April 17, 2025
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ಹೆಣ್ಣುಮಕ್ಕಳು ಸಾಮಾಜಿಕ ಸಮಸ್ಯೆ ಎದುರಿಸಲು ಶಿಕ್ಷಣ ಸಹಕಾರಿ

ಚಿಕ್ಕಮಗಳೂರು: ಪ್ರಸ್ತುತ ಸಮಾಜದಲ್ಲಿ ಎದುರಾಗುವ ಸಾಮಾಜಿಕ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಹೆಣ್ಣುಮಕ್ಕಳಿಗೆ ಶಿಕ್ಷಣ ಸಹಕಾರಿ ಎಂದು ಸಾಮಾಜಿಕ ವಾಣಿಜ್ಯೋದ್ಯಮಿ ಪಲ್ಲವಿ ಸಿ.ಟಿ. ರವಿ ಹೇಳಿದರು.

ಅವರು ಇಂದು ನಗರದ ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘ ಏರ್ಪಡಿಸಿದ್ದ ವಿಶೇಷ ಸರ್ವ ಸದಸ್ಯರ ಸಭೆ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಹೆಣ್ಣುಮಕ್ಕಳಿಗೆ ಇಂದು ಹೆಚ್ಚಿನ ಸ್ಥಾನಮಾನ ದೊರೆಯುತ್ತಿದ್ದು, ಇದಕ್ಕೆ ಕಾರಣ ಶಿಕ್ಷಣ. ಈ ನಿಟ್ಟಿನಲ್ಲಿ ಸರ್ವರೂ ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದ ಅವರು, ಹೆಣ್ಣುಮಕ್ಕಳಿಗೆ ತಾಯಿಯೇ ಮೊದಲ ಗುರು, ಅವರಿಂದ ಸಂಸ್ಕೃತಿ, ಸಂಸ್ಕಾರ, ಧಾರ್ಮಿಕ ಮನೋಭಾವ ಎಲ್ಲವನ್ನೂ ಕಲಿಯುವುದಕ್ಕೆ ತಾಯಿ ಪ್ರೇರಣೆಯಾಗಿದ್ದು, ಆತ್ಮವಿಶ್ವಾಸದಿಂದ ಶುಚಿರುಚಿಯಾದ ಅಡುಗೆ ಮಾಡಿ ಬಡಿಸುತ್ತಿದ್ದೀರಿ ಎಂದು ಶ್ಲಾಘಿಸಿದರು.

ನಮ್ಮ ಬದುಕಿನ ಆಧಾರದಲ್ಲಿ ಜೀವನ ನಿರ್ಧಾರವಾಗುತ್ತದೆ. ಜಡೆಗಳು ಸೇರುವುದು ತುಂಬಾ ಕಷ್ಟ ಎನ್ನುತ್ತಾರೆ, ಆದರೆ ಇಂದು ಬಹುತೇಕ ಜಡೆಗಳು ಸೇರಿ ಒಗ್ಗಟ್ಟು ಪ್ರದರ್ಶಿಸಿದ್ದೀರಿ ಎಂದು ಹರ್ಷ ವ್ಯಕ್ತಪಡಿಸಿದ ಅವರು, ಮಹಿಳೆಯರು ಸಂಘಟಿತರಾಗಲು ಸಂಘಟನೆ ಅವಶ್ಯಕ, ಸಂಘದಲ್ಲಿ ಸದಸ್ಯರಾಗಬೇಕಾದರೆ ಮಾತೃಶಕ್ತಿ ಬಹಳ ಪ್ರಬಲವಾಗಿರಬೇಕು ಎಂದರು.

ಹೆಣ್ಣು ಸಮಾಜದಲ್ಲಿ ಜನಿಸಿದ ಬಳಿಕ ವಯಕ್ತಿಕ ಸಾಧನೆ ಜೊತೆಗೆ ಅಂಗನವಾಡಿ ಕೇಂದ್ರದಲ್ಲಿ ಸೇವೆ ಸಲ್ಲಿಸುವವರಿಗೆ ತಾಯಿ ಹೃದಯ ಪ್ರೀತಿ ಅಗತ್ಯ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಜಂಟಿ ನಿರ್ದೇಶಕರಾದ ಬಿ.ಎಲ್. ಶ್ವೇತ ಮಾತನಾಡಿ, ೧೯೭೫ ರ ಮಾ.೮ ರಂದು ಅಮೇರಿಕಾದ ನ್ಯೂಯಾರ್ಕ್‌ನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಪ್ರಾರಂಭಿಸಿ ಪುರಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಸಮಬಲರು ಎಂಬುದಕ್ಕೆ ನಾಂದಿಯಾಗಿದೆ ಎಂದರು.

