Category: ಚಿಕ್ಕಮಗಳೂರು

  • ಮನೆ ಹಿರಿಯರಿಗೆ ಇಳಿವಯಸ್ಸಿನಲ್ಲಿ ನಾವು ರಕ್ಷಕರಾಗಬೇಕು

    ಮನೆ ಹಿರಿಯರಿಗೆ ಇಳಿವಯಸ್ಸಿನಲ್ಲಿ ನಾವು ರಕ್ಷಕರಾಗಬೇಕು

    ಚಿಕ್ಕಮಗಳೂರು: ಪ್ರಸ್ತುತ ದಿನಗಳಲ್ಲಿ ಹಿರಿಯರನ್ನು ಕಡೆಗಣಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದು ದುರದೃಷ್ಟಕರ. ಪ್ರತಿ ಮನೆಯ ಹಿರಿಯ ಹಾಗೂ ಅಮೂಲ್ಯ ಜೀವಗಳಿಗೆ ಇಳಿವಯಸ್ಸಿನಲ್ಲಿ ನಾವು ರಕ್ಷಕರಾಗಬೇಕು ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ನಗರ ಸಭೆ, ವಾರ್ತಾ ಇಲಾಖೆ, ವಿಕಲಚೇತನರ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಎಲ್ಲಾ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಇಂದು ನಗರದ ಶೆಟ್ಟರ ಬೀದಿಯ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ೨೦೨೫-೨೬ನೇ ಸಾಲಿನ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಹಾಗೂ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ತಂದೆ, ತಾಯಿ, ಅಜ್ಜ, ಅಜ್ಜಿ ಸೇರಿದಂತೆ ಹಿರಿಯರು ಇರುವ ಮನೆ ತುಂಬಿದ ಕೊಡವಿದ್ದಂತೆ. ಅವರ ಮಾರ್ಗದರ್ಶನ, ಸಲಹೆಗಳು ಕಿರಿಯರಿಗೆ ಸದಾ ಬೇಕಾಗುತ್ತವೆ. ದಾರಿ ತಪ್ಪದಂತೆ ನಮ್ಮನ್ನು ತಿದ್ದಿ, ತೀಡಿ ಸರಿ ದಾರಿಯಲ್ಲಿ ನಡೆಯುವಂತೆ ಹಿರಿಯರು ಮಾಡುತ್ತಾರೆ. ಆದರೆ ಅವರ ಮಾತುಗಳನ್ನು ನಕಾರಾತ್ಮಕವಾಗಿ ತೆಗೆದುಕೊಂಡು ನಿರ್ಲಕ್ಷ್ಯ ಮಾಡುವುದು ಇಂದಿನ ದಿನಗಳಲ್ಲಿ ಹೆಚ್ಚಾಗಿದೆ ಎಂದ ಅವರು, ಹಿರಿಯರ ಹಿತಾಸಕ್ತಿ ಕಾಪಾಡುವ ಸಲುವಾಗಿಯೇ ತಂದೆ ತಾಯಿಯಿಂದ ಆಸ್ತಿ ಪಡೆದ ನಂತರ ಅವರ ಪಾಲನೆ, ಪೋಷಣೆ ಮಾಡದಿದ್ದರೆ ಕಾನೂನಿನ ಮೂಲಕ ಆಸ್ತಿ ವಾಪಸ್ಸು ಪಡೆದುಕೊಳ್ಳುವ ಅವಕಾಶವನ್ನು ನಮ್ಮ ಸರ್ಕಾರ ಕಲ್ಪಿಸಿದೆ. ಈ ನಿಟ್ಟಿನಲ್ಲಿ ಸರ್ಕಾರ ಹಿರಿಯ ನಾಗರಿಕರಿಗೆ ನೀಡುತ್ತಿರುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

    ಈ ದಿನ ಹಿರಿಯರ ಹಕ್ಕುಗಳನ್ನು ಗೌರವಿಸಲು ಮತ್ತು ಅವರ ಮಾರ್ಗದರ್ಶನವನ್ನು ಅನುಸರಿಸಲು ನಮಗೆ ಸ್ಫೂರ್ತಿ ನೀಡುತ್ತದೆ. ಈ ದಿನವನ್ನು ಸುಂದರಗೊಳಿಸಲು, ಪೋ?ಕರು, ಅಜ್ಜ-ಅಜ್ಜಿ ಮತ್ತು ಮನೆಯಲ್ಲಿ ವಾಸಿಸುವ ಇತರ ಹಿರಿಯರೊಂದಿಗೆ ಸಮಯ ಕಳೆಯುವುದು ಅಗತ್ಯ. ಅವರಿಗೆ ಇದಕ್ಕಿಂತ ಉತ್ತಮವಾದ ಉಡುಗೊರೆ ಇನ್ನೊಂದಿಲ್ಲ ಎಂದು ಹೇಳಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಮಾತನಾಡಿ, ಹಿರಿಯ ನಾಗರಿಕರು ಸಮಾಜದ ಆಸ್ತಿ. ಬಹಳ? ಜನರು ಅವರನ್ನು ಅನಾಥಾಶ್ರಮ, ಹಿರಿಯ ಮನೆಗಳಿಗೆ ಬಿಟ್ಟು ಬರುವ ಮೂಲಕ ಜೀವಂತ ಇರುವಾಗಲೇ ಅವರನ್ನು ಒಂಟಿಯಾಗಿ ಮಾಡಿ ನೋವು ಕೊಡುತ್ತಿದ್ದಾರೆ. ಹೀಗೆ ಮಾಡುವವರನ್ನು ಮುಂದೆ ಅವರ ಮಕ್ಕಳು ಅನಾಥರಾಗಿಸಿ ದೂರ ಮಾಡಿದರೆ ಪರಿಸ್ಥಿತಿ ಏನು ಎಂಬುದನ್ನು ಅರ್ಥೈಸಿಕೊಂಡು ಬದಲಾಗಬೇಕಿದೆ ಎಂದರು.

    ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೆಶಕರಾದ ಶ್ರೀನಿವಾಸ ವೈ ಆಲದಾರ್ತಿ, ನಿರೂಪಣಾಧಿಕಾರಿ ಡಿ.ಸಂತೋsಷ್ ಭಾಗವಹಿಸಿದ್ದರು.

    We must be protectors of the elderly in their old age.

  • ಮೈಸೂರು ದಸರಾದಲ್ಲಿ ಜಿ.ಪಂ ಭದ್ರಬಾಲ್ಯ ಸ್ತಬ್ದಚಿತ್ರ 

    ಮೈಸೂರು ದಸರಾದಲ್ಲಿ ಜಿ.ಪಂ ಭದ್ರಬಾಲ್ಯ ಸ್ತಬ್ದಚಿತ್ರ 

    ಚಿಕ್ಕಮಗಳೂರು: ಮೈಸೂರು ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ ೨೦೨೫ ನೇ ಸಾಲಿನ ಸ್ತಬ್ದಚಿತ್ರ ಪ್ರದರ್ಶನ ಏರ್ಪಡಿಸಿದ್ದು, ಈ ಪ್ರದರ್ಶನದಲ್ಲಿ ಜಿಲ್ಲೆಯ ‘ಭದ್ರಬಾಲ್ಯ’ ಸ್ತಬ್ದಚಿತ್ರ ನೋಡುಗರ ನಿಬ್ಬೆರಗಾಗುವಂತೆ ಮಾಡಿತು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್ ಕೀರ್ತನ ತಿಳಿಸಿದರು.

    ಅವರು ಇಂದು ಜಿ.ಪಂ ಮಿನಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಾಲ್ಯವಿವಾಹ, ಬಾಲ ಗರ್ಭಿಣಿ, ಪೋಕ್ಸೋ ಪ್ರಕರಣ ತಡೆಗೆ ಭದ್ರಬಾಲ್ಯ ಯೋಜನೆ ಜಿಲ್ಲೆಯ ಜಿ.ಪಂ ನಲ್ಲಿ ಜಾರಿಗೆ ಬಂದಿದ್ದು, ಇದರಲ್ಲಿ ಸುಮಾರು ವಿವಿಧ ೨೦ ಇಲಾಖೆಗಳು ಸೇರಿ ಒಟ್ಟುಗೂಡಿ ಕಾರ್ಯಾಚರಣೆ ಮಾಡುತ್ತಿವೆ ಎಂದರು.

    ಜಿಲ್ಲಾಡಳಿತ, ಜಿ.ಪಂ, ಪೊಲೀಸ್ ಇಲಾಖೆ ಸಹಯೋಗದ ಜೊತೆಗೆ ಶಾಲಾ ಶಿಕ್ಷಣ ಇಲಾಖೆಯಡಿ ೧೭ ಅಂಶದ ಕಾರ್ಯಕ್ರಮಗಳಾದ ಕನಸಿನ ಗೋಡೆ, ವಿಶ್ವಾಸ ಪೆಟ್ಟಿಗೆ, ತಿಳಿನಲಿ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.

    ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಕ್ಕಳ ಮತ್ತು ಮಹಿಳಾ ಹಕ್ಕುಗಳ ಕಾವಲು ಸಮಿತಿಯವರಿಗೆ ಕರ್ನಾಟಕ ಹೆಲ್ತ್ ಟ್ರಸ್ಟ್ ಮೂಲಕ ತರಬೇತಿ ನೀಡಲಾಗಿದ್ದು, ಇವರು ಗ್ರಾಮೀಣ ಜನರಲ್ಲಿ ಕಾನೂನುಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆಂದರು.

