Category: ಚಿಕ್ಕಮಗಳೂರು ನಗರ

  • ಕೇಂದ್ರ ಸರ್ಕಾರ ಜಾತಿ ಜನಗಣತಿ ನಡೆಸುವ ಕಾರ್ಯ ಕ್ರಾಂತಿಕಾರಿ

    ಕೇಂದ್ರ ಸರ್ಕಾರ ಜಾತಿ ಜನಗಣತಿ ನಡೆಸುವ ಕಾರ್ಯ ಕ್ರಾಂತಿಕಾರಿ

    ಚಿಕ್ಕಮಗಳೂರು: ಸರ್ವರಿಗೂ ಸಾಮಾಜಿಕ ನ್ಯಾಯ, ಸಮಬಾಳು, ಸಮಪಾಲಿಗೆ ಅವಕಾಶ ಕಲ್ಪಿಸಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾತಿ ಜನಗಣತಿ ನಡೆಸುವ ಕ್ರಾಂತಿಕಾರಿ ಕಾರ್ಯಕ್ಕೆ ಮುಂದಾಗಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸುತ್ತೇವೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.

    ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡೆಯಬೇಕಿರುವ ಜಾತಿ ಜನಗಣತಿಯು ೧೯೩೧ ರ ನಂತರ ೨೦೧೧ ರವರೆಗೆ ನಡೆದೇ ಇರಲಿಲ್ಲ. ೫೦ ವರ್ಷಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ ಸರ್ಕಾರವು ಈ ಕಾರ್ಯಕ್ಕೆ ಮುಂದಾಗಲಿಲ್ಲ. ಇದೀಗ ಪರಿಶಿಷ್ಠ ಜಾತಿ ಪರಿಶಿಷ್ಠ ಪಂಗಡ ಹಾಗೂ ಸಮುದಾಯದಲ್ಲಿರುವ ಉಪ ಜಾತಿಗಳು ಹಿಂದುಳಿದ ವರ್ಗದಲ್ಲಿರುವ ಸಮುದಾಯಳು, ಸಣ್ಣ ಸಣ್ಣ ಸಮುದಾಯಗಳಿಗೆ ಧ್ವನಿಯಾಗಬೇಕು ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ ಜಾತಿ ಜನಗಣತಿ ನಡೆಸಲು ಮುಂದಾಗಿದೆ. ಇದೊಂದು ಕ್ರಾಂತಿಕಾರಿ ಕಾರ್ಯವಾಗಿದೆ ಎಂದರು.

    ಸಮಾಜದ ಮುಖ್ಯವಾಹಿನಿಗೆ ಬಾರದಿರುವ ಸಣ್ಣ ಸಣ್ಣ ಸಮುದಾಯಗಳನ್ನು ಗುರುತಿಸಿ ಅವರ ಬೇಡಿಕೆಗಳೇನು? ಅವರ ಸಂಖ್ಯೆ ಎಷ್ಟಿದೆ ಎನ್ನುವುದನ್ನು ನಿಖರವಾಗಿ ಅರ್ಥಮಾಡಿಕೊಳ್ಳಲು ಈ ಜಾತಿ ಜನಗಣತಿಯಿಂದ ಅನುಕೂಲವಾಗಲಿದೆ ಎಂದು ಹೇಳಿದರು.

    ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಜಾತಿ ಜನಗಣತಿ ನಿರ್ಧಾರವನ್ನು ಇಡೀ ಭಾರತ ದೇಶದ ಜನರು ಒಕ್ಕೊರಲಿನಿಂದ ಸ್ವಾಗತಿಸುವ ವಾತಾವರಣ ಕಾಣುತ್ತಿದ್ದೇವೆ. ಬಹಳ ಬೇಗನೇ ಜಾತಿ ಜನಗಣತಿ ಕಾರ್ಯ ಪೂರ್ಣಗೊಳಿಸುವುದು ಮತ್ತು ನಿಖರವಾದ ಮಾಹಿತಿಗಳು ದತ್ತಾಂಶಗಳೇನು ಎನ್ನುವುದು ಜನ ಸಾಮಾನ್ಯರಿಗೆ ಅರ್ಥಮಾಡಿಸುವ ಮೂಲಕ ಸಮಾಜದಲ್ಲಿರುವ ಕೊನೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಕೊಡಿಸಬೇಕು ಎನ್ನುವುದು ಯೋಜನೆಯ ಒಟ್ಟು ಉದ್ದೇಶ ಎಂದು ಹೇಳಿದರು.

    ಇದೇ ವೇಳೆ ರಾಜ್ಯದ ಸಿದ್ದರಾಮಯ್ಯ ಸರ್ಕಾರದ ಜನಗಣತಿಯಲ್ಲಿ ೧೮೦ ಕೋಟಿ ರೂ. ಖರ್ಚು ಮಾಡಿ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ವರದಿ ನೀಡಿದೆ. ಇದರಲ್ಲಿ ಜಾತಿಯನ್ನು ಉಲ್ಲೇಖಿಸಿರುವುದು ಬಿಟ್ಟರೆ ಅದೇ ಜಾತಿ ಗಣತಿ ಅಲ್ಲ. ಅದನ್ನೇ ಹತ್ತು ವರ್ಷಗಳಿಂದ ಹಿಡಿದುಕೊಂಡು ಅಧಿಕಾರಕ್ಕೆ ಸಂಚಕಾರ ಬರುತ್ತದೆ ಎನ್ನಿಸಿದಾಗಲೆಲ್ಲಾ ಈಗ ಬಿಡುತ್ತೇನೆ, ಈಗ ಬಿಡುತ್ತೇನೆ ಎಂದು ಹೇಳುತ್ತಿರುವುದು ಬಿಟ್ಟರೆ ಈ ಕ್ಷಣದ ವರೆಗೆ ಅದಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಣಯವನ್ನೂ ಸಿದ್ದರಾಮಯ್ಯ ಸರ್ಕಾರ ತೆಗೆದುಕೊಂಡಿಲ್ಲ. ಕೆಲವು ಸಮುದಾಯ ತಮ್ಮದೇ ಆದ ಸಮಸ್ಯೆ ಹೇಳಿಕೊಂಡಿವೆ ಅವರಿಗೂ ಉತ್ತರ ಕೊಡುವ ಕೆಲಸ ಆಗಿಲ್ಲ ಎಂದರು.

    ಈ ಎಲ್ಲಾ ಹಿನ್ನೆಲೆಯಲ್ಲಿ ಕರ್ನಾಟಕದ ಜಾತಿ ಅಥವಾ ಜನಗಣತಿಯಲ್ಲಿ ಕೇವಲ ಅಧಿಕಾರದ ಕುರ್ಚಿ ಅಲುಗಾಡುವ ಸಂದರ್ಭದಲ್ಲಿ ರಕ್ಷಣೆಗೆ ಮಾತ್ರ ಮಾಡಿರುವ ವ್ಯವಸ್ಥೆ ಅಷ್ಟೆ. ಅದು ಸರ್ವ ಸಮುದಾಯವನ್ನು ಒಳಗೊಂಡ ಒಂದು ವ್ಯವಸ್ಥೆಯಾಗಿ ನಿಖರವಾಗಿ ಜನರಿಗೆ ತಲುಪಿಸಿಲ್ಲ. ಹಾಗೂ ಅದಕ್ಕೆ ಉತ್ತರದಾಯಿಯಾಗಿ ರಾಜ್ಯ ಸರ್ಕಾರ ವರ್ತಿಸಿಲ್ಲ ಎಂದರು.

    ಕೇಂದ್ರ ಜಾತಿ ಜನಗಣತಿಯು ರಾಹುಲ್ ಗಾಂಧಿ ಅಥವಾ ಸಿದ್ದರಾಮಯ್ಯ ಅವರನ್ನು ಕೇಳಿ ಮಾಡಿದ ಕಾರ್ಯವಲ್ಲ. ಕಾಶ್ಮೀರದಲ್ಲಿ ೩೭೦ ರದ್ದು ಮಾಡಿದಾಗ ರಾಹುಲ್ ಗಾಂಧಿ ಸ್ವಾಗತಿಸಲೂ ಇಲ್ಲ. ಭಯೋತ್ಪಾದನೆ ನಿಯಂತ್ರಿಸಲು ಯತ್ನಿಸಿದ್ದೀರಿ ಎನ್ನುವ ಮಾತನ್ನೂ ಹೇಳಲಿಲ್ಲ. ಅದನ್ನು ವಿರೋಧಿಸಿದರು. ಪೌರತ್ವ ತಿದ್ದುಪಡಿ ಕಾಯ್ದೆ ತಂದಾಗಲೂ ಅಮಾಯಕರಿಗೆ ನ್ಯಾಯ ಸಿಕ್ಕಿತೆಂದು ಹೇಳಲಿಲ್ಲ. ಬದಲಿಗೆ ವಿರೋಧ ಮಾಡಿದರು. ಮುಸ್ಲಿಂ ಮಹಿಳೆಯರಿಗೆ ತ್ರಿಬಲ್ ತಲಾಕ್ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಅವಕಾಶ ಕೊಟ್ಟಾಗಲೂ ಕೇವಲ ಓಟಿನ ಉದ್ದೇಶಕ್ಕೆ ಹಿಂದೆ ಕಾಂಗ್ರೆಸ್ ರದ್ದು ಪಡಿಸಿಸದ್ದು ಇತಿಹಾಸ ಎಂದು ದೂರಿದರು.

    ತ್ರಿವಳಿ ತಲಾಕ್ ತೆಗೆದು ಮುಸ್ಲಿಂ ಮಹಿಳೆಯರಿಗೆ ಗೌರವ ಕೊಟ್ಟಿದ್ದು ಮೋದಿ ಸರ್ಕಾರ ಅದನ್ನೂ ಕಾಂಗ್ರೆಸ್ ಸ್ವಾಗತಿಸಲಿಲ್ಲ. ಬಡ ಮುಸ್ಲಿಮರಿಗೆ ಅನುಕೂಲವಾಗುವ ವಕ್ಫ್ ತಿದ್ದುಪಡಿ ಕಾಯಿದೆಯನ್ನೂ ಕಾಂಗ್ರೆಸ್ ಸ್ವಾಗತಿಸಲಿಲ್ಲ ಎಂದು ಆರೋಪಿಸಿದರು.

    ಮಂಗಳೂರಿನ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಸಾವು ಕೇವಲ ಒಂದು ಹತ್ಯೆ ಎನ್ನುವುದಕ್ಕಿಂತಲೂ ವ್ಯವಸ್ಥಿತ ಸಂಚು ರೂಪಿಸಿ ನಡೆಸಲಾಗಿರುವ ಕೃತ್ಯವಾಗಿದೆ. ಈ ಪ್ರಕರಣವನ್ನು ಕೇಂದ್ರದ ತನಿಖಾ ಸಂಸ್ಥೆಗೆ ವಹಿಸಬೇಕು ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಒತ್ತಾಯಿಸಿದರು.

    ರಾಜ್ಯದಲ್ಲಿ ಕಾನೂನು ಸುವ್ಯಸ್ಥೆ ಸಂಪೂರ್ಣ ಹದಗೆಟ್ಟಿದೆ. ಉದ್ದೇಶಪೂರ್ವಕವಾಗಿ ಸುಹಾಸ್‌ಗೆ ಬೆದರಿಕೆಗಳು ಬರುತ್ತಿದ್ದವು. ಪೊಲೀಸ್ ಇಲಾಖೆ ಸ್ವಲ್ಪ ಜಾಗ್ರತೆ ವಹಿಸಿದ್ದರೆ ಈ ಹತ್ಯೆ ತಪ್ಪಿಸಬಹುದಿತ್ತು ಎಂದರು.

