Category: ಚಿಕ್ಕಮಗಳೂರು ನಗರ

  • ಪಿಳ್ಳೇನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಪಿ.ಡಿ. ನವೀನ್ ಅವಿರೋಧ ಆಯ್ಕೆ

    ಪಿಳ್ಳೇನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಪಿ.ಡಿ. ನವೀನ್ ಅವಿರೋಧ ಆಯ್ಕೆ

    ಚಿಕ್ಕಮಗಳೂರು: ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆಯುತ್ತಿದ್ದು, ಇದರಲ್ಲಿ ಭಾರತ ಜಯಗಳಿಸಬೇಕು ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.

    ಅವರು ಇಂದು ಪಿಳ್ಳೇನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರ ಆಯ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ ಅಧ್ಯಕ್ಷ ಪಿ.ಡಿ. ನವೀನ್‌ರವರಿಗೆ ಅಭಿನಂದಿಸಿ ಮಾತನಾಡಿ ನಾವು ಇಲ್ಲಿ ಗೆಲ್ಲುವುದು ಮುಖ್ಯವಾದರೆ ಅದಕ್ಕಿಂತ ಮುಖ್ಯವಾಗಿ ಭಾರತ ದೇಶ ಗೆಲ್ಲಬೇಕು. ಆ ಗೆಲುವಿಗೆ ಪೂರಕವಾಗಿ ಇಲ್ಲಿರುವ ಎಲ್ಲಾ ಗ್ರಾ.ಪಂ ಸದಸ್ಯರ ವಿಶ್ವಾಸ ಪಡೆದು ದೇಶ ಮುಖ್ಯ ಎಂದುಕೊಂಡು ಜನರ ವೈಯಕ್ತಿಕ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ನೂತನ ಅಧ್ಯಕ್ಷರು ಕೆಲಸ ಮಾಡಲಿ ಎಂದು ಶುಭ ಹಾರೈಸಿದರು.

    ಗ್ರಾಮ ಪಂಚಾಯಿತಿ ಅಧ್ಯಕ್ಷರಾಗುವುದು ಎಷ್ಟು ಮುಖ್ಯವೋ ಅಷ್ಟೇ ಒಳ್ಳೆಯ ಹೆಸರು ಗಳಿಸಿ ಕೆಲಸ ಮಾಡುವುದು ಮುಖ್ಯ. ಜನಪ್ರತಿನಿಧಿಗಳಾದ ನಂತರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದರ ಜೊತೆಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಮುಂದಾಗಬೇಕೆಂದು ಕರೆನೀಡಿದರು.

    ಗ್ರಾ.ಪಂ ಮಾಜಿ ಅಧ್ಯಕ್ಷ ಪಿಳ್ಳೇನಹಳ್ಳಿ ರಮೇಶ್ ಮಾತನಾಡಿ, ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿರುವ ನವೀನ್‌ರವರಿಗೆ ಅಭಿನಂದಿಸಿದ ಅವರು, ನೂತನ ಅಧ್ಯಕ್ಷರು ಸಿಕ್ಕಿರುವ ತಮ್ಮ ಅಧಿಕಾರವಧಿಯಲ್ಲಿ ಗ್ರಾ.ಪಂ ಅಭಿವೃದ್ಧಿಗೆ ಹಾಗೂ ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡಲಿ ಎಂದು ಹಾರೈಸಿದರು.

    ನೂತನ ಅಧ್ಯಕ್ಷ ಪಿ.ಡಿ. ನವೀನ್ ಮಾತನಾಡಿ, ಗ್ರಾ.ಪಂ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಮಾಡಿದ ಪಕ್ಷದ ಎಲ್ಲಾ ಸದಸ್ಯರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

    ಗ್ರಾ.ಪಂ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ಈಗ ಬೇಸಿಗೆ ಕಾಲವಾಗಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಆದ್ಯತೆ ಮೇಲೆ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

    ಈ ಸಂದರ್ಭದಲ್ಲಿ ಪಿಳ್ಳೇನಹಳ್ಳಿ ಗ್ರಾ.ಪಂ ಉಪಾಧ್ಯಕ್ಷೆ ಶಾರದಮ್ಮ, ಸದಸ್ಯರುಗಳಾದ ಪಿ.ಎನ್. ರಮೇಶ್, ಮಹೇಶ್ವರಾಚಾರ್, ಬಿ.ಹೆಚ್. ಶಶಿಧರ, ನಾಗರಾಜ ನಾಯ್ಕ, ಭಾಗ್ಯ, ಪವಿತ್ರ, ಸಾವಿತ್ರಮ್ಮ, ಸೌಂದರ್ಯ ಮತ್ತಿತರರು ಉಪಸ್ಥಿತರಿದ್ದರು.

    ಚುನಾವಣಾಧಿಕಾರಿಯಾಗಿ ಕಡೂರು ಪಶುವೈದ್ಯಕೀಯ ಇಲಾಖೆಯ ಉಮೇಶ್, ಪಿಡಿಓ ನರಸಿಂಹಮೂರ್ತಿ ಭಾಗವಹಿಸಿದ್ದರು.

    P.D. Naveen elected unopposed as new president of Pillenahalli Gram Panchayat

  • ಉಗ್ರರ ಅಡಗುತಾಣ ದ್ವಂಸ – ಕನ್ನಡಸೇನೆ ಸಂಭ್ರಮಾಚರಣೆ

    ಉಗ್ರರ ಅಡಗುತಾಣ ದ್ವಂಸ – ಕನ್ನಡಸೇನೆ ಸಂಭ್ರಮಾಚರಣೆ

    ಚಿಕ್ಕಮಗಳೂರು: ಉಗ್ರರ ಅಡಗತಾಣಗಳನ್ನು ದ್ವಂಸಗೊಳಿಸಿ ನಾರಿಯರ ಸಿಂದೂರಕ್ಕೆ ಪ್ರತಿ ಕಾರ ತೀರಿಸಿಕೊಂಡ ವೀರ ಯೋಧರ ಸೇವಾ ಕಾರ್ಯ ಶ್ಲಾಘಿಸಿ ಗುರುವಾರ ಜಿಲ್ಲಾ ಕನ್ನಡಸೇನೆ ಕಾರ್ಯ ಕರ್ತರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಸಿಹಿಹಂಚಿ ಸಂಭ್ರಮಾಚರಣೆ ನಡೆಸಿದರು.

    ಈ ಕುರಿತು ಮಾತನಾಡಿದ ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಜೀವನದ ಸಂತೋಷವನ್ನು ಕಳೆ ಯಲು ಆಗಮಿಸಿದ ಪ್ರವಾಸಿಗರ ಮೇಲೆ ಹೀನಾಕೃತ್ಯ ಎಸಗಿದ ಉಗ್ರಗ್ರಾಮಿಗಳನ್ನು ಮಟ್ಟಹಾಕಲು ಕೇಂದ್ರ ಸರ್ಕಾರದ ದಿಟ್ಟನಿರ್ಧಾರಕ್ಕೆ ಕೈಜೋಡಿಸಿದ ಸೈನಿಕರು ಉಗ್ರತಾಣಗಳನ್ನು ಪುಡಿಪುಡಿಗೊಳಿಸಿ ತಕ್ಕಉತ್ತರ ನೀ ಡಿರುವುದು ಹೆಮ್ಮೆಯ ಸಂಗತಿ ಎಂದರು.

    ಪ್ರತಿ ಸಾರಿಯು ಭಾರತದ ಮೇಲೆ ಸುಳ್ಳು ಆರೋಪ, ಏಕಾಏಕಿ ದಾಳಿ ನಡೆಸುವ ಪಾಕಿಸ್ತಾನಕ್ಕೆ ಭಾರತೀ ಯರು ಯೋಧರು ಆಪರೇಷನ್ ಸಿಂಧೂರದ ಮೂಲಕ ಮುಟ್ಟಿಕೊಳ್ಳಲಾರಂಥ ಪಾಠಕಲಿಸಿ, ನೊಂದವರಿಗೆ ನ್ಯಾಯ ಒದಗಿಸಿದ್ದಾರೆ. ಭಾರತೀಯರು ಶಾಂತಿಪ್ರಿಯರು, ಕೆಣಕಿದರೆ ಸಿಡಿದೇಳಲಿದ್ದೇವೆ ಎಂಬುವುದನ್ನು ಈ ಯುದ್ಧದಲ್ಲಿ ಸಾಬೀತುಪಡಿಸಿದೆ ಎಂದರು.

    ಪ್ರಪಂಚದ ಬಲಾಡ್ಯ ರಾಷ್ಟ್ರಗಳು ಭಾರತ ಕೈಗೊಂಡ ಆಪರೇಷನ್ ಸಿಂಧೂರ್ ಯುದ್ಧದಿಂದ ಮೆಚ್ಚುಗೆ ವ್ಯಕ್ತಪಡಿಸಿದಲ್ಲದೇ ಭಾರತದ ಪರವಾಗಿ ನಿಂತಿಕೊಳ್ಳಲು ಪ್ರಧಾನಿಗಳ ಶಕ್ತಿಯೇ ಮೂಲ ಎಂದ ಅವರು ಅ ಮಾಯಕರನ್ನು ಕೊಲ್ಲುವ ಸಂಸ್ಕೃತಿ ಬೆಳೆಸಿಕೊಂಡಿರುವ ಪಾಪಿ ಪಾಕಿಸ್ತಾನ ಉಗ್ರ ನೆಲೆಗಳನ್ನು ಹುಡುಕಿ ಧ್ವಂಸ ಮಾಡಿರುವ ಯೋಧರಿಗೆ ದೊಡ್ಡದೊಂದು ನಮನ ಎಂದು ತಿಳಿಸಿದರು.

    ಸದೃಢ ರಾಷ್ಟ್ರ ನಿರ್ಮಾಣಗೊಳಿಸಲು ಕನ್ನಡಸೇನೆ ಕಾರ್ಯಕರ್ತರು ಶತೃದೇಶದ ವಿರುದ್ಧ ಎದೆಗುಂ ದದೇ ಭಾರತಾಂಬೆಯ ರಕ್ಷಣೆಗೆ ಸದಾಸಿದ್ದರಾಗಿದ್ದೇವೆ. ಭಾರತೀಯರಿಗೆ ನೆಮ್ಮದಿ ಬದುಕು ಹಾಗೂ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಯಾವುದೇ ಕ್ಷಣದಲ್ಲೂ ಹೋರಾಟಕ್ಕೆ ಕಾರ್ಯಕರ್ತರು ಮುಂದಾಗುತ್ತೇವೆ ಎಂದು ಹೇಳಿದರು.

