಶ್ರೀನಿವಾಸ್ ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಆಶೀರ್ವಾದ ಗುರುರಕ್ಷೆ ಪಡೆದರು. ಗಣ್ಯರು ಹಾಗೂ ದಾನಿಗಳಿಗೆ ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಕುಮಾರಿ ಪ್ರೀತಿ ಸ್ವಾಗತಿಸಿದರು. ಶಿಕ್ಷಕ ಜಗದೀಶ ನಿರೂಪಿಸಿದರು.

Sri Jagadguru Renukacharya Jayanti Yugamanotsava

Related posts

ಹುಲಗಾರುಬೈಲು ಅರಣ್ಯದಲ್ಲಿ ನಾಡ ಬಂದೂಕು ಪತ್ತೆ

Team Suddigara

ಅಂಬೇಡ್ಕರ್‍ರವರ ಚಿಂತನೆಗಳನ್ನು ಜಾರಿಗೊಳಿಸಿದ್ದು ಕಾಂಗ್ರೇಸ್ ಸರ್ಕಾರ.

Manju Mc

ಭಾರತದ ಪ್ರತಿಯೊಬ್ಬ ಪ್ರಜೆಯು ಅನುಸರಿಸಬೇಕಾದ ಮಹಾಗ್ರಂಥಾ ಭಾರತೀಯ ಸಂವಿಧಾನ

Team Suddigara

Leave a Comment

[t4b-ticker] [t4b-ticker]