    ರಾಜ್ಯದಲ್ಲಿ ಪೊಲೀಸರು ನಡೆದುಕೊಳ್ಳುವ ರೀತಿ ಅತ್ಯಂತ ಖಂಡನೀಯವಾದದ್ದು, ರಾಜ್ಯ ಸರ್ಕಾರ ಸಹ ಯಾರ ಮೇಲೂ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳದಿರುವುದು ದುರಾದೃಷ್ಠಕರ. ಸುಹಾಸ್ ಸಾವಿಗೆ ನ್ಯಾಯ ಸಿಗುವ ವರೆಗೆ ಹೋರಾಟ ನಡೆಸಬೇಕಿದೆ. ಎಲ್ಲರೂ ಜಾಗೃತರಾಗರಬೇಕಾಗುತ್ತದೆ. ಈ ಘಟನೆಯನ್ನು ಖಂಡಿಸುತ್ತೇವೆ. ತಪ್ಪಿತಸ್ಥರ ಮೇಲೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇವೆ ಎಂದು ಹೇಳಿದರು.

    ಮತೀಯತೆಯ ವಿಕಾರತೆ ತುಂಬಿದಾಗ, ಈ ನಾಡಿನ ಕಾನೂನಿನ ಬಗ್ಗೆ ಗೌರವ ಇಲ್ಲದೇ ಇದ್ದಾಗ ನಾವು ಬಲ ಪ್ರಯೋಗ ಮಾಡಿ ಏನನ್ನಾದರೂ ಮಾಡುತ್ತೇವೆ ಎನ್ನುವ ಮನಸ್ಥಿತಿ, ವಾತಾವರಣ ಸೃಷ್ಠಿಯಾದಾಗ ಇಂತಹ ಕೊಲೆಗಡುಕರು ಹುಟ್ಟಿಕೊಳ್ಳುತ್ತಾರೆ. ಇಂತಹ ಅಪರಾಧಿಗಳಿಗೆ ಒಂದು ಬಾರಿ ಕಠಿಣ ಶಿಕ್ಷೆಗೆ ಗುರಿಪಡಿಸಿದಾಗ ಮಾತ್ರ ನಿಯಂತ್ರಣಕ್ಕೆ ತರಬಹುದು ಎಂದರು

    The central government’s task of conducting caste census is revolutionary

  • ಸರ್ಕಾರದ ವತಿಯಿಂದ ಹಮಾಲಿ ಕಾರ್ಮಿಕರಿಗೆ ನೆರವು

    ಸರ್ಕಾರದ ವತಿಯಿಂದ ಹಮಾಲಿ ಕಾರ್ಮಿಕರಿಗೆ ನೆರವು

    ಚಿಕ್ಕಮಗಳೂರು: ಶ್ರಮಿಕರ ನೆರವಿಗೆ ಸರ್ಕಾರ ಮತ್ತು ಜನಪ್ರತಿನಿಧಿಗಳು ಧಾವಿಸುವ ಮೂಲಕ ಹಮಾಲಿ ಕಾರ್ಮಿಕರಿಗೆ ಸವಲತ್ತು ನೀಡಿ ನೆರವಾಗಬೇಕೆಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.

    ಅವರು ಇಂದು ಬೋಳರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಕಾರ್ಮಿಕರ ದಿನಾಚರಣೆ ಅಂಗವಾಗಿ ಹಮಾಲಿ ಕಾರ್ಮಿಕರ ಸಂಘ ಏರ್ಪಡಿಸಿದ್ದ ಬೈಕ್ ಜಾಥಾಕ್ಕೆ ಚಾಲನೆ ನೀಡಿ ಹಮಾಲಿ ಕಾರ್ಮಿಕರಿಗೆ ಶುಭಾಶಯ ಕೋರಿ ಮಾತನಾಡಿದರು.

    ಕಟ್ಟಡ ಕಾರ್ಮಿಕರಿಗೆ ಹಾಗೂ ಅಸಂಘಟಿತ ವಲಯ ಕಾರ್ಮಿಕರಿಗೆ ಸರ್ಕಾರ ಹಲವಾರು ಯೋಜನೆಗಳ ಮೂಲಕ ಸವಲತ್ತುಗಳನ್ನು ವಿತರಿಸುತ್ತಿದ್ದು, ಆದರೆ, ಹಮಾಲಿ ಕಾರ್ಮಿಕರು ಕಾರ್ಮಿಕ ಇಲಾಖೆ ವ್ಯಾಪ್ತಿಯಿಂದ ಹೊರಗೆ ಉಳಿದಿರುವುದು ವಿಷಾಧನೀಯ. ರಾಜ್ಯಮಟ್ಟದಲ್ಲಿ ಈ ಸಮಸ್ಯೆ ಬಗ್ಗೆ ಕಾರ್ಮಿಕ ಸಚಿವರೊಂದಿಗೆ ಚರ್ಚಿಸಿ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

    ಹಮಾಲಿ ಕಾರ್ಮಿಕರ ಸಂಘ ಪ್ರಾರಂಭದಿಂದ ಇದೂವರೆಗೆ ನಡೆದುಬಂದ ದಾರಿಯ ಬಗ್ಗೆ ಸ್ಮರಿಸಿದ ಶಾಸಕರು, ಕಳೆದ ೩೫ ವರ್ಷಗಳಿಂದ ಕಾರ್ಮಿಕರ ಸಂಪರ್ಕದಲ್ಲಿದ್ದೇನೆ, ಹಮಾಲಿ ಕಾರ್ಮಿಕರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರ್ಪಡೆ ಮಾಡಲು ಸರ್ಕಾರದಲ್ಲಿ ಚರ್ಚಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

    ಹಮಾಲಿ ಕಾರ್ಮಿಕರ ಸಂಘ ಸಮುದಾಯ ಭವನ ನಿರ್ಮಾಣದ ಬಗ್ಗೆ ಬೇಡಿಕೆ ಇಟ್ಟಿದ್ದು, ಇನ್ನು ಒಂದು ವಾರದಲ್ಲಿ ಇದಕ್ಕೆ ನಿವೇಶನ ಗುರುತಿಸುವುದರ ಜೊತೆಗೆ ದಾಖಲೆಗಳನ್ನು ಸಿದ್ದಪಡಿಸಿದ ಬಳಿಕ ಸರ್ಕಾರದಲ್ಲಿ ಅನುದಾನ ತಂದು ತಮ್ಮ ಬೇಡಿಕೆ ಈಡೇರಿಸುವುದಾಗಿ ತಿಳಿಸಿದರು.

    ಹಮಾಲಿ ಕಾರ್ಮಿಕರು ಕಷ್ಟಪಟ್ಟು ದುಡಿದ ಹಣವನ್ನು ಅಪವ್ಯಯ ಮಾಡದೇ ಜೀವವಿಮೆಯಲ್ಲಿ ಕಡ್ಡಾಯವಾಗಿ ತೊಡಗಿಸಿಕೊಂಡು ಕುಟುಂಬದ ರಕ್ಷಣೆಗೆ ಮುಂದಾಗಬೇಕು ಜೊತೆಗೆ ಉಳಿತಾಯದ ಹಣವನ್ನು ತಮ್ಮ ಮಕ್ಕಳಿಗೆ ಉನ್ನತ ವ್ಯಾಸಂಗ ಕೊಡಿಸುವ ಮೂಲಕ ಅವರನ್ನು ಸಮಾಜದ ಮುನ್ನಲೆಗೆ ತರಬೇಕೆಂದು ಸಲಹೆ ನೀಡಿದರು.

    ಹಮಾಲಿ ಕಾರ್ಮಿಕರ ಸಂಘದ ಅಧ್ಯಕ್ಷ ರಹೀಮ್ ಕಾಕಾ ಮಾತನಾಡಿ, ಸಂಘದಲ್ಲಿ ೨೫೦ ಜನ ಸದಸ್ಯರಿದ್ದು, ಕಾರ್ಮಿಕರಿಗೆ ನಿವೇಶನ, ಮನೆ, ಸಮುದಾಯ ಭವನ ನಿರ್ಮಾಣ ಮಾಡಲು ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು.

    ಕಟ್ಟಡ ಕಾರ್ಮಿಕರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳು ಹಮಾಲಿ ಕಾರ್ಮಿಕರಿಗೆ ಸಿಗುತ್ತಿಲ್ಲ, ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಹಮಾಲಿ ಕಾರ್ಮಿಕರಿಗೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ವಿನಂತಿಸಿದರು.

    ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಹಾಲಪ್ಪ, ಕಾರ್ಯದರ್ಶಿ ಎಸ್. ಮಂಜು, ಖಜಾಂಚಿ ಗುರುಮೂರ್ತಿ, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
    ೩೩ನೇ ವಾರ್ಷಿಕೋತ್ಸವ ಹಾಗೂ ಕಾರ್ಮಿಕರ ದಿನಾಚರಣೆ ಅಂಗವಾಗಿ ಹಮಾಲಿ ಕಾರ್ಮಿಕರ ಸಂಘದಿಂದ ಬೈಕ್ ಜಾಥಾ ನಗರದ ಬೋಳರಾಮೇಶ್ವರ ದೇವಸ್ಥಾನ ಆವರಣದಿಂದ ಪ್ರಾರಂಭಗೊಂಡು ಐ.ಜಿ ರಸ್ತೆ ಮೂಲಕ ಸಂತೆಮೈದಾನದಲ್ಲಿರುವ ತಮಿಳು ಕಾಲೋನಿಯ ಸಂಘದ ಕಚೇರಿಯಲ್ಲಿ ಮುಕ್ತಾಯಗೊಂಡಿತು.

    Government assistance to porter workers

  • ಸರ್ವರೂ ಶಿಸ್ತನ್ನು ಅಳವಡಿಸಿಕೊಂಡಾಗ ಆರೋಗ್ಯವಂತ ಸಮಾಜ ನಿರ್ಮಾಣ

    ಸರ್ವರೂ ಶಿಸ್ತನ್ನು ಅಳವಡಿಸಿಕೊಂಡಾಗ ಆರೋಗ್ಯವಂತ ಸಮಾಜ ನಿರ್ಮಾಣ

    ಚಿಕ್ಕಮಗಳೂರು: ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡು ಸ್ವಚ್ಚತೆ ಬಗ್ಗೆ ಅನುಭವಗಳನ್ನು ಎಲ್ಲರೊಂದಿಗೆ ಹಂಚಿಕೊಂಡಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಲೈಫ್‌ಲೈನ್ ಫೀಡ್ಸ್ ವ್ಯವಸ್ಥಾಪಕ ನಿರ್ದೇಶಕ ಕಿಶೋರ್ ಕುಮಾರ್ ಹೆಗ್ಡೆ ಹೇಳಿದರು.

