Category: ಚಿಕ್ಕಮಗಳೂರು

  • ನಗರಸಭೆ ಮಳಿಗೆ ಹರಾಜು-ಸ್ವಂತ ಜೀವನ ನಿರ್ವಹಣೆಗೆ ಬಳಸಬೇಕು

    ನಗರಸಭೆ ಮಳಿಗೆ ಹರಾಜು-ಸ್ವಂತ ಜೀವನ ನಿರ್ವಹಣೆಗೆ ಬಳಸಬೇಕು

    ಚಿಕ್ಕಮಗಳೂರು: ನಗರಸಭೆ ವತಿಯಿಂದ ನಗರದಲ್ಲಿ ನಿರ್ಮಿಸಲಾಗಿರುವ ಮಳಿಗೆಗಳನ್ನು ಸಾರ್ವಜನಿಕರು ಹರಾಜು ಪ್ರಕ್ರಿಯೆ ಮೂಲಕ ಪಡೆದುಕೊಂಡಿದ್ದು, ಮಳಿಗೆಯನ್ನು ಒಳಬಾಡಿಗೆಗೆ ನೀಡದೇ ಸರ್ಕಾರದ ಆದೇಶದಂತೆ ಸ್ವಂತ ಜೀವನ ನಿರ್ವಹಣೆಗೆ ಮಾತ್ರ ಬಳಸಬೇಕೆಂದು ನಗರಸಭಾಧ್ಯಕ್ಷೆ ಸುಜಾತ ಶಿವಕುಮಾರ್ ತಿಳಿಸಿದರು.

    ಅವರು ಇಂದು ಕೆ.ಎಂ ರಸ್ತೆ ಕತ್ರಿಮಾರಮ್ಮ ದೇವಸ್ಥಾನದ ಹತ್ತಿರ ಹೊಸದಾಗಿ ನಿರ್ಮಿಸಿರುವ ಮಳಿಗೆಗಳು ಮತ್ತು ಡಾ. ಬಿ.ಆರ್. ರಸ್ತೆ ಹಾಗೂ ಕೆ.ಎಂ ರಸ್ತೆಯಲ್ಲಿರುವ ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ಮಾತನಾಡಿದರು.

    ಇಂದು ಹರಾಜಿನಲ್ಲಿ ಪಡೆದುಕೊಂಡಿರುವುದನ್ನು ಹೊರತುಪಡಿಸಿ ಉಳಿದ ಮಳಿಗೆಗಳನ್ನು ಮುಂದಿನ ದಿನಗಳಲ್ಲಿ ಹರಾಜು ಮಾಡಲಾಗುವುದು. ನಾಳೆ (ಮೇ.೭) ರಂದು ಬೀದಿಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ನಗರಸಭೆ ಆವರಣದಲ್ಲಿ ನಿರ್ಮಿಸಿರುವ ಫುಡ್‌ಕೋರ್ಟ್‌ನ ಆಹಾರ ಮಳಿಗೆಗಳನ್ನು ಹರಾಜಿನಲ್ಲಿ ಭಾಗವಹಿಸಿ ಪಡೆಯಬಹುದಾಗಿದೆ ಎಂದರು.

    ಹಾಲಿ ೪೮ ಜನ ಬೀದಿಬದಿ ವ್ಯಾಪಾರಿಗಳ ಪಟ್ಟಿ ಮಾಡಲಾಗಿದ್ದು, ಅವರು ಹರಾಜಿನಲ್ಲಿ ಭಾಗವಹಿಸದಿದ್ದರೆ ಸಾರ್ವಜನಿಕರಿಗೆ ಅವಕಾಶ ನೀಡಲಾಗುವುದು. ಈ ಸಂಬಂಧ ಜಿಲ್ಲಾಧಿಕಾರಿಗಳು, ತಾವು ಪೌರಾಯುಕ್ತರು ಸಭೆ ನಡೆಸಿ ಚರ್ಚಿಸಿ ನಿರ್ಧರಿಸಿದ್ದೇವೆ ಎಂದು ಹೇಳಿದರು.

    ಆಸಕ್ತರು ಬಂದು ಮಳಿಗೆ ಹರಾಜಿನಲ್ಲಿ ಭಾಗವಹಿಸಿ ಆಹಾರ ಮಳಿಗೆ ಪಡೆದುಕೊಂಡು ತಮ್ಮ ಉತ್ತಮ ಜೀವನ ನಿರ್ವಹಣೆಗೆ ಮುಂದಾಗಬೇಕೆಂದು ಸಲಹೆ ನೀಡಿದರು.

    ಮಳಿಗೆಗಳ ಬಾಡಿಗೆಯನ್ನು ಸರಿಯಾಗಿ ಪಾವತಿಸದೇ ಇರುವವರು ನಗರಸಭೆಗೆ ಮುಂಗಡವಾಗಿ ಪಾವತಿಸಿರುವ ಠೇವಣಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲು ತೀರ್ಮಾನಿಸಿದ್ದು, ಅಂತಹವರ ಮಳಿಗೆಯನ್ನು ಮರು ಹರಾಜು ಮಾಡಿ ಅರ್ಹರಿಗೆ ಕೊಡುತ್ತೇವೆ ಎಂದು ತಿಳಿಸಿದರು.

    ಪೌರಾಯುಕ್ತ ಬಿ.ಸಿ. ಬಸವರಾಜು ಮಾತನಾಡಿ, ವಿವಿಧ ಬಡಾವಣೆಗಳ ನಗರಸಭೆ ಮಳಿಗೆಗಳ ಹರಾಜು ಪ್ರಕ್ರಿಯೆ ಇಂದು ನಡೆಸಲಾಗಿದ್ದು, ಕೆ.ಎಂ. ರಸ್ತೆ ಕತ್ರಿಮಾರಮ್ಮ ದೇವಸ್ಥಾನದ ಬಳಿ ನಿರ್ಮಿಸಿರುವ ೩೨ ಮಳಿಗೆಗಳ ಪೈಕಿ ೩ ಮಳಿಗೆಗಳು ಮಾತ್ರ ಹರಾಜಿನಲ್ಲಿ ತೆಗೆದುಕೊಂಡಿದ್ದು, ಇನ್ನೂ ೨೯ ಮಳಿಗೆಗಳು ಇವೆ. ಸಾರ್ವಜನಿಕರು ಆಸಕ್ತಿ ತೋರುತ್ತಿಲ್ಲ ಎಂದರು.

    ನಿರೀಕ್ಷೆಗೂ ಮೀರಿ ಹರಾಜಿನಲ್ಲಿ ಬಿಡ್ ಮಾಡಲಾಗಿದ್ದು, ಆದರೆ ಪ್ರತೀ ತಿಂಗಳು ಬಾಡಿಗೆ ಸರಿಯಾಗಿ ಪಾವತಿಸಬೇಕು, ಅವಶ್ಯಕತೆ ಇರುವ ವ್ಯಾಪಾರಿಗಳು ಮಳಿಗೆ ಪಡೆದರೆ ಒಳ್ಳೆಯದು. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಳಿಗೆಯನ್ನು ಪಡೆಯುವಂತೆ ಮನವಿ ಮಾಡಿದರು.

    ನಾಳೆ (ಮೇ.೭) ರಂದು ಆಜಾದ್ ವೃತ್ತದ ಜಿಮ್ ಕಟ್ಟಡದಲ್ಲಿ ನಿರ್ಮಿಸಿರುವ ಮಳಿಗೆಗಳನ್ನು ಹರಾಜು ಮಾಡಲಾಗುವುದು. ಬೇಲೂರು ರಸ್ತೆ ಬೀದಿಬದಿ ವ್ಯಾಪಾರಸ್ತರಿಗೆ ಅನುಕೂಲವಾಗುವಂತೆ ಫುಡ್‌ಕೋರ್ಟ್‌ನಲ್ಲಿ ಆಹಾರ ಮಳಿಗೆ ನಿರ್ಮಿಸಿದ್ದು, ಈ ಮಳಿಗೆಗಳ ಹರಾಜು ಸಹ ಅಂದು ನಡೆಯಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಿದರು.

    ಫುಡ್‌ಕೋರ್ಟ್‌ನಲ್ಲಿ ಮಳಿಗೆ ಪಡೆದವರು ಒಳ ಬಾಡಿಗೆ ನೀಡಿರುವುದು ಕಂಡುಬಂದರೆ ಅಂತಹವರ ವಿರುದ್ಧ ಕ್ರಮ ಕೈಗೊಂಡು ನಗರಸಭೆ ನೀಡಿರುವ ಪರವಾನಗಿಯನ್ನು ರದ್ದುಪಡಿಸಿ ಮಳಿಗೆಯಿಂದ ಹೊರಹಾಕುವುದಾಗಿ ಎಚ್ಚರಿಸಿದರು.

    Municipal store auction – should be used for own living expenses

  • ವಿದ್ಯುತ್ ಲೈನ್ ವಿತರಣಾ ಕೇಂದ್ರದ ಯೋಜನೆ ವಿರೋಧ

    ವಿದ್ಯುತ್ ಲೈನ್ ವಿತರಣಾ ಕೇಂದ್ರದ ಯೋಜನೆ ವಿರೋಧ

    ಚಿಕ್ಕಮಗಳೂರು: ಆಲ್ದೂರಿನಿಂದ ಮಲ್ಲಂದೂರುವರೆಗೆ ಕೆಪಿಟಿಸಿಎಲ್‌ನಿಂದ ನಿರ್ಮಾಣಗೊಳ್ಳುತ್ತಿರುವ ವಿದ್ಯುತ್ ಲೈನ್ ಅಳವಡಿಕೆ ಮತ್ತು ವಿತರಣಾ ಕೇಂದ್ರದ ಯೋಜನೆಯನ್ನು ವಿರೋಧಿಸಿ ಆಣೂರು ಬೆಳೆಗಾರರ ಸಂಘದ ಆಶ್ರಯದಲ್ಲಿ ನಡೆದ ಸಭೆ ನಿರ್ಣಯ ಕೈಗೊಂಡಿದ್ದು, ತಕ್ಷಣ ಕಾಮಗಾರಿಯನ್ನು ಸ್ಥಗಿತಗೊಳಸಬೇಕು ಎಂದು ಆಗ್ರಹಿಸಿದೆ.

