Category: ಚಿಕ್ಕಮಗಳೂರು

  • ತಾಲ್ಲೂಕು ಆಸ್ಪತ್ರೆಗಳಿಗೆ ತಜ್ಞ ವೈದ್ಯರ ನೇಮಕಕ್ಕೆ ತೀರ್ಮಾನ

    ತಾಲ್ಲೂಕು ಆಸ್ಪತ್ರೆಗಳಿಗೆ ತಜ್ಞ ವೈದ್ಯರ ನೇಮಕಕ್ಕೆ ತೀರ್ಮಾನ

    ಚಿಕ್ಕಮಗಳೂರು:  ರಾಜ್ಯದ ತಾಲ್ಲೂಕು ಆಸ್ಪತ್ರೆಗಳಿಗೆ ತಜ್ಞ ವೈದ್ಯರುಗಳನ್ನು ಕಡ್ಡಾಯವಾಗಿ ನೇಮಕ ಮಾಡಲು ಸರ್ಕಾರ ತೀರ್ಮಾನ ಕೈಗೊಂಡಿದ್ದು, ತಾಯಿ ಮಗುವಿನ ಆರೋಗ್ಯಕ್ಕೆ ಆದ್ಯತೆ ನೀಡಿದೆ ಎಂದು ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ತಿಳಿಸಿದರು.

    ಕೊಪ್ಪ ಪಟ್ಟಣದಲ್ಲಿ ೧೪ ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ತಾಲ್ಲೂಕು ಮಟ್ಟದ ಸಾರ್ವಜನಿಕ ಆರೋಗ್ಯ ಪ್ರಯೋಗ ಶಾಲೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಇಂದು ಮಾತನಾಡಿದ ಅವರು, ತಲಾ ಇಬ್ಬರಂತೆ ಸ್ತ್ರೀರೋಗ ತಜ್ಞರು, ಮಕ್ಕಳ ತಜ್ಞರು, ಅರಿವಳಿಕೆ ತಜ್ಞರು, ಒಬ್ಬರು ರೆಡಿಯಾಲಾಜಿಸ್ಟ್ ಅನ್ನು ನೇಮಿಸಿಕೊಳ್ಳಲಾಗುವುದು. ಜನರಿಗೆ ಅಗತ್ಯ ಸೇವೆ ಪೂರೈಸಲು ಸರ್ಕಾರ ಬದ್ಧವಾಗಿದ್ದು, ಎಲ್ಲ ಕ್ರಮಗಳನ್ನು ಕೈಗೊಂಡಿದೆ ಎಂದರು.

    ಚುನಾವಣೆ ಪೂರ್ವದಲ್ಲಿ ಕೊಟ್ಟ ಮಾತಿನಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಯನ್ನು ಕೇವಲ ಮೂರು ತಿಂಗಳಲ್ಲಿ ಅನುಷ್ಠಾನಕ್ಕೆ ತಂದರು. ಸರ್ಕಾರ ನುಡಿದಂತೆ ನಡೆದಿದ್ದು, ದೇಶದ ಜನರಿಗೆ ಅಚ್ಚರಿಯಾಗಿದೆ. ಸಾಮಾಜಿಕ ನ್ಯಾಯದ ಬಗ್ಗೆ ಬದ್ಧತೆ ಇದೆ. ಮಹಿಳಾ ಸಬಲೀಕರಣಕ್ಕೆ ಒತ್ತು ಕೊಟ್ಟಿದೆ. ಗ್ಯಾರಂಟಿ ಯೋಜನೆಯಿಂದ ಮಹಿಳೆಯರಿಗೆ ಆತ್ಮ ಗೌರವ ಸಿಕ್ಕಿದೆ ಎಂದರು.

    ೧೦೦ ಹಾಸಿಗೆಗಳ ಆಸ್ಪತ್ರೆ ಮಂಜೂರು ಮಾಡಿ ಶೃಂಗೇರಿಯ ಋಣ ತೀರಿಸುವ ಕೆಲಸ ಮಾಡಿದ್ದು, ಇನ್ನು ಆರೇಳು ತಿಂಗಳಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಬೇಕಿದ್ದು, ನಮ್ಮ ಸರ್ಕಾರದ ಅವಧಿಯಲ್ಲಿಯೇ ಉದ್ಘಾಟನೆಯಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು. ಇಂದು ವಾಲ್ಮೀಕಿ ಜಯಂತಿ, ರಾಮಾಯಣವು ಭಾರತದ ಬೆಳವಣಿಗೆಗೆ ಸ್ಫೂರ್ತಿಯಾಗಿದೆ ಎಂದು ಈ ಸಂದರ್ಭದಲ್ಲಿ ಸ್ಮರಿಸಿದರು.

    ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ನೂತನ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿ, ವಾಲ್ಮೀಕಿ ಬರೆದ ರಾಮಾಯಣವನ್ನು ಭಾರತ ಮಾತ್ರವಲ್ಲ ಇಡೀ ಪ್ರಪಂಚವೇ ಶ್ಲಾಘಿಸುತ್ತದೆ. ಅಯೋಧ್ಯೆಯ ರಾಮನ ಆದರ್ಶ ಕೊಟ್ಟ ಮಾತನ್ನು ಪಾಲಿಸಲು ಮಾತ್ರವೇ ಹೊರತು ಅಧಿಕಾರಕ್ಕಾಗಿ ಅಲ್ಲ. ರಾಮಾಯಣ ಹಿಂದೂಗಳಿಗೆ ಮಾತ್ರವಲ್ಲ, ಎಲ್ಲಾ ಧರ್ಮದವರಿಗೂ ದಾರಿದೀಪ ಎಂದು ಹೇಳಿದರು.

    ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ’ಗ್ಯಾರಂಟಿ ಯೋಜನೆಗೆ ೫೦-೬೦ ಸಾವಿರ ಕೋಟಿ ರೂ. ಕೊಟ್ಟರೂ ರಾಜ್ಯ ಸರ್ಕಾರ ಅಭಿವೃದ್ಧಿ ಕೆಲಸದಲ್ಲಿ ಹಿಂದೆ ಬಿದ್ದಿಲ್ಲ. ಅಭಿವೃದ್ಧಿ ನಿಟ್ಟಿನಲ್ಲಿ ರೂ.೧೪.೬೯ ಕೋಟಿ ವೆಚ್ಚದಲ್ಲಿ ಇಲ್ಲಿ ತಾಯಿ, ಮಕ್ಕಳ ಆಸ್ಪತ್ರೆ ನಿರ್ಮಾಣವಾಗಿದೆ. ಆಸ್ಪತ್ರೆ ಮುಂದುವರಿದ ಅಭಿವೃದ್ಧಿ ಕಾಮಗಾರಿಗೆ ಸಚಿವರನ್ನು ಕೇಳಿದ ಕೂಡಲೇ ರೂ.೧.೩೪ ಕೋಟಿ ಮಂಜೂರು ಮಾಡಿದ್ದಾರೆ. ಸರ್ಕಾರ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತುಕೊಟ್ಟು ಕೆಲಸ ಮಾಡುತ್ತಿದೆ ಎಂದು ಹೇಳಿದರು.

    ಇದೇ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಪ್ರಯುಕ್ತ ವಾಲ್ಮೀಕಿ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು. ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕರಡ್ಡಿ, ಉಪ ವಿಭಾಗಾಧಿಕಾರಿ ಸುದರ್ಶನ್, ಆರೋಗ್ಯ ಇಲಾಖೆ ಮೈಸೂರು ವಿಭಾಗ ಜಂಟಿ ನಿರ್ದೇಶಕಿ ಮಲ್ಲಿಕಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್ಥ್‌ಬಾಬು, ತಹಶೀಲ್ದಾರ್ ಲಿಖಿತಾ ಮೋಹನ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಎಚ್.ಆರ್.ರೇಖಾ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಹೇಂದ್ರ ಕಿರೀಟಿ, ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸಂದೀಪ್, ಆರೋಗ್ಯ ಶಿಕ್ಷಣಾಧಿಕಾರಿ ಸುಧಾಕರ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರು, ಬಗರ್ ಹುಕುಂ ಸಮಿತಿ ಸದಸ್ಯರು, ಕೆಡಿಪಿ ಸದಸ್ಯರು, ಗ್ಯಾರಂಟಿ ಅನುಷ್ಠಾನ ಸಮಿತಿ ಪದಾಧಿಕಾರಿಗಳು ಮತ್ತಿತರರು ಭಾಗವಹಿಸಿದ್ದರು.

    Decision to appoint specialist doctors for taluk hospitals

     

  • ಜಿಲ್ಲೆಗೆ 20 ಹೊಸ ಆರೋಗ್ಯ ಕ್ಷೇಮ ಕೇಂದ್ರ ಮಂಜೂರು

    ಜಿಲ್ಲೆಗೆ 20 ಹೊಸ ಆರೋಗ್ಯ ಕ್ಷೇಮ ಕೇಂದ್ರ ಮಂಜೂರು

    ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಗೆ ಸುಮಾರು ೧೨.೫  ಕೋಟಿ ರೂ. ವೆಚ್ಚದಲ್ಲಿ ೨೦ ಹೊಸ ಆರೋಗ್ಯ ಕ್ಷೇಮ ಕೇಂದ್ರಗಳು ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ಸಹ ನಡೆದಿರುವುದಾಗಿ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಶ್ರೀ ದಿನೇಶ್ ಗುಂಡೂರಾವ್ ತಿಳಿಸಿದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಶೃಂಗೇರಿ ತಾಲ್ಲೂಕು ಅಡ್ಡಗದ್ದೆ ಗ್ರಾ.ಪಂ. ವ್ಯಾಪ್ತಿಯ ಬೆಳಂದೂರು ಗ್ರಾಮದ ಹೊನ್ನವಳ್ಳಿಯಲ್ಲಿ ಇಂದು ನೂರು ಹಾಸಿಗೆಯ ಸಾರ್ವಜನಿಕ ಆಸ್ಪತ್ರೆ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು  ಮಾತನಾಡಿದರು.

