Category: ಚಿಕ್ಕಮಗಳೂರು

  • ಮಹಿಳೆಯರು, ಕೆಳಜಾತಿಗಳ ಹಕ್ಕಿಗಾಗಿ ಫುಲೆ ಜೀವನ ಮುಡಿಪು

    ಮಹಿಳೆಯರು, ಕೆಳಜಾತಿಗಳ ಹಕ್ಕಿಗಾಗಿ ಫುಲೆ ಜೀವನ ಮುಡಿಪು

    ಚಿಕ್ಕಮಗಳೂರು: ಜಾತಿ ಆಧಾರಿತ ತಾರತಮ್ಯದ ವಿರುದ್ಧ ಹೋರಾಡಲು ಮತ್ತು ಮಹಿಳೆ ಯರು ಮತ್ತು ಕೆಳಜಾತಿಗಳ ಹಕ್ಕುಗಳಿಗಾಗಿ ಪ್ರತಿಪಾದಿಸಲು ಜ್ಯೂತಿಬಾಫುಲೆ ತಮ್ಮ ಜೀವನವನ್ನು ಮುಡಿಪಾ ಗಿಟ್ಟರು ಎಂದು ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಹೇಳಿದರು.

    ನಗರದ ಜಿಲ್ಲಾ ಬಿಎಸ್‌ಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ಧ ಜ್ಯೋತಿಬಾ ಪುಲೆ ಜಯಂತಿ ಕಾರ್ಯಕ್ರಮ ವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿ ಮಹಿಳಾ ಶಿಕ್ಷಣ ಮತ್ತು ಸಬಲೀಕರಣಕ್ಕಾಗಿ ನಡೆದ ಚಳವಳಿಯಲ್ಲಿ ಫುಲೆ ಪ್ರವರ್ತಕ ವ್ಯಕ್ತಿಯಾಗಿದ್ದರು. ಸಾಂಪ್ರದಾಯಿಕ ರೂಢಿಗಳನ್ನು ಮುರಿದು ಚಾಲ್ತಿಯಲ್ಲಿರುವ ಸಾಮಾಜಿಕ ಕ್ರಮವನ್ನು ಪ್ರಶ್ನಿಸುವ ಮೂಲಕ ಮೊದಲ ಬಾಲಕಿಯರ ಶಾಲೆಯನ್ನು ಸ್ಥಾಪಿಸಿದರು ಎಂದರು.

    ಜ್ಯೋತಿಬಾ ಫುಲೆ ತಮ್ಮ ಕಾಲದ ದಬ್ಬಾಳಿಕೆಯ ಸಾಮಾಜಿಕ ರೂಢಿಗಳನ್ನು ಪ್ರಶ್ನಿಸಿದ ಕ್ರಾಂತಿಕಾರಿಯಾ ಗಿದ್ದರು. ಜಾತಿ ತಾರತಮ್ಯ ಮತ್ತು ಸಾಮಾಜಿಕ ಅಸಮಾನತೆಯಿಂದ ಪೀಡಿತವಾದ ಸಮಾಜದಲ್ಲಿ ಜನಿಸಿದ ಫುಲೆ, ಚಾಲ್ತಿಯಲ್ಲಿರುವ ಸಾಮಾಜಿಕ ರಚನೆಯಲ್ಲಿ ಅನ್ಯಾಯದ ವಿರುದ್ಧ ಹೋರಾಡಲು ತಮ್ಮ ಜೀವನವನ್ನು ಪಣಹಿಟ್ಟರು ಎಂದು ಹೇಳಿದರು.

    ಅಜ್ಞಾನ ಮತ್ತು ಶೋ?ಣೆಯ ಸಂಕೋಲೆಗಳಿಂದ ದಮನಿತ ಜನಸಾಮಾನ್ಯರನ್ನು ವಿಮೋಚನೆಗೊ ಳಿಸಲು ಶಿಕ್ಷಣವೇ ಪ್ರಮುಖ ಎಂದು ಫುಲೆ ದೃಢವಾಗಿ ನಂಬಿದ್ದರು. ಭಾರತದಲ್ಲಿ ಸಾರ್ವತ್ರಿಕ ಶಿಕ್ಷಣ ಮತ್ತು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಅಂತಹ ವಿಚಾರಗಳನ್ನು ಪರಿಗಣಿಸಲಾಗಿದ್ದ ಸಮಯದಲ್ಲಿ ಪತ್ನಿ ಸಾವಿತ್ರಿಬಾಯಿ ಫುಲೆ ಅವರೊಂದಿಗೆ ಚಳುವಳಿಯನ್ನು ಪ್ರಾರಂಭಿಸಿದರು ಎಂದರು.

    ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ ಮಾತನಾಡಿ ಫುಲೆಯವರ ಸಾಮಾಜಿಕ ಸಮಾನತೆಯ ಬದ್ಧತೆಯು ಶಿಕ್ಷಣವನ್ನು ಮೀರಿ ವಿಸ್ತರಿಸಿತು. ಜಾತಿ ವ್ಯವಸ್ಥೆಯನ್ನು ತೀವ್ರವಾಗಿ ವಿರೋಧಿಸಿದರು. ಅಂಚಿನಲ್ಲಿ ರುವ ಕೆಳಜಾತಿಗಳು ಉನ್ನತೀಕರಿಸಲು ಅವಿಶ್ರಾಂತವಾಗಿ ಶ್ರಮಿಸಿದ್ದರು. ಸಮಾಜದಲ್ಲಿ ಸರ್ವಸಮಾನರಂತೆ ಬಾಳಲು ಶಾಲೆ, ಗ್ರಂಥಾಲಯಗಳನ್ನು ತೆರೆದು ಆಸರೆ ಒದಗಿಸಿದರು ಎಂದು ತಿಳಿಸಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಎಸ್ಪಿ ಜಿಲ್ಲಾಧ್ಯಕ್ಷ ಸಿ.ಪರಮೇಶ್ವರ್ ದಲಿತ ಹೆಣ್ಣು ಮಕ್ಕಳಿಗೆ ಶಿಕ್ಷಣ ಎಂಬುದು ಕನಸಾಗಿದ್ಧ ಸಂದರ್ಭದಲ್ಲಿ ಹೂವಾಡಿಗರ ಸಮುದಾಯದ ಜನಿಸಿದರಾದರೂ ಜ್ಯೋತಿಭಾ ಪುಲೆ ಹೆಣ್ಣುಮಕ್ಕಳಿಗೆ ನಿಲುವು ತಾಳಿ ಶಿಕ್ಷಣ ಕೊಡಿಸಿದವರು. ಪ್ರಸ್ತುತ ಬಹುಜನ ಚಳುವಳಿ ಫು ಲೆ, ಅಂಬೇಡ್ಕರ್ ಚಳುವಳಿಯೆಂದೇ ಪ್ರಸಿದ್ಧವಾಗಿದೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಬಿಎಸ್ಪಿ ಜಿಲ್ಲಾ ಸಂಯೋಜಕ ಕೆ.ಎಂ.ಗೋಪಾಲ, ಸಿ.ಎಂ.ಮಂಜಯ್ಯ, ಉಪಾಧ್ಯಕ್ಷೆ ಕೆ.ಎಸ್.ಮಂಜುಳಾ, ತಾಲ್ಲೂಕು ಅಧ್ಯಕ್ಷ ಹೆಚ್.ಕುಮಾರ್, ಪ್ರಧಾನ ಕಾರ್ಯದರ್ಶಿ ವಸಂತ್, ಮುಖಂಡರು ಗಳಾದ ಜಗದೀಶ್, ಬ.ಎಂ.ಶಂಕರ್, ಎಂ.ಬಾಬು, ವಾಹೀದ್, ಬಕ್ಕಿ ಮಂಜುನಾಥ್, ಪುಟ್ಟಸ್ವಾಮಿ ಇದ್ದರು.

    Phule dedicated his life to the rights of women and lower castes.

  • ಏಕತೆಯ ಸೂತ್ರಕ್ಕೆ ದೇವಾಲಯಗಳು ಪ್ರೇರಕ

    ಏಕತೆಯ ಸೂತ್ರಕ್ಕೆ ದೇವಾಲಯಗಳು ಪ್ರೇರಕ

    ಚಿಕ್ಕಮಗಳೂರು: ಏಕತೆಯ ಸೂತ್ರಕ್ಕೆ ದೇವಾಲಯಗಳು ಪ್ರೇರಕ. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ನುಡಿದರು.

    ಆಲ್ದೂರಿನ ಶ್ರೀಮಹಾಗಣಪತಿ ಶಿಲಾದೇಗುಲದ ಪುನರ್‌ಪ್ರತಿಷ್ಠಾಪನಾ ಮಂಡಲಪೂಜೆಯ ಅಂಗವಾಗಿ ಬಿಲ್ವಪತ್ರೆಸಸಿಗಳನ್ನು ಆರೋಹಣಮಾಡಿ ನಂತರ ನಡೆದ ಧರ್ಮಜಾಗೃತಿ ಸಮಾರಂಭದಲ್ಲಿ ಅವರು ಮಾತನಾಡಿದರು.

    ಅಂತರಂಗದಲ್ಲಿ ಭಗವಂತನನ್ನು ಕಾಣಬಹುದು. ಸನಾತನ ಧರ್ಮ ಸಂಸ್ಕೃತಿಯಲ್ಲಿ ದೇವರನ್ನು ಸಾಕ್ಷಾತ್ಕರಿಸಿಕೊಳ್ಳಲು ಆಕಾರ ರಪ ನೀಡಲಾಗಿದೆ. ದೇವಾಲಯಗಳು ಭಾವೈಕ್ಯತೆ, ಸಾಮರಸ್ಯ, ಸದ್ಭಾವ, ಸಂಸ್ಕೃತಿಯ ಕೇಂದ್ರಗಳಾಗಿ ಸಮಾಜಜಾಗೃತಿಗೆ ಕೊಡುಗೆ ನೀಡುತ್ತಿದೆ ಎಂದರು.

    ವೇದಗಳಲ್ಲಿ ಜಾತಿ ಇರಲಿಲ್ಲ. ವೃತ್ತಿಯ ಕಾರಣಕ್ಕಾಗಿ ಜಾತಿ ಬಂತು. ಜಗತ್ತು ಶಿವಸೃಷ್ಟಿ. ನಮ್ಮೊಳಗಿರುವ ಚೇತನವೂ ದೇವರೇ. ವ್ಯಕ್ತಿ ವ್ಯಕ್ತಿಗಳ ನಡುವೆ ವೃತ್ತಿಯ ಕಾರಣಕ್ಕಾಗಿ ಮೇಲುಕೀಳು ಭಾವ ಸರಿಯಲ್ಲ. ಜಾತಿಯತೆಯಿಂದ ಭಿನ್ನತೆ ಬರಬಾರದು. ವಿವಿಧೆತೆ ಸೂತ್ರ ಕಲಿಯಬೇಕು ಎಂದ ರವಿ, ಅಂತರೀಕ್ಷಕ್ಕೆ ಅಡಿ ಇಟ್ಟರೂ ಅಂತರ ತರುವುದೇಕೆ ಎಂದು ಪ್ರಶ್ನಿಸಿದರು.

    ಚಾತುರ್ವಣ ಹೇಳಿದ್ದು ಗುಣಸ್ವಭಾವದಿಂದಲೇ ಹೊರತು ಹುಟ್ಟಿನಿಂದಲ್ಲ. ಜ್ಞಾನ ಪಸರಿಸುವವರಿಗೆ ಬ್ರಾಹ್ಮಣರೆಂದರು. ಅಭಾವ ನೀಗಿಸುವುದು ವೈಶ್ಯರಾದರೆ, ಅಲಸ್ಯದ ವಿರುದ್ಧ ಹೋರಾಡುವವರು ಶೂದ್ರರು. ಅನ್ಯಾಯದ ವಿರುದ್ಧ ಹೋರಾಡುವುದು ಕ್ಷತ್ರಿಯರು ಎಂದು ವಿಶ್ಲೇಷಿಸಿದ ರವಿ, ತಾವೂ ಸ್ವಭಾವತಃ ಕ್ಷತ್ರಿಯರು. ಸಮಾಜ ವ್ಯವಸ್ಥೆಗೆ ನಾಲ್ಕು ವರ್ಗಗಳು ಸೃಷ್ಟಿಯಾದವೇ ಹೊರತು, ಎಲ್ಲವೂ ಸಮಾನವೆಂದೆ ಅಂದು ಪರಿಗಣಿಸಲ್ಪಟ್ಟಿತ್ತು. ಯಾವುದೇ ತಾರತಮ್ಯ ಕರ್ತವ್ಯ-ವೃತ್ತಿ ಪಾಲನೆಯಲ್ಲಿ ಇರಕೂಡದು ಎಂದರು.

