Category: ಚಿಕ್ಕಮಗಳೂರು

  • ನಿಡಘಟ್ಟ ಗ್ರಾಮದಲ್ಲಿ ಜನಸಂಪರ್ಕ ಸಭೆ

    ನಿಡಘಟ್ಟ ಗ್ರಾಮದಲ್ಲಿ ಜನಸಂಪರ್ಕ ಸಭೆ

    ಚಿಕ್ಕಮಗಳೂರು: ಜನಸಾಮಾನ್ಯರಿಗೆ ಸರ್ಕಾರದ ಜನಪರ ಯೋಜನೆಗಳ ಸೌಲಭ್ಯಗಳು ಸುಲಭವಾಗಿ ಸಿಗಬೇಕೆಂಬ ಉದ್ದೇಶದಿಂದ ಜನಸಂಪರ್ಕ ಸಭೆಗಳನ್ನು ಆಯೋಜಿಸಲಾಗುತ್ತಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.

    ಅವರು ಸೋಮವಾರ ನಿಡಘಟ್ಟ ಗ್ರಾಮದಲ್ಲಿ ಜೋಡಿಹೋಚಿಹಳ್ಳಿ-ನಿಡಘಟ್ಟ ಗ್ರಾ.ಪಂ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆ ಹಾಗೂ ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

    ಜನಸಂಪರ್ಕ ಸಭೆಗಳ ಮೂಲಕ ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಕೆಲಸ ಮಾಡುತ್ತಿದ್ದು, ಇದರ ಸದುಪಯೋಗವನ್ನು ಜನಸಾಮಾನ್ಯರು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

    ತಾಲ್ಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಈ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿದ್ದು, ಗ್ರಾಮಸ್ಥರು ತಮ್ಮ ಸಂಬಂಧಪಟ್ಟ ಸಮಸ್ಯೆಗಳ ಅರ್ಜಿಗಳನ್ನು ಗ್ರಾಮ ಪಂಚಾಯಿತಿ ಪಿಡಿಓಗಳು ಸ್ವೀಕಾರ ಮಾಡಿದ್ದು, ತಾ.ಪಂ, ತಾಲ್ಲೂಕು ಆಡಳಿತ, ಆರೋಗ್ಯ ಇಲಾಖೆ, ಕೆಎಸ್‌ಆರ್‌ಟಿಸಿ, ಮೆಸ್ಕಾಂ ಸೇರಿದಂತೆ ಇನ್ನೂ ಮುಂತಾದ ಇಲಾಖೆಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಅಧಿಕಾರಿಗಳು ಸ್ಥಳದಲ್ಲೇ ಬಗೆಹರಿಸುತ್ತಾರೆಂದು ವಿವರಿಸಿದರು.

    ಕಾನೂನು ತೊಡಕಾಗಿರುವ, ತಾಂತ್ರಿಕ ಸಮಸ್ಯೆಗಳಿರುವ ಅರ್ಜಿಗಳನ್ನು ಹೊರತುಪಡಿಸಿ ಉಳಿದ ಅರ್ಜಿಗಳನ್ನು ಇಲ್ಲೇ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

    ಕಳೆದ ೨೩ ತಿಂಗಳ ಹಿಂದೆ ಅಸ್ತಿತ್ವಕ್ಕೆ ಬಂದ ರಾಜ್ಯಸರ್ಕಾರ ಜನಸಂಪರ್ಕ ಸಭೆಗಳನ್ನು ನಡೆಸುವ ಮೂಲಕ ಜನರ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಹೊರಡಿಸಿದ ಆದೇಶದಂತೆ ಈ ಅಪರೂಪದ ಜನಸಂಪರ್ಕ ಸಭೆ ನಡೆಸಲಾಗುತ್ತಿದೆ ಎಂದು ಹೇಳಿದರು.

    ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜನಸಂಪರ್ಕ ಸಭೆಗಳನ್ನು ಉದ್ಘಾಟಿಸಿದ ಬಳಿಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜನಸಂಪರ್ಕ ಸಭೆಗಳನ್ನು ನಡೆಸಲಾಯಿತು. ನಂತರ ಜಿಲ್ಲೆಯ ಎಲ್ಲಾ ಐದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಸಕರ ನೇತೃತ್ವದಲ್ಲಿ ಹೋಬಳಿ ಮಟ್ಟದಲ್ಲೂ ಜನಸಂಪರ್ಕ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

    ಕಡೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಪ್ರಾಸ್ತಾವಿಕವಾಗಿ ಮಾತನಾಡಿದರು.

    ಈ ಸಂದರ್ಭದಲ್ಲಿ ನಿಡಘಟ್ಟ ಗ್ರಾ.ಪಂ ಅಧ್ಯಕ್ಷ ಶಂಕರ್‌ಮೂರ್ತಿ, ಉಪಾಧ್ಯಕ್ಷ ಗೀತಾ ತಿರುಮಲೇಗೌಡ, ಸದಸ್ಯರುಗಳಾದ ವಿಶ್ವನಾಥ್, ರಾಜಪ್ಪ, ರುದ್ರಮ್ಮ, ಗೀತಾಂಜಲಿ ಸುರೇಶ್, ಸವಿತಾ ಶಿವಪ್ಪ, ಶೈಲಜಾ ತಿಮ್ಮಯ್ಯ, ಸೋಮೇಶ್, ಜೋಡಿಹೋಚಿಹಳ್ಳಿ ಗ್ರಾ.ಪಂ ಅಧ್ಯಕ್ಷ ತ್ರಿಮೂರ್ತಿ ಬಿ.ಟಿ, ಉಪಾಧ್ಯಕ್ಷೆ ಸುಮಿತ್ರ ಬಾಯಿ, ಸದಸ್ಯರುಗಳಾದ ನಾಗೇಶ್ ಹೆಚ್.ಸಿ, ಯಶೋಧ ಟಿ.ಎಂ, ಸಣ್ಣಪ್ಪ, ರೇಖಾ ಹೆಚ್.ಎನ್, ಕುಮಾರಪ್ಪ.ಕೆ. ಪ್ರೇಮ, ಸಂತೋಷ್, ತಾಲ್ಲೂಕು ಗ್ಯಾರಂಟಿ ಸಮಿತಿ ಉಪಾಧ್ಯಕ್ಷೆ ಹೇಮಾವತಿ ಉಪಸ್ಥಿತರಿದ್ದರು. ಮೊದಲಿಗೆ ಗ್ರಾ.ಪಂ ಪಿಡಿಓ ಸುಧಾ ಸ್ವಾಗತಿಸಿದರು.

    Public relations meeting in Nidaghatta village

  • ಜಾತಿಗಣತಿ ಒಕ್ಕಲಿಗ ಸಮಾಜದ ಮರಣ ಶಾಸನ

    ಜಾತಿಗಣತಿ ಒಕ್ಕಲಿಗ ಸಮಾಜದ ಮರಣ ಶಾಸನ

    ಚಿಕ್ಕಮಗಳೂರು: ರಾಜ್ಯ ಸರ್ಕಾರದ ಜಾತಿ ಗಣತಿಯಲ್ಲಿ ಒಂದು ವರ್ಗವನ್ನು ಓಲೈಸುವ ಸಲುವಾಗಿ ಒಕ್ಕಲಿಗ ಸಮಾಜದ ಮರಣ ಶಾಸನ ಬರೆಯಲು ಮುಂದಾಗಿದೆ ಎಂದು ಜಿಲ್ಲಾ ಒಕ್ಕಲಿಗರ ಸಂಘ ಆಕ್ರೋಶ ವ್ಯಕ್ತಪಡಿಸಿದ್ದು, ಈ ಗಣತಿ ವರದಿಯನ್ನು ಸರ್ಕಾರ ತಿರಸ್ಕರಿಸಬೇಕು ಎಂದು ಆಗ್ರಹಿಸಿದೆ.

    ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಟಿ.ರಾಜಶೇಖರ್ ಮಾತನಾಡಿ, ೨೦೧೫ ರಲ್ಲಿ ಸಮೀಕ್ಷೆ ಮಾಡುವಾಗ ಹಿಂದುಳಿದ ವರ್ಗಗಳ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಲಾಗುವುದೆಂದು ತಿಳಿಸಿ, ನಂತರ ಅದನ್ನೇ ಜಾತಿ ಗಣತಿಯೆಂದು ಹೇಳುತ್ತಿರುವುದು ಖಂಡನೀಯ ಎಂದರು.

