Category: ಚಿಕ್ಕಮಗಳೂರು

  • ನೈತಿಕ ಮೌಲ್ಯವಿದ್ದಲ್ಲಿ ವಕೀಲರಿಂದ ಸಮಾಜಕ್ಕೆ ಒಳಿತು ಸಾಧ್ಯ

    ನೈತಿಕ ಮೌಲ್ಯವಿದ್ದಲ್ಲಿ ವಕೀಲರಿಂದ ಸಮಾಜಕ್ಕೆ ಒಳಿತು ಸಾಧ್ಯ

    ಚಿಕ್ಕಮಗಳೂರು: ಸಮಾಜದಲ್ಲಿ ಜನಸಾಮಾನ್ಯರೊಂದಿಗೆ ಇನ್ನಷ್ಟು ಹತ್ತಿರವಾಗಿ ಬೆರೆಯಲು ಅವಕಾಶವಾಗಿ ಸಾಮಾಜಿಕ ಜೀವನ ಅರ್ಥ ಮಾಡಿಕೊಂಡು ಅದಕ್ಕೆ ಸ್ಪಂದಿಸಲು ಸಾಧ್ಯವಾಗುತ್ತದೆ ಎನ್ನುವ ಕಾರಣಕ್ಕೆ ನ್ಯಾಯಾಂಗ ವ್ಯವಸ್ಥೆಯ ಕೆಲಸದ ಒತ್ತಡದ ನಡುವೆಯೂ ನ್ಯಾಯಾಧೀಶರುಗಳಿಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಕರ್ನಾಟಕ ಉಪಲೋಕಾಯುಕ್ತ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಕೆ.ಎನ್.ಫಣೀಂದ್ರ ಅವರು ಹೇಳಿದರು.

    ಕರ್ನಾಟಕ ಲೋಕಾಯುಕ್ತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಸಭಾಂಗಣದಲ್ಲಿ ಇಂದು ನಡೆದ ಸಾರ್ವಜನಿಕ ಆಡಳಿತದಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಪಾತ್ರದ ಬಗ್ಗೆ ಜಿಲ್ಲೆಯ ಎಲ್ಲಾ ನ್ಯಾಯಾಧೀಶರುಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು

    ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರುಗಳಿಗೆ ೧೯೮೭ರಲ್ಲಿ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ. ಸಂಬಂಧಿಸಿದ ಪೊಲೀಸ್ ಠಾಣೆ, ಜೈಲು ಸೇರಿದಂತೆ ಆಯಕಟ್ಟಿನ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಕಾನೂನು ಸೇವಾ ಪ್ರಾಧಿಕಾರದ ಅಸ್ತಿತ್ವಕ್ಕೆ ಬರುವ ಮುನ್ನ ಇವೆಲ್ಲ ಇರಲಿಲ್ಲ. ಹಿಂದೆ ಇದ್ದ ವ್ಯವಸ್ಥೆಯಲ್ಲಿ ದುರುಪಯೋಗಗಳಾಗಿದ್ದವು. ಹೀಗಾಗಿ ಇದನ್ನು ನಿರ್ವಹಿಸಲು ನ್ಯಾಯಾಧೀಶರುಗಳೇ ಸೂಕ್ತರು ಎಂದು ಈ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಹೇಳಿದರು.

    ನೈತಿಕ ಮೌಲ್ಯಗಳು ಹಾಗೂ ನೈತಿಕ ಮಾನದಂಡಗಳನ್ನು ಇರಿಸಿಕೊಂಡಾಗ ವಕೀಲರು ನ್ಯಾಯಾಂಗದ ಒಳಗೆ ಮತ್ತು ಹೊರಗೆ ಸಮಾಜಕ್ಕೆ ಒಳಿತು ಮಾಡಬಹುದು. ದೇವಾಲಯದಲ್ಲಿ ಪಾಣಿಪೀಠದಲ್ಲಿ ದೇವರನ್ನು ಪ್ರತಿಷ್ಠಾಪಿಸಿರುತ್ತಾರೆ. ನಾವು ಪಾಣಿಪೀಠದ ಕೆಳಗೆ ನಿಂತು ದೇವರಿಗೆ ನಮಸ್ಕರಿಸುತ್ತೇವೆ. ಹಾಗೆಯೇ ನ್ಯಾಯಾಲಯದಲ್ಲಿ ಎರಡು ಮೆಟ್ಟಿಲು ಮೇಲಿರುವ ವಕೀಲರು ಪಾಣಿಪೀಠದ ಮೇಲಿದ್ದಂತೆ. ಆ ಭಾವನೆಯಲ್ಲೇ ಜನರು ವಕೀಲರಿಗೆ ನಮಸ್ಕರಿಸುತ್ತಾರೆ.

    ವಾಲಯ ಹಾಗೂ ನ್ಯಾಯಾಲಯ ಈ ಎರಡಕ್ಕೂ ಜನರು ವ್ಯತ್ಯಾಸವನ್ನು ಕಾಣುವುದಿಲ್ಲ. ಎಲ್ಲೋ ಕೆಲವರು ನಿಂದಿಸಬಹುದು. ನ್ಯಾಯಾಲಯವನ್ನೇ ಬೈಯ್ಯಬಹುದು. ಆದರೆ ಅದು ಕೇವಲ ಕೆಲವೇ ಮಂದಿ. ಹಾಗೆಯೇ ಅದು ಯಾವುದೋ ನಿರ್ದಿಷ್ಟ ವಿಚಾರಕ್ಕೆ ಸೀಮಿತವಾಗಿರಬಹುದು. ಯಾರು ಏನೇ ಅಂದುಕೊಂಡರೂ ನಮ್ಮ ವ್ಯವಸ್ಥೆ ಬಲವಾಗಿದೆ. ಹೀಗಾಗಿ ಮೌಲ್ಯಗಳನ್ನು ಅಳವಡಿಸಿಕೊಂಡು ಜೀವನ ನಿರ್ವಹಿಸಬೇಕು. ಸಮಾಜಕ್ಕೆ ನಾವು ಕೊಡುಗೆ ನೀಡಬೇಕೆಂದು ದೇವರೇ ನಮಗೆ ಈ ಅವಕಾಶವನ್ನು ಒದಗಿಸಿದ್ದಾನೆ. ವಕೀಲರು ಮೌಲ್ಯವನ್ನು ಅಳವಡಿಸಿಕೊಂಡಲ್ಲಿ ಸಮಾಜಕ್ಕೆ ಕೊಡುಗೆ ನೀಡಬಹುದು ಎಂದರು.

    ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಸ್ವಾಗತಿಸಿದರು. ಉಪಲೋಕಾಯುಕ್ತರ ಜೊತೆ ಆಗಮಿಸಿರುವ ಇತರ ನ್ಯಾಯಾಧೀಶರಾದ ಪೃಥ್ವಿರಾಜ್ ವರ್ಣೇಕರ್, ಶಿವಾಜಿ ಅನಂತ್ ನಲವಾಡೆ, ಉಪಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಪಾಟೀಲ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ವಿ.ಹನುಮಂತಪ್ಪ, ಹಿರಿಯ ನ್ಯಾಯಾಧೀಶರು ಮತ್ತಿತರರು ಉಪಸ್ಥಿತರಿದ್ದರು.

    65 cases registered in the district were settled on the spot

  • ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸ ಬೇಕು

    ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸ ಬೇಕು

    ಚಿಕ್ಕಮಗಳೂರು: ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕೆಂಬುದು ಪ್ರತೀ ವರ್ಷ ಪ್ರತಿ ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡುವ ಉದ್ದೇಶ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಅಭಿಪ್ರಾಯಿಸಿದರು.

    ಅವರು ಇಂದು ಕುವೆಂಪು ಕಲಾಮಂದಿರದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಇವರುಗಳ ಸಂಯುಕ್ತಾಶ್ರಯದಲ್ಲಿ ೨೦೨೫-೨೬ನೇ ಸಾಲಿನ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ, ಕ್ರೀಡಾ, ರಾಸೇಯೋ, ಯುವ ರೆಡ್‌ಕ್ರಾಸ್, ರೇಂಜರ್‍ಸ್ ಘಟಕಗಳನ್ನು ಉದ್ಘಾಟಿಸಿ ಮಾತನಾಡಿದರು.

    ಸದೃಢ ಮನಸ್ಸು ಆರೋಗ್ಯಪೂರ್ಣ ದೇಹಕ್ಕೆ ಕ್ರೀಡೆ ಸಹಕಾರಿಯಾದರೆ ಕ್ರೀಯಾಶೀಲರಾಗಲು ಸಾಂಸ್ಕೃತಿಕ ಚಟುವಟಿಕೆ ಬಹಳ ಮುಖ್ಯ, ಈ ಎರಡರಲ್ಲೂ ವಿದ್ಯಾರ್ಥಿಗಳು ಭಾಗವಹಿಸಿದಾಗ ಉತ್ತಮ ಶಿಕ್ಷಣ ಪಡೆಯಲು ಸಾಧ್ಯ ಎಂದು ಹೇಳಿದರು.

    ಸುಮಾರು ೩ ಕೋಟಿ ರೂ ವೆಚ್ಚದಲ್ಲಿ ನೂತನ ಪ್ರಥಮ ದರ್ಜೆ ಮಹಿಳಾ ಕಾಲೇಜು ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಿ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದ್ದು, ಸಧ್ಯದಲ್ಲೇ ಮೂಲಭೂತ ಸೌಕರ್ಯಗಳೊಂದಿಗೆ ಕಾಲೇಜನ್ನು ಉದ್ಘಾಟಿಸಿ ಸಾರ್ವಜನಿಕ ಸಮರ್ಪಿಸುವುದಾಗಿ ಭರವಸೆ ನೀಡಿದರು.

    ೧೨ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಮಹಿಳೆಯರಿಗೆ ಸಮಾನತೆಯನ್ನು ತಂದುಕೊಟ್ಟರು. ಈ ನಿಟ್ಟಿನಲ್ಲಿ ರಾಜ್ಯಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆಂದು ಶ್ಲಾಘಿಸಿದರು.

    ಜಗಜ್ಯೋತಿ ಬಸವೇಶ್ವರರು ಸರ್ವರಿಗೂ ಸಮಬಾಳು-ಸಮಪಾಲು, ಶೋಷಿತರನ್ನು ಸಮಾಜದ ಮುನ್ನಲೆಗೆ ತರುವಲ್ಲಿ ಶ್ರಮಿಸಿದ ಫಲವಾಗಿ ಮತ್ತು ೧೯ನೇ ಶತಮಾನದಲ್ಲಿ ಡಾ. ಬಿ.ಆರ್ ಅಂಬೇಡ್ಕರ್‌ರವರು ಸಂವಿಧಾನದ ಮೂಲಕ ಹೆಣ್ಣುಮಕ್ಕಳಿಗೆ ಸಮಾನತೆ ಕಲ್ಪಿಸಿ ಮತದಾನದ ಹಕ್ಕು ನೀಡಿದ್ದಾರೆ. ಇಂದು ಜಿಲ್ಲಾಮಟ್ಟದಲ್ಲಿ ಶೇ.೫೦ ರಷ್ಟು ಉನ್ನತ ಮಟ್ಟದ ಮಹಿಳಾ ಅಧಿಕಾರಿಗಳಿರುವುದನ್ನು ಮಾದರಿಯಾಗಿಟ್ಟುಕೊಂಡು ನಿಮ್ಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಕರೆನೀಡಿದರು.

    ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ, ಸರ್ಕಾರ ಶಾಲೆ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಕೀಳರಿಮೆ ಬೇಡ, ಉತ್ತಮ ಸಾಧನೆ ಮಾಡಿರುವ ಎಲ್ಲಾ ಮಹನೀಯರುಗಳು ಸರ್ಕಾರಿ ಶಾಲೆಯಲ್ಲಿ ಓದಿದ್ದಾರೆಂಬುದನ್ನು ಮನಗಾಣಬೇಕು ಎಂದು ಹೇಳಿದರು.

    ಶಿಕ್ಷಣದಿಂದ ಮಾತ್ರ ಸರ್ವ ಸಮಸ್ಯೆಗಳನ್ನು ಸಮರ್ಥವಾಗಿ ನಿಯಂತ್ರಣ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಎಂಬಂತೆ ನೀವೆಲ್ಲಾ ಉತ್ತಮ ಗುಣಮಟ್ಟದ ಶಿಕ್ಷಣ ಪಡೆದು ನಾಡಿಗೆ ಹಾಗೂ ತಮ್ಮ ಕುಟುಂಬಕ್ಕೆ ಬೆಳಕಾಗಿರಿ ಎಂದು ಶುಭ ಹಾರೈಸಿದರು.

    ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತರಲು ವೇದಿಕೆಗಳ ಅವಶ್ಯಕತೆ ಇದೆ, ಪುಸ್ತಕದಲ್ಲಿರುವುದನ್ನು ಕಲಿತು ಪರೀಕ್ಷೆ ಬರೆಯುವುದು ಶಿಕ್ಷಣವಲ್ಲ. ಕಲೆ, ಸಾಹಿತ್ಯ ಶಿಕ್ಷಣದ ಒಂದು ಭಾಗವಾಗಿದೆ. ಈಗ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪುನಹಾಃ ಕ್ರೀಡೆ, ಕಲೆ, ಸಾಹಿತ್ಯವನ್ನು ಇದರ ಜೊತೆಗೆ ಕೌಶಲ್ಯವನ್ನು ಶಿಕ್ಷಣದ ಭಾಗವಾಗಿ ಮಾಡಲು ಯೋಜನೆ ರೂಪಿಸಿದ್ದಾರೆಂದರು.
    ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಮೈಗೂಡಿಸಿಕೊಂಡು ಭವಿಷ್ಯದಲ್ಲಿ ಇನ್ನಷ್ಟು ಶ್ರೀಮಂತಗೊಳಿಸಲಿ ಎಂದು ಹಾರೈಸಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಮೂಡಲಗಿರಿಯಯ್ಯ ವಹಿಸಿದ್ದರು. ಪ್ರಾಸ್ತಾವಿಕವಾಗಿ ಉಪನ್ಯಾಸಕ ನಟೇಶ್ ಮಾತನಾಡಿದರು. ವೇದಿಕೆಯಲ್ಲಿ ಬಸವನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸತೀಶ್ ಶಾಸ್ತ್ರಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರುಗಳಾದ ಅಮರ್, ಮಹೇಶ್ವರಪ್ಪ ಸಿ.ಇ, ದೀಕ್ಷಿತ್ ಕುಮಾರ್, ನಟೇಶ್, ದೇವರಾಜ್, ಶ್ರೀನಿವಾಸ್, ಲೋಕೇಗೌಡ ಡಿ.ಕೆ, ಹೇಮ ಕುಮಾರಿ ಹಾಗೂ ಬೋದಕ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪುಟ್ಟಸ್ವಾಮಿ ಸ್ವಾಗತಿಸಿದರು.

    Students should participate in extracurricular activities.

  • ಹಿರಿಯ ಸಾಹಿತಿ ಎಸ್.ಎಲ್.ಬೈರಪ್ಪನವರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ

    ಹಿರಿಯ ಸಾಹಿತಿ ಎಸ್.ಎಲ್.ಬೈರಪ್ಪನವರ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ

    ಬೆಂಗಳೂರು: ಪದ್ಮಭೂಷಣ ಎಸ್.ಎಲ್ ಬೈರಪ್ಪನವರು ಅವರ ನಿಧನದಿಂದ ಸಾರಸ್ವತ ಲೋಕ ಬಹಳ ಬಡವಾಗಿದೆ. ಬೈರಪ್ಪನವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

    ಅವರು ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪದ್ಮಭೂಷಣ ಹಿರಿಯ ಸಾಹಿತಿ ದಿವಂಗತ ಎಸ್.ಎಲ್.ಬೈರಪ್ಪನವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು.

    ಬೈರಪ್ಪನವರ ಕಾದಂಬರಿಗಳು ಜಗತ್ಪ್ರಸಿದ್ಧ

    ಎಸ್.ಎಲ್ ಬೈರಪ್ಪನವರು ಅವರ ನಿಧನದಿಂದ ಸಾರಸ್ವತ ಲೋಕ ಬಹಳ ಬಡವಾಗಿದೆ. ಅವರು ಸುಮಾರು 25 ಕಾದಂಬರಿಗಳನ್ನು ಬರೆದಿದ್ದು, ಮೈಸೂರಿನಲ್ಲಿಯೇ ವಿದ್ಯಾಭ್ಯಾಸ ನಡೆಸಿದ ಬೈರಪ್ಪನವರಿಗೆ ಮೈಸೂರು ಕರ್ಮಸ್ಥಳ. ಅವರ ಕಾದಂಬರಿಗಳು 40 ಭಾಷೆಗಳಿಗೆ ತರ್ಜುಮೆಯಾಗಿದ್ದು, ಇಷ್ಟು ಸಂಖ್ಯೆಯಲ್ಲಿ ಸಾಹಿತಿಯೊಬ್ಬರ ಕೃತಿಗಳು ತರ್ಜುಮೆಯಾಗಿರುವುದು ಅಪರೂಪ. ವಿವಿಧ ಭಾಷೆಗಳ ಓದುಗರನ್ನು ಸಂಪಾದಿಸಿದ್ದರು. ಸಣ್ಣ ಗ್ರಾಮವೊಂದರಲ್ಲಿ ಜನಿಸಿದ ಬೈರಪ್ಪನವರು , ಫಿಲಾಸಫಿಯನ್ನು ಓದಿದ್ದರೂ, ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡವರು ಎಂದರು.

    ಬದುಕಿನ ಅನುಭವಗಳನ್ನಾಧರಿಸಿ ಬರೆಯುವ ಸಾಹಿತಿ

    ಬೋಧನಾ ವೃತ್ತಿಯಲ್ಲಿದ್ದುಕೊಂಡು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನೂ ತೊಡಗಿಸಿಕೊಂಡಿದ್ದರು. ಕಾದಂಬರಿಗಳನ್ನು ಆತ್ಮತೃಪ್ತಿಗಾಗಿ ಬರೆಯುತ್ತಿದ್ದ ಅವರ ಕೃತಿಗಳು ಜಗತ್ಪ್ರಸಿದ್ಧವಾಗಿದ್ದವು. ನಾನು ಅವರ ಕೆಲವೊಂದು ಕಾದಂಬರಿಗಳನ್ನು ಓದಿದ್ದೇನೆ. ಬದುಕಿನ ಅನುಭವಗಳನ್ನಾಧರಿಸಿ ಬರೆಯುವ ಸಾಹಿತಿ. ಅವರ ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬದವರು, ಸಾಹಿತ್ಯಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಭರಿಸಲು ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.

    ಮೈಸೂರಿನಲ್ಲಿ ಸ್ಮಾರಕ

    ಎಸ್.ಎಲ್.ಬೈರಪ್ಪನವರ ಸ್ಮಾರಕ ನಿರ್ಮಾಣದ ಬಗ್ಗೆ ಪ್ರತಿಕ್ರಿಯೆ ನೀಡಿ, ಬಿಜೆಪಿಯವರು ಹೇಳಿದರೆಂದು ಸ್ಮಾರಕ ನಿರ್ಮಿಸುವುದಿಲ್ಲ. ಮೈಸೂರಿನಲ್ಲಿಯೇ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು. ಮೈಸೂರಿನಲ್ಲಿಯೇ ತಮ್ಮ ಜೀವಿತಾವಧಿಯನ್ನು ಕಳೆದಿದ್ದು, ವಿದ್ಯಾಭ್ಯಾಸ, ಸಾಹಿತ್ಯಕೃಷಿಯಲ್ಲಿ ನಡೆಸಿದ್ದರು ಎಂದರು.

    ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

    ಬೈರಪ್ಪನವರೊಂದಿಗೆ ಮುಖ್ಯಮಂತ್ರಿಗಳ ಒಡನಾಟದ ಬಗ್ಗೆ ಪ್ರತಿಕ್ರಿಯೆ ನೀಡಿ, ಸಾಹಿತ್ಯ ಹಾಗೂ ಸ್ನೇಹ ಬೇರೆಯಾಗಿದ್ದು, ನಮ್ಮ ದೃಷ್ಟಿಕೋನಗಳು ಬೇರೆಯಾಗಿದ್ದರೂ, ಉತ್ತಮ ಬಾಂಧವ್ಯವಿತ್ತು ಎಂದರು. ಬೈರಪ್ಪನವರ ಅಂತ್ಯಕ್ರಿಯೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಭಾಗವಹಿಸಲಿದ್ದಾರೆ. ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿರುವ ಬೈರಪ್ಪನವರು ನಾಡು ಕಂಡ ಶ್ರೇಷ್ಠ ಸಾಹಿತಿಗಳಾಗಿದ್ದರು. ಯಾವುದೇ ಪ್ರಶಸ್ತಿಗೂ ಹಂಬಲಿಸದ ಬೈರಪ್ಪನವರಿಗೆ ಅವರ ಸಾಹಿತ್ಯದ ಕೊಡುಗೆಯನ್ನು ಪರಿಗಣಿಸಿ ಜ್ಞಾನಪೀಠ ಪ್ರಶಸ್ತಿಯನ್ನು ನೀಡಿದ್ದರೆ ಉತ್ತಮವಾಗಿತ್ತು ಎಂದರು.

    Chief Minister condoles the demise of veteran writer S.L. Byrappa

  • ಸರ್ಕಾರಿ ನೌಕರರಿಗೆ ರಾಜ್ಯದ 8 ಕೋಟಿ ಜನರ ಜವಾಬ್ದಾರಿ

    ಸರ್ಕಾರಿ ನೌಕರರಿಗೆ ರಾಜ್ಯದ 8 ಕೋಟಿ ಜನರ ಜವಾಬ್ದಾರಿ

    ಚಿಕ್ಕಮಗಳೂರು:  ರಾಜ್ಯದ ಅಂದಾಜು ಏಳು ಲಕ್ಷ ಸರ್ಕಾರಿ ನೌಕರರ ಭುಜದ ಮೇಲೆ ಸುಮಾರು ಎಂಟು ಕೋಟಿ ಜನಸಾಮಾನ್ಯರ ಸಮಸ್ಯೆಗಳ ಜವಾಬ್ದಾರಿ ಇದ್ದು, ಕರ್ತವ್ಯ ಪ್ರಜ್ಞೆಯಿಂದ, ಜಾಗರೂಕತೆಯಿಂದ ಕಾರ್ಯ ನಿರ್ವಹಿಸುವುದು ಪ್ರತಿಯೊಬ್ಬ ಅಧಿಕಾರಿ-ಸಿಬ್ಬಂದಿಯ ಕರ್ತವ್ಯ ಎಂದು ಕರ್ನಾಟಕ ಉಪಲೋಕಾಯುಕ್ತ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಕೆ.ಎನ್.ಫಣೀಂದ್ರ ಅವರು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

    ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾಡಳಿತದ ಸಂಯುಕ್ತ ಆಶ್ರಯದಲ್ಲಿ ಶಿಕ್ಷಣ ಇಲಾಖೆ, ರೇಷ್ಮೆ ಇಲಾಖೆ, ಕೃಷಿ ಮತ್ತು ತೋಟಗಾರಿಕೆ ಇಲಾಖೆ, ನ್ಯಾಯಾಂಗ ನೌಕರರು, ಜಿಲ್ಲಾ ಮತ್ತು ತಾಲ್ಲೂಕು ಹಾಗೂ ಇತರ ಇಲಾಖೆಯ ಅಧಿಕಾರಿಗಳೊಂದಿಗೆ ನಿನ್ನೆ ಸಂಜೆ ನಗರದ ಕುವೆಂಪು ಕಲಾಮಂದಿರದಲ್ಲಿ ಲೋಕಾಯುಕ್ತ ಕಾಯ್ದೆಯ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಮನುಷ್ಯನಾಗಿ ಹುಟ್ಟಿದ ಮೇಲೆ ನಾವು ಕರ್ತವ್ಯನಿಷ್ಠೆಯಿಂದ ಕಾರ್ಯ ನಿರ್ವಹಿಸದಿದ್ದರೆ ಅಂಥ ಜೀವನ ಜೀವನವಲ್ಲ. ನಾವು ಸತ್ತ ಮೇಲೂ ಜನರು ನೆನಸಿಕೊಳ್ಳುವ ಕೆಲಸ ಮಾಡಬೇಕು. ಬದುಕಿದರೂ ಸತ್ತಂತಿರಬಾರದು, ಸತ್ತರೂ ಬದುಕಿದಂತಿರಬೇಕು. ಸರ್ಕಾರ ಈ ಕೆಲಸ ನೀಡಿದ್ದರೂ ಸಮಾಜ ಸೇವೆ ಮಾಡುವುದಕ್ಕಾಗಿ ಭಗವಂತ ನಮಗೆ ನೀಡಿದ ಅವಕಾಶ ಎಂದು ಭಾವಿಸಿ ದೇವರಿಗೂ, ಸಮಾಜಕ್ಕೂ ಕೃತಜ್ಞರಾಗಿರಬೇಕು. ಸಮಾಜದಿಂದ ಕೇಳಿ ಬರುವ ಆರೋಪಗಳನ್ನು ತೊಡೆಯಲು ದಕ್ಷತೆಯಿಂದ, ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಬೇಕು. ಇದರಿಂದ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ತಿಳಿಹೇಳಿದರು.