    ಕನ್ನಡಸೇನೆ ವಕ್ತಾರ ಹುಣಸೇಮಕ್ಕಿ ಲಕ್ಷ್ಮಣ್ ಮಾತನಾಡಿ ಆಪರೇಷನ್ ಸಿಂದೂರ್ ಯುದ್ಧದಲ್ಲಿ ಕೇಂ ದ್ರ ಸರ್ಕಾರ ಸ್ತ್ರೀಯರ ನೇತೃತ್ವದಲ್ಲಿ ಭಾರತೀಯ ನಾರಿಯರಿಗೆ ನ್ಯಾಯ ಒದಗಿಸಿರುವುದು ಹೆಮ್ಮೆಯ ವಿಚಾರ ಇನ್ನೂ ಮುಂದೆ ಪಾಕಿಸ್ತಾನವು ಭಾರತದ ತಂಟೆಗೆ ಬಂದರೆ ಭೂಪಟದಲ್ಲಿ ಆ ದೇಶದ ನಕ್ಷೆಯೇ ಮರೆಯಾ ಗಲಿದೆ ಎಂಬುದು ಯುದ್ಧದಲ್ಲಿ ನೈಜವಾಗಿ ತಿಳಿಸಿದೆ ಎಂದರು.

    ಈ ಸಂದರ್ಭದಲ್ಲಿ ಕನ್ನಡಸೇನೆ ಮುಖಂಡರುಗಳಾದ ಅನ್ವರ್, ಜಯಪ್ರಕಾಶ್, ಶಂಕರೇಗೌಡ, ಪಾ ಲಾಕ್ಷಿ, ಜೀವನ್, ನವೀನ್‌ಕುಮಾರ್, ಅನಿಲ್‌ಆನಂದ್, ಮೋಹನ್, ಟೋನಿ, ಭಾರತಿ, ದೇವರಾಜ್, ನಿಲೇಶ್ ಮತ್ತಿ ತರರು ಹಾಜರಿದ್ದರು.

    Destruction of terrorist hideout – Kannada army celebration

  • ನಗರ ವ್ಯಾಪ್ತಿಯಲ್ಲಿ ಆಸ್ತಿಗಳ ಸಂಪೂರ್ಣ ದಾಖಲೆಗೊಳಿಸಲು ನಕ್ಷಾ ಯೋಜನೆ ಪರಿಣಾಮಕಾರಿ

    ನಗರ ವ್ಯಾಪ್ತಿಯಲ್ಲಿ ಆಸ್ತಿಗಳ ಸಂಪೂರ್ಣ ದಾಖಲೆಗೊಳಿಸಲು ನಕ್ಷಾ ಯೋಜನೆ ಪರಿಣಾಮಕಾರಿ

    ಚಿಕ್ಕಮಗಳೂರು: ನಗರಸಭೆ ವ್ಯಾಪ್ತಿಯಲ್ಲಿ ನಾಗರೀಕರ ಎಲ್ಲಾ ರೀತಿಯ ಆಸ್ತಿಗಳನ್ನು ಸ್ಯಾಟಲೈಟ್ ಮೂಲಕ ಸರ್ವೇ ನಡೆಸಿ ಗಣಕೀಕರಣಗೊಳಿಸಿ ಸಂಪೂರ್ಣ ದಾಖಲೆ ಸಿದ್ದಪಡಿಸುವ ಉದ್ದೇಶದೊಂದಿಗೆ ನೂತನವಾಗಿ ಜಾರಿಗೆ ತರಲಾಗಿರುವ ನಕ್ಷಾ ಯೋಜನೆ ದಾಖಲೆಗಳ ಸಂಗ್ರಹದ ಪರಿಣಾಮಕಾರಿ ಯೋಜನೆಯಾಗಿದೆ ಎಂದು ನಗರಸಭೆ ಪೌರಾಯುಕ್ತ ಬಿ.ಸಿ. ಬಸವರಾಜ್ ತಿಳಿಸಿದರು.

    ಇಂದು ನಗರದ ಹನುಮಂತಪ್ಪ ಸರ್ಕಲ್‌ನಲ್ಲಿ ಯೋಜನೆಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಚಿಕ್ಕಮಗಳೂರು ನಗರಸಭೆ ವ್ಯಾಪ್ತಿಯಲ್ಲಿ ನಕ್ಷಾ ಯೋಜನೆ ಜಾರಿಗೆ ಬಂದಿದ್ದು, ಭಾರತದ ಸುಮಾರು ೧೦೦ ನಗರಗಳಲ್ಲಿ ಈ ಯೋಜನೆಯನ್ನು ಜಾರಿಮಾಡಲಾಗಿದೆ ಎಂದರು.

    ಕರ್ನಾಟಕ ರಾಜ್ಯದಲ್ಲಿ ೧೦ ಸ್ಥಳೀಯ ಸಂಸ್ಥೆಗಳನ್ನು ಆಯ್ಕೆಮಾಡಲಾಗಿದ್ದು, ಇದರಲ್ಲಿ ಚಿಕ್ಕಮಗಳೂರು ನಗರಸಭೆಯೂ ಒಂದಾಗಿದೆ. ಇ-ಸ್ವತ್ತಿನಲ್ಲಿದ್ದರೂ ಈ ಯೋಜನೆಯಡಿ ನಾಗರೀಕರು ತಮ್ಮ ಆಸ್ತಿಗಳನ್ನು ಗಣಕೀಕೃತಗೊಳಿಸಿದಾಗ ಮಾತ್ರ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. ಈ ಕುರಿತು ಸಂಬಂಧಪಟ್ಟ ಖಾತೆದಾರರಿಗೆ ಎಟಿಎಂ ಮಾದರಿಯ ಕಾರ್ಡನ್ನು ವಿತರಿಸುತ್ತೇವೆ ಎಂದು ಹೇಳಿದರು.

    ಸರ್ವೇ ಇಲಾಖೆ ಅಧಿಕಾರಿಗಳು ಮತ್ತು ನಗರಸಭೆಯ ಅಧಿಕಾರಿ ಸಿಬ್ಬಂದಿಗಳು ಸ್ಥಳಕ್ಕೆ ಬಂದಾಗ ಸಾರ್ವಜನಿಕರು ಸ್ವತ್ತಿನ ಸಂಪೂರ್ಣ ವಿವರಗಳ ನೀಡಿ ಸಹಕರಿಸಬೇಕೆಂದು ಮನವಿ ಮಾಡಿದರು. ಈ ಕಾರ್ಯಕ್ಕೆ ಸಂಪೂರ್ಣ ಸಹಕಾರ ದೊರೆತಾಗ ಸರ್ಕಾರ ನೀಡಿದ ೬ ತಿಂಗಳ ಗಡುವಿನೊಳಗೆ ಪೂರ್ಣ ಪ್ರಮಾಣದ ಕೆಲಸ ಆಗುತ್ತದೆ. ವಿಳಂಭ ಮಾಡಿದರೆ ಖಾತೆದಾರರೇ ಹೊಣೆಯಾಗುತ್ತಾರೆಂದು ವಿವರಿಸಿದರು.

    ಈ ಸಂಬಂಧ ನಕ್ಷಾ ಯೋಜನೆಯಡಿ ದಾಖಲೆ ಸಂಗ್ರಹಿಸಲು ಸಂಬಂಧಿಸಿದ ಖಾತೆದಾರರಿಗೆ ಸೂಚನೆ ಪತ್ರ ರವಾನಿಸಲಿದ್ದು, ಪತ್ರದಲ್ಲಿ ತಿಳಿಸಿದ ದಿನಾಂಕದಂದು ಮನೆಯಲ್ಲೇ ಇದ್ದು, ಬರುವ ಸಿಬ್ಬಂದಿಗಳಿಗೆ ತಮ್ಮ ಆಸ್ತಿಯ ಪೂರ್ಣ ವಿವರಗಳನ್ನು ಒದಗಿಸುವ ಮೂಲಕ ಯೋಜನೆ ಯಶಸ್ವಿಯಾಗಲು ಬೆಂಬಲ ಅಗತ್ಯ ಎಂದರು.

    ಭೂದಾಖಲೆಗಳ ಸಹಾಯಕ ನಿರ್ದೇಶಕ ರುದ್ರೇಶ್ ಮಾತನಾಡಿ, ನಕ್ಷಾ ಯೋಜನೆ ಭಾರತದ ೧೦೦ ನಗರಗಳಲ್ಲಿ ಜಾರಿಗೆ ಬಂದಿದ್ದು, ಇದರಲ್ಲಿ ನಗರಸಭೆಯೂ ಆಯ್ಕೆಯಾಗಿದೆ. ಪ್ರತಿಯೊಂದು ಸ್ವತ್ತುಗಳನ್ನು ಸರ್ವೆ ಮಾಡಿ ಗುರುತಿನ ಚೀಟಿಯಲ್ಲಿ ಆಸ್ತಿಯ ಸಂಪೂರ್ಣ ವಿವರವನ್ನು ಲಗತ್ತಿಸಿ ಸಂಬಂಧಪಟ್ಟವರಿಗೆ ವಿತರಿಸುತ್ತೇವೆಂದು ಹೇಳಿದರು.

    ನಗರಸಭೆ ವ್ಯಾಪ್ತಿಯಲ್ಲಿ ಬರುವ ಪ್ರತೀ ಬಿಲ್ಡಿಂಗ್, ರಸ್ತೆ, ವಿದ್ಯುತ್ ಕಂಬ, ಒಳ ಚರಂಡಿ, ಸ್ಮಶಾನ, ಕೆರೆ ಸೇರಿದಂತೆ ಎಲ್ಲವುಗಳನ್ನು ಸರ್ವೆ ಮಾಡಿ ಡಿಜಿಟಲೀಕರಣಗೊಳಿಸಿ ಮಾಲೀಕರ ಹೆಸರು ಸಹಿತ ಸಂಪೂರ್ಣ ಮಾಹಿತಿಯುಳ್ಳ ೩ಡಿ ಫಿಲಂನ್ನು ವಿತರಿಸುತ್ತೇವೆ ಎಂದರು. ನಗರಸಭೆ ವ್ಯಾಪ್ತಿಯ ನಿವಾಸಿಗಳಿಗೆ ತಮ್ಮ ಮನೆ, ನಿವೇಶನ ಸೇರಿದಂತೆ ಸ್ವತ್ತುಗಳ ಎಲ್ಲಾ ಸಂಪೂರ್ಣ ದಾಖಲಾತಿಗಳನ್ನು ಒದಗಿಸಲು ಈ ಯೋಜನೆ ಪರಿಣಾಮಕಾರಿಯಾಗಲಿದೆ ಎಂದು ಹೇಳಿದರು.

    ಸರ್ವೇ ಕಾರ್ಯದಲ್ಲಿ ನಗರಾಭಿವೃದ್ಧಿ ಇಲಾಖೆ, ಸರ್ವೇ ಇಲಾಖೆ, ಸರ್ವೇ ಆಫ್ ಇಂಡಿಯಾ ಸಹಿತ ಒಟ್ಟು ೫ ಇಲಾಖೆಗಳು ಈ ಕಾರ್ಯ ನಡೆಸಲು ನಿಯೋಜನೆಗೊಂಡಿದ್ದು, ಮುಂದಿನ ೬ ತಿಂಗಳ ಒಳಗೆ ಈ ಕಾರ್ಯ ಅಂತಿಮಗೊಳಿಸುವಂತೆ ಗಡುವು ನೀಡಿದ್ದಾರೆಂದು ವಿವರಿಸಿದರು.

