Category: ಚಿಕ್ಕಮಗಳೂರು

  • ಬ್ಯಾಂಕ್‌ನಿಂದ ಸೇವಾ ನ್ಯೂನತೆಗೆ ಬಡ್ಡಿ ಸಹಿತ ಹಣ ನೀಡಲು ಆದೇಶ

    ಬ್ಯಾಂಕ್‌ನಿಂದ ಸೇವಾ ನ್ಯೂನತೆಗೆ ಬಡ್ಡಿ ಸಹಿತ ಹಣ ನೀಡಲು ಆದೇಶ

    ಚಿಕ್ಕಮಗಳೂರು:  ಗ್ರಾಹಕನ ಖಾತೆಯಿಂದ ಟಿಡಿಎಸ್ ಹಣ ಕಡಿತಗೊಳಿಸಿದ ವ್ಯವಹಾರದಲ್ಲಿ ಸೇವಾ ನ್ಯೂನತೆ ಎಸಗಿದ ಆರೋಪದಲ್ಲಿ ಬ್ಯಾಂಕ್ ವಿರುದ್ಧ ತೀರ್ಪು ನೀಡಿರುವ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಕಡಿತಗೊಳಿಸಿದ ಮೊತ್ತವನ್ನು ಬಡ್ಡಿ ಸಹಿತ ಹಿಂತಿರುಗಿಸುವಂತೆ ಹಾಗೂ ಪರಿಹಾರ, ಖರ್ಚು-ವೆಚ್ಚವನ್ನು ನೀಡುವಂತೆ ಆದೇಶ ನೀಡಿದೆ.

    ನಗರದ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವ ಕಲ್ಯಾಣನಗರದ ವಿವೇಕಾನಂದ ಕಾಮತ್ ನಗರದ ಬ್ಯಾಂಕ್ ಆಫ್ ಬರೋಡದಲ್ಲಿ ಓ.ಡಿ. ಖಾತೆ ಹಾಗೂ ಉಳಿತಾಯ ಖಾತೆ ಹೊಂದಿದ್ದಾರೆ. ೨೦೨೦ರ ಆಗಸ್ಟ್‌ನಲ್ಲಿ ಟಿಡಿಎಸ್ ಹಣವೆಂದು ವಿವೇಕಾನಂದ ಕಾಮತ್ ಅವರ ಓ.ಡಿ.ಖಾತೆಯಿಂದ ಒಮ್ಮೆ ರೂ. ೩೦,೦೦೦, ಮತ್ತೊಮ್ಮೆ ೨೦,೦೦೦ ಒಟ್ಟು ೫೦,೦೦೦ ಹಾಗೂ ಉಳಿತಾಯ ಖಾತೆಯಿಂದ ರೂ.೭,೫೦೦ ಅನ್ನು ಕಡಿತಗೊಳಿಸಿದ್ದು, ಈ ಹಣವನ್ನು ಆದಾಯ ತೆರಿಗೆ ಇಲಾಖೆಗೆ ಪಾವತಿಸಿಲ್ಲವೆನ್ನಲಾಗಿದೆ.

    ಅಲ್ಲದೆ, ಕಡಿತಗೊಳಿಸಿರುವ ಆದಾಯ ತೆರಿಗೆಯನ್ನು ಮರಳಿ ಪಡೆಯಲು ಅನುಕೂಲವಾಗುವಂತೆ ಆದಾಯ ತೆರಿಗೆ ಕಾಯ್ದೆ ಕಲಂ ೧೬(ಎ) ನಮೂನೆಯನ್ನು ಕೂಡ ನೀಡಿಲ್ಲವೆಂದು ಹೇಳಲಾಗಿದೆ. ಈ ಬಗ್ಗೆ ವಿಚಾರಿಸಿದಾಗ ಸೂಕ್ತ ಉತ್ತರವನ್ನು ನೀಡಿರಲಿಲ್ಲ. ಈ ಬಗ್ಗೆ ವಿವೇಕಾನಂದ ಕಾಮತ್ ೨೦೨೪ರ ನವೆಂಬರ್ ೨೧ ರಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿ, ಸೇವಾ ನ್ಯೂನತೆ ಎಸಗಿರುವುದಾಗಿ ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ಆರೋಪಿಸಿದ್ದರು.