    ಕೆಲವೊಮ್ಮೆ ಸರ್ಕಾರಿ ನೌಕರನಾಗಿ ಅಥವಾ ಸಾರ್ವಜನಿಕ ನೌಕರನಾಗಿ ಯಾವುದೇ ಕರ್ತವ್ಯಲೋಪ ಎಸಗದಿದ್ದರೂ ದೂರು ನೀಡುವಂತಹ ಸನ್ನಿವೇಶವಿರುತ್ತದೆ. ದೂರು ಕೊಟ್ಟವರ ಉದ್ದೇಶ ಕಾನೂನಾತ್ಮಕವಾಗಿದ್ದರೂ ಕಾನೂನು ಬಾಹಿರವಾಗಿದ್ದರೂ ಹೆದರಿ ಕಾರ್ಯ ನಿರ್ವಹಿಸುತ್ತಾರೆ ಎಂಬ ದುರುದ್ದೇಶದಿಂದ ತಮ್ಮ ಕೆಲಸ ಮಾಡಿಸಿಕೊಳ್ಳಲು ದೂರು ನೀಡುವ ಸಾಧ್ಯತೆ ಇದೆ. ಹೀಗಾಗಿ ಕೆಲವೊಮ್ಮೆ ದಕ್ಷತೆಯಿಂದ, ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುವುದು ಕೂಡ ತಪ್ಪು ಎಂಬ ಭಾವನೆ ಬಂದುಬಿಟ್ಟಿದೆ. ಲೋಕಾಯುಕ್ತ ಕಾಯ್ದೆಯಲ್ಲಿ ದೂರುದಾರರಿಗೆ ಸವಲತ್ತುಗಳಿರುವಂತೆ ಅಧಿಕಾರಿಗಳಿಗೂ ಕೂಡ ರಕ್ಷಣೆಗಳಿರುವ ಬಗ್ಗೆ ಮನದಟ್ಟು ಮಾಡಿಕೊಡುವುದು ಅಗತ್ಯ. ಕೆ.ಸಿ.ಎಸ್.ಆರ್. ನಿಯಮಾವಳಿಗಳಲ್ಲದೆ, ಲೋಕಾಯುಕ್ತದ ಕಾನೂನಿನ ಅಧ್ಯಯನವನ್ನು ಅಧಿಕಾರಿಗಳು ಮಾಡಬೇಕಿದೆ. ಸರ್ಕಾರದಿಂದ ನೇರ ನೇಮಕಾತಿಯಾಗಿ ವೇತನ ಪಡೆದುಕೊಳ್ಳುವವರು ಸರ್ಕಾರಿ ನೌಕರರು. ಅವರಲ್ಲದೆ ಸಾರಿಗೆ ನಿಗಮದಂತಹ ಸ್ವಾಯತ್ತ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಸಾರ್ವಜನಿಕ ನೌಕರರು. ಈ ಪರಿಧಿಯೊಳಗೆ ಇರುವವರಿಂದ ತಪ್ಪಾದಾಗ ಸಹ ಅವರ ವಿರುದ್ಧ ಕ್ರಮ ಕೈಗೊಳ್ಳಲು ಲೋಕಾಯುಕ್ತ ಕಾಯ್ದೆಯಲ್ಲಿ ಅವಕಾಶವಿದೆ ಎಂದರು.

    ಇವುಗಳ ಜೊತೆಗೆ ಪಂಚಾಯಿತಿಯಿಂದ ಆರಂಭವಾಗಿ ಮುಖ್ಯಮಂತ್ರಿಯವರೆಗೆ ಚುನಾಯಿತ ಪ್ರತಿನಿಧಿಗಳು, ಐಎಎಸ್, ಐಪಿಎಸ್, ಐಎಫ್‌ಎಸ್ ಅಧಿಕಾರಿಗಳು ಅಂದರೆ ೧,೨೦,೦೦೦ ರೂ. ಮೂಲ ವೇತನ ಪಡೆಯುವವರು ಲೋಕಾಯುಕ್ತ ವ್ಯಾಪ್ತಿಗೆ ಬರುತ್ತಾರೆ. ಅದಕ್ಕಿಂತ ಕೆಳಗಿನ ವೇತನ ಪಡೆಯುವವರು ಮಾತ್ರ ಉಪಲೋಕಾಯುಕ್ತ ವ್ಯಾಪ್ತಿಗೆ ಬರುತ್ತಾರೆ. ಸರ್ಕಾರದಿಂದ ದುರ್ನಡತೆಯಾದ, ದುರಾಡಳಿತವಾದ ಸಂದರ್ಭದಲ್ಲಿ ಒಂದು ಸ್ವಾಯತ್ತತೆ ಇರುವ ಸಂಸ್ಥೆ ಇರಬೇಕು. ಅದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸಬಾರದು. ನಮ್ಮ ಪ್ರಧಾನಿಯಾಗಿದ್ದ ಮೊರಾರ್ಜಿ ದೇಸಾಯಿ ನೇತೃತ್ವದಲ್ಲಿ ಈ ತೀರ್ಮಾನವಾಯಿತು. ಆಗ ಈ ಲೋಕಾಯುಕ್ತ ಹಾಗೂ ಲೋಕಪಾಲ್ ಕಾಯ್ದೆ ಜಾರಿಗೆ ಬಂದಿತು ಎಂದು ತಿಳಿಸಿದರು.

    ಇದಕ್ಕೆ ಕಾನೂನಿನ ಪರಿಣತಿ, ಸಮಾಜದ ಬಗ್ಗೆ ಕಳಕಳಿ, ಈಗಾಗಲೇ ಸಮಾಜದ ಲೋಪದೋಷ ತಿದ್ದುವ ಕೆಲಸ ಮಾಡಿದವರು, ನ್ಯಾಯಯುತ ಪ್ರಕ್ರಿಯೆ ಅನುಸರಿಸಿದವರು, ಸಾಮಾನ್ಯ ನ್ಯಾಯ ಎತ್ತಿಹಿಡಿದವರು ಎನ್ನುವ ಪ್ರಸ್ತಾವ ಬಂದಾಗ ಉಚ್ಚ ನ್ಯಾಯಾಲಯದಲ್ಲಿ ಕನಿಷ್ಠ ಹತ್ತು ವರ್ಷ ಕಾರ್ಯ ನಿರ್ವಹಿಸಿದ ನಿವೃತ್ತ ನ್ಯಾಯಮೂರ್ತಿಗಳನ್ನು ಲೋಕಾಯುಕ್ತರನ್ನಾಗಿ, ಕನಿಷ್ಠ ಐದು ವರ್ಷ ಕಾರ್ಯ ನಿರ್ವಹಿಸಿ ನಿವೃತ್ತರಾದ ನ್ಯಾಯಮೂರ್ತಿಗಳನ್ನು ಉಪಲೋಕಾಯುಕ್ತರನ್ನಾಗಿ ನೇಮಕ ಮಾಡಲು ತೀರ್ಮಾನವಾಯಿತು ಎಂದರು.

    ಸಹಜವಾದ, ಅಸಹಜವಾದ ಮತ್ತು ದುರುದ್ದೇಶಪೂರಿತವಾದ ತಪ್ಪುಗಳಾದ ಸಂದರ್ಭ ಉಭಯ ಪಕ್ಷಗಾರರಿಗೆ ಸಮಾನ ಅವಕಾಶ ನೀಡಿ ಕೂಲಂಕಷವಾಗಿ ವಿಚಾರಣೆ ಮಾಡಿ ನಿರ್ದಿಷ್ಟವಾದ ತೀರ್ಪು ನೀಡಲು ಲೋಕಾಯುಕ್ತಕ್ಕೆ ನ್ಯಾಯಾಧೀಶರ ಒಂದು ಪಡೆಯನ್ನೇ ನೇಮಕ ಮಾಡಲಾಯಿತು. ಲೋಕಾಯುಕ್ತಕ್ಕೆ ಒಂದು ಬಲವಾಗಿರುವುದೆಂದರೆ ಜಿಲ್ಲಾ ನ್ಯಾಯಾಧೀಶರ ಕಾನೂನು ಪಡೆ. ಇನ್ನೊಂದು ಬಲವಾದ ವ್ಯವಸ್ಥೆ ಎಂದರೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ನೀಡುವ ಕಾರ್ಯವನ್ನು ಲೋಕಾಯುಕ್ತ ಪೊಲೀಸ್ ಇಲಾಖೆಗೆ ನೀಡಲಾಗಿದೆ.

    ತಾಂತ್ರಿಕ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ತಾಂತ್ರಿಕ ವರ್ಗವಿದೆ. ಆಡಳಿತಾತ್ಮಕ ವಿಭಾಗವೂ ಸೇರಿದಂತೆ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸ್ ಇಲಾಖೆಯಂತೆಯೇ ರಾಜ್ಯದ ಲೋಕಾಯುಕ್ತ ಸಂಸ್ಥೆಯಲ್ಲೂ ಕೂಡ ಎಲ್ಲಾ ಹಂತದ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಸುಮಾರು ೧೬೦೦ ರಷ್ಟು ಮಂದಿ ಇದ್ದಾರೆ. ಒಬ್ಬರು ಲೋಕಾಯುಕ್ತರು ಹಾಗೂ ಇಬ್ಬರು ಉಪಲೋಕಾಯುಕ್ತರು ಸೇರಿದಂತೆ ಸುಮಾರು ೪೦ ಮಂದಿ ನ್ಯಾಯಾಧೀಶರಿದ್ದಾರೆ ಎಂದು ಇಲಾಖೆಯ ಸ್ವರೂಪವನ್ನು ತಿಳಿಸಿದರು.

    ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವು ನಮ್ಮ ಸಮಾಜ ವ್ಯವಸ್ಥೆಯ ಪ್ರತಿಯೊಂದು ಭಾಗಗಳನ್ನು ಅವಲಂಬಿಸಿ ಬಳಸಿಕೊಳ್ಳುತ್ತಿದ್ದೇವೆ. ಹೀಗಿರುವಾಗ ನಾವು ಸಮಾಜಕ್ಕೆ ಕೊಡುಗೆ ನೀಡುವುದು ಅಗತ್ಯ ಎಂದರು.
    ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ ಮಾತನಾಡಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ವಿ.ಹನುಮಂತಪ್ಪ ಸ್ವಾಗತಿಸಿದರು.

    ಉಪಲೋಕಾಯುಕ್ತರ ಜೊತೆ ಆಗಮಿಸಿರುವ ಇತರ ನ್ಯಾಯಾಧೀಶರಾದ ಪೃಥ್ವಿರಾಜ್ ವರ್ಣೇಕರ್, ಶಿವಾಜಿ ಅನಂತ್ ನಲವಾಡೆ, ಹಿರಿಯ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ವಿ.ಹನುಮಂತಪ್ಪ, ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ.ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ, ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಪಿ.ಬಿ.ನೇಹಾ ಉಪಸ್ಥಿತರಿದ್ದರು.

    Government employees are responsible for the 8 crore people of the state.

  • ಸ್ವಚ್ಛತೆ ಬಗ್ಗೆ ಜನಜಾಗೃತಿ ಮೂಡಿಸಬೇಕು

    ಸ್ವಚ್ಛತೆ ಬಗ್ಗೆ ಜನಜಾಗೃತಿ ಮೂಡಿಸಬೇಕು

    ಚಿಕ್ಕಮಗಳೂರು:  ಮನೆ, ಬೀದಿ, ಇಡೀ ಊರನ್ನು ಶುಚಿಯಾಗಿಟ್ಟುಕೊಳ್ಳುವ ಬಗ್ಗೆ ಸಾರ್ವಜನಿಕರಲ್ಲಿ ಕಾನೂನು ತಿಳುವಳಿಕೆ ಮೂಲಕ ಬಿತ್ತುವ ಮೂಲಕ ಜಾಗೃತಿ ಮೂಡಿಸುವ ಕಾರ್ಯವನ್ನು ಕೈಗೊಳ್ಳಬೇಕೆಂದು ಕಾನೂನು ಸೇವಾ ಪ್ರಾಧಿಕಾರ, ಪುರಸಭಾ ಆಡಳಿತ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿಗೆ ಕರ್ನಾಟಕ ಉಪಲೋಕಾಯುಕ್ತ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಕೆ.ಎನ್.ಫಣೀಂದ್ರ ಅವರು ಕರೆ ನೀಡಿದರು.