ಪ್ರಪಂಚ ಎಲ್ಲಾ ರಂಗದಲ್ಲಿಯೂ ಮುಂದೆ ಸಾಗುತ್ತಿದ್ದು, ಮಹಿಳೆಯರೂ ಸಹ ಎಲ್ಲಾ ರೀತಿಯಲ್ಲಿಯೂ ಸಬಲರಾಗಿದ್ದಾರೆ. ಈ ಸಾಮರ್ಥ್ಯವನ್ನು ಒಂದು ಕುಟುಂಬದ ಜೊತೆಜೊತೆಗೆ ತೆಗೆದುಕೊಂಡು ಹೋಗಬೇಕೆಂದು ಕರೆನೀಡಿದರು. ಓರ್ವ ಮಹಿಳೆ ಸಮಾಜದಲ್ಲಿ ಯಶಸ್ವಿಯಾಗಿ ತಲೆಎತ್ತಿ ಸಾಧನೆ ಮಾಡಿ ನಿಲ್ಲಬೇಕಾದರೆ ಅದರ ಹಿಂದೆ ಆ ಕುಟುಂಬದ ಪರಿಶ್ರಮ ಇರುತ್ತದೆ. ವಯಕ್ತಿಕವಾಗಿ ನಾನೂಸಹ ಎಂದು ಹೇಳಿದರು.

ಒಂದು ಸಮುದಾಯದ ಬೆಳವಣಿಗೆಗೆ ಮಹಿಳಾ ಸಂಘದ ಅವಶ್ಯಕತೆ ಇದ್ದು, ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದ ಶಕ್ತಿ, ಸಾಮರ್ಥ್ಯ ರಾಜ್ಯ ಅಂತರಾಜ್ಯ ಮಟ್ಟದಲ್ಲಿ ಹೆಸರು ಮಾಡಿದೆ ಎಂದು ಹೇಳಿದರು.

ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಖರ್ ಮಾತನಾಡಿ, ಮಹಿಳಾ ಒಕ್ಕಲಿಗರ ಸಂಘದಲ್ಲಿ ಹಿಂದೆ ಸೇವೆಸಲ್ಲಿಸಿ ಯಶಸ್ವಿಯಾಗಿ ಆಡಳಿತ ನಡೆಸಿರುವುದು ಮಾದರಿಯಾಗಿ ಇಂದಿನ ಪದಾಧಿಕಾರಿಗಳಿಗೆ ಅಡಿಪಾಯ ಹಾಕಿದ್ದಾರೆ. ಮಹಿಳಾ ಸಂಘ ಸಮಾಜಮುಖಿ ಕಾರ್ಯ ಕೈಗೊಳ್ಳುವಲ್ಲಿ ಮುಂದಿನ ದಿನಗಳಲ್ಲಿ ಸಂಘ ಉನ್ನತ ಶ್ರೇಣಿಗೆ ಬೆಳೆಯಲಿ ಎಂದು ಶುಭ ಹಾರೈಸಿದರು.

ಒಕ್ಕಲಿಗರ ಸಮಾಜ ಸಂಸ್ಕಾರ, ಸಂಸ್ಕೃತಿ ತಿಳಿಹೇಳುವುದು ಇಂದಿನ ಕಾರ್ಯಕ್ರಮದ ಮುಖ್ಯ ಉದ್ದೇಶ, ಇಂದು ಆಸ್ತಿ-ಅಂತಸ್ತಿನ ಕಡೆ ಪ್ರಪಂಚ ನಾಗಾಲೋಟದಲ್ಲಿ ಓಡುತ್ತಿದೆ ಎಂದು ವಿಷಾಧಿಸಿದರು.

