Category: ಚಿಕ್ಕಮಗಳೂರು ನಗರ

  • ಪತ್ರಿಕಾ ವಿತರಕರ ಸೇವೆ ಶ್ಲಾಘನೀಯ

    ಪತ್ರಿಕಾ ವಿತರಕರ ಸೇವೆ ಶ್ಲಾಘನೀಯ

    ಚಿಕ್ಕಮಗಳೂರು: ಮಳೆ-ಗಾಳಿ ಚಳಿ ಲೆಕ್ಕಿಸದೆ ಪ್ರತಿದಿನ ಬೆಳಗ್ಗೆ ಮನೆಮನೆಗೆ ಪತ್ರಿಕೆ ವಿತರಣೆ ಮಾಡುವ ವಿತರಕರ ಕಾರ್ಯ ಶ್ಲಾಘನೀಯ ಎಂದು ನಗರಸಭಾಧ್ಯಕ್ಷೆ ಶೀಲಾದಿನೇಶ್ ತಿಳಿಸಿದರು.

    ಅವರು ಇಂದು ನಗರದ ಹನುಮಂತಪ್ಪ ಸರ್ಕಲ್‌ನ ಉಮಾರಾಮ್ ಸಂಕೀರ್ಣದ ಬಳಿ ಚಿಕ್ಕಮಗಳೂರು ನಗರ ಪತ್ರಿಕಾ ಏಜೆಂಟರು ಮತ್ತು ವಿತರಕರ ಸಂಘ ಏರ್ಪಡಿಸಿದ್ದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ಪತ್ರಿಕೆಯನ್ನು ಪ್ರತಿಯೊಬ್ಬರೂ ಕೊಂಡುಕೊಂಡು ಓದುವ ಮೂಲಕ ಸಮಾಜದಲ್ಲಿ ನಡೆಯುವ ಆಗುಹೋಗುಗಳನ್ನು ತಿಳಿದುಕೊಳ್ಳಲು ಪತ್ರಿಕಾ ವಿತರಕರ ಕಾರ್ಯ ಸಹಕಾರಿ ಎಂದು ಹೇಳಿದರು.

    ನಗರಸಭೆ ಮಾಜಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮಾತನಾಡಿ, ಪತ್ರಿಕಾ ವಿತರಕರಿಗೆ ಆಯಾ ಮಾಧ್ಯಮ ಸಂಸ್ಥೆ ರೈನ್ ಕೋಟ್ ಮುಂತಾದ ಸೌಲಭ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸಿದ ಅವರು, ಕಾರ್ಯಕ್ರಮದಲ್ಲಿ ಪತ್ರಿಕಾ ವಿತರಕರಿಗೆ ಶುಭ ಹಾರೈಸಿದರು.

    ಪತ್ರಿಕಾ ವಿತರಕರನ್ನು ಕಾರ್ಮಿಕ ಇಲಾಖೆ ವ್ಯಾಪ್ತಿಗೆ ತಂದು ಸರ್ಕಾರ ಅಗತ್ಯ ಸೌಕರ್ಯ ಕಲ್ಪಿಸಬೇಕೆಂದು ಹೋರಾಟ ನಡೆಯುತ್ತಿದ್ದು, ಇವರ ಈ ಎಲ್ಲಾ ಬೇಡಿಕೆಗಳು ಶೀಘ್ರವೇ ಇತ್ಯರ್ಥವಾಗಲಿ ಎಂದು ಹೇಳಿದರು.

    ಸೋಷಿಯಲ್ ಮೀಡಿಯಾದಲ್ಲಿ ಪ್ರಸಾರವಾಗುವ ವಿಷಯಗಳು ಕ್ಷಣಿಕ ಮಾತ್ರವಾಗಿದ್ದು, ಮುದ್ರಣ ಮಾದ್ಯಮದ ಪತ್ರಿಕೆಗಳು ಪ್ರಕಟ ಮಾಡುವ ಸುದ್ದಿಗಳು ಸದಾ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುತ್ತವೆ ಎಂದು ತಿಳಿಸಿದರು.

    ಸಾರ್ವಜನಿಕರು ಪತ್ರಿಕೆ ಓದುವ ಅಭಿರುಚಿಯಿಂದ ದೂರವಾಗುತ್ತಿರುವುದು ವಿಷಾಧನೀಯ. ಸರ್ವರೂ ಪತ್ರಿಕೆಗಳನ್ನು ಕೊಂಡು ಓದುವ ಮೂಲಕ ಮಾದ್ಯಮಗಳನ್ನು ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.

    ಪತ್ರಿಕಾ ವಿತರಕರ ಮನವಿಯಲ್ಲಿರುವ ವಿವಿಧ ಬೇಡಿಕೆಗಳನ್ನು ಶೀಘ್ರವಾಗಿ ನಗರಸಭೆ ಇತ್ಯರ್ಥ ಮಾಡುತ್ತದೆ. ದೊಡ್ಡ ಜಾಗ ಒಂದನ್ನು ಗುರ್ತಿಸಿ ನೀಡಬೇಕೆಂದು ಮನವಿ ಮಾಡಿದ ಅವರು, ಇದಕ್ಕೆ ಶಾಸಕರು, ವಿಧಾನ ಪರಿಷತ್ ಸದಸ್ಯರ ಮೇಲೆ ಒತ್ತಡ ತರಲು ಬದ್ಧವಾಗಿರುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

    ಜಿಲ್ಲಾ ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಐ.ಕೆ. ಓಂಕಾರೇಗೌಡ ಮಾತನಾಡಿ, ಪತ್ರಿಕಾ ವಿತರಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಹೋರಾಟ ರೂಪಿಸಿದರೆ ಅವರ ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ಬೆಂಬಲ ವ್ಯಕ್ತಪಡಿಸಿದರು.

    ಮೊದಲಿಗೆ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಶ್ರೀಧರ್ ಮೋಹನ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ರಾಧ ರವಿಕುಮಾರ್, ಪತ್ರಿಕಾ ವಿತರಕರ ಸಂಘದ ಸದಸ್ಯರುಗಳಾದ ಷಣ್ಮುಖ, ವಿಜಯ್‌ಕುಮಾರ್, ಗಜೆಂದ್ರ, ಅಭಿಲಾಷ್, ನಂಜುಂಡ ಮತ್ತಿತರರು ಉಪಸ್ಥಿತರಿದ್ದರು.

    The service of the newspaper distributors is commendable.

  • ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮುಖ್ಯ

    ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮುಖ್ಯ

    ಚಿಕ್ಕಮಗಳೂರು:  ಪರಿಶ್ರಮ ವಹಿಸಿದಾಗ ನಿಮ್ಮ ಭವಿಷ್ಯ ಸ್ವತಹಾ ನೀವೇ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು.

    ಅವರು ಇಂದು ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಮತ್ತು ಸಂಗಮೇಶ್ವರ ಪೇಟೆ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಸಲಾಗಿದ್ದ ೨೦೨೫-೨೬ನೇ ಶೈಕ್ಷಣಿಕ ಸಾಲಿನ ಪದವಿ ಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

    ಇಂದಿನ ಸ್ಪರ್ಧಾ ಯುಗದಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅಷ್ಟೇ ಮುಖ್ಯ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತಮ್ಮ ವಿದ್ಯಾರ್ಥಿ ಜೀವನ ಸುವರ್ಣಾಕ್ಷರದಲ್ಲಿ ಬರೆದಿಡುವ ಸಮಯ ಇದಾಗಿದೆ ಎಂಬುದು ಮುಂದಿನ ೧೦ ವರ್ಷಗಳಲ್ಲಿ ನಿಮಗೆ ತಿಳಿಯುತ್ತದೆ ಎಂದರು.

    ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ಕೇಂದ್ರೀಕರಿಸಿಕೊಂಡು ವ್ಯಸನ, ದುರಭ್ಯಾಸದ ಕಡೆಗೆ ವಾಲದೆ ಕೇವಲ ನಿಮ್ಮ ದೃಷ್ಟಿ ಶಿಕ್ಷಣ ಮತ್ತು ಕ್ರೀಡೆಗಳಲ್ಲಿ ಭಾಗವಹಿಸಿ ಯಶಸ್ಸು ಸಾಧಿಸಿದಾಗ ಉತ್ತಮ ಭವಿಷ್ಯವಾಗಿ ರೂಪುಗೊಳ್ಳುತ್ತದೆ ಎಂದು ಹೇಳಿದರು.

    ಪ್ರಕೃತಿಯ ಮಡಿಲು ಜಿಲ್ಲೆಯ ಪ್ರವಾಸೋದ್ಯಮಕ್ಕೆ ದೇಶ, ರಾಜ್ಯದಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ರಾಷ್ಟ್ರಕವಿ ಕುವೆಂಪು, ಅಂಬಳೆ ಎ.ಆರ್ ಕೃಷ್ಣಶಾಸ್ತ್ರಿ ಇಂತಹ ಪ್ರಸಿದ್ದ ಸಾಹಿತಿಗಳು ಜನಿಸಿದ ಜಿಲ್ಲೆ ಎಂಬ ಹೆಗ್ಗಳಿಕೆ ಇದ್ದು, ಶಿಕ್ಷಣ ಪಡೆಯುತ್ತಿರುವ ನೀವುಗಳು ಸಹ ಮುಂದೆ ದೊಡ್ಡ ದೊಡ್ಡ ಸೇವೆ ಸಲ್ಲಿಸುವಂತಾಗಲಿ ಎಂದು ಹೇಳಿದರು.

