Category: ಚಿಕ್ಕಮಗಳೂರು ನಗರ

  • ಆಧುನಿಕ ವಚನಕಾರರ ಧ್ರುವತಾರೆ ಸಿದ್ಧಯ್ಯಪುರಾಣಿಕ್

    ಆಧುನಿಕ ವಚನಕಾರರ ಧ್ರುವತಾರೆ ಸಿದ್ಧಯ್ಯಪುರಾಣಿಕ್

    ಚಿಕ್ಕಮಗಳೂರು: ವಿಡಂಬನೆ, ಲೋಕ ಶಿಕ್ಷಣ, ನೈತಿಕ ಮೌಲ್ಯಗಳನ್ನು ನವಿರಾಗಿ ಕಟ್ಟಿಕೊಟ್ಟ ಸಿದ್ಧಯ್ಯಪುರಾಣಿಕ ಆಧುನಿಕ ವಚನಕಾರರ ಧ್ರುವತಾರೆ ಎಂದು ಸಾಹಿತಿ, ವಾಗ್ಮಿ ಚಟ್ನಳ್ಳಿಮಹೇಶ್ ನುಡಿದರು.

    ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ ಹಾಗೂ ಅಖಿಲ ಭಾರತೀಯ ಸಾಹಿತ್ಯಪರಿಷದ್ ಸಂಯುಕ್ತವಾಗಿ ನೈಟಿಂಗೇಲ್ ಸ್ಕೂಲ್ ಆಫ್ ನರ್ಸಿಂಗ್‌ನಲ್ಲಿ ‘ಡಾ.ಸಿದ್ಧಯ್ಯಪುರಾಣಿಕ’ ಜನ್ಮದಿನಾಚರಣೆ ಅಂಗವಾಗಿ ಇಂದು ಆಯೋಜಿಸಿದ್ದ ಕಾರ್‍ಯಕ್ರಮದಲ್ಲಿ ‘ಪುರಾಣಿಕರ ಸಾಹಿತ್ಯದಲ್ಲಿ ಸಾಮಾಜಿಕ ಮೌಲ್ಯ’ ಕುರಿತಂತೆ ಅವರು ಉಪನ್ಯಾಸ ನೀಡಿ ಸಂವಾದಿಸಿದರು.

    ನಾಡುಕಂಡ ದಕ್ಷ ಅಧಿಕಾರಿಗಳಲ್ಲಿ ಒಬ್ಬರಾದ ಡಾ.ಸಿದ್ಧಯ್ಯಪುರಾಣಿಕರು ‘ಸ್ವತಂತ್ರಧೀರ ಸಿದ್ಧೇಶ್ವರ’ ಅಂಕಿತದೊಂದಿಗೆ ಸುಮಾರು ೨೦೦೦ಕ್ಕೂ ಹೆಚ್ಚು ಆಧುನಿಕ ವಚನಗಳನ್ನು ರಚಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ನವೀರಾದ ಹಾಸ್ಯ, ಮೊನಚಾದ ಟೀಕೆ, ಬದುಕಿನ ಮೌಲ್ಯಗಳು, ವಿಡಂಬನೆಗಳ ಮೂಲಕ ಗಮನ ಸೆಳೆದವರು.

    ಐಎಎಸ್ ಅಧಿಕಾರಿಗಳಾಗಿ ಕನ್ನಡದ ಸೇವೆ ಮಾಡಿದ ಡಾ.ಮಾಸ್ತಿವೆಂಕಟೇಶ ಅಯ್ಯಂಗಾರ, ಕೆ.ಎನ್.ನಾಗೇಗೌಡ ಮತ್ತಿತರರ ಸಾಲಿನಲ್ಲಿ ನಿಲ್ಲಬಹುದಾದ ಸಿದ್ಧಯ್ಯಪುರಾಣಿಕರು ಲೋಕ ನೆಮ್ಮದಿಗೆ ಪುಷ್ಠಿ ನೀಡುವ ಅಮೃತ ಘಳಿಗೆ ನಿರ್ಮಾಣಕ್ಕೆ ಪೂರಕವಾದ ವಚನಗಳನ್ನು ರಚಿಸಿದವರು. ಜೀವ ಸಂಕುಲದ ಹೊಂದಾಣಿಕೆಯ ಬಗ್ಗೆ ನಿಸರ್ಗಜ್ಞಾನ ಪೂರಕವಾದ ಅವರ ಅಭಿವ್ಯಕ್ತಿ ವಚನಗಳಾಗಿ ಗಮನಸೆಳೆದಿವೆ ಎಂದರು.

    ವಚನಗಳು ಸಾಹಿತ್ಯಕ್ಷೇತ್ರದ ವಿಶಿಷ್ಟ ಪ್ರಕಾರ. ಪದ್ಯವೂ ಹೌದು ಗದ್ಯವೂ ಹೌದು. ವಚನಗಳನ್ನು ಗಪದ್ಯವೆಂದೂ ಕರೆಯಲಾಗಿದೆ. ವಚನಗಳಿಗೆ ಅಂಕಿತವಿರುತ್ತದೆ. ಆಲೋಚನೆಗಳು ಶಬ್ದ-ಸಾಲುಗಳಾಗಿ ವಚನಗಳೆನಿಸಿಕೊಂಡಿವೆ. ಅಂಕಿತಕ್ಕೊಳಪಟ್ಟು ಸಾಹಿತ್ಯದ ಸಾಲು ನಿರ್ಮಾಣವಾದರೆ ಅದನ್ನು ವಚನವೆಂದು ಗುರುತಿಸಬಹುದು. ಮೊನಚು, ಸತ್ವ, ಬಂಧ, ಆತ್ಮಾವಲೋಕನಪ್ರಜ್ಞೆ ವಚನಗಳ ವಿಶೇಷ. ೧೨ನೆಯ ಶತಮಾನದ ವಚನಕಾರರು ಅನುಭಾವದ ನೆಲೆಯಲ್ಲಿ ವಚನಸಾಹಿತ್ಯ ಪ್ರಾರಂಭಿಸಿದರೆ ಕಳೆದ ಶತಮಾನದಿಂದೀಚೆಗೆ ಜಚನಿ, ಡಾ.ಸಿದ್ಧಯ್ಯಪುರಾಣಿಕ, ದೇಜಗೌ, ಮಹಾದೇವಬಣಕಾರ್, ಸಿಪಿಕೆ ಮತ್ತಿತರರು ಆಧುನಿಕ ವಚನಕಾರರೆಂದು ಗುರುತಿಸಲ್ಪಟ್ಟರು ಎಂದು ಚಟ್ನಳ್ಳಿಮಹೇಶ ವಿವರಿಸಿದರು.

    ಶರಣ ಸಂಕುಲ, ವಚನನಂದನ, ವಚನೋಧ್ಯಾನ ಮತ್ತಿತರ ವಚನ ಸಂಕಲನಗಳನ್ನು ರಚಿಸಿರುವ ಡಾ.ಸಿದ್ಧಯ್ಯಪುರಾಣಿಕ್, ವಚನ ಎಂದರೆ ಸತ್ವ ಎಂಬುದನ್ನು ಸಾಬೀತುಪಡಿಸಿದವರು. ಶೋಷಿತರ ಧ್ವನಿಯಾದವರು. ಅರಿವಿನ ಹರವನ್ನು ವಿಸ್ತರಿಸಿದವರು. ಚಿಂತನಾಭರಿತ ಹೂರಣ ನೀಡಿದವರೆಂದು ಬಣ್ಣಿಸಿದರು.

    ವಿದ್ಯೆ ಬಂದು ವಿನಯ ಹೋಯ್ತು, ಬುದ್ಧಿಬಂದು ವಿವೇಕ ಹೋಯ್ತು, ವಿಜ್ಞಾನ ಬಂದು ನೆಮ್ಮದಿ ಹೋಯ್ತು. ಸಂಪತ್ತು ಬಂದು ಸಂಸ್ಕೃತಿ ಹೋಯ್ತು, ಸ್ವತಂತ್ರ ಬಂದು ಸಂಮೃದ್ಧಿ ಹೋಯಿತು’, ಎಂಬ ವ್ಯತಿರಿಕ್ತ ಪರಿಣಾಮ ತೆರೆದಿಟ್ಟವರು ಡಾ.ಪುರಾಣಿಕ್. ‘ಏನಾದರೂ ಆಗು ಮೊದಲು ಮಾನವನಾಗು…’ ಎಂಬುದು ಅವರ ಮಹತ್ವದ ಸಂದೇಶ ಎಂದ ಚಟ್ನಳ್ಳಿಮಹೇಶ್, ‘ಅಯ್ಯೋ ಪಾಪ ಎಂಬುದೇ ಪುಣ್ಯ. ಅಯ್ಯೋ ಪಾಪಿ ಎಂಬುದೇ ಪಾಪ’ ಎಂದ ತೆರೆದ ಹೃದಯಿ.
    ‘ಸಿಪ್ಪೆ ತೆಗೆದು ಬಿತ್ತಿದ ಶೇಂಗಾ ಸಿಪ್ಪೆ ಧರಿಸಿಯೆ ಹುಟ್ಟುತ್ತದೆ. ನರ ಅರಿವಿನ ಜನ್ಮ ತಳಿದಿದ್ದು ಕೂಡಿ ಬಾಳಲೆಂದೋ ಕಚ್ಚಾಡಿ ಸಾಯಲೆಂದೋ…’ ಎಂಬ ವಚನದ ಮೂಲಕ ಸಾಮರಸ್ಯಕ್ಕೆ ಡಾ.ಪುರಾಣಿಕ ಅತ್ಯುತ್ತಮ ಮಾದರಿಯ ಸೂತ್ರ ನೀಡಿದ್ದಾರೆಂದ ಚಟ್ನಳ್ಳಿಮಹೇಶ್, ಕಲಹವಿಲ್ಲದೆ ಕೂಡಿ ಕದನವಿಲ್ಲದೆ ಬಾಳಿ ಹಂಚಿ ಉಣ್ಣುವ ಸಂಸ್ಕೃತಿ ಮಾನವನದಾಗಬೇಕೆಂಬ ಆಶಯದಂತೆ ಬಾಳಿದವರೆಂದರು.

    ಜಿಲ್ಲಾ ಕೈಗಾರಿಕಾ ಕೇಂದ್ರದ ವಿಶ್ರಾಂತ ಜಂಟಿ ನಿರ್ದೇಶಕ ಬಿ.ಪಿ.ಶಿವಮೂರ್ತಿ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ ಕಲೆ ಮತ್ತು ಸಾಹಿತ್ಯ ಅರಿವಿನ ಹರವನ್ನು ವಿಸ್ತರಿಸುತ್ತದೆ. ಜಿಲ್ಲೆಯ ಇತಿಹಾಸವನ್ನು ಅರಿವುದು ಎಲ್ಲರ ಕರ್ತವ್ಯ. ವಿದ್ಯಾರ್ಥಿ ಯುವಜನರು ನಮ್ಮ ನಡುವಿನ ಸಾಹಿತಿ ಕಲಾವಿದರನ್ನು ಪರಿಚಯಿಸಿಕೊಳ್ಳಬೇಕು. ಜ್ಞಾನ ಪಿಪಾಸುಗಳಾಗಿ ಶ್ರದ್ಧೆಯಿಂದ ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಸಮಾಜದ ಆಗು-ಹೋಗುಗಳನ್ನು ಗಮನಿಸುವ ಮನಸ್ಥಿತಿ ಹೊಂದಬೇಕು. ಪುಸ್ತಕದಿಂದ ವಿಚಾರಗಳನ್ನು ಮಸ್ತಕಕ್ಕೆ ಇಳಿಸಲು ಇಂತಹ ಸಾಹಿತ್ಯ ಅವಲೋಕನ ಸಹಕಾರಿ ಎಂದ ಶಿವಮೂರ್ತಿ, ಇದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದರು.

    ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ ಕಲೆ ಮತ್ತು ಸಾಹಿತ್ಯದ ಆಶಯ ಮನರಂಜನೆಯಷ್ಟೇ ಅಲ್ಲ, ಮನೋವಿಕಾಸವೂ ಹೌದು. ವ್ಯಕ್ತಿನಿರ್ಮಾಣದ ಮೂಲಕ ಆರೋಗ್ಯಪೂರ್ಣ ಸಮಾಜನಿರ್ಮಾಣಕ್ಕೆ ಪೂರಕವಾದ ಸಾಹಿತಿಗಳು ಹಾಗೂ ಸಾಹಿತ್ಯವನ್ನು ಮೆಲುಕು ಹಾಕುವ ಪ್ರಯತ್ನ ಇದೆಂದರು.