    ಇವೆಲ್ಲಾ ಅಂಶಗಳನ್ನೊಳಗೊಂಡ ಸ್ತಬ್ದಚಿತ್ರ ಪ್ರದರ್ಶನಕ್ಕೆ ಅವಕಾಶ ಮೈಸೂರು ದಸರಾದಲ್ಲಿ ಲಭ್ಯವಾಯಿತು. ಈ ಸ್ತಬ್ದಚಿತ್ರಕ್ಕೆ ಒಳ್ಳೆಯ ಗೌರವ ಸಿಕ್ಕಿದೆ. ಬಹುಮಾನ ಬರುವ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದರು.

    G.P. Bhadra’s Tableau at Mysore Dasara

  • ಧರ್ಮದ ರಕ್ಷಣೆ-ಅಧರ್ಮದ ನಾಶ ನಾಡಹಬ್ಬ ದಸರಾದ ಉದ್ದೇಶ

    ಧರ್ಮದ ರಕ್ಷಣೆ-ಅಧರ್ಮದ ನಾಶ ನಾಡಹಬ್ಬ ದಸರಾದ ಉದ್ದೇಶ

    ಚಿಕ್ಕಮಗಳೂರು: ಧರ್ಮದ ರಕ್ಷಣೆಯಾಗಬೇಕು, ಅಧರ್ಮದ ನಾಶವಾಗಬೇಕೆಂಬುದು ಹಾಗೂ ನ್ಯಾಯಕ್ಕೆ ಜಯ, ಸತ್ಯಕ್ಕೆ ಜಯ ಸಿಗಬೇಕೆಂಬುದು ನಾಡಹಬ್ಬ ದಸರಾದ ಪ್ರಮುಖ ಉದ್ದೇಶ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಹೇಳಿದರು.

    ಅವರು ಸಮೀಪಕ ಬೀಕನಹಳ್ಳಿಯಲ್ಲಿ ನಡೆದ ದಸರಾ ಹಬ್ಬದ ಅಂಗವಾಗಿ ಜಂಬೂ ಸವಾರಿಯೊಂದಿಗೆ ಅಂಬು ಒಡೆಯುವ ಕಾರ್ಯಕ್ರಮದ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿ ಸತ್ಯ, ನ್ಯಾಯ, ನೀತಿಗೆ ಜಯಸಿಗಬೇಕೆಂಬ ಪರಂಪರೆಯನ್ನು ಮುಂದುವರೆಸಿಕೊಂಡು ಬರಬೇಕೆಂಬ ಕಾರಣದಿಂದ ಚಾಮುಂಡೇಶ್ವರಿ ಉತ್ಸವ ಬೀಕನಹಳ್ಳಿಯಲ್ಲಿ ವಿಜೃಂಭಣೆಯಿಂದ ಶ್ರದ್ಧಾ ಭಕ್ತಿಯೊಂದಿಗೆ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.

    ಹಿಂದೆ ಕೋರೆ ಹಲ್ಲು ರಾಕ್ಷಸರಿದ್ದರು. ಆದರೆ ಈಗ ಇಲ್ಲ. ರಾಕ್ಷಸಿಯ ಮನಸ್ಥಿತಿಯವರಿದ್ದಾರೆ. ನೀತಿ ಬಿಟ್ಟವರು ರಾಕ್ಷಸರು, ಅಧರ್ಮದ ಪರವಾಗಿ ನಿಲ್ಲುವವರು, ಧರ್ಮ ನಾಶಮಾಡುವವರು ರಾಕ್ಷಸರು. ಅಂತಹ ಮನಸ್ಥಿತಿ ನಾಶವಾಗಲಿ ಎಂದು ಚಾಮುಂಡೇಶ್ವರಿ ದೇವಿಯಲ್ಲಿ ಪ್ರಾರ್ಥಿಸಿದರು.

    ಸಜ್ಜನ ಶಕ್ತಿಗೆ ಬಲ ಬರಲಿ, ರಕ್ತಪಾತ ಕೊನೆಗಾಣಲಿ, ಸಜ್ಜನರು ಒಗ್ಗಟ್ಟಾದಾಗ ದುರ್ಜನರು ಬಾಲ ಬಿಚ್ಚಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ದಸರಾ ಉತ್ಸವ ಒಗ್ಗಟ್ಟಿನ ಧಾರ್ಮಿಕತೆಯ ದ್ಯೋತಕವಾಗಿದೆ ಎಂದು ಹೇಳಿದರು.

    ರಾಕ್ಷಸರ ಸಂಹಾರಕ್ಕಾಗಿ ಎಲ್ಲಾ ದೇವತೆಗಳು ತಮ್ಮ ಶಕ್ತಿಯನ್ನು ಧಾರೆಯೆರೆದು ಚಾಮುಂಡೇಶ್ವರಿಗೆ ಬಲ ಕೊಟ್ಟಿದ್ದು ಇತಿಹಾಸವಾಗಿದ್ದು, ಅದರ ಭಾಗವಾಗಿ ಎಲ್ಲರೂ ಒಗ್ಗೂಡುವ ಮೂಲಕ ಧಾರ್ಮಿಕತೆಗೆ ಅರ್ಥ ತುಂಬಬೇಕೆಂದು ಮನವಿ ಮಾಡಿದರು.

    ಮೆರವಣಿಗೆಯಲ್ಲಿ ಬಣ್ಣ ಬಣ್ಣದ ಸಿಡಿಮದ್ದು, ಬಸವನ ಅಲಂಕಾರ, ಡೊಳ್ಳು ಕುಣಿತ, ಭಜನೆ, ಚಟ್ಟಿಮೇಳ, ಕೋಲಾಟ, ಜಾನಪದ ನೃತ್ಯ, ಹೆಣ್ಣು ಮಕ್ಕಳಿಂದ ಆರತಿ, ಭಕ್ತರ ಮನಸೂರೆಗೊಂಡಿತು.

    ಈ ಕಾರ್ಯಕ್ರಮದಲ್ಲಿ ಶ್ರೀ ಚಾಮುಂಡೇಶ್ವರಿ ಸುಕ್ಷೇತ್ರ ಸೇವಾ ಸಮಿತಿಯ ಅಧ್ಯಕ್ಷ ಬಿ.ಪಿ ನಂಜಪ್ಪ, ಉಪಾಧ್ಯಕ್ಷ ಬಿ.ಹೆಚ್ ಗುರುಬಸಪ್ಪ, ಕಾರ್ಯದರ್ಶಿ ಬಿ.ಎಂ ಯೋಗಾನಂದ್, ಖಜಾಂಚಿ ಬಿ.ಹೆಚ್ ಸೋಮೇಗೌಡ, ಸದಸ್ಯರುಗಳಾದ ನಂಜುಂಡಪ್ಪ, ಗುರುಸಿದ್ದಪ್ಪ, ಯತಿರಾಜ್. ಲೋಕನಾಥ್, ಹೆಚ್.ಪಿ ಮಂಜೇಗೌಡ, ರಂಗಪ್ಪ, ಬಿ.ಎಂ ನಾಗರಾಜು, ಲಲಿತಾ ಬಸವರಾಜ್ ಉಪಸ್ಥಿತರಿದ್ದರು.

    Protection of Dharma-Destroy of Adharma is the purpose of Nadahabba Dasara

  • ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ್ಕೆ ಚಾಲನೆ

    ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ್ಕೆ ಚಾಲನೆ

    ಚಿಕ್ಕಮಗಳೂರು: ಬ್ರಿಗೇಡ್ ಗ್ರೂಪ್ ನ ಸಿಎಸ್‌ಆರ್ ವಿಭಾಗವಾದ ಬ್ರಿಗೇಡ್ ಫೌಂಡೇಶನ್ ಸಂಸ್ಥೆಯು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಮತ್ತು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಬಲಿಕೊಟ್ಟ ಅಸಂಖ್ಯಾತ ಹುತಾತ್ಮರಿಗೆ ಗೌರವ ಸಲ್ಲಿಸುವ ಸಲುವಾಗಿ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ವನ್ನು ಸ್ಥಾಪಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಜೆ. ಜಾರ್ಜ್ ಎಂದರು.

    ಅವರು ಗುರುವಾರ ನಗರದ ಚಿಕ್ಕಮಗಳೂರಿನ ಹೊಸಮನೆ ಸರ್ಕಲ್‌ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕವನ್ನು ಉದ್ಘಾಟಿಸಿ ಮಾತನಾಡಿ ಗಾಂಧಿ ಜಯಂತಿಯಂದು ಈ ಸ್ಮಾರಕವನ್ನು ಸ್ಥಾಪಿಸಲಾಗಿದ್ದು, ಈ ವಿಶಿಷ್ಟ ಸ್ಮಾರಕವು ಸಾವಿರಾರು ಹೋರಾಟಗಾರರ ತ್ಯಾಗ, ಸ್ಥೈರ್ಯದ ಪ್ರತೀಕವಾಗಿದೆ. ಇದು ರಾಷ್ಟ್ರದ ಹೆಮ್ಮೆಯ ಸಂಕೇತವಾಗಿದ್ದು, ಯುವ ಮನಸ್ಸುಗಳಿಗೆ ಸ್ಫೂರ್ತಿ ನೀಡಲು ವಿನ್ಯಾಸಗೊಳಿಸಲಾಗಿದೆ ಎಂದರು.

    ಸ್ಮಾರಕವನ್ನು ಸ್ಥಾಪಿಸುವ ಮೂಲಕ ಬ್ರಿಗೇಡ್ ಫೌಂಡೇಶನ್ ಸಂಸ್ಥೆಯು ಚಿಕ್ಕಮಗಳೂರಿನಲ್ಲಿ ಹೊಸತೊಂದು ವಿಶಿಷ್ಟ ಸ್ಥಳವನ್ನು ರೂಪಿಸಿದೆ. ಶಾಲೆಯ ಸಮೀಪದಲ್ಲಿಯೇ ಇದನ್ನು ಸ್ಥಾಪಿಸಿರುವುದು ವಿಶೇಷವಾಗಿದ್ದು, ಈ ಸ್ಮಾರಕವು ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಲಿದೆ ಎಂದು ಹೇಳಿದರು.