    ಮುಸ್ಲಿಮರ ಸಂಖ್ಯೆ ಹೆಚ್ಚಿಸಿ ಒಕ್ಕಲಿಗರು, ಲಿಂಗಾಯಿತರು ಸೇರಿದಂತೆ ವಿವಿಧ ಪ್ರಮುಖ ಜಾತಿಗಳ ಜನಸಂಖ್ಯೆಯ ಇಳಿಕೆ ಎಂದು ತೋರಿಸುತ್ತಿದೆ. ಒಕ್ಕಲಿಗ ಜನಾಂಗ ಉಪ ಪಂಗಡಗಳು ಜನಸಂಖ್ಯೆ ರಾಜ್ಯದಲ್ಲಿ ಅಂದಾಜು ಒಟ್ಟು ೧.೨೦ ಕೋಟಿ ಇದ್ದಾರೆ. ಈ ಬಗ್ಗೆ ರಾಜ್ಯ ಒಕ್ಕಲಿಗರ ಸಂಘದಲ್ಲಿ ಮಾಹಿತಿಯಿದೆ. ಆದರೆ ರಾಜ್ಯ ಸರ್ಕಾರ ಕೇವಲ ೬೧ ಲಕ್ಷ ಒಕ್ಕಲಿಗ ಜನ ಸಂಖ್ಯೆಯನ್ನು ತೋರಿಸುತ್ತಿದೆ ಇದನ್ನು ಸಂಘ ವಿರೋಧಿಸುತ್ತದೆ ಎಂದರು.

    ಆಯೋಗ ನೇಮಿಸಿರುವ ವ್ಯಕ್ತಿಗಳು ಇಡೀ ಜಿಲ್ಲೆಯಲ್ಲಿ ಯಾರ ಮನೆಗೂ ಬಂದು ಸಮೀಕ್ಷೆ ಮಾಡಿಲ್ಲ. ಒಕ್ಕಲಿಗರು ಮತ್ತು ಲಿಂಗಾಯತರನ್ನು ಎಲ್ಲಾ ತರಹದ ಸೌಲಭ್ಯಗಳಿಂದ ದೂರ ಇಡುವ ಹುನ್ನಾರ ಇದೆಂದರು.

    ೧೦ ವರ್ಷಗಳ ಹಿಂದೆಯೇ ರಾಜ್ಯದ ಒಟ್ಟು ಜನಸಂಖ್ಯೆ ೬.೩೫ ಕೋಟಿ ಇದ್ದು, ಆಯೋಗದ ವರದಿಯಲ್ಲಿ ೫.೯೮ ಕೋಟಿ ಜನರನ್ನು ಸಮೀಕ್ಷೆಗೆ ಒಳಪಡಿಸಿದ್ದು, ಉಳಿದ ೩೭ ಲಕ್ಷ ಜನಸಂಖ್ಯೆ ಬಗ್ಗೆ ಸ್ಪಷ್ಟತೆಯಿಲ್ಲ. ೧,೩೪,೩೧೯ ಜನರು ತಾವು ಯಾವುದೇ ಜಾತಿಗೆ ಸೇರಿದವರಲ್ಲವೆಂದು ಮತ್ತು ೨,೫೩,೯೫೪ ಜನರು ಜಾತಿಯನ್ನು ಬಹಿರಂಗ ಪಡಿಸಲು ನಿರಾಕರಿಸುತ್ತಾರೆಂದು ವರದಿ ಹೇಳಿದೆ. ಹೀಗಿದ್ದಾಗ ಕರಾರುವಕ್ಕಾಗಿ ವರದಿ ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

    ಮುಸ್ಲಿಮರಲ್ಲಿಯೂ ೧೦೧ ಪಂಗಡಗಳಿವೆ. ಕ್ರಿಶ್ಚಯನ್ನರಲ್ಲೂ ಹಲವು ಪಂಗಡಗಳಿವೆ. ಅವುಗಳನ್ನು ಪ್ರತ್ಯೇಕವಾಗಿ ತೋರಿಸದೇ ಒಕ್ಕಲಿಗರ ಹಾಗೂ ಲಿಂಗಾಯಿತರನ್ನು ಉಪ ಪಂಗಡಗಳಾಗಿ ವಿಂಗಡಿಸಿ ಕಡಿಮೆ ಜನಸಂಖ್ಯೆ ತೋರಿಸುವ ಹುನ್ನಾರ ಮಾಡಲಾಗಿದೆ ಎಂದು ಆರೋಪಿಸಿದರು.

    ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ನಿರ್ದೇಶಕರುಗಳಾದ ಎಂ.ಸಿ.ಪ್ರಕಾಶ್, ಅರುಣಾಕ್ಷಿ ನಾಗರಾಜ್, ಚೇತನ್, ಅಶೋಕ್, ಸತೀಶ್‌ಕುಮಾರ್ ಇದ್ದರು.

    Caste census Vokkaliga society death certificate

  • ಶ್ರೀ ಕರಾಳಮ್ಮ, ಅಂತರಘಟ್ಟಮ್ಮ ಮತ್ತು ಪ್ಲೇಗಿನಮ್ಮ ನವರ ವಾರ್ಷಿಕ ಸಿಡಿ ಉತ್ಸವ

    ಶ್ರೀ ಕರಾಳಮ್ಮ, ಅಂತರಘಟ್ಟಮ್ಮ ಮತ್ತು ಪ್ಲೇಗಿನಮ್ಮ ನವರ ವಾರ್ಷಿಕ ಸಿಡಿ ಉತ್ಸವ

    ಚಿಕ್ಕಮಗಳೂರು:  ನಗರ ಹೊರವಲಯದ ಹಿರೇಮಗಳೂರಿನಲ್ಲಿ ಗ್ರಾಮ ದೇವತೆಗಳಾದ ಶ್ರೀ ಕರಾಳಮ್ಮ, ಅಂತರಘಟ್ಟಮ್ಮ ಮತ್ತು ಪ್ಲೇಗಿನಮ್ಮ ನವರ ವಾರ್ಷಿಕ ಸಿಡಿ ಉತ್ಸವ ಸಹಸ್ರಾರು ಭಕ್ತರ ನಡುವೆ ಶುಕ್ರವಾರ ವೈಭವದಿಂದ ನಡೆಯಿತು.

    ಉತ್ಸವದ ಅಂಗವಾಗಿ ಬೆಳಿಗ್ಗೆ ದೇವಾಲಯದಲ್ಲಿ ಕಲಾಭಿವೃದ್ಧಿ ಹೋಮ, ಶ್ರೀ ದುರ್ಗಾ ಹೋಮ, ಚಂಡಿಕಾ ಹೋಮ, ಲಕ್ಷ್ಮೀ ಹೋಮ, ಸರಸ್ವತಿ ಹೋಮ, ಕುಂಬಾಭಿಷೇಕ, ಮಹಾಪೂಜೆ ನಡೆದವು.

    ಭಾರ್ಗವಪುರಿ ಶ್ರೀ ಕೋದಂಡರಾಮಚಂದ್ರ ಸ್ವಾಮಿಗೆ ಫಲ ಸಮರ್ಪಣೆ, ಮಧ್ಯಾಹ್ನ ಹೋಮದ ಪೂರ್ಣಾಹುತಿ, ಮಹಾಮಂಗಳಾರತಿ, ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಿತು.

    ಸಂಜೆ ವೇಳೆಗೆ ಶ್ರೀ ಕರಾಳಮ್ಮ, ಅಂತರಘಟ್ಟಮ್ಮ ಮತ್ತು ಪ್ಲೇಗಿನಮ್ಮ ನವರ ಉತ್ಸವಮೂರ್ತಿಗಳನ್ನು ದೇವಾಲಯದಿಂದ ಹೊರ ತಂದು ನಾದಸ್ವರ, ಕೊಂಬು, ಕಹಳೆ, ಗ್ರಾಮೀಣ ವಾದ್ಯಗಳು, ದಕ್ಷಿಣಕನ್ನಡದ ತಟ್ಟಿ ಗೊಂಬೆಗಳು, ಕಳಶ ಹೊತ್ತ ಬಾಲೆಯ ರೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು.

    ಈ ವೇಳೆ ಗ್ರಾಮಸ್ಥರು ತಮ್ಮ ಮನೆಗಳ ಮುಂದೆ ಸಾರಿಸಿ, ರಂಗವಲ್ಲಿ ಹಾಕಿ, ಉತ್ಸವ ಮೂರ್ತಿಗಳನ್ನು ಸ್ವಾಗತಿಸಿ, ಆರತಿ ಎತ್ತಿ, ಪೂಜೆ ಸಲ್ಲಿಸಿದರು, ಗ್ರಾಮೀಣ ವಾದ್ಯಗಳ ಲಯಕ್ಕೆ ಮಕ್ಕಳು ಮತ್ತು ಯುವ ಜನತೆ ಕುಣಿದು ಕುಪ್ಪಳಿಸಿದರು.

    ಊರ ಮುಂಭಾಗದ ಅಂತರಘಟ್ಟಮ್ಮ ದೇವಾಲಯದ ಬಳಿ ಉತ್ಸವ ಮೂರ್ತಿಗಳು ಮೆರವಣಿಗೆಯಲ್ಲಿ ಆಗಮಿಸುತ್ತಿದ್ದಂತೆ ದೇವಾಲಯದ ಮುಂಭಾಗದಲ್ಲಿ ಸಾಲಂಕೃತಗೊಂಡು ಸಜ್ಜಾಗಿ ನಿಂತಿದ್ದ ಸಿಡಿಗಂಬಕ್ಕೆ ಮತ್ತು ಪಂಚಭೂತಗಳಿಗೆ ಪೂಜೆ ಸಲ್ಲಿಸಲಾಯಿತು, ಈ ವೇಳೆ ಭಕ್ತರು ತಮ್ಮ ಮಕ್ಕಳನ್ನು ಸಿಡಿಗಂಬದಲ್ಲಿ ಕುಳ್ಳಿರಿಸಿ ಹರಕೆ ಸಲ್ಲಿಸಿದರು.