    ನಗರಾಭಿವೃದ್ಧಿ ಇಲಾಖೆ, ನಗರಸಭೆ ಆಶ್ರಯದಲ್ಲಿ ಸ್ವಚ್ಛೋತ್ಸವ ಕಾರ್ಯಕ್ರಮದಡಿ ಸೆಪ್ಟಂಬರ್ ೧೭ ರಿಂದ ಅಕ್ಟೋಬರ್ ಎರಡರವರೆಗೆ ನಡೆಯಲಿರುವ ಸ್ವಚ್ಛತೆಯೇ ಸೇವೆಯಡಿ ಆಯೋಜಿಸಿದ್ದ ಹನುಮಂತಪ್ಪ ವೃತ್ತದಿಂದ ಆಜಾದ್‌ಪಾರ್ಕ್‌ವರೆಗೆ ಜಾಥಾವನ್ನು ಇಂದು ಬೆಳಿಗ್ಗೆ ತಾಲ್ಲೂಕು ಕಚೇರಿ ಆವರಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

    ಒಂದು ಗಂಟೆ ಕಾಲ ಎಲ್ಲರೂ ಸೇರಿ ನಡೆಸುತ್ತಿರುವ ಶ್ರಮದಾನವಿದು. ಹಾಗೆಂದು ಸ್ವಚ್ಛತಾ ಆಂದೋಲನ ಅಕ್ಟೋಬರ್ ಎರಡಕ್ಕೆ ಮುಕ್ತಾಯವಾಗಬಾರದು; ಆಡಳಿತ ವ್ಯವಸ್ಥೆಗಳು ಈ ವಿಚಾರದಲ್ಲಿ ಕಟಿಬದ್ಧವಾಗಿ ಕಾರ್ಯ ನಿರ್ವಹಿಸಬೇಕು. ಈ ಆಂದೋಲನ ಹಳ್ಳಿ ಹಳ್ಳಿಯಲ್ಲೂ ಜನಾಂದೋಲನವಾಗಿ ರೂಪುಗೊಳ್ಳಬೇಕು. ಎಲ್ಲೆಡೆ ಕೆರೆಕಟ್ಟೆಯನ್ನು ಶುಚಿಯಾಗಿ ಉಳಿಸಿಕೊಂಡರೆ ನಮ್ಮ ದೇಶಕ್ಕೆ ಕೊಡುಗೆ ನೀಡಿದಂತಾಗುತ್ತದೆ ಎಂದು ಅವರು ಹೇಳಿದರು.

    ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ಮುಖ್ಯವಾಗಿ ಬೇಕಾಗಿರುವುದು ಸ್ವಚ್ಛತೆ. ಜನರಲ್ಲಿ ಕೂಡ ಈ ಬಗ್ಗೆ ಸಾಮಾಜಿಕ ಕಳಕಳಿಯಾಗಲಿ, ಜಾಗೃತಿಯಾಗಲಿ, ತಿಳುವಳಿಕೆಯಾಗಲಿ ಇಲ್ಲ. ಈ ಬಗ್ಗೆ ಸರ್ಕಾರಿ ಅಧಿಕಾರಿಗಳು ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಜನರನ್ನು ಒಗ್ಗೂಡಿಸಿ ಈ ಬಗ್ಗೆ ಕಾರ್ಯಪ್ರವೃತ್ತರಾಗಬೇಕು ಎಂದು ಸೂಚಿಸಿದರು.

    ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಅವರು ಮಾತನಾಡಿ, ಈ ನಗರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಬೇಕೆಂದು ಸಂಕಲ್ಪ ಮಾಡಿದ್ದು, ಪೌರ ಕಾರ್ಮಿಕರು ಈ ವಿಚಾರದಲ್ಲಿ ಸಂಪೂರ್ಣ ಸಹಕಾರವನ್ನು ನೀಡಿದ್ದಾರೆ. ಸ್ವಚ್ಛ ಭಾರತ್ ಯೋಜನೆಯಡಿ ಇಡೀ ನಗರವನ್ನು ಶುಚಿಯಾಗಿಟ್ಟುಕೊಳ್ಳುವುದಕ್ಕೆ ನಾವೆಲ್ಲ ಪಣತೊಡುವುದಾಗಿ ತಿಳಿಸಿದರು.

    ಪೌರಾಯುಕ್ತ ಬಿ.ಸಿ.ಬಸವರಾಜು ಮಾತನಾಡಿ, ದೇಶಾದ್ಯಂತ ಸ್ವಚ್ಛತಾ ಇ ಸೇವಾ ಕಾರ್ಯಕ್ರಮದಡಿ ಸಾರ್ವಜನಿಕರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ. ಸಾರ್ವಜನಿಕರು ನಗರದಿಂದ ಅಗತ್ಯವಿರುವ ವಸ್ತುಗಳನ್ನು ಖರೀದಿಸುವ ಕಾಲಕ್ಕೆ ಪ್ಲಾಸ್ಟಿಕ್ ಚೀಲಗಳನ್ನು ಅವಲಂಬಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಪ್ಲಾಸ್ಟಿಕ್ ನಿಷೇಧಿಸುವ ಬಗ್ಗೆ ಜನರಲ್ಲಿ ಮಾನಸಿಕತೆ ಬೆಳೆಯಬೇಕು ಎಂದು ತಿಳಿಸಿದರು.

    ರಾಜ್ಯಕ್ಕೆ ಮಾದರಿಯಾದ ಕಸದ ವಿಲೇವಾರಿ ಘಟಕವನ್ನು ಸ್ಥಾಪಿಸುತ್ತಿದ್ದು, ಸಾರ್ವಜನಿಕರು ಹಲವರು ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡುತ್ತಿಲ್ಲ. ಅಲ್ಲಲ್ಲಿ ಎಸೆಯುವ ಕೆಲಸ ಮಾಡುತ್ತಿದ್ದಾರೆ. ಜನರು ಹಸಿಕಸ ಹಾಗೂ ಒಣಕಸವನ್ನು ವಿಂಗಡಿಸುವ ಮೂಲಕ ಕಸ ವಿಲೇವಾರಿ ಮಾಡುವ ಆಟೋ ಟಿಪ್ಪರ್‌ಗಳಿಗೆ ಹಾಕಬೇಕೆಂದು ಸಲಹೆ ನೀಡಿದರು. ರಾಜ್ಯಕ್ಕೆ ಮಾದರಿಯಾದ ಗ್ರಾಮಸ್ಥರಿಗೆ ಸಮಸ್ಯೆಯಾಗದಂತೆ ಸ್ಥಳದಲ್ಲೇ ವಿಂಗಡಿಸಿ ವಿಲೇವಾರಿ ಮಾಡಲಾಗುವುದು.

    ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ವಿ.ಹನುಮಂತಪ್ಪ. ಉಪಲೋಕಾಯುಕ್ತರ ಜೊತೆ ಆಗಮಿಸಿರುವ ಇತರ ನ್ಯಾಯಾಧೀಶರಾದ ಪೃಥ್ವಿರಾಜ್ ವರ್ಣೇಕರ್, ಶಿವಾಜಿ ಅನಂತ್ ನಲವಾಡೆ, ಹಿರಿಯ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ವಿ.ಹನುಮಂತಪ್ಪ, ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ.ಪಾಟೀಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ, ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಪಿ.ಬಿ.ಸ್ನೇಹಾ, ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ತಿರುಮಲೇಶ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

    ಇದೇ ಸಂದರ್ಭದಲ್ಲಿ ಉಪಲೋಕಾಯುಕ್ತರಾದ ನ್ಯಾ.ಕೆ.ಎನ್.ಫಣೀಂದ್ರ ಅವರು ಕಸಪೊರಕೆ ಹಿಡಿದು ಕಸಗುಡಿಸಿ ಚೀಲಗಳಿಗೆ ಕಸವನ್ನು ಹಾಕುವ ಮೂಲಕ ಸಾರ್ವಜನಿಕರಿಗೆ ಸಂದೇಶ ರವಾನಿಸಿದರಲ್ಲದೆ, ನಗರಸಭೆಯಿಂದ ಮನೆ ಮನೆಗಳಿಗೆ ಬಟ್ಟೆ ಬ್ಯಾಗ್‌ಗಳನ್ನು ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದರು.

    Public awareness should be created about cleanliness.

  • ನಗರದ ವಿವಿಧ ಭಾಗಗಳಿಗೆ ಉಪಲೋಕಾಯುಕ್ತರ ಭೇಟಿ-ಪರಿಶೀಲನೆ

    ನಗರದ ವಿವಿಧ ಭಾಗಗಳಿಗೆ ಉಪಲೋಕಾಯುಕ್ತರ ಭೇಟಿ-ಪರಿಶೀಲನೆ

    ಚಿಕ್ಕಮಗಳೂರು:  ನಗರದ ವಿವಿಧ ಭಾಗಗಳಿಗೆ ಭೇಟಿನೀಡಿದ ಗೌರವಾನ್ವಿತ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿ ಪರಿಶೀಲನೆ ನಡೆಸಿದರು.

    ಇಂದು ಇಲ್ಲಿನ ಎರಡು ಮಹಿಳಾ ಹಾಸ್ಟೆಲ್‌ಗಳಿಗೆ ಭೇಟಿನೀಡಿ ಅಲ್ಲಿನ ನ್ಯೂನತೆಗಳ ಬಗ್ಗೆ ಪರಿಶೀಲಿಸಿ ವಿದ್ಯಾರ್ಥಿನಿಯರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕೂಡಲೇ ಸರಿಪಡಿಸುವ ಜೊತೆಗೆ ಸ್ವಚ್ಛತೆ ಕಾಪಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ವಿದ್ಯಾರ್ಥಿನಿಯರಿಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದ ಅವರು, ತಕ್ಷಣ ಹಾಸ್ಟೆಲ್‌ಗಳಲ್ಲಿ ಯಾವುದೇ ಸಮಸ್ಯೆ ತಲೆದೋರದಂತೆ ಕ್ರಮವಹಿಸಬೇಕೆಂದು ಹೇಳಿದರು.

    ನಗರಸಭೆ ಕಸದ ಡಂಪಿಂಗ್ ಯಾರ್ಡ್‌ಗೆ ಭೇಟಿನೀಡಿದ್ದು, ಇದರಲ್ಲಿ ಉತ್ಪತ್ತಿಯಾಗುತ್ತಿರುವ ಕೊಳಚೆ ನೀರು ಗ್ರಾಮದ ಕಾಲುವೆಯಲ್ಲಿ ಹರಿಯುತ್ತಿರುವುದರಿಂದ ಕೆಟ್ಟ ವಾಸನೆ ಬರುತ್ತಿದೆ. ಜೊತೆಗೆ ಸೊಳ್ಳೆ, ನೊಣಗಳ ಕಾಟವೂ ಹೆಚ್ಚಾಗಿ ರೋಗರುಜಿನಗಳಿಗೆ ಆಹ್ವಾನ ನೀಡಿದಂತಾಗಿದೆ ಎಂದು ಇಲ್ಲಿನ ಸಾರ್ವಜನಿಕರು ದೂರು ನೀಡಿದ್ದಾರೆಂದು ತಿಳಿಸಿದರು.

    ಡಂಪಿಂಗ್ ಯಾರ್ಡ್‌ನಲ್ಲಿ ಬಹಳ ದೊಡ್ಡ ಸಮಸ್ಯೆ ಇದೆ, ಡ್ರೈವೇಸ್ಟ್ ಆಗಿ ಹೊರಬರುವ ಕಸವನ್ನು ಸ್ಥಳಾಂತರ ಮಾಡದೆ ಸುಮಾರು ೨೫ ವರ್ಷಗಳಿಂದ ವಿಲೇ ಮಾಡಲಾಗಿಲ್ಲ, ಇಡೀ ಗುಡ್ಡ ಕಸವಾಗಿದೆ. ಇದರಿಂದ ಬರುವ ನೀರು ಕಲುಶಿತಗೊಂಡು ಕೃಷಿಗೆ, ತೋಟಗಾರಿಕೆಗೆ ಹಾಗೂ ದನಕರುಗಳಿಗೆ, ನಾಗರೀಕರಿಗೆ ತೊಂದರೆಯಾಗುತ್ತಿದೆ ಎಂದು ತಿಳಸಿದರು.

    ಈ ಬಗ್ಗೆ ತಾಂತ್ರಿಕ ಅಧ್ಯಯನ ಆಗಬೇಕು, ನಂತರ ವೈಜ್ಞಾನಿಕ ಪರಿಹಾರ ಕ್ರಮಗಳ ಬಗ್ಗೆ ಸೂಕ್ತ ಕಾನೂನು ಸಲಹೆಗಳನ್ನು ಪಡೆಯಬೇಕಾಗಿರುವುದರಿಂದ ನಗರಸಭೆ ಪೌರಾಯುಕ್ತರು ಮತ್ತು ವ್ಯವಸ್ಥಾಪಕರ ಮೇಲೆ ಪ್ರಕರಣ ದಾಖಲು ಮಾಡಿಕೊಂಡು ಸಮಸ್ಯೆಯನ್ನು ಇತ್ಯರ್ಥಪಡಿಸುವಂತೆ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು.

    ಪ್ರತಿ ತಿಂಗಳು ನಡೆಯುವ ವರದಿ ಆಧರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಒಣ ಕಸವನ್ನು ವಿಲೇವಾರಿ ಮಾಡಲಾಗುತ್ತಿದೆ. ಆದರೆ, ಈ ಕಾರ್ಯ ಅಂತಿಮಗೊಳ್ಳಲು ಸುಮಾರು ವರ್ಷಾನುಗಟ್ಟೆಲೆಯಾಗುತ್ತದೆ. ಈ ಸಂಬಂಧ ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಇಂಜಿನಿಯರ್‌ನ್ನು ಆಹ್ವಾನಿಸಿ ಸರ್ವೇ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ಏನು ತೀರ್ಮಾನ ಮಾಡಬಹುದು ಎಂಬುದರ ಬಗ್ಗೆ ಪ್ರಸ್ತಾವನೆ ಕಳಿಸುವುದಾಗಿ ತಿಳಿಸಿದರು.