    ಈ ಸಂದರ್ಭದಲ್ಲಿ ಭೂ ದಾಖಲೆಗಳ ಉಪನಿರ್ದೇಶಕರಾದ ಲೋಹಿತ್ ಮೇಲ್ವಿಚಾರಕರಾದ ಗೀತಾ, ಧರ್ಮಪಾಲ್, ಪ್ರಕಾಶ್, ಅಧೀಕ್ಷಕ ನಂಜುಂಡಪ್ಪ, ಕಲ್ಲೇಶಪ್ಪ ಸೇರಿದಂತೆ ಎಲ್ಲಾ ಭೂಮಾಪಕರು, ನಗರಸಭೆ ಇಂಜಿನಿಯರ್ ಲೋಕೇಶ್, ಕಂದಾಯ ವಿಭಾಗದ ರಾಜಸ್ವ ನಿರೀಕ್ಷಕ ಶಿವಾನಂದ್ ಉಪಸ್ಥಿತರಿದ್ದರು.

    The mapping project is effective in providing complete documentation of properties within the city limits.

  • ಹೊರನಾಡಿನಲ್ಲಿ ರಾಜ್ಯಪಾಲರಿಂದ ಕಂಚಿನ ಪುತ್ಥಳಿ ಅನಾವರಣ

    ಹೊರನಾಡಿನಲ್ಲಿ ರಾಜ್ಯಪಾಲರಿಂದ ಕಂಚಿನ ಪುತ್ಥಳಿ ಅನಾವರಣ

    ಚಿಕ್ಕಮಗಳೂರು: ಕಳಸ ತಾಲ್ಲೂಕಿನ ಹೊರನಾಡು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಆವರಣದಲ್ಲಿ ದಿ.ಡಿ.ಬಿ.ವೆಂಕಟಸುಬ್ಬಾ ಜೋಯಿಸ್ ಮತ್ತು ಶ್ರೀಮತಿ ನರಸಮ್ಮ ವೆಂಕಟಸುಬ್ಬಾ ಜೋಯಿಸ್ ಅವರ ಕಂಚಿನ ಪುತ್ಥಳಿಗಳನ್ನು ಗುರುವಾರ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅನಾವರಣಗೊಳಿಸಿದರು.

    ಇದೇ ವೇಳೆ ಲಲಿತಾ ಕಲಾಮಂಟಪದಲ್ಲಿ ನಡೆದ ಗ್ರಾಮೀಣಾಭಿವೃದ್ದಿ ಯೋಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಕನ್ನಡದಲ್ಲಿ ಮಾತು ಆರಂಭಿಸಿ, `ಎಲ್ಲರಿಗೂ ನಮಸ್ಕಾರ, ನಾನು ನಿಮ್ಮೆಲ್ಲರನ್ನು ಸ್ವಾಗತಿಸುತ್ತೇನೆ’ ಎಂದು ಅಚ್ಚರಿ ಮೂಡಿಸಿದರು.

    ಶ್ರೀಕ್ಷೇತ್ರದಲ್ಲಿ ಜಿ.ಭೀಮೇಶ್ವರ ಜೋಷಿಯವರ ಅಜ್ಜ ದಿ.ಡಿ.ಬಿ.ವೆಂಕಸುಬ್ಬಾ ಜೋಯಿಸ್ ಮತ್ತು ಅವರ ಧರ್ಮಪತ್ನಿ ನರಸಮ್ಮ ವೆಂಕಟಸುಬ್ಬಾ ಜೋಯಿಸ್ ಅವರ ಪ್ರತಿಮೆ ಲೋಕಾರ್ಪಣೆ ಮಾಡುವ ಭಾಗ್ಯ ನನ್ನದಾಗಿದೆ. ಅವರ ವ್ಯಕ್ತಿತ್ವ ಮತ್ತು ಕಾಲಜ್ಞಾನದ ಬಗ್ಗೆ ಪುಸ್ತಕದಲ್ಲಿ ಪ್ರಕಟವಾಗಿದೆ. ಬಿ.ಎಲ್.ಶಂಕರ್ ಅವರ ವಿವರಣೆ ಕೇಳಿ ತಾವು ಪುಳಕಗೊಂಡಿದ್ದು ಪುತ್ಥಳಿ ಅನಾವರಣಗೊಳಿಸುವ ಭಾಗ್ಯ ನನಗೆ ದೊರಕಿದ್ದು ಒಂದು ದೊಡ್ಡ ಪುಣ್ಯ ಎಂದರು.

    ಕೇಂದ್ರದ ಸಂಸ್ಕೃತಿ ಮತ್ತು ಪ್ರವಾಸೋದಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮಾತನಾಡಿ. ಭದ್ರಾ ನದಿಯ ತಟದಲ್ಲಿರುವ ಶ್ರೀಕ್ಷೇತ್ರ, ಭವ್ಯ ದಿವ್ಯ ತೀರ್ಥ ಸ್ಥಳ. ಹೊರನಾಡಿನ ಪುಣ್ಯಭೂಮಿಯಲ್ಲಿ ಮಾತೆಯ ಆಶೀರ್ವಾದ ಪಡೆದಿರುವುದು ನನ್ನ ಪುಣ್ಯ, ನಮ್ಮ ಭಾರತ ದೇಶ ವಿವಿಧ ರೀತಿಯ ಸಂಸ್ಕೃತಿಯನ್ನು ಹೊಂದಿದೆ. ಆದಿಗುರು ಶಂಕರಾಚಾರ್ಯರು ಜನಿಸಿದ ನಾಡು ಇದಾಗಿದ್ದು, ಭಾರತದ ಸನಾತನ ಸಂಸ್ಕೃತಿಯನ್ನು ಹೊಂದಿದೆ. ಸನಾತನ ಧರ್ಮ ಹಾಗೂ ಸಾಧು ಪರಂಪರೆಯ ದೇಶ ನಮ್ಮದು. ಶ್ರೀಕ್ಷೇತ್ರದ ಧರ್ಮಕರ್ತರು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಪುಣ್ಯ ಕ್ಷೇತ್ರಗಳು ಹೇಗಿರಬೇಕೆಂಬುವುದನ್ನು ನಿರೂಪಿಸಿದ್ದಾರೆ. ಮಂದಿರಗಳು ಬರೀ ಪೂಜಾ ಕೇಂದ್ರಗಳು ಮಾತ್ರವಾಗಿರದೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದರು.

    ಕರ್ನಾಟಕ ಚಿತ್ರಕಲಾ ಪರಿಷತ್‌ನ ಅಧ್ಯಕ್ಷ ಬಿ.ಎಲ್.ಶಂಕರ್ ದಿ.ಡಿ.ಬಿ.ವೆಂಕಟಸುಬ್ಬಾ ಜೋಯಿಸ್ ಅವರಿಗೆ ನುಡಿ ನಮನ ಸಲ್ಲಿಸಿ, ಇಲ್ಲಿನ ತಪಸ್ಸಿನ ಫಲದ ಕಾರಣ ಇಂದು ಈ ದೇವಾಲಯ ಹತ್ತು ಹಲವಾರು ಜನೋಪಯೋಗಿ ಕಾರ್ಯಗಳನ್ನು ಮುಂದುವರಿಸಿಕೊಂಡು ಬರುತ್ತಿದೆ. ಇಡೀ ನಾಡಿಗೆ ಅನ್ನ ಕೊಡುವ ದೇವಿ ಶ್ರೀ ಆದಿಶಕ್ತ್ಯಾತ್ಮಕ ಅನ್ನಪೂರ್ಣೆಶ್ವರಿ ಅಮ್ಮನವರು.

    ವೆಂಟಸುಬ್ಬಾ ಜೋಯಿಸ್ ಅಪಾರ ಪಾಂಡಿತ್ಯವನ್ನು ಪಡೆದಿದ್ದ್ದ ಒಬ್ಬ ಕಾಲಜ್ಞಾನಿಯಾಗಿದ್ದರು. ಆರ್ಯುವೇದ ಪಂಡಿತರಾಗಿದ್ದರಲ್ಲದೆ, ಸಾಂಸ್ಕೃತಿಕ ಲೋಕದ ಬಗ್ಗೆ ಕಾಳಜಿ ಹೊಂದಿದ್ದರು. ಅಂದಿನ ಕಾಲದಲ್ಲೇ ಅನ್ನದಾಸೋಹ ಪ್ರಾರಂಭಿಸಿದ್ದು, ಅದು ಇಂದಿಗೂ ಮುಂದುವರಿದುಕೊಂಡು ಬರುತ್ತಿದೆ ಎಂದು ಹೇಳಿದರು.

    ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಹರಿಹರ ಪೀಠದ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನರಸಿಂಹ ಪೀಠಂನ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ `ಶ್ರೀ ಅನ್ನಪೂರ್ಣ ಪಾದಸೇವಾ ದುರಂಧರ’ ಪುಸ್ತಕವನ್ನು ಲೋಕಾರ್ಪಣೆ ಮಾಡಿ ಆಶೀರ್ವಚನ ನೀಡಿದರು.