    ಅಖಿಲ ಭಾರತೀಯ ಸಾಹಿತ್ಯ ಪರಿಷದ್ ತಾಲ್ಲೂಕು ಅಧ್ಯಕ್ಷ ಎಚ್.ಎಸ್.ಸೋಮಶೇಖರಪ್ಪ ಶುಭಹಾರೈಸಿ ಮುಖ್ಯಅತಿಥಿಗಳನ್ನು ಗೌರವಿಸಿದರು. ಪ್ರಾಂಶುಪಾಲೆ ಕವಿತಾ ಸಮಾರಂಭವನ್ನು ಉದ್ಘಾಟಿಸಿದರು. ಪ್ರತಿಷ್ಠಾನದ ಸದಸ್ಯ ವಿಜಯಕುಮಾರ್, ಕಾರ್‍ಯದರ್ಶಿ ಶಶಿಕಲಾನಾಯಕ್, ವ್ಯವಸ್ಥಾಪಕಿ ಶೋಭಿತಾ, ಉಪನ್ಯಾಸಕರಾದ ವರ್ಷಿತಾ ಮತ್ತು ಮಹಾಲಕ್ಷ್ಮಿ ವೇದಿಕೆಯಲ್ಲಿದ್ದರು. ಅಭಾಸಾಪ ಜಿಲ್ಲಾಸಮಿತಿ ಸದಸ್ಯ ಎಸ್.ಎಸ್.ಸಾಗರ್ ಸ್ವಾಗತಿಸಿ, ವಿದ್ಯಾರ್ಥಿನಿಯರಾದ ಮೀನಾ ಪ್ರಾರ್ಥಿಸಿ, ತನುಜಾ ನಿರೂಪಿಸಿ ವಂದಿಸಿದರು.

    Siddaiah Puranik the pole star of modern orators

  • ಪಿಂಚಿಣಿದಾರ ಅನರ್ಹಗೊಳಿಸುವ ಮೂಲಕ ದುರ್ಬಲರ ಮೇಲೆ ಗಧಾಪ್ರಹಾರ

    ಪಿಂಚಿಣಿದಾರ ಅನರ್ಹಗೊಳಿಸುವ ಮೂಲಕ ದುರ್ಬಲರ ಮೇಲೆ ಗಧಾಪ್ರಹಾರ

    ಚಿಕ್ಕಮಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಿಂಚಿಣಿದಾರರನ್ನು ಅನರ್ಹಗೊಳಿಸುವ ಮೂಲಕ ಸಾಮಾನ್ಯ ಜನರು, ಬಡವರು, ದುರ್ಬಲರ ಮೇಲೆ ಗಧಾಪ್ರಹಾರ, ದೌರ್ಜನ್ಯ ಮಾಡಲು ಹೊರಟಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಆರೋಪಿಸಿದರು.

    ಗುರುವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಮೂರ್‍ನಾಲ್ಕು ದಿನಗಳ ಹಿಂದೆ ಹೊಡಿಸಿರುವ ಸುತ್ತೋಲೆಯಲ್ಲಿ ೬೦-೬೫ ವರ್ಷ ಮೇಲ್ಪಟ್ಟ ೧೪ ಲಕ್ಷ ಮಂದಿ ಹಿರಿಯ ಸಂದ್ಯಾ ಸುರಕ್ಷಾ ಫಲಾನುಭವಿಗಳು ಮತ್ತು ೬೫ ವರ್ಷ ಮೇಲ್ಪಟ್ಟ ೯ ಲಕ್ಷ ಮಂದಿ ವೃದ್ಧಾಪ್ಯ ವೇತನ ಪಡೆಯುವ ಬಡ ಪಿಂಚಿಣಿದಾರರನ್ನು ಅನರ್ಹಗೊಳಿಸುವ ಹುನ್ನಾರ ನಡೆಸಿದೆ. ಇದಕ್ಕಾಗಿ ಪರಿಶೀಲನೆ ನಡೆಸಲು ಸೂಚನೆ ನೀಡಿದೆ ಎಂದು ದೂರಿದರು.

    ವೃದ್ಧರ ಜೀವಿತದ ಕೊನೆಯ ದಿನಗಳಲ್ಲಿ ಸಣ್ಣ ಪುಟ್ಟ ಆರೋಗ್ಯ ವ್ಯತ್ಯಾಸಗಳಾದಲ್ಲಿ, ಔಷಧಿ-ಮಾತ್ರೆ ಇನ್ನಿತರೆ ಖರ್ಚಿಗೆ ನೆರವಾಗಲು ಮತ್ತು ಜೀವಕ್ಕೊಂದು ಭದ್ರತೆಕೊಡುವ ದೃಷ್ಠಿಯಿಂದ ಯಡಿಯೂರಪ್ಪ ಅವರ ಸರ್ಕಾರ ಇದ್ದಾಗ ಸಂಧ್ಯಾ ಸುರಕ್ಷಾ ಯೋಜನೆ ಜಾರಿಗೆ ತರಲಾಗಿತ್ತು. ಆದರೆ ಸಿದ್ದರಾಮಯ್ಯ ಸರ್ಕಾರ ಇದೀಗ ಪ್ರತಿ ಗ್ರಾ.ಪಂ.ಗಳಲ್ಲಿ ೧೫೦ ರಿಂದ ೨೫೦ ಮಂದಿ ಹಿರಿಯರ ಹೆಸರುಗಳನ್ನು ಗುರುತಿಸಿ ಪರಿಶೀಲನೆ ನಡೆಸಲು ಗ್ರಾಮ ಕಾರಣಿಕರು ಮತ್ತು ಕಂದಾಯ ಇಲಾಖೆ ಸಿಬ್ಬಂದಿಗೆ ಸೂಚನೆ ನೀಡಿದೆ ಎಂದರು.

    ಅವರ ಆದಾಯದ ಮೊತ್ತ ೩೨ ಸಾವಿರಕ್ಕಿಂತ ಹೆಚ್ಚಾಗಿದೆ. ಅನ್ನುವ ಕಾರಣಕೊಟ್ಟು ಪಿಂಚಣಿ ರದ್ದು ಪಡಿಸಲು ಸರ್ಕಾರ ಹುನ್ನಾರ ನಡೆಸಿದೆ. ಇದರಿಂದ ಸಾವಿರಾರು ಕೋಟಿ ರೂ. ಬೊಕ್ಕಸಕ್ಕೆ ಉಳಿಯುತ್ತದೆ ಎನ್ನುವುದು ಅವರ ಆಲೋಚನೆಯಾಗಿದೆ. ಒಟ್ಟು ರಾಜ್ಯದಲ್ಲಿ ೫೫ ಲಕ್ಷ ಜನ ಪಿಂಚಣಿ ಪಡೆಯುತ್ತಿದ್ದರೆ, ಸಿದ್ದರಾಮಯ್ಯ ಸರ್ಕಾರ ಕೊಟ್ಟಿರುವ ಮಾಹಿತಿ ಪ್ರಕಾರ ಸುಮಾರು ೨೪ ಲಕ್ಷ ಜನರು ಅನರ್ಹರಾಗುವ ಅಪಾಯ ಕಂಡು ಬರುತ್ತಿದೆ. ಪ್ರತಿ ಗ್ರಾಮ ಲೆಕ್ಕಿಗರು ೨೫೦ ರಿಂದ ೩೦೦ ಜನರ ಪಟ್ಟಿಯನ್ನು ಹಿಡಿದು ಓಡಾಡುತ್ತಿದ್ದಾರೆ ಎಂದರು.

    ಬಡವರಿಗೆ ೨೦೦೦ ರೂ.ಕೊಡುತ್ತೇವೆ ಎನ್ನುವುದು ಒಂದೆಡೆಯಾದರೆ, ಅದೇ ಮನೆಯಲ್ಲಿ ಹಿರಿಯರ ಜೀವನ ಭದ್ರತೆಗೆ ಕೊಡುತ್ತಿರುವ ಹಣವನ್ನು ಕಿತ್ತುಕೊಳ್ಳಲಾಗುತ್ತಿದೆ. ಇದೊಂದು ಬಡವರ ಪಿಂಚಣಿ ಮೇಲೆ ಮಾಡಿರುವ ದುರಾಕ್ರಮಣ, ಬೇಜಾಬ್ದಾರಿ ಮತ್ತು ಬಡವರ ವಿರೋಧಿ ನೀತಿ ಎಂದರು.
    ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸುಮಾರು ೩೩೦ ಗ್ರಾ.ಪಂ.ಗಳಲ್ಲಿ ಜೂನ್ ೨೩ ರಂದು ಏಕ ಕಾಲದಲ್ಲಿ ಇದರ ವಿರುದ್ಧ ಪ್ರತಿಭಟನೆ ನಡೆಯಲಿದೆ. ಈ ಹೋರಾಟ ರಾಜ್ಯಾದ್ಯಂತ ವ್ಯಾಪಿಸಬೇಕಿದೆ ಎಂದರು.

    ನಾವು ಸಂವಿಧಾನದ ಆಶಯದಂತೆ ನಡೆದುಕೊಳ್ಳುವವರು ಎಂದು ರಾಜ್ಯ ಸರ್ಕಾರ ತನ್ನನ್ನು ಪ್ರಸಂಶಿಸಿಕೊಳ್ಳುತ್ತದೆ ಆದರೆ ಇಂದು ೯ ಮತ್ತು ೧೧ ಏಕ ವಿನ್ಯಾಸ ನಕ್ಷೆಗಳನ್ನು ನೀಡಲು ಗ್ರಾ.ಪಂ.ಗಿದ್ದ ಅಧಿಕಾರವನ್ನು ರಾಜ್ಯ ಸರ್ಕಾರ ಕಿತ್ತುಕೊಂಡು ಸ್ಥಳೀಯ ತಾಲ್ಲೂಕು ಮಟ್ಟ ಅಥವಾ ಜಿಲ್ಲಾ ಮಟ್ಟದ ಪ್ರಾಧಿಕಾರಗಳಿಗೆ ವರ್ಗಾವಣೆ ಮಾಡಿದೆ. ಒಂದೊಂದು ಗ್ರಾ.ಪಂ.ಗಳಲ್ಲಿ ೯ ಮತ್ತು ೧೧ ನಮೂನೆ ಪಡೆಯುತ್ತಿದ್ದವನು ಇಂದು ಪ್ರಾಧಿಕಾರಗಳನ್ನು ಸುತ್ತಬೇಕಿದೆ. ಅಲ್ಲಿ ಓರ್ವ ಸಿಬ್ಬಂದಿಯೂ ಇರುವುದಿಲ್ಲ. ಮತ್ತು ಹಣಕೊಟ್ಟವರಿಗೆ ಮಾತ್ರ ನಮೂನೆ ಎನ್ನುವ ಬ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದರು.

    ಅಧಿಕಾರ ವಿಕೇಂದ್ರೀಕರಣದ ಮೂಲ ವ್ಯವಸ್ಥೆ ಇರುವ ಗ್ರಾ.ಪಂ. ಹಕ್ಕನ್ನು ಪ್ರಾಧಿಕಾರಕ್ಕೆ ಕೊಡುವ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಗೆ ಸಿದ್ದರಾಮಯ್ಯ ಸರ್ಕಾರ ದೊಡ್ಡ ಪೆಟ್ಟು ನೀಡುತ್ತಿದೆ. ನಾಡಿದ್ದು ಅವಳಿ ಜಿಲ್ಲೆಗಳಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಇದೂ ಸಹ ಪ್ರಮುಖ ವಿಷಯವಾಗಲಿದೆ ಎಂದು ಹೇಳಿದರು.

    ಇದೇ ವೇಳೆ ಜನೌಷಧಿ ಕೇಂದ್ರಗಳನ್ನು ಮುಚ್ಚಿತ್ತಿರುವುದು ಸರ್ಕಾರದ ಮತ್ತೊಂದು ಬಡವರ ವಿರೋಧಿ ಕಾರ್ಯವಾಗಿದೆ. ಅತೀ ಕಡಿಮೆ ಬೆಲೆಯಲ್ಲಿ ಅಲ್ಲಿ ಔಷಧಿ, ಮಾತ್ರೆಗಳು ಸಿಗುತ್ತವೆ ಆದರೂ ಅವುಗಳನ್ನು ಮುಚ್ಚಿ ನಾವೇ ಎಲ್ಲದನ್ನೂ ಕೊಡುತ್ತೇವೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಅವರೇ ಎಲ್ಲಾ ಚಿಕಿತ್ಸೆ ಕೊಡುವುದಾದರೂ ಜನೌಷಧ ಕೇಂದ್ರಗಳು ಅಲ್ಲಿದ್ದರೆ ಅವರಿಗೇನು ತೊಂದರೆ ಎಂದು ಪ್ರಶ್ನಿಸಿದ ಅವರು, ಒಟ್ಟಾರೆ ನರೇಂದ್ರ ಮೋದಿ ಅವರ ಭಾವಚಿತ್ರ ಇರುವ ಜನೌಷಧಿ ಕೇಂದ್ರಗಳು ಜನರ ಕಣ್ಣಿಗೆ ಬೀಳಬಾರದು ಎನ್ನುವುದು ಸರ್ಕಾರದ ಮೂಲ ದುರುದ್ದೇಶ ಎಂದು ದೂರಿದರು.

