Category: ಚಿಕ್ಕಮಗಳೂರು ನಗರ

  • ನಗರಸಭೆ ನೂತನ ಅಧ್ಯಕ್ಷರಾಗಿ ಬಿ.ಶೀಲಾ ದಿನೇಶ್ ಅವಿರೋಧವಾಗಿ ಆಯ್ಕೆ

    ನಗರಸಭೆ ನೂತನ ಅಧ್ಯಕ್ಷರಾಗಿ ಬಿ.ಶೀಲಾ ದಿನೇಶ್ ಅವಿರೋಧವಾಗಿ ಆಯ್ಕೆ

    ಚಿಕ್ಕಮಗಳೂರುಎ:  ನಗರಸಭೆ ನೂತನ ಅಧ್ಯಕ್ಷರಾಗಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ೧೫ ನೇ ವಾರ್ಡ್‌ನ ಬಿ.ಶೀಲಾ ದಿನೇಶ್ ಅವಿರೋಧವಾಗಿ ಆಯ್ಕೆಯಾದರು. ಬಿಜೆಪಿ ಆಂತರಿಕ ಒಪ್ಪಂದದ ಪ್ರಕಾರ ೧೦ ತಿಂಗಳ ಅಧಿಕಾರದ ನಂತರ ಸುಜಾತ ಶಿವಕುಮಾರ್ ಅವರು ರಾಜೀನಾಮೆ ನಿಡಿದ್ದ ಹಿನ್ನೆಲೆಯಲ್ಲಿ ಶನಿವಾರ ನೂತನ ಅಧ್ಯಕ್ಷರ ಆಯ್ಕೆಗೆ ನಗರಸಭೆ ಸಭಾಂಗಣದಲ್ಲಿ ಚುನಾವಣೆ ನಡೆಯಿತು.

    ಜೆಡಿಎಸ್ ಬೆಂಬಲದೊಂದಿಗೆ ೧೫ ನೇ ವಾರ್ಡ್‌ನಿಂದ ಪಕ್ಷೇತರ ಸದಸ್ಯೆಯಾಗಿ ಆಯ್ಕೆಯಾಗಿ ಬಂದಿರುವ ಶೀಲಾ ದಿನೇಶ್ ಅವರು ಬಿಜೆಪಿ-ಜೆಡಿಎಸ್ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಅವರನ್ನು ಹೊರತುಪಡಿಸಿ ಇನ್ನಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿದ್ದ ಉಪ ವಿಭಾಗಾಧಿಕಾರಿ ಬಿ.ಕೆ.ಸುದರ್ಶನ್ ಅವರು ಶಿಲಾ ದಿನೇಶ್ ಅವರ ಅವಿರೋಧ ಆಯ್ಕೆಯನ್ನು ಘೋಷಿಸಿದರು.

    ನೂತನ ಅಧ್ಯಕ್ಷರ ಆಯ್ಕೆ ನಂತರ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ, ಶೀಲಾ ದಿನೇಶ್ ಆಯ್ಕೆಗೆ ಸಂಪೂರ್ಣ ಸಹಕಾರ ನೀಡಿದ ಸಿ.ಟಿ.ರವಿ ಅವರಿಗೆ ವಿಶೇಷವಾಗಿ ಧನ್ಯವಾದಗಳನ್ನು ತಿಳಿಸುತ್ತೇವೆ. ಅವರ ಬೆಂಬಲದಿಂದ ಮೈತ್ರಿ ಅಭ್ಯರ್ಥಿ ಆಯ್ಕೆಗೆ ಸಹಕಾರವಾಗಿದೆ. ಹಾಗೆಯೇ ಕಾಂಗ್ರೆಸ್ ಶಾಸಕ ಎಚ್.ಡಿ.ತಮ್ಮಯ್ಯ ಅವರು ಸಹ ತಮ್ಮ ಪಕ್ಷದಿಂದ ಅಭ್ಯರ್ಥಿಯನ್ನು ಹಾಕದೆ ಇದ್ದುದ್ದು ಅವಿರೋಧ ಆಯ್ಕೆಗೆ ಕಾರಣವಾಗಿದೆ. ಅವಿರೋಧ ಆಯ್ಕೆ ಎನ್ನುವುದು ಮುಳ್ಳಿನ ಹಾಸಿಗೆ ಇದ್ದಂತೆ ಎಲ್ಲರನ್ನೂ ಒಮ್ಮತದಲ್ಲಿ ಕೊಂಡೊಯ್ದು ನಗರದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹಾರೈಸಿದರು.

    ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿ, ಕಳೆದ ಹತ್ತು ತಿಂಗಳ ಹಿಂದೆ ಬೋಜೇಗೌಡ ಅವರ ಕೋರಿಕೆ ಮೇರೆಗೆ ಶೀಲಾ ದಿನೇಶ್ ಅವರಿಗೆ ೧೦ ತಿಂಗಳ ಅವಧಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವುದಾಗಿ ಮಾತು ಕೊಟ್ಟಿದ್ದೆವು. ಅದೇ ರೀತಿ ಎನ್‌ಡಿಎ ಅಭ್ಯರ್ಥಿಯಾಗಿ ಶೀಲಾ ದಿನೇಶ್ ಆಯ್ಕೆಯಾಗಿದ್ದಾರೆ. ಅದಕ್ಕೆ ಕಾಂಗ್ರೆಸ್ ಪಕ್ಷ ಸಹ ಅಭ್ಯರ್ಥಿಯನ್ನು ಹಾಕದೆ ಆಯ್ಕೆಗೆ ಸಹಕರಿಸಿದೆ. ಅದಕ್ಕಾಗಿ ಶಾಸಕ ಎಚ್.ಡಿ.ತಮ್ಮಯ್ಯ ಅವರಿಗೆ ಹಾಗೂ ಎಲ್ಲಾ ಪಕ್ಷದ ನಗರಸಭೆ ಸದಸ್ಯರಿಗೆ ಧನ್ಯವಾದ ತಿಳಿಸುತ್ತೇವೆ. ಶೀಲಾ ದಿನೇಶ್ ಅವರು ಒಳ್ಳೆಯ ಕೆಲಸ ಮಾಡಿ, ಜನಾನುರಾಗಿಯಾಗಿ ತಮ್ಮದೇ ಹೆಜ್ಜೆ ಗುರುತನ್ನು ಮೂಡಿಸಲಿ ಎಂದು ಹಾರೈಸಿದರು.

    ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಯಾವುದೇ ಪಕ್ಷ ಎನ್ನುವುದಕ್ಕಿಂತ ನಗರದ ಅಭಿವೃದ್ಧಿ ಮುಖ್ಯ ಎನ್ನುವ ಉದ್ದೇಶದಿಂದ ಹಾಗೂ ಎನ್‌ಡಿಎ ಅಭ್ಯರ್ಥಿ ಶೀಲಾ ದಿನೇಶ್ ಅವರು ಪಕ್ಷೇತರ ಸದಸ್ಯರಾಗಿರುವುದರಿಂದ ಅವರ ಅವಿರೋಧ ಆಯ್ಕೆಗೆ ಸಹಕಾರ ಮಾಡಿದ್ದೇವೆ. ಶೀಲಾ ದಿನೇಶ್ ಮತ್ತು ಅವರ ಪತ್ನಿ ಹಾಗೂ ಸಹೋದರಿಸಹ ನಗರಸಭೆ ಸದಸ್ಯರಾಗಿ ಸುಮಾರು ೨೫ ವರ್ಷಗಳ ಅನುಭವ ಇರುವುದರಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಗರದ ಅಭಿವೃದ್ಧಿಗೆ ಒತ್ತುಕೊಟ್ಟು ಕೆಲಸ ಮಾಡಲಿ ಎಂದು ಹೇಳಿದರು.

    ಚುನಾವಣೆ ನಂತರ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್‌ನ ಸದಸ್ಯರು ಸೇರಿದಂತೆ ಮುಖಂಡರುಗಳು, ಮಾಜಿ ಅಧ್ಯಕ್ಷರು ಇತರರು ಹಾಗೂ ನಗರಸಭೆ ಆಯುಕ್ತ ಬಿ.ಸಿ.ಬಸವರಾಜು ಸೇರಿದಂತೆ ಅಧಿಕಾರಿ ಸಿಬ್ಬಂದಿಗಳು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.

    B. Sheela Dinesh was elected unopposed as the new president of the Municipal Council

  • ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಪತ್ರಿಕಾರಂಗ ಸಮಾಜಕ್ಕೆ ಅಪಾರ ಕೊಡುಗೆ

    ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಪತ್ರಿಕಾರಂಗ ಸಮಾಜಕ್ಕೆ ಅಪಾರ ಕೊಡುಗೆ

    ಚಿಕ್ಕಮಗಳೂರು:  ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಪತ್ರಿಕಾ ರಂಗ ಸಮಾಜಕ್ಕೆ ಅಪಾರ ಕೊಡುಗೆ ನೀಡಿದೆ ಎಂದು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

    ಶನಿವಾರ ನಗರದ ಸ್ಕೌಟ್ ಭವನದಲ್ಲಿ ಪ್ರೆಸ್‌ಕ್ಲಬ್ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಜತೆಗೆ ಪತ್ರಿಕಾ ರಂಗವೂ ಒಂದಾಗಿದ್ದು, ರಚನಾತ್ಮಕ ಟೀಕೆ, ಟಿಪ್ಪಣಿಗಳ ಮೂಲಕ ರಾಜಕೀಯ ರಂಗ, ಆಡಳಿತ ವರ್ಗವನ್ನು ಎಚ್ಚರಿಸಿ ಸರಿದಾರಿಗೆ ತರುವ ಕೆಲಸವನ್ನು ಪತ್ರಿಕಾ ರಂಗ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ ಎಂದರು.

    ಪತ್ರಿಕಾ ವಲಯದಿಂದ ರಚನಾತ್ಮಕ ಟೀಕೆ, ಟಿಪ್ಪಣಿಗಳು ಆ ಕ್ಷಣಕ್ಕೆ ನೋವುಂಟು ಮಾಡಿದರು. ಅವುಗಳನ್ನು ಸಕರಾತ್ಮಕ ವಾಗಿ ತಗೆದುಕೊಳ್ಳುವುದರಿಂದ ಸಮಾಜಕ್ಕೆ ಒಳ್ಳೇಯದಾಗುತ್ತದೆ. ಸಮಸ್ಯೆಗಳನ್ನು ಗುರುತಿಸಿ ಪರಿಹರಿಸಲು ಸಾಧ್ಯವಾಗು ತ್ತದೆ ಎಂದು ಅಭಿಪ್ರಾಯಿಸಿದ ಅವರು, ತಮ್ಮ ರಾಜಕೀಯ ಜೀವನದಲ್ಲಿ ಅನೇಕ ಪತ್ರಕರ್ತರು ತಮಗೆ ಮಾರ್ಗದರ್ಶನ ನೀಡಿದ್ದನ್ನು ಸ್ಮರಿಸಿಕೊಂಡ ಸಚಿವರು, ಅನೇಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಹಿರಿಯರು ತಮಗೆ ರಾಜಕೀಯವಾಗಿ ಮಾರ್ಗದರ್ಶನ ಮಾಡಿದ್ದಾರೆ.