    ನಂತರ ಗ್ರಾಮೀಣ ವಾದ್ಯಗಳ ಭರಾಟೆ, ಭಕ್ತರ ಹರ್ಷೋದ್ಗಾರ, ಕರತಾಡನದ ನಡುವೆ ಉತ್ಸವ ಮೂರ್ತಿಗಳ ಸಿಡಿ ಮಹೋತ್ಸವ ನೆರವೇರಿತು,

    ದೇವಾಲಯದ ಅರ್ಚಕ ಎಚ್,ಕೆ, ಶ್ರೀಧರ್ ನೇತೃತ್ವದ ತಂಡ ಉತ್ಸವದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿತು, ದೇವಾಲಯ ಸಮಿತಿ ಅಧ್ಯಕ್ಷ ಸಿ, ಪಿ, ರವಿಶಂಕರ್, ಕಾರ್ಯದರ್ಶಿ ಡಿ,ಎಂ, ಶಂಕರ್ ಹಾಜರಿದ್ದರು, ನಗರ ಮತ್ತು ಸುತ್ತಮುತ್ತಲ ಗ್ರಾಮಗಳ ಸಹಸ್ರಾರು ಭಕ್ತರು ಮಳೆಯ ನಡುವೆಯೂ ಉತ್ಸವದಲ್ಲಿ ಸಡಗರ ಸಂಭ್ರಮದಿಂದ ಪಾಲ್ಗೊಂಡಿದ್ದರು, ಉತ್ಸವದ ಪ್ರಯುಕ್ತ ಗ್ರಾಮದ ಎಲ್ಲಾ ಬೀದಿಗಳು, ಮನೆ, ಮನೆಗಳು, ತಳಿರು ತೋರಣದಿಂದ ಅಲಂಕೃತಗೊಂಡು, ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು.

    Annual CD festival of Sri Karalamma Antharaghattamma and Plaginamma

  • ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿ ಕಿರಣ್ ಕುಮಾರ್ ಅವಿರೋಧ ಆಯ್ಕೆ

    ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿ ಕಿರಣ್ ಕುಮಾರ್ ಅವಿರೋಧ ಆಯ್ಕೆ

    ಚಿಕ್ಕಮಗಳೂರು: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿ ಕಿರಣ್‌ಕುಮಾರ್ ಬಿ.ಆರ್ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಚುನಾವಣೆಯನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಸಹ ಕಾರ್ಯದರ್ಶಿ ಚೇತನ್ ನಡೆಸಿಕೊಟ್ಟರು.

    ಈ ಚುನಾವಣೆ ಸಂದರ್ಭದಲ್ಲಿ ಮಾಜಿ ಜಿಲ್ಲಾಧ್ಯಕ್ಷ ಭೈರೇಗೌಡ ಕಾರ್ಯದರ್ಶಿ ಪರಮೇಶ್ವರಪ್ಪ ಸಂಘಟನಾ ಕಾರ್ಯದರ್ಶಿ ವನಜಾಕ್ಷಿ ಗಣೇಶ್‌ಮೂರ್ತಿ, ಚಿತ್ರ, ಗೀತಾ.ಪಿ ಶ್ರೀನಿವಾಸ್, ತಾಲ್ಲೂಕು ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಾದ ಪುಟ್ಟರಾಜು, ಪಿ.ಅಜ್ಜಯ್ಯ, ನವೀನ್ ಬಿ.ಆರ್, ಹರೀಶ್, ನಂಜುಂಡಪ್ಪ. ಆದರ್ಶ, ದಿನೇಶ್, ಕುಮಾರಪ್ಪ, ಪ್ರಸನ್ನಕುಮಾರ್, ಧರಣೇಶ್, ಮೈತ್ರಿ, ವೀಣಾ ಬಸಪ್ಪ ಅಶೋಕ, ಆನಂದ, ಸೈಯದ್ ಸೊಹೇಲ್, ರಾಮಚಂದ್ರ, ಹಾಗೂ ತಾಲೂಕು ಸರ್ಕಾರಿ ನೌಕರರ ಸಂಘದ ಕಡೂರು ಹಾಗೂ ತರೀಕೆರೆ ಅಧ್ಯಕ್ಷರಾದ ಎಂ.ಬಿ ಮಂಜುನಾಥ್, ಅನಂತಪ್ಪ, ಶೃಂಗೇರಿ ನೌಕರರ ಸಂಘದ ಕಾರ್ಯದರ್ಶಿ ವಿಜಯಕುಮಾರ್, ತಿಮ್ಮಪ, ಅಶೋಕ್ ಜಿಲ್ಲಾ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯರಾದ ಮಂಜುನಾಥ್, ಸುಂದರೇಶ್, ಕೆಂಚೇಗೌಡ ಮತ್ತಿತರರು ಭಾಗವಹಿಸಿದ್ದರು.

    Kiran Kumar elected unopposed as district president of Primary School Teachers Association

  • ನಗರಸಭೆಗೆ 18 ದಿನಗಳಲ್ಲಿ 2.36 ಕೋಟಿ ಆಸ್ತಿ ತೆರಿಗೆ ಸಂಗ್ರಹ

    ನಗರಸಭೆಗೆ 18 ದಿನಗಳಲ್ಲಿ 2.36 ಕೋಟಿ ಆಸ್ತಿ ತೆರಿಗೆ ಸಂಗ್ರಹ

    ಚಿಕ್ಕಮಗಳೂರು: ಇಲ್ಲಿನ ನಗರಸಭೆಗೆ ಪ್ರಸ್ತುತ ಆರ್ಥಿಕ ವರ್ಷದ ಆರಂಭದಲ್ಲಿ ೧೮ ದಿನದಲ್ಲಿ ಸುಮಾರು ೨.೩೬ ಕೋಟಿ ರೂ ನಿರೀಕ್ಷೆಗೂ ಮೀರಿದ ತೆರಿಗೆ ಸಂಗ್ರಹವಾಗಿದೆ ಎಂದು ಪೌರಾಯುಕ್ತ ಬಿ.ಸಿ. ಬಸವರಾಜ್ ತಿಳಿಸಿದರು.

    ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ೨೦೨೪-೨೫ ನೇ ಸಾಲಿನಲ್ಲಿ ನಗರಸಭೆ ೧೯.೩೪ ಕೋಟಿ ರೂ ತೆರಿಗೆ ಸಂಗ್ರಹದ ಗುರಿ ಹೊಂದಿದ್ದು, ೨೦೨೫-೨೬ನೇ ಸಾಲಿಗೆ ೧೯.೯೨ ಕೋಟಿ ರೂ ಸಂಗ್ರಹದ ಗುರಿಹೊಂದಲಾಗಿದೆ. ಏ.೧ ರಿಂದ ೧೭ ರವರೆಗೆ ೨.೩೬ ಕೋಟಿ ರೂ ಸಂಗ್ರಹವಾಗಿದ್ದು, ನಗರಸಭೆ ವ್ಯಾಪ್ತಿಯಲ್ಲಿ ಖಾತೆಯಾಗಿರುವ ೩೫ ಸಾವಿರ ಸ್ವತ್ತುಗಳಿವೆ ಎಂದು ವಿವರಿಸಿದರು.

    ಈ ಪೈಕಿ ಸುಮಾರು ೨೨ ಸಾವಿರ ಮನೆಗಳು ಇದ್ದು, ೪ ಸಾವಿರ ವಾಣಿಜ್ಯ ಕಟ್ಟಡಗಳಿವೆ. ಇವುಗಳೆಲ್ಲವೂ ಇ-ಖಾತೆಯಾಗಿದ್ದು, ಅಭಿಯಾನದ ಮೂಲಕ ಇನ್ನುಳಿದ ಇ-ಖಾತೆಗಳಿಗೆ ಮಾಡಿಸಲಾಗುತ್ತಿದೆ ಎಂದು ಹೇಳಿದರು.

    ಏಪ್ರಿಲ್‌ನಲ್ಲಿ ತೆರಿಗೆ ಪಾವತಿಸುವವರಿಗೆ ಶೇ.೫ ರಷ್ಟು ಸರ್ಕಾರ ರಿಯಾಯಿತಿ ನೀಡಿದ್ದು, ಇದರ ಪ್ರಯೋಜನ ಪಡೆಯಲು ನಾಗರೀಕರು ನಿರೀಕ್ಷೆಗೂ ಮೀರಿ ಮುಂದೆ ಬರುತ್ತಿದ್ದಾರೆ. ಖಾಲಿಯಾಗಿದ್ದ ಬ್ಯಾಂಕ್ ಕೌಂಟರ್‌ಗಳು ಹಣ ಕಟ್ಟಲು ಜನರು ಸಾಲುಗಟ್ಟಿ ನಿಲ್ಲುತ್ತಿದ್ದಾರೆಂದು ಮಾಹಿತಿ ನೀಡಿದರು.