    ಬ್ರಿಗೇಡ್ ಫೌಂಡೇಶನ್‌ನ ಅಧ್ಯಕ್ಷರು ಮತ್ತು ಬ್ರಿಗೇಡ್ ಗ್ರೂಪ್ ನ ಅಧ್ಯಕ್ಷ ಎಂ. ಆರ್. ಜೈಶಂಕರ್ ಅವರು, ಧೈರ್ಯ, ಒಗ್ಗಟ್ಟು, ತ್ಯಾಗ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಭರವಸೆಯ ಆದರ್ಶಗಳ ಅಡಿಪಾಯದ ಮೇಲೆ ನಮ್ಮ ಸ್ವಾತಂತ್ರ್ಯ ಹೋರಾಟ ರೂಪುಗೊಂಡಿತ್ತು. ರಾಷ್ಟ್ರಪಿತ ಮಹಾತ್ಮ ಗಾಂಧಿಯವರು, ನಿಮ್ಮನ್ನು ಕಂಡುಕೊಳ್ಳುವ ಉತ್ತಮ ಮಾರ್ಗವೆಂದರೆ ಇತರರ ಸೇವೆಯಲ್ಲಿ ನಿಮ್ಮನ್ನು ಕಳೆದುಕೊಳ್ಳುವುದು ಎಂದು ಹೇಳಿದ್ದಾರೆ. ಅದೇ ಪ್ರಕಾರವಾಗಿ ನಮ್ಮ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ ಪುರುಷರು ಮತ್ತು ಮಹಿಳೆಯರು ಇತರರಿಗಾಗಿ ದುಡಿದರು ಎಂದರು

    ಉದ್ಘಾಟನಾ ಸಮಾರಂಭದಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂದಸದ ಕೋಟ ಶ್ರೀನಿವಾಸ ಪೂಜಾರಿ, ವಿಧಾನಸಭಾ ಸದಸ್ಯ ಎಚ್. ಡಿ. ತಮ್ಮಯ್ಯ, ವಿಧಾನ ಪರಿಷತ್ ಸದಸ್ಯ ಸಿ. ಟಿ. ರವಿ, ಎ.ಎಸ್.ಭೋಜೇಗೌಡ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಪೊಲೀಸ್ ಅಧೀಕ್ಷಕ ಡಾ. ವಿಕ್ರಮ್ ಅಮೇಟ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಕೀರ್ತನಾ, ಕಾಂಗ್ರಸ್ ಮುಖಂಡ ಸಂದೀಪ್ ಕುಮಾರ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

    Inauguration of the Freedom Fighter Memorial

  • ಕರ್ನಾಟಕದ ಕಾಫಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿಶೇಷವಾದ ಬೆಲೆ ಇದೆ

    ಕರ್ನಾಟಕದ ಕಾಫಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿಶೇಷವಾದ ಬೆಲೆ ಇದೆ

    ಚಿಕ್ಕಮಗಳೂರು: ಕಾಫಿ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು. ಇಲ್ಲವಾದಲ್ಲಿ ಮುಂದೆ ಉದ್ಯಮಕ್ಕೆ ಬಹಳ ಅಪಾಯ ಕಾದಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಎಚ್ಚರಿಸಿದರು.

    ನಗರದ ಆಜಾದ್ ಪಾರ್ಕ್‌ನಲ್ಲಿ ಚಿಕ್ಕಮಗಳೂರು ಜಿಲ್ಲಾ ಬೆಳೆಗಾರರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಂತರರಾಷ್ಟ್ರೀಯ ಕಾಫಿ ದಿನಾಚರಣೆ ಕಾರ್ಯಕ್ರಮದ ಜಾಥ ಉದ್ಘಾಟಿಸಿ ಮಾತನಾಡಿ ಈಗ ಹಣ ಇದ್ದವರೆಲ್ಲ ಬಂದು ತೋಟ ಖರೀದಿಸುತ್ತಿದ್ದಾರೆ. ಆರಂಭದಲ್ಲಿ ವಾರಕ್ಕೊಮ್ಮೆ ತೋಟಕ್ಕೆ ಬರುವ ಅವರು ನಂತರ ೬ ತಿಂಗಳು, ವರ್ಷಕ್ಕೊಮ್ಮೆ ಬರಲಾರಂಭಿಸಿ ಕ್ರಮೇಣ ತೋಟವನ್ನು ಹಾಳು ಬಿಡುತ್ತಾರೆ. ಹಾಗಾಗಿ ಒಳ್ಳೊಳ್ಳೆ ತೋಟಗಳು ಹಾಳುಬಿದ್ದಿವೆ. ಎಲ್ಲಾದರೂ ತೋಟ ಹಾಳು ಬಿದ್ದಿದ್ದರೆ ಇದಾರೋ ಕಾಫಿ ಕುಟುಂಬಕ್ಕೆ ಸೇರಿದವರದ್ದಲ್ಲ ಎನ್ನುವುದು ಗೊತ್ತಾಗುತ್ತದೆ ಎಂದು ತಿಳಿಸಿದರು.

    ಹೀಗಾಗಿ ಕಾರ್ಮಿಕರು, ಮಾಲೀಕರ ನಡುವೆ ಭೇದ ಭಾವವಿಲ್ಲದೆ ನಾವೆಲ್ಲರೂ ಒಂದು ಕುಟುಂಬದವರು ಎಂದು ಭಾವಿಸಿ ಕಾಫಿ ಸಂಸ್ಕೃತಿಯನ್ನು ಉಳಿಸಬೇಕಿದೆ. ಎಲ್ಲರ ಕಷ್ಟ ಸುಖಗಳೊಂದಿಗೆ ಭಾಗಿಗಳಾದಾಗ ಪಾರಿವಾರಿಕ ಸಂಬಂಧ ಉಳಿಸಿಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು.

    ಕಾಫಿ ಸಂಸ್ಕೃತಿ ಉಳಿಯಬೇಕೆಂದರೆ ತೋಟ ಎಷ್ಟು ಮಾಡುತ್ತೇವೋ ಅಷ್ಟು ಮನೆ ತುಂಬ ಮಕ್ಕಳನ್ನೂ ಮಾಡಿಕೊಳ್ಳಬೇಕು. ಮಕ್ಕಳಿಗೆ ಕಾಫಿ ಕೃಷಿಯ ಬಗ್ಗೆ ಹೇಳಿಕೊಡಬೇಕು. ಇದನ್ನು ಯಾವ ರೀತಿ ಬೇಕಾದರೂ ತೆಗೆದುಕೊಳ್ಳಬಹುದು. ಇಲ್ಲವಾದಲ್ಲಿ ಬರೇ ಕಾಫಿ ಅಷ್ಟೇ ಅಲ್ಲ ದೇಶವೇ ಉಳಿಯುವುದಿಲ್ಲ ಎಂದರು.

    ಕಾಫಿ ಬೆಲೆ ಹೆಚ್ಚಿದ್ದರೂ ನಿರ್ವಹಣಾ ವೆಚ್ಚ ದುಪ್ಪಟ್ಟಾಗಿದೆ. ಜೊತೆಗೆ ಕಾರ್ಮಿಕರ ಕೊರತೆಯೂ ಇದೆ. ಕಾಲ ಕೆಟ್ಟಾಗಲೂ, ಒಳ್ಳೆಯದಾದಾಗಲೂ ಸಮಚಿತ್ತದಿಂದ ಸ್ವೀಕಾರ ಮಾಡಬೇಕು. ಕರ್ನಾಟಕದ ಕಾಫಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿಶೇಷವಾದ ಬೆಲೆ ಇದೆ. ನೆರಳಿನಲ್ಲಿ, ನೈಸರ್ಗಿಕವಾಗಿ ಬೆಳೆಯುವ ಕಾಪಿ ನಮ್ಮದು. ಅದನ್ನು ಒಂದು ಬ್ರಾಂಡ್ ಆಗಿ ಮಾಡಬೇಕಿದೆ. ಪ್ರತಿ ತೋಟವೂ ಬ್ರಾಂಡ್ ಆಗುವಂತಾಗಬೇಕು ಎಂದರು.

    ಒಂದು ವಾರ ಕಾಫಿ ಮೇಳವನ್ನು ಮಾಡಿ ಅದು ಬೆಳೆದು ಬಂದ ದಾರಿ ಬಗ್ಗೆ ಹೊರಗಿನವರಿಗೆ ಪರಿಚಯಿಸುವುದರಿಂದ ಪ್ರವಾಸೋದ್ಯಮಕ್ಕೂ ಒತ್ತು ನೀಡಿದಂತಾಗುತ್ತದೆ. ಕಾಫಿಗೆ ಮೌಲ್ಯ ವರ್ಧನೆ ಮಾಡಬೇಕು. ಅದಕ್ಕಾಗಿ ಬೇರೆ ಬೇರೆ ಪ್ರಯೋಗ ಮಾಡಿ ಕಾಫಿಗೆ ಜಾಗತಿಕ ಮಟ್ಟದಲ್ಲಿ ಒಂದು ವೇದಿಕೆ ಕಲ್ಪಿಸುವ ಕೆಲಸ ಮಾಡಬೇಕು. ಆರಂಭಿಕವಾಗಿ ಸರ್ಕಾರದ ನೆರವು ಇದಕ್ಕೆ ಬೇಕಾಗುತ್ತದೆ ಎಂದರು.