    ಶೃಂಗೇರಿ ತಾಲ್ಲೂಕಿಗೆ ತೀರಾ ಅಗತ್ಯವಿರುವ ಮಹತ್ವಪೂರ್ಣವಾದ ಯೋಜನೆ ಇದಾಗಿದ್ದು. ಒಟ್ಟು ೩೭.೬೫ ಕೋಟಿ ರೂ. ವೆಚ್ಚದ ಇಲ್ಲಿನ ಉದ್ದೇಶಿತ ಆಸ್ಪತ್ರೆ ಕಟ್ಟಡದ ಕಾಮಗಾರಿಯನ್ನು ಕ್ಷಿಪ್ರಗತಿಯಲ್ಲಿ ನಿರ್ವಹಿಸಿ ಮಳೆ ಬಿಡುವು ನೀಡಿದ ಮುಂದಿನ ಆರು ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರಲ್ಲದೆ, ಇನ್ನು ಹಲವು ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಹೇಳಿದರು. ಈಗಾಗಲೇ ಬಾಳೆಹೊನ್ನೂರಿಗೆ ೫೦ ಹಾಸಿಗೆಯ ಆಸ್ಪತ್ರೆ ಕಟ್ಟಡಕ್ಕೆ ಬೇಡಿಕೆ ಬಂದಿದ್ದು, ಈ ತಕ್ಷಣಕ್ಕೆ ಈ ಯೋಜನೆಗೆ ಅವಕಾಶವಾಗದಿದ್ದರೂ ಮುಂದಿನ ಆಯವ್ಯಯದಲ್ಲಿ ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

    ಇಲ್ಲಿನ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾರ್ಯ ಮೊದಲೇ ಆರಂಭವಾಗಬೇಕಿತ್ತು. ಆದರೆ ಸ್ಥಳದ ಸಮಸ್ಯೆ ಹಾಗೂ ಮಳೆಗಾಲದ ಕಾರಣದಿಂದಾಗಿ ಕಾಮಗಾರಿ ಆರಂಭಕ್ಕೆ ಹಿನ್ನಡೆಯಾಗಿದೆ. ಗ್ರಾಮೀಣ ಪ್ರದೇಶದ ಜನಸಾಮಾನ್ಯರು ಮತ್ತು ಬಡಜನತೆಯ ಆರೋಗ್ಯ ರಕ್ಷಣೆಗೆ ಮೂಲ ಸೌಕರ್ಯದ ಅವಶ್ಯಕತೆ ಇದ್ದು, ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾ ಬಂದಿದೆ. ಪ್ರಸ್ತುತ ಸನ್ನಿವೇಶದಲ್ಲಿ ಆರೋಗ್ಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕಾಗಿದ್ದರೂ ಖಾಸಗಿ ಆಸ್ಪತ್ರೆಗಳು ದುಬಾರಿಯಾಗಿ ಗ್ರಾಮೀಣ ಪ್ರದೇಶದ ಜನರಿಗೆ ತೀರಾ ಸಮಸ್ಯೆಯಾಗುತ್ತಿರುವುದರಿಂದ ಈ ಆಸ್ಪತ್ರೆಯ ಅವಶ್ಯಕತೆ ಇಲ್ಲಿಗೆ ಇತ್ತು. ಈ ನಿಟ್ಟಿನಲ್ಲಿ ಯೋಜನೆ ಕಾರ್ಯಗತವಾಗುವ ಕಾಲ ಸನ್ನಿಹಿತವಾಗಿದೆ ಎಂದರು.

    ಆಸ್ಪತ್ರೆ ಕಟ್ಟಡದ ಶಂಕುಸ್ಥಾಪನೆಯನ್ನು ಮಾನ್ಯ ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೆ.ಜೆ.ಜಾರ್ಜ್ ಅವರು ನೆರವೇರಿಸಿದರು.

    ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಟಿ.ಡಿ.ರಾಜೇಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಎರಡು ಬಾರಿ ಕಾರ್ಯಕ್ರಮ ನಿಗದಿಯಾಗಿತ್ತು. ಮಳೆಯ ಕಾರಣದಿಂದ ಮುಂದೂಡಲ್ಪಟ್ಟಿತ್ತು. ಇದೀಗ ಶಂಕುಸ್ಥಾಪನೆ ನೆರವೇರಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳ್ಳಲಿದೆ. ಆಸ್ಪತ್ರೆ ಕಟ್ಟಡಕ್ಕೆ ಸಂಬಂಧಿಸಿದಂತೆ
    ಈ ಭಾಗದ ಬಹುದಿನಗಳ ಬೇಡಿಕೆಯಾದ ಒತ್ತುವರಿ ಸಮಸ್ಯೆ ಬಗೆಹರಿಯುವ ನಿರೀಕ್ಷೆ ಇದೆ. ರಸ್ತೆ ಮಲೆನಾಡಿನಲ್ಲಿ ಬಹಳಷ್ಟು ರಸ್ತೆಗಳು ಗುಂಡಿ ಬಿದ್ದಿವೆ.

    ವಸ್ತಾರೆಯಿಂದ ಶೃಂಗೇರಿಗೆ ೯೫ ಕೋಟಿ ರೂ.ಗಳು, ಜಯಪುರದಿಂದ ಕೊಪ್ಪಕ್ಕೆ ರಸ್ತೆ ಅಗಲೀಕರಣವೂ ಸೇರಿದಂತೆ ಗುಂಡಿ ಮುಚ್ಚಲು ೧೧ ಕೋಟಿ ರೂ.ಗಳು, ಕೋರ್ಲುಕೊಪ್ಪದಿಂದ ಕೊಪ್ಪಕ್ಕೆ ಸುಮಾರು ೧೯.೫ ಕೋಟಿ ರೂ.ಗಳನ್ನು ಉಸ್ತುವಾರಿ ಸಚಿವರು ಒದಗಿಸಿದ್ದಾರೆ. ಮಳೆ ಮುಗಿದ ಬಳಿಕ ಈ ಕಾಮಗಾರಿ ನಿರ್ವಹಿಸಲಾಗುವುದು. ನೀರು ನುಗ್ಗುತ್ತಿರುವ ಗಾಂಧಿ ಮೈದಾನದಲ್ಲಿ ತಡೆಗೋಡೆ ನಿರ್ಮಿಸಲು ಸಹ ಹಣವನ್ನು ಒದಗಿಸಿದ್ದಾರೆ.

    ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಆರೋಗ್ಯ ಇಲಾಖೆ ಮೈಸೂರು ವಿಭಾಗ ಜಂಟಿ ನಿರ್ದೇಶಕಿ ಮಲ್ಲಿಕಾ, ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್, ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್,ಎಸ್,ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ, ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕರಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್ಥ್‌ಬಾಬು, ಉಪವಿಭಾಗಾಧಿಕಾರಿ ಸುದರ್ಶನ್ ಮತ್ತು ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಿದ್ದರು.

    20 new health and wellness centers sanctioned for the district

  • ಮಹರ್ಷಿ ವಾಲ್ಮೀಕಿ ಅಗಣಿತ ಗುಣಗಳ ಗಣಿ

    ಮಹರ್ಷಿ ವಾಲ್ಮೀಕಿ ಅಗಣಿತ ಗುಣಗಳ ಗಣಿ

    ಚಿಕ್ಕಮಗಳೂರು: ರಾಮ ಹೇಗೆ ಗುಣಗಳ ಗಣಿಯೋ ಹಾಗೇ ಆ ರಾಮನ ವ್ಯಕ್ತಿತ್ವವನ್ನು ಮರೆಯದಂತೆ ನಮ್ಮ ಹೃದಯದಲ್ಲಿ ಅಚ್ಚಾಗುವಂತೆ ಮಾಡಿರುವ ಮಹರ್ಷಿ ವಾಲ್ಮೀಕಿಯವರು ಅಗಣಿತ ಗುಣಗಳ ಗಣಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಹೇಳಿದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಇಂದು ನಗರದ ಕುವೆಂಪು ಕಲಾಮಂದಿರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

    ರಾಮಾಯಣ ಮತ್ತು ಮಹಾಭಾರತ ಭಾರತದ ಚಾರಿತ್ರಿಕ ಮಹಾಕಾವ್ಯಗಳು, ರಾಮನ ವ್ಯಕ್ತಿತ್ವ. ಆದರ್ಶ, ರಾಮಾಯಣದ ಕಾಲಘಟ್ಟವನ್ನು ಸಾವಿರಾರು ವರ್ಷಗಳ ನಂತರವೂ ನಮ್ಮ ಹೃದಯದಲ್ಲಿ ಉಳಿಯಲು ಮಹರ್ಷಿ ವಾಲ್ಮೀಕಿಯವರು ಕಾರಣೀಭೂತರಾಗಿದ್ದಾರೆ ಎಂದರು.

    ಮಹರ್ಷಿ ವಾಲ್ಮೀಕಿ ಅವರು ತಮ್ಮ ಕಾವ್ಯದ ಮೂಲಕ ಸಾಮರಸ್ಯ, ಪ್ರೀತಿ, ತ್ಯಾಗ ಮತ್ತು ಅಭಿವೃದ್ಧಿ ಆಧಾರಿತ ಆಡಳಿತವನ್ನು ಪ್ರಪಂಚದಾದ್ಯಂತ ಹರಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು ಎಂದ ಅವರು, ಪ್ರತಿಭೆ ಹುಟ್ಟಿನ ಉಡುಗೊರೆ ಅಲ್ಲ, ಸಾಧನೆಯ ಗಳಿಕೆ ಎನ್ನುವುದನ್ನು ರಾಮಾಯಣ ಮಹಾಕಾವ್ಯ ಬರೆದು ತೋರಿಸಿದ ದಲಿತ ಪ್ರತಿಭೆ, ಆದಿ ಕವಿ ವಾಲ್ಮೀಕಿಯವರ ಬದುಕು ಮತ್ತು ಸಾಧನೆ ನಮಗೆಲ್ಲ ಪ್ರೇರಣೆಯಾಗಬೇಕು. ಕಟ್ಟುಕತೆಗಳಿಂದ ಹುಟ್ಟಿಕೊಂಡಿರುವ ಪೂರ್ವಗ್ರಹಗಳನ್ನು ಪಕ್ಕಕ್ಕಿಟ್ಟು ಈ ಸಾಧಕನ ನೈಜ ಜೀವನಗಾಥೆಯ ಅಧ್ಯಯನ ತಳ ಸಮುದಾಯಗಳ ಕೋಟ್ಯಂತರ ಪ್ರತಿಭೆಗಳಿಗೆ ಸ್ಫೂರ್ತಿ ಮತ್ತು ಆತ್ಮವಿಶ್ವಾಸವನ್ನು ಹುಟ್ಟಿಸಬಹುದು ಎಂದು ಹೇಳಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಹೆಚ್.ಡಿ.ತಮ್ಮಯ್ಯ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಒಬ್ಬ ಮಹಾನ್ ವ್ಯಕ್ತಿ ಮಹರ್ಷಿ ವಾಲ್ಮೀಕಿಯವರು. ಅವರನ್ನು ಅತ್ಯಂತ ಗೌರವದಿಂದ ಆದಿಕವಿ ಎನ್ನಲಾಗುತ್ತದೆ. ದೇಶದಲ್ಲಿ ರಾಮಾಯಣ, ಮಹಾಭಾರತ ಎಲ್ಲರ ಬದುಕಿಗೆ ಆದರ್ಶದ ಮಹಾ ಕಾವ್ಯಗಳಾಗಿವೆ. ರಾಮಾಯಣ ರಚಿಸಿದ್ದು ವಾಲ್ಮೀಕಿಯಾದರೆ, ಮಹಾಭಾರತ ರಚಿಸಿದ್ದು ವೇದ ವ್ಯಾಸರು. ಈ ಮಹಾನ್ ಗ್ರಂಥಗಳನ್ನು ರಚಿಸಿದ ಇವರಿಬ್ಬರೂ ಶೋಷಿತ ವರ್ಗದಿಂದ ಬಂದವರು ಎಂಬುದು ಹೆಮ್ಮೆಯ ವಿಷಯ ಎಂದರು.