    ಅವರು ಇಂದು ಕಲ್ಯಾಣ ನಗರದಲ್ಲಿ ಲೈಫ್‌ಲೈನ್ ಫೀಡ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹಾಗೂ ಕಲ್ಯಾಣ ನಗರ ವೆಲ್‌ಫೇರ್ ಸೊಸೈಟಿ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಸಂಪೂರ್ಣ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

    ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಸ್ವಚ್ಚತೆಗೆ ಆದ್ಯ ಗಮನನೀಡಿ ಪಾರ್ಕ್ ಇನ್ನಿತರೆಡೆ ಬೆಳೆದಿರುವ ಪಾರ್ಥೇನಿಯಂ ಮತ್ತು ಗಿಡಗೆಂಟೆಗಳನ್ನು ತೆರವುಗೊಳಿಸುವಲ್ಲಿ ಮುಂದಾಗಬೇಕೆಂದು ಕರೆನೀಡಿದರು.

    ಕಲ್ಯಾಣ ನಗರ ವೆಲ್‌ಫೇರ್ ಸೊಸೈಟಿ ಮೂಲಕ ಪರಸ್ಪರ ಪರಿಚಯದಿಂದಾಗಿ ಸ್ವಚ್ಚತೆ ಬಗ್ಗೆ ಚರ್ಚಿಸಿ ಅಭಿಯಾನ ಆರಂಭಿಸಿರುವುದು ಇದು ಆರಂಭ ಶೂರತ್ವವಾಗದೆ ವರ್ಷವಿಡೀ ಸ್ವಚ್ಚತೆ ನಡೆಯಬೇಕೆಂದು ತಿಳಿಸಿದರು.

    ಹೊರದೇಶಗಳಲ್ಲಿರುವ ಸ್ವಚ್ಚತೆ ಬಗ್ಗೆ ವಿವರಿಸಿ ಮಾಹಿತಿ ನೀಡಿದ ಅವರು, ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ನೀರು ಕುಡಿದ ಬಾಟಲಿಯನ್ನು ಅಲ್ಲೇ ಬಿಡುವುದು, ಚಾಕಲೇಟ್ ಕವರ್ ಎಲ್ಲೆಂದರಲ್ಲೇ ಬಿಸಾಡುವುದು, ಬೀಡಿ, ಸಿಗರೇಟ್ ಪ್ಯಾಕ್‌ಗಳನ್ನು ರಸ್ತೆಯಲ್ಲಿ ಹಾಕುವುದು ಹೀಗೆ ನಾನಾ ರೀತಿಯಲ್ಲಿ ಕಸವನ್ನು ಹಾಕುವ ಮೂಲಕ ಪರಿಸರ ಮಾಲಿನ್ಯ ಮಾಡುತ್ತಿದ್ದೇವೆ ಎಂದು ವಿಷಾಧಿಸಿದರು.

    ಪರಿಸರ ಸ್ವಚ್ಚತೆ ಬಗ್ಗೆ ಇಂಜಿನಿಯರ್ ನಾಗೇಂದ್ರ ಮಾತನಾಡಿ, ಯಾವುದೇ ಉತ್ಪನ್ನ ಸಮಾಜಮುಖಿಯಾದಾಗ ಯಶಸ್ವಿಯಾಗುತ್ತದೆ. ಸರ್ವರೂ ತಮ್ಮ ಎಲ್ಲಾ ಜೀವನವನ್ನು ಸಮಾಜದ ಸೇವೆಗೆ ಮುಡಿಪಿಡಬೇಕೆಂದು ಬಯಸುತ್ತೇನೆ ಎಂದರು.

    ಸರ್ಕಾರಕ್ಕೆ ತೆರಿಗೆ ಪಾವತಿಸುತ್ತೇವೆ, ನಾವೇಕೆ ಸ್ವಚ್ಚತೆ ಮಾಡಬೇಕೆಂಬ ಮನೋಭಾವ ಬಡಾವಣೆಗಳಲ್ಲಿ ವಾಸಿಸುವ ನಾಗರಿಕರಲ್ಲಿ ಮೊದಲು ದೂರವಾಗಬೇಕು. ಒಬ್ಬ ವ್ಯಕ್ತಿ ೭೦ ವರ್ಷ ಬದುಕಿದ್ದರೆ ೧೨೦ ಟನ್ ಕಸ ಉತ್ಪತ್ತಿ ಮಾಡುತ್ತಾನೆ ಎಂದು ಮಾಹಿತಿ ನೀಡಿದರು.

    ಈ ರೀತಿ ಉತ್ಪತ್ತಿಯಾದ ಕಸಕ್ಕೆ ಸಂಸ್ಕಾರ ನೀಡಬೇಕಾದರೆ ಯಾರಾದರೂ ಜವಾಬ್ದಾರಿ ವಹಿಸಬೇಕು. ಕಸ ವಿಲೇವಾರಿಯಾಗದಿರುವುದರಿಂದಾಗಿ ಸಾರ್ವಜನಿಕರಲ್ಲಿ ಶೇ. ೭೦ ರಷ್ಟು ಅಸ್ತಮ ರೋಗಿಗಳು ಇದ್ದಾರೆ. ಪ್ರಕೃತಿಯನ್ನು ಹಾಳುಮಾಡಿ ಉಳಿಯಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

    ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಂಗಳ ಹೆಚ್.ಡಿ. ತಮ್ಮಯ್ಯ ಮಾತನಾಡಿ, ಕಲ್ಯಾಣ ನಗರದಲ್ಲಿ ಸ್ವಚ್ಚತಾ ಟ್ರಸ್ಟ್ ನಿರ್ಮಿಸಿಕೊಂಡು ಸ್ವಚ್ಚತಾ ಅಭಿಯಾನ ಆರಂಭಿಸಿರುವುದು ಶ್ಲಾಘನೀಯ, ಸ್ವಚ್ಚತೆ ಎಲ್ಲಿ ಇರುತ್ತದೆಯೋ ಅಲ್ಲಿ ಆರೋಗ್ಯ ಇರುತ್ತದೆ. ಎಲ್ಲರೂ ಸ್ವಚ್ಚತೆಗೆ ಆದ್ಯ ಗಮನ ಕೊಡಬೇಕೆಂದು ಮನವಿ ಮಾಡಿದರು.

    ಕಳೆದ ನಾಲ್ಕು ತಿಂಗಳ ಹಿಂದೆ ಮೇಘಾಲಕ್ಕೆ ಹೋಗಿದ್ದ ಅನುಭವವನ್ನು ಹಂಚಿಕೊಂಡ ಅವರು, ಎಲ್ಲರ ಮನೆ ಮುಂದೆ ಕಸದ ಬುಟ್ಟಿ ಇಟ್ಟು ಕಸ ಚೆಲ್ಲಾಪಿಲ್ಲಿಯಾಗದಂತೆ ಕ್ರಮವಹಿಸಿದ್ದರು. ರಸ್ತೆಯಲ್ಲಿ ಪ್ಲಾಸ್ಟಿಕ್ ಕವರ್ ಆಗಲೀ, ಬಾಟಲಿಗಳಾಗಲೀ ಇರುವುದಿಲ್ಲ. ಇದೇ ಮಾದರಿಯಲ್ಲಿ ಕಲ್ಯಾಣ ನಗರ ಸ್ವಚ್ಚತೆಯಲ್ಲಿ ಪ್ರಥಮ ಸ್ಥಾನದಲ್ಲಿರಬೇಕೆಂದು ಬಯಸುತ್ತೇನೆಂದರು.

    ಕಸದ ಗಾಡಿ ಬಾರದಿದ್ದಲ್ಲಿ ಸಂಗ್ರಹಿಸಿದ ಕಸವನ್ನು ಹೊರಗಡೆ ಖಾಲಿ ನಿವೇಶನಗಳಲ್ಲಿ ಹಾಕಬಾರದು, ಎಲ್ಲರೂ ಸ್ವಚ್ಚತೆಗೆ ಕೈಜೋಡಿಸಬೇಕೆಂದು ವಿನಂತಿಸಿದರು. ಅಧ್ಯಕ್ಷತೆ ವಹಿಸಿದ್ದ ಕಲ್ಯಾಣ ನಗರ ವೆಲ್‌ಫೇರ್ ಸೊಸೈಟಿ ಅಧ್ಯಕ್ಷ ಬಿ.ಎಸ್. ಹರೀಶ್ ಮಾತನಾಡಿ, ಪರಿಸರ ಸ್ವಚ್ಚವಾಗಿಡುವಲ್ಲಿ ಸರ್ವರೂ ಶ್ರಮಿಸುವ ಮೂಲಕ ರೋಗರುಜಿನಗಳಿಂದ ಮುಕ್ತಗೊಳಿಸಲು ಸಹಕರಿಸಬೇಕೆಂದು ಮನವಿ ಮಾಡಿದರು.

    ಕಾರ್ಯಕ್ರಮದ ನಂತರ ಸೈನಿಕರಿಗೆ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು. ಬಳಿಕ ಲಕ್ಕಿಡಿಪ್ ಮೂಲಕ ಸ್ಥಳೀಯ ನಿವಾಸಿಗಳಿಗೆ ವಿವಿಧ ಗೃಹೋಪಯೋಗಿ ವಸ್ತುಗಳನ್ನು ಬಹುಮಾನವಾಗಿ ನೀಡಲಾಯಿತು.

    ಈ ಸಂದರ್ಭದಲ್ಲಿ ವೆಲ್‌ಫೇರ್ ಸೊಸೈಟಿ ಕಾರ್ಯದರ್ಶಿ ವೇಣುಗೋಪಾಲ್ ಎನ್.ಟಿ, ಖಜಾಂಚಿ ವಿ.ಟಿ. ನಿಂಗರಾಜ್, ಸಹಕಾರ್ಯದರ್ಶಿ ಸುಧೀರ್ ಕುಮಾರ್, ತೇಜಸ್, ಉಪಾಧ್ಯಕ್ಷ ಉಮಾ ನಾಗೇಶ್, ಪ್ರಸನ್ನ ಕುಮಾರ್, ಜಿ. ರಮೇಶ್, ಪೌರಾಯುಕ್ತ ಬಿ.ಸಿ. ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.

    A healthy society is built when everyone adopts discipline.

  • ನಿಡಘಟ್ಟ ಗ್ರಾಮದ ಶ್ರೀ ಕಲ್ಲೇಶ್ವರಸ್ವಾಮಿ ಲೋಕಾರ್ಪಣೆ

    ನಿಡಘಟ್ಟ ಗ್ರಾಮದ ಶ್ರೀ ಕಲ್ಲೇಶ್ವರಸ್ವಾಮಿ ಲೋಕಾರ್ಪಣೆ

    ಚಿಕ್ಕಮಗಳೂರು: ಕಡೂರು ತಾಲೂಕಿನ ನಿಡಘಟ್ಟ ಗ್ರಾಮದ ಶ್ರೀ ಕಲ್ಲೇಶ್ವರಸ್ವಾಮಿ ಅವರ ನೂತನ ದೇವಾಲಯ ಮತ್ತು ಗೋಪುರ ಕಲಶಾರೋಹಣ ಹಾಗೂ ಧಾರ್ಮಿಕ ಸಮಾರಂಭ ಮೇ.೧ ರಿಂದ ೩ ರವರೆಗೆ ನಡೆಯಲಿದೆ ಎಂದು ಊರಿನ ಮುಖಂಡರಾದ ಪಿಗ್ಮಿರಾಜಣ್ಣ ಹೇಳಿದರು.

    ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿಂದೆ ಇದ್ದ ಶ್ರೀಕಲ್ಲೇಶ್ವರಸ್ವಾಮಿ ಹಳೆಯ ದೇವಾಲಯವನ್ನು ಕೆಡವಿ ೨೦೧೫ ರಿಂದ ನೂತನ ದೇವಾಲಯ ನಿರ್ಮಿಸಲು ಅಡಿಗಲ್ಲು ಹಾಕಿದೆವು. ಇದೀಗ ಸರಕಾರ, ಧಾರ್ಮಿಕ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಕಾರದಿಂದ ೧.೫೦ ಕೋಟಿ ರೂ .ವೆಚ್ಚದಲ್ಲಿ ದೇವಾಲಯ ನಿರ್ಮಾಣಗೊಂಡಿದೆ. ಶಾಸಕ ಎಚ್.ಡಿ.ತಮ್ಮಯ್ಯ, ಎಂಎಲ್‌ಸಿ ಸಿ.ಟಿ.ರವಿ, ಮಾಜಿ ಎಂಎಲ್‌ಸಿ ಗಾಯತ್ರಿ ಶಾಂತೇಗೌಡ ಆರ್ಥಿಕ ನೆರವು ಒದಗಿಸಿದ್ದಾರೆ ಎಂದರು.

    ದೇವಾಲಯದ ಉದ್ಗಾಟನಾ ಕಾರ್ಯಕ್ರಮಗಳು ಮೇ.೧ ರಿಂದ ನಡೆಯಲಿವೆ ಎಂದು ಹೇಳಿದರು. ಮೇ.೨ ರಂದು ಗಂಗಾಪೂಜೆ, ಗೋಪೂಜೆ, ಪ್ರವೇಶ, ಕಲಶಪ್ರತಿಷ್ಠಾಪನೆ, ಶ್ರೀ ಕಲ್ಲೇಶ್ವರ ಸ್ವಾಮಿ ಅವರ ಪ್ರಾಣ ಪ್ರತಿಷ್ಠಾಪನೆ ಮತ್ತಿತರೆ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಮೇ.೩ ರಂದು ಬೆಳಗ್ಗೆ ೧೧ ಕ್ಕೆ ನಡೆಯುವ ಧಾರ್ಮಿಕ ಸಮಾರಂಭದಲ್ಲಿ ಸಿರಿಗೆರೆ ಶ್ರೀ ಗಳಾದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ದೇವಾಲಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಮಲ್ಲೇಶಗೌಡ ಆಧ್ಯಕ್ಷತೆ ವಹಿಸಲಿದ್ದು, ಶಾಸಕ ಎಚ್.ಡಿ.ತಮ್ಮಯ್ಯ, ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ, ಎಂಎಲ್‌ಸಿ ಸಿ.ಟಿ.ರವಿ, ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಬೆಳ್ಳಿಪ್ರಕಾಶ್, ಬಿ.ಎಚ್.ಹರೀಶ್, ಕೆ.ಎಸ್.ಆನಂದ್, ಡಾ.ಧನಂಜಯ ಸರ್ಜಿ, ಗಾಯತ್ರಿ ಶಾಂತೇಗೌಡ, ಎಸ್.ಎಲ್.ಬೋಜೇಗೌಡ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

    ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ಶಾಂತಕುಮಾರ್, ಖಜಾಂಚಿ ಮಲ್ಲಿಕಾರ್ಜುನ ಮತ್ತಿತರರಿದ್ದರು.

    Shri Kalleswaraswamy Lokarpane of Nidaghatta village

  • ಶೋಷಿತರನ್ನು ಸಮಾಜದ ಮುನ್ನಲೆಗೆ ತರಲು ಬಸವಣ್ಣ ಶ್ರಮಿಸಿದ್ದರು

    ಶೋಷಿತರನ್ನು ಸಮಾಜದ ಮುನ್ನಲೆಗೆ ತರಲು ಬಸವಣ್ಣ ಶ್ರಮಿಸಿದ್ದರು

    ಚಿಕ್ಕಮಗಳೂರು: ಶೋಷಿತರನ್ನು ಸಮಾಜದ ಮುನ್ನಲೆಗೆ ತರುವುದರ ಮೂಲಕ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಸಮ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದ ಕೀರ್ತಿ ವಿಶ್ವಗುರು ಬಸವಣ್ಣನವರಿಗೆ ಸಲ್ಲುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.

    ಅವರು ಇಂದು ಕಲ್ಯಾಣ ನಗರದ ಬಸವ ತತ್ವ ಪೀಠದಲ್ಲಿ ಏರ್ಪಡಿಸಲಾಗಿದ್ದ ಬಸವ ಜಯಂತಿ ಕಾರ್ಯಕ್ರಮದ ಅಂಗವಾಗಿ ಬಸವಣ್ಣನವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

    ೧೨ನೇ ಶತಮಾನದಲ್ಲಿ ಬಸವಣ್ಣನವರು ಕರ್ನಾಟಕದಲ್ಲಿ ಜನಿಸದಿದ್ದರೆ ಶೋಷಿತರನ್ನು ಸಮಾಜದ ಮುನ್ನಲೆಗೆ ತರಲು ಕಷ್ಟಸಾಧ್ಯವಾಗುತ್ತಿತ್ತು. ಡಾ. ಬಿ.ಆರ್. ಅಂಬೇಡ್ಕರ್, ಜಗಜ್ಯೋತಿ ಬಸವಣ್ಣ, ಬುದ್ಧರು ಈ ಮಹಾನ್ ಪುರಷರನ್ನು ಕೇವಲ ಒಂದು ಜಾತಿ, ಧರ್ಮ, ಮತಕ್ಕೆ ಸೀಮಿತಗೊಳಿಸದೆ ಇಡೀ ದೇಶ ಪ್ರಪಂಚ ಒಪ್ಪಿರುವುದರಿಂದ ಈ ಮಹಾನ್ ಪುರುಷರ ಜಯಂತಿಯನ್ನು ಸರ್ವರೂ ಒಗ್ಗಟ್ಟಾಗಿ ಆಚರಿಸಬೇಕೆಂದು ತಿಳಿಸಿದರು.

    ಸಮಾಜದಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಈಗಲೂ ಇದ್ದು, ಅಂದೂ ಇದ್ದರು. ಇಂದೂ ಸಹ ತೊಂದರೆಯನ್ನು ಕೊಡುತ್ತಿದ್ದಾರೆ. ಬಸವಣ್ಣನವರ ವಿಚಾರಧಾರೆಗಳ ಬಗ್ಗೆ ನಂಬಿಕೆ ಇಲ್ಲದೇ ಇರುವ ಪಟ್ಟಭದ್ರ ಹಿತಾಸಕ್ತಿಗಳು ನಶಿಸುತ್ತಾರೆ. ಆದರೆ, ಬಸವಣ್ಣನವರ ವಿಚಾರಧಾರೆಗಳು, ಸಿದ್ಧಾಂತ, ವಚನಗಳು ಪ್ರಪಂಚ ಇರುವವರೆಗೂ ಜೀವಂತವಾಗಿ ಇರುತ್ತವೆ ಎಂದು ತಿಳಿಸಿದರು.

    ಬಸವಣ್ಣನವರ ಅನುಯಾಯಿಗಳಾದ ನಾವು ಎಲ್ಲಾ ಧರ್ಮವನ್ನು ಸಮಾನವಾಗಿ ಕಾಣುವ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ನಾಂದಿಯಾಗೋಣ ಎಂದರು. ಈ ಸಂದರ್ಭದಲ್ಲಿ ಟ್ರಸ್ಟ್ ಖಜಾಂಚಿ ಸದಾಶಿವಪ್ಪ, ಅರುಣ್ ಕುಮಾರ್, ಜಗದೀಶ್ ಬಾಬು, ಬಿ.ಹೆಚ್. ಹರೀಶ್, ಕುಮಾರ್, ನಿಶಾಂತ್ ಮತ್ತಿತರರು ಉಪಸ್ಥಿತರಿದ್ದರು.

    Basavanna worked hard to bring the oppressed to the forefront of society.

  • ವಿಶ್ವ ಎದುರಿಸುತ್ತಿರುವ ಸಮಸ್ಯೆಗಳಿಗೆ ಬಸವ ತತ್ವಗಳೇ ಪರಿಹಾರ

    ವಿಶ್ವ ಎದುರಿಸುತ್ತಿರುವ ಸಮಸ್ಯೆಗಳಿಗೆ ಬಸವ ತತ್ವಗಳೇ ಪರಿಹಾರ

    ಚಿಕ್ಕಮಗಳೂರು: ಸಮಾಜದಲ್ಲಿ ಎಲ್ಲಾ ಮನುಜರು ಸಮಾನರಾಗಿದ್ದು, ವಿಶ್ವವೇ ಒಂದು ಕುಟುಂಬ ಎಂದು ಸಾರಿದ ಬಸವಣ್ಣನವರು ವಿಶ್ವ ಪ್ರೇಮದ ಅನುಸಂಧಾನಕ್ಕೆ ಕಾರಣರಾದವರು. ಅವರ ಮಾನವ ತತ್ವಗಳನ್ನು ಅಧ್ಯಯನ ಮಾಡಿದರೆ ವಿಶ್ವ ಇಂದು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ ಎಂದು ವಿಧಾನ ಪರಿಷತ್ ಶಾಸಕ ಸಿ.ಟಿ ರವಿ ಹೇಳಿದರು.

    ಜಿಲ್ಲಾಡಳಿತ ವತಿಯಿಂದ ಇಂದು ನಗರದ ಕುವೆಂಪು ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ‘ನಮ್ಮಲ್ಲಿ ಅನೇಕ ಮಹಾಪುರು?ರು, ಸಾಮಾಜಿಕ ಕ್ರಾಂತಿ ಮಾಡಿ ಹೋಗಿದ್ದಾರೆ. ಅಂಥವರನ್ನು ನಾವು ಒಂದು ಸಮುದಾಯ ಅಥವಾ ಒಂದು ಜನಾಂಗಕ್ಕೆ ಸೀಮಿತಗೊಳಿಸುತ್ತಿರುವುದು ದುರಂತದ ವಿಚಾರ. ಬಸವಣ್ಣನವರನ್ನೂ ನಾವೆಲ್ಲೋ ಹಿಡಿದಿಟ್ಟಂತೆ ಕಾಣಿಸುತ್ತಿದೆ. ಇಂಥ ಮಹಾಪುರು?ರು ಸಾರ್ವಕಾಲಿಕ ಮತ್ತು ಇವರ ಸಿದ್ಧಾಂತವನ್ನು ಎಲ್ಲ ವರ್ಗದವರೂ ಅನುಸರಿಸಬೇಕಾಗಿದೆ’ ಎಂದರು.

    ಅರ್ಥರಹಿತ ಆಚರಣೆಗಳನ್ನು ವಿರೋಧಿಸಿ, ಆಚಾರವೇ ಸ್ವರ್ಗ ಅನಾಚಾರವೇ ನರಕ ಎಂಬ ತತ್ವವನ್ನು ಸಾರಿ ತಮ್ಮ ವಿಚಾರಧಾರೆಯಿಂದ ಧರ್ಮಕ್ಕೆ ವೈಚಾರಿಕ ಸ್ಪರ್ಶವನ್ನು ನೀಡಿದ ಮಹಾನ್ ಸಾಮಾಜಿಕ ವಿಜ್ಞಾನಿ ಬಸವಣ್ಣನವರು. ಅವರ ಸಮಾನತೆ, ಸಹಬಾಳ್ವೆ, ಭಾತೃತ್ವ, ಏಕತೆ ಚಿಂತನೆಗಳನ್ನು ಅಳವಡಿಸಿಕೊಂಡರೆ ಪ್ರತಿಯೊಬ್ಬರು ಉತ್ತಮ ಜೀವನವನ್ನು ನಡೆಸಬಹುದು ಎಂದರು.