    ಯುವಶಕ್ತಿ ಈ ದೇಶದ ಸಂಪತ್ತು, ಯುವ ಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ ದೇಶ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತಿದೆ. ಇಂದು ಸಾಕಷ್ಟು ವಿದ್ಯಾವಂತರು ಉದ್ಯೋಗ ದೊರೆಯದೆ ಸಮಸ್ಯೆ ಎದುರಿಸುತ್ತಿದ್ದಾರೆ. ವಿದ್ಯಾವಂತರಿಗೆ ಉದ್ಯೋಗ ಸೃಷ್ಠಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಜವಬ್ದಾರಿಯಾಗಿದೆ. ರಾಜ್ಯ ಸರ್ಕಾರ ಉದ್ಯೋಗ ಸೃಷ್ಠಿಗೆ ಶ್ರಮಿಸುತ್ತಿದೆ ಎಂದು ಹೇಳಿದರು.

    ರಾಜ್ಯದಲ್ಲಿ ವಿದ್ಯುತ್‌ಗೆ ಬಾರೀ ಬೇಡಿಕೆ ಇದ್ದು, ಈ ನಿಟ್ಟಿನಲ್ಲಿ ಇಂಧನ ಇಲಾಖೆ ಕುಸುಮ ಯೋಜನೆ ಸೇರಿದಂತೆ ಇತರೆ ಯೋಜನೆಯಡಿಯಲ್ಲಿ ೧೧೦ ಕೋಟಿ ರೂ. ವೆಚ್ಚದಲ್ಲಿ ೨೫೦೦ ಮೆಗಾ ವ್ಯಾಟ್ ಉತ್ಪಾದನೆಗೆ ಚಾಲನೆ ನೀಡಲಾಗಿದೆ. ಇದರಿಂದ ರಾಜ್ಯದ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

    ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಪತ್ರಿಕಾರಂಗ ಸಮಾಜದ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಸ್ವಾತಂತ್ರ್ಯ ಹೋರಾಟ ದಲ್ಲಿ ಅನೇಕ ಪತ್ರಿಕೆಗಳು ಶಕ್ತಿಮೀರಿ ಶ್ರಮಿಸಿವೆ. ಬ್ರಿಟಿಷರಿಗೆ ಭಯಪಡದೆ ನಿರ್ಭೀತಿಯಾಗಿ ಜನತೆಗೆ ವಿಷಯಗಳನ್ನು ಮುಟ್ಟಿಸುವ ಕೆಲಸವನ್ನು ಪತ್ರಿಕೆಗಳು ಮಾಡಿವೆ ಎಂದ ಅವರು, ಸಮಾಜದ ಅಂಕುಡೊಂಕುಗಳನ್ನು ತಿದ್ದಿತೀಡುವ ಕೆಲಸವನ್ನು ಪತ್ರಿಕೆಗಳು ಮಾಡುತ್ತಿವೆ ಎಂದು ಹೇಳಿದರು.

    ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕಾ ರಂಗ ನಿರ್ಭೀತಿ ಯಿಂದ ಕೆಲಸ ಮಾಡಬೇಕು ಒಂದು ವೇಳೆ ಭೀತಿಯಿಂದ ಕೆಲಸ ಮಾಡಿದರೇ ಪ್ರಜಾಪ್ರಭುತ್ವವೇ ಅಪಾಯಕ್ಕೆ ತಲುಪುತ್ತದೆ. ಆಧುನಿಕ ತಂತ್ರಜ್ಞಾನ, ಸಾಮಾಜಿಕ ಜಾಲತಾಣದಿಂದ ದೂರ ಇದ್ದವರನ್ನು ಹತ್ತಿರ ಮಾಡುತ್ತಿದೆ, ಹತ್ತಿರ ಇದ್ದವರನ್ನು ದೂರ ಮಾಡುತ್ತಿದೆ. ಆಧುನಿಕ ತಂತ್ರಜ್ಞಾನದ ಪ್ರಭಾವ ಪತ್ರಿಕಾ ರಂಗದ ಮೇಲೂ ಬಿದ್ದಿದೆ. ಎಲ್ಲಾ ಸವಾಲುಗಳ ನಡುವೆ ನಿರ್ಭೀತೀಯ, ವಸ್ತುನಿಷ್ಠ, ಸತ್ಯದ ಸುದ್ದಿಗೆ ಆದ್ಯತೆ ಸಿಗಬೇಕು. ಆ ನಿಟ್ಟಿನಲ್ಲಿ ಚಿಂತನೆ ನಡೆಯಬೇಕು ಎಂದರು.

    ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ಇಂದು ಪತ್ರಿಕೆ ಓದುವವರ ಸಂಖ್ಯೆ ಕಡಿಮೆಯಾ ಗಿದೆ. ಪ್ರತಿಯೊಬ್ಬರು ಪತ್ರಿಕೆ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದ ಅವರು, ಪತ್ರಿಕೆಗಳು ಸಮಾಜದ ಕಣ್ಣು ತೆರೆಸುವ ಕೆಲಸ ಮಾಡುತ್ತಿದ್ದು, ವಸ್ತುನಿಷ್ಟ ವರದಿ ಮೂಲಕ ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಎಚ್ಚರಿಸುವ ಕೆಲಸವನ್ನು ಪತ್ರಿಕೆಗಳು ಮಾಡುತ್ತಿವೆ ಎಂದರ.

    ಜಿಲ್ಲಾಧಿಕಾರಿ ಸಿ.ಎನ್.ಮೀನಾನಾಗರಾಜ್ ಮಾತನಾಡಿ, ಜಿಲ್ಲೆಯಲ್ಲಿನ ಕುಗ್ರಾಮಗಳು ಇಂದಿಗೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸಮಸ್ಯೆಗಳನ್ನು ಜಿಲ್ಲಾಡಳಿತದ ಗಮನಕ್ಕೆ ತರುವ ಕೆಲಸವನ್ನು ಪತ್ರಿಕೆಗಳು ಮಾಡುತ್ತಿದ್ದು, ಸಮಸ್ಯೆ ನಿವಾರಣೆಗೆ ಸಹಕಾರಿಯಾಗಿವೆ. ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ಮುಟ್ಟಿಸುವ ಮೂಲಕ ನೆರವಾಗುತ್ತಿವೆ ಎಂದರು.

    ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ರಾಜೇಶ್ ಮಾತನಾಡಿ, ಪತ್ರಕರ್ತರು ಪತ್ರಿಕಾ ಮೌಲ್ಯ, ಸಿದ್ಧಾಂತಗಳ ನಡುವೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು. ಪ್ರೆಸ್‌ಕ್ಲಬ್ ಪ್ರಧಾನ ಕಾರ್ಯದರ್ಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|ವಿಕ್ರಮ್ ಅಮಟೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜೇಗೌಡ ವಿವಿಧ ಸಂಘಸಂಸ್ಥೆಗಳ ಮುಖಂಡರು ಮತ್ತು ಪದಾಧಿಕಾರಿಗಳು ಇದ್ದರು. ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ರಾಜೇಶ್ ಅಧ್ಯಕ್ಷತೆವಹಿಸಿದ್ದರು. ಪ್ರೆಸ್‌ಕ್ಲಬ್ ಉಪಾಧ್ಯಕ್ಷ ಸಿ.ಡಿ.ಚಂದ್ರೇಗೌಡ ಸ್ವಾಗತಿಸಿದರು. ಎ.ಎನ್.ಮೂರ್ತಿ ಪ್ರಾರ್ಥಿಸಿದರು. ಎನ್.ಕೆ.ಗೋಪಿ ನಿರೂಪಿಸಿದರು.

    The fourth arm of democracy is the great contribution of the press to the society

  • ಶಿರವಾಸೆ ಮುಳ್ಳೇಗೌಡರು ಮಾದರಿ ಗ್ರಾಮಕ್ಕೆ ನಾಂದಿ

    ಶಿರವಾಸೆ ಮುಳ್ಳೇಗೌಡರು ಮಾದರಿ ಗ್ರಾಮಕ್ಕೆ ನಾಂದಿ

    ಚಿಕ್ಕಮಗಳೂರು: ಶಿಕ್ಷಣ, ಆರೋಗ್ಯ, ಜನರ ಬದುಕು ಇವುಗಳಿಗೆ ಆದ್ಯತೆಯನ್ನು ಕೊಡುವ ಸರ್ಕಾರ ಮತ್ತು ಜನಪ್ರತಿನಿಧಿ ನೆರವೇರಿಸಿದಾಗ ಮಾತ್ರ ಅಂತವರು ಜನಮಾನಸದಲ್ಲಿ ಉಳಿಯುತ್ತಾರೆಂದು ಶಾಸಕ ಹೆಚ್.ಡಿ.ತಮ್ಮಯ್ಯ ಅಭಿಪ್ರಾಯಿಸಿದರು.

    ಅವರು ಇಂದು ಶಿರವಾಸೆ ವಿವೇಕಾನಂದ ವಿದ್ಯಾಸಂಸ್ಥೆಯ ಸುವರ್ಣ ಮಹೋತ್ಸವ, ಸಂಸ್ಥಾಪಕರ ದಿನಾಚರಣೆ ಶಿವೈಕ್ಯ ಎಸ್.ಬಿ. ಮುಳ್ಳೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಶಾಲೆಯ ನೂತನ ಬಸ್ಸನ್ನು ಉದ್ಘಾಟಿಸಿ ಮಾತನಾಡಿ ಇತಿಹಾಸ ಇರುವ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ವಿವೇಕಾನಂದ ವಿದ್ಯಾಸಂಸ್ಥೆ ಇಂದು ಮಾದರಿಯಾಗಿದೆ. ವಿವಿಧ ಸಂಘ-ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದ ತಾವು ಕನ್ನಡಪರ ಹೋರಾಟಗಳಲ್ಲಿಯೂ ಭಾಗವಹಿಸಿದ್ದ ಪರಿಣಾಮ ಸಾರ್ವಜನಿಕ ಬದುಕಿನಲ್ಲಿ ಯಶಸ್ವಿಯಾಗಲು ಸಹಕಾರಿಯಾಗಿದೆ ಎಂದರು.