    ಹಿಂದೆ ಮಕ್ಕಳಿಗೆ ಗುರುಕುಲದಲ್ಲಿ ಶಿಕ್ಷಣ ನೀಡಲಾಗುತ್ತಿತ್ತು. ಹೊಳೆ, ನದಿ ದಂಡೆ ಮೇಲೆ, ಪರ್ವತಗಳ ಮೇಲೆ ಗುರುಕುಲಗಳು ಸುಂದರ ಪರಿಸರದಲ್ಲಿ ಶಿಕ್ಷಣ ನೀಡಲಾಗುತ್ತಿತ್ತು. ಇಂತಹ ಪ್ರಕೃತಿಗೆ ಹೆಸರುವಾಸಿಯಾದ ಜಿಲ್ಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ನೀವೇ ಧನ್ಯರು ಎಂದರು.

    ಮುಂದೆ ನೀವು ಸಂಸ್ಕಾರವಂತರಾಗಿ ಸಮಾಜಕ್ಕೆ ಮಾದರಿಯಾಗಬೇಕೆಂಬ ಉದ್ದೇಶದಿಂದ ನಗರದ ಶಾಲಾ-ಕಾಲೇಜುಗಳ ಸಮೀಪ ಮಾದಕ ದ್ರವ್ಯಗಳ ಮಾರಾಟಕ್ಕೆ ಕಡಿವಾಣ ಹಾಕುವುದರ ಜೊತೆಗೆ ಮಾರಾಟ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

    ಸುಮಾರು ೯ ಕೋಟಿ ರೂ ವೆಚ್ಚದಲ್ಲಿ ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣವನ್ನು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ನಡೆಸಿ ಇನ್ನು ಎರಡು ವರ್ಷದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಜೊತೆಗೆ ಎಲ್ಲಾ ಸೌಲಭ್ಯವನ್ನು ಕಲ್ಪಿಸಿ ದಿನದ ೨೪ ಗಂಟೆಗಳಲ್ಲಿಯೂ ಕ್ರೀಡಾಪಟುಗಳಿಗೆ ಅರ್ಪಿಸುವ ಗುರಿಹೊಂದಲಾಗಿದೆ ಎಂದ ಅವರು, ಅನುದಾನ ಮಂಜೂರಾಗಿದ್ದು, ತಾಂತ್ರಿಕ ಅನುಮೋದನೆಗಾಗಿ ಕಾಯುತ್ತಿದ್ದೇವೆ ಎಂದರು.

    ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ಕಾರ್ಯದರ್ಶಿ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಮಂಜುನಾಥ್ ಮಾತನಾಡಿ, ಮಳೆಗಾಲದಲ್ಲಿ ಕ್ರೀಡಾಕೂಟಗಳು ನಡೆದರೆ ವಿದ್ಯಾರ್ಥಿಗಳು ಭಾಗವಹಿಸಲು ತೊಂದರೆಯಾಗುತ್ತಿರುವುದನ್ನು ಮನಗಂಡು ಮುಂದಿನ ದಿನಗಳಲ್ಲಿ ಮಳೆಗಾಲ ಮುಗಿದ ಬಳಿಕ ಕ್ರೀಡಾಕೂಟಗಳನ್ನು ಆಯೋಜನೆ ಮಾಡುವಂತೆ ಕಿವಿಮಾತು ಹೇಳಿದರು.

    ಮಲೆನಾಡು ಭಾಗದಲ್ಲಿ ಅತೀ ಹೆಚ್ಚು ಮಳೆಯಾಗುತ್ತಿರುವುದರಿಂದ ಮಕ್ಕಳು ಕ್ರೀಡಾ ಸ್ಪರ್ಧೆಗೆ ತರಬೇತಿ ಪಡೆದು ಸಿದ್ದರಾಗುವುದಕ್ಕೆ ತೊಂದರೆಯಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಕ್ರೀಡಾಕೂಟ ಆಯೋಜಕರು ಗಮನಹರಿಸಬೇಕೆಂದು ಮನವಿ ಮಾಡಿದರು.

    ಕ್ರೀಡಾಕೂಟದಲ್ಲಿ ಭಾಗವಹಿಸುವುದು ಮುಖ್ಯ. ಸೋಲು-ಗೆಲುವು ಸಹಜ. ಸೋತವರು ಬಾಗದೆ, ಗೆದ್ದವರು ಬೀಗದೆ ರಾಜ್ಯ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಲು ಗುರಿಹೊಂದುವಂತೆ ಎಲ್ಲಾ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

    ಮುಖ್ಯ ಅತಿಥಿಗಳಾಗಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಂಜುಳ.ಕೆ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರ, ಪ್ರಾಂಶುಪಾಲರ ಸಂಘದ ಅಧ್ಯಕ್ಷ ಸುರೇಂದ್ರ ಉಪಸ್ಥಿತರಿದ್ದರು.ಪ್ರಾಂಶುಪಾಲರಾದ ಎಸ್.ವಿ ಮೇರುತುಂಗ ಸ್ವಾಗತಿಸಿ, ಉಪನ್ಯಾಸಕ ರಚನ್ ನಿರೂಪಿಸಿ, ರೀನಾ ವಂದಿಸಿದರು.

    It is important to participate in extracurricular activities.

  • ನಗರಸಭೆ ನೂತನ ಉಪಾಧ್ಯಕ್ಷರಾಗಿ ಲಲಿತಾ ರವಿನಾಯ್ಕ ಅವಿರೋಧ ಆಯ್ಕೆ

    ನಗರಸಭೆ ನೂತನ ಉಪಾಧ್ಯಕ್ಷರಾಗಿ ಲಲಿತಾ ರವಿನಾಯ್ಕ ಅವಿರೋಧ ಆಯ್ಕೆ

    ಚಿಕ್ಕಮಗಳೂರು:  ನಗರಸಭೆ ೩೫ನೇ ವಾರ್ಡಿನ ಕೆಂಪನಹಳ್ಳಿ ಬಡಾವಣೆಯ ಬಿಜೆಪಿ ಸದಸ್ಯೆ ಲಲಿತಾ ರವಿನಾಯ್ಕ ನಗರಸಭೆ ನೂತನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಸುದರ್ಶನ್ ಘೋಷಿಸಿದರು.

    ಅವರು ಇಂದು ನಗರಸಭೆಯಲ್ಲಿ ಪಕ್ಷದ ತೀರ್ಮಾನದಂತೆ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆಯನ್ನು ನಿಗಧಿಪಡಿಸಲಾಗಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಬೇರೆ ಯಾವ ಸದಸ್ಯರಿಂದ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಲಲಿತಾ ರವಿನಾಯ್ಕ ಅವರನ್ನು ನೂತನ ಉಪಾಧ್ಯಕ್ಷರನ್ನಾಗಿ ಆಯ್ಕೆಮಾಡಲಾಗಿದೆ ಎಂದು ಘೋಷಿಸಿದರು.

    ನೂತನ ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅನುಸೂಚಿತ ಸಮುದಾಯದ ಲಂಬಾಣಿ ಜನಾಂಗಕ್ಕೆ ಸೇರಿದ ಲಲಿತಾ ರವಿನಾಯ್ಕ ಅವರು ಸರ್ವಾನುಮತದಿಂದ ನಗರಸಭೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅವರಿಗೆ ಶುಭ ಹಾರೈಸುತ್ತೇನೆ ಎಂದರು.

    ಸಿಕ್ಕಿರುವ ಅಧಿಕಾರವಧಿಯಲ್ಲಿ ಒಳ್ಳೆಯ ಕೆಲಸದ ಮೂಲಕ ಆ ಭಾಗದ ತಮ್ಮ ವಾರ್ಡಿನಲ್ಲಿಯೂ ಹೆಸರು ಪಡೆದು ಬಿಜೆಪಿ ಪಕ್ಷದಲ್ಲೂ ಕೆಲಸ ಮಾಡುತ್ತ ಎಲ್ಲರ ಸರ್ವ ಸಮ್ಮತಿಯ ಮೇರೆಗೆ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಹೇಳಿದರು.

    ಹಾಲಿ ಅಧ್ಯಕ್ಷೆ ಶೀಲಾ ದಿನೇಶ್ ಹಾಗೂ ಲಲಿತಾ ರವಿನಾಯ್ಕರ ಜೋಡಿ ಜೋಡೆತ್ತಿನ ರೀತಿ ನಗರದ ಅಭಿವೃದ್ಧಿಗೆ ಕಾಯಕಲ್ಪ ಕೊಡಲಿ ಎಂದ ಅವರು, ಹಾಲಿ ಸ್ವಚ್ಚ ನಗರ ಎಂದು ಹೆಸರು ಮುಂದುವರೆಯುವಂತೆ ನೋಡಿಕೊಳ್ಳಲಿ ಎಂದು ಕಿವಿಮಾತು ಹೇಳಿದರು.

    ಅಭಿವೃದ್ಧಿಯಲ್ಲಿ ದಾಪುಗಾಲು ಇಡುವುದರ ಜೊತೆಗೆ ಜನಸ್ನೇಹಿ ಆಡಳಿತಕ್ಕೆ ನಾಂದಿಯಾಗಲಿ, ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಸ್ನೇಹಿತರಂತೆ ಸಾರ್ವಜನಿಕರ ಕೆಲಸ ಮಾಡಿಕೊಡಿ ಎಂದು ಹೇಳಿದರು.