    ಇಂದು ಆಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಭವನದಲ್ಲಿ ಸಭೆಸೇರಿದ ಬೆಳೆಗಾರರು ಯೋಜನೆಯಿಂದಾಗುವ ಪರಿಸರ ಹಾನಿ ಹಾಗೂ ರೈತರು ಬೆಳೆಗಾರರಿಗಾಗಿರುವ ಅನ್ಯಾಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸಿ ಕಾಮಗಾರಿ ಸ್ಥಗಿತಗೊಳಿಸಿ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು.

    ಈ ವೇಳೆ ವಸ್ತಾರೆ ಹೋಬಳಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಟಿ.ಡಿ.ಮಲ್ಲೇಶ್ ಮಾತನಾಡಿ, ಆಲ್ದೂರಿನಿಂದ ಮಲ್ಲಂದೂರುವರೆಗೆ ಕೆಪಿಟಿಸಿಎಲ್ ನಿರ್ಮಾಣಗೊಳ್ಳುತ್ತಿರುವ ವಿದ್ಯುತ್‌ಲೈನ್ ಅಳವಡಿಕೆಯಿಂದಾಗುವ ತೊಂದರೆಗಳ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳ ಸಭೆಯಲ್ಲಿ ತಿಳಿಸಿದ್ದೇವೆ. ಈ ಯೋಜನೆಯನ್ನು ನಾವು ವಿರೋಧಿಸುತ್ತೇವೆ ಎಂಬುದನ್ನು ತಿಳಿಸಿದ್ದೇವೆ ಎಂದರು.

    ಸುಮಾರು ೧೩ ರಿಂದ ೧೪ ಕಿ.ಮೀ.ನಷ್ಟು ಲೈನ್ ಅಳವಡಿಸಬೇಕಾಗುತ್ತದೆ. ಬಹಳಷ್ಟು ಜನರ ಜಮೀನು ಹೋಗುತ್ತದೆ. ಲಕ್ಷಾಂತರ ಮರಗಳು ನಾಶವಾಗುತ್ತವೆ. ಅಡಿಕೆ ತೋಟಗಳಿಗೆ ಹಾನಿಯಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ಅರಣ್ಯಕ್ಕೆ ಹಾನಿಯುಂಟಾಗುತ್ತದೆ. ಇದಾವುದನ್ನೂ ಸರಿಯಾಗಿ ಸಮೀಕ್ಷೆ ಮಾಡಿಲ್ಲ. ಇದರ ಗುತ್ತಿಗೆದಾರರು ಯಾರೆಂದು ನಮಗೆ ಈವರೆಗೆ ಗೊತ್ತಿಲ್ಲ. ರೌಡಿಗಳ ರೀತಿ ದೌರ್ಜನ್ಯ ಮಾಡಿ ಕಾಮಗಾರಿ ನಡೆಸುವುದಕ್ಕೆ ನಾವು ಒಪ್ಪುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಈ ಯೋಜನೆಯನ್ನು ಸ್ಥಗಿತಗೊಳಿಸಿ ಚಿಕ್ಕಮಗಳೂರಿನಿಂದ ಅಳವಡಿಸಲಾಗುತ್ತಿರುವ ಎಕ್ಸ್‌ಪ್ರೆಸ್‌ಲೈನ್ ಮೂಲಕವೇ ವಿದ್ಯುತ್ ಪೂರೈಸಲು ಸಲಹೆ ಮಾಡಿದ್ದೆವಾದರೂ ಪರಿಗಣಿಸಿಲ್ಲ ಎಂದು ಹೇಳಿದರು.

    ಆಲ್ದೂರು-ಮಲ್ಲಂದೂರು ಮಾರ್ಗದಲ್ಲಿ ಮುತ್ತೋಡಿ ವನ್ಯಜೀವಿ ಅರಣ್ಯ ಬರುತ್ತದೆ ಅಲ್ಲಿ ಅರಣ್ಯ ಇಲಾಖೆ ಅನುಮತಿ ಪಡೆದಿಲ್ಲ. ಜಕ್ಕನಹಳ್ಳಿ ವರೆಗೆ ಕ್ಲಿಯರೆನ್ಸ್ ಇದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಇದರ ಜೊತೆಗೆ ಬಫರ್‌ಝೋನ್ ಬರುತ್ತದೆ. ಅಲ್ಲದೆ ಕಾಫಿಬೋರ್ಡ್, ತೋಟಗಾರಿಕೆ ಇಲಾಖೆ ಯಾವುದರಿಂದಲೂ ಕ್ಲಿಯರೆನ್ಸ್ ಪಡೆದಿಲ್ಲ ಇದರ ಜೊತೆಗೆ ಬೆಳೆಗಾರರು, ನಿವಾಸಿಗಳ ವಿರೋಧವೂ ಇದೆ. ಕೆಲವು ಬೆಳೆಗಾರರು ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ಇಷ್ಟಾದರೂ ದಬ್ಬಾಳಿಕೆ ಮಾಡಿ, ಕೆಲವು ಕಡೆ ಗುಂಡಿ ತೆಗೆದು ಗೂಂಡಾಗಿರಿ ಮಾಡುವ ರೀತಿ ವರ್ತಿಸುತ್ತಿರುವುದನ್ನು ಖಂಡಿಸಿದರು.

    ಈ ಬಾರಿ ಉತ್ತಮ ಮಳೆ ಬಂದಿದೆ. ಕಾಫಿಗೆ ಉತ್ತಮ ಬೆಲೆ ಇದೆ. ಇಂತಹ ಸಂದರ್ಭದಲ್ಲಿ ಎಷ್ಟು ಜಮೀನು ಹೋಗುತ್ತದೆ. ಅದಕ್ಕೆ ಎಷ್ಟು ಬೆಲೆ ನಿಗಧಿಪಡಿಸಬೇಕು ಎನ್ನುವ ಯಾವ ಮಾಹಿತಿ ಇಲ್ಲದೆ ಕಾಮಗಾರಿ ಮಾಡಲಾಗುತ್ತಿದೆ. ಕೂಡಲೇ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಮತ್ತು ಜಿಲ್ಲಾಧಿಕಾರಿಗಳು ಗಮನಹರಿಸಿ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.

    ನಮ್ಮ ಮೇಲೆ ದೌರ್ಜನ್ಯ ಮಾಡಿ ಯೋಜನೆ ಮಾಡಲು ಮುಂದಾದರೆ ನಮ್ಮ ಪ್ರಾಣ ಹೋದರೂ ಅವಕಾಶ ಕೊಡುವುದಿಲ್ಲ. ಪವರ್‌ಲೈನ್ ಮಾಡಲು ಸರ್ವೇ ಮಾಡಿರುವುದೇ ಸರಿಯಲ್ಲ. ಈ ಭಾಗದಲ್ಲಿ ತರಲು ನಮ್ಮ ವಿರೋಧವಿದೆ. ಚಿಕ್ಕಮಗಳೂರಿನಿಂದ ಲೈನ್ ತರಲಿ, ಇಲ್ಲವಾದರೆ ಭೂಮಿಯೊಳಗೆ ಕೇಬಲ್ ಹಾಕಿ ತರಲಿ ಯೋಜನೆಗೆ ನಾವು ವಿರೋಧಿಗಳಲ್ಲ ಎಂದು ಹೇಳಿದರು.

    ಆಣೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಕೆ.ಪಿರಾಜೇಂದ್ರ ಮಾತನಾಡಿ, ಈ ಯೋಜನೆ ಕೈಬಿಡಬೇಕೆಂದು ಒತ್ತಾಯಿಸಿ ಸಾಕಷ್ಟು ಪ್ರತಿಭಟನೆ ನಡೆಸಿದ್ದೆವು. ಕೆಪಿಟಿಸಿಎಲ್ ಆಗಲಿ, ಜಿಲ್ಲಾಡಳಿತವಾಗಲಿ ಸೂಕ್ತ ರೀತಿ ಸ್ಪಂದಿಸದ ಹಿನ್ನೆಲೆಯಲ್ಲಿ ೯ ಮಂದಿ ಬೆಳೆಗಾರರು ಹೈಕೋರ್ಟ್‌ನಿಂದ ಯಥಾಸ್ಥಿತಿ ಆದೇಶ ತಂದಿದ್ದೇವೆ. ಮತ್ತೆ ಅಹವಾಲು ಆಲಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಆದೇಶಿಸಿದೆ ಎಂದು ತಿಳಿಸಿದರು.

    ಭೂಮಿಯೊಳಗೆ ಕೇಬಲ್ ಕೊಂಡೊಯ್ಯುವುದು ಹಾಗೂ ಎಕ್ಸ್‌ಪ್ರೆಸ್ ಲೈನನ್ನು ಅಭಿವೃದ್ಧಿಪಡಿಸಬಾರದೇಕೆ ಎಂದು ನ್ಯಾಯಾಲಯ ಮೌಖಿಕವಾಗಿ ಪ್ರಶ್ನಿಸಿರುವುದರಿಂದ ಜಿಲ್ಲಾಧಿಕಾರಿಗಳು ಆಲ್ದೂರು-ಮಲ್ಲಂದೂರು ವಿದ್ಯುತ್ ಲೈನ್‌ಅನ್ನು ಕೈಬಿಟ್ಟು ಭೂಮಿಯೊಳಗಿನಿಂದ ಅಥವಾ ಹಾಲಿ ಇರುವ ಎಕ್ಸ್‌ಪ್ರೆಸ್ ಲೈನ್‌ನನ್ನೇ ಅಭಿವೃದ್ಧಿಪಡಿಸಿ ಸಂಪರ್ಕ ಕೊಡಬೇಕು ಎಂದು ಒತ್ತಾಯಿಸುತ್ತೇವೆ ಎಂದರು.