    ಸರ್ಕಾರ ಹಲವಾರು ಯೋಜನೆಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನೀಡುತ್ತಿದೆ. ಸಕಾಲದಲ್ಲಿ ಕೆಲವೊಂದು ಯೋಜನೆಗಳು ವಿದ್ಯಾರ್ಥಿಗಳಿಗೆ ತಲುಪುತ್ತಿಲ್ಲ ಎಂಬುದನ್ನು ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದ ಅವರು, ವಾಲ್ಮೀಕಿ ಭವನಕ್ಕೆ ಪೀಠೋಪಕರಣಗಳನ್ನು ಒದಗಿಸಲು ೧೦ ಲಕ್ಷ ರೂ.ಗಳನ್ನು ಮೀಸಲಿಟ್ಟಿರುವುದಾಗಿ ತಿಳಿಸಿದರು.

    ಹೊಸನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಶ್ರೀಪತಿ ಹಳಗುಂದ ಮಹರ್ಷಿ ವಾಲ್ಮೀಕಿರವರ ಕುರಿತು ಉಪನ್ಯಾಸ ನೀಡಿ, ರಾಮಾಯಣ ಎಂದರೆ ವಾಲ್ಮೀಕಿ ನೆನಪಾಗುವುದು ಸಹಜ. ವಾಲ್ಮೀಕಿ ಕೆತ್ತಿದ ನೂರಾರು ಪಾತ್ರಗಳಿಗೆ ದೇವರ ಮಂದಿರವಿದೆ. ಗುಡಿ ಗೋಪುರಗಳಿವೆ. ಆದರೆ ವಾಲ್ಮೀಕಿಗೆ ಮಾತ್ರ ದೇವಾಲಯವಿಲ್ಲ. ಆತ ಕೆತ್ತಿದ ರಾಮ ದೇವನಾದ, ವಾಲ್ಮೀಕಿ ಮಹಾನ್ ದೇವನಾಗಿ ಇವತ್ತು ನಮ್ಮ ಮುಂದೆಯಿದ್ದಾರೆ ಎಂದ ಅವರು ರಾಮ ನಿಮ್ಮ ಪಾಲಿಗೆ ಋಷಿಯಾಗಿರಬಹುದು,ವಾಲ್ಮೀಕಿ ಮಾಹನ್ ಋಷಿ, ಮಹರ್ಷಿಯಾಗಿದ್ದಾನೆ ಎಂದು ಹೇಳಿದರು. ವಾಲ್ಮೀಕಿಯವರು ಒಬ್ಬ ಋಷಿ ಹಾಗೂ ಸಂಸ್ಕೃತ ಕವಿ. ರಾಮಾಯಣ ಮಹಾಕಾವ್ಯದ ಕರ್ತೃ. ಮೊದಲ ಮಹಾಕಾವ್ಯ ರಚಿಸಿದ ಕಾರಣ ವಾಲ್ಮೀಕಿಯವರನ್ನು ಆದಿಕವಿ ಎಂದು ಕರೆಯಲಾಗಿದೆ ಎಂದು ಹೇಳಿದರು.

    ವಾಲ್ಮೀಕಿಯ ಜೀವನದ ಕುರಿತಾಗಿ ಅನೇಕ ದಂತಕಥೆಗಳಿವೆ. ಅದರಲ್ಲಿ ಒಂದು ಕಥೆಯ ಪ್ರಕಾರ, ವಾಲ್ಮೀಕಿ ಋಷಿಯಾಗುವ ಮೊದಲು ರತ್ನಾಕರನೆಂಬ ಒಬ್ಬ ಬೇಡನಾಗಿದ್ದ. ನಾರದ ಮುನಿಯ ಪ್ರೇರಣೆಯಿಂದ ರಾಮ ಭಕ್ತನಾಗಿ, ರಾಮಾಯಣ ರಚಿಸಿದ ಮೊದಲ ಕವಿಯಾಗಿ ಪ್ರಸಿದ್ಧರಾದರು. ಸಂಸ್ಕೃತ ಸಾಹಿತ್ಯದಲ್ಲಿ ಅವರ ಮಹತ್ವವನ್ನು, ಅವರು ರಚಿಸಿದ ರಾಮಾಯಣದ ಶ್ರೇಷ್ಠತೆಯನ್ನು ಮತ್ತು ಸಮಾಜಕ್ಕೆ ಅವರ ಕೊಡುಗೆಯನ್ನು ಎತ್ತಿ ತೋರಿಸಲಾಗಿದೆ.

    ಒಮ್ಮೆ ಜೋಡಿ ಕ್ರೌಂಚ ಪಕ್ಷಿಗಳನ್ನು ನೋಡುತ್ತಿದ್ದಾಗ, ಬೇಟೆಗಾರನೊಬ್ಬ ಒಂದು ಹಕ್ಕಿಯನ್ನು ಕೊಂದಾಗ, ವಾಲ್ಮೀಕಿ ಕೋಪಗೊಂಡು ಬೇಟೆಗಾರನಿಗೆ ಶಾಪ ನೀಡುತ್ತಾನೆ. ಇದರಿಂದಾಗಿ ಅವರೊಳಗಿನ ಕವಿತಾ ಪ್ರತಿಭೆ ಹೊರಹೊಮ್ಮುತ್ತದೆ, ಇದು ರಾಮಾಯಣ ಬರೆಯಲು ಸ್ಫೂರ್ತಿ ನೀಡುತ್ತದೆ. ಮಹರ್ಷಿ ವಾಲ್ಮೀಕಿಯನ್ನು ಸಂಸ್ಕೃತ ಸಾಹಿತ್ಯದ ಮೊದಲ ಕವಿ ಎಂದು ಕೂಡ ಹೇಳಲಾಗುತ್ತದೆ ಮತ್ತು ಅವರು ರಚಿಸಿದ ರಾಮಾಯಣವು ಸಂಸ್ಕೃತದ ಮೊದಲ ಮಹಾಕಾವ್ಯವಾಗಿದೆ. ವಾಲ್ಮೀಕಿ ಜಯಂತಿಯನ್ನು ಆಚರಿಸುವ ಸಂಭ್ರಮದಲ್ಲಿ ನಾವು ಅವರ ಜೀವನ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಮಾರ್ಗ ಅನುಸರಿಸಬೇಕು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ., ಪದವಿ ಸೇರಿದಂತೆ ವಾಲ್ಮೀಕಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಧನ ನೀಡುವ ಮೂಲಕ ಸನ್ಮಾನಿಸಲಾಯಿತು.

    ಜಿಲ್ಲಾ ವಾಲ್ಮೀಕಿ ಸಂಘದ ಅಧ್ಯಕ್ಷ ಬಿ.ಕೆ.ಭೀಮಪ್ಪ, ಜಿಲ್ಲಾ ವಾಲ್ಮೀಕಿ ಯುವಕ ಸಂಘದ ಜಗದೀಶ್ ಕೋಟೆ, ಜಿ.ಪಂ. ಉಪಕಾರ್ಯದರ್ಶಿ ಶಂಕರ್ ಕೊರವರ, ತಾಲ್ಲೂಕು ತಹಸೀಲ್ದಾರ್ ರೇಷ್ಮಾಶೆಟ್ಟಿ, ಮುಖಂಡರಾದ ಕೆ.ಟಿ.ರಾಧಾಕೃಷ್ಣ, ವಾಲ್ಮೀಕಿ ಸಂಘದ ಉಪಕಾರ್ಯದರ್ಶಿ ಮಧುಕುಮಾರ್, ಐ ಟಿ ಡಿ ಪಿ ಜಿಲ್ಲಾ ಅಧಿಕಾರಿ ರಮೇಶ್ ಸ್ವಾಗತಿಸಿದರು. ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.

    ಕಾರ್ಯಕ್ರಮಕ್ಕೆ ಮುನ್ನ ನಗರದ ತಾಲ್ಲೂಕು ಕಚೇರಿಯಿಂದ ಕಲಾಮಂದಿರದವರೆಗೆ ಮೆರವಣಿಗೆ ಗಮನ ಸೆಳೆಯಿತು.

    Maharishi Valmiki is a mine of innumerable qualities.

  •  ಸಾಮಾಜಿಕ – ಶೈಕ್ಷಣಿಕ ಸಮೀಕ್ಷೆಯ ಅವಧಿ ವಿಸ್ತರಣೆ

     ಸಾಮಾಜಿಕ – ಶೈಕ್ಷಣಿಕ ಸಮೀಕ್ಷೆಯ ಅವಧಿ ವಿಸ್ತರಣೆ

    ಬೆಂಗಳೂರು: ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಅವಧಿಯನ್ನು ಅ.12ರವರೆಗೆ ವಿಸ್ತರಿಸಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಅ.24ರವರೆಗೂ ಸಮೀಕ್ಷೆ ನಡೆಯಲಿದೆ.

    ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿ ಬಿಟ್ಟು, ರಾಜ್ಯದಾದ್ಯಂತ ಸೆ. 22ರಿಂದ ಸಮೀಕ್ಷೆ ಆರಂಭಗೊಂಡಿದ್ದು, ಮಂಗಳವಾರ (ಅ.7) ಅಂತ್ಯ ಆಗಬೇಕಿತ್ತು. ಸೋಮವಾರದವರೆಗೆ (ಅ. 6) ಶೇಕಡಾ 80.39ರಷ್ಟು ಪೂರ್ಣಗೊಂಡಿದೆ. ಮಂಗಳವಾರ ಕೊನೆಯ ದಿನ ಆಗಿರುವ ಕಾರಣ, ಅವಧಿಯನ್ನು ವಿಸ್ತರಿಸಲಾಗಿದೆ.