    ಹಿರಿಯ ನಾಗರೀಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಸ್ಥಳದಲ್ಲಿ ಕುಳಿತುಕೊಳ್ಳಲು ಶಾಮಿಯಾನ ಹಾಕಿ ಖುರ್ಚಿಗಳನ್ನು ಹಾಕುವ ಮೂಲಕ ವ್ಯವಸ್ಥೆ ಮಾಡಲಾಗಿದ್ದು, ಜೊತೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದರು.

    ನಗರಸಭೆ ವ್ಯಾಪ್ತಿಯಲ್ಲಿ ಕಂದಾಯ ಭೂಮಿಯಲ್ಲಿ ಸುಮಾರು ೪ ಸಾವಿರ ಮನೆಗಳು ಹಾಗೂ ೨ ಸಾವಿರ ನಿವೇಶನಗಳು ನಿರ್ಮಾಣವಾಗಿದ್ದು, ಇವುಗಳಿಗೆ ನಗರಸಭೆಯಿಂದ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಆದರೆ ನಗರಸಭೆಗೆ ತೆರಿಗೆ ಪಾವತಿ ಮಾಡುತ್ತಿಲ್ಲ. ಈ ನಿಟ್ಟಿನಲ್ಲಿ ರಾಜ್ಯಸರ್ಕಾರ ಇ-ಖಾತೆ ಮಾಡಿಕೊಡಲು ಆದೇಶ ಹೊರಡಿಸಿದೆ ಎಂದು ತಿಳಿಸಿದರು.

    ೨೦೨೪ ರ ಸೆಪ್ಟೆಂಬರ್ ಮಾಹೆಯ ಹಿಂದೆ ಆಸ್ತಿ ಖರೀದಿ ಮಾಡಿ ಉಪ ನೋಂದಣಿ ಕಚೇರಿಯಲ್ಲಿ ರಿಜಿಸ್ಟರ್ ಆಗಿದ್ದರೆ ಅದರ ದಾಖಲೆಯೊಂದಿಗೆ ನಗರಸಭೆಗೆ ಅರ್ಜಿ ಸಲ್ಲಿಸಿದರೆ ಒಮ್ಮೆ ಮಾತ್ರ ದ್ವಿಗುಣ ಕಂದಾಯ ಕಟ್ಟಿಸಿಕೊಂಡು ಬಿ-ಖಾತೆ ಮಾಡಿಕೊಡಲಾಗುವುದು. ಮುಂದಿನ ವರ್ಷದಿಂದ ಸಿಂಗಲ್ ಕಂದಾಯ ಕಟ್ಟಬೇಕು ಎಂದು ಹೇಳಿದರು.

    ಮೇ.೧೦ ರವರೆಗೆ ಇದಕ್ಕೆ ಕಾಲಾವಕಾಶ ನೀಡಲಾಗಿದ್ದು ಈ ಅವಧಿಯ ಒಳಗೆ ನಾಗರೀಕರು ಇದರ ಪ್ರಯೋಜನ ಪಡೆಯಬೇಕು. ನಿಗಧಿತ ಅವಧಿಯ ನಂತರ ಬರುವ ಅರ್ಜಿಗಳನ್ನು ಮಾನ್ಯ ಮಾಡಲಾಗುವುದಿಲ್ಲ. ಇಷ್ಟೇ ಅಲ್ಲ ಸಂಬಂಧಪಟ್ಟ ಆಸ್ತಿಗೆ ನೀಡಲಾಗಿರುವ ಕುಡಿಯುವ ನೀರು, ಒಳ ಚರಂಡಿ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಡಿತಗೊಳಿಸುವುದಾಗಿ ಎಚ್ಚರಿಸಿದರು.

    ಇ-ಖಾತೆ ಅಭಿಯಾನ: ನಗರಸಭೆ ವ್ಯಾಪ್ತಿಯಲ್ಲಿ ಹಲವು ನಿವೇಶನ ಹಾಗೂ ಮನೆಗಳು ಇ-ಖಾತೆಯಾಗಿಲ್ಲ ಆದ್ದರಿಂದ ಇ-ಖಾತೆಯ ಅಭಿಯಾನವನ್ನು ಆರಂಭಿಸಲಾಗುತ್ತಿದೆ. ನಗರದ ಪ್ರತೀ ಮನೆಗಳಿಗೆ ತೆರಳಿ ಇ-ಖಾತೆ ಮಾಡಿಕೊಡಲಾಗುವುದೆಂದು ವಿವರಿಸಿದರು.

    ಕ್ರಯಪತ್ರ, ಆಧಾರ್ ಕಾರ್ಡ್ ಅಥವಾ ಪಾನ್ ಕಾರ್ಡ್, ಅರ್ಜಿ, ಇಸಿಯನ್ನು ಮನೆಗೆ ಬರುವ ಸಿಬ್ಬಂದಿಗೆ ನೀಡಿದರೆ ಎರಡೇ ದಿನಗಳಲ್ಲಿ ಇ-ಖಾತೆ ವಿತರಿಸಲಾಗುವುದು. ಇದರ ಸದುಪಯೋಗಪಡೆದುಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

    Municipal Corporation collects Rs 2.36 crore in property tax in 18 days

  • ‌ರಾಜ್ಯ ಸರ್ಕಾರದಿಂದ ಸೂಫಿ ಸಂಸ್ಕೃತಿಗೆ ದ್ರೋಹ

    ‌ರಾಜ್ಯ ಸರ್ಕಾರದಿಂದ ಸೂಫಿ ಸಂಸ್ಕೃತಿಗೆ ದ್ರೋಹ

    ಚಿಕ್ಕಮಗಳೂರು: ಬಾಬಾಬುಡನ್‌ಗಿರಿಯಲ್ಲಿ ಅರ್ಚಕರ ನೇಮಕ ಸಂಬಂಧ ಸುಪ್ರೀಂ ಕೋರ್ಟಿಗೆ ಸಹಮತ ಸೂಚಿಸಿ ಪ್ರಮಾಣಪತ್ರ ಸಲ್ಲಿಸಿರುವ ರಾಜ್ಯ ಕಾಂಗ್ರೆಸ್ ಸರಕಾರ ದರ್ಗಾದ ಪವಿತ್ರ ಪರಂಪರೆ ಮತ್ತು ಸಾಂವಿಧಾನಿಕ ಮೌಲ್ಯಗಳು ಹಾಗೂ ಸೂಫಿ ಸಂಸ್ಕೃತಿಗೆ ದ್ರೋಹ ಮಾಡಿದೆ ಎಂದು ಸೈಯದ್ ಬುಡನ್ ಶಾಖಾದ್ರಿ ವಂಶಸ್ಥ ಫಕ್ರುದ್ದೀನ್‌ಶಾಖಾದ್ರಿ ಹೇಳಿದರು.

    ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ದರ್ಗಾದ ಪರಂಪರೆ, ಸೂಫಿ ಸಂಸ್ಕೃತಿ ಮತ್ತು ಸಾಂವಿಧಾನಿಕ ಮೌಲ್ಯಗಳ ಮೇಲೆ ಹೊಡೆತ ನೀಡಿದೆ. ಸುಪ್ರೀಂಗೆ ಪ್ರಮಾಣ ಪತ್ರ ಸಲ್ಲಿಸಿರುವುದು ೧೯೯೧ರ ಪ್ಲೇಸಸ್ ಆಫ್ ವರ್ಶಿಪ್ ಕಾಯಿದೆಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು.

    ಗೃಹ ಸಚಿವ ಜಿ.ಪರಮೇಶ್ವರ್ ಅವರು ಅಧ್ಯಕ್ಷರಾಗಿರುವ ಕ್ಯಾಬಿನೆಟ್ ಉಪಸಮಿತಿಯ ಸಭೆಯಲ್ಲಿ ನಮ್ಮ ಕಡೆಯಿಂದ ೪ ಜನರಿಗೆ ಮಾತನಾಡಲು ಮಾತ್ರ ಅವಕಾಶ ನೀಡಿದ್ದರು. ಆದರೆ, ವಿರೋಧ ಪಕ್ಷದಿಂದ ಇಬ್ಬರು ಸ್ವಾಮೀಜಿಗಳು, ಸಿ.ಟಿ.ರವಿ ಸೇರಿ ಏಳು ಮಂದಿಗೆ ಅವಕಾಶ ನೀಡಿದರು ಎಂದು ತಿಳಿಸಿದರು.

    ಮೂಡಿಗೆರೆ ಶಾಸಕಿ ನಯನಾಮೋಟಮ್ಮ ಅವರು ಸೂಫಿ ಪರಂಪರೆಯ ಬದಲು ದತ್ತಜಯಂತಿಯನ್ನು ಬೆಂಬಲಿಸುವ ನಿರ್ಧಾರ ತೆಗೆದುಕೊಂಡರು. ಜಮೀರ್‌ಅಹ್ಮದ್ ಖಾನ್ ಅವರು ಸಿ.ಟಿ.ರವಿಗೆ ಭಯಗೊಂಡು ಮಾತನಾಡುತ್ತಾರೆ. ಇದರಿಂದ ಸಂವಿಧಾನದ ಮೌಲ್ಯಗಳು ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ಮೇಲಿನ ಅವರ ನಿಷ್ಠೆಯ ಬಗ್ಗೆ ಪ್ರಶ್ನೆಗಳು ಏಳುತ್ತವೆ ಎಂದು ಹೇಳಿದರು.

