Category: ಚಿಕ್ಕಮಗಳೂರು ನಗರ

  • ರಾಜ್ಯದಲ್ಲಿ ಒಂದು ಲಕ್ಷ ಯುವಕರಿಗೆ ವಿಪತ್ತು ನಿರ್ವಹಣಾ ತರಬೇತಿ

    ರಾಜ್ಯದಲ್ಲಿ ಒಂದು ಲಕ್ಷ ಯುವಕರಿಗೆ ವಿಪತ್ತು ನಿರ್ವಹಣಾ ತರಬೇತಿ

    ಚಿಕ್ಕಮಗಳೂರು: ಕರಾವಳಿ, ಬಯಲು ಸೀಮೆ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಅತಿವೃಷ್ಠಿ, ಪ್ರವಾಹ, ಬರಗಾಲದಂತಹ ಪ್ರಾಕೃತಿಕ ವಿಕೋಪಗಳು ಸಾಮಾನ್ಯ. ರಾಜ್ಯದಲ್ಲಿ ಒಂದು ಲಕ್ಷ ಯುವಕರಿಗೆ ವಿಪತ್ತು ನಿರ್ವಹಣಾ ತರಬೇತಿ ನೀಡಲಾಗುವುದು ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಪ್ರಧಾನ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಹೇಳಿದರು.

    ನಗರದ ಸ್ಕೌಟ್ ಮತ್ತು ಗೈಡ್ಸ್‌ ಸಭಾಂಗಣದಲ್ಲಿ ಕುವೆಂಪು ವಿಶ್ವವಿದ್ಯಾಲಯ ಹಾಗೂ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಆಯೋಜಿಸಿದ್ದ ಸಾಮಾನ್ಯ ಮಾಹಿತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

    ಪ್ರಕೃತಿ ವಿಕೋಪ ಸಂಭವಿಸಿದಾಗ ಸ್ಥಳೀಯ ಯುವಕರು ಕೂಡಲೇ ಸ್ಪಂದಿಸಬೇಕು. ಪರಿಹಾರ ಕಾರ್ಯದಲ್ಲಿ ಆಡಳಿತದೊಂದಿಗೆ ಕೈ ಜೋಡಿಸಬೇಕು. ಕಾರ್ಯಕ್ಷಮತೆಯಲ್ಲಿ ಅವರನ್ನು ಸಜ್ಜಾಗಿಸಲು 18 ರಿಂದ 25 ವಯಸ್ಸಿನ ಪದವಿ ಪೂರ್ವ ಹಾಗೂ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ತರಬೇತಿ ಕೊಡಿಸುತ್ತಿದೆ.  ಪ್ರತಿ ವಿದ್ಯಾರ್ಥಿಗೆ ₹10 ಸಾವಿರ  ಅನುದಾನ ನೀಡುತ್ತಿದೆ ಎಂದರು. ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿಂದ ರಾಜ್ಯದ ಐದು ಜಿಲ್ಲೆಗಳಲ್ಲಿ 10 ಸಾವಿರ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ ಎಂದು ಹೇಳಿದರು.

    ಸರ್ಕಾರ ಎಲ್ಲಾ ಪದವಿಪೂರ್ವ ಹಾಗೂ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಡ್ಡಾಯವಾಗಿ ಘಟಕ ಸ್ಥಾಪಿಸಲು ಆದೇಶಿಸಿದೆ. ಸದಾ ಸಿದ್ಧರಾಗಿರುವ ಒಂದು ಸೇವಾ ಪಡೆ ನಿರ್ಮಿಸಲು ಕಾಲೇಜುಗಳ ಆಡಳಿತ ಮಂಡಲಿ, ಪ್ರಾಂಶುಪಾಲರು ಹಾಗೂ ಉತ್ಸುಕ ಪ್ರಾಧ್ಯಾಪಕರು ಈ ರಾಷ್ಟ್ರೀಯ ಅಭಿಯಾನದಲ್ಲಿ ಕೈ ಜೋಡಿಸಬೇಕು ಎಂದು ತಿಳಿಸಿದರು.

    ಜಿಲ್ಲಾ ಮುಖ್ಯ ಆಯುಕ್ತ ಎಂ.ಎನ್.ಷಡಕ್ಷರಿ ಮಾತನಾಡಿ, ‘ಯುವಕರು ದುಶ್ಚಟ ಹಾಗೂ ಆಕರ್ಷಣೆಗೆ ಒಳಗಾಗದೆ ಸಮಾಜ ಕಟ್ಟುವ ಕೆಲಸ ಮಾಡಬೇಕು. ದೇಶದಲ್ಲಿ ಶೇ 60ರಷ್ಟು ಯುವಕರಿದ್ದು, ಅವರ ನಿರ್ಣಾಯಕ ವಯೋಮಾನದಲ್ಲಿ ಇರುವ ಜವಾಬ್ದಾರಿ ನಮ್ಮ ಮೇಲಿದೆ. ಕಾಲೇಜಿನ ಪ್ರಾಧ್ಯಾಪಕರು ಸಿಕ್ಕಿರುವ ಈ ಅವಕಾಶ ಉಪಯೋಗಿಸಿಕೊಳ್ಳಬೇಕು’ ಎಂದರು.

    ‘ಜಿಲ್ಲೆಯಲ್ಲಿ ಸುಮಾರು 90 ಪದವಿ ಕಾಲೇಜುಗಳಿದ್ದು, ಎಲ್ಲರೂ ಕಡ್ಡಾಯವಾಗಿ ರೋವರ್ಸ್‌ ಮತ್ತು ರೇಂಜರ್ಸ್‌ ಘಟಕಗಳನ್ನು ಕಡ್ಡಾಯವಾಗಿ ಪ್ರಾರಂಭಿಸಬೇಕು’ ಎಂದು ಪದವಿ ಪೂರ್ವ ಕಾಲೇಜಿನ ಉಪನಿರ್ದೇಶಕಿ ಮಂಜುಳಾ ತಿಳಿಸಿದರು. ಸಂಬಂಧಪಟ್ಟ ಶಾಲೆಯ ಪ್ರಾಂಶುಪಾಲರು ಆಸಕ್ತಿ ವಹಿಸಿ ಕಾಲೇಜುಗಳಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು.

    ಕುವೆಂಪು ವಿಶ್ವವಿದ್ಯಾನಿಲಯದ ರೋವರ್ಸ್ ಮತ್ತು ರೇಂಜರ್ಸ್ ಘಟಕಗಳ ನೋಡಲ್ ಅಧಿಕಾರಿ ರವೀಂದ್ರಗೌಡ ಮಾತನಾಡಿ, ‘ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಬಿ.ಇಡಿ ಕಾಲೇಜುಗಳು ಸೇರಿ ಎಲ್ಲಾ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಘಟಕಗಳು ಪ್ರಾರಂಭಿಸಬೇಕು’ ಎಂದು ತಿಳಿಸಿದರು.

    ನೀಲಕಂಠಾಚಾರ್, ಸಂಧ್ಯಾರಾಣಿ, ಎಂ.ಎನ್.ಷಡಕ್ಷರಿ ಅವರು ತರಬೇತಿ ನೀಡಿದರು. ಜಿಲ್ಲಾ ಗೈಡ್ಸ್ ಆಯುಕ್ತೆ ಡಿ.ಎಸ್. ಮಮತಾ, ಸ್ಕೌಟ್ ಆಯುಕ್ತ ಫಣಿರಾಜ್, ಜಿಲ್ಲಾ ಸಹಾಯಕ ಆಯುಕ್ತ ಜಿ.ಎಂ. ಗಣೇಶ್ ಉಪಸ್ಥಿತರಿದ್ದರು.