    ದಸರಾ ರಜೆಯ ಬಳಿಕ ಅ. 8ರಿಂದ ಶಾಲೆಗಳು ಪುನರಾರಂಭಗೊಳ್ಳಲಿವೆ. ಹೀಗಾಗಿ, ಸಮೀಕ್ಷೆಯಲ್ಲಿ ತೊಡಗಿಸಿ ಕೊಂಡಿರುವ ಶಿಕ್ಷಕರಿಗೆ ಅನುಕೂಲ ಕಲ್ಪಿಸಲು ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಸಮಯವನ್ನು ಮರು ನಿಗದಿ ಪಡಿಸಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತ ಸುರಳ್ಕರ್‌ ವಿಕಾಸ್ ಕಿಶೋರ್‌ ಅವರು ರಾಜ್ಯದ ಎಲ್ಲ ಉಪ ನಿರ್ದೇಶಕರಿಗೆ ಸೂಚಿಸಿದ್ದಾರೆ.

    ‘ಜಿಬಿಎ ವ್ಯಾಪ್ತಿಯಲ್ಲಿ ಶನಿವಾರದಿಂದ (ಅ. 4) ಸಮೀಕ್ಷೆ ಶುರುವಾಗಿದೆ. ಎರಡು ದಿನಗಳ ಅವಧಿಯಲ್ಲಿ ಗುರಿ ನಿಗದಿ ಪಡಿಸಿರುವ ಒಟ್ಟು 39.82 ಲಕ್ಷ ಮನೆಗಳ ಪೈಕಿ, 2,60,900 ಮನೆಗಳಲ್ಲಿ ದತ್ತಾಂಶ ಸಂಗ್ರಹಿಸಲಾಗಿದೆ’ ಎಂದು ಹಿಂದುಳಿದ ವರ್ಗಗಳ ಆಯೋಗದ ಮೂಲಗಳು ತಿಳಿಸಿವೆ.

    ರಾಜ್ಯದಾದ್ಯಂತ ಆರಂಭದ 3–4 ದಿನ ಮೊಬೈಲ್‌ ಆ್ಯಪ್‌ನಲ್ಲಿ ತಾಂತ್ರಿಕ ದೋಷ, ನೆಟ್‌ವರ್ಕ್‌ ಸಮಸ್ಯೆ ಹೀಗೆ ನಾನಾ ಕಾರಣಗಳಿಂದ ಆಮೆಗತಿಯಲ್ಲಿ ಸಮೀಕ್ಷೆ ಸಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಂಬಂಧ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನಂತರ ಈ ಕಾರ್ಯ ಚುರುಕು ಪಡೆದಿತ್ತು.

    ಸಮೀಕ್ಷೆ– ಪರಿಷ್ಕೃತ ವೇಳಾಪಟ್ಟಿ: ರಾಜ್ಯದಲ್ಲಿ ಅ.8ರಿಂದ 12ರವರೆಗೆ (ಜಿಬಿಎ ವ್ಯಾಪ್ತಿ ಬಿಟ್ಟು), ಶಾಲಾ ತರಗತಿ; ಬೆಳಿಗ್ಗೆ 8ರಿಂದ 1ರವರೆಗೆ, ಸಮೀಕ್ಷೆ ಅವಧಿ;1 ಗಂಟೆಯ ನಂತರ,  ಸಮೀಕ್ಷೆ ಅಂತ್ಯ; ಅ. 12

    Extension of the period for socio-educational survey

  • ಪ್ರಾಚೀನ ಸನಾತನ ಧರ್ಮ ಜಗತ್ತಿಗೆ ಆಧಾರ

    ಪ್ರಾಚೀನ ಸನಾತನ ಧರ್ಮ ಜಗತ್ತಿಗೆ ಆಧಾರ

    ಚಿಕ್ಕಮಗಳೂರು: ಅತ್ಯಂತ ಶ್ರೇಷ್ಠ ಪ್ರಾಚೀನವಾದ ಸನಾತನ ಧರ್ಮ ಜಗತ್ತಿಗೆ ಆಧಾರವಾಗಿದ್ದು, ಈ ನಿಟ್ಟಿನಲ್ಲಿ ಧರ್ಮದ ಸಾರವನ್ನು ಚೆನ್ನಾಗಿ ಅಧ್ಯಯನ ಮಾಡಿ ತಿಳಿದುಕೊಳ್ಳಬೇಕಾದ ಅಗತ್ಯ ಇದೆ ಎಂದು ಶೃಂಗೇರಿ ಶಾರದಾ ಪೀಠದ ಶ್ರೀ ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮಿಗಳು ಹೇಳಿದರು.

    ಅವರು ಇಂದು ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಧಾರ್ಮಿಕ ದತ್ತಿ ಇಲಾಖೆ, ತಾಲ್ಲೂಕು ಆಡಳಿತ ಮುಜುರಾಯಿ ಇಲಾಖೆ ಇವರುಗಳ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಸಂಕಷ್ಟಹರ ಮಹಾಗಣಪತಿ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಮತ್ತು ನೂತನ ಗೋಪುರ ಕುಂಭಾಭಿಷೇಕ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

    ಧರ್ಮ ಅತ್ಯಂತ ಉತ್ಕೃಷ್ಟವಾದ ಸೂಕ್ಷ್ಮ ವಿಚಾರ. ಈ ಬಗ್ಗೆ ಆಳವಾದ ಅಧ್ಯಯನ ಮಾಡಿ ತಿಳಿದುಕೊಳ್ಳಬೇಕಾದ ಗಂಭೀರ ವಿಚಾರಕ್ಕೆ ಪ್ರಮಾಣದ ಅವಶ್ಯಕತೆ ಇಲ್ಲ ಎಂದು ತಿಳಿಸಿ ಧರ್ಮದ ಅಂಗವಾಗಿರುವ ಭೂಮಿ ನಾಶವಾದರೆ ಧರ್ಮವೂ ನಾಶವಾಗುತ್ತದೆ. ಇದಕ್ಕೆ ಅವಕಾಶ ನೀಡದಂತೆ ಸರ್ವರೂ ಧರ್ಮರಕ್ಷಣೆಯನ್ನು ಮಾಡುವ ಮೂಲಕ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದರು.

    ಜಿಜ್ಞಾಸೆ, ಪ್ರಮಾಣದ ಬಗ್ಗೆ ಸ್ಪಷ್ಟನೆ ನೀಡಲು ಧರ್ಮಕ್ಕೆ ವೈದಿಕ ಎಂದು ಹೇಳಿದರು. ವೇದಕ್ಕೆ ಪ್ರಮಾಣವಾಗಿರುವ ಧರ್ಮ ಇದಕ್ಕೆ ಆಧಾರ ಎಂಬ ಅರ್ಥ ಇದೆ. ಯಾವುದು ಈ ಜಗತ್ತಿಗೆ ಆಧಾರವಾಗಿದೆಯೋ ಅದನ್ನು ಧರ್ಮ ಎಂದು ಹೇಳುತ್ತೇವೆ ಎಂದರು. ಮಕ್ಕಳಿಗೆ ಉತ್ತಮವಾದ ಸಂಸ್ಕಾರ ನೀಡಿ ಒಳ್ಳೆಯ ಭವಿಷ್ಯ ರೂಪಿಸುವ ಜವಾಬ್ದಾರಿ ಪೋಷಕರ ಮೇಲಿದೆ. ವಯಸ್ಸಾದ ತಂದೆ-ತಾಯಿಗೆ ಯಾವುದೇ ಕುಂದುಕೊರತೆಗಳಾಗದಂತೆ ಮಕ್ಕಳು ಚೆನ್ನಾಗಿ ನೋಡಿಕೊಳ್ಳುವುದೇ ಆಧಾರ ಎಂದು ವ್ಯಾಖ್ಯಾನಿಸಿದರು.

    ಎಲ್ಲರಿಗಿಂತ ಹೆಚ್ಚಾಗಿ ನನಗೆ ಉತ್ಕೃಷ್ಟವಾದ ಸುಖ ಶಾಶ್ವತವಾಗಿ ಪಡೆಯಬೇಕೆಂಬ ಆಸೆಪಟ್ಟವನು ಮತ್ತು ಕಡಿಮೆ ಸುಖ ಸಿಕ್ಕಿರುವ ವ್ಯಕ್ತಿಯ ಮಧ್ಯೆ ಹೋರಾಟ ನಡೆದು ಲೋಪಗಳನ್ನು ಸರಿಪಡಿಸಿಕೊಂಡು ಸಮಾನ ಸುಖ ಪಡೆಯುವಲ್ಲಿ ಯಶಸ್ವಿಯಾಗುತ್ತಾನೆ ಎಂದರು.

    ಈ ರೀತಿಯ ಬಯಕೆಗೆ ತಕ್ಕ ಫಲ ಸಿಗುತ್ತಿಲ್ಲ, ದುಖಃ ಬೇಡವೆಂದರು ನಿಲ್ಲುತ್ತಿಲ್ಲ. ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡುವ ಅಗತ್ಯ ಇದೆ ಎಂದು ಹೇಳಿದರು.
    ಪ್ರಪಂಚದಲ್ಲಿ ಶಾಶ್ವತ ಸುಖ ಸಿಗಬೇಕಾದರೆ ಧರ್ಮಾಚರಣೆ ಬಹಳ ಮುಖ್ಯ, ಇದಕ್ಕೆ ಧರ್ಮದ ಒಪ್ಪಿಗೆ ಬೇಕು. ಇತ್ತೀಚೆಗೆ ಜನರಲ್ಲಿ ಧರ್ಮದ ಬಗ್ಗೆ ತಿಳಿವಳಿಕೆ ಕಡಿಮೆಯಾಗುತ್ತಿರುವ ಕುರಿತು ವಿಷಾಧ ವ್ಯಕ್ತಪಡಿಸಿದರು.