    ಬಾಬಾಬುಡನ್ ದರ್ಗಾವನ್ನು ಸಜ್ಜಾದ ನಶೀನ್ ಮತ್ತು ಶಾಖಾದ್ರಿಗಳು ನಿರ್ವಹಿಸುತ್ತಿದ್ದಾರೆ. ಆದರೆ, ಕಾಂಗ್ರೆಸ್ ಸರಕಾರವು ಸಜ್ಜಾದೆ ನಿಶಾನೆ ಅವರ ಪಾತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಕೇವಲ ಸಮಿತಿಯ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿದೆ ಎಂದು ದೂರಿದರು.

    ಮತಬ್ಯಾಂಕ್ ರಾಜಕೀಯದ ಭಾಗವಾಗಿ ಅರ್ಚಕರ ನೇಮಕಾತಿಗೆ ಸಹಮತ ವ್ಯಕ್ತಪಡಿಸಿ ಸುಪ್ರೀಂ ಕೋರ್ಟಿಗೆ ಪ್ರಮಾಣ ಪತ್ರ ಸಲ್ಲಿಸಿರುವ ಕಾಂಗ್ರೆಸ್ ವಿರುದ್ಧ ದರ್ಗಾದ ಬಗ್ಗೆ ಅಭಿಮಾನ ಇರುವ ಎಲ್ಲ ಭಕ್ತರಿಗೂ ಕಾಂಗ್ರೆಸ್ ನಮಗೆ ಮೋಸ ಮಾಡಿದೆ ಎಂಬ ಸತ್ಯದ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಹೇಳಿದರು.

    ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಯೂಸಫ್ ಹಾಜಿ ಮತ್ತಿತರರು ಇದ್ದರು.

    Betrayal of Sufi culture by the state government

  • ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಬಿಜೆಪಿ-ಕಾಂಗ್ರೆಸ್ ಸರ್ಕಾರಗಳು ವಿಫಲ

    ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಬಿಜೆಪಿ-ಕಾಂಗ್ರೆಸ್ ಸರ್ಕಾರಗಳು ವಿಫಲ

    ಚಿಕ್ಕಮಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳು ವಿಫಲವಾಗಿರುವುದರಿಂದ ಸಿಪಿಐ ತಾಲೂಕು ಸಮಿತಿ ಬೆಲೆ ಏರಿಕೆ ವಿರುದ್ಧ ಹೋರಾಟ ನಡೆಸಲು ನಿರ್ಧರಿಸಿದ್ದು, ಜನಾಂದೋಲನ ನಡೆಸಲಾಗುವುದು ಎಂದು ಸಿಪಿಐ ತಾಲೂಕು ಕಾರ್ಯದರ್ಶಿ ಕೆರೆಮಕ್ಕಿ ರಮೇಶ್ ತಿಳಿಸಿದರು.

    ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೆಲೆ ಏರಿಕೆಯನ್ನು ತಡೆಗಟ್ಟುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿದ್ದು, ಜನರನ್ನು ಸಂಕಷ್ಟಕ್ಕೆ ದೂಡುವಂತಹ ಜನವಿರೋಧಿ ನೀತಿಗಳನ್ನು ಅನುಸರಿಸುವ ಮೂಲಕ ಜನರು ಬೀದಿಗೆ ಬೀಳುವಂತೆ ಮಾಡಿವೆ ಎಂದು ಆರೋಪಿಸಿದರು.

    ಬೆಲೆ ಏರಿಕೆಯನ್ನು ತಡೆಗಟ್ಟುವುದಾಗಿ ಆಶ್ವಾಸನೆ ನೀಡುವುದರೊಂದಿಗೆ ೨೦೧೪ರಲ್ಲಿ ಅಧಿಕಾರದ ಗದ್ದುಗೆ ಏರಿದ ನರೇಂದ್ರಮೋದಿ ನೇತೃತ್ವದ ಬಿಜೆಪಿ ಸರ್ಕಾರ ತನ್ನ ಆಡಳಿತ ಅವಧಿಯಲ್ಲಿ ಅಗತ್ಯ ವಸ್ತುಗಳ ಬೆಲೆಯನ್ನು ಹೆಚ್ಚಿಸುವ ಮೂಲಕ ಜನರ ತಲೆಯ ಮೇಲೆ ಬೆಲೆಏರಿಕೆ ಹೊರೆಯನ್ನು ಹೊರಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದ್ದರೂ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಏರಿಸಲಾಗಿದೆ. ಅಡುಗೆ ಅನಿಲ ಸಿಲಿಂಡರ್ ಬೆಲೆ ೫೦ ರೂಪಾಯಿ ಹೆಚ್ಚಿಸುವುದರೊಂದಿಗೆ ಜನಸಾಮಾನ್ಯರ ಮೇಲೆ ಬೆಲೆ ಏರಿಕೆ ಬರೆಯನ್ನು ಎಳೆದಿದೆ ಲೇವಡಿ ಮಾಡಿದರು.

    ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಆಹಾರ ಪದಾರ್ಥಗಳಲ್ಲದೆ ಚಿನ್ನ, ಕಬ್ಬಿಣ, ಸಿಮೆಂಟ್ ಸೇರಿದಂತೆ ಗೃಹೋಪಯೋಗಿ ಸಾಮಾಗ್ರಿಗಳ ಬೆಲೆಗಳು ಗಗನಕ್ಕೇರಿವೆ. ಇತ್ತ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಪ್ರೋತ್ಸಾಹಧನ ನೀಡುವುದಾಗಿ ರೈತರ ಹೆಸರಿನಲ್ಲಿ ಹಾಲಿನ ದರವನ್ನು ಏರಿಸಿದೆ. ವಿದ್ಯುತ್, ನೀರು, ಬಸ್ ಪ್ರಯಾಣ ದರವನ್ನು ಹೆಚ್ಚಿಸುವ ಮೂಲಕ ಜನರ ಬದುಕನ್ನು ಸಂಕಷ್ಟಕ್ಕೆ ದೂಡಿದೆ ಎಂದು ಹೇಳಿದರು.

    ಸಿಪಿಐ ಜಿಲ್ಲಾ ಮಂಡಳಿ ಸದಸ್ಯ ಸಿ.ವಸಂತ್‌ಕುಮಾರ್ ಮಾತನಾಡಿ, ಅಗತ್ಯ ವಸ್ತುಗಳ ಬೆಲೆಯನ್ನು ಹೆಚ್ಚಿಸಿರುವ ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳ ಮುಖಂಡರು ಪರಸ್ಪರ ಒಬ್ಬರನೊಬ್ಬರು ಆರೋಪ, ಪತ್ಯಾರೋಪದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ರಾಜಕೀಯ ತಿಕ್ಕಾಟದ ನಡುವೆ ಬೆಲೆ ಏರಿಕೆಯ ಹೊರೆಯನ್ನು ಜನಸಾಮಾನ್ಯರು ಹೊರುವಂತಾಗಿದೆ ಎಂದು ದೂರಿದರು.

    ಸಿಪಿಐ ತಾಲೂಕು ಸಮಿತಿ ಸದಸ್ಯ ಜರ್ಮಿಲೋಬೋ ಮಾತನಾಡಿ, ಬಿಜೆಪಿ ಜನರ ಸಮಸ್ಯೆಗೆ ಸ್ಪಂದಿಸುವ ಬದಲು ಭಾವನಾತ್ಮಕ ವಿಷಯಗಳಿಗೆ ಒತ್ತು ನೀಡುತ್ತಿದೆ. ಕೇಂದ್ರ ಮತ್ತು ರಾಜ್ಯಸರ್ಕಾರಗಳೆರಡು ಬೆಲೆಗಳನ್ನು ಹೆಚ್ಚಿಸಿದ್ದು, ಕಡಿಮೆ ಮಾಡುವತ್ತಾ ಗಮನ ಹರಿಸದೆ ಬೀದಿಗಿಳಿದು ಹೋರಾಟಕ್ಕೆ ಮುಂದಾಗಿರುವುದು ವಿಪರ್ಯಾಸವೆಂದರು.

    ಪತ್ರಿಕಾಗೋಷ್ಠಿಯಲ್ಲಿ ಸಿಪಿಐ ನಗರ ಕಾರ್ಯದರ್ಶಿ ತಂಪಿತಗೌಡ ಇದ್ದರು.