    ಶಿರವಾಸೆ ಮುಳ್ಳೇಗೌಡರು ಶಿರವಾಸೆಯನ್ನು ಮಾದರಿ ಗ್ರಾಮವನ್ನಾಗಿ ಮಾಡಿ, ಜನರ ಬದುಕಿಗೆ ಅಗತ್ಯವಾಗಿ ಬೇಕಾಗಿದ್ದ ಆಸ್ಪತ್ರೆ, ಸೊಸೈಟಿ, ಗ್ರಾಮ ಪಂಚಾಯಿತಿ, ಶಾಲೆಯನ್ನು ತೆರೆದು ಶಿಕ್ಷಣಕ್ಕೆ ಆದ್ಯತೆ ನೀಡಿದ ಪರಿಣಾಮ ಅವರ ಜಯಂತಿಯನ್ನು ಆಚರಿಸುತ್ತಿರುವುದು ಅರ್ಥಪೂರ್ಣ ಎಂದು ಬಣ್ಣಿಸಿದರು.
    ವೀರಶೈವ ಮಠಗಳು ಉಚಿತ ಶಿಕ್ಷಣ, ಉಚಿತ ಅನ್ನದಾಸೋಹ ನಡೆಸುವ ಮೂಲಕ ಸಮಾಜದಲ್ಲಿ ಮುಂಚೂಣಿಯಲ್ಲಿವೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರು ೬೦ ಲಕ್ಷ ರೂ ವೆಚ್ಚದಲ್ಲಿ ಶಾಲೆಗೆ ವಾಹನ ಕೊಡುಗೆ ನೀಡಿದ್ದಾರೆ ಎಂದರು.

    ಎಲ್ಲಾ ವರ್ಗದ ನೌಕರರು, ವ್ಯಾಪಾರಸ್ಥರು ಪ್ರತಿಭಟನೆ ಮೂಲಕ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಂಡರೆ ರೈತರು ಕೃಷಿ ಕಾರ್ಯವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರೆ ಪ್ರಪಂಚ ಹಸಿವಿನಿಂದ ಸಾಯಬೇಕಾಗುತ್ತದೆ. ಇದನ್ನು ಮನಗಂಡು ಅನ್ನದಾತ ಬಂಧುಗಳಿಗೆ ಸರ್ಕಾರಗಳು ಶಕ್ತಿ ತುಂಬುವ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.

    ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಶಿಕ್ಷಣ ಹುಲಿಯ ಹಾಲಿದ್ದಂತೆ ಎಂದು ಹೇಳಿದ್ದಾರೆ. ಶ್ರಮಪಟ್ಟು ವಿದ್ಯಾರ್ಥಿಗಳು ಶಿಕ್ಷಣವನ್ನು ಕಲಿತಾಗ ಮಾತ್ರ ಜೀವನದಲ್ಲಿ ಹುಲಿಮರಿಗಳಾಗಿ ಘರ್ಜಿಸುತ್ತೀರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ತಾಲ್ಲೂಕಿನಲ್ಲಿ ನಿವೇಶನ ರಹಿತರಿಗೆ ಕಳೆದ ೨೦ ವರ್ಷಗಳಿಂದ ಮನೆ, ನಿವೇಶನ ನೀಡಲಾಗಿಲ್ಲ ಎಂದು ವಿಷಾಧಿಸಿದ ಅವರು, ಅದಕ್ಕಾಗಿ ಪ್ರತೀ ಪಂಚಾಯಿತಿಯಲ್ಲಿ ೫ ಎಕರೆ ಜಾಗವನ್ನು ಗುರ್ತಿಸಿ ಬಡವರಿಗೆ ಇನ್ನೊಂದು ವರ್ಷದಲ್ಲಿ ಸರ್ಕಾರದ ವತಿಯಿಂದ ಮನೆ, ನಿವೇಶನ ನೀಡುವುದಾಗಿ ಭರವಸೆ ನೀಡಿದರು.

    ಸಂಸ್ಥೆಯ ಅಧ್ಯಕ್ಷ ಬಿ.ಎಂ. ಭೋಜೇಗೌಡ ಮಾತನಾಡಿ, ದಾನಿಗಳು ಸಹಾಯ ಹಸ್ತ ನೀಡಿದರೆ ಶಿಕ್ಷಣ ಸಂಸ್ಥೆ ಯಶಸ್ವಿಯಾಗಿ ನಡೆಯುತ್ತದೆ ಎಂಬುದಕ್ಕೆ ವಿವೇಕಾನಂದ ವಿದ್ಯಾಸಂಸ್ಥೆ ಉದಾಹರಣೆಯಾಗಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ವ್ಯಾಸಂಗ ಮಾಡಿದ ಶಾಲೆಗೆ ಧನಸಹಾಯ ಮಾಡಿದರೆ ಸಂಸ್ಥೆ ಇನ್ನಷ್ಟು ಉತ್ತಮವಾಗಿ ಬೆಳೆಯುತ್ತದೆ ಎಂದು ಹೇಳಿದರು.

    ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ದೆವಣ್ಣಗೌಡ ಮಾತನಾಡಿ ೫೦ ವರ್ಷಗಳ ಹಿಂದೆ ಎಸ್.ಬಿ ಮುಳ್ಳೇಗೌಡ ರವರ ನೇತೃತ್ವದಲ್ಲಿ ದಾನಿಗಳ ಸಹಾಯದಿಂದ ವಿದ್ಯಾಸಂಸ್ಥೆ ಸ್ಥಾಪನೆ ಮಾಡಲಾಯಿತು, ಸಾವಿರಾರು ವಿದ್ಯಾರ್ಥಿಗಳು ನಮ್ಮ ಸಂಸ್ಥೆಯಲ್ಲಿ ವಿದ್ಯಾಭ್ಯಾಸವನ್ನು ಪಡೆದಿದ್ದಾರೆ ಎಂದರು.

    ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ದೆವಣ್ಣಗೌಡ ಮಾತನಾಡಿದರು. ಕಾರ್ಯದರ್ಶಿ ಶ್ರೀಕಾಂತ್ ಸ್ವಾಗತಿಸಿದರು. ವೇದಿಕೆಯಲ್ಲಿ ಬೆಂಗಳೂರಿನ ಮಹಾಚಂದ್ರ ಪ್ರತಿಷ್ಠಾನ ಅಧ್ಯಕ್ಷರಾದ ಬಿ.ಎಂ. ರವಿಶಂಕರ್, ಸೋಮಶೇಖರ್, ಕೆ.ಆರ್. ಅಣ್ಣೇಗೌಡ, ಶ್ರೀಕಾಂತ್ ಶೆಟ್ಟಿ, ಹೆಚ್.ಪಿ. ಮಂಜೇಗೌಡ, ವೆಂಕಟಶೆಟ್ಟಿ, ಲೀಲಾ ಬಾಬುಪೂಜಾರಿ, ಶಾರದಾ ಎಸ್ ಶೆಟ್ಟಿ, ರಘುನಾಥ್, ಮಲ್ಲೇಶ್, ನರೇಂದ್ರ, ಪ್ರಭುಲಿಂಗಶಾಸ್ತ್ರಿ, ಬಿ.ಎನ್ ವಿಶ್ವನಾಥ್, ವಾಸುಪೂಜಾರಿ, ರಾಜು, ರಮೇಶ್, ಯೋಗೀಶ್, ಆದರ್ಶ್, ಪ್ರಸನ್ನ ಮತ್ತಿತರರು ಉಪಸ್ಥಿತರಿದ್ದರು. ವಿಶ್ವನಾಥ್ ಸ್ವಾಗತಿಸಿ, ಪ್ರಸನ್ನ ನಿರೂಪಿಸಿ, ಸುಭಾಶ್ ವಂದಿಸಿದರು.

    Shiravase Mullegowdar was the beginning of a model village

  • ನಗರಸಭೆ ಅಧ್ಯಕ್ಷರಾಗಿ ಶೀಲಾ ದಿನೇಶ್ ಆಯ್ಕೆ ಬಹುತೇಕ ಖಚಿತ

    ನಗರಸಭೆ ಅಧ್ಯಕ್ಷರಾಗಿ ಶೀಲಾ ದಿನೇಶ್ ಆಯ್ಕೆ ಬಹುತೇಕ ಖಚಿತ

    ಚಿಕ್ಕಮಗಳೂರು: ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಜುಲೈ ೫ ರಂದು ಚುನಾವಣೆ ನಡೆಯಲಿದ್ದು, ಜನತಾದಳದ ಬಿ.ಶೀಲಾ ದಿನೇಶ್ ರವರು ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಅಧ್ಯಕ್ಷರಾಗಿದ್ದ ಬಿಜೆಪಿಯ ಸುಜಾತಶಿವಕುಮಾರ್‌ರವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸಂಧಾನ ನಡೆಸಿದ ಬಿಜೆಪಿ ಮತ್ತು ದಳದವರು ಸುಜಾತರವರ ರಾಜೀನಾಮೆ ಅಂಗೀಕಾರವಾದ ಹಿನ್ನೆಲೆಯಲ್ಲಿ ಚುನಾವಣೆಯನ್ನು ಜು.೫ ರಂದು ಶನಿವಾರ ನಿಗದಿಪಡಿಸಲಾಗಿದೆ.

    ಬಿಜೆಪಿ ಮತ್ತು ದಳದ ಮೈತ್ರಿಯಿಂದಾಗಿ ಕೇವಲ ಮೂರು ಸದಸ್ಯರನ್ನು ಹೊಂದಿರುವ ಜನತಾದಳದವರಿಗೆ ಇದರಿಂದಾಗಿ ಭರ್ಜರಿ ಲಾಟರಿ ಹೊಡೆದಂತಾಗಿದೆ. ಕಳೆದ ಇಪ್ಪತ್ತೈದು ವ?ಗಳ ಹಿಂದೆ ನಗರಸಭೆಯ ಅಧಿಕಾರ ಹಿಡಿದಿದ್ದ ಜನತಾದಳಕ್ಕೆ ಬಯಸದೇ ಬಂದ ಭಾಗ್ಯವಾದರೆ. ದಿನೇಶ್ ಕುಟುಂಬದವರು ೧೫ನೇ ವಾರ್ಡಿನಿಂದ ಸತತ ಇಪ್ಪತ್ತೈದು ವ?ಗಳಿಂದ ನಗರಸಭೆಗೆ ಆಯ್ಕೆ ಆಗುತ್ತಿದ್ದಾರೆ. ದಿನೇಶ್ ಮೂರು ಬಾರಿ ನಗರಸಭೆಗೆ ಆಯ್ಕೆಯಾಗುತ್ತಿದ್ದರು. ಇವರ ಸಹೋದರಿ ದ್ರಾಕ್ಷಾಯಿಣಿ ಮತ್ತು ಪ್ರಸ್ತುತ ಬಿ. ಶೀಲಾ ದಿನೇಶ್ ಆಯ್ಕೆಯಾಗಿರುವುದು ವಿಶೇಷ

    ವಾರ್ಡ್‌ನ ಸದಸ್ಯರಾಗಿ ಸದಾ ಕಾಲವೂ ಸೇವೆ ಮಾಡುತ್ತಿರುವುದರಿಂದ ನಗರಸಭೆ ಚುಕ್ಕಾಣಿ ಹಿಡಿಯುವ ಅದೃ? ಒದಗಿಬಂದಿದೆ.
    ೩೦ ತಿಂಗಳ ಅವಧಿಗೆ ಮೊದಲ ೧೦ ತಿಂಗಳ ಅವಧಿಯನ್ನು ಬಿಜೆಪಿಯ ಸುಜಾತ ಶಿವಕುಮಾರ್‌ರವರಿಗೆ ಬಿಟ್ಟುಕೊಡಲಾಗಿದೆ. ಎರಡನೇ ೧೦ ತಿಂಗಳ ಅಧಿಕಾರವನ್ನು ಜೆಡಿಎಸ್‌ಗೆ, ಉಳಿದ ೧೦ ತಿಂಗಳ ಅವಧಿಯನ್ನು ಪುನಃ ಬಿಜೆಪಿಗೆ ಅಧಿಕಾರ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ.