    ಪ್ರತಿಯೊಬ್ಬರೂ ಸಮಾಜ ಧರ್ಮ, ರಾಷ್ಟ್ರಧರ್ಮ, ಕುಟುಂಬಧರ್ಮ ಜೊತೆಗೆ ವೃತ್ತಿಧರ್ಮವನ್ನು ಪರಿಪಾಲಿಸಬೇಕು. ಶ್ರೇಷ್ಠತೆ ನಮ್ಮ ಗುಣ, ನಡತೆ, ಸ್ವಭಾವ ಅವಲಂಬಿಸಿರುತ್ತದೆಯೆ ಹೊರತು ಹುಟ್ಟಿನಿಂದಲ್ಲ. ಸನಾತನಧರ್ಮ ಸಾಮರಸ್ಯ ಸದ್ಭಾವನೆಗಳನ್ನು ಹೇಳುತ್ತದೆ. ರಂಭಾಪುರಿ ಪೀಠದ ಘೋಷವಾಕ್ಯದಲ್ಲಿ ‘ಮಾನವ ಧರ್ಮಕ್ಕೆ ಜಯವಾಗಲಿ’ ಎಂಬ ಉದಾತ್ತತೆ ಇದೆ. ‘ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎಂಬ ಸತ್ಯಸಂದೇಶವಿದೆ. ಬಾಂಬ್‌ನಿಂದ ಭಯನಿವಾರಣೆ ಆಗದು ಎಂದ ಸಿ.ಟಿ.ರವಿ, ಸನಾತನಧರ್ಮವು ‘ಸರ್ವೇ ಜನಾ ಸುಖೀನೋ ಭವತು:’ ಎಂದಿದೆ. ಧರ್ಮಪಾಲನೆಗೆ ದೇವಾಲಯಗಳು, ಗುರುಪೀಠಗಳು, ಆಚಾರ್ಯರು. ಸಾಧುಸತ್ಪುಷರು ನಿರಂತರವಾಗಿ ಮಾರ್ಗದರ್ಶನ ನೀಡುತ್ತಿರುವುದರಿಂದಲೇ ಸಾವಿರಾರು ವರ್ಷಗಳಿಂದ ಹಿಂದೂಸಮಾಜ ತಲೆಯೆತ್ತಿ ನಿಂತಿದೆ ಎಂದರು.

    ಶಂಕರದೇವರಮಠಾಧಕ್ಷರಾದ ಶ್ರೀಚಂದ್ರಶೇಖರ ಶಿವಾಚಾರ್ಯರು ಮಾತನಾಡಿ, ಪ್ರಕ್ರತಿಯೆ ದೈವಸೃಷ್ಟಿ. ದುರಾಸೆಗೆ ಬಲಿಯಾಗದೆ ನಿಸರ್ಗವನ್ನು ಕಾಪಿಡುವ ಹೊಣೆಗಾರಿಕೆ ನೆನಪಿಡಬೇಕು. ಸರಸ್ವತಿ ವಿದ್ಯೆಗೆ ಅಧಿದೇವತೆಯಾದರೆ, ಗಣಪತಿ ಬುದ್ಧಿಗೆ ಅಧಿದೇವತೆ. ಮಹಾಗಣಪತಿಯ ಆಶೀರ್ವಾದ ಎಲ್ಲರ ಮೇಲಿರಲಿ ಎಂದರು.

    ಬಾಳೆಹೊನ್ನೂರಿನ ಶ್ರೀಮದ್ರಂಭಾಪುರಿ ವೀರಸಿಂಹಾಸನಾಧೀಶ್ವರ ಡಾ.ವೀರಸೋಮೇಶ್ವರ ಜಗದ್ಗುರುಗಳವರು ದಿವ್ಯಸಾನಿಧ್ಯ ವಹಿಸಿದ್ದು, ಸುಂದರ ಶಿಲಾಮಯ ಈ ಮಂದಿರ ನಾಸ್ತಿಕ ಮನೋಭಾವ ದೂರವಾಗಿಸುತ್ತದೆ. ಮಾನವರ ಕಲ್ಯಾಣವೇ ಧರ್ಮದ ಗುರಿ. ವಿದ್ಯೆ ಮತ್ತು ಸಂಪತ್ತು ಗಳಿಸುವಾಗ ಆಶಾವಾದಿಯಾಗಿರಬೇಕು. ದೇವರ ಅಸ್ಥಿತ್ವ ಮತ್ತು ಮೃತ್ಯುಭಯ ಸದಾ ಇರಬೇಕು. ನಾವು ಪಡೆದ ಉಪಕಾರ ಮತ್ತು ಬೇರೆಯವರಿಂದಾದ ಅಪಕಾರ ಮರೆಯಬೇಕು ಎಂದರು.

    ನಿಂತ ನೆಲ, ಕುಡಿಯುವ ನೀರು, ತಿನ್ನುವ ಅನ್ನ, ಉಸಿರಾಡುವ ಗಾಳಿ ಎಲ್ಲವೂ ಭಗವಂತನ ಕೊಡುಗೆ. ದೈವ ಸಾನಿಧ್ಯಕ್ಕೆ ಕೃತಜ್ಞತೆಯ ಭಾವ ತಾಳಬೇಕು. ದೇವಾಲಯದ ಶುದ್ಧತೆ ಪಾಲಿಸುವುದರ ಜೊತೆಗೆ ನಿರಂತರ ಧರ್ಮಾಚರಣೆಯ ಕಾರ್‍ಯಕ್ಕೆ ಪೂರಕವಾಗಿರಬೇಕು. ಯುವಶಕ್ತಿಗೆ ಸಂಸ್ಕಾರ ಸ್ವಾಭಿಮಾನ ಕಲಿಸಿದರೆ ಅವರು ದೇಶಕ್ಕೆ ಸಂಪತ್ತಾಗುತ್ತಾರೆ. ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ನಿಜಧರ್ಮ ಪಾಲನೆ ಅಗತ್ಯ ಎಂದು ಜಗದ್ಗುರುಗಳು ನುಡಿದರು.

    ಬೇರುಗಂಡಿ ಬೃಹನ್ಮಠದ ಶ್ರೀರೇಣುಕಮಹಾಂತ ಶಿವಾಚಾರ್ಯರು, ಮಾಜಿಶಾಸಕ ಎಂ.ಪಿ.ಕುಮಾರಸ್ವಾಮಿ, ಗ್ರಾಮಪಂಚಾಯಿತಿ ಅಧ್ಯಕ್ಷೆ ಶ್ರೀದೇವಿ, ಮಹಾಗಣಪತಿ ಸೇವಾಸಮಿತಿ ಅಧ್ಯಕ್ಷ ಸಿ.ಸುರೇಶ್, ಕಾರ್‍ಯದರ್ಶಿ ಎಚ್.ಎಲ್.ರವಿ, ಬಿ.ಎಸ್.ರಾಜೀವ, ಡಿ.ಸಿ.ಗಿರೀಶ, ಇಳೇಖಾನ್ ಉಮೇಶ್ ಮತ್ತಿತರರು ಪಾಲ್ಗೊಂಡಿದ್ದರು.

    Temples are the inspiration for the principle of unity

  • ಕುಮಾರಗಿರಿ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ಸಾಮೂಹಿಕ ವಿವಾಹ

    ಕುಮಾರಗಿರಿ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ಸಾಮೂಹಿಕ ವಿವಾಹ

    ಚಿಕ್ಕಮಗಳೂರು: – ತಾಲ್ಲೂಕಿನ ಮಲ್ಲೇನಹಳ್ಳಿ ಸಮೀಪದ ಕುಮಾರಗಿರಿ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ಪಂಗುನಿ ಉತ್ತಿರ ಜಾತ್ರೆ ಮತ್ತು ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಸಹಸ್ರಾರು ಭಕ್ತಾಧಿಗಳು ಹಾಗೂ ವಧು-ವರರ ಕುಟುಂಬಸ್ಥರ ಸಮ್ಮುಖದಲ್ಲಿ ಶುಕ್ರವಾರ ವೈಭವದಿಂದ ಜರುಗಿತು.

    ಪಂಗುನಿ ಉತ್ತಿರ ಜಾತ್ರೆ ಅಂಗವಾಗಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಅಭಿಷೇಕ, ವಿಶೇಷಪೂಜೆ, ಅಲಂಕಾರ ಮಾಡಲಾಯಿತು. ಕಾಲ್ನಡಿಗೆ ಹಾಗೂ ಟ್ರಾಕ್ಟರ್‌ಗಳ ಮೂಲಕ ಆಗಮಿಸಿದ ಸುತ್ತಮುತ್ತಲ ಗ್ರಾಮಗಳ ನೂರಾ ರು ಭಕ್ತರು ಸಾಮೂಹಿಕವಾಗಿ ಕಾವಡಿ ಸಮರ್ಪಿಸಿದರು. ಶ್ರೀ ಸುಬ್ರಹ್ಮಣ್ಯ ಸ್ವಾಮಿ, ವಳ್ಳಿ, ದೇವಯಾನೆರವರ ಕಲ್ಯಾಣೋತ್ಸವ ನೆರವೇರಿತು.

    ಇದೇ ಸಂದರ್ಭ ದೇವಾಲಯ ಸಮಿತಿ ಹಮ್ಮಿಕೊಂಡಿದ್ಧ ಸರಳ ಸಾಮೂಹಿಕ ವಿವಾಹದಲ್ಲಿ ಸುಮಾ ರು ೧೩ ನವಜೋಡಿಗಳಿಗೆ ವಸ್ತ್ರ, ಮಾಂಗಲ್ಯ, ಕಾಲುಂಗುರ ಹಾಗೂ ಸಂಸಾರಕ್ಕೆ ಅಗತ್ಯವಾದ ಪರಿಕರಗಳನ್ನು ಉಡುಗೊರೆಯಾಗಿ ನೀಡಿದರು. ಕುಟುಂಬಸ್ಥರ ಸಮ್ಮುಖದಲ್ಲಿ ನವಜೋಡಿಗಳು ಮಾಂಗಲ್ಯ ಧಾರಣೆ ನಡೆ ಸಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

    ಅರ್ಚಕ ಶೇಷಾದ್ರಿ ಭಟ್ ನೇತೃತ್ವದ ತಂಡ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಶ್ರೀ ಸುಬ್ರ ಹ್ಮಣ್ಯ ಸ್ವಾಮಿಯ ಮಹಾಮಂಗಳಾರತಿ ನಂತರ ಸಾರ್ವಜನಿಕ ಅನ್ನದಾಸೋಹ ನಡೆಯಿತು. ವಿಧಾನ ಪರಿಷತ್ ಮಾಜಿ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ ಮಾತನಾಡಿ ಆಡಂಬರದ ಮದುವೆ ಗಳು ನವ ಜೋಡಿಗಳಿಗೆ ಕೆಲ ಸಮಯ ಸಂತಸ ನೀಡುತ್ತದೆ, ಬಳಿಕ ಸಂಕಷ್ಟದ ಹಾದಿಯನ್ನು ನೆನಪಿಸುತ್ತದೆ. ಮತ್ತೊಬ್ಬರನ್ನು ಅನುಕರಿಸಿ ಬಾಳುವುದಕ್ಕಿಂತ, ನಮ್ಮ ಶಕ್ತಿಗನುಸಾರ ಬದುಕಿದರೆ ನೆಮ್ಮದಿ ಹಾಗೂ ಶಾಂತಿ ಜೀ ವನ ನಮ್ಮದಾಗಲಿದೆ ಎಂದು ತಿಳಿಸಿದರು.

    ಆ ನಿಟ್ಟಿನಲ್ಲಿ ಕುಮಾರಗಿರಿ ದೇವಾಲಯ ಸಮಿತಿ ಬಡಕುಟುಂಬಕ್ಕೆ ಅನುಕೂಲವಾಗಲು ಸಕಲ ಸೌಲಭ್ಯ ಗಳು ನೀಡಿ ಸಾಮೂಹಿಕ ಮದುವೆಗಳನ್ನು ಹಮ್ಮಿಕೊಂಡು ಜನತೆಯ ಆಧಾರವಾಗಿದೆ. ನವ ಜೋಡಿಗಳು ಕೂಡಾ ಭಗವಂತನ ಸನ್ನಿದಾನದಲ್ಲಿ ಮಾಂಗಲ್ಯ ಧರಿಸಿದರೆ, ಸಕುಟುಂಬವು ಪ್ರೀತಿ, ವಿಶ್ವಾಸದಿಂದ ಬಾಳು ತ್ತಾರೆ ಎಂದರು.

    ಸಿಪಿಐ ರಾಜ್ಯ ಮಂಡಳಿ ಸದಸ್ಯ ಹೆಚ್.ಎಂ.ರೇಣುಕಾರಾಧ್ಯ ಮಾತನಾಡಿ ಲಕ್ಷಾಂತರ ರೂ.ಗಳನ್ನು ಸಾಲಮಾಡಿ ಮದುವೆ ಮಾಡಿಕೊಂಡು ಸುಳಿಯಲ್ಲಿ ಸಿಲುಕು ಬದಲು, ಈ ರೀತಿಯ ಸಾಮೂಹಿಕ ಕಲ್ಯಾಣ ದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಸಿದರೆ ಸಂತೋಷದಿಂದ ಕೂಡಿರುತ್ತದೆ ಎಂದು ಹೇಳಿದರು.

    ದೇವಾಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ವಿಜಯ್‌ಕುಮಾರ್ ಮಾತನಾಡಿ ಈ ಭಾಗದ ಸುತ್ತಮುತ್ತಲು ಹಲವಾರು ನಿವೇಶನ, ವಸತಿ ರಹಿತರಿದ್ದು ಮೂಲಹಕ್ಕು ಪತ್ರ ದೊರೆತಿಲ್ಲ. ಹೀಗಾಗಿ ಗಾಯತ್ರಿ ಶಾಂತೇಗೌಡರು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಹಕ್ಕುಪತ್ರ ವಿತರಿಸಬೇಕು ಎಂದು ಮನವಿ ಮಾಡಿದರು.

    ಈ ಸಂದರ್ಭದಲ್ಲಿ ತಮಿಳು ಸಂಘದ ಜಿಲ್ಲಾಧ್ಯಕ್ಷ ಜಿ.ರಘು, ಕಾರ್ಯದರ್ಶಿ ಎಸ್.ಅಣ್ಣವೇಲು, ದೇವಾ ಲಯ ಸಮಿತಿ ಅಧ್ಯಕ್ಷ ವಿ.ಗುಣಶೇಖರ್, ಗೌರವಾಧ್ಯಕ್ಷ ಶಂಕರ್, ಉಪಾಧ್ಯಕ್ಷರಾದ ಎ.ಮಹಾಲಿಂಗಂ, ಜಿ. ರಮೇಶ್, ಸಹ ಕಾರ್ಯದರ್ಶಿ ಅರಿವಳಗನ್, ಖಜಾಂಚಿ ಕೆ.ಕೃಷ್ಣರಾಜ್, ನಿರ್ದೇಶಕರುಗಳಾದ ಜಿ.ಶಂಕರ್, ಗೋಪಾಲ್, ಸಿ.ವೆಂಕಟೇಶ್, ಮುರುಗನ್, ಪುವೆಂದಿರನ್, ಶಶಿಧರ್, ಮಣಿವೇಲು, ಚಿನ್ನಪ್ಪ, ಶಕ್ತಿವೇಲ್ ಮತ್ತಿತರರು ಉಪಸ್ಥಿತರಿದ್ದರು.

    Mass wedding at Kumargiri Shri Subramanya Temple

  • ಮೌಲ್ಯಾಧಾರಿತ ಜೀವನದಿಂದ ಬದುಕಿಗೆ ಬೆಲೆ

    ಮೌಲ್ಯಾಧಾರಿತ ಜೀವನದಿಂದ ಬದುಕಿಗೆ ಬೆಲೆ

    ಆಲ್ದೂರು: ಬದುಕು ವಿಕಾಸಗೊಳ್ಳಲು ಆಧ್ಯಾತ್ಮ ಜ್ಞಾನ ಬೇಕು. ಸಿದ್ಧಾಂತ ರಹಿತ ಜೀವನ ದಿಕ್ಸೂಚಿ ಇಲ್ಲದ ನೌಕೆಯಂತೆ. ಸ್ವಾರ್ಥ ರಹಿತ ಬದುಕಿಗೆ ಬೆಲೆ ಬಲ ಇದೆ. ಮೌಲ್ಯಾಧಾರಿತ ಪರಿಪಾಲನೆಯಿಂದ ಮಾನವ ಜೀವನಕ್ಕೆ ಬೆಲೆ ಪ್ರಾಪ್ತವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

    ಅವರು ಶುಕ್ರವಾರ ನಗರದಲ್ಲಿ ಶ್ರೀ ಮಹಾಗಣಪತಿ ಪುನರ್ ಪ್ರತಿಷ್ಠಾಪನಾ ಪ್ರಯುಕ್ತ ಸಂಯೋಜಿಸಿದ ಮಂಡಲ ಪೂಜಾ ಸಮಾರೋಪ ಅಂಗವಾಗಿ ಜರುಗಿದ ಜನ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಭೌತಿಕ ಜೀವನ ಸಮೃದ್ಧಗೊಂಡಂತೆ ಆಂತರಿಕ ಜೀವನ ಪರಿಶುದ್ಧಗೊಳ್ಳಬೇಕು.

    ಬಿತ್ತಿದ ಬೀಜದಂತೆ ಬೆಳೆ ಹೇಗೋ ಹಾಗೆ ನಮ್ಮ ಆಚರಣೆಯಂತೆ ಫಲ ಪ್ರಾಪ್ತವಾಗುತ್ತದೆ. ವಿಜ್ಞಾನ ತಂತ್ರಜ್ಞಾನ ಬೆಳೆದಂತೆ ಮನುಷ್ಯನ ಭಾವನೆಗಳು ಬೆಳೆಯಲಾರದಿರುವುದೇ ಹಲವಾರು ಸಮಸ್ಯೆಗಳಿಗೆ ಕಾರಣವೆಂದರೆ ತಪ್ಪಾಗದು. ಶಾಂತಿ ನೆಮ್ಮದಿಗಾಗಿ ಸಂತೃಪ್ತಿ ಸಮೃದ್ಧಿಗಾಗಿ ಧರ್ಮಾಚರಣೆ ಬಹಳ ಅವಶ್ಯಕವೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ಬೋಧಿಸಿದ್ದಾರೆ. ಮಾತಿಗೆ ತೂಕ ಬರುವುದು ಸತ್ಯದಿಂದಲ್ಲದೇ ಅಸತ್ಯದಿಂದಲ್ಲ.

    ನಮ್ಮ ಬದುಕು ಇನ್ನೊಬ್ಬರಿಗೆ ಮಾದರಿಯಾಗಬೇಕಲ್ಲದೇ ಮಾರಕವಾಗಬಾರದು. ಸ್ವಾರ್ಥ ರಹಿತ ಬದುಕಿಗೆ ಬಹಳಷ್ಟು ಶಕ್ತಿಯಿದೆ. ಕೆಡಕುಗಳನ್ನು ಮೆಟ್ಟಿ ನಿಂತು ಒಳಿತಿತ್ತ ಹೆಜ್ಜೆ ಹಾಕುವುದೇ ಮಾನವನ ಗುರಿಯಾಗಬೇಕು. ಶ್ರೀ ಮಹಾಗಣಪತಿ ಸೇವಾ ಸಮಿತಿಯಿಂದ ಸುಂದರ ಶಿಲಾ ದೇಗುಲ ನಿರ್ಮಿಸಿ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದು ತಮ್ಮೆಲ್ಲರ ಧರ್ಮ ನಿಷ್ಠೆ ಮತ್ತು ಶ್ರದ್ಧೆಗೆ ಸಾಕ್ಷಿಯಾಗಿದೆ ಎಂದ ಅವರು ಇದಕ್ಕಾಗಿ ಸಹಕರಿಸಿದ ದಾನ ಮಾಡಿದ ಎಲ್ಲ ದಾನಿಗಳಿಗೆ ಶುಭವನ್ನು ಹಾರೈಸಿದರು.

    ಸಮ್ಮುಖ ವಹಿಸಿದ ಶಂಕರದೇವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಆದರ್ಶಗಳೇ ದಾರಿದೀಪ. ಶಿಕ್ಷಣವಿಲ್ಲದೇ ಬದುಕಬಹುದು. ಆದರೆ ಸಂಸ್ಕಾರ ಸಂಸ್ಕೃತಿ ಇಲ್ಲದೇ ಬಾಳಲಾಗದು. ಶ್ರೀ ಜಗದ್ಗುರು ರೇಣುಕಾಚಾರ್ಯರು ಮತ್ತು ಬಸವಾದಿ ಶರಣರು ಜೀವನ ದರ್ಶನದ ಮೌಲ್ಯಗಳನ್ನು ಪ್ರತಿಪಾದಿಸಿದ್ದಾರೆ ಎಂದರು. ಬೇರುಗಂಡಿ ಬೃಹನ್ಮಠದ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಜೀವನದ ಜಂಜಡಗಳಲ್ಲಿ ಸಿಲುಕಿರುವ ಮನುಷ್ಯನಿಗೆ ಪುಣ್ಯ ಕ್ಷೇತ್ರಗಳು ಸ್ಫೂರ್ತಿ ಮತ್ತು ಚೈತನ್ಯ ನೀಡುವ ಕೇಂದ್ರಗಳಾಗಿವೆ. ಮಾನವನ ಉನ್ನತಿಗೆ ಧರ್ಮ ತಳಹದಿಯಾಗಿದೆ. ಪೂರ್ವಜರ ಅನುಭವದ ನುಡಿಗಳು ಬೆಳೆಯುವ ಜನಾಂಗಕ್ಕೆ ಆಶಾಕಿರಣ. ಅರಿವಿನ ಆಚಾರ ಬದುಕಿನ ಉನ್ನತಿಗೆ ಸೋಪಾನವೆಂದರು.

    ಸಮಾರಂಭವನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ ವಿವಿಧತೆಯಲ್ಲಿ ಏಕತೆಯನ್ನು ಕಂಡ ನಾಡು ಭಾರತ. ಸಾಮರಸ್ಯ ಸೌಹಾರ್ದತೆಯಿಂದ ಬದುಕಿ ಬಾಳುವುದೇ ಪ್ರತಿಯೊಬ್ಬರ ಧರ್ಮ. ವೃತ್ತಿ ಆಧರಿಸಿ ಜಾತಿಗಳು ನಿರ್ಮಾಣಗೊಂಡಿವೆ. ಜಾತಿಗಿಂತ ನೀತಿಗೆ ಪ್ರಾಮುಖ್ಯತೆ ಕೊಡಬೇಕಾಗಿದೆ. ಮಾನವ ಧರ್ಮಕ್ಕೆ ಜಯವಾಗಲೆಂಬ ವಿಶ್ವ ಬಂಧುತ್ವ-ಭಾವೈಕ್ಯತೆ ಸಾರಿದ್ದು ರಂಭಾಪುರಿ ಪೀಠ ಎಂಬುದನ್ನು ಮರೆಯಬಾರದು. ವಿಶ್ವದ ದಾರ್ಶನಿಕರು ವಿಶಾಲ ಮನೋಭಾವನೆಯಿಂದ ಆರೋಗ್ಯ ಪೂರ್ಣ ಸಮಾಜಕ್ಕೆ ಶ್ರಮಿಸಿದ್ದಾರೆ ಎಂದರು.

    ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಗ್ರಾ.ಪಂ.ಅಧ್ಯಕ್ಷೆ ಶ್ರೀದೇವಿ ಕುಮಾರಸ್ವಾಮಿ ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.
    ಸಮಾರಂಭದ ಅಧ್ಯಕ್ಷತೆ ವಹಿಸಿದ ಶ್ರೀ ಮಹಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಸಿ.ಸುರೇಶ ಮಾತನಾಡಿ ಇಂದು ನಮ್ಮೆಲ್ಲರ ಬಾಳಿನ ಭಾಗ್ಯೋದಯದ ದಿನ. ಶ್ರೀ ಮಹಾಗಣಪತಿ ಪುನರ್ ಪ್ರತಿಷ್ಠಾಪನಾ ಕಾರ್ಯ ಯಶಸ್ವಿಯಾಗಿ ನಡೆದಂತೆ ಮಂಡಲ ಪೂಜಾ ಸಮಾರೋಪ ಅಷ್ಟೇ ಸಂಭ್ರಮದಿಂದ ಜರುಗಿದ್ದು ಎಲ್ಲರಿಗೂ ಸಂತೋಷವಾಗಿದೆ. ಲೋಕ ಕಲ್ಯಾಣಾರ್ಥವಾಗಿ ಜನ ಕಲ್ಯಾಣಕ್ಕಾಗಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಶುಭ ಹಾರೈಸಿರುವುದು ನಮಗೆ ಎಲ್ಲಿಲ್ಲದ ಹರುಷ ಉಂಟು ಮಾಡಿದೆ. ಎಲ್ಲಾ ಸಮುದಾಯದ ಜನ ಸಹಕರಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಕ್ಕೆ ಸಮಿತಿ ಪರವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು.

