ಭದ್ರಾ ನದಿಗೆ ಬಿದ್ದು ಮಗ – ಮನನೊಂದು ತಾಯಿ ಕೂಡ ಆತ್ಮಹತ್ಯೆ

ಚಿಕ್ಕಮಗಳೂರು: ಭದ್ರಾ ನದಿಗೆ ಪಿಕ್‌ಅಪ್‌ ವಾಹನ ಬಿದ್ದು ಮಗ ಕಣ್ಮರೆಯಾಗಿದ್ದರಿಂದ ಮನನೊಂದು ತಾಯಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗಣಪತಿಕಟ್ಟೆ ಶಮಂತ್‌ (22)ಅವರು ಚಾಲನೆ ಮಾಡುತ್ತಿದ್ದ ಪಿಕ್‌ಅಪ್ ವಾಹನ ಕಳಸ– ಕಳಕೋಡು ರಸ್ತೆಯ ಕೊಳಮಗೆ ಬಳಿ ರಸ್ತೆ ಪಕ್ಕದಲ್ಲಿ ಹರಿಯುವ ಭದ್ರಾ ನದಿಗೆ ಗುರುವಾರ ಮಧ್ಯಾಹ್ನ ಉರುಳಿತ್ತು. ಸಂಜೆಯಾ ದರೂ ಶಮಂತ್ ಪತ್ತೆಯಾಗಿಲ್ಲ.

ಅವರ ತಾಯಿ ರವಿಕಲಾ (45) ಅಪಘಾತ ನಡೆದ ಸ್ಥಳಕ್ಕೆ ತೆರಳಿ ಮಗನಿಗಾಗಿ ಹುಡುಕಾಡಿದ್ದರು. ಕಾಫಿ ತೋಟಕ್ಕೆ ಕಾರ್ಮಿಕರನ್ನು ಕರೆದುಕೊಂಡು ಹೋಗಿ ಕೆಲಸ ಮಾಡಿಸುವ ಮೇಸ್ತ್ರಿಯಾಗಿದ್ದ ರವಿಕಲಾ ಅವರು, ಇದೇ ಉದ್ದೇಶಕ್ಕೆ ಮಗನಿಗೆ ಪಿಕ್ಅಪ್ ವಾಹನವನ್ನು 6 ತಿಂಗಳ ಹಿಂದೆ ಕೊಡಿಸಿದ್ದರು. ಮಗ ವಾಹನದ ಸಮೇತ ಭದ್ರಾ ನದಿಗೆ ಬಿದ್ದಿರುವುದರಿಂದ ರವಿಕಲಾ ಆಘಾತಗೊಂಡಿದ್ದರು.

ರಾತ್ರಿ 10.30ರ ವೇಳೆಗೆ ಮನೆಯ ಸಮೀಪದ ಕೆರೆಗೆ ರವಿಕಲಾ ಹಾರಿದ್ದಾರೆ. ಅವರನ್ನು ರಕ್ಷಿಸಲು ಸ್ಥಳೀಯರು ಪ್ರಯತ್ನ ಮಾಡಿದರೂ ಅಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ. ತಾಯಿ ಮತ್ತು ಮಗನ ಸಾವಿನಿಂದ ಗಣಪತಿಕಟ್ಟೆ ಪ್ರದೇಶದಲ್ಲಿ ದುಃಖ ಆವರಿಸಿದೆ. ನೂರಾರು ಕಾರ್ಮಿಕರು ಶುಕ್ರವಾರ ಕೆಲಸಕ್ಕೆ ಹೋಗದೆ ರತ್ನಕಲಾ ಅವರ ಮನೆ ಬಳಿ ಜಮಾಯಿಸಿದ್ದರು.

ಭದ್ರಾ ನದಿಯಲ್ಲಿ ಶಮಂತ್ ಶವ ಹುಡುಕಾಟ ಮುಂದುವರಿದಿದೆ. ನೀರಿನಲ್ಲಿದ್ದ ಪಿಕ್‌ಅಪ್ ವಾಹನವನ್ನು ಮೇಲೆತ್ತಲಾಗಿದೆ. ಮಳೆಯ ನಡುವೆ ನೀರು ರಭಸವಾಗಿ ಹರಿಯುತ್ತಿರುವುದರಿಂದ ಶವ ಪತ್ತೆ ಕಷ್ಟವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.

Son falls into Bhadra river – heartbroken mother also commits suicide

Comments

Leave a Reply

Your email address will not be published. Required fields are marked *