Category: ಜಿಲ್ಲಾ ಸುದ್ದಿ

  • ಸಮಾಜದಲ್ಲಿ ಪ್ರೌಢಾವಸ್ಥಮಹಿಳೆ ಕುಟುಂಬದ ಆಧಾರಸ್ತಂಭ

    ಸಮಾಜದಲ್ಲಿ ಪ್ರೌಢಾವಸ್ಥಮಹಿಳೆ ಕುಟುಂಬದ ಆಧಾರಸ್ತಂಭ

    ಚಿಕ್ಕಮಗಳೂರು: ಪ್ರೌಢಾವಸ್ಥೆಯ ಮಹಿಳೆಕುಟುಂಬದ ಆಧಾರಸ್ತಂಭ. ಆಕೆ ಆರೋಗ್ಯವಾಗಿದ್ದರೆ ಮನೆಯಲ್ಲಿ ಶಾಂತಿ-ನೆಮ್ಮದಿ ನೆಲೆಸಿರುತ್ತದೆ ಎಂದು ಆಯುರ್ವೇದ ಯೋಗತಜ್ಞೆ ಡಾ|| ಗೌರಿವರುಣ್ ಅಭಿಪ್ರಾಯಿಸಿದರು.

    ಅಕ್ಕಮಹಾದೇವಿ ಮಹಿಳಾ ಸಂಘದ ಎಂ.ಜಿ.ರಸ್ತೆ ಮತ್ತು ಮಧುವನ ಬಡಾವಣೆ ಸದಸ್ಯರನ್ನೊಳಗೊಂಡ ಶರಣೆ ಮೋಳಿಗೆಮಹಾದೇವಿ ತಂಡ ಶ್ರೀಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಆಯೋಜಿಸಿದ್ದ ‘ಬನದ ಹುಣ್ಣಿಮೆ’ ಕಾರ್‍ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಬಾಲ್ಯ, ಯೌವನ, ಪ್ರೌಡಾವಸ್ಥೆ, ಮುಪ್ಪು ನಾಲ್ಕು ಘಟ್ಟಗಳಲ್ಲಿ ಪ್ರೌಡಾವಸ್ಥೆ ಪ್ರಮುಖ. ಈ ಹಂತದ ಮಹಿಳೆಯರಿಗೆ ಇಲ್ಲಿ ನೆರೆದಿದ್ದು ಅವರ ಆರೋಗ್ಯ ಕಾಳಜಿಯ ವಿಶ್ಲೇಷಣೆ ಸೂಕ್ತ. ಮಕ್ಕಳು, ಪತಿ, ವೃದ್ಧಾಪ್ಯದ ಅತ್ತೆ-ಮಾವ ಸೇರಿದಂತೆ ಕುಟುಂಬದ ಎಲ್ಲ ಸದಸ್ಯರ ಆಗುಹೋಗುಗಳ ಬಗ್ಗೆ ಗಮನಹರಿಸಬೇಕಾದ ಅನಿವಾರ್‍ಯತೆ ಯಜಮಾನಿಗೆ ಇರುತ್ತದೆ. ಒತ್ತಡ-ಆತಂಕ ಮಾಡಿಕೊಂಡರೆ ಆರೋಗ್ಯಕ್ಕೆ ಮಾರಕ ಎಂದವರು ಎಚ್ಚರಿಸಿದರು

    ರಾಸಾಯನಿಕ ವಸ್ತುಗಳು ಹೆಚ್ಚಾಗಿರುವ ಸೋಪು, ಪೌಡರ್, ಶ್ಯಾಂಪೂ, ಬಟ್ಟೆಗಳೂ ಸೇರಿದಂತೆ ಅತಿಯಾದ ಸೌಂದರ್‍ಯವರ್ಧಕಗಳ ಬಳಕೆಯಿಂದ ಮಹಿಳೆಯರ ಹಾರ್ಮೋನ್‌ಗಳ ಮೇಲೆ ವ್ಯತಿರಿತ್ಯ ಪರಿಣಾಮ ಬೀರುತ್ತದೆ. ಬ್ರಸ್ಟ್-ಗರ್ಭಕೋಶದ ಕ್ಯಾನ್ಸರ್ ಮಹಿಳೆಯರಿಗೆ ಬರುವ ಸಾಧ್ಯತೆಗಳಿವೆ. ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಡಾ.ಗೌರಿ ಸಲಹೆ ಮಾಡಿದರು.

    ಪ್ರತಿನಿತ್ಯ ಅರ್ಧತಾಸು ಯೋಗ, ಒಂದಷ್ಟು ನಡಿಗೆ, ಪ್ರಾಣಾಯಾಮ ಮಾಡುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಪ್ರೌಷ್ಠಿಕಾಂಶಗಳನ್ನೊಳಗೊಂಡ ಆಹಾರ ಸೇವನೆ ಅತ್ಯಗತ್ಯ. ಋತುಚಕ್ರ ವ್ಯತ್ಯಯದ ಸಮಯದಲ್ಲಿ ಹಾರ್ಮೋನ್‌ಗಳ ಕಾರ್‍ಯವಿಧಾನದಲ್ಲಿ ಬದಲಾವಣೆ ಸಹಜ. ನಿದ್ರಾಹೀನತೆ, ಸಿಡುಕುತನ, ಬೆವರುವಿಕೆ, ಆಯಾಸ ಸಾಮಾನ್ಯ ಲಕ್ಷಣಗಳು. ಹೃದಯಾಘಾತ ಸೇರಿದಂತೆ ಅನೇಕ ತೊಂದರೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಅಧಿಕ. ವಾಸ್ತವವಾಗಿ ಋತುಚಕ್ರ ಮಹಿಳೆಯರಿಗೆ ರಕ್ಷಣಾಕೊಡೆಯಂತೆ ಕಾರ್‍ಯನಿರ್ವಹಿಸುತ್ತದೆ. ಬದಲಾವಣೆಯನ್ನು ಅರ್ಥಮಾಡಿಕೊಂಡು ಜೀವನಶೈಲಿ ಸುಧಾರಿಸಿಕೊಂಡರೆ ಒಳಿತು ಎಂದರು.

    ಆಹಾರದಲ್ಲಿ ಅನ್ನಕ್ಕಿಂತ ಹಣ್ಣು, ತರಕಾರಿ, ಮೊಳಕೆಕಾಳು, ಹಾಲು, ಗಟ್ಟಿಮೊಸರು, ತುಪ್ಪ ಸೇರಿದಂತೆ ನ್ಯೂಟ್ರಿಷನ್ ಅಧಿಕ ಸೇವನೆ ಅಗತ್ಯ. ಚನ್ನಾಗಿನಿದ್ದೆ ಮಾಡಬೇಕು. ಸರಿಯಾದ ಕಾಲದಲ್ಲಿ ಊಟ, ತಿಂಡಿ ಅಗತ್ಯ ಎಂದ ಡಾ.ಗೌರಿ, ನಮ್ಮಿಂದಲೇ ಮನೆಯ ನೆಮ್ಮದಿ ಶಾಂತಿ ಸಂತೋಷ ಎಂಬುದನ್ನು ಅರ್ಥಮಾಡಿಕೊಂಡು ವರ್ತಿಸಬೇಕೆಂದರು.

    ಅಕ್ಕಮಹಾದೇವಿ ಮಹಿಳಾಸಂಘದ ಅಧ್ಯಕ್ಷೆ ಯಮುನಾಸಿ.ಶೆಟ್ಟಿ ಬನದಹುಣ್ಣಿಮೆಯ ಪ್ರಾಮುಖ್ಯತೆ ಕುರಿತಂತೆ ಮಾತನಾಡಿ ಉತ್ತರಕರ್ನಾಟಕದಲ್ಲಿ ಇದೊಂದು ದೊಡ್ಡಹಬ್ಬ. ಬನಶಂಕರಿದೇವಿಯನ್ನು ಪ್ರಮುಖವಾಗಿ ಆರಾಧಿಸಲಾಗುತ್ತಿದೆ. ಮಾತೃಪ್ರಧಾನವಾದ ಆಚರಣೆ ಸಂತೋಷ-ಸಂಭ್ರಮವನ್ನು ಸಮಾಜದಲ್ಲಿ ಹೆಚ್ಚುಸುತ್ತದೆ ಎಂದರು. ತಂಡದ ಮುಖಂಡೆ ವೀಣಾವಿಶ್ವನಾಥ್ ಪ್ರಾಸ್ತಾವಿಸಿ ಮೂರುವರ್ಷ ಅವಧಿಯ ಕಾರ್‍ಯಕ್ರಮ ತೃಪ್ತಿ ತಂದಿದೆ ಎಂದು ಸದಸ್ಯರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.

    ಸದಸ್ಯರುಗಳಾದ ಸುಧಾಶೇಖರ್ ಸ್ವಾಗತಿಸಿ, ಗೀತಾಬಾಲಿ ವಂದಿಸಿದರು. ಸುಜಾತಾಜಗದೀಶ್ ಮತ್ತು ಶರ್ಮಿಳಾಅಶೋಕ ಪ್ರಾರ್ಥಿಸಿದರು, ಉಷಾ ನಿರೂಪಿಸಿ. ಉಮಾ ಅತಿಥಿಪರಿಚಯಿಸಿದರು. ಸರೋಜಮ್ಮ ಮತ್ತು ಶಾಂತವಾಣಿ ತಂಡ ನಾಡಗೀತೆ ಹಾಡಿದರು.ಮೊಬೈಲ್ ಅವಲಂಬನೆ ಕುರಿತ ಲತಾಮುರಿಗೇಶ್‌ರ ವಿಡಂಬನಗೀತೆ ಗಮನಸೆಯಿತು.

    ಕಾರ್‍ಯದರ್ಶಿ ರೇಖಾಉಮಾಶಂಕರ್, ಖಜಾಂಚಿ ಭಾರತಿಶಿವರುದ್ರಪ್ಪ, ಸಹಕಾರ್‍ಯದರ್ಶಿ ನಾಗಮಣಿಕುಮಾರ್, ಹೇಮಾಲತಾ ವೇದಿಕೆಯಲ್ಲಿದ್ದರು.
    ವಿವಿಧ ಆಟೋಟಸ್ಪರ್ಧಾ ವಿಜೇತರಿಗೆ ವೀಣಾವಿಶ್ವನಾಥ್ ಬಹುಮಾನ ವಿತರಿಸಿದರು. ಸಾಂಸ್ಕೃತಿಕ ಕಾರ್‍ಯಕ್ರಮ ಗಮನಸೆಳೆಯಿತು.

    A mature woman is the pillar of the family in the society

  • ತೃಪ್ತಿ-ಮಾನವೀಯತೆಯಿಂದ ಸಮಾಜದಲ್ಲಿ ಶಾಂತಿ-ನೆಮ್ಮದಿ-ಸೌಹಾರ್ದತೆ ಮೂಡುತ್ತದೆ

    ತೃಪ್ತಿ-ಮಾನವೀಯತೆಯಿಂದ ಸಮಾಜದಲ್ಲಿ ಶಾಂತಿ-ನೆಮ್ಮದಿ-ಸೌಹಾರ್ದತೆ ಮೂಡುತ್ತದೆ

    ಚಿಕ್ಕಮಗಳೂರು: ತೃಪ್ತಿ ಮತ್ತು ಮಾನವೀಯತೆ ಎಂಬೆರಡು ಮೌಲ್ಯಗಳನ್ನು ಬದುಕಿನಲ್ಲಿ ಎಲ್ಲರೂ ಅನುಸರಿಸಿದರೆ ಸಮಾಜದಲ್ಲಿ ಶಾಂತಿ-ನೆಮ್ಮದಿ-ಸೌಹಾರ್ದತೆ ಮೂಡುತ್ತದೆ ಎಂದು ಕರ್ನಾಟಕ ವಿಶ್ರಾಂತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷಹೆಗ್ಡೆ ಅಭಿಪ್ರಾಯಿಸಿದರು.