    ವಿಧಾನ ಪರಿಷತ್ ಸದಸ್ಯರಾದ ಸಿ.ಟಿ. ರವಿ ಮತ್ತು ಎಸ್.ಎಲ್. ಭೋಜೇಗೌಡ ಇವರುಗಳ ಸಮ್ಮುಖದಲ್ಲಿ ಮಾತುಕತೆ ನೆಡೆದಿದ್ದು, ಈಗ ಜೆಡಿಎಸ್‌ನಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಇರುವ ಈ ಮೂರು ಅವಧಿಯಲ್ಲಿ ಶೀಲಾದಿನೇಶ್ ಒಬ್ಬರೇ ಮಹಿಳೆ ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಕಚಿತವಾಗಿದೆ.

    ಒಟ್ಟು ೩೫ ಸದಸ್ಯ ಬಲದ ನಗರಸಭೆಯಲ್ಲಿ ಬಿಜೆಪಿಯ ೧೮ ಸದಸ್ಯರಿದ್ದರು. ಮಾಜಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಅವರನ್ನು ಬಿಜೆಪಿಯಿಂದ ಅಮಾನತು ಮಾಡಲಾಗಿದ್ದು, ಇದರಿಂದಾಗಿ ಬಿಜೆಪಿಯ ಸಂಖ್ಯೆ ೧೭ಕ್ಕೆ ಕುಸಿದಿದೆ. ಜೆಡಿಎಸ್‌ನ ಇಬ್ಬರು ಮತ್ತು ಜೆಡಿಎಸ್ ಬೆಂಬಲಿತ ಒಬ್ಬರು ಸೇರಿ ಒಟ್ಟು ೨೦ ಸದಸ್ಯ ಬಲವನ್ನು ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಹೊಂದಿದೆ.

    ಬಿಜೆಪಿ ೧೭ ಸದಸ್ಯ ಬಲ ಇದ್ದರೂ ಒಪ್ಪಂದದಂತೆ ಜೆಡಿಎಸ್‌ಗೆ ಅಧಿಕಾರ ಬಿಟ್ಟುಕೊಡುತ್ತಿದೆ. ಬಿಜೆಪಿ-ಜೆಡಿಎಸ್ ರಾಷ್ಟ್ರೀಯ ಮಟ್ಟದಲ್ಲಿ ಹೊಂದಾಣಿಕೆಯಾಗಿ ಒಗ್ಗಟ್ಟಾಗಿರುವುದರಿಂದ ಕಾಂಗ್ರೆಸ್ ಇದರ ಲಾಭ ಪಡೆಯಲು ಮುಂದಾಗಿಲ್ಲ, ಶಾಸಕ ಹೆಚ್.ಡಿ. ತಮ್ಮಯ್ಯ ಸೇರಿ ಕಾಂಗ್ರೆಸ್‌ನ ೧೨ ಸದಸ್ಯರು, ಎಸ್‌ಡಿಪಿಐನ ಒಬ್ಬರು, ಪಕ್ಷೇತರರು ಒಬ್ಬರು, ಬಿಜೆಪಿಯಿಂದ ಅಮಾನತುಗೊಂಡಿರುವ ಒಬ್ಬರು ಸೇರಿ ಒಟ್ಟು ೧೬ ಮತಗಳ ಬಲ ಇದೆ.

    Sheila Dinesh’s election as Municipal Council President is almost certain

  • ಸಂಸ್ಕಾರದ ಜೊತೆಗೆ ವಿಶೇಷ ಜ್ಞಾನ ಬಿತ್ತುವುದೇ ಅಕ್ಷರಾಭ್ಯಾಸ

    ಸಂಸ್ಕಾರದ ಜೊತೆಗೆ ವಿಶೇಷ ಜ್ಞಾನ ಬಿತ್ತುವುದೇ ಅಕ್ಷರಾಭ್ಯಾಸ

    ಚಿಕ್ಕಮಗಳೂರು: ಮಕ್ಕಳಿಗೆ ಸಂಸ್ಕಾರವನ್ನು ಕೊಡುವ ಜೊತೆಗೆ ವಿಶೇಷ ಜ್ಞಾನವನ್ನು ಬಿತ್ತುವ ಕಾರ್ಯಕ್ರಮ ಅಕ್ಷರ ಅಭ್ಯಾಸ ಎಂದು ಆದಿಚುಂಚನಗಿರಿ ಶೃಂಗೇರಿ ಶಾಖಾಮಠದ ಶ್ರೀ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.

    ಅವರು ಇಂದು ನಗರದ ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಜೆವಿಎಸ್ ಶಾಲೆ ವತಿಯಿಂದ ಏರ್ಪಡಿಸಲಾಗಿದ್ದ ನರ್ಸರಿ, ಪ್ರೈಮರಿ, ಹೈಯರ್ ಪ್ರೈಮರಿ ಮತ್ತು ಜೆವಿಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ನಿಮ್ಮ ಮಗುವಿನ ಭದ್ರ ಬುನಾದಿಯ ಪ್ರಾರಂಭ ಅಕ್ಷರ ಅಭ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

    ಜಿಲ್ಲಾ ಒಕ್ಕಲಿಗರ ಸಂಘ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಆ ಮೂಲಕ ವಿದ್ಯಾರ್ಥಿಗಳಲ್ಲಿ ಶಿಕ್ಷಣ ಮತ್ತು ಸಂಸ್ಕಾರ ಕೊಡುವ ಕಾರ್ಯವನ್ನು ನಡೆಸುತ್ತಾ ಬರುತ್ತಿದೆ ಎಂದು ಶ್ಲಾಘಿಸಿ ಜ್ಞಾನಕ್ಕೆ ಧರ್ಮ, ಜಾತಿ ಇಲ್ಲ, ನೀರು, ಗಾಳಿ, ಭೂಮಿ, ಆಕಾಶ, ಅಗ್ನಿ ಈ ಪಂಚಭೂತಗಳಿಗೂ ಧರ್ಮ-ಜಾತಿ ಇಲ್ಲ. ಅಕ್ಷರಕ್ಕೂ ಯಾವುದೇ ಜಾತಿ-ಧರ್ಮದ ಹಂಗು ಇಲ್ಲ, ಸಂಸ್ಕಾರ ಮತ್ತು ಸಂಸ್ಕೃತಿ ಮೂಲಕ ಹರಿಶಿಣ ಕೊಂಬಿನಿಂದ ಪೂರ್ವಿಕರು ಅಕ್ಷರಾಭ್ಯಾಸ ಮಾಡುತ್ತಾ ಬಂದಿರುವುದೇ ಮುಂದುವರೆದ ಈ ಅಕ್ಷರಭ್ಯಾಸ. ಮಕ್ಕಳಲ್ಲಿ ಒಳ್ಳೆಯ ಭಾವನೆ ಬೆಳೆಸಿ ಶಿಕ್ಷಣವಂತರಾದಾಗ ಪೋಷಕರ ಶ್ರಮ ಸಾರ್ಥಕ ಎಂದು ಹೇಳಿದರು.

    ವಿದ್ಯಾರ್ಥಿಗಳಿಗೆ ಉತ್ತಮವಾದ ಶಿಕ್ಷಣ ಕೊಟ್ಟಾಗ ಸಂಸ್ಕಾರ-ಸಂಸ್ಕೃತಿ ಬೆಳೆದು ಉತ್ತಮ ಸಮಾಜ ಕಟ್ಟುವ ವ್ಯಕ್ತಿಯಾಗಿ ರೂಪುಗೊಳ್ಳುತ್ತಾರೆ. ಹರಿಶಿಣ ಕೊಂಬಿನಲ್ಲಿ ಓಂಕಾರ ಬರೆಸುತ್ತಿರುವುದು ಚೈತನ್ಯ ಪ್ರಣವ ಸ್ವರೂಪಿಯಾಗಿದೆ ಎಂದರು.

    ಹರಿಶಿಣ ಭಗವಂತನ ಸೃಷ್ಟಿ, ಭೂಮಿಯಿಂದ ಬಂದ ಇದು ಅತ್ಯಂತ ಶ್ರೇಷ್ಠವಾಗಿದ್ದು, ಅದರ ಮೂಲಕ ಅಕ್ಷರಾಭ್ಯಾಸ ಮಾಡಿಸುತ್ತಿರುವುದು ವಿದ್ಯಾರ್ಥಿಗಳ ಮುಂದಿನ ಜೀವನ ಹಸನ್ಮುಖಿಯಾಗಿ ಭವಿಷ್ಯ ರೂಪಿಸಲು ಸಹಕಾರಿಯಾಗಿದೆ ಎಂದು ವಿವರಿಸಿದರು.

    ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಖರ್ ಮಾತನಾಡಿ, ಇಂದು ನಡೆಸುತ್ತಿರುವ ಅಕ್ಷರಾಭ್ಯಾಸ ಮಕ್ಕಳ ಜೀವನದಲ್ಲಿ ಮರೆಯಲಾಗದ ಕ್ಷಣ. ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ವಿದ್ಯಾರ್ಥಿಗಳ ಜೀವನ ಉಜ್ವಲವಾಗಿ ವಿದ್ಯೆ, ಬುದ್ದಿ, ಸಂಸ್ಕಾರ, ಸಂಸ್ಕೃತಿ ಈ ನಾಡಿನ ಬಗ್ಗೆ ಗೌರವವನ್ನು ಬೆಳೆಸಲಿ ಎಂದು ಹಾರೈಸಿದರು.

    ಜೆವಿಎಸ್ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ರಾಷ್ಟ್ರಕಟ್ಟುವ ಕೆಲಸಕ್ಕೆ ಮುಂದಾಗಲಿ, ಈ ಶಾಲೆಯಲ್ಲಿ ಉತ್ತಮವಾದ ಶಿಕ್ಷಕ ವೃಂದ ಇದ್ದು, ಜೊತೆಗೆ ತಾಯಂದಿರ ಪಾತ್ರ ಅತೀ ಮುಖ್ಯ ಎಂದು ಹೇಳಿದರು. ಹಿರಿಯರನ್ನು ಗೌರವಿಸುವುದನ್ನು ಪೋಷಕರು ಮಕ್ಕಳಲ್ಲಿ ಮನವರಿಕೆ ಮಾಡುವ ಜೊತೆಗೆ ವಿವಿಧತೆಯಲ್ಲಿ ಏಕತೆ-ಐಕ್ಯತೆಯನ್ನು ಹೊಂದಿರುವ ಭಾರತದಲ್ಲಿ ಹಿಂದೂ-ಮುಸ್ಲಿಂ-ಕ್ರೈಸ್ತರು ಈ ದೇಶದ ಬೆನ್ನೆಲುಬು ಎಂದರು.