    Disaster management training for one lakh youth in the state

  • ಶೃಂಗೇರಿ ಕಿಲ್ಲರ್ ಕಾಡಾನೆ ಸೆರೆ ಹಿಡಿಯುವಲ್ಲಿ  ಅರಣ್ಯ ಇಲಾಖೆ ಯಶಸ್ವಿ

    ಶೃಂಗೇರಿ ಕಿಲ್ಲರ್ ಕಾಡಾನೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿ

    ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ತಾಲೂಕಿನ ಕೆರೆಕಟ್ಟೆ ಸಮೀಪದ ಕೆರೆಗದ್ದೆ ಗ್ರಾಮದಲ್ಲಿ ಇಬ್ಬರನ್ನು ಬಲಿ ಪಡೆದು, ಬೆಳೆ ನಾಶ ಮಾಡಿ ಆತಂಕ ಸೃಷ್ಟಿ ಮಾಡಿದ್ದ ಕಾಡಾನೆ ಕೊನೆಗೂ ‌ಸೆರೆಯಾಗಿದೆ. ಭಾನುವಾರ ಸಂಜೆಯಿಂದ ಕಾರ್ಯಾಚರಣೆ ನಡೆಸಿದ್ದ ಅರಣ್ಯ ಇಲಾಖೆ ಕೊನೆಗೂ ಹಂತಕ ಆನೆಯನ್ನು ಲಾಕ್ ಮಾಡಿದೆ.

    ಹಂತಕ ಕಾಡಾನೆ ‌ಸೆರೆ ಕಾರ್ಯಾಚರಣೆಗಾಗಿ ದುಬಾರೆ ಆನೆ ಶಿಬಿರದಿಂದ ಏಕಲವ್ಯ ಟೀಮ್ ಶೃಂಗೇರಿ ತಾಲೂಕಿನ ಕೆರೆ ಕಟ್ಟೆ ಕ್ಯಾಂಪ್ಗೆ ಬಂದಿತ್ತು. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿರುವ ಶೃಂಗೇರಿ ತಾಲೂಕಿನ ಭಗವತಿ ಪ್ರದೇಶದ ಸಮೀಪದಲ್ಲೇ ಕುಮ್ಕಿ ಆನಗೆಳಿದ್ದವು. ಇದೇ ಪ್ರದೇಶದ ಸಮೀಪ ಕಾಡಾನೆ ಓಡಾಟ ನಡೆಸಿದ್ದು ಭಾನುವಾರ ಸಂಜೆಯ ಕಾರ್ಯಾಚರಣೆ ವೇಳೆ ತಿಳಿದುಬಂದಿದೆ.

    ಕಿಲ್ಲರ್ ‌ಸಲಗದ ಓಡಾಟದ ಸುಳಿವು ‌ ಸಿಗುತ್ತಿದ್ದಂತೆ ಅಲರ್ಟ್ ಆದ ಅರಣ್ಯ ಇಲಾಖೆಯ ಸಿಬ್ಬಂದಿ, ರಾತ್ರಿ ವೇಳೆ ಕಾರ್ಯಾಚರಣೆ ನಡೆಸಿದ್ದಾರೆ. ಭಗವತಿ ಪ್ರದೇಶದ ಬಳಿ ಕಾಡಾನೆಗೆ ಪಶು ವೈದ್ಯರು ಡಾಟ್ ಮಾಡಿದ್ದಾರೆ. ಏಕಲವ್ಯ ನೇತೃತ್ವದ ಹರ್ಷ, ಅಜೇಯ, ಧನಂಜಯ, ಪ್ರಶಾಂತ ಕುಮ್ಕಿ ಆನೆಗಳು ಕಾರ್ಯಾಚರಣೆ ನಡೆಸಿದ್ದು, ಹಂತಕ ಕಾಡಾನೆಯನ್ನು ಲಾಕ್ ಮಾಡಲಾಗಿದೆ. ಸೋಮವಾರ ಬೆಳಗ್ಗೆ ನಡೆಯಬೇಕಿದ್ದಕಾರ್ಯಾಚರಣೆಯನ್ನು ಭಾನುವಾರ ರಾತ್ರಿಯೇ ನಡೆಸಿದ ಅರಣ್ಯ ಇಲಾಖೆ ಕಾಡಾನೆ ಸೆರೆ ಕಾರ್ಯಚರಣೆ ಯಶಸ್ವಿಯಾಗಿದೆ.

    Forest Department successful in capturing Sringeri killer elephant

  • ಧರ್ಮ-ಜಾತಿಯ ನಡುವೆ ಸಂಘರ್ಷ ಹುಟ್ಟಿಸುವ ರಾಜಕೀಯ ಹಸ್ತಕ್ಷೇಪ ಒಳಿತಲ್ಲ

    ಧರ್ಮ-ಜಾತಿಯ ನಡುವೆ ಸಂಘರ್ಷ ಹುಟ್ಟಿಸುವ ರಾಜಕೀಯ ಹಸ್ತಕ್ಷೇಪ ಒಳಿತಲ್ಲ

    ಬೀರೂರು: ಧರ್ಮ, ಪರಂಪರೆ ನಮ್ಮ ನಾಡನ್ನು ನಿರ್ಮಿಸಿವೆ. ಧರ್ಮ ಮತ್ತು ಜಾತಿಯ ನಡುವೆ ಸಂಘರ್ಷ ಹುಟ್ಟಿಸುವ ರಾಜಕೀಯ ಹಸ್ತಕ್ಷೇಪ ಒಳಿತಲ್ಲ ಎಂದು ರಂಭಾ ಪುರಿ ಪೀಠದ ವೀರಸೋಮೇಶ್ವರ ಶಿವಾ ಚಾರ್ಯ ಸ್ವಾಮೀಜಿ ನುಡಿದರು.

    ಬೀರೂರಿನ ಗಣಪತಿ ಪೆಂಡಾಲ್‌ ಮೈದಾನದಲ್ಲಿ ಸೋಮವಾರ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

    ಪಂಚಪೀಠಗಳು ಸಕಲರಿಗೂ ಲೇಸನ್ನೇ ಬಯಸುವುದಾಗಿದ್ದು, ಗುರು ಗಳು ಜನರಲ್ಲಿ ಧರ್ಮಶ್ರದ್ಧೆ ಉಳಿಸುವಲ್ಲಿ ನಿರತರಾಗಿದ್ದಾರೆ. ಜಾತಿ, ಮತ, ಪಂಥಗಳ ಗಡಿ ಮೀರಿ ಸಮಾಜದಲ್ಲಿ ಭಾವೈಕ್ಯ ಮೂಡಿಸುವುದೇ ನಮ್ಮ ಧ್ಯೇಯವಾಗಿದೆ. ಧರ್ಮವನ್ನು ಪಾಲಿಸುವ, ಬೋಧಿಸುವ ಕೆಲಸವನ್ನು ಗುರು ಮಾಡಬೇಕು. ರಾಜಕಾರಣಿಗಳು ಧರ್ಮ-ಧರ್ಮಗಳ ನಡುವೆ ಸಂಘರ್ಷ ಮೂಡಿಸುವ ಕೆಲಸ ಮಾಡಬಾರದು ಎನ್ನುವುದು ನಮ್ಮ ಕಳಕಳಿಯ ಸಂದೇಶವಾ ಗಿದೆ. ಈ ಕಾರ್ಯಕ್ರಮ ಯಶಸ್ವಿಯಾಗಿದ್ದು, ಬೀರೂರು ಶ್ರೀಗಳ ನೇತೃತ್ವದಲ್ಲಿ ಎಲ್ಲರ ಶ್ರಮ ಸಾರ್ಥಕವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

    ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ‘ಪಂಚಪೀಠಗಳು ಜಾತಿಯ ಬದಲಾಗಿ ಜ್ಯೋತಿಯಂತೆ ಸರ್ವಧರ್ಮ ಸಮನ್ವಯದ ಪ್ರತೀಕವಾಗಿವೆ. ಇಂದಿನ ಕಾರ್ಯಕ್ರಮದಲ್ಲಿ ಈ ಊರು ಸರ್ವ ಜನಾಂಗದ ಶಾಂತಿಯ ತೋಟ ಎಂದು ಸಾಬೀತಾಗಿದೆ. ನಾವೆಲ್ಲರೂ ಭಾರತೀಯರು ಎಂಬ ಹೆಮ್ಮೆ, ಸರ್ವರಲ್ಲಿ ಸಮಭಾವ, ಸಮನ್ವಯ, ಸೌಹಾರ್ದ, ಸಹಬಾಳ್ವೆ, ಭ್ರಾತೃತ್ವ ಮೂಡಿಬರಲಿ. 2026ರ ಜನವರಿ 7ರಂದು ಸಮೀಪದ ಬುಕ್ಕಾಂಬುಧಿಯಲ್ಲಿ ಪಂಚ ಪೀಠಾಧೀಶರ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ. ಅದಕ್ಕೆ ಪಾದಯಾತ್ರೆಯ ಮೂಲಕ ಬುಕ್ಕಾಂಬುಧಿ ತಲುಪುವುದಾಗಿ ತಿಳಿಸಿದರು.