    ಶ್ರೀ ಮಹಾಗಣಪತಿ ಸೇವಾ ಸಮಿತಿ ಕಾರ್ಯದರ್ಶಿ ರವಿ ಹೆಚ್.ಎಲ್., ಖಜಾಂಚಿ ಬಿ.ಎಸ್.ರಾಜೀವ, ಸಂಘಟನಾ ಕಾರ್ಯದರ್ಶಿ ಡಿ.ಸಿ.ಗಿರೀಶ ಮೊದಲ್ಗೊಂಡು ಅನೇಕ ಗಣ್ಯರು ದಾನಿಗಳು ಪಾಲ್ಗೊಂಡಿದ್ದರು. ಎಚ್.ಎಲ್.ರವಿಕುಮಾರ ಸ್ವಾಗತಿಸಿದರು. ಮಹಿಳಾ ಭಜನಾ ಮಂಡಳಿಯಿಂದ ಪ್ರಾರ್ಥನಾ ಗೀತೆ ಜರುಗಿತು. ತನುಜಾ ರಾಜೇಶ ಮತ್ತು ಡಿ.ಸಿ.ಗಿರೀಶ ಸಂಯುಕ್ತವಾಗಿ ನಿರೂಪಿಸಿದರು. ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು.

    ಸಮಾರಂಭಕ್ಕೂ ಮುನ್ನ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಭಕ್ತ ಸಂಕುಲಕ್ಕೆ ಶುಭ ಹಾರೈಸಿದರು.

    Value for life through value-based living

  • ಇಂಧನ, ಗ್ಯಾಸ್ ಬೆಲೆ ಹೆಚ್ಚಿಸಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

    ಇಂಧನ, ಗ್ಯಾಸ್ ಬೆಲೆ ಹೆಚ್ಚಿಸಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

    ಚಿಕ್ಕಮಗಳೂರು: ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ಹೆಚ್ಚಳಗೊಳಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ನಗರದಲ್ಲಿಂದುಪ್ರತಿಭಟನೆನಡೆಸಿದರು.

    ನಗರದ ಹನುಮಂತಪ್ಪ ವೃತ್ತದಿಂದ ಕೇಂದ್ರಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ, ಗ್ಯಾಸ್ ಸಿಲಿಂಡರ್, ಸೌದೆ ಮತ್ತು ಕಾರಿಗೆ ಹಗ್ಗ ಕಟ್ಟಿ ಎಳೆದುಕೊಂಡು ಮೆರವಣಿಗೆ ಹೊರಟ ಪ್ರತಿಭಟನಾಕಾರರು ಆಜಾದ್ ವೃತ್ತದಲ್ಲಿ ಸಮಾವೇಶಗೊಂಡು ಕಾಂಗ್ರೆಸ್ ಚಿಕ್ಕಮಗಳೂರು ಕ್ಷೇತ್ರ ಸಮಿತಿ ಮತ್ತು ಯುವ ಕಾಂಗ್ರೆಸ್ ಮುಖಂಡರು ಬೆಲೆ ಏರಿಕೆಯನ್ನು ವಿರೋಧಿಸಿ ಪ್ರತಿಭಟಿಸುವ ಮೂಲಕ ಬಿಜೆಪಿ ಮತ್ತು ಪ್ರಧಾನಿ ನರೇಂದ್ರಮೋದಿ ವಿರುದ್ಧ ಘೋಷಣೆ ಕೂಗಿದರು.

    ಈಗಾಗಲೇ ಹೆಚ್ಚಳಗೊಳಿಸಿರುವ ಬೆಲೆಯನ್ನು ಕಡಿತಗೊಳಿಸಬೇಕೆಂದು ಆಗ್ರಹಿಸಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.

    ನಂತರ ಪ್ರತಿಭಟನಾ ನಿರತನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ. ಅಂಶುಮಂತ್, ರಾಜ್ಯದಲ್ಲಿ ಬಿಜೆಪಿ ತನ್ನ ಜವಾಬ್ದಾರಿಯನ್ನು ಮರೆತಿದೆ. ರಚನಾತ್ಮಕ ವಿರೋಧಪಕ್ಷವಾಗಿ ಕಾರ್ಯನಿರ್ವಹಿಸುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದ ಅವರು, ಕೇಂದ್ರ ಸರ್ಕಾರ ಅದಾನಿ, ಅಂಬಾನಿ ರಕ್ಷಣೆಗೆ ಮುಂದಾಗಿದೆ. ಅವರ ಆಸ್ತಿ ರಕ್ಷಣೆ ಮಾಡುವ ಕಾರ್ಯದಲ್ಲಿ ನಿರತವಾಗಿದೆ ಎಂದು ಆರೋಪಿಸಿದರು.

    ರೈತರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳ ಬದುಕನ್ನು ಹಸನುಗೊಳಿಸಲು ಮುಂದಾಗುತ್ತಿಲ್ಲ, ಸಂವಿಧಾನ ವಿರೋಧಿ ನಿಲುವು ತಾಳುವ ಮೂಲಕ ಸಂವಿಧಾನ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಅವೈಜ್ಞಾನಿಕ ಆರ್ಥಿಕ ನೀತಿಯಿಂದ ರೈತರ ಆದಾಯ ದ್ವಿಗುಣಗೊಳ್ಳುತ್ತಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚತೈಲ ಬೆಲೆ ಇಳಿಕೆಯಾಗಿದ್ದರೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಳಗೊಳಿಸಿದೆ ಎಂದು ವಿವರಿಸಿದರು.

    ಅಡುಗೆ ಅನಿಲ ಬೆಲೆ ೪೦೦ ರೂ.ಗಳಿಂದ ೧ ಸಾವಿರ ಗಡಿ ತಲುಪದೆ. ಯಾವ ನೈತಿಕತೆ ಆಧಾರದ ಮೇಲೆ ರಾಜ್ಯದಲ್ಲಿ ಬಿಜೆಪಿ ಮುಖಂಡರು ಬೆಲೆಏರಿಕೆ ವಿರೋಧಿಸಿ ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆಂದು ಪ್ರಶ್ನಿಸಿ, ರಾಜ್ಯದಲ್ಲಿ ಯಾತ್ರೆ ಕೈಗೊಳ್ಳುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಬಿಜೆಪಿ ಮುಖಂಡರು ಮಾಡುತ್ತಿದ್ದಾರೆಂದು ದೂರಿದರು.

    ಬಡವರ ಸಮಸ್ಯೆಗಳಿಗೆ ಬಿಜೆಪಿ ಸ್ಪಂದಿಸುತ್ತಿಲ್ಲ, ಪಂಚ ಗ್ಯಾರಂಟಿಗಳನ್ನು ಸಹಿಸಿಕೊಳ್ಳಲಾಗದೆ ಬಿಟ್ಟಿಭಾಗ್ಯಗಳೆಂದು ಹಿಯಾಳಿಸುತ್ತಿದ್ದಾರೆ. ಕೇಂದ್ರ ಸರ್ಕಾರ, ಇಂಧನ, ಅಡುಗೆ ಅನಿಲ, ಅಡುಗೆ ಎಣ್ಣೆಯ ದರವನ್ನು ಹೆಚ್ಚಳಗೊಳಿಸಿದ್ದರೂ ಇದರ ಬಗ್ಗೆ ರಾಜ್ಯ ಬಿಜೆಪಿ ಮುಖಂಡರು ತುಟಿ ಬಿಚ್ಚುತ್ತಿಲ್ಲವೆಂದು ಟೀಕಿಸಿದರು.
    ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಪ್ರತಿ ಮನೆಗೆ ತಲುಪಿಸುವ ಕೆಲಸಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಮುಂದಾಗಬೇಕೆಂದು ಕರೆ ನೀಡಿದ ಅವರು, ಅಭಿವೃದ್ಧಿ ವಿಷಯದಲ್ಲಿ ಬಹಿರಂಗ ಚರ್ಚೆಗೆ ಬಿಜೆಪಿ ಮುಖಂಡರಿಗೆ ಪಂಥಾಹ್ವಾನ ನೀಡಿದರು.

    ಕೆಪಿಸಿಸಿ ವಕ್ತಾರ ಹೆಚ್.ಹೆಚ್. ದೇವರಾಜ್ ಮಾತನಾಡಿ, ಹಲವಾರು ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್ ಪಕ್ಷಕ್ಕೆ ಆಡಳಿತ ಅನುಭವ ಇದೆ. ಡಾ. ಮನಮೋಹನ್‌ಸಿಂಗ್ ಪ್ರಧಾನಿಯಾಗಿದ್ದಾಗ ವಿವಿಧ ಸವಲತ್ತುಗಳನ್ನು ನೀಡಿರುವ ಬಗ್ಗೆ ಬಿಜೆಪಿ ಮುಖಂಡರು ಆತ್ಮಾವಲೋಕನ ಮಾಡಿಕೊಳ್ಳುವುದು ಒಳ್ಳೆಯದು ಎಂದರು.

    ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಲು ಬಿಜೆಪಿ ಮುಖಂಡರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ ಅವರು, ಪಂಚಗ್ಯಾರಂಟಿಗಳ ಸವಲತ್ತುಗಳನ್ನು ಬಿಜೆಪಿ ಮತ್ತು ಬಜರಂಗದಳ ಮುಖಂಡರ ಕುಟುಂಬಗಳು ಪಡೆಯುತ್ತಿಲ್ಲವೇ ಎಂದು ಪ್ರಶ್ನಿಸಿದರು. ದೇಶಕ್ಕೆ ಮಾದರಿ ಆಡಳಿತ ನೀಡುತ್ತಿರುವ ರಾಜ್ಯ ಸರ್ಕಾರದ ಗ್ಯಾರಂಟಿಗಳನ್ನು ಬಿಜೆಪಿ ಮುಖಂಡರು ನಕಲು ಮಾಡುವ ಮೂಲಕ ವಿವಿಧ ರಾಜ್ಯಗಳ ಚುನಾವಣೆಯಲ್ಲಿ ಗ್ಯಾರಂಟಿಗಳನ್ನು ಘೋಷಿಸಿ ಅಧಿಕಾರ ಹಿಡಿದಿದ್ದಾರೆಂದರು.

    ಎಐಸಿಸಿ ಕಾರ್ಯದರ್ಶಿ ಬಿ.ಎಂ. ಸಂದೀಪ್ ಮಾತನಾಡಿ, ಕೇಂದ್ರ ಸರ್ಕಾರವೇ ಅಡುಗೆ ಅನಿಲ ಮತ್ತು ಇಂಧನ ಬೆಲೆಗಳನ್ನು ಹೆಚ್ಚಿಸಿದ್ದು, ರಾಜ್ಯದಲ್ಲಿ ಬೆಲೆ ಏರಿಕೆ ವಿರೋಧಿಸಿ ಜನಾಕ್ರೋಶಯಾತ್ರೆ ಹಮ್ಮಿಕೊಂಡಿರುವುದರಲ್ಲಿ ಅರ್ಥವಿಲ್ಲ. ಕೇಂದ್ರ ಸರ್ಕಾರ ನುಡಿದಂತೆ ನಡೆಯುತ್ತಿಲ್ಲ, ಹಾಗಾಗಿ ಲೋಕಸಭೆ ಚುನಾವಣೆಯಲ್ಲಿ ಬಹುಮತ ಬಾರದೆ ಪ್ರಾದೇಶಿಕ ಪಕ್ಷಗಳ ಬೆಂಬಲದಿಂದ ದೇಶದಲ್ಲಿ ಆಡಳಿತ ನಡೆಸುತ್ತಿದೆ ಎಂದು ತಿಳಿಸಿದರು.

    ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಿ.ಎಲ್.ವಿಜಯಕುಮಾರ್, ಮಾಜಿ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ. ಮಂಜೇಗೌಡ, ಮುಖಂಡರಾದ ಹಿರೇಮಗಳೂರು ರಾಮಚಂದ್ರ, ಮಲ್ಲೇಶ್, ಜಯರಾಜ್‌ನಾಯ್ಡು, ರಮೇಶ್, ಮಹ್ಮದ್ ಅಕ್ಬರ್, ಮಲ್ಲೇಶ್, ಲೋಕೇಶ್, ಪ್ರವೀಣ್, ತನೋಜ್‌ಕುಮಾರ್ ನಾಯ್ಡು, ಲಕ್ಷ್ಮಣ್ ಭಾಗವಹಿಸಿದ್ದರು.

    Congress protests against central government’s action to increase fuel and gas prices

  • ದೇಶದಲ್ಲೇ ಕರ್ನಾಟಕ ನಂ.1 ಭ್ರಷ್ಟ ಸರ್ಕಾರ

    ದೇಶದಲ್ಲೇ ಕರ್ನಾಟಕ ನಂ.1 ಭ್ರಷ್ಟ ಸರ್ಕಾರ

    ಚಿಕ್ಕಮಗಳೂರು: ಕರ್ನಾಟಕವನ್ನು ದೇಶದಲ್ಲೇ ನಂಬರ್ ಓನ್ ಭ್ರಷ್ಟ ಸರ್ಕಾರವನ್ನಾಗಿ ಮಾಡಿರುವ ಕೀರ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

    ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘ ಮಾಡಿರುವ ಕಮಿಷನ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು. ಸಿಎಂ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಅವರೇ ರಾಜ್ಯ ಭ್ರಷ್ಟಾಚಾರದಲ್ಲಿ ನಂ.೧ ಎಂದು ಸರ್ಟಿಫಿಕೇಟ್ ನೀಡಿದ್ದಾರೆ ಎಂದು ಹೇಳಿದರು.