    ಈ ಬಗ್ಗೆ ವಿಚಾರಣೆ ನಡೆಸಿದ ಆಯೋಗವು ಇತ್ತೀಚೆಗೆ ತೀರ್ಪು ನೀಡಿದ್ದು, ಟಿಡಿಎಸ್ ಹೆಸರಿನಲ್ಲಿ ಕಡಿತಗೊಳಿಸಿದ ಮೊತ್ತವಾದ ರೂ.೬೮,೮೦೦ ಅನ್ನು ಶೇ.೯ರ ಬಡ್ಡಿ ದರದಲ್ಲಿ ೨೦೨೦ರ ಆಗಸ್ಟ್ ೨೯ ರಿಂದ ಕಾಮತ್ ಅವರಿಗೆ ಪಾವತಿಸುವಂತೆ ಹಾಗೂ ಪರಿಹಾರವಾಗಿ ರೂ.೧೦,೦೦೦ ಹಾಗೂ ಪ್ರಕರಣದ ಖರ್ಚು-ವೆಚ್ಚಕ್ಕಾಗಿ ರೂ.೫೦೦೦ಗಳನ್ನು ನೀಡುವಂತೆ ಆದೇಶ ನೀಡಿದೆ.

    ಅಧ್ಯಕ್ಷರಾದ ಎನ್.ಆರ್.ಚೆನ್ನಕೇಶವ, ಸದಸ್ಯರಾದ ಈ.ಪ್ರೇಮಾ ಮತ್ತು ಡಾ.ಮಂಜುನಾಥ ಎಂ.ಬಮ್ಮನಕಟ್ಟಿ ಇವರನ್ನು ಒಳಗೊಂಡ ಆಯೋಗವು ಪ್ರಕರಣದ ವಿಚಾರಣೆ ನಡೆಸಿ ಈ ತೀರ್ಪು ನೀಡಿದ್ದು, ಬ್ಯಾಂಕ್‌ನ ಸೇವಾ ನ್ಯೂನತೆಯನ್ನು ಎತ್ತಿ ಹಿಡಿದಿದ್ದಾರೆ. ದೂರುದಾರರ ಪರವಾಗಿ ವಕೀಲರಾದ ಎನ್.ದೇವೇಂದ್ರಕುಮಾರ್ ಜೈನ್ ವಾದ ಮಂಡಿಸಿದ್ದರು.

    Bank ordered to pay money with interest for service deficiency

  • ವಿದ್ಯಾವಂತರು ಹೆಚ್ಚಾಗುತ್ತಿದ್ದರೂ ಸಹಿಷ್ಣುತೆ ಕಡಿಮೆ

    ವಿದ್ಯಾವಂತರು ಹೆಚ್ಚಾಗುತ್ತಿದ್ದರೂ ಸಹಿಷ್ಣುತೆ ಕಡಿಮೆ

    ಚಿಕ್ಕಮಗಳೂರು: ಇಂದಿನ ದಿನಮಾನಗಳಲ್ಲಿ ಜನರ ಮನಸ್ಥಿತಿ ಬದಲಾಗಿದ್ದು, ಸಾಮಾಜಿಕ ಜಾಲತಾಣ ಹೆಚ್ಚು ಹೆಚ್ಚು ಪ್ರಭಾವ ಬೀರುತ್ತಿವೆ. ಸಮಾಜದಲ್ಲಿ ವಿದ್ಯಾವಂತರು ಹೆಚ್ಚಾಗುತ್ತಿದ್ದರೂ ಜನರಲ್ಲಿ ಸಹಿಷ್ಣುತೆ ಕಡಿಮೆಯಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ವಿಷಾದ ವ್ಯಕ್ತಪಡಿಸಿದರು

    ನಗರದ ರಾಮನಹಳ್ಳಿಯ ಜಿಲ್ಲಾ ಪೊಲೀಸ್ ಸಶಸ್ತ್ರ ಮೀಸಲು ಪಡೆಯ ಹುತಾತ್ಮರ ಸ್ಮಾರಕದ ಆವರಣದಲ್ಲಿ ಇಂದು ನಡೆದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳ ಪ್ರಭಾವದ ನಡುವೆ ಸ್ವಯಂ ತೀರ್ಮಾನಕ್ಕೆ ಬರುವ ಜನರು ಕೇವಲ ೨೦ ಸೆಕೆಂಡ್‌ಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಮನೋಭಾವದಿಂದ ಜನರು ಹೊರ ಬರಬೇಕು ಎಂದು ಹೇಳಿದರು.