    ಕಾಶೀ ಪೀಠದ ಕಿರಿಯ ಶ್ರೀ ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸನಾತನ ಧರ್ಮಕ್ಕೆ ಅಂತ್ಯವಿಲ್ಲ, ಸೃಷ್ಟಿಯ ಆರಂಭದಿಂದಲೂ ಇರುವ ಧರ್ಮವನ್ನು ಅಂತ್ಯ ಮಾಡಲು ಹೊರಟವರೇ ಅಂತ್ಯವಾಗಿದ್ದಾರೆ. ಇದರಿಂದ ಧರ್ಮದ ನಾಶ ಯಾರಿಂದಲೂ ಸಾಧ್ಯವಿಲ್ಲ ಎಂದು ಅರ್ಥವಾಗುತ್ತದೆ ಎಂದು ತಿಳಿಸಿದರು.

    ಕಾಶೀ ಪೀಠದ ಹಿರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯರು, ಪ್ರಕೃತಿಯೇ ಪಂಚಪೀಠಗಳ ತತ್ವವಾಗಿದ್ದು ಸಮೃದ್ಧಿ, ತ್ಯಾಗ, ವೈಶಾಲ್ಯ, ಸ್ವಚ್ಛತೆ, ಪರಿಪಕ್ವತೆ ಇದರ ಸಂಕೇತವಾಗಿದೆ. ಬೀರೂರು ಧರ್ಮದ ಬೇರನ್ನು ಗಟ್ಟಿಗೊ ಳಿಸಿದ ‘ಬೇರೂರು’ ಎಂದು ಬಣ್ಣಿಸಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಎಸ್‌.ಆನಂದ್‌, ಶೈವ ಪರಂಪರೆ ಉಳಿಸುವಲ್ಲಿ ಪಂಚಪೀಠಗಳ ಪಾತ್ರ ಮಹತ್ವದ್ದಾಗಿದ್ದು, ಅವರ ತತ್ವಾದರ್ಶ ದೇಶಕ್ಕೆ ಅಗತ್ಯವಿದೆ. ಕಡೂರಿನಲ್ಲಿಯೂ ಮತ್ತೊಮ್ಮೆ ಶೀಘ್ರವಾಗಿ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಸಲು ಅನುಮತಿ ನೀಡಬೇಕು ಎಂದು ಕೋರಿದರು.

    ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಬೆಳ್ಳಿಪ್ರಕಾಶ್‌, ಧರ್ಮನಿಷ್ಠರಾಗಿ ದುಡಿಯೋಣ, ಕರ್ಮ ಹಿಂತಿರುಗುತ್ತದೆ, ಧರ್ಮ ಕಾಯುತ್ತದೆ ಎನ್ನುವ ಅರಿವು ಇರಲಿ. ಎಲ್ಲರಿಗೂ ಹೃದಯ ವೈಶಾಲ್ಯ ಇರಲಿ, ಶಾಸಕರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ತಮ್ಮ ಅಧಿಕಾರದ ವ್ಯಾಪ್ತಿಯಲ್ಲಿ ಇನ್ನಷ್ಟು ಒಳ್ಳೆಯ ಕೆಲಸಗಳನ್ನು ಮಾಡಲಿ. ಎದುರಾಳಿಗ ಳನ್ನೂ ಗೌರವಿಸುವ ಹೃದಯ ಶ್ರೀಮಂತಿಕೆ ಇರಲಿ ಎಂದು ಸಲಹೆ ನೀಡಿದರು.

    ಆಶಯ ನುಡಿ ಆಡಿದ ವೈ.ಎಸ್‌.ವಿ. ದತ್ತ, ಪಂಚಪೀಠಾಧೀಶರು ಇಲ್ಲಿ ಬಂದಿ ದ್ದು ಬಾಯಾರಿದವನ ಬಳಿಗೆ ಬಾವಿಯೇ ಬಂದಂತಾಯ್ತು. ನಿಮ್ಮ ಕಾರುಣ್ಯದಿಂದ ದ್ವೇಷ, ಸಿಟ್ಟು, ಅಸೂಯೆ ಅಳಿದು ಮನುಷ್ಯ ಸಂಬಂಧಗಳು ಗಟ್ಟಿಯಾಗಲಿ. ಕಡೂರು ಶಾಂತಿ, ನೆಮ್ಮದಿ, ಸೌಹಾರ್ದಕ್ಕೆ ನೆಲೆಯಾಗಲಿ ಎಂದರು.

    ಸಮಾರಂಭದ ನೇತೃತ್ವವನ್ನು ಬೀರೂರು ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು. ಎಡೆಯೂರು, ಹುಲಿಕೆರೆ, ಹುಣಸಘಟ್ಟ, ಕೆ.ಬಿದರೆ, ಚಿಕ್ಕಮಗಳೂರು, ಬಿಳಕಿ, ಹೊನ್ನವಳ್ಳಿ ಸೇರಿದಂತೆ ವಿವಿಧ ಶಾಖಾಮಠಗಳ ಶಿವಾಚಾರ್ಯರು ಇದ್ದರು.

    Political interference that creates conflict between religion and caste is not good.

  • ವಿಜೃಂಭಣೆಯಿಂದ ನಡೆದ ಪಂಚ ಪೀಠಾಧೀಶರ ಅಡ್ಡಪಲ್ಲಕ್ಕಿ ಮಹೋತ್ಸವ

    ವಿಜೃಂಭಣೆಯಿಂದ ನಡೆದ ಪಂಚ ಪೀಠಾಧೀಶರ ಅಡ್ಡಪಲ್ಲಕ್ಕಿ ಮಹೋತ್ಸವ

    ಬೀರೂರು: ಪಂಚ ಪೀಠಾ ಧೀಶರ ಅಡ್ಡಪಲ್ಲಕ್ಕಿ ಮಹೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ಬೀರೂರಿನಲ್ಲಿ ವಿಜೃಂಭಣೆಯಿಂದ ನಡೆಯಿತು.

    ಮಹೋತ್ಸವದ ಅಂಗವಾಗಿ ಭಾನುವಾರವೇ ಕಡೂರಿಗೆ ಬಂದು ವಾಸ್ತವ್ಯ ಮಾಡಿದ್ದ ರಂಭಾಪುರಿ, ಶ್ರೀಶೈಲ, ಕಾಶಿಯ ಹಿರಿಯ ಮತ್ತು ಕಿರಿಯ ಗುರುಗಳು, ಉಜ್ಜಯಿನಿಯ ಗುರುಗಳನ್ನು ಭಕ್ತರು ಅಲಂಕೃತ ಪಲ್ಲಕ್ಕಿಯಲ್ಲಿ ಹೊತ್ತು ಕೆಎಲ್‌ಕೆ ಮೈದಾನದಿಂದ ರಂಭಾಪುರಿ ಖಾಸಾ ಶಾಖಾಮಠದ ಆವರಣದವರೆಗೆ ಮೆರವಣಿಗೆ ನಡೆಸಿದರು.

    ಗುರುಗಳು ಪ್ರತಿನಿಧಿಸುವ ಹಸಿರು, ಕೆಂಪು, ನೀಲಿ, ಬಿಳಿ ಮತ್ತು ಹಳದಿ ಹೂಗ ಳಿಂದ ಪಲ್ಲಕ್ಕಿಯನ್ನು ಅಲಂಕರಿಸಲಾಗಿತ್ತು.