    ಶಿರವಾಸೆಯ ವಿವೇಕಾನಂದ ವಿದ್ಯಾಸಂಸ್ಥೆಯ ಸುವರ್ಣಮಹೋತ್ಸವ ಸಮಾರಂಭವನ್ನು ಶಖರ್‌ಶೆಟ್ಟಿ ಸಭಾಮಂಟಪದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಬಹುತೇಕ ಅವ್ಯಸ್ಥೆಗಳಿಗೆ ಲಂಚಾ ಮತ್ತು ಸ್ವಾರ್ಥತತೆ ಕಾರಣವೆಂದು ಬೊಟ್ಟುಮಾಡಿದರು.

    ಜೀವನಪಥದಲ್ಲಿ ಮಾನವೀಯತೆ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಲಂಚ ತೆಗೆದುಕೊಳ್ಳುವುದರ ಜೊತೆಗೆ ಲಂಚ ಕೊಡುವುದು ಅಪರಾಧ ಎಂಬುದನ್ನು ಅರಿಯಬೇಕು. ಸರಿದಾರಿಯಲ್ಲಿ ನಡೆಯುವ ಸಂಕಲ್ಪವನ್ನು ವಿದ್ಯಾರ್ಥಿ ಯುವಜನತೆ ಮಾಡಿದರೆ ಮಾತ್ರ ದೇಶಕ್ಕೆ ಭವಿಷ್ಯವಿದೆ ಎಂದರು.

    ಹಲವಾರು ಹುದ್ದೆಗಳಲ್ಲಿ ಕಾರ್‍ಯನಿರ್ವಹಿಸಿದರೂ ಸಮಾಜದ ಆಗು-ಹೋಗುಗಳ ಬಗ್ಗೆ ಗೊತ್ತಿರದ ಕೂಪಮಂಡೂಕದಂತೆ ಇದ್ದ ತಾವು ಲೋಕಾಯುಕ್ತಕ್ಕೆ ಬಂದಮೇಲೆ ಸಮಾಜದಲ್ಲಿ ನಡೆಯುವ ಅನ್ಯಾಯ ಗೊತ್ತಾಯಿತು. ಸಂವಿಧಾನದ ಸಂಸ್ಥೆಗಳಿಂದಲೂ ವಂಚನೆ ನೋಡುವಂತಾಯಿತು. ಇದಲ್ಲಾ ವ್ಯಕ್ತಿಗಳ ತಪ್ಪಲ್ಲ. ಸಮಾಜದ ತಪ್ಪು ಎಂದು ವಿಶ್ಲೇಷಿಸಿದ ಸಂತೋಷಹೆಗ್ಡೆ, ಅಧಿಕಾರ ಮತ್ತು ಶ್ರೀಮಂತಿಕೆ ಪೂಜಿಸುವ ಸಮಾಜ ನಮ್ಮದೆಂದರು.

    ಒಳ್ಳೆಯ ಕೆಲಸ ಮಾಡಿದವನ್ನು ಗೌರವಿಸಿ ಕೆಟ್ಟಕೆಲಸ ಮಾಡಿದವರನ್ನು ದೂರವಿಡುವ ಸಮಾಜ ಹಿಂದೆ ಇತ್ತು. ಜೈಲಿಗೆ ಹೋಗಿಬಂದವರ ಕುಟುಂಬದಿಂದಲೇ ಅಂತರ ಕಾಪಾಡುವ ವ್ಯವಸ್ಥೆ ಇತ್ತು. ತಪ್ಪು ಮಾಡಿದವರಿಗೆ ಶಿಕ್ಷೆಯ ಜೊತೆಗೆ ಕುಟುಂಬವೂ ತೊಂದರೆಗೊಳಗಾಗುತ್ತಿತ್ತು. ಆದ್ದರಿಂದ ತಪ್ಪು ಮಾಡಲು ಜನ ಹಿಂಜರಿಯುತ್ತಿದ್ದರು. ಆದರೆ ಈಗ ಅಧಿಕಾರ ಮತ್ತು ಶ್ರೀಮಂತಿಕೆಯ ಓಲೈಕೆ ಹೆಚ್ಚಾಗಿದೆ. ದೊಡ್ಡಹುದ್ದೆ ಮತ್ತು ಸಂಪತ್ತಿನ ಕ್ರೋಢೀಕರಣದಲ್ಲಿ ಪೈಪೋಟಿ. ತೃಪ್ತಿ ಎಂಬುದೇ ಇಲ್ಲ. ಮತ್ತಷ್ಟು ಬೇಕೆಂಬ ದಾಹ. ದೇಶದಲ್ಲಿ ಸಾಕಷ್ಟು ಅಭಿವೃದ್ಧಿಕಾರ್‍ಯಗಳು ಆದರೂ ಜನರ ದಾಹದಿಂದಾಗಿ ದೇಶ ಹಿಂದುಳಿದಿದೆ ಎಂದರು.

    ನೂರಾರು ಹಗರಣಗಳು ಕೋಟಿ ಕೋಟಿ ಹಣದ ಲೂಟಿ ನಿರಂತರವಾಗಿ ನಡೆದಿದೆ. ೫೦ರ ದಶಕದಲ್ಲಿ ೫೨ಲಕ್ಷರೂ.ಗಳ ಜೀಪ್ ಹಗರಣ ಗಮನ ಸೆಳೆದಿತ್ತು. ನಂತರ ೬೪ಕೋಟಿರೂ.ಗಳ ಬೋಪೋರ್ಸ್ ಹಗರಣ, ತದನಂತರ ೭೦,೦೦೦ಕೋಟಿರೂ.ಗಳ ಕಾಮನ್‌ವೆಲ್ತ್ ಹಗರಣ, ೧.೭೬ಲಕ್ಷಕೋಟಿಯ ೨ಜಿ ಹಗರಣ, ರೆಫೆಲ್ ಹಗರಣದಲ್ಲಿ ೨ಲಕ್ಷಕೋಟಿಯ ಲೂಟಿ ನಡೆದಿದೆ. ಹಿಂದೆ ಪ್ರಧಾನಿಯಾಗಿದ್ದ ರಾಜೀವಗಾಂಧಿ ಮೈಸೂರಿನ ಸಮಾರಂಭವೊಂದರಲ್ಲಿ ಅಭಿವೃದ್ಧಿಕಾರ್‍ಯಕ್ಕಾಗಿ ಸರ್ಕಾರ ೧ರೂ.ವ್ಯಯಿಸಿದರೆ ೧೫ಪೈಸೆ ಮಾತ್ರ ಜನರಿಗೆ ತಲುಪುತ್ತದೆ ಎಂದಿದ್ದರು ಎಂದು ಸ್ಮರಿಸಿದ ನ್ಯಾ.ಸಂತೋಷಹೆಗ್ಡೆ ದುರಾಸೆಗೆ ಮದ್ದಿಲ್ಲ, ಕಾನೂನುನಿಗೆ ಹೆದರುವುದಿಲ್ಲ ಎಂದು ವಿಷಾದಿಸಿದರು.

    ವಿದ್ಯಾಸಂಸ್ಥೆಯ ರೂವಾರಿ ‘ಸಿರಿವಾಸೆಯ ಸಿರಿಗಂಧ ಎಸ್.ಬಿ.ಮುಳ್ಳೇಗೌಡ’ ಮಲೆನಾಡು ಐಸಿರಿಯ ವಿಶೇಷ ಸಂಚಿಕೆಯನ್ನು ಇದೇ ಸಂದಭದಲ್ಲಿ ಲೋಕಾರ್ಪಣೆಗೊಳಿಸಿದ ಸಂತೋಷಹೆಗ್ಡೆ, ಮಕ್ಕಳಿಗೆ ನೀತಿ ಪಾಠವನ್ನು ಹೇಳಬೇಕು. ತೃಪ್ತಿ ಪರೋಪಕಾರದಂತಹ ಮೌಲ್ಯಗಳನ್ನು ಪರಿಚಯಿಸಬೇಕೆಂದರು.
    ರಾಜ್ಯಸಭಾಸದಸ್ಯ ಜಯರಾಮರಮೇಶ್ ಶುಭಹಾರೈಸಿ ಸುವರ್ಣಮಹೋತ್ಸವ ಸ್ಮರಣಸಂಚಿಕೆ ಲೋಕಾರ್ಪಣೆ ಗೊಳಿಸಿದರು.

    ಸಮಾರಂಭದ ಅಧ್ಯಕ್ಷತೆಹಿಸಿದ್ದ ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ.ಎಂ.ಭೋಜೇಗೌಡ ೫೦ವರ್ಷ ಶಾಲೆಕ್ರಮಿಸಿದ ಹಾದಿಪರಿಚಯಿಸಿದರು. ಶಿರಿವಾಸೆ ಮಂಡಲಪಂಚಾಯಿತಿ ಪ್ರಥಮ ಅಧ್ಯಕ್ಷರಾಗಿದ್ದ ಎಂ.ಎಲ್.ಮೂರ್ತಿ ಮಾತನಾಡಿ ಈ ಭಾಗದ ಶೈಕ್ಷಣಿಕ ಕ್ರಾಂತಿಗೆ ವಿವೇಕಾನಂದ ವಿದ್ಯಾಸಂಸ್ಥೆಯ ಕೊಡುಗೆ ಅಪಾರ ಎಂದರು.

    ಹೊರನಾಡು ಕ್ಷೇತ್ರ ಧರ್ಮಕರ್ತ ಡಾ.ಭೀಮೇಶ್ವರಜೋಷಿ ಎಸ್.ಬಿ.ಮುಳ್ಳೇಗೌಡರ ಕಂಚಿನಪುತ್ಥಳಿಯನ್ನು ಅನಾವರಣಗಳಿಸಿ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿ ಆಚಾರಕ್ಕೆ ಅರಸಾಗಿ, ನೀತಿಗೆಪ್ರಭುವಾಗಿ, ಮಾತಿನಲ್ಲಿ ಚೂಡಾಮಣಿಯಾಗಿ, ಲೋಕಕ್ಕೆ ಬೆಳಕಾಗಿ ಬಾಳಿ ಬದುಕಿದವರ ಸ್ಮರಣೆ ಬೆಳೆಯುವ ಯುವಜನರಿಗೆ ಆದರ್ಶಪ್ರಾಯ ಎಂದರು.

    ಶಿಕ್ಷಣದ ಜೊತೆಗೆ ಆರೋಗ್ಯ, ಸಾರಿಗೆ, ದೂರಸಂಪರ್ಕ, ಸಹಕಾರ, ವಿದ್ಯುಚ್ಛಕ್ತಿ, ರಸ್ತೆ ಸೌಕರ್‍ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಶ್ರಮಿಸಿ ಬದಲಾವಣೆಯ ಹರಿಕಾರರಾಗಿ ಜನಮಾನಸದಲ್ಲಿ ಉಳಿದಿರುವ ಮುಳ್ಳೇಗೌಡರು, ಯೋಗ ಮತ್ತು ಯೋಗ್ಯತೆ ಎರಡನ್ನೂ ಸಂಪಾದಿಸಿ ವ್ಯಕ್ತಿ ಶಕ್ತಿಯಾಗಿ ರೂಪುಗೊಂಡವರು. ಯಶೋಗಾಥೆ ಸಾಕ್ಷೀಕರಿಸುವ ವ್ಯವಸ್ಥೆಯಿಂದ ಸಮಾಜದಲ್ಲಿ ಸಂಸ್ಕಾರ ಪ್ರೇರೇಪಣೆಗೊಳ್ಳುತ್ತದೆ. ಅಂತರಂಗ ಮೆಚ್ಚಿಸುವ ಬದುಕಿಗೆ ಮಾದರಿಯಾಗುತ್ತದೆ ಎಂದು ಡಾ.ಭೀಮೇಶ್ವರಜೋಷಿ ನುಡಿದರು.