    ಕೇಂದ್ರದ ಯೋಜನೆಗಳು ಅನುಷ್ಠಾನಗೊಳ್ಳದಿರಲು ಏನೆಲ್ಲಾ ಬೇಕು ಅದೆಲ್ಲವನ್ನೂ ರಾಜ್ಯ ಸರ್ಕಾರ ಮಾಡುತ್ತದೆ ನಂತರ ಕೇಂದ್ರ ಸರ್ಕಾರ ನಮ್ಮ ಪಾಲನ್ನು ಕೊಟ್ಟಿಲ್ಲ ಎನ್ನುವ ತಗಾದೆ ಮಾಡುವ ಕೆಲಸವನ್ನೂ ಮಾಡುತ್ತಿದೆ ಎಂದು ಆರೋಪಿಸಿದರು.

    Bullying the weak by disqualifying pensioners

  • ಉತ್ತಮ ಆರೋಗ್ಯಕ್ಕೆ ಯೋಗ ಸಹಕಾರಿ

    ಉತ್ತಮ ಆರೋಗ್ಯಕ್ಕೆ ಯೋಗ ಸಹಕಾರಿ

    ಚಿಕ್ಕಮಗಳೂರು: ಉತ್ತಮ ಆರೋಗ್ಯ, ಉತ್ತಮ ಆಹಾರ, ಉತ್ತಮ ಯೋಗಾಭ್ಯಾಸ ಇವು ನಾಗರೀಕರ ಆರೋಗ್ಯ ಕಾಪಾಡುವಲ್ಲಿ ಸಹಕಾರಿ ಎಂದು ನಗರಸಭಾಧ್ಯಕ್ಷೆ ಸುಜಾತ ಶಿವಕುಮಾರ್ ಅಭಿಪ್ರಾಯಿಸಿದರು.

    ಅವರು ಇಂದು ೧೧ನೇ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಯೋಗ ತರಬೇತಿ ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಎಂಬ ಘೋಷವಾಕ್ಯದೊಂದಿಗೆ ಯೋಗನಡಿಗೆ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.

    ಯೋಗಾಭ್ಯಾಸವನ್ನು ಪ್ರತಿನಿತ್ಯ ಪಾಲಿಸಿಕೊಂಡು ಬಂದಲ್ಲಿ ರೋಗಮುಕ್ತ ದೇಶವಾಗಿಸಲು ಪರಿಣಾಮಕಾರಿಯಾಗಲಿದ್ದು, ಜೂ.೨೧ ರಂದು ನಡೆಯಲಿರುವ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಯೋಗದ ಬಗ್ಗೆ ವಿಶ್ವದೆಲ್ಲೆಡೆ ಜಾಗೃತಿ ಮೂಡಿಸಿದ್ದಾರೆಂದು ಹೇಳಿದರು.

    ಇಂದು ಕಲುಷಿತ ಆಹಾರ ಸೇವನೆಯಿಂದಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪ್ರತಿಯೊಬ್ಬರೂ ಆರೋಗ್ಯಕ್ಕೆ ಆದ್ಯ ಗಮನ ನೀಡಿಬೇಕಾದರೆ ಯೋಗಾಭ್ಯಾಸ ಅತೀ ಮುಖ್ಯ ಎಂದರು.

    ಜಿಲ್ಲಾ ಆಯುಷ್ ಅಧಿಕಾರಿ ಗೀತಾ.ಎಸ್ ಮಾತನಾಡಿ, ಭಾರತ ದೇಶ ನೀಡಿದ ವಿಶ್ವಕ್ಕೆ ಅತೀ ದೊಡ್ಡ ಅಮೂಲ್ಯ ಕೊಡುಗೆಯಲ್ಲಿ ಯೋಗವೂ ಒಂದಾಗಿದೆ. ಈ ವರ್ಷ ೧೧ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸುತ್ತಿದ್ದು, ಆಯುಷ್ಮಾನ್ ಆರೋಗ್ಯ ಸಂಗಮ ಮಂದಿರ, ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಜೂ.೨೧ ರಂದು ಆಯೋಜಿಸಲಾಗಿದೆ ಎಂದರು.

    ಯೋಗದ ಬಗ್ಗೆ ಜಾಗೃತಿ ಮೂಡಿಸಲು ಇಂದು ಯೋಗ ನಡಿಗೆ ಏರ್ಪಡಿಸಲಾಗಿದೆ, ತಾಲ್ಲೂಕು ಕಚೇರಿಯಿಂದ ಎಂ.ಜಿ ರಸ್ತೆ ಮಾರ್ಗವಾಗಿ ಸುಭಾಷ್‌ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದವರೆಗೆ ಮೆರವಣಿಗೆ ನಡೆಸಲಾಯಿತು.

    ಯೋಗ ಧನುಷ್ ಕೆಎಸ್‌ಆರ್‌ಟಿಸಿ ನೌಕರರು ಹಾಗೂ ಸಿಬ್ಬಂದಿ ವರ್ಗದವರಿಗೆ ಮತ್ತು ಜಿಲ್ಲಾ ಕಾರಾಗೃಹ ಕೈದಿಗಳಿಗೆ, ದಿವ್ಯಾಂಗರಿಗೆ ಈ ಯೋಗ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

    ಹಸಿರು ಯೋಗವನ್ನು ವಿಶ್ವ ಪರಿಸರ ದಿನದಂದು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ೧೦೦ ಗಿಡಗಳನ್ನು ನೆಡುವ ಮೂಲಕ ಹಮ್ಮಿಕೊಳ್ಳಲಾಗಿತ್ತು ಎಂದು ವಿವರಿಸಿದರು.

    ಈ ಮೆರವಣಿಗೆಯಲ್ಲಿ ಎಸ್‌ಎಸ್‌ವೈ, ಪ್ರಭೋದಿನಿ, ಎಸ್‌ಪಿವೈಎಸ್, ಭಾರತ್ ಸ್ವಾಭಿಮಾನ್, ಅನುರತ್ ಸಮಿತಿ, ಜ್ಞಾನರಶ್ಮಿ ಶಾಲೆ, ಎಂಇಎಸ್ ಶಾಲೆ, ಸ್ಕೌಟ್ ಮತ್ತು ಗೈಡ್ಸ್, ಮೇರಾ ಯುವ ಭಾರತ್, ಎನ್‌ಎಸ್‌ಎಸ್ ಘಟಕ ಪಾಲ್ಗೊಂಡಿದ್ದವು.

    Yoga is helpful for good health.

  • ದಾಸರಹಳ್ಳಿ ಗ್ರಾ.ಪಂ ಅಧ್ಯಕ್ಷರಾಗಿ ಟಿ.ಎಸ್. ಶಿವೇಗೌಡ ಅವಿರೋಧ ಆಯ್ಕೆ

    ದಾಸರಹಳ್ಳಿ ಗ್ರಾ.ಪಂ ಅಧ್ಯಕ್ಷರಾಗಿ ಟಿ.ಎಸ್. ಶಿವೇಗೌಡ ಅವಿರೋಧ ಆಯ್ಕೆ

    ಚಿಕ್ಕಮಗಳೂರು: ತಾಲ್ಲೂಕು ದಾಸರಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಮೂರನೇ ಬಾರಿಗೆ ಬಿಜೆಪಿ ಬೆಂಬಲಿತ ಟಿ.ಎಸ್. ಶಿವೇಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಖರ್ ಮಾತನಾಡಿ, ಕಳೆದ ೧೫ ವರ್ಷಗಳಿಂದ ಬಿಜೆಪಿಯ ಕಟ್ಟಾಳುಗಳಾಗಿ ಇಲ್ಲಿರುವ ೮ ಗ್ರಾ.ಪಂ ಕ್ಷೇತ್ರಗಳಲ್ಲಿ ನಾಯಕತ್ವ ಬೆಳೆಸಿಕೊಂಡು ಚುನಾವಣೆ ಸಂದರ್ಭದಲ್ಲಿ ೭ ಸದಸ್ಯರನ್ನು ಗೆಲ್ಲಿಸುವ ಮೂಲಕ ಸಾಧನೆ ಮಾಡಿರುವ ನೂತನ ಅಧ್ಯಕ್ಷ ಶಿವೇಗೌಡರಿಗೆ ಎಲ್ಲಾ ಸದಸ್ಯರು ಒಮ್ಮತದ ಸಹಕಾರ ನೀಡಿದ್ದಾರೆಂದು ಶ್ಲಾಘಿಸಿದರು.

    ಶಿವೇಗೌಡರ ಅಧಿಕಾರವಧಿಯಲ್ಲಿ ಈ ಪಂಚಾಯಿತಿಯಲ್ಲಿ ಹಲವಾರು ವಿವಿಧ ಅಭಿವೃದ್ಧಿ ಕೆಲಸಗಳಾಗಿದ್ದು, ಈ ಕಾರ್ಯದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಕೊಡುಗೆ ಜೊತೆಗೆ ಇವರ ಪ್ರಯತ್ನ ಬಹಳ ಮುಖ್ಯ ಎಂದು ಹೇಳಿದರು.

    ಬಡವರು, ಕೂಲಿಕಾರ್ಮಿಕರ ಕೆಲಸಗಳಿಗೆ ಹೆಚ್ಚು ಒತ್ತುನೀಡುವ ಮೂಲಕ ಶ್ರದ್ಧೆ, ನಿಷ್ಠೆಯಿಂದ ಅವರ ಪರವಾಗಿ ಕೆಲಸ ಮಾಡುತ್ತಿರುವ ಶಿವೇಗೌಡರು ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರ ವಿಶ್ವಾಸದೊಂದಿಗೆ ಅಧಿಕಾರದಲ್ಲಿ ಮುಂದುವರೆಯಲಿ, ಬಿಜೆಪಿ ಪಕ್ಷಕ್ಕೆ ಒಳ್ಳೆಯ ಹೆಸರು ತರಲಿ ಎಂದು ಶುಭ ಹಾರೈಸಿದರು.

    ಮಾಜಿ ಅಧ್ಯಕ್ಷ ದೀಪಕ್ ಮಾತನಾಡಿ, ಕಳೆದ ೧೫ ವರ್ಷಗಳಿಂದ ಅಧಿಕಾರದಲ್ಲಿ ಮುಂದುವರೆಯುತ್ತಿರುವ ಶಿವೇಗೌಡರಿಗೆ ಸಿ.ಟಿ. ರವಿಯವರ ಮಾರ್ಗದರ್ಶನ ಭದ್ರ ಬುನಾದಿಯಾಗಿದ್ದು, ದಾಸರಹಳ್ಳಿ ಗ್ರಾಮ ಪಂಚಾಯಿತಿ ಇದೂವರೆಗೆ ಬಿಜೆಪಿಯ ಭದ್ರ ಕೋಟೆಯಾಗಿದೆ ಎಂದು ಹೇಳಿದರು.

    ಪಂಚಾಯಿತಿ ವ್ಯಾಪ್ತಿಯಲ್ಲಿ ಜನಪರ ಆಡಳಿತ ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದು ಯೋಜನೆಗಳು ಕಾರಣ ಎಂದ ಅವರು, ಕೇಂದ್ರಸರ್ಕಾರದ ಜನಪರ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿ ಕಳೆದ ೧೧ ವರ್ಷಗಳ ನರೇಂದ್ರ ಮೋದಿಯವರ ಕನಸು ನನಸು ಮಾಡಲು ಗ್ರಾಮ ಪಂಚಾಯತ್ ಮಟ್ಟದಲ್ಲಿ ಹೆಚ್ಚು ಅಭಿವೃದ್ಧಿ ಆದಾಗ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಬಹುದು ಎಂದರು.

    ಮುಂಬರುವ ಗ್ರಾ.ಪಂ, ಜಿ.ಪಂ, ತಾ.ಪಂ, ಎಂಎಲ್‌ಎ, ಎಂಎಲ್‌ಸಿ ಚುನಾವಣೆಗಳಲ್ಲಿ ಇದೇ ರೀತಿ ದಾಸರಹಳ್ಳಿ ಗ್ರಾಮ ಪಂಚಾಯಿತಿ ಬಿಜೆಪಿಯ ಭದ್ರ ಕೋಟೆಯಾಗಿ ಉಳಿಯಲಿ ಎಂದು ಇಂಗಿತ ವ್ಯಕ್ತಪಡಿಸಿದರು.