    BJP-Congress governments have failed to control the rise in prices of essential commodities

  • ಬಿಜೆಪಿ ಮೋರ್ಚಾ ವತಿಯಿಂದ ಪ್ರತಿಭಟನೆ

    ಬಿಜೆಪಿ ಮೋರ್ಚಾ ವತಿಯಿಂದ ಪ್ರತಿಭಟನೆ

    ಚಿಕ್ಕಮಗಳೂರು:  ಸ್ವಾತಂತ್ರ್ಯದ ಹೋರಾಟದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖವಾಣಿಯಾಗಿ ಕೆಲಸ ಮಾಡಿದ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಹಗರಣದಲ್ಲಿ ಜಾರಿ ನಿರ್ದೇಶನಾಲಯ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿರುವುದರ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಆಗ್ರಹಿಸಿ ನಗರದ ಆಜಾದ್ ವೃತ್ತದಲ್ಲಿ ಯುವ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

    ಇಂದು ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಆಜಾದ್ ವೃತ್ತದಲ್ಲಿ ಸಮಾವೇಶಗೊಂಡು ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಯುವಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಮಾತನಾಡಿ, ಗಾಂಧೀಜಿ ಹೆಸರಿನಲ್ಲಿ ಅಧಿಕಾರ ನಡೆಸುತ್ತಿರುವ ನಕಲಿ ಗಾಂಧಿಗಳ ಕುಟುಂಬ ದೇಶವನ್ನು ಲೂಟಿ ಎಸಗಿದ ಮೂಲ ರೂವಾರಿಗಳು. ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರ ಪರಿಶ್ರಮದ ಹೆರಾಲ್ಡ್ ಸಂಸ್ಥೆ ಕೇವಲ ಐದು ಜನರ ಕೈನಲ್ಲಿ ಸಿಲುಕಿ ನರಳುತ್ತಿದೆ ಎಂದು ಆರೋಪಿಸಿದರು.

    ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಮುಖವಾಣಿಯಾಗಿ ಕಾರ್ಯನಿರ್ವಹಿಸಿದ ಸಂಸ್ಥೆ ಇಂದು ನಕಲಿ ಗಾಂಧಿಗಳ ಕುಟುಂಬದಲ್ಲಿ ಸಿಲುಕಿ ಭಾರೀ ಭ್ರಷ್ಟಚಾರದ ನಡೆಸಿದೆ. ೨೦೧೪ರಲ್ಲಿ ನ್ಯಾ.ಸುಬ್ರಹ್ಮಣ್ಯಸ್ವಾಮಿ ದಾಖಲಿಸಿದ ಪ್ರಕರಣದಲ್ಲಿ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಸಹಚರರ ಮೇಲೆ ಭ್ರಷ್ಟಾಚಾರದ ಆರೋಪಿಗಳೆಂದು ಪ್ರಕರಣ ದಾಖಲಾಗಿತ್ತು ಎಂದು ಹೇಳಿದರು.

    ಇದರಿಂದ ಕಾಂಗ್ರೆಸ್ ನಾಯಕರು ರಾಷ್ಟ್ರದ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸಂವಿಧಾನಕ್ಕೆ ಅವಮಾನಿಸಿದ್ದಾರೆ. ಸತ್ಯ ಬಯಲಿಗೆಳೆಯಲು ಕೇಂದ್ರ ಸರ್ಕಾರ ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದಾಗ ಕೆಲವು ನಕಲಿ ಗೂಂಡಾಗಳನ್ನು ಕಾಂಗ್ರೆಸ್ ನಾಯಕರು ಬಳಸಿಕೊಂಡು ಇಡೀ ಕಚೇರಿ ಮುಂಭಾಗ ಪ್ರತಿಭಟನೆ ನಾಟಕವಾಡಿ ದೇಶದ ಜನತೆಗೆ ಮಂಕುಬೂದಿ ಎರಚುತ್ತಿದೆ ಎಂದು ಟೀಕಿಸಿದರು.

    ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆಯಿದ್ದಲ್ಲಿ ರಾಜ್ಯದ ಬೆಲೆಏರಿಕೆ, ಅಲ್ಪಸಂಖ್ಯಾತರ ಮೀಸಲಾತಿ, ಅವೈಜ್ಞಾನಿಕ ಜಾತಿಗಣತಿ, ಪಕ್ಷದ ನಾಯಕರ ವಿರುದ್ಧ ಪ್ರತಿಭಟನೆ ನಡೆಸಬೇಕು. ಆದರೀಗ ರಾಷ್ಟ್ರವನ್ನು ಕೊಳ್ಳೆ ಒಡೆಯುವ ನಾಯಕರ ಪರವಾಗಿ ಬೆಂಬಲ ಸೂಚಿಸುತ್ತಿರುವುದು ನಾಚಿಕೇಡಿನ ಸಂಗತಿ ಎಂದು ಆರೋಪಿಸಿದರು.

    ರಾಜ್ಯದ ಟ್ರೋಲ್‌ಮಂತ್ರಿ ಪ್ರಿಯಾಂಕಾ ಖರ್ಗೆ ಇಡಿ ಹಾಗೂ ಐಟಿ ಇಲಾಖೆ ಆರ್‌ಎಸ್‌ಎಸ್ ಕಚೇರಿಗೆ ದಾಳಿ ನಡೆಸುತ್ತಿಲ್ಲ ಎನ್ನುತ್ತಿದ್ದು, ಪ್ರಸ್ತುತ ಕಚೇರಿ ಕೋಟ್ಯಾಂತರ ಸ್ವಯಂ ಸೇವಕರ ಬೆವರಿನ ಹಣದಿಂದ ಕಟ್ಟಿದೆ ಹೊರತು ನಗರದಲ್ಲಿ ನಿರ್ಮಾಣವಾಗುತ್ತಿರುವ ಕಾಂಗ್ರೆಸ್ ನೂತನ ಕಚೇರಿಯಂಥಲ್ಲ ಎಂದು ಲೇವಡಿ ಮಾಡಿದರು.

    ಜಿಲ್ಲಾ ಬಿಜೆಪಿ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿ, ಬಿಜೆಪಿ ವಿನಾಕಾರಣ ಕಾಂಗ್ರೆಸ್ ಮೇಲೆ ಸುಳ್ಳು ಆರೋಪ ಎಸಗುವುದಿಲ್ಲ, ಸತ್ಯಾಸತ್ಯತೆ ಅರಿತು ದೂರುತ್ತದೆ. ಈ ಬಾರಿಯು ನ್ಯಾಷನಲ್ ಹೆರಾಲ್ಡ್‌ನಲ್ಲಿ ಅಕ್ರಮ ಹಣ ವರ್ಗಾವಣೆ ಖಚಿತತೆ ಅರಿತು ಆರೋಪ ಮಾಡಿದೆ. ಅಲ್ಲದೇ ಪತ್ರಿಕೆಯ ಮೂಲ ವಾರಸುದಾರರಿಗೂ ನೆರವು ನೀಡದೇ ಸಂಪೂರ್ಣ ಲೂಟಿವೆಸಗಿದೆ ಎಂದು ದೂರಿದರು.

    ರಾಷ್ಟ್ರಪಿತಾ ಮಹಾತ್ಮ ಗಾಂಧೀಜಿ ಹತ್ಯೆ ವಿಷಯದಲ್ಲಿ ಕಾಂಗ್ರೆಸ್ ಬಹುದೊಡ್ಡ ನಾಟಕವಾಡಿದೆ. ಗೂಡ್ಸ್, ಗಾಂಧೀಜಿ ಹಂತಕನೆಂದು ಬಿಂಬಿಸಿ ಜನತೆಗೆ ದಿಕ್ಕುತಪ್ಪಿಸುತ್ತಿದೆ. ಹಿಂದೆ ಗಾಂಧೀಜಿ ಕಾಂಗ್ರೆಸ್ ವಿಸರ್ಜಿಸುವ ಚರ್ಚೆಗಳಾಗಿತ್ತು. ಇದನ್ನು ಸಹಿಸದೇ ಕಾಂಗ್ರೆಸ್‌ನವರು ಗಾಂಧಿಯನ್ನು ಹತ್ಯೆಗೈದು ಸುಳ್ಳು ಆರೋಪ ಗೂಡ್ಸೆ ಮೇಲೆ ಹೊರಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.

    ಬಿಜೆಪಿ ನಗರಾಧ್ಯಕ್ಷ ಕೆ.ಎಸ್.ಪುಷ್ಪರಾಜ್ ಮಾತನಾಡಿ, ೧೯೩೮ರಲ್ಲಿ ಪ್ರಾರಂಭವಾಗಿ ಹಾಲಿ ೨೫೦೦ ಕೋಟಿ ಒಡೆತನದ ಹೆರಾಲ್ಡ್ ಪತ್ರಿಕೆಯನ್ನು ಕೇವಲ ೫೦ ಲಕ್ಷ ರೂ. ಖರೀದಿಸಿ ಭಾರೀ ಭ್ರಷ್ಟಚಾರ ಎಸಗಿರುವ ಆರೋಪ ಸೋನಿಯಾ, ರಾಹುಲ್ ಗಾಂಧಿ ಮೇಲೆ ಬಂದಿದೆ. ಈ ಬಗ್ಗೆ ಇಡಿ ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಈರ್ವರ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.