    ಗ್ರಾ.ಪಂ.ಮಾಜಿ ಸದಸ್ಯ ತಿಮ್ಮಯ್ಯ ಮಾತನಾಡಿ, ನನಗಿರುವುದು ಅರ್ಧ ಎಕರೆ ಜಮೀನು ಮಾತ್ರ ಅದು ಈಗ ಆಲ್ದೂರು-ಮಲ್ಲಂದೂರು ವಿದ್ಯುತ್‌ಲೈನ್ ಯೋಜನೆಗೆ ಹೋಗುತ್ತಿದೆ ಎಂದು ಮಾಹಿತಿ ಇದೆ. ಈ ಬಗ್ಗೆ ಸಾಕಷ್ಟು ವಿರೋಧಿಸಿ ಜಿಲ್ಲಾಡಳಿಕ್ಕೆ ಮನವಿ ಮಾಡಿದ್ದೇವೆ. ಹೋರಾಟ ಮಾಡಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಯೋಜನೆಯಿಂದ ಪರಿಸರಕ್ಕೆ ಸಾಕಷ್ಟು ಹಾನಿ ಸಂಭವಿಸುವುದರಿಂದ ಪರಿಸರ ವಾದಿಗಳು ಇದರ ವಿರುದ್ಧ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.

    ಈ ಸಂದರ್ಭದಲ್ಲಿ ಆಣೂರು ನಟರಾಜ್, ಕಟ್ರುಮನೆ ಮಂಜುನಾಥ್, ಚಂದನ್ ಆಶೋಕ್, ಸಾರ್ಥಕ್ ಮಾಗರಹಳ್ಳಿ, ಮಲ್ಲಂದೂರು ಪುಟ್ಟೇಗೌಡ, ತಳಿಹಳ್ಳ ಮಲ್ಲೇಶ್, ಪೂರ್ಣೇಶ್ ಕುಡುವಳ್ಳಿ, ಬ್ಯಾರವಳ್ಳಿ ಲಕ್ಷ್ಮಣ್, ಕಟ್ರುಮನೆ ರಘುನಾಥ್, ನಾರಾಯಣ್, ರಾಷ್ಟ್ರಿತ್,

    Opposition to power line distribution center project

  • 1 ಕೋಟಿ ರೂ ವೆಚ್ಚದಲ್ಲಿ ಎಂಎಂಡಿ ಹಳ್ಳಿ ರಸ್ತೆ ಡಾಂಬರೀಕರಣ

    1 ಕೋಟಿ ರೂ ವೆಚ್ಚದಲ್ಲಿ ಎಂಎಂಡಿ ಹಳ್ಳಿ ರಸ್ತೆ ಡಾಂಬರೀಕರಣ

    ಚಿಕ್ಕಮಗಳೂರು:  ರಾಜ್ಯಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ತುಂಬಿದ ಬಳಿಕ ಅಭಿವೃದ್ಧಿಯ ಬಗ್ಗೆ ಸಾಧನೆ ರೂಪದಲ್ಲಿ ವಿವರಿಸುತ್ತೇನೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು.

    ಅವರು ಇಂದು ಮೂಗ್ತಿಹಳ್ಳಿ ಗ್ರಾ.ಪಂ ವ್ಯಾಪ್ತಿಯ ಮೆಣಸಿನ ಮಲ್ಲೇದೇವರಹಳ್ಳಿಯಲ್ಲಿ ಕೆ.ಎಂ. ರಸ್ತೆಯಿಂದ ಎಂಎಂಡಿ ಹಳ್ಳಿವರೆಗೆ ಸುಮಾರು ೧ ಕೋಟಿ ರೂ ವೆಚ್ಚದಲ್ಲಿ ಡಾಂಬರೀಕರಣ ಕಾಮಗಾರಿಗೆ ಔಪಚಾರಿಕವಾಗಿ ಚಾಲನೆ ನೀಡಿ ಮಾತನಾಡಿದರು.

    ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ನೀಡಿರುವ ಸುಮಾರ್ ೧೪ ಕೋಟಿ ರೂ ವಿಶೇಷ ಅನುದಾನದಲ್ಲಿ ೧ ಕೋಟಿ ರೂ ವೆಚ್ಚದಲ್ಲಿ ಎಂಎಂಡಿ ಹಳ್ಳಿಗೆ ರಸ್ತೆ ಡಾಂಬರೀಕರಣಕ್ಕೆ ಮಂಜೂರು ಮಾಡಲಾಗಿದೆ. ಊರ ಹಬ್ಬ ಮುಗಿದ ಬಳಿಕ ಕಾಮಗಾರಿ ಆರಂಭವಾಗಲಿದೆ ಎಂದು ಭರವಸೆ ನೀಡಿದರು.

    ಬಡವರು ಮತ್ತು ಶೋಷಿತರನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕೆಂದು ರಾಜ್ಯಸರ್ಕಾರ ಹಲವು ಯೋಜನೆಗಳನ್ನು ಜಾರಿಮಾಡಿದ್ದು, ಈ ನಿಟ್ಟಿನಲ್ಲಿ ಘೋಷಣೆ ಮಾಡಿದ್ದ ೫ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಬಡವರನ್ನು ಆರ್ಥಿಕವಾಗಿ ಮೇಲೆತ್ತುವ ಕಾರ್ಯ ಕೈಗೊಂಡಿದೆ ಎಂದು ಶ್ಲಾಘಿಸಿದರು.

    ಮಲ್ಲೇಶ್ವರ ಸ್ವಾಮಿ, ವೀರಭದ್ರೇಶ್ವರ ಸ್ವಾಮಿ ಈ ಬಾರಿ ಮಳೆ, ಬೆಳೆ, ಬೆಲೆ ಕೊಟ್ಟು ಕಾಪಾಡಲಿ ಎಂದ ಶಾಸಕರು, ಸರ್ವರಿಗೂ ಹಬ್ಬದ ಶುಭಾಶಯ ಕೋರಿದರು.

    ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎಲ್. ಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ ಮಂಜೇಗೌಡ, ಮುಖಂಡರಾದ ಜಯರಾಜ್ ಅರಸ್, ಮೂಗ್ತಿಹಳ್ಳಿ ಗ್ರಾ.ಪಂ. ಅಧ್ಯಕ್ಷ ಉಮೇಶ್ ಶೆಟ್ಟಿ, ಗ್ರಾಮಸ್ಥರುಗಳಾದ ಗಿರೀಶ್, ಪ್ರಭಾಕರ್, ಮಧು, ದಿನೇಶ್, ಹೇಮಂತ್, ಪಂಚಾಕ್ಷರಿ, ಕಾಂತರಾಜು, ವೇದಮೂರ್ತಿ, ತೋಟಯ್ಯ ಮತ್ತಿತರರು ಉಪಸ್ಥಿತರಿದ್ದರು.

    MMD village road asphalting at a cost of Rs 1 crore

  • ಹೊರಗುತ್ತಿಗೆ ನೌಕರರ ಖಾಯಂಗೊಳಿಸುವಂತೆ ಆಗ್ರಹಿಸಿ ಶಾಸಕರಿಗೆ ಮನವಿ

    ಹೊರಗುತ್ತಿಗೆ ನೌಕರರ ಖಾಯಂಗೊಳಿಸುವಂತೆ ಆಗ್ರಹಿಸಿ ಶಾಸಕರಿಗೆ ಮನವಿ

    ಚಿಕ್ಕಮಗಳೂರು:  ನಗರಸಭೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು ನೇರ ಪಾವತಿ ಅಡಿ ಕಾಯಂ ನೌಕರರಾಗಿ ನೇಮಕ ಮಾಡಿಕೊಳ್ಳುವುದು ಸೇರಿದಂತೆ ವಿವಿಧ ೧೪ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶಾಸಕ ಹೆಚ್.ಡಿ. ತಮ್ಮಯ್ಯ ಅವರಿಗೆ ಪೌರನೌಕರರ ಜಿಲ್ಲಾ ಸಂಘ ಮನವಿ ಸಲ್ಲಿಸಿದೆ.

    ಇಂದು ಬೆಳಗ್ಗೆ ಶಾಸಕರ ಕಚೇರಿಯಲ್ಲಿ ಮನವಿ ಸಲ್ಲಿಸಿದ ಸಂಘದ ಜಿಲ್ಲಾಧ್ಯಕ್ಷ ಎನ್. ಅಣ್ಣಯ್ಯ ಮತ್ತು ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್ ನೇತೃತ್ವದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರು, ನೀರು ಸರಬರಾಜು ಸಹಾಯಕರು, ವಾಹನ ಚಾಲಕರು, ಲೋಡರ್‍ಸ್, ಗಾರ್ಡನರ್, ಕಾವಲುಗಾರ, ಸ್ಯಾನಿಟರಿ ಸೂಪರ್‌ವೈಸರ್ ಇವರುಗಳನ್ನು ಖಾಯಂ ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.

    ಮನವಿಯನ್ನು ಸ್ವೀಕರಿಸಿದ ನಂತರ ಮಾತನಾಡಿದ ಶಾಸಕ ಹೆಚ್.ಡಿ. ತಮ್ಮಯ್ಯ ಪೌರ ಕಾರ್ಮಿಕರನ್ನು ಖಾಯಂ ನೌಕರರೆಂದು ಸರ್ಕಾರ ಪರಿಗಣಿಸಿದ್ದು, ಸ್ಥಳೀಯ ಸಂಸ್ಥೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರನ್ನು ಖಾಯಂಗೊಳಿಸುವ ಸಂಬಂಧ ಈಗಾಗಲೇ ಬೆಳಗಾವಿ ಅಧಿವೇಶನದಲ್ಲಿ ವಿಷಯ ಪ್ರಸ್ಥಾಪಿಸಲಾಗಿದ್ದು, ಕೆಲವು ಕಾರಣಾಂತರಗಳಿಂದ ಖಾಯಂಗೊಳಿಸದೆ ಕೈಬಿಡಲಾಗಿದೆ ಎಂದರು.

    ಮನವಿಯಲ್ಲಿ ತಿಳಿಸಿರುವ ವಿವಿಧ ಬೇಡಿಕೆಗಳ ಬಗ್ಗೆ ಮೇ.೯ ರಂದು ನಡೆಯಲಿರುವ ಸಚಿವಸಂಪುಟ ಸಭೆಯಲ್ಲಿ ಚರ್ಚಿಸಿ ಸಂಬಂಧಪಟ್ಟ ಸಚಿವರೊಂದಿಗೆ ಮಾತುಕತೆ ನಡೆಸಿ ಹೊರಗುತ್ತಿಗೆ ನೌಕರರನ್ನು ಖಾಯಂಗೊಳಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಖಜಾಂಚಿ ವಿವೇಕ್, ಮುಖಂಡರಾದ ಸತೀಶ್, ಸುನಿಲ್, ಭರತ್, ರಾಜು, ರಮೇಶ್, ಮೂರ್ತಿ, ಕೃಷ್ಣ ಸೇರಿದಂತೆ ಎಲ್ಲಾ ನೌಕರರು ಉಪಸ್ಥಿತರಿದ್ದರು.