    ಶ್ರೀ ಕ್ಷೇತ್ರದ ಧರ್ಮಕರ್ತರಾದ ಜಿ.ಭೀಮೇಶ್ವರ ಜೋಷಿ ಕುಟುಂಬ ಪಿತೃಋಣ ತೀರಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ನಮ್ಮಲ್ಲಿ ಐದು ಋಣಗಳಿವೆ. ಅದರಲ್ಲಿ ಮೊದಲನೆಯದೇ ಪಿತ್ರೃಋಣ, ವೆಂಕಟಸುಬ್ಬಾ ಜೋಯಿಸ್ ಅವರು ಐದನೆಯ ಧರ್ಮಕರ್ತರಾಗಿ ಶ್ರೀಕ್ಷೇತ್ರ ಎಂದರೆ ಏನು ಎಂಬುವುದನ್ನು ನಿರೂಪಿಸಿದ್ದಾರೆ. ಅಂದಿನ ಕಾಲದಲ್ಲಿ ಶಾಲಾ ಮಕ್ಕಳಿಗೆ ಅನ್ನದಾಸೋಹದಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡು ಪ್ರತಿಯೊಬ್ಬರಿಗೂ ಜೀವನ ಎಂದರೆ ಏನು ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ. ಅವರ ಆದರ್ಶ ಗುಣಗಳನ್ನು ಮುಂದಿನ ಪೀಳಿಗೆಗೆ ನೆನಪಿಸುವ ನಿಟ್ಟಿನಲ್ಲಿ ಜಿ.ಭೀಮೇಶ್ವರ ಜೋಷಿ ತಮ್ಮ ಅಜ್ಜ-ಅಜ್ಜಿಯ ಪುತ್ಥಳಿಗಳನ್ನು ಅನಾವರಣಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

    ಕ್ಷೇತ್ರದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಜ್ಜ ಜೋಯಿಸ್ ದಂಪತಿಗಳು ತಮ್ಮ ಸರ್ವಸ್ವವನ್ನು ಮುಡುಪಿಟ್ಟು, ಉನ್ನತ ಜೀವನ ನಡೆಸಿದ ದಂಪತಿಗಳ ಪುತ್ಥಳಿಯನ್ನು ಇಂದು ಅನಾವರಣ ಮಾಡುವ ಒಂದು ಅವಕಾಶ ತಮಗೆ ದೊರಕಿದೆ. ಅವರು ಹಾಕಿ ಕೊಟ್ಟ ಪಥದಲ್ಲಿ ಸಾಗುತ್ತಾ ಮುನ್ನಡೆಸಿಕೊಂಡು ಬರುತ್ತಿರುವುದಾಗಿ ತಿಳಿಸಿದರು. ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಸೇನೆಗಾಗಿ ಕ್ಷೇತ್ರದ ವತಿಯಿಂದ ೧೦ ಲಕ್ಷ ರೂ.ಗಳ ಚೆಕ್ಕನ್ನು ನೀಡಿದರು.

    ಗ್ರಾಮೀಣಾಭಿವೃದ್ಧಿ ಯೋಜನೆಯಡಿಯಲ್ಲಿ ಉಚಿತ ಹೆಂಚುಗಳ ವಿತರಣೆ, ಆನಂದ ಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಪತ್ರ ವಿತರಣೆ, ಕೃಷಿ ಸಮೃದ್ದಿ ಯೋಜನೆಯಲ್ಲಿ ಕೃಷಿ ಉಪಕರಣಗಳ ವಿತರಣೆ, ಮಹಿಳಾಭಿವೃದ್ದಿ ಯೋಜನೆಯಡಿಯಲ್ಲಿ ಹೊಲಿಗೆ ಯಂತ್ರಗಳ ವಿತರಣೆ ಮಾಡಲಾಯಿತು.

    ವೇದಿಕೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮೂಡಿಗೆರೆ ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಮಾಜಿ ಸಚಿವೆ ಮೋಟಮ್ಮ, ರಾಜಲಕ್ಷ್ಮೀ ಭೀ.ಜೋಷಿ, ಪತ್ರಕರ್ತ ವಿಶ್ವೇಶ್ವರ ಭಟ್ ಉಪಸ್ಥಿತರಿದ್ದರು. ರಾಮನಾರಾಯಣ್ ಜೋಷಿ ಸ್ವಾಗತಿಸಿ, ರಾಜಗೋಪಾಲ್ ಜೋಷಿ ವಂದಿಸಿದರು,

    Governor unveils bronze statue in Horanadu

  • ಭಾರತೀಯ ಸೇನೆ ಆಪರೇಷನ್ ಸಿಂಧೂರ – ಬಿಜೆಪಿ ಕಾರ್ಯಕರ್ತರಿಂದ ವಿಶೇಷ ಪೂಜೆ

    ಭಾರತೀಯ ಸೇನೆ ಆಪರೇಷನ್ ಸಿಂಧೂರ – ಬಿಜೆಪಿ ಕಾರ್ಯಕರ್ತರಿಂದ ವಿಶೇಷ ಪೂಜೆ

    ಚಿಕ್ಕಮಗಳೂರು: ಹಲ್ಗಾಮ್‌ನಲ್ಲಿ ೨೬ ಹಿಂದೂಗಳನ್ನು ಹತ್ಯೆಮಾಡಿದ ಭಯೋತ್ಪಾದಕರ ವಿರುದ್ಧ ಭಾರತೀಯ ಸೇನೆ ಆಪರೇಷನ್ ಸಿಂಧೂರ ಹೆಸರಿನಲ್ಲಿ ಪಾಕಿಸ್ಥಾನಕ್ಕೆ ನುಗ್ಗಿ ಯಶಸ್ವಿ ಕಾರ್ಯಾಚರಣೆ ನಡೆಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಇಂದು ನಗರದ ಬಸವನಹಳ್ಳಿ ಶಂಕರ ಮಠದ ಶ್ರೀ ಶಾರದಾದೇವಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

    ಇದೇ ವೇಳೆ ಪಾಕಿಸ್ಥಾನ ಹಾಗೂ ಭಯೋತ್ಪಾದಕರ ವಿರುದ್ಧ ಭಾರತ ಸರ್ಕಾರ ಮುಂದೆ ಕೈಗೊಳ್ಳುವ ಎಲ್ಲಾ ಕಾರ್ಯಾಚರಣೆಯಲ್ಲಿ ಯಶಸ್ಸು ಸಿಗಲಿ ಹಾಗೂ ಸೈನಿಕರಲ್ಲಿ ಆತ್ಮಸೈರ್ಯ ಹೆಚ್ಚಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಯಿತು. ಭಾರತೀಯ ಸೇನೆಗೆ ನಮ್ಮ ಬೆಂಬಲ ಎಂಬ ಬಿತ್ತಿಪತ್ರಗಳನ್ನು ಪ್ರದರ್ಶಿಸಿ ಘೋಷಣೆಗಳನ್ನು ಕೂಗಲಾಯಿತು.

    ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಈ ಸಂದರ್ಭದಲ್ಲಿ ಮಾತನಾಡಿ, ಭಯೋತ್ಪಾದಕರ ವಿರುದ್ಧ ಭಾರತ ಸರ್ಕಾರ, ನಮ್ಮ ಸೈನ್ಯ ತೆಗೆದುಕೊಂಡಿರುವ ಕ್ರಮಕ್ಕೆ ತಾಯಿ ಶಾರದೆ ಎಲ್ಲಾ ದೃಷ್ಟಿಯಿಂದಲೂ ಶಕ್ತಿಯನ್ನು ನೀಡಿ ಭಾರತವನ್ನ ಕಾಪಾಡಲಿ, ಭಾರತಾಂಭೆಯ ಸಿಂಧೂರವನ್ನು ಅಳಿಸಬೇಕೆಂದು ಭಯೋತ್ಪಾದನೆ ಮೂಲಕ ಷಡ್ಯಂತ್ರ ನಡೆಸುತ್ತಿರುವ ಪಾಪಿಗಳಿಗೆ ಶಿಕ್ಷೆಯಾಗಲಿ. ಸೈನ್ಯ ಮತ್ತು ರೈತರನ್ನು ಮರೆತ ದೇಶಕ್ಕೆ ಭವಿಷ್ಯವಿಲ್ಲ. ಸೈನಿಕರು ಪ್ರಾಣವನ್ನು ಕೊಟ್ಟು ದೇಶವನ್ನು ರಕ್ಷಣೆ ಮಾಡುತ್ತಾರೆ. ಅವರಿಗಾಗಿ ಕನಿಷ್ಠ ಪ್ರಾರ್ಥನೆ ಮಾಡುವ ಮೂಲಕ ನಾವು ನಿಮ್ಮ ಜೊತೆಗಿದ್ದೇವೆ ಎನ್ನುವ ಸಂದೇಶ ಕೊಡುವ ಸಲುವಾಗಿ ಇಂದು ತಾಯಿ ಶಾರದೆಗೆ ಪೂಜೆ, ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದರು.

    ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತುಹಾಕುವ ಸಲುವಾಗಿ ಸಂವಿಧಾನವನ್ನು ಒಪ್ಪುವ ಜನ, ರಾಷ್ಟ್ರ ಪ್ರೇಮ ಇರುವ ಪ್ರತಿಯೊಬ್ಬರು ಒಂದಾಗಿ, ಒಟ್ಟಾಗಿ ನಿಂತು ಭಾರತ ಸೈನ್ಯ, ಭಾರತ ಸರ್ಕಾರದ ಜೊತೆ ನಾವಿದ್ದೇವೆ. ಹೋರಾಟದಲ್ಲಿ ನಾವೂ ಸಹ ತನು, ಮನ, ಧನದೊಂದಿಗೆ ಸರ್ಕಾದ ಜೊತೆ ನಿಲ್ಲುತ್ತೇವೆ ಎನ್ನುವ ಸಂದೇಶ ಕೊಡುವ ಹಿನ್ನೆಲೆಯಲ್ಲಿ ಪೂಜೆ ಸಲ್ಲಿಸಲಾಗಿದೆ. ನವಕಾಲದ ರಾಕ್ಷಸರಂತೆ ಮಾನವೀಯತೆ ಇಲ್ಲದೆ ವರ್ತಿಸುತ್ತಿರುವ ಭಯೋತ್ಪಾದಕರನ್ನು ಮಟ್ಟಹಾಕಲು ನೆರವಾಗುವಂತೆ ತಾಯಿಯಲ್ಲಿ ಪ್ರಾರ್ಥಿಸಿದ್ದೇವೆ ಎಂದರು.

    ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಸೀತಾರಾಮಭರಣ್ಯ ಮಾತನಾಡಿ, ೧೩ ದಿನಗಳ ಹಿಂದೆ ಪಹಲ್ಗಾಮ್‌ನಲ್ಲಿ ೨೬ ಮಂದಿ ಅಮಾಯಕ ಪ್ರವಾಸಿಗರನ್ನ ಭಯೋತ್ಪಾದಕರು ಹತ್ಯೆ ಮಾಡಿದರು. ಅಂದಿನಿಂದ ಶತಕೋಟಿ ಭಾರತೀಯರು ಪ್ರತೀಕಾರಕ್ಕೆ ಕಾಯುತ್ತಿದ್ದರು. ಯಾವ ಭಯೋತ್ಪಾದಕರು ಗುಂಡಿಟ್ಟು ರಕ್ತವನ್ನು ಚೆಲ್ಲಿದ್ದರೋ ಅದೇ ಭಯೋತ್ಪಾದಕರ ರಕ್ತವನ್ನು ಇಂದು ನಮ್ಮ ಸೈನಿಕರು ಹರಿಸಿ ತಾಯಿ ಭಾರತಿಗೆ ಸಿಂಧೂರವನ್ನು ಹಚ್ಚುವ ಕೆಲಸ ಮಾಡಿದೆ. ಇದಕ್ಕಾಗಿ ಭಾರತೀಯ ಸೈನ್ಯ ಹಾಗೂ ಕೇಂದ್ರ ಸರ್ಕಾರವನ್ನ ನಾವು ಅಭಿನಂದಿಸುತ್ತೇವೆ ಎಂದರು.