    ನೂತನ ಅಧ್ಯಕ್ಷ ಟಿ.ಎಸ್. ಶಿವೇಗೌಡ ಅಧಿಕಾರ ಸ್ವೀಕರಿಸಿ ಮಾತನಾಡಿ, ಮುಂದೆಯೂ ಬಿಜೆಪಿ ಅಭ್ಯರ್ಥಿಗಳು ಈ ಪಂಚಾಯಿತಿಯ ಅಧಿಕಾರ ಹಿಡಿಯಬೇಕು ಆ ನಿಟ್ಟಿನಲ್ಲಿ ಎಲ್ಲಾ ಸದಸ್ಯರು ಆಶೀರ್ವಾದ ನೀಡಿ ನನ್ನನ್ನು ಆಯ್ಕೆಮಾಡಿದ್ದು, ಎಲ್ಲರಿಗೂ ತುಂಬ ಹೃದಯದ ಧನ್ಯವಾದ ಸಲ್ಲಿಸಿದರು.

    ಶಾಸಕ ಸಿ.ಟಿ. ರವಿಯವರ ಅಧಿಕಾರವಧಿಯಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಆದ ಜನಪರ ಅಭಿವೃದ್ಧಿ ಕಾರ್ಯಗಳು ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಶ್ರೀರಕ್ಷೆಯಾಗಿ ೭ ಗ್ರಾ.ಪಂ ಸದಸ್ಯರು ಆಯ್ಕೆಯಾಗಲು ಕಾರಣ ಎಂದು ಹೇಳಿದರು.

    ಈ ಗ್ರಾ.ಪಂ ವ್ಯಾಪ್ತಿಯಲ್ಲಿ ಬಡವರಿಗೆ ನಿವೇಶನ, ಮನೆ ಹಂಚಿಕೆ ಬಗ್ಗೆ ಜಾಗ ಗುರ್ತಿಸಿಲ್ಲ. ಈ ಸಂಬಂಧ ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಸರ್ಕಾರ ಬಂದು ಎರಡು ವರ್ಷವಾದರೂ ನಿವೇಶನ ಹಂಚಿಕೆ ಮಾಡಲಾಗಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷರಾದ ಲಲಿತ, ಸದಸ್ಯರುಗಳಾದ ಅವಿಲಾ ಹೆಚ್.ಸಿ, ಚಂದ್ರಶೇಖರ್ ಹೆಚ್.ಎನ್, ಮಂಜುನಾಥ್. ಎಸ್, ಮಾಲಾಶ್ರೀ, ವಿನೋದ ನಾಗೇಶ್, ಗ್ರಾಮಸ್ಥರಾದ ಸತೀಶ್, ಪಾಪಣ್ಣ ಮತ್ತಿತರರು ಉಪಸ್ಥಿತರಿದ್ದರು

    T.S. Sivegowda elected unopposed as Dasarahalli Gram Panchayat President

  • ಕಲ್ಯಾಣ ಮಂಟಪಗಳಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆಗೆ ನಿಷೇಧ

    ಕಲ್ಯಾಣ ಮಂಟಪಗಳಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆಗೆ ನಿಷೇಧ

    ಚಿಕ್ಕಮಗಳೂರು:  ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿರುವ ಎಲ್ಲಾ ಹೋಟೆಲ್, ಬೇಕರಿ, ಸಹಿ-ಖಾರ ತಿಂಡಿಗಳ ತಯಾರಕರು, ಕಲ್ಯಾಣ ಮಂಟಪ ಮತ್ತಿತರೆ ಉದ್ದಿಮೆದಾರರು ಸ್ವಚ್ಛತೆಗೆ ಆಧ್ಯತೆ ನೀಡಿ ಸಾಂಕ್ರಾಮಿಕ ರೋಗಗಳ ತಡೆಗೆ ನಗರಸಭೆಯೊಂದಿಗೆ ಕೈ ಜೋಡಿಸಬೇಕು ಎಂದು ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಮನವಿ ಮಾಡಿದರು.

    ಅವರು ಮಂಗಳವಾರ ನಗರಸಭೆ ಸಭಾಂಗಣದಲ್ಲಿ ಬೇಕರಿ, ಸಿಹಿ-ಖಾರ ತಿನಿಸುಗಳ ತಯಾರಕರು, ಮಾರಾಟಗಾರರು, ಸ್ವೀಟ್ಸ್ ಸ್ಟಾಲ್, ಕಾಂಡಿಮೆಂಟ್ಸ್, ಕಲ್ಯಾಣ ಮಂಟಪಗಳ ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಆಹಾರ ನಮ್ಮ ಆರೋಗ್ಯ ಒಂದು ಭಾಗ ಗುಣಮಟ್ಟದ ಆಹಾರ ಸೇವನೆ ಅಗತ್ಯವಿರುತ್ತದೆ. ಹೋಟೆಲ್‌ಗಳು, ಬೇಕರಿ ಇನ್ನಿತರೆ ತಿನಿಸು ಮಾರಾಟ ಮಾಡುವವರು ಉತ್ತಮವಾದ ಆಹಾರ ಪೂರೈಕೆ ಮಾಡಬೇಕು. ಅಗತ್ಯ ಇರುವಷ್ಟು ಮಾತ್ರ ತಯಾರು ಮಾಡಿಕೊಳ್ಳಬೇಕು. ಉಳಿಸಿ ಮತ್ತೆ ಮಾರಾಟ ಮಾಡಬಾರದು ಎಂದರು.

    ಬಸ್ ನಿಲ್ದಾಣ, ಇತರೆ ಕೆಲವುಕಡೆ ತೆರೆದ ವಾತಾವರಣದಲ್ಲಿ ತಿಂಡಿ, ತಿನಿಸು ಮಾರಾಟ ಮಾಡುವುದನ್ನು ಗಮನಿಸಿದ್ದೇನೆ. ಜನ ಸಂದಣಿ ಪ್ರದೇಶಗಳಲ್ಲಿ ಧೂಳು, ಕ್ರಿಮಿ, ಕೀಟಗಳು ಇರುತ್ತವೆ. ಇವು ಆಹಾರ ಪದಾರ್ಥಗಳನ್ನು ಕೆಡಿಸಿ ಸಾಂಕ್ರಾಮಿಕ ರೋಗಗಳಿಗೆ ದಾರಿ ಮಾಡಿಕೊಡುತ್ತದೆ. ಈ ಕಾರಣಕ್ಕೆ ಆಹಾರ ಪದಾರ್ಥಗಳನ್ನು ಸುರಕ್ಷಿತವಾಗಿ ಮುಚ್ಚಿದ ವಾತಾವರಣದಲ್ಲಿಟ್ಟು ಮಾರಾಟಮಾಡಬೇಕು ಎಂದರು.

    ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಹಾಗೂ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಉಂಟು ಮಾಡುತ್ತಿದೆ. ಈಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡುವುದಕ್ಕೆ ವರ್ತಕರೇ ಕಡಿವಾಣ ಹಾಕಿಕೊಳ್ಳಬೇಕು ಎಂದು ಮನವಿ ಮಾಡಿದರು.

    ಕೆಲವರು ಮದ್ಯ ಸೇವಿಸಿ ಸಾರ್ವಜನಿಕ ಪ್ರದೇಶದಲ್ಲೇ ಬಾಟಲಿಗಳನ್ನು ಬಿಸಾಡಿ ಬರುತ್ತಿದ್ದಾರೆ. ವಿದ್ಯಾವಂತರಾದರೂ ಅವಿವೇಕಿಗಳ ರೀತಿ ನಡೆದುಕೊಳ್ಳುತ್ತಿರುವುದು ವಿಪರ್ಯಾಸ ಅದಕ್ಕೆ ಅವರೇ ಸ್ವಯಂ ಕಡಿವಾಣ ಹಾಕಿಕೊಳ್ಳಬೇಕು ಎಂದರು.

    ಕಲ್ಯಾಣ ಮಂಟಪಗಳಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆಗೆ ನಿಷೇಧವಿದೆ. ಅದನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಬೇಕು. ಅಲ್ಲದೆ ಶುಚಿತ್ವಕ್ಕೆ ಮಹತ್ವ ನೀಡಬೇಕು ಎಂದು ತಿಳಿಸಿದರು.

    ನಗರಸಭೆ ಆಯಕ್ತ ಬಿ.ಸಿ.ಬಸವರಾಜು ಮಾತನಾಡಿ, ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಹೋಟೆಲ್‌ಗಳು, ಬೇಕರಿಗಳು ಮತ್ತಿತರೆ ತಿಂಡಿ-ತಿನಿಸುಗಳನ್ನು ತಯಾರಿಸುವವರು ಸ್ವಚ್ಛತೆ ಕಾಪಾಡಿಕೊಳ್ಳುವ ಜೊತೆಗೆ ಗ್ರಾಹಕರಿಗೆ ಕುಡಿಯಲು ಬಿಸಿಯಾದ ಅಥವಾ ಕಾಯಿಸಿ ಆರಿಸಿದ ನೀರು ನೀಡಬೇಕು ಎಂದು ಸೂಚಿಸಿದರು.

    ಅಕ್ಟೋಬರ್ ವರೆಗೆ ಇದೇ ರೀತಿ ಮಳೆ ಮುಂದುವರಿಯಲಿದೆ. ಸೊಳ್ಳೆಗಳು ಉತ್ಪತ್ತಿಯಾಗುವ ಸಂದರ್ಭ ಇದಾಗಿರುತ್ತದೆ. ಈ ಬಗ್ಗೆ ಆರೋಗ್ಯ ಇಲಾಖೆ ಸಾಕಷ್ಟು ಜಾಗೃತಿಯ ಮಾಹಿತಿಗಳನ್ನು ನೀಡಿದೆ. ಇದಲ್ಲದೆ ಆಹಾರ ಪದಾರ್ಥಗಳನ್ನು ಪ್ರಿಡ್ಜ್‌ಗಳಲ್ಲಿಟ್ಟು ಮಾರಾಟ ಮಾಡವ ತಿನಿಸುಗಳಿಂದ ಸಾರ್ವಜನಿಕರ ಆರೋಗ್ಯಕ್ಕೆ ಕುತ್ತಾಗಬಾರದು. ಈ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು. ಶುಚಿತ್ವವನ್ನು ಕಾಪಾಡಿಕೊಳ್ಳಬೇಕು. ವಿಶೇಷವಾಗಿ ಪ್ಲಾಸ್ಟಿಕ್ ಬಳಕೆಗೆ ಸಂಪೂರ್ಣ ಕಡಿವಾಣ ಹಾಕಿಕೊಳ್ಳಬೇಕು ಎಂದರು.

    ಪದೇ ಪದೇ ನಮ್ಮ ಸಿಬ್ಬಂದಿ ದಾಳಿ ಮಾಡಿ ದಂಡ ವಿಧಿಸಿದರೂ ಮತ್ತದೇ ಅಭ್ಯಾಸ ಪುನರಾವರ್ತನೆ ಆಗುತ್ತಲೇ ಇದೆ. ಆದರೆ ಅದಕ್ಕೆ ಶಾಶ್ವತ ಕಡಿವಾಣ ಹಾಕಬೇಕಿದೆ. ಜಿಲ್ಲೆ ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಜಿಲ್ಲೆಯಾಗಬೇಕೆಂದು ಆದೇಶವಿದೆ. ಇದಕ್ಕೆ ಎಲ್ಲರೂ ಸಹಕರಿಸಬೇಕು. ಇಲ್ಲವಾದಲ್ಲಿ ಅಂಗಡಿ, ಉದ್ದಿಮೆಗಳನ್ನು ಮುಚ್ಚಿ ದಂಡ ವಿಧಿಸುವುದು ಅನಿವಾರ್ಯವಾಗುತ್ತದೆ. ನಂತರ ಕೋರ್ಟ್‌ಗೆ ಹೋಗಿ ಆದೇಶ ತರಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಪ್ಲಾಸ್ಟಿಕ್ ನಿಷೇಧದ ವಿಚಾರದಲ್ಲಿ ನಗರದ ಒಕ್ಕಲಿಗರ ಕಲ್ಯಾಣ ಮಂಟಪ ಮಾದರಿಯಾಗಿದೆ. ಅಲ್ಲಿ ಕುಡಿಯುವ ನೀರನ್ನೂ ಸಹ ಪ್ಲಾಸ್ಟಿಕ್ ಬಾಟಲಿಯಲ್ಲಿ ಕೊಡುವುದಿಲ್ಲ. ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧ ಮಾಡಿದ್ದಾರೆ. ಅದೇ ರೀತಿ ಉಳಿದವರು ಪ್ಲಾಸ್ಟಿಕ್ ನಿಷೇಧಕ್ಕೆ ಕ್ರಮ ತೆಗೆದುಕೊಳ್ಳಬೇಕು. ಇನ್ನು ಏಳೆಂಟು ದಿನಗಳಲ್ಲಿ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು ಇಲ್ಲವಾದಲ್ಲಿ ಗಂಭೀರ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.

