Category: ಚಿಕ್ಕಮಗಳೂರು ನಗರ

  • ಇಂದಾವರ ಗ್ರಾ.ಪಂ. ಅಧ್ಯಕ್ಷರಾಗಿ ಸುಭಾಶ್ ಅವಿರೋಧ ಆಯ್ಕೆ

    ಇಂದಾವರ ಗ್ರಾ.ಪಂ. ಅಧ್ಯಕ್ಷರಾಗಿ ಸುಭಾಶ್ ಅವಿರೋಧ ಆಯ್ಕೆ

    ಚಿಕ್ಕಮಗಳೂರು: ತಾಲ್ಲೂಕಿನ ಇಂದಾವರ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಐ.ಬಿ.ಸುಭಾಶ್ ಅವರು ಇಂದು ಅವಿರೋಧವಾಗಿ ಆಯ್ಕೆಯಾದರು.

    ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಖರ್ ಮಾತನಾಡಿ, ಮಾಜಿ ಶಾಸಕ ಸಿ.ಟಿ. ರವಿ ಅವರು ಈ ಗ್ರಾಮ ಪಂಚಾಯಿತಿಗೆ ಅತಿ ಹೆಚ್ಚು ಅನುದಾನ ನೀಡಿ ಅಭಿವೃದ್ಧಿಗೆ ಸಹಕರಿಸಿದ್ದಾರೆ. ಈ ನಿಟ್ಟಿನಲ್ಲಿ ಸಿ.ಟಿ. ರವಿ ಶಿಷ್ಯರಾದ ಸುಭಾಶ್ ರವರು ಆಯ್ಕೆಯಾಗಿರುವುದು ಅಭಿನಂದನೀಯ ಎಂದರು.

    ತಮ್ಮ ಅಧಿಕಾರವಧಿಯಲ್ಲಿ ಅಧ್ಯಕ್ಷರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾ.ಪಂ. ಆಡಳಿತದಲ್ಲಿ ಹೊಸ ಬದಲಾವಣೆ ತಂದು ಮಾದರಿ ಪಂಚಾಯಿತಿಯನ್ನಾಗಿ ರೂಪಿಸಬೇಕು ಎಂದು ತಿಳಿಸಿದರು.

    ಇಂದಾವರ ಗ್ರಾಮದ ಸೊಸೈಟಿ ಸೇರಿ ದಂತೆ ಗ್ರಾ.ಪಂ. ಆಡಳಿತಕ್ಕೆ ಉತ್ಸಾಹಿ ಯುವಕರು ಅಧ್ಯಕ್ಷರಾಗಿರುವುದು ಹೆಮ್ಮೆಯ ಸಂಗತಿ. ಆ ಹಿನ್ನೆಲೆಯಲ್ಲಿ ಕಸದ ಡಂಪಿಂಗ್ ಸಮಸ್ಯೆಯಿಂದಾಗಿ ತೊಂದರೆಯಿಂದ ಬಳಲುತ್ತಿರುವ ಗ್ರಾಮದ ನಿವಾಸಿಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ನಗರಸಭೆಯೊಂದಿಗೆ ಚರ್ಚಿಸಿ ಬಗೆಹರಿಸಬೇಕು ಕಿವಿಮಾತು ಹೇಳಿದರು.

    ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸೋಮಶೇಖರ್ ಮಾತನಾಡಿ, ಎಲ್ಲಾ ಸದಸ್ಯರ ಸಹಕಾರ ಮತ್ತು ವಿಶ್ವಾಸವನ್ನು ಪಡೆದು ಅವಿರೋಧ ಆಯ್ಕೆಯಾಗಿರುವ ಸುಭಾಶ್‌ರವರು ಪಂಚಾಯಿತಿ ವ್ಯಾಪ್ತಿಯಲ್ಲಿ ಜನಸಾಮಾನ್ಯರ ಮೂಲಭೂತ ಸೌಲಭ್ಯಗಳಾದ ಕುಡಿಯವ ನೀರು, ಚರಂಡಿ, ರಸ್ತೆ ಹಾಗೂ ಜಾನುವಾರುಗಳಿಗೆ ಅನುಕೂಲವಾಗುವ ಸುಸಜ್ಜಿತ ವ್ಯವಸ್ಥೆ ಕಲ್ಪಿಸಿಕೊಡುವ ಮೂಲಕ ಗ್ರಾಮಸ್ಥರ ವಿಶ್ವಾಸಾರ್ಹತೆಗೆ ಪಾತ್ರವಾಗಿ ಮುಂದಿನ ಚುನಾವಣೆಯನ್ನು ಆತ್ಮವಿಶ್ವಾಸದಿಂದ ಎದುರಿಸುವ ವಾತಾವರಣ ನಿರ್ಮಿಸಬೇಕು ಎಂದರು.

    ಇಂದಾವರ ನಗರಕ್ಕೆ ಸಮೀಪವಾಗಿರುವ ಗ್ರಾಮ ಪಂಚಾಯಿತಿ ಆಗಿದೆ. ಹಿಂದಿನ ಶಾಸಕರ ಅಭಿವೃದ್ಧಿ ಕಾರ್ಯಗಳಿಂದ ಗ್ರಾಮವು ಆರ್ಥಿಕವಾಗಿ ಬಲಿಷ್ಟವಾಗಿದೆ. ಹೀಗಾಗಿ ಮತಕೊಟ್ಟ ಮತದಾರರಿಗೆ ಯಾವುದೇ ತೊಂದರೆಗಳಾಗದಂತೆ ನಿಷ್ಟೆಯಿಂದ ಕಾರ್ಯನಿರ್ವಹಿಸುವ ಜವಾಬ್ದಾರಿ ನೂತನ ಅಧ್ಯಕ್ಷರದ್ದು ಎಂದು ಹೇಳಿದರು.

    ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಐ.ಬಿ. ಸುಭಾಶ್, ಗ್ರಾಮಸ್ಥರು, ಸದಸ್ಯರುಗಳ ಸಹಕಾರಿಂದ ಸಿಕ್ಕಿರುವ ಅವಧಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದ ಅವರು, ಜನರ ಕುಂದುಕೊರತೆಗಳನ್ನು ಆಲಿಸಿ ಸರ್ಕಾರದ ಸವಲತ್ತುಗಳನ್ನು ತಾರತಮ್ಯವಿಲ್ಲದೆ ನಿಷ್ಟೆಯಿಂದ ತಲುಪಿಸುವ ಕಾರ್ಯಮಾಡಲಾಗುವುದು ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್‌ ಶೆಟ್ಟಿ ಗ್ರಾ.ಪಂ. ಉಪಾಧ್ಯಕ್ಷೆ ದ್ರಾಕ್ಷಯಣಿ, ಸದಸ್ಯರಾದ ಜ್ಯೋತಿ ಯೋಗಿಶ್, ನೇತ್ರಾವತಿ, ಕೆಂಚಯ್ಯ, ಬಿಜೆಪಿ ನಗರಾಧ್ಯಕ್ಷ ಪುಷ್ಪರಾಜ್, ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹೆಚ್.ಸಿ. ಕಲ್ಮರುಡಪ್ಪ, ಮುಖಂಡರುಗಳಾದ ಕೋಟೆ ರಂಗನಾಥ್, ನಿರಂಜನ್, ಕುರುವಂಗಿ ವೆಂಕಟೇಶ್, ರಾಜೀವ್, ಮಧುಕುಮಾರ್ ಅರಸ್, ಹಂಪಯ್ಯ, ಸಂತೋಷ್ ಕೋಟ್ಯಾನ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

    Subhash elected unopposed as Indavar Gram Panchayat President

  • ಭಾರತದ ಎರಡನೇ ಅತಿ ಉದ್ದದ ಕೇಬಲ್-ಸ್ಟೇಡ್ ಸೇತುವೆ ಉದ್ಘಾಟನೆ

    ಭಾರತದ ಎರಡನೇ ಅತಿ ಉದ್ದದ ಕೇಬಲ್-ಸ್ಟೇಡ್ ಸೇತುವೆ ಉದ್ಘಾಟನೆ

    ಶಿವಮೊಗ್ಗ: ಎಡಬಿಡದೆ ಸುರಿಯುತ್ತಿರುವ ಮಳೆಯ ನಡುವೆಯೂ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸೋಮವಾರ ಮಧ್ಯಾಹ್ನ ಸಾಗರ ತಾಲ್ಲೂಕಿನ ಅಂಬಾರಗೋಡ್ಲು-ಕಳಸವಳ್ಳಿ ನಡುವಿನ ಶರಾವತಿ ಹಿನ್ನೀರಿನಲ್ಲಿ ನಿರ್ಮಿಸಿರುವ ಸಿಗಂದೂರು ಸೇತುವೆ ಭಾರತದ ಎರಡನೇ ಅತಿ ಉದ್ದದ ಕೇಬಲ್-ಸ್ಟೇಡ್ ಸೇತುವೆಯನ್ನು ಉದ್ಘಾಟಿಸಿದರು.

    ಬಿಜೆಪಿಯ ಹಿರಿಯ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಅವರ ಯಾವುದೇ ಸಚಿವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ.

    ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಸಂಸದ ಬಿವೈ ರಾಘವೇಂದ್ರ, ಶಾಸಕರಾದ ಆರಗ ಜ್ಞಾನೇಂದ್ರ, ಎಸ್ಎನ್ ಚನ್ನಬಸಪ್ಪ, ಡಿಎಸ್ ಅರುಣ್, ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಹರತಾಳು ಹಾಲಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

    ಅಧಿಕಾರಿಗಳ ಪ್ರಕಾರ, ಸಾಗರ ತಾಲ್ಲೂಕಿನ ಅಂಬರಗೋಡ್ಲು-ಕಳಸವಳ್ಳಿ ನಡುವೆ ಶರಾವತಿ ಹಿನ್ನೀರಿನಲ್ಲಿ ಈ ಸೇತುವೆಯನ್ನು 472 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಸೇತುವೆಯು 2.44 ಕಿಮೀ ಉದ್ದವಿದ್ದು, 16 ಮೀಟರ್ ಅಗಲವಿದೆ. ಈ ಸೇತುವೆಯು ಸಾಗರದಿಂದ ಸಿಗಂದೂರಿನ ಸುತ್ತಮುತ್ತಲಿನ ಹಳ್ಳಿಗಳಿಗೆ ದೂರವನ್ನು ಕಡಿಮೆ ಮಾಡುತ್ತದೆ.

    ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರಿಗೆ ಪತ್ರ ಬರೆದಿರುವ ಅವರು, ಸಾಗರ – ಸಿಗಂದೂರು ನಡುವಿನ ಸೇತುವೆ ಉದ್ಘಾಟನಾ ಸಮಾರಂಭಕ್ಕೆ ನನ್ನನ್ನು ತಡವಾಗಿ ಆಮಂತ್ರಿಸಿದ್ದು, ಬೇರೆಡೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದರಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

    ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಇಲಾಖೆಯು ಇಂತಹ ರಾಜ್ಯಮಟ್ಟದ ಕಾರ್ಯಕ್ರಮ ಆಯೋಜನೆಗೆ ಮುನ್ನ ರಾಜ್ಯ ಸರ್ಕಾರವನ್ನು ಮುಂಚಿತವಾಗಿಯೇ ಸಂಪರ್ಕಿಸಿದ್ದರೆ ಮತ್ತಷ್ಟು ಸಮರ್ಪಕವಾಗಿರುತ್ತಿತ್ತು. ಮುಂದೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಸಂದರ್ಭದಲ್ಲಿ ರಾಜ್ಯ ಸರ್ಕಾರವನ್ನು ಸಕಾಲದಲ್ಲಿ ಸಂಪರ್ಕಿಸುವಂತೆ ಹೆದ್ದಾರಿ ಮತ್ತು ಭೂಸಾರಿಗೆ ಇಲಾಖೆಗೆ ಸೂಚನೆ ನೀಡಬೇಕು ಎಂದು ತಮ್ಮಲ್ಲಿ ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.

    India’s second longest cable-stayed bridge inaugurated

  • ಜೆಡಿಎಸ್‌ ಮುಖಂಡ  ಹೆಚ್.ಟಿ.ರಾಜೇಂದ್ರ ನಿಧನ

    ಜೆಡಿಎಸ್‌ ಮುಖಂಡ ಹೆಚ್.ಟಿ.ರಾಜೇಂದ್ರ ನಿಧನ

    ಚಿಕ್ಕಮಗಳೂರು: ಜೆಡಿಎಸ್ ನ ರಾಜ್ಯ ಉಪಾಧ್ಯಕ್ಷರೂ ಅದ ಮಲೆನಾಡಿನ ಅಪರೂಪದ ರಾಜಕಾರಣಿ, ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹೆಚ್.ಟಿ.ರಾಜೇಂದ್ರ(72 ವರ್ಷ) ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

    ಜಿಲ್ಲಾ ಪಂಚಾಯತ್ ಸದಸ್ಯ ಸೇರಿದಂತೆ ರಾಜಕೀಯದಲ್ಲಿ ಅನೇಕ ಹುದ್ದೆಗಳನ್ನು ಅಲಂಕರಿಸಿದ್ದ ಹೆಚ್.ಟಿ. ರಾಜೇಂದ್ರ ಅವರು ಪ್ರಾಮಾಣಿಕ ಮತ್ತು ಪಕ್ಷನಿಷ್ಠೆ ಹೊಂದಿದ ರಾಜಕಾರಣಿಯಾಗಿ ಮಲೆನಾಡಿನಲ್ಲಿ ಪಕ್ಷಾತೀತವಾಗಿ ಪ್ರೀತಿ ಗೌರವಕ್ಕೆ ಅವರು ಪಾತ್ರರಾಗಿದ್ದರು.

    ಜಾತ್ಯಾತೀತ ಜನತಾ ದಳದ ಅಭ್ಯರ್ಥಿಯಾಗಿ ಶೃಂಗೇರಿ ವಿಧಾನಸಭಾ ಕ್ಷೇತ್ರದಿಂದ ಹಲವು ಬಾರಿ ಸ್ಪರ್ಧಿಸಿದ್ದರು. ಆದರೆ ಉತ್ತಮ ಪೈಪೋಟಿ ನೀಡಿ ಸೋಲನುಭವಿಸಿದ್ದರು. ಮಾಜಿ ಪ್ರಧಾನಿ ಹೆಚ್.ಡಿ. ದೇವೆಗೌಡರ ಕಟ್ಟಾ ಅನುಯಾಯಿಯಾಗಿದ್ದರು.

    ಹೆಚ್.ಟಿ. ರಾಜೇಂದ್ರ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಅವರು ತಮ್ಮ ಎಕ್ಸ್ ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ. ಅವರ ತಮ್ಮ ಸಂದೇಶದಲ್ಲಿ ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೇಗೌಡರ ಆಪ್ತರು, ಪಕ್ಷದ ರಾಜ್ಯ ಉಪಾಧ್ಯಕ್ಷರು, ಶೃಂಗೇರಿ ವಿಧಾನಸಭೆ ಕ್ಷೇತ್ರದ ಹಿರಿಯ ನೇತಾರರು ಆಗಿದ್ದ ಶ್ರೀ ಹೆಚ್.ಟಿ. ರಾಜೇಂದ್ರ ಅವರ ನಿಧನದ ವಾರ್ತೆ ಕೇಳಿ ತೀವ್ರ ಆಘಾತವಾಗಿದೆ.

    ಅತ್ಯಂತ ನಿಷ್ಠಾವಂತ ಸೇನಾನಿಯಾಗಿ, ತಳಮಟ್ಟದಿಂದ ಸಂಘಟನೆಯನ್ನು ಬಲಿಷ್ಠವಾಗಿ ಕಟ್ಟುವಲ್ಲಿ ಅವಿರತವಾಗಿ ಶ್ರಮಿಸಿದ್ದ ಅವರು, ತಮ್ಮ ಇಡೀ ಬದುಕನ್ನು ಪಕ್ಷಕ್ಕೇ ಸಮರ್ಪಿಸಿಕೊಂಡಿದ್ದರು. ಶ್ರೀಯುತರ ಅಗಲಿಕೆ ಬಹುದೊಡ್ಡ ನಷ್ಟ ಹಾಗೂ ವೈಯಕ್ತಿಕವಾಗಿ ನಾನು ಬಹಳ ದುಃಖಿತನಾಗಿದ್ದೇನೆ.ರಾಜೇಂದ್ರ ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬಕ್ಕೆ ಅಭಿಮಾನಿಗಳಿಗೆ ಭಗವಂತ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

  • ಜಿಲ್ಲೆಯಲ್ಲಿ ನೂತನ ಜಿಲ್ಲಾ ಬೆಳೆಗಾರರ ಸಂಘ ಅಸ್ತಿತ್ವಕ್ಕೆ

    ಜಿಲ್ಲೆಯಲ್ಲಿ ನೂತನ ಜಿಲ್ಲಾ ಬೆಳೆಗಾರರ ಸಂಘ ಅಸ್ತಿತ್ವಕ್ಕೆ

    ಚಿಕ್ಕಮಗಳೂರು: ಕೇಂದ್ರ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಮತ್ತು ಕರ್ನಾಟಕ ಬೆಳಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣನವರ ನೇತೃತ್ವದಲ್ಲಿ ಮೂಡಿಗೆರೆ ತಾಲ್ಲೂಕು ಬೆಳಗಾರರ ಸಂಘದ ಕಟ್ಟಡದಲ್ಲಿ ನಡೆದ ಚಿಕ್ಕಮಗಳೂರು ಜಿಲ್ಲೆಯ ೧೦ ಸಹಸಂಘಟನೆಗಳ ಪದಾಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಬೆಳೆಗಾರರ ಸಂಘದ ನೂತನ ಅಧ್ಯಕ್ಷರಾಗಿ ಕೆ.ರತೀಶ್ ಕುಮಾರ್‌ರನ್ನು ಆಯ್ಕೆ ಮಾಡಲಾಯಿತು.

    ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಕಾಫಿ ಮಂಡಳಿ ಅಧ್ಯಕ್ಷ ಎಂಜೆ ದಿನೇಶ್ ಕಾಫಿ, ಕಾಳು ಮೆಣಸು, ಅಡಿಕೆ ಬೆಳೆಗಾರರ ಹಿತ ದೃಷ್ಟಿಯಿಂದ ಚಿಕ್ಕಮಗಳೂರು ಜಿಲ್ಲೆಗೆ ನೂತನ ಸಂಘಟನೆ ಅತ್ಯವಶ್ಯಕವಾಗಿದ್ದು, ಸಮಸ್ಯೆಗೆ ಸಂಘಟನೆಯೊಂದೆ ಪರಿಹಾರವಾಗಿದ್ದು,ಎಲ್ಲ ಬೆಳೆಗಾರರ ಹಿತ ಕಾಪಡಲು ಕಟಿಬದ್ಧರಾಗಿ ಕಾರ್ಯನಿರ್ವಹಿಸುವಂತೆ ನೂತನ ಅಧ್ಯಕ್ಷರಿಗೆ ಸಲಹೆ ನೀಡಿದರು.