    ಕಡೂರಿನಲ್ಲಿ ನಿತ್ಯಾನುಷ್ಠಾನ ಪೂರ್ಣಗೊಳಿಸಿದ ಎಲ್ಲ ಶ್ರೀಗಳು ಜೊತೆಯಾಗಿ ಮೈದಾನ ಪ್ರವೇಶಿಸಿ ಅಲ್ಲಿ ಸಿದ್ಧಪಡಿಸಿದ್ದ ಅಡ್ಡಪಲ್ಲಕ್ಕಿಯಲ್ಲಿ ಕುಳಿತು ಸಂಪ್ರದಾಯದಂತೆ ಸುವರ್ಣ ಕಿರೀಟ ಧಾರಣೆ ಮಾಡಿದರು.

    ಎಲ್ಲ ಶ್ರೀಗಳು ಪಲ್ಲಕ್ಕಿ ಯಲ್ಲಿ ಅಸೀನರಾದ ತಕ್ಷಣ ಭಕ್ತರು ‘ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎಂಬ ಘೋಷಣೆಗಳೊಡನೆ ಮೆರವಣಿಗೆಗೆ ಚಾಲನೆ ನೀಡಿದರು. ಪದ್ಧತಿಯಂತೆ ಮೊದಲು ಬಾಳೆಹೊನ್ನೂರು, ಬಳಿಕ ಉಜ್ಜಯಿನಿ, ಕಾಶಿಯ ಕಿರಿಯ ಶ್ರೀಗಳು, ಶ್ರೀಶೈಲ ಮತ್ತು ಕಾಶೀ ಶ್ರೀಗಳ ಪಲ್ಲಕ್ಕಿ ಮೆರವಣಿಗೆ ಹೊರಟಿತು.

    ಮೆರವಣಿಗೆಯ ಮುಂಭಾಗದಲ್ಲಿ ಪೂರ್ಣಕುಂಭ, ಧರ್ಮಧ್ವಜ ಹಿಡಿದ ಮಹಿಳೆಯರು ಸಾಗಿದರೆ, ಮಂಗಳವಾದ್ಯ, ವೀರಗಾಸೆ ತಂಡಗಳು, ಡೊಳ್ಳುಕುಣಿತ ಉತ್ಸವಕ್ಕೆ ಮೆರುಗು ನೀಡಿದವು. ಕುದುರೆಯ ಮೇಲೆ ಕುಳಿತು ಧರ್ಮಧ್ವಜ ಹಿಡಿದ ಮಹಿಳೆ ಗಮನ ಸೆಳೆದರೆ, ತಾವರೆಕೆರೆ ಮಠದಿಂದ ತರಿಸಲಾಗಿದ್ದ ಯಾಂತ್ರಿಕ ಆನೆ ಭಕ್ತರ ಗಮನ ಸೆಳೆಯಿತು.

    ವಿವಿಧ ಸಂಘ ಸಂಸ್ಥೆಗಳು, ಪುರಸಭೆ, ಹಲವು ಸಮುದಾಯಗಳ ಪರವಾಗಿ ಪಂಚಪೀಠಾಧೀಶರಿಗೆ ಫಲಪುಷ್ಪ ಸಮರ್ಪಿಸಿ ಗೌರವ ಸಲ್ಲಿಸಲಾಯಿತು. ಭಕ್ತರು ಶ್ರೀಗಳ ದರ್ಶನ ಮತ್ತು ಮಂತ್ರಾಕ್ಷತೆ ಪಡೆದರು. ಮೆರವಣಿಗೆ ಅಂಗವಾಗಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿಯಂತ್ರಣ ಹಾಕಿ ಪರ್ಯಾಯ ರಸ್ತೆಯಲ್ಲಿ ವಾಹನ ಸಾಗುವಂತೆ ಸಿದ್ಧತೆ ನಡೆಸಲಾಗಿತ್ತು.

    ಮೆರವಣಿಗೆ ಸಾಗುತ್ತಿರುವ ವೇಳೆ ಶ್ರೀರಾಮಪುರಂ ಬಳಿ ಮುಸ್ಲಿಂ ಸಮುದಾಯದವರು ಭಕ್ತರಿಗೆ ಪಾನೀಯ ವಿತರಿಸಿದರು. ಬೆಳಿಗ್ಗೆಯಿಂದ ಪಿಎಂಶ್ರೀ ಶಾಲೆಯ ಆವರಣದಲ್ಲಿ ಉಪಾಹಾರ, ಊಟದ ವ್ಯವಸ್ಥೆ ಮಾಡಲಾಗಿತ್ತು. ಬೆಳ್ಳಿ ಬಳಗದ ಸ್ವಯಂ ಸೇವಕರು ಆಹಾರ ವಿತರಣೆ ವ್ಯವಸ್ಥೆ ಜತೆಗೆ ಕೌಂಟರ್‌ ಬಳಿ ಉದ್ಘೋಷಣೆ ಮೂಲಕ ಜನರಿಗೆ ಮಾರ್ಗದರ್ಶನ ಮಾಡುತ್ತಿದ್ದರು.

    ಶಾಸಕ ಕೆ.ಎಸ್‌. ಆನಂದ್‌, ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಬೆಳ್ಳಿಪ್ರಕಾಶ್‌, ವೈ.ಎಸ್‌.ವಿ. ದತ್ತ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಂ. ಲೋಕೇಶ್‌, ಉತ್ಸವ ಸಮಿತಿ ಅಧ್ಯಕ್ಷ ದೇವರಾಜ್‌, ಉಪಾಧ್ಯಕ್ಷ ಬಿ. ಆನಂದ ಶೆಟ್ಟಿ, ತಾಲ್ಲೂಕು ವೀರಶೈವ ಮಹಾಸಭಾ ಅಧ್ಯಕ್ಷ ರೇಣುಕಾರಾಧ್ಯ, ಉತ್ಸವ ಸಮಿತಿಯ ಬಿ.ವಿ. ಶಿವಸ್ವಾಮಿ ಮೆರವಣಿಗೆಯ ನೇತೃತ್ವ ವಹಿಸಿದ್ದರು.

    The grand procession of the five patriarchs was held with great pomp and show.

  • ದತ್ತಮಾಲಾ ಕಾರ್ಯಕ್ರಮ ಶಾಂತಿಯುತ ತೆರೆ

    ದತ್ತಮಾಲಾ ಕಾರ್ಯಕ್ರಮ ಶಾಂತಿಯುತ ತೆರೆ

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ದತ್ತಪೀಠ ಸೇವಾ ಸಮಿತಿಯಿಂದ ಇದೇ ಮೊದಲ ಬಾರಿಗೆ ದತ್ತಮಾಲೆಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಭಾನುವಾರ ಚಂದ್ರದ್ರೋಣ ಪರ್ವತ ಸಾಲಿನಲ್ಲಿರುವ ಇನಾಂದತ್ತಾತ್ರೇಯಸ್ವಾಮಿ ಬಾಬಾಬುಡನ್ ದರ್ಗಾದಲ್ಲಿ ದತ್ತಮಾಲಾ ಕಾರ್ಯಕ್ರಮ ಶಾಂತಿಯುತವಾಗಿ ನಡೆಯಿತು.

    ನಗರದ ಶಂಕರಮಠದಲ್ಲಿ ಅಕ್ಟೋಬರ್ ೩೧ರಂದು ದತ್ತಮಾಲೆಯನ್ನು ೪೦ಕ್ಕೂ ಹೆಚ್ಚು ಮಂದಿ ಧರಿಸಿದ್ದರು. ಸಂಜೆ ವ್ರತವನ್ನು ಆಚರಿಸಿಕೊಂಡು ಬಂದಿದ್ದರು. ನವೆಂಬರ್ ೧ ರಂದು ಹಲವು ಮನೆಗಳಿಗೆ ತೆರಳಿ ಪಡಿ ಸಂಗ್ರಹಿಸಿಸಂಜೆ ಅಕ್ಕಿ,ಬೆಲ್ಲ, ತೆಂಗಿನ ಕಾಯಿಯನ್ನು ದತ್ತಾತ್ರೇಯ ಚಿತ್ರಪಟದ ಮುಂದಿಟ್ಟು ಪೂಜೆ ಸಲ್ಲಿಸಿ ಇರುಮುಡಿ ಕಟ್ಟಿದರು.

