ಬೆಂಗಳೂರು: ‘ಸುಳ್ಳು ಜಾತಿ ಪ್ರಮಾಣಪತ್ರ ಪಡೆದಿರುವ ಅರೋಪ ಸಾಬೀತಾಗಿರುವ 170 ಪ್ರಕರಣಗಳಲ್ಲಿ ತಕ್ಷಣ ಕ್ರಮ ತೆಗೆದುಕೊಳ್ಳಬೇಕು. ಸುಳ್ಳು ಪ್ರಮಾಣಪತ್ರ ಸಲ್ಲಿಸಿ ಸರ್ಕಾರದ ಸೌಲಭ್ಯ ಪಡೆದಿರುವುದು ಸಾಬೀತಾದರೆ, ಅದನ್ನು ಹಿಂಪಡೆಯಬೇಕು’ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ನಡೆದ 2025-26ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ನಿಯಂತ್ರಣ) ಜಾಗೃತ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ಸುಳ್ಳು ಜಾತಿ ಪ್ರಮಾಣಪತ್ರ ಪ್ರಕರಣಗಳಲ್ಲಿ ನ್ಯಾಯಾಲಯಗಳು ನೀಡಿರುವ ತೀರ್ಪುಗಳ ಅನ್ವಯ ಯಾಕೆ ಕ್ರಮ ಕೈಗೊಂಡಿಲ್ಲ ’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಸುಳ್ಳು ಜಾತಿ ಪ್ರಮಾಣ ಪತ್ರ ಪ್ರಕರಣಗಳ ವಿಚಾರದಲ್ಲಿ ಇಲಾಖೆಗಳ ನಡುವೆ ಸಮನ್ವಯದ ಅಗತ್ಯವಿದೆ. ಈ ಬಗ್ಗೆ ಸಮಗ್ರ ವರದಿ ಸಲ್ಲಿಸಬೇಕು’ ಎಂದು ಅವರು ನಿರ್ದೇಶನ ನೀಡಿದ್ದಾರೆ. ‘ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ 60 ದಿನಗಳ ಒಳಗೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ಆದರೆ, ಕಳೆದ ಆರು ತಿಂಗಳಲ್ಲಿ ಶೇ 84ರಷ್ಟು ಪ್ರಕರಣಗಳಲ್ಲಿ ಮಾತ್ರ ನಿಗದಿತ ಅವಧಿಯ ಒಳಗೆ ಆರೋಪ ಪಟ್ಟಿ ಸಲ್ಲಿಸಲಾಗಿದೆ.
ಆರೋಪ ಪಟ್ಟಿ ಸಲ್ಲಿಸುವ ವಿಚಾರದಲ್ಲಿ ಪೊಲೀಸರು ಯಾವುದೇ ನೆಪ ಹೇಳಬಾರದು’ ಎಂದು ತಾಕೀತು ಮಾಡಿದ ಮುಖ್ಯಮಂತ್ರಿ, ‘56 ಪ್ರಕರಣ ಗಳಲ್ಲಿ ನ್ಯಾಯಾಲಯ ನೀಡಿರುವ ತಡೆಯಾಜ್ಞೆಗಳನ್ನು ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದೂ ಸೂಚನೆ ನೀಡಿದ್ದಾರೆ.
‘ದೌರ್ಜನ್ಯ ಪ್ರಕರಣಗಳ ತ್ವರಿತ ವಿಚಾರಣೆಗೆ 11 ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಪ್ರಕರಣಗಳ ಸರಿಯಾದ ವಿಚಾರಣೆ ನಡೆಸಿ, ತ್ವರಿತವಾಗಿ ನ್ಯಾಯ ಒದಗಿಸಲು ಕ್ರಮ ಕೈಗೊಳ್ಳಬೇಕು. ಪ್ರಸ್ತುತ ಶಿಕ್ಷೆಯ ಪ್ರಮಾಣ ಶೇ 10ರಷ್ಟಿದೆ. ಇದು ಹೆಚ್ಚಾಗಬೇಕು. ಆರೋಪಿಗಳ ಜೊತೆ ಪೊಲೀಸರು ಶಾಮೀಲಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.
‘ರಾಜ್ಯದಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ (ಡಿಸಿಆರ್‌ಇ) 33 ಪೊಲೀಸ್ ಠಾಣೆಗಳನ್ನು ತೆರೆಯಲಾಗಿದೆ. ಇಲ್ಲಿ ಸಿಬ್ಬಂದಿ ಕೊರತೆಯಿದ್ದರೆ ಭರ್ತಿ ಮಾಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು. ದೌರ್ಜನ್ಯ ಪ್ರಕರಣಗಳಲ್ಲಿ ಪ್ರತಿ ದೂರು ದಾಖಲಿಸುವ ಪ್ರವೃತ್ತಿ ಹೆಚ್ಚುತ್ತಿರುವುದು ಗಮನಕ್ಕೆ ಬಂದಿದೆ. ಅಂತಹ ಪ್ರಕರಣಗಳಲ್ಲಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ದೂರಿನಲ್ಲಿ ಸತ್ಯಾಂಶವಿದ್ದರೆ ಮಾತ್ರ ಎಫ್‌ಐಆರ್ ದಾಖಲಿಸಬೇಕು’ ಎಂದಿದ್ದಾರೆ.
ಸಚಿವರಾದ ಎಚ್.ಕೆ. ಪಾಟೀಲ, ಎಚ್.ಸಿ. ಮಹದೇವಪ್ಪ, ಕೆ.ಎಚ್. ಮುನಿಯಪ್ಪ, ಆರ್.ಬಿ. ತಿಮ್ಮಾಪುರ, ಶಾಸಕರಾದ ಎ.ಸಿ. ಶ್ರೀನಿವಾಸ್, ಎಚ್.ವಿ. ವೆಂಕಟೇಶ್, ಎ.ಆರ್.ಕೃಷ್ಣಮೂರ್ತಿ, ಪಿ.ಎಂ. ನರೇಂದ್ರ ಸ್ವಾಮಿ, ಬಸನಗೌಡ ತುರವಿಹಾಳ್, ಭಾಗೀರಥಿ ಮುರುಳ್ಯ, ಪರಿಷತ್ ಸದಸ್ಯರಾದ ಸುಧಾಮ್ ದಾಸ್, ಡಿ.ತಿಮ್ಮಯ್ಯ, ಶಾಂತಾರಾಂ ಸಿದ್ದಿ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸಭೆಯಲ್ಲಿದ್ದರು.
Immediate action should be taken in 170 cases of proven fake caste certificates