    ಶಾಸಕ ಹೆಚ್.ಡಿ. ತಮ್ಮಯ್ಯ ಸ್ವಾಗತಿಸಿ ಮಾತನಾಡಿ, ತಾಲ್ಲೂಕು ಕಚೇರಿ ಆವರಣದಲ್ಲಿ ಇಂದು ಪುನರ್ ಪ್ರತಿಷ್ಠಾಪನೆಯಾಗಿರುವ ಗಣಪತಿಯು ಇನ್ನುಮುಂದೆ ಸಂಕಷ್ಟಹರ ಗಣಪತಿಯಾಗಲಿದೆ ಎಂದು ಹೇಳಿದರು. ಹಿಂದೆ ಕಡೂರು ಜಿಲ್ಲೆ ಇದ್ದಾಗ ವಸ್ತಾರೆ ತಾಲ್ಲೂಕು ಆಗಿತ್ತು, ಅಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣಪತಿಯನ್ನು ಚಿಕ್ಕಮಗಳೂರು ಜಿಲ್ಲೆ ಘೋಷಣೆಯಾದಾಗ ತಾಲ್ಲೂಕು ಕಚೇರಿ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿತ್ತು ಎಂದು ವಿವರಿಸಿದರು.

    ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಮಾತನಾಡಿ, ವಿಶ್ವದಲ್ಲಿ ಇರುವುದೊಂದೇ ಧರ್ಮ ಅದು ಹಿಂದೂ ಧರ್ಮ. ಉಳಿದೆಲ್ಲವು ಮಠ ಮತ್ತು ಪಂಥಗಳು. ಹಿಂದೂ ಧರ್ಮ ಉಳಿದಿರುವುದೇ ಈ ರೀತಿಯ ಮಠಮಾನ್ಯಗಳಿಂದ ಎಂದು ಅಭಿಪ್ರಾಯಿಸಿದರು.

    ಸಮಾರಂಭದಲ್ಲಿ ನಗರಸಭಾಧ್ಯಕ್ಷೆ ಶೀಲಾದಿನೇಶ್, ಉಪಾಧ್ಯಕ್ಷೆ ಲಲಿತಾನಾಯ್ಕ, ಮಾಜಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಡಾ. ಜೆ.ಪಿ ಕೃಷ್ಣೇಗೌಡ, ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ ಶಿವಾನಂದಸ್ವಾಮಿ, ತಾತ್ಕಾಲಿಕ ದೇವಸ್ಥಾನ ಸಮಿತಿ ಅಧ್ಯಕ್ಷ ಪೂಜಾರ್ ಮಂಜಪ್ಪ, ಸದಸ್ಯರುಗಳಾದ ಸಿ.ಎಸ್. ಕುಬೇರ, ಕೆ. ಮೋಹನ್‌ಕುಮಾರ್, ತಹಶೀಲ್ದಾರ್ ರೇಷ್ಮಾ ಹಾಗೂ ನಗರಸಭೆ ಸದಸ್ಯರುಗಳು ಉಪಸ್ಥಿತರಿದ್ದರು.

    The ancient Sanatana Dharma is the foundation of the world.

  • ರಾಜ್ಯದಲ್ಲಿ ಕಡ್ಡಾಯ ವೈದ್ಯಕೀಯ ಸೇವೆ ಅನುಷ್ಠಾನ

    ರಾಜ್ಯದಲ್ಲಿ ಕಡ್ಡಾಯ ವೈದ್ಯಕೀಯ ಸೇವೆ ಅನುಷ್ಠಾನ

    ಚಿಕ್ಕಮಗಳೂರು: ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿದ್ದ ಕಡ್ಡಾಯ ವೈದ್ಯಕೀಯ ಸೇವೆಯನ್ನು ಅನುಷ್ಠಾನಗೊಳಿಸಲಾಗಿದ್ದು, ರಾಜ್ಯದಲ್ಲಿ ೧೮೫೦ ಎಂಬಿಬಿಎಸ್ ವೈದ್ಯರನ್ನು ನೇಮಕ ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಅವರು ತಿಳಿಸಿದರು.

    ತರೀಕೆರೆ ತಾಲ್ಲೂಕು ಲಕ್ಕವಳ್ಳಿ ಗ್ರಾಮದಲ್ಲಿ ಇಂದು ೩೦ ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ಕಡ್ಡಾಯ ವೈದ್ಯಕೀಯ ಸೇವೆ ಜಾರಿಯಲ್ಲಿದ್ದರೂ ಸಮರ್ಪಕವಾಗಿ ಅನುಷ್ಠಾನವಾಗಿರಲಿಲ್ಲ. ಸದನದಲ್ಲಿ ಈ ಬಗ್ಗೆ ಚರ್ಚಿಸಿ ಕಾನೂನಾತ್ಮಕವಾಗಿ ಇದ್ದ ತೊಡಕುಗಳಿಗೆ ತಿದ್ದುಪಡಿ ತರುವ ಮೂಲಕ ವ್ಯವಸ್ಥೆ ಸರಿಪಡಿಸಲಾಗಿದೆ. ಅಂತೆಯೇ ಖಾಲಿ ಇರುವ ಹುದ್ದೆಗಳಿಗೆ ವೈದ್ಯರನ್ನು ನಿಯೋಜನೆ ಮಾಡಲಾಗಿದೆ ಎಂದು ಹೇಳಿದರು.

    ಕಟ್ಟಡ ನಿರ್ಮಾಣವಾದರೆ ಸಾಲದು, ಅಗತ್ಯವಾಗಿ ಅದಕ್ಕೆ ಬೇಕಾಗಿರುವ ಅಗತ್ಯ ಸಲಕರಣೆಗಳು, ವೈದ್ಯರು, ತಾಂತ್ರಿಕ ಸಿಬ್ಬಂದಿ ಹಾಗೂ ಇತರ ವೈದ್ಯಕೀಯ ಸಿಬ್ಬಂದಿಯ ಅವಶ್ಯಕತೆ ಇದ್ದು, ಇಲಾಖೆಯಿಂದ ಸಾಧ್ಯವಾಗುವ ಎಲ್ಲ ಕ್ರಮ ಕೈಗೊಂಡು ಹುದ್ದೆಗಳನ್ನು ಭರ್ತಿ ಮಾಡುವ ಕಾರ್ಯ ಕೈಗೊಳ್ಳಲಾಗುವುದು. ಈಗಾಗಲೇ ಸಾಕಷ್ಟು ಉಪಕರಣಗಳನ್ನು ಒದಗಿಸಲು ಮಂಜೂರಾತಿ ನೀಡಲಾಗಿದೆ. ಹೆಚ್ಚುವರಿಯಾಗಿ ಅಗತ್ಯವಿರುವ ಉಪಕರಣಗಳನ್ನು ಒದಗಿಸಲು ಹಣಕಾಸಿನ ವ್ಯವಸ್ಥೆಯನ್ನು ಶೀಘ್ರದಲ್ಲೇ ಕಲ್ಪಿಸುವುದಾಗಿ ತಿಳಿಸಿದರು. ಇದರ ಜೊತೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿಯಿಂದ ಅಗತ್ಯ ಅನುದಾನ ಒದಗಿಸಲು ಅವಕಾಶವಿದ್ದು, ಈ ಬಗ್ಗೆ ಗಮನ ಹರಿಸುವಂತೆ ಸೂಚಿಸಿದರು.

    ಇಂದು ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆ ಸಮರ್ಪಕವಾಗಿದ್ದರೆ ಮಾತ್ರ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ. ಇಂದು ಪ್ರತಿಯೊಬ್ಬರಲ್ಲೂ ಆರೋಗ್ಯದ ಬಗ್ಗೆ ಚಿಂತನೆ ಹೆಚ್ಚಾಗಿದೆ. ಯಾವುದೇ ಕುಟುಂಬದ ಆಧಾರಸ್ತಂಭವಾಗಿರುವ ವ್ಯಕ್ತಿಗೆ ಆರೋಗ್ಯ ಸಮಸ್ಯೆಯಾದಲ್ಲಿ ಇಡೀ ಕುಟುಂಬವೇ ಅದರ ಪರಿಣಾಮ ಎದುರಿಸಬೇಕಾಗುತ್ತದೆ. ಜೊತೆಗೆ ಚಿಕಿತ್ಸಾ ವೆಚ್ಚವೂ ದುಬಾರಿಯಾಗಿರುವುದರಿಂದ ಆ ಬಗೆಗಿನ ಭಯ ಜನರಲ್ಲಿ ಆವರಿಸುವುದು ಸಹಜ. ಈ ನಿಟ್ಟಿನಲ್ಲಿ ಜನರಿಗೆ ಸಾಧ್ಯವಾದಷ್ಟು ಹಂತದಲ್ಲಿ ಉಚಿತವಾಗಿಯೇ ಆರೋಗ್ಯ ಸೇವೆಯನ್ನು ಕಲ್ಪಿಸಲು ಒಂದು ಕಡೆ ಸರ್ಕಾರ ಪ್ರಯತ್ನ ನಡೆಸುತ್ತಿದೆ. ಎಲ್ಲವನ್ನೂ ಸರ್ಕಾರದಿಂದ ಪೂರೈಸಲು ಸಾಧ್ಯವಾಗದು. ಕೆಲವೊಮ್ಮೆ ಖಾಸಗಿ ವ್ಯವಸ್ಥೆಯನ್ನು ಅವಲಂಬಿಸುವ ಪರಿಸ್ಥಿತಿ ಇರಬಹುದು. ವೈದ್ಯರ ಕೊರತೆ ನೀಗುವುದರ ಜೊತೆಗೆ ಅಗತ್ಯ ಔಷಧಗಳು ದೊರೆಯುವಂತಾಗಬೇಕು. ಈ ಕೊರತೆ ನೀಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಆಯಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಈ ಬಗ್ಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದರು.

    ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಆರಂಭಿಸಿ ತಾಲ್ಲೂಕು ಆಸ್ಪತ್ರೆಗಳವರೆಗೆ ಔಷಧಗಳ ಲಭ್ಯತೆ ಬಗ್ಗೆ ಗಮನ ಹರಿಸಲಾಗುತ್ತಿದೆ. ಸರ್ಕಾರದಿಂದ ಔಷಧಿ ಪೂರೈಕೆಯಾಗದೇ ಇದ್ದಲ್ಲಿ ಇಲಾಖೆಯ ಹಣದಲ್ಲಿ ಖರೀದಿಸಿ ರೋಗಿಗಳಿಗೆ ಒದಗಿಸಲು ಸೂಚನೆ ನೀಡಿರುವುದಾಗಿ ಹೇಳಿದರು.