    ಸಾಧಕರಾದ ಶಾರದಮ್ಮ ಮುಳ್ಳೇಗೌಡ, ಮಹಾಚಂದ್ರ ಪ್ರತಿಷ್ಠಾನದ ರವಿಶಂಕರ್ ದಂಪತಿಗಳು, ಕೆ.ವಿ.ಬಸವನಗೌಡ, ಸಂಸ್ಥೆಯ ನಿರ್ದೇಶಕ ಅಣ್ಣೆಗೌಡ, ವೈಶ್ಯಾಹಾಸ್ಟೆಲ್ ಮುಖ್ಯಸ್ಥ ಕೆ.ಎಸ್.ರಮೇಶ್, ಬಿ.ಎಂ.ಭೋಜೇಗೌಡ, ನಿಕಟಪೂರ್ವ ಮುಖ್ಯಶಿಕ್ಷಕಿ ಅನುಸೂಯವಿಶ್ವನಾಥ್‌ರನ್ನು ಸನ್ಮಾನಿಸಲಾಯಿತು.

    ಎಸ್.ಎಂ.ಪ್ರಸನ್ನಕುಮಾರ್ ಸ್ವಾಗತಿಸಿ, ಬಸವರಾಜು ವಂದಿಸಿದರು. ನಿರ್ದೇಶಕ ಬಿ.ಎ.ಶಿವಶಂಕರ್ ಕಾರ್‍ಯಕ್ರಮ ನಿರೂಪಿಸಿದರು. ಖ್ಯಾತಹಿನ್ನಲೆಗಾಯಕ ರಾಜೇಶ್‌ಕೃಷ್ಣನ್, ಡಾ.ಶಮಿತಾ ಮಲೆನಾಡು, ಗಿಚ್ಚಿಗಿಲಿಗಿಲಿಯ ರಾಘವೇಂದ್ರ ತಂಡದಿಂದ ಸಂಗೀತಸಂಜೆ ಆಕರ್ಷಕವಾಗಿತ್ತು. ಸ್ವಾಗತಸಮಿತಿ ಸಂಚಾಲಕ ಬಿ.ನೀ.ವಿಶ್ವನಾಥ್ ಸಾಂಸ್ಕೃತಿಕ ಸಂಜೆ ನಿರೂಪಿಸಿದರು.

    Golden Jubilee Celebration of Vivekananda Educational Institute Shirvase

  • ವಿವೇಕಾನಂದ ವಿದ್ಯಾಸಂಸ್ಥೆಯ ಸುವರ್ಣಮಹೋತ್ಸವ

    ವಿವೇಕಾನಂದ ವಿದ್ಯಾಸಂಸ್ಥೆಯ ಸುವರ್ಣಮಹೋತ್ಸವ

    ಚಿಕ್ಕಮಗಳೂರು : ಬಡವರ ಮನಸ್ಸು ಖುಷಿಯಾದರೆ ನೂರು ಚಂಡಿಕಯಾಗ ಮಾಡಿದ ಫಲ ಸಿಗುತ್ತದೆ ಎಂದು ಗೌರಿಗದ್ದೆ ಶ್ರೀಕ್ಷೇತ್ರದ ಅವಧೂತ ಶ್ರೀವಿನಯ ಗುರೂಜೀ ಅಭಿಪ್ರಾಯಿಸಿದರು.

    ಶಿರವಾಸೆ ವಿವೇಕಾನಂದ ವಿದ್ಯಾಸಂಸ್ಥೆ ೫೦ವರ್ಷ ಪೂರ್ಣಗೊಳಿಸಿದ ಹಿನ್ನಲೆಯಲ್ಲಿ ಆಯೋಜಿಸಿರುವ ಎರಡುದಿನಗಳ ಸುವರ್ಣಮಹೋತ್ಸವ ಸಮಾರಂಭದಲ್ಲಿ ಇಂದು ಗುರುಶಿಷ್ಯರ ಸಮಾಗಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

    ತಿರುಗಾಟ, ವೇಷಭೂಷಣ, ಇಂಟರ್‌ನೆಟ್, ಮೊಬೈಲ್ ಸೇರಿದಂತೆ ನಾವು ಅನಗತ್ಯವಾಗಿ ನಿತ್ಯ ಮಾಡುವ ವೆಚ್ಚವನ್ನು ನಿಯಂತ್ರಿಸಿ ಅದೇ ಹಣವನ್ನು ಶಾಲೆ, ದೇವಸ್ಥಾನ, ಬಡವರ ಮನೆ ನಿರ್ಮಾಣಕ್ಕೆ ನೀಡಿದರೆ ಹೆಚ್ಚು ಉಪಯೋಗವಾಗುತ್ತದೆ. ಇವೆಲ್ಲವೂ ಚೆಂದ ಮಾಡಬಹುದು. ಇದೇ ನಿಜವಾದ ದೇವರಸೇವೆ. ಸನಾತನ ಧರ್ಮತತ್ತ್ವವು ಪರೋಪಕಾರವನ್ನೆ ಪ್ರತಿಪಾದಿಸುತ್ತದೆ ಎಂದರು.

    ನಮ್ಮ ದೇಹ ಬೆಳೆದರೂ ಅದೇ ಪ್ರಮಾಣದಲ್ಲಿ ಬುದ್ಧಿ ಬೆಳೆದಿಲ್ಲ. ದೇಶದೆಲ್ಲೆಡೆ ಬಹುತೇಕ ಎಲ್ಲ ಮಹಾಪುರುಷರ ಹೆಸರಿನಲ್ಲಿ ಬಾರ್‌ಗಳಿವೆ. ಆದರೆ ಇಬ್ಬರ ಹೆಸರಿನಲ್ಲಿ ಮಾತ್ರ ಬಾರ್ ತೆರೆದಿಲ್ಲ. ಅವೆಂದರೆ ಒಂದು ಮಹಾತ್ಮಾಗಾಂಧಿ, ಇನ್ನೊಂದು ಸ್ವಾಮಿವಿವೇಕಾನಂದ. ಏಕೆಂದರೆ ಈ ಹೆಸರುಗಳಿಗೆ ಪಾವಿತ್ರ್ಯ ಇದೆ ಎಂದರು.

    ಅಹಂಕಾರ ಮತ್ತು ಅಜ್ಞಾನ ಮನುಷ್ಯರಲ್ಲಿ ಒಟ್ಟಿಗೆ ಇರುತ್ತದೆ. ಇವನ್ನು ಬದಿಗಿರಿಸಿ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಆಗ ಮನೆ, ಹಳ್ಳಿ, ದೇಶಕ್ಕೆ ಕೊಡುಗೆ ಕೊಡಲು ಸಾಧ್ಯ. ತಂದೆ-ತಾಯಿಯರು ವಿಶ್ವವಿದ್ಯಾನಿಲಯವಿದ್ದಂತೆ. ಇವರಿಂದ ಸಂಸ್ಕಾರ ಕಲಿತು ಬೆಳೆದರೆ ಬೆಳಕಾಗಬಹುದು. ತಂದೆ ಕೆಟ್ಟರೆ ಮನೆ ಹಾಳು. ತಾಯಿ ಕೆಟ್ಟರೆ ಕುಲ ಹಾಳಾಗುತ್ತದೆ ಎಂಬ ಮಾತಿದೆ. ಹಬ್ಬ-ಹರಿದಿನಗಳು ಸುತ್ತಲಿನ ದ್ವೇಷ ಮರೆಯಲು ಹಿಂದಿನವರು ಮಾಡಿಕೊಟ್ಟ ಆಚರಣೆ. ನನ್ನೂರು, ಶಾಲೆ, ದೇವಸ್ಥಾನ, ಸುಗ್ಗಿಹಬ್ಬ, ಮಾರಿಹರಕೆ… ಇವೆಲ್ಲವೂ ಜನರನ್ನು ಬೆಸೆಯುವ ಸಾಧನಗಳೆಂಬುದನ್ನು ಅರಿಯಬೇಕು. ಶಾಲೆಯ ಸುವರ್ಣಮಹೋತ್ಸವ ಊರಹಬ್ಬವಾಗಿರುವುದು ಸಂತಸದ ಸಂಗತಿ ಎಂದರು.

    ಹಳ್ಳಿಗಳು ಸಂಸ್ಕೃತಿಯನ್ನು ಕಳೆದುಕೊಳ್ಳಬಾರದು. ಇಲ್ಲಿಯ ಯುವಕ ಯುವತಿಯರು ಪ್ರಕೃತಿ-ಸಂಸ್ಕೃತಿ ಎರಡನ್ನೂ ಕಾಪಾಡಲು ಸಂಕಲ್ಪಿಸಬೇಕು. ಬ್ಯುಸಿನೆಸ್ ಮೀಟ್‌ನಂತಹ ಯೋಜನೆಗಳು ಇಲ್ಲಿ ನಡೆಸಿದರೆ ಹಳ್ಳಿಯ ಪ್ರತಿಭಾನ್ವಿತರಿಗೆ ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ. ಈ ಸವಿನೆನಪಿಗಾಗಿ ಸಭಾಭವನ ನಿರ್ಮಿಸುವುದಾದರೆ ಲಕ್ಷರೂ. ತಮ್ಮ ಟ್ರಸ್ಟ್‌ನಿಂದ ನೀಡುವುದಾಗಿ ನುಡಿದ ವಿನಯಗುರೂಜೀ, ಶಿಕ್ಷಣಸಂಸ್ಥೆಯ ರೂವಾರಿ ಮುಳ್ಳೇಗೌಡರದು ಆದರ್ಶಬದುಕು ಎಂದರು.

    ನನ್ನಲ್ಲಿ ಬೆಳಕಿದೆ, ನಿಮ್ಮೆಲ್ಲರಲ್ಲೂ ಬೆಳಕಿದೆ ಇದನ್ನು ಅರ್ಥಮಾಡಿಕೊಳ್ಳಬೇಕು. ಲಕ್ಷ್ಯ ಇಟ್ಟು ಬದುಕಿದರೆ ವಿವೇಕಾನಂದರಾಗುತ್ತೇವೆ ಎಂದ ವಿನಯಗುರೂಜೀ, ಇಂದು ಅವರ ಹುಟ್ಟಿದ ದಿನ. ಅವರ ಹೆಸರಿನಲ್ಲೆ ಕಟ್ಟಿದ ವಿದ್ಯಾಸಂಸ್ಥೆ ಸುವರ್ಣಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಯೋಗಾಯೋಗ ಎಂದರು.

    ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹಿರಿಯಶಿಕ್ಷಕರುಗಳನ್ನು ಸನ್ಮಾನಿಸಿ ಮಾತನಾಡಿ ದಾನಗಳಲ್ಲೆ ವಿದ್ಯಾದಾನ ಶ್ರೇಷ್ಠ. ವಿದ್ಯೆಯಿಂದ ನಮ್ಮ ಬದುಕಿನ ಸ್ಥರವನ್ನು ಎತ್ತರಿಸಿಕೊಳ್ಳಬಹುದು. ಗುಡ್ಡಗಾಡು ಗ್ರಾಮೀಣ ಪ್ರದೇಶದ ನೂರಾರು ಹುಡುಗರು ಉತ್ತಮವಾಗಿ ಬದುಕು ಕಟ್ಟಿಕೊಳ್ಳಲು ಈ ಶಾಲೆ ಸಹಕಾರಿಯಾಗಿದೆ. ಮುಳ್ಳೇಗೌಡರು ಹಾಗೂ ಅವರ ಸ್ನೇಹಿತರ ಮುಂದಾಲೋಚನೆಯಿಂದ ಶಿಕ್ಷಣಸಂಸ್ಥೆ ನಿರ್ಮಾಣಗೊಂಡು ಸುವರ್ಣಮಹೋತ್ಸವ ಸಂಭ್ರಮಿಸುತ್ತಿರುವುದು ಹರ್ಷದಾಯಕ. ಇದರ ಸವಿನೆನಪಿಗೆ ಯಾವುದಾರೂ ಶಾಶ್ವತಕಾರ್‍ಯ ಆಗಬೇಕು. ತಾವೂ ಎಲ್ಲರೀತಿಯಿಂದಲೂ ಸಹಕಾರ ನೀಡುವುದಾಗಿ ರವಿ ನುಡಿದರು.