    ಭಾನುವಾರ ಬೆಳಿಗ್ಗೆ ಇರುಮುಡಿಯನ್ನು ಹೊತ್ತು ವಾಹನದಲ್ಲಿ ಸಾಗಿದರು. ದಾರಿಮಧ್ಯೆದಲ್ಲಿ ಸಿಗುವ ಹೊನ್ನಮ್ಮನ ಹಳ್ಳದಲ್ಲಿ ಮಿಂದು ಅಲ್ಲಿಗೆ ಸಾಗಿದ ದತ್ತಭಕ್ತರು ದತ್ತಾತ್ರೇಯರ ನಾಮಸ್ಮರಣೆಯನ್ನು ಮಾಡುತ್ತಾ ದತ್ತಪೀಠದ ಆವರಣ ತಲುಪಿದರು. ಅಲ್ಲಿ ಸರದಿ ಸಾಲಿನಲ್ಲಿ ತೆರಳಿ ಇರುಮುಡಿಯನ್ನು ಸಮರ್ಪಿಸಿ ದತ್ತಾತ್ರೇಯರ ಪಾದುಕೆಗಳ ದರ್ಶನ ಪಡೆದರು.

    ಕಳೆದ ವರ್ಷ ಶ್ರೀರಾಮಸೇನೆ ಸಂಘಟನೆಯ ನೇತೃತ್ವದಲ್ಲಿ ದತ್ತಪೀಠ ಸೇವಾ ಸಮಿತಿಯಲ್ಲಿರುವ ಮುಖಂಡರೇ ದತ್ತಮಾಲೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಗಮಿಸಿದ್ದರು. ದತ್ತಜಯಂತಿಯನ್ನು ವಿಶ್ವಹಿಂದೂಪರಿಷತ್ ಮತ್ತು ಬಜರಂಗದಳದವರೊಂದಿಗೆ ತೆರಳಿ ದತ್ತಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮುಂದಿನ ದಿನಗಳಲ್ಲಿ ವಿಶ್ವಹಿಂದೂಪರಿಷತ್ ನೇತೃತ್ವದಲ್ಲಿ ನಡೆಯುವ ದತ್ತಜಯಂತಿಯಲ್ಲಿ ಪಾಲ್ಗೊಳ್ಳುತ್ತಿರುವುದಾಗಿ ಹೇಳಿಕೆ ನೀಡಿದ್ದರು.

    ಶ್ರೀರಾಮಸೇನೆ ವಿಶ್ವಹಿಂದೂಪರಿಷತ್‌ನೊಂದಿಗೆ ವಿಲೀನಗೊಳಿಸಲು ರಾಷ್ಟ್ರೀಯ ಅಧ್ಯಕ್ಷರು ಮುಂದಾಗಿರುವ ಹಿನ್ನಲೆಯಲ್ಲಿ ಶ್ರೀರಾಮಸೇನೆಯಲ್ಲಿದ್ದ ಮುಖಂಡರುಗಳು ಒಟ್ಟಾಗಿ ಹೊಸದಾಗಿ ದತ್ತಪೀಠ ಸೇವಾ ಸಮಿತಿಯನ್ನು ರಚಿಸಿಕೊಂಡಿದ್ದು, ಇದೇ ಮೊದಲಬಾರಿಗೆ ಸಮಿತಿ ಮುಂದಾಳತ್ವದಲ್ಲಿ ಸಮಿತಿ ಜಿಲ್ಲಾ ಸಂಚಾಲಕ ರಂಜಿತ್‌ಶೆಟ್ಟಿ ನೇತೃತ್ವದಲ್ಲಿ ದತ್ತಮಾಲಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

    ಇಂದು ದತ್ತಪೀಠ ಸೇವಾ ಸಮಿತಿಯಿಂದ ನಡೆದ ದತ್ತಮಾಲಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ದತ್ತಭಕ್ತರು ಇರುಮುಡಿಯನ್ನು ಅರ್ಪಿಸುವ ಮೂಲಕ ಕಾರ್ಯಕ್ರಮವನ್ನು ಶಾಂತಿಯುತವಾಗಿ ಮುಕ್ತಾಯಗೊಳಿಸಿದರು.ವಿಶ್ವಧರ್ಮ ಸಂಸ್ಥಾನ ಸಂಸ್ಥಾಪಕ ಯೋಗಿ ಸಂಜಿತ್‌ಸುವರ್ಣ, ಧರ್ಮ ಚಿಂತಕ ರಾಜೇಂದ್ರಕುಮಾರ್, ನವೀನ್,ರಂಜಿತ್, ಜ್ಞಾನೇಂದ್ರಜೈನ್ ಇದ್ದರು.

    Dattamala program peaceful opening

  • ಮಕ್ಕಳು ಜಗತ್ತು ಬೆಳಗುವ ದೀಪಗಳಾಗಲಿ

    ಮಕ್ಕಳು ಜಗತ್ತು ಬೆಳಗುವ ದೀಪಗಳಾಗಲಿ

    ಚಿಕ್ಕಮಗಳೂರು: ದೀಪ ತಾನು ಉರಿದು ಬೇರೆಯವರಿಗೆ ಬೆಳಕನ್ನು ನೀಡುತ್ತದೆ. ಅದೇ ರೀತಿ ನಮ್ಮ ಮಕ್ಕಳು ಜಗತ್ತನ್ನು ಬೆಳಗುವ ದೀಪಗಳಾಗಬೇಕೇ ಹೊರತು ಬೇರೆಯವರ ಮನೆಗೆ ಬೆಂಕಿ ಹಚ್ಚುವ ಕಿಡಿಗಳಾಗಬಾರದು ಎಂದು ಸಾಹಿತಿ ಚಟ್ನಳ್ಳಿ ಮಹೇಶ್ ಅಭಿಪ್ರಾಯಪಟ್ಟರು.

    ನಗರದ ಹೊರವಲಯದ ಇಂತಹವರದಲ್ಲಿರುವ ಶ್ರೀ ಕಾಮಧೇನು ಗೋ ಶಾಲೆಯಲ್ಲಿ ಜೈ ಸಮಾಜದ ಗೋಬಕ್ತರಿಂದ ಆಯೋಜಿಸಲಾಗಿದ್ದ ದೀಪಾವಳಿ ಸ್ನೇಹ ಮಿಲನ ಗೋಮಾತೆಯೊಂದಿಗೆ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಕನ್ನಡ ಮಣ್ಣಿನ ಶಕ್ತಿಯೇ ಅನನ್ಯವಾದುದು. ಈ ಮಣ್ಣಿನ ಹೆಣ್ಣು ತನ್ನ ಮಕ್ಕಳು ಆಚಾರಕ್ಕೆ ಅರಸರಾಗಲಿ, ನೀತಿಗೆ ದೊರೆಯಾಗಲಿ, ಜಗಕ್ಕೆ ಜ್ಯೋತಿಯಾಗಲಿ ಎಂದು ಬಯಸುತ್ತಾರೆ. ಇಂಥ ತಾಯಂದಿತ ಉದಾತ್ತ ಗುಣಗಳನ್ನು ಮಕ್ಕಳು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

    ಭಾರತೀಯ ಸಂಸ್ಕೃತಿಯಲ್ಲಿ ಹಸುವಿಗೆ ಅನಾದಿಕಾಲದಿಂದಲೂ ವಿಶೇಷ ಸ್ಥಾನಮಾನ ನೀಡಲಾಗಿದೆ. ನಮ್ಮ ದೇಶದ ಚರಿತ್ರೆ ಮತ್ತು ಸಂಸ್ಕೃತಿಯನ್ನು ವಿಸ್ತರಿಸಿರುವಾಗ ದಾರ್ಶನಿಕರು ನೀಡುವ ಪರಮೋಚ್ಚ ಉದಾಹರಣೆ ಗೋಮಾತೆಯಾಗಿತ್ತು. ಇದಲ್ಲದೆ ಸತ್ಯ ಪರಿಪಾಲನೆಗೆ ನಮ್ಮ ಹಿರಿಯರು ಉದಾಹರಣೆ ನೀಡಿದ್ದು ಗೋ ಮಾತೆಯನ್ನೇ ಎಂಬುದು ವಿಶೇಷವಾಗಿದೆ ಎಂದು ಹೇಳಿದರು.