    ಈ ನಡುವೆ ತಜ್ಞ ವೈದ್ಯರ ನೇಮಕ ವಿಚಾರ ಈಗಾಗಲೇ ನ್ಯಾಯಾಲಯದಲ್ಲಿದೆ. ಹಿಂದಿನ ವರ್ಷ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ನ್ಯಾಯಾಲಯದಲ್ಲಿ ಈ ಪ್ರಕರಣಕ್ಕೆ ಪರಿಹಾರ ದೊರೆಯಲಿದ್ದು, ಆ ಹುದ್ದೆಗಳಿಗೆ ಕೂಡ ನೇಮಕ ಮಾಡಿ ಕಡ್ಡಾಯ ವೈದ್ಯಕೀಯ ಸೇವೆಯ ವ್ಯಾಪ್ತಿಗೆ ಒಳಪಡಿಸಲಿರುವುದಾಗಿ ತಿಳಿಸಿದರು.

    ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಶಾಸಕರಾದ ಜಿ.ಹೆಚ್.ಶ್ರೀನಿವಾಸ್ ಮಾತನಾಡಿ, ಇಲ್ಲಿ ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣವಾದ ಮೇಲೆ ಪೂರ್ಣ ಪ್ರಮಾಣದಲ್ಲಿ ನುರಿತ ವೈದ್ಯರನ್ನು ನೇಮಿಸಿ ಜನರಿಗೆ ಅನುಕೂಲವಾಗುವಂತೆ ಮಾಡಲಾಗಿದೆ. ಒಟ್ಟು ೯ ಕೋಟಿ ರೂ. ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡವನ್ನು ನಿರ್ಮಿಸಲಾಗಿದ್ದು ಈ ಕಟ್ಟಡದಲ್ಲಿ ಪ್ರಯೋಗಾಲಯ, ಬೆಡ್‌ಗಳು, ತಜ್ಞ ವೈದ್ಯರಿಗೆ ಸಂಬಂಧಿಸಿದ ಮೂರು ವಾರ್ಡ್‌ಗಳಿವೆ. ಜೊತೆಗೆ ಒಳರೋಗಿಗಳ ವಿಭಾಗವೂ ಇರಲಿದೆ. ಜನರು ಇದರ ಸದುಪಯೋಗ ಪಡೆಯುವಂತೆ ತಿಳಿಸಿದರು.

    ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೆ.ಜೆ.ಜಾರ್ಜ್, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಲಕ್ಕವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಬ್ದುಲ್ ರೆಹಮಾನ್, ಉಪಾಧ್ಯಕ್ಷರಾದ ಜಿ.ಭವಾನಿ, ಮೈಸೂರು ವಿಭಾಗೀಯ ಜಂಟಿ ನಿರ್ದೇಶಕರಾದ ಡಾ.ಬಿ.ಮಲ್ಲಿಕಾ, ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್. ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ, ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕರಡ್ಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್ಥಬಾಬು, ಆರೋಗ್ಯ ಇಲಾಖೆಯ ಸಹ ನಿರ್ದೇಶಕರಾದ ಜಿಲ್ಲಾ ನೋಡಲ್ ಅಧಿಕಾರಿ ಡಾ.ಚಂದ್ರಿಕಾ, ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

    Implementation of compulsory medical service in the state

  • ಶ್ರೀಮಹಾಗಣಪತಿ ದೇವಸ್ಥಾನಕ್ಕೆ ನಿಶ್ಚಲಾನಂದನಾಥ ಸ್ವಾಮೀಜಿ ಭೇಟಿ

    ಶ್ರೀಮಹಾಗಣಪತಿ ದೇವಸ್ಥಾನಕ್ಕೆ ನಿಶ್ಚಲಾನಂದನಾಥ ಸ್ವಾಮೀಜಿ ಭೇಟಿ

    ಆಲ್ದೂರು: ಕೆಂಗೇರಿಯ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ ಪಟ್ಟಣದ ಶ್ರೀಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿದರು.

    ನಂತರ ಮಾತನಾಡುತ್ತಾ ಕೆಲ ವರ್ಷಗಳ ಹಿಂದೆ ಚಿಕ್ಕಮಗಳೂರಿನಲ್ಲಿ ಅಸಿಸ್ಟೆಂಟ್ ಕಮಿಷನರ್ ಹಾಗೂ ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದನ್ನು ನೆನಪಿಸಿಕೊಂಡರು.

    ಆದಿಚುಂಚನಗಿರಿ ಪೀಠಾಧ್ಯಕ್ಷ ಬಾಲಗಂಗಾಧರನಾಥ ಸ್ವಾಮೀಜಿಯ ಆಶೀರ್ವಾದದೊಂದಿಗೆ ೧೦ ವರ್ಷ ವ್ಯಾಸಂಗ ಮಾಡಿದ್ದೆ. ಚಂದ್ರಶೇಖರ ಕುಮಾರನಾಥ ಸ್ವಾಮೀಜಿ ಕಾಯಿಲೆಗೆ ತುತ್ತಾದ ಬಳಿಕ, ಮಠದ ಸೇವಾ ಜವಾಬ್ದಾರಿ ನನಗೆ ವಹಿಸಲಾಯಿತು. ೯ ತಿಂಗಳಿಂದ ಮಠದ ಕಾರ್ಯ ನಿರ್ವಹಿಸುತ್ತಿದ್ದೇನೆ? ಎಂದು ಅವರು ತಿಳಿಸಿದರು.

    ಮಠದಲ್ಲಿ ತ್ರಿಕಾಲ ದಾಸೋಹವನ್ನು ಆರಂಭಿಸಿದ್ದು, ಗ್ರಾಮೀಣ ಭಾಗದ ಬಡ-ಮಧ್ಯಮ ವರ್ಗದ ವಿದ್ಯಾರ್ಥಿ ಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳ ವಸತಿ ಸಹಿತ ತರಬೇತಿ ಕೇಂದ್ರ ಆರಂಭಿಸುವ ಯೋಜನೆ ರೂಪಿಸಲಾಗಿದೆ. ಯಾವುದೇ ಜಾತಿ ತಾರತಮ್ಯ ವಿಲ್ಲದೆ ಶಿಕ್ಷಣ ಸೇವೆ ನೀಡುವುದು ನಮ್ಮ ಗುರಿ. ಸಮಾಜದ ಸಹಕಾರ ಅತ್ಯವಶ್ಯಕ ಎಂದರು.

    ವಲಯ ಒಕ್ಕಲಿಗ ಸಂಘದ ಅಧ್ಯಕ್ಷ ಅಶೋಕ್ ಡಿ.ಬಿ., ಪದಾಧಿಕಾರಿಗಳಾದ ವಸಂತ್, ಲಕ್ಷ್ಮಣ್ ಗೌಡ, ಮಹಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಸಿ. ಸುರೇಶ್ ಗೌಡ, ಮುಖಂಡರಾದ ಕವೀಶ್ ಎಚ್.ಎಸ್., ರುದ್ರೇಗೌಡ, ಶಂಕರ್ ಸೂರಪ್ಪನಹಳ್ಳಿ, ಈರೇಗೌಡ, ಕೌಶಿಕ್ ಎ.ಡಿ., ರವಿಕುಮಾರ್ ಎಚ್.ಎಲ್., ರಂಜಿತ್ ದೊಡ್ಡ ಮಾಗರವಳ್ಳಿ, ಹಳಿಯೂರು ಮಹೇಶ್ ಗೌಡ, ಅಣ್ಣೇಗೌಡ, ಗೋಪಾಲ್ ಗೌಡ, ಚಂಪಾ ಜಗದೀಶ್, ಪ್ರತಿಭಾ ನವೀನ್, ಭವ್ಯ ನಟೇಶ್ ಭಾಗವಹಿಸಿದ್ದರು.

    Nischalanandanatha Swamiji visits Sri Maha Ganapathi Temple

     

  • ಮಾದಕ ವ್ಯಸನದಿಂದ ದೂರವಿರಲು ಕ್ರೀಡೆ ಸಹಕಾರಿ

    ಮಾದಕ ವ್ಯಸನದಿಂದ ದೂರವಿರಲು ಕ್ರೀಡೆ ಸಹಕಾರಿ

    ಚಿಕ್ಕಮಗಳೂರು: – ಮಾದಕ ವ್ಯಸನದಿಂದ ದೂರವಿರಲು ಕ್ರೀಡೆ ಸಹಕಾರಿ. ಯುವ ಸಮೂಹ ದುಶ್ಚಟಗಳಿಗೆ ಹೆಚ್ಚಿನ ಮಹತ್ವ ಕೊಡದೇ, ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಮಾಜಕ್ಕೆ ಮಾದರಿ ಪ್ರಜೆಯಾಗಬೇಕು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

    ನಗರದ ಉಪ್ಪಳ್ಳಿ ಬಡಾವಣೆಯ ಸಮೀಪ ಭಾನುವಾರ ಮಾಸ್ಟ್‌ರ್‍ಸ್ ಕ್ರಿಕೇಟ್ ಕ್ಲಬ್ ಹಾಗೂ ಬಸವನಹಳ್ಳಿ ಪೊಲೀಸ್ ಠಾಣೆ ಸಹಯೋಗದಲ್ಲಿ ಹಮ್ಮಿಕೊಂಡಿದ್ಧ ಕ್ರೀಕೇಟ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತ ನಾಡಿದರು.

    ಮಾದಕ ದ್ರವ್ಯಗಳ ಕಳ್ಳ ಮಾರಾಟ ಹಾಗೂ ಖರೀದಿಸುವ ಯಾವುದೇ ಬಲಾಡ್ಯ ವ್ಯಕ್ತಿ ಅಥವಾ ಪಕ್ಷದ ಮುಖಂಡರು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದ್ದು ಯುವ ಕರ ಭವಿಷ್ಯ ಹಾಳು ಮಾಡುವ ಸಮಾಜಘಾತುಕರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದರು.

    ಭವಿಷ್ಯದಲ್ಲಿ ಸಮಾಜಕ್ಕೆ ಮಾದರಿಯಾಗುವ ಯುವಕರ ಜೀವನ ಸದೃಢಗೊಳಿಸುವ ನಿಟ್ಟಿನಲ್ಲಿ ಇಂದಿನ ಪಂದ್ಯಾವಳಿ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಜಾಗೃತಿ ಮೂಡಿಸುತ್ತಿರುವುದು ಹೆಮ್ಮೆಯ ಸಂಗತಿ. ಹೀಗಾಗಿ ಪಾಲಕರ ಕನಸು ಹಾಗೂ ಗುರುಹಿರಿಯರ ಶ್ರಮಕ್ಕೆ ಬೆಳಕು ಚೆಲ್ಲುವ ಕೆಲಸ ಯುವಜನತೆಗೆ ಮಾಡ ಬೇಕಿದೆ ಎಂದು ಹೇಳಿದರು.