    ತಾವು ಶಾಸಕರಾಗಿದ್ದಾಗ ಎಸ್‌ಎಫ್‌ಸಿ ಯೋಜನೆಯಡಿ ವಿಶೇಷ ಅನುದಾನ ತಂದು ೧೫ನೇ ಹಣಕಾಸು ಹಾಗೂ ವಾರ್ಷಿಕ ಅನುದಾನದ ಜೊತೆಗೆ ನಾಲ್ಕು ಪಟ್ಟು ವಿಶೇಷ ಅನುದಾನ ತರುತ್ತಿದ್ದೆವು. ಇದರಿಂದ ನಗರದ ಅಭಿವೃದ್ಧಿಗೆ ಸಹಕಾರವಾಗುತ್ತಿತ್ತು. ವಿಶೇಷ ಅನುದಾನ ಕೋರಿ ಸರ್ಕಾರದ ಬಳಿಗೆ ಸರ್ವ ಪಕ್ಷದ ಮುಖಂಡರ ನಿಯೋಗ ಹೋಗುವುದಾದರೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ಅಹ್ವಾನಿಸಿದರೆ ಬರಲು ಸಿದ್ದವಿರುವುದಾಗಿ ಭರವಸೆ ನೀಡಿದರು.

    ನಗರಸಭಾಧ್ಯಕ್ಷೆ ಶೀಲಾದಿನೇಶ್ ಮಾತನಾಡಿ, ಸ್ವಚ್ಚ ನಗರ ಮತ್ತು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ನಮ್ಮೊಂದಿಗೆ ನೂತನ ಉಪಾಧ್ಯಕ್ಷೆ ಲಲಿತಾ ಸಹಕರಿಸುವಂತೆ ವಿನಂತಿಸಿ ಶುಭ ಹಾರೈಸಿದರು. ನಗರದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದ ಅವರು, ವಿಶೇಷ ಅನುದಾನ ತರಲು ಆಹ್ವಾನಿಸಿದರೆ ಭಾಗವಹಿಸುವುದಾಗಿ ತಿಳಿಸಿದರು.

    ನೂತನ ಉಪಾಧ್ಯಕ್ಷೆ ಲಲಿತಾ ರವಿನಾಯ್ಕ ಮಾತನಾಡಿ, ನನ್ನನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆಮಾಡಿದ ಸರ್ವರಿಗೂ ಹಾಗೂ ೩೫ ವಾರ್ಡ್‌ಗಳ ಸದಸ್ಯರಿಗು, ಪಕ್ಷದ ಮುಖಂಡರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆಂದು ಹೇಳಿದರು.

    ಎಲ್ಲರ ವಿಶ್ವಾಸ ಪಡೆದು ನಗರಸಭೆ ಅಧ್ಯಕ್ಷರೊಂದಿಗೆ ಸೇರಿ ನಗರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.

    ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಟಿ.ರಾಜಶೇಖರ್, ವರಸಿದ್ಧಿ ವೇಣುಗೋಪಾಲ್, ಉಮಾದೇವಿ ಕೃಷ್ಣಪ್ಪ, ಕವಿತಶೇಖರ್, ಇಂದಿರಾಶಂಕರ್, ವಿದ್ಯಾಬಸವರಾಜ್, ಮಧುಕುಮಾರ್ ರಾಜ್ ಅರಸ್, ಸುಜಾತ ಶಿವಕುಮಾರ್, ಸಿ.ಎಂ ಕುಮಾರ್, ಎ.ಸಿ ಕುಮಾರೇಗೌಡ, ರೂಪಕುಮಾರ್, ಗೋಪಿ, ಅನುಮಧುಕರ್, ಮಣಿಕಂಠ, ರಾಜು, ಅಮೃತೇಶ್ ಚೆನ್ನಕೇಶವ, ದೀಪ ರವಿಕುಮಾರ್, ಭವ್ಯ ಮಂಜುನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಮುಖಂಡರುಗಳಾದ ಕೋಟೆ ರಂಗನಾಥ್, ಕುರುವಂಗಿ ವೆಂಕಟೇಶ್, ಕನಕರಾಜ್ ಅರಸ್, ಕೇಶವಮೂರ್ತಿ, ಹಂಪಯ್ಯ, ಶಂಕರ್ ಮತ್ತಿತರರು ಉಪಸ್ಥಿತರಿದ್ದರು.

    Lalita Ravinayaka elected unopposed as new Vice President of Municipal Council

  • ಹಂಗರವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 3.20 ಲಕ್ಷ ರೂ ನಿವ್ವಳ ಲಾಭ

    ಹಂಗರವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 3.20 ಲಕ್ಷ ರೂ ನಿವ್ವಳ ಲಾಭ

    ಚಿಕ್ಕಮಗಳೂರು: ತಾಲ್ಲೂಕು ಬೈಗೂರು ಪ್ರಾಥಮಿಕ ಸಹಕಾರ ಸಂಘದ ಹಂಗರವಳ್ಳಿ ಶಾಖೆಗೆ ೩.೨೦ ಲಕ್ಷ ರೂ ಪ್ರಸಕ್ತ ಆರ್ಥಿಕ ವರ್ಷದಲ್ಲಿ ನಿವ್ವಳ ಲಾಭ ಗಳಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಡಿ.ಸಿ. ಅರುಣ್ ಕುಮಾರ್ ತಿಳಿಸಿದರು.

    ಅವರು ಇಂದು ಹಂಗರವಳ್ಳಿಯಲ್ಲಿ ಬೈಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ  ಸಹಕಾರ ಸಂಘಕ್ಕೆ ನೂತನ ಕಟ್ಟಡ ಸದಸ್ಯರಿಗೆ ಡಿವಿಡೆಂಟ್ ನೀಡುವುದರ ಜೊತೆಗೆ ೧೦ ಲಕ್ಷ ರೂಗಳವರೆಗೆ ಸಾಲಸೌಲಭ್ಯ ನೀಡಲು ಗುರಿಹೊಂದಲಾಗಿದೆ ಎಂದ ಅವರು, ಶೇ.೦ ಬಡ್ಡಿದರದಲ್ಲಿ ೫ ಲಕ್ಷ ರೂಗಳವರೆಗೆ ಸಾಲ ನೀಡಬೇಕು. ಷೇರುದಾರರು ಹೊಂದಿರುವ ಜಮೀನು ಆಧಾರದಲ್ಲಿ ಹೆಚ್ಚು ಸಾಲಸೌಲಭ್ಯ ನೀಡಬೇಕೆಂದು ಜಿಲ್ಲಾ ಬ್ಯಾಂಕಿನಲ್ಲಿ ಕೋರಿಕೆ ಸಲ್ಲಿಸಲಾಗಿದೆ ಎಂದರು.

    ಖಾಸಗಿ ಬ್ಯಾಂಕ್‌ಗಳಿಗೆ ಕಡಿಮೆ ಇಲ್ಲದಂತೆ ಪತ್ತಿನ ಸಹಕಾರ ಸಂಘದಲ್ಲಿಯೂ ಎಲ್ಲಾ ರೈತರಿಗೆ ಸುಲಭವಾಗಿ ಸಾಲ ನೀಡಲು ಆಡಳಿತ ಮಂಡಳಿ ನಿರ್ಧಾರ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು. ಮುಚ್ಚುವ ಹಂತದಲ್ಲಿದ್ದ ಪ್ರಾಥಮಿಕ ಸಹಕಾರ ಸಂಘ ಇಂದು ೮ ಕೋಟಿ ರೂ ಸಾಲ ಸೌಲಭ್ಯ ನೀಡುವ ಹಂತಕ್ಕೆ ಬೆಳೆದು ನಿಂತಿದೆ. ಇದಕ್ಕೆ ಸಹಕಾರ ನೀಡಿದ ಮಾಜಿ ಅಧ್ಯಕ್ಷರೂ, ನಿರ್ದೇಶಕರುಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.

    ಸೇವಾ ಮನೋಭಾವದಿಂದ ಎಲ್ಲರೂ ಸೇವೆ ಸಲ್ಲಿಸಿದಾಗ ಮಾತ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಉತ್ತಮವಾಗಿ ಆಡಳಿತ ನೀಡಲು ಸಾಧ್ಯ. ಈ ನಿಟ್ಟಿನಲ್ಲಿ ಪಾರದರ್ಶಕ ಚುನಾವಣೆ ನಡೆದು, ಸಹಕಾರ ಸೇವೆಯಲ್ಲಿ ಉತ್ತಮ ಗುರಿ ಹೊಂದಿರುವವರು ಆಯ್ಕೆಯಾಗಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಮತು ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

    ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿ ಉಪಾಧ್ಯಕ್ಷ ದಿಲೀಪ್ ಹೆಚ್.ಆರ್, ನಿರ್ದೇಶಕರುಗಳಾದ ಹೆಚ್.ಪಿ. ರಮೇಶ್, ಹೆಚ್.ಕೆ ಜಗದೀಶ್, ಬಿ.ಇ ನಾಗೇಶ್, ಹೆಚ್.ಜಿ ಗಣೇಶ್, ಪ್ರದೀಪ್ ಬಿ.ಆರ್, ಸಚ್ಚಿದಾನಂದ, ಮೋಹನ್‌ಕುಮಾರ್, ಎಂ.ಎನ್ ಸುಜಾತ, ವಸಂತಮ್ಮ, ಹೆಚ್.ಬಿ ಸುರೇಶ್, ಮೇಲ್ವಿಚಾರಕ ರಘು ಕೆ.ಆರ್ ಹಾಗೂ ಮುಖ್ಯ ಕಾರ್ಯನಿರ್ವಾಹಕ ಪ್ರದೀಶ್ ಹೆಚ್.ಜಿ, ಗಣಕ ನಿರ್ವಾಹಕರಾದ ಯಶೋಧ ಸಿ.ಆರ್, ಮಾರಾಟ ಗುಮಾಸ್ತ ನವೀನ್ ಕೆ.ಸಿ ಉಪಸ್ಥಿತರಿದ್ದರು.