    ಪ್ರತಿಭಟನೆಯಲ್ಲಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್, ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ಅಂಕಿತಾ, ಕಾರ್ಯದರ್ಶಿಗಳಾದ ರಾಜೇಶ್, ಶಶಿ ಆಲ್ದೂರು, ಪ್ರಧಾನ ಕಾರ್ಯದರ್ಶಿ ಸಚಿನ್‌ಗೌಡ, ನಗರಮಂಡಲ ಯುವಮೋರ್ಚಾ ಅಧ್ಯಕ್ಷ ಜೀವನ್ ಕೋಟೆ, ಗ್ರಾಮಾಂತರ ಮಂಡಲ ಅಧ್ಯಕ್ಷ ಪುನೀತ್, ನಗರಸಭೆ ಸದಸ್ಯರಾದ ಮಧುಕುಮಾರ್ ರಾಜ್ ಅರಸ್, ರೂಪ, ಓಬಿಸಿ ರಾಜ್ಯ ಕಾರ್ಯದರ್ಶಿ ಬಿ.ರಾಜಪ್ಪ, ಕಬೀರ್, ಕೌಶಿಕ್, ಓಂಕಾರೇಗೌಡ, ಪ್ರದೀಪ್, ಎಸ್‌ಡಿಎಂ ಮಂಜು, ಅನ್ವರ್, ಚೈತ್ರಗೌಡ, ಮಂಜುನಾಥ್ ಸಂಗೀತ, ಜಯಪ್ರಕಾಶ್ ಮತ್ತಿತರರು ಭಾಗವಹಿಸಿದ್ದರು.

    Protest by BJP Morcha

  • ಮಹಾನ್ ಪುರುಷರ ಜಯಂತಿ ಆಚರಿಸುತ್ತಿರುವುದು ಆಶಾದಾಯಕ ಬೆಳವಣಿಗೆ

    ಮಹಾನ್ ಪುರುಷರ ಜಯಂತಿ ಆಚರಿಸುತ್ತಿರುವುದು ಆಶಾದಾಯಕ ಬೆಳವಣಿಗೆ

    ಚಿಕ್ಕಮಗಳೂರು: ಎಲ್ಲಾ ಸಮಾಜದ ಮಹಾನ್ ಪುರುಷರ ಜಯಂತಿಗಳನ್ನು ಸರ್ಕಾರದ ಜೊತೆಗೆ ಸಂಘ-ಸಂಸ್ಥೆಗಳು ಆಚರಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದ್ದು, ಅವರ ತತ್ವ ಸಿದ್ಧಾಂತಗಳು ಹಾಗೂ ವಿಚಾರಧಾರೆಗಳನ್ನು ಸರ್ವರೂ ಗೌರವಿಸಬೇಕಾದ ಅಗತ್ಯತೆ ಇದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.

    ಅವರು ಇಂದು ಆಜಾದ್‌ಪಾರ್ಕ್ ವೃತದಲ್ಲಿ ಜಿಲ್ಲಾ ಸವಿತಾ ಸಮಾಜ ಹಾಗೂ ತಾಲೂಕು ಸವಿತಾ ಸಮಾಜ ಇವರ ವತಿಯಿಂದ ಏರ್ಪಡಿಸಲಾಗಿದ್ದ ಶ್ರೀರಾಮನವಮಿ ಮತ್ತು ಹನುಮಜಯಂತಿ ಅಂಗವಾಗಿ ಶ್ರೀರಾಮಹನುಮೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸವಿತಾ ಮಹರ್ಷಿಗಳ ಭಾವಚಿತ್ರಕ್ಕೆ ಪುರ್ಷ್ಪಾಚನೆ ಸಲ್ಲಿಸಿ ಮಾತನಾಡಿದರು.

    ಇಂದು ಮಹಾನ್ ಪುರುಷರಿಲ್ಲದೇ ಇದ್ದರೂ ಅವರ ವಿಚಾರಧಾರೆಗಳು ಮತ್ತು ಸಿದ್ಧಾಂತಗಳು ಪ್ರಸ್ತುತವಾಗಿದ್ದು, ಪ್ರಪಂಚ ಇರುವವರೆಗೆ ಜೀವಂತವಾಗಿರುತ್ತವೆ ಎಂದು ಬಣ್ಣಿಸಿದರು. ನಮ್ಮ ಪೂರ್ವಜರು ಈ ಮಹಾನ್ ಪುರುಷರ ತತ್ವಾದರ್ಶಗಳನ್ನು ಪರಿಚಯಿಸಿದಂತೆ ಮುಂದಿನ ಪೀಳಿಗೆಗೆ ಅವುಗಳನ್ನು ಉಳಿಸಿ-ಬೆಳಸಬೇಕಾದ ಬಹುದೊಡ್ಡ ಜವಾಬ್ದಾರಿ ಎಲ್ಲರ ಮೇಲಿದೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ರವರ ವಿಚಾರ-ಸಿದ್ಧಾಂತಗಳ ಕುರಿತು ನ್ಯಾಯಾಧೀಶ ವಿ.ಹನುಮಂತಪ್ಪ ಅವರು ಜಯಂತಿ ಸಂದರ್ಭದಲ್ಲಿ ಜಾಗೃತಿ ಮೂಡಿಸಿದ್ದು ಶ್ಲಾಘನೀಯ ಎಂದು ತಿಳಿಸಿದರು.

    ವಿಧಾನ ಪರಿಷತ್ ಸದಸ್ಯರು ಸಿ.ಟಿ ರವಿ ಮಾತನಾಡಿ, ವಿದ್ಯೆಯ ಮೂಲಕ ಬದುಕನ್ನು ಬದಲಾಯಿಸುವುದಕ್ಕೆ ಸಾಧ್ಯವಿದೆ, ಗೌರವ ಎನ್ನುವುದು ಪ್ರಾಪ್ತಿಯಾಗುವುದು ನಾವು ಹೇಗೆ ಬದುಕುತ್ತೇವೆ ಎಂಬುದರ ಮೇಲೆ ಪ್ರಾಪ್ತರಾಗುತ್ತವೆ. ಸವಿತಾ ಸಮಾಜದ ಬಂಧುಗಳು ಶಿಕ್ಷಣ ಕ್ಷೇತ್ರದಲ್ಲೂ ಮತ್ತು ಸರ್ಕಾರದಿಂದ ಸಿಗುವ ನೆರವುಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗುವ ಮೂಲಕ ಬದುಕು ಕಟ್ಟಿಕೊಳ್ಳಬೇಕು ಎಂದು ಹಾರೈಸಿದರು.

    ಬದುಕು ಬದಲಿಸುವ ಶಕ್ತಿ ಶಿಕ್ಷಣಕ್ಕಿದೆ, ಮಕ್ಕಳಿಗೆ ಶಿಕ್ಷಣವನ್ನು ಕೊಟ್ಟು ಆ ಮೂಲಕ ಸಮಾಜ ಕಟ್ಟುವ ಕೆಲಸ ಮಾಡಬೇಕು. ಇರುವ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳುವ ಮೂಲಕ ಸವಿತಾ ಸಮಾಜದ ಬಂಧುಗಳು ಏಳಿಗೆ ಕಾಣಬೇಕು ಎಂದು ಹೇಳಿದರು.

    ಪ್ರಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸವಿತಾ ಸಮಾಜ ಜಿಲ್ಲಾಧ್ಯಕ್ಷ ವಿಶ್ವನಾಥ್ ಸಂಕಲ್ಪರವರು ನಾಲ್ಕು ಗೋಡೆಗೆ ಕಾರ್ಯಕ್ರಮಕ್ಕೆ ಸೀಮಿತವಾಗದೆ ಸಮಾಜದೊಂದಿಗೆ ಗುರುತಿಸಿಕೊಳ್ಳಬೇಕು. ಸವಿತಾ ಸಮಾಜದ ಬಾಂಧವರು ಸಂಘಟಿತರಾಗುವ ಮೂಲಕ ಆಧುನಿಕ ಸಮಾಜದಲ್ಲೂ ಶೋಷಿತರಾಗುತ್ತಿರುವ ನಾವು ನಮ್ಮ ಘರ್ಜನೆ ಸರ್ಕಾರಕ್ಕೆ ಕೇಳುವಂತಾಗಬೇಕು ಎಂದು ಹೇಳಿದರು.

    ದ್ವಿತೀಯ ಪಿಯುಸಿಯಲ್ಲಿ ಪಾಸ್ ಆಗಿರುವ ಸವಿತಾ ಸಮಾಜದ ವಿದ್ಯಾರ್ಥಿಗಳಾದ ಮದನ್.ಸಿ, ಶ್ರೇಯಸ್ ಡಿ.ಕೆ ಇವರುಗಳನ್ನು ಸನ್ಮಾನಿಸಲಾಯಿತು. ಗ್ಲಾಮರ್ ಕೇರ್ ಸಂಸ್ಥೆಯ ವತಿಯಿಂದ ಜೀವಿತ್ ಭಾರತೀಯ ಅವರು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. ಶ್ರೀ ರಾಮನವಮಿಯ ಮತ್ತು ಹನುಮ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಕೋಸಂಬರಿ ಮತ್ತು ಪಾನಕ ವಿತರಣೆಗೆ ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿಯವರು ಚಾಲನೆ ನೀಡಿದರು.