    ಜಗತ್ತು ಕಂಡ ಶ್ರೇಷ್ಠ ಜ್ಞಾನಿ ವಿವೇಕಾನಂದರು, ಬದುಕಿದ್ದು ಕಡಿಮೆ. ಆದರೆ ಸಾಧಿಸಿದ್ದು ಅದ್ವಿತೀಯ. ಚಿಕಾಗೋ ನಗರದ ವಿಶ್ವಧರ್ಮ ಸಮ್ಮೇಳನದಲ್ಲಿ ಕೇವಲ ನಾಲ್ಕೂವರೆನಿಮಿಷದ ಮಾತು ಇಡೀ ಜಗತ್ತನ್ನು ಅವರತ್ತ ಸೆಳೆಯಿತು. ಅವರಿಂದ ಪ್ರೇರಣೆ ಪಡೆದ ಸಾವಿರಾರು-ಲಕ್ಷಾಂತರ ಜನ ಬಾಳು ಹಸನು ಮಾಡಿಕೊಂಡರು. ಜೆ.ಆರ್.ಡಿ.ಟಾಟಾ ೧೯೦೫ರಲ್ಲಿ ಇಂಡಿಯನ್ ಇನ್ಸಿಟ್ಯೂಟ್ ಸೈನ್ಸ್ ಪ್ರಾರಂಭಿಸಿದ್ದು ವಿವೇಕಾನಂದರ ಸಲಹೆಯಂತೆ. ಇಲ್ಲೂ ಈ ಶಿಕ್ಷಣಸಂಸ್ಥೆಗೆ ಅವರೇ ಪ್ರೇರಣೆ ಎಂದ ಸಿ.ಟಿ.ರವಿ, ಕೊಟ್ಟಿದ್ದು ಎಂದೂ ಕೆಡುವುದಿಲ್ಲ ಎಂಬುದನ್ನು ಅರಿಯಬೇಕು. ಪಾಪ-ಪುಣ್ಯದ ವ್ಯತ್ಯಾಸ ಅರ್ಥಮಾಡಿಕೊಂಡು ಬದುಕಬೇಕೆಂದರು.

    ಸಿರಿಕಾಫಿ ರೆಸಾರ್ಟ್ ಮಾಲೀಕರಾದ ಸ.ನಾ.ರಮೇಶ್ ಸಾಧಕರನ್ನು ಗೌರವಿಸಿ ಮಾತನಾಡಿ ಭಾರತದ ಚೈತನ್ಯಶಕ್ತಿ ವಿವೇಕಾನಂದ ಎಂದು ಸ್ವರಚಿತ ಕವನ ವಾಚಿಸಿದರು. ಶಿವಮೊಗ್ಗ ಸೂಡ ಮಾಜಿಅಧ್ಯಕ್ಷ ಜ್ಯೋತಿಪ್ರಕಾಶ್, ವಿಶ್ರಾಂತ ಮುಖ್ಯ ಶಿಕ್ಷಕರುಗಳಾದ ಮಾಯಿಲಪ್ಪ, ರಾಮಪ್ಪ ಮತ್ತು ಎನ್.ಎಂ.ಅನುಸೂಯ ಮುಖ್ಯಅತಿಥಿಗಳಾಗಿ ಮಾತನಾಡಿದರು.

    ಸಾಧಕರುಗಳಾದ ಡಾ.ಎಚ್.ಎನ್.ಅಶೋಕ, ಡಾ.ಮಧುಸೂದನ್, ಬಾಲಮುರುಳಿಕೃಷ್ಣ, ಕೊಳಗಾಮೆ ಕಾಂತರಾಜ್, ಹಡ್ಲುಗದ್ದೆ ಶಿವಕುಮಾರ, ಸಾವಯವಕೃಷಿಕ ಉಮೇಶ್‌ರನ್ನು ಸನ್ಮಾನಿಸಲಾಯಿತು.

    ವಿದ್ಯಾಸಂಸ್ಥೆ ಉಪಾಧ್ಯಕ್ಷ ಎನ್.ಶ್ರೀಕಾಂತಶೆಟ್ಟಿ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ ಹಿರಿಯರಿಂದ ನಿರ್ಮಾಣಗೊಂಡಿರುವ ವಿದ್ಯಾಸಂಸ್ಥೆ ಅವರು ಹಾಕಿಕೊಟ್ಟ ಹಾದಿಯಲ್ಲೆ ಮುನ್ನಡೆಯುತ್ತಿದೆ. ವಿದ್ಯಾರ್ಥಿಗಳು ಆಸಕ್ತಿಯಿಂದ ಕಲಿತು, ಬದುಕುಕಟ್ಟಿಕೊಂಡು ಶಾಲೆಗೆ ನೆರವಾಗುತ್ತಿರುವುದು ಸಂತಸದ ಸಂಗತಿ ಎಂದರು.

    ಶಾಲಾಮುಖ್ಯ ಶಿಕ್ಷಕ ಸಾಬಣ್ಣಮಾದರ್ ಸ್ವಾಗತಿಸಿ, ವಾಸುಪೂಜಾರಿ ಮತ್ತು ರಾಜೇಶ್ ಕಾರ್‍ಯಕ್ರಮ ನಿರೂಪಿಸಿ, ನಿರ್ದೇಶಕ ಬಿ.ನೀ.ವಿಶ್ವನಾಥ್ ವಂದಿಸಿದರು. ಶಾಲೆಯಲ್ಲಿ ಈ ಹಿಂದೆ ಕಾರ್‍ಯನಿರ್ವಹಿಸಿರುವ ರವಿಕುಮಾರ್, ತುಂಗಾಭದ್ರ, ಸುಬ್ಬಲಕ್ಷ್ಮೀ ಸೇರಿದಂತೆ ೨೨ಶಿಕ್ಷಕರು ಹಾಗೂ ಸಿಬ್ಬಂದಿಗಳನ್ನು ಇದೇ ಸಂದರ್ಭದಲ್ಲಿ ಸಂಸ್ಥೆ ಅಧ್ಯಕ್ಷ ಭೋಜೇಗೌಡ, ಕಾರ್‍ಯದರ್ಶಿ ದೇವಣ್ಣಗೌಡ, ನಿರ್ದೇಶಕ ಶಿವಶಂಕರ್, ಕಲಾಪ್ರಸನ್ನಕುಮಾರ್ ಸನ್ಮಾನಿಸಿದರು.

    Golden Jubilee of Vivekananda Educational Institution

  • ಅದ್ದೂರಿಯಾಗಿ ಜರುಗಿದ ಶ್ರೀ ಬನಶಂಕರಿ ಅಮ್ಮನವರ ಜಾತ್ರಾ ಮಹೋತ್ಸವ

    ಅದ್ದೂರಿಯಾಗಿ ಜರುಗಿದ ಶ್ರೀ ಬನಶಂಕರಿ ಅಮ್ಮನವರ ಜಾತ್ರಾ ಮಹೋತ್ಸವ

    ಚಿಕ್ಕಮಗಳೂರು: ನಗರದ ಎಂ.ಜಿ.ರಸ್ತೆಯಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಬನಶಂಕರಿ ಅಮ್ಮನವರ ಬನದ ಹುಣ್ಣಿಮೆಯ ಜಾತ್ರಾಮಹೋತ್ಸವ ಸೋಮವಾರ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

    ದೇವಾಂಗ ಸಂಘ ಮತ್ತು ಬನಶಂಕರಿ ಮಹಿಳಾ ಸಂಘದ ವತಿಯಿಂದ ಆಯೋಜಿಸಿದ್ದ ಜಾತ್ರಾ ಮಹೋತ್ಸವದಲ್ಲಿ ಭಕ್ತರು ಪಾಲ್ಗೊಳ್ಳುವ ಮೂಲಕ ಬನಶಂಕರಿ ದೇವಿಯ ಕೃಪೆಗೆ ಪಾತ್ರರಾದರು.

    ದೇವಾಂಗ ಸಂಘದ ಅಧ್ಯಕ್ಷ ಭಗವತಿಹರೀಶ್ ಮಾತನಾಡಿ ದೇವಾಂಗ ಸಮಾಜದ ಕುಲದೇವತೆ ಬನಶಂಕರಿ ಅಮ್ಮನವರ ೧೦ ನೇ ವರ್ಷದ ಜಾತ್ರೆಯನ್ನು ವಿಜೃಂಭಣೆಯಿಂದ ನಡೆಸಲಾಗುತ್ತಿದ್ದು, ವಿಶೇಷ ಪೂಜೆ, ಹೋಮ, ಮದ್ಯಾಹ್ನ ಅನ್ನ ಸಂತರ್ಪಣೆ ನೆಡೆಸಲಾಗುತ್ತಿದ್ದು, ಸಂಜೆ ೫ ಗಂಟೆಗೆ ರಾಜ ಬೀದಿಗಳಲ್ಲಿ ಬನಶಂಕರಿ ಅಮ್ಮನವರ ಉತ್ಸವ ಮೆರವಣಿಗೆ ಮತ್ತು ೮ ಗಂಟೆಗೆ ಪ್ರಸಾದ ವಿತರಿಸಲಾಗುವುದು,

    ಅನಂತ ಶರ್ಮ ಅವರ ನೇತೃತ್ವದಲ್ಲಿ ಕುಲದೇವತಾ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ ಗಣಪತಿ ಪೂಜೆ, ಬನಶಂಕರಿ ಹೋಮ ಮಂತ್ರಗಳ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು. ಮಧ್ಯಾಹ್ನ ೧ ಗಂಟೆಯ ಪೂರ್ಣಾಹುತಿ ಬಳಿಕ ಪ್ರಸಾದ ವಿನಿಯೋಗ ಮಾಡಲಾಯಿತು ಎಂದು ತಿಳಿಸಿದರು.

    ದೇವಾಂಗ ಸಂಘದ ಗೌರವಾಧ್ಯಕ್ಷ ಶ್ರೀನಿವಾಸ್ ಮಾತನಾಡಿ ದೇವಾಂಗ ಸಂಘವು ಬನದ ಹುಣ್ಣಿಮೆಯ ಬನಶಂಕರಿ ಅಮ್ಮನವರ ಜಾತ್ರಾಮಹೋತ್ಸವಕ್ಕೆ ವಿವಿಧ ಭಾಗಗಳಿಂದ ಅನೇಕ ಭಕ್ತರು ಪ್ರತಿ ವರ್ಷ ಆಗಮಿಸುತ್ತಿದ್ದರು ಲೋಕಕಲ್ಯಾಣಾಥವಾಗಿ ವಿಶೇಷ ಪೂಜೆ ಪುನಸ್ಕಾರಗಳನ್ನು ಸಲ್ಲಿಸಿ ದೇವಿಗೆ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದರು.

    ಬನಶಂಕರಿ ಅಮ್ಮನವರ ೧೦ನೇ ವರ್ಷದ ಬನದ ಹುಣ್ಣಿಮೆ ಕಾರ್ಯಕ್ರಮವನ್ನು ರಾಜ್ಯಾದ್ಯಂತ ನಡೆಸಲಾಗುತ್ತಿದ್ದು, ಬಾದಾಮಿ ಬನಶಂಕರಿ ದೇವಾಲಯದಲ್ಲಿ ಇಂದು ಜಾತ್ರೋತ್ಸವ ನಡೆಯುತ್ತಿದ್ದು, ಇಂದು ಬೆಳಿಗ್ಗೆ ಆಂಜನೇಯ ದೇವಸ್ಥಾನದಲ್ಲಿ ಅಮ್ಮನವರಿಗೆ ಪೂಜೆ ಸಲ್ಲಿಸಿ ಹೋಮ ನಡೆಸಲಾಯಿತು, ಸಂಜೆ ೫ ಗಂಟೆಗೆ ಬನಶಂಕರಿ ಅಮ್ಮನವರ ಉತ್ಸವ ನಡೆಸಲಾಗುತ್ತಿದೆ ಹಾಗೂ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.