    ಎಲ್ಲಾ ಧರ್ಮಗಳನ್ನು ಗೌರವಿಸುವಂತೆ ಜೆವಿಎಸ್ ಶಾಲೆಯನ್ನು ಜಿಲ್ಲಾ ಒಕ್ಕಲಿಗರ ಸಂಘ ನಡೆಸುತ್ತಿದೆ. ವಿದ್ಯಾರ್ಥಿಗಳು ಕೇವಲ ಶಿಕ್ಷಣಕ್ಕೆ ಸೀಮಿತರಾಗದೆ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸುವಂತಾಗಬೇಕು, ದೈರ್ಯಶಾಲಿಗಳಾಗಿ ನಾಗಲೋಟದಲ್ಲಿ ಓಡುತ್ತಿರುವ ಜಗತ್ತಿನಲ್ಲಿ ಎಲ್ಲಾ ರೀತಿಯ ಕೌಶಲ್ಯಗಳನ್ನು ಕಲಿಯುವುದು ಅಗತ್ಯ ಎಂದರು.

    ಪ್ರಾಸ್ತಾವಿಕವಾಗಿ ಮಾತನಾಡಿದ ವಕೀಲ ಎಸ್.ಎಸ್. ವೆಂಕಟೇಶ್ ಇದು ವಿಶಿಷ್ಟ, ವಿನೂತನ ಮಾದರಿಯಾದ ಕಾರ್ಯಕ್ರಮವನ್ನು ಕಳೆದ ನಾಲ್ಕು ವರ್ಷಗಳಿಂದ ಜೆವಿಎಸ್ ಶಾಲೆ ನಡೆಸುತ್ತಾ ಬರುತ್ತಿದೆ ಎಂದರು. ಹಿಂದೆ ಗುರುಕುಲಗಳಲ್ಲಿ ಅಕ್ಷರಾಭ್ಯಾಸ ಮಾಡಿಸುತ್ತಿದ್ದರು, ನಂತರದ ದಿನಗಳಲ್ಲಿ ಆಧುನಿಕ ಶಿಕ್ಷಣವಾಗಿ ಮಾರ್ಪಟ್ಟಿತ್ತು. ಆದರೆ, ಸಂಸ್ಕೃತಿಯ ಮೂಲ ಬೇರು ಮರೆಯಬಾರದೆಂಬುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶ ಎಂದು ಹೇಳಿದರು.

    ಶಿಕ್ಷಣ, ಸಂಸ್ಕಾರ ಒಂದು ನಾಣ್ಯದ ಎರಡು ಮುಖಗಳು, ಮಕ್ಕಳಿಗೆ ಶಿಕ್ಷಣ ಕೊಟ್ಟರೆ ಸಾಲದು, ಅದರೊಟ್ಟಿಗೆ ಸಂಸ್ಕಾರವನ್ನೂ ಕಲಿಸಬೇಕು, ಈ ನಿಟ್ಟಿನಲ್ಲಿ ಜೆವಿಎಸ್ ಶಿಕ್ಷಣ ಸಂಸ್ಥೆ ನಡೆಸುತ್ತಿರುವುದನ್ನು ಶ್ಲಾಘಿಸಿದರು. ವಿಜ್ಞಾನ ಎಷ್ಟೇ ಮುಂದುವರೆದರೂ ವಿಶ್ವದಲ್ಲಿ ಭಾರತದ ಸಂಸ್ಕೃತಿಗೆ ಅದರದೇ ಆದ ಅತೀ ದೊಡ್ಡ ಮಹತ್ವವಿದೆ, ಅದನ್ನು ಮರೆಯಬಾರದು. ಆ ಸಂಸ್ಕೃತಿ ಇದ್ದಾಗ ನಮ್ಮ ಮಕ್ಕಳು ಸಮರ್ಪಕವಾಗಿ ಅಭಿವೃದ್ಧಿ ಹೊಂದುತ್ತಾರೆಂದು ಅಭಿಪ್ರಾಯಿಸಿದರು.

    ಸಂಸ್ಕೃತಿಯ ಬೇರು ಗಟ್ಟಿಯಾದಾಗ ಮಾತ್ರ ನಾಗರಿಕತೆ ಹೆಮ್ಮರವಾಗಿ ಬೆಳೆಯಲು ಸಾಧ್ಯ. ಇಂತಹ ಕಾರ್ಯಕ್ರಮಗಳು ಮಕ್ಕಳ ಚಿಕ್ಕ ವಯಸ್ಸಿನಲ್ಲಿಯೇ ಸಂಸ್ಕೃತಿ ಬಿತ್ತಲು ಸಹಕಾರಿಯಾಗಲಿದೆ ಎಂದು ಹೇಳಿದರು.

    ವೇದಿಕೆಯಲ್ಲಿ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಟಿ.ಡಿ. ಮಲ್ಲೇಶ್, ಕಾರ್ಯದರ್ಶಿ ಎಂ.ಎಸ್. ಪ್ರದೀಪ್ ಕುಮಾರ್, ಸಹ ಕಾರ್ಯದರ್ಶಿ ರತೀಶ್ ಕುಮಾರ್, ನಿರ್ದೇಶಕರುಗಳಾದ ಬಿ.ಸಿ. ಲೋಕಪ್ಪಗೌಡ, ಹರಿಣಾಕ್ಷಿ ನಾಗರಾಜ್, ಪವಿತ್ರರತೀಶ್, ಪಿ.ರಾಜು, ಪ್ರಕಾಶ್, ಸಲಹಸಮಿತಿ ಸದಸ್ಯರಾದ ಹೆಚ್.ಜಿ. ಸುರೇಂದ್ರ, ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ರೀನಾ ಸುಚೇಂದ್ರ, ಸಿಇಓ ಕುಳ್ಳೇಗೌಡ, ಪ್ರಾಂಶುಪಾಲ ವಿಜಿತ್, ವ್ಯವಸ್ಥಾಪಕರಾದ ತೇಜಸ್ ಶಿಕ್ಷಕಿಯರಾದ ಪ್ರಮೀಳಾ ಲೀಲಾವತಿ ಉಪಸ್ಥಿತರಿದ್ದರು.ಮೊದಲಿಗೆ ಶಿಕ್ಷಕಿ ನಾಗವೇಣಿ ಸ್ವಾಗತಿಸಿ ರತೀಶ್ ಕುಮಾರ್ ವಂದಿಸಿದರು.

    Literacy is the sowing of special knowledge along with culture.

  • ಶ್ರೀ ರಂಭಾಪುರಿ ಜಗದ್ಗುರುಗಳವರ ಜೂನ್ ಮಾಹೆಯ ಪ್ರವಾಸ ವಿವರ

    ಶ್ರೀ ರಂಭಾಪುರಿ ಜಗದ್ಗುರುಗಳವರ ಜೂನ್ ಮಾಹೆಯ ಪ್ರವಾಸ ವಿವರ

    ಬಾಳೆಹೊನ್ನೂರು: ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳವರ ೨೦೨೫ನೇ ಸಾಲಿನ ಜುಲೈ ಮತ್ತು ಆಗಸ್ಟ ಮಾಹೆಯ ಪ್ರವಾಸ ಕಾರ್ಯಕ್ರಮ ಈ ಕೆಳಗಿನಂತಿದೆ ಎಂದು ಶ್ರೀ ಜಗದ್ಗುರು ರಂಭಾಪುರಿ ಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್.ಬಾಳನಗೌಡ್ರ ತಿಳಿಸಿದ್ದಾರೆ.

    ಜುಲೈ ೬ರ ವರೆಗೆ ವಿವಿಧೆಡೆಯಲ್ಲಿ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮ ಸಮಾರಂಭ ನಡೆಸಲಿದ್ದು ೨ರಿಂದ ೪ ರವರೆಗೆ ಬೆಂಗಳೂರಿನ ವಿಜಯನಗರದಲ್ಲಿ ಇಷ್ಟಲಿಂಗ ಮಹಾಪೂಜಾ ನಡೆಸುವರು. ೭ರಂದು ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕ ಚಿಪ್ಪಲಕಟ್ಟಿ ಗ್ರಾಮದಲ್ಲಿ ಹಿರೇಮಠ ಕಲ್ಲಯ್ಯನವರ ಷಷ್ಟ್ಯಬ್ಧಿ ಸಮಾರಂಭ, ೮ರಂದು ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕ ಬುಕ್ಕಾಂಬುಧಿ ಕ್ಷೇತ್ರದಲ್ಲಿ ಲಿಂ. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳವರ ಶುಭಾಗಮನ ಶತಮಾನೋತ್ಸವದ ಪೂರ್ವಭಾವಿ ಸಮಾವೇಶದ ಸಾನ್ನಿಧ್ಯ ವಹಿಸುವರು.

    ಜುಲೈ ೧೦ರಂದು ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಗುರು ಪೂರ್ಣಿಮಾ ನಿಮಿತ್ಯ ವಾಸ್ತವ್ಯವಿದ್ದು ಭಕ್ತಾದಿಗಳಿಗೆ ದರ್ಶನಾಶೀರ್ವಾದ ನೀಡುವರು. ಜುಲೈ ೧೩ರಂದು ಚನ್ನರಾಯಪಟ್ಟಣ ತಾಲೂಕ ನಾಗರನವಿಲೆಯಲ್ಲಿ ಶ್ರೀ ಜಗದುರು ರೇಣುಕ ಪೂಜಾ ಮಂಟಪ ಸಮರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸುವರು. ಜುಲೈ ೧೪ರಿಂದ ೧೬ರ ವರೆಗೆ ಹರಿಹರ ನಗರದಲ್ಲಿ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮ ಸಮಾರಂಭ, ೧೮ರಿಂದ ೨೨ರ ವರೆಗೆ ದಾವಣಗೆರೆ ಮಹಾನಗರದಲ್ಲಿ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮ ಸಮಾರಂಭ ನಡೆಸುವರು.

    ಜುಲೈ ೨೪ರಂದು ಚನ್ನಗಿರಿ ತಾಲೂಕ ತಾವರೆಕೆರೆ ಶಿಲಾಮಠದಲ್ಲಿ ಲಿಂ. ಶ್ರೀ ಸಿದ್ಧಲಿಂಗ ಶಿವಾಚಾರ್ಯರ ಪುಣ್ಯ ಸ್ಮರಣೋತ್ಸವ ಸಮಾರಂಭ, ಜುಲೈ ೨೫ರಿಂದ ಆಗಸ್ಟ್ ೨೩ರ ವರೆಗೆ ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ೩೪ನೇ ವರ್ಷದ ಶ್ರಾವಣ ಮಾಸದ ಇಷ್ಟಲಿಂಗ ಪೂಜಾನುಷ್ಠಾನ ಹಾಗೂ ಪುರಾಣ ಪ್ರವಚನ ಸಮಾರಂಭದ ಸಾನ್ನಿದ್ಯ ವಹಿಸುವರು.

