ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಬರ್ಬರ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜ್ ಸೇರಿ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬಿಕ್ಲು ಶಿವ ತಾಯಿ ವಿಜಯಲಕ್ಷ್ಮೀ ನೀಡಿದ ದೂರು ಆಧರಿಸಿ ಬೆಂಗಳೂರಿನ ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ಜಗದೀಶ್, ವಿಮಲ್, ಕಿರಣ್, ಅನಿಲ್, ಭೈರತಿ ಬಸವರಾಜ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕೊಲೆಗೆ ಭೈರತಿ ಬಸವರಾಜ್ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪ ಕೇಳಿಬಂದಿದೆ.
ಈ ಬಗ್ಗೆ ಕೆ.ಆರ್.ಪುರಂ ಬಿಜೆಪಿ ಶಾಸಕ ಭೈರತಿ ಬಸವರಾಜ್ ಹೇಳಿಕೆ ನೀಡಿದ್ದು, ಬಿಕ್ಲು ಶಿವ ಕೊಲೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಕೊಲೆಯಾದವನ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ದೂರು ಕೊಟ್ಟ ತಕ್ಷಣ ಏಕಾಏಕಿ ನನ್ನ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಈ ಪ್ರಕರಣದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.
ಯಾರೇ ದೂರು ಕೊಟ್ಟರೂ ಎಫ್ಐಆರ್ ದಾಖಲಿಸಬಹುದಾ? FIR ದಾಖಲಿಸುವುದಕ್ಕೂ ಮುನ್ನ ನನ್ನಿಂದ ಮಾಹಿತಿ ಪಡೆದಿದ್ದಾರಾ? ಈ ವಿಚಾರದಲ್ಲಿ ನನ್ನ ಹೆಸರು ತಂದಿದ್ದಕ್ಕೆ ತುಂಬಾ ಬೇಸರವಾಗಿದೆ. ಇದರ ಹಿಂದೆ ರಾಜಕೀಯ ದುರುದ್ದೇಶ ಇರಬಹುದು. ನಾನು ಕಾನೂನು ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ.
ಮಂಗಳವಾರ ರಾತ್ರಿ 8.30 ಸುಮಾರಿಗೆ ಬಿಕ್ಲು ಶಿವ ತನ್ನ ಮನೆಯಿಂದ ಹೊರಗಡೆ ಬಂದು ಪುಟ್ ಪಾತ್ ಮೇಲೆ ನಿಂತಿದ್ದ.
ಈ ವೇಳೆ ಮನೆ ಸಮೀಪವೇ ಸ್ಕಾರ್ಪಿಯೋ ಕಾರಿನಲ್ಲಿ ಕಾದು ಕುಳಿತಿದ್ದ 7ರಿಂದ8 ಕೊಲೆಗಡುಕರು ಬಿಕ್ಲು ಶಿವನ ಮೇಲೆ ಎರಗಿದ್ದರು. ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಆತನನ್ನ ಕವರ್ ಮಾಡಿ ಹಲ್ಲೆ ಮಾಡಿದ್ದಾರೆ. ಕೊನೆಗೆ ರಸ್ತೆಯಲ್ಲಿ ನಿಂತಿದ್ದ ಕಾರುಗಳ ಮಧ್ಯೆ ಸಿಲುಕಿದ ಮನಸೋ ಇಚ್ಛೆ ಮಾರಾಕಸ್ತ್ರಗಳಿಂದ ಹೊಡೆದು ನೆತ್ತರು ಹರಿಸಿದ್ದಾರೆ. ಹೀಗಾಗಿ ಬಿಕ್ಲು ಶಿವ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದ.
ಇನ್ನು ಜಮೀನು ವಿಚಾರಕ್ಕೆ ರೌಡಿಶೀಟರ್ ಬಿಕ್ಲು ಶಿವ ಹಾಗೂ ಬಿಜೆಪಿ ಶಾಸಕ ಭೈರತಿ ಬಸವರಾಜ್ ಹುಡುಗರ ನಡುವೆ ಗಲಾಟೆ ಆಗಿತ್ತು. ಕಿತ್ತಗಾನಹಳ್ಳಿ ಬಳಿ ಸಿಂಗಾರೆಡ್ಡಿ ಎಂಬುವವರಿಗೆ ಸೇರಿದ ಸರ್ವೆ ನಂ. 212 ಜಿಪಿಎ ಮಾಡಿಸಿಕೊಂಡಿದ್ದ ಬಿಕ್ಲು ಶಿವ, ಇದನ್ನ ರದ್ದುಪಡಿಸಬೇಕು ಮತ್ತು ಪೊಸಿಷನ್ ಬಿಟ್ಟುಕೊಡಬೇಕೆಂದು ಬೆದರಿಕೆ ಹಾಕುತ್ತಿದ್ದ ವಿಡಿಯೋವನ್ನು ರೌಡಿಶೀಟರ್ ಶಿವಪ್ರಕಾಶ್ ಕಡೆಯವರು ಮೊಬೈಲ್ನಲ್ಲಿ ಸೆರೆಹಿಡಿದಿದ್ದರು.
ಈ ಕುರಿತು ಬಿಕ್ಲು ಶಿವ ಈ ಹಿಂದೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಶಾಸಕ ಭೈರತಿ ಬಸವರಾಜ್, ಜಗದೀಶ್ ಅಲಿಯಾಸ್ ಜಗ್ಗ ಹಾಗೂ ಕಿರಣ್ ಸಹಚರರ ವಿರುದ್ಧ ದೂರು ನೀಡಿದ್ದ. ಭಾರತಿನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿತ್ತು. ಪೊಲೀಸ್ ಆಯುಕ್ತರಿಗೆ ದೂರು ನೀಡಿ 4 ತಿಂಗಳಲ್ಲೇ ಬಿಕ್ಲು ಶಿವ ಕೊಲೆ ಆಗಿದೆ. ಅದೇ ಗ್ಯಾಂಗ್ನಿಂದ ಕೊಲೆಯಾಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
FIR against five people including BJP MLA Bhairati Basavaraj