    ಬನಶಂಕರಿ ಮಹಿಳಾ ಸಂಘದ ಅಧ್ಯಕ್ಷೆ ಸುವರ್ಣಕೇಶವಮೂರ್ತಿ ಮಾತನಾಡಿ ಕಳೆದ ೨೦೧೩ ರಿಂದ ಬನಶಂಕರಿ ಅಮ್ಮನವರ ಜಾತ್ರಾಮಹೋತ್ಸವವನ್ನು ದೇವಾಂಗ ಸಮಾಜದ ಬಂಧುಗಳು ಒಗ್ಗಟ್ಟಾಗಿ ಆಚರಣೆ ಮಾಡುತ್ತಾ ಬಂದಿದ್ದು, ವಿಶೇಷವಾಗಿ ಮಹಿಳೆಯರಿಗೆ ಮಡಿಲು ತುಂಬುವ ಸೇವೆ, ಪ್ರಾರ್ಥನೆ, ಮೆರವಣಿಗೆ ಭಕ್ತರನ್ನು ಸೆಳೆಯುವಂತೆ ಮಾಡುತ್ತಿತ್ತು ಎಂದರು. ಹೋಮ ಕಾರ್ಯಕ್ರಮದಲ್ಲಿ ನಾಗಶ್ರೀ ತ್ಯಾಗರಾಜ್ ಭಾಗವಹಿಸಿದ್ದರು,

    ಈ ಸಂಧರ್ಭದಲ್ಲಿ ಉಪಾಧ್ಯಕ್ಷರಾದ ಸಿ.ಎನ್ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಟಿ. ತ್ಯಾಗರಾಜ್, ಖಜಾಂಚಿ ಜೆಎಸ್ ರವಿಶಂಕರ್, ಲೋಹಿತ್, ಕೃಷ್ಣಮೂರ್ತಿ, ಗೌರೀಶ್, ಚಂದ್ರು ನಿರ್ದೇಶಕರಾದ ರಾಮಚಂದ್ರ, ಮೋಹನ್‌ಕುಮಾರ್, ಗೋವಿಂದಶೆಟ್ಟಿ, ರಾಜಕುಮಾರ್, ಪ್ರಕಾಶ್, ನವೀನ್‌ಕುಮಾರ್, ಶಿವರಾಜ್, ನಗರಸಭೆ ಸದಸ್ಯರಾದ ದೀಪರವಿಕುಮಾರ್, ಧನಲಕ್ಷ್ಮೀಗೋಕುಲ್, ಉಪಾಧ್ಯಕ್ಷೆ ರಾಧರಾಜ್‌ಕುಮಾರ್, ನಿರ್ದೇಶಕರಾದ ಭಾಗ್ಯಮೋಹನ್, ಶ್ಯಾಮಲಾರಾಜು, ಮಂಜುಳಾಪುಟ್ಟರಾಜು, ರತ್ನರವಿಕುಮಾರ್ ಉಪಸ್ಥಿತರಿದ್ದರು.

    The grand festival of Sri Banashankari Amman was held

  • ಜ್ಯೂನಿಯರ್ ಕಾಲೇಜು ವಾರ್ಷಿಕೋತ್ಸವ

    ಜ್ಯೂನಿಯರ್ ಕಾಲೇಜು ವಾರ್ಷಿಕೋತ್ಸವ

    ಚಿಕ್ಕಮಗಳೂರು; ಸರಕಾರಿ ಶಾಲಾ, ಕಾಲೇಜುಗಳಲ್ಲಿ ಓದಿದ ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನ ಹೆಚ್ಚು. ಅವರು ನಾಟಿ ಹಣ್ಣಿದ್ದಂತೆ ಸಿಹಿ ಜಾಸ್ತಿ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಅಭಿಪ್ರಾಯಿಸಿದರು.

    ನಗರದ ಜ್ಯೂನಿಯರ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾಲೇಜು ವಾರ್ಷಿಕೋತ್ಸವ ಹಾಗೂ ಸಹಪಠ್ಯ ಚಟುವಟಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ ಸರಕಾರಿ ಜ್ಯೂನಿಯರ್ ಕಾಲೇಜು ಜಿಲ್ಲೆಯ ಪ್ರತಿಷ್ಟಿತ ಕಾಲೇಜುಗಳಲ್ಲಿ ಒಂದು. ಇಲ್ಲಿನ ವಿದ್ಯಾರ್ಥಿಗಳು ಖಾಸಗಿ ವಿದ್ಯಾರ್ಥಿಗಳಿಗಿಂತ ಯಾವುದರಲ್ಲೂ ಕಮ್ಮಿ ಇಲ್ಲ ಇಲ್ಲಿ ಓದಿದವರು ಸಮೃದ್ಧಬದುಕು ಕಟ್ಟಿಕೊಂಡಿದ್ದಾರೆ. ಸರಕಾರಿ ಶಾಲೆಯಲ್ಲಿ ಓದಿದ ಅಬ್ದುಲ್‌ಕಲಂ, ವಿಶ್ವೇಶ್ವರಯ್ಯ ಮತ್ತಿತರೆ ಗಣ್ಯರು ಜನಮಾನಸದಲ್ಲಿ ನೆಲಯೂರಲು ಸರಕಾರಿ ಶಾಲಾ, ಕಾಲೇಜುಗಳೇ ಮೂಲ ಕಾರಣ ಎಂದು ಹೇಳಿದರು.

    ವಿಧಾಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ವಿದ್ಯಾದದಾತಿ ವಿನಯಂ ಎನ್ನುವಂತೆ ವಿದ್ಯೆ ಕಲಿಯುತ್ತಿರುವ ವಿದ್ಯಾರ್ಥಿಗಳು ವಿನಯ ಬೆಳೆಸಿಕೊಳ್ಳಿ. ೩೮ ವರ್ಷದ ಹಿಂದೆ ಪಿಯುಸಿ ಓದುತ್ತಿದ್ದ ದಿನಗಳು ಇಂದು ನೆನಪಾಗುತ್ತಿದೆ. ಓದು ಒಕ್ಕಾಲು, ಬುದ್ದಿ ಮುಕ್ಕಾಲು ಹಿಂದಿನ ಗಾದೆ ಇಂದು ಒಕ್ಕಲು ಓದು ಮುಕ್ಕಾಲು ಬುದ್ದಿ ಎಂಬುದು ಈಗಿನ ಗಾದೆ ಎಂದರು.

    ಬುದ್ದಿವಂತನಾದವನು ಎಂತಹ ಅಪಾಯ ಸ್ಥಿತಿಯಲ್ಲಿದ್ದರೂ ಪಾರಾಗಬಲ್ಲ ಎಂದರು. ಹಿಂದಿನ ಅವಯಲ್ಲಿ ಎಂಆರ್‌ಪಿಎಲ್ ಸಂಸ್ಥೆಯ ಸಿಎಸ್‌ಆರ್ ನಿ ೭೫ ಲಕ್ಷರೂ ವೆಚ್ಚದಲ್ಲಿ ಒಂದು ಕಟ್ಟಡ, ಆರ್‌ಐಡಿಎಫ್ ಯೋಜನೆಯಡಿ ೨ ಕೋಟಿ ರೂ.ವೆಚ್ಚದಲ್ಲಿ ಮತ್ತೊಂದು ಕಟ್ಟಡ ನಿರ್ಮಿಸಲಾಗಿದೆ ಎಂದು ಹೇಳಿದರು.

    ವಾಗ್ಮಿ ಮಹೇಶ್ ಪ್ರಧಾನ ಉಪನ್ಯಾಸ ನೀಡಿ, ವಿದ್ಯಾರ್ಥಿಗಳಲ್ಲಿ ಸನ್ನಡತೆ ಬೀಜಬಿತ್ತಬೇಕು. ಗುರುಗಳಿಗೆ ಗೌರವಿಸುವ ಸದ್ಗುಣ ತುಂಬಬೇಕು. ಕಲೆ, ಸಂಸ್ಕೃತಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾಲೇಜಿನ ಉಪನ್ಯಾಸಕರು ಮುತುವರ್ಜಿ ವಹಿಸಬೇಕು ಎಂದು ಹೇಳಿದರು.

    ಕಾಲೇಜು ಪ್ರಾಂಶುಪಾಲ ಜಿ.ಬಿ.ವಿರೂಪಾಕ್ಷ ಪ್ರಾಸ್ತಾವಿಕವಾಗಿ ಮಾತನಾಡಿ, ಸರಕಾರಿ ಜ್ಯೂನಿಯರ್ ಕಾಲೇಜು ಆಳವಾಗಿ ಬೇರೂರಿರುವ ಅಶ್ವತ್ಥ ಮರ, ಇಲ್ಲಿ ವಿದ್ಯಾರ್ಜನೆ ಮಾಡಿರುವ ವಿದ್ಯಾರ್ಥಿಗಳು ರಾಜಕೀಯ, ಶೈಕ್ಷಣಿಕ ಹಾಗು ಔದ್ಯೋಗಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.

    ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಡಿಡಿಪಿಯು ಪುಟ್ಟಾನಾಯ್ಕ, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ರಫೀಕ್ ಅಹ್ಮದ್, ನಿಕಟಪೂರ್ವ ಅಧ್ಯಕ್ಷ ವೆಂಕಟೇಶ್ ಪೈ, ಸದಸ್ಯರಾದ ಪ್ರಜ್ವಲ್, ಸೀತರಾಮನ್, ಸುರೇಶ್ ಮತ್ತಿತರರಿದ್ದರು.

    Junior College Anniversary

  • ಕ್ರೀಡಾಕೂಟಗಳು ಸ್ನೇಹ,ಸಂಬಂಧ ಗಟ್ಟಿಗೊಳಿಸಲಿ

    ಕ್ರೀಡಾಕೂಟಗಳು ಸ್ನೇಹ,ಸಂಬಂಧ ಗಟ್ಟಿಗೊಳಿಸಲಿ

    ಚಿಕ್ಕಮಗಳೂರು: ಕ್ರೀಡಾಕೂಟಗಳು ಸ್ನೇಹ ಸಂಬಂಧ ಗಟ್ಟಿಗೊಳಿಸಿ ಕ್ರೀಡಾ ಮನೋಭಾವ ಬೆಳೆಸುವಂತೆ ಮಾಡಲಿ ಎಂದು ಎಲ್‌ಐಸಿ ಉಡುಪಿ ವಿಭಾಗೀಯ ಹಿರಿಯ ವ್ಯವಸ್ಥಾಪಕ ರಾಜೇಶ್‌ಮುಧೋಳ್ ಹೇಳಿದರು.

    ನಗರದ ರಾಮನಹಳ್ಳಿ ಡಿಎಆರ್ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಎಲ್‌ಐಸಿ ವಿವಿಧ ಶಾಖೆಗಳ ಜಿಲ್ಲಾಮಟ್ಟದ ಮಲ್ನಾಡ್ ಕಪ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು

    ಡಿವಿಜನ್ ಹಂತದ ಕ್ರೀಡಾಕೂಟ ನಡೆಯುತ್ತಿದೆ. ಕಳೆದ ವರ್ಷದಂತೆಯೇ ಈಬಾರಿಯೂ ಉತ್ತಮ ಪ್ರದರ್ಶನ ನೀಡಿ. ಕ್ರೀಡಾ ಪರಿಶ್ರಮ, ಸಾಧನೆ ಅದು ಎಲ್‌ಐಸಿ ನ್ಯೂ ಬ್ಯುಸಿನೆಸ್ ಮತ್ತು ಆಡಳತದಲ್ಲೂ ಹೊರಹೊಮ್ಮಲಿ ಎಂದರು. ಎಲ್‌ಐಸಿ ಯ ಮೂರು ಹಂತದ ಅಕಾರಿ ಸಿಬ್ಬಂದಿ ಒಟ್ಟಾಗಿ ಸೇರಲು ಕ್ರೀಡಾ ಕೂಟಗಳು ಒಂದು ಉತ್ತಮ ವೇದಿಕೆ ಎಂದರು.