    ಅಧಿಕಾರಕ್ಕಾಗಿ ೪೦ ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಹಿಂದೆ ಕಾಂಗ್ರೆಸ್ಸಿಗರೇ ಬಿಜೆಪಿ ಸರ್ಕಾರದ ಮೇಲೆ ಅಪಪ್ರಚಾರ ನಡೆಸಿದ್ದರು. ಆದರೆ ಈಗ ಇಡೀ ದೇಶದಲ್ಲಿ ೮೦ ಪರ್ಸೆಂಟ್ ಭ್ರಷ್ಟಾಚಾರದ ಸರ್ಕಾರ ಇದ್ದರೆ ಅದು ಕರ್ನಾಟಕ ಸರ್ಕಾರ ಮಾತ್ರ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

    ಜಾತಿ ಗಣತಿ ಕುರಿತು ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ಜಾತಿ ಗಣತಿಯನ್ನು ಸಿಎಂ ಸಿದ್ದರಾಮಯ್ಯ ಅವರು ಗೊಂಬೆ ಆಟದಂತೆ ಮಾಡಿಕೊಂಡಿದ್ದಾರೆ. ಕುರ್ಚಿ ಅಲುಗಾಡಿದಾಗ, ಸರ್ಕಾರಕ್ಕೆ ಗಂಡಾAತರ ಬಂದಾಗ ಜಾತಿ ಗಣತಿ ಬೆದರು ಗೊಂಬೆಯಾಗುತ್ತದೆ. ದೇಶದಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಭ್ರಷ್ಟ ಸರ್ಕಾರ ಎಂದು ಪ್ರಚಾರವಾಗಿದೆ. ವಾಲ್ಮೀಕಿ, ಮೂಡಾ ಹಗರಣ ಸೇರಿ ಕುರ್ಚಿ ಅಲುಗಾಡಿದಾಗ ಜನಗಣತಿ ವಿಚಾರ ಮುನ್ನೆಲೆಗೆ ಬರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    Karnataka is the No. 1 corrupt government in the country.

  • ಬೆಲೆ ಏರಿಕೆಯಿಂದ ಸಾರ್ವಜನಿಕರ ನೆಮ್ಮದಿ ಜೀವನಕ್ಕೆ ಪೆಟ್ಟು

    ಬೆಲೆ ಏರಿಕೆಯಿಂದ ಸಾರ್ವಜನಿಕರ ನೆಮ್ಮದಿ ಜೀವನಕ್ಕೆ ಪೆಟ್ಟು

    ಚಿಕ್ಕಮಗಳೂರು: ಅಹಿಂದಾ ಹೆಸರಿನಲ್ಲಿ ಅಧಿಕಾರ ಪಡೆದ ಸಿದ್ದರಾಮಯ್ಯ ನೇತೃತ್ವದ ರಾಜ್ಯಸರ್ಕಾರ ಮುಸ್ಲೀಮರ ಮತಬ್ಯಾಂಕ್‌ಗಾಗಿ ಸಂವಿಧಾನ ವಿರೋಧಿ ನೀತಿ ಅನುಸರಿಸಿ ನಿರಂತರವಾಗಿ ಹಿಂದೂಗಳನ್ನು ಶೋಷಿಸುತ್ತಿದೆ. ಪರಿಶಿಷ್ಟರಿಗೆ ಮೀಸಲಿಟ್ಟ ಕೋಟಿಗಟ್ಟಲೇ ಹಣವನ್ನು ಎಗ್ಗಿಲ್ಲದೇ ಗ್ಯಾರಂಟಿಗೆ ಬಳಸಿಕೊಂಡು ಪರಿಶಿಷ್ಟರನ್ನು ಮೂಲೆಗುಂಪು ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.

    ನಗರದ ಬಸವನಹಳ್ಳಿ ಮುಖ್ಯರಸ್ತೆಯ ಶಂಕರ ಮಠದ ಸಮೀಪ ಗುರುವಾರ ನಡೆದ ಜನಾಕ್ರೋಶ ಸಭೆ ಯನ್ನುದ್ದೇಶಿಸಿ ಅವರು ಮಾತನಾಡಿ ಹಣದ ಕೊರತೆಯಿಂದ ರಾಜ್ಯಸರ್ಕಾರ ದಿನೇ ದಿನೇ ಗ್ಯಾರಂಟಿ ಯೋ ಜನೆ ಪೂರೈಸಲು ದಿನಬಳಕೆ ವಸ್ತುಗಳು ಏರಿಸಿ ಸಾರ್ವಜನಿಕರ ನೆಮ್ಮದಿ ಜೀವನಕ್ಕೆ ಪೆಟ್ಟು ನೀಡುತ್ತಿದೆ ಎಂದು ಆರೋಪಿಸಿದರು.

    ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ ರಾಜ್ಯಸರ್ಕಾರ ಮೈಸೂರು ಮಹಾರಾಜರ ಆಳ್ವಿಕೆಯ ಮಾದರಿಯಂತೆ ಹೇಳುತ್ತಿದ್ದಾರೆ. ಮೈಸೂರು ಮಹಾರಾಜರು ಕನ್ನಾಂಬಾಡಿ ಅಣೆಕಟ್ಟು, ಮೈಸೂರು ವಿವಿ, ಉ ಕ್ಕುಕಾರ್ಖಾನೆ, ಕಾಫಿ ಕ್ಯೂರಿಂಗ್ ಸೇರಿದಂತೆ ಜನೋಪಯೋಗಿ ಕಾರ್ಯ ಮಾಡಿದ್ದಾರೆ.

    ಆದರೆ ಸಿದ್ದರಾ ಮಯ್ಯ ಸರ್ಕಾರ ಬೆಲೆಏರಿಕೆ, ಹನಿಟ್ರಾಪ್, ಶೇ.೬೦ರಷ್ಟು ಕಮೀಷನ್, ಪ್ರೇನ್‌ಡ್ರೈವ್‌ನಂಥ ಒಂದಿಲ್ಲೊಂದು ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.

    ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಹಲಾಲ್ ಕಟ್ ಮತ್ತು ಹಲಾಲ್‌ಕೋರರ ಸರ್ಕಾರ ಎಂದು ರಾಜ್ಯದ ಜನತೆ ಹೇಳುತ್ತಿದ್ದಾರೆ. ಸರ್ಕಾರಿ ಇಲಾಖೆಗಳಲ್ಲಿ ಲಂಚದ ಹಾವಳಿ, ಶೈಕ್ಷಣಿಕ ಸಾಲಿನ ಬಜೆಟ್‌ನಲ್ಲಿ ೧.೧೬ ಲಕ್ಷ ಕೋಟಿ ಸಾಲವೆಸಗಿದ ಕುಖ್ಯಾತಿ ಸರ್ಕಾರವಿದು.
    ಹಸಿ-ಒಣ ಕಸಕ್ಕೂ ತೆರಿಗೆ ವಿಧಿಸುವ ಈ ಸರ್ಕಾ ರ ಮುಂದೆ ಗಾಳಿಗೂ ತೆರಿಗೆ ವಿಧಿಸಿ ಲಾಭ ಮಾಡಿಕೊಳ್ಳುತ್ತದೆ ಎಂದು ಹೇಳಿದರು.

    ದೇಶವನ್ನು ಒಡೆಯುವ ಸಮಾಜಕ್ಕೆ ಮೀಸಲಾತಿ ನೀಡುವ ಸೊಕ್ಕು ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಬಂ ದಿದೆ. ಮುಂದೆ ಜಿಲ್ಲೆಯ ರತ್ನಗಿರಿ ಬೋರೆ, ನೆಲ್ಲೂರು ಮಠ, ದತ್ತಪೀಠವನ್ನು ದರ್ಗಾವನ್ನಾಗಿಸಲು ಪ್ರಯತ್ನಿ ಸುತ್ತಿದೆ. ಆದರೆ ಹಿಂದೂಪರ ಸಂಘಟನೆಗಳ ಹೋರಾಟದಿಂದ ಯಾವುದು ಫಲಪ್ರಧವಾಗಲ್ಲ. ಹಿಂದೂಗಳ ಆಸ್ತಿ ಹಿಂದೂಗಳಾಗಿ ಉಳಿಯಲಿದೆ ಎಂದು ತಿಳಿಸಿದರು.

    ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ ವಂಚನೆ, ಮೋಸ, ಸುಳ್ಳೇಳಿ ಅಧಿಕಾರ ಗಿಟ್ಟಿಸಿಕೊಂಡು ಸಿದ್ದರಾಮಯ್ಯರ ಅಸಲಿ ಸತ್ಯ ಬಯಲಾಗುತ್ತಿದೆ. ಬಿಜೆಪಿ ವಿರುದ್ಧ ಶೇ.೪೦ ಕಮೀಷನ್ ಎಂಬ ಆರೋಪ ಮಾಡಿದ್ದ ಕಾಂಗ್ರೆಸ್‌ಗೆ ಖುದ್ದು ಲೋಕಾಯುಕ್ತ ಹಾಗೂ ನಾಗಮೋಹನ್‌ದಾಸ್ ಈ ಪ್ರಕರಣ ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದ್ದಾರೆ.

    ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಪರಿಶಿಷ್ಟ ಹಣಲೂಟಿವೆಸಗಿ ದ್ರೋಹವೆಸಗಿತ್ತು. ಇದೀಗ ಮುಸ್ಲೀಮರಿಗೆ ವಕ್ಫ್ ಹೆಸರಿನಲ್ಲಿ ಮಂಕುಬೂದಿ ಎರಚುತ್ತಿದೆ. ಲೋಕಸಭೆ ಅಧಿವೇಶನದಲ್ಲಿ ವಕ್ಫ್ ಮಸೂದೆ ವಿರುದ್ಧವಾಗಿ ರಾಹುಲ್ ಗಾಂಧಿ, ಸೋನಿಯಾ ಧ್ವನಿಗೂಡಿಸಲಿಲ್ಲ. ಅಲ್ಲದೇ ಖರ್ಗೆ ಸಂವಿಧಾನ ಅಪಚಾರವೆಸಗಿದರೆ ರಕ್ತ ಪಾತವಾಲಿದೆ ಎಂದಿದ್ದರು. ಆದರೀಗ ರಾಹುಲ್ ಸಂವಿಧಾನ ಅಂಬೇಡ್ಕರ್ ರಚನೆಯಲ್ಲ ಎಂದು ಪ್ರಶ್ನಿಸಿದರು.

    ಈ ಸಂದರ್ಭದಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಧನಂಜಯ್ ಸರ್ಜೆ, ಮಾಜಿ ಶಾಸಕರಾದ ಡಿ.ಎನ್.ಜೀವರಾಜ್, ಡಿ.ಎಸ್. ಸುರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ, ನಗರಾಧ್ಯಕ್ಷ ಕೆಂಪನಹಳ್ಳಿ ಪುಷ್ಪರಾಜ್, ನಗರಸಭಾ ಅಧ್ಯಕ್ಷೆ ಸುಜಾತ ಶಿವಕುಮಾರ್, ಮುಖಂಡರುಗಳಾದ ಪುಣ್ಯಪಾಲ್, ರವೀಂದ್ರ ಬೆಳವಾಡಿ, ಕುರುವಂಗಿ ವೆಂಕಟೇಶ್, ಹಿರೇಮಗಳೂರು ಪುಟ್ಟಸ್ವಾಮಿ, ಕೋಟೆ ರಂಗನಾಥ್, ಸಿ.ಹೆಚ್.ಲೋಕೇಶ್, ಹೆಚ್.ಕೆ.ಕೇಶವ ಮೂರ್ತಿ ಮತ್ತಿತರರು ಹಾಜರಿದ್ದರು. ಇದೇ ವೇಳೆ ಶಂಕರಮಠದಿಂದ ಕಾಲ್ನಡಿಗೆಯಲ್ಲಿ ಕಾರ್ಯಕರ್ತರು ಯಾತ್ರೆನಡೆಸಿದರು.

    Price hikes are hurting the public’s peace and quiet.