    ಶಾಸಕ ಎಚ್.ಡಿ.ತಮ್ಮಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಾಫಿ ಬೆಲೆ ಏರು ಪೇರಾದರೂ ಗೊಬ್ಬರ, ಕಾರ್ಮಿಕರ ವೇತನ ಇನ್ನಿತರೆ ನಿರ್ವಹಣಾ ವೆಚ್ಚ ಏರು ಪೇರು ಆಗುವುದಿಲ್ಲ. ಸಧ್ಯಕ್ಕೆ ಕಾಫಿ ಬೆಲೆ ಉತ್ತಮವಾಗಿದ್ದರೂ ಅದು ಹೀಗೇ ಇರುತ್ತದೆ ಎಂದು ಹೇಳಲಾಗುವುದಿಲ್ಲ ಎಂದರು

    ಅರಣ್ಯ ಮತ್ತು ಕಂದಾಯ ಇಲಾಖೆಗಳಿಂದ ಜಂಟೀ ಸರ್ವೇ ಕಾರ್ಯ ನಡೆಯುವವರೆಗೆ ಕಾಫಿ ಒತ್ತುವರಿ ಸಮಸ್ಯೆ ಬಗೆಹರಿಸಲು ಆಗುವುದಿಲ್ಲ. ಡೀಮ್ಡ್ ಫಾರೆಸ್ಟ್ ಸಮ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

    ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣ ಮಾತನಾಡಿ, ೧೯೨೫ ರಲ್ಲಿ ಅಂರತರಾಷ್ಟ್ರೀಯ ಕಾಫಿ ಸಂಶೋಧನಾ ಕೇಂದ್ರ ಆರಂಭವಾಗಿದ್ದು ಇದೀಗ ೧೦೦ ವರ್ಷ ತುಂಬುತ್ತಿದೆ. ಅದರ ಸಂಭ್ರವನ್ನು ನ.೬ ರಿಂದ ೯ ರ ವರೆಗೆ ನಡೆಸಲಾಗುವುದು ಎಂದರು.

    ಪ್ರತಿ ವರ್ಷ ದೇಶದ ಬೊಕ್ಕಸಕ್ಕೆ ಸುಮಾರು ೧೫ ಸಾವಿರ ಕೋಟಿ ರೂ. ಆದಾಯ ಸಂದಾಯವಾಗುತ್ತಿದೆ. ವರ್ಷ ಪೂರ್ತಿ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುತ್ತಿದೆ. ಕಾಫಿ ಕೃಷಿಯಲ್ಲಿ ಹೊಸ ತಳಿಗಳ ಪರಿಚಯ ಮತ್ತು ಯಾಂತ್ರೀಕರಣ ಅಗತ್ಯವಾಗಿ ಆಗಬೇಕಿದೆ. ಕಾಫಿ ಉದ್ಯಮ ಎದುರಿಸುತ್ತಿರುವ ಸಮಸ್ಯೆಗಳ ನಡುವೆ ಯುವ ಜನತೆ ಉದ್ಯಮಕ್ಕೆ ಬರದಿದ್ದಲ್ಲಿ ತೊಂದರೆ ಆಗುತ್ತಿದೆ. ಕಾಫಿ ಸಂಬಂಧ ಕಠಿಣ ಕಾನೂನುಗಳು ಬರುತ್ತಿವೆ ಇದರ ಬಗ್ಗೆ ಎಚ್ಚರವಾಗಿರಬೇಕು ಎಂದರು.

    ಚಿತ್ರ ನಟಿ ಶಮಿತಾ ಗೌಡ ಮಾತನಾಡಿದರು. ಕೆರೆಮಕ್ಕಿ ಮಹೇಶ್ ಸ್ವಾಗತಿಸಿ ಚಿಕ್ಕಮಗಳೂರು ಜಿಲ್ಲಾ ಬೆಳೆಗಾರರ ಸಂಘದ ಅದ್ಯಕ್ಷ ಕೆ.ಯು.ರತೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ನಾಗರೀಕ ಮತ್ತು ರೈತ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎಸ್.ವಿಜಯಕುಮಾರ್, ಮಕ್ಕಳ ತಜ್ಞ ಡಾ.ಜೆ.ಪಿ ಕೃಷ್ಣೇಗೌಡ, ಡಾ.ಡಿ.ಎಲ್.ವಿಜಯಕುಮಾರ್, ಮಹಿಳಾ ಒಕ್ಕೂಟದ ಅಧ್ಯಕ್ಷೆ ಪವಿತ್ರಾ ಹಳೇಕೋಟೆ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್, ಕಾಫಿ ಬೆಳೆಗಾರರಾದ ಹೆಚ್.ಎಚ್.ದೇವರಾಜ್, ಬಾಲಕೃಷ್ಣ, ಬಿ.ಎಸ್ ಜಯರಾಮ್. ಸುರೇಶ್, ಅಶೋಕ್, ಮನುಕುಮಾರ್, ಟಿ.ಡಿ ಮಲ್ಲೇಶ್, ದೀಪಕ್ ದೊಡ್ಡಯ್ಯ ಇತರರು ವೇದಿಕೆಯಲ್ಲಿದ್ದರು.

    Karnataka coffee has a special price in the international market.

  • ಜಿಲ್ಲಾಡಳಿತದಿಂದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಜನ್ಮ ದಿನಾಚರಣೆ

    ಜಿಲ್ಲಾಡಳಿತದಿಂದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಜನ್ಮ ದಿನಾಚರಣೆ

    ಚಿಕ್ಕಮಗಳೂರು:  ಜಿಲ್ಲಾಡಳಿತದ ವತಿಯಿಂದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ೧೫೬ನೇ ಜನ್ಮ ದಿನವನ್ನು ಜಿಲ್ಲಾಧಿಕಾರಿ ಕಚೇರಿ ಒಳಾವರಣದ ರಾಷ್ಟ್ರಪಿತ ನೆನಪಿನಂಗಳದಲ್ಲಿ ಆಚರಿಸಲಾಯಿತು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಮೇರಾ ಭಾರತ್ ಮಹಾನ್ ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಇಂದು ನಗರದ ಜಿಲ್ಲಾಧಿಕಾರಿ Pಚೆರಿ ಆವರಣದಲ್ಲಿರುವ ರಾಷ್ಟ್ರಪಿತ ನೆನಪಿನಂಗಳದಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಗಾಂಧೀಜಿಯವರ ಪುತ್ಥಳಿಗೆ ಹಾಗೂ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ನೆರವೇರಿಸುವ ಮೂಲಕ ಗೌರವ ನಮನ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಹುಟ್ಟುಹಬ್ಬದ ಪ್ರಯುಕ್ತ ಅವರ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸಲಾಯಿತು.

    ಗಾಯಕರಾದ ಸುರೇಂದ್ರ ನಾಯಕ್ ಹಾಗೂ ಲಾಲಿತ್ಯ ಅಣ್ವೇಕರ್ ತಂಡದವರು ಗಾಂಧೀಜಿಯವರಿಗೆ ಪ್ರಿಯವಾದ `ರಘುಪತಿ ರಾಘವ ರಾಜಾರಾಂ… ಹಾಗೂ ಸಿದ್ಧ ಬುದ್ಧ ನೀ ಸ್ಕಂದ ವಿನಾಯಕ….’ ಭಜನೆಗಳನ್ನು ಹಾಡಿದರು. ಅನಂತರ ನಡೆದ ಸರ್ವ ಧರ್ಮ ಪ್ರಾರ್ಥನೆಯಲ್ಲಿ ನಾಗಶ್ರೀ ತ್ಯಾಗರಾಜ್ ಭಗವದ್ಗೀತೆ, ಔರಂಗಜೇಬ್ ಪಾಷಾ ಕುರಾನ್ ಹಾಗೂ ಫಾದರ್ ಬಿಷಪ್ ಥಾಮಸ್ ಅಂತೋಣಿ ಬೈಬಲ್ ಪಠಣ ಮಾಡಿದರು.

    ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಮಹಾತ್ಮಾ ಗಾಂಧೀಜಿಯವರ ೧೫೬ನೇ ಜಯಂತಿ ಅಂಗವಾಗಿ ಪದವಿ-ಸ್ನಾತಕೋತ್ತರ ಪದವಿ, ಪದವಿ ಪೂರ್ವ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು.