    Appeal to MLAs demanding permanent employment of outsourced employees

  • ಚಿಕ್ಕಮಗಳೂರು ಜಿಲ್ಲಾ ಬಂದ್‌ಗೆ ಮಲೆನಾಡು ಭಾಗದಲ್ಲಿ ಬೆಂಬಲ

    ಚಿಕ್ಕಮಗಳೂರು ಜಿಲ್ಲಾ ಬಂದ್‌ಗೆ ಮಲೆನಾಡು ಭಾಗದಲ್ಲಿ ಬೆಂಬಲ

    ಚಿಕ್ಕಮಗಳೂರು:  ಮಂಗಳೂರಿನ ಸುಹಾಸ್ ಶೆಟ್ಟಿ ಹತ್ಯೆ ಹಾಗೂ ಪಹಲ್ಗಾಮ್‌ನಲ್ಲಿ ಭಯೋತ್ಪಾಧಕರು ನಡೆಸಿದ ಹಿಂದೂ ನರಮೇಧವನ್ನು ಖಂಡಿಸಿ ವಿಶ್ವಹಿಂದೂ ಪರಿಷತ್-ಬಜರಂಗದಳ ಕರೆ ನೀಡಿದ್ದ ಜಿಲ್ಲಾ ಬಂದ್‌ಗೆ ಮಲೆನಾಡು ಭಾಗದಲ್ಲಿ ಬೆಂಬಲ ದೊರೆತಿದ್ದು, ಬಯಲು ತಾಲ್ಲೂಕುಗಳಲ್ಲಿ ಸ್ಪಂದನೆ ದೊರೆತಿಲ್ಲ.

    ಜಿಲ್ಲಾಡಳಿತ, ಪೊಲೀಸ್ ಇಲಾಖೆ ಅನುಮತಿ ನಿರಾಕರಣೆ ನಡುವೆಯೂ ಚಿಕ್ಕಮಗಳೂರು ಸೇರಿದಂತೆ ಮೂಡಿಗೆರೆ, ಕೊಪ್ಪ, ಶೃಂಗೇರಿ ಮತ್ತು ಎನ್.ಆರ್.ಪುರ ತಾಲ್ಲೂಕುಗಳಲ್ಲಿ ಬಂದ್ ಯಶಸ್ಸಾಗಿದೆ. ಬಯಲಿನ ಕಡೂರು, ತರೀಕೆರೆ ಹಾಗೂ ಅಜ್ಜಂಪುರ ತಾಲ್ಲೂಕುಗಳಲ್ಲಿ ಬೆಂಬಲ ಸಿಕ್ಕಿಲ್ಲ. ಚಿಕ್ಕಮಗಳೂರು ನಗರದ ಎಂಜಿ ರಸ್ತೆ, ಐಜಿ ರಸ್ತೆ, ಮಾರ್ಕೆಟ್ ರಸ್ತೆ ಸೇರಿದಂತೆ ಪ್ರಮುಖ ವಾಣಿಜ್ಯ ವಹಿವಾಟು ಪ್ರದೇಶಗಳಲ್ಲಿ ಬೆಳಗಿನಿಂದಲೇ ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದರು.

    ಬೆಳಗ್ಗೆ ವಿಶ್ವಹಿಂದೂ ಪರಿಷತ್-ಬಜರಂಗದಳದ ಕಾರ್ಯಕರ್ತರು ತಹಸೀಲ್ದಾರ್ ಕಚೇರಿಯಿಂದ ಹನುಮಂತಪ್ಪ ವೃತ್ತದ ವರೆಗೆ ಮೆರವಣಿಗೆ ನಡೆಸಿ ಸುಹಾಸ್ ಶೆಟ್ಟಿ ಹಂತಕರು ಹಾಗೂ ಪೆಹಲ್ಗಾಮ್ ನರಮೇಧ ನಡೆಸಿದ ಭಯೋತ್ಪಾದಕರ ವಿರುದ್ಧ ಘೋಷಣೆಗಳನ್ನು ಕೂಗಿದರು. ಅನುಮತಿ ಇಲ್ಲದೆಯೂ ಪ್ರತಿಭಟನೆಗೆ ಮುಂದಾದ ಹಿನ್ನೆಲೆಯಲ್ಲಿ ಹಾಗೂ ನಗರದಲ್ಲಿ ೧೪೪ ಸೆಕ್ಷನ್ ಜಾರಿಯಲ್ಲಿರುವ ಕಾರಣ ಸುಮಾರು ೨೦ ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.

    ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ರಂಗನಾಥ್, ಮುಖಂಡರುಗಳಾದ ಯೋಗೀಶ್ ರಾಜ್ ಅರಸ್, ಪ್ರದೀಪ್ ರಾವ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ, ಕೋಟೆ ರಂಗನಾಥ್, ಎಚ್.ಸಿ.ಕಲ್ಮರುಡಪ್ಪ ಇತರರು ಪ್ರತಭಟನೆಯಲ್ಲಿ ಭಾಗವಹಿಸಿದ್ದರು. ಇಷ್ಟಾದರೂ ಹಲವಾರು ಅಂಗಡಿಗಳನ್ನು ಬಂದ್ ಮಾಡಿ ವರ್ತಕರು ಬೆಂಬಲ ಸೂಚಿಸಿದರು. ಕೆಲವರು ಮಧ್ಯಾಹ್ನದ ವೇಳೆಗೆ ಅಂಗಡಿಗಳನ್ನು ತೆರೆದರೆ ಮತ್ತೆ ಕೆಲವರು ಸಂಜೆ ವರೆಗೆ ಬಂದ್ ಮಾಡಿದ್ದರು.

    ಉಳಿದಂತೆ ನಗರದಲ್ಲಿ ಆಟೋ, ಸಾರಿಗೆ, ಹೋಟೆಲ್, ಪೆಟ್ರೋಲ್ ಸೇರಿದಂತೆ ಎಲ್ಲಾ ಸೇವೆಗಳು ಸುಗಮವಾಗಿ ನಡೆದವು. ಸರ್ಕಾರಿ ಕಚೇರಿಗಳು, ಪಿಯುಸಿ ಪೂರಕ ಪರೀಕ್ಷೆಗಳಿಗೆ ಅಡಚಣೆ ಆಗಲಿಲ್ಲ.

    Support for Chikkamagaluru district bandh in Malnad region

  • ಚಿಕ್ಕಮಗಳೂರು ಜಿಲ್ಲಾ ಬಂದ್ ಗೆ ಅನುಮತಿ ಇಲ್ಲ

    ಚಿಕ್ಕಮಗಳೂರು ಜಿಲ್ಲಾ ಬಂದ್ ಗೆ ಅನುಮತಿ ಇಲ್ಲ

    ಚಿಕ್ಕಮಗಳೂರು: ಮಂಗಳೂರು ಘಟನೆಯನ್ನು ಖಂಡಿಸಿ ಕೆಲ ಸಂಘಟನೆಗಳು ಸೋಮವಾರ ಚಿಕ್ಕಮಗಳೂರು ಜಿಲ್ಲಾ ಬಂದ್ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿವೆ. ಆದರೆ ಈ ಬಂದ್ ಗೆ ಜಿಲ್ಲಾಡಳಿತವಾಗಲಿ ಅಥವಾ ಪೊಲೀಸ್ ಇಲಾಖೆಯಾಗಲಿ ಅನುಮತಿ ನೀಡಿಲ್ಲ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರೇ ಬಂದ್ ಮಾಡುವುದಾದರೂ ಜಿಲ್ಲಾಡಳಿತ ಅಥವಾ ಪೊಲೀಸ್ ಇಲಾಖೆಗೆ ಮನವಿ ನೀಡಿ ಅನುಮತಿ ಪಡೆಯಬೇಕಿತ್ತು. ಆದರೆ ಯಾರು ಅನುಮತಿ ಪಡೆದಿಲ್ಲ ಎಂದರು.

    ಸೋಮವಾರ ಜಿಲ್ಲೆಯ ಹಲವೆಡೆ ಸಂತೆ ನಡೆಯುತ್ತದೆ. ಜೊತೆಗೆ ದ್ವಿತೀಯ ಪಿಯುಸಿ ಅರ್ಥಶಾಸ್ತ್ರ ಪರೀಕ್ಷೆ ನಡೆಯುತ್ತಿದೆ. ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗುವ ಹಿನ್ನೆಲೆಯಲ್ಲಿ ಬಂದ್ಗೆ ಯಾವುದೇ ಅನುಮತಿ ನೀಡುವುದಿಲ್ಲ ಎಂದು ಹೇಳಿದರು.

    ಬಂದ್ಗೆ ಸಾಮಾಜಿಕ ಜಾಲತಾಣದಲ್ಲಿ ಕರೆ ನೀಡಿದ್ದ ಸಂಘಟನೆಗಳ ಪ್ರಮುಖರಿಗೆ ನೋಟಿಸ್ ನೀಡಿ ಜಿಲ್ಲಾಧಿಕಾರಿ ಕಚೇರಿಗೆ ಕರೆಯಿಸಿ ಅವರಿಗೆ ಬಂದಿಂದ ಆಗುವ ಸಮಸ್ಯೆಗಳ ಬಗ್ಗೆ ಹಾಗೂ ಸುಪ್ರೀಂಕೋರ್ಟ್ ಆದೇಶಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಬಂದ್ ಬದಲಿಗೆ ಪ್ರತಿಭಟನೆ ಮಾಡಲು ಅನುಮತಿ ನೀಡುತ್ತೇವೆ ಎಂದು ತಿಳಿಸಿದರು.