    ಪ್ರತಿವರ್ಷ ಹುತಾತ್ಮರ ಸಂಖ್ಯೆ ಹೆಚ್ಚುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ. ಇದು ಅತ್ಯಂತ ವಿಷಾದದ ಸಂಗತಿ. ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯ ನಿರ್ವಹಣೆಯೇ ವಿಭಿನ್ನವಾಗಿದ್ದು, ಅತ್ಯಂತ ಒತ್ತಡದಲ್ಲಿ ಕೆಲಸ ಮಾಡುವ ಪರಿಸ್ಥಿತಿ ಇದೆ. ಜಿಲ್ಲೆಯಲ್ಲಿ ಕಳೆದ ಎರಡೂವರೆ ತಿಂಗಳಲ್ಲಿ ನಡೆದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು, ಹಬ್ಬಾಚರಣೆಗಳು, ಹಾಗೆಯೇ ದೇವೀರಮ್ಮ ಜಾತ್ರಾ ಮಹೋತ್ಸವದ ಕಳೆದ ಎರಡು ಮೂರು ದಿನಗಳೂ ಸೇರಿದಂತೆ ಸುಮಾರು ೭೫ ದಿನಗಳಲ್ಲಿ ಒಂದು ದಿನವೂ ರಜೆ ಇಲ್ಲದೆ ನಿಷ್ಠೆಯಿಂದ ಕಾರ್ಯ ನಿರ್ವಹಿಸಿದ್ದಾರೆ ಎಂದರು.

    ದೇವೀರಮ್ಮ ಜಾತ್ರೋತ್ಸವದ ಸಲುವಾಗಿ ಸುಮಾರು ೭೫ ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಬೆಟ್ಟವೇರಿ ಸುರಕ್ಷಿತವಾಗಿ ಅವರ ಮನೆಗಳಿಗೆ ಹಿಂದಿರುಗಿದ್ದಾರೆ. ಅದಕ್ಕೆಲ್ಲ ಸಕಾರಾತ್ಮಕವಾಗಿ ಸ್ಪಂದಿಸಿ ಪೊಲೀಸರು ಕಾರ್ಯ ನಿರ್ವಹಿಸಿದ್ದು, ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ತುಕಡಿ ಅತ್ಯಂತ ಸಮರ್ಪಕವಾಗಿ ಕಾರ್ಯ ನಿರ್ವಹಿಸಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ಮಾತನಾಡಿ, ೧೯೫೯ ರ ಅಕ್ಟೋಬರ್ ೨೧ ರಂದು ಗಡಿಯಲ್ಲಿರುವ ಲಡಾಖ್‌ನಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಚೀನಾ ಸೈನಿಕರು ಗಡಿ ಪ್ರವೇಶ ಮಾಡುವ ಪ್ರಯತ್ನದಲ್ಲಿದ್ದಾಗ ಕಡಿಮೆ ಶಸ್ತ್ರಾಸ್ತ್ರ ಹಾಗೂ ಕಡಿಮೆ ಸಂಖ್ಯೆಯಲ್ಲಿದ್ದ ಭಾರತದ ಧೀರ ಪೊಲೀಸರು ಅತ್ಯಂತ ದಿಟ್ಟತನದಿಂದ ಹೋರಾಡಿ ತಮ್ಮ ಪ್ರಾಣಾರ್ಪಣೆ ಮಾಡಿದ್ದಾರೆ. ಅಂಥವರ ತ್ಯಾಗವನ್ನು ಸ್ಮರಿಸುವ ನಿಟ್ಟಿನಲ್ಲಿ ೧೯೬೦ರ ಅಕ್ಟೋಬರ್ ೨೧ ರಂದು ಪೊಲೀಸ್ ಹುತಾತ್ಮರ ದಿನವನ್ನು ಆಚರಿಸಲು ಅಧಿಕೃತವಾಗಿ ಘೋಷಣೆ ಮಾಡಲಾಯಿತು. ಅಂದಿನಿಂದ ದೇಶಾದ್ಯಂತ ಪ್ರತೀ ವರ್ಷ ಅಕ್ಟೋಬರ್ ೨೧ ರಂದು ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ. ಈ ಸಂದರ್ಭದಲ್ಲಿ ಪ್ರತೀ ವರ್ಷ ಹುತಾತ್ಮರಾದ ಪೊಲೀಸರ ಹೆಸರುಗಳನ್ನು ಪ್ರಸ್ತಾಪಿಸಿ ಸ್ಮರಿಸುವುದು ರೂಢಿಯಾಗಿದೆ ಎಂದು ತಿಳಿಸಿದರು.