    ಈ ಸಂದರ್ಭದಲ್ಲಿ ಶಾಸಕರಾದ ಹೆಚ್.ಡಿ.ತಮ್ಮಯ್ಯ ಮಾತನಾಡಿ, ಇಡೀ ವಿಶ್ವದಲ್ಲಿ ಅಹಿಂಸೆಯ ಹೋರಾಟದಿಂದ ಸ್ವಾತಂತ್ರ್ಯವನ್ನು ಪಡೆಯಬಹುದು ಎಂಬುದನ್ನು ತೋರಿಸಿಕೊಟ್ಟ ದೇಶದ ಮಹಾನ್ ನಾಯಕ ಮಹಾತ್ಮಾ ಗಾಂಧೀಜಿ. ಅಹಿಂಸಾ ತತ್ವದಡಿಯಲ್ಲಿ ಜನರನ್ನು ಒಗ್ಗೂಡಿಸಿ ಹೋರಾಟ ನಡೆಸಿದ ಫಲವಾಗಿ ನಮಗೆ ೧೯೪೭ರ ಆಗಸ್ಟ್ ೧೫ ರಂದು ನಮಗೆ ಸ್ವಾತಂತ್ರ್ಯ ಲಭಿಸಿತು. ಈ ಹೋರಾಟದ ಸಂದರ್ಭದಲ್ಲಿ ಇಂಡಿಯನ್ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆರು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದ ಅವರು, ಜವಾಹರ್ ಲಾಲ್ ನೆಹರು, ಸುಭಾಶ್ಚಂದ್ರ ಬೋಸ್, ಸರ್ದಾರ್ ವಲ್ಲಭ ಭಾಯಿ ಪಟೇಲ್, ಚಂದ್ರಶೇಖರ್ ಆಜಾದ್, ಭಗತ್ ಸಿಂಗ್ ಹೀಗೆ ಹಲವರನ್ನು ಒಗ್ಗೂಡಿಸಿಕೊಂಡು ಹೋರಾಟದಲ್ಲಿ ಧುಮುಕುತ್ತಾರೆ. ಅಂಥವರ ಶ್ರಮದಿಂದ ಇಂದು ನಾವೆಲ್ಲಾ ನೆಮ್ಮದಿಯಿಂದ ಜೀವಿಸುತ್ತಿದ್ದೇವೆ. ಸ್ವದೇಶಿ ಹತ್ತಿಯಿಂದ ತಯಾರಿಸಿದ ಉಡುಪುಗಳನ್ನು ಧರಿಸಿ ಇಡೀ ಪ್ರಪಂಚಕ್ಕೆ ಗಾಂಧೀಜಿ ಮಾದರಿಯಾಗಿದ್ದಾರೆ. ಮಹಾತ್ಮಾ ಗಾಂಧೀಜಿಯವರ ನೆನಪು ಜಯಂತಿಗೆ ಸೀಮಿತವಾಗಬಾರದು. ಅವರ ವಿಚಾರಧಾರೆಗಳನ್ನು ನಮ್ಮ ಯುವಪೀಳಿಗೆ ಅನುಸರಿಸುವಂತಾಗಬೇಕು ಎಂದು ಆಶಿಸಿದರು.

    ಇಂದು ಲಾಲ್ ಬಹದ್ದೂರ್ ಶಾಸ್ತ್ರಿಯವರ ೧೨೧ನೇ ಜಯಂತಿಯನ್ನು ಕೂಡ ನಾವು ಆಚರಿಸುತ್ತಿದ್ದೇವೆ. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಅವರು ನ್ಯಾಷನಲ್ ಕಾಂಗ್ರೆಸ್ ಪಾರ್ಟಿಯ ಅಧ್ಯಕ್ಷರಾಗಿ, ದೇಶದ ಪ್ರಧಾನಿಯಾಗಿ ಅಲ್ಪಾವಧಿಯಲ್ಲಿ ಸೇವೆ ಸಲ್ಲಿಸಿದರೂ ದೀರ್ಘಾವಧಿಯಲ್ಲಿ ಜನರ ಮನಸ್ಸಿನಲ್ಲಿ ಉಳಿಯುವ ಕೆಲಸ ಮಾಡಿದ್ದಾರೆ. ಇಡೀ ದೇಶದಲ್ಲಿ ಬರಗಾಲ ಬಂದಾಗ ಒಂದು ಹೊತ್ತು ಉಪವಾಸ ಇರುವಂತೆ ಕರೆ ಕೊಟ್ಟಿದ್ದರು. ಉಳ್ಳವರು ಉಪವಾಸವಿದ್ದರೆ ಬಡವರಿಗೆ ಊಟ ಸಿಗುತ್ತದೆ ಎನ್ನುವ ಅಭಿಪ್ರಾಯ ಅವರದಾಗಿತ್ತು. ಹೀಗಾಗಿ ವಾರದಲ್ಲಿ ಇಂದಿಗೂ ಸಹ ಅನೇಕ ಜನ ಒಂದು ಹೊತ್ತು ಊಟ ಬಿಡುತ್ತಿದ್ದಾರೆ. ಇದು ಶಾಸ್ತ್ರಿಯವರ ಮನವಿಗೆ ಮನ್ನಣೆ ನೀಡುತ್ತಿರುವುದರ ಫಲವಾಗಿದೆ ಎಂದರು.

    ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ಮಹಾತ್ಮಾ ಗಾಂಧೀಜಿಯವರ ೧೫೬ನೇ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಯವರ ೧೨೧ನೇ ಜಯಂತಿ ಕಾರ್ಯಕ್ರಮದ ವಿಶೇಷ ಇಂದು. ದೇಶಕ್ಕೆ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟಕ್ಕೂ ಗಾಂಧೀಜಿಯವರ ಕೊಡುಗೆ ಅಪಾರವಾಗಿದ್ದು, ಸ್ಮರಣೀಯವಾಗಿದೆ. ಯುವಪೀಳಿಗೆ ಗಾಂಧೀಜಿಯವರ ತತ್ವ, ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳಬೇಕು. ಈ ನಾಡನ್ನು ಕಟ್ಟುವ ಯುವಜನತೆಗೆ ಬೆಳಕಾಗುವ ಸ್ಫೂರ್ತಿದಾಯಕ ವ್ಯಕ್ತಿತ್ವವಿದ್ದರೆ ಅದು ಗಾಂಧೀಜಿಯವರದು. ಲಾಲ್ ಬಹದ್ದೂರ್ ಶಾಸ್ತ್ರಿಯವರು ಕೂಡ ಪ್ರಾಮಾಣಿಕವಾದ ವ್ಯಕ್ತಿತ್ವ ಹೊಂದಿ ಈ ದೇಶದ ಪ್ರಧಾನ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ತಿಳಿಸಿದರು.

    ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಮಹಾತ್ಮಾ ಗಾಂಧೀಜಿ ಭಾರತೀಯ ಮೌಲ್ಯಗಳ ಪ್ರತೀಕ. ಭಾರತ ಜಗತ್ತಿಗೆ ಅಹಿಂಸೆ, ಶಾಂತಿಯನ್ನು, `ಸರ್ವೇ ಜನ ಸುಖಿನೋ ಭವಂತು’ ಎನ್ನುವ ಮಂತ್ರವನ್ನು ಕೊಟ್ಟಿರುವುದು ಭಾರತ. ಆ ಭಾರತೀಯತೆಯ ಪ್ರತೀಕ ಗಾಂಧೀಜಿ. ಸ್ವಾತಂತ್ರ್ಯ ಹೋರಾಟದಲ್ಲಿ ಜನಸಾಮಾನ್ಯರಿಗೆ ಹೋರಾಟದ ಕೆಚ್ಚನ್ನು ಹಬ್ಬಿಸುವುದರೊಳಗೆ ಗಾಂಧೀಜಿಯವರ ಪಾತ್ರ ಬಹಳ ದೊಡ್ಡದು. ಸರಳವಾದ ವಿಷಯಗಳನ್ನೆತ್ತಿಕೊಂಡ ಸ್ವಾತಂತ್ರ್ಯ ಹೋರಾಟವನ್ನು ಜನಸಾಮಾನ್ಯರ ಹೋರಾಟವನ್ನಾಗಿ ಮಾಡಿದರು. ಖಾದಿ, ಚರಕ, ಉಪ್ಪಿನ ಸತ್ಯಾಗ್ರಹದ ಮೂಲಕ ಹೋರಾಟವನ್ನು ಜನಮಾನಸಕ್ಕೆ ಮುಟ್ಟಿಸಿ ಜನರಲ್ಲಿ ಸ್ವಾತಂತ್ರ್ಯಕ್ಕಾಗಿ ನಾವೂ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎನ್ನುವ ಸಂಕಲ್ಪಶಕ್ತಿಯನ್ನು ಪ್ರೇರೇಪಿಸಿದ್ದು ಗಾಂಧೀಜಿ ಎಂದರು.

    `ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ’ (ವಜ್ರದಷ್ಟು ಕಠಿಣವಾದ, ಆದರೆ ಹೂವಿನಷ್ಟು ಮೃದುವಾದ) ಎಂಬಂತೆ ಬಾಳಿ ಬದುಕಿದವರು ಲಾಲ್ ಬಹದ್ದೂರ್ ಶಾಸ್ತ್ರೀಯವರು. ನೋಡೋದಕ್ಕೆ ದೃಢಕಾಯರಲ್ಲದಿದ್ದರೂ ಆತ್ಮವಿಶ್ವಾಸ, ಮಾನಸಿಕ ಸಂಕಲ್ಪಕ್ಕೆ ಅವರಿಗೆ ಸರಿಸಾಟಿಯಾಗಿ ಇದ್ದವರು ಇನ್ನೊಬ್ಬರಿಲ್ಲ. `ಜೈಜವಾನ್, ಜೈಕಿಸಾನ್’ ಎನ್ನುವ ಮಂತ್ರವನ್ನು ಕೊಟ್ಟವರು ಲಾಲ್ ಬಹದ್ದೂರ್ ಶಾಸ್ತ್ರಿ. ಶಾಸ್ತ್ರಿಯವರ ನೇತೃತ್ವದಲ್ಲಿ ೧೯೬೫ರ ಪಾಕ್ ವಿರುದ್ಧ ಸಾಧಿಸಿದ ಜಯ ಅದು ಐತಿಹಾಸಿಕ ವಿಜಯ ಎಂದು ಬಣ್ಣಿಸಿದರು.

    ಕಾರ್ಯಕ್ರಮದಲ್ಲಿ ಕ.ರಾ.ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷರಾದ ಬಿ.ಹೆಚ್.ಹರೀಶ್, ನಗರಸಭೆ ಅಧ್ಯಕ್ಷರಾದ ಶೀಲಾ ದಿನೇಶ್, ಉಪಾಧ್ಯಕ್ಷೆ ಲಲಿತ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಮುಖಂಡರಾದ ಕೆ.ಟಿ.ರಾಧಾಕೃಷ್ಣ, ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ, ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಭಾಗವಹಿಸಿದ್ದರು.

