ಬೆಂಗಳೂರು: ಗ್ಯಾರಂಟಿ ಯೋಜನೆಯಡಿ ಈವರೆಗೆ ₹97,813 ಕೋಟಿ ಖರ್ಚು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮುಖ್ಯಮಂತ್ರಿಯವರ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಸೋಮವಾರ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಅವರು ಈ ಮಾಹಿತಿ ನೀಡಿದರು.
ಈ ಪೈಕಿ ಗೃಹಲಕ್ಷ್ಮಿ ಯೋಜನೆಯಡಿ 1.24 ಕೋಟಿ ಫಲಾನುಭವಿಗಳಿಗೆ ₹50,005 ಕೋಟಿ, ಗೃಹಜ್ಯೋತಿ ಯೋಜನೆಯಡಿ 1.64 ಕೋಟಿ ಫಲಾನು ಭವಿಗಳಿಗೆ ₹18,139 ಕೋಟಿ, ಯುವನಿಧಿ ಯೋಜನೆಯಡಿ 2.55 ಲಕ್ಷ ಫಲಾನುಭವಿಗಳಿಗೆ ₹623 ಕೋಟಿ, ಶಕ್ತಿ ಯೋಜನೆಯಡಿ 544 ಕೋಟಿ ಬಾರಿ ಪ್ರಯಾಣಿಸಿದ್ದಕ್ಕೆ ₹13,903 ಕೋಟಿ ಮತ್ತು ಅನ್ನಭಾಗ್ಯ ಯೋಜನೆಯಡಿ 72.02 ಕೋಟಿ ಫಲಾನುಭವಿ ಗಳಿಗೆ ₹11,821.17 ಕೋಟಿ ವೆಚ್ಚ ಮಾಡಲಾಗಿದೆ ಎಂದು ಹೇಳಿದರು.
ಮರಣ ಹೊಂದುವ ಫಲಾನುಭವಿ ಗಳ ಪಟ್ಟಿಯನ್ನು ಪ್ರತಿ ತಿಂಗಳು ಪಂಚಾಯತ್ ಹಂತದಲ್ಲಿ ನವೀಕರಿಸಿ ಸಂಬಂಧಪಟ್ಟ ಬ್ಯಾಂಕ್‌ಗಳಿಗೆ ಮಾಹಿತಿ ಒದಗಿಸಬೇಕು. ಮರಣ ಹೊಂದುವ ಫಲಾನುಭವಿಗಳ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಬೇಕು ಎಂದರು.
ಆದಾಯ ತೆರಿಗೆ ರಿಟರ್ನ್ ಸಲ್ಲಿಸುವವರು ಗೃಹಲಕ್ಷ್ಮಿ ಯೋಜನೆ ಲಾಭ ಪಡೆಯುವ ಕುರಿತು ಇರುವ ಗೊಂದಲವನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕು. ಅನರ್ಹ ಬಿಪಿಎಲ್ ಕಾರ್ಡುದಾರರನ್ನು ಗುರುತಿಸಿ ಬಿಪಿಎಲ್ ಕಾರ್ಡ್ ರದ್ದುಪಡಿಸುವ ಕಾರ್ಯವನ್ನು ಪಂಚಾಯತ್ ಮಟ್ಟದಲ್ಲಿ ನಡೆಸಬೇಕು. ಈ ಕುರಿತ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಸೂಚಿಸಿದರು.
ಅನ್ನಭಾಗ್ಯ ಯೋಜನೆಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅಕ್ಕಿಯ ಬದಲು ಪ್ರದೇಶವಾರು ಇತರ ಧಾನ್ಯಗಳನ್ನು ನೀಡುವ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.
‘ರಾಜ್ಯದಲ್ಲಿ ‘ಶಕ್ತಿ’ ಯೋಜನೆಯಡಿ 500 ಕೋಟಿಗೂ ಹೆಚ್ಚು ಬಾರಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಬಸ್‌ಗಳಲ್ಲಿ ಪ್ರಯಾಣಿಸಿದ್ದಾರೆ. ಇದು ‘ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್’ ನಲ್ಲಿ ದಾಖಲಾಗಿದೆ. ಇದಕ್ಕೆ ಪ್ರಮಾಣ ಪತ್ರ ಸಿಕ್ಕಿದೆ’ ಎಂದು ಸಭೆಯಲ್ಲಿ ಹೇಳಿದ ಸಚಿವ ರಾಮಲಿಂಗಾರೆಡ್ಡಿ ಅವರು ಸಭೆಯಲ್ಲಿ ಪ್ರಮಾಣ ಪತ್ರ ಪ್ರದರ್ಶಿಸಿ ಹರ್ಷ ವ್ಯಕ್ತಪಡಿಸಿದರು.
97,813 crores spent so far under the guarantee scheme

Leave a Reply