ನಗರಕ್ಕೆ ಇಂದು ಬಸವ ಸಂಸ್ಕೃತಿ ಅಭಿಯಾನ ರಥ

ಚಿಕ್ಕಮಗಳೂರು:  ಕನ್ನಡ ನಾಡಿನ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಬಸವ ತತ್ವವನ್ನು ಒಪ್ಪುವಂತಹ ಎಲ್ಲಾ ಮಠಾಧೀಶರು ಒಂದು ಧ್ವನಿಯಾಗಿ ಒಂದು ವೇದಿಕೆಯಾಗಿ ನಿಂತು ‘ಬಸವ ಸಂಸ್ಕೃತಿ ಅಭಿಯಾನ’ ಎಂಬ ಅಪರೂಪದ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ ಎಂದು ಬಸವತತ್ವ ಪೀಠದ ಡಾ. ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದರು.

ಅವರು ಪೀಠದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಆಶ್ರಯದಲ್ಲಿ ನಡೆಯುತ್ತಿರುವ ಈ ಬಸವ ಸಂಸ್ಕೃತಿ ಅಭಿಯಾನ ಬಸವಣ್ಣನವರು ಜನಿಸಿದ ಬಸವನ ಬಾಗೇವಾಡಿಯಲ್ಲಿ ಇದೇ ಸೆ.೧ ರಂದು ಪ್ರಾರಂಭವಾಗಿದ್ದು, ಪ್ರತಿ ದಿನ ಒಂದೊಂದು ಜಿಲ್ಲಾ ಕೇಂದ್ರದಲ್ಲಿ ಸಂಚಾರ ಮಾಡಿ ಇದೇ ಸೆ.೨೦ ರಂದು ಚಿಕ್ಕಮಗಳೂರು ನಗರಕ್ಕೆ ಆಗಮಿಸಲಿದೆ ಎಂದರು.

ಅಂದು ಬೆಳಗ್ಗೆ ೧೧ ಗಂಟೆಗೆ ವಿದ್ಯಾರ್ಥಿಗಳೊಂದಿಗೆ ಸ್ವಾಮೀಜಿಗಳ ವಚನ ಸಂವಾದ ನಡೆಯಲಿದ್ದು, ನಂತರ ಮಧ್ಯಾಹ್ನ ಪ್ರಸಾದ ಮುಗಿದ ಬಳಿಕ ೩.೩೦ ಕ್ಕೆ ತಾಲ್ಲೂಕು ಕಚೇರಿ ಆವರಣದಿಂದ ವಿವಿಧ ಜಾನಪದ ಕಲಾ ತಂಡಗಳ ಮೂಲಕ ಎಂ.ಜಿ ರಸ್ತೆ ಮಾರ್ಗವಾಗಿ ಅಭಿಯಾನದ ರಥೋತ್ಸವ ಮೆರವಣಿಗೆ ಕುವೆಂಪು ಕಲಾಮಂದಿರ ತಲುಪಲಿದೆ ಎಂದು ಹೇಳಿದರು.

ಈ ಸಮಾರಂಭದಲ್ಲಿ ನಾಡಿನಾದ್ಯಂತ ಮಠಾಧಿಪತಿಗಳು ಭಾಗವಹಿಸಲಿದ್ದಾರೆ. ಸಾಣೇಹಳ್ಳಿ ಶಿವಸಂಚಾರ ಕಲಾವಿದರಿಂದ ಬಹಿರಂಗ ಅಧಿವೇಶನ ಮುಗಿದ ಬಳಿಕ ಜಂಗಮದೆಡೆಗೆ ನಾಟಕ ಪ್ರದರ್ಶನ ನಡೆಯಲಿದೆ. ಈ ನಾಟಕದಲ್ಲಿ ಬಸವಣ್ಣನವರ ಬದುಕನ್ನು ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಡುವುದನ್ನು ಕಾಣಬಹುದಾಗಿದೆ ಎಂದು ತಿಳಿಸಿದರು.