    ಯಾವುದೇ ಕಾರಣಕ್ಕೆ ಸೈನಿಕರ ಆತ್ಮಸ್ಥೈರ್ಯವನ್ನು ಕುಂದಿಸುವ ಕೆಲಸವನ್ನು ಮಾಡಬಾರದು. ಒಂದೆಡೆ ದೇಶದ ನಾಗರೀಕರ ಮಾರಣ ಹೋಮ ನಡೆಯುತ್ತಿದ್ದರೂ ಕಾಂಗ್ರೆಸ್ ನಾವು ಶಾಂತಿ ಬಯಸುತ್ತೇವೆ ಎಂದು ಬೆಳಗ್ಗೆ ಒಂದು ಪೋಸ್ಟ್ ಹಾಕಿತ್ತು. ಓಟ್‌ಬ್ಯಾಂಕ್ ರಾಜಕಾರಣಕ್ಕಾಗಿ ಭಯೋತ್ಪಾದಕರ ಪರ ನಿಲ್ಲುವ ಕಾಂಗ್ರೆಸ್‌ನ ಆಂತರಿಕ ಭಯೋತ್ಪಾದನೆ ಅಥವಾ ಅರ್ಬನ್ ನಕ್ಸಲ್ ಮನೋಸ್ಥಿತಿಯನ್ನು ಆ ಪಕ್ಷ ಬದಲಿಸಿಕೊಳ್ಳಬೇಕು. ಅದರ ಹೊರತು ಇದೇ ಮನಸ್ಥಿತಿ ಮುಂದುವರಿಸಿದರೆ ಜನರು ಕಾಂಗ್ರೆಸ್‌ಗೆ ಬುದ್ಧಿ ಕಲಿಸುತ್ತಾರೆ ಎಂದರು.

    ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಮಾತನಾಡಿ, ಪಾಕಿಸ್ಥಾನದ ಉಗ್ರರ ನೆಲೆ ಮೇಲೆ ನಡೆಸಿದ ದಾಳಿಯಲ್ಲಿ ಭಾರತೀಯ ಸೈನಿಕರಿಗೆ ಜಯ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ್ದೇವೆ. ಜಮ್ಮು-ಕಾಶ್ಮೀರ ಶಾರದೆಯ ನಾಡು ಅಲ್ಲಿ ಉಗ್ರರು ಅಟ್ಟಹಾಸ ನಡೆಸಿ ನಮ್ಮ ಮಹಿಳೆಯರ ಸಿಂಧೂರ ತೆಗೆಯುವ ಕೆಲಸ ಮಾಡಿದ್ದರು. ಅದಕ್ಕೆ ಭಾರತ ಸರ್ಕಾರ ಆಪರೇಷನ್ ಸಿಂಧೂರ ಹೆಸರಿನಲ್ಲಿ ಉಗ್ರರನ್ನು ಹೊಡೆದುರುಳಿಸುವ ಕೆಲಸ ಮಾಡಿದೆ. ಮುಂದೆಯೂ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಇನ್ನಷ್ಟು ಶಕ್ತಿ ಸಿಗಲಿ, ದೇಶದ ಸೈನಿಕರು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇನ್ನಷ್ಟು ಧೈರ್ಯ, ಸ್ಥೈರ್ಯ, ಶಕ್ತಿ ಸಿಗಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿದ್ದೇವೆ ಎಂದು ಹೇಳಿದರು.

    ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ, ಕಾರ್ಯದರ್ಶಿ ಆಟೋ ಶಿವಣ್ಣ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷ ಜಸಿಂತ ಅನಿಲ್ ಕುಮಾರ್, ನಗರ ಬಿಜೆಪಿ ಅಧ್ಯಕ್ಷ ಪುಷ್ಪರಾಜ್, ಮುಂಖಂಡರುಗಳಾದ ಡಾ.ನರೇಂದ್ರ, ವೈ.ಜಿ.ಸುರೇಶ್, ಜೆ.ಡಿ.ಲೋಕೇಶ್, ಹಿರೇಮಗಳೂರು ಕೇಶವ ಮತ್ತಿತರರು ಭಾಗವಹಿಸಿದ್ದರು.

    Indian Army Operation Sindoor – Special puja by BJP workers

  • ವಾಸವಿ ಜಯಂತಿ ಪ್ರಯುಕ್ತ ವಾಸವಿ ಯುವಜನ ಸಂಘದಿಂದ ಸಮಾಜ ಸೇವೆ

    ವಾಸವಿ ಜಯಂತಿ ಪ್ರಯುಕ್ತ ವಾಸವಿ ಯುವಜನ ಸಂಘದಿಂದ ಸಮಾಜ ಸೇವೆ

    ಚಿಕ್ಕಮಗಳೂರು: -ವಾಸವಿ ಜಯಂತಿಯ ಅಂಗವಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿರುವುದಾಗಿ ವಾಸವಿ ಯುವಜನ ಸಂಘ ಹಾಗೂ ವಾಸವಿ ಕ್ಲಬ್ ಅಧ್ಯಕ್ಷ ದಿನೇಶ್‌ಗುಪ್ತ ತಿಳಿಸಿದರು.

    ಅವರು ಇಂದು ವಾಸವಿ ಜಯಂತಿ ಅಂಗವಾಗಿ ಆರ್ಯ ವೈಶ್ಯ ಬಂಧುಗಳು ಸೇರಿ ಕಳೆದ ೪೨ ವರ್ಷಗಳಿಂದ ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಮುಂದೆ ಮಜ್ಜಿಗೆ, ಕೋಸಂಬರಿ, ಹೊಸ ವಸ್ತ್ರ ವಿತರಣೆ ಮತ್ತು ರಕ್ತದಾನ ಶಿಬಿರವನ್ನು ಆಯೋಜಿಸಿಕೊಂಡು ಬರುತ್ತಿದ್ದೇವೆ ಎಂದು ಹೇಳಿದರು.

    ನಗರದ ಎಂಜಿ ರಸ್ತೆಯಲ್ಲಿರುವ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಇಂದಿನಿಂದ ೧ ವಾರಗಳ ಕಾಲ ಪೂಜೆ, ಹವನ ಇತ್ಯಾದಿ ಧಾರ್ಮಿಕ ಕಾರ್ಯಗಳು ಜರುಗಲಿವೆ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಮುಕ್ತಾಯಗೊಂಡ ಬಳಿಕ ನಗರದ ರಾಜಬೀದಿಯಲ್ಲಿ ಕನ್ನಿಕಾ ಪರಮೇಶ್ವರಿ ದೇವಿಯ ರಥೋತ್ಸವ ಉತ್ಸವ ಜರುಗಲಿದೆ. ನಂತರ ಪ್ರಸಾದ ವಿನಿಯೋಗ ಪ್ರಾಕಾರೋತ್ಸವ ನಡೆಯಲಿದೆ ಎಂದರು.

    ಈ ಸಂದರ್ಭದಲ್ಲಿ ಕ್ಲಬ್‌ನ ಸದಸ್ಯರುಗಳಾದ ಜಿ.ಎನ್. ರಾಮಕೃಷ್ಣ, ಎಂ.ಯು ದೀಪಕ್, ಮಹೇಶ್, ನಿತಿನ್, ಉಮೇಶ್, ಆನಂದ, ರಮೇಶ್, ಮದನ್, ರಘುನಂದನ್ ಮತ್ತಿತರರು ಭಾಗವಹಿಸಿದ್ದರು.

    Social service by Vasavi Youth Association on the occasion of Vasavi Jayanti

  • ಶಿಸ್ತು, ಸಂಯಮ, ದೇಶಭಕ್ತಿ ಭಾರತ ಸೇವಾದಳದ ಉದ್ದೇಶ

    ಶಿಸ್ತು, ಸಂಯಮ, ದೇಶಭಕ್ತಿ ಭಾರತ ಸೇವಾದಳದ ಉದ್ದೇಶ

    ಚಿಕ್ಕಮಗಳೂರು: ಸಮಾಜದಲ್ಲಿ ವ್ಯಕ್ತಿಯನ್ನು ದೇಶಭಕ್ತಿ, ಸೇವೆ, ಶಿಸ್ತು, ಸಂಯಮದಿಂದ ಪರಿವರ್ತಿಸುವಂತೆ ಮಾಡುವುದೇ ಭಾರತ ಸೇವಾದಳದ ಪ್ರಮುಖ ಉದ್ದೇಶ ಎಂದು ಮಾಜಿ ಶಾಸಕ ಹಾಗೂ ಸೇವಾದಳದ ರಾಜ್ಯ ಸಮಿತಿ ಸದಸ್ಯ ಐ.ಬಿ. ಶಂಕರ್ ಹೇಳಿದರು.

    ಅವರು ಇಂದು ಅಜಾದ್ ವೃತ್ತದ ಶಿಕ್ಷಕರ ಭವನದಲ್ಲಿ ಭಾರತ ಸೇವಾದಳದ ಜಿಲ್ಲಾ ಸಮಿತಿ ಏರ್ಪಡಿಸಿದ್ದ ಭಾರತ ಸೇವಾದಳದ ೭೫ನೇ ಅಮೃತ ಮಹೋತ್ಸವ ಹಾಗೂ ಪದ್ಮಭೂಷಣ ಡಾ. ನಾ.ಸು. ಹರ್ಡೀಕರ್ ರವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ೧೩೬ನೇ ನಾ.ಸು. ಹರ್ಡೀಕರ್‌ರವರ ಜನ್ಮದಿನ ಮತ್ತು ಭಾರತ ಸೇವಾದಳ ಸ್ಥಾಪನೆಯಾಗಿ ೭೫ ವರ್ಷಗಳು ತುಂಬಿರುವ ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ವೈಭವದಿಂದ ಆಚರಿಸಬೇಕಾಗಿತ್ತು. ಶಿಕ್ಷಕರ ಸಹಭಾಗಿತ್ವ ಇಲ್ಲದಿರುವುದು ವಿಷಾಧನೀಯ ಎಂದರು.

    ಸರ್ಕಾರದ ಆದೇಶದಂತೆ ಜಾತಿಗಣತಿ ಸಮೀಕ್ಷೆಯಲ್ಲಿ ಶಿಕ್ಷಕರು ಭಾಗಿಯಾಗಿರುವುದರಿಂದ ಈ ಕಾರ್ಯಕ್ರಮಕ್ಕೆ ನಿರೀಕ್ಷಿತ ಸಂಖ್ಯೆಯಲ್ಲಿ ಶಿಕ್ಷಕರು ಭಾಗವಹಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿ  ೧೯೫೦ ರಲ್ಲಿ ಭಾರತ ಸೇವಾದಳ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಬೇಲೂರಿನಲ್ಲಿ ನಾ.ಸು. ಹರ್ಡೀಕರ್‌ರವರ ಕಂಚಿನ ಪ್ರತಿಮೆ ಮಾಡಲಾಗಿದೆ ಇಂದು ನಾವೆಲ್ಲರು ತೆರಳಿ ಮಾಲಾರ್ಪಣೆ ಮಾಡಿದ್ದೇವೆ ಎಂದರು.

    ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ್ದ ಬೆಂಗಳೂರಿನ ಸೇವಾದಳ ನಿವೃತ್ತ ದಳಪತಿ ಚಂದ್ರಶೇಖರ್ ಮಾತನಾಡಿ, ಇಂದು ಸಮಾಜದಲ್ಲಿ ಎಲ್ಲೆಡೆ ಶಿಸ್ತು, ಸಂಯಮ, ದೇಶಭಕ್ತಿ ಇರುವುದಕ್ಕೆ ಪ್ರಮುಖ ಕಾರಣ ಭಾರತ ಸೇವಾದಳ ಕೊಟ್ಟ ಕೊಡುಗೆ, ನಾ.ಸು ಹರ್ಡೀಕರ್ ಹಾಕಿಕೊಟ್ಟ ಮಾರ್ಗ ಎಂದು ಬಣ್ಣಿಸಿದರು.

    ೧೮೮೯ ರ ಮೇ.೭ ರಂದು ಜನಿಸಿದ ನಾ.ಸು. ಹರ್ಡೀಕರ್‌ರವರು ತಮ್ಮನ್ನು ದೇಶ ಸೇವೆಗೆ ತೊಡಗಿಸಿಕೊಂಡು ಬೋಲೋ ಭಾರತ್ ಮಾತಾಕಿ ಜೈ ಎಂಬ ಘೋಷಣೆಯ ಮೂಲಕ ಬ್ರಿಟೀಷರ ವಿರುದ್ಧ ಹೋರಾಡಿದ ಮಹಾನ್ ಸ್ವಾತಂತ್ರ ಹೋರಾಟಗಾರ ಎಂದು ಹೇಳಿದರು.

    ದೇಶಾದ್ಯಂತ ಪ್ಲೇಗ್ ಮಹಾಮಾರಿ ರೋಗ ವ್ಯಾಪಕವಾಗಿ ಹರಡಿದ ಪರಿಣಾಮ ತಂದೆ-ತಾಯಿ ಸೇರಿದಂತೆ ಎಲ್ಲಾ ಬಂಧುಗಳನ್ನು ಕಳೆದುಕೊಂಡು ಹರ್ಡೀಕರ್ ಒಂಟಿಯಾಗಿ ಹುಬ್ಬಳ್ಳಿಯ ತನ್ನ ಮಾವನ ಮನೆಗೆ ಹೋದರು. ಅಲ್ಲಿಯೂ ಇರಲಾರದೆ ಹೊರಬಂದ ಅವರು ಬಡತನದಿಂದ ಬೇಸತ್ತಿದ್ದು, ಶಾಲೆಯ ಶುಲ್ಕ ಪಾವತಿಸಲು ತಾನು ದುಡಿದ ೧೨ ಪೈಸೆ ಹಣವನ್ನು ಮಾರ್ಗಮಧ್ಯೆ ಓರ್ವ ಮಹಿಳೆ ಅರೆಬೆತ್ತಲೆಯಲ್ಲಿ ಇರುವುದನ್ನು ಕಂಡು ಈ ಹಣವನ್ನು ಆಕೆಗೆ ನೀಡಿ ಹೋದ ಅವರೊಬ್ಬ ತ್ಯಾಗಜೀವಿ ಎಂದರು.

    ಪ್ರಾಸ್ತಾವಿಕವಾಗಿ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಲೋಕೇಶ್ವರಾಚಾರ್ಯ ಮಾತನಾಡಿದರು. ಭಾರತ ಸೇವಾದಳ ಕಾರ್ಯದರ್ಶಿ ಹಂಪಯ್ಯ ಮೊದಲಿಗೆ ಸ್ವಾಗತಿಸಿದರು.

    ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ನರೇಂದ್ರ ಪೈ, ಖಜಾಂಚಿ ಜಗದೀಶಾಚಾರ್, ವೀಣಾ ಶೆಟ್ಟಿ, ಜಸಂತಾ ಅನಿಲ್‌ಕುಮಾರ್, ಷೇರ್ ಅಲಿ, ಬಸವರಾಜ್, ಶಾಂತ್‌ಕುಮಾರ್, ಈರೇಗೌಡ, ಕಾಳಯ್ಯ, ಅಮೀದ್, ವೀರಭದ್ರಪ್ಪ, ಪ್ರಕಾಶ್ ಮೂರ್ತಿ, ಶ್ರೀನಿವಾಸ್, ಮಹೇಶ್ವರಪ್ಪ, ಜಗಧೀಶ್, ಚಂದ್ರಕಾಂತ್ ಮತ್ತಿತರರು ಉಪಸ್ಥಿತರಿದ್ದರು

    Dr. N.S. Hardikar’s birthday celebration

  • ಮೇ.8: ಹೊರನಾಡಿನಲ್ಲಿ ಕಂಚಿನ ಪುತ್ಥಳಿ ಲೋಕಾರ್ಪಣೆ

    ಮೇ.8: ಹೊರನಾಡಿನಲ್ಲಿ ಕಂಚಿನ ಪುತ್ಥಳಿ ಲೋಕಾರ್ಪಣೆ

    ಚಿಕ್ಕಮಗಳೂರು:  ಶ್ರೀ ಕ್ಷೇತ್ರ ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ದಿವಂಗತ ಡಿ.ಬಿ. ವೆಂಕಟಸುಬ್ಬಾ ಜೋಯಿಸ್ ಮತ್ತು ದಿ. ನರಸಮ್ಮ ವೆಂಕಟಸುಬ್ಬಾ ಜೋಯಿಸ್ ದಂಪತಿಗಳವರ ಕಂಚಿನ ಪುತ್ಥಳಿ ಅನಾವರಣ, ಶ್ರೀ ಅನ್ನಪೂರ್ಣ ಪಾದಸೇವಾ ಧುರಂದರ ಪುಸ್ತಕ ಲೋಕಾರ್ಪಣೆ ಹಾಗೂ ಗ್ರಾಮೀಣಾಭಿವೃದ್ಧಿ ಯೋಜನೆಯ ವಿವಿಧ ಸೌಲತ್ತುಗಳ ವಿತರಣಾ ಕಾರ್ಯಕ್ರಮ ಮೇ.೮ ರಂದು ಬೆಳಗ್ಗೆ ೧೧ ಗಂಟೆಗೆ ಏರ್ಪಡಿಸಲಾಗಿದೆ.

    ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಶ್ರೀ ಕ್ಷೇತ್ರ ಹೊರನಾಡು ಟ್ರಸ್ಟಿ ಗಿರಿಜಾಶಂಕರ ಜೋಶಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರದ ಧರ್ಮಕರ್ತ ಜಿ. ಭೀಮೇಶ್ವರ ಜೋಶಿ ವಹಿಸುವರು. ಪುತ್ಥಳಿಯನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಅನಾವರಣಗೊಳಿಸುವರು. ಹರಿಹರ ಪೀಠದ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು ದಿವ್ಯಸಾನಿಧ್ಯ ವಹಿಸುವರು. ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೆಕಾವತ್ ಅವರು ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮ ಉದ್ಘಾಟನೆ ಮತ್ತು ಅರ್ಚಕ ನಿವಾಸದ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆಯ ನಾಮಫಲಕವನ್ನು ಅನಾವರಣಗೊಳಿಸಲಿದ್ದಾರೆಂದು ಹೇಳಿದರು.

    ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್. ಶಂಕರ್, ದಿ. ಡಿ.ಬಿ ವೆಂಕಟಸುಬ್ಬಾರವರಿಗೆ ನುಡಿನಮನ ಸಲ್ಲಿಸುವರು. ಕೇಂದ್ರ ಬೃಹತ್ ಕೈಗಾರಿಕಾ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಶ್ರೀ ಅನ್ನಪೂರ್ಣ ಪಾದಸೇವಾ ಧುರಂದರ ಪುಸ್ತಕ ಲೋಕಾರ್ಪಣೆ ಮಾಡುವರು. ಗ್ರಾಮೀಣಾಭಿವೃದ್ಧಿ ಯೋಜನೆಯ ವಿವಿಧ ಸೌಲತ್ತುಗಳ ವಿತರಣಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕಿ ನಯನ ಮೋಟಮ್ಮ, ವಿಶ್ವವಾಣಿ ಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.

    ಈ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಭಾಗವಹಿಸುತ್ತಿರುವುದರಿಂದ ಝಡ್‌ಪ್ಲಸ್ ಕೆಟಗರಿ ಸೆಕ್ಯೂರಿಟಿ ವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಕೈಗೊಂಡಿದ್ದು, ಈ ಹಿನ್ನೆಲೆಯಲ್ಲಿ ತಮ್ಮ ಆಹ್ವಾನವನ್ನು ಗೌರವಿಸಿ ಬರುವ ಎಲ್ಲಾ ಭಕ್ತರು ಬೆಳಗ್ಗೆ ೯ ಗಂಟೆಯ ಒಳಗೆ ದೇವಸ್ಥಾನದ ಮುಂಭಾಗದಲ್ಲಿರುವ ಆವರಣದ ಒಳಗೆ ಬಂದು ಸೇರುವಂತೆ ಮನವಿ ಮಾಡಿದ ಅವರು, ಭಾಗವಹಿಸುವ ಆಹ್ವಾನಿತರಿಗೆ ಬ್ಯಾಡ್ಜ್, ಪಾಸ್ ಮತ್ತು ವಾಹನ ಪಾಸ್‌ಗಳನ್ನು ಶ್ರೀ ಕ್ಷೇತ್ರದ ಪ್ರವೇಶ ಧ್ವಾರದಲ್ಲಿ ನೊಂದಾವಣೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.

    ಅಂದು ಬೆಳಗ್ಗೆ ೯.೩೦ ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ದೇವರ ದರ್ಶನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಮಧ್ಯಾಹ್ನದ ನಂತರ ಎಂದಿನಂತೆ ದೇವರ ದರ್ಶನ ಮತ್ತು ಪ್ರಸಾದ ಮುಂದುವರೆಯುತ್ತದೆ. ಈ ಬದಲಾವಣೆಗೆ ಕ್ಷೇತ್ರಕ್ಕೆ ಬರುವ ಭಕ್ತರು ಸಹಕರಿಸುವಂತೆ ವಿನಂತಿಸಿದ ಅವರು, ಹೆಚ್ಚಿನ ಮಾಹಿತಿಗೆ ೮೨೧೭೬೨೯೯೭೯ ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಿದರು.