    ಕಲ್ಯಾಣ ಮಂಟಪಗಳಲ್ಲಿ ಸಮಾರಂಭ ನಡೆಯುವಾಗ ಪಾರ್ಕಿಂಗ್ ಸಮಸ್ಯೆಯಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಒಕ್ಕಲಿಗರ ಕಲ್ಯಾಣ ಮಂಟಪದ ಬಳಿ ಸ್ವಲ್ಪ ಹೆಚ್ಚೇ ತೊಂದರೆ ಆಗುತ್ತಿದೆ. ಈ ಬಗ್ಗೆ ಗಮನ ಹರಿಸಿ ಟ್ರಾಫಿಕ್‌ನಿಂದ್ ಕಿರಿಕಿರಿ ಉಂಟಾಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.

    ಆರೋಗ್ಯ ಇಲಾಖೆಯ ಆರೋಗ್ಯ ನಿರೀಕ್ಷಕ ಶ್ರೀಧರ್ ಸ್ವಚ್ಛತೆ-ಸಾಂಕ್ರಾಮಿಕ ರೋಗಗಳ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದರು. ನಗರಸಭೆ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.

    Ban on the use of plastic items in welfare centres

  • ಕಾರ್ಮಿಕರ ಆರೋಗ್ಯ ಜೀವನಕ್ಕಾಗಿ ಸಂಚಾರಿ ವಾಹನ

    ಕಾರ್ಮಿಕರ ಆರೋಗ್ಯ ಜೀವನಕ್ಕಾಗಿ ಸಂಚಾರಿ ವಾಹನ

    ಚಿಕ್ಕಮಗಳೂರು: – ಕಾರ್ಮಿಕರಿಗೆ ಎಲ್ಲಾ ರೀತಿಯ ಚಿಕಿತ್ಸೆಗೆ ಒಳಗಾಗಿಸುವ ನಿಟ್ಟಿನಲ್ಲಿ ರಾ ಜ್ಯಸರ್ಕಾರ ಆಧುನಿಕ ತಂತ್ರಜ್ಞಾನ ಹಾಗೂ ಪರಿಣಿತ ವೈದ್ಯರ ತಂಡದೊಂದಿಗೆ ಸಂಚಾರಿ ಆರೋಗ್ಯ ವಾಹನ ವನ್ನು ಶ್ರಮಿಕರಿಗಾಗಿ ಪೂರೈಸಲಾಗಿದೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

    ನಗರದ ಕಾರ್ಮಿಕ ಕಚೇರಿಯಲ್ಲಿ ಮಂಗಳವಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೂತನ ಎರಡು ಸಂಚಾರಿ ಆರೋಗ್ಯ ಘಟಕದ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿ ಕಟ್ಟಡ ಕಾರ್ಮಿಕರಿಗೆ ತುರ್ತು ಆರೋಗ್ಯ ಪರಿಸ್ಥಿತಿ ಕಂಡುಬಂದ ಸಂದರ್ಭಗಳಲ್ಲಿ ಸಮೀಪದ ಆಸ್ಪತ್ರೆತೆ ಅಂಬ್ಯೂಲೆನ್ಸ್ ಮಾದರಿಯಲ್ಲಿ ಸೇವೆಯನ್ನು ಒದಗಿಸಿ, ತದನಂತರ ಮಂಡಳಿಯೊಂದಿಗೆ ಸಮನ್ವಯ ಸಾಧಿಸಿ ಕಾರ್ಮಿಕರಿಗೆ ಅಗತ್ಯ ಚಿಕಿತ್ಸೆ ಒದಗಿಸುವ ಜೊತೆಗೆ ಪ್ರತಿ ವಾಹನದಲ್ಲೂ ಎಂಬಿಬಿಎಸ್ ನುರಿತ ವೈದ್ಯರ ತಂಡ ಕಾರ್ಯನಿರ್ವಹಿಸಲಿದೆ ಎಂದರು.

    ಸಂಚಾರಿ ವಾಹನವು ಜಿಲ್ಲೆಯಾದ್ಯಂತ ಸಂಚರಿಸಿ ರಕ್ತದೊತ್ತಡ, ರಕ್ತಹೀನತೆ, ಅಪೌಷ್ಠಿಕತೆ, ತುರ್ತು ಔಷಧ, ಮೂರ್ಛೆರೋಗ, ಮಧುಮೇಹ, ಬಿಪಿ, ತಾಯಿಯ ಆರೋಗ್ಯ, ನವ ಜನನ ಮತ್ತು ಶಿಶು ಆರೋಗ್ಯ, ದೀರ್ಘಕಾಲದ ಸಂವಹನ ರೋಗಗಳ ನಿರ್ವಹಣೆ, ಕ್ಷಯರೋಗ, ಹೆಚ್‌ಐವಿ, ಕುಷ್ಠ, ಮಲೇರಿಯಾ ಸೇರಿ ದಂತೆ ಇಪ್ಪತ್ತಕ್ಕೂ ಹೆಚ್ಚು ಚಿಕಿತ್ಸೆಯನ್ನು ಉಚಿತವಾಗಿ ನೀಡಲಿದೆ ಎಂದು ಹೇಳಿದರು.

    ಪ್ರಸ್ತುತ ಜಿಲ್ಲೆಯಲ್ಲಿ ೧.೪೦ ಲಕ್ಷ ಕಾರ್ಮಿಕರು ಇಲಾಖೆಯಲ್ಲಿ ನೋಂದಾಯಿಸಿಕೊಂಡಿದ್ದು ಮದುವೆ, ವೈದ್ಯಕೀಯ ವೆಚ್ಚ, ಹೆರಿಗೆ ಸೌಲಭ್ಯವನ್ನು ನೀಡುತ್ತಿದೆ. ಪ್ರಸಕ್ತ ಸಾಲಿನ ಅಪಘಾತದಲ್ಲಿ ಮೃತರಾದ ಕಾರ್ಮಿಕರ ಕುಟುಂಬಕ್ಕೆ ರಾಜ್ಯಸರ್ಕಾರ ೫.೧೩ ಕೋಟಿ ಹಣವನ್ನು ನೇರ ಖಾತೆಗೆ ಜಮಾಯಿಸಿ ನೊಂದವರಿಗೆ ಆಸರೆ ಯಾಗಿದೆ ಎಂದರು.

    ಈಗಾಗಲೇ ರಾಜ್ಯದಲ್ಲಿ ೪೬ ಕೋಟಿ ರೂ. ವೆಚ್ಚದಲ್ಲಿ ಒಟ್ಟು ೧೦೦ ವಾಹನಗಳನ್ನು ರಾಜ್ಯಾದ್ಯಂತ ಸಂಚರಿ ಸುತ್ತಿದ್ದು ಎಲ್ಲಾ ಕಾರ್ಮಿಕರು ಮತ್ತು ಅವಲಂಬಿತರಿಗೆ ಅಗತ್ಯ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಯನ್ನು ಕಾರ್ಮಿಕರಿರುವ ಸ್ಥಳಕ್ಕೆ ತೆರಳಿ ನೀಡುತ್ತಿದೆ. ಅದರಂತೆ ಜಿಲ್ಲಾ ಕೇಂದ್ರಕ್ಕೂ ಎರಡು ವಾಹನಗಳನ್ನು ನೀಡಿ ಕಾ ರ್ಮಿಕರಿಗೆ ಸ್ಪಂದಿಸಿದೆ ಎಂದರು.

    ಕಾರ್ಮಿಕರ ಬದುಕಿನ ಶ್ರೇಯೋಭಿವೃದ್ದಿಗಾಗಿ ಕಟ್ಟಡ ನಿರ್ಮಿಸುವ ಮಾಲೀಕರಿಂದ ಶೇ.೧ರ ಸುಂಕವನ್ನು ಕಾರ್ಮಿಕ ಇಲಾಖೆಗೆ ಕಡ್ಡಾಯಗೊಳಿಸಿದ್ದು ಇದರಿಂದ ಬಡಕಾರ್ಮಿಕ ವರ್ಗಕ್ಕೆ ಸಕಲಸವಲತ್ತನ್ನು ಪೂರೈಸಿ ತುರ್ತು ವೇಳೆಯಲ್ಲಿ ಸಹಕರಿಸುತ್ತಿದೆ. ಜೊತೆಗೆ ವಾಹನದಲ್ಲಿ ಕಾರ್ಯನಿರ್ವಹಿಸುವ ವೈದ್ಯರು, ಶುಶ್ರೂಷಕರು ಸೇವಾಮನೋಭಾವನದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.

    ಕಾರ್ಮಿಕ ಅಧಿಕಾರಿ ಸುರೇಶ್ ಮಾತನಾಡಿ ಹೈಟೆಕ್ ಸಂಚಾರಿ ಆರೋಗ್ಯ ಕ್ಲಿನಿಕ್ ವಾಹನವು ಕಾರ್ಮಿ ಕರು ತುರ್ತು ಸಂದರ್ಭದಲ್ಲಿ ಸ್ಪಂದಿಸಲು ರಾಜ್ಯಸರ್ಕಾರ ಎರಡು ವಾಹಗಳನ್ನು ಒದಗಿಸಿಕೊಟ್ಟಿದ್ದು ೨೦ಕ್ಕೂ ಹೆಚ್ಚು ವಿವಿಧ ಸೌಲಭ್ಯಗಳು ಈ ವಾಹನದಿಂದ ಅಡಕವಾಗಿದೆ ಎಂದು ತಿಳಿಸಿದರು.

    ಇದೇ ವೇಳೆ ೨೦ ಬಡಗಾರೆ ಕೆಲಸಗಾರರಿಗೆ ಟೂಲ್‌ಕಿಟ್ ಹಾಗೂ ಅಪಘಾತದಲ್ಲಿ ಮೃತಪಟ್ಟ ವಾಣಿಜ್ಯ ಚಾಲಕರ ಈರ್ವರ ಕುಟುಂಬಕ್ಕೆ ತಲಾ ೫ ಲಕ್ಷ ರೂ.ಗಳ ಆದೇಶ ಪ್ರತಿಯನ್ನು ವಿತರಿಸಲಾಯಿತು.

    ಈ ಸಂದರ್ಭದಲ್ಲಿ ಸಹಾಯಕ ಕಾರ್ಮಿಕ ಆಯುಕ್ತ ಎಂ.ಸುಭಾಶ್, ಕಾರ್ಮಿಕ ನಿರೀಕ್ಷಕರಾದ ಪ್ರಭಾಕರ್, ಪ್ರವೀಣ್‌ಕುಮಾರ್, ತರೀಕೆರೆ ಕಾರ್ಮಿಕ ನಿರೀಕ್ಷಕ ಮಹಾದೇವಪ್ಪ, ಕಾರ್ಮಿಕ ಕಲ್ಯಾಣ ಮಂಡಳಿ ಅಭಿ ಯಂತರ ಹ್ಯಾರಿಸ್, ಇಲಾಖೆ ಸಿಬ್ಬಂದಿಗಳು, ಫಲಾನುಭವಿಗಳು ಉಪಸ್ಥಿತರಿದ್ದರು.

    Transport for the health and well-being of workers

  • ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಶಸ್ತ್ರ – ಶಾಸ್ತ್ರದ ಭಯ ಅಗತ್ಯ

    ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಶಸ್ತ್ರ – ಶಾಸ್ತ್ರದ ಭಯ ಅಗತ್ಯ

    ಚಿಕ್ಕಮಗಳೂರು: ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಶಸ್ತ್ರ ಮತ್ತು ಶಾಸ್ತ್ರದ ಭಯ ಅಗತ್ಯ ಎಂದು ಬಾಳೆಹೊನ್ನೂರಿನ ಶ್ರೀಮದ್ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಿಸಿದರು.

    ಅಜ್ಜಂಪುರ ಸಮೀಪದ ಬಗ್ಗವಳ್ಳಿ ಗ್ರಾಮದ ಮಠದಮನೆಯಲ್ಲಿ ಲೋಕಕಲ್ಯಾರ್ಥವಾಗಿ ಆಯೋಜಿಸಿದ್ದ ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಭಾನುವಾರ ಅವರು ಶುಭಸಂದೇಶ ನೀಡಿದರು.