    ಗೋವುಗಳನ್ನು ಕಸಾಯಿ ಖಾನೆಗೆ ಸಾಧಿಸುವವರು ಒಂದು ಹೃದಯವನ್ನು ಸುಡುವವರು. ಅದೇ ಗೋವನ್ನು ಸಂರಕ್ಷಿಸುವವರು ಇನ್ನೊಂದು ಜೀವವನ್ನು ಬದುಕಿಸಿದ ಜ್ಯೋತಿಯಾಗುತ್ತಾರೆ. ಮನುಕುಲ ಶರೀರಕವಾಗಿ ಸದೃಢ ಹಾಗೂ ಆರೋಗ್ಯಯುತವಾಗಿದೆ ಎಂದರೆ ಅದಕ್ಕೆ ಗೋಮಾತೆಯೇ ಕಾರಣ. ಹೀಗಾಗಿ ಗೋ ಸಂಕುಲ ಉಳಿಸಿ ಬೆಳೆಸಲು ಪ್ರತಿಯೊಬ್ಬರು ಪಣತೊಡಬೇಕು ಎಂದು ಕರೆ ನೀಡಿದರು.

    ಮನುಷ್ಯನನ್ನು ಹೊರತುಪಡಿಸಿ ಮರ, ಗಿಡ, ನದಿ, ಪ್ರಾಣಿ, ಪಕ್ಷಿ ಹೀಗೆ ಪ್ರತಿಯೊಂದು ಜೀವಸಂಕುಲವೂ ಪರೋಪಕಾರಿ ಗುಣ ಹೊಂದಿವೆ. ಅದರಲ್ಲಿಯೂ ಗೋಮಾತೆಯಂತೂ ಪರೋಪಕಾರಕ್ಕೆ ಉತ್ತಮ ನಿದರ್ಶನವಾಗಿದೆ. ಮನುಷ್ಯನ ಹುಟ್ಟಿನಿಂದ ಹಿಡಿದು ಸಾವಿನವರೆಗೆ ಗೋಮಾತೆ ಆತನ ಉದ್ದಾರಕ್ಕೆ ಶ್ರಮಿಸುತ್ತದೆ.‌ ಇಂಥ ಗೋ ಮಾತೆಯನ್ನು ಸಾಯಿಸುವ ಮಟ್ಟಕ್ಕೆ ಇಳಿಯುವುದು ಮನುಷ್ಯನ ನೀಚ ತನವನ್ನು ತೋರಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

    ಹಾಲಿನ ಮೌಲ್ಯವರ್ಧನೆ ಮಾಡಿದಾಗ ಅದು ಮೊಸರಾಗುತ್ತದೆ. ಮೊಸರನ್ನು ಮೌಲ್ಯವರ್ಧನೆ ಮಾಡಿದಾಗ ಬೆಣ್ಣೆ, ಬೆಣ್ಣೆಯಿಂದ ತುಪ್ಪವಾಗುತ್ತದೆ. ತುಪ್ಪ ಹಳೆಯದಾದಷ್ಟೂ ಅದರ ಮೌಲ್ಯ ಹೆಚ್ಚುತ್ತದೆ. ಇದೇ ರೀತಿ ವ್ಯಕ್ತಿಯನ್ನು ಒಂದು ಸಂಸ್ಕಾರಕ್ಕೆ ಒಳಪಡಿಸಿದಾಗ ಆತ ಒಬ್ಬ ಮನುಷ್ಯನಾಗುತ್ತಾನೆ. ಆ ಮನುಷ್ಯನಿಗೆ ನಿರಂತರವಾಗಿ ಸಂಸ್ಕಾರ ನೀಡುತ್ತಾ ಹೋದಂತೆ ಆತನ ಮೌಲ್ಯವು ಹೆಚ್ಚಾಗುತ್ತದೆ ಎಂದು ಪ್ರತಿಪಾದಿಸಿದರು.

    ಒಬ್ಬ ತಾಯಿ ತನಗೆ ಎಷ್ಟೇ ಮಕ್ಕಳಿದ್ದರೂ ಎಲ್ಲರಿಗೂ ಸಮಾನವಾದ ಪ್ರೀತಿ ನೀಡುತ್ತಾಳೆ. ಆದರೆ ಅದೇ ಮಕ್ಕಳು ತಮ್ಮ ತಂದೆ ತಾಯಿಯರಿಗೆ ಸಮಾನ ಪ್ರೀತಿ ನೀಡುತ್ತಾರೆಯೇ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದರು.

    ಕಾರ್ಯಕ್ರಮದಲ್ಲಿ ಗೋಶಾಲೆಯ ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಆರ್ ಎಸ್ ಎಸ್ ಮುಖಂಡ ಮಲ್ಲಿಕಾರ್ಜುನ್, ಕಾಮದೇನು ಗೋ ಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಭಗವಾನ್ ರಾಮಪಂತ್, ಬಾಣವರದ ಮಹಾವೀರ ಗೋಶಾಲೆಯ ಮುಖ್ಯಸ್ಥ ಭರತ್ ಜೈನ್ ಸೇರಿದಂತೆ ಜೈನ ಸಂಘದ ವಿವಿಧ ಮುಖಂಡರು ಉಪಸ್ಥಿತರಿದ್ದರು.

    Let children be the lights that illuminate the world

  • ಕಳಸದಲ್ಲಿ ಸಡಗರ ತಂದ ಗಿರಿಜಾಕಲ್ಯಾಣ ಉತ್ಸವ

    ಕಳಸದಲ್ಲಿ ಸಡಗರ ತಂದ ಗಿರಿಜಾಕಲ್ಯಾಣ ಉತ್ಸವ

    ಕಳಸ: ಪಟ್ಟಣದಲ್ಲಿ ಭಾನುವಾರ ಬೆಳ್ಳಂಬೆಳಿಗ್ಗೆ ಜನಸಂದಣಿಯ ದೃಶ್ಯ. ಪಟ್ಟಣದ ಕಳಸೇಶ್ವರ ದೇವಸ್ಥಾನದಲ್ಲಿ ಕಳಸೇಶ್ವರ ಮತ್ತು ಗಿರಿಜೆಯು ಒಟ್ಟಿಗೇ ಇರುವ ದೃಶ್ಯ ಕಣ್ತುಂಬಿಕೊಳ್ಳಲು ಭಕ್ತರು ಉತ್ಸಾಹದಿಂದ ನೆರೆದಿದ್ದರು.

    ಕಳೆದ ವಾರ ಆರಂಭಗೊಡಿದ್ದ ಗಿರಿಜಾ ಕಲ್ಯಾಣದ ವಿಧಿಗಳು ಸಂಪ್ರದಾಯಬದ್ಧವಾಗಿ ನೆರವೇರಿದ್ದವು. ಭಕ್ತರು ಎಲ್ಲ ವಿಧಿಗಳಲ್ಲೂ ಗಂಡು–ಹೆಣ್ಣಿನ ಕಡೆಯವರಂತೆ ಪಾಲ್ಗೊಂಡು ದೇವರ ಮದುವೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

    ವಾರವಿಡೀ ಗಿರಿಜಾಂಬಾ ದೇವಸ್ಥಾನ ಮತ್ತು ಕಳಸೇಶ್ವರ ದೇವಸ್ಥಾನದ ಪರಿಸರದಲ್ಲಿ ಹಬ್ಬದ ಸಡಗರ, ಭಕ್ತರ ಲವಲವಿಕೆ ಇತ್ತು. ಶನಿವಾರ ಮಧ್ಯರಾತ್ರಿಯ ನಂತರ ಗಿರಿಜೆಯನ್ನು ಕಳಸೇಶ್ವರನ ಸನ್ನಿಧಿಗೆ ಕರೆತಂದ ನಂತರ ಭಾನುವಾರ ಬೆಳಗಿನ ಜಾವ 3 ಗಂಟೆಗೆ ಕಲಶೇಶ್ವರ ಮತ್ತು ಗಿರಿಜೆಯ ಕಲ್ಯಾಣ ನಡೆಯಿತು.