    ಎಸ್‌ಪಿ ವಿಕ್ರಮ್ ಅಮಟೆ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದಿಂದ ಜಿಲ್ಲಾ ಬಾಯಿಗೆ ಕರೆ ನೀಡಿರುವ ಹಾಕಲಾಗಿದೆ. ಹೀಗಾಗಿ ಈ ಸಂಘಟನೆಗಳ ಎಲ್ಲಾ ಮುಖಂಡರಿಗೆ ಕರೆ ಮಾಡಿ ಹಾಗೂ ಪೊಲೀಸ್ ಇಲಾಖೆಯಿಂದ ನೋಟಿಸ್ ನೀಡಿ ಡಿಸಿ ಕಚೇರಿಗೆ ಕರೆಯಿಸಿ ಅವರೊಂದಿಗೆ ಸಭೆ ನಡೆಸಲಾಗಿದೆ. ಜೊತೆಗೆ ಬಂದ್ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶಗಳ ಬಗ್ಗೆಯೂ ಮಾಹಿತಿ ನೀಡಿದ್ದೇವೆ ಎಂದರು.

    ಪಹಲ್ಗಾಮ್ ಹಾಗೂ ಪಶ್ಚಿಮ ಬಂಗಾಳದಲ್ಲಿ ನಡೆದ ಘಟನೆಗಳಿಗೆ ಸಂಬಂಧಪಟ್ಟಂತೆ ಜಿಲ್ಲೆಯಲ್ಲಿ ಹಲವಾರು ಪ್ರತಿಭಟನೆಗಳು ನಡೆದಿವೆ. ಮಂಗಳೂರು ಘಟನೆಗೆ ಸಂಬಂಧಿಸಿದಂತೆಯು ಪ್ರತಿಭಟನೆ ನಡೆದಿದೆ. ಈ ಪ್ರಕರಣದಲ್ಲಿ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಈ ಎಲ್ಲಾ ಸೂಕ್ಷ್ಮಗಳನ್ನು ಜಿಲ್ಲಾ ಬಂದ್ ಗೆ ಕರೆ ನೀಡಿದ ಸಂಘಟನೆಗಳ ಪ್ರಮುಖರಿಗೆ ತಿಳಿಸಲಾಗಿದೆ ಎಂದು ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕರಡ್ಡಿ ಉಪಸ್ಥಿತರಿದ್ದರು.

    Chikmagalur district bandh not permitted

  • ಮಹಿಳಾ ಲೇಖಕಿಯರು ಸಾಹಿತ್ಯಾಭಿರುಚಿ ಉಣಬಡಿಸಿ

    ಮಹಿಳಾ ಲೇಖಕಿಯರು ಸಾಹಿತ್ಯಾಭಿರುಚಿ ಉಣಬಡಿಸಿ

    ಚಿಕ್ಕಮಗಳೂರು: ಸಾಹಿತ್ಯ ಲೋಕದ ಜೀವಾಳವಾಗಿರುವ ಜಿಲ್ಲೆಯಲ್ಲಿ ಮಹಿಳಾ ಲೇಖಕಿಯ ರು, ಕವಿತ್ರಿಯರು, ಬರಹಗಾರ್ತಿಯರು ಮುಖ್ಯವಾಹಿನಿಗೆ ಬಂದು ಸಾಹಿತ್ಯಾಭಿರುಚಿ ಉಣಬಡಿಸಬೇಕು ಎಂ ದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಕರೆ ನೀಡಿದರು.

    ನಗರದ ಕನ್ನಡ ಭವನದಲ್ಲಿ ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕದ ಪದಗ್ರಹಣ ಸಮಾ ರಂಭವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿ ವೈವಾಹಿಕ ಜೀವನದ ನಡುವೆಯು ಮಹಿಳೆಯರು ಸಮಾಜದ ಪ್ರತಿ ಕ್ಷೇತ್ರದಲ್ಲೂ ಹೆಜ್ಜೆ ಹಾಕುತ್ತಿದ್ದಾರೆ. ಜೊತೆಗೆ ಸಾಹಿತ್ಯಾತ್ಮಕ ಚಟುವಟಿಕೆಗಳಲ್ಲಿ ಹೆಚ್ಚು ಮುತುವರ್ಜಿ ತೋರಿ ಕಥೆ, ಕಾದಂಬರಿ, ಕವಿತೆಗಳನ್ನು ರಚಿ ಸುತ್ತಿರುವುದು ಶ್ಲಾಘನೀಯ. ಹೀಗಾಗಿ ಅರ್ಹ ಲೇಖಕಿಯರನ್ನು ಸಂಘವು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಸಲಹೆ ಮಾಡಿದರು.

    ಕನ್ನಡಾಂಬೆಯ ಸೇವೆಯಲ್ಲಿ ನೂತನ ಅಧ್ಯಕ್ಷೆ ಸಕುಟುಂಬವು ನಿಸ್ವಾರ್ಥದಿಂದ ಕಾರ್ಯಪ್ರವೃತ್ತವಾಗಿರು ವುದು ಹೆಮ್ಮೆಯ ಸಂಗತಿ ಎಂದ ಅವರು ಮುಂಬರುವ ದಿನಗಳಲ್ಲಿ ಲೇಖಕಿಯರ ಸಂಘ ಜಿಲ್ಲೆಯಾದ್ಯಂತ ಹೆಚ್ಚು ಮನ್ನಣೆ, ಕಾರ್ಯಕ್ರಮ ರೂಪಿಸುವಂತಾಗಲಿ ಎಂದು ಶುಭ ಕೋರಿದರು.

    ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ ಮಾತನಾಡಿ ಜಾನಪದ ಸಾಹಿತ್ಯ ಅನೇಕ ಯುಗಗಳಿಂದ ಈ ಮಣ್ಣಿನಲ್ಲಿ ನೆಲೆಕಾಣಲು ಮಹಿಳೆಯರ ಶಕ್ತಿಯೇ ಮೂಲ ಕಾರಣ. ಆದರೆ ಪುರು ಷರಿಗೆ ದೊರೆತ ಅವಕಾಶ ಮಹಿಳಾ ಸಾಹಿತಿಗಳಿಗೆ ಸಿಕ್ಕಿಲ್ಲ. ಹೀಗಾಗಿ ಲೇಖಕಿಯರ ಸಂಘವು ಮಹಿಳಾ ಸಾಹಿ ತಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಲಿ ಎಂದು ಆಶಿಸಿದರು.

    ಜಿಲ್ಲೆಯ ಹಲವಾರು ಅಧಿಕಾರಿಗಳು ವರ್ಗಾವಣೆಯಾಗಿ ತೆರಳುವ ಮುನ್ನ ಪುಸ್ತಕ ರಚನೆ, ಕವಿಗಳಾಗಿ ಹೊರಹೊಮ್ಮಲು ಜಿಲ್ಲೆಯಲ್ಲಿನ ಆಳವಾದ ಸಾಹಿತ್ಯ ಪ್ರೇಮವೇ ಸಾಕ್ಷಿ. ಇದೀಗ ಲೇಖಕಿಯರ ತಂಡ ಜಿಲ್ಲೆ ಯಾದ್ಯಂತ ಕನ್ನಡಪ್ರೇಮ ಬೆಳೆಸಲು ಸಜ್ಜಾಗುತ್ತಿದ್ದು ಬರವಣಿಗೆಯಿಂದ ಸಮಾಜದ ಸ್ಥಿತಿಗತಿ ಬದಲಿಸಲು ಸಾ ಧ್ಯ ಎಂಬ ಶಕ್ತಿಯನ್ನು ಪರಿಚಯಿಸಬೇಕು ಎಂದರು.

    ಸೇವಾದೀಕ್ಷೆ ಸ್ವೀಕರಿಸಿ ಮಾತನಾಡಿದ ನೂತನ ಜಿಲ್ಲಾಧ್ಯಕ್ಷೆ ಅಜ್ಜಂಪುರ ಎಸ್.ಶೃತಿ ಜಿಲ್ಲೆಯಲ್ಲಿನ ಲೇಖಕಿಯರು, ಬರಹಗಾರ್ತಿಯರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಥಾ ಕಮ್ಮಟ, ಕಾವ್ಯಕಮ್ಮಟ, ಕವಿಗೋಷ್ಠಿ ಗಳನ್ನು ಏರ್ಪಡಿಸುತ್ತೇವೆ. ಜೊತೆಗೆ ತಾಲ್ಲೂಕಿನ ಅಧ್ಯಕ್ಷರು ತಮ್ಮ ವ್ಯಾಪ್ತಿಯಲ್ಲಿನ ಮಹಿಳಾ ಸಾಹಿತಿಗಳನ್ನು ಗುರುತಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಹೇಳಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಲೇಖಕಿಯರ ಸಂಘದ ರಾಜ್ಯಾಧ್ಯಕ್ಷೆ ಡಾ.ಹೆಚ್.ಎಲ್. ಪುಷ್ಪ ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರು ಹಿಂದೆ ಬಿದ್ದಿಲ್ಲ. ಅನೇಕ ಕವಿತೆ, ಕಾದಂಬರಿ, ಕಥೆಗಳನ್ನು ರಚಿಸುತ್ತಿ ದ್ದು ಸಮಾಜದ ಮುಖ್ಯವಾಹಿನಿಗೆ ಕರೆತರುವ ನಿಟ್ಟಿನಲ್ಲಿ ಸಂಘವನ್ನು ಸ್ಥಾಪಿಸಿ ವೇದಿಕೆ ನಿರ್ಮಿಸಿಕೊಡಲಾ ಗಿದೆ ಎಂದರು.

    ಮಹಿಳಾ ಲೇಖಕಿಯರನ್ನು ಸಂಘದ ಚೌಕಟ್ಟಿನೊಳಗೆ ತರುವ ಪ್ರಯತ್ನ ಮಾಡಲಾಗುತ್ತಿದ್ದು ಲೇಖಕಿ ಯರ ಕೃತಿಗಳಿಗೆ ಸಿಗಬೇಕಾದ ಮನ್ನಣೆ ದೊರಕಿಸಿಕೊಡುವುದು ಆದ್ಯತೆಗಳಲ್ಲಿ ಒಂದಾಗಿದೆ. ಮುಕ್ತವಾಗಿ ಪ್ರತಿ ಭಾವಂತ ಕವಿತ್ರಿಯರು ಲೇಖಕಿಯರ ಸಂಘದಲ್ಲಿ ಸೇರ್ಪಡೆಗೊಂಡು ಪ್ರತಿಭೆ ಅನಾವರಣಕ್ಕೆ ಮುಂದಾಗ ಬೇಕು ಎಂದು ತಿಳಿಸಿದರು.