    ಎಂ.ಎನ್.ಚರಣ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಲ್ನಾಡ್ ಕಪ್ ೩ ನೇ ಬಾರಿ ನಡಯುತ್ತಿದೆ. ೨೦೨೨ ರಲ್ಲಿ ನಾನು ಮತ್ತು ಮೂಡಿಗೆರೆ ಶಾಖೆಯ ಮಂಜುನಾಥ್ ಸೇರಿ ಕ್ಲಬ್‌ನಲ್ಲಿ ಕ್ರೀಡಾಕೂಟದ ಬಗ್ಗೆ ಆಲೋಚಿಸಿದ್ದವು. ಅದು ಮುಂದುವರಿದು ಮಲೆನಾಡು ಕಪ್ ಕ್ರಿಕೆಟ್ ಆಟದಿಂದ ಕ್ರೀಡಾಕೂಟ ಶುರುವಾಯಿತು. ಈಗ ೨೦೨೪ ನೇ ವರ್ಷದ ಕ್ರೀಡಾಕೂಟ ಹಮ್ಮಿಕೊಂಡಿದ್ದು ಈ ಕ್ರೀಡೆಯೂ ನಮ್ಮೆಲ್ಲರಿಗೂ ಸ್ಪೂರ್ತಿಯಾಗಿ ನಮ್ಮ ಸ್ನೇಹ, ಸಂಬಂದ ಗಟ್ಟಿಗೊಳಿಸಲಿ, ಕ್ರೀಡಾ ಮನೋಭಾವಬೆಳೆಯಲಿ ಎಂದು ಹೇಳಿದರು.

    ಚಿಕ್ಕಮಗಳೂರು ಮುಖ್ಯಶಾಖೆಯ ಎಸ್‌ಡಿಎಂ, ಅಕಾರಿಗಳಾದ ಜಗದೀಶ್ ಭಂಡಾರಿ, ಎಬಿಎಂ ರಮೇಶ್, ಸೋಮ್ಲಾನಾಯ್ಕ, ಶ್ರೀನಿವಾಸ್, ರಾಜೇಶ್, ಪಿತಾಂಬರ್, ಶಂಕ್ರಪ್ಪ, ಡಿಎಒ ಯೋಗೀಶ್, ಮುತ್ತಯ್ಯ ಮತ್ತಿತರಿದ್ದರು. ಸೋಮಶೇಖರ್ ಸ್ವಾಗತಿಸಿ, ಶಾರದಮ್ಮ ಪ್ರಾರ್ಥಿಸಿದರು.

    LIC various branches district level Malnad Cup cricket tournament

  • ಹೆಣ್ಣು ಎಂದರೆ ಒಂದು ಕುಲವನ್ನು ಉದ್ಧಾರ ಮಾಡುವವಳು

    ಹೆಣ್ಣು ಎಂದರೆ ಒಂದು ಕುಲವನ್ನು ಉದ್ಧಾರ ಮಾಡುವವಳು

    ಚಿಕ್ಕಮಗಳೂರು: ಹೆಣ್ಣು ಎಂದರೆ ಒಂದು ಕುಲವನ್ನು ಉದ್ಧಾರ ಮಾಡುವವಳು. ಹೆಣ್ಣುತನಕ್ಕೆ ಪಾವಿತ್ರ್ಯತೆ ಇದೆ. ಹೆಣ್ಣುತನದ ಜವಾಬ್ದಾರಿಯನ್ನು ಅರಿತು ಬದುಕಿದ ದಿನ ನಿಜವಾದ ಮಹಿಳಾ ದಿನಾಚರಣೆ ಆಗುತ್ತದೆ ಎಂದು ಹರಿಹರಪುರ ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಹೇಳಿದರು.

    ಅವರು ಭಾನುವಾರ ನಗರದ ಕುವೆಂಪು ಕಲಾ ಮಂದಿರದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಕುರುಹಿನ ಶೆಟ್ಟಿ (ನೇಕಾರ) ಮಹಿಳಾ ಸಂಘದ ಎಂಟನೇ ವರ್ಷದ ವಾರ್ಷಿಕೋತ್ಸವ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಪುರಸ್ಕಾರ ಸಮಾರಂಭದಲ್ಲಿ ಅವರು ಪ್ರವಚನ ನೀಡಿದರು.

    ಜಗತ್ತಿನಲ್ಲಿ ಬಿಡುವಿಲ್ಲದ ಚಕ್ರವೊಂದಿದೆ ಅದು ಕಾಲ ಚಕ್ರ. ಅದನ್ನು ಹೊರತು ಪಡಿಸಿದರೆ ಮನೆಗಳಲ್ಲಿರುವ ತಾಯಂದಿರು. ಆಕೆ ಒಂದು ಪರುಷನ ಬೆಳವಣಿಗೆಗೆ ಮಹಿಳೆ ಐದು ರೀತಿ ಸಹಾಯ ಮಾಡುತ್ತಾಳೆ. ನಮಗೆ ಈ ಜಗತ್ತನ್ನು ತೋರಿಸಿದ್ದು ತಾಯಿ ಎಂದರು.

    ಏಳು ಮಕ್ಕಳನ್ನು ಹೆತ್ತ ತಾಯಿಗೆ ಅದು ಭಾರವಾಗಲಿಲ್ಲ. ಆ ಏಳು ಮಂದಿ ಮಕ್ಕಳು ಕೆಲಸಕ್ಕೆ ಸೇರಿದ ಮೇಲೆ ಹೆತ್ತ ತಾಯಿ ಭಾರವಾಗದಿರಲಿ. ಬಿಪಿ, ಶುಗರ್ ಮಾತ್ರೆ ಕೊಡದೆ ವೃದ್ಧಾಶ್ರಮಕ್ಕೆ ಬಿಡಲಾಗುತ್ತಿದೆ. ಆಕೆಗೆ ನೀವು ಎಷ್ಟೇ ಹಣ ಕೊಟ್ಟರು ಭಾವನೆ ಕೊಟ್ಟಂತಾಗುವುದಿಲ್ಲ ಎಂದರು.

    ಹೆತ್ತ ತಾಯಿಯ ಬಳಿ ಬೆಳೆಯದೆ, ಅಜಿಯ ತೊಡೆಯ ಮೇಲೆ ಮಲಗದೆ, ಹಬ್ಬಗಳಲ್ಲಿ ತಿಂಡಿ ತಿನಿಸುಗಳನ್ನು ಮಾಡಿಸಿಕೊಂಡು ತಿನ್ನುವಂತಹ ಸಹಜತೆಯೇ ಹೊರಟು ಹೋಗಿದೆ. ಈ ಹಿನ್ನೆಲೆಯಲ್ಲಿ ಎಷ್ಟೋ ಮಂದಿ ನಗರದ ಮಕ್ಕಳಿಗೆ ಸಂಸ್ಕಾರವೇ ಇಲ್ಲದಂತಾಗಿದೆ. ಏನೇ ಕೃತಕತೆ ಮಾಡಿದರೂ ಅಮ್ಮ ಎನ್ನುವ ಶಬ್ಧಕ್ಕೆ ಪರ್ಯಾಯವಿಲ್ಲ. ಎಷ್ಟೇ ದೊಡ್ಡ ರೌಡಿಯಾಗಿದ್ದರೂ ತಾಯಿ ತೀರಿಕೊಂಡಾಗ ಅಳುವುದನ್ನು ನಾವು ನೋಡಿದ್ದೇವೆ ಎಂದರು.

    ನಮ್ಮ ಪ್ರಧಾನಿಗಳು ತಾಯಿ ತೀರಿಕೊಂಡಾಗ ಸಾಮಾನ್ಯ ಮನುಷ್ಯರಂತೆ ಶವ ಂಸ್ಕಾರದ ಗೌರವವನ್ನು ಕೊಟ್ಟು ತಾಯಿಯ ಎದುರು ಎಲ್ಲರೂ ಚಿಕ್ಕವರು ಎನ್ನುವುದನ್ನು ತೋರಿಸಿಕೊಟ್ಟರು. ನಾವು ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿರುತ್ತೇವೆ. ಆದರೆ ಪ್ರಗತಿ ವಿಚಾರದಲ್ಲಿ ಸಕ್ರೀಯರಾಗುವುದಿಲ್ಲ ಎಂದು ವಿಷಾಧಿಸಿದರು.

    ಮಹಿಳಾ ದಿನಾಚರಣೆ ಆಚರಿಸುವಾಗ ಮೊದಲು ಮಹಿಳೆಯರು ಮಹಿಳೆಯರನ್ನು ದ್ವೇಷ ಮಾಡುವುದನ್ನು ಬಿಡಬೇಕು. ಉತ್ತರ ಕರ್ನಾಟಕದ ಭಾಗದಲ್ಲಿ ವೃದ್ಧಾಶ್ರಮಗಳು ಕಡಿಮೆ ಒಟ್ಟು ಕುಟುಂಬಗಳು ಅಲ್ಲಿ ಹೆಚ್ಚು. ಎಲ್ಲರೂ ಒಂದೇ ಮನೆಯಲ್ಲಿ ಜೋಳದ ರೊಟ್ಟಿ ತಟ್ಟಿ ಊಟ ಮಾಡುತ್ತಾರೆ. ಅಲ್ಲಿ ಭಾರೀ ದೊಡ್ಡದಾದ, ಸವಲತ್ತುಗಳಿರುವ ಮನೆಗಳಿಲ್ಲದಿದ್ದರು ಒಗ್ಗಟು ಉಂಟು ಅವರಲ್ಲಿ ವಿದ್ಯಾಭ್ಯಾಸ ಕಡಿಮೆ ಇದೆ. ನಮ್ಮಲ್ಲಿ ಎಂಬಿಬಿಎಸ್, ಎಂಬಿಎ ಎಲ್ಲ ಮಾಡಿದವರಿದ್ದಾರೆ. ಆದರೂ ಆ ರೀತಿ ಒಗ್ಗಟ್ಟಿಲ್ಲ. ಎಲ್ಲಿ ತಪ್ಪಾಗುತ್ತಿದೆ. ವಿದ್ಯೆಯೇ ಅಹಂಕಾರಕ್ಕೆ ದಾರಿಯಾಗುತ್ತಿದೆಯೇ ಎನ್ನುವುದನ್ನು ಆಲೋಚಿಸಬೇಕಿದೆ ಎಂದರು.

    ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಮನೆಯೊಂದಿಗೆ ಮನಶ್ಯಾಂತಿ, ಹಸಿವಿನೊಂದಿಗೆ ಭೋಜನ ಸಿಗುವಂತಾಗಲಿ, ಧನದೊಂದಿಗೆ ದಾನದ ಗುಣ ಬರಲಿ, ಹಾಸಿಗೆಯೊಂದಿಗೆ ನಿದ್ದೆಯೂ ಇರಬೇಕೆನ್ನುವ ರೀತಿ ಬದುಕು ಬೇಕೆನ್ನುವುದಾದರೆ ನಾವು ನಮಗೋಸ್ಕರ ಮಾತ್ರ ಎಂದು ಯೋಚಿಸದೆ ನಮ್ಮ ಬದುಕಿನ ಜೊತೆಗೆ ನೆರೆ ಹೊರೆಯವರ ಬದುಕಿನಲ್ಲೂ ನೆರವಾಗಬೇಕು ಎಂದರು.

    ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಸಂಘಟನೆಗೆ ಹೆಚ್ಚು ಶಕ್ತಿ ಇರುವುದರಿಂದ ಮಹಿಳೆಯರು ಸಂಘಟಿತರಾಗಿ ಹೋರಾಟ ಮಾಡುವುದರಿಂದ ಹಕ್ಕುಗಳನ್ನು ಪಡೆಯಬಹುದು. ಪುರುಷರಷ್ಟೇ ಮಹಿಳೆಯರಿಗೂ ಎಲ್ಲ ಅವಕಾಶಗಳನ್ನು ಕೊಟ್ಟಿರುವುದರಿಂದ ಮುಂದೆ ಬರಲು ಸಾಕಷ್ಟು ಸಾಧ್ಯತೆಗಳಿವೆ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

    ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್ ಮಾತನಾಡಿ, ಎಲ್ಲ ಕಾಲಘಟ್ಟದಲ್ಲೂ ಮಹಿಳೆಯರು ಈ ದೇಶದ ಉನ್ನತಿಯಲ್ಲಿ ತನ್ನ ಪಾತ್ರವನ್ನು ನಿರಂತರವಾಗಿ ವಹಿಸುತ್ತಾ ಬಂದಿದ್ದಾರೆ. ಆಧುನಿಕ ಕಾಲದಲ್ಲೂ ಭಾರತಕ್ಕೆ ಹೊಸದಿಕ್ಕನ್ನು ಕೊಡುತ್ತಾ ಮಹಿಳೆಯರು ಪುರುಷನಿಗೆ ಸಮಾನರಾಗಿ ಬೆಳೆಯಬೇಕು ಎನ್ನುವುದನ್ನು ತೋರಿಸುತ್ತಾರೆ ಎಂದರು.

    ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ ನಮ್ಮ ಕೈಲಾದ ಸಹಾಯವನ್ನು ಹಿಂದುಳಿದ ಸಮಾಜಕ್ಕೆ ನೀಡಿ ಮುಂದೆ ತರುವ ಕೆಲಸ ಎಲ್ಲಾ ರಾಜಕಾರಣಿಗಳಿಂದಾಗಬೇಕು ಎಂದು ಹೇಳಿದರು.

    ಜಿಲ್ಲಾ ಕುರುಹಿನ ಶೆಟ್ಟಿ(ನೇಕಾರ) ಮಹಿಳಾ ಸಂಘದ ಅಧ್ಯಕ್ಷೆ ಸಿ.ಎಸ್.ಪುಷ್ಪಾ ರಾಜೇಂದ್ರ ಆಧ್ಯಕ್ಷತೆ ವಹಿಸಿ ಮಾತನಾಡಿದರು. ಕೇಂದ್ರ ಕುರುಹಿನ ಶೆಟ್ಟಿ ಸಂಘದ ಅಧ್ಯಕ್ಷ ಬೆಂಗಳೂರಿನ ಅಂಬಾದಾಸ್ ಕಾಮೂರ್ತಿ, ಉಪಾಧ್ಯಕ್ಷ ಜಿ.ಟಿ.ಸೋಮಶೇಖರ್, ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ನೇಯ್ಗೆ ನುಡಿ ಮಾಸ ಪತ್ರಿಕೆ ಸಂಪಾದಕ ಡಿ.ಸಿ.ಬೆಳ್ಳಿಚುಕ್ಕಿ ವೀರೇಂದ್ರ, ಉಪನ್ಯಾಸಕಿ ನಾಗಶ್ರೀ ತ್ಯಾಗರಾಜ್, ಜಿಲ್ಲಾ ಶ್ರೀ ನೀಲಕಂಠೇಶ್ವರ ಕುರುಹಿನ ಶೆಟ್ಟಿ ಸಂಘದ ಅಧ್ಯಕ್ಷ ಎಚ್.ಇಂದುಕುಮಾರ್ ಇತರರು ಉಪಸ್ಥಿತಿತರಿದ್ದರು. ಜಯಾ ಶೇಖರ್ ಸ್ವಾಗತಿಸಿದರು.

    Eighth anniversary of the District Kuruhina Shetty Women’s Association

  • ಕಿತ್ತಲೆಗುಳಿ ಗ್ರಾಮದ ದಟ್ಟ ಅರಣ್ಯದಲ್ಲಿದ್ದ ನಕ್ಸಲರ ಶಸ್ತ್ರಾಸ್ತ್ರಗಳ ವಶ

    ಕಿತ್ತಲೆಗುಳಿ ಗ್ರಾಮದ ದಟ್ಟ ಅರಣ್ಯದಲ್ಲಿದ್ದ ನಕ್ಸಲರ ಶಸ್ತ್ರಾಸ್ತ್ರಗಳ ವಶ

    ಚಿಕ್ಕಮಗಳೂರು: ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಶರಣಾಗತರಾದ ಆರು ಮಂದಿ ನಕ್ಸಲರಿಗೆ ಸೇರಿದ್ದ ಚಿಕ್ಕಮಗಳೂರು ಜಿಲ್ಲೆ ಜಯಪುರ ಠಾಣೆ ಪೊಲೀಸರು ಕಾಡಿನಲ್ಲಿದ್ದ ನಕ್ಸಲರಿಗೆ ಸೇರಿದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಮದ್ದು ಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.

    ಶರಣಾಗತರಾಗಿರುವ ನಕ್ಸಲರು ನೀಡಿದ ಮಾಹಿತಿ ಮೇರೆಗೆ ಪೊಲೀಸರ ತಂಡ ಜಯಪುರ ಠಾಣೆ ವ್ಯಾಪ್ತಿಯ ಕಿತ್ತಲೆಗುಳಿ ಗ್ರಾಮದ ಸಮೀಪವಿರುವ ದಟ್ಟ ಅರಣ್ಯದಲ್ಲಿದ್ದ ಶಸ್ತ್ರಾಸ್ತ್ರ ಹಾಗೂ ಮದ್ದು ಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.

    ಶರಣಾಗತ ನಕ್ಸಲರು ಬಳಸುತ್ತಿದ್ದ ಒಂದು ಎಕೆ ೫೬, ಮೂರು ೩೦೩ ರೈಫಲ್, ಒಂದು ೧೨ ಬೋರ್ ಎಸ್‌ಎಸ್‌ಬಿಎಲ್, ಒಂದು ಕಂಟ್ರಿ ಮೇಡ್ ಪಿಸ್ತೂಲ್ ಸೇರಿದಂತೆ ಒಟ್ಟು ಆರು ಶಸ್ತ್ರಾಸ್ತ್ರ ವಶಕ್ಕೆ ಪಡೆಯಲಾಗಿದೆ. ಇವುಗಳೊಂದಿಗೆ ಹನ್ನೊಂದು ೭.೬೨ ಎಂಎಂನ ಎಕೆ ೫೬ ಮದ್ದುಗುಂಡುಗಳು, ೩೦೩ ರೈಫಲ್‌ನ ೧೩೩ ಮದ್ದುಗುಂಡುಗಳು, ೧೨ ಬೋರ್ ಕಾರ್ಟಿಜ್ಸ್ನ ೨೪, ಕಂಟ್ರಿಮೇಡ್ ಪಿಸ್ತೂಲ್‌ನ ೮ ಮದ್ದುಗುಂಡುಗಳು ಸೇರಿದಂತೆ ಒಟ್ಟು ೧೭೬ ಮುದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಇವುಗಳೊಂದಿಗೆ ಎಕೆ ೫೬ನ ಖಾಲಿ ಮ್ಯಾಗ್ಸಿನ್ ಸಹ ಪತ್ತೆಯಾಗಿದೆ.

    ಶಸ್ತ್ರಾಸ್ತ್ರಗಳು ಪತ್ತೆಯಾಗಿರುವ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಕ್ರೈಮ್ ನಂ. ೦೪/೨೫ ಅಡಿ ಎಆರ್‌ಎಂಎಸ್ ಆಕ್ಟ್ ೧೯೫೯ರ ಕಲಂ ೩, ೨೫(೧ಬಿ), ೭ ಮತ್ತು ೨೫(೧ಎ) ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಚಿಕ್ಕಮಗಳೂರು ಎಸ್‌ಪಿ ವಿಕ್ರಮ ಅಮಟೆ ತಿಳಿಸಿದ್ದಾರೆ.

    ಶರಣಾಗತರಾದ ನಕ್ಸಲರು ತಮ್ಮೊಂದಿಗೆ ಯಾವುದೇ ಶಸ್ತ್ರಾಸ್ತ್ರ ಅಥವಾ ಉಪಕರಣಗಳನ್ನು ಶರಣಾಗತಿ ಮಾಡಿದರೆ ಪ್ರತಿ ಆಯುಧ ಅಥವಾ ಉಪಕರಣಕ್ಕೆ ಪ್ರೋತ್ಸಾಹ ಧನ ನೀಡುವುದಾಗಿ ನಕ್ಸಲರ ಶರಣಾಗತಿ ಮತ್ತು ಪುನರ್ವಸತಿ ಯೋಜನೆಯಲ್ಲಿ ಘೋಷಿಸಲಾಗಿತ್ತು. ಅದರಂತೆ ಇದೀಗ ಪೊಲೀಸರು ವಶಪಡಿಸಿಕೊಂಡಿರುವ ಆಯುಧಗಳಿಗೂ ಸಂಬಂಧಿಸಿದಂತೆ ಶರಣಾಗತರಾದ ನಕ್ಸಲರಿಗೆ ಪ್ರೋತ್ಸಾಹ ಧನ ಸಿಗಲಿದೆ.

    ಎಕೆ ೫೬ಗೆ ೩೦ ಸಾವಿರ (ಒಂದಕ್ಕೆ), ಮೂರು ೩೦೩ ರೈಫಲ್‌ಗಳಿಗೆ ೫೦ ಸಾವಿರ (ಒಂದಕ್ಕೆ), ೧೨ ಬೋರ್ ಎಸ್‌ಎಸ್‌ಬಿಎಲ್ ೫೦ ಸಾವಿರ (ಒಂದಕ್ಕೆ) ಪಿಸ್ತೂಲ್ ೧ಕ್ಕೆ ೧೦ ಸಾವಿರ, ೧೭೬ ಮದ್ದುಗುಂಡುಗಳಿಗೆ ನೂರು ರೂಪಾಯಿ(ಪ್ರತಿ ಮದ್ದು ಗುಂಡಿಗೆ) ಸಾರ್ಕರ ಪ್ರೋತ್ಸಾಹ ಧನ ನಿಗಧಿ ಮಾಡಿದೆ.

    Weapons seized from Naxalites in the dense forest of Kittaleguli village

  • ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಗೆ ಜೀವ ಬೆದರಿಕೆ ಪತ್ರ

    ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಗೆ ಜೀವ ಬೆದರಿಕೆ ಪತ್ರ

    ಚಿಕ್ಕಮಗಳೂರು: ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರಿಗೆ ಜೀವ ಬೆದರಿಕೆ ಹಾಕಿ ಅನಾಮದೇಯ ಪತ್ರವೊಂದು ಬಂದಿದೆ.

    ಬಸವನಹಳ್ಳಿಯಲ್ಲಿರುವ ಸಿ.ಟಿ.ರವಿ ಅವರ ನಿವಾಸಕ್ಕೆ ಪತ್ರ ಬಂದಿದ್ದು, ಈ ಸಂಬಂಧ ಸಿ.ಟಿ.ರವಿ ಆಪ್ತ ಸಹಾಯಕ ಚೇತನ್ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಬೆಳಗಾವಿ ಸುವರ್ಣ ಸೌಧದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕುರಿತು ಅವಾಚ್ಯ ಪದ ಬಳಸಿರುವ ಕಾರಣಕ್ಕೆ ರವಿ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ. ಸಿಟಿ ರವಿ ಅವರನ್ನು ಉದ್ದೇಶಿಸಿ ಪತ್ರ ಬರೆದಿರುವ ಅಪರಿಚಿತರು ನಮ್ಮ ತಂಡ ಬೆಳಗಾವಿಯಿಂದ ಚಿಕ್ಕಮಗಳೂರಿಗೆ ನಿನ್ನನ್ನು ಹುಡುಕಿಕೊಂಡು ಬಂದಿದ್ದೇವೆ.