    ನೂತನ ಜಿಲ್ಲಾಧ್ಯಕ್ಷ ಕೆ.ಯು ರತೀಶ್ ಕುಮಾರ್ ಮಾತನಾಡಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಲು ಸಿದ್ಧನಿದ್ದು, ಸಂಘಟನೆಯ ಹಿರಿಯರು ಇಟ್ಟಿರುವ ನಂಬಿಕೆಗೆ ದ್ರೋಹವಾಗದಂತೆ ಬೆಳೆಗಾರರ ಸರ್ವತೋಮುಖ ಅಭಿವೃದ್ಧಿಗೆ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು.

    New District Growers Association to be formed in the district

  • ವೀರಶೈವ ಪೀಠಾಚಾರ್ಯರ-ಶಿವಾಚಾರ್ಯರ ಶೃಂಗ ಸಮ್ಮೇಳನ

    ವೀರಶೈವ ಪೀಠಾಚಾರ್ಯರ-ಶಿವಾಚಾರ್ಯರ ಶೃಂಗ ಸಮ್ಮೇಳನ

    ಬಾಳೆಹೊನ್ನೂರು: ಜುಲೈ ೨೧ ಹಾಗೂ ೨೨ರಂದು ದಾವಣಗೆರೆ ನಗರದ ಶ್ರೀಮದಭಿನವ ರೇಣುಕ ಮಂದಿರದಲ್ಲಿ ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನ ಜರುಗಲಿದ್ದು ಶ್ರೀ ಜಗದ್ಗುರು ಪಂಚಪೀಠಾಧೀಶ್ವರರು ಸಾನ್ನಿಧ್ಯ ವಹಿಸುವರು. ವೀರಶೈವ ಲಿಂಗಾಯತ ಸಂಸ್ಕೃತಿ ಸಂವರ್ಧನೆ ಹಾಗೂ ಜಾತಿ ಗಣತಿಯ ಸಂದರ್ಭದಲ್ಲಿ ಕೈಗೊಳ್ಳಬೇಕಾದ ನಿಲುವು ಕುರಿತಾದ ಚರ್ಚೆ ಈ ಶೃಂಗ ಸಮ್ಮೇಳನದಲ್ಲಿ ನಡೆಯಲಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಜುಲೈ ೨೧ರಂದು ಬೆಳಿಗ್ಗೆ ೧೧ ಗಂಟೆಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ರಾಷ್ಟ್ರೀಯ ಅಧ್ಯಕ್ಷರಾದ ಶಾಸಕ ಡಾ|| ಶಾಮನೂರು ಶಿವಶಂಕರಪ್ಪನವರು ಶೃಂಗ ಸಮ್ಮೇಳನವನ್ನು ಉದ್ಘಾಟಿಸಲಿದ್ದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನರವರು ಪ್ರಾಸ್ತಾವಿಕ ಮಾತನಾಡುವರು. ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿಗಳಾದ ಡಾ|| ಬಿ.ಎಸ್.ಯಡಿಯೂರಪ್ಪ, ಅರಣ್ಯ ಮತ್ತು ಪರಿಸರ ಖಾತೆ ಸಚಿವರಾದ ಈಶ್ವರ ಖಂಡ್ರೆ. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲಭೂತ ಅಭಿವೃದ್ಧಿ ಖಾತೆ ಸಚಿವರಾದ ಎಂ.ಬಿ.ಪಾಟೀಲ, ಮಾಜಿ ಮುಖ್ಯಮಂತ್ರಿ-ಸಂಸದರಾದ ಜಗದೀಶ ಶೆಟ್ಟರ್, ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಶಿವರಾಜ ಪಾಟೀಲ, ರಾಜ್ಯ ಬಿ.ಜೆ.ಪಿ.ಅಧ್ಯಕ್ಷರು-ಶಾಸಕರಾದ ಬಿ.ವೈ.ವಿಜಯೇಂದ್ರ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ವಿಜಯಾನಂದ ಕಾಶಪ್ಪನವರ ಆಗಮಿಸುವರು. ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಲಿದ್ದು ಎಮ್ಮಿಗನೂರು ಹಂಪಿಸಾವಿರದೇವರಮಠದ ವಾಮದೇವ ಮಹಂತ ಶಿವಾಚಾರ್ಯ ಸ್ವಾಮಿಗಳು ಹೃದಯ ಹಂಬಲ ನುಡಿಗಳನ್ನಾಡುವರು. ಅ.ಭಾ.ವೀ.ಮಹಾಸಭೆ ರಾಜ್ಯಾಧ್ಯಕ್ಷರಾದ ಶಂಕರ್ ಬಿದರಿ ಸದಾಶಯ ಸಂಕಲ್ಪ ನುಡಿಗಳನ್ನಾಡುವರು. ವಿಶೇಷ ಆಹ್ವಾನಿತರಾಗಿ ಅ.ಭಾ.ವೀ.ಮಹಾಸಭೆ ಉಪಾಧ್ಯಕ್ಷರಾದ ಅಥಣಿ ವೀರಣ್ಣ, ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಡಾ.ಎ.ಎಚ್. ಶಿವಯೋಗಿಸ್ವಾಮಿ, ಜಿ.ಪಂ.ಮಾಜಿ ಸದಸ್ಯರಾದ ಬಿ.ಎಂ.ವಾಗೀಶಸ್ವಾಮಿ ಭಾಗವಹಿಸುವರು.

    ಜುಲೈ ೨೨ರಂದು ಜರುಗುವ ಶೃಂಗ ಸಮ್ಮೇಳನವನ್ನು ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ಸಚಿವರಾದ ವಿ.ಸೋಮಣ್ಣ ಉದ್ಘಾಟಿಸುವರು. ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಖಾತೆ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ, ಮಾಜಿ ಮುಖ್ಯಮಂತ್ರಿ-ಸಂಸದರಾದ ಬಸವರಾಜ ಬೊಮ್ಮಾಯಿ, ಸಂಸದರಾದ ಬಿ.ವೈ.ರಾಘವೇಂದ್ರ, ವಿಆರ್‌ಎಲ್ ಸಮೂಹ ಸಂಸ್ಥೆಯ ಛೇರ್‍ಮನ್-ಮಾಜಿ ಸಂಸದರಾದ ಡಾ.ವಿಜಯ ಸಂಕೇಶ್ವರ, ಮಾಜಿ ಸಂಸದರಾದ ಜಿ.ಎಂ.ಸಿದ್ಧೇಶ್ವರ, ಮಾಜಿ ಸಚಿವರು ಮತ್ತು ನರಗುಂದ ಶಾಸಕರಾದ ಸಿ.ಸಿ.ಪಾಟೀಲ, ಶಾಸಕರಾದ ಬಿ.ಪಿ.ಹರೀಶ್, ಮಾಜಿ ಶಾಸಕರಾದ ಹೆಚ್.ಎಸ್. ಶಿವಶಂಕರ್, ಸಂಯುಕ್ತ ಜನತಾದಳದ ಅಧ್ಯಕ್ಷರು-ಮಾಜಿ ಶಾಸಕರಾದ ಮಹಿಮಾ ಪಟೇಲ್ ಪಾಲ್ಗೊಳ್ಳುವರು. ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಲಿದ್ದು ಬಸವನಬಾಗೇವಾಡಿ ಶಿವಪ್ರಕಾಶ ಶಿವಾಚಾರ್ಯ ಸ್ವಾಮಿಗಳು ಹೃದಯ ಹಂಬಲ ನುಡಿಗಳನ್ನಾಡುವರು.

    ವಿಶೇಷ ಆಹ್ವಾನಿತರಾಗಿ ಅ.ಭಾ.ವೀ.ಮಹಾಸಭೆ ಉಪಾಧ್ಯಕ್ಷರಾದ ಅಣಬೇರು ರಾಜಣ್ಣ, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಶ್ರೀಮದಭಿನವ ರೇಣುಕ ಮಂದಿರದ ಕಾರ್ಯದರ್ಶಿ ದೇವರಮನೆ ಶಿವಕುಮಾರ್, ಹಿರಿಯ ನ್ಯಾಯವಾದಿ ಗಂಗಾಧರ ಗುರುಮಠ, ಅ.ಭಾ.ವೀ.ಮಹಾಸಭೆ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಕಾಶಪ್ಪನವರ ಭಾಗವಹಿಸುವರು. ಸೋಮೇಶ್ವರ ವಿದ್ಯಾಲಯದ ಕಾರ್ಯದರ್ಶಿ ಕೆ.ಎಂ.ಸುರೇಶ್, ದಾವಣಗೆರೆ-ಹರಿಹರ ಅ.ಸ.ಬ್ಯಾಂಕ ಅಧ್ಯಕ್ಷ ಮುರಿಗೇಶ ಆರಾಧ್ಯ ಉಪಸ್ಥಿತರಿರುವರು. ಸಂಶೋಧಕ ಮತ್ತು ಆಧ್ಯಾತ್ಮ ಚಿಂತಕರಾದ ಭಂಡಿವಾಡದ ಡಾ||ಎ.ಸಿ.ವಾಲಿ ಸದಾಶಯ ಸಂಕಲ್ಪ ನುಡಿಗಳನ್ನಾಡುವರು. ಜುಲೈ ೨೨ರಂದು ಸಂಜೆ ಸಂಸ್ಕೃತಿ ಸಂವರ್ಧನೆಗಾಗಿ ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಪಾದಯಾತ್ರೆ ನಡೆಯಲಿದೆ. ಜುಲೈ ೨೧ರ ಸಂಜೆ ೭ ಗಂಟೆಗೆ ಡಾ.ರಾಜಗುರು ಗುರುಸ್ವಾಮಿ ಕಲಿಕೇರಿ ಹಾಗೂ ಶಿವಶಂಕರ ಶಾಸ್ತ್ರಿಗಳು ಬೆಂಗಳೂರು ಇವರಿಂದ ಸಂಗೀತ ಸೌರಭ ಜರುಗುವುದು. ಎರಡೂ ದಿನಗಳ ಕಾಲ ಶೃಂಗ ಸಮ್ಮೇಳನದಲ್ಲಿ ರಾಜ್ಯ ಹೊರರಾಜ್ಯಗಳ ಮಠಾಧೀಶರು, ಗಣ್ಯರು ಭಾಗವಹಿಸಲಿದ್ದು ನಾಡಿನ ಸಮಸ್ತ ಧರ್ಮಾಭಿಮಾನಿಗಳು ಪಾಲ್ಗೊಳ್ಳಬೇಕು. ಪಾಲ್ಗೊಳ್ಳುವ ಸರ್ವರಿಗೂ ಮಹಾಪ್ರಸಾದದ ವ್ಯವಸ್ಥೆ ಇದೆ ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Summit of Veerashaiva Peethacharyas-Shivacharyas