    ವಚನ ಚಳುವಳಿಯಲ್ಲಿ ಭಾಗವಹಿಸಿದ ಪ್ರತಿ ಶರಣರು ಆತ್ಮ ಸಾಕ್ಷಿಯನ್ನು ಆಧಾರವಾಗಿಟ್ಟುಕೊಂಡು, ಜೀವನದ ಮೌಲ್ಯವನ್ನು ಪಾಲಿಸಿಕೊಂಡು ಬಂದವರು. ಅದೇ ರೀತಿ ಜೀವನದ ನೀತಿ ಸಂಹಿತೆಯನ್ನು ರೂಪಿಸಿಕೊಟ್ಟ ಬಸವಣ್ಣನವರು, ಶುದ್ಧ ನಡೆಯಿಲ್ಲದೇ ಯಾವುದೇ ವ್ಯಕ್ತಿಗೆ ವಚನ ಭೋಧಿಸುವ ಹಕ್ಕಿಲ್ಲ ಎಂಬ ತತ್ವವನ್ನು ಪ್ರತಿಪಾದಿಸಿದರು ಎಂದರು.

    ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನೈಸರ್ಗಿಕ ಕೃಷಿಕರು, ಕೃಷಿ ನಿವಾಸಿ ಶ್ರೀ ಚಂದ್ರಶೇಖರ್ ನಾರಾಯಣಪುರ ಉಪನಾಸ್ಯ ನೀಡಿ ಸಮಾಜದಲ್ಲಿ ಅರಾಜಕತೆ ಸೃಷ್ಟಿಯಾಗಿದ್ದ ಸಂದರ್ಭದಲ್ಲಿ ಸಂಕಷ್ಟಗಳನ್ನು ಎದುರಿಸಿ ಬೃಹತ್ ಸಮೂಹಕ್ಕೆ ಸಾಮಾಜಿಕ ನ್ಯಾಯಕ್ಕಾಗಿ ಬದುಕಿ ತಮ್ಮ ಜೀವವನ್ನು ತೆತ್ತವರು ಸಾಂಸ್ಕೃತಿಕ ಚಳುವಳಿಯ ಸರ್ವ ಸಮರ್ಪಣ ಮಹಾನಾಯಕ ಬಸವಣ್ಣ ಎಂದರು.

    ವಚನಗಳು ಎಂದೂ ಆಚರಣೆಯ ವೈಶಿಷ್ಟ್ಯಗಳನ್ನು ಬಿಂಬಿಸಲಿಲ್ಲ ಬದಲಾಗಿ ಸಾಮಾಜಿಕ ಸಂಕಷ್ಟಗಳನ್ನು ಪ್ರತಿಪಾದಿಸಿದವು. ಪ್ರತಿ ಹಂತದಲ್ಲಿಯು ನಿರ್ಣಾಯಕ ಸಂಗತಿಯಾಗಿರುವ ಜಾತಿಯ ವಿನಾಶಕ್ಕೆ ತುಡಿದ ಬಸವಣ್ಣನ ಆಶಯಗಳನ್ನು ಸಮಾಜದಲ್ಲಿ ವ್ಯಾಪಿಸಲು ಮನುವಾದಿಗಳು ಬಿಡುತ್ತಿಲ್ಲ. ಜಾತಿ ವ್ಯವಸ್ಥೆಯು ಇಂದಿಗೂ ಅಳಿಯದೇ ಉಳಿದಿರುವುದು ದುರಂತ ಎಂದರು.

    ವಚನ ಸಾಹಿತ್ಯವು ಕನ್ನಡದ ಶ್ರೇಷ್ಠ ಸಾಹಿತ್ಯವಾಗಿ ಹೊರಹೊಮ್ಮಿದೆ. ವಚನವೆಂದರೆ ಸಾಂಸ್ಕೃತಿಕ ಸಂವಿಧಾನವಾಗಿದ್ದು, ಜೀವನ ನಡೆಸುವ ವಿಧಾನವಾಗಿದೆ. ಸಾಮಾಜಿಕ ಬಿಕ್ಕಟ್ಟನ್ನು ನಿವಾರಿಸಲು ಇರುವ ಪರಿಹಾರ ಬಸವಣ್ಣನ ತತ್ವಗಳು ಎಂದರು.

    ವಚನಗಳನ್ನು ಆಚರಣಾ ವಿಧಾನದಿಂದ ದಕ್ಕಿಸಿಕೊಳ್ಳಬಹುದೇ ಹೊರತು ಕೇವಲ ಓದಿನಿಂದಲ್ಲ. ವಚನಗಳು ನಮ್ಮ ನಿಲುವು ಹಾಗೂ ವ್ಯಕ್ತಿತ್ವವನ್ನು ಅಮೂಲಾಗ್ರವಾಗಿ ಬದಲಾಯಿಸಬಲ್ಲವು. ಕೇವಲ ವೇದ ಉಪನಿಷತ್ತುಗಳನ್ನು ಜ್ಞಾನವೆಂದು ಪರಿಗಣಿಸಿದ್ದ ಸಮಯದಲ್ಲಿ ಶ್ರಮ ಮತ್ತು ಕಾಯಕವನ್ನು ಜ್ಞಾನದ ಮಾರ್ಗವನ್ನಾಗಿ ವಚನಗಳು ನಿರೂಪಿಸಿತು ಎಂದರು.

    ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ಡಿ ತಮ್ಮಯ್ಯ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿ, ಪ್ರಭುತ್ವವನ್ನು ವಿರೋಧಿಸಿ, ತುಳಿತಗೊಳಗಾದವರ ನೇತೃತ್ವವನ್ನು ವಹಿಸಿಕೊಂಡು ಸಮಾಜದಲ್ಲಿ ಬದಲಾವಣೆಯನ್ನು ತರುವ ಉದ್ದೇಶದಿಂದ ಎಲ್ಲವನ್ನು ದಿಕ್ಕರಿಸಿ ತಮ್ಮ ಜೀವನವನ್ನು ಮುಡಿಪಾಗಿಟ್ಟು, ೧೨ನೇ ಶತಮಾನದಲ್ಲಿ ನುಡಿದಂತೆ ನಡೆಯುತ್ತಾ ವಿಶ್ವಗುರುವಾಗಿ ರೂಪುಗೊಂಡವರು ಬಸವಣ್ಣ ಎಂದರು.

    ಬಸವಣ್ಣನ ಕ್ರಾಂತಿ ಜಾಗತಿಕ ಮಟ್ಟದ ದೊಡ್ಡ ಸಾಧನೆ. ಆದರೆ ಅಂದಿನ ಕಾಲದ ಕೆಲವು ಸಮಸ್ಯೆಗಳಿಂದಾಗಿ ಆ ಕ್ರಾಂತಿ ಜಗತ್ತಿನ ಗಮನ ಸೆಳೆದಿಲ್ಲ. ಇಂದು ಕೆಲವು ಮಠಮಾನ್ಯಗಳು, ಹಿರಿಯ ವಿದ್ವಾಂಸರು ವಚನ ಸಾಹಿತ್ಯ ಹಾಗೂ ಅಂದಿನ ಕ್ರಾಂತಿಯನ್ನು ಜಗತ್ತಿಗೆ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ.. ಕೇವಲ ಕಾಯಿದೆ-ಕಾನೂನಿನಿಂದ ಸಾಮಾಜಿಕ ಪರಿವರ್ತನೆ ಸಾಧ್ಯವಿಲ್ಲ. ಮನಸ್ಸುಗಳು ಬದಲಾಗಬೇಕು. ಹೀಗಾಗಿ ಸದಾ ಕಾಲಕ್ಕೂ ಪ್ರಸ್ತುತವಾಗಿರುವ ಬಸವಣ್ಣನವರ ಚಿಂತನೆಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು’ ಎಂದರು.

    ನಗರಸಭೆ ಅಧ್ಯಕ್ಷ ಸುಜಾತ ಶಿವಕುಮಾರ್ ಮಾತನಾಡಿ, ಕರ್ನಾಟಕದಲ್ಲಿ ಸಾಮಾಜಿಕ ಕ್ರಾಂತಿಯನ್ನು ಮಾಡಿ, ಸಮಾನತೆಯನ್ನು ಪ್ರತಿಪಾದಿಸಿದ ಬಸವಣ್ಣನವರ ತತ್ವಗಳು ಕೇವಲ ಸರ್ಕಾರಿ ಕಾರ್ಯಕ್ರಮದ ವಸ್ತುವಾಗದೇ, ಪ್ರತಿಯೊಬ್ಬರು ಬಸವಣ್ಣನವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ರಮೇಶ.ಸಿ ಎಲ್ಲಾರನ್ನು ಸ್ವಾಗತಿಸಿದರು ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ , ಜಿ.ಪಂ ಮುಖ್ಯ ಕಾರ್ಯನಿರ್ವಾಹಣಾದಿಕಾರಿ ಕೀರ್ತನಾ ಹೆಚ್.ಎಸ್, ಬೆಂಗಳೂರು ಕ.ರಾ.ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಹೆಚ್ ಹರೀಶ್, ಉಪವಿಭಾಗಾಧಿಕಾರಿ  ದೇವರಾಜ್, ತಹಶಿಲ್ದಾರ್ ರೇಷ್ಮಾ ಕೆ.ಎಸ್, ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷ ಶಿವನಾಂದ ಸ್ವಾಮಿ, ಸಮಾಜ ಮುಖಂಡ ಕೆ.ಟಿ ರಾಧಕೃಷ್ಣ , ಹಾಗೂ  ದೌರ್ಜನ್ಯ ಸಮಿತಿ ಸದಸ್ಯ ಲಕ್ಷ್ಮಣ್,  ಮುಂತಾದವರು ಉಪಸ್ಥಿತರಿದ್ದರು.

    Basava principles are the solution to the problems facing the world

  • ಮುಖ್ಯಮಂತ್ರಿ ಸಿದ್ದರಾಮುಯ್ಯ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

    ಮುಖ್ಯಮಂತ್ರಿ ಸಿದ್ದರಾಮುಯ್ಯ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

    ಚಿಕ್ಕಮಗಳೂರು: ಬೆಳಗಾವಿಯುಲ್ಲಿ ವೇದಿಕೆಯಲ್ಲೇ ಎಎಸ್ಪಿ ಒಬ್ಬರ ಕಪಾಳ ಮೋಕ್ಷಕ್ಕೆ ಮುಂದಾದ ಮುಖ್ಯಮಂತ್ರಿ ಸಿದ್ದರಾಮುಯ್ಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಮಂಗಳವಾರ ನಗರದ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.