    District administration celebrates the birth anniversary of Father of the Nation Mahatma Gandhi

  • ಟಿ.ಡಿ. ರಾಜೇಗೌಡರ ನಿವಾಸಕ್ಕೆ ಲೋಕಾಯುಕ್ತರ ದಾಳಿ

    ಟಿ.ಡಿ. ರಾಜೇಗೌಡರ ನಿವಾಸಕ್ಕೆ ಲೋಕಾಯುಕ್ತರ ದಾಳಿ

    ಚಿಕ್ಕಮಗಳೂರು: ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ.

    ಅಕ್ರಮ ಆಸ್ತಿಗಳಿಕೆ ಆರೋಪದ ಹಿನ್ನೆಲೆಯಲ್ಲಿ ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಲೋಕಾಯುಕ್ತ ಪೊಲೀಸರು ಭೇಟಿ ನೀಡಿದ್ದಾರೆ. ಶಾಸಕ ಟಿ.ಡಿ. ರಾಜೇಗೌಡರ ಪತ್ನಿ ಹಾಗೂ ಪುತ್ರನ ವಿರುದ್ಧ ಎಫ್.ಐ.ಆರ್ ದಾಖಲಾದ ಬೆನ್ನಲ್ಲೇ ಈ ದಾಳಿ ತನಿಖೆಯ ಭಾಗವಾಗಿದೆ. ಶಾಸಕರಾಗಿ ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ಆರೋಪ ರಾಜೇಗೌಡರ ಮೇಲಿದೆ.

    ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ರಾಜೇಗೌಡರು, ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡೆವಿಟ್‌ನಲ್ಲಿ ಆಸ್ತಿ ಘೋಷಣೆ ಮಾಡಿಲ್ಲ ಎಂದು ದೂರಿನ್ನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಭಂದ ಬಿಜೆಪಿ ಮುಖಂಡ ದಿನೇಶ್ ಹೊಸೂರು ಅವರು ದೂರು ನೀಡಿದ್ದರು. ದಿನೇಶ್ ಹೊಸೂರು ಅವರು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

    ನ್ಯಾಯಾಲಯದ ನಿರ್ದೇಶನದಂತೆ ಟಿ.ಡಿ. ರಾಜೇಗೌಡ, ಅವರ ಪತ್ನಿ ಪುಷ್ಪ ಮತ್ತು ಮಗನ ವಿರುದ್ಧ ಚಿಕ್ಕಮಗಳೂರು ಲೋಕಾಯುಕ್ತ ಕಚೇರಿಯಲ್ಲಿ ಪ್ರಕರಣ ದಾಖಲಾಗಿತ್ತು. ಎಫ್. ಐ.ಆರ್ ದಾಖಲಾದ ನಂತರ ಚಿಕ್ಕಮಗಳೂರು ಲೋಕಾಯುಕ್ತ ಪೊಲೀಸರು ತನಿಖೆ ತೀವ್ರಗೊಳಿಸದ್ದು, ಅದರ ಭಾಗವಾಗಿ ಎಂದು ಶಾಸಕರ ನಿವಾಸ ಪರಿಶೀಲನೆಗೆ ಮುಂದಾಗಿದ್ದಾರೆ.

    ಲೋಕಾಯುಕ್ತ ಪೊಲೀಸರು, ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿಯ ಬಸಾಪುರ ಗ್ರಾಮದಲ್ಲಿರುವ ಟಿ.ಡಿ.ರಾಜೇಗೌಡರ ಮನೆಯಲ್ಲಿ ಮಾಹಿತಿ ಸಂಗ್ರಹಿಸೆ, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

    Lokayukta raids T.D. Rajegowda’s residence

  • ಶೋಷಿತ ವರ್ಗ ವಿದ್ಯಾವಂತರಾಗುವುದು ಅಂಬೇಡ್ಕರ್ ಆಶಯ

    ಶೋಷಿತ ವರ್ಗ ವಿದ್ಯಾವಂತರಾಗುವುದು ಅಂಬೇಡ್ಕರ್ ಆಶಯ

    ಚಿಕ್ಕಮಗಳೂರು: : ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಎಲ್ಲಾ ಶೋಷಿತ ವರ್ಗದ ಜನರ ಸಮ ಸಮಾಜ ನಿರ್ಮಾಣವಾಗಬೇಕೆಂದರೆ ಶಿಕ್ಷಣ ಪಡೆಯುವುದು ಅಗತ್ಯ. ದೀಕ್ಷಾ ಭೂಮಿ ಯಾತ್ರಿಕರು ಪ್ರವಾಸಕ್ಕಾಗಿ ಮಾತ್ರ ತೆರಳದೆ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಅರಿತುಕೊಂಡು ಜನರಲ್ಲಿ ಅರಿವು ಮೂಡಿಸಬೇಕು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

    ನಗರದ ಜಿಲ್ಲಾಧಿಕಾರಿಯವರ ಕಚೇರಿ ಆವರಣದಲ್ಲಿ ಇಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ೨೨೨ ಅನುಯಾಯಿಗಳನ್ನು ಸಮಾಜ ಕಲ್ಯಾಣ ಇಲಾಖಾ ವತಿಯಿಂದ ನಾಗಪುರದ ದೀಕ್ಷಾಭೂಮಿಗೆ ಯಾತ್ರೆ ಕರೆದೊಯ್ಯವ ಬಸ್‌ಗೆ ಚಾಲನೆ ನೀಡಿ ಅವರು ಮಾತನಾಡಿ ಇಡೀ ವಿಶ್ವ ಮೆಚ್ಚುವ ಸಂವಿಧಾನ ರಚಿಸಿರುವ ಡಾ.ಅಂಬೇಡ್ಕರ್ ಅವರ ಪಂಚಧಾಮಗಳಲ್ಲಿ ಒಂದಾಗಿರುವ ನಾಗಪುರ ದೀಕ್ಷಾ ಭೂಮಿಯಲ್ಲಿರುವ ಡಾ.ಅಂಬೇಡ್ಕರ್ ವಿಚಾರಧಾರೆಗಳನ್ನು ೨೨೨ ಮಂದಿ ಯಾತ್ರಿಕರು ಸ್ವತಃ ಅರಿತುಕೊಂಡು ಆ ವಿಚಾರಧಾರೆಯನ್ನು ತಲಾ ಕನಿಷ್ಠ ೧೦ ಜನರಿಗೆ ತಲುಪಿಸಿದಲ್ಲಿ ೨.೨೦೦ ಜನಕ್ಕೆ ತಲುಪುತ್ತದೆ ಎಂದು ಹೇಳಿದರು.

    ಸಾಕ್ಷರತೆಯಲ್ಲಿ ದೇಶದಲ್ಲಿ ಕೇರಳ ಮೊದಲ ಸ್ಥಾನದಲ್ಲಿದ್ದರೆ, ನಮ್ಮ ರಾಜ್ಯ ಎರಡನೇ ಸ್ಥಾನದಲ್ಲಿದೆ. ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕೆಂಬ ಅಂಬೇಡ್ಕರ್ ಅವರ ಆಶಯದಂತೆ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಹೆಚ್.ಸಿ.ಮಹದೇವಪ್ಪ ಈ ಯೋಜನೆಯನ್ನು ರೂಪಿಸಿದ್ದಾರೆ. ಈ ನಿಟ್ಟಿನಲ್ಲಿ ಅಂಬೇಡ್ಕರ್ ಅವರ ವಿಚಾರಗಳನ್ನು ಮನೆ ಮನೆಗೆ ಮುಟ್ಟಿಸುವ ಕೆಲಸವನ್ನು ದೀಕ್ಷಾಭೂಮಿ ಯಾತ್ರಾರ್ಥಿಗಳು ಮಾಡಬೇಕು ಎಂದ ಅವರು, ನಮ್ಮ ಸರ್ಕಾರ ಬಂದ ಮೂರು ವರ್ಷದಿಂದಲೂ ಈ ಯಾತ್ರೆಗೆ ವಾಹನ ವ್ಯವಸ್ಥೆಯನ್ನು ಮಾಡಲಾಗಿದೆ. ನಮ್ಮ ಸರ್ಕಾರ ಬಡವರು, ಹಿಂದುಳಿದ ವರ್ಗಗಳು, ದಲಿತರು, ಅಲ್ಪಸಂಖ್ಯಾತರು ಹಾಗೂ ಎಲ್ಲಾ ಜನಾಂಗದ ಬಡವರ ಪರ ಇರುವ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಅದರಲ್ಲಿ ಇದು ಒಂದು ಯೋಜನೆಯಾಗಿದ್ದು, ಯಾತ್ರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

    ವಾಹನ ಚಾಲಕರು ಹಾಗೂ ನಿರ್ವಾಹಕರು ಆದಷ್ಟೂ ಸುರಕ್ಷಿತವಾಗಿ ವಾಹನ ಚಾಲನೆ ಮಾಡುವಂತೆ ತಿಳಿಸಿದ ಅವರು ರಾಜಹಂಸ ಬಸ್‌ಗಿಂತ ಉತ್ತಮವಾದ ಬಸ್ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿ ಹಾಗೂ ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.

    ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಮಾತನಾಡಿ, ಐದು ದಿನದ ಯಾತ್ರಿಕರು ನಾಗಪುರ ದೀಕ್ಷಾಭೂಮಿ ಯಾತ್ರೆಯ ಅನುಭವ ಜೀವನ ಪರ್ಯಂತ ಸ್ಮರಣೆಯಲ್ಲಿ ಉಳಿಯಲಿದೆ. ಅಲ್ಲಿ ನಡೆಯುವ ದೀಕ್ಷಾ ಬೋಧನೆಯ ಬಗ್ಗೆ ಅರಿತುಕೊಂಡು ಇಲ್ಲಿ ಹೆಚ್ಚು ಪ್ರಚಾರ ನೀಡುವಂತೆ ಸಲಹೆ ನೀಡಿದರು.

    ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಬಿ.ಮಾಲತಿ ಸ್ವಾಗತಿಸಿದರು. ನಗರಸಭೆ ಅಧ್ಯಕ್ಷೆ ಶೀಲಾದಿನೇಶ್, ಉಪಾಧ್ಯಕ್ಷರಾದ ಲಲಿತಾ, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ರೇವಣ್ಣ ಹಾಗೂ ವಿವಿಧ ದಲಿತ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

    Ambedkar’s hope is that the exploited classes become educated.

  • ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಸಂಘಟನೆ ಬಲವರ್ಧನೆಯಾಗಬೇಕು

    ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಸಂಘಟನೆ ಬಲವರ್ಧನೆಯಾಗಬೇಕು

    ಚಿಕ್ಕಮಗಳೂರು: ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಮಹಿಳಾ ಒಕ್ಕಲಿಗರ ಸಂಘ ಸಮಾಜದ ಒಳಿತಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲು ಅಗತ್ಯವಿದೆ ಎಂದು ಮೌಂಟೇನ್‌ವ್ಯೂ ಪ್ರೌಢಶಾಲೆಯ ಗೀತಾ ಸುಬ್ಬರಾವ್ ಹೇಳಿದರು.
    ಅವರು ಇಂದು ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ವಾರ್ಷಿಕೋತ್ಸವ ಹಾಗೂ ಸರ್ವ ಸದಸ್ಯರ ಸಭೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
    ಜೀವನದಲ್ಲಿ ಅಗತ್ಯವಾಗಿ ಬೇಕಾಗಿರುವ ವಸ್ತುಗಳ ಬಗ್ಗೆ ಮಹಿಳಾ ಸಂಘ ಪೂರೈಸುವಲ್ಲಿ ಶ್ರಮಿಸುತ್ತಿದೆ, ಎಲ್ಲರ ಸಹಕಾರ ವಿಶ್ವಾಸ ಪಡೆದುಕೊಂಡು ವಿಶಿಷ್ಟ ಸಂಘವನ್ನಾಗಿ ಬೆಳೆಸಬೇಕೆಂದು ಆಶಯ ವ್ಯಕ್ತಪಡಿಸಿದರು.
    ಇಂದು ಸಮಾಜದಲ್ಲಿ ಮಹಿಳೆಯನ್ನು ಒಂದೊಂದು ರೀತಿ ಕಾಣುವ ಪ್ರವೃತ್ತಿ ಇದೆ, ಇದನ್ನು ದೈರ್ಯವಾಗಿ ಎದುರಿಸುವ ಜೊತೆಗೆ ಸಮಾಜದಲ್ಲಿ ಎದುರಾಗುವ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಬೇಕೆಂದು ಕರೆ ನೀಡಿದರು.
    ಕಾಳಿದಾಸ ಹೇಳಿದ್ದಾರೆ ಮಗಳು ಕುಲದ ಗೌರವನ್ನು ಎತ್ತುಹಿಡಿಯುತ್ತಾಳೆ, ಕುಶಲಮತಿ ಮತ್ತು ಒಳ್ಳೆಯ ನಡೆತೆಯ ಹೆಣ್ಣು ಮಗಳು ಮಗನಿಗಿಂತ ಮಿಗಿಲು, ಮಹಿಳೆಯ ಉತ್ತಮ ಸಹನೆ ದಾಂಪತ್ಯ ನಿಷ್ಠೆಯ ಬಗ್ಗೆ ಋಗ್ವೇದದಲ್ಲಿ ಚಿತ್ರೀಕರಿಸಿದ್ದಾರೆ ಎಂದು ಉಲ್ಲೇಖಿಸಿದರು.
    ಹಿಂದಿನ ಕಾಲದಲ್ಲಿ ಮಹಿಳೆಗೆ ಹೆಚ್ಚಿನ ಸ್ಥಾನಮಾನದ ಜೊತೆಗೆ ಪೂಜ್ಯ ಭಾವನೆಯಿಂದ ಕಾಣಲಾಗುತಿತ್ತು, ಹೊರಗಿನಿಂದ ದಂಡೆತ್ತಿ ಬಂದವರು ಪುರುಷ ಪ್ರಧಾನ ಸಮಾಜ ನಿರ್ಮಾಣ ಮಾಡಿ, ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಂಸ್ಕೃತಿಯನ್ನು ಬಿತ್ತಿದ್ದಾರೆ ಎಂದು ವಿಷಾಧಿಸಿದರು.
    ಮಕ್ಕಳನ್ನು ಸುಶಿಕ್ಷಿತರನ್ನಾಗಿಸಲು ಗಂಡನ ಪಾಲುದಾರಿಕೆ ಪಡೆದು ಮಹಿಳೆ ಇಂದು ಎಲ್ಲವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾಳೆ ಈ ನಿಟ್ಟಿನಲ್ಲಿ ಮಹಿಳಾ ಸಬಲೀಕರಣ ಮನೆಯಿಂದಲೇ ಪ್ರಾರಂಭವಾಗಬೇಕು ಎಂದು ಹೇಳಿದರು.
    ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಮಾತನಾಡಿ ಸಂಘದಲ್ಲಿ ಲೆಕ್ಕಪತ್ರಗಳು ಪಾರದರ್ಶಕತೆಯಿಂದ ಕೂಡಿ ನಿಷ್ಠೆ, ಪ್ರಾಮಾಣಿಕತೆ ಇದ್ದಲ್ಲಿ ಮಾತ್ರ ಅಭಿವೃದ್ಧಿ ಸಾಧಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
    ಚಿಕ್ಕಮಗಳೂರು ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘ ರಾಜ್ಯದಲ್ಲೇ ಪ್ರತಿಷ್ಟಿತ ವಿಶಿಷ್ಟವಾದ ಸಂಘವಾಗಿ ಮಾದರಿಯಾಗಬೇಕೆಂಬ ಹಿನ್ನಲೆಯಲ್ಲಿ ಶ್ರಮಿಸುತ್ತಿರುವ ಸಂಘದ ಪ್ರದಾಧಿಕಾರಿಗಳ ಕಾಯಕ ನಿಷ್ಠೆಗೆ ಧನ್ಯವಾದಗಳನ್ನು ಸಲ್ಲಿಸಿದರು.
    ತಮ್ಮ ಅಧಿಕಾರ ಅವಧಿಯಲ್ಲಿ ಕೈಗೊಂಡ ಕಾರ್ಯಗಳ ಬಗ್ಗೆ ಇತ್ತೀಚೆಗೆ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಪ್ರತಿಧ್ವನಿಸಿದ್ದು ತುಂಬಾ ಸಂತಸ ತಂದಿದೆ ಜೊತೆಗೆ ಸಮಾಜದ ಸೇವೆ ಮಾಡಲು ಇನ್ನಷ್ಟು ಸ್ಪೂರ್ತಿ ನೀಡಿದೆ ಎಂದು ಹೇಳಿದರು.
    ಸಂಘಟನೆಗಳು ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂಬ ಮಾತಿಗೆ ಕೇಳಿಬರುತ್ತಿದೆ, ಅಭಿನಂದಿಸಿದವರೆಲ್ಲರ  ಸಹಕಾರದಿಂದ ಸೇವೆಯಲ್ಲಿ ಯಶಸ್ವಿಯಾಗಿದ್ದು ತೃಪ್ತಿ ತಂದಿದೆ ಎಂದರು.
    ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಎ ಪೂರ್ಣೇಶ್ ಮಾತನಾಡಿ ಜಿಲ್ಲಾ ಒಕ್ಕಲಿಗರ ಸಂಘ ಹಾಗೂ ಮಹಿಳಾ ಸಂಘ ಉತ್ತಮವಾಗಿ ಕೆಲಸ ಮಾಡುತ್ತಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಅವರು ತಾವು ನಿರ್ದೇಶಕರಾದ ಬಳಿಕ ಮೊಟ್ಟ ಮೊದಲಬಾರಿಗೆ ೧೦.೨೦ ಕೋಟಿ ರೂ ವೆಚ್ಚದಲ್ಲಿ ಸಮುದಾಯದ ವಿದ್ಯಾರ್ಥಿ ನಿಲಯ ಕಟ್ಟಡ ಕಾಮಗಾರಿ ಆರಂಭವಾಗಿದ್ದು ಶೀಘ್ರದಲ್ಲಿಯೇ ಮುಕ್ತಾಯಗೊಳಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
    ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ರೀನಾ ಸುಜೇಂದ್ರ ಮಾತನಾಡಿ ಸಂಘದ ಚಟುವಟಿಕೆಗಳ ಬಗ್ಗೆ ಆರೋಗ್ಯಪೂರ್ಣ ಚರ್ಚೆಗಳಾಗಿದ್ದು, ಯಾವುದೇ ಗೊಂದಲಕ್ಕೆ ಕಾರಣವಾಗಿಲ್ಲ, ಹೆಚ್ಚು ಕಾರ್ಯಕ್ರಮಗಳನ್ನು ನೆಡೆಸಲು ವಂತಿಕೆ ಸಂಗ್ರಹದಲ್ಲಿ ತೊಡಗಿರುವುದರಿಂದ ನಿಧಾನವಾಗಿದೆ ಎಂದು ಹೇಳಿದರು.
    ಸಂಘದ ಎಲ್ಲಾ ಪದಾಧಿಕಾರಿಗಳು ಬೆಳ್ಳಿ ಭವನ ಕಟ್ಟಡ ನಿರ್ಮಾಣಕ್ಕೆ ವಂತಿಗೆ ಸಂಗ್ರಹಿಸಲು ಒಗ್ಗಟ್ಟಿನಿಂದ ಶ್ರಮಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
    ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ಕಾವ್ಯಸುಕುಮಾರ್, ಗೌರವ ಕಾರ್ಯದರ್ಶಿ ಅಮಿತ ವಿಜಯೇಂದ್ರ, ಸಹಕಾರ್ಯದರ್ಶಿ ಕೋಮಲಾ ರವಿ, ನಿರ್ದೇಶಕರುಗಳಾದ ಶಕುಂತಲಾ ವಿರೇಗೌಡ, ಮಂಜುಳಾ ಹರೀಶ್, ಚಂಪಾ ಜಗಧೀಶ್, ವೇಧ ಚಂದ್ರಶೇಖರ್, ತನುಜಾ ಸುರೇಶ್, ಅನುಪಮಾರಮೇಶ್, ಕೀರ್ತಿಕೌಶಿಕ್, ವಿನುತಾಪ್ರಸಾದ್, ಸಂಧ್ಯಾನಾಗೇಶ್, ಸುನೀತ ನವೀನ್ ಗೌಡ, ರಾಜೇಶ್ವರಿ ಅಭಿಷೇಕ್, ಮಾಜಿ ಅಧ್ಯಕ್ಷೆ ಸವಿತಾರಮೇಶ್, ಜಾಹ್ನವಿಜಯರಾಮ್, ಸಂಘದ ಉಪಾಧ್ಯಕ್ಷ ಟಿ.ಡಿ.ಮಲ್ಲೇಶ್, ಗೌರವ ಕಾರ್ಯದರ್ಶಿ ಎಂ.ಎಸ್.ಪ್ರದೀಪ್ ಕುಮಾರ್, ನಿರ್ದೇಶಕರುಗಳಾದ ಕೆ.ಪಿ.ರಾಜೇಂದ್ರ, ಕೆ.ಯು.ರತೀಶ್ ಕುಮಾರ್, ಎಂ.ಅಶೋಕ್, ಹೆಚ್.ಕೆ.ನವೀನ್, ಪಿ.ರಾಜು, ಹೆಚ್.ಪಿ.ಸಜಿತ್, ಹೆಚ್.ಎಸ್.ಮೋಹನ್, ಸಿ.ಟಿ.ರೇವತಿ, ಪವಿತ್ರಾಲೋಕೇಶ್, ಭವ್ಯನಟೇಶ್, ಹೋಯ್ಸಳ ಎಂ.ಸಿ.ಪ್ರಕಾಶ್, ಉಪಸ್ಥಿತರಿದ್ದರು.
    The organization should be strengthened through dynamic activities.
  • ಅ.1ಕ್ಕೆ ನಗರದಲ್ಲಿ ‘ವಾಕ್ ವಿತ್ ಕಾಫಿ’ ಕಾರ್ಯಕ್ರಮ