    ಜುಲೈ ೨೧ ಮತ್ತು ೨೨ರಂದು ದಾವಣಗೆರೆಯಲ್ಲಿ ಶ್ರೀಮದ್ವೀರಶೈವ ಮಹಾಮತ ಸಂಸ್ಥಾಪನಾಚಾರ್ಯ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯ ಪರಂಪರಾನುಗತ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನದಲ್ಲಿ ಪಾಲ್ಗೊಳ್ಳುವರು. ಶ್ರೀ ರಂಭಾಪುರಿ ಜಗದ್ಗುರುಗಳವರ ಧಾರ್ಮಿಕ ಕಾರ್ಯಕ್ರಮಗಳ ಲಾಭವನ್ನು ಸಮಸ್ತ ಜನತೆ ಪಡೆದುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.

    Sri Rambhapuri Jagadguru’s June tour details

  • ಶಿಕ್ಷಣ ಪಡೆದ ಶಾಲೆಯ ಋಣ ತೀರಿಸಿದ ಶಾಸಕ ತಮ್ಮಯ್ಯ

    ಶಿಕ್ಷಣ ಪಡೆದ ಶಾಲೆಯ ಋಣ ತೀರಿಸಿದ ಶಾಸಕ ತಮ್ಮಯ್ಯ

    ಚಿಕ್ಕಮಗಳೂರು: ಚಿಕ್ಕಮಗಳೂರು ನಗರ ಭಾಗವಾದ ಹಿರೇಮಗಳೂರಿನಲ್ಲಿ ಜೂ.೨೧ ರಂದು ಸಂಭ್ರಮವೋ ಸಂಭ್ರಮ. ಕಾರಣ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಹೆಚ್.ಡಿ.ತಮ್ಮಯ್ಯನವರ ಹುಟ್ಟುಹಬ್ಬ ಹಿರೇಮಗಳೂರಿನವರೇ ಆದ ಅವರು, ತಾನು ವ್ಯಾಸಂಗ ಮಾಡಿದ ಶತಮಾನದ ಅಂಚಿನಲ್ಲಿರುವ ಶಾಲೆಗೆ ಹೊಸಕಟ್ಟಡವನ್ನು ಲೋಕಾರ್ಪಣೆಗೊಳಿಸಿದ ಸಂಭ್ರಮದಲ್ಲಿ ಇಡೀ ಊರಿಗೆ ಊರೇ ಸಂತಸದಲ್ಲಿ ಮುಳುಗಿತ್ತು. ಕ್ಷೇತ್ರದ ಅಭಿಮಾನಿಗಳು, ಹಿರಿಯರು ಕೂಡ ಇಲ್ಲಿಗೆ ಬಂದು ಆಶಿರ್ವದಿಸುತ್ತಿದ್ದ ಆ ಸಮಯ ಹಬ್ಬದೋಪಾದಿಯಲ್ಲಿ ಕಂಗೊಳಿಸುತ್ತಿತ್ತು.

    ಹಿರೇಮಗಳೂರು ಎಂದಾ ಕ್ಷಣ ಇತಿಹಾಸ ಮತ್ತು ಪ್ರಸ್ತುತಗಳನ್ನು ನೆನಪಿಸಿಕೊಳ್ಳಬೇಕು. ಸಖರಾಯಪಟ್ಟಣದ ರಾಜರುಕ್ಮಾಂಗದವರು ತನ್ನ ಹಿರಿಯಮಗಳನ್ನು ಹಿರೇಮಗಳೂರಿಗೂ, ಕಿರಿಯಮಗಳನ್ನು ಚಿಕ್ಕಮಗಳೂರಿಗೂ ಕೊಟ್ಟು ಮದುವೆ ಮಾಡಿದ ಕಾರಣಕ್ಕೆ ಹಿರೇಮಗಳೂರು ಮತ್ತು ಚಿಕ್ಕಮಗಳೂರೆಂದು ಕರೆಯಲಾಗುತ್ತಿದೆ ಎಂಬ ಐತಿಹ್ಯವಿದೆ. ಕೋದಂಡ ರಾಮನ ದೇವಸ್ಥಾನ ನಾಡಿನ ಜನರನ್ನು ಕೈಬೀಸಿ ಕರೆಯುತ್ತದೆ. ಇದರ ಪೂಜಾರಿ ಕಣ್ಣನ್ ಮಾಮ ಕನ್ನಡದ ಪೂಜಾರಿ ಎಂದೇ ಪ್ರಖ್ಯಾತಿಗೊಂಡಿರುವುದು ಪ್ರಸ್ತುತ ವಿಶೇಷ.

    ಈ ಊರಿನಲ್ಲಿ ಕೃಷಿಕ ಕುಟುಂಬದಲ್ಲಿ ಜನಿಸಿದ ತಮ್ಮಯ್ಯ ಪೂರ್ವ ಶಿಕ್ಷಣವನ್ನು ತನ್ನೂರಿನ ೧೯೩೬ ರಲ್ಲಿ ಆರಂಭವಾದ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ೧೯೭೪-೭೫ನೇ ಸಾಲಿನಲ್ಲಿ ಓದಲು ಆರಂಭಿಸುತ್ತಾರೆ. ಶಾಲೆಯ ದಾಖಲೆಯ ಪ್ರಕಾರ ಅವರ ನೊಂದಣಿ ಸಂಖ್ಯೆ ೦೨ ಆಗಿರುತ್ತದೆ. ಈ ಶಾಲೆ ಸುಮಾರು ೦೨ ಎಕರೆ ವಿಸ್ತೀರ್ಣವಿರುವ ಹಿರೇಮಗಳೂರಿನ ಮುಖ್ಯರಸ್ತೆಗೆ ಹೊಂದಿಕೊಂಡಿದೆ. ಹಳೆಯ ಕಟ್ಟಡ ಬಹಳ ಶಿಥಿಲಗೊಂಡಿತ್ತು. ಕಾಂಪೌಂಡ್ ಇಲ್ಲದೆ ಶಾಲೆಗೆ ಭಂಗ ತರುತ್ತಿತ್ತು. ಹಲವಾರು ಎಡರು ತೊಡರುಗಳೊಂದಿಗೆ ಇದುವರೆಗೆ ದುಡಿದ ಶಿಕ್ಷಕರು ಮತ್ತು ಊರಿನವರ ಸಹಕಾರದಿಂದ ಶಾಲೆಯ ಜಾಗ ಹಾಗೆಯೇ ಉಳಿದಿದ್ದು ವಿಶೇಷ

    ಶಾಸಕರಾದ ತಮ್ಮಯ್ಯನವರಿಗೆ ಸ್ವಾಭಾವಿಕವಾಗಿ ಹುಟ್ಟೂರು ಅಭಿವೃದ್ಧಿ ಅನಿವಾರ್ಯವೆನಿಸದೆ ಇರಲಾರದು. ಈ ಹಿಂದೆ ನಗರಸಭೆ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಹಾಗೂ ಅಧ್ಯಕ್ಷರಾಗಿ ಊರಿನ ರಸ್ತೆ, ಚರಂಡಿ, ಯಾತ್ರಿ ನಿವಾಸ ಮುಂತಾದ ಚಟಿವಟಿಕೆಗಳೊಂದಿಗೆ ಎಲ್ಲರ ಮನೆಯ ಮಗನಂತೆ ಪ್ರೀತಿ ಔದಾರ್ಯಗಳಿಂದ ಇದ್ದವರಿಗೆ ನೆನಪಾದದ್ದು ತಾನು ಓದಿದ ಶಾಲೆ. ಅತ್ಯಂತ ದುರಸ್ಥಿಗೊಂಡಿರುವ ಶಾಲೆಗೆ ಕಾಯಕಲ್ಪ ಕೊಡಬೇಕೆಂದು ಆಲೋಚನೆ ಬಂದಿದ್ದು ೨೦೨೫ ರ ಆರಂಭದಲ್ಲಿ. ಕಟ್ಟಡವನ್ನು ಸಂಪೂರ್ಣ ಕೆಡವಿ ಹೊಸಕಟ್ಟಡ ನಿರ್ಮಿಸಲು ಯೋಜನೆ ರೂಪಿಸಿದರು.

    ಕೋಟಿ ರೂಪಾಯಿಗಳನ್ನು ಸರ್ಕಾರದಿಂದ ತಂದು ಹೊಸ ಕಟ್ಟಡ ನಿರ್ಮಾಣ ಕ?ದ ಕೆಲಸ. ಹೀಗಾಗಿ ದುರಸ್ಥಿಗೆ ಮುಂದಾಗಬೇಕೆಂಬ ಆಲೋಚನೆಯಲ್ಲಿದ್ದವರಿಗೆ ಹೊಳೆದದ್ದು ಹೆಸರೇಳಲು ಇಚ್ಚಿಸದ ಆಮಿತ್ರನ ಸಹಕಾರದ ಮಾತು ಹಿಂದೆ ಸಹಾಯ ಪಡೆದುಕೊಂಡಿದ್ದ ಸ್ನೇಹಿತರೊಬ್ಬರು ಶಾಸಕರಿಗೆ ಋಣ ತೀರಿಸಲು ತವಕದಲ್ಲಿದ್ದರು. ಇದನ್ನು ಸದುಪಯೋಗಪಡಿಸಿಕೊಂಡ ತಮ್ಮಯ್ಯನವರು ಅವರ ಸಿ.ಎಸ್.ಆರ್. ಫಂಡ್ನಲ್ಲಿ ಶಾಲೆ ಕಟ್ಟಲು ಮುಂದಾದರು.

    ಬಹಳ ಆಶ್ಚರ್ಯವೆಂದರೆ ಕೇವಲ ಮೂರೇ ತಿಂಗಳಲ್ಲಿ ಹೊಸ ೬ ಕೊಠಡಿಗಳು, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ, ಕಾಂಪೌಂಡ್ ಎಲ್ಲವೂ ಅಚ್ಚುಕಟ್ಟಾಗಿ ನಿರ್ಮಾಣಗೊಂಡಿವೆ. ವಿಶೇ?ವೆಂದರೆ ನೀರಿನನಲ್ಲಿ, ಶೌಚಾಲಯದ ಸಲಕರಣೆಗಳೆಲ್ಲಾ ಪ್ರತಿಷ್ಠಿತ ಜಾಗ್ವಾರ್ ಕಂಪನಿಗೆ ಸೇರಿದ್ದವಾಗಿವೆ. ಶಾಲೆಯ ಎತ್ತರದ ಅಚ್ಚುಕಟ್ಟಾದ ಚಾವಣಿ, ನೆಲಹಾಸಿಗೆ, ವಿಶಾಲ ಕೊಠಡಿಗಳು ಅಬ್ಬಾ ಇದೆಲ್ಲಾ ಸಾಧ್ಯವೇ ಸೋಜಿಗ ಅನಿಸುತ್ತದೆ ಆದರೂ ಸತ್ಯ.