  • ಸಂಸತ್ ಅಧಿವೇಶನದಲ್ಲಿ ಸರ್ಫೇಸಿ ಕಾಯ್ದೆ ಬಗ್ಗೆ ಚರ್ಚೆ

    ಸಂಸತ್ ಅಧಿವೇಶನದಲ್ಲಿ ಸರ್ಫೇಸಿ ಕಾಯ್ದೆ ಬಗ್ಗೆ ಚರ್ಚೆ

    ಚಿಕ್ಕಮಗಳೂರು: ಈ ಬಾರಿಯ ಸಂಸತ್ ಅಧಿವೇಶನದಲ್ಲಿ ರಾಜ್ಯದ ಕಾಫಿ ಬೆಳೆಯುವ ಪ್ರದೇಶದ ಸಂಸದರು ಒಟ್ಟಿಗೆ ಸೇರಿ ದೆಹಲಿಯಲ್ಲಿ ಸರ್ಫೇಸಿ ಕಾಯ್ದೆಯನ್ನು ಕಾಫಿ ಬೆಳೆಯಿಂದ ಹೊರಗಿಡುವ ಬಗ್ಗೆ ಚರ್ಚಿಸಲು ಸಭೆ ಕರೆದು ಆರ್ಥಿಕ ಸಚಿವಾಲಯಕ್ಕೆ ವಾಣಿಜ್ಯ ಸಚಿವಾಲಯ ಬೆಂಬಲಿಸಲು ಕೋರಬೇಕಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.

    ಅವರು ಇಂದು ನಗರಕ್ಕಾಗಮಿಸಿ ಎಐಟಿ ಸಭಾಂಗಣದಲ್ಲಿ ಕೆಜಿಎಫ್ ಮತ್ತು ಕಾಫಿ ಮಂಡಳಿಯಿಂದ ಏರ್ಪಡಿಸಲಾಗಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿ
    ಕಾಫಿ ಬೆಳೆಗಾರರಿಗೆ ಕೇವಲ ಸರ್ಫೇಸಿ ಕಾಯ್ದೆ ಜೊತೆಗೆ ವಾಣಿಜ್ಯ ತೆರಿಗೆಯಿಂದಲೂ ಸಮಸ್ಯೆಯಾಗಿದೆ. ಕೃಷಿ ವ್ಯಾಪ್ತಿಗೆ ಕಾಫಿಬೆಳೆ ಬರುವುದಿಲ್ಲ, ಕಾಫಿ ಭೂ ಕೃಷಿ ಆದರೂ ಈ ಬೆಳೆಯನ್ನು ಉದ್ಯಮವಾಗಿ ಘೋಷಣೆ ಮಾಡಿಕೊಂಡಿರುವುದೇ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.

    ಕಾಫಿ, ರಬ್ಬರ್, ಮೆಣಸು ಈ ಬೆಳೆಗಳ ವ್ಯಾಪ್ತಿಗೂ ಸರ್ಫೇಸಿ ಕಾಯ್ದೆ ಅನ್ವಯವಾಗಲಿದ್ದು, ಇದಕ್ಕೆ ಪರಿಹಾರ ಸಿಗಬೇಕಾದರೆ ಸಮಗ್ರ ಕಾನೂನು ತಿದ್ದುಪಡಿ ಮಾಡುವುದೊಂದೇ ಮಾರ್ಗ ಎಂದು ಸ್ಪಷ್ಟಪಡಿಸಿದರು. ಈ ಎರಡೂ ಸಚಿವಾಲಯಗಳ ಗಮನ ಸೆಳೆದು ಪ್ರಸ್ತುತ ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆ ಪರಿಹಾರಕ್ಕೆ ಸರ್ಫೇಸಿ ಕಾಯ್ದೆಗೆ ತಿದ್ದುಪಡಿ ತಂದು ಕಾಫಿ, ರಬ್ಬರ್ ಸೇರಿದಂತೆ ಎಲ್ಲಾ ವಾಣಿಜ್ಯ ಬೆಳೆಗಳನ್ನು ಇದರಿಂದ ಹೊರತರಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

    ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ಕಾಫಿ ಬೆಳೆಗಾರರ ಸಮಸ್ಯೆ ಬಗ್ಗೆ ವಾಣಿಜ್ಯ ಸಚಿವರನ್ನು ಭೇಟಿಯಾಗಿ ಚರ್ಚಿಸಿದ ಬಳಿಕ ಸರ್ಫೇಸಿ ಕಾಯ್ದೆ ದೇಶದ ಕೆಲವು ಭಾಗದಲ್ಲಿ ಮಾತ್ರ ಜಾರಿಯಲ್ಲಿದ್ದು, ಉಳಿದಂತೆ ಎಲ್ಲೂ ಇಲ್ಲ. ಈ ಬಗ್ಗೆ ಚರ್ಚಿಸಲು ಕಾಫಿ ಮಂಡಳಿಯಲ್ಲಿ ಸಭೆ ಕರೆದರೆ ಸಂಬಂಧಪಟ್ಟ ಸಚಿವರು ಸಿಗುವುದಿಲ್ಲ ಎಂದು ಹೇಳಿದರು.

    ಸರ್ಫೇಸಿ ಕಾಯ್ದೆ ಕಾಫಿ, ರಬ್ಬರ್, ಮೆಣಸು ಬೆಳೆಗಳ ವ್ಯಾಪ್ತಿಗೆ ಅನ್ವಯವಾಗುವುದಿಲ್ಲ ಎಂದು ಆದೇಶಿಸಿ ಸುತ್ತೋಲೆ ಹೊರಡಿಸಬೇಕೆಂದು ವಾಣಿಜ್ಯ ಸಚಿವರನ್ನು ಒತ್ತಾಯಿಸಲು ಸಂಸದರು ಒಗ್ಗಟ್ಟಿನಿಂದ ನಿರ್ಧರಿಸುವ ಅಗತ್ಯ ಇದೆ ಎಂದರು. ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ಅವರೊಂದಿಗೆ ಬ್ಯಾಂಕರ್‍ಸ್‌ಗಳನ್ನು ಸೇರಿಸಿಕೊಂಡು ಸಭೆ ನಡೆಸಿ ಒನ್ ಟೈಮ್ ಸೆಟ್ಲ್‌ಮೆಂಟ್‌ನ್ನು ಮುಂದುವರೆಸಲು ಸಾಧ್ಯವಾಗುತ್ತಾ ಎಂಬ ಬಗ್ಗೆ ಹಾಗೂ ಸರ್ಫೇಸಿ ಕಾಯ್ದೆಯಿಂದ ಕಾಫಿ ಬೆಳೆಯನ್ನು ಹೊರಗಿಡಬೇಕು ಮತ್ತು ಈಗಾಗಲೇ ಆನ್‌ಲೈನ್ ಮೂಲಕ ಹರಾಜು ಆಗಿರುವ ತೋಟಗಳನ್ನು ಬೆಳೆಗಾರರಿಗೆ ವಾಪಾಸ್ ಮಾಡಲು ಈ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳೋಣ ಎಂದು ಸಲಹೆ ನೀಡಿದರು.

    ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಕಳೆದ ಮೂರು ತಿಂಗಳಲ್ಲಿ ಹರಾಜು ಮಾಡಿರುವ ತೋಟಗಳ ಬಗ್ಗೆ ಮರು ಪರಿಶೀಲಿಸಿ ಮುಂದೆ ಈ ರೀತಿ ಹರಾಜು ಆಗದಂತೆ ತಡೆಯುವ ಮಾನದಂಡಗಳ ಬಗ್ಗೆ ಸಂಸತ್ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿ ನಿರ್ಣಯ ಕೈಗೊಳ್ಳಬೇಕೆಂದು ಹೇಳಿದರು.
    ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣ ಮಾತನಾಡಿ, ಕಾಫಿ ಬೆಳೆ ವಾಣಿಜ್ಯ ಬೆಳೆಯಾಗಿರುವುದನ್ನು ಬಿಟ್ಟರೆ ಕೃಷಿಯಾಗಿ ಕೆಲಸ ನಡೆಯುತ್ತಿದೆ. ಆದ್ದರಿಂದ ಸರ್ಫೇಸಿ ಕಾಯ್ದೆಯಿಂದ ಕಾಫಿ ಬೆಳೆಯನ್ನು ಹೊರಗಿಡಬೇಕೆಂದು ಆಗ್ರಹಿಸಿದರು.

    ಸಂಸತ್ ಅಧಿವೇಶನ ನಡೆಯುವ ಸಂದರ್ಭದಲ್ಲಿ ಕೆಜಿಎಫ್ ಪದಾಧಿಕಾರಿಗಳು ಮತ್ತು ಬೆಳೆಗಾರರ ನಿಯೋಗ ಬರುತ್ತೇವೆ, ಅ ಸಂದರ್ಭದಲ್ಲಿ ನಮ್ಮೊಂದಿಗೆ ಸಂಸದರುಗಳಿದ್ದು, ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಬೆಳೆಗಾರರ ಮರಣ ಶಾಸನವಾಗಿರುವ ಸರ್ಫೇಸಿ ಕಾಯ್ದೆ ಸಮಸ್ಯೆಗೆ ತಿಲಾಂಜಲಿ ನೀಡಬೇಕೆಂದು ಮನವಿ ಮಾಡಿದರು.

