ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ರಂಗ ಚಟುವಟಿಕೆಗಳಿಗೆ ಇನ್ನಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮಥಾಯಿಸ್ ಫೌಂಡೇಷನ್ ಅಸ್ತಿತ್ವಕ್ಕೆ ಬಂದಿದ್ದು, ಇದೇ ಮೊದಲ ಬಾರಿಗೆ ಎರಡು ನಾಟಕಗಳ ಪ್ರದರ್ಶನವನ್ನು ಮಾ. ೨೧ ಮತ್ತು ೨೨ರಂದು ನಗರದ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಫೌಂಡೇಷನ್‌ನ ಮ್ಯಾನೇಜಿಂಗ್ ಟ್ರಸ್ಟಿ ಜಾನ್ ಮಥಾಯಿಸ್ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡದ ರಂಗಾಯಣ ಹಾಗೂ ಚಿಕ್ಕಮಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಈ ನಾಟಕಗಳ ಪ್ರದರ್ಶನ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಮಾ. ೨೧ರಂದು ಸಂಜೆ ೬.೩೦ಕ್ಕೆ ೭೦ರ ದಶಕದಲ್ಲಿ ಮನೆಮಾತಾಗಿದ್ದ ಜಡಭರತ ಅವರ ಸತ್ತವರ ನೆರಳು ನಾಟಕ ಪ್ರದರ್ಶನಗೊಳುತ್ತಿದೆ. ಈ ನಾಟಕಕ್ಕೆ ರಾಘವ ಕಮ್ಮಾರ ಸಂಗೀತ ನೀಡಿದ್ದು, ವಿಜಯೇಂದ್ರ ಅರ್ಚಕ, ಟಿ.ಹರೀಶ್ ಕುಮಾರ್ ರಂಗ ನಿರ್ವಹಣೆಯಿದೆ. ನಾಟಕವನ್ನು ಹುಲುಗಪ್ಪ ಕಟ್ಟೀಮನಿ ಅವರು ನಿರ್ದೇಶಿಸಿದ್ದಾರೆ. ಈ ನಾಟಕ ಎತ್ತಿಕೊಂಡಿರುವ ಸಮಸ್ಯೆ ಮೂಲಭೂತವಾದದು. ಮನುಷ್ಯನ ವೈಯಕ್ತಿಕ ಜೀವನಕ್ಕೂ, ಧರ್ಮಕ್ಕೂ ಇರುವ ಸಂಬAಧಗಳ ಕುರಿತಾದದ್ದು. ಜೀವನದ ಬಂಧ-ಮೋಕ್ಷಗಳ ಪ್ರಶ್ನೆಯನ್ನೂ ಒಳಗೊಂಡಿದೆ. ದೇವರ ಅಸ್ತಿತ್ವದ ಬಗ್ಗೆ ಇರಬಹುದಾದ ನಂಬಿಕೆ, ಸಂಶಯಗಳ ಕುರಿತೂ ಈ ನಾಟಕ ಹೇಳುತ್ತದೆ ಎಂದರು.
ಮಾ. ೨೨ರಂದು ಸಂಜೆ ೬.೩೦ಕ್ಕೆ ಜಯಂತ್ ಕಾಯ್ಕಿಣಿ ಅವರ ಜತೆಗಿರುವನು ಚಂದಿರ ನಾಟಕ ಪ್ರದರ್ಶನಗೊಳ್ಳಲಿದೆ. ನಾಟಕಕ್ಕೆ ಶ್ರೀನಿವಾಸ ಭಟ್ ಜೀನಿ ಸಂಗೀತವಿದ್ದು, ರಂಗ ನಿರ್ವಹಣೆಯನ್ನು ರಾಹುಲ್, ದಿವ್ಯಶ್ರೀ, ಭಾಷ್ ರಾಘವೇಂದ್ರ ನಡೆಸಿಕೊಡಲಿದ್ದಾರೆ. ಈ ನಾಟಕಕ್ಕೂ ಹುಲುಗಪ್ಪ ಕಟ್ಟೀಮನಿ ಅವರೇ ನಿರ್ದೇಶಕರಾಗಿದ್ದಾರೆ. ಈ ನಾಟಕ ಪ್ರಪಂಚದ ಅತ್ಯಂತ ಶ್ರೇಷ್ಠ ಸಂಗೀತ ನಾಟಕಗಳಲ್ಲಿ ಒಂದಾಗಿದೆ. ಈ ಕಥಾ ವಸ್ತುವನ್ನು ಜಯಂತ್ ಕಾಯ್ಕಿಣಿ ಅವರು ಭಾರತದ ಯುದ್ಧ, ದೇಶ ವಿಭಜನೆ, ಅಭಿವೃದ್ಧಿ, ಅಣೆಕಟ್ಟುಗಳ ನೆಲೆಗಟ್ಟಿನಲ್ಲಿ ಈ ದೇಶದ ಕಥೆ ಹೇಳಲು ಬಳಸಿಕೊಂಡಿದ್ದಾರೆ. ಇದನ್ನು ಮೈಸೂರಿನ ಸಂಕಲ್ಪ ಕಲಾತಂಡದವರು ರಂಗದ ಮೇಲೆ ಅತ್ಯಂತ ಪರಿಣಾಮಕಾರಿಯಾಗಿ ಸಾದರಪಡಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಎರಡು ನಾಟಕಗಳಿಗೂ ಉಚಿತ ಪ್ರವೇಶವಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕೋರಿದರು.
ಸುದ್ದಿಗೋಷ್ಠಿಯಲ್ಲಿ ರಂಗ ನಿರ್ದೇಶಕ ಹುಲುಗಪ್ಪ ಕಟ್ಟೀಮನಿ ಉಪಸ್ಥಿತರಿದ್ದರು.
Drama performance by the Mathays Foundation