    ಪ್ರಸ್ತುತ ೮೧ ಮಕ್ಕಳು ೧ ರಿಂದ ೭ನೇ ತರಗತಿವರೆಗೆ ಶಿಕ್ಷಣ ಪಡೆಯುತ್ತಿದ್ದಾರೆ. ೫ ಶಿಕ್ಷಕರು ಇದ್ದಾರೆ. ಇನ್ನುಮುಂದೆ ಹೆಚ್ಚು ಮಕ್ಕಳನ್ನು ಆಕರ್ಷಿಸುತ್ತದೆ ಎನ್ನುವ ಮುಖ್ಯ ಶಿಕ್ಷಕಿ ಶಿವಮ್ಮ, ಮುಂದಿನ ದಿನಗಳಲ್ಲಿ ಎಲ್‌ಕೆಜಿ-ಯುಕೆಜಿ ಆರಂಭಿಸಬೇಕು ಎನ್ನುತ್ತಾರೆ.
    ಬೋರ್ವೆಲ್, ಕಲ್ಲುಬೆಂಚು, ದಾಸೋಹ ಕೊಠಡಿ ದುರಸ್ಥಿ, ಗಾರ್ಡನ್‌ಗಳು ನಮ್ಮ ಮುಂದಿರುವ ಸವಾಲುಗಳು. ಇದೆಲ್ಲಾ ಮಾಡಿರುವ ಶಾಸಕರು ಮತ್ತು ದಾನಿಗಳು ಇವೆಲ್ಲವನ್ನೂ ಒದಗಿಸುತ್ತಾರೆ ಎಂದು ಆಶಯ ವ್ಯಕ್ತಪಡಿಸಿದ ಶಿಕ್ಷಕಿ, ಜಿಲ್ಲಾನೌಕರರ ಸಂಘದ ಉಪಾಧ್ಯಕ್ಷೆ ವಿಲ್ಮಾ ಅವರು ಇದೆಲ್ಲಾ ಕನಸಿನಂತೆ ನಡೆದುಹೋಯಿತು ಎಂದು ಹ? ವ್ಯಕ್ತಪಡಿಸುತ್ತಾರೆ.

    ನಾನು ಓದಿದಶಾಲೆಯನ್ನು ನನಗೆ ಅವಕಾ ಮತ್ತು ಅಧಿಕಾರಸಿಕ್ಕಾಗಲೂ ಸರಿಪಡಿಸಿದ್ದರೆಹೇಗೆ, ಮನೆಗೆದ್ದು ಮಾರುಗೆಲ್ಲು ಅನ್ನುತ್ತಾರೆ ಹಿರಿಯರು. ಆ ಕೆಲಸಮಾಡಿದ್ದೇನೆ ಎನ್ನುತ್ತಾರೆ ತಮ್ಮಯ್ಯ. ಕ್ಷೇತ್ರದಲ್ಲಿ ಕೂಡ ನನ್ನ ಕೆಲಸ ಹೀಗೆಯೆ ಮುಂದುವರೆಯುತ್ತದೆ ಎನ್ನುವ ಅವರು ಸಿ.ಎಸ್.ಆರ್. ಫಂಡ್ ನೀಡಿದ ಗೆಳೆಯರ ಹೆಸರನ್ನು ಬಹಿರಂಗಪಡಿಸದೆ ಮತ್ತೊಮ್ಮೆ ಅವರಿಗೆ ಕೃತಜ್ಞತೆ ಹೇಳುವುದನ್ನು ಮರೆಯಲಿಲ್ಲ.

    MLA Thammayya pays off the debt of the school he studied at

  • ಜು.11 ರಂದು ಚಿಕ್ಕಮಗಳೂರು-ತಿರುಪತಿ ರೈಲಿಗೆ ಸಚಿವರಿಂದ ಚಾಲನೆ

    ಜು.11 ರಂದು ಚಿಕ್ಕಮಗಳೂರು-ತಿರುಪತಿ ರೈಲಿಗೆ ಸಚಿವರಿಂದ ಚಾಲನೆ

    ಚಿಕ್ಕಮಗಳೂರು: ಚಿಕ್ಕಮಗಳೂರಿನಿಂದ ತಿರುಪತಿ, ತಿರುಪತಿಯಿಂದ ಚಿಕ್ಕಮಗಳೂರು ನಡುವೆ ಸಂಚರಿಸುವ ರೈಲಿಗೆ ಜು.೧೧ ರಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಚಿಕ್ಕಮಗಳೂರಿನ ರೈಲು ನಿಲ್ದಾಣದಲ್ಲಿ ಹಸಿರುವ ನಿಶಾನೆ ನೀಡಲಿದ್ದಾರೆ ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

    ದೆಹಲಿಯ ಕಚೇರಿಯಲ್ಲಿ ಸಚಿವ ವಿ.ಸೋಮಣ್ಣ ಅವರನ್ನು ಭೇಟಿ ಚಿಕ್ಕಮಗಳೂರಿನಿಂದ ತಿರುಪತಿ, ತಿರುಪತಿಯಿಂದ ಚಿಕ್ಕಮಗಳೂರು ನಡುವೆ ರೈಲು ಸಂಚಾರಕ್ಕೆ ಅನುಮತಿ ದೊರಕಿಸಿಕೊಟ್ಟ ಹಿನ್ನೆಲೆಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜನರ ಪರವಾಗಿ ಗೌರವಿಸಿ, ಕೃತಜ್ಞತೆ ತಿಳಿಸಿದ್ದ ಸಂದರ್ಭದಲ್ಲಿ ರೈಲಿಗೆ ಚಾಲನೆ ನೀಡಲು ಆಗಮಿಸುವಂತೆ ಮನವಿ ಮಾಡಿಕೊಂಡಿದ್ದಕ್ಕೆ ಸಚಿವರು ಸ್ಪಂದಿಸಿದ್ದಾರೆ ಎಂದು ಅವರು ಬುಧವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಜು.೧೧ ರಂದು ಬೆಳಗ್ಗೆ ೧೧ ಗಂಟೆಗೆ ವಿಶೇಷ ರೈಲಿನಲ್ಲಿ ಬೆಂಗಳೂರಿನಿಂದ ಚಿಕ್ಕಮಗಳೂರು ನಿಲ್ಲಾಣಕ್ಕೆ ಆಗಮಿಸುವ ಸಚಿವರು ಚಿಕ್ಕಮಗಳೂರು ಮತ್ತು ತಿರುಪತಿ ನಡುವೆ ಸಂಚರಿಸುವ ರೈಲು ಗಾಡಿಗೆ ಹಸಿರುವ ನಿಶಾನೆ ನೀಡಲಿದ್ದಾರೆ ಎಂದು ಹೇಳಿದ್ದಾರೆ.
    ಜಿಲ್ಲೆಯ ಜನರ ಬಹು ದಿನಗಳ ಬೇಡಿಕೆಗೆ ಸ್ಪಂದಿಸಿರುವ ಸಚಿವರನ್ನು ಈ ಸಂದರ್ಭದಲ್ಲಿ ಗೌರವಿಸಲಾಗುತ್ತದೆ ಎಂದರು

    ಕಾರ್ಯಕ್ರಮದ ಆನಂತರ ಸಚಿವರು ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಭೇಟಿ ಮಾಡಲಿದ್ದಾರೆ. ಬಳಿಕ ವಿಶೇಷ ರೈಲಿನಲ್ಲಿ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ತಿಳಿಸಿದ್ದಾರೆ.

    ಚಿಕ್ಕಮಗಳೂರು-ತಿರುಪತಿ ನಡುವೆ ರೈಲು ಸಂಚಾರಕ್ಕೆ ಅನುಮತಿ ದೊರಕಿಸಿಕೊಟ್ಟ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ದೆಹಲಿಯ ಕಚೇರಿಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.

    Minister to flag off Chikkamagaluru-Tirupati train on July 11

  • ಕರ್ನಾಟಕ ಗ್ರಾಮೀಣ ಬ್ಯಾಂಕ್ 2500 ಕೋಟಿ ರೂ ವ್ಯವಹಾರ

    ಕರ್ನಾಟಕ ಗ್ರಾಮೀಣ ಬ್ಯಾಂಕ್ 2500 ಕೋಟಿ ರೂ ವ್ಯವಹಾರ

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ೫೨ ಶಾಖೆಗಳನ್ನು ಹೊಂದಿದ್ದು, ಈ ಮೂಲಕ ೨೫೦೦ ಕೋಟಿ ರೂಗಳ ವ್ಯವಹಾರ ವಹಿವಾಟು ನಡೆಸಲಾಗಿದೆ ಎಂದು ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಶ್ರೀರಾಮಪ್ಪ ತಿಳಿಸಿದರು.

    ಅವರು ಬ್ಯಾಂಕಿನಲ್ಲಿ ವ್ಯವಸ್ಥಾಪಕರಾಗಿ ಕಳೆದ ೪೦ ವರ್ಷಗಳ ಸುದೀರ್ಘ ಸೇವೆಯಿಂದ ನಿವೃತ್ತಿ ಹೊಂದಿರುವ ನಾರಾಯಣ್ ನಾಯಕ್‌ರವರಿಗೆ ಬೀಳ್ಕೊಡುಗೆ ನೀಡಿ ಗೌರವಿಸಿ ಮಾತನಾಡಿದರು.

    ಕರ್ನಾಟಕ ಗ್ರಾಮೀಣ ಬ್ಯಾಂಕ್ ಈವರೆಗೆ ಶೇ.೯೦ ರಷ್ಟು ರೈತರಿಗೆ ಸಾಲಸೌಲಭ್ಯಗಳನ್ನು ನೀಡಲಾಗಿದ್ದು, ಜಿಲ್ಲೆಯ ಎಲ್ಲಾ ರೈತರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.

    ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ದೊರೆಯುವ ಸಾಲಸೌಲಭ್ಯಗಳ ಮಾದರಿಯಲ್ಲಿ ಕಾರು, ಮನೆ, ಶಿಕ್ಷಣ ಸಾಲ, ಬೆಳೆಸಾಲ, ಅಭಿವೃದ್ಧಿ ಸಾಲ ತಮ್ಮ ಬ್ಯಾಂಕಿನಲ್ಲೂ ನೀಡಲಾಗುತ್ತಿದ್ದು, ಈ ನಿಟ್ಟಿನಲ್ಲಿ ಉತ್ತಮ ಗ್ರಾಹಕ ಸೇವೆಯೊಂದಿಗೆ ಕರ್ನಾಟಕ ಗ್ರಾಮೀಣ ಬ್ಯಾಂಕಿನ ೫೨ ಶಾಖೆಗಳಲ್ಲಿಯೂ ವಿಸ್ತರಿಸಲಾಗಿದೆ ಎಂದರು.