    ಸಂವಿಧಾನ ವಿರೋಧಿ ಕಾಂಗ್ರೆಸ್‌ಗೆ ಧಿಕ್ಕಾರ, ಕಾಂಗ್ರೆಸ್ ಸರ್ಕಾರ ಗೂಂಡಾ ಸರ್ಕಾರ, ಸಿದ್ದರಾಮಯ್ಯ ಗೋ ಗೋ ಪಾಕಿಸ್ಥಾನ್, ದರ್ಪ-ದಬ್ಬಾಳಿಕೆ ತೋರುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ, ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಸಿದ್ದರಾಮಯ್ಯರನ್ನು ಅಧಿಕಾರದಿಂದ ಕೆಳಗಿಳಿಸಿ ಎನ್ನುವ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

    ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜಶೆಟ್ಟಿ ಮಾತನಾಡಿ, ಪೊಲೀಸರೊಂದಿಗೆ ಅಸಭ್ಯತನ ಹಾಗೂ ಪಾಕಿಸ್ಥಾನಿ ಪ್ರೇಮಿಗಳಂತೆ ಸಿದ್ದರಾಮಯ್ಯ ವರ್ತಿಸುತ್ತಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿಯನ್ನು ಏಕವಚನದಲ್ಲಿ ಕರೆದು ಎಎಸ್ಪಿಗೆ ಕಪಾಳಮೋಕ್ಷಕ್ಕೆ ಮುಂದಾದ ಮುಖ್ಯಮಂತ್ರಿಗಳಿಗೆ ಅಧಿಕಾರದಲ್ಲಿರಲು ನೈತಿಕತೆ ಇಲ್ಲ ಎಂದರು.

    ದೇಶಾದ್ಯಂತ ಜನತೆ ಪ್ರವಾಸಿಗರ ಸಾವಿನ ದುಃಖದಿಂದ ಬಳಲುತ್ತಿರುವಾಗ ಪಾಕಿಸ್ಥಾನ ಪ್ರೇಮಿಯಂತೆ ವರ್ತಿಸಿದ ಸಿದ್ದರಾಮಯ್ಯ ನಡೆಯ ವಿರುದ್ಧ ಬಿಜೆಪಿ ಮಹಿಳಾ ಕಾರ್ಯಕರ್ತರು ಸಮಾವೇಶದಲ್ಲಿ ಕಪ್ಪುಪಟ್ಟಿ ಧಿಕ್ಕಾರ ಕೂಗಿದರು. ಇದರಿಂದ ಮುಜುಗರಕ್ಕೆ ಒಳಗಾಗಿ ಸಿಎಂ ಭದ್ರತಾ ಸಿಬ್ಬಂದಿ ಧಾರವಾಡ ಎಎಸ್ಪಿಗೆ ಕೆನ್ನೆಗೆ ಬಾರಿಸಲು ಮುಂದಾಗಿರುವುದು ನಾಚಿಕೇಡಿನ ಸಂಗತಿ ಎಂದರು.

    ಸಮಾಜದ ಹಿತ ಕಾಪಾಡುವ ಪೊಲೀಸರು ಅತ್ಯಂತ ಶ್ರೇಷ್ಟ ಸೇವೆ ಸಲ್ಲಿಸುತ್ತಿದೆ. ಆದರೆ ತಮ್ಮ ಮನೆಯ ಮನೆ ಜೀತದಾಳಿನಂತೆ ಅವರನ್ನು ನಡೆಸಿಕೊಳ್ಳಲು ಮುಂದಾದ ಸಿದ್ದರಾಮಯ್ಯ ಅತಿಯಾದ ದುರಂಕಾರ, ಅಧಿಕಾರ ದರ್ಪದಿಂದ ಮೆರೆಯುತ್ತಿದ್ದಾರೆ ಎಂದರು.

    ಬಿಜೆಪಿಯವರ ಕಾರ್ಯಕ್ರಮಗಳಿಗೆ ಅಡ್ಡಿ ಪಡಿಸುತ್ತೇವೆಂದು ಬೆದರಿಕೆ ಹಾಕಿರುವ ಸಿದ್ದರಾಮಯ್ಯ ಅವರ ಪಂಥಾಹ್ವಾನವನ್ನು ಸ್ವೀಕರಿಸಿ ಇಂದು ರಾಜ್ಯದೆಲ್ಲೆಡೆ ಪ್ರತಿಭಟನೆ ನಡೆಸಲಾಗುತ್ತಿದೆ. ತಾಕತ್ತಿದ್ದರೆ ತಡೆಯುವ ಪ್ರಯತ್ನಕ್ಕೆ ಕಾಂಗ್ರೆಸ್ಸಿಗರು ಕೈಹಾಕಲಿ ಎಂದು ಸವಾಲೆಸೆದ ಅವರು, ಕೂಡಲೇ ಪೊಲೀಸರು ಸ್ವಯಂ ಪ್ರೇರಿತವಾಗಿ ಸಿಎಂ ಮೇಲೆ ಪ್ರಕರಣ ದಾಖಲಿಸಿ ಜೈಲಿ ಗಟ್ಟುವ ಕೆಲಸ ಮಾಡಬೇಕು. ಬಿಜೆಪಿ ಕೋಟ್ಯಾಂತರ ಕಾರ್ಯಕರ್ತರಿಂದ ಗಟ್ಟಿಯಾಗಿ ಬೆಳೆದು ನಿಂತಿದೆ. ಓರ್ವ ಕಾರ್ಯಕರ್ತನನ್ನೂ ಮುಟ್ಟುವ ಶಕ್ತಿ ಕಾಂಗ್ರೆಸ್ಸಿಗಿಲ್ಲ ಎಂದು ಹೇಳಿದರು.

    ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಹೆಚ್.ಸಿ.ಕಲ್ಮರುಡಪ್ಪ ಮಾತನಾಡಿ ಸಿದ್ದರಾಮಯ್ಯ ಸರ್ಕಾರ ಪ್ರತಿ ಸಂದರ್ಭ ಹಿಂದೂಗಳನ್ನು ಅಣುಕಿಸುತ್ತಿದೆ. ಅಧಿಕಾರ ದರ್ಪ, ಎಡಚಿಂತನೆಗಳಿಂದ ಅಲ್ಪಸಂಖ್ಯಾತರ ಒಲೈಕೆ ಹಾಗೂ ಮತಕ್ಕಾಗಿ ಮುಸ್ಲೀಮನಾಗಿ ಹುಟ್ಟುತ್ತೇನೆಂಬ ಹೇಳಿಕೆ ಹಾಗೂ ಕೆಜೆಹಳ್ಳಿ, ಡಿಜೆಹಳ್ಳಿ ದಾಳಿಕೋರರನ್ನು ಬ್ರದರ್ಸ್ ಎಂದು ಕರೆದಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ತಮ್ಮ ನಿಚಬುದ್ದಿಯನ್ನು ತೋರ್ಪಡಿಸಿಕೊಂಡಿದ್ದಾರೆ ಎಂದು ದೂರಿದರು.

    ಭಾರತ-ಪಾಕಿಸ್ಥಾನ ಎಂದಾಗ ಮೊಟ್ಟಮೊದಲು ಭಾರತದ ಪರವಾಗಿ ನಿಲ್ಲುವುದು ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ, ಹಕ್ಕು ಹಾಗೂ ಮಣ್ಣಿನ ಋಣ ತೀರಿಸುದಂತೆ. ಆದರೆ ಮುಖ್ಯಮಂತ್ರಿ ಪಾಕಿಸ್ತಾನಿಯರ ಪರವಾಗಿ ನಿಂತಿರುವುದು ಘನತೆಗೆ ಸರಿಯಲ್ಲ. ಅಲ್ಲದೇ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ್ನು ಕಟ್ಟಿ ಹಾಕುವ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ. ಹಲವಾರು ಹೋರಾಟದಿಂದ ಜನಿಸಿದ ಪಕ್ಷಕ್ಕೆ ನೂರು ಸಿದ್ದರಾಮಯ್ಯರ ಕುತಂತ್ರ ತಟ್ಟುವುದಿಲ್ಲ ಎಂದರು.

    ಬಿಜೆಪಿ ಮುಖಂಡ ಪ್ರೇಮ್‌ಕುಮಾರ್ ಮಾತನಾಡಿ ಪಾಕಿಸ್ಥಾನದ ಬಗ್ಗೆ ಅಪಾರ ಕಾಳಜಿ ಹೊಂದಿರುವ ಸಿದ್ದರಾಮಯ್ಯ ಅವರನ್ನು ನಾಡಿನ ಜನತೆ ಸಂತೋಷದಿಂದ ಬೀಳ್ಕೊಟ್ಟು ಪಾಕಿಸ್ಥಾನಕ್ಕೆ ಕಳಿಸಿಕೊಡಲಿದೆ. ಆ ದೇಶದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲಿ ಹಾಗೂ ಅಲ್ಲಿನ ಸರ್ಕಾರವು ಪಾಕಿಸ್ಥಾನ ರತ್ನ ಎಂಬ ಬಿರುದು ಕೊಡಲಿದ್ದಾರೆ ಎಂದು ಮೂದಲಿಸಿದರು.

    ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಮಾತನಾಡಿ ದಕ್ಷ ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷಕ್ಕೆ ಮುಂದಾದ ಸಿಎಂ ನಡೆ ಸಮಾಜ ತಲೆತಗ್ಗಿಸುವಂಥದ್ದು ಎಂದರು.

    ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಪುಷ್ಪರಾಜ್, ಗ್ರಾಮಾಂತರ ಮಂಡಲ ಅಧ್ಯಕ್ಷ ವಿಜಯ್‌ಕುಮಾ ರ್, ವಕ್ತಾರರಾದ ಹಿರೇಮಗಳೂರು ಪುಟ್ಟಸ್ವಾಮಿ, ಸಿ.ಹೆಚ್.ಲೋಕೇಶ್, ನಗರಸಭೆ ಅಧ್ಯಕ್ಷ ಸುಜಾತ ಶಿವಕುಮಾರ್, ಮುಖಂಡರುಗಳಾದ ಸೀತರಾಮ ಭರಣ್ಯ, ಜಸಂತಾ ಅನಿಲ್‌ಕುಮಾರ್, ಬಿ.ರಾಜಪ್ಪ, ನಾರಾಯಣಗೌಡ, ಹೆಚ್.ಕೆ.ಕೇಶವಮೂರ್ತಿ, ಕೋಟೆ ರಂಗನಾಥ್, ನಿಶಾಂತ್, ಸಚಿನ್‌ಗೌಡ, ಪ್ರದೀಪ್, ಚೈತ್ರ ಮತ್ತಿತರರು ಹಾಜರಿದ್ದರು.

    BJP protests demanding legal action against Chief Minister Siddaramaiah

  • ಈಶ್ವರಹಳ್ಳಿ – ಕಳಸಾಪುರ ಭಾಗದಲ್ಲಿ 4.9 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ

    ಈಶ್ವರಹಳ್ಳಿ – ಕಳಸಾಪುರ ಭಾಗದಲ್ಲಿ 4.9 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ

    ಚಿಕ್ಕಮಗಳೂರು:  ಈಶ್ವರಹಳ್ಳಿ, ಸಿಂಧಿಗೆರೆ ಮತ್ತು ಕಳಸಾಪುರ ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ೪.೯ ಕೋಟಿ ರೂ.ಗಳ ಅನುದಾನದಲ್ಲಿ ದೇವಸ್ಥಾನ, ಸಮುದಾಯ ಭವನ, ಕಾಂಕ್ರ್ರೀಟ್ ರಸ್ತೆ, ಚರಂಡಿ ಮುಂತಾದ ಅಭಿವೃದ್ಧಿ ಕೆಲಸ ಕೈಗೊಳ್ಳಲಾಗಿದೆ ಎಂದು ಚಿಕ್ಕಮಗಳೂರು ಕ್ಷೇತ್ರದ ಶಾಸಕ ಹೆಚ್.ಡಿ.ತಮ್ಮಯ್ಯ ತಿಳಿಸಿದರು.