ಪ್ರಸ್ತುತ ಹಣದ ಆಸೆಗೆ ಬಿದ್ದು, ಭೂಮಿಯನ್ನು ಕಳೆದುಕೊಳ್ಳುತ್ತಿರುವುದು ಒಂದೆಡೆಯಾದರೆ ಇನ್ನೊಂದೆಡೆ ಒಕ್ಕಲಿಗ ಕುಟುಂಬ ವ್ಯವಸ್ಥೆಯಿಂದ ಹೊರಗಡೆ ಇರುವವರಿಗೆ ನಮ್ಮ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಡುತ್ತಿರುವುದರಿಂದ ಒಕ್ಕಲಿಗ ಜನಾಂಗದ ಅಳಿವಿನ ಪ್ರಶ್ನೆಯಾಗಿದೆ ಎಂದು ಎಚ್ಚರಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ರೀನಾ ಸುಜೇಂದ್ರ ಮಾತನಾಡಿ, ಎಲ್ಲಿ ಸ್ತ್ರೀ ಪೂಜಿಸುತ್ತಾಳೋ ಅಲ್ಲಿ ದೇವರು ನೆಲೆಸಿರುತ್ತಾನೆ, ಮಹಿಳೆ ಅವಮಾನಕ್ಕೊಳಗಾದರೆ ಎಲ್ಲಾ ಕ್ರಿಯೆಗಳು ಪ್ರಬಲವಾಗಿದ್ದರೂ ಫಲಪ್ರದವಾಗುವುದಿಲ್ಲ. ಈ ನಿಟ್ಟಿನಲ್ಲಿ ಸರ್ವರೂ ಸ್ತ್ರೀಯರನ್ನು ಗೌರವಿಸಬೇಕೆಂದು ವಿನಂತಿಸಿದರು.

ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಸಮುದಾಯದ ಎಲ್ಲರೂ ತನು, ಮನ, ಧನ ಸಹಾಯ ಮಾಡಬೇಕೆಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಲಕ್ಷ್ಮಿಪ್ರಜ್ಞಾ. ಎಸ್, ಮಾನ್ಯ ಕೆಂಚೈನ್. ಡಿ.ಜೆ, ಮಂದಿರ.ಎಂ, ಮನಸ್ಮಿತ, ಪೂರ್ಣಿಮಾ ಸುದಿನ್ ಇವರುಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಉಪಾಧ್ಯಕ್ಷೆ ಕಾವ್ಯಸುಕುಮಾರ್, ಕಾರ್ಯದರ್ಶಿ ಅಮಿತವಿಜೇಂದ್ರ, ಸಹಕಾರ್ಯದರ್ಶಿ ಕೋಮಲರವಿ, ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಟಿ.ಡಿ.ಮಲ್ಲೇಶ್, ಗೌರವ ಕಾರ್ಯದರ್ಶಿ ಎಂ.ಎಸ್.ಪ್ರದೀಪ್‌ಕುಮಾರ್, ನಿರ್ದೇಶಕರುಗಳಾದ ಹರಿಣಾಕ್ಷಿನಾಗರಾಜ್, ಭವ್ಯನಟೇಶ್, ಪವಿತ್ರರತೀಶ್, ಸಿ.ಟಿ.ರೇವತಿಧರ್ಮರಾಜ್, ಮಾಜಿ ಅಧ್ಯಕ್ಷರಾದ ಸವಿತಾರಮೇಶ್, ಜಾಹ್ನವಿ ಜಯರಾಮ್, ನಿರ್ದೇಶಕರುಗಳಾದ ಶಕುಂತಲಾ, ಮಂಜುಳ, ವೇದ, ಚಂಪ, ಅನುಪಮ, ವಿನುತ, ರಾಜೇಶ್ವರಿ, ಕೀರ್ತಿ, ತನುಜ, ಸುನಿತ, ಸಂಧ್ಯಾ ಮತ್ತಿತರರು ಉಪಸ್ಥಿತರಿದ್ದರು,

Education helps girls face social problems

Related posts

:ಪರೋಪಕಾರಿ ಗುಣದಿಂದ ಮನುಷ್ಯ ದೊಡ್ಡವರಾಗಲು ಸಾಧ್ಯ

Team Suddigara

ಬಾಳೆಹೊನ್ನೂರಿನಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ

Team Suddigara

ಸಾರ್ವಜನಿಕ ಕೆಲಸ ಮಾಡುವುದೇ ಎಲ್ಲ ರಾಜಕಾರಣಿಗಳ ಕೆಲಸವಾಗಿದೆ

Team Suddigara

Leave a Comment

[t4b-ticker] [t4b-ticker]