    ಕ್ರೀಡಾಕೂಟಕ್ಕೆ ಮನಸ್ಸನ್ನು ಕಟ್ಟಿಗೊಳಿಸುವ ಶಕ್ತಿಯಿದ್ದು ಸದೃಢಗೊಳಿಸುವ ಸಾಮರ್ಥ್ಯ ಯುವಕರಲ್ಲಿ ಬ ರಬೇಕಿದೆ. ಇಂದಿನ ಉಪ್ಪಳ್ಳಿಯ ಪಂದ್ಯಾವಳಿ ಸರ್ವ ಧರ್ಮದ ಸಹೋದರರು ಒಟ್ಟಾಗಿ ಆಡುವ ಮೂಲಕ ಮುಂದಿನ ಮಕ್ಕಳ ಭವಿಷ್ಯವನ್ನು ಸನ್ನಡತೆಯತ್ತ ಕೊಂಡೊಯ್ಯಲು ಮುಂದಾಗುತ್ತಿರುವುದು ಉತ್ತಮ ವಿಚಾ ರ ಎಂದರು.

    ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ ಕ್ರೀಡೆಗಳು ಜೀವನೋತ್ಸವವನ್ನು ಹೆಚ್ಚಿಸುವ ಜೊತೆ ಗೆ ಆರೋಗ್ಯಪೂರ್ಣ ಶರೀರಕ್ಕೆ ನಾಂದಿಯಾಗಲಿದೆ. ನಿರಂತರ ಕಲಿಕೆ ಜೊತೆಗೆ ಪರಿಸರ ಸಂರಕ್ಷಣೆ ಬಗ್ಗೆ ಪ್ರ ಮುಖ ಕಾಳಜಿವಹಿಸಬೇಕು. ಆ ನಿಟ್ಟಿನಲ್ಲಿ ಇಂದಿನಿಂದಲೇ ಪ್ರತಿಜ್ಞೆ ಅಳವಡಿಸಿ ವ್ಯಸನದಿಂದ ಮುಕ್ತರಾಗಿಸಲು ಚಿಂತನೆ ನಡೆಸಬೇಕು ಎಂದು ಹೇಳಿದರು.

    ನಮ್ಮಗಳ ಉಪಸನ ಪದ್ಧತಿ ಬೇರೆಯಾದರೂ, ಭಾರತೀಯ ಸಂಸ್ಕೃತಿ ಒಂದೇ. ಉಪಕಾರಿಯಾಗಿ ಸ್ಮರಿ ಸುವ ಭಾರತೀಯ ಸಂಸ್ಕೃತಿ ಜೊತೆಗೆ ಪರಿಸರ ಸಂರಕ್ಷಣೆಯ ಆಳವಾದ ಅರಿವು ಹೊಂದಬೇಕು. ಪರಿಸರದ ಒಳಿತನ್ನು ಮುಂದಿಟ್ಟಾಗ ನೈಸರ್ಗಿಕ ಪರಿಸರ ಉಳಿಸಲು ಸಾಧ್ಯ ಎಂದರು.

    ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಜಯಕುಮಾರ್ ಮಾತನಾಡಿ ಮಾದಕ ವ್ಯಸನ ಕಡಿವಾಣಗೊಳಿ ಸಲು ಇಲಾಖೆಯಿಂದ ಅನೇಕ ಕಾರ್ಯಕ್ರಮ ನಡೆಸುವ ಜೊತೆಗೆ ಹದ್ದಿನ ಕಣ್ಣಿರಿಸಿದೆ. ಸಾರ್ವಜನಿಕರು, ಸಾ ಮಾಜಿಕ ಮುಖಂಡರುಗಳು ಸಮಾಜದ ಒಳಿತಿಗಾಗಿ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದರು.

    ನಗರಸಭಾ ಸದಸ್ಯ ಮುನೀರ್ ಅಹ್ಮದ್ ಮಾತನಾಡಿ ಉಪ್ಪಳ್ಳಿಯ ವಿವಿಧ ಸಂಘ-ಸಂಸ್ಥೆಗಳ ಹಾಗೂ ಪೊಲಿಸ್ ಇಲಾಖೆ ಸಹಯೋಗದಲ್ಲಿ ೪೦ ವರ್ಷ ಮೇಲ್ಪಟ್ಟ ವ್ಯಕ್ತಿಗಳಿಗೆ ಕ್ರೀಡಾಕೂಟ ಆಯೋಜಿಸಿದ್ದು ಒಟ್ಟು ನಾಲ್ಕು ತಂಡಗಳು ಭಾಗವಹಿಸಿದ್ದು ೮ ಓವರ್‌ಗೆ ಸೀಮಿತಗೊಳಿಸಿದೆ. ಯಾವುದೇ ಸ್ಫರ್ಧೆಯಿಲ್ಲದೇ ಸ್ನೇಹತ್ವ ದಿಂದ ಪಂದ್ಯಾವಳಿ ನಡೆಯುತ್ತಿದೆ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್, ಸದಸ್ಯರಾದ ಖಲಂದರ್, ಮಣಿಕಂಠ, ಟೇಸ್ಟಿ ವರ್ಲ್ಡ್ ಮಾಲೀಕ ಎಂ.ಎನ್.ಅರವಿಂದ್, ಸಿಡಿಎ ಸದಸ್ಯ ಸುದೀಪ್, ಸವನಹಳ್ಳಿ ಠಾಣೆ ಇನ್ಸ್‌ಪೆಕ್ಟರ್ ಅಜು ರುದ್ದೀನ್, ಆಯೋಜಕರಾದ ಅನ್ಸರ್‌ಆಲಿ, ಜಮಾಲ್, ಮುಜ್ಜು, ನಂದೀಶ್, ಸಲೀಂ, ಸಾಹೀರ್ ಮತ್ತಿತರ ರಿದ್ದರು.

    Sports can help you stay away from drug addiction.

  • ಪ್ರತೀ ಜಿಲ್ಲೆಗೆ ಒಂದು ಸರ್ಕಾರಿ ಮೆಡಿಕಲ್ ಕಾಲೇಜು

    ಪ್ರತೀ ಜಿಲ್ಲೆಗೆ ಒಂದು ಸರ್ಕಾರಿ ಮೆಡಿಕಲ್ ಕಾಲೇಜು

    ಬೆಳಗಾವಿ: ಸರ್ಕಾರಿ ಆಸ್ಪತ್ರೆಗೆ ಬರುವವರೆಲ್ಲಾ ಬಡ-ಮಧ್ಯಮ ವರ್ಗದವರು. ಇವರಿಗೂ ಅತ್ಯುತ್ತಮ ಆರೋಗ್ಯ ಸೇವೆ ಒದಗಿಸಲು ಪ್ರತೀ ಜಿಲ್ಲೆಗೆ ಒಂದು ಸರ್ಕಾರಿ ಮೆಡಿಕಲ್ ಕಾಲೇಜು, ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವುದು ನನ್ನ ಗುರಿ ಎಂದು
    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

    ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ನಿರ್ಮಿಸಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡದ ಉದ್ಘಾಟನೆ ಹಾಗೂ ಗೃಹ ವೈದ್ಯರ ವಸತಿ ನಿಲಯ ಕಟ್ಟಡ ನಿರ್ಮಾಣ ಕಾಮಗಾರಿಯ ಉದ್ಘಾಟನೆ, ಬೆಳಗಾವಿ ಸ್ಮಾರ್ಟ್ ಸಿಟಿ ಅನುದಾನದಲ್ಲಿ ನಿರ್ಮಾಣಗೊಂಡ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ಬಸ್ ನಿಲ್ದಾಣದ ಉದ್ಘಾಟನೆ, ರಾಣಿ ಚನ್ನಮ್ಮ ವಿವಿಯ ಹಿರೇಬಾಗೇವಾಡಿ ಹೊಸ ಆವರಣದಲ್ಲಿ ಪಿ.ಎಂ ಉಷಾ ವಿವಿಧ ಕಟ್ಟಡಗಳ ಹಾಗೂ ರಾಷ್ಟ್ರೀಯ ಹೆದ್ದಾರಿಯಿಂದ ವಿವಿಯ ನೂತನ ಆವರಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

    ಬರಿ ಆಸ್ಪತ್ರೆ ಕಟ್ಟಡ ಕಟ್ಟಿದರೆ ಸಾಲದು. ಅದಕ್ಕೆ ತಕ್ಕಂತೆ ತಜ್ಞ ವೈದ್ಯರನ್ನೂ ನೇಮಿಸುತ್ತೇವೆ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ತೀರ್ಮಾನಿಸಿದ್ದೇವೆ ಎಂದರು. ಸದ್ಯ ಪ್ರಭಾಕರ್ ಕೋರೆ ಅವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಸರ್ಕಾರಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕಾಗಿ ಕೋರೆ ಅವರಿಗೆ ಅಭಿನಂದಿಸುತ್ತೇನೆ ಎಂದರು.

    ನಮ್ಮ ಸರ್ಕಾರ ಅಸಮಾನತೆಯನ್ನು ಅಳಿಸುವ ದಿಕ್ಕಿನಲ್ಲಿ ತಳ ಸಮುದಾಯಗಳಿಗೆ ಅವಕಾಶ ಮತ್ತು ಅನುಕೂಲಗಳನ್ನು ಕಲ್ಪಿಸುತ್ತಿದೆ. ಅಸಮಾನತೆ ಇರುವವರೆಗೆ ತಳ ಸಮುದಾಯಗಳ ಜನ ಮುಖ್ಯವಾಹಿನಿಗೆ ಬರಲು ಸಾಧ್ಯವಿಲ್ಲ ಎನ್ನುವ ಮಾತುಗಳನ್ನು ನೆನಪಿನಲ್ಲಿ ಇಟ್ಟುಕೊಂಡು ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದರು.