    ದೇವರ ವಿವಾಹವಾದ ನಂತರ ಒಂದು ದಿನ ಮಾತ್ರ ಕಳಸೇಶ್ವರ ಗಿರಿಜೆಯನ್ನು ಒಟ್ಟಿಗೆ ಕೂರಿಸುವ ಸಂಪ್ರದಾಯ ಇದೆ. ಕಾಶಿಯಲ್ಲಿ 12 ವರ್ಷಕ್ಕೊಮ್ಮೆ ಕಲ್ಯಾಣ ನಡೆದರೆ ಕಳಸದಲ್ಲಿ ಮಾತ್ರ ಪ್ರತಿ ವರ್ಷವೂ ಈಶ್ವರ ಮತ್ತು ಪಾರ್ವತಿ ನಡುವೆ ಕಲ್ಯಾಣ ನೆರವೇರುತ್ತದೆ. ಕಳಸವು ಇದೇ ಕಾರಣಕ್ಕೆ ದಕ್ಷಿಣ ಕಾಶಿ ಎಂದೇ ಹೆಸರಾಗಿದೆ.

    ಕಲ್ಯಾಣವನ್ನು ಕಣ್ತುಂಬಿಕೊಳ್ಳಲು ಭಕ್ತರು ಪ್ರತಿ ವರ್ಷವೂ ಕಳಸಕ್ಕೆ ಧಾವಿಸುತ್ತಾರೆ. ಭಾನುವಾರ ಕಳಸೇಶ್ವರ ದೇವಸ್ಥಾನದಲ್ಲಿ ಭಕ್ತರು ದೇವರ ಜೋಡಿಗೆ ನಮಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಕೋರಿಕೆ ಸಲ್ಲಿಸಿದರು. ಆನಂತರ ವಿವಾಹದ ಸಿಹಿಯೂಟವನ್ನು 3 ಸಾವಿರಕ್ಕೂ ಹೆಚ್ಚು ಜನರು ಸವಿದರು.

    ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯು ಕಲ್ಯಾಣದ ವಿಧಿಗಳನ್ನು ಮತ್ತು ವಿವಾಹ ಮಹೋತ್ಸವದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿತ್ತು.

    Girijakalyana Utsava

  • ವಿಮಾನ ನಿಲ್ದಾಣಗಳ ಮಾದರಿಯಲ್ಲಿ ರಾಜ್ಯದ ಎಲ್ಲ ರೈಲುನಿಲ್ದಾಣ ಅಭಿವೃದ್ಧಿ

    ವಿಮಾನ ನಿಲ್ದಾಣಗಳ ಮಾದರಿಯಲ್ಲಿ ರಾಜ್ಯದ ಎಲ್ಲ ರೈಲುನಿಲ್ದಾಣ ಅಭಿವೃದ್ಧಿ

    ಬೀರೂರು: ರಾಜ್ಯದ ಎಲ್ಲ ರೈಲು ನಿಲ್ದಾಣಗಳನ್ನು ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ. ಅಂಗವಿಕಲರ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ನಿಲ್ದಾಣಗಳಲ್ಲಿ ಲಿಫ್ಟ್‌, ಎಸ್ಕಲೇಟರ್‌ ಅಳವಡಿಸುವ ಉದ್ದೇಶವಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.

    ಬೀರೂರು ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ನಿಲ್ದಾಣ ಪರಿಶೀಲನೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಕೇಂದ್ರ ಬಜೆಟ್‌ನೊಂದಿಗೆ ರೈಲ್ವೆ ಬಜೆಟ್‌ ವಿಲೀನವಾದ ಬಳಿಕ ರಾಜ್ಯದಲ್ಲಿ ಇಲಾಖೆಯ ಕಾರ್ಯಗಳು ವೇಗ ಪಡೆದಿವೆ. ₹3300 ಕೋಟಿ ವೆಚ್ಚದಲ್ಲಿ 1,216 ಎಕರೆ ಭೂಸ್ವಾಧೀನದ ಮೂಲಕ ವಿಸ್ತರಣೆಗೆ ಇದ್ದ ಅಡಚಣೆ ತೆರವುಗೊಳಿಸಿದ್ದು ಇದೊಂದು ದಾಖಲೆಯಾಗಿದೆ ಎಂದು ಮಾಹಿತಿ ನೀಡಿದರು.

    ಅಮೃತಭಾರತ್‌ ಯೋಜನೆಯಡಿ ಬೀರೂರು ಮತ್ತು ಕಡೂರು ನಿಲ್ದಾಣಗಳನ್ನು ತಲಾ ₹ 20 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸುವ ಕೆಲಸ 2027-28ರ ವೇಳೆಗೆ ಮುಗಿಯಲಿದೆ. ರೈಲ್ವೆ ಮೇಲ್ಸೇತುವೆ ಮತ್ತು ಕೆಳಸೇತುವೆಗಳ ವಿಷಯದಲ್ಲಿ ಆಂದೋಲನವೇ ನಡೆದಿದೆ. ಈಗಾಗಲೇ 644 ಮೇಲ್ಸೇತುವೆ ನಿರ್ಮಿಸಲಾಗಿದೆ.1,662 ಕಿ.ಮೀ ಹೊಸಲೈನ್‌ ಅಳವಡಿಕೆ ಪ್ರಗತಿಯಲ್ಲಿದೆ ಎಂದರು.

    ಶುದ್ಧ ಕುಡಿಯುವ ನೀರು ಪೂರೈಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ವಿಷಯದಲ್ಲಿ ರಾಜ್ಯ ಸರ್ಕಾರ ಅಸಹಕಾರ ತೋರುತ್ತಿದೆ. ಶುದ್ಧ ಕುಡಿಯುವ ನೀರು ಪೂರೈಕೆಯಲ್ಲಿ ರಾಜ್ಯ ದೇಶದಲ್ಲಿ 21ನೇ ಸ್ಥಾನದಲ್ಲಿದ್ದು ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂದು ದೂರಿದರು.

    ಈ ವೇಳೆ ರಾಜ್ಯ ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಬೆಳ್ಳಿಪ್ರಕಾಶ್‌, ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್‌ ಮಿತ್ತಲ್‌, ಕಡೂರು ತಹಶೀಲ್ದಾರ್‌ ಸಿ.ಎಸ್‌.ಪೂರ್ಣಿಮಾ, ಬೀರೂರು ಪುರಸಭಾಧ್ಯಕ್ಷೆ ಭಾಗ್ಯಲಕ್ಷ್ಮಿ, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ ಶೆಟ್ಟಿ, ಸವಿತಾ ರಮೇಶ್‌ ಹಾಜರಿದ್ದರು.

    Development of all railway stations in the state on the model of airports

  • ರಾಜ್ಯದ ಮುಖ್ಯಮಂತ್ರಿಯಾಗಿ ಯಾರ ಹೆಸರನ್ನೂ ನಾನು ಪ್ರಶಸ್ತಿಗೆ ಶಿಫಾರಸ್ಸು ಮಾಡಿಲ್ಲ

    ರಾಜ್ಯದ ಮುಖ್ಯಮಂತ್ರಿಯಾಗಿ ಯಾರ ಹೆಸರನ್ನೂ ನಾನು ಪ್ರಶಸ್ತಿಗೆ ಶಿಫಾರಸ್ಸು ಮಾಡಿಲ್ಲ

    ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ ಯಾರ ಹೆಸರನ್ನೂ ನಾನು ಪ್ರಶಸ್ತಿಗೆ ಶಿಫಾರಸ್ಸು ಮಾಡಿಲ್ಲ. ಆಯ್ಕೆ ಸಮಿತಿ ತೀರ್ಮಾನವೇ ಅಂತಿಮವಾಗಿ ಆಯ್ಕೆ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ “70ನೇ ಕರ್ನಾಟಕ ರಾಜ್ಯೋತ್ಸವವನ್ನು ಉದ್ಘಾಟಿಸಿ 70 ಮಂದಿ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿ ಮಾತನಾಡಿ  ಕರ್ನಾಟಕ ಉದಯವಾಗಿ 70 ವರ್ಷಗಳಾಗಿರುವುದನ್ನು ಪರಿಗಣಿಸಿ 70 ಮಂದಿ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು.