    ಒಣ ಕಸ ಸ್ಥಳಾಂತರ ಮಾಡಲು ತುಂಬಾ ಕಷ್ಟ ಇದ್ದು, ಬೇರೆಡೆಗೆ ಹಾಕಿದರೆ ಅಲ್ಲಿ ತೊಂದರೆಯಾಗುತ್ತದೆ ಎಂಬುದನ್ನು ಮನಗಂಡು ಪರಿಶೀಲನೆ ಮಾಡಿ ಇರುವ ಜಾಗದಲ್ಲಿಯೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ನಿರ್ದೇಶನ ನೀಡಿ ಸಲಹೆ ನೀಡಲಾಗಿದೆ ಎಂದರು.

    ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎರಡುಕಡೆ ತುಂಬ ಚೆನ್ನಾಗಿ ಕಸ ವಿಲೇವಾರಿಗೆ ಕ್ರಮವಹಿಸಲಾಗಿದೆ. ಅದೇ ಮಾದರಿಯಲ್ಲಿ ಚಿಕ್ಕಮಗಳೂರಿನಲ್ಲಿಯೂ ನಿರ್ಮಾಣ ಮಾಡಿ ಕೊಳಚೆ ನೀರನ್ನು ಶುದ್ಧೀಕರಿಸಿ ಕುಡಿಯುವ ನೀರನ್ನು ಹೊರತುಪಡಿಸಿ, ತೋಟಗಾರಿಕೆಗೆ, ಕೃಷಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

    ನಗರದ ಗ್ರಾಮೀಣ ಸಾರಿಗೆ ಬಸ್ ನಿಲ್ದಾಣಕ್ಕೆ ಭೇಟಿನೀಡಿದ ಅವರು, ಅಲ್ಲಿನ ಅವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಶೌಚಾಲಯ ಸರಿ ಇಲ್ಲ, ತುಂಬಾ ಗಲೀಜಾಗಿದೆ. ಕ್ಯಾಂಟೀನ್ ಅಡುಗೆ ಮನೆಯಲ್ಲಿ ಸ್ವಚ್ಛತೆ ಇಲ್ಲ. ಈ ಬಗ್ಗೆ ಪ್ರತಿದಿನ ಆರೋಗ್ಯ ಅಧಿಕಾರಿಗಳು ಭೇಟಿನೀಡಿ ಪರಿಶೀಲಿಸಬೇಕೆಂದು ನಿರ್ದೇಶನ ನೀಡಿದ್ದೇನೆ, ಈ ಕುರಿತು ಒಂದು ಕೇಸು ದಾಖಲಿಸಿರುವುದಾಗಿ ತಿಳಿಸಿದರು.

    ಸುಮಾರು ೧೯ ಕೋಟಿ ರೂ ವೆಚ್ಚದಲ್ಲಿ ಗ್ರಾಮೀಣ ರಸ್ತೆ ಸಾರಿಗೆ ಬಸ್ ನಿಲ್ದಾಣ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದ್ದು, ಅಲ್ಲಿಯವರೆಗೆ ಒಂದು ಬೋರ್‌ವೆಲ್ ತೆಗೆಸಿ ನೀರಿನ ಸಮಸ್ಯೆ ಪರಿಹರಿಸಬೇಕು, ಬಸ್ ನಿಲ್ದಾಣದಲ್ಲಿ ನೀರು ನಿಲ್ಲದಂತೆ ಜಲ್ಲಿಯನ್ನು ಹಾಕಿ ಎತ್ತರ ಮಾಡಿ ನೀರು ಒಂದೆಡೆ ಕಾಲುವೆಗೆ ಹರಿಯುವಂತೆ ಕ್ರಮವಹಿಸಲು ಸೂಚನೆ ನೀಡಿದರು.

    ಈಗ ಪ್ರಕರಣ ದಾಖಲಾಗಿರುವ ಅಧಿಕಾರಿಗಳಿಗೆ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ ಇತ್ಯರ್ಥಪಡಿಸಿದ ವರದಿ ನೀಡಿದರೆ ಪ್ರಕರಣ ವಾಪಾಸ್ ಪಡೆಯುವುದಾಗಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

    ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಎಂ ಪಾಟೀಲ್, ಅಪರ ನಿಬಂಧಕರಾದ ಪೃಥ್ವಿರಾಜ್ ವರ್ಣೀಕರ್, ಶಿವಾಜಿ ಅನಂತ್ ನಲ್ಪಾಡೆ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ. ಹನುಮಂತಪ್ಪ, ಜಿಲ್ಲಾಧಿಕಾರಿ ಸಿ.ಎನ್ ಮೀನಾನಾಗರಾಜ್, ಜಿ.ಪಂ ಸಿಇಓ ಹೆಚ್.ಎಸ್. ಕೀರ್ತನ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

    Upalokayukta visits and inspects various parts of the city

  • ಸಂತೋಷವಾಗಿ ಬಾಳುವುದೇ ಭಾರತ ಸಂವಿಧಾನದ ಆಶಯ

    ಸಂತೋಷವಾಗಿ ಬಾಳುವುದೇ ಭಾರತ ಸಂವಿಧಾನದ ಆಶಯ

    ಚಿಕ್ಕಮಗಳೂರು:  ಸಂವಿಧಾನದ ಆಶಯದಂತೆ ಜನಸಾಮಾನ್ಯರಿಗೆ ನ್ಯಾಯಯುತವಾದ ಜೀವನವನ್ನು ಒದಗಿಸುವುದು ಸರ್ಕಾರದ ಮುಖ್ಯ ಗುರಿಯಾಗಿದೆ ಎಂದು ಗೌರವಾನ್ವಿತ ನ್ಯಾಯಮೂರ್ತಿ ಉಪಲೋಕಾಯುಕ್ತರಾದ ಕೆ.ಎನ್.ಫಣೀಂದ್ರ ಹೇಳಿದರು.

    ಇಂದು ನಗರದ ಕುವೆಂಪು ಕಲಾಮಂದಿರದಲ್ಲಿ ಸಾರ್ವಜನಿಕ ಕುಂದುಕೊರತೆಗಳ ಅಹವಾಲು ಸ್ವೀಕಾರ ಹಾಗೂ ವಿಚಾರಣೆ ಸಭೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿ ಸರ್ಕಾರ ಮೂಲಭೂತ ಸವಲತ್ತುಗಳ ಜೊತೆಗೆ ಹಕ್ಕು ಬಾಧ್ಯತೆಯನ್ನು ನೀಡಿ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸಿ ಆ ಹಕ್ಕುಗಳಿಂದ ಸಿಗುವ ಮೂಲಭೂತ ಸವಲತ್ತುಗಳನ್ನು ಪಡೆದುಕೊಳ್ಳಲು ಸರ್ಕಾರ ಶ್ರಮವಹಿಸಿ ಕಾನೂನುಗಳನ್ನು ರಚನೆ ಮಾಡಿದೆ ಎಂದು ಹೇಳಿದರು

    ಸರ್ವರಿಗೂ ಸಮಪಾಲು, ಸಮಬಾಳು ಎಂಬ ಸಂವಿಧಾನದ ಆಶೋತ್ತರದ ಅಡಿಯಲ್ಲಿ ಲೋಕಾಯುಕ್ತ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಸರ್ಕಾರವು ರೂಪಿಸಿದ ಯೋಜನೆಗಳು ಹಾಗೂ ಇತರೆ ಸೌಲಭ್ಯಗಳನ್ನು ಎಲ್ಲರಿಗೂ ದೊರಕಿಸುವ ಕಾರ್ಯವನ್ನು ಲೋಕಾಯುಕ್ತ ಸಂಸ್ಥೆ ಮಾಡುತ್ತಿದೆ ಸಮಾಜದಲ್ಲಿರುವ ಪ್ರತಿಯೊಬ್ಬರು ಗೌರವಯುತವಾಗಿ ಎಲ್ಲಾ ಸವಲತ್ತುಗಳನ್ನು ಹೊಂದಿ ಸಂತೋ?ವಾಗಿ ಬಾಳುವುದೇ ಭಾರತ ಸಂವಿಧಾನದ ಅಶೋತ್ತರ ಜೀವನ ಎಂದು ಹೇಳಿದರು.

    ಭಾರತ ಸಂವಿಧಾನದ ಮಹತ್ವ ಶಾಸಕಾಂಗ, ಕಾಯಾಂಗ ಹಾಗೂ ನ್ಯಾಯಾಂಗದ ಕಾರ್ಯ ಪ್ರಕ್ರಿಯೆಗಳನ್ನು ಮನಮುಟ್ಟುವಂತೆ ಸವಿಸ್ತಾರವಾಗಿ ತಿಳಿಸಿಕೊಟ್ಟ ಅವರು ಲೋಕಾಯುಕ್ತ ಸಂಸ್ಥೆಯ ಸ್ಥಾಪನೆ ಉದ್ದೇಶ, ಹಿನ್ನೆಲೆ, ಕಾರ್ಯವ್ಯಾಪ್ತಿ ಹಾಗೂ ಸಂಸ್ಥೆಯ ಕಾರ್ಯಮಾರ್ಗಸೂಚಿ ಪ್ರಕ್ರಿಯೆಗಳ ಮಾಹಿತಿ ನೀಡಿದರು. ಶಾಸಕಾಂಗ, ಕಾಯಾಂಗ ಮತ್ತು ನ್ಯಾಯಾಂಗದ ಕಾರ್ಯನಡೆಗಳ ಬಗ್ಗೆ ಸರ್ಕಾರದ ನಾಲ್ಕನೇ ಅಂಗವಾದ ಮಾಧ್ಯಮ ರಂಗವು ನಿರಂತರ ನಿಗಾವಹಿಸುತ್ತಿದೆ. ಯಾವುದೇ ಅಂಗಗಳಲ್ಲಿನ ಲೋಪದೋ?ಗಳನ್ನು ಪ್ರಜೆಗಳ ಮುಂದಿಟ್ಟು ಸರಿಪಡಿಸುವಂತಹ ಮಹತ್ವದ ಜವಬ್ದಾರಿಯನ್ನು ಮಾಧ್ಯಮ ಕ್ಷೇತ್ರ ನಿರ್ವಹಿಸುವುದರಿಂದ ಈ ಕ್ಷೇತ್ರದ ಪಾತ್ರ ಮಹತ್ವದ್ದು, ಆದ್ದರಿಂದ ಲೋಕಾಯುಕ್ತ ಸಂಸ್ಥೆಯ ಕಾರ್ಯ ವಿಧಾನವನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಾವೆಲ್ಲರೂ ತಲುಪಿಸಲು ಸಂಸ್ಥೆಯೊಂದಿಗೆ ಕೈಜೋಡಿಸಬೇಕು ಎಂದು ಹೇಳಿದರು.

    ಸಾರ್ವಜನಿಕರಿಗೆ ಲಿಖಿತ ಅರ್ಜಿ ಸಲ್ಲಿಸುವ ವಿಧಾನ, ದಾಖಲೆ ಸಹಿತ ಅರ್ಜಿ ಸಲ್ಲಿಕೆ ಹಾಗೂ ಯಾವ ರೀತಿಯ ಅರ್ಜಿಗಳನ್ನು ಲೋಕಯುಕ್ತಕ್ಕೆ ಸಲ್ಲಿಸಬಹುದು, ಈ ಎಲ್ಲ ವಿಚಾರಗಳ ಬಗ್ಗೆ ವಿಸ್ಕೃತವಾಗಿ ಸಾರ್ವಜನಿಕರಿಗೆ ತಿಳಿಸಿಕೊಟ್ಟ ಅವರು ಸ್ವೀಕರಿಸಿದ ಕೆಲವು ದೂರು ಅರ್ಜಿಗಳ ಬಗ್ಗೆ ಸ್ಥಳದಲ್ಲೇ ತೀರ್ಮಾನ ಕೈಗೊಂಡು ಅದಕ್ಕೆ ಸ್ಥಳದಲ್ಲೆಯೇ ಪರಿಹಾರ ನೀಡಲಾಗುವುದು ಎಂದು ಹೇಳಿದರು.

    ಅಧಿಕಾರಿಗಳು ಜನ ಸಾಮನ್ಯರ ಸಮಸ್ಯೆಯನ್ನು ಸರಿಯಾದ ರೀತಿಯಲ್ಲಿ, ನಿಯಮಾವಳಿ, ಕಾನೂನಿನ ಪ್ರಕಾರವಾಗಿ, ಸಮಯೋಚಿತವಾಗಿ ಪರಿಹಾರ ಒದಗಿಸಿಬೇಕು ಅದಲ್ಲದೇ ಅಧಿಕಾರವನ್ನು ದುರುಪಯೋಗ, ಭ್ರಷ್ಟಚಾರ ಇಂತಹ ಕಾರಣದಿಂದ ಅವರ ಮೇಲೆ ಅಸಡ್ಡೆತನ ತೋರಿಸಿದರೆ ಅಂತಹ ಅಧಿಕಾರಿಯ ಮೇಲೆ ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.

