May 18, 2026
Suddigaralive News
ರಾಜ್ಯ

ಸೆ.22 ರಿಂದಲೇ ಮನೆ ಮನೆ ಸಮೀಕ್ಷೆಗೆ ಸಿ.ಎಂ ಚಾಲನೆ

ಬೆಂಗಳೂರು: ‘ಇದೇ 22ರಿಂದಲೇ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭವಾಗಲಿದ್ದು, ಮುಂದೂಡುವ ಪ್ರಶ್ನೆಯೇ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಮೀಕ್ಷೆಯ ಕುರಿತು ಚರ್ಚೆ ನಡೆದಿತ್ತು. ಹಿಂದುಳಿದ ವರ್ಗಗಳ ಆಯೋಗವು ಸಮೀಕ್ಷೆಗಾಗಿ ಸಿದ್ಧಪಡಿಸಿ ರುವ ಕೈಪಿಡಿಯ ಜಾತಿ ಪಟ್ಟಿಯಲ್ಲಿ ಹೊಸ ಜಾತಿಗಳ ಸೇರ್ಪಡೆ ಹಾಗೂ ಹಿಂದೂ ಜಾತಿಗಳ ಹೆಸರಿನ ಜೊತೆಗೆ ಕ್ರಿಶ್ಚಿಯನ್ ಪದದ ಉಲ್ಲೇಖದ ಕುರಿತು ಕೆಲವು ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದರು. ಆಯೋಗದ ಈ ನಡೆಯನ್ನು ಬಿಜೆಪಿ ಅಸ್ತ್ರ ಮಾಡಿಕೊಂಡಿದ್ದು ಸರ್ಕಾರ, ಪಕ್ಷದ ವರ್ಚಸ್ಸಿಗೆ ಹಿನ್ನಡೆಯಾಗಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದರು. ಇದರಿಂದಾಗಿ, ಸಮೀಕ್ಷೆ ಮುಂದೂಡಿಕೆ ಯಾಗಬಹುದೆಂಬ ಚರ್ಚೆಗಳು ನಡೆದಿದ್ದವು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಸಿದ್ದರಾಮಯ್ಯ ಅವರು, ‘ಸಮೀಕ್ಷೆಯ ಬಗ್ಗೆ ಸರ್ಕಾರದ ಅಭಿಪ್ರಾಯ ಗಳನ್ನು ಈಗಾಗಲೇ ಹಿಂದುಳಿದ ವರ್ಗಗಳ ಆಯೋಗಕ್ಕೆ ತಿಳಿಸಲಾಗಿದೆ. ಆಯೋಗವು ಸಂವಿಧಾನ ಬದ್ಧವಾದ ಸಂಸ್ಥೆ. ಇಂತಹ ವಿಚಾರಗಳಲ್ಲಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವ ಅಧಿಕಾರ ಆಯೋಗಕ್ಕೇ ಇದೆ. ನಾವು ನಿರ್ದೇಶನ ನೀಡಲು ಬರುವುದಿಲ್ಲ. ಆಯೋಗ ನಿರ್ಧಾರ ಕೈಗೊಳ್ಳಲಿದೆ’ ಎಂದು ಹೇಳಿದರು.

‘ಸಚಿವ ಸಂಪುಟ ಸಭೆಯಲ್ಲಿ ಯಾವ ಗೊಂದಲವೂ ಆಗಿಲ್ಲ. ಸಮೀಕ್ಷೆ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ’ ಎಂದೂ ಸಿದ್ದರಾಮಯ್ಯ ಹೇಳಿದರು.

ಜಾತಿವಾರು ಸಮೀಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ತುರ್ತು ವಿಚಾರಣೆ ನಡೆಸಿದ ಹೈಕೋರ್ಟ್, ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ, ಭಾರತ ಜನಗಣತಿ ಆಯುಕ್ತ ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ.

ಅಖಿಲ ಭಾರತ ವೀರಶೈವ ಮಹಾಸಭಾ, ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ಹಾಗೂ ಹಿರಿಯ ವಕೀಲ ಕೆ.ಎನ್‌.ಸುಬ್ಬಾರೆಡ್ಡಿ ಸಲ್ಲಿಸಿದ್ದ ಅರ್ಜಿಗಳನ್ನು ಹಿರಿಯ ನ್ಯಾಯಮೂರ್ತಿ ಅನು ಶಿವರಾಮನ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ ವಿಚಾರಣೆಯನ್ನು ಇದೇ 22ಕ್ಕೆ ಮುಂದೂಡಿತು. ಇದೇ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಪ್ರಭುಲಿಂಗ ಕೆ.ನಾವದಗಿ, ‘ಮುಂದಿನ ವಿಚಾರಣೆ ತನಕ ಸರ್ಕಾರ ಸಮೀಕ್ಷೆ ಕಾರ್ಯಕ್ಕೆ ಮುಂದಾಗದಂತೆ ನಿರ್ದೇಶಿಸಬೇಕು’ ಎಂದು ಕೋರಿದರು.