    ಅ.1ಕ್ಕೆ ನಗರದಲ್ಲಿ ‘ವಾಕ್ ವಿತ್ ಕಾಫಿ’ ಕಾರ್ಯಕ್ರಮ

    ಚಿಕ್ಕಮಗಳೂರು: ಅಂತರಾಷ್ಟ್ರೀಯ ಕಾಫಿ ದಿನದ ಅಂಗವಾಗಿ ‘ಕಾಫಿ ಬದುಕು ಭವಣೆ’ ಎಂಬ ಘೋಷಣೆಯೊಂದಿಗೆ ಅ.೧ ರಂದು ಬುಧವಾರ ಬೆಳಗ್ಗೆ ೧೧ ಗಂಟೆಗೆ ಅಜಾದ್ ವೃತ್ತದಲ್ಲಿ ‘ವಾಕ್ ವಿತ್ ಕಾಫಿ’ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ಕೆ.ಯು ರತೀಶ್‌ಕುಮಾರ್ ತಿಳಿಸಿದರು.

    ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ಬೆಳೆಗಾರರ ಒಕ್ಕೂಟ, ಚಿಕ್ಕಮಗಳೂರು ಜಿಲ್ಲಾ ಬೆಳೆಗಾರರ ಸಂಘ ಹಾಗೂ ಜಿಲ್ಲೆಯ ಎಲ್ಲಾ ಸಹ ಸಂಘಟನೆಗಳ ನೇತೃತ್ವದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿ ಅಂದು ಬೆಳಗ್ಗೆ ೧೦.೩೦ ಕ್ಕೆ ನಗರದ ತಾಲ್ಲೂಕು ಕಚೇರಿ ಆವರಣದಿಂದ ೭೦೦ ಕ್ಕೂ ಹೆಚ್ಚು ಬೆಳೆಗಾರರನ್ನೊಳಗೊಂಡ ಕಾಫಿ ವಾಕ್ ಜಾಥಾ ಆರಂಭವಾಗಿ ಎಂಜಿ ರಸ್ತೆ ಮೂಲಕ ಸಾಗಿ ಅಜಾದ್ ವೃತ್ತ ತಲುಪಲಿದೆ ಎಂದರು.

    ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಹೆಚ್.ಡಿ. ತಮ್ಮಯ್ಯ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ತಾನು ವಹಿಸುತ್ತೇನೆ, ಮುಖ್ಯ ಅತಿಥಿಗಳಾಗಿ ಸಂಸದ ಕೋಟಾ ಶ್ರೀನಿವಾಸಪೂಜಾರಿ, ಶಾಸಕರಾದ ಟಿ.ಡಿ ರಾಜೇಗೌಡ, ನಯನ ಮೋಟಮ್ಮ, ಸಿ.ಟಿ ರವಿ, ಎಸ್.ಎಲ್ ಭೋಜೇಗೌಡ, ಕೆಜಿಎಫ್ ಅಧ್ಯಕ್ಷ ಹಳಸೆ ಶಿವಣ್ಣ, ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ ಪ್ರಾಣೇಶ್, ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ ದಿನೇಶ್, ಮುಖ್ಯ ಕಾರ್ಯದರ್ಶಿ ಡಾ. ಕೂರ್ಮರಾವ್, ಜಿಲ್ಲಾಧಿಕಾರಿ ಸಿ.ಎನ್ ಮೀನಾನಾಗರಾಜ್, ಎಸ್ಪಿ ಡಾ. ವಿಕ್ರಮ ಅಮಟೆ ಮತ್ತಿತರರು ಭಾಗವಹಿಸಲಿದ್ದಾರೆಂದರು.

    ಅಂತರಾಷ್ಟ್ರೀಯ ಕಾಫಿ ದಿನಾಚರಣೆಯನ್ನು ಕಳೆದ ೧೦ ವರ್ಷಗಳಿಂದ ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಆಚರಿಸಲಾಗುತ್ತಿದ್ದು, ಪ್ರವಾಸಿ ತಾಣಗಳಾದ ಬೇಲೂರು, ಹಳೇಬೀಡು ಮತ್ತು ಕಳೆದ ಬಾರಿ ಮೈಸೂರು ದಸರಾ ಉತ್ಸವದಲ್ಲಿ ಉಚಿತ ಕಾಫಿ ವಿತರಿಸಿ ಭಾರತದ ಕಾಫಿ ಪರಂಪರೆಯನ್ನು ಹೆಚ್ಚು ಗ್ರಾಹಕರಿಗೆ ತಲುಪಿಸುವಲ್ಲಿ ಕೆಜಿಎಫ್ ಯಶಸ್ವಿಯಾಗಿದೆ ಎಂದು ಮಾಹಿತಿ ನೀಡಿದರು.

    ಕಾಫಿ ಸೇವನೆಯಿಂದ ಆರೋಗ್ಯ ವೃದ್ಧಿಯ ಜೊತೆಗೆ ಹೃದಯ ಸಂಬಂಧಿ ಕಾಯಿಲೆಗಳು ದೂರವಾಗುತ್ತವೆ ಎಂಬ ಆರೋಗ್ಯ ಇಲಾಖೆಯಿಂದ ತಿಳಿದುಬಂದಿದ್ದು, ಬಾಳೇಹೊನ್ನೂರಿನಲ್ಲಿ ಇರುವ ಕಾಫಿ ಸಂಶೋಧನಾ ಕೇಂದ್ರಕ್ಕೆ ೧೦೦ ವರ್ಷಗಳು ತುಂಬುತ್ತಿರುವ ಈ ಸಂದರ್ಭದಲ್ಲಿ ಕಾಫಿ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ೨೦ ಜನ ಕಾಫಿತೋಟ ಕಾರ್ಮಿಕರನ್ನು ಗೌರವಿಸಿ ಪ್ರಶಂಸನಾ ಪತ್ರ ನೀಡಲಾಗುವುದು. ಧರಗುಣಿ ಗ್ರಾಮದ ತೋಟ ಕಾರ್ಮಿಕರ ಮಗಳು ಕೃತಿಕ ಅವರಿಗೆ ‘ಮಹಿಳಾ ಕಾರ್ಮಿಕರ ಬದುಕು ಭವಣೆ’ ಎಂಬ ಮಹಾ ಪ್ರಬಂಧಕ್ಕೆ ಹಂಪಿ ವಿ.ವಿ ಯಿಂದ ಪಿಹೆಚ್‌ಡಿ ಡಾಕ್ಟರೇಟ್ ಪದವಿ ಪಡೆದಿರುವ ಇವರನ್ನು ಸನ್ಮಾನಿಸಿ ಗೌರವಿಸಲಾಗುವುದೆಂದರು.

    ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಬೆಳೆಗಾರರು, ಕಾರ್ಮಿಕ ಬಂಧುಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣ, ಉಪಾಧ್ಯಕ್ಷ ಸುರೇಶ್, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಕೆರಮಕ್ಕಿ ಮಹೇಶ್ ಉಪಸ್ಥಿತರಿದ್ದರು.

    ‘Walk with Coffee’ program in the city on October 1st