    ಸಾರ್ವಜನಿಕರು ಕಚೇರಿಗೆ ಬಂದ ಸಂದರ್ಭದಲ್ಲಿ ಅಧಿಕಾರಿಗಳು ಸ್ಪಂದಿಸಿ ಸಮಾಧಾನದಿಂದ ಅವರ ಸಮಸ್ಯೆಗಳನ್ನು ಆಲಿಸಿ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಿ ಎಂದ ಅವರು ಕರ್ನಾಟಕ ರಾಜ್ಯ ಶಾಸಕಾಂಗವು ೧೯೮೫ ರ ಕರ್ನಾಟಕ ಅಧಿನಿಯಮ ಸಂಖ್ಯೆ ೪ ರ ಅಡಿಯಲ್ಲಿ ಕಾಯಿದೆಯನ್ನು ಜಾರಿಗೊಳಿಸಿದೆ. ಆಡಳಿತ ಯಂತ್ರದಲ್ಲಿ ಭ್ರ?ಚಾರ, ಸ್ವಜನಪಕ್ಷಪಾತ ಮತ್ತು ಅಶಿಸ್ತಿನ ಪ್ರಕರಣಗಳು ಸೇರಿದಂತೆ ಆಡಳಿತಾತ್ಮಕ ಕ್ರಮಗಳ ವಿರುದ್ಧ ದೂರುಗಳ ವಿಚಾರಣೆ ನಡೆಸುವ ಮೂಲಕ ಸಾರ್ವಜನಿಕ ಆಡಳಿತ ಗುಣಮಟ್ಟವನ್ನು ಸುಧಾರಿಸಲು ಕರ್ನಾಟಕ ಲೋಕಾಯುಕ್ತ ಸಂಸ್ಥೆಯನ್ನು ರಚಿಸಿಲಾಗಿದೆ ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಎಂ ಪಾಟೀಲ್, ಅಪರ ನಿಬಂಧಕರಾದ ಪೃಥ್ವಿರಾಜ್ ವರ್ಣೀಕರ್, ಶಿವಾಜಿ ಅನಂತ ನಲ್ಪಾಡೆ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ವಿ. ಹನುಮಂತಪ್ಪ, ಜಿಲ್ಲಾಧಿಕಾರಿ ಮೀನಾನಾಗರಾಜ್ ಸಿ.ಎನ್,ಹಾಸನ ಚಿಕ್ಕಮಗಳೂರು ಜಿಲ್ಲೆಯ ಲೋಕಾಯುಕ್ತ ಪೊಲೀಸ್ ಅಧೀಕ್ಷಕಿ ಸ್ನೇಹಾ, ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್. ಕೀರ್ತನ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

    The Constitution of India aspires to live happily.

  • ದುಷ್ಟರ ಸಂಹಾರ, ಸಜ್ಜನರ ರಕ್ಷಣೆ ಮಾಡುವುದೇ ನಾಡಹಬ್ಬ ದಸರಾಉದ್ದೇಶ

    ದುಷ್ಟರ ಸಂಹಾರ, ಸಜ್ಜನರ ರಕ್ಷಣೆ ಮಾಡುವುದೇ ನಾಡಹಬ್ಬ ದಸರಾಉದ್ದೇಶ

    ಚಿಕ್ಕಮಗಳೂರು: ದುಷ್ಟರ ಸಂಹಾರ ಮಾಡಿ ಸಜ್ಜನರನ್ನು ರಕ್ಷಣೆ ಮಾಡುವ ಮಹಾ ತಾಯಿಯಾಗಿ ಚಾಮುಂಡಿ ದೇವಿಯನ್ನು ಪೂಜಿಸುವ ವಿಧಾನವೇ ನಾಡಹಬ್ಬ ದಸರಾ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.

    ಅವರು ಇಲ್ಲಿನ ಬೀಕನಹಳ್ಳಿ ಶ್ರೀ ಚಾಮುಂಡೇಶ್ವರ ಶ್ರೀಕ್ಷೇತ್ರದಲ್ಲಿ ಆರಂಭವಾದ ೭೪ನೇ ವರ್ಷದ ದಸರಾ ಮಹೋತ್ಸವನ್ನು ಉದ್ಘಾಟಿಸಿ ಮಾತನಾಡಿದರು.
    ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ನಾಡಹಬ್ಬ ದಸರಾ ಜನರ ಮನ ಸೆಳೆಯಿತು. ಇದು ಹಿಂದುಗಳ ಹಬ್ಬವಾಗಿದ್ದು, ವಿಜಯನಗರ ಪಥನವಾದ ನಂತರ ಇದನ್ನು ವೈಭವವಾಗಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ ಎಂದರು.

    ಮೈಸೂರಿನಲ್ಲಿ ನಾಡದೇವತೆಯಾಗಿ ಚಾಮುಂಡೇಶ್ವರಿಯನ್ನು ಆಚರಿಸುತ್ತೇವೆ. ಇದೊಂದು ಸಾಂಸ್ಕೃತಿಕ ಉತ್ಸವವಾಗದೆ ದೇವಿ ಆರಾಧನೆಯನ್ನು ಒಂದೊಂದು ದಿನ ಒಂದೊಂದು ರೀತಿಯಲ್ಲಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ ಎಂದು ವಿವರಿಸಿದರು. ಇಂದು ರಾಕ್ಷಸರಿಲ್ಲ, ರಾಕ್ಷಸಿ ಮನಸ್ಥಿತಿಯ ಜನರಿದ್ದಾರೆ. ಮಲಗಿದ್ದ ಹಸುವಿನ ಕೆಚ್ಚಲು ಕುಯ್ಯುತ್ತಾರೆ. ಎಲ್ಲಾ ದೇವತೆಗಳು ವಾಸಮಾಡುವುದೇ ಗೋವಿನಲ್ಲಿ ಎಂದು ಹಿಂದೂಗಳು ಭಾವಿಸಿದ್ದೇವೆ ಎಂದರು.

    ಇಟ್ಟರೆ ಸಗಣಿಯಾದೆ, ತಟ್ಟಿದರೆ ಬೆರಣಿಯಾದೆ. ಸುಟ್ಟರೆ ನುಸುಳಿಗೆ ವಿಭೂತಿಯಾದೆ, ತಟ್ಟದೆ ಹಾಕಿದರೆ ಗೊಬ್ಬರವಾದೆ ಎಂಬಂತೆ ಗೋವುಗಳನ್ನು ನಾವು ಪೂಜಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಇಂದಿನ ವಿಷಮ ಪರಿಸ್ಥಿತಿಯಲ್ಲಿ ಗಂಭೀರವಾಗಿ ಯೋಚಿಸುವ ಅಗತ್ಯ ಇದೆ ಎಂದು ಹೇಳಿದರು. ರಾಜಕಾರಣ ಕೇವಲ ಅಧಿಕಾರ ಬಳಕೆಗೆ ಸೀಮಿತವಾಗದೆ ಅಧಿಕಾರ ಗಳಿಕೆಯಾಗಿ ಅಭಿವೃದ್ಧಿಗೂ ಬಳಕೆಯಾಗಬೇಕು. ಸಮಾಜ ಮತ್ತು ದೇಶವನ್ನು ಬಲಗೊಳಿಸಲು ಉಪಯೋಗವಾಗಬೇಕೆಂದು ಸಲಹೆ ನೀಡಿದರು.

    ಜಾತಿಗಣತಿ ಹೆಸರಿನಲ್ಲಿ ಹಿಂದೂಗಳನ್ನು ಒಡೆಯುವ ಕೆಲಸಗಳಾಗಬಾರದು. ವಿವಿಧತೆ ಇದೆ, ಅದಕ್ಕೆ ತಕ್ಕ ಸೂತ್ರವೂ ಇದೆ. ದೇವನೊಬ್ಬ ನಾಮ ಹಲವು ಎಂದು ಭಾವಿಸುತ್ತೇವೆ. ಹಲವು ಹೆಸರಿನಲ್ಲಿ ದೇವತೆಯನ್ನು ತಾಯಿ ಚಾಮುಂಡೇಶ್ವರಿ ಒಬ್ಬಳೇ ಎಂದು ಪೂಜಿಸುತ್ತೇವೆ ಎಂದರು. ಭಿನ್ನತೆ ಇದೆ. ಅಂದರೆ ಏಕತೆಯ ಸೂತ್ರವೂ ಇದ್ದು, ಈ ಏಕತೆಗೆ ಧಕ್ಕೆ ತರುವಂತಹ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಸಮಸ್ತ ಹಿಂದೂಗಳ ಭಕ್ತಿಯ ಸ್ಥಳ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಬಗ್ಗೆ ಅಪಕೀರ್ತಿ, ಅಪನಂಬಿಕೆ ಮೂಡಿಸುತ್ತಿರುವುದು ಭಕ್ತಿಗೆ ಭಂಗ ತರುವ ಷಡ್ಯಂತ್ರ ಎಂದು ಖಂಡಿಸಿದರು.

    ದುಷ್ಟಶಕ್ತಿ, ದ್ವೇಷ ಮನಸ್ಸು ನಾಶವಾಗಬೇಕು, ಇದಕ್ಕೆ ಎಲ್ಲರೂ ಒಗ್ಗೂಡುವ ಅವಶ್ಯಕತೆ ಇದೆ ಎಂದ ಅವರು, ತಾಯಿ ಚಾಮುಂಡೇಶ್ವರಿ ಸಜ್ಜನ ಶಕ್ತಿ ಒಟ್ಟು ಮಾಡಲಿ, ದುರ್ಜನ ಶಕ್ತಿ ನಾಶ ಮಾಡಲಿ, ರಾಷ್ಟ್ರಘಾತುಕ ಶಕ್ತಿಯಾಗುವ ಎಲ್ಲವೂ ನಾಶವಾಗಲಿ ಎಂದು ಪ್ರಾರ್ಥಿಸುತ್ತೇನೆಂದರು. ದಸರಾ ಕೇವಲ ಸಾಂಸ್ಕೃತಿಕ ಉತ್ಸವವಲ್ಲ, ಕಲೆ, ಸಾಹಿತ್ಯ, ಸಂಸ್ಕೃತಿ ಜೊತೆಗೆ ಸಾಮರ್ಥ್ಯದ ಶಕ್ತಿ ಪ್ರದರ್ಶನ ಕೂಡ ನಡೆಯುತ್ತಿದ್ದು, ಕುಸ್ತಿ ಪಂದ್ಯ ನಡೆಯುತ್ತವೆ. ಕುಸ್ತಿಪಟುಗಳನ್ನು ದೇಶ ಸೇವೆ ಸಮರ್ಪಣೆಗೆ ಬಳಸಿಕೊಳ್ಳಲಾಗುತ್ತಿತ್ತು. ಕುಸ್ತಿ ಸ್ಪರ್ಧೆ ಹಿಂದೆ ಲೋಕವಿಖ್ಯಾತವಾಗಿತ್ತು ಎಂದರು.

    ಇಸ್ಲಾಂ ಹೆಸರಿನಲ್ಲಿ ಹತ್ತಾರು ಕೋಟಿ ಜನರ ಮಾರಣಹೋಮ, ದೇವಾಲಯಗಳ ನಾಶ, ದೇಶ ತುಂಡಾಯಿತು, ಹತ್ಯಾಚಾರ ನಡೆಯಿತು. ಇದಾಗಬಾರದು ಎಂಬುದು ನಮ್ಮ ಚಿಂತನೆ. ಮುಂದೆ ಬಲತ್ಕಾರವಾಗಿ ಊರು ತೊರೆಯುವ ಸ್ಥಿತಿ ಬಂದರೆ ಅದಕ್ಕಿಂತ ಸಂಕಷ್ಟ ಇನ್ನೊಂದಿಲ್ಲ. ಈ ರೀತಿ ೧೯೪೭ರ ಆ.೧೪ ರಂದು ಕೋಟ್ಯಾಂತರ ಜನ ಊರು ತೊರೆಯಬೇಕಾಯಿತು. ಲಕ್ಷಾಂತರ ಜನರು ಕತ್ತಿಗೆ ಬಲಿಯಾಗಬೇಕಾಯಿತು. ಅಂತಹ ಪರಿಸ್ಥಿತಿ ಮತ್ತೊಮ್ಮೆ ಮರುಕಳಿಸಬಾರದು ಎಂದು ಎಚ್ಚರಿಸಿದರು.