    Hangaravalli Primary Agricultural Credit Cooperative Society earns a net profit of Rs. 3.20 lakhs

  • ಭಾರತೀಯ ಸನಾತನ ಸಂಸ್ಕೃತಿ ಉಳಿಸಲು ಮುಂದಾಗಿರುವುದು ಅಭಿನಂದನೀಯ

    ಭಾರತೀಯ ಸನಾತನ ಸಂಸ್ಕೃತಿ ಉಳಿಸಲು ಮುಂದಾಗಿರುವುದು ಅಭಿನಂದನೀಯ

    ಚಿಕ್ಕಮಗಳೂರು: ವಚನಾಕಾರರು ಕನ್ನಡಕ್ಕೆ ಬಹಳ ದೊಡ್ಡ ಕೊಡುಗೆಯನ್ನು ೧೨ನೇ ಶತಮಾನದಲ್ಲೇ ನೀಡಿದ್ದಾರೆ. ಜಗಜ್ಯೋತಿ ಬಸವಣ್ಣನವರು ಕೊಟ್ಟ ಸಾಂಸ್ಕೃತಿಕ ಚಳುವಳಿ ಬದುಕಿನ ಅನುಭವಗಳು ಅನುಭಾವವಾಗಿ ಜನರ ಆಡುಭಾಷೆಯಲ್ಲಿ ಸಾಹಿತ್ಯ ರಚಿಸಿ ಇಡೀ ಜಗತ್ತಿಗೆ ನೈತಿಕ ಜಾಗೃತಿ ಕೊಟ್ಟ ಪರಿಣಾಮ ಕನ್ನಡ ಭಾಷೆಗೆ ಹೊಸ ಆಯಾಮ ತಂದುಕೊಟ್ಟು ಚಿರಸ್ಥಾಯಿಯನ್ನಾಗಿಸಿದೆ ಎಂದು ನಟ, ನಿರ್ಮಾಪಕ, ನಿರ್ದೇಶಕ, ರಂಗಕರ್ಮಿ ಟಿ.ಎಸ್. ನಾಗಾಭರಣ ಅಭಿಪ್ರಾಯಿಸಿದರು.

    ಅವರು ಕಲ್ಯಾಣ ನಗರದ ಬಸವತತ್ವ ಪೀಠದಲ್ಲಿ ಐಸಿರಿ ಫೌಂಡೇಶನ್ ಹಾಗೂ ಐಸಿರಿ ಸಮೂಹ ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಶಿವಾನುಭವಗೋಷ್ಠಿ-೪೯ ಐಸಿರಿ ಸ್ಟೀಲ್ ಬ್ಯಾಂಕ್ ಲೋಕಾರ್ಪಣೆ, ಐಸಿರಿ ಸಾಧಕ ಪ್ರಶಸ್ತಿ ಪ್ರದಾನ ಹಾಗೂ ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಿ ಐಸಿರಿ ಸಾಧಕ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.

    ಇಂದಿಗೂ ಸಹ ಕನ್ನಡ ಭಾಷೆ ವರ್ಚಸ್ಸನ್ನು ಹೊಂದಿರುವುದಕ್ಕೆ ವಚನಾಕಾರರು ಕೊಟ್ಟ ಸಾಹಿತ್ಯ ಪ್ರಮುಖ ಕಾರಣವಾಗಿದ್ದು, ಪ್ರಜಾ ಸಾಹಿತ್ಯ ಎಂದು ಕರೆಯಲ್ಪಡುವುದೇ ವಚನ ಸಾಹಿತ್ಯ. ಸಾದಾ ಸೀದವಾಗಿ ಕೇಳಿದ ತಕ್ಷಣವೇ ಪರಿವರ್ತನೆಗೊಳ್ಳುವ ವಚನ ಸಾಹಿತ್ಯ ಬದುಕು ಕಟ್ಟಿಕೊಳ್ಳಲು ಪೂರಕವಾಗಿದೆ ಎಂದು ವಿಶ್ಲೇಷಿಸಿದರು.

    ಕೇಂದ್ರ ಸರ್ಕಾರ ಎನ್‌ಇಪಿ ಮೂಲಕ ಇಡೀ ರಾಷ್ಟ್ರದಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಸಮಾನ ಶಿಕ್ಷಣ ಜಾರಿಗೆ ತಂದರು. ಅದನ್ನು ವಿರೋಧಿಸಿ ಇಂದೂ ಸಹ ಶಿಕ್ಷಣವನ್ನು ಎಡಪಂಥೀಯರ ಕೈಯಲ್ಲಿ ಇರಿಸಲಾಗಿದೆ ಎಂದು ದೂರಿದರು.

    ಬಸವಣ್ಣ, ಸ್ವಾಮಿ ವಿವೇಕಾನಂದ, ಕನಕದಾಸರ ವಿಚಾರಧಾರೆಗಳ ಜೊತೆಗೆ ಮಹರಾಜರು ಗಾಂಭೀರ್ಯದ ಆಡಳಿತ ವ್ಯವಸ್ಥೆಯನ್ನು ನಡೆಸಿದರು. ಆದರೆ, ಸಂಸ್ಕೃತಿಯ ಮೇಲೆ ಆಕ್ರಮಣ ನಡೆಸಿದ ಪರಿಣಾಮ ಯುವ ಸಮೂಹ ಇದರಿಂದ ವಿಮುಖರಾಗಿ ನಮ್ಮ ಮನೆಯ ಆಚಾರ-ವಿಚಾರದಿಂದ ದೂರವಾಗಿ ಅವರದೇ ಆದ ನಮ್ಮದಲ್ಲದ ಸಂಸ್ಕೃತಿ ಬೆಂಬಲಿಸುತ್ತಿರುವುದನ್ನು ವಿರೋಧಿಸಿದರು.

    ಐಸಿರಿ ಫೌಂಡೇಶನ್ ಮತ್ತು ಅದರ ಹಲವು ಮಜಲುಗಳ ಲೋಗೋವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಸಂಸದ ಬಿ.ಎಸ್ ರಾಘವೇಂದ್ರ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಐಸಿರಿ ಫೌಂಡೇಶನ್ ಕೊಡಮಾಡುವ ಸಾಧಕ ಪ್ರಶಸ್ತಿಯನ್ನು ಟಿ.ಎಸ್ ನಾಗಾಭರಣ, ಅದಮ್ಯ ಚೇತನ ಸಂಸ್ಥೆಯ ತೇಜಸ್ವಿನಿ ಅನಂತಕುಮಾರ್, ಸಮನ್ವಯ ಸಂಸ್ಥೆಯ ಸಮನ್ವಯ ಕಾಶಿ, ನೈಸರ್ಗಿಕ ಕೃಷಿಕ ಚಂದ್ರಶೇಖರ್ ನಾರಣಾಪುರ, ವೈಲ್ಡ್‌ಕ್ಯಾಟ್-ಸಿ ಸಂಸ್ಥಾಪಕ ಡಿ.ವಿ ಗಿರೀಶ್‌ರವರಿಗೆ ನೀಡಿ ಗೌರವಿಸಲಾಯಿತು.

    ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬಸವತತ್ವ ಪೀಠದ ಡಾ. ಬಸವ ಮರುಳಸಿದ್ದ ಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿದ ಅವರು, ಶಿಕ್ಷಣ ಎಲ್ಲಾ ದಿಕ್ಕಿನಿಂದ ಒಳ್ಳೆ ವಿಚಾರಗಳು ಬಂದು ಸೇರಿ ಮುಕ್ತ ಹೃದಯ ಬೆಳೆಸಬೇಕು. ಇದು ಎಡ ಮತ್ತು ಬಲ ಪಂಥೀಯ ಪುಸ್ತಕಗಳಿಂದ ದೊರೆಯುವುದಿಲ್ಲ. ಕಲಿಯುವಿಕೆಯನ್ನು ಕೇಂದ್ರವಾಗಿರುವ ವಿದ್ಯಾರ್ಥಿಗಳಲ್ಲಿ ಕಲಿಕೆ ಹಂಬಲ ಮೂಡಿಸಬೇಕಾಗಿದೆ ಎಂದರು.

    ಶಿಕ್ಷಣ ರಂಗವನ್ನು ನ್ಯಾಯಾಂಗ, ಲೋಕಾಯುಕ್ತ, ಚುನಾವಣಾ ರಂಗದ ರೀತಿಯಲ್ಲಿ ರಾಜಕೀಯ ಮುಕ್ತವಾಗಿರುವ ರಂಗವನ್ನು ರೂಪಿಸುವ ತುರ್ತು ಅಗತ್ಯ ಇದೆ ಎಂದು ಒತ್ತಾಯಿಸಿದರು. ಪಠ್ಯಪುಸ್ತಕದಲ್ಲಿ ಈ ಪಂಥಗಳಿಂದ ಬಿಡುಗಡೆಗೊಳಿಸಿ ನೀತಿ-ನಿರೂಪಣೆಗಳನ್ನು ಅಳವಡಿಸುವ ಕೆಲಸಗಳನ್ನು ಶಾಸನ ಸಭೆಗಳು ಮಾಡುವ ಮೂಲಕ ಶೀಘ್ರ ಅನುಷ್ಠಾನಕ್ಕೆ ತರಬೇಕೆಂದು ಸಲಹೆ ನೀಡಿದರು.