    ವೀರಶೈವ ಸಂಸ್ಕೃತಿಯಲ್ಲಿ ಇಷ್ಟಲಿಂಗಪೂಜೆಗೆ ಮಹತ್ವ ನೀಡಲಾಗಿದೆ. ಭಕ್ತಿಭಾವದ ಸದುದ್ದೇಶದ ಸಂಕಲ್ಪ ಸಾಕಾರಗೊಳ್ಳುತ್ತದೆ. ಏಕಾಂತವಾಗಿದ್ದ ಇಷ್ಟಲಿಂಗಪೂಜೆಯನ್ನು ಲೋಕಾಂತಗೊಳಿಸಲಾಗಿದೆ. ಆಸ್ತಿಕ ಮಹಾಶಯರೆಲ್ಲರೂ ಪೂಜೆಯಲ್ಲಿ ಪಾಲ್ಗೊಂಡು ಸಂತೋಷಪಡುವ ಅವಕಾಶ ಕಲ್ಪಿಸಿರುವುದು ಹರ್ಷದ ಸಂಗತಿ ಎಂದರು.
    ದೇವರಲ್ಲಿ ಶ್ರದ್ಧೆ ನಂಬಿಕೆ ಅತ್ಯಗತ್ಯ. ಆದಿ ಜಗದ್ಗುರು ರೇಣುಕಾಚಾರ್ಯರರು ಮನುಕುಲದ ಉದ್ಧಾರಕ್ಕಾಗಿ ದಶಧರ್ಮಸೂತ್ರಗಳನ್ನು ಬೋಧಿಸಿದ್ದಾರೆ. ಅವುಗಳನ್ನು ನಿಜವಾಗಿ ಪಾಲಿಸಿದ್ದೆ ಆದರೆ ಶಾಂತಿ-ನೆಮ್ಮದಿ ಬದುಕು ನಮ್ಮೆಲ್ಲರದ್ದಾಗುತ್ತದೆ ಎಂದ ಜಗದ್ಗುರುಗಳು, ಶಾಸ್ತ್ರ ಭಯದ ಮರ್ಯಾದೆ ಮೀರಿ ನಡೆದಾಗ ಶಸ್ತ್ರದ ಭಯ ಇರುತ್ತದೆ ಎಂದರು.

    ಜೀವನ ಜಂಜಾಟದಲ್ಲಿ ಸಿಲುಕಿದ ಮನುಷ್ಯನಿಗೆ ಪೂಜಾದಿ ಧಾರ್ಮಿಕ ಕಾರ್ಯಗಳಲ್ಲಿ ಸ್ಫೂರ್ತಿ ನೆಮ್ಮದಿ ಇದೆ. ಸಂಮೃದ್ಧ ಮತ್ತು ಶಾಂತಿಯ ನಾಡನ್ನು ಕಟ್ಟುವುದೇ ಧರ್ಮದ ಧ್ಯೇಯ. ವ್ಯಕ್ತಿತ್ವ ವಿಕಾಸವೇ ಗುರಿ. ಹೆತ್ತತಾಯಿ, ಹೊತ್ತಭೂಮಿ ಎಷ್ಟು ಮುಖ್ಯವೋ ಧರ್ಮವೂ ಅಷ್ಟೇ ಮುಖ್ಯ. ವಿವೇಕದ ತುತ್ತ ತುದಿಯೆ ದೈವಸಾಕ್ಷಾತ್ಕಾರ. ಧರ್ಮದಲ್ಲಿ ಮಾರ್ಗವಿದೆ, ಆದರೆ ವೇಗವಿಲ್ಲ. ವಿಜ್ಞಾನದಲ್ಲಿ ವೇಗವಿದೆ ಆದರೆ ಮಾರ್ಗವಿಲ್ಲ. ಧರ್ಮ ಮತ್ತು ವಿಜ್ಞಾನ ಸಮನ್ವಯತೆಯಿಂದ ಸಾಗಿದರೆ ಮಾನವನ ಬದುಕಿಗೆ ಶ್ರೇಯಸ್ಸು ಇದೆ ಎಂದು ಶ್ರೀಮದ್ರಾಂಭಾಪುರಿ ಜಗದ್ಗುರುಗಳು ಅಭಿಪಾಯಿಸಿದರು.
    ಸಮಾರಂಭದ ಆಯೋಜಕರಾದ ವಿಶ್ರಾಂತಶಿಕ್ಷಕ ಬಿ.ಪಿ.ಲಿಂಗಮೂರ್ತಿ ಪ್ರಾಚೀನ ಇತಿಹಾಸ ಹೊಂದಿರುವ ಬಗ್ಗವಳ್ಳಿ ಗ್ರಾಮಕ್ಕೆ ರಂಭಾಪುರಿ ಪ್ರಸ್ತುತ ಜಗದ್ಗುರುಗಳು ಎರಡನೆಬಾರಿ ಆಗಮಿಸಿರುವುದು ಸಂತೋಷದ ಸಂಗತಿ. ಗ್ರಾಮಸ್ಥರಿಗೆ ದರ್ಶನಾಶೀರ್ವಾದದ ಜೊತೆಗೆ ಇಷ್ಟಲಿಂಗಪೂಜೆಯಲ್ಲಿ ಪಾಲ್ಗೊಳ್ಳುವ ಅವಕಾಶವಾಗಿದ್ದು ಸಂತಸದ ಸಂಗತಿ ಎಂದರು.

    ಜಂಗಮಸಮಾಜದ ಮುಖ್ಯಸ್ಥ ಬಿ.ಪಿ.ಶಿವಮೂರ್ತಿ ಮಾತನಾಡಿ ಪಂಚಪೀಠಗಳಲ್ಲಿ ಪ್ರಥಮ ಪೀಠವಾಗಿ ಶ್ರೀಮದ್ರಂಭಾಪುರಿ ವೀರಸಿಂಹಾಸನ ಮಹಾಪೀಠವು ಜನರ ಬಳಿಗೆ ಬಂದು ನಿಜಧರ್ಮದ ಬೋಧೆ ಮಾಡುತ್ತಿದೆ. ಆದಿಜಗದ್ಗುರು ರೇಣುಕಾಚಾರ್ಯರು ಅಗಸ್ತ್ಯ ಮಹಾಮುನಿಗಳನ್ನು ನಿಮಿತ್ತಮಾಡಿಕೊಂಡು ಮಾನವಸಂಕುಲಕ್ಕೆ ಉಪಯುಕ್ತವಾದ ಸತ್ಯ, ಜಪ, ತಪ, ಪೂಜೆ, ಧ್ಯಾನ, ಕ್ಷಮೆ, ದಯೆ, ದಾನ, ಅಸ್ತೇಯ, ಬ್ರಹ್ಮಚರ್ಯದಂತಹ ಹತ್ತು ವಿಧದ ಸಂಹಿತೆಯನ್ನು ನೀಡಿ ಉಪಕರಿಸಿದ್ದಾರೆಂದರು.

    ಇಷ್ಟಲಿಂಗ, ಪ್ರಾಣಲಿಂಗ ಮತ್ತು ಭಾವಲಿಂಗಗಳ ಅನುಸಂಧಾನದ ಮೂಲಕ ಮಾಡುವ ಗುರು-ಜಂಗಮಗಳ ಅರ್ಚನೆಯೆ ಪೂಜೆ ಎನಿಸುತ್ತದೆ. ಚಂಚಲವಾದ ಮನಸ್ಸನ್ನು ಏಕಾಗ್ರಗೊಳಿಸುವ ಸಲುವಾಗಿ ನಾನಾ ಬಗೆಯ ಉಪಚಾರಗಳಿಂದ ಮಾಡುವ ಇಷ್ಟಲಿಂಗಪೂಜೆಯು ಆಸ್ತಿಕರಲ್ಲಿ ಸಂತೋಷವನ್ನುಂಟು ಮಾಡುತ್ತದೆ ಎಂದರು.
    ಪ್ರತಿ ಧರ್ಮವೂ ನೈತಿಕವಿಚಾರ, ಸಾಂಪ್ರದಾಯಕವಿಚಾರ ಮತ್ತು ದಾರ್ಶನಿಕವಿಚಾರಗಳನ್ನು ಒಳಗೊಂಡಿರುತ್ತವೆ. ಎಲ್ಲ ಧರ್ಮದಲ್ಲೂ ನೈತಿಕ ವಿಚಾರಗಳು ಒಂದೇ ಆಗಿರುತ್ತದೆ. ದಾರ್ಶನಿಕ ವಿಚಾರದಲ್ಲಿ ವಿಭಿನ್ನತೆ ಇದ್ದು, ಸಾಂಪ್ರದಾಯಕ ವಿಚಾರಗಳು ಬೇರೆ ಬೇರೆ ಆಗಿರುತ್ತವೆ ಎಂದ ಶಿವಮೂರ್ತಿ, ಅಷ್ಟಾವರಣ -ಪಂಚಾಚಾರ ಮತ್ತು ಷಟ್‌ಸ್ಥಲಗಳು ವೀರಶೈವ ಧರ್ಮಕ್ಕೆ ಮೂಲಾಧಾರ. ಇವುಗಳ ಕನಿಷ್ಟಜ್ಞಾನ ವೀರಶೈವರಿಗೆ ಅತ್ಯಗತ್ಯ ಎಂದರು.

    ಅಖಿಲಭಾರತ ಶಿವಾಚಾರ್ಯ ಸಂಸ್ಥೆಯ ಗೌರವಾಧ್ಯಕ್ಷ ಶ್ರೀರೇಣುಕ ಶಿವಾಚಾರ್ಯರು, ಹುಣಸಘಟ್ಟದ ಶ್ರೀಗುರುಮೂರ್ತಿ ಶಿವಾಚಾರ್ಯರು ಹಾಗೂ ತಾವರೆಕೆರೆ ಶಿಲಾಮಠದ ಡಾ.ಅಭಿನವಸಿದ್ದಲಿಂಗಶಿವಾಚಾರ್ಯರು ಪೂಜಾಕಾರ್‍ಯದಲ್ಲಿ ಪಾಲ್ಗೊಂಡಿದ್ದರು.

    ಶನಿವಾರ ಸಂಜೆ ಬಗ್ಗವಳ್ಳಿಗೆ ಆಗಮಿಸಿದ ಶ್ರೀಮದ್ರಂಭಾಪುರಿ ಜಗದ್ಗುರುಗಳನ್ನು ತಳಿರುತೋರಣ, ಜಯಘೋಷ, ಪಟಾಕಿಸಿಡಿಸುವುದರ ಮೂಲಕ ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು. ಕುಂಭಹೊತ್ತ ಮಹಿಳೆಯರೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು. ಗ್ರಾಮದ ಸಮುದಾಯಭವನದಲ್ಲಿ ಸ್ವಾಗತ ಧರ್ಮ ಸಮಾರಂಭ ನಡೆಯಿತು.

    ತರೀಕೆರೆ ಶಾಸಕ ಎಸ್.ಜಿ.ಶ್ರೀನಿವಾಸ, ಅಜ್ಜಂಪುರ ತಾಲ್ಲೂಕು ಜಂಗಮಸಮಾಜದ ಅಧ್ಯಕ್ಷ ಗಂಗಾಧರಯ್ಯ ಮತ್ತು ಬಗ್ಗವಳ್ಳಿಯ ಬಡಗನಾಡು ಹೇಮರಡ್ಡ್ಡಿ ಮಲ್ಲಮ್ಮ ವೀರಶೈವ ಜನಾಂಗ ಸಂಘದ ಅಧ್ಯಕ್ಷ ಹೇಮಂತಕುಮಾರ್, ಜಂಗಮಬಳಗ ಸಂಚಾಲಕ ಪ್ರಭುಲಿಂಗಶಾಸ್ತ್ರಿ , ಗ್ರಾ.ಪಂ.ಸದಸ್ಯ ಗುರುಪಾದಪ್ಪ, ಗ್ರಾಮದ ಮುಖಂಡ ಮರುಳಸಿದ್ದಪ್ಪ, ಮರುಳಪ್ಪ, ಗೊಂಡೇದಹಳ್ಳಿ ಗಿರೀಶ್, ಕಾಟೆಗನೆರೆ ಉಮಾಪತಿ ಆರಾಧ್ಯ, ಅಮೃತಾಪುರದ ಪ್ರಭು, ಬಿ.ಎಸ್.ಚಂದ್ರಶೇಖರಪ್ಪ, ಉಪನ್ಯಾಸಕರುಗಳಾದ ಯಶವಂತಕುಮಾರ ಮತ್ತು ಕಿರಣಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು. ಮಠದಮನೆ ವತಿಯಿಂದ ನೂರಕ್ಕೂ ಹೆಚ್ಚು ಪ್ರಮುಖರಿಗೆ ಗುರುರಕ್ಷೆ ನೀಡಿ ಜಗದ್ಗುರುಗಳಿಂದ ಆಶೀರ್ವದ ಕೊಡಿಸಲಾಯಿತ.

    ಮಠದಮನೆಯ ಲಿಂಗರಾಧ್ಯ ಸ್ವಾಗತಿಸಿ, ಡಾ.ಮೋಹನ್‌ಕಮಾರ್ ವಂದಿಸಿದರು. ಶಿವಮೂರ್ತಯ್ಯ ಪ್ರಾಸ್ತಾವಿಸಿದ್ದು, ಸೌಮ್ಯಶ್ರೀಯಶವಂತ್ ಪ್ರಾರ್ಥಿಸಿ ಜ್ಯೋತಿಕಿರಣ ನಿರೂಪಿಸಿದರು.