  • ರಾಜ್ಯದಲ್ಲಿ ಅತಿ ಎತ್ತರ ಶಿಖರ ಮುಳ್ಳಯ್ಯನಗಿರಿ

    ರಾಜ್ಯದಲ್ಲಿ ಅತಿ ಎತ್ತರ ಶಿಖರ ಮುಳ್ಳಯ್ಯನಗಿರಿ

    “ಕರ್ನಾಟಕದಲ್ಲಿ ನಿಸರ್ಗ ಪ್ರಯೋಗ ತಾಣವು ಎಂಬಂತಿದೆ ಚಿಕ್ಕಮಗಳೂರು ಜಿಲ್ಲೆಯ ಪ್ರಾಕೃತಿಕ ಸೊಬಗು ಜಿಲ್ಲೆಯಲ್ಲಿ ಗಿರಿಕಂದರಗಳು ನದಿ ಜಲಗಳು ಶ್ರೇಣಿಗಳಿಂದ ಆವೃತವಾಗಿದ್ದು ಮುಗಿಲೆತ್ತರದ ವನರಾಜ ವಿವಿಧ ಪ್ರಾಣಿ ಸಂಕುಲಗಳನ್ನು ತಾಣವಾಗಿದೆ.ಕರ್ನಾಟಕದ ಪ್ರಕೃತಿ ಸಂಪತ್ತಿನ ಕಣಜವಾಗಿದೆ ಚಿಕ್ಕಮಗಳೂರುಣ ಜಿಲ್ಲೆ”

    *ಸೊಬಗಿನ ತವರೂ ಚಿಕ್ಕಮಗಳೂರು ನಿಸರ್ಗದತ್ತವಾದ ನಿತ್ಯ ಹರಿದ್ವರ್ಣ ಕಾಡುಗಳು, ಜೀವ ನಧಿಗಳು, ಘಟ್ಟ ಪ್ರದೇಶಗಳು, ರಾಜ್ಯದಲ್ಲಿ ಅತಿ ಎತ್ತರದ ಪ್ರದೇಶವಾದ*.   *ಮುಳ್ಳನಗಿರಿ ಚಿಕ್ಕಮಗಳೂರು ಚೆಲುವ ಕನ್ನಡಾಂಬೆಯ ಸೊಬಗಿನ ತವರು*

    ಜಿಲ್ಲೆಯ ಪಶ್ಚಿಮ ಭಾಗದಲ್ಲಿ ಅತ್ಯಂತ ಎತ್ತರವಾದ ಪಶ್ಚಿಮ ಘಟ್ಟಗಳು ಹಬ್ಬಿದ್ದು, ದಕ್ಷಿಣ ಕನ್ನಡ ಜಿಲ್ಲೆಗೂ ಚಿಕ್ಕಮಗಳೂರು ಜಿಲ್ಲೆಗೂ ಮಧ್ಯ ಗೋಡೆಯನ್ನು ನಿರ್ಮಿಸಿದಂತಿದೆ. ಅದೇ ರೀತಿ ಜಿಲ್ಲೆಯ ಮಧ್ಯದಲ್ಲಿ ಹಾದು ಹೋಗುವ ಪ್ರಖ್ಯಾತವಾದ ಮುಳ್ಳಯ್ಯನಗಿರಿ ಹಾಗೂ ಚಂದ ದ್ರೋಣ ಪರ್ವತ ಮಲ್ನಾಡು ಮತ್ತು ಮೈದಾನ ಪ್ರದೇಶಗಳನ್ನು ಬೇರ್ಪಡಿಸುವ ಗೋಡೆಯಂತಿದ್ದು ಅನೇಕ ಶಿಖರಗಳನ್ನು ಒಳಗೊಂಡಿದೆ.

        ಕಾಫಿ ನಾಡು ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿಂದ ಹಚ್ಚಹಸಿರಿನ ಕಾಡಿನ ನಡುವೆ ಸರ್ಪ ದಾರಿಯಲ್ಲಿ  24 ಕಿಲೋಮೀಟರ್ ಪ್ರಯಾಣಿಸಿದರೆ ಸಿಗುವುದೇ ರಾಜ್ಯದಲ್ಲಿ ಅತಿ ಎತ್ತರದ ಮುಳ್ಳಯ್ಯನಗಿರಿ ಶಿಖರ ನಿಮ್ಮನ್ನು ಕೈಬೀಸಿ ಕರೆಯುತ್ತದೆ.

        ಜೂನ್ ತಿಂಗಳು ಪ್ರಾರಂಭದಲ್ಲಿ ಮಂಜಿನಿಂದ ಆವರಿಸಿರುತ್ತದೆ, ಕ್ಷಣ ಕ್ಷಣಕ್ಕೂ ಅತಿ ಎತ್ತರದ ಶಿಖರದ ಸ್ವರ್ಗ ತೆರೆದುಕೊಳ್ಳುತ್ತದೆ, ಇದನ್ನು ಪ್ರವಾಸಿಗರು ನೋಡುವುದೇ ಒಂದು ರೋಮಾಂಚನ.
    ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬರುವ ಸಮುದ್ರ ಮಟ್ಟದಿಂದ ಅತಿ ಎತ್ತರದ ಅಂದರೆ 6317 ಎತ್ತರದ ಶಿಖರ ಮುಳ್ಳಯ್ಯನಗಿರಿ ದಟ್ಟ ಹಸಿರಿನ ಹರಿಕೆ ಚುಮುಚುಮು ಚಳಿಯ ಮಂಜು ತೇಲಿ ಬರುವ ತಂಗಾಳಿಯ ಲಾಸ್ಯ.
    ಮನಸಳೆಯುವ ಸುಂದರ ದೃಶ್ಯಾವಳಿಗಳು ಮನಮೋಹಕ ಜಗತ್ತು ಕಣ್ಮುಂದೆ ನಿಲ್ಲುತ್ತದೆ ಹೀಗೆ ಗಿರಿಗೆ ಸಾಗುವ ಅಕ್ಕ ಪಕ್ಕದಲ್ಲಿ ಸಣ್ಣ ,ಸಣ್ಣ ಜರಿಗಳು 900 ವರ್ಷಗಳ ಹಿಂದೆ ಸಿದ್ದರೂ ತಪಸ್ಸು ಮಾಡಿದ ಕುರುಹುಗಳು ಇಲ್ಲಿ ಕಂಡುಬರುತ್ತವೆ.
    ಕಾಫಿ ನಾಡು ಚಿಕ್ಕಮಗಳೂರಿಗೆ ಬಂದ ಪ್ರವಾಸಿಗರು ಈ ಪ್ರದೇಶವನ್ನು ನೋಡದೆ ಹೋಗುವುದಿಲ್ಲ. ಪ್ರಕೃತಿ ನಾಡು ಚಿಕ್ಕಮಗಳೂರು ಇಲ್ಲಿನ ಪ್ರಕೃತಿ ಎಂತವರನ್ನು ಕೈಬೀಸಿ ಕರೆಯುತ್ತದೆ ಅದರಲ್ಲೂ 1317 ಅಡಿ ಎತ್ತರದಲ್ಲಿರವ ಶಿಖರ ಏರಿದರೆ ನಿಮಗೆ ರೋಮಾಂಚನ ಹಾಗೂ ಪ್ರಕೃತಿಯ ಸ್ವರ್ಗವೇ ನಿಮಗೆ ಮುದ ನೀಡುತ್ತದೆ.
    ಚಿಕ್ಕಮಗಳೂರಿನಿಂದ 24 ಕಿಲೋಮೀಟರ್ ಹೋಗುವ ರಸ್ತೆ, ಸರ್ಪ ದಾರಿಯಂತಿದೆ ಎರಡು ವಾಹನಗಳು ಚಲಿಸಲು ಹರ ಸಾಹಸ ಮಾಡಬೇಕಾಗುತ್ತದೆ. ಹೊಸದಾಗಿ ಬರುವ ಪ್ರವಾಸಿಗರು ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಬೇಕಾಗುತ್ತದೆ. ಅಕ್ಕ ಪಕ್ಕದಲ್ಲಿ ಸಾವಿರ ಅಡಿ ಕಂದರಗಳು ಕಂಡುಬರುತ್ತದೆ. ನೀವು ಡ್ರೈವಿಂಗ್ ನಲ್ಲಿ ಸ್ವಲ್ಪ ಯಾಮಾರಿದರು ನಿಮಗೆ ನಮ್ಮ ದೇಹ ಸಿಗುವುದು ಕಷ್ಟ, ಅಷ್ಟು ದುರ್ಗಮ ಗುಡ್ಡಗಾಡು ಪ್ರದೇಶ ಇದಾಗಿದೆ.
    ವಾಹನದಲ್ಲಿ  ಕೆಳಗಿಳಿಯುತ್ತಿದ್ದಂತೆ ಚುಮುಚುಮು ಚಳಿ ಹಾಗೂ ವೇಗವಾಗಿ ಬೀಸುವ ಗಾಳಿ ನಿಮ್ಮನ್ನು ಎತ್ತಿ ಬಿಸಾಕು ಒಂತಿರುತ್ತದೆ. ಬೇಸಿಗೆ ಮುಗಿದಾಗ ಮಳೆಗಾಲದಲ್ಲಿ ಒಂದಿಷ್ಟು ಬೆಚ್ಚನೆಯ ಜರ್ಕಿನ್ ಸ್ವೆಟರ್ ಹಾಗೂ ಟೋಪಿ ಇನ್ನು ಕೆಲವರು ಸೀತ ಆಗದವರು ಕೈಗೆ ಗ್ಲೌಸ್ ಗಳನ್ನು ತಂದರೆ ಇನ್ನು ಒಳ್ಳೆಯದು.
    ಇನ್ನೇನು ಮಳೆಗಾಲ ಆರಂಭವಾಯಿತು ಎನ್ನುವ ಸಂದರ್ಭದಲ್ಲಿ ನಿಮಗೆ ಚಳಿಯನ್ನು ಅನುಭವಿಸಬೇಕು ಎಂದರೆ ನೀವು ಈ ಪ್ರದೇಶಕ್ಕೆ ಭೇಟಿ ಕೊಡಬಹುದು. ಇನ್ನು ಕೆಲವರು ಹಚ್ಚಹಸಿರನ್ನು ನೋಡಬೇಕೆಂದವರು ವರ್ಷದ ಅಕ್ಟೋಬರ್, ನವೆಂಬರ್ ತಿಂಗಳ ಮಧ್ಯದಲ್ಲಿ ಪ್ರವಾಸ ಮಾಡಿದರೆ ಹಟ್ಟಹಸಿರಿನ ಹೊದಿಕೆ ನಿಮ್ಮನ್ನು ಮನಸೆಳೆಯುತ್ತದೆ.

    ಸುಮಾರು ಒಂದು ಸಾವಿರ ಮೆಟ್ಟಲುಗಳನ್ನು ಹತ್ತಬೇಕು.

    ದೇಶ ರಾಜ್ಯದ ಮೂಲೆ ಮೂಲೆಯಿಂದ ಬರುವ ಪ್ರವಾಸಿಗರು ಯಾವಾಗಲೂ ಕೂಡ ತುಂಬಿ ತುಳುಕುತ್ತಿರುತ್ತಾರೆ. ಇದರ ನಡುವೆ ಕೆಳಭಾಗದಲ್ಲಿ ಪಾರ್ಕಿಂಗ್ ಮಾಡಿ 6317 ಅಡಿ ಎತ್ತರಕ್ಕೆ ಹೋಗಬೇಕಾದರೆ ನಿಮಗೆ ಸುಮಾರು ಒಂದು ಸಾವಿರ ಮೆಟ್ಟಿಲುಗಳು ಕಂಡುಬರುತ್ತದೆ. ಮಂಜು ಯಾವಾಗಲೂ ಮುಸುಕಿನಿಂದ ಕೂಡಿರುತ್ತದೆ. ಈ ಸಂದರ್ಭದಲ್ಲಿ ನಿಮಗೆ ಬೆಳಗಿನ ಜಾವ ಮೆಟ್ಟಿಲು ಹತ್ತುವುದು ಕಷ್ಟ ಎನ್ನುವುದಿಲ್ಲ, ಆದರೆ ಕೆಲವರಿಗೆ ಸ್ವಲ್ಪ ತ್ರಾಸು ಕೊಡುತ್ತದೆ. ಬೆಟ್ಟದ ಮೇಲೆ  ಮುಳ್ಳಯ್ಯನ  ಗದ್ದಿಗೆ ಇದ್ದು ಮುಳ್ಳಪ್ಪ ಸ್ವಾಮಿ ಪೂಜೆ ದಿನನಿತ್ಯ ನಡೆಯುತ್ತದೆ.
    ನೀವು ಮುಂಚೆಯೇ ಈ ದೇವಸ್ಥಾನಕ್ಕೆ ಹೇಳಿದರೆ ನಿಮಗೆ ತಂಪಾದ  ರಾಗಿ ಅಂಬಲಿ (ರಬ್ಳಿಗೆ ) ದೊಂದಿಗೆ ಪ್ರಸಾದ ಕೂಡ ಸಿಗುತ್ತದೆ.