    May 8: Bronze statue unveiled in Horanadu

  • ನಗರಸಭೆ ಮಳಿಗೆ ಹರಾಜು-ಸ್ವಂತ ಜೀವನ ನಿರ್ವಹಣೆಗೆ ಬಳಸಬೇಕು

    ನಗರಸಭೆ ಮಳಿಗೆ ಹರಾಜು-ಸ್ವಂತ ಜೀವನ ನಿರ್ವಹಣೆಗೆ ಬಳಸಬೇಕು

    ಚಿಕ್ಕಮಗಳೂರು: ನಗರಸಭೆ ವತಿಯಿಂದ ನಗರದಲ್ಲಿ ನಿರ್ಮಿಸಲಾಗಿರುವ ಮಳಿಗೆಗಳನ್ನು ಸಾರ್ವಜನಿಕರು ಹರಾಜು ಪ್ರಕ್ರಿಯೆ ಮೂಲಕ ಪಡೆದುಕೊಂಡಿದ್ದು, ಮಳಿಗೆಯನ್ನು ಒಳಬಾಡಿಗೆಗೆ ನೀಡದೇ ಸರ್ಕಾರದ ಆದೇಶದಂತೆ ಸ್ವಂತ ಜೀವನ ನಿರ್ವಹಣೆಗೆ ಮಾತ್ರ ಬಳಸಬೇಕೆಂದು ನಗರಸಭಾಧ್ಯಕ್ಷೆ ಸುಜಾತ ಶಿವಕುಮಾರ್ ತಿಳಿಸಿದರು.

    ಅವರು ಇಂದು ಕೆ.ಎಂ ರಸ್ತೆ ಕತ್ರಿಮಾರಮ್ಮ ದೇವಸ್ಥಾನದ ಹತ್ತಿರ ಹೊಸದಾಗಿ ನಿರ್ಮಿಸಿರುವ ಮಳಿಗೆಗಳು ಮತ್ತು ಡಾ. ಬಿ.ಆರ್. ರಸ್ತೆ ಹಾಗೂ ಕೆ.ಎಂ ರಸ್ತೆಯಲ್ಲಿರುವ ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ಮಾತನಾಡಿದರು.

    ಇಂದು ಹರಾಜಿನಲ್ಲಿ ಪಡೆದುಕೊಂಡಿರುವುದನ್ನು ಹೊರತುಪಡಿಸಿ ಉಳಿದ ಮಳಿಗೆಗಳನ್ನು ಮುಂದಿನ ದಿನಗಳಲ್ಲಿ ಹರಾಜು ಮಾಡಲಾಗುವುದು. ನಾಳೆ (ಮೇ.೭) ರಂದು ಬೀದಿಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ನಗರಸಭೆ ಆವರಣದಲ್ಲಿ ನಿರ್ಮಿಸಿರುವ ಫುಡ್‌ಕೋರ್ಟ್‌ನ ಆಹಾರ ಮಳಿಗೆಗಳನ್ನು ಹರಾಜಿನಲ್ಲಿ ಭಾಗವಹಿಸಿ ಪಡೆಯಬಹುದಾಗಿದೆ ಎಂದರು.

    ಹಾಲಿ ೪೮ ಜನ ಬೀದಿಬದಿ ವ್ಯಾಪಾರಿಗಳ ಪಟ್ಟಿ ಮಾಡಲಾಗಿದ್ದು, ಅವರು ಹರಾಜಿನಲ್ಲಿ ಭಾಗವಹಿಸದಿದ್ದರೆ ಸಾರ್ವಜನಿಕರಿಗೆ ಅವಕಾಶ ನೀಡಲಾಗುವುದು. ಈ ಸಂಬಂಧ ಜಿಲ್ಲಾಧಿಕಾರಿಗಳು, ತಾವು ಪೌರಾಯುಕ್ತರು ಸಭೆ ನಡೆಸಿ ಚರ್ಚಿಸಿ ನಿರ್ಧರಿಸಿದ್ದೇವೆ ಎಂದು ಹೇಳಿದರು.

    ಆಸಕ್ತರು ಬಂದು ಮಳಿಗೆ ಹರಾಜಿನಲ್ಲಿ ಭಾಗವಹಿಸಿ ಆಹಾರ ಮಳಿಗೆ ಪಡೆದುಕೊಂಡು ತಮ್ಮ ಉತ್ತಮ ಜೀವನ ನಿರ್ವಹಣೆಗೆ ಮುಂದಾಗಬೇಕೆಂದು ಸಲಹೆ ನೀಡಿದರು.

    ಮಳಿಗೆಗಳ ಬಾಡಿಗೆಯನ್ನು ಸರಿಯಾಗಿ ಪಾವತಿಸದೇ ಇರುವವರು ನಗರಸಭೆಗೆ ಮುಂಗಡವಾಗಿ ಪಾವತಿಸಿರುವ ಠೇವಣಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲು ತೀರ್ಮಾನಿಸಿದ್ದು, ಅಂತಹವರ ಮಳಿಗೆಯನ್ನು ಮರು ಹರಾಜು ಮಾಡಿ ಅರ್ಹರಿಗೆ ಕೊಡುತ್ತೇವೆ ಎಂದು ತಿಳಿಸಿದರು.

    ಪೌರಾಯುಕ್ತ ಬಿ.ಸಿ. ಬಸವರಾಜು ಮಾತನಾಡಿ, ವಿವಿಧ ಬಡಾವಣೆಗಳ ನಗರಸಭೆ ಮಳಿಗೆಗಳ ಹರಾಜು ಪ್ರಕ್ರಿಯೆ ಇಂದು ನಡೆಸಲಾಗಿದ್ದು, ಕೆ.ಎಂ. ರಸ್ತೆ ಕತ್ರಿಮಾರಮ್ಮ ದೇವಸ್ಥಾನದ ಬಳಿ ನಿರ್ಮಿಸಿರುವ ೩೨ ಮಳಿಗೆಗಳ ಪೈಕಿ ೩ ಮಳಿಗೆಗಳು ಮಾತ್ರ ಹರಾಜಿನಲ್ಲಿ ತೆಗೆದುಕೊಂಡಿದ್ದು, ಇನ್ನೂ ೨೯ ಮಳಿಗೆಗಳು ಇವೆ. ಸಾರ್ವಜನಿಕರು ಆಸಕ್ತಿ ತೋರುತ್ತಿಲ್ಲ ಎಂದರು.

    ನಿರೀಕ್ಷೆಗೂ ಮೀರಿ ಹರಾಜಿನಲ್ಲಿ ಬಿಡ್ ಮಾಡಲಾಗಿದ್ದು, ಆದರೆ ಪ್ರತೀ ತಿಂಗಳು ಬಾಡಿಗೆ ಸರಿಯಾಗಿ ಪಾವತಿಸಬೇಕು, ಅವಶ್ಯಕತೆ ಇರುವ ವ್ಯಾಪಾರಿಗಳು ಮಳಿಗೆ ಪಡೆದರೆ ಒಳ್ಳೆಯದು. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಳಿಗೆಯನ್ನು ಪಡೆಯುವಂತೆ ಮನವಿ ಮಾಡಿದರು.

    ನಾಳೆ (ಮೇ.೭) ರಂದು ಆಜಾದ್ ವೃತ್ತದ ಜಿಮ್ ಕಟ್ಟಡದಲ್ಲಿ ನಿರ್ಮಿಸಿರುವ ಮಳಿಗೆಗಳನ್ನು ಹರಾಜು ಮಾಡಲಾಗುವುದು. ಬೇಲೂರು ರಸ್ತೆ ಬೀದಿಬದಿ ವ್ಯಾಪಾರಸ್ತರಿಗೆ ಅನುಕೂಲವಾಗುವಂತೆ ಫುಡ್‌ಕೋರ್ಟ್‌ನಲ್ಲಿ ಆಹಾರ ಮಳಿಗೆ ನಿರ್ಮಿಸಿದ್ದು, ಈ ಮಳಿಗೆಗಳ ಹರಾಜು ಸಹ ಅಂದು ನಡೆಯಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಿದರು.

    ಫುಡ್‌ಕೋರ್ಟ್‌ನಲ್ಲಿ ಮಳಿಗೆ ಪಡೆದವರು ಒಳ ಬಾಡಿಗೆ ನೀಡಿರುವುದು ಕಂಡುಬಂದರೆ ಅಂತಹವರ ವಿರುದ್ಧ ಕ್ರಮ ಕೈಗೊಂಡು ನಗರಸಭೆ ನೀಡಿರುವ ಪರವಾನಗಿಯನ್ನು ರದ್ದುಪಡಿಸಿ ಮಳಿಗೆಯಿಂದ ಹೊರಹಾಕುವುದಾಗಿ ಎಚ್ಚರಿಸಿದರು.

    Municipal store auction – should be used for own living expenses

  • ವಿದ್ಯುತ್ ಲೈನ್ ವಿತರಣಾ ಕೇಂದ್ರದ ಯೋಜನೆ ವಿರೋಧ

    ವಿದ್ಯುತ್ ಲೈನ್ ವಿತರಣಾ ಕೇಂದ್ರದ ಯೋಜನೆ ವಿರೋಧ

    ಚಿಕ್ಕಮಗಳೂರು: ಆಲ್ದೂರಿನಿಂದ ಮಲ್ಲಂದೂರುವರೆಗೆ ಕೆಪಿಟಿಸಿಎಲ್‌ನಿಂದ ನಿರ್ಮಾಣಗೊಳ್ಳುತ್ತಿರುವ ವಿದ್ಯುತ್ ಲೈನ್ ಅಳವಡಿಕೆ ಮತ್ತು ವಿತರಣಾ ಕೇಂದ್ರದ ಯೋಜನೆಯನ್ನು ವಿರೋಧಿಸಿ ಆಣೂರು ಬೆಳೆಗಾರರ ಸಂಘದ ಆಶ್ರಯದಲ್ಲಿ ನಡೆದ ಸಭೆ ನಿರ್ಣಯ ಕೈಗೊಂಡಿದ್ದು, ತಕ್ಷಣ ಕಾಮಗಾರಿಯನ್ನು ಸ್ಥಗಿತಗೊಳಸಬೇಕು ಎಂದು ಆಗ್ರಹಿಸಿದೆ.

    ಇಂದು ಆಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಭವನದಲ್ಲಿ ಸಭೆಸೇರಿದ ಬೆಳೆಗಾರರು ಯೋಜನೆಯಿಂದಾಗುವ ಪರಿಸರ ಹಾನಿ ಹಾಗೂ ರೈತರು ಬೆಳೆಗಾರರಿಗಾಗಿರುವ ಅನ್ಯಾಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸಿ ಕಾಮಗಾರಿ ಸ್ಥಗಿತಗೊಳಿಸಿ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು.