    ಇನ್ನು ೧೫ ದಿನದ ಒಳಗಾಗಿ ಬೆಳಗಾವಿಯ ಅಭಿನೇತ್ರಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕಾಲನ್ನು ಹಿಡಿದು ಕ್ಷಮೆ ಕೇಳಬೇಕು. ಇಲ್ಲದಿದ್ದಲ್ಲಿ ನಿಮ್ಮ ಮನೆಗೆ ನುಗ್ಗಿ ಕೈ ಮತ್ತು ಕಾಲನ್ನು ಮುರಿಯುವುದು ಖಚಿತ. ನೀವು ಯಾವ ವಿಳಾಸದಲ್ಲಿ ಇದ್ದರೂ ನಿಮ್ಮನ್ನು ಬಿಡುವುದಿಲ್ಲ. ನಿಮ್ಮ ಜೀವ ಜೀವನಕ್ಕೂ ಅಪಾಯವಿದೆ ಎಂದು ಬೆದರಿಕೆಯೊಡ್ಡಿದ್ದಾರೆ.

    ಸಿ.ಟಿ.ರವಿ ಅವರ ಮನೆಗೆ ಪತ್ರ ಬರುತ್ತಿದ್ದಂತೆ ಆಪ್ತಸಹಾಯಕ ಚೇತನ್ ಬಸವನಹಳ್ಳಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಬಸವನಹಳ್ಳಿ ಪೊಲೀಸರು ಪತ್ರ ಬರೆದವರು ಯಾರು? ಎಲ್ಲಿಂದ ಪತ್ರ ಬಂದಿದೆ ಎಂಬ ಬಗ್ಗೆ ತನಿಖೆ ಆರಂಭಿಸಿದ್ದಾರೆ.

    Life threat letter to Legislative Council member C.T. Ravi

  • ನನಗೆ ಯಾರ ಬೆಂಬಲವೂ ಬೇಡ, ಪಕ್ಷ ಹೇಳಿದಂತೆ ನಾನು ಕೆಲಸ ಮಾಡುತ್ತೇನೆ

    ನನಗೆ ಯಾರ ಬೆಂಬಲವೂ ಬೇಡ, ಪಕ್ಷ ಹೇಳಿದಂತೆ ನಾನು ಕೆಲಸ ಮಾಡುತ್ತೇನೆ

    ಶೃಂಗೇರಿ: “ಕರ್ಮಣ್ಯೇ ವಾಧಿಕಾರಸ್ತೇ | ಮಾ ಫಲೇಷು ಕದಾಚನ ಎಂಬ ಶ್ಲೋಕದಂತೆ ನಮ್ಮ ಪ್ರಯತ್ನ ನಾವು ಮಾಡೋಣ ಫಲಾಫಲ ದೇವರಿಗೆ ಬಿಡೋಣ. ನನಗೆ ಯಾರ ಬೆಂಬಲವೂ ಬೇಡ, ಪಕ್ಷ ಹೇಳಿದಂತೆ ನಾನು ಕೆಲಸ ಮಾಡುತ್ತೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.

    ಶೃಂಗೇರಿಯ ಹೆಲಿಪ್ಯಾಡ್‌ನಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶನಿವಾರ ಉತ್ತರಿಸಿ ಮುಂದಿನ ಸಿಎಂ ಡಿ.ಕೆ. ಶಿವಕುಮಾರ್ ಅವರು ಆಗಬೇಕು ಎಂದು ಕಾರ್ಯಕರ್ತರು ಒತ್ತಾಯ ಮಾಡುತ್ತಿದ್ದಾರೆ ಎಂದು ಕೇಳಿದಾಗ, “ನನ್ನ ಪರವಾಗಿ ಯಾರೂ ಒತ್ತಾಯ ಮಾಡುವುದು ಬೇಡ. ನನಗೆ ಯಾರ ಬೆಂಬಲವೂ ಬೇಡ ಎಂದರು.

    ಈ ವಿಚಾರದಲ್ಲಿ ಯಾವುದೇ ಶಾಸಕರು ನನಗೆ ಬೆಂಬಲ ನೀಡುವುದು ಬೇಡ. ನಾನುಂಟು ಕಾಂಗ್ರೆಸ್ ಪಕ್ಷವುಂಟು. ಪಕ್ಷದ ನಾಯಕರು ಹೇಳಿದಂತೆ ನಾನು ಕೆಲಸ ಮಾಡಿಕೊಂಡು ಹೋಗುತ್ತೇನೆ. ನನ್ನ ಪರವಾಗಿ ಶಾಸಕರು, ಕಾರ್ಯಕರ್ತರು ಕೂಗುವುದು ಬೇಡ. ನಾನು ನನ್ನ ಕರ್ತವ್ಯ ಮಾಡುತ್ತೇನೆ” ಎಂದು ಸ್ಪಷ್ಟಪಡಿಸಿದರು.

    ನೀವು ದೇವಾಲಯ ಹಾಗೂ ಮಠಗಳ ಭೇಟಿಗೆ ಟೆಂಪಲ್ ರನ್ ಎಂದು ವ್ಯಾಖ್ಯಾನ ಮಾಡಲಾಗುತ್ತಿದೆ ಎಂದು ಕೇಳಿದಾಗ, “ನಾನು ಧರ್ಮದ ಮೇಲೆ ನಂಬಿಕೆ ಇಟ್ಟುಕೊಂಡಿರುವವನು, ನಿತ್ಯ ಪೂಜೆ ಮಾಡುವವನು. ನನ್ನ ಒಳಿತು, ರಾಜ್ಯದ ಒಳಿತು, ನನ್ನ ನಂಬಿದವರ ಹಾಗೂ ಸಮಾಜದ ಒಳಿತಿಗಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಹೇಳಿದರು

    ಟೆಂಪಲ್ ರನ್ ಎಂದು ವ್ಯಾಖ್ಯಾನ ಮಾಡುವುದಾದರೆ ನೀವೆಲ್ಲ ಸೇರಿ ದೇವಾಲಯಗಳನ್ನು ಮುಚ್ಚಿಬಿಡಿ. ಸರ್ಕಾರದಲ್ಲಿ ಮುಜರಾಯಿ ಇಲಾಖೆ, ವಕ್ಫ್ ಮಂಡಳಿ ಇರುವುದು ಏಕೆ? ಅವರವರ ವಿಚಾರ ಅವರವರ ನಂಬಿಕೆ. ಧರ್ಮ ಯಾವುದಾದರೂ ತತ್ವವೊಂದೇ, ಕರ್ಮ ಹಲವಾದರೂ ನಿಷ್ಠೆಯೊಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ, ನಾಮ ಹಲವಾದರೂ ದೈವವೊಂದೇ. ದೇವನೊಬ್ಬ ನಾಮ ಹಲವು ಎಂದು ನಾನು ಪದೇ ಪದೆ ಹೇಳುತ್ತೇನೆ” ಎಂದು ತಿಳಿಸಿದರು.

    ನೀವು ಶೃಂಗೇರಿಗೆ ಭೇಟಿ ನೀಡಿದಾಗೆಲ್ಲಾ ನಿಮ್ಮ ರಾಜಕೀಯ ಜೀವನದಲ್ಲಿ ಹಲವು ತಿರುವುಗಳು ಪಡೆದಿವೆ ಎಂದು ಕೇಳಿದಾಗ, “ಯಾರೂ ತಲೆಕೆಡಿಸಿಕೊಳ್ಳುವುದು ಬೇಡ. ನನಗೆ ಯಾವುದೇ ತಿರುವಿನ ಅಗತ್ಯವಿಲ್ಲ. ಜನ ಆಶೀರ್ವಾದ ಮಾಡಿ ನಮಗೊಂದು ಅವಕಾಶ ಕೊಟ್ಟಿದ್ದಾರೆ. ಐದು ವರ್ಷ ಸರ್ಕಾರ ಮಾಡುತ್ತೇವೆ. ಪಕ್ಷ ಹೇಳಿದಂತೆ ನಾನು ಹಾಗೂ ಸಿಎಂ ಕೆಲಸ ಮಾಡುತ್ತೇವೆ. ಬೇರೆಯವರ ಮಾತುಗಳು ಗೌಣ” ಎಂದು ತಿಳಿಸಿದರು.

    ಇಂದಿನ ಶೃಂಗೇರಿ ಪ್ರವಾಸದ ಬಗ್ಗೆ ಕೇಳಿದಾಗ, “ಇಂದು ಬಹಳ ಪವಿತ್ರವಾದ ದಿನ. ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳು ಮಠದ ಜವಾಬ್ದಾರಿ ಸ್ವೀಕರಿಸಿ ೫೦ ವರ್ಷಗಳು ಪೂರ್ಣಗೊಂಡಿವೆ. ಧರ್ಮೋ ರಕ್ಷತಿ ರಕ್ಷಿತಃ ಎಂಬ ಶ್ಲೋಕವು ಧರ್ಮವನ್ನು ಯಾರು ಕಾಪಾಡುತ್ತಾರೋ ಧರ್ಮ ಅವರನ್ನು ಕಾಪಾಡುತ್ತದೆ ಎಂಬ ಸಂದೇಶ ಸಾರುತ್ತದೆ. ಅದರಂತೆ ಈ ಮಹಾಸ್ವಾಮಿಗಳು ರಾಜಕಾರಣಕ್ಕೆ ಎಂದು ಹಸ್ತಕ್ಷೇಪ ಮಾಡದೆ ಕೇವಲ ಧರ್ಮ, ಸಂಸ್ಕೃತಿ, ಸಂಸ್ಕಾರ ರಕ್ಷಣೆ ಮಾಡಿಕೊಂಡು ಬಂದಿದ್ದಾರೆ. ಆಮೂಲಕ ತಮ್ಮ ಕರ್ತವ್ಯ ನಿಭಾಯಿಸಿಕೊಂಡು ನಮಗೆ ಆಶೀರ್ವಾದ ಮಾಡುತ್ತಾ ಬಂದಿದ್ದಾರೆ.

    ನನಗೆ ಮಹಾಸ್ವಾಮಿಗಳ ಮೇಲೆ ವಿಶೇಷವಾದ ನಂಬಿಕೆ, ಭಕ್ತಿ ಇದೆ. ತಾಯಿ ಸರಸ್ವತಿ ಅವರ ಮೇಲೆ ಆಶೀರ್ವಾದ ಮಾಡಿದ್ದಾಳೆ. ರಾಜೀವ್ ಗಾಂಧಿ ಅವರು ಇಲ್ಲಿ ಸಂಸ್ಕೃತ ವಿದ್ಯಾಪೀಠ ಮಾಡಲು ತೀರ್ಮಾನಿಸಿದರು. ಈ ಮಠವು ಬೆಂಗಳೂರಿನಲ್ಲಿ ಮಕ್ಕಳಿಗೆ ಜ್ಞಾನದ ದೀಪ ಬೆಳಗುವ ಪ್ರಯತ್ನ ಮಾಡುತ್ತಿದೆ. ಇವರ ಈ ಶುಭ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದಾರೆ. ಸರ್ಕಾರದ ಪರವಾಗಿ ಹಾಗೂ ವೈಯಕ್ತಿಕವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ” ಎಂದು ತಿಳಿಸಿದರು.

    DCM D.K. Shivakumar at a media conference at the Sringeri helipad