    ಕೆಜಿಎಫ್ ಸದಸ್ಯ ರಘು ಮಾತನಾಡಿ, ಸಂಸದರು ಹಾಗೂ ಹಣಕಾಸು ಸಚಿವರು ಮಧ್ಯೆ ಪ್ರವೇಶಿಸಿ ಬ್ಯಾಂಕ್‌ಗಳಿಗೆ ಕಾಫಿ ಸಾಲಗಳನ್ನು ಸರ್ಫೇಸಿ ಕಾಯ್ದೆಯಿಂದ ವಿನಾಯ್ತಿ ನೀಡುವಂತೆ ಮನ ಒಲಿಸಬೇಕೆಂದು ವಿನಂತಿಸಿದರು.

    ಬ್ಯಾಂಕರ್‍ಸ್‌ಗಳು ಕಾಫಿ ಬೆಳೆಗಾರರ ಬಗ್ಗೆ ಮೃದು ಧೋರಣೆ ತಾಳಬೇಕು, ಕೃಷಿ ಭೂಮಿಯಾಗಿರುವ ಕಾಫಿತೋಟಗಳನ್ನು ಸರ್ಫೇಸಿ ಕಾಯ್ದೆಯನ್ನು ಮುಂದಿಟ್ಟುಕೊಂಡು ಹರಾಜು ಹಾಕುತ್ತಿರುವುದನ್ನು ಸಂಸದರಾದ ತಾವು ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಬೆಳೆಗಾರರ ನೆರವಿಗೆ ಧಾವಿಸಬೇಕೆಂದು ಆಗ್ರಹಿಸಿದರು.

    ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ, ಜಯರಾಂ, ಟಿ.ರಾಜಶೇಖರ್, ರತೀಶ್, ಕೆ.ಡಿ ಮನೋಹರ್, ಐ.ಎಂ. ಮಹೇಶ್, ಲಿಂಗಪ್ಪ ಗೌಡ, ನಾಗೇಶ್, ರೇವಣ್ಣ ಗೌಡ, ಯತೀಶ್, ಶ್ರೇಯಸ್, ಮಹೇಶ್, ಎಐಟಿ ರಿಜಿಸ್ಟ್ರಾರ್ ಸಿ.ಕೆ. ಸುಬ್ರಾಯ, ಪ್ರಾಂಶುಪಾಲರಾದ ಜಯದೇವ, ಕೆ.ಕೆ. ರಘು, ವಿಜಯ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

    Discussion on SARFAESI Act in Parliament session

  • ಕೇಂದ್ರ ಸರ್ಕಾರದ ಮೇಲೆ ಹೊಸ ನಂಬಿಕೆ-ವಿಶ್ವಾಸ ಬಂದಿದೆ

    ಕೇಂದ್ರ ಸರ್ಕಾರದ ಮೇಲೆ ಹೊಸ ನಂಬಿಕೆ-ವಿಶ್ವಾಸ ಬಂದಿದೆ

    ಚಿಕ್ಕಮಗಳೂರು: ಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ ೧೧ ವರ್ಷದ ಪೀಳಿಗೆಯು ಕೇಂದ್ರದಲ್ಲಿ ಒಂದೇ ಒಂದು ಭ್ರಷ್ಟಾಚಾರವಿಲ್ಲದ ವಿಶ್ವಾಸಾರ್ಹವಾದ, ಒಳ್ಳೆಯ ಆಡಳಿತವನ್ನು ಕಂಡಿದೆ. ಕೆಟ್ಟ ಆಡಳಿತ ಎಂದರೆ ಏನು ಎನ್ನುವುದನ್ನು ನೋಡದೇ ಇರುವ ಅವಧಿ ಇದು ಎಂದು ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಹೇಳಿದರು.

    ಯೂಥ್ ಫಾರ್ ನೇಷನ್ ಸಂಘಟನೆ ವತಿಯಿಂದ ನಗರದ ಎಐಟಿ ಕಾಲೇಜಿನ ಬಿಜಿಎಸ್ ಸೆಮಿನಾರ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ನರೇಂದ್ರ ಮೋದಿ ಅವರ ೧೧ ವರ್ಷದ ಸರ್ಕಾರದ ಸಂಕಲ್ಪ-ಸಾಧನೆಗಳ ಕುರಿತಾದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ ೧೧ ವರ್ಷಗಳ ಹಿಂದೆ ಯುಪಿಎ ಸರ್ಕಾರದಲ್ಲಿ ಹಗರಣಗಳ ಸುದ್ದಿಗಳನ್ನೇ ಪತ್ರಿಕೆಗಳಲ್ಲಿ ಓದಿ ದಿನವನ್ನು ಆರಂಭಿಸಬೇಕಿತ್ತು. ಕಲ್ಲಿದ್ದಲು, ಅಗಸ್ತಾ ವೆಸ್ಟ್‌ಲ್ಯಾಂಡ್, ಕಾಮನ್ವೆಲ್ತ್ ಹೀಗೆ ಹಗರಣಗಳ ಸರಮಾಲೆಯೇ ನಡೆದಿತ್ತು. ಆದರೆ ಮೋದಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದ ನಂತರ ಕೇಂರ ಸರ್ಕಾರದ ಮೇಲೆ ಹೊಸ ನಂಬಿಕೆ, ವಿಶ್ವಾಸ ಬಂದಿದೆ. ಅಭಿವೃದ್ಧಿಗೆ ನಂಬರ್ ಹಾಕಬಹುದು ಆದರೆ ನಂಬಿಕೆ ಬರಬೇಕೆಂರೆ ಒಳ್ಳೆಯ ಆಡಳಿತ ಮಾತ್ರ ಬರಬೇಕಾಗುತ್ತದೆ ಎಂದರು.

    ೧೧ ವರ್ಷದಲ್ಲಿ ದೇಶದಲ್ಲಾಗಿರುವ ಬದಲಾವಣೆಗಳನ್ನು ಪಿಪಿಟಿ ಮೂಲಕ ಹೇಳುವ ಅಗತ್ಯವಿಲ್ಲ. ಪರಿಜ್ಞಾನ ಇರುವವರು, ಕಾಂಗ್ರೆಸ್ ಸೇರದಿರುವ ಪ್ರತಿಯೊಬ್ಬರೂ ಉತ್ತಮ ಬದಲಾವಣೆ ಆಗಿದೆ ಎನ್ನುತ್ತಿದ್ದಾರೆ. ದಿನ ನಿತ್ಯದ ಜೀವನದಲ್ಲಿ ನಮಗೆ ಗೊತ್ತಿಲ್ಲದೆ ಬದಲಾವಣೆ ಅನುಭವಕ್ಕೆ ಬರುತ್ತಿದೆ ಎಂದು ತಿಳಿಸಿದರು.

    ಅಭಿವೃದ್ಧಿಯ ವೇಗ ಹೇಗಿದೆ ಎಂದರೆ ಕರ್ನಾಟಕ ಅಷ್ಟೇ ಅಲ್ಲದೆ ಇಡೀ ದೇಶದಲ್ಲಿ ಒಂರಿಂದ ಎರಡುಗಂಟೆ ಪ್ರಯಾಣ ಮಾಡುವಷ್ಟರಲ್ಲಿ ಒಂದು ಏರ್‌ಪೋರ್ಟ್ ಸಿಗುವಂತಾಗಿದೆ. ವೈಮಾನಿಕ ಕ್ರಾಂತಿಯೇ ನಡೆದಿದೆ. ನಾಲ್ಕೈದು ಸಾವಿರ ರೂ.ನಲ್ಲಿ ವಿಮಾನ ಯಾನ ಮಾಡಬಹುದಾಗಿದೆ. ಈ ರೀತಿಯ ಬದಲಾವಣೆಯನ್ನು ಜೀವಿಸುತ್ತಿದ್ದರೆ ಅದು ಮೋದಿ ಸರ್ಕಾರದ ಸಾಧನೆ ಎಂದು ಹೇಳಿದರು.

    ಮನಿ ಆರ್ಡರ್ ಕಾಲದಿಂದ ಸಿಂಗಪುರ, ಅಮೇರಿಕಾದಂತಹ ದೇಶಗಳಿಗೆ ನಮ್ಮ ದೇಶದ ಮಕ್ಕಳು ಎಸ್‌ಎಂಎಸ್, ವಾಟ್ಸ್ ಆಪ್ ಮಾಡುವ ರೀತಿ ಹಣವನ್ನು ಕಳಿಸುವ ಮಟ್ಟಕ್ಕೆ ಬಂದಿದ್ದಾರೆ ಇದು ಡಿಜಿಟಲ್ ಇಂಡಿಯಾದ ಕ್ರಾಂತಿ, ಫಾರಿನ್ ಎಂದರೆ ಬಹಳ ವೇಗವಾಗಿ ಬೆಳೆದ ದೇಶಗಳು ಎಂಬ ಭಾವನೆ ಇದೆ. ಆದರೆ ಅಮೇರಿಕಾ ಸೇರಿದಂತೆ ಹಲವು ದೇಶಗಳಿಗೆ ನಾವು ನಿಯೋಗ ಹೋಗಿದ್ದಾಗ ಡಿಜಿಟಲ್ ಇಂಡಿಯಾ ಬಗ್ಗೆ ನಮಗೂ ಮಾಹಿತಿ ಕೊಡಿ ಎಂದು ಅಲ್ಲಿನ ಮುಖಂಡರು ಕೇಳುವ ಮಟ್ಟಕ್ಕೆ ನಾವು ಬೆಳೆದಿದ್ದೇವೆ. ೨ ಲಕ್ಷ ಕೋಟಿ ರೂ.ಗಳನ್ನು ಭಾರತ ದೇಶ ಕೇವಲ ನೇರ ನಗದು ವಹಿವಾಟಿನಲ್ಲಿ ಉಳಿತಾಯ ಮಾಡಿದೆ. ಇದು ಒಂದು ದೇಶದ ವಾರ್ಷಿಕ ಬಜೆಟ್‌ನಷ್ಟು ಗಾತ್ರದ್ದಾಗಿದೆ ಎಂದರು.

    ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದ ಉತ್ತೇಜನಕ್ಕೆ ೧೧ ವರ್ಷಗಳಲ್ಲಿ ಹೆಚ್ಚಿನ ಮಹತ್ವ ನೀಡಲಾಗಿದೆ. ಈ ಕ್ಷೇತ್ರಗಳಲ್ಲಿ ಸಂಶೋಧನೆಗೆಂದು ಹತ್ತಾರು ಖಾಸಗಿ ಕಂಪನಿಗಳಿಗೆ ಅನುದಾನ ಮತ್ತು ಸೌಲತ್ತುಗಳನ್ನು ನೀಡಿ ಈ ಕ್ಷೇತ್ರದಲ್ಲಿ ಭಾರತವನ್ನು ಜಗತ್ತಿನ ನಾಯಕನನ್ನಾಗಿಸಲು ಮುಂದಡಿ ಇಡಲಾಗಿದೆ ಎಂದು ತಿಳಿಸಿದರು.

    ಎಐ ಸೇರಿದಂತೆ ಇನ್ನಿತರೆ ಆಳ ತಂತ್ರಜ್ಞಾನದಲ್ಲಿ ಸಂಶೋಧನೆ ಹಾಗೂ ಆವಿಷ್ಕಾರಕ್ಕೆ ೫೦ ಸಾವಿರ ಕೋಟಿ ರೂ. ಅನುದಾನ ನೀಡುತ್ತಿದ್ದರೆ, ಇದೇ ವೇಳೆ ಬೀದಿ ಬದಿ ವ್ಯಾಪಾರಿಗಳ ಆರ್ಥಿಕ ಸ್ವಾವಲಂಬನೆ ದೃಷ್ಠಿಯಲ್ಲಿಟ್ಟುಕೊಂಡು ಪಿಎಂ ಸ್ವನಿಧಿ ಯೋಜನೆಯಡಿ ೧೦ ಸಾವಿರದಿಂದ ೧ ಲಕ್ಷ ರೂ. ವರೆಗೆ ಸಾಲ ಸೌಲಭ್ಯ ನೀಡುತ್ತಿದೆ. ಜಾಹಿರಾತು ನೀಡಿದರೆ ಜನರು ಮತ ಹಾಕುತ್ತಾರೆ ಎನ್ನುವ ಸ್ಥಿತಿಯಲ್ಲಿ ಅಭಿವೃದ್ಧಿ, ಒಳ್ಳೆಯ ಆಡಳಿತ ಎನ್ನುವುದು ಅನುಭವಕ್ಕೆ ಬರುವಂತಾಗಿರುವುದು ಕಳೆದ ೧೧ ವರ್ಷದಲ್ಲಿ ಎಂದರು.

    ಸರ್ಜಿಕಲ್ ಸ್ಟ್ರೈಕ್, ಆಪರೇಷನ್ ಬಾಲಕೋಟ್, ಆಪರೇರಷನ್ ಸಿಂಧೂರ ನಂತಹ ದಿಟ್ಟ ಕ್ರಮಗಳ ಮೂಲಕ ಭಯೋತ್ಪಾದನೆ ಮಟ್ಟ ಹಾಕುವಲ್ಲಿ ದೇಶ ಯಶಸ್ಸುಕಂಡಿದೆ. ಮೇಕ್ ಇನ್ ಇಂಡಿಯಾದಲ್ಲಿ ತಯಾರಾದ ನಮ್ಮ ಆಕಾಶ್ ಕ್ಷಿಪಣಿಯನ್ನು ಖರೀದಿಸಲು ಹಲವು ದೇಶಗಳು ಕಾತುರವಾಗಿವೆ. ಇದಕ್ಕಾಗಿ ನರೇಂದ್ರ ಮೋದಿ ಅವರನ್ನು ನಮ್ಮ ದೇಶಕ್ಕೆ ಕಳಿಸಿಕೊಡಿ ಎಂದು ಕೋರಿಕೆ ಇಡುತ್ತಿವೆ. ಮೋದಿ ಅವರ ವಿದೇಶ ಪ್ರವಾಸದ ಬಗ್ಗೆ ಮಾತನಾಡುವ ಕಾಂಗ್ರೆಸಿಗರಿಗೆ ಇದು ಅರ್ಥವಾಗಬೇಕು ಎಂದರು.

    ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಮಾಜಿ ಸಚಿವ ಡಿ.ಎನ್.ಜೀವರಾಜ್, ಮಾಜಿ ಶಾಸಕ ಡಿ.ಎಸ್.ಸುರೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜ ಶೆಟ್ಟಿ ಇತರರು ಭಾಗವಹಿಸಿದ್ದರು. ಯೂಥ್ ಫಾರ್ ನೇಷನ್ ಸಂಚಾಲಕ ಸೋತೋಷ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.

    There is new trust and confidence in the central government.

  • ಪೌರಕಾರ್ಮಿಕರ ಮೂಲ ಬೇಡಿಕೆ ಈಡೇರಿಸಲು ಮನವಿ

    ಪೌರಕಾರ್ಮಿಕರ ಮೂಲ ಬೇಡಿಕೆ ಈಡೇರಿಸಲು ಮನವಿ

    ಚಿಕ್ಕಮಗಳೂರು: ಹಲವಾರು ವರ್ಷಗಳಿಂದ ದುಡಿಯುತ್ತಿರುವ ಪೌರಕಾರ್ಮಿಕರ ಮೂಲ ಬೇಡಿಕೆಗಳನ್ನು ಈಡೇರಿಸಲು ಕ್ರಮ ವಹಿಸಬೇಕು ಎಂದು ಪೌರಕಾರ್ಮಿಕರ ಜಿಲ್ಲಾ ಮಹಾಸಂಘ ಗುರುವಾ ರ ಸಂಜೆ ನಗರಸಭೆ ಅಧ್ಯಕ್ಷ ಬಿ.ಶೀಲಾ ದಿನೇಶ್ ಅವರಿಗೆ ಸಲ್ಲಿಸಿ ಒತ್ತಾಯಿಸಿದರು.

    ಈ ಕುರಿತು ಮಾತನಾಡಿದ ಸಂಘದ ಅಧ್ಯಕ್ಷ ಮುರುಗೇಶ್ ಪೌರಕಾರ್ಮಿಕರಿಗೆ ಅನೇಕ ಸಮಸ್ಯೆಗಳಿವೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿ ವರ್ಗಕ್ಕೆ ಮನವಿ ಸಲ್ಲಿಸಿ ಬಗೆಹರಿಸಲು ತಿಳಿಸಿದ್ದರೂ ಸಹ ಇದುವರೆಗೂ ಅವಶ್ಯಕವಾಗಿರುವ ಯಾವುದೇ ಸವಲತ್ತನ್ನು ಪೂರೈಸುತ್ತಿಲ್ಲ ಎಂದು ಹೇಳಿದರು.

    ಪೌರಕಾರ್ಮಿಕರಿಗೆ ಮತ್ತು ಆಸ್ಪತ್ರೆ ಸಫಾಯಿ ಕರ್ಮಚಾರಿಗಳಿಗೆ ಪ್ರತಿ ತಿಂಗಳು ವೇತನ ಪಾವತಿಸುವು ದು, ಸಂಕಷ್ಟ ಭತ್ಯೆ, ಟೈಮ್‌ಬಾಂಡ್ ನೀಡುವುದು, ಖಾಯಂ ಕಾರ್ಮಿಕರಿಗೆ ಎಸ್.ಆರ್. ಬುಕ್ ಮಾಡಿಕೊ ಡುವುದು. ನೇರಪಾವತಿ ಮತ್ತು ಹೊರಗುತ್ತಿಗೆ ಕಾರ್ಮಿಕರಿಗೆ ಪ್ರತಿ ವರ್ಷ ಏಪ್ರಿಲ್‌ನಲ್ಲಿ ಸಂಬಳ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

    ಪ್ರತಿ ತಿಂಗಳ ಸಂಬಳ ತಡವಾಗಿ ಬರುತ್ತಿರುವ ಕಾರಣ ಕಾರ್ಮಿಕರು ಕೈಸಾಲ ಮಾಡಿಕೊಂಡು ಜೀವನ ನಡೆಸುವಂತಾಗಿದೆ. ಈ ಜೊತೆಗೆ ಬ್ಯಾಂಕ್‌ಗಳಲ್ಲಿ ಸಾಲ ಹಾಗೂ ಇನ್ನಿತರೆ ಸಹಾಯಧನಕ್ಕೆ ಅರ್ಜಿ ಸಲ್ಲಿಸಿದರೆ ಸಂಬಳ ಪ್ರಮಾಣಪತ್ರ ಬೇಕಾದಾಗ ನಗರಸಭೆಗೆ ಕೇಳಿದರೆ ಸಕಾಲದಲ್ಲಿ ಕೊಡುತ್ತಿಲ್ಲ. ಇದರಿಂದ ಬಹಳಷ್ಟು ತೊಂದರೆಯಾಗುತ್ತಿದೆ ಎಂದರು.