ಆಯೋಗದ ಪರ ಹಾಜರಿದ್ದ ಹಿರಿಯ ವಕೀಲ ರವಿವರ್ಮ ಕುಮಾರ್ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ‘ಈಗಾಗಲೇ ಸಮೀಕ್ಷೆ ಕಾರ್ಯ ಆರಂಭವಾಗಿದೆ. ಸುಮಾರು 1.5 ಕೋಟಿ ಮನೆಗಳ ವಿದ್ಯುತ್‌ ಮೀಟರ್‌ಗಳಿಗೆ ಸಮೀಕ್ಷೆಯ ಸ್ಟಿಕ್ಕರ್‌ಗಳನ್ನು ಅಂಟಿಸಲಾಗಿದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಅರ್ಜಿದಾರರ ಮಧ್ಯಂತರ ಮನವಿಯನ್ನು ಯಥಾಕ್ರಮದಲ್ಲಿ ನಿಯಮಿತ ನ್ಯಾಯಪೀಠವೇ ವಿಚಾರಣೆ ವೇಳೆ ಪರಿಗಣಿಸಲಿದೆ’ ಎಂದು ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತು.

ಸರ್ಕಾರದ ಸಲಹೆಯನ್ನು ಪರಿಗಣಿಸಿರುವ ಹಿಂದುಳಿದ ವರ್ಗಗಳ ಆಯೋಗ, ಜಾತಿ ಪಟ್ಟಿಯಲ್ಲಿರುವ ‘ಹಿಂದೂ ಕ್ರೈಸ್ತ’ ಎಂಬ ಉಲ್ಲೇಖವನ್ನು ಕೈಬಿಟ್ಟು ಸಮೀಕ್ಷೆ ನಡೆಸಲು ನಿರ್ಧರಿಸಿದೆ.

ಹೊಸದಾಗಿ ಜಾತಿಪಟ್ಟಿ ನೀಡಬೇಕೇ ಅಥವಾ ಮುದ್ರಣಗೊಂಡಿರುವ ಕೈಪಿಡಿಯಲ್ಲಿನ ಪುಟದಲ್ಲಿ ಈ ವಿವರವನ್ನು ಮರೆಮಾಚಬೇಕೇ ಎಂಬ ತೀರ್ಮಾನವನ್ನು ಆಯೋಗ ಮಾಡಲಿದೆ ಎಂದು ಗೊತ್ತಾಗಿದೆ.

ಈ ಬೆನ್ನಲ್ಲೇ, ಹಿಂದುಳಿದ ವರ್ಗಗಳ ಆಯೋಗವು ಸಮೀಕ್ಷಾ ಕಾರ್ಯಕ್ಕೆ ದಿನಾಂಕ ನಿಗದಿಪಡಿಸಿ ಅನುಮತಿ ನೀಡುವಂತೆ ಕೋರಿದ್ದ ಪ್ರಸ್ತಾವನೆಗೆ ರಾಜ್ಯ ಸರ್ಕಾರವು  ಒಪ್ಪಿಗೆ ಸೂಚಿಸಿದೆ.

‘ಆಯೋಗದ ವತಿಯಿಂದ ಎಲ್ಲಾ ನಾಗರಿಕರ ಸಮೀಕ್ಷೆಯನ್ನು ಸೆ.22 ರಿಂದ ಅ.7ರವರೆಗೆ ನಡೆಸುವುದಕ್ಕೆ ಅನುಮೋದನೆ ನೀಡಲಾಗಿದೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಶುಕ್ರವಾರ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.

CM launches door-to-door survey from September 22nd

Related posts

ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದಿಂದ ಮಾಧ್ಯಮ ಅಕಾಡೆಮಿ ಅಧ್ಯಕ್ಷರ ಭೇಟಿ

Team Suddigara

ಹುಟ್ಟಿಕೊಂಡಿರುವ ಟೀಕೆಗಳನ್ನೆಲ್ಲಾ ನಾನು ಪರಿಗಣಿಸುವುದಿಲ್ಲ

Team Suddigara

ವಿಜೃಂಭಣೆ ಶ್ರೀದೇವಮ್ಮ ದೇವಿ ರಥೋತ್ಸವ.

Manju Mc

Leave a Comment