    ನಿವೃತ್ತರಾದ ನಾರಾಯಣ ನಾಯಕ್ ರವರಿಗೆ ಆಯುಷ್ಯ, ಆರೋಗ್ಯ ಮತ್ತು ನೆಮ್ಮದಿಯನ್ನು ಕೊಡುವಂತೆ ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

    ನಿವೃತ್ತರಾದ ನಾರಾಯಣ್‌ನಾಯಕ್ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಸೇವೆಯಲ್ಲಿದ್ದು, ಮಾತನಾಡಲು ಇಂದು ಇದು ಕೊನೆಯ ಅವಕಾಶ. ೧೯೮೫ ರ ಫೆ.೧೯ ರಂದು ಚಿಕ್ಕಮಗಳೂರು-ಕೊಡಗು ಗ್ರಾಮೀಣ ಬ್ಯಾಂಕಿಗೆ ನೇಮಕವಾದೆ. ಬಡತನದಲ್ಲಿ ಶಿಕ್ಷಣ ಮುಗಿಸಿದ ನನಗೆ ಈ ಬ್ಯಾಂಕಿನಲ್ಲಿ ಉದ್ಯೋಗ ಸಿಗಲು ಎಸ್‌ಬಿಐನಲ್ಲಿ ಉದ್ಯೋಗದಲ್ಲಿದ್ದ ಸ್ನೇಹಿತ ಆನಂದ ಎಂಬುವವರು ನನಗೆ ಸಹಾಯ ಮಾಡಿದರು ಎಂದು ಸ್ಮರಿಸಿದರು.

    ಬಾಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ನಾನು ಕ್ರೀಡಾ ರಂಗದಲ್ಲೇ ಮುಂದುವರೆಯಬೇಕೆಂದುಕೊಂಡಿದ್ದೆ. ಆದರೆ, ಸ್ನೇಹಿತರ ಸಹಾಯದಿಂದ ಬ್ಯಾಂಕಿನಲ್ಲಿ ಉದ್ಯೋಗ ಪಡೆದು ಇಂದಿಗೆ ೪೦ ವರ್ಷ, ಮೂರು ತಿಂಗಳು ಹನ್ನೆರಡು ದಿನಗಳ ಬ್ಯಾಂಕಿನ ಸೇವೆ ತೃಪ್ತಿ ತಂದಿದೆ, ಜಿಲ್ಲೆಯ ೩೨ ಶಾಖೆಗಳಲ್ಲಿ ಪರಿಶೀಲನೆ ಮಾಡಿರುವುದಾಗಿ ಹೇಳಿದರು.

    ಇಂದಿನ ಯುವಕರು ಸಮಯ ಪಾಲನೆ ಅಳವಡಿಸಿಕೊಳ್ಳುವ ಜೊತೆಗೆ ಆರ್ಥಿಕ ಶಿಸ್ತು ಇಟ್ಟುಕೊಂಡಾಗ ಜೀವನದಲ್ಲಿ ಮುಂದೆ ಬರಲು ಸಹಕಾರಿಯಾಗುತ್ತದೆ ಎಂದು ಕಿವಿಮಾತು ಹೇಳಿದರು.

    ಕೆನರಾ ಬ್ಯಾಂಕ್ ಮೌಲ್ಯಮಾಪಕರ ಸಂಘದ ರಾಜ್ಯಾಧ್ಯಕ್ಷ ರುದ್ರಯ್ಯಾಚಾರ್ ಹಾಗೂ ಪ್ರಧಾನ ಕಾರ್ಯದರ್ಶಿ ರಾಜೇಶ್ ಮಾತನಾಡಿ, ಕರ್ನಾಟಕ ಗ್ರಾಮೀಣ ಬ್ಯಾಂಕಿನ ಸಿಬ್ಬಂದಿಗಳೊಂದಿಗೆ ಸೌಹಾರ್ದತೆಯಿಂದ ನವಯುವಕನಾಗಿ ೪೦ ವರ್ಷಗಳ ಸುದೀರ್ಘ ಉತ್ತಮ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ನಾರಾಯಣ್ ನಾಯಕ್ ಅವರಿಗೆ ಸಂಘದ ವತಿಯಿಂದ ಗೌರವ ಸಮರ್ಪಣೆ ಮಾಡುವುದಾಗಿ ತಿಳಿಸಿದರು.

    Karnataka Gramin Bank’s business is Rs 2500 crore

  • ಸರ್ಕಾರಿ ಶಾಲಾ-ಕಾಲೇಜುಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರ ಬದ್ಧ

    ಸರ್ಕಾರಿ ಶಾಲಾ-ಕಾಲೇಜುಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರ ಬದ್ಧ

    ಚಿಕ್ಕಮಗಳೂರು: ಬಡವರು, ಶೋಷಿತರಿಗೆ ಶಿಕ್ಷಣ, ಆರೋಗ್ಯ ಮತ್ತು ಬದುಕು ಈ ಮೂರು ಅಂಶಗಳಿಗೆ ಒತ್ತುನೀಡಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.

    ಅವರು ಇಂದು ಬಸವನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ೨೦೨೫-೨೬ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ಹಾಗೂ ಕಂಪ್ಯೂಟರ್ ಲ್ಯಾಬ್ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದರು.

    ಈಗಾಗಲೇ ಸರ್ಕಾರ ಶಿಕ್ಷಣಕ್ಕೆ ಒತ್ತುನೀಡಿ ಅದೇ ರೀತಿ ಆರೋಗ್ಯ ಸೇವೆಗೆ ಉತ್ತಮ ಸ್ಪಂದನೆ ನೀಡಿದ್ದು, ನಗರದಲ್ಲಿ ನಾಲ್ಕು ಭಾಗದಲ್ಲಿ ನಮ್ಮ ಕ್ಲಿನಿಕ್ ತೆರೆದಿದೆ. ನಾಗರೀಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಈ ಕ್ಲಿನಿಕ್‌ನಲ್ಲಿ ಓರ್ವ ವೈದ್ಯ, ಶುಶ್ರೂಷಕಿ ಹಾಗೂ ಸಿಬಂದಿಯನ್ನು ನೇಮಕ ಮಾಡಿದೆ ಎಂದು ತಿಳಿಸಿದರು.

    ಯಾವುದೇ ಖಾಸಗಿ ಕಾಲೇಜಿಗೆ ಕಡಿಮೆ ಇಲ್ಲದಂತೆ ಬಸವನಹಳ್ಳಿ ಸರ್ಕಾರಿ ಬಾಲಿಕಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯರಿಗೆ ಅಗತ್ಯವಾಗಿ ಬೇಕಾಗಿರುವ ಎಲ್ಲಾ ರೀತಿಯ ಸೌಲಭ್ಯಗಳ ಜೊತೆಗೆ ಇಂದು ಕಂಪ್ಯೂಟರ್ ಲ್ಯಾಬ್ ಉದ್ಘಾಟನೆಯಾಗಿರುವುದು ಶಿಕ್ಷಣಕ್ಕೆ ಉಪಯುಕ್ತವಾಗಿದೆ ಎಂದರು.

    ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಉದ್ದೇಶದೊಂದಿಗೆ ಸರ್ಕಾರ ಹಲವಾರು ಯೋಜನೆ ಜಾರಿಗೆ ತಂದು ಶಾಲಾ-ಕಾಲೇಜುಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದೆ ಎಂದು ಹೇಳಿದರು. ಪ್ರಸಕ್ತ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ೩೦ ಲಕ್ಷ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಇದು ಶಿಕ್ಷಣ ಸಚಿವ ಮಧುಬಂಗಾರಪ್ಪನವರ ಹೊಸ ಹೆಜ್ಜೆಯ ಯೋಜನೆ ಕಾರಣ ಎಂದರು.

    ಉತ್ತಮ ಶಿಕ್ಷಣ ಪಡೆದ ಮೆರಿಟ್ ಆಧಾರದಲ್ಲಿ ಶಿಕ್ಷಕರು, ಉಪನ್ಯಾಸಕರು ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ನೇಮಕವಾಗುವುದರಿಂದ ಖಾಸಗಿ ಶಾಲೆಗಳಿಗಿಂತ ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಯಲ್ಲಿ ದೊರೆಯುತ್ತಿದೆ ಎಂಬುದನ್ನು ಪೋಷಕರು ಮನಗಾಣಬೇಕಾಗಿದೆ ಎಂದು ಹೇಳಿದರು.

    ಪ್ರಪಂಚವೇ ಮೆಚ್ಚುವ ರೀತಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್‌ರವರು ನೀಡಿರುವ ಸಂವಿಧಾನದ ಪೀಠಿಕೆಯನ್ನು ಓದಿಸಿ ಒಂದು ಪುಟವನ್ನಾದರೂ ವಿದ್ಯಾರ್ಥಿಗಳಿಂದ ಪಠಣ ಮಾಡುವ ಪರಿಪಾಠವನ್ನು ಸರ್ಕಾರಿ ಶಾಲೆಯಲ್ಲಿ ಆರಂಭಿಸುವಂತೆ ಶಿಕ್ಷಕ ವೃಂದಕ್ಕೆ ಸಲಹೆ ನೀಡಿದರು.

    ೧೨ನೇ ಶತಮಾನದಲ್ಲಿ ಬಸವಣ್ಣನವರು ಸಮಾಜದ ಒಳಿತಿಗಾಗಿ ಹಲವಾರು ರೀತಿಯ ವಚನಗಳ ಮೂಲಕ ಕ್ರಾಂತಿ ಮಾಡಿದ ಮಹಾನ್ ಪುರುಷ ಎಂದು ಬಣ್ಣಿಸಿದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ವರಸಿದ್ದಿ ವೇಣುಗೋಪಾಲ್ ಮಾತನಾಡಿ, ವಿದ್ಯಾರ್ಥಿನಿಯರು ಈಗಿನಿಂದಲೇ ಶ್ರಮವಹಿಸಿ ಅಧ್ಯಯನಶೀಲರಾಗಿ ಉತ್ತಮ ಶಿಕ್ಷಣ ಪಡೆದು ಮುಂದಿನ ಪರೀಕ್ಷೆಯಲ್ಲಿ ಅತೀ ಹೆಚ್ಚು ರ್‍ಯಾಂಕ್ ಪಡೆಯುವ ಮೂಲಕ ಕಾಲೇಜಿಗೆ ಮತ್ತು ಉಪನ್ಯಾಸಕರಿಗೆ ಹೆಸರು ತರಬೇಕೆಂದು ಕರೆನೀಡಿದರು.

    ತಮ್ಮ ಮಕ್ಕಳು ಉತ್ತಮ ವ್ಯಾಸಂಗ ಮಾಡಬೇಕೆಂಬ ಗುರಿಯೊಂದಿಗೆ ಪೋಷಕರು ಶ್ರಮಪಟ್ಟು ನಿಮ್ಮನ್ನು ಕಾಲೇಜಿಗೆ ಕಳುಹಿಸುತ್ತಾರೆ, ಅದಕ್ಕೆ ಪೂರಕವಾಗಿ ಶಿಕ್ಷಣ ಪಡೆದು ಉನ್ನತ ಹುದ್ದೆಗಳಲ್ಲಿ ಆಯ್ಕೆಯಾದಾಗ ಪೋಷಕರ ಶ್ರಮ ಸಾರ್ಥಕ ಎಂದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಸತೀಶ್ ಶಾಸ್ತ್ರಿ ವಹಿಸಿ ಎಲ್ಲರನ್ನು ಸ್ವಾಗತಿಸಿದರು, ವೇದಿಕೆಯಲ್ಲಿ ಕಾಲೇಜು ಅಭಿವೃದ್ಧ ಸಮಿತಿ ಸದಸ್ಯ ಶುಭಾನ್ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.

    Government committed to providing basic infrastructure to government schools and colleges