    ಬಯೋಮೆಟ್ರಿಕ್‌ನ್ನು ಒಂದೆಡೆ ಅಳವಡಿಸಿದ ಕಾರಣ ಪೌರಕಾರ್ಮಿಕರು ಎಲ್ಲಿಯೇ ಕೆಲಸ ನಿರ್ವಹಿಸುತ್ತಿ ದ್ದರೂ ಆ ಸ್ಥಳಕ್ಕೆ ಬರಬೇಕಾದ ಸ್ಥಿತಿಯಿದೆ. ಮಳೆಗಾಲದಲ್ಲಿ ಕೆಲಸ ನಿರ್ವಹಿಸಿ ಒದ್ದಾಡಿಕೊಂಡು ಬಯೋ ಮೆಟ್ರಿಕ್ ಹಾಕಿದರೂ ಕೆಲವೊಮ್ಮೆ ಗೈರೆಂದು ತೋರಿಸುತ್ತಿದ್ದು ಇದರಿಂದ ವೇತನವು ಕಡಿತಗೊಂಡು ಮಾನಸಿ ಕವಾಗಿ ಸಾಲದ ಸುಳಿಯಲ್ಲಿ ಸಿಲುಕುತ್ತಿದ್ದೇವೆ ಎಂದು ಹೇಳಿದರು.

    ವಾರವೀಡಿ ಪೌರಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ಮೊಟ್ಟೆ ವಿತರಿಸಲು ಸರ್ಕಾರದ ಆದೇಶವಿದ್ದ ರೂ ಸಹ ಕಾರಣಗಳನ್ನು ಹೇಳಿ ಮೊಟ್ಟೆ ವಿತರಿಸದೇ ಪೌರಕಾರ್ಮಿಕರಿಗೆ ತೊಂದರೆ ನೀಡುತ್ತಿದೆ. ಅಲ್ಲದೇ ಮೊಟ್ಟೆ ನೀಡಿದರೂ ಸಹ ಆ ಮೊಟ್ಟೆಗಳು ಕಾರ್ಮಿಕರಿಗೆ ತಲುಪುವ ವೇಳೆಗೆ ಹೊಡೆದು ಹೋಗಿ ಅವುಗಳನ್ನು ತಿನ್ನಲು ಸಾಧ್ಯವಾಗದ ಸ್ಥಿತಿಯಿದೆ ಎಂದರು.

    ಪ್ರತಿನಿತ್ಯವು ಕಸ, ಕೊಳಚೆ ಮಧ್ಯೆಯೇ ಜೀವದ ಹಂಗು ತೊರೆದು ಕೆಲಸ ಮಾಡುವ ಪೌರಕಾರ್ಮಿಕರಿಗೆ ಸರಿಯಾದ ಸುರಕ್ಷಾ ಕವಚಗಳು ನೀಡುತ್ತಿಲ್ಲ. ಇದರಿಂದ ರೋಗ ರುಜಿನಗಳು ಹೆಚ್ಚಾಗಿ ಕಡಿಮೆ ವಯಸ್ಸಿನಲ್ಲಿ ಪೌರಕಾರ್ಮಿಕರು ಸಾವಿಗೀಡಾಗಿ ಕುಟುಂಬವು ಅನಾಥವಾಗುತ್ತಿದೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ನಾಗರಾಜ್, ಗೌ.ಅಧ್ಯಕ್ಷ ಸಿ.ಬಿ.ನಾಗರಾಜ್, ಸದಸ್ಯರಾದ ಕರ ಣ್‌ಕುಮಾರ್, ಬಿ.ಭರತ್, ಶಾಮು, ಮಂಜು, ಗೀತಾ, ಶೈಲಾ, ಸುನೀತಾ, ಆನಂದ್ ಮತ್ತಿತರರಿದ್ದರು.

    Appeal to fulfill the basic demands of the civil servants

  • ಚಿಕ್ಕಮಗಳೂರು-ಹಾಸನ ರೈಲು ಸಂಚಾರ ಎರಡು ವರ್ಷದಲ್ಲಿ ಆರಂಭ

    ಚಿಕ್ಕಮಗಳೂರು-ಹಾಸನ ರೈಲು ಸಂಚಾರ ಎರಡು ವರ್ಷದಲ್ಲಿ ಆರಂಭ

    ಚಿಕ್ಕಮಗಳೂರು: ಮುಂದಿನ ಎರಡು ವರ್ಷದಲ್ಲಿ ಚಿಕ್ಕಮಗಳೂರು-ಹಾಸನ ರೈಲು ಸಂಚಾರ ಆರಂಭವಾಗಲಿದೆ ಎಂದು ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.

    ನಗರದ ರೈಲ್ವೇ ನಿಲ್ದಾಣದಲ್ಲಿ ಶುಕ್ರವಾರ ಚಿಕ್ಕಮಗಳೂರು-ತಿರುಪತಿ ನೂತನ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿ ನಂತರ ಅವರು ಮಾತನಾಡಿ ಹಾಸನ-ಚಿಕ್ಕಮಗಳೂರು ರೈಲ್ವೆಗೆ ಅಗತ್ಯವಿರುವ ಜಾಗವನ್ನು ಇನ್ನೊಂದು ತಿಂಗಳಲ್ಲಿ ರೈಲ್ವೇ ಇಲಾಖೆಗೆ ಹಸ್ತಾಂತರಿಸಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಹೀಗಾಗಿ ಇನ್ನೆರಡು ವರ್ಷಗಳಲ್ಲಿ ಹಾಸನ-ಬೇಲೂರು-ಚಿಕ್ಕಮಗಳೂರು ಮಾರ್ಗ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದರು.

    ಚಿಕ್ಕಮಗಳೂರಿನಿಂದ ತಿರುಪತಿಗೆ ವಾರದಲ್ಲಿ ಮೂರು ದಿನ ರೈಲು ಓಡಿಸುವಂತೆ ಕೋರಿಕೆ ಇಟ್ಟಿದ್ದೀರಿ ಈ ಬಗ್ಗೆ ಪರಿಶೀಲನೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದರು. ಚಿಕ್ಕ ಬಾಣಾವರ ಹಾಸನ ಮಾರ್ಗದ ವಿದ್ಯುದೀಕರಣ ೧೮೭ ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ. ಚಿಕ್ಕಮಗಳೂರು ಮತ್ತು ಬೀರೂರು ಡಬ್ಬಲ್ ಕ್ರಾಸಿಂಗ್‌ಗೆ ೭೦ ಕೋಟಿ ರೂ. ಕೊಡುತ್ತಿದ್ದೇವೆ. ಚಿಕ್ಕಾನವಂಗಲ ಅಜ್ಜಂಪುರಕ್ಕೆ ಮೇಲು ಸೇತುವೆಗೆ ೫೦ ಕೋಟಿ ರೂ. ಮಂಜೂರು ಮಾಡಿ ಕೆಲಸ ಆರಂಭಿಸಲಾಗಿದೆ. ಬೀರೂರು-ಶಿವಮೊಗ್ಗ ೬೩ ಕಿ.ಮೀ. ಮತ್ತು ಶವಮೊಗ್ಗ-ಶೃಂಗೇರಿ-ಮಂಗಳೂರು ನಡುವಿನ ೩೩೦ ಕಿ.ಮೀ. ಹೊಸ ಮಾರ್ಗದ ಸರ್ವೇ ಕಾರ್ಯ ಆರಂಭಿಸುತ್ತಿದ್ದೇವೆ. ಇದಲ್ಲದೆ ಸಕಲೇಶಪುರದಿಂದ ಕುಕ್ಕೆ ಸುಬ್ರಮಣ್ಯಕ್ಕೆ ರೈಲು ಸಂಪರ್ಕ ಕಲ್ಪಿಸಲು ಸರ್ವೇ ಕಾರ್ಯ ಆರಂಭಿಸುವ ಕುರಿತು ಅಧಿಕಾರಿಗಳ ಜೊತೆ ಮಾತನಾಡಿದ್ದೇವೆ ಎಂದರು.

    ಇಂದು ಇಲ್ಲಿ ಜನರಲ್ಲಿ ಕಂಡು ಬರುತ್ತಿರುವ ಉತ್ಸಾಹವು ಇಲ್ಲಿನ ದತ್ತಾತ್ರೇಯರು ಮತ್ತೊಂದು ತಿರುಪತಿಯ ಶ್ರೀನಿವಾಸ ಮತ್ತೊಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ರೈಲ್ವೇ ಸಚಿವರಾದ ಅಶ್ವಿನಿ ವೈಷ್ಣವ್, ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರ ದೂರದೃಷ್ಠಿ ಫಲವಾಗಿ ಇಂದು ಈ ನೂತನ ರೈಲಿಗೆ ಚಾಲನೆ ಸಿಕ್ಕಿದೆ. ಇದಕ್ಕಾಗಿ ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

    ರೈಲ್ವೇ ಮೇಲ್ಸೇತುವೆ ಮತ್ತು ಕೆಳ ಸೇತುವೆಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ತಲಾ ಶೇ.೫೦ ರಷ್ಟು ಅನುದಾನ ನೀಡಿ ಪೂರ್ಣಗೊಳಿಸಬೇಕಿತ್ತು. ಈ ಕಾರಣಕ್ಕೆ ಎಲ್ಲೂ ಕೆಸಲ ಆಗುತ್ತಿರಲಿಲ್ಲ. ರಾಜ್ಯ ಸರ್ಕಾರಗಳು ಸರಿಯಾಗಿ ಹಣ ಕೊಡುತ್ತಿರಲಿಲ್ಲ. ಈ ಕಾರಣಕ್ಕೆ ಪ್ರಧಾನ ಮಂತ್ರಿಗಳು ಇಡೀ ರಾಜ್ಯದಲ್ಲಿರುವ ಎಲ್ಲಾ ಮೇಲ್ಸೇತುವೆ ಮತ್ತು ಕೆಳ ಸೇತುವೆಗಳ ನಿರ್ಮಾಣಕ್ಕೆ ಕೇಂದ್ರದಿಂದಲೇ ಶೇ.೧೦೦ ರಷ್ಟು ಅನುದಾನ ನೀಡುವ ತೀರ್ಮಾನ ಕೈಗೊಂಡಿದ್ದಾರೆ. ಇದು ಸುಲಭದ ಕೆಲಸವಲ್ಲ ಸಹಸ್ರಾರು ಕೋಟಿ ಖರ್ಚಾಗುತ್ತದೆ ಎಂದರು.

    ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ಚಿಕ್ಕಮಗಳೂರು-ಬೇಲೂರು-ಹಾಸನ ಮಾರ್ಗವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಶೃಂಗೇರಿ, ಉಡುಪಿ, ಕೊಲ್ಲೂರು-ದತ್ತಪೀಠ ಮಾರ್ಗವಾಗಿ ವಿಶೇಷ ರೈಲು ಸಂಚಾರಕ್ಕೆ ಸರ್ವೆ ಕಾರ್ಯ ಆರಂಭಿಸಬೇಕು ಹಾಗೂ ವಂದೇ ಭಾರತ್ ಇಂಟರ್‌ಸಿಟಿ ರೈಲು ಬೀರೂರು ಮತ್ತು ಕಡೂರಿನಲ್ಲಿ ನಿಲುಗಡೆ ಮಾಡಬೇಕೆಂದು ವಿನಂತಿಸಿದರು.

    ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ ದತ್ತಾತ್ರೇಯನ ಕ್ಷೇತ್ರದಿಂದ ಶ್ರೀನಿವಾಸನ ಕ್ಷೇತ್ರಕ್ಕೆ ಇಂದು ನೂತನ ರೈಲು ಸಂಚಾರ ಆರಂಭಿಸಿ ಬೇಡಿಕೆ ಈಡೇರಿಸಿರುವುದಕ್ಕೆ ಸಂಸದರು, ರೈಲ್ವೇ ಖಾತೆ ಸಚಿವ ಅಶ್ವಿನಿ ವೈಷ್ಣವ್, ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸುವುದಾಗಿ  ಚಿಕ್ಕಮಗಳೂರು-ಬೇಲೂರು-ಹಾಸನ ಮಾರ್ಗವಾಗಿ ರೈಲು ಸಂಚಾರ ಆರಂಭವಾದರೆ ಮೈಸೂರು, ಬೆಂಗಳೂರು, ಧಾರವಾಡ ಸೇರಿದಂತೆ ದೇಶದ ಉದ್ದಗಲಕ್ಕೆ ರೈಲ್ವೆ ಪ್ರಯಾಣ ಆರಂಭಿಸಲು ನಾಗರೀಕರಿಗೆ ಅನುಕೂಲವಾಗಲಿದೆ. ೨೦೨೯ ರ ಒಳಗೆ ಈ ಮಾರ್ಗವಾಗಿ ರೈಲು ಸಂಚಾರ ಆರಂಭ ಮಾಡುವಂತೆ ಸಚಿವ ಸೋಮಣ್ಣನವರಲ್ಲಿ ವಿನಂತಿಸಿದರು.

    ದೇವನೂರಿನಲ್ಲಿ ಕೋವಿಡ್‌ನಿಂದೀಚೆಗೆ ರೈಲ್ವೆ ನಿಲುಗಡೆ ಕಡಿಮೆಯಾಗಿದ್ದು, ಇದರಿಂದಾಗಿ ಬಯಲು ಭಾಗದ ಜನರಿಗೆ ತೊಂದರೆಯಾಗಿದ್ದು, ಮೊದಲು ನಿಲುಗಡೆಯಾಗುತ್ತಿದ್ದ ೧೩ ರೈಲುಗಳನ್ನು ನಿಲುಗಡೆ ಮಾಡಬೇಕು. ಕಣಿವೇಹಳ್ಳಿ ಅಂಡರ್ ಪಾಸ್, ಚಿಕ್ಕದೇವನೂರು ಸಮೀಪ ಓವರ್ ಬ್ರಿಡ್ಜ್ ನಿರ್ಮಾಣ ಮಾಡಲು ಮನವಿ ಮಾಡಿದರು.

    ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಮಾತನಾಡಿ, ನೂತನ ಚಿಕ್ಕಮಗಳೂರು-ತಿರುಪತಿ ರೈಲಿಗೆ ಗುರು ದತ್ತಾತ್ರೇಯ ಎಂಬ ಹೆಸರನ್ನು ನಾಮಕರಣ ಮಾಡಲು ರೈಲ್ವೆ ಸಚಿವರಲ್ಲಿ ಮನವಿ ಮಾಡಿದರು.

    ಕಾರ್ಯಕ್ರಮದಲ್ಲಿ ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ, ಮಾಜಿ ಶಾಸಕ ಡಿ.ಎಸ್. ಸುರೇಶ್, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ, ನಗರಸಭಾಧ್ಯಕ್ಷೆ ಶೀಲಾದಿನೇಶ್, ಬಿಜೆಪಿ ಮುಖಂಡರಾದ ಹೆಚ್.ಸಿ. ಕಲ್ಮರುಡಪ್ಪ, ಎಂ.ಆರ್ ದೇವರಾಜ್ ಶೆಟ್ಟಿ, ಪುಷ್ಪರಾಜ್, ಜಿಲ್ಲಾ ಪೊಲೀಸ್ ವರಿ?ಧಿಕಾರಿ ಡಾ. ವಿಕ್ರಮ ಅಮಟೆ, ಜಿ.ಪಂ ಸಿಇಓ ಹೆಚ್.ಎಸ್. ಕೀರ್ತನ ಉಪಸ್ಥಿತರಿದ್ದರು.

    Chikkamagaluru-Hassan train service to start in two years

  • ಅಜ್ಞಾನ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿ ಬೆಳಗಿಸುವರೇ ಗುರು

    ಅಜ್ಞಾನ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿ ಬೆಳಗಿಸುವರೇ ಗುರು

    ಚಿಕ್ಕಮಗಳೂರು: ಅಜ್ಞಾನ ಅಹಂಕಾರ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾರದ ಪೈ ಕಲ್ಯಾಣ ಮಂಟಪದ ಟ್ರಸ್ಟ್‌ನ ಅಧ್ಯಕ್ಷರಾದ ಜಯಂತ್ ಪೈ, ಪ್ರಭು ತಿಳಿಸಿದರು.

    ಅವರು ಇಂದು ಶಾರದ ಪೈ ಕಲ್ಯಾಣ ಮಂಟಪದಲ್ಲಿ ಕಾಶಿ ಮಠದ ವಾರಣಾಸಿ ಅಧೀನ ಸಂಸ್ಥೆ ವತಿಯಿಂದ ಗುರುಪೂರ್ಣಿಮ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿ, ಗುರುವನ್ನು ಅರಿವಿನ ಸಾಗರ ಎಂದು ಕರೆಯುತ್ತಾರೆ ಸರ್ವರ ಹಿತ ಬಯಸುವ ಗುರುಗಳನ್ನು ಭಕ್ತಿ ಕೃತಜ್ಞತೆಯಿಂದ ಸ್ಮರಿಸಿ ಪೂಜಿಸುವ ಕಾರ್ಯಕ್ರಮವೇ ಗುರುಪೂರ್ಣಿಮೆ ಆಗಿದೆ ಎಂದು ಹೇಳಿದರು.

    ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಶ್ರೇಷ್ಠ ಸ್ಥಾನ ಗುರುಗಳು ಜೀವನದ ಕತ್ತಲನ್ನು ದೂರಮಾಡಿ ಬೆಳಕಿನೆಡೆಗೆ ಉತ್ತಮ ಮಾರ್ಗದರ್ಶನ ನೀಡುತ್ತಾರೆ ಎಂದರು, ವಿದ್ಯಾರ್ಥಿಗಳು ಗುರುಗಳ ಮತ್ತು ಪೋಷಕರ ಮಾರ್ಗದರ್ಶನದಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು, ಉನ್ನತ ವ್ಯಾಸಂಗ ಮಾಡಿ ಸಮಾಜಸೇವೆ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಇತರರಿಗೆ ಮಾದರಿಯಾಗಿ ಸಾರ್ಥಕ ಬದುಕನ ನಿಮ್ಮದಾಗಿಸಿಕೊಳ್ಳಬೇಕು ಎಂದರು.

    ಪ್ರತಿ ವರ್ಷ ಗುರುಪೂರ್ಣಿಮೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಮಾಡುವುದರ ಜೊತೆಗೆ ಜನಾಂಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಗುವುದು ಎಂದರು.

    ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಸುರೇಶ್‌ಪೈ, ಬಾಬುಕಾಮತ್, ವ್ಯವಸ್ಥಾಪಕ ಲಕ್ಮಣ್‌ಕಾಮತ್ ಉಪಸ್ಥಿತರಿದ್ದರು. ಗುರುಪೂರ್ಣಿಮೆ ಕಾರ್ಯಕ್ರಮದ ಬಗ್ಗೆ ನಾರಾಯಣ ಮಲ್ಯ ಮಾತನಾಡಿದರು. ಅರ್ಚಕ ಕೃಷ್ಣಭಟ್ ನೇತೃತ್ವದಲ್ಲಿ ಗಣಪತಿ ಹೋಮ, ಪೂರ್ಣಾಹುತಿ, ಸತ್ಯನಾರಾಯಣ ವ್ರತ ಮತ್ತು ಕಥಾಶ್ರವಣ ನಡೆದ ಬಳಿಕ ಗುರು ಪೂಜೆ, ಪಾದುಕ ಪೂಜೆ, ಗುರುಕಾಣಿಕೆಯೊಂದಿಗೆ ಮಹಾ ಮಂಗಳಾರತಿಯೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ವಿನಿಯೋಗಿಸಿದರು.

    The Guru dispels the darkness of ignorance and illuminates the light of wisdom.