    ಶಿಖರದ ಮೇಲೊಂದು ವಿಂಗಮನ ನೋಟ

    ಕರ್ನಾಟಕದ ಅತಿ ಎತ್ತರದ ಶಿಖರವನ್ನು ಏರಿದಾಗ ಪ್ರಕೃತಿ ನಿಮಗೆ ಅವಕಾಶ ಕೊಟ್ಟರೆ ಮಂಜು ಸರಿದು ನಂತರ ಚಿಕ್ಕಮಗಳೂರಿನ ಜಿಲ್ಲಾ ಕೇಂದ್ರವು ಸೇರಿದಂತೆ ಸುಮಾರು 46 km ದೂರದಲ್ಲಿರುವ ಬೇಲೂರು ನಗರ ಕೂಡ ನಿಮಗೆ ನೋಡಲು ಸಿಗುತ್ತದೆ. ಮತ್ತೊಂದು ಇಲ್ಲಿನ ವಿಶೇಷವೆಂದರೆ ಈ ಪ್ರದೇಶ ಚಾರಿಣಿಗರ ಸ್ವರ್ಗ (ಟ್ರಕಿಂಗ್) ಎಂದು ಕರೆಯಲಾಗುತ್ತದೆ.

       ಕಾಫಿ ನಾಡು ಹಲವು ಅದ್ಭುತಗಳನ್ನು ನೀಡುತ್ತದೆ.

        ಹಚ್ಚಹಸಿರಿಂದ ಕಂಗೊಳಿಸುತ್ತಿರುವ ಕಾಫಿ ನಾಡು ಹಲವು ಅದ್ಭುತಗಳನ್ನು ನಿಮಗೆ ನೀಡುತ್ತದೆ. ಗಿರಿಧಾಮಗಳಿಂದ ಕೂಡಿರುವ ಪ್ರಕೃತಿ ಪ್ರಿಯರನ್ನು ವರ್ಷವಿಡಿ ತನ್ನಡೆಗೆ ಆಕರ್ಷಿಸುತ್ತದೆ.
    ಹಸಿರನ್ನು ಒದ್ದು ಮಲಗಿರುವ ಈ ಜಿಲ್ಲೆಯ ಏಕಾಂತತೆಯನ್ನು ಪಡೆಯಲು  ಜೀವನದ ಜಂಜಾಟಕ್ಕೆ ಬ್ರೇಕ್ ಹಾಕಿ ವಿಶ್ರಾಂತಿ ಪಡೆಯಲು ಬರುವ ಸೂಕ್ತ ಸ್ಥಳ ಇದಾಗಿದೆ.

       ಜಿಲ್ಲಾಯಾಧ್ಯಂತ ಬೆಟ್ಟ ಗುಡ್ಡಗಳಿಂದ ಕೂಡಿರುವ ಈ ಪ್ರದೇಶವು ಪ್ರವಾಸಿಗರಿಗೆ ಬೇಸಿಗೆಯಲ್ಲೂ ತಂಪಾದ ವಾತಾವರಣವನ್ನು ನೀಡುತ್ತದೆ. ಅಲ್ಲಲ್ಲಿ ಕಂಡು ಬರುವ ಸಣ್ಣ ಸಣ್ಣ ಜರಿಗಳು ಹಾಗೂ ಮುಗಿಲೆತ್ತರದ ಮರಗಳು, ಇಲ್ಲಿನ ಹಸಿರು ಹುಲ್ಲಿನ ಹೊದಿಕೆ ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಪ್ರವಾಸಿಗರಿಗೆ ಮುದ ನೀಡುತ್ತದೆ.

    *ಅನೇಕ ದಂತ ಕಥೆಗಳಿವೆ* .

    ನೀವು ಈ ಪ್ರಕೃತಿ ಸ್ವರ್ಗದ ನಡುವೆ ಮುಳ್ಳಿಯನ ಗಿರಿಗೆ ಪ್ರವಾಸ ಹೋಗುವಾಗ ಅಕ್ಕ ಪಕ್ಕದಲ್ಲಿ ಬೆಟ್ಟದ ತುದಿಯಿಂದ ಹತ್ತಾರು ಜರಿಗಳು ಹರಿಯುತ್ತಾ ನಿಮ್ಮ ಮನಸ್ಸಿಗೆ ಉಲ್ಲಾಸಕೊಡುತ್ತದೆ. ಇಲ್ಲಿ ಸಾವಿರಾರು ಗಿಡಮೂಲಿಕೆಗಳು ಕಂಡುಬಂದಿದ್ದು ಇದನ್ನು ಚಂದ್ರಗ್ರಹಣ ಪರ್ವತ ಎಂದು ಕೂಡ ಕರೆಯುತ್ತಾರೆ.

    *ಆಂಜನೇಯ ಹೊತ್ತು ತಂದ ಸಂಜೀವಿನಿ ಬೆಟ್ಟ* .

    ಮೊದಲೇ ಹೇಳಿದಂತೆ ಚಿಕ್ಕಮಗಳೂರಿನ ಮೋಡದಿಂದ ಸರ್ಪದ ಹಾದಿಯಲ್ಲಿ ಸಾಗುವ ರಸ್ತೆ ಅಕ್ಕಪಕ್ಕದಲ್ಲಿ ಹರಿಯುವ ಜರಿಗಳು ನಿಮಗೆ ಕಂಡುಬರುತ್ತದೆ ಇದರ ಮತ್ತೊಂದು ವಿಶೇಷ ಎಂದರೆ ರಾಮಾಯಣ ಕಾಲದಲ್ಲಿ ಲಕ್ಷ್ಮಣ ಯುದ್ಧದಲ್ಲಿ ಮೂರ್ಛೆ ಹೋದಾಗ ಆಂಜನೇಯ ಸಂಜೀವಿನಿ ಮೂಲಿಕೆಗಾಗಿ ಪರ್ವತವನ್ನು ಹೊತ್ತುಕೊಂಡು ಹೋಗಿ ಸಂಜೀವಿನಿ ಪಡೆದು ನಂತರ ತಂದು ಈ ಪರ್ವತವನ್ನು ತಲೆಕೆಳಗಾಗಿ ಬಿಸಾಕಿದ ಎಂದು ಹೇಳಲಾಗುತ್ತದೆ. ಹಾಗಾಗಿ ಜಲವೆಲ್ಲ ಮೇಲ್ಭಾಗದಲ್ಲಿದ್ದು ಅಲ್ಲಿಂದ ಕೆಳಭಾಗಕ್ಕೆ ಹರಿಯುತ್ತದೆ ಹಾಗಾಗಿ ಇದನ್ನು ಜಲ ಮೇಲಗಿರಿ ಪರ್ವತ ಹಾಗೂ ಆಂಜನೇಯ ಸಂಜೀವಿನಿ ಪರ್ವತವೆಂದು ಕೂಡ ಕರೆಯುತ್ತಾರೆ.
    *ಇಲ್ಲಿನ ಪವಿತ್ರ ನೀರು ಯಾವುದೇ ಮಿನರಲ್ ವಾಟರಿಗಿಂತ ಕಡಿಮೆ ಇಲ್ಲ* .

    ನೀವು ಈ ಗಿರಿ ಪ್ರದೇಶದ ಪ್ರವಾಸಕ್ಕೆ ಬಂದಾಗ ಇಲ್ಲಿ ಹರಿಯುವ  ಜರಿಗಳ ನೀರನ್ನು ಬೋಗಸಿಯಲ್ಲಿ ಕುಡಿರಿ ಯಾವುದೇ ಕಲ್ಮಶವಿಲ್ಲ. ತಿಳಿತಿಳಿಯಾಗಿ ಹಚ್ಚಹಸಿರಿನಿಂದ ಹರಿದು ಬರುತ್ತಾ ಶುದ್ಧ ನೀರು ನಿಮಗೆ ಸಿಗುತ್ತದೆ. ಇದರ ಮುಂದೆ ಯಾವುದೇ ಮಿನರಲ್ ವಾಟರ್ ಬೇಕಾಗಿಲ್ಲ.

      ಇಷ್ಟೆಲ್ಲಾ ಅದ್ಭುತ ಗಳನ್ನು ಹೊಂದಿರುವ ರಾಜ್ಯದಲ್ಲಿ ಅತಿ ಎತ್ತರವಾದ ಶಿಖರ ಮುಳ್ಳಯ್ಯ ಗಿರಿ ಎಂದು ಹೆಸರು ಬರಲು 900ವರ್ಷಗಳ ಹಿಂದೆ  ಮುಳ್ಳಪ್ಪ ಸ್ವಾಮಿ  ಎಂಬುವರು ತಪಸ್ಸು ಮಾಡಿದ ಜಾಗ ಕೂಡ ಇದಾಗಿದ್ದು. ಹಾಗಾಗಿ  ಈ ಶಿಖರಕ್ಕೆ ಮುಳ್ಳಯ್ಯನಗಿರಿ ಎಂದು ಕರೆಯಲಾಗುತ್ತದೆ.
    ಈ ಪ್ರಕೃತಿ ಸೌಂದರ್ಯ ನಡುವೆ ಇರುವ ರಾಜ್ಯದಲ್ಲಿ ಅತಿ ಎತ್ತರದ ಶಿಖರ ಎಂದು  ಖ್ಯಾತಿಗಳಿಸಿರುವ ಮುಳ್ಳಯ್ಯನಗಿರಿ ಸ್ನೇಹಿತರು, ಸಂಸಾರಸ್ಥರೊಂದಿಗೆ ಒಮ್ಮೆ ಭೇಟಿಕೊಟ್ಟು ನಿಮ್ಮ ಮನಸ್ಸನ್ನು ಹಗುರ ಮಾಡಿಕೊಳ್ಳಿ ಹಾಗೂ ಇಲ್ಲಿನ ಸ್ವಚ್ಛ ಗಾಳಿ, ಸ್ವಚ್ಛ ಪರಿಸರ ,ಪ್ರಕೃತಿ ಸೌಂದರ್ಯ  ಪಡೆದು ಎಂಜಾಯ್ ಮಾಡಿ.

  • ಸ್ವ-ಉದ್ಯೋಗದ ಮೂಲಕ ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾಗಬೇಕು

    ಸ್ವ-ಉದ್ಯೋಗದ ಮೂಲಕ ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾಗಬೇಕು

    ಚಿಕ್ಕಮಗಳೂರು:  ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳನ್ನು ಹೆಚ್ಚು ಸ್ಥಾಪಿಸುವ ಮೂಲಕ ಮಹಿಳೆಯರು ಸ್ವ ಉದ್ಯೋಗದಲ್ಲಿ ತೊಡಗಿಸಿಕೊಂಡು ಆರ್ಥಿಕ ಸ್ವಾವಲಂಬಿಗಳನ್ನಾಗಿಸಲು ಗುರಿ ಹೊಂದಲಾಗಿದೆ ಎಂದು ನಗರಸಭಾಧ್ಯಕ್ಷೆ ಸುಜಾತ ಶಿವಕುಮಾರ್ ತಿಳಿಸಿದರು.

    ಅವರು ಇಂದು ನಗರಸಭೆ ಆವರಣದಲ್ಲಿ ಡೇ-ನಲ್ಮ್ ಯೋಜನೆಯಡಿ ರಚನೆಯಾಗಿರುವ ಪ್ರದೇಶ ಮಟ್ಟದ ಒಕ್ಕೂಟಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಸರ್ಕಾರದ ಸೌಲತ್ತುಗಳನ್ನು ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಫಲಾನುಭವಿಗಳಿಗೆ ತಲುಪಬೇಕೆಂಬ ಉದ್ದೇಶದಿಂದ ಇಂದು ಕಾರ್ಯಾಗಾರವನ್ನು ಆಯೋಜಿಸಿದ್ದು, ಈ ನಿಟ್ಟಿನಲ್ಲಿ ಮಹಿಳೆಯರು ಸಾಮಾಜಿಕ, ರಾಜಕೀಯವಾಗಿ ಆರ್ಥಿಕ ಸ್ವಾವಲಂಬಿಗಳಾಗಬೇಕೆಂಬ ಉದ್ದೇಶದೊಂದಿಗೆ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬಂತೆ ಮಹಿಳೆ ಸ್ವಾವಲಂಬಿಯಾದಾಗ ಕುಟುಂಬ ನಿರ್ವಹಣೆ ಸುಗಮವಾಗಲಿದೆ ಎಂದು ಹೇಳಿದರು.

    ಸರ್ಕಾರ ಮಹಿಳೆರಿಗಾಗಿ ಬ್ಯಾಂಕ್‌ಗಳ ಮೂಲಕ ಸಾಲಸೌಲಭ್ಯವನ್ನು ಕಲ್ಪಿಸಿದ್ದು, ಮಹಿಳೆಯರು ಸ್ವ-ಉದ್ಯೋಗ ಸ್ಥಾಪಿಸಿ ಗುಡಿ ಕೈಗಾರಿಕೆ, ಗೃಹೋಪಯೋಗಿ ವಸ್ತುಗಳ ತಯಾರಿಕೆ, ಆಟಿಕೆಗಳ ತಯಾರಿಕೆ ಮುಂತಾದವುಗಳ ಮೂಲಕ ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಿ ಎಂದು ಸಲಹೆ ನೀಡಿದರು.