    Fear of surgery is necessary to build a healthy society

  • ಜನಬಳಕೆಯ ಪದದಲ್ಲೇ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಕಾವ್ಯಸೃಷ್ಟಿ

    ಜನಬಳಕೆಯ ಪದದಲ್ಲೇ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಕಾವ್ಯಸೃಷ್ಟಿ

    ಚಿಕ್ಕಮಗಳೂರು: ಜನಬಳಕೆಯ ಪದಗಳನ್ನು ತಿಣುಕದೆ ಸುಲಲಿತವಾಗಿ ಬಳಸಿ ಸಾಹಿತ್ಯ ಸೃಷ್ಟಿಸುತ್ತಿದ್ದರಲ್ಲ, ಅದುವೇ ಎಚ್ಚೆಸ್ವಿಯವರ ಕಾವ್ಯ ರಚನೆಯ ದೊಡ್ಡ ಶಕ್ತಿ. ಅದುವೇ ನಾವೆಂದಿಗೂ ಅವರನ್ನು ನೆನಪಿನಂಗಳದಲ್ಲಿ ಸ್ಮರಣೆ ಮಾಡಿಕೊಳ್ಳಲು ಕಾರಣ ಎಂದು ಸಾಹಿತಿ ಡಾ.ಎಚ್.ಎಸ್.ಸತ್ಯನಾರಾಯಣ ಅಭಿಪ್ರಾಯ ವ್ಯಕ್ತಪಡಿಸಿದರು.

    ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾ, ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಸಾಂಸ್ಕೃತಿಕ ಸಂಘ ಹಾಗೂ ಸುಗಮ ಸಂಗೀತ ಗಂಗಾ ಸಹಯೋಗದಲ್ಲಿ ಭಾನುವಾರ ಸಂಜೆ ನಗರದ ಬ್ರಹ್ಮಸಮುದ್ರ ಶ್ರೀ ರಂಗಣ್ಣನವರ ಛತ್ರದಲ್ಲಿ ಆಯೋಜಿಸಿದ್ದ `ನೆನಪಿನಂಗಳದಲ್ಲಿ ಎಚ್ಚೆಸ್ವಿ’ ಡಾ.ಎಚ್.ಎಸ್.ವೆಂಕಟೇಶಮೂರ್ತಿಯ ಕಾವ್ಯ ಗಾಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಗೋಪಿಕಾ ಸ್ತ್ರೀಯರಂತೆ ಕೃಷ್ಣನನ್ನು ಪ್ರೀತಿಸಿದವರಿಗೆ ಮಾತ್ರ ಕೃಷ್ಣನ ಮೇಲೆ ಅಷ್ಟೊಂದು ಭಾವ ತೀವ್ರತೆಯಿಂದ ಕಾವ್ಯ ಸೃಷ್ಟಿಸಲು ಸಾಧ್ಯ, ಎಚ್ಚೆಸ್ವಿಯವರ `ಡಿವೈನ್ ಲವ್’ ಆ ರೀತಿಯದು ಎಂದ ಅವರು, ಎಚ್ಚೆಸ್ವಿಯವರ ರಚನೆ `ತೂಗು ಮಂಚದಲ್ಲಿ ಕೂತು.. ಮೇಘ ಶ್ಯಾಮ ರಾಧೆಗಾತು.. ಆಡುತಿರುವನು ಏನೋ ಮಾತು.. ರಾಧೆ ನಾಚುತ್ತಿದ್ದಳು.. ಸೆರಗ ಬೆರಳಿನಲ್ಲಿ ಸುತ್ತಿ, ಜಡೆಯ ತುದಿಯ ಕೆನ್ನೆಗೊತ್ತಿ, ಜುಮ್ಮ ಕೊಡುವ ಮುಖವನೆತ್ತಿ ಕಣ್ಣು ಮುಚ್ಚುತ್ತಿದ್ದಳು’ ಅವಳು ನಾಚುತ್ತಿದ್ದಳೆಂದರೆ ಮಿಲನದ, ಶೃಂಗಾರದ ಮಾತನ್ನೇ ಕೃಷ್ಣ ಆಡುತ್ತಿದ್ದ ಎಂದೆನಿಸುತ್ತದೆ. `ಮುಖವ ಎದೆಯ ನಡುವೆ ಒತ್ತಿ, ತೋಳಿನಿಂದ ಕೊರಳ ಸುತ್ತಿ, ತುಟಿಯ ತೀಡಿ ಬೆಂಕಿಗೊತ್ತಿ ಹಮ್ಮನುಸಿರಬಿಟ್ಟಳು.. ಅದು ದೈವಿಕ ಪ್ರೇಮ ಎನ್ನುವ ಅರಿವಿರುವ ಕವಿ ಎಚ್ಚೆಸ್ವಿ ತಮ್ಮ ಕಾವ್ಯವನ್ನು ಅಶ್ಲೀಲಗೊಳಿಸದೆ ಸೊಗಸಾಗಿ ಚಿತ್ರಿಸಿದ್ದಾರೆ ಎಂದು ಬಣ್ಣಿಸಿದರು.

    `ಮಧುರೆಗೆ ಹೋದನು ಮಾಧವ.. ಬರುವನೊ.. ಬಾರನೊ ಹೋದವ..’ ಆ ಎರಡು ಸಾಲುಗಳಲ್ಲಿರುವ ಸುದೀರ್ಘ ವಿರಹದ ತೀವ್ರತೆ ಇದೆಯಲ್ಲ, ಆ ಹಾಡು ನಮಗೆ ಪ್ರಿಯವಾಗುವುದಕ್ಕೆ ಅದೇ ಕಾರಣ ಎಂದು ವಿಶ್ಲೇಷಿಸಿದರು. ರಾಘವೇಂದ್ರ ಬೀಜಾಡಿ ಸ್ವರ ಸಂಯೋಜನೆ ಮಾಡಿ ಹಾಡಿದ `ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ’ ಗೀತೆ ೪೯ ಲಕ್ಷ ಜನರನ್ನು ತಲುಪಿದ್ದು, ನಮ್ಮ ಕಾಲಕ್ಕೆ ಅದು ಅತ್ಯಂತ ದೊಡ್ಡ ದಾಖಲೆ. `ಲೋಕದ ಕಣ್ಣಿಗೆ ರಾಧೆಯು ಕೂಡ.. ಎಲ್ಲರಂತೆ ಹೆಣ್ಣು’, `ಅಮ್ಮ ನಾನು ದೇವರಾಣೆ.. ಬೆಣ್ಣೆ ಕದ್ದಿಲ್ಲಮ್ಮ’, `ಇಷ್ಟು ಕಾಲ ಒಟ್ಟಿಗಿದ್ದು..’ ಇತ್ಯಾದಿ ಗೀತೆಯ ಮೂಲಕ ಸಾಗರದಾಚೆಯ ಜನರಿಗೂ ಎಚ್ಚೆಸ್ವಿ ತಲುಪಿದ್ದಾರೆ ಎಂದರು.

    ಎಚ್ಚೆಸ್ವಿ ಸುಮಾರು ೨೨ ಕವಿತಾ ಸಂಕಲನಗಳು, ನಾಲ್ಕು ವಿಮರ್ಶಾ ಕೃತಿಗಳು, ರಂಗಭೂಮಿಯನ್ನು ಆಳಿ ಪ್ರಸಿದ್ಧಿಯಾದ ೧೧ ನಾಟಕಗಳು, ಮಕ್ಕಳಿಗಾಗಿ ೨೭ ಕೃತಿಗಳು, ಗೀತ ನಾಟಕಗಳು, ಎರಡು ಖಂಡ ಕಾವ್ಯಗಳು ಸೇರಿದಂತೆ ಒಟ್ಟು ೧೨೭ ಕೃತಿಗಳನ್ನು ರಚಿಸಿದ್ದಾರೆ. ಎರಡು ವರ್ಷಗಳಲ್ಲಿ ಐದು ಮುದ್ರಣ ಕಂಡಿರುವ ಅವರ `ಬುದ್ಧಚರಣ’ ಮಹಾಕಾವ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ಬರಬೇಕೆನ್ನುವ ನಿರೀಕ್ಷೆ ಇತ್ತು. ಆದರೆ ಅನುವಾದ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯಕ್ಕಾಗಿ ಅವರಿಗೆ ಎರಡು ಬಾರಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿತ್ತು ಎಂದು ಹೇಳಿದರು.

    ಮಕ್ಕಳಿಗಾಗಿ ಕಾದಂಬರಿ ಬರೆದವರಲ್ಲಿ ಎಚ್ಚೆಸ್ವಿ ಮೊದಲಿಗರು. ಅವರಿಗಾಗಿ ಅನೇಕ ನಾಟಕಗಳು ಹಾಗೂ ಕಥೆಗಳನ್ನು ಬರೆದಿದ್ದಾರೆ. ಮಕ್ಕಳನ್ನು ಸಾಹಿತ್ಯ ಓದುವುದಕ್ಕೆ ಹಚ್ಚಬೇಕೆಂದರೆ ಚಿಕ್ಕ ಪುಸ್ತಕ ನೀಡಿ ಅವರ ಭಾವಕೋಶ ಜಾಗೃತಗೊಳಿಸಿ ಸಾಹಿತ್ಯದ ಸಂಸ್ಕಾರ ನೀಡಬೇಕು. ಅದಕ್ಕಾಗಿಯೇ ಪಂಜೆ ಮಂಗೇಶರಾಯರು, ಕುವೆಂಪು, ಕಾರಂತ, ಮಾಸ್ತಿ, ಬೇಂದ್ರೆ, ರಾಜರತ್ನಂ, ಶಿಶು ಸಂಗಮೇಶ ಇವರೆಲ್ಲ ಮಕ್ಕಳಿಗಾಗಿ ಮೊದಲು ಬರೆದರು ಎಂದು ಎಚ್ಚೆಸ್ವಿ ಹೇಳಿದ್ದರು ಎಂದರು.

    ಸಂಗೀತ ಶಿಕ್ಷಕಿ ಬೀರೂರಿನ ಜ್ಯೋತಿ ಅನಂತು ಉದ್ಘಾಟಿಸಿದ ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಪಿ.ಮಂಜುನಾಥ ಜೋಷಿ, ಆದಿಚುಂಚನಗಿರಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ಸಿ.ಕೆ.ಸುಬ್ಬರಾಯ, ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ, ಸಾಹಿತಿ ಬೆಳವಾಡಿ ಮಂಜುನಾಥ, ಸಾಂಸ್ಕೃತಿಕ ಸಂಘದ ಅಧ್ಯಕ್ಷ ಆನಂದ್ ಕುಮಾರ್ ಶೆಟ್ಟಿ ಮತ್ತಿತರರು ಇದ್ದರು. ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಉಜ್ವಲ್ ಪಡುಬಿದ್ರಿ ಸ್ವಾಗತಿಸಿದರು. ಬಿಎಂಎಸ್ ಜಂಟಿ ಕಾರ್ಯದರ್ಶಿ ಎ.ಎನ್.ಗೋಪಾಲಕೃಷ್ಣ ವಂದಿಸಿದರು. ಬಿಎಂಎಸ್ ನಿರ್ದೇಶಕಿ ಸುಮಾ ಪ್ರಸಾದ್ ನಿರೂಪಿಸಿದರು.

    ಎಂ.ಎಸ್.ಸುಧೀರ್ ನೇತೃತ್ವದಲ್ಲಿ ಪೂರ್ವಿ ತಂಡದ ಗಾಯಕರಾದ ಚೇತನ್‌ರಾಮ್, ವಿಷ್ಣು ಭಾರದ್ವಾಜ್, ರೂಪ ಅಶ್ವಿನ್, ಅನುಷ, ರುಕ್ಸಾನಾ ಕಾಚೂರು, ರಾಯನಾಯಕ್, ಜ್ಯೋತಿ ವಿನೀತ್‌ಕುಮಾರ್, ಪೃಥ್ವಿಶ್ರೀ, ಸ್ವೇಚಿತ್, ಚಿನ್ಮಯಿ ಕೆ.ಎಸ್., ಮಾನ್ಯತ ಭಾಗಮನೆ, ಮಾನ್ಯ ಭಟ್ ಎಚ್ಚೆಸ್ವಿ ರಚನೆಯ ಗೀತೆಗಳಿಗೆ ಧ್ವನಿಯಾಗಿ ಸಂಗೀತ ಪ್ರಿಯರನ್ನು ರಂಜಿಸಿದರು. ಪಕ್ಕವಾದ್ಯದಲ್ಲಿ ಗಣೇಶ್ ಭಟ್(ಕೀಬೋರ್ಡ್), ಅರುಣ್‌ಕುಮಾರ್ (ರಿದಮ್ ಪ್ಯಾಡ್), ವೇಣುಗೋಪಾಲ್ (ತಬಲ), ಪ್ರದೀಪ್ ಕಿಗ್ಗಾಲ್ (ಗಿಟಾರ್) ಸಾಥ್ ನೀಡಿದರು.