ಸ್ವಾಗತ ಸಮಿತಿ ಪದಾಧಿಕಾರಿಗಳೊಂದಿಗ ಶ್ರೀ ಯಡೆಯೂರು ತೋಂಟದಾರ್ಯ ಡಾ. ಶ್ರೀ ತೋಂಟದ ಸೊದ್ಧರಾಮ ಮಹಾಸ್ವಾಮಿ ಬಾಲ್ಕಿ ಹಿರೇಮಠ ಸಂಸ್ಥಾನದ ನಾಡೋಜ ಡಾ. ಶ್ರೀ ಬಸವಲಿಂಗ ಪಟ್ಟದ್ದೇವರು, ಸಾಣೇಹಳ್ಳಿಯ ಶ್ರೀ ತರಳಬಾಳು ಜಗದ್ಗುರುಗಳಾದ ಡಾ. ಶ್ರೀ ಪಂಡಿತಾರಾಧ್ಯಶಿವಾಚಾರ್ಯ ಮಹಾ ಸ್ವಾಮಿಗಳು, ಕಡೂರಿನ ಯಳನಾಡು ಮಠದ ಶ್ರೀ ಜ್ಞಾನಪ್ರಭು ಸಿದ್ಧರಾಮ ದೇಶೀಕೇಂದ್ರ ಮಹಾ ಸ್ವಾಮೀಜಿ, ಪುಷ್ವಗಿರಿ ಸಂಸ್ಥಾನದ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿ, ಕರಡಿಗವಿ ಮಠದ ಶಿವಶಂಕರ ಶಿವಯೋಗಿ ಸ್ವಾಮಿ, ಮಠದ ಶ್ರೀಗಳ ಸಹಿತ ಒಟ್ಟಾಗಿ ಸೇರಿ ಈ ಕಾರ್ಯಕ್ರಮ ರೂಪಿಸುತ್ತಿರುವುದು ವಿಶೇಷವಾಗಿದೆ ಎಂದರು.

ಇಳಕಲ್‌ನಿಂದ ೧೫೦೦ ಸೀರೆಗಳನ್ನು ತರಿಸಲಾಗಿದ್ದು, ತಾಯಂದಿರು ಖರೀದಿಸಿದ್ದಾರೆ. ಅಂದು ಈ ಸೀರೆಗಳನ್ನು ಧರಿಸಿ ಬಂದು ಮೆರೆವಣಿಗೆಯಲ್ಲಿ ಭಾಗವಹಿಸುತ್ತಿರುವುದು ಅಭಿಯಾನಕ್ಕೆ ಕಳೆ ತರಲಿದೆ. ಸಹಸ್ರಾರು ಸಂಖ್ಯೆಯಲ್ಲಿ ಪುರುಷರು ಬಿಳಿ ಬಟ್ಟೆ ಧರಿಸಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮ ಜಿಲ್ಲೆಯ ಇತಿಹಾಸದಲ್ಲೇ ಐತಿಹಾಸಿಕ ಕಾರ್ಯಕ್ರಮದ ಮೈಲಿಗಲ್ಲಾಗಲಿದೆ ಎಂದು ಭಾವಿಸಿದ ಅವರು, ಈ ಎಲ್ಲಾ ಕಾರ್ಯಕ್ರಮಗಳಿಗೆ ಸದ್ಭಕ್ತರು, ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಬೇಕೆಂದು ಮನವಿ ಮಾಡಿದರು.

ಇದಕ್ಕೂ ಮುನ್ನ ಬಸವತತ್ವ ಪೀಠದ ಪೂಜೆ ಪ್ರಸಾದ ಮಾಡಿದ ಎಲ್ಲಾ ಶ್ರೀಗಳನ್ನು ಬೈಕ್ ರ್‍ಯಾಲಿಯ ಮೂಲಕ ತಾಲ್ಲೂಕು ಕಚೇರಿ ಆವರಣಕ್ಕೆ ಕರೆತರಲಾಗುವುದು ಎಂದು ಹೇಳಿದರು.

Basava Culture Abhiyan Chariot to reach the city today

Comments

Leave a Reply

Your email address will not be published. Required fields are marked *