    ಜಿಲ್ಲಾ ಪದಾಧಿಕಾರಿಗಳು : ಅಜ್ಜಂಪುರ ಎಸ್.ಶೃತಿ (ಅಧ್ಯಕ್ಷೆ), ಗೀತಾ ಹಸ್ಮಕಲ್, ಭಾಗ್ಯ ನಂಜುಂಡಸ್ವಾ ಮಿ (ಉಪಾಧ್ಯಕ್ಷರು), ಆಶಾರಾಜು, ಸುನೀತ ನವೀನಗೌಡ (ಕಾರ್ಯದರ್ಶಿ), ಸಿ.ಆರ್.ಶ್ರೀಲಾದೇವಿ (ಖಜಾಂಚಿ). ತಾಲ್ಲೂಕು ಅಧ್ಯಕ್ಷರು : ವೈಷ್ಣವಿ ಎನ್.ರಾವ್ (ಚಿಕ್ಕಮಗಳೂರು), ಶೃತಿ ಲಿಂಗರಾಜು (ಕಡೂ ರು), ಟಿ.ಎಂ.ಮಂಜುಳಾ (ಅಜ್ಜಂಪುರ), ಡಾ.ನಾಗಜ್ಯೋತಿ (ತರೀಕೆರೆ), ಗೀತಾ (ಕಳಸ), ಎಸ್.ಎನ್.ಚಂದ್ರ ಕಲಾ (ಕೊಪ್ಪ), ಜಯಶ್ರೀ ಗಣೇಶ್ (ಶೃಂಗೇರಿ), ಪ್ರೇಮ (ಮೂಡಿಗೆರೆ), ಎ.ಆರ್.ಲತಾ (ನ.ರಾ.ಪುರ.)

    ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕಿ ಹೆಚ್.ಎಸ್.ಕೀರ್ತ ನಾ, ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ಪ್ರಾಧ್ಯಾಪಕ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್, ಮುಖ್ಯೋಪಾಧ್ಯಾ ಯೆ ಬಿ.ಚೇತನ, ಕಸಾಪ ತಾಲ್ಲೂಕು ಅಧ್ಯಕ್ಷ ಮಾವಿನಕೆರೆ ದಯಾನಂದ್, ಪ್ರಧಾನ ಕಾರ್ಯದರ್ಶಿ ಎಸ್. ಎಸ್.ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

    Women writers feed literary taste

  • ವಕ್ಫ್ ಆಸ್ತಿಗಳ ದಾಖಲಾತಿ ಪರಿಶೀಲನಾ ಕಾರ್ಯಗಾರ

    ವಕ್ಫ್ ಆಸ್ತಿಗಳ ದಾಖಲಾತಿ ಪರಿಶೀಲನಾ ಕಾರ್ಯಗಾರ

    ಚಿಕ್ಕಮಗಳೂರು: ಜಿಲ್ಲಾ ವಕ್ಪ್ ಸಲಹಾ ಸಮಿತಿಯ ಪ್ರಗತಿ ಪರಿಶೀಲನಾ ಮತ್ತು ವಕ್ಫ್ ದಾಖ ಲಾತಿಗಳ ಪರಿಶೀಲನಾ ಕಾರ್ಯಾಗಾರ ಮಹತ್ವದ ಮಹಾ ಸಭೆಯನ್ನು ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಮೊಹಮ್ಮದ್ ಶಾಹಿದ್ ರಜ್ವಿ ರವರ ನೇತೃತ್ವದಲ್ಲಿ ಶನಿವಾರ ನಗರದಲ್ಲಿ ನಡೆಯಿತು.

    ಸಭೆಯಲ್ಲಿ ಜಿಲ್ಲಾದ್ಯಂತ ಮಸೀದಿಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಧಾರ್ಮಿಕ ಮುಖಂಡರು ಸೇರಿದಂತೆ ಸುಮಾರು ೨೦೦ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.

    ಬಳಿಕ ಮಾತನಾಡಿದ ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಮೊಹಮ್ಮದ್ ಶಾಹಿದ್ ರಜ್ವಿ ಸುಮಾರು ೩೨ ತಿಂಗಳ ಅಧಿಕಾರಾವಧಿಯಲ್ಲಿ ಯಶಸ್ವಿಯಾಗಿ ನಿರ್ವಹಿಸಿದ್ದು ಅನೇಕ ವಿವಾದಗಳು ಸಮಸ್ಯೆಗಳನ್ನು ಕಾ ನೂನಿನ ಚೌಕಟ್ಟಿನಲ್ಲಿ ಶಾಶ್ವತವಾಗಿ ಬಗೆಹರಿಸಲಾಗಿದ್ದು ವಕ್ಫ್ ಸಂಸ್ಥೆಗಳ ಅಭಿವೃದ್ಧಿಗೆ ಮಂಡಳಿ ವತಿಯಿಂದ ೧೫.೫೦ ಕೋಟಿ ಮೊತ್ತದ ಅನುದಾನವನ್ನು ನೀಡಲಾಗಿದೆ ಎಂದು ತಿಳಿಸಿದರು.

    ಇತ್ತೀಚೆಗೆ ವಕ್ಫ್ ವಿಧೇಯಕ ತಿದ್ದುಪಡಿಯ ವಿರುದ್ಧ ತಮ್ಮ ಸ್ವಇಚ್ಛೆಯಿಂದ ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವ ಬಗ್ಗೆ ವಿವರಿಸುತ್ತ ಜಿಲ್ಲೆಯಲ್ಲಿ ಇರುವ ವಕ್ಫ್ ಆಸ್ತಿಗಳನ್ನು ಸಂರಕ್ಷಿಸಲು ಸಮಿತಿಗೆ ಜಿಲ್ಲಾದ್ಯಂತ ಸಂಸ್ಥೆಗಳ ಪದಾಧಿಕಾರಿಗಳು ಸಹಕರಿಸುವಂತೆ ಸೂಚನೆ ನೀಡಿದರು.

    ವಿವಿದ ಸಂಸ್ಥೆಗಳ ಪ್ರತಿನಿಧಿಗಳಿಂದ ಸಮಾಲೋಚನೆ ನಡೆಸಿ ವಿವಿದ ಅಭಿಪ್ರಾಯಗಳನ್ನು ಸಂಗ್ರಹಿಸಿ ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ವಕ್ಫ್ ತಿದ್ದುಪಡಿಯ ವಿರುದ್ಧ ಬೃಹತ್ ಪ್ರತಿಭಟನಾ ಸಮಾವೇಶ ವನ್ನು ಆಯೋಜಿಸಲು ನಿರ್ಧರಿಸಲಾಯಿತು.

    ಈ ಸಭೆಯಲ್ಲಿ ಜಿಲ್ಲಾ ವಕ್ಫ್ ಮಂಡಳಿ ಉಪಾಧ್ಯಕ್ಷ ಅಲ್ ಹಾಜ್ ಫೈರೋಜ್ ಅಹಮದ್ ರಜ್ವಿ, ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಇರ್ಫಾನ್ ಬೇಗ್, ಮೊಹಮ್ಮದ್ ರಫಿ, ಸದಸ್ಯರಾದ ಯೂಸುಫ್ ಹಾಜಿ, ಫಾರೂಖ್ ಸಲೀಂ ರಜ್ವಿ, ಮನ್ಸೂರ್ ಅಹಮದ್, ನಾಸೀರ್, ಮೊಹಮದ್ ಯೂಸುಫ್,ಸೇರಿದಂತೆ ವಕ್ಫ್ ಅಧಿಕಾರಿಗಳು ಜಿಲ್ಲಾ ವಕ್ಫ್ ಕಾರ್ಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.

    Waqf Property Registration Verification Workshop

  • ಸಮೀಕ್ಷೆ ಸಂದರ್ಭದಲ್ಲಿ  ಬಂಜಾರ/ಲಂಬಾಣಿ ಬರೆಸಲು ಸಲಹೆ

    ಸಮೀಕ್ಷೆ ಸಂದರ್ಭದಲ್ಲಿ ಬಂಜಾರ/ಲಂಬಾಣಿ ಬರೆಸಲು ಸಲಹೆ

    ಚಿಕ್ಕಮಗಳೂರು: ನ್ಯಾಯಮೂರ್ತಿ ಡಾ. ಹೆಚ್.ಎನ್ ನಾಗಮೋಹನ್ ದಾಸ್ ರವರ ಏಕಸದಸ್ಯ ವಿಚಾರಣಾ ಆಯೋಗದ ಶಿಫಾರಸ್ಸಿನಂತೆ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡಗಳ ಕುಟುಂಬದ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸಮೀಕ್ಷೆ ಸಂದರ್ಭದಲ್ಲಿ ಸಮುದಾಯದ ಬಾಂಧವರು ಬಂಜಾರ, ಲಂಬಾಣಿ ಈ ಎರಡನ್ನು ಮಾತ್ರ ಮಾಹಿತಿ ನೀಡಬೇಕೆಂದು ಸಂಘದ ಕಾರ್ಯಾಧ್ಯಕ್ಷ ಬಿ.ಟಿ ಗಂಗಾಧರ ನಾಯಕ್ ಮನವಿ ಮಾಡಿದರು.

    ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷೆಯನ್ನು ಒಟ್ಟು ಮೂರ ಹಂತಗಳಲ್ಲಿ ನಡೆಸಲಾಗುತ್ತಿದ್ದು, ಮೊದಲನೇ ಹಂತ ಮೇ ೫ ರಿಂದ ೧೭ರ ವರೆಗೆ, ಎರಡನೇ ಹಂತ ಮೇ ೧೯ ರಿಂದ ೨೧, ಮೂರನೇ ಹಂತ ಮೇ ೧೯ ರಿಂದ ೨೩ರ ವರೆಗೆ ಮನೆ-ಮನೆ ಸಮೀಕ್ಷೆಯನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನೆಡೆಸಲಾಗುತ್ತದೆ ಎಂದು ಹೇಳಿದರು.