    ಕಳೆದ ಒಂದು ವರ್ಷದಲ್ಲಿ ದೇಶದ ವಿವಿಧ ರಾಜ್ಯಗಳ ಹಾಗೂ ಕೇಂದ್ರ ಪೊಲೀಸ್ ದಳದ ಒಟ್ಟು ೧೯೧ ಪೊಲೀಸರು ಸೇವೆಯಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇವರಲ್ಲಿ ಕರ್ನಾಟಕದ ೮ ಧೀರ ಪೊಲೀಸರು ಸೇರಿದ್ದು, ಪೊಲೀಸರ ತ್ಯಾಗ, ಬಲಿದಾನ ಎಂದಿಗೂ ವ್ಯರ್ಥವಾಗುವುದಿಲ್ಲ. ಪೊಲೀಸರು ತಮ್ಮ ಕರ್ತವ್ಯದಲ್ಲಿ ತೊಡಗಿ ಕಾನೂನು ಸುವ್ಯವಸ್ಥೆ, ನಾಗರಿಕ ಆಸ್ತಿ ಪಾಸ್ತಿ ರಕ್ಷಣೆ ಅಪರಾಧ ತಡೆ ಹಾಗೂ ಪತ್ತೆ, ಆಂತರಿಕ ಭದ್ರತೆ ಹೀಗೆ ಹಲವು ಕರ್ತವ್ಯ ಪಾಲನೆಯ ಹಾದಿಯಲ್ಲಿ ಸದಾ ನಿರತರಾಗಿರುತ್ತಾರೆ. ಸಮಾಜದ ಸುರಕ್ಷತೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿರುವ ಪೊಲೀಸ್ ಹುತಾತ್ಮರನ್ನು ಈ ಸಂದರ್ಭದಲ್ಲಿ ಸ್ಮರಿಸಿ ಅವರ ಕುಟುಂಬಕ್ಕೆ ಧೈರ್ಯ ತುಂಬುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.

    ಪೊಲೀಸರ ಕರ್ತವ್ಯ ನಿಷ್ಠೆಯಿಂದ ಸಮಾಜದಲ್ಲಿ ಪ್ರತಿಯೊಬ್ಬರೂ ಶಾಂತಿಯುತ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿದೆ. ಸಾರ್ವಜನಿಕರ ಆಸ್ತಿ-ಪಾಸ್ತಿ ರಕ್ಷಣೆ ಮಾಡಲು ಅದೇ ಸಾರ್ವಜನಿಕರ ಸಹಕಾರ ಸಹ ಇಲಾಖೆಗೆ ಅತ್ಯಗತ್ಯ. ಪ್ರತಿಯೊಂದು ಹಬ್ಬ-ಹರಿದಿನಗಳಲ್ಲಿ ಸಾರ್ವಜನಿಕರು ಯಾವ ರೀತಿ ಸಂಭ್ರಮದಿಂದ ಹಬ್ಬಾಚರಣೆ ಮಾಡಬೇಕೆಂದು ಯೋಜನೆ ಹಾಕುತ್ತಿದ್ದರೆ, ಪೊಲೀಸರು ಮಾತ್ರ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸುತ್ತಾರೆ. ಈ ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆಯನ್ನು ಹತ್ತಿಕ್ಕುವ ಸಂದರ್ಭದಲ್ಲಿ ಸಹ ಪೊಲೀಸರು ತ್ಯಾಗ ಬಲಿದಾನ ಮಾಡಿರುವುದನ್ನು ಮರೆಯುವಂತಿಲ್ಲ ಎಂದು ಹೇಳಿದರು.