    ಕಾರ್ಯಕ್ರಮದಲ್ಲಿ ತೇಜಸ್ವಿನಿ ಅನಂತಕುಮಾರ್‌ಕಿಶೋರ್ ಕುಮಾರ್ ಹೆಗಡೆಹಿರೇಮಗಳೂರು ಕಣ್ಣನ್‌ಬಿ.ಸಿ ಬಸವರಾಜುಚಂದ್ರಶೇಖರ ನಾರಾಣಾಪುರ ಕಾರ್ಯಕ್ರಮದಲ್ಲಿ ಹೆಚ್.ಸಿ. ಕಲ್ಮರುಡಪ್ಪ, ಸೋಮಶೇಖರ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಐಸಿರಿ ಪತ್ರಿಕೆ ಸಂಪಾದಕರಾದ ಕೆ.ಕೆ ಕಲ್ಯಾಣ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು.

    ಇದೇ ಸಂದರ್ಭದಲ್ಲಿ ಐಸಿರಿ ಪತ್ರಿಕೆಯ ಪ್ರಧಾನ ಜಿಲ್ಲಾ ವರದಿಗಾರ ಸಿ.ಡಿ. ಚಂದ್ರೇಗೌಡ ಸೇರಿದಂತೆ ಎಲ್ಲಾ ಸಿಬ್ಬಂದಿ ವರ್ಗದವರನ್ನು ಸನ್ಮಾನಿಸಿ ಗೌರವಿಸಲಾಯಿತು.

    It is commendable that India is taking the initiative to preserve its ancient culture.

  • ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ನಿಧಿ ಮರು ಸ್ಥಾಪಿಸಬೇಕು

    ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ನಿಧಿ ಮರು ಸ್ಥಾಪಿಸಬೇಕು

    ಮೈಸೂರು: ‘ಪತ್ರಿಕಾ ವಿತರಕರ ಕ್ಷೇಮಾ ಭಿವೃದ್ಧಿ ನಿಧಿಯನ್ನು ಮರು ಸ್ಥಾಪಿಸಬೇಕು, ಮಾಧ್ಯಮ ಅಕಾಡೆಮಿಯಲ್ಲಿ ಸದಸ್ಯತ್ವ ನೀಡಬೇಕು’ ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಇಲ್ಲಿ ನಡೆದ 5ನೇ ರಾಜ್ಯ ಮಟ್ಟದ ಪತ್ರಿಕಾ ವಿತರಕರ ಸಮ್ಮೇಳನದಲ್ಲಿ ಮಂಡಿಸಲಾಯಿತು.

    ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಮೈಸೂರು ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ನಗರದ ಕೆಎಸ್‌ಒಯು ಘಟಿಕೋತ್ಸವ ಭವನದ ‘ತಾತಯ್ಯನವರ ವೇದಿಕೆ’ಯಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಹಾಗೂ ಸಮ್ಮೇಳನದಲ್ಲಿ, ಒಕ್ಕೂಟದ ಅಧ್ಯಕ್ಷ ಕೆ.ಶಂಭುಲಿಂಗ ಮಾತನಾಡಿ, ‘ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ರಚಿಸಿದ್ದ ಕ್ಷೇಮಾಭಿವೃದ್ಧಿ ನಿಧಿಯನ್ನು ಮರು ಸ್ಥಾಪಿಸಬೇಕು’ ಎಂದು ಒತ್ತಾಯಿಸಿದರು.

    ‘ಮಾಧ್ಯಮ ಅಕಾಡೆಮಿಯಲ್ಲಿ ಪ್ರಾತಿನಿಧ್ಯ ದೊರಕಿಸಬೇಕು. ಅಕಾಲಿಕ ಮರಣ ಹೊಂದಿದವರ ಕುಟುಂಬ ದವರಿಗೆ ₹10 ಲಕ್ಷ ಪರಿಹಾರ ನೀಡಬೇಕು. 60 ವರ್ಷ ಮೀರಿದವರಿಗೆ ₹5 ಸಾವಿರ ಪಿಂಚಣಿ ಕೊಡಬೇಕು. ಉಚಿತ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು. ಮೈಸೂರಿನಲ್ಲಿ ಪತ್ರಿಕಾ ವಿತರಣಾ ಕೇಂದ್ರ ನಿರ್ಮಿಸಬೇಕು ಹಾಗೂ ಎಂಡಿಎಯಿಂದ ಸಿಎ ನಿವೇಶನ ಮಂಜೂರು ಮಾಡಬೇಕು’ ಎಂದು ಆಗ್ರಹಿಸಲಾಯಿತು.

    ಇದಕ್ಕೆ ‍ಪ್ರತಿಕ್ರಿಯಿಸಿದ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ‘ವಿತರಕರನ್ನು ಮೊದಲು ಗುರುತಿಸಿದ್ದೇ ಮುಖ್ಯಮಂತ್ರಿ ಸಿದ್ದರಾಮಯ್ಯ. ವಿತರಕರ ಬೇಡಿಕೆಗಳನ್ನು ಅವರ ಗಮನಕ್ಕೆ ತರಲಾಗುವುದು’ ಎಂದು ಭರವಸೆ ನೀಡಿದರು. ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿತರಕರ ಮಕ್ಕಳನ್ನು ಪುರಸ್ಕರಿಸಲಾಯಿತು.

    ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ವಿತರಕ ಎಂ.ಎನ್. ನಾಗರಾಜ್ ಅವರಿಗೆ ಸಮ್ಮೇಳನದ ‘ಅಧ್ಯಕ್ಷ ಸ್ಥಾನದ ಗೌರವ’ ನೀಡಲಾಯಿತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮೈಸೂರಿನ ಜವರಪ್ಪ ಹಾಗೂ ಸುವರ್ಣ ಕರ್ನಾಟಕ ಪ್ರಶಸ್ತಿ ಪುರಸ್ಕೃತರಾದ ತುಮಕೂರಿನ ಲಕ್ಷ್ಮೀನರಸಪ್ಪ ಅವರನ್ನು ಅಭಿನಂದಿಸ ಲಾಯಿತು. ಆರಂಭದಲ್ಲಿ ನಾಡಗೀತೆಯೊಂದಿಗೆ, ಪತ್ರಿಕಾ ವಿತರಕರ ಗೀತೆಯನ್ನೂ ಹಾಡಿದ್ದು ವಿಶೇಷವಾಗಿತ್ತು.

    The newspaper distributors’ welfare fund should be re-established.

  • ಡಿಜೆಗೆ ಅವಕಾಶ ನೀಡಲು ಹಿಂದೂ ಮಹಾಗಣಪತಿ ಸೇವಾ ಸಂಘ ಆಗ್ರಹ

    ಡಿಜೆಗೆ ಅವಕಾಶ ನೀಡಲು ಹಿಂದೂ ಮಹಾಗಣಪತಿ ಸೇವಾ ಸಂಘ ಆಗ್ರಹ

    ಚಿಕ್ಕಮಗಳೂರು: ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆ ಸಂಗೀತ ಹಾಕಲು ಜಿಲ್ಲಾಡಳಿತ ಅನುಮತಿ ನೀಡುವಂತೆ ಹಿಂದೂ ಮಹಾಗಣಪತಿ ಸೇವಾ ಸಂಘ ಆಗ್ರಹಿಸಿದೆ.

    ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಘದ ಸದಸ್ಯ ಸಂತೋಷ್ ಕೋಟ್ಯಾನ್ ಮಾತನಾಡಿ, ಸುಪ್ರೀಂಕೋರ್ಟ್ ನಿಗಧಿಪಡಿಸಿರುವ ಮಾನದಂಡಗಳನ್ನು ಗಣಪತಿ ಪ್ರತಿಷ್ಠಾಪನಾ ಆಯೋಜಕರು ಪಾಲಿಸುತ್ತೇವೆ. ನಿಗಧಿಪಡಿಸಿದ ಡೆಸಿಬಲ್‌ಗಿಂದ ಹೆಚ್ಚು ಶಬ್ದ ಹಾಕುವುದಿಲ್ಲ. ರಾತ್ರಿ ೧೦ ಗಂಟೆ ಮೇಲ್ಪಟ್ಟು ಡಿಜೆ ಬಳಸುವುದಿಲ್ಲ ಎಂದರು.

    ಹೊಸ ವರ್ಷಾಚರಣೆ ಸಂದರ್ಭ ಬೆಂಗಳೂರಿನ ಪ್ರಮುಖ ಬೀದಿಗಳಲ್ಲಿ ಡಿಜೆಗೆ ಅವಕಾಶ ನೀಡಲಾಗುತ್ತದೆ. ನಮ್ಮ ಧಾರ್ಮಿಕ ಕಾರ್ಯಕ್ರಮಕ್ಕೆ ಏಕೆ ನಿಷೇಧ ಎಂದು ಪ್ರಶ್ನಿಸಿ ಜಿಲ್ಲಾಡಳಿತ ಡಿಜೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.

    ಗಣಪತಿ ಸೇವಾ ಸಂಘದ ಅಧ್ಯಕ್ಷ ಶ್ಯಾಮ್ ವಿ ಗೌಡ ಮಾತನಾಡಿ, ೧೨ ನೇ ವರ್ಷದ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಬುಧವಾರ ವಿಜೃಂಭಣೆಯಿಂದ ನಡೆದಿದೆ. ಹಿಂದೂ ಮಹಾಗಣಪತಿ ವಿಜಯ ಸಿಂದೂರ ಮಂಟಪದಲ್ಲಿ ನಿತ್ಯ ಸಂಜೆ ೭ ಗಂಟೆಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಆ.೩೦ ರಂದು ವಿಜಯ ಸಿಂದೂರು ಕುರಿತಂತೆ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.