    Dr. H.S. Venkateshamurthy’s poetry creation in popular terms

  • ಜೂ.18 ರಂದು ನಗರದಲ್ಲಿ ಸಿಪಿಐ ತಾಲೂಕು ಸಮ್ಮೇಳನ

    ಜೂ.18 ರಂದು ನಗರದಲ್ಲಿ ಸಿಪಿಐ ತಾಲೂಕು ಸಮ್ಮೇಳನ

    ಚಿಕ್ಕಮಗಳೂರು: ಭಾರತ ಕಮ್ಯುನಿಷ್ಟ ಪಕ್ಷ ಸ್ಥಾಪನೆಯಾಗಿ ಇಲ್ಲಿಗೆ ೧೦೦ ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ, ರಾಜ್ಯ, ಜಿಲ್ಲಾ ಸಮ್ಮೇಳನಗಳು ನಡೆಯುತ್ತಿದ್ದು, ಅದಕ್ಕೆ ಪೂರಕವಾಗಿ ಜೂ.೧೮ ರಂದು ನಗರದಲ್ಲಿ ಸಿಪಿಐ ತಾಲೂಕು ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ತಾಲೂಕು ಕಾರ್ಯದರ್ಶಿ ಕೆರೆಮಕ್ಕಿ ರಮೇಶ್ ತಿಳಿಸಿದರು.

    ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಸಿಪಿಐ ಕಚೇರಿಯ ಬಿ.ಕೆ.ಸುಂದರೇಶ್ ಸಭಾಂಗಣದಲ್ಲಿ ಅಂದು ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ಪ್ರಸ್ತುತ ದೇಶ, ರಾಜ್ಯದ ರಾಜಕೀಯ ಪರಿಸ್ಥಿತಿ ಕುರಿತು ವಿಶ್ಲೇಷಣೆ ನಡೆಯಲಿದೆ. ರಾಜ್ಯ ಮತ್ತು ಕೇಂದ್ರ ಸರಕಾರಗಳು ಜನಸಾಮಾನ್ಯರ ಮೂಲಭೂತ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿವೆ. ದಿನೇ ದಿನೆ ನಿರುದ್ಯೋಗ ಸಮಸ್ಯೆ, ಬಡತನ ವೃದ್ಧಿಯಾಗುತ್ತಿದೆ ಎಂದು ದೂರಿದರು.

    ಅಗತ್ಯ ವಸ್ತುಗಳು ಹಾಗೂ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಬಡವರು ಮತ್ತು ಶ್ರೀಮಂತರ ಮಧ್ಯೆ ಅಂತರ ತೀವ್ರಗೊಳ್ಳುತ್ತಿದೆ. ಕೂಲಿ ಕಾರ್ಮಿಕರು ಸಂಕಷ್ಟದ ಬದುಕನ್ನು ಕಳೆಯುತ್ತಿದ್ದಾರೆ. ಗುಣಮಟ್ಟದ ಶಿಕ್ಷಣ, ಆರೋಗ್ಯ ಕೈಗೆಟುಕದಂತಾಗಿದೆ. ಬಡವರಿಗೆ ವಾಸಿಸಲು ಮನೆ, ನಿವೇಶನ ಇಲ್ಲ ಈ ಎಲ್ಲ ಸಮಸ್ಯೆಗಳ ಬಗ್ಗೆ ಸಮಾವೇಶದಲ್ಲಿ ಸುದೀರ್ಘ ಚರ್ಚೆ ನಡೆಯಲಿದೆ ಎಂದರು.

    ಸರಕಾರದ ಈ ಜನವಿರೋಧಿ ಧೋರಣೆಗಳ ವಿರುದ್ಧ ಹೋರಾಟ ರೂಪಿಸಲು ಸಿಪಿಐ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಗುವುದು. ಸಮಾಜದಲ್ಲಿ ಶಾಂತಿ ಸೌಹಾರ್ದತೆ ಕಾಪಾಡುವಂತಹ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು.

    ಪತ್ರಿಕಾಗೋಷ್ಠಿಯಲ್ಲಿ ಸಿಪಿಐ ಸಹಕಾರ್ಯದರ್ಶಿ ಹೆಡದಾಳ್‌ಕುಮಾರ್, ನಗರ ಕಾರ್ಯದರ್ಶಿ ರಮೇಶ್, ಜಿಲ್ಲಾ ಮಂಡಳಿ ಸದಸ್ಯ ವಸಂತಕುಮಾರ್ ಉಪಸ್ಥಿತರಿದ್ದರು.

    CPI Taluk Conference in the city on June 18

  • ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ

    ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಮಲೆನಾಡು ಭಾಗದಲ್ಲಿ ಎಡೆಬಿಡದೆ ಸುರಿಯುತ್ತಿದೆ. 

    ಮುಳ್ಳಯ್ಯನಗಿರಿ, ಕೆಮ್ಮಣ್ಣುಗುಂಡಿ, ಕುದುರೆಮುಖ, ಕಳಸ, ಕೊಪ್ಪ, ಶೃಂಗೇರಿ, ಬಾಳೆಹೊನ್ನೂರು, ಕೊಟ್ಟಿಗೆಹಾರ, ಆಲ್ದೂರು, ಎನ್.ಆರ್.ಪುರ, ಆಲ್ದೂರು ಸೇರಿ ಹಲವೆಡೆ ಮಳೆ ಸುರಿಯುತ್ತಿದೆ. ಚಿಕ್ಕಮಗಳೂರು ನಗರದಲ್ಲೂ ಭಾನುವಾರ ಬೆಳಿಗ್ಗೆಯಿಂದ ಜಿಟಿಜಿಟಿ ಮಳೆ ಸುರಿಯಿತು.

    ಶೃಂಗೇರಿಯ ಸಮೀಪದ ಸುಂಕದ ಮಕ್ಕಿ– ನೆಮ್ಮಾರ್ ಸಮೀಪ ವಿಪರೀತ ಮಳೆಗೆ ಹೆದ್ದಾರಿ ಮೇಲೆ ಗುಡ್ಡದ ಮಣ್ಣು ಬಿದ್ದಿದೆ. ಇದರಿಂದ ಎಸ್.ಕೆ. ಬಾರ್ಡರ್ ಮತ್ತು ಕಾರ್ಕಳಕ್ಕೆ ಸಂಪರ್ಕ ಕಡಿತಗೊಂಡಿತ್ತು. 

    ಮಳೆಯ ನಡುವೆ ಮುಳ್ಳಯ್ಯನಗಿರಿ ಭಾಗದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ಮಳೆಯ ನಡುವೆ ವಾಹನ ದಟ್ಟಣೆಯಲ್ಲಿ ಸಿಲುಕಿ ಪ್ರವಾಸಿಗರು ಪರದಾಡಿದರು.

    ಬಿರುಸುಗೊಂಡ ಮಳೆ: ಮೂಡಿಗೆರೆ ತಾಲ್ಲೂಕಿನಾದ್ಯಂತ ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಎಡೆಬಿಡದೇ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಳಿಸಿತು.

    ತೀವ್ರ ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ಸ್ಥಗಿತವಾಗಿದ್ದು, ಕಾರ್ಮಿಕರಿಗೆ ರಜೆ ಘೋಷಿಸಲಾಗಿತ್ತು. ಕಳೆದ 24 ಗಂಟೆಗಳಲ್ಲಿ ಕೊಟ್ಟಿಗೆಹಾರದಲ್ಲಿ 147.2 ಮಿ.ಮೀ, ಜನ್ನಾಪುರ 40 ಮಿ.ಮೀ, ಜಾಣಿಗೆ 73 ಮಿ.ಮೀ, ಪಟ್ಟಣದಲ್ಲಿ 35 ಮಿ.ಮೀ, ಮಗ್ಗಲಮಕ್ಕಿ 48 ಮಿ.ಮೀ ನಷ್ಟು ಮಳೆಯಾಗಿದೆ.

    ನಿರಂತರ ಮಳೆ: ಆಲ್ದೂರು ಹೋಬಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಿರಂತರವಾಗಿ ಮಳೆ ಸುರಿಯಿತು. ಸಂಜೆ ವೇಳೆ ಕೊಂಚ ಬಿಡುವು ಪಡೆದುಕೊಂಡಿತು.

    ಯಲಗುಡಿಗೆ, ಹೊಸಳ್ಳಿ, ತುಡುಕೂರು, ಬನ್ನೂರು, ಚಿಕ್ಕಮಾಗರವಳ್ಳಿ, ದೊಡ್ಡ ಮಾಗರವಳ್ಳಿ ಹಳಿಯೂರು, ತೋರಣ ಮಾವು, ಗುಲ್ಲನ್ ಪೇಟೆ, ಸತ್ತಿಹಳ್ಳಿ, ಹಾಂದಿ, ಹಂಗರವಳ್ಳಿ, ಬೈಗೂರು, ಆವತಿ, ಕೆರೆಮಕ್ಕಿ, ಮಾಗೋಡು, ಅರೇನೂರು, ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ.

    ಬಿರುಸಿನ ವರ್ಷಧಾರೆಯಿಂದ ರೈತರು ಸಂತಸಗೊಂಡಿದ್ದು, ಭತ್ತದ ನಾಟಿ ಚಟುವಟಿಕೆ ಗರಿಗೆದರಿವೆ. ಮಳೆ ಕೊಂಚ ಬಿಡುವು ನೀಡಿದರೆ ಇನ್ನಷ್ಟು ಅನುಕೂಲವಾಗಲಿದೆ ಎಂದು ಕೆರೆಮಕ್ಕಿ ಕಾಫಿ ಬೆಳೆಗಾರ ಮಹೇಶ್ ತಿಳಿಸಿದರು‌.

    ಸಾಧಾರಣ ಮಳೆ: ಕಡೂರು ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಭಾನುವಾರ ಸಾಧಾರಣ ಮಳೆಯಾಗಿದೆ.

    ಕಡೂರು ಪಟ್ಟಣ, ಬೀರೂರು ಪಟ್ಟಣ, ಹಿರೇನಲ್ಲೂರು, ಎಮ್ಮೆದೊಡ್ಡಿ, ಸಖರಾಯಪಟ್ಟಣ, ಪಂಚನಹಳ್ಳಿ, ಸಿಂಗಟಗೆರೆ, ಮೊದಲಾದ ಕಡೆ ಬೆಳಿಗ್ಗೆಯಿಂದ ಮೋಡಕವಿದ ವಾತಾವರಣವಿದ್ದು, ಆಗಾಗ ತುಂತುರು ಮಳೆ ಸುರಿದಿದೆ.

    ಚುರುಕುಗೊಂಡ ಮಳೆ: ನರಸಿಂಹರಾಜಪುರ ತಾಲ್ಲೂಕಿನಾದ್ಯಂತ ಶನಿವಾರ ಬೆಳಿಗ್ಗೆಯಿಂದ ಕ್ಷೀಣಿಸಿದ್ದ ಮಳೆ ‌ರಾತ್ರಿಯಿಂದ ಚುರುಕು ಪಡೆದುಕೊಂಡಿದೆ.

    ಭಾನುವಾರ ಬೆಳಿಗ್ಗೆಯಿಂದಲೇ ಬಿಟ್ಟು, ಬಿಟ್ಟು ಗಾಳಿ ಸಹಿತ ಮಳೆ ಸುರಿಯಿತು. ಮಧ್ಯಾಹ್ನದ ವೇಳೆಗೆ ಬಿರುಸು ಪಡೆಯಿತು. ಸಂಜೆ ಮೋಡ ಕವಿದ ವಾತಾವರಣ ಇತ್ತು.

    ಬಿರುಸಿನ ಮಳೆ: ಕೊಪ್ಪ ಪಟ್ಟಣವೂ ಸೇರಿದಂತೆ ತಾಲ್ಲೂಕಿನಲ್ಲಿ ಭಾನುವಾರ ಬೆಳಿಗ್ಗೆಯಿಂದ ಸಂಜೆವರೆಗೆ ಬಿರುಸಿನ ಮಳೆಯಾಗಿದೆ. ಶನಿವಾರ ರಾತ್ರಿಯೂ ಮಳೆಯಾಗಿತ್ತು. ಗಾಳಿ, ಮಳೆಗೆ ಗ್ರಾಮೀಣ ಭಾಗದಲ್ಲಿ ಕೆಲವೆಡೆ ವಿದ್ಯುತ್ ವ್ಯತ್ಯಯವಾಗಿತ್ತು.

    Heavy rains in the Malenadu region of Chikkamagaluru district