    ಬುದ್ದ-ಬಸವ-ಗಾಂಧಿ-ಅಂಬೇಡ್ಕರ್ ಆಶಯದಂತೆ ನಮ್ಮ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಸಮಾಜದ ಕಟ್ಟ ಕಡೆಯವರಿಗೂ ಅಭಿವೃದ್ಧಿ ತಲುಪಿದಾಗ ಮಾತ್ರ ಸಮಾಜದ, ದೇಶದ ಅಭಿವೃದ್ಧಿ ಸಾಧ್ಯ ಎನ್ನುವುದು ಎಲ್ಲರ ಆಶಯವಾಗಿದೆ. ಹೀಗಾಗಿ ಎಲ್ಲರ ಕಲ್ಯಾಣ ಕಾರ್ಯಕ್ರಮಗಳನ್ನು ನಾವು ರೂಪಿಸುತ್ತಿದ್ದೇವೆ ಎಂದು ಸಿದ್ದರಾಮಯ್ಯ ಅವರು ವಿವರಿಸಿದರು.

    ನಾನು ಮೊದಲ ಬಾರಿ ಮುಖ್ಯಮಂತ್ರಿಯಾಗಿ ಜಾರಿಗೆ ತಂದ ಭಾಗ್ಯಗಳು, ಈಗ ಜಾರಿಗೆ ತಂದಿರುವ ಗ್ಯಾರಂಟಿಗಳು ರಾಜ್ಯದ ಜನರ ಕೊಳ್ಳುವ ಶಕ್ತಿಯನ್ನು, ತಲಾ ಆದಾಯವನ್ನು ಹೆಚ್ಚಿಸಿ‌ ಮಹಿಳೆಯರನ್ನೂ ಆರ್ಥಿಕವಾಗಿ ಸಬಲರನ್ನಾಗಿ ಮಾಡಲಾಗಿದೆ ಎಂದರು. ಬಡವರಿಗೆ ಆರ್ಥಿಕವಾಗಿ ಶಕ್ತಿ ಬಂದರೆ ಸಮಾಜದ ಜಾತಿ ವ್ಯವಸ್ಥೆ, ಅಸಮಾನತೆ ಅಳಿಸಲು ಸಾಧ್ಯವಾಗುತ್ತದೆ ಎಂದರು.

    ರಾಜ್ಯದ ಎಂಟು ಜಿಲ್ಲೆಗಳಲ್ಲಿ ಶೇ95 ರಷ್ಟು ಅಧಿಕ ಮಳೆಯಾಗಿ ರಾಜ್ಯದಲ್ಲಿ 10 ಲಕ್ಷ ಹೆಕ್ಟೇರ್ ಬೆಳೆ ನಾಶ ಆಗಿರುವ ಅಂದಾಜಿದೆ. ಈ ಬೆಳೆ ಹಾನಿಗೆ ದಾಖಲೆ ಮೊತ್ತದ ಪರಿಹಾರ ಹಣ ನೀಡಿ ರೈತರು, ಬೆಳೆಗಾರರು, ಕೃಷಿಕರ ನೆರವಿಗೆ ಧಾವಿಸಿದ್ದೇವೆ ಎಂದರು.

    ಸಚಿವರಾದ ಶರಣ ಪ್ರಕಾಶ್ ಪಾಟೀಲ್, ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ರಾಮಲಿಂಗಾರೆಡ್ಡಿ, ಎಂ.ಸಿ.ಸುಧಾಕರ್ ಸೇರಿ ಹಲವು ಗಣ್ಯರು, ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

    One Government Medical College per district

  • ಭಾರತದ ಧರ್ಮ- ಸಂಸ್ಕಾರ ಯುವಜನಾಂಗಕ್ಕೆ ಪರಿಚಯಿಸಿ

    ಭಾರತದ ಧರ್ಮ- ಸಂಸ್ಕಾರ ಯುವಜನಾಂಗಕ್ಕೆ ಪರಿಚಯಿಸಿ

    ಚಿಕ್ಕಮಗಳೂರು: ಭಾರತ ದೇಶದ ಧರ್ಮ, ಸಂಸ್ಕೃತಿ, ಸಂಸ್ಕಾರಗಳನ್ನು ಯುವಜನಾಂಗಕ್ಕೆ ಪರಿಚಯಿಸಿ ಆಚರಣೆಗೆ ತರುವ ಪ್ರಯತ್ನ ಮಾಡುವ ಅಗತ್ಯ ಇದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಕರೆನೀಡಿದರು.

    ಅವರು ಸಮೀಪಕ ಸುಕ್ಷೇತ್ರ ಬೀಕನಹಳ್ಳಿಯಲ್ಲಿ ೭೪ನೇ ವರ್ಷದ ನವರಾತ್ರಿ ಸಮಾರೋಪದ ಅಂಗವಾಗಿ ದೇವಿ ಮಹಾತ್ಮೆ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

    ಧರ್ಮ, ಸಂಸ್ಕಾರದ ಮೇಲೆ ಭಾರತ ದೇಶದ ನೆಲೆ ಗಟ್ಟಿಯಾಗಿದೆ. ಈ ನಿಟ್ಟಿನಲ್ಲಿ ಸುಮಾರು ೭೪ ವರ್ಷಗಳಿಂದ ಸುಕ್ಷೇತ್ರ ಬೀಕನಹಳ್ಳಿಯಲ್ಲಿ ತಾಯಿ ಚಾಮುಂಡೇಶ್ವರಿ ನವರಾತ್ರಿ-ದಸರಾ ಉತ್ಸವ ವಿಜೃಂಭಣೆಯಿಂದ ವೈಭವಯುತವಾಗಿ ನಡೆದುಕೊಂಡು ಬರುತ್ತಿದೆ ಎಂದು ಹೇಳಿದರು.

    ಬೀಕನಹಳ್ಳಿಯಲ್ಲಿ ಚಾಮುಂಡೇಶ್ವರಿ ದೇವಿ ಶಕ್ತಿ ದೇವತೆಗಳ ಅವತಾರ ತಾಳಿದ್ದು, ದುಷ್ಟ ಶಕ್ತಿ ಸಂಹಾರ ಮಾಡುವ ಉದ್ದೇಶದೊಂದಿಗೆ ನಾಡು ಮತ್ತು ಜನರ ರಕ್ಷಣೆ ಮಾಡಲು ಅವತರಿಸಿರುವುದು ಇತಿಹಾಸ ಎಂದು ತಿಳಿಸಿದರು.

    ಈಗಲೂ ಬೇರೆ ಬೇರೆ ರೂಪದಲ್ಲಿ ದುಷ್ಟಶಕ್ತಿಗಳಿವೆ, ಅವುಗಳನ್ನು ಸಂಹಾರ ಮಾಡಿ ಭಕ್ತರನ್ನು ರಕ್ಷಣೆ ಮಾಡುತ್ತಿರುವ ಶ್ರೀ ಚಾಮುಂಡೇಶ್ವರಿ ತಾಯಿ ದುರ್ಗೆ, ಚೌಡೇಶ್ವರಿ ಈ ರೀತಿ ನಾನಾ ಶಕ್ತಿ ದೇವತೆಗಳಾಗಿ ಅವತರಿಸಿದೆ ಎಂದರು.

    ಇಂತಹ ಧಾರ್ಮಿಕ ಕಾರ್ಯಕ್ರಮಗಳು ನಾಡು, ಗ್ರಾಮ, ದೇಶದಲ್ಲಿ ನಡೆಯುವುದನ್ನು ಬಿಟ್ಟರೆ ಬೇರೆ ಯಾವುದೇ ದೇಶದಲ್ಲಿ ಕಾಣಲು ಅಸಾಧ್ಯ. ತಾವು ವಿದೇಶದ ಪ್ರವಾಸದ ಸಂದರ್ಭದಲ್ಲಿ ನಮ್ಮವರನ್ನು ಕಂಡಾಗ ಅವರು ನೀಡಿದ ಸತ್ಕಾರ್ಯಗಳು ಅತೀವ ಸಂತಸ ತಂದಿತು. ಅದೇ ಭಾರತ ಮಾತೆಯ ಶಕ್ತಿ ಎಂದು ಬಣ್ಣಿಸಿದರು.

    ದೇವಿ ಮಹಾತ್ಮೆ (ಮಹಿಷಾಸುರ ಮರ್ಧಿನಿ) ನಾಟಕ ಪ್ರದರ್ಶನ ವೀಕ್ಷಿಸುವ ಭಕ್ತರ ಮನಸ್ಸಿನಲ್ಲಿ ಧಾರ್ಮಿಕ ಭಾವನೆ ನೆಲೆಯೂರಲಿ ಎಂದು ಶುಭ ಹಾರೈಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ. ಮಂಜೇಗೌಡ ಸ್ವಾಗತಿಸಿ ಮಾತನಾಡಿ, ಜಾತಿ, ಮತ, ಬೇಧಭಾವ ಮಾಡದೆ ಸರ್ವರೂ ಭಾಗವಹಿಸುವ ಪುಣ್ಯಸ್ಥಳ ಸುಕ್ಷೇತ್ರ ಚಾಮುಂಡೇಶ್ವರಿ ದೇವಿ ಸನ್ನಿಧಾನ ಎಂದು ಹೇಳಿದರು.

    ಈ ಕಾರ್ಯಕ್ರಮದಲ್ಲಿ ಶ್ರೀ ಚಾಮುಂಡೇಶ್ವರಿ ಸುಕ್ಷೇತ್ರ ಸೇವಾ ಸಮಿತಿಯ ಅಧ್ಯಕ್ಷ ಬಿ.ಪಿ ನಂಜಪ್ಪ, ಉಪಾಧ್ಯಕ್ಷ ಬಿ.ಹೆಚ್ ಗುರುಬಸಪ್ಪ, ರಾಜಶೇಖರ್, ವಿಜಯ್‌ಕುಮಾರ್, ಕಾರ್ಯದರ್ಶಿ ಬಿ.ಎಂ ಯೋಗಾನಂದ್, ಖಜಾಂಚಿ ಬಿ.ಹೆಚ್ ಸೋಮೇಗೌಡ, ಸದಸ್ಯರುಗಳಾದ ನಂಜುಂಡಪ್ಪ, ಗುರುಸಿದ್ದಪ್ಪ, ಯತಿರಾಜ್. ಲೋಕನಾಥ್, ರಂಗಪ್ಪ, ಬಿ.ಎಂ ನಾಗರಾಜು, ಲಲಿತಾ ಬಸವರಾಜ್, ಬಿ.ಎಸ್ ಪರಮೇಶ್ವರಪ್ಪ, ಚಂದ್ರಾಚಾರ್, ಮಲ್ಲಿಕಾರ್ಜುನ್, ಹಾಗೂ ಸಿದ್ದೇಶ್ವರ, ಕಲ್ಲೇಶ್ವರ, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

    Introduce Indian religion and culture to the youth