    ಇದೇ ವೇಳೆ ಈ ವರ್ಷ ಕರ್ತವ್ಯದಲ್ಲಿ ಪ್ರಾಣ ಕಳೆದುಕೊಂಡ ಪೊಲೀಸ್ ಅಧಿಕಾರಿ-ಸಿಬ್ಬಂದಿಯ ಪಟ್ಟಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಓದಿದರು. ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೆಗೌಡ. ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಮುಖಂಡರಾದ ಕೆ.ಟಿ.ರಾಧಕೃಷ್ಣ, ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಸಿ.ಟಿ.ಜಯಕುಮಾರ್, ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

    Although the number of educated people is increasing tolerance is decreasing.

  • ದೇವೀರಮ್ಮನ ದರ್ಶನಕ್ಕೆ ದೇವೀರಮ್ಮನ ಬೆಟ್ಟಕ್ಕೆ ಸಾಗಿ ಬಂದ ಭಕ್ತರು

    ದೇವೀರಮ್ಮನ ದರ್ಶನಕ್ಕೆ ದೇವೀರಮ್ಮನ ಬೆಟ್ಟಕ್ಕೆ ಸಾಗಿ ಬಂದ ಭಕ್ತರು

    ಚಿಕ್ಕಮಗಳೂರು: ಮಲ್ಲೇನಹಳ್ಳಿ ಬಿಂಡಿಗ ದೇವೀರಮ್ಮನ ದರ್ಶನ ಪಡೆಯಲು ಭಕ್ತರು ಬರಿಗಾಲಿನಲ್ಲೇ ದಣಿವರಿಯದೆ ಬೆಟ್ಟ ಹತ್ತಿದರು. ಮಳೆ, ಕಾಡುಮೇಡು, ತಗ್ಗುದಿಣ್ಣೆ, ಮೊನಚು, ಬೆಣಚು ಕಲ್ಲು, ಜಲ್ಲಿಕಲ್ಲು ಯಾವುದನ್ನೂ ಲೆಕ್ಕಿಸದೆ ಸಾವಿರಾರು ಭಕ್ತರು ಸೋಮವಾರ ದೇವೀರಮ್ಮನ ಬೆಟ್ಟಕ್ಕೆ ಸಾಗಿ ಬಂದರು.

    ಈ ಬಾರಿ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತ ಬೆಟ್ಟದಲ್ಲಿ ಜನದಟ್ಟಣೆ ತಪ್ಪಿಸಲು ಎರಡು ದಿನ ಬೆಟ್ಟ ಹತ್ತಲು ಅವಕಾಶ ಮಾಡಿಕೊಟ್ಟಿತ್ತು. ಭಾನುವಾರ ಸಾವಿರಾರು ಜನರು ಬೆಟ್ಟವೇರಿದ್ದರು. ಎರಡನೇ ದಿನವಾದ ಸೋಮವಾರವೂ ಸಾವಿರಾರು ಭಕ್ತರು ಬೆಟ್ಟ ಹತ್ತಿ ಪುಳಕಿತರಾದರು.

    ಭಾನುವಾರ ರಾತ್ರಿ ಸುರಿದ ನಿರಂತರ ಮಳೆಯಿಂದಾಗಿ ಇಡೀ ಬೆಟ್ಟದಲ್ಲಿ ತೇವಾಂಶ ಹೆಚ್ಚಾಗಿ ಜಾರಿಕೆ ಹೆಚ್ಚಾಗಿಯೇ ಇತ್ತು. ಯಾವುದನ್ನೂ ಭಕ್ತಗಣ ಲೆಕ್ಕಿಸಲಿಲ್ಲ. ಅಗ್ನಿಶಾಮಕ ಸಿಬ್ಬಂದಿ ಕಟ್ಟಿದ್ದ ಹಗ್ಗ ಹಿಡಿದು ಹೆಜ್ಜೆಯ ಮೇಲೆ ಹೆಜ್ಜೆ ಹಾಕಿ ಒಬ್ಬರಿಗೊಬ್ಬರು ಸಹಕರಿಸುತ್ತ ಬೆಟ್ಟ ಹತ್ತಿದರು. ಕಡಿದಾದ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿ ಭಕ್ತರ ಕೈಹಿಡಿದು ಮೇಲೆ ಎತ್ತಿ ಮುಂದೆ ದಾಟಿಸಿದರು.