    ಅರ್ಜಿ ಹಾಕಿದವರನ್ನು ಪರಿಗಣಿಸದೇ ಆಯಾ ಕ್ಷೇತ್ರದ ಪರಿಣಿತರನ್ನೇ ಗುರುತಿಸಿ ಆಯ್ಕೆ ಮಾಡಬೇಕು ಎನ್ನುವುದು ನಮ್ಮ ತೀರ್ಮಾನವಾಗಿತ್ತು. ಪುರಸ್ಕೃತರೆಲ್ಲರೂ ಶತಾಯುಶಿಗಳಾಗಿ ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಇನ್ನಷ್ಟು ಸಾಧನೆ ಮಾಡಿ ನಿಮ್ಮದೆಲ್ಲಾ ಸಾರ್ಥಕ ಬದುಕು ಆಗಲಿ ಎಂದು ಹಾರೈಸಿದರು.

    ಒಂದೇ ವಿಭಾಗದಲ್ಲಿ ಒಬ್ಬರಿಗಿಂತ ಹೆಚ್ಚು ಸಾಧಕರ ಹೆಸರು ಇದ್ದ ಸಂದರ್ಭದಲ್ಲಿ ಮಾತ್ರ ಪ್ರಾದೇಶಿಕ ನ್ಯಾಯ, ಸಾಮಾಜಿಕ ನ್ಯಾಯದ ಕಾರಣಕ್ಕಾಗಿ ಆ ಅರ್ಹರಲ್ಲೇ ಒಬ್ಬರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದರು.

    ಮಾಧ್ಯಮಗಳು ಯಾರ ಆಯ್ಕೆ ಬಗ್ಗೆಯೂ ತಕರಾರು ಮಾಡಿಲ್ಲ. ಆದ್ದರಿಂದ ಅರ್ಹರಿಗೇ ಪ್ರಶಸ್ತಿ ಸಿಕ್ಕಿದೆ ಎಂದು ಭಾವಿಸುತ್ತೇನೆ ಎಂದು ಮೆಚ್ಚುಗೆ ಸೂಚಿಸಿದರು. ಪ್ರಶಸ್ತಿ ಪುರಸ್ಕೃತರಾದ ಕೋಣಂದೂರು ಲಿಂಗಪ್ಪ ಅವರನ್ನು ಉಲ್ಲೇಖಿಸಿ ಸಮಾಜವಾದಿ ಹೋರಾಟದ ದಿನಗಳನ್ನು ಸ್ಮರಿಸಿದರು.

    I have not recommended anyone for the award as the Chief Minister of the state.

  • ಒಂಟಿ ಸಲಗ ಸೇರಿಯಲು ಸರ್ಕಾರ ಆದೇಶ

    ಒಂಟಿ ಸಲಗ ಸೇರಿಯಲು ಸರ್ಕಾರ ಆದೇಶ

    ಚಿಕ್ಕಮಗಳೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಗೆ ಒಳಪಡುವ ಪರಿಸರದಲ್ಲಿ ಮಾನವ ಜೀವಕ್ಕೆ ಅಪಾಯಕಾರಿಯಾಗಿ ತಿರುಗಾಡುತ್ತಿರುವ ಒಂಟಿ ಸಲಗ ಸೇರಿಯಲು ಆದೇಶ ಹೊರಡಿಸಲಾಗಿದೆ.

    ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಕಾರ್ಕಳ ವನ್ಯಜೀವಿ ವ್ಯಾಪ್ತಿಯ ಕೆರೆಕಟ್ಟೆ ವನ್ಯಜೀವಿ ವಲಯದ ಅರಣ್ಯ ಪ್ರದೇಶಗಳಲ್ಲಿ ಒಂಟಿ ಕಾಡಾನೆಯು ಸಂಚರಿಸುತ್ತಿದೆ .

    ಕಳೆದ 10ರಿಂದ 15 ವರ್ಷಗಳಿಂದ ಆಗುಂಬೆ, ಕೆರೆಕಟ್ಟೆ ಕುದುರೆಮುಖ ಪ್ರದೇಶಗಳಲ್ಲಿ ಒಂಟಿ ಸಲಗ ಓಡಾಡಿಕೊಂಡು ಹಲವಾರು ಕಡೆಗಳಲ್ಲಿ ದಾಳಿ ಮಾಡಿ ಬೆಳೆಗಳನ್ನು ಹಾಳು ಮಾಡಿದ್ದೆ ಅಲ್ಲದೆ ತುಂಗಭದ್ರಾ ಮೀಸಲು ಅರಣ್ಯದ ಮುಡುಬಾ ಸುತ್ತುಗಟ್ಟಿನ ಇಬ್ಬರು ವ್ಯಕ್ತಿಗಳ ಮೇಲೆ ದಾಳಿ ಮಾಡಿ ಹತ್ಯೆ ಮಾಡಿದೆ.

    ಕಾಡಾನೆಯನ್ನು ಸೆರೆ ಹಿಡಿಯದಿದ್ದಲ್ಲಿ ಇನ್ನೂ ಇಂತಹ ಘಟನೆಗಳು ಪುನರಾವರ್ತನೆಯಾಗುವ ಸಾಧ್ಯತೆಗಳಿದ್ದು ಸೆರೆ ಹಿಡಿಯುವ ಅತೀ ಅವಶ್ಯಕತೆ ಇದು ಈ ಕಾಡಾನೆ ಸೆರೆ ಹಿಡಿಯಲು ಬೇರೆ ಪಳಗಿದ ಆನೆಗಳ ಸಹಾಯ ಪಡೆಯಬೇಕಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದರು.

    ಕಾಡಾನೆಯನ್ನು ಸೆರೆ ಹಿಡಿಯಲು ಆನೆ ಶಿಬಿರದಿಂದ ಪಳಗಿದ ಆನೆ ಮತ್ತು ಮಾವುತರನ್ನು ನಿಯೋಜಿಸಬೇಕು ಹಾಗೂ ಸೆರೆ ಹಿಡಿದ ಕಾಡಾನೆಯನ್ನು ಯಾವ ಸ್ಥಳಕ್ಕೆ ಬಿಡಬೇಕು ಎಂದು ನಿರ್ದೇಶನ ನೀಡುವಂತೆ ಅವರು ಕೋರಿದ್ದರು ಈ ಹಿನ್ನೆಲೆಯಲ್ಲಿ ಕೆರೆಕಟ್ಟೆ ವನ್ಯಜೀವಿ ವಲಯದಲ್ಲಿ ಎರಡು ಮಾನವ-ಪ್ರಾಣಹಾನಿಗೆ ಕಾರಣವಾದ ಗಂಡಾನೆಯನ್ನು ಸೆರೆಹಿಡಿಯಲು ಆದೇಶ ಹೋರಡಿಸಲಾಗಿದೆ.

    ಆನೆ ಗುರುತಿಸಿ ಸೆರೆ ಹಿಡಿದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ದೊಡ್ಡ ಹರವೆ ಆನೆ ಶಿಬಿರಕ್ಕೆ ಸ್ಥಳಾಂತರಿಸಲು ಅನುಮತಿ ನೀಡಲಾಗಿದೆ. ಕಾಡಾನೆಗಳ ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ TEAM E ‘ಏಕಲವ್ಯ” ಪ್ರಶಾಂತ, ಧನಂಜಯ, ಹರ್ಷ, ಆನೆಗಳನ್ನು ದೊಡ್ಡ ಹರವೆಯಿಂದ TEAM – B ಯಿಂದ “ಅಜಯ”, ದುಬಾರೆ ಮತ್ತು ಹಾರಂಗಿ ಆನೆ ಶಿಬಿರದಿಂದ ಆನೆಗಳನ್ನು ಬಳಸಿಕೊಂಡು ಈ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಕ್ಷೇತ್ರ ಸಿಬ್ಬಂದಿ ಮತ್ತು ಸ್ಥಳೀಯ ಜನರಿಗೆ ಯಾವುದೇ ಅಪಾಯವಾಗದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ.

    ಆನೆ ಸೆರೆಹಿಡಿಯಬೇಕೆಂಬ ಒತ್ತಾಯ ತೀವ್ರವಾಗಿತ್ತಲ್ಲದೆ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಪಕ್ಷಭೇದ ಮರೆತು ಜನಾಕ್ರೋಶ ವ್ಯಕ್ತವಾಗಿತ್ತು.

    Government orders to join at once