    ಸೆ.೧ ರಂದು ಆರ್‌ಎಸ್‌ಎಸ್‌ಗೆ ೧೦೦ ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಯಾದವ ಕೃಷ್ಣ ಮತ್ತೂರು ಅವರಿಂದ ಉಪನ್ಯಾಸವಿದೆ. ಸೆ.೩ ರಂದು ದೇವಸ್ಥಾನ ನಮ್ಮ ಸ್ವತ್ತು ಎಂಬ ವಿಷಯದ ಬಗ್ಗೆ ಹಿರೇಮಗಳೂರು ಕಣ್ಣನ್ ಮತ್ತು ನಾಗಶ್ರೀತ್ಯಾಗರಾಜ್ ಉಪನ್ಯಾಸ ನೀಡಲಿದ್ದಾರೆ ಎಂದರು.

    ಉಳಿದ ದಿನಗಳಲ್ಲಿ ಛದ್ಮವೇಷ ಸ್ಪರ್ಧೆ, ಭರತನಾಟ್ಯ, ಭಕ್ತಿಲಹರಿ, ಯಕ್ಷಗಾನ, ಭಕ್ತಿ ಭಾವ ಸಂಗಮ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಹೇಳಿದರು.
    ಸೆ.೩ ರಂದು ಗಣಹೋಮ, ಮಹಾಮಂಗಳಾರತಿ, ಅನ್ನಸಂತರ್ಪಣೆ ಏರ್ಪಡಿಸಲಾಗಿದ್ದು, ಸೆ.೫ ರಂದು ರಂಗಪೂಜೆ, ಸೆ.೬ ರಂದು ಮಧ್ಯಾಹ್ನ ೨ ಗಂಟೆಗೆ ಶ್ರೀ ಅವರನ್ನು ಅಲಂಕೃತ ಮಂಟಪದಲ್ಲಿ ಕೂರಿಸಿ ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿ ನಂತರ ಕೋಟೆ ಕೆರೆಯಲ್ಲಿ ವಿಸರ್ಜಿಸಲಾಗುವುದು ಎಂದು ಹೇಳಿದರು.

    ಪತ್ರಿಕಾಗೋಷ್ಠಿಯಲ್ಲಿ ಗಣಪತಿ ಸೇವಾ ಸಂಘದ ಅಧ್ಯಕ್ಷ ಆಟೋ ಶಿವಣ್ಣ, ಸದಸ್ಯರಾದ ಶರತ್, ನೂತನ್, ಪಾರ್ಥಿವನ್, ವೀರೇಶ್ ಮತ್ತಿತರರಿದ್ದರು.

    Hindu Mahaganapati Seva Sangh demands to allow DJ

  • ದುರ್ಬಲರ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಪಕ್ಷಾತೀತ ಸಭೆ

    ದುರ್ಬಲರ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಪಕ್ಷಾತೀತ ಸಭೆ

    ಚಿಕ್ಕಮಗಳೂರು: ಜಿಲ್ಲೆಯ ಕಂದಾಯ, ಅರಣ್ಯ ಭೂಮಿ ಸಮಸ್ಯೆ, ಕಾಡಾನೆ, ಶೋಷಿತ, ದುರ್ಬಲರ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಜಿಲ್ಲಾಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಪಕ್ಷಾತೀತವಾದ ಸಭೆ ಕರೆಯುವ ಪ್ರಯತ್ನ ಮಾಡುವುದಾಗಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು.

    ತಾಲೂಕಿನ ಹಂಗರವಳ್ಳಿಯಲ್ಲಿ ಗುರುವಾರ ಏರ್ಪಡಿಸಿದ್ದ ಆವತಿ ಹೋಬಳಿ ಮಟ್ಟದ ರೈತ ಸಮಾವೇಶದಲ್ಲಿ ಅವರು ಮಾತನಾಡಿದರು. ಕಂದಾಯ ಮತ್ತು ಅರಣ್ಯ ಭೂಮಿ ಸಮಸ್ಯೆಗಳು ಕೆಲವು ಕೇಂದ್ರ ಮತ್ತು ರಾಜ್ಯ ಸರಕಾರದ ವ್ಯಾಪ್ತಿಗೆ ಬರುತ್ತದೆ. ಈ ನಿಟ್ಟಿನಲ್ಲಿ ಅಕಾರಿಗಳು, ಜನಪ್ರತಿನಿಗಳು ಒಟ್ಟಾಗಿ ಕುಳಿತು ಮುಂದಿನ ತಲೆಮಾರಿಗೆ ಅನುಕೂಲ ಆಗುವಂತೆ ಯೋಜನೆ ರೂಪಿಸಿ ಅನುಷ್ಠಾನ ಮಾಡಬೇಕು. ಇಲ್ಲದಿದ್ದರೆ ಹಿಂದಿನಿಂದ ಇರುವ ಮೂಲ ಸಮಸ್ಯೆಗಳಿಗೆ ಮುಕ್ತಿ ದೊರೆಯುವುದಿಲ್ಲ ಎಂದು ಹೇಳಿದರು.

    ಸರ್ಫೆಸಿ ಕಾಯಿದೆಯಿಂದ ಕಾಫಿ ಹೊರಗಿಡಬೇಕು ಎಂಬ ಪ್ರಯತ್ನ ನಡೆದಿದೆ. ಈಗಾಗಲೇ ಒಂದು ಪ್ಯಾಕೇಜ್ ಕೊಡಿಸುವ ಮೂಲಕ ಅನೇಕ ಬೆಳೆಗಾರರಿಗೆ ಅನುಕೂಲ ಆಗಿದೆ. ಒಟ್ಟಾರೆ ಜಿಲ್ಲೆಯ ಸಮಸ್ಯೆಗಳನ್ನು ಪಕ್ಷಾತೀತವಾಗಿ ಅಕಾರಿ, ಜನಪ್ರತಿನಿಗಳು ಚರ್ಚಿಸಿ ಪರಿಹಾರ ಕಂಡುಕೊಳ್ಳೋಣ ಎಂದರು.

    ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವರುಂದ ಮಾತನಾಡಿ, ಕಾಫಿ ಧಾರಣೆ ಮತ್ತಿತರೆ ವಿದ್ಯಾಮಾನಗಳ ಬಗ್ಗೆ ಬೆಳೆಗಾರರು ಮಂಡಳಿ ಆಯೋಜಿಸುವ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅರಿವು ಮೂಡಿಸಿಕೊಳ್ಳಬೇಕು. ಸರ್ಫೆಸಿ ಕಾಯಿದೆಯಿಂದ ಬೆಳೆಗಾರರಿಗೆ ಆಗುತ್ತಿರುವ ತೊಂದರೆ ಬಗ್ಗೆ ಕೇಂದ್ರ ಅರ್ಥ, ವಾಣಿಜ್ಯ ಸಚಿವರ ಬಳಿ ಮಾತಾಡಿದ್ದೇನೆ. ಸಾಲ ವಸೂಲಾತಿಗೆ ಡಿಆರ್‌ಟಿ ಇರಲಿ ಆದರೆ ಸರ್ಫೆಸಿ ಬೇಡ. ಇದರಿಂದ ಲ್ಯಾಂಡ್ ಮಾಫಿಯಾ ಶುರುವಾಗುತ್ತದೆ ಎಂದು ಸಚಿವರಲ್ಲಿ ಮನವರಿಕೆ ಮಾಡಿದ್ದೇವೆ. ಕಾಡಾನೆ ಹಾವಳಿ ಸಮಸ್ಯೆಗೆ ವೈಜ್ಞಾನಿಕವಾದ ಸಂಶೋಧನೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.

    ಜಿಲ್ಲಾ ನಾಗರೀಕ ರೈತ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಎಸ್.ವಿಜಯ್‌ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿನಮೂನೆ ೫೭ ರಲ್ಲಿ ಅರ್ಜಿ ಸಲ್ಲಿಸಿ ಹಕ್ಕುಪತ್ರಕ್ಕಾಗಿ ನೂರಾರು ಮಂದಿ ರೈತರು ಕಾಯುತ್ತಿದ್ದಾರೆ. ಆದರೆ, ನಮೂನೆ ೫೭ ಪ್ಲಾಂಟೇಶನ್ ಭೂಮಿಗೆ ಅನ್ವಯವಾಗುವುದಿಲ್ಲ ಎಂದು ಸರಕಾರ ಹೇಳಿದೆ. ಇದರಿಂದ ನೂರಾರು ಅರ್ಜಿಗಳು ಈಗಾಗಲೇ ವಜಾಗೊಂಡಿವೆ.

    ಈ ಸಮಸ್ಯೆಯ ಬಗ್ಗೆ ಸದನದಲ್ಲಿ ದನಿ ಎತ್ತಿ ಸಮಸ್ಯೆಗೆ ಪರಿಹಾರ ಹುಡುಕಬೇಕು ಎಂದು ಮನವಿ ಮಾಡಿದರು. ಆವತಿ ಹೋಬಳಿ ಒಂದರಲ್ಲೇ ಮೂರುವರೆ ಸಾವಿರ ಹೆಕ್ಟೇರ್ ಡೀಮ್ಡ್ ಭೂಮಿ ಇದೆ. ಇಲ್ಲಿಂದ ಹೋದ ಪ್ರತಿ ಬೆಳೆಗಾರನೂ ಹೋರಾಟದ ಕಿಚ್ಚು ಬೆಳೆಸಿಕೊಂಡಲ್ಲಿ ಮಾತ್ರ ನಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.

    ಬೈಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಸಂಘದ ಅಧ್ಯಕ್ಷ ಅರುಣ್‌ಕುಮಾರ್, ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ರತೀಶ್‌ಕುಮಾರ್, ದಯಾಕರ, ಶ್ರೀಧರ್, ಮಹೇಂದ್ರ, ದೀಪಕ್ ದೊಡ್ಡಯ್ಯ, ಕೆರಮಕ್ಕಿ ಮಹೇಶ್, ತುಳಸೇಗೌಡ, ರಾಜು, ದಿಲೀಪ್, ಮೈಲಿಮನೆ ಪೂರ್ಣೇಶ್‌ಮತ್ತಿತರರಿದ್ದರು.

    Non-partisan meeting for permanent solution to the problems of the weak

  • ಇಂದಿನಿಂದ ಭಾರತದಿಂದ ಆಮದಾಗುವ ಉತ್ಪನ್ನಗಳ ಮೇಲೆ ಶೇ 50 ಹೆಚ್ಚುವರಿ ತೆರಿಗೆ

    ಇಂದಿನಿಂದ ಭಾರತದಿಂದ ಆಮದಾಗುವ ಉತ್ಪನ್ನಗಳ ಮೇಲೆ ಶೇ 50 ಹೆಚ್ಚುವರಿ ತೆರಿಗೆ

    ವಾಷಿಂಗ್ಟನ್‌: ಇಡೀ ದೇಶ ಗೌರಿ-ಗಣೇಶ ಹಬ್ಬದ ಸಂಭ್ರಮದಲ್ಲಿ ಮುಳುಗಿರುವಾಗಲೇ ಭಾರತಕ್ಕೆ ಅಮೆರಿಕ ಭಾರೀ ತೆರಿಗೆ ಶಾಕ್‌ ನೀಡಿದೆ. ರಷ್ಯಾದಿಂದ ತೈಲ ಖರೀದಿಯ ನೆಪವೊಡ್ಡಿ ಈ ಹಿಂದೆ ಘೋಷಿಸಿದಂತೆ ಭಾರತದಿಂದ ಆಮದಾಗುವ ಉತ್ಪನ್ನಗಳ ಮೇಲೆ ಶೇ.25ರಷ್ಟು ಹೆಚ್ಚುವರಿ ತೆರಿಗೆ ವಿಧಿಸುವ ಸಂಬಂಧ ಮಂಗಳವಾರ ಕರಡು ಅಧಿಸೂಚನೆ ಹೊರಡಿಸಿದೆ. ಆ.26ರ ಮಧ್ಯರಾತ್ರಿ 12.01 ಗಂಟೆಯಿಂದಲೇ ಈ ಹೆಚ್ಚುವರಿ ತೆರಿಗೆ ಅನುಷ್ಠಾನಕ್ಕೆ ಬರಲಿದೆ.

    ಈಗಾಗಲೇ ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಅಮೆರಿಕ ಶೇ.25ರಷ್ಟು ತೆರಿಗೆ ಹೇರಿದೆ. ಇದೀಗ ಹೆಚ್ಚುವರಿ ಶೇ.25ರಷ್ಟು ತೆರಿಗೆಯಿಂದಾಗಿ ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ವಸ್ತುಗಳ ಮೇಲೆ ಒಟ್ಟಾರೆ ಶೇ.50ರಷ್ಟು ತೆರಿಗೆ ಹೊರೆ ಬಿದ್ದಂತಾಗಲಿದೆ. ಭಾರತದಿಂದ ರಫ್ತಾಗುವ ಶೇ.66ರಷ್ಟು ಉತ್ಪನ್ನಗಳ ಮೇಲೆ ತೆರಿಗೆಯ ಕಾರ್ಮೋಡ ಬೀಳಲಿದೆ. ಅಂದರೆ ಸುಮಾರು 4 ಲಕ್ಷ ಕೋಟಿ ರು. ಮೌಲ್ಯದ ರಫ್ತಿನ ಮೇಲೆ ಹೊಡೆತ ಬೀಳುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.

    ಉಕ್ರೇನ್ ಜತೆ ಸಂಘರ್ಷ ನಿರತ ರಷ್ಯಾದಿಂದ ಭಾರತ ತೈಲ ಖರೀದಿ ಮುಂದುವರಿಸಿದೆ. ಈ ಮೂಲಕ ರಷ್ಯಾದ ಯುದ್ಧೋನ್ಮಾದಕ್ಕೆ ಭಾರತ ನೆರವು ನೀಡುತ್ತಿದೆ ಎಂದು ಆರೋಪಿಸಿ ಆ.7ರಂದೇ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಶೇ.50ರಷ್ಟು ತೆರಿಗೆ ವಿಧಿಸುವ ಬೆದರಿಕೆವೊಡ್ಡಿದ್ದರು. ಈ ಕುರಿತ ಮಾತುಕತೆಗಾಗಿ 21 ದಿನಗಳ ಕಾಲಾವಕಾಶವನ್ನೂ ನೀಡಿದ್ದರು. ಮಾತುಕತೆ ಅವಧಿ ಮುಗಿಯುತ್ತಿದ್ದಂತೆ ಇದೀಗ ಶೇ.25ರಷ್ಟು ಹೆಚ್ಚುವರಿ ತೆರಿಗೆ ವಿಧಿಸುವ ಅಧಿಸೂಚನೆ ಹೊರಡಿಸಿದ್ದಾರೆ.

    ಜವುಳಿ, ಹರಳುಗಳು ಮತ್ತು ಆಭರಣಗಳು, ಫರ್ನಿಚರ್‌ಗಳು, ಕಾರ್ಪೆಟ್‌ಗಳು, ಯಂತ್ರೋಪಕರಣಗಳು, ಸಿಗಡಿ, ಇತರ ಸಮುದ್ರ ಉತ್ಪನ್ನಗಳು, ಚರ್ಮದ ಉದ್ಯಮದ ಮೇಲೆ ತೆರಿಗೆ ಹೊರೆ ಬೀಳಲಿದೆ.

    ಸುಮಾರು 17 ಸಾವಿರ ಕೋಟಿ ರು. ಮೌಲ್ಯದ ಸಿಗಡಿ, 94 ಸಾವಿರ ಕೋಟಿ ರು.ನಷ್ಟು ಜವಳಿ ಉತ್ಪನ್ನಗಳ ಮೇಲೆ ಇದರಿಂದ ಗಂಭೀರ ಪರಿಣಾಮ ಬೀರಲಿದೆ. ಬೆಂಗಳೂರು, ಎನ್‌ಸಿಆರ್‌, ತಿರುಪೂರು, ಗುಜರಾತ್‌ನ ಜವಳಿ ಉದ್ಯಮಕ್ಕೆ ಇದರಿಂದ ಭಾರೀ ಹೊಡೆತ ಬೀಳಲಿದೆ. ಇಷ್ಟೇ ಅಲ್ಲದೆ, ಕಾರ್ಮಿಕ ಕೇಂದ್ರಿತ ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಂಎಸ್‌ಎಂಇ)ಗಳ ಮೇಲೆ ಇದು ತೀವ್ರ ನೇರ ಹೊರೆ ಬೀಳಲಿದೆ. ಬೇಡಿಕೆ ಕುಸಿತದಿಂದ ಹಲವು ಕಂಪನಿಗಳಲ್ಲಿ ಉದ್ಯೋಗ ಕಡಿತದ ಆತಂಕ ಹೆಚ್ಚಾಗಲಿದೆ. ಆರ್ಥಿಕ ತಜ್ಞರ ಪ್ರಕಾರ ಅಮೆರಿಕದ ಶೇ.50ರಷ್ಟು ತೆರಿಗೆಯಿಂದ ಈ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿಗೆ ಶೇ.0.2ರಿಂದ 1ರಷ್ಟು ಹೊಡೆತ ಬೀಳುವ ನಿರೀಕ್ಷೆ ಇದೆ.

    ಶೇ.50ರಷ್ಟು ತೆರಿಗೆಯಿಂದಾಗಿ ಉತ್ಪಾದನಾ ಕ್ಷೇತ್ರದಲ್ಲಿ ಭಾರತದ ಪ್ರತಿಸ್ಪರ್ಧಿ ದೇಶಗಳಿಗೆ ಹೆಚ್ಚಿನ ಅನುಕೂಲ ಆಗಲಿದೆ. ಮ್ಯಾನ್ಮಾರ್‌(ಶೇ.40), ಥಾಯ್ಲೆಂಡ್‌ ಮತ್ತು ಕಾಂಬೋಡಿಯಾ (ಶೇ.36), ಬಾಂಗ್ಲಾದೇಶ (ಶೇ.35), ಇಂಡೋನೇಷ್ಯಾ(ಶೇ.32), ಚೀನಾ ಮತ್ತು ಶ್ರೀಲಂಕಾ(ಶೇ.30), ಮಲೇಷ್ಯಾ(ಶೇ.25) ಮತ್ತು ಫಿಲಿಪ್ಪೀನ್ಸ್‌ ಮತ್ತು ವಿಯೆಟ್ನಾಂ(ಶೇ.20)ಗಳ ಮೇಲೆ ಭಾರತಕ್ಕಿಂತ ಕಡಿಮೆ ತೆರಿಗೆ ವಿಧಿಸಲಾಗಿದೆ. ಇದರಿಂದ ಅಮೆರಿಕದ ಕಂಪನಿಗಳು ತಮ್ಮ ಬೇಡಿಕೆ ಪೂರೈಕೆಗೆ ಈದೇಶಗಳತ್ತ ಮುಖಮಾಡುವ ಸಾಧ್ಯತೆ ಇದೆ.