    ಜನ ಜಾತಿಗಣತಿಯಲ್ಲಿ ಜನಸಂಖ್ಯೆಗನುಗುಣವಾಗಿ ವರ್ಗೀಕರಣ ಮಾಡಿ ಒಳಮೀಸಲಾತಿ ನೀಡಬೇಕು, ಈ ಸಂಬಂಧ ಸಮೀಕ್ಷೆ ನೆಡೆಸುವ ಶಿಕ್ಷಕರಿಗೆ ತಮ್ಮ ಕುಟುಂಬದ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆಯ ಜೊತೆಗೆ ಸ್ಪಷ್ಟ ಸಮೀಕ್ಷಾ ವರದಿಗೆ ಲಂಬಾಣಿ, ಬಂಜಾರ ಎಂದು ಮಾಹಿತಿ ನೀಡಬೇಕು, ಭೂಮಿಯ ಒಡತನ, ಮನೆ ಆದಾಯ, ಮಾನವ ಅಭಿವೃದ್ಧಿ, ಸರ್ಕಾರದಿಂದ ಪಡೆದಿರುವ ಸೌಲಭ್ಯಗಳ ಬಗ್ಗೆ ಸಮಗ್ರ ಮಾಹಿತಿ ನೀಡಬೇಕೆಂದು ತಿಳಿಸಿದರು.

    ಆಧಾರ್ ಸಂಖ್ಯೆ, ಆರ್.ಡಿ ನಂಬರ್ ಕಡ್ಡಾಯವಾಗಿ ನಮೂದಿಸಬೇಕು ಎಂದು ಒತ್ತಾಯಿಸಿದ ಅವರು ಸಮಾಜದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಈ ಮಹತ್ ಕಾರ್ಯಕ್ಕೆ ಕೈ ಜೋಡಿಸಿ ಸಮುದಾಯದ ಪರವಾಗಿ ಜಿಲ್ಲಾ ಮಟ್ಟದ ತಾಂಡಗಳಲ್ಲಿ ಕಾರ್ಯ ನಿರ್ವಹಿಸುವಂತೆ ಮನವಿ ಮಾಡಿದರು.
    ಈ ಸಂಬಂದ ಸಮುದಾಯದ ಜನರಲ್ಲಿ ಅರಿವು ಮೂಡಿಸಲು ನಾಳೆ (ಮೇ ೪) ರಿಂದ ವಾಹನದಲ್ಲಿ ಪ್ರತಿ ಹಳ್ಳಿಗಳಿಗೆ ಬೇಟಿ ನೀಡಿ ಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ ಎಂದರು.

    ಪತ್ರಿಕಾಗೋಷ್ಠಿಯಲ್ಲಿ ಬಂಜಾರ ಸಂಘದ ಜಿಲ್ಲಾಧ್ಯಕ್ಷ ಟಿ.ಎಲ್ ಲಕ್ಷ್ಮಣ್‌ನಾಯ್ಕ, ಉಪಾಧ್ಯಕ್ಷ ರಾಜನಾಯ್ಕ, ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್ ಟಿ.ಎಸ್ ಉಪಸ್ಥಿತರಿದ್ದರು.

    Suggestion to write Banjara/Lambani during the survey

  • ದೇವಾಲಯಗಳು ಧಾರ್ಮಿಕ ಶ್ರದ್ಧೆಯ ಪ್ರತೀಕ

    ದೇವಾಲಯಗಳು ಧಾರ್ಮಿಕ ಶ್ರದ್ಧೆಯ ಪ್ರತೀಕ

    ಚಿಕ್ಕಮಗಳೂರು: ದೇವಾಲಯಗಳು ಧಾರ್ಮಿಕ ಶ್ರದ್ಧೆಯ ಪ್ರತೀಕವಾಗಿದ್ದು ಭಕ್ತರ ಹೃದಯದಲ್ಲಿ ದೇವರ ಪ್ರತಿಷ್ಠಾಪನೆ ಆಗಬೇಕು ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಪರಮ ಪೂಜ್ಯ ಶ್ರೀ ಶ್ರೀ ೧೧೦೮ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಪ್ರಾಯಿಸಿದರು.

    ಅವರು ಇಂದು ಕಡೂರು ತಾಲ್ಲೂಕು ನಿಡಘಟ್ಟ ಗ್ರಾಮದಲ್ಲಿ ಸುಮಾರು ೧.೫೦ ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ಶ್ರೀ ಕಲ್ಲೇಶ್ವರ ಸ್ವಾಮಿಯವರ ನೂತನ ದೇವಾಲಯ ಮತ್ತು ಗೋಪುರ ಕಳಸಾರೋಹಣ ಹಾಗೂ ಧಾರ್ಮಿಕ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

    ಈ ದೇವಸ್ಥಾನಕ್ಕೆ ೧೧೪೦ ಇಸವಿಯಲ್ಲಿ ನಿರ್ಮಿಸಿರುವ ಶಾಸನವಿದ್ದು, ದೇವಾಲಯ ನಿರ್ಮಾಣ ಮಾಡಲು ಜಮೀನು ದಾನ ಮಾಡಿದ್ದಾರೆ, ಈ ರೀತಿಯ ದೇವರಿಗೆ ಮೀಸಲಿಟ್ಟ ಜಮೀನನ್ನು ಅಪಹರಿಸಿದರೆ ಸಾವಿರಾರು ವರ್ಷಗಳ ಕಾಲ ಕ್ರಿಮಿ-ಕೀಟಗಳಾಗಿ ಜನಿಸುತ್ತಾರೆ ಎಂಬ ಉಲ್ಲೇಖ ಇದೆ ಎಂದು ಹೇಳಿದರು.

    ಸರ್ಕಾರ ಉಳುವವನೇ ಭೂಮಿ ಒಡೆಯ ಎಂಬ ಕಾನೂನು ಜಾರಿ ಮಾಡಿದ ನಂತರ ಭೂಮಿಯನ್ನು ಅಪಹರಿಸಿರುವ ಉದಾಹಣೆಗಳಿವೆ ಇದು ಈ ಶಾಸನಕ್ಕೆ ತದ್ವಿರುದ್ದವಾಗಿರುವುದನ್ನು ಮನಗಾಣಬಹುದಾಗಿದೆ, ಕನ್ನಡ ನಾಡಿನಲ್ಲಿ ಹಳ್ಳಿ ಹೆಸರಿನಲ್ಲಿ ಇನ್‌ಷಿಯಲ್ ಇದೆ ಉದಾಹರಣೆಗೆ ಎಸ್.ಬಿದರೆ, ಕೆ.ಬಿದರೆ ಎಂಬುದು ಹಳ್ಳಿಗಳ ವೈಶಿಷ್ಟ್ಯ ಎಂದರು.

    ಯಾವ ದೇವರ ಹೆಸರಿನಲ್ಲಿ ಹಿಂದೆ ಕೊಟ್ಟಿರುವ ಭೂಮಿಗೆ ಆ ದೇವರೆ ಮಾಲಿಕ ಎಂದು ಸುಪ್ರಿಮ್ ಕೋರ್ಟ್ ಮಹತ್ವದ ತೀರ್ಪು ನೀಡಿದೆ, ಈ ನಿಟ್ಟಿನಲ್ಲಿ ಹಿಂದಿನವರ ಶ್ರದ್ಧಾ-ಭಕ್ತಿ ಕಣ್ಮರೆಯಾಗಿದೆ ಎಂದು ಭಾವಿಸುವುದಿಲ್ಲ, ಎಲ್ಲಾ ಕಾಲದಲ್ಲು ಸಜ್ಜನರು, ದುರ್ಜನರು ಇದ್ದಾರೆ ಈಗಾಗಿ ಹಿಂದಿನ ಕಾಲ ಚೆನ್ನಾಗಿತ್ತು ಈಗ ಎಲ್ಲಾ ಕೆಟ್ಟುಹೋಗಿದೆ ಎಂಬ ಬಗ್ಗೆ ದೋಷಾರೋಪಣೆ ಮಾಡುವುದಿಲ್ಲ ಎಂದು ಅವರು ಹೇಳಿದರು.

    ಕೆರೆ ಕಟ್ಟಿಸು, ದೇವಾಲಯ ನಿರ್ಮಿಸು ಎಂಬ ಬಗ್ಗೆ ತಿಳಿಸಿದ ಶ್ರೀಗಳು, ದೇವಾಲಯಗಳು ಸಾಂಸ್ಕೃತಿಕ ಕೇಂದ್ರಗಳಾಗಿದ್ದವು, ವಿದ್ಯೆ ಕ್ಷೇತ್ರಗಳಾಗಿದ್ದವು ಇವುಗಳು ಭಾರತದ ಪರಂಪರೆಯಲ್ಲಿ ಬಂದಿವೆ ಎಂದು ಉಲ್ಲೇಖಿಸಿದರು.

    ದೇವಾಲಯ ನಿರ್ಮಾಣದ ಜೊತೆಗೆ ಪ್ರೌಢಶಾಲೆಯಿಂದ ಕಾಲೇಜು ಕಟ್ಟಡವನ್ನು ನಿರ್ಮಿಸುವಂತೆ ಯುವಕರು ಮುಂದಾಗಬೇಕು, ಇದಕ್ಕೆ ಬೇಕಾಗುವ ಆರ್ಥಿಕ ನೆರವನ್ನು ಮಠದ ವತಿಯಿಂದ ನೀಡುವುದಾಗಿ ಭರವಸೆ ನೀಡಿದರು ಈ ಕಾರ್ಯಕ್ಕೆ ಮುಂದಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಅವರು ವಿದ್ಯಾ ದೇಗುಲವನ್ನು ನಿರ್ಮಿಸಲು ಯುವಕರು ಮುಂದಾಗಬೇಕು, ಕಟ್ಟಡ ಉದ್ಘಾಟನೆಗೆ ಮತ್ತೆ ಬರುವಂತೆ ನೀವು ಮಾಡಬೇಕೆಂದು ಹೃದಯ ತುಂಬಿ ಹಾರೈಸಿದರು.

