ಚಿಕ್ಕಮಗಳೂರು: ಸರ್ಕಾರಗಳು ಮಹಿಳೆಯರು ಮತ್ತು ಬಡವರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದು ಬ್ಯಾಂಕ್‌ಗಳ ಮೂಲಕ ಆರ್ಥಿಕ ಸಾಲಸೌಲಭ್ಯ ನೀಡಲು ಮುಂದಾಗಿದ್ದು, ಇದರ ಪ್ರಯೋಜನ ಪಡೆದ ಫಲಾನುಭವಿಗಳು ಸ್ವ-ಉದ್ದಿಮೆ ಸ್ಥಾಪಿಸಿ ಆರ್ಥಿಕ ಸದೃಢರಾಗಬೇಕೆಂದು ನಗರಸಭೆ ಪೌರಾಯುಕ್ತ ಬಿ.ಸಿ. ಬಸವರಾಜ್ ಕರೆನೀಡಿದರು.
ಅವರು ಇಂದು ನಗರಸಭೆ ಆವರಣದಲ್ಲಿ ಏರ್ಪಡಿಸಲಾಗಿದ್ದ ದೀನ್ ದಯಾಳ್ ಅಂತ್ಯೋದಯ ಯೋಜನೆಯಡಿ ‘ಪಿಎಂ ಸ್ವ-ನಿಧಿ ಮತ್ತು ಸ್ವ-ನಿಧಿ ಸೇ ಸಮೃದ್ಧಿ ಮಾಸ ಅಚರಣೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬ್ಯಾಂಕ್‌ಗಳ ಮೂಲಕ ಸಾಲ ಸೌಲಭ್ಯ ಪಡೆದ ಫಲಾನುಭವಿಗಳು ನಿಗಧಿತ ಸಮಯದಲ್ಲಿ ಸಾಲ ಮರುಪಾವತಿ ಮಾಡಿ ಉಳಿತಾಯದ ಹಣದಲ್ಲಿ ವಿಮಾ ಸೌಲಭ್ಯ ಪಡೆದು ಹಣ ತೊಡಗಿಸಿದವರಿಗೆ ೬೦ ವರ್ಷಗಳ ಬಳಿಕ ಪ್ರತೀ ತಿಂಗಳು ೩೫೦೦ ರೂ ಪಿಂಚಣಿ ಸೌಲಭ್ಯ ದೊರೆಯಲಿದೆ ಎಂದು ವಿವರಿಸಿದರು.
ಈ ಯೋಜನೆಯಡಿ ೧೨೦೦ ಫಲಾನುಭವಿಗಳನ್ನು ಆಯ್ಕೆಮಾಡಬೇಕಾಗಿದ್ದು, ಕೇವಲ ೭೯ ಜನ ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಇನ್ನೂ ಹೆಚ್ಚಿನ ಜನರಿಗೆ ಇದರ ಸದುಪಯೋಗ ದೊರೆಯುವಂತೆ ಜಾಗೃತಿ ಮೂಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಗರಸಭೆ ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ ೪ ಕೋಟಿ ರೂ ವಿವಿಧ ರೀತಿಯ ಸ್ವ-ಉದ್ಯೋಗ ಸ್ಥಾಪನೆಗೆ ಸಾಲಸೌಲಭ್ಯ ನೀಡಲಾಗಿದೆ. ಸಾಲ ಪಡೆದ ಫಲಾನುಭವಿಗಳ ಖಾತೆಗೆ ೬ ಲಕ್ಷ ರೂ ಸಹಾಯಧನ ನೇರವಾಗಿ ಬ್ಯಾಂಕಿಗೆ ಜಮೆ ಮಾಡಲಾಗಿದೆ ಎಂದು ಹೇಳಿದರು.
ಕೌಶಲ್ಯಾಭಿವೃದ್ಧಿ ಇಲಾಖೆಯ ಅಭಿಯಾನ ವ್ಯವಸ್ಥಾಪಕರಾದ ಹರ್ಷ ಮಾತನಾಡಿ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಆಧಾರದಲ್ಲಿ ಪಿಎಂ ಸ್ವ-ನಿಧಿ ಯೋಜನೆಯಡಿ ಅರ್ಹತೆ ಹೊಂದಿರುವ ಫಲಾನುಭವಿಗಳಿಗೆ ಕಾರ್ಮಿಕ ಇಲಾಖೆಯಿಂದ ೬೦ ವರ್ಷ ಪೂರ್ಣಗೊಂಡವರಿಗೆ ಪಿಂಚಣಿ ನೀಡುವ ಯೋಜನೆಯನ್ನು ಜಾರಿಮಾಡಲಾಗಿದೆ ಎಂದು ತಿಳಿಸಿದರು.
೧೮-೪೦ ವರ್ಷ ವಯೋಮಾನದ ಒಳಗಿರುವವರಿಗೆ ಅವರ ವಯಸ್ಸಿನ ಆಧಾರದಲ್ಲಿ ಮಾಸಿಕ ವಿಮಾ ಮೊತ್ತ ಪಾವತಿಸಿದವರಿಗೆ ಕೇಂದ್ರಸರ್ಕಾರ ವಂತಿಕೆ ನೀಡಿ ೬೦ ವರ್ಷ ವಯಸ್ಸಾದವರಿಗೆ ೩೫೦೦ ರೂ ಪಿಂಚಣಿ ಸೌಲಭ್ಯ ದೊರೆಯಲಿದೆ ಎಂದರು.
ನಗರಸಭೆ ಸಮುದಾಯ ಸಂಘಟನಾಧಿಕಾರಿ ಚಂದ್ರಶೇಖರಪ್ಪ ಹೆಚ್.ಎಸ್ ಮಾತನಾಡಿ, ಪ್ರಧಾನಮಂತ್ರಿ ಆತ್ಮನಿರ್ಭರ್ ಯೋಜನೆಯಡಿ ಗುರ್ತಿಸಲ್ಪಟ್ಟ ಬೀದಿಬದಿ ವ್ಯಾಪಾರಿಗಳ ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ನಡೆಸಿದ ಸಂದರ್ಭದಲ್ಲಿ ಶ್ರಮಯೋಗಿ ಮನ್‌ಧನ್ ಯೋಜನೆಗೆ ಬಂದ ೭೯ ಫಲಾನುಭವಿಗಳಿಗೆ ಕಾರ್ಮಿಕ ಇಲಾಖೆಯ ಸಹಯೋಗದೊಂದಿಗೆ ಪೆನ್ಸನ್ ನೀಡುವ ಉದ್ದೇಶದಿಂದ ಇಂದು ಶಿಬಿರ ನಡೆಸಲಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಅಧಿಕಾರಿಗಳಾದ ರವಿ, ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು.
Beneficiaries of government’s public welfare schemes should become financially strong.