    ಜವಳಿ, ಹರಳು, ಆಭರಣಗಳು, ಫರ್ನಿಚರ್‌, ಕಾರ್ಪೆಟ್‌, ಯಂತ್ರೋಪಕರಣ, ಸಿಗಡಿ, ಸಮುದ್ರ ಉತ್ಪನ್ನಗಳು, ಚರ್ಮ ಉತ್ಪನ್ನ ಔಷಧ, ಉಕ್ಕು, ಅಲ್ಯುಮಿನಿಯಂ, ತಾಮ್ರದ ವಸ್ತುಗಳು, ಪ್ಯಾಸೆಂಜರ್‌ ಕಾರು, ಕಡಿಮೆ ಸಾಮರ್ಥ್ಯದ ಟ್ರಕ್‌, ಆಟೋ ಬಿಡಿಭಾಗಗಳು, ಔಷಧ, ಎಲೆಕ್ಟ್ರಾನಿಕ್ಸ್‌ ಉಪಕರಣ.

    50% additional tax on products imported from India from today

  • ನಿಗದಿತ ಸ್ಥಳದಲ್ಲಿಯೇ ಗಣಪತಿ ಮೂರ್ತಿ ವಿಸರ್ಜಿಸಬೇಕು

    ನಿಗದಿತ ಸ್ಥಳದಲ್ಲಿಯೇ ಗಣಪತಿ ಮೂರ್ತಿ ವಿಸರ್ಜಿಸಬೇಕು

    ಚಿಕ್ಕಮಗಳೂರು: ಜಿಲ್ಲಾಡಳಿತದ ಆದೇಶದಂತೆ ಪರಿಸರಕ್ಕೆ ಪೂರಕವಾಗಿ ತಯಾರಾಗಿರುವ ಮಣ್ಣಿನ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ವಿಸರ್ಜಿಸಬೇಕೆಂದು ಸಾರ್ವಜನಿಕರಲ್ಲಿ ಶಾಸಕ ಹೆಚ್.ಡಿ. ತಮ್ಮಯ್ಯ ಮನವಿ ಮಾಡಿದರು.

    ಅವರು ನಗರಸಭೆ ವತಿಯಿಂದ ಕೋಟೆಕೆರೆ ಸೇರಿದಂತೆ ನಗರದ ಮತ್ತಿತರೆಡೆ ಗಣಪತಿ ವಿಸರ್ಜಿಸಲು ಸಿದ್ಧತೆ ನಡೆಸಿರುವ ಬಗ್ಗೆ ಪರಿಶೀಲಿಸಿ ಮಾತನಾಡಿ
    ನಗರದ ಜನತೆ ಗೌರಿ ಗಣೇಶ ಹಬ್ಬಗಳ ಸಂದರ್ಭದಲ್ಲಿ ಶಾಂತಿ ಸೌಹಾರ್ದತೆ ಕಾಪಾಡಬೇಕು ಜೊತೆಗೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮೆರವಣಿಗೆ ನಡೆಸಬೇಕೆಂದು ವಿನಂತಿಸಿದರು.

    ಇದೊಂದು ಧಾರ್ಮಿಕ ಕಾರ್ಯಕ್ರಮವಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸರ್ವರಲ್ಲಿ ಭಕ್ತಿಭಾವ ತುಂಬಿ ಬರಲಿ, ಇದಕ್ಕೆ ಜಿಲ್ಲಾಡಳಿತ ಮತ್ತು ತಾವು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಕೆರೆಗಳು ದೂರ ಇರುವುದರಿಂದ ನಗರಸಭೆಯಿಂದ ಆಜಾದ್ ವೃತ್ತ, ಹನುಮಂತಪ್ಪ ವೃತ್ತ, ದಂಟರಮಕ್ಕಿ ಕೆರೆ ಬದಿ, ಟೌನ್ ಕ್ಯಾಂಟಿನ್ ವೃತ್ತ, ಎಐಟಿ ವೃತ್ತ ಸೇರಿದಂತೆ ೫ ಭಾಗಗಳಲ್ಲಿ ಟ್ರಾಕ್ಟರ್‌ನಲ್ಲಿಯೆ ಗಣಪತಿಯನ್ನು ವಿಸರ್ಜಿಸಲು ಅನುಕೂಲ ಕಲ್ಪಿಸಲಾಗಿದೆ ಎಂದರು.

    ಸ್ವತಂತ್ರ ಪೂರ್ವದಲ್ಲಿ ಬಾಲಗಂಗಾಧರ ತಿಲಕರು ಗಣಪತಿ ಪ್ರತಿಷ್ಠಾಪಿಸಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋರಾಟ ನಡೆಸಿದ ಪರಿಣಾಮ ಸ್ವತಂತ್ರ ಸಂಗ್ರಾಮದಲ್ಲಿ ಯಶಸ್ವಿಯಾಗಿದ್ದರು ಎಂದ ಅವರು, ಹಬ್ಬದ ಅಂಗವಾಗಿ ಬೀದಿಬದಿ ಲೈಟ್ ಅಳವಡಿಸಿ ಕಲ್ಯಾಣಿ ಸುತ್ತ ಮುಂಜಾಗ್ರತಾ ಕ್ರಮವಾಗಿ ಭದ್ರತೆಯನ್ನು ಏರ್ಪಡಿಸುವಂತೆ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್‌ಗಳನ್ನು ಆಹ್ವಾನಿಸಿ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

    ಕೋಟೆಕೆರೆ ವೀಕ್ಷಣೆ ಮಾಡಿ ಗೌರಿ ಗಣೇಶ ಹಬ್ಬದ ಅಂಗವಾಗಿ ಗಣೇಶ ಮೂರ್ತಿಗಳನ್ನು ಪೂಜಿಸಿ ೧-೫ ದಿನಗಳವರೆಗೆ ಸಾರ್ವಜನಿಕರು, ಭಕ್ತಾಧಿಗಳು ವಿಸರ್ಜಿಸುವ ಸಂಪ್ರದಾಯ ಇದ್ದು, ಈ ಹಿಂದೆ ಬಸವನಹಳ್ಳಿ ಕೆರೆಯಲ್ಲಿ ವಿಸರ್ಜಿಸಲಾಗುತ್ತಿತ್ತು ಎಂದರು. ಈ ಕೆರೆ ಅಭಿವೃದ್ಧಿಪಡಿಸಲು ೨೦೨೨ ರ ನಂತರ ನಗರಸಭೆ ವತಿಯಿಂದ ಕೋಟೆಕೆರೆಯಲ್ಲಿ ಕಲ್ಯಾಣಿ ನಿರ್ಮಿಸಿ, ನಗರ ಸೇರಿದಂತೆ ಸುತ್ತಮುತ್ತಲ ನಾಗರಿಕರು ಗಣಪತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ವಿಸರ್ಜಿಸಲು ಅನುಕೂಲವನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.

    ಕೋಟೆಕೆರೆಯನ್ನು ಡಿಪಿಆರ್ ಮುಗಿಸಿ ಬೇಸಿಗೆಯಲ್ಲಿ ಸಂಪೂರ್ಣ ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡಿದ ಅವರು, ಬಸವನಹಳ್ಳಿ ಕೆರೆ ಅಭಿವೃದ್ಧಿಗೆ ಕೆಲವು ತಾಂತ್ರಿಕ ತೊಂದರೆಗಳಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ನಡೆಸಿ ಅಭಿವೃದ್ಧಿಪಡಿಸಲು ಗುರಿ ಹೊಂದಲಾಗಿದೆ ಎಂದರು. ಪೌರಾಯುಕ್ತ ಬಿ.ಸಿ. ಬಸವರಾಜ್ ಮಾತನಾಡಿ, ಗಣೇಶ ವಿಸರ್ಜನೆ ಸಂಬಂಧ ಕೋಟೆಕೆರೆಯನ್ನು ಕಳೆದ ಒಂದು ವಾರದಿಂದ ನಗರಸಭೆ ಸಿಬ್ಬಂದಿ ಸ್ವಚ್ಚತೆ ಕಾರ್ಯ ನಡೆಸಿ ಕ್ರಮ ವಹಿಸುತ್ತಿದ್ದಾರೆಂದು ಹೇಳಿದರು.

    ಗಣಪತಿ ವಿಸರ್ಜಿಸಲು ನಗರದ ನಾಗರಿಕರಿಗೆ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ. ನಗರದ ವಿವಿಧೆಡೆ ಆರು ಸ್ಥಳಗಳಲ್ಲಿ ಗಣಪತಿ ವಿಸರ್ಜಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ ಅವರು, ಇದರ ಸದುಪಯೋಗವನ್ನು ನಾಗರಿಕರು ಪಡೆದುಕೊಳ್ಳುವಂತೆ ಮನವಿ ಮಾಡಿದರು.

    ಈ ಸಂದರ್ಭದಲ್ಲಿ ನಗರಸಭಾಧ್ಯಕ್ಷೆ ಶೀಲಾದಿನೇಶ್, ಇಂಜಿನಿಯರ್ ಲೋಕೇಶ್, ಆರೋಗ್ಯ ನಿರೀಕ್ಷಕರಾದ ಈಶ್ವರ, ರಂಗಪ್ಪ, ವಿವೇಕ್, ಶ್ರೀನಿವಾಸ್, ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ವಿಕಾಸ್ ಹಾಗೂ ನಗರಸಭೆ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.

    The Ganpati idol should be immersed at the designated place.