    ನಾಡದೇವತೆ ಮತ್ತು ನಾಡಿನ ಬಗ್ಗೆ ಶ್ರದ್ಧಾಭಕ್ತಿ ಇರುವವರು ನಾಡಹಬ್ಬ ದಸರಾವನ್ನು ಉದ್ಘಾಟನೆ ಮಾಡಲಿ, ಅದಿಲ್ಲದೆ ಉದ್ಘಾಟಿಸಿದರೆ ಅದಕ್ಕೆ ಬೆಲೆ ಮತ್ತು ನೈತಿಕತೆ ಇರುವುದಿಲ್ಲ ಎಂದು ಹೇಳಿದ ಅವರು, ನಮ್ಮದು ಎಂಬ ಭಾವನೆಯಿಂದ ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಎಲ್ಲರೂ ಬರಲಿ. ಆದರೆ, ಧಾರ್ಮಿಕ ಭಾವನೆ ಬರದಿದ್ದರೆ ಬೆಲೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಎಳೆಯ ವಯಸ್ಸಿನಲ್ಲೇ ದ್ವೇಷ ಭಾವನೆ ಬಿತ್ತಿದ ಪರಿಣಾಮ ಜಗತ್ತಿನ ನೆಮ್ಮದಿ ಕೆಡಿಸಿ ಮತಾಂಧತೆಯ ತತ್ವ ದೇಶವನ್ನು ತುಂಡುಮಾಡಿದೆ. ಹಿಂದುತ್ವದ ಈ ಕಾರಣಕ್ಕೆ ರಾಜಕೀಯಕ್ಕೆ ಬಂದಿದ್ದೇವೆಯೇ ಹೊರತು ಅಧಿಕಾರಕ್ಕಾಗಿ ಅಲ್ಲ ಎಂದು ಹೇಳಿದರು.

    ಮಾಜಿ ಜಿ.ಪಂ ಉಪಾಧ್ಯಕ್ಷ ಬಿ.ಜಿ ಸೋಮಶೇಖರ್ ಮಾತನಾಡಿ, ನಾಲ್ಕುನೂರು ವರ್ಷಗಳ ಪರಂಪರೆ ಇತಿಹಾಸ ಇರುವ ನಾಡಹಬ್ಬ ದಸರಾ ಮಹೋತ್ಸವ ಮೈಸೂರಿನಲ್ಲಿ ವಿಜೃಂಭಣೆಯಿಂದ ನಡೆಯುತ್ತಿದ್ದು, ಅದರ ಭಾಗವಾಗಿ ಬೀಕನಹಳ್ಳಿ ಸುಕ್ಷೇತ್ರ ಚಾಮುಂಡೇಶ್ವರಿ ಸನ್ನಿದಾನದಲ್ಲಿ ದಸರಾ ನಡೆಯುತ್ತಿದ್ದು, ದುಷ್ಟರ ಸಂಹಾರ, ಶಿಷ್ಟರ ರಕ್ಷಣೆ ಇದರ ಉದ್ದೇಶ ಎಂದು ಶುಭ ಹಾರೈಸಿದರು.

    ಈ ಸಂದರ್ಭದಲ್ಲಿ ರಾಜ್ಯ ರೈತ ಮೊರ್ಚಾ ಕಾರ್ಯದರ್ಶಿ ಹೆಚ್.ಸಿ ಕಲ್ಮುರಡಪ್ಪ, ಶ್ರೀ ಚಾಮುಂಡೇಶ್ವರಿ ಸುಕ್ಷೇತ್ರ ಅಧ್ಯಕ್ಷರಾದ ಬಿ.ಪಿ ನಂಜಪ್ಪ, ಉಪಾಧ್ಯಕ್ಷರಾದ ಹೆಚ್, ಗುರುಬಸಪ್ಪ, ಕಾರ್ಯದರ್ಶಿ ಬಿ.ಎಂ ಯೋಗಾನಂದ್, ಖಜಾಂಚಿ ಬಿ.ಹೆಚ್ ಸೋಮೇಗೌಡ, ಸದಸ್ಯರುಗಳಾದ ಬಿ.ಹೆಚ್ ನಂಜುಂಡಪ್ಪ, ಬಿ.ಸಿ ಗುರುಸಿದ್ಧಪ್ಪ, ಬಿ.ವಿ ಯತಿರಾಜ್, ಎಂ. ಲೋಕನಾಥ್, ಶ್ರೀ ರಂಗಪ್ಪ, ಹೆಚ್.ಪಿ ಮಂಜೇಗೌಡ, ಬಿ.ಎಂ ನಾಗರಾಜ್, ಬಿ.ಎಸ್ ಪರಮೇಶ್ವರಪ್ಪ, ಬಿ.ಹೆಚ್ ವಿಜಯಕುಮಾರ್, ಚಂದ್ರಚಾರ್, ಎಸ್.ಎನ್ ಲಲಿತಾ ಬಸವರಾಜ್ ಉಪಸ್ಥಿತರಿದ್ದರು.

    The purpose of the national festival of Dussehra is to destroy the wicked and protect the righteous.

  • ಅಸಂಘಟಿತ ಕಾರ್ಮಿಕರ ಸೌಲಭ್ಯ ಸದುಪಯೋಗಕ್ಕೆ ಸಚಿವ ಲಾಡ್ ಕರೆ

    ಅಸಂಘಟಿತ ಕಾರ್ಮಿಕರ ಸೌಲಭ್ಯ ಸದುಪಯೋಗಕ್ಕೆ ಸಚಿವ ಲಾಡ್ ಕರೆ

    ಚಿಕ್ಕಮಗಳೂರು: ಅಸಂಘಟಿತ ಕಾರ್ಮಿಕರಿಗೆ ಸರ್ಕಾರದಿಂದ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಪ್ರತಿಯೊಬ್ಬ ಅಸಂಘಟಿತ ಕಾರ್ಮಿಕರು ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ಎಂದು ಕಾರ್ಮಿಕ ಸಚಿವರಾದ ಶ್ರೀ ಸಂತೋಷ್ ಎಸ್.ಲಾಡ್ ತಿಳಿಸಿದರು.

    ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ಇಂದು ನಗರದ ವಿಜಯಪುರದ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ಅರಿವು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

    ಅಸಂಘಟಿತ ಕಾರ್ಮಿಕರಿಗೆ ಸೂಕ್ತ ಭದ್ರತೆ ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ. ಜೊತೆಗೆ ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ಜನಪದ ಕಲೆ, ಹೀಗೆ ವಿವಿಧ ರೀತಿಯಲ್ಲಿ ತೊಡಗಿಸಿಕೊಂಡಿರುವ ಅಸಂಘಟಿತ ಕಾರ್ಮಿಕರಿಗೂ ಸೌಲಭ್ಯ ಜಾರಿಗೊಳಿಸಲಾಗಿದೆ ಎಂದು ಸಚಿವರು ವಿವರಿಸಿದರು.

    ಆಟೋ ರಿಕ್ಷಾ ಚಾಲಕರು, ಪೇಯಿಂಟಿಂಗ್ ಮಾಡುವವರು ಸೇರಿದಂತೆ ಹಲವರಿಗೆ ಕಾರ್ಮಿಕ ಕಾಯ್ದೆ ಜಾರಿಗೊಳಿಸಲಾಗಿದ್ದು, ಅಸಂಘಟಿತ ಕಾರ್ಮಿಕರು ಅಪಘಾತದಲ್ಲಿ ಮೃತರಾದಲ್ಲಿ ೫ ಲಕ್ಷ ರೂ.ವರೆಗೂ ಪರಿಹಾರ ವಿತರಿಸಲಾಗುತ್ತದೆ ಎಂದ ಅವರು, ಸ್ವಿಗ್ಗಿ, ಜೊಮೆಟೋಗಳಂತಹ ಸಂಸ್ಥೆಯಲ್ಲಿ ಆಹಾರ ಸರಬರಾಜು ಮಾಡುವ ಹಾಗೂ ಇ-ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್, ಪ್ಲಿಪ್‌ಕಾರ್ಟ್, ಪೋರ್ಟಲ್, ಫಾರ್ಮಸಿ, ಬ್ಲಿಂಕಿಟ್, ಬಿಗ್ ಬಾಸ್ಕೆಟ್, ಡೊಮಿನಾಜ್ ಮತ್ತಿತರ ಸಂಸ್ಥೆಗಳಲ್ಲಿ ಡೆಲಿವರಿ ವೃತ್ತಿಯಲ್ಲಿ ತೊಡಗಿಸಿಕೊಂಡವರೆಲ್ಲರೂ ಅಸಂಘಟಿತ ಕಾರ್ಮಿಕರಾಗಿದ್ದಾರೆ ಎಂದು ತಿಳಿಸಿದರು.

    ದೇಶದಲ್ಲಿ ತಲಾ ಆದಾಯದಲ್ಲಿ ಕರ್ನಾಟಕವೇ ಮೊದಲ ಸ್ಥಾನದಲ್ಲಿದೆ. ಜಿಎಸ್‌ಟಿ ಸಂಗ್ರಹದಲ್ಲೂ ಮುಂಚೂಣಿಯಲ್ಲಿದ್ದೇವೆ. ಇದಕ್ಕೆ ಗ್ಯಾರಂಟಿ ಯೋಜನೆಗಳ ಯಶಸ್ಸು ಕಾರಣ. ಆಶಾ ದೀಪ ಕಾರ್ಯಕ್ರಮದಲ್ಲಿ ಎಸ್‌ಸಿ, ಎಸ್‌ಟಿ ವರ್ಗದವರಿಗೆ ಕೆಲಸ ನೀಡುವವರಿಗೆ ರೂ. ೭೫೦೦ ರವರೆಗೆ ನೆರವು ನೀಡಲಾಗುತ್ತಿದೆ. ಹೊರಗುತ್ತಿಗೆ ನೌಕರರು ಸೊಸೈಟಿ ಮೂಲಕ ಕಾರ್ಯ ನಿರ್ವಹಿಸಲಿದ್ದು, ಸಂಬಳ ಸಮಸ್ಯೆ ತಪ್ಪಲಿದೆ. ಮುಂದಿನ ದಿನಗಳಲ್ಲಿ ಮನೆ ಕೆಲಸ ಕಾರ್ಮಿಕರಿಗೆ ಕನಿಷ್ಠ ವೇತನ ಕಾನೂನು ಜಾರಿಗೆ ತರಲಾಗುವುದು ಎಂದು ಹೇಳಿದರು.

    ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಕರ್ನಾಟಕ ರಾಜ್ಯ ಸರ್ಕಾರವು ಅಸಂಘಟಿತ ವರ್ಗಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಮೂಲಕ “ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ”ಯನ್ನು ಅನು?ನಗೊಳಿಸಲಾಗುತ್ತಿದೆ ಎಂದರು.

    ಪ್ರಾರಂಭಿಕವಾಗಿ ೨೬ ವರ್ಗಗಳ ಅಸಂಘಟತ ಕಾರ್ಮಿಕರನ್ನು ನೋಂದಾಯಿಸಲಾಗುತ್ತಿತ್ತು. ಪ್ರಸ್ತುತ ಹೊಸದಾಗಿ ಹಿಂದುಳಿದ ವರ್ಗಗಳ ಪ್ರವರ್ಗ-೧, ೨ಎ, ೩ಎ ಮತ್ತು ೩ಬಿಗೆ ಸೇರಿದ ಪಾರಂಪರಿಕ ವೃತ್ತಿಯಲ್ಲಿ ತೊಡಗಿರುವ ೩೮ ವರ್ಗಗಳು ಹಾಗೂ ಹಿಂದುಳಿದ ವರ್ಗಗಳ ಅಲೆಮಾರಿ ಹಾಗೂ ಅರೆಅಲೆಮಾರಿ ಪಂಗಡದ ಕುಲಕಸುಬಿನಲ್ಲಿ ತೊಡಗಿರುವ ೨೭ ವರ್ಗಗಳ ಕಾರ್ಮಿಕರು ಸೇರಿದಂತೆ ಒಟ್ಟಾರೆ ೯೧ ವರ್ಗಗಳ ಕಾರ್ಮಿಕರನ್ನು ಉಚಿತವಾಗಿ ನೋಂದಾಯಿಸಿ ಸೌಲಭ್ಯಗಳನ್ನೊಳಗೊಂಡ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದ್ದು, ರಾಜ್ಯದಲ್ಲಿ ಸುಮಾರು ೩೫ ಲಕ್ಷ ಕಾರ್ಮಿಕರು ಇರುವುದಾಗಿ ಅಂದಾಜಿಸಲಾಗಿದೆ ಎಂದು ತಿಳಿಸಿದರು.

    ಕರ್ನಾಟಕ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗಿಗ್ ಕಾರ್ಮಿಕರಿಗೆ ವಿಮಾ ಯೋಜನೆಯನ್ನು ಜಾರಿಗೆ ತರಲಾಗಿದ್ದು, ದೇಶದಲ್ಲಿಯೇ ಮೊದಲು ಜಾರಿಗೆ ರಾಜ್ಯ ನಮ್ಮದು. ಅಪಘಾತದಿಂದ ಮರಣ ಹೊಂದಿದಲ್ಲಿ ವಿಮಾ ಪರಿಹಾರ ರೂ. ೨ ಲಕ್ಷ ಹಾಗೂ ಜೀವ ವಿಮಾ ರೂ. ೨ ಲಕ್ಷ ಸೇರಿ ಒಟ್ಟು ರೂ. ೪ ಲಕ್ಷಗಳು, ಅಪಘಾತದಿಂದ ಶಾಶ್ವತ ದುರ್ಬಲತೆ ಹೊಂದಿದಲ್ಲಿ ರೂ. ೨ ಲಕ್ಷಗಳವರೆಗೆ ಜೊತೆಗೆ ಆಸ್ಪತ್ರೆ ವೆಚ್ಚ ಮರುಪಾವತಿ ರೂ. ೧ ಲಕ್ಷಗಳವರೆಗೆ ಹಾಗೂ ಜೀವ ವಿಮಾ ರೂ. ೨ ಲಕ್ಷಗಳು ನೀಡಲಾಗುತ್ತದೆ ಎಂದು ಹೇಳಿದರು.