    ಈ ವೇಳೆ ವಸ್ತಾರೆ ಹೋಬಳಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಟಿ.ಡಿ.ಮಲ್ಲೇಶ್ ಮಾತನಾಡಿ, ಆಲ್ದೂರಿನಿಂದ ಮಲ್ಲಂದೂರುವರೆಗೆ ಕೆಪಿಟಿಸಿಎಲ್ ನಿರ್ಮಾಣಗೊಳ್ಳುತ್ತಿರುವ ವಿದ್ಯುತ್‌ಲೈನ್ ಅಳವಡಿಕೆಯಿಂದಾಗುವ ತೊಂದರೆಗಳ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳ ಸಭೆಯಲ್ಲಿ ತಿಳಿಸಿದ್ದೇವೆ. ಈ ಯೋಜನೆಯನ್ನು ನಾವು ವಿರೋಧಿಸುತ್ತೇವೆ ಎಂಬುದನ್ನು ತಿಳಿಸಿದ್ದೇವೆ ಎಂದರು.

    ಸುಮಾರು ೧೩ ರಿಂದ ೧೪ ಕಿ.ಮೀ.ನಷ್ಟು ಲೈನ್ ಅಳವಡಿಸಬೇಕಾಗುತ್ತದೆ. ಬಹಳಷ್ಟು ಜನರ ಜಮೀನು ಹೋಗುತ್ತದೆ. ಲಕ್ಷಾಂತರ ಮರಗಳು ನಾಶವಾಗುತ್ತವೆ. ಅಡಿಕೆ ತೋಟಗಳಿಗೆ ಹಾನಿಯಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ಅರಣ್ಯಕ್ಕೆ ಹಾನಿಯುಂಟಾಗುತ್ತದೆ. ಇದಾವುದನ್ನೂ ಸರಿಯಾಗಿ ಸಮೀಕ್ಷೆ ಮಾಡಿಲ್ಲ. ಇದರ ಗುತ್ತಿಗೆದಾರರು ಯಾರೆಂದು ನಮಗೆ ಈವರೆಗೆ ಗೊತ್ತಿಲ್ಲ. ರೌಡಿಗಳ ರೀತಿ ದೌರ್ಜನ್ಯ ಮಾಡಿ ಕಾಮಗಾರಿ ನಡೆಸುವುದಕ್ಕೆ ನಾವು ಒಪ್ಪುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಈ ಯೋಜನೆಯನ್ನು ಸ್ಥಗಿತಗೊಳಿಸಿ ಚಿಕ್ಕಮಗಳೂರಿನಿಂದ ಅಳವಡಿಸಲಾಗುತ್ತಿರುವ ಎಕ್ಸ್‌ಪ್ರೆಸ್‌ಲೈನ್ ಮೂಲಕವೇ ವಿದ್ಯುತ್ ಪೂರೈಸಲು ಸಲಹೆ ಮಾಡಿದ್ದೆವಾದರೂ ಪರಿಗಣಿಸಿಲ್ಲ ಎಂದು ಹೇಳಿದರು.

    ಆಲ್ದೂರು-ಮಲ್ಲಂದೂರು ಮಾರ್ಗದಲ್ಲಿ ಮುತ್ತೋಡಿ ವನ್ಯಜೀವಿ ಅರಣ್ಯ ಬರುತ್ತದೆ ಅಲ್ಲಿ ಅರಣ್ಯ ಇಲಾಖೆ ಅನುಮತಿ ಪಡೆದಿಲ್ಲ. ಜಕ್ಕನಹಳ್ಳಿ ವರೆಗೆ ಕ್ಲಿಯರೆನ್ಸ್ ಇದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಇದರ ಜೊತೆಗೆ ಬಫರ್‌ಝೋನ್ ಬರುತ್ತದೆ. ಅಲ್ಲದೆ ಕಾಫಿಬೋರ್ಡ್, ತೋಟಗಾರಿಕೆ ಇಲಾಖೆ ಯಾವುದರಿಂದಲೂ ಕ್ಲಿಯರೆನ್ಸ್ ಪಡೆದಿಲ್ಲ ಇದರ ಜೊತೆಗೆ ಬೆಳೆಗಾರರು, ನಿವಾಸಿಗಳ ವಿರೋಧವೂ ಇದೆ. ಕೆಲವು ಬೆಳೆಗಾರರು ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ಇಷ್ಟಾದರೂ ದಬ್ಬಾಳಿಕೆ ಮಾಡಿ, ಕೆಲವು ಕಡೆ ಗುಂಡಿ ತೆಗೆದು ಗೂಂಡಾಗಿರಿ ಮಾಡುವ ರೀತಿ ವರ್ತಿಸುತ್ತಿರುವುದನ್ನು ಖಂಡಿಸಿದರು.

    ಈ ಬಾರಿ ಉತ್ತಮ ಮಳೆ ಬಂದಿದೆ. ಕಾಫಿಗೆ ಉತ್ತಮ ಬೆಲೆ ಇದೆ. ಇಂತಹ ಸಂದರ್ಭದಲ್ಲಿ ಎಷ್ಟು ಜಮೀನು ಹೋಗುತ್ತದೆ. ಅದಕ್ಕೆ ಎಷ್ಟು ಬೆಲೆ ನಿಗಧಿಪಡಿಸಬೇಕು ಎನ್ನುವ ಯಾವ ಮಾಹಿತಿ ಇಲ್ಲದೆ ಕಾಮಗಾರಿ ಮಾಡಲಾಗುತ್ತಿದೆ. ಕೂಡಲೇ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಮತ್ತು ಜಿಲ್ಲಾಧಿಕಾರಿಗಳು ಗಮನಹರಿಸಿ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.

    ನಮ್ಮ ಮೇಲೆ ದೌರ್ಜನ್ಯ ಮಾಡಿ ಯೋಜನೆ ಮಾಡಲು ಮುಂದಾದರೆ ನಮ್ಮ ಪ್ರಾಣ ಹೋದರೂ ಅವಕಾಶ ಕೊಡುವುದಿಲ್ಲ. ಪವರ್‌ಲೈನ್ ಮಾಡಲು ಸರ್ವೇ ಮಾಡಿರುವುದೇ ಸರಿಯಲ್ಲ. ಈ ಭಾಗದಲ್ಲಿ ತರಲು ನಮ್ಮ ವಿರೋಧವಿದೆ. ಚಿಕ್ಕಮಗಳೂರಿನಿಂದ ಲೈನ್ ತರಲಿ, ಇಲ್ಲವಾದರೆ ಭೂಮಿಯೊಳಗೆ ಕೇಬಲ್ ಹಾಕಿ ತರಲಿ ಯೋಜನೆಗೆ ನಾವು ವಿರೋಧಿಗಳಲ್ಲ ಎಂದು ಹೇಳಿದರು.

    ಆಣೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಕೆ.ಪಿರಾಜೇಂದ್ರ ಮಾತನಾಡಿ, ಈ ಯೋಜನೆ ಕೈಬಿಡಬೇಕೆಂದು ಒತ್ತಾಯಿಸಿ ಸಾಕಷ್ಟು ಪ್ರತಿಭಟನೆ ನಡೆಸಿದ್ದೆವು. ಕೆಪಿಟಿಸಿಎಲ್ ಆಗಲಿ, ಜಿಲ್ಲಾಡಳಿತವಾಗಲಿ ಸೂಕ್ತ ರೀತಿ ಸ್ಪಂದಿಸದ ಹಿನ್ನೆಲೆಯಲ್ಲಿ ೯ ಮಂದಿ ಬೆಳೆಗಾರರು ಹೈಕೋರ್ಟ್‌ನಿಂದ ಯಥಾಸ್ಥಿತಿ ಆದೇಶ ತಂದಿದ್ದೇವೆ. ಮತ್ತೆ ಅಹವಾಲು ಆಲಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಆದೇಶಿಸಿದೆ ಎಂದು ತಿಳಿಸಿದರು.

    ಭೂಮಿಯೊಳಗೆ ಕೇಬಲ್ ಕೊಂಡೊಯ್ಯುವುದು ಹಾಗೂ ಎಕ್ಸ್‌ಪ್ರೆಸ್ ಲೈನನ್ನು ಅಭಿವೃದ್ಧಿಪಡಿಸಬಾರದೇಕೆ ಎಂದು ನ್ಯಾಯಾಲಯ ಮೌಖಿಕವಾಗಿ ಪ್ರಶ್ನಿಸಿರುವುದರಿಂದ ಜಿಲ್ಲಾಧಿಕಾರಿಗಳು ಆಲ್ದೂರು-ಮಲ್ಲಂದೂರು ವಿದ್ಯುತ್ ಲೈನ್‌ಅನ್ನು ಕೈಬಿಟ್ಟು ಭೂಮಿಯೊಳಗಿನಿಂದ ಅಥವಾ ಹಾಲಿ ಇರುವ ಎಕ್ಸ್‌ಪ್ರೆಸ್ ಲೈನ್‌ನನ್ನೇ ಅಭಿವೃದ್ಧಿಪಡಿಸಿ ಸಂಪರ್ಕ ಕೊಡಬೇಕು ಎಂದು ಒತ್ತಾಯಿಸುತ್ತೇವೆ ಎಂದರು.

    ಗ್ರಾ.ಪಂ.ಮಾಜಿ ಸದಸ್ಯ ತಿಮ್ಮಯ್ಯ ಮಾತನಾಡಿ, ನನಗಿರುವುದು ಅರ್ಧ ಎಕರೆ ಜಮೀನು ಮಾತ್ರ ಅದು ಈಗ ಆಲ್ದೂರು-ಮಲ್ಲಂದೂರು ವಿದ್ಯುತ್‌ಲೈನ್ ಯೋಜನೆಗೆ ಹೋಗುತ್ತಿದೆ ಎಂದು ಮಾಹಿತಿ ಇದೆ. ಈ ಬಗ್ಗೆ ಸಾಕಷ್ಟು ವಿರೋಧಿಸಿ ಜಿಲ್ಲಾಡಳಿಕ್ಕೆ ಮನವಿ ಮಾಡಿದ್ದೇವೆ. ಹೋರಾಟ ಮಾಡಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಯೋಜನೆಯಿಂದ ಪರಿಸರಕ್ಕೆ ಸಾಕಷ್ಟು ಹಾನಿ ಸಂಭವಿಸುವುದರಿಂದ ಪರಿಸರ ವಾದಿಗಳು ಇದರ ವಿರುದ್ಧ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.

    ಈ ಸಂದರ್ಭದಲ್ಲಿ ಆಣೂರು ನಟರಾಜ್, ಕಟ್ರುಮನೆ ಮಂಜುನಾಥ್, ಚಂದನ್ ಆಶೋಕ್, ಸಾರ್ಥಕ್ ಮಾಗರಹಳ್ಳಿ, ಮಲ್ಲಂದೂರು ಪುಟ್ಟೇಗೌಡ, ತಳಿಹಳ್ಳ ಮಲ್ಲೇಶ್, ಪೂರ್ಣೇಶ್ ಕುಡುವಳ್ಳಿ, ಬ್ಯಾರವಳ್ಳಿ ಲಕ್ಷ್ಮಣ್, ಕಟ್ರುಮನೆ ರಘುನಾಥ್, ನಾರಾಯಣ್, ರಾಷ್ಟ್ರಿತ್,

    Opposition to power line distribution center project