    ನಗರಸಭೆ ಪೌರಾಯುಕ್ತ ಬಿ.ಸಿ. ಬಸವರಾಜ್ ಮಾತನಾಡಿ, ಕ್ರಿಯಾಶೀಲರಾದ ಮಹಿಳೆಯರು ಮೊದಲು ಸ್ವ-ಸಹಾಯ ಸಂಘಗಳನ್ನು ಸ್ಥಾಪಿಸಿ ಸರ್ಕಾರದಿಂದ ದೊರೆಯುವ ಸಹಾಯಧನದ ಸಾಲಸೌಲಭ್ಯ ಪಡೆದುಕೊಂಡು ಆರ್ಥಿಕ ಸದೃಢರಾಗಬೇಕೆಂದು ಕರೆನೀಡಿದರು.

    ಮಹಿಳೆಯರ ಸಬಲೀಕರಣಕ್ಕಾಗಿ ಕೇಂದ್ರ ಮತ್ತು ರಾಜ್ಯಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು ಸ್ವ-ಉದ್ಯೋಗದಡಿ ಕುಟುಂಬವನ್ನು ನಿರ್ವಹಣೆ ಮಾಡಲು ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಕಾರಿಯಾಗಲಿದೆ ಎಂದರು.

    ನಗರಸಭೆ ವತಿಯಿಂದ ಮನೆ ಮನೆ ಕಸ ಸಂಗ್ರಹದ ಬಿಲ್ ಕಲೆಕ್ಟ್ ಮಾಡುವ ಜವಾಬ್ದಾರಿಯನ್ನು ಸ್ತ್ರೀಶಕ್ತಿ ಗುಂಪುಗಳ ಪದಾಧಿಕಾರಿಗಳಿಗೆ ನೀಡಲಾಗಿದ್ದು, ಜೊತೆಗೆ ನೀರಿನ ಕರ, ಆಸ್ತಿ ತೆರಿಗೆ, ಮನೆ ಕಂದಾಯ, ನಗರಸಭೆ ಮಳಿಗೆ ಬಾಡಿಗೆ ವಸೂಲಿ ಸೇರಿದಂತೆ ಇನ್ನೂ ಮುಂತಾದ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಹೇಳಿದರು.

    ನಗರಸಭೆ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಲ್ಲಿ ಮನೆ ಕಸವನ್ನು ಎಲ್ಲೆಂದರಲ್ಲಿ ಚೆಲ್ಲದಂತೆ ನೋಡಿಕೊಳ್ಳಬೇಕು, ಸ್ವಚ್ಚತೆಯನ್ನು ಕಾಪಾಡುವ ಮೂಲಕ ಆದ್ಯತೆ ಮೇಲೆ ಕೆಲಸ ಮಾಡುವಂತೆ ಸೂಚನೆ ನೀಡಿದರು. ಕೌಶಲ್ಯಾಭಿವೃದ್ಧಿ ಅಧಿಕಾರಿ ಶಿವಲಿಂಗಯ್ಯ, ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

    Women should become financially independent through self-employment.

  • ಕಾರ್ಯಾಂಗ-ಶಾಸಕಾಂಗ ಒಗ್ಗಟ್ಟಾಗಿ ಕೆಲಸ ಮಾಡಿದಾಗ ಸರ್ಕಾರದ ಯೋಜನೆ ಜನರ ಮನೆಬಾಗಿಲಿಗೆ

    ಕಾರ್ಯಾಂಗ-ಶಾಸಕಾಂಗ ಒಗ್ಗಟ್ಟಾಗಿ ಕೆಲಸ ಮಾಡಿದಾಗ ಸರ್ಕಾರದ ಯೋಜನೆ ಜನರ ಮನೆಬಾಗಿಲಿಗೆ

    ಚಿಕ್ಕಮಗಳೂರು: : ಕಾರ್ಯಾಂಗ, ಶಾಸಕಾಂಗ ಒಗ್ಗಟ್ಟಾಗಿ ಸಮರ್ಪಕ ಕೆಲಸ ಮಾಡಿದಾಗ ಮಾತ್ರ ಸರ್ಕಾರ ಜಾರಿಗೆ ತರುವ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಸಾಧ್ಯ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಅಭಿಪ್ರಾಯಿಸಿದರು.

    ಅವರು ಚಿಕ್ಕದೇವನೂರು, ನಾಗರಾಳು, ದೇವನೂರು ಗ್ರಾಮ ಪಂಚಾಯಿತಿಗಳ ಸಹಭಾಗಿತ್ವದಲ್ಲಿ ಚಿಕ್ಕದೇವನೂರಿನಲ್ಲಿ ಏರ್ಪಡಿಸಲಾಗಿದ್ದ ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ಮಾತನಾಡಿ  ಜನಸಂಪರ್ಕ ಸಭೆಗಳ ಉಪಯೋಗವನ್ನು ಕ್ಷೇತ್ರದ ಜನರು ಪಡೆದುಕೊಳ್ಳಲು ತಮ್ಮ ಸಮಸ್ಯೆಗಳಿಗಾಗಿ ವಿವಿಧ ಇಲಾಖೆಗಳಿಗೆ ಅಲೆದಾಡುವುದು ತಪ್ಪುತ್ತದೆ, ಈ ನಿಟ್ಟಿನಲ್ಲಿ ಎಲ್ಲಾ ಇಲಾಖಾಧಿಕಾರಿಗಳನ್ನು ತಮ್ಮ ಗ್ರಾಮಕ್ಕೆ ಕರೆತಂದು ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದರು.

    ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜನಸಂಪರ್ಕ ಸಭೆಗಳನ್ನು ನಡೆಸುವ ಮೂಲಕ ಆಡಳಿತ ವ್ಯವಸ್ಥೆಯನ್ನು ಜನರಿರುವ ಕಡೆಗೆ ತೆಗೆದುಕೊಂಡು ಹೋಗಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಕಲ್ಪ ಮಾಡಿದ್ದಾರೆಂದು ಶ್ಲಾಘಿಸಿದರು.

    ಮೊದಲಿಗೆ ರಾಜ್ಯಮಟ್ಟದಲ್ಲಿ ಈ ಜನಸಂಪರ್ಕ ಸಭೆ ನಡೆಸಿ ಈ ಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಭಾಗವಹಿಸಿ ತಾಲ್ಲೂಕು ಮಟ್ಟದ ಜನರ ಸಮಸ್ಯೆಗಳಿಗೆ ಬೆಳಕು ಚೆಲ್ಲುವಂತೆ ಸೂಚನೆ ನೀಡಿದ್ದಾರೆಂದು ಹೇಳಿದರು.

    ನಂತರ ಶಾಸಕರ ನೇತೃತ್ವದಲ್ಲಿ ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಜನಸಂಪರ್ಕ ಸಭೆ ನಡೆಸಬೇಕೆಂಬ ಸರ್ಕಾರದ ಆದೇಶದಂತೆ ಈಗಾಗಲೇ ಹಲವಾರು ಸಭೆಗಳನ್ನು ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ. ಇದರ ಮುಂದುವರೆದ ಭಾಗವಾಗಿ ತಾವು ಹೋಬಳಿ, ಗ್ರಾ.ಪಂ ಮಟ್ಟದಲ್ಲಿ ಜನಸಂಪರ್ಕ ಸಭೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

    ಸರ್ಕಾರದ ಸೌಲಭ್ಯಗಳಾದ ೫ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಫಲಾನುಭವಿಗಳಿಗೆ ತಲುಪದಿದ್ದರೆ ಅಂತಹ ಸಮಸ್ಯೆಗಳನ್ನು ಚುಟುಕಾಗಿ ಅಧಿಕಾರಿಗಳ ಗಮನಕ್ಕೆ ತಂದರೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

    ಸಖರಾಯಪಟ್ಟಣ ಹೋಬಳಿಗೆ ಲೋಕೋಪಯೋಗಿ ಇಲಾಖೆ ವತಿಯಿಂದ ೨೫.೫ ಕೋಟಿ ರೂ ಅನುದಾನ ಮಂಜೂರು ಮಾಡಿದ್ದೇವೆ, ಕ್ಷೇತ್ರದ ಮೂರು ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಮುದಾಯ ಭವನ, ದೇವಾಲಯಗಳಿಗೆ ೪ ಕೋಟಿ ರೂ ಅನುದಾನ ನೀಡಲಾಗಿದೆ ಎಂದು ಹೇಳಿದರು.

    ಚುನಾವಣಾ ಪೂರ್ವದಲ್ಲಿ ಈ ಭಾಗದ ಜನರು, ರೈತರು ಕೆರೆ ತುಂಬಿಸುವ ಯೋಜನೆ ಜಾರಿಮಾಡಬೇಕೆಂದು ಮನವಿ ಸಲ್ಲಿಸಿದ್ದನ್ನು ಮನಗಂಡು ಎತ್ತಿನ ಹೊಳೆ ಯೋಜನೆಯ ಮೂಲಕ ಕೆರೆ ತುಂಬಿಸಿದ್ದು, ಈಗಾಗಲೇ ಬೆಳವಾಡಿ, ದೇವನೂರು ಕೆರೆ ಭರ್ತಿಯಾಗಿದೆ ಎಂದರು.

    ೪೦೦ ಕೋಟಿ ರೂ ವೆಚ್ಚದ ಭದ್ರಾ ಉಪಕಣಿವೆ ಕೆರೆ ತುಂಬಿಸುವ ಯೋಜನೆಗೆ ಸಧ್ಯದಲ್ಲೇ ಕಾಮಗಾರಿ ಆರಂಭವಾಗಲಿದೆ. ದೇವನೂರು ಕೆರೆ ಭರ್ತಿಯಾಗಿರುವುದರಿಂದ ಈ ಮೂರು ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ವೃದ್ಧಿಯಾಗಿ ರೈತರ ಬದುಕು ಹಸನಾಗಿದೆ ಎಂದು ಹೇಳಿದರು.

    ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಖರಾಯಪಟ್ಟಣ ಹೋಬಳಿ ಮಟ್ಟದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಬಂದಂತ ಅರ್ಜಿಗಳನ್ನು ಇಲಾಖೆವಾರು ತಾಲ್ಲೂಕು ಮಟ್ಟದ ಅಧಿಕಾರಿಗಳು ವಿಂಗಡಣೆ ಮಾಡಿ ಶಾಸಕರ ಸೂಚನೆ ಮೇರೆಗೆ ನಿಗಧಿತ ಕಾಲಾವಧಿಯಲ್ಲಿ ಇತ್ಯರ್ಥಪಡಿಸಲಾಗಿದೆ ಎಂದರು.

    ನಾಗರೀಕರು ತಮ್ಮ ಮೂಲಭೂತ ಸಮಸ್ಯೆಗಳ ಬಗ್ಗೆ ಪಂಚಾಯಿತಿ ಹಂತದಲ್ಲಿ ಪರಿಹರಿಸಲು ಪ್ರತೀ ಪಂಚಾಯಿತಿಯಲ್ಲಿ ತಿಂಗಳ ಮೊದಲ ಶನಿವಾರ ‘ಪಂಚಾಯಿತಿ ಕಟ್ಟೆ’ ಎಂಬ ನೂತನ ಕಾರ್ಯಕ್ರಮವನ್ನು ಆಯೋಜಿಸಿದ್ದು ಈ ಮೂಲಕ ತಮ್ಮ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಗುರಿ ಹೊಂದಲಾಗಿದೆ ಎಂದು ಹೇಳಿದರು.

    ಸಭೆಯಲ್ಲಿ ನಾಗರಾಳು ಪಂಚಾಯಿತಿ ಅಧ್ಯಕ್ಷ ಚಂದ್ರಪ್ಪ, ಉಪಾಧ್ಯಕ್ಷ ಅಶೋಕ್, ದೇವನೂರು ಗ್ರಾ.ಪಂ ಅಧ್ಯಕ್ಷೆ ದೀಪಾ ದಕ್ಷಿಣಮೂರ್ತಿ, ಉಪಾಧ್ಯಕ್ಷ ರವಿಕುಮಾರ್, ಚಿಕ್ಕದೇವನೂರು ಗ್ರಾ.ಪಂ ಅಧ್ಯಕ್ಷೆ ವಸಂತ, ಉಪಾಧ್ಯಕ್ಷೆ ರಂಗಮ್ಮ, ಸದಸ್ಯರುಗಳಾದ ಚಂದ್ರಶೇಖರ್, ಕಿರಣ್, ಲೋಹಿತ್, ಸುಲೋಚನ, ಶೋಭ, ಸರಸ್ವತಿ, ಚೇತನ್, ಬಸವರಾಜ್, ಶಶಿಧರ್, ಆನಂದ್, ಷಣ್ಮುಖಪ್ಪ, ಮಂಜುನಾಥ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮೋಹನ್ ನಾಯಕ್, ಕಡೂರು ತಹಶೀಲ್ದಾರ್ ಪೂರ್ಣಿಮಾ ಉಪಸ್ಥಿತರಿದ್ದರು.

    Public relations meeting organized in Chikkadevanagar