    ಕಾರ್ಯಕ್ರಮದಲ್ಲಿ ದೀಪಕ್ ದೊಡ್ಡಯ್ಯ, ಕಲ್ಮುರುಡಪ್ಪ, ಮಂಜೇಗೌಡ, ಕುರುವಂಗಿ ವೆಂಕಟೇಶ್ ಜಿಲ್ಲಾ ಸವಿತಾ ಸಮಾಜ ಗೌರವ ಸಲಹೆಗಾರರಾದ ಜಿ. ಉಮೇಶ್, ಸವಿತಾ ಸಮಾಜದ ಅಧ್ಯಕ್ಷ ಜೆ. ಸತ್ಯನಾರಾಯಣ, ಮೂಡಿಗೆರೆ ತಾಲ್ಲೂಕು ಸವಿತಾ ಸಮಾಜದ ಅಧ್ಯಕ್ಷರಾದ ಹೆಚ್.ವಿ ಮಹೇಶ್, ಕಡೂರು ತಾಲೂಕು ಸವಿತ ಸಮಾಜದ ಅಧ್ಯಕ್ಷರಾದ ಎನ್. ವೆಂಕಟೇಶ್, ನರಸಿಂಹರಾಜಪುರ ತಾಲೂಕು ಸವಿತ ಸಮಾಜದ ಅಧ್ಯಕ್ಷರಾದ ಕುಮಾರ್, ಆಲ್ದೂರು ಹೋಬಳಿ ಸವಿತಾ ಸಮಾಜದ ಅಧ್ಯಕ್ಷರಾದ ಎ.ಆರ್. ಚಂದ್ರಶೇಖರ್, ಬೀರೂರು ಹೋಬಳಿ ಸವಿತಾ ಸಮಾಜದ ಉಪಾಧ್ಯಕ್ಷರದ ಕೃಷ್ಣಮೂರ್ತಿ, ಚಿಕ್ಕಮಗಳೂರು ತಾಲೂಕು ಸವಿತಾ ಸಮಾಜದ ಗೌರವಾಧ್ಯಕ್ಷರಾದ ಆಲೂರು ಎನ್. ಸತೀಶ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಎಸ್.ಎಂ, ಖಜಾಂಚಿ ಎಂ. ರಾಘವೇಂದ್ರ, ಉಪಾಧ್ಯಕ್ಷರುಗಳಾದ ಸಿ. ಮಾಧವ, ಟಿ.ಪಿ. ವಿಜಯಕುಮಾರ್, ಟೈಟಾನಿಕ್ ಮಂಜು, ಸಹಕಾರ್ಯದರ್ಶಿಗಳಾದ ಸುಜಿತ್, ಎಚ್. ಸಂದೇಶ್, ಶಬರೀಶ್, ಚಂದನ್, ಮಹಿಳಾ ಘಟಕದ ಅಧ್ಯಕ್ಷರಾದ ಸಿ. ಅಶ್ವಿನಿ, ಪ್ರಧಾನ ಕಾರ್ಯದರ್ಶಿ ಶ್ರೀಲಕ್ಷ್ಮಿ ಎಚ್.ಎಸ್, ಸಂಚಾಲಕರಾದ ಎಸ್.ಎಚ್. ಮಂಜುಳಾ, ಸದಸ್ಯರಾದ ಡಿ.ಎನ್ ಉಮೇಶ್, ಚೇತನ್ ಘೋಗಿ, ಮೆಹಬೂಬ್ ಬಾಬು, ಸಚಿನ್ ಐ.ಆರ್, ಪಿ.ಯಶ್ವಂತ್, ಎಲ್‌ಐಸಿ ಈರಣ್ಣ, ಟಿ.ಲಕ್ಷ್ಮಿಕಾಂತ, ಎ.ಬಿ ಬಸವರಾಜ್ ಮುಂತಾದವರು ಉಪಸ್ಥಿತರಿದ್ದರು

    Celebrating the birth anniversaries of great men is a hopeful development

  • ಕೇಂದ್ರ ಸರ್ಕಾರದ ವಿರುದ್ಧ ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ

    ಕೇಂದ್ರ ಸರ್ಕಾರದ ವಿರುದ್ಧ ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ

    ಚಿಕ್ಕಮಗಳೂರು: -ಭಾರತ ದೇಶದಲ್ಲಿ ಸ್ವಾತಂತ್ರ್ಯದ ಬಳಿಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಇವರು ಇಡಿ ದುರುಪಯೋಗಪಡಿಸಿಕೊಂಡು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ವಿರುದ್ಧ ಚಾರ್ಜ್‌ಶೀಟ್ ಹಾಕುವ ಮೂಲಕ ಸೇಡಿನ ರಾಜಕಾರಣ ಮಾಡಿ ದೇಶಕ್ಕೆ ತ್ಯಾಗ ಮಾಡಿದವರಿಗೆ ಅಪಮಾನ ಮಾಡಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ ಮಂಜೇಗೌಡ ಆರೋಪಿಸಿದರು.

    ಅವರು ಇಂದು ನಗರದ ಆಜಾದ್ ವೃತ್ತದಲ್ಲಿ ಸಮಾವೇಶಗೊಂಡು ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ ಇಂದು ಸ್ಪಷ್ಟ ಬಹುಮತದಿಂದ ಅಧಿಕಾರವನ್ನು ಕೇಂದ್ರಸರ್ಕಾರ ನಡೆಸುತ್ತಿಲ್ಲ, ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಪಾಪದ ಕೊಡ ತುಂಬಲಿದೆ. ಸರ್ಕಾರ ಪಥನವಾಗಲಿದೆ ಎಂದು ಭವಿಷ್ಯ ನುಡಿದರು.

    ಜಾತಿ ಜಾತಿಗಳ ಮಧ್ಯೆ ವಿಷಬೀಜ ಬಿತ್ತಿ ಬಿಜೆಪಿ ಒಡೆದು ಹಾಳುವ ನೀತಿ ಅನುಸರಿಸುತ್ತಿದೆ ಎಂದು ದೂರಿದ ಅವರು, ಮುಂಬರುವ ೨೦೨೯ ರಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ತಕ್ಕ ಪಾಠ ಕಲಿಸಲಿದೆ ಎಂದು ಎಚ್ಚರಿಸಿದರು.

    ಬಿಜೆಪಿ ಮುಖಂಡರ ಮನೆಯಲ್ಲಿ ಕೋಟ್ಯಾಂತರ ರೂ ಬೆಂಕಿಗಾಹುತಿಯಾದರೂ ತನಿಖೆ ಕೈಗೊಳ್ಳದ ಇಡಿಯವರ ವಿಪಕ್ಷ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರ ಮೇಲೆ ಚಾರ್ಜ್‌ಶೀಟ್ ಸಲ್ಲಿಸಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿದರು.

    ಅಮಿತ್ ಷಾ ಅವರು ಗುಜರಾತ್‌ನಲ್ಲಿ ನಡೆದ ನರಮೇದದಲ್ಲಿ ಭಾಗಿಯಾಗಿದ್ದಾರೆಂಬ ಕಾರಣಕ್ಕೆ ಜೈಲಿಗೆ ಕಳಿಸಿದ್ದ ಸೇಡನ್ನು ತೀರಿಸಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿಗೆ ಕಾಂಗ್ರೆಸ್ ಪಕ್ಷ ತಕ್ಕ ಪಾಠ ಕಲಿಸುತ್ತದೆ ಎಂದು ಹೇಳಿದರು.

    ದೇಶದ ಸುಭದ್ರತೆಗೆ, ಐಕ್ಯತೆಗಾಗಿ ೪ ಸಾವಿರ ಕಿ.ಮೀಗಳ ಪಾದಯಾತ್ರೆ ನಡೆಸಿದ ರಾಹುಲ್ ಗಾಂಧಿಯವರು ದೇಶದ ಎಲ್ಲಾ ವರ್ಗದ ಬಡವರನ್ನು ಪ್ರೀತಿಯಿಂದ ಕಾಣುವ ಏಕೈಕ ನಾಯಕನಿಗೆ ಚಾರ್ಜ್‌ಶೀಟ್ ಹಾಕುವ ಮೂಲಕ ಅಪಮಾನ ಮಾಡಿ ಸೇಡಿನ ರಾಜಕಾರಣ ಮಾಡುತ್ತಿದ್ದಾರೆಂದು ಟೀಕಿಸಿದರು.

    ಪ್ರತಿಭಟನೆಯಲ್ಲಿ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್ ಅಹಮದ್, ಸದಸ್ಯರಾದ ರಘು, ಸೋಮಶೇಖರ್, ನಗರಸಭೆ ಸದಸ್ಯರಾದ ಮುನೀರ್, ಪರಮೇಶ್, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಹಿರೇಮಗಳೂರು ರಾಮಚಂದ್ರ, ಇಂದಾವರ ಲೋಕೇಶ್, ಪ್ರಕಾಶ್, ಸೋಮಶೇಖರ್, ರಾಘವೇಂದ್ರ, ಕೆ. ಭರತ್, ರಾಜೇಶ್, ಪುನೀತ್, ಲಕ್ಯಾ ಸಂತೋಷ್ ಮತ್ತಿತರರು ಭಾಗವಹಿಸಿದ್ದರು.

    Block Congress protests against the central government