    ಚಿಕ್ಕಮಗಳೂರು ತಾಲ್ಲೂಕು ಬಸವನಕೋಡಿ ಸರ್ಕಾರಿ ಶಾಲೆಯಲ್ಲಿ ಇಂದು ನಡೆದ ಈಶ್ವರಹಳ್ಳಿ ಕಳಸಾಪುರ ಮತ್ತು ಸಿಂದಿಗೆರೆ ಗ್ರಾಮ ಪಂಚಾಯಿತಿಗಳ ಜನ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಅಭಿವೃದ್ಧಿ ಕಾರ್ಯಗಳ ಜೊತೆಗೆ ಬಡವರ ಪರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವುದರಲ್ಲಿ ಸರ್ಕಾರ ಹಿಂದೆ ಬೀಳುವುದಿಲ್ಲ. ಈ ಭಾಗದ ಸುಮಾರು ಒಂದು ಸಾವಿರ ಜನರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಬರುತ್ತಿಲ್ಲ ಎನ್ನುವ ಮಾಹಿತಿ ಇದೆ. ಇದಕ್ಕೆ ಬೇರೆ ಬೇರೆ ಕಾರಣಗಳಿರಬಹುದು. ಅಂಥ ಪ್ರಕರಣಗಳು ಇದ್ದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಮೂಲಕ ಸಮಸ್ಯೆ ಬಗೆಹರಿಸಿ ಈ ಯೋಜನೆಯ ಹಣ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

    ಜನರ ಸಮಸ್ಯೆ ಪರಿಹರಿಸುವಲ್ಲಿ ಜನಸಂಪರ್ಕ ಸಭೆ ಸಹಕಾರಿಯಾಗಲಿದೆ. ಜನಸಾಮಾನ್ಯರಿಗೆ ಜನಸಂಪರ್ಕ ಸಭೆಯ ಸದುಪಯೋಗ ಆಗಬೇಕು ಎಂದರೆ ಸರ್ಕಾರ ಬಡವರು, ದೀನದಲಿತರು, ಹಾಗೂ ಮಹಿಳೆಯರನ್ನು ಮುನ್ನೆಲೆಗೆ ತರುವ ಸಲುವಾಗಿ ಕೈಗೊಂಡಿರುವ ಯೋಜನೆಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸಲು ಅಧಿಕಾರಿಗಳು ಶ್ರಮಿಸಬೇಕು ಎಂದು ಹೇಳಿದರು.

    ನಮ್ಮ ವ್ಯವಸ್ಥೆಯಲ್ಲಿರುವ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಅದರಲ್ಲೂ ಶಾಸಕಾಂಗ ಮತ್ತು ಕಾರ್ಯಾಂಗ ಹೊಂದಾಣಿಕೆಯಿಂದ ಕೆಲಸ ಮಾಡಿದರೆ ಮಾತ್ರ ಸರ್ಕಾರದ ಆಶಯಗಳು, ಯೋಜನೆಗಳು ಜನರಿಗೆ ಸಮರ್ಪಕವಾಗಿ ತಲುಪುತ್ತವೆ. ತಾಲ್ಲೂಕು ಮಟ್ಟದ ಅಧಿಕಾರಿಗಳು ಜನರ ಸಮೀಪವೇ ಹೋಗಿ ಅವರ ಸಮಸ್ಯೆ ಆಲಿಸಿ ಅದಕ್ಕೆ ಪರಿಹಾರ ನೀಡಬೇಕೆನ್ನುವ ಕಾರಣಕ್ಕಾಗಿಯೇ ಆರಂಭವಾದ ಪರಿಕಲ್ಪನೆ ಜನಸಂಪರ್ಕ ಸಭೆ ಎಂದರು.

    ಜನರಿಗೆ ಸಂಧ್ಯಾ ಸುರಕ್ಷಾ ಯೋಜನೆ, ಅಂಗವಿಕಲರ ಕಲ್ಯಾಣ ಯೋಜನೆ, ತಾಲ್ಲೂಕು ಕಚೇರಿಯಲ್ಲಿ ರೈತರಿಗೆ ಖಾತೆ ಮಾಡಿಸುವುದು, ಬಿ.ಪಿ.ಎಲ್. ಕಾರ್ಡ್ ವಿತರಣೆ ಇನ್ನು ಮುಂತಾದ ಸಮಸ್ಯೆಗಳನ್ನು ಆಲಿಸಿ ಆಯಾ ಅಧಿಕಾರಿಗಳಿಂದ ಆ ಸಮಸ್ಯೆಗೆ ಪರಿಹಾರ ಒದಗಿಸುವ ಕೆಲಸ ಈ ಸಭೆಗಳ ಮುಖಾಂತರ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

    ಸಭೆಯಲ್ಲಿ ಕಳಸಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಾ, ಈಶ್ವರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜಮ್ಮ, ಸಿಂದಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ನಟೇಶ್ ಬಗರ್ ಹುಕುಂ ಸದಸ್ಯ ಕೆಂಗೇಗೌಡ ತಹಸೀಲ್‌ದಾರ್ ರೇಷ್ಮಾ ತಾಲಕ್, ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಿಜಯಕುಮಾರ್ ಮುಂತಾದವರು ಉಪಸ್ಥಿತರಿದ್ದರು.

    Public relations meeting held today at Basavanakodi Government School

  • jಜಿಲ್ಲೆಯ ಕೆರೆಗಳ ಒತ್ತುವರಿ ತೆರವಿಗೆ ಶೀಘ್ರ ಕ್ರಮ ಅಗತ್ಯ

    jಜಿಲ್ಲೆಯ ಕೆರೆಗಳ ಒತ್ತುವರಿ ತೆರವಿಗೆ ಶೀಘ್ರ ಕ್ರಮ ಅಗತ್ಯ

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೆರೆಗಳ ಸರ್ವೆ ಕಾರ್ಯ ನಡೆಸಿ ಒತ್ತುವರಿಯಾಗಿರುವ ಕೆರೆಗಳನ್ನು ತೆರವುಗೊಳಿಸುವಂತೆ ಹಲವಾರು ಬಾರಿ ತಿಳಿಸಿದ್ದರೂ ಇದುವರೆಗೂ ಕೆರೆಗಳ ಒತ್ತುವರಿ ತೆರೆವುಗೊಳಿಸಿಲ್ಲ, ಒತ್ತುವರಿ ತೆರವುಗೊಳಿಸಲು ಕೂಡಲೇ ಕ್ರಮ ವಹಿಸುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ  ರಾಜೇಂದ್ರ ಕುಮಾರ್ ಕಠಾರಿಯಾ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಂದು ಜಿಲ್ಲೆಯ ಸಮಗ್ರ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಮಾತನಾಡಿ, ಕಂದಾಯ, ಸಣ್ಣ ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸೇರಿದ ೧.೮೧೦ ಕೆರೆಗಳಿದ್ದು ಈಗಾಗಲೇ ೧.೭೪೪ ಕೆರೆಗಳ ಸರ್ವೆ ಕಾರ್ಯ ಪೂರ್ಣಗೊಂಡಿದೆ ,ಇನ್ನು ೬೬ ಕೆರೆಗಳು  ಅಳತೆಯಾಗಬೇಕಾಗಿದ್ದು, ೭೭೭ ಕೆರೆಗಳ ಒತ್ತುವರಿಯನ್ನು ಗುರುತಿಸಲಾಗಿದೆ. ಇವುಗಳಲ್ಲಿ ೩೦೧ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಲಾಗಿದೆ.

    ಒತ್ತುವರಿ ತೆರವುಗೊಳಿಸಲು ಇನ್ನೂ ೪೭೬ ಕೆರೆಗಳು ಬಾಕಿಯಿವೆ ಎಂದ ಅವರು, ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ೧೨೪ ಕೆರೆಗಳಿದ್ದು ಈ ಪೈಕಿ ೩೪ ಕೆರೆಗಳು ಹಿಡುವಳಿ, ಅರಣ್ಯ, ಗೋಮಾಳ ಜಮೀನಿನಲ್ಲಿವೆ. ಪಿ.ಆರ್.ಇ.ಡಿ. ವ್ಯಾಪ್ತಿಯಲ್ಲಿ ೮೮೦ ಕೆರೆಗಳಿದ್ದು ೮೭೬ ಕೆರೆಗಳ ಸರ್ವೆ ಕಾರ್ಯ ಮುಗಿದಿದ್ದು, ಇನ್ನು ೪ ಕೆರೆಗಳ ಸರ್ವೇ ಕಾರ್ಯ ಬಾಕಿಯಿದೆ. ೩೫೬ ಕೆರೆಗಳು ಒತ್ತುವರಿಯಾಗಿದ್ದು, ೧೮೪ ಕೆರೆಗಳ ಒತ್ತುವರಿಯನ್ನು  ತೆರವುಗೊಳಿಸಲಾಗಿದೆ.

    ಇನ್ನೂ ೧೭೨ ಕೆರೆಗಳು ಒತ್ತುವರಿ ತೆರವುಗೊಳಿಸಲು ಬಾಕಿಯಿವೆ. ಗ್ರಾಮ ಪಂಚಾಯಿತಿಯಲ್ಲಿ ಒಟ್ಟು ೮೩೪ ಕೆರೆಗಳಿದ್ದು, ಅವುಗಳಲ್ಲಿ ಅಳತೆಯಾಗಿರುವ ಕೆರೆಗಳು ೭೮೫, ಅಳತೆ ಮಾಡಲು ಬಾಕಿ ಇರುವ ಕೆರೆಗಳು ೪೯, ಒತ್ತುವರಿ ಗುರುತಿಸಿದ ಕೆರೆಗಳು ೩೭೯, ಒತ್ತುವರಿ ತೆರವುಗೊಳಿಸಿರುವ ಕೆರೆಗಳು ೧೦೩, ಒತ್ತುವರಿ ತೆರವುಗೊಳಿಸಲು ಬಾಕಿ ಇರುವ ಕೆರೆಗಳು ೨೭೬. ಈ ಕೆರೆಗಳ ಒತ್ತುವರಿಯನ್ನು ಶೀಘ್ರದಲ್ಲೇ ತೆರವುಗೊಳಿಸಲಾಗುವುದು ಎಂದರು.

    ರೈತರು ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಸಂಬಂಧ ಅರಿವು ಮೂಡಿಸುವಂತೆ ಸೂಚಿಸಲಾಗಿತ್ತು, ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ವಿಫುಲ ಅವಕಾಶಗಳಿದ್ದು, ರೈತರಿಗೆ ತರಬೇತಿ ನೀಡುವಂತೆ ತಿಳಿಸಿದರು. ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಪೂರ್ಣಿಮಾ ಸಭೆಗೆ ಮಾಹಿತಿ ನೀಡಿ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ, ಕೊಪ್ಪಳಕ್ಕೆ ರೈತರನ್ನು ಅಧ್ಯಯನಕ್ಕಾಗಿ ಕರೆದುಕೊಂಡು ಹೋಗಿ ಬರಲಾಗಿದೆ ಎಂದರು.

    ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರು ಬಿತ್ತನೆಗೆ ಭೂಮಿಯನ್ನು ಹದ  ಮಾಡಿಕೊಳ್ಳುತ್ತಿದ್ದಾರೆ. ಬಿತ್ತನೆ ಬೀಜ ಮತ್ತು ರಸಗೊಬ್ಬರಕ್ಕೆ ಯಾವುದೇ ಕೊರತೆ ಇರುವುದಿಲ್ಲ ಎಂದು ಕೃಷಿ ಜಂಟಿ ನಿರ್ದೇಶಕಿ ಸುಜಾತ ಸಭೆಗೆ ಮಾಹಿತಿ ನೀಡಿದರು.

    ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗದಂತೆ ಕ್ರಮ ವಹಿಸಲು ಸೂಚಿಸಿದರು. ತರೀಕೆರೆ ತಾಲ್ಲೂಕಿನ ಬೇಗೂರು, ಮಲ್ಲೇನಹಳ್ಳಿ ಸೇರಿದಂತೆ ಏಳು ಗ್ರಾಮಗಳಲ್ಲಿ ಬೋರ್‌ವೆಲ್ ಕೊರೆದು ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಪಿ.ಆರ್.ಇ.ಡಿ.  ಇಂಜಿನಿಯರ್ ತಿಳಿಸಿದರು.

    ಎಲ್ಲಾ ಇಲಾಖೆಗಳು ಕೂಡ ಇ-ಕಚೇರಿ ಮುಖಾಂತರ ಕಾರ್ಯ ನಿರ್ವಹಿಸಬೇಕು. ಚಿಕ್ಕಮಗಳೂರು ಜಿಲ್ಲೆ ಪೈಲೆಟ್ ಜಿಲ್ಲೆಯಾಗಿರುವುದರಿಂದ ಇತರ ಜಿಲ್ಲೆಗಳಿಗೆ ಮಾದರಿಯಾಗಬೇಕೆಂದು ಎಂದು ಹೇಳಿದರು.

    ಎಲ್ಲಾ ಇಲಾಖೆಗಳು ಕೂಡ ಯಾವುದೇ ಕಾಮಗಾರಿ ಕೈಗೊಂಡರೂ ಆ ಕಾಮಗಾರಿಯ ಜಿ.ಪಿ.ಎಸ್. ಫೋಟೋವನ್ನು ಕಡ್ಡಾಯವಾಗಿ ನಮೂದಿಸುವಂತೆ ಸೂಚಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶಂಕರ್ ಕೊರವರ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

    ೨೮sಸಿಕೆಎಂ೧: ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಂದು ಜಿಲ್ಲೆಯ ಸಮಗ್ರ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆಯು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ  ರಾಜೇಂದ್ರ ಕುಮಾರ್ ಕಠಾರಿಯಾ ಅಧ್ಯಕ್ಷತೆಯಲ್ಲಿ ನಡೆಯಿತು.

    Urgent action is needed to clear encroachment on lakes

  • ಅನ್ನ, ಆರೋಗ್ಯ, ಶಿಕ್ಷಣ ವ್ಯಾಪಾರದ ಸರಕಾಗಬಾರದು

    ಅನ್ನ, ಆರೋಗ್ಯ, ಶಿಕ್ಷಣ ವ್ಯಾಪಾರದ ಸರಕಾಗಬಾರದು

    ಚಿಕ್ಕಮಗಳೂರು: -ಅನ್ನ, ಆರೋಗ್ಯ, ಶಿಕ್ಷಣ ಇವು ವ್ಯಾಪಾರದ ಸರಕಾಗದೆ ದಾನವಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಕ್ಲಿನಿಕ್ ಜನರ ಆರೋಗ್ಯ ಕಾಪಾಡುವಲ್ಲಿ ಸಹಕಾರಿಯಾಗಲಿ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.

    ಅವರು ಇಂದು ಕೆಂಪನಹಳ್ಳಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ನಮ್ಮ ಕ್ಲಿನಿಕ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಪ್ರತಿಯೊಬ್ಬರ ಜೀವನದಲ್ಲಿ ಆರೋಗ್ಯ ಮತ್ತು ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತವೆ. ಇಂದು ಈ ಎರಡನ್ನು ಲಾಭದ ದೃಷ್ಟಿಯಲ್ಲಿ ನೋಡುತ್ತಿರುವುದು ವಿಷಾಧನೀಯ. ಬಡವರಿಗೆ ಆರೋಗ್ಯ ಸಮಸ್ಯೆ ಎದುರಾದಾಗ ತುರ್ತು ಚಿಕಿತ್ಸೆ ನೀಡಲು ನಮ್ಮ ಕ್ಲಿನಿಕ್ ಅವಶ್ಯಕತೆ ಇದೆ ಎಂದರು.

    ಜಿಲ್ಲೆಗೆ ಒಟ್ಟು ೮ ನಮ್ಮ ಕ್ಲಿನಿಕ್ ಮಂಜೂರಾಗಿದ್ದು, ಈ ಪೈಕಿ ೩ ನಗರದ ವಿವಿಧೆಡೆ, ೧ ಕೆಂಪನಹಳ್ಳಿಯಲ್ಲಿ ಉದ್ಘಾಟನೆಯಾಗಿದ್ದು, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಹಾಗೂ ಉಪ್ಪಳ್ಳಿಯಲ್ಲಿ ನಮ್ಮ ಕ್ಲಿನಿಕ್ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.

    ಜನರ ಆರೋಗ್ಯ ಕಾಪಾಡುವಂತೆ ಜನಪ್ರತಿನಿಧಿಗಳಾದ ನಾವು ದೇವರಲ್ಲಿ ಪ್ರಾರ್ಥಿಸುತ್ತೇವೆಯೇ ಹೊರತು ಖಾಸಗಿ ನರ್ಸಿಂಗ್ ಹೋಂಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದರು.

    ಬಡವರು ವಾಸಿಸುತ್ತಿರುವ ಬಡಾವಣೆಗಳನ್ನು ಗುರ್ತಿಸಿ ಈ ಭಾಗದಲ್ಲಿ ನಮ್ಮ ಕ್ಲಿನಿಕ್‌ಗಳನ್ನು ಆರಂಭಿಸುತ್ತಿರುವ ಉದ್ದೇಶ ಬಡವರಿಗೆ ಕೆಲವು ತಕ್ಷಣ ತುರ್ತು ಚಿಕಿತ್ಸೆ ದೊರೆಯಬೇಕೆಂಬುದು ಸರ್ಕಾರದ ಉದ್ದೇಶ ಎಂದು ಹೇಳಿದರು.

    ಈ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಮತ್ತು ದಾದಿಯರು ನಗುಮುಖದಿಂದ ರೋಗಿಗಳ ಸೇವೆ ಮಾಡಬೇಕೆಂದು ಸೂಚಿಸಿದ ಅವರು, ಹಿಂದಿನ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ಸುಮಾರು ೩೦೦ ಕೋಟಿ ರೂ ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ರಾಜ್ಯಸರ್ಕಾರ ಅನುದಾನ ಬಿಡುಗಡೆ ಮಾಡಿದ್ದು, ಮುಂದಿನ ಎಂಟು ತಿಂಗಳ ಒಳಗೆ ಸಾರ್ವಜನಿಕ ಸೇವೆಗೆ ಲೋಕಾರ್ಪಣೆಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಕ್ಲಿನಿಕ್‌ನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಎಲ್ಲರಿಗೂ ಆರೋಗ್ಯ, ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ಸರ್ಕಾರ ಕ್ಲಿನಿಕ್‌ಗಳನ್ನು ಆರಂಭಿಸುತ್ತಿದೆ. ರೋಗದ ಉಪಶಮನಕ್ಕೆ ಹಾಗೂ ರೋಗಿಗಳ ನೆರವಿಗೆ ನಮ್ಮ ಕ್ಲಿನಿಕ್ ನೆರವಾಗುತ್ತವೆ ಎಂದರು.

    ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳವಾದಾಗ ಪೊಲೀಸ್ ಠಾಣೆ ಆರಂಭಿಸುತ್ತಾರೆ, ಎಲ್ಲರೂ ರೋಗಗಳಿಂದ ಮುಕ್ತವಾದರೆ ಶಾಶ್ವತ ಪರಿಹಾರ ದೊರಕಿದಂತಾಗುತ್ತಿದ್ದು, ಆಸ್ಪತ್ರೆಗಳ ಸಂಖ್ಯೆ ಕಡಿಮೆಯಾಗಬೇಕಾದರೆ ಇದಕ್ಕೆ ಜೀವನ ಪದ್ದತಿಯಲ್ಲಿ ಬದಲಾವಣೆ ತರಬೇಕಾಗಿದೆ ಎಂದು ತಿಳಿಸಿದರು.

    ಹಿಂದೆ ಕಾಲ್ನಡಿಗೆಯಲ್ಲಿ, ಎತ್ತಿನ ಗಾಡಿಯಲ್ಲಿ ಹೋಗುತ್ತಿದ್ದಾಗ ಜನ ಹೆಚ್ಚು ಸುಖಿಯಾಗಿದ್ದರು. ಈಗ ಬಿಪಿ, ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕಾರಣ ವಾಹನಗಳಲ್ಲಿ ಓಡಾಟ, ಸುಖ ಜೀವನ ನಡೆಸುತ್ತಿರುವುದು ಎಂದು ವಿಷಾಧಿಸಿದರು.

    ಒತ್ತಡದ ಬದುಕು ಕಾಯಿಲೆಗಳಿಗೆ ಮಾರಕ. ಈ ನಿಟ್ಟಿನಲ್ಲಿ ಸರ್ವರಿಗೂ ಒತ್ತಡಮುಕ್ತ ಬದುಕು ಅಗತ್ಯವಾಗಿದ್ದು, ಜಗತ್ತು ನಮ್ಮ ತಲೆಮೇಲೆ ಬಿದ್ದಿದೆ ಎಂಬ ಭ್ರಮೆಯನ್ನು ಬಿಡಬೇಕು ಎಂದು ಕಿವಿಮಾತು ಹೇಳಿದರು.

    ಈ ಸಂದರ್ಭದಲ್ಲಿ ನಗರಸಭಾಧ್ಯಕ್ಷೆ ಸುಜಾತ ಶಿವಕುಮಾರ್, ಸದಸ್ಯರುಗಳಾದ ಲಲಿತಾಬಾಯಿ, ಲಕ್ಷ್ಮಣ್, ಮಂಜುಳಾ ಕೆ.ಆರ್, ಬಿ.ಹೆಚ್. ಹರೀಶ್, ಡಿಹೆಚ್‌ಓ ಡಾ. ಅಶ್ವಥ್‌ಬಾಬು, ಹೆಚ್.ಪಿ ಮಂಜೇಗೌಡ, ಎಂ.ಸಿ. ಶಿವಾನಂದಸ್ವಾಮಿ, ಹರೀಶ್, ಪ್ರಕಾಶ್, ಪೌರಾಯುಕ್ತ ಬಿ.ಸಿ. ಬಸವರಾಜು, ಡಾ. ಶಶಿಕಲಾ, ಡಾ. ಪ್ರತ್ಯಕ್ಷ ಭೈರವ ಉಪಸ್ಥಿತರಿದ್ದರು.ಡಾ. ಭರತ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

    Our clinic opening ceremony