    ಶಾಸಕರಾದ ಹೆಚ್.ಡಿ.ತಮ್ಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ೧೦೯ ಅಸಂಘಟಿತ ಕಾರ್ಮಿಕರಿಗೆ ಅಪಘಾತ, ಸಹಜ ಮರಣವಾದವರಿಗೆ ಪರಿಹಾರ ಈ ರೀತಿಯ ಯೋಜನೆಗಳನ್ನು ನೀಡುವ ಮುಖಾಂತರ ಅವರ ಕುಟುಂಬದ ಭದ್ರತೆಯನ್ನು ಕಾಪಾಡಲಾಗಿದೆ ಎಂದ ಅವರು ೨೬ ಅಸಂಘಟಿತ ಕಾರ್ಮಿಕರ ವರ್ಗಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.

    ಕಾರ್ಮಿಕ ಇಲಾಖೆ ವತಿಯಿಂದ ಈ ಅಸಂಘಟಿತ ಕಾರ್ಮಿಕರಿಗೆ ಖಾಸಗಿ ಅಥವಾ ಸ್ವಂತ ವಾಹನ ಮಾಲೀಕರು ಸೇರಿದಂತೆ ಎಲ್ಲಾ ರೀತಿಯ ಕೆಲಸಗಾರರಿಗೆ ಆಕಸ್ಮಿಕ ಮರಣ ಸಂಭಾವ್ಯ ಪ್ರಕರಣಗಳಲ್ಲಿ ರೂ. ೫ ಲಕ್ಷ ಪರಿಹಾರವನ್ನು ನೀಡಲಾಗುತ್ತದೆ ಎಂದು ಹೇಳಿದರು.

    ನಮ್ಮ ಜಿಲ್ಲೆಯಲ್ಲಿ ಈಗಾಗಲೇ ೭೮,೧೩೨ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದಾರೆ. ಕಾರ್ಮಿಕ ಮಂಡಳಿಯಿಂದ ೩೧,೪೭೨ ಜನರಿಗೆ ಒಟ್ಟು ರೂ. ೫೬.೯೮ ಕೋಟಿಯನ್ನು ಕಾರ್ಮಿಕ ಇಲಾಖೆಯಿಂದ ನೇರವಾಗಿ ಕಾರ್ಮಿಕರ ಖಾತೆಗಳಿಗೆ ವರ್ಗಾಯಿಸಲಾಗಿದೆ. ಜೊತೆಗೆ ೨೧,೨೬೨ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ರೂ.೧೯.೯೫ ಕೋಟಿಯನ್ನು ನೀಡಲಾಗಿದೆ. ವೈದ್ಯಕೀಯ ಸೇವೆಗಾಗಿ ೩೮೧ ಫಲಾಭವಿಗಳಿಗೆ ರೂ.೧.೪೯ ಕೋಟಿಯ ನೆರವು ನೀಡಲಾಗಿದೆ ಎಂದರು.

    ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ ಅಸಂಘಟಿತ ವಲಯವನ್ನು ಗುರುತಿಸಿ ಅವರಿಗೆ ಜೀವನಕ್ಕೆ ಭದ್ರತೆ ಹಾಗೂ ವಿಶ್ವಾಸವನ್ನು ತೋರಿಸುವುದು ಒಂದು ಉತ್ತಮವಾದ ಕಾರ್ಯ. ವಿವಿಧ ವೃತ್ತಿಗಳಲ್ಲಿ ತೊಡಗಿರುವ ಅಸಂಘಟಿತ ಕಾರ್ಮಿಕರನ್ನು ಸಂಘಟಿಸುವುದು ಸಾಮಾನ್ಯದ ಸಂಗತಿಯಲ್ಲ. ಅವರಿಗೆ ಮಾರ್ಗದರ್ಶನ ನೀಡುವುದು, ಅಗತ್ಯ ಸಹಾಯ ನೀಡುವುದು, ಆರೋಗ್ಯದ ರಕ್ಷಣೆ ಜೊತೆಗೆ ಅವರ ಕುಟುಂಬದ ಭದ್ರತೆ, ಅಪಘಾತವಾದರೆ. ಅನಾರೋಗ್ಯ ಆಕಸ್ಮಿಕ ಮರಣ ಹೊಂದಿದರೆ ಆ ಕುಟುಂಬಕ್ಕೆ ಭದ್ರತೆ ಒದಗಿಸಲು ಮುಂದಾಗಿರುವ ಈ ಕಾರ್ಯಕ್ರಮ ಉತ್ತಮವಾದುದು ಎಂದು ತಿಳಿಸಿದರು.

    ಪ್ರತಿಯೊಬ್ಬ ಶ್ರಮಜೀವಿ ಕಾರ್ಮಿಕ ಇಲಾಖೆಯ ಅಧೀನದಲ್ಲಿ ಬರುತ್ತಾರೆ. ಕೆಲಸ ಮಾಡುವಂತಹ ಪ್ರತಿಯೊಬ್ಬರೂ ಅವರ ವೇತನ ಹೆಚ್ಚು ಕಡಿಮೆ ಇದ್ದರೂ ಕೂಡ ಶ್ರಮ ವಹಿಸುವವರು ಕಾರ್ಮಿಕ ಇಲಾಖೆಯ ವ್ಯಾಪ್ತಿಗೆ ಬರುತ್ತಾರೆ. ಅದು ಬಹುಶಃ ವೇತನ ಎನ್ನುವುದು ಉನ್ನತ ಹುದ್ದೆಯಿಂದ ಹಿಡಿದು ಕಟ್ಟ ಕಡೆಯ ಮನು?ನವರೆಗೂ ಪ್ರತಿಯೊಬ್ಬ ಶ್ರಮಜೀವಿ ಕಾರ್ಮಿಕ ಇಲಾಖೆಯ ವ್ಯಾಪ್ತಿಗೆ ಒಳಪಡಲಿದ್ದಾರೆ ಎಂದು ಹೇಳಿದರು.

    ತರೀಕೆರೆ ಶಾಸಕ ಜಿ.ಹೆಚ್.ಶ್ರೀನಿವಾಸ್ ಮಾತನಾಡಿದರು. ಕಾರ್ಮಿಕ ಇಲಾಖೆಯ ಆಯುಕ್ತ ಹೆಚ್.ಎನ್.ಗೋಪಾಲಕೃಷ್ಣ ಸಂವಿಧಾನ ಪೀಠಿಕೆ ಬೋಧಿಸಿದರು. ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್, ಭದ್ರಾ ಕಾಡಾ ಅಧ್ಯಕ್ಷರಾದ ಡಾ.ಕೆ.ಪಿ.ಅಂಶುಮಂತ್, ಕ.ರಾ.ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷರಾದ ಬಿ.ಹೆಚ್.ಹರೀಶ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್ ಅಹಮ್ಮದ್, ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಸಿನ್, ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ, ಜಂಟಿ ಕಾರ್ಮಿಕ ಆಯುಕ್ತ ರವಿಕುಮಾರ್ ಮುಂತಾದವರು ಉಪಸ್ಥಿತರಿದ್ದರು.

    Minister Lad calls for proper utilization of facilities for unorganized workers

  • ಪಿಳ್ಳೇನಹಳ್ಳಿ ಗ್ರಾ.ಪಂ ಗೆ 1.48 ಕೋಟಿ ಅನುದಾನ ಬಿಡುಗಡೆ

    ಪಿಳ್ಳೇನಹಳ್ಳಿ ಗ್ರಾ.ಪಂ ಗೆ 1.48 ಕೋಟಿ ಅನುದಾನ ಬಿಡುಗಡೆ

    ಚಿಕ್ಕಮಗಳೂರು: ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಪಿಳ್ಳೇನಹಳ್ಳಿ ಗ್ರಾಮ ಪಂಚಾಯಿತಿಗೆ ೧.೪೮ ಕೋಟಿ ರೂ ಅನುದಾನ ನೀಡಲಾಗಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು.

    ಅವರು ಇಂದು ಕ್ಷೇತ್ರದ ಬ್ಯಾಡರಹಳ್ಳಿ, ಗಂಗಬಸವನಹಳ್ಳಿ ಗ್ರಾಮಗಳ ಲಕ್ಷ್ಮಿ ದೇವಸ್ಥಾನಕ್ಕೆ ತಲಾ ೫ ಲಕ್ಷ ರೂ ಚೆಕ್ ವಿತರಿಸಿ ಮಾತನಾಡಿ ೧೨ನೇ ಶತಮಾನದಲ್ಲಿ ಬಸವಣ್ಣ, ೧೫ನೇ ಶತಮಾನದಲ್ಲಿ ಕನಕದಾಸರು, ೧೯ನೇ ಶತಮಾನದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಸಮ ಸಮಾಜ ನಿರ್ಮಾಣ ಮಾಡಬೇಕೆಂಬ ಪರಿಕಲ್ಪನೆಯ ಆಶಯದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಡವರ ಅಭಿವೃದ್ಧಿಗೆ ಅನುದಾನ ನೀಡುತ್ತಿದ್ದಾರೆಂದು ಶ್ಲಾಘಿಸಿದರು.

    ಪಿಳ್ಳೇನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಗಂಗಬಸವನಹಳ್ಳಿ, ಬ್ಯಾಡರಹಳ್ಳಿ ಭಾಗದ ಚೆಕ್‌ಡ್ಯಾಂ ನಿರ್ಮಾಣಕ್ಕೆ ಶಾಸಕರ ಅನುದಾನದಲ್ಲಿ ೩೦ ಲಕ್ಷ ರೂ ನೀಡಲಾಗಿದೆ. ಕಾಂಕ್ರೀಟ್ ರಸ್ತೆಗೆ ೧೦ ಲಕ್ಷ ರೂ, ಬಾಕ್ಸ್ ಚರಂಡಿಗೆ ೭ ಲಕ್ಷ ರೂ, ಶಾಲಾ ಶೌಚಾಲಯ ದುರಸ್ಥಿಗೆ ತಾಲ್ಲೂಕು ಪಂಚಾಯತ್ ಅನುದಾನದಲ್ಲಿ ೧.೫೦ ಲಕ್ಷ ರೂ ನೀಡಿದ್ದೇವೆ ಎಂದು ವಿವರಿಸಿದರು.

    ಬಡವರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ರಾಜ್ಯಸರ್ಕಾರ ಅತೀ ಹೆಚ್ಚು ಹಣವನ್ನು ಮೀಸಲಿಟ್ಟು, ಮುರಾರ್ಜಿ, ಅಂಬೇಡ್ಕರ್, ದೇವರಾಜ್ ಅರಸು ವಸತಿ ನಿಲಯಗಳ ಮೂಲಕ ಶಿಕ್ಷಣ ನೀಡುತ್ತಿದ್ದು, ಇದನ್ನು ಪೋಷಕರು ತಮ್ಮ ಮಕ್ಕಳು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಮನವಿ ಮಾಡಿದರು.

    ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ ಮಾತನಾಡಿ, ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಗಂಗಬಸವನಹಳ್ಳಿ ಮತ್ತು ಬ್ಯಾಡರಹಳ್ಳಿಗೆ ಲಕ್ಷ್ಮಿ ದೇವಸ್ಥಾನಕ್ಕೆ ರಾಜ್ಯಸರ್ಕಾರ ತಲಾ ೫ ಲಕ್ಷ ರೂ ಹಣ ನೀಡಿದ್ದು, ಇದನ್ನು ಮನಗಂಡು ಮುಂಬರುವ ಗ್ರಾ.ಪಂ, ತಾ.ಪಂ, ಜಿ.ಪಂ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿ ಮತನೀಡಬೇಕೆಂದು ವಿನಂತಿಸಿದರು.

    ಗ್ರಾಮೀಣ ಭಾಗದ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಕೊಡಿಸುವಲ್ಲಿ ಪೋಷಕರು ಮುಂದಾಗಬೇಕೆಂದು ಕರೆನೀಡಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯೆ ಸೌಂದರ್ಯ ಜಗದೀಶ್, ಲೋಕೇಶ್, ಗಣೇಶ್, ಈಶ್ವರ್‌ಗೌಡ, ಜಗದೀಶ್, ಕೆಂಚಪ್ಪ ಮತ್ತಿತರರು ಉಪಸ್ಥಿತರಿದ್ದರು.

    1.48 crore grant released to Pillenahalli Gram Panchayat