    ಮಗುವಿಗೆ ಜನ್ಮ ನೀಡಿದರೆ ಮಾತ್ರ ತಾಯಿ ಎಂಬ ಬಿರುದು ಸಿಗುತ್ತದೆ, ಮಗುವಿನಿಂದಾಗಿ ತಾಯಿಗೆ ಜೀವಂತ ಬದುಕಿನಲ್ಲಿ ಮರುಜನ್ಮ ಸಿಗುತ್ತದೆ, ದೇವರೆ ನಮಗೆ ಪ್ರಾಣ ಕೊಟ್ಟಿದ್ದರು ಪುನಃ ದೇವರಿಗೆ ಪ್ರಾಣ ಪ್ರತಿಷ್ಠಾಪನೆ ಮಾಡುತ್ತೇವೆ ಈ ಹಿನ್ನಲೆಯಲ್ಲಿ ಕಲ್ಲಿಗೆ ದೇವರೆಂಬ ಸಂಸ್ಕಾರ ಬರುವುದು ನಿಮ್ಮಂತಹ ತಾಯಿಂದ ಎಂದು ಹೇಳಿದರು.

    ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ ಧಾರ್ಮಿಕ ದತ್ತಿ ಸಚಿವರಾಗಿ ಸೇವೆ ಸಲ್ಲಿಸಿದ ಸಂದರ್ಭದಲ್ಲಿ ಮಠಮಾನ್ಯಗಳ ಬಗ್ಗೆ ಅಧ್ಯಯನ ಮಾಡುತ್ತಾ ಸಿರಿಗೆರೆ ಮಠಕ್ಕೆ ಬೇಟಿ ನೀಡಿದಾಗ ಅನೇಕ ವಿಶಿಷ್ಟ, ವೈಶಿಷ್ಟ್ಯಗಳನ್ನು ಕಂಡುಕೊಂಡೆ, ಸರ್ಕಾರಕ್ಕೆ ಸಮಾನಾಂತರವಾಗಿ ನ್ಯಾಯದಾನ ಮಾಡುವಂತಹ ಮಠವಿದ್ದರೆ ಅದು ಸಿರಿಗೆರೆ ಮಠ ಎಂದು ಸದನದಲ್ಲಿ ಪ್ರಸ್ತಾಪಿಸಿದೆ ಎಂದು ತಿಳಿಸಿದರು.

    ರಾಜಕೀಯ ಧೃವೀಕರಣದಿಂದಾಗಿ ಉಡುಪಿ, ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಅನಿವಾರ್ಯ ಹಾಗೂ ಅಗತ್ಯ ಕಾರಣಗಳಿಂದಾಗಿ ಸ್ಪರ್ಧಿಸಬೇಕಾಯಿತು, ಈ ಬಗ್ಗೆ ಶ್ರೀಗಳ ಬಳಿಗೆ ಹೋಗಿ ಆಶೀರ್ವಾದ ಕೇಳಿದಾಗ ತಮ್ಮದೇ ಆದ ಕಟ್ಟುಪಾಡುಗಳು, ನಿಯಮಗಳು, ಸಂಸ್ಕೃತಿಯನ್ನು ಅಳವಡಿಸಿಕೊಂಡ ಶ್ರೀಗಳು ಆಶೀರ್ವದಿಸಿದರು ಎಂದು ಹೇಳಿದರು.

    ಸಮಾಜದ ಸುಸ್ಥಿರವಾದಂತಹ ಚಟುವಟಿಕೆಗಳು ನಡೆದಾಗ ಮಾತ್ರ ಇಡೀ ಭಾರತವನ್ನು ಶಕ್ತಿಯುವ ರಾಷ್ಟ್ರವನ್ನಾಗಿ ಕಟ್ಟಲು ಸಾಧ್ಯ ಎಂಬುದು ಕಟು ಸತ್ಯ, ದೇಶದ ಗಡಿಭಾಗದಲ್ಲಿ ನಡೆಯುತ್ತಿರುವ ವಿದ್ಯಾಮಾನಗಳನ್ನು ಗಮನಿಸಿದಾಗ, ಒಬ್ಬ ವ್ಯಕ್ತಿಯಾಗಿ, ಧರ್ಮವಾಗಿ, ಒಂದು ಜಾತಿಯಾಗಿ ನೀಡಬಾರದು, ಬದಲಾಗಿ ದೇಶವಾಗಿ ನೀಡಬೇಕು, ಆ ಹಿನ್ನಲೆಯಲ್ಲಿ ಸಮೃದ್ಧ, ಸಮರ್ಥ, ಸ್ವಾಭಿಮಾನಿ, ಶಕ್ತಿಶಾಲಿ ಭಾರತ ನಿರ್ಮಾಣವಾಗಬೇಕಾದರೆ, ನಾಗರೀಕರಾಗಿ ನಾವು ನಮ್ಮ ಕರ್ತವ್ಯ ನಿರ್ವಹಿಸಬೇಕು ಎಂದರು.

    ಶಾಸಕ ಹೆಚ್.ಡಿ ತಮ್ಮಯ್ಯ ಮಾತನಾಡಿ ಭಾರತದ ಧರ್ಮ, ಸಂಸ್ಕಾರ, ಸಂಸ್ಕೃತಿ, ಧಾರ್ಮಿಕತೆ ಮೊದಲು ಉಳಿಯಬೇಕು ಇಲ್ಲದಿದ್ದರೆ ದೇಶದ ಭವಿಷ್ಯ ಮುಂದಿನ ದಿನಗಳಲ್ಲಿ ಕಷ್ಟಸಾಧ್ಯ ಎಂದು ಹೇಳಿದರು.

    ವಿವಿಧತೆಯಲ್ಲಿ ಏಕತೆ ವೈವಿದ್ಯತೆ ಕಾಣುವಂತ ದೇಶ ಪ್ರಪಂಚದಲ್ಲೇ ಭಾರತ ಮಾತ್ರ, ದೇವನೊಬ್ಬ ನಾಮ ಹಲವು, ಸಾವಿರಾರು ಸಂಸ್ಕಾರದಿಂದ ಕೂಡಿದ ಧರ್ಮಗಳಿರುವ ಈ ದೇಶದಲ್ಲಿ ಹಿಂದೆ ಘಜನಿ ಮೊಹಮ್ಮದ್, ಬ್ರಿಟೀಷರ ಆಳ್ವಿಕೆ ಇದ್ದರು ಭಾರತದಲ್ಲಿ ಸಂಸ್ಕಾರ ಧರ್ಮ ಉಳಿದಿದ್ದರೆ ವಿವಿಧತೆಯಲ್ಲಿ ವೈವಿದ್ಯೆತೆ ಕಾರಣ ಎಂದರು.

    ದೇವಾಲಯದ ಗರ್ಭಗುಡಿಯೋಳಗೆ ತೆಗೆದುಕೊಂಡು ಹೋದ ನೀರು ತೀರ್ಥವಾಗುತ್ತದೆ, ಹಣ್ಣು ಹೂವು ಕಾಯಿ, ಪೂಜೆ ನಂತರ ಪ್ರಸಾದವಾಗುತ್ತದೆ ಈ ರೀತಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದ ಪ್ರತಿಯೋಬ್ಬರು ಸಂಸ್ಕಾರವಂತ ಪ್ರಜೆಗಳಾಗಬೇಕು ಎಂದರು.

    ನ್ಯಾಯಾಲಕ್ಕೆ ಹೋಗಲು ಭಕ್ತರಿಗೆ ತೊಂದರೆಯಾಗುತ್ತಿರುವುದನ್ನು ಮನಗೊಂಡು ಮಠದಲ್ಲಿ ಉಚಿತವಾಗಿ ಕೇಸು ನಡೆಸುವ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ನ್ಯಾಯಪೀಠ ಸ್ಥಾಪಿಸಿದ್ದಾರೆ ಎಂದು ಬರ್ಣಿಸಿದರು.

    ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಮಾತನಾಡಿ ಭಾರತ ದೇಶದಲ್ಲಿ ಅಮೋಘವಾದ ಪರಂಪರೆಯನ್ನು ನಮ್ಮ ಪೂರ್ವಿಕರು ಬಿಟ್ಟು ಹೋಗಿದ್ದಾರೆ ನೂರಾರು ಗುಡಿಗಳನ್ನು ಕಟ್ಟಿ, ನೂರಾರು ಹೆಸರುಗಳನ್ನುಟ್ಟು ಪೂಜಿಸಿದರು ಮೂಲತತ್ವ ಒಂದೇ ಆಗಿದೆ, ದೇವನೊಬ್ಬ ನಾಮ ಹಲವು ಎಂಬಂತೆ ದೇವರನ್ನು ಪೂಜಿಸುತ್ತಿದ್ದೇವೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಮರುಳುಸಿದ್ದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಹಿಂದೆ ಇದ್ದ ಶ್ರೀಕಲ್ಲೇಶ್ವರಸ್ವಾಮಿ ಹಳೆಯ ದೇವಾಲಯವನ್ನು ಕೆಡವಿ ೨೦೧೫ ರಿಂದ ನೂತನ ದೇವಾಲಯ ನಿರ್ಮಿಸಲು ಅಡಿಗಲ್ಲು ಹಾಕಿದೆವು. ಇದೀಗ ಸರಕಾರ, ಧಾರ್ಮಿಕ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಕಾರದಿಂದ ೧.೫೦ ಕೋಟಿ ರೂ .ವೆಚ್ಚದಲ್ಲಿ ದೇವಾಲಯ ನಿರ್ಮಾಣಗೊಂಡಿದೆ. ಎಂದರು.

    ಅಧ್ಯಕ್ಷತೆಯನ್ನು ಮಲ್ಲೇಗೌಡ ವಹಿಸಿದ್ದರು, ವೇದಿಕೆಯಲ್ಲಿ ಮಹಡಿಮನೆ ಸತೀಶ್, ಬಿ.ಹೆಚ್ ಹರೀಶ್, ಡಾ. ಆನಂದ್, ಡಾ. ವಿನಾಯಕ್, ಹೆಚ್.ಸಿ ಕಲ್ಮುರುಡಪ್ಪ, ಚಿದಾನಂದ್, ನಿರಂಜನ್, ಶೇಖರಪ್ಪ, ಕಾಂತರಾಜು, ರೇವಣ್ಣ ಮತ್ತಿತರರು ಉಪಸ್ಥಿತರಿದ್ದರು.ಮಲ್ಲಿಕಾರ್ಜುನ್ ಸ್ವಾಗತಿಸಿ ಅರ್ಚನಾ ನಿಲಕಂಠಪ್ಪ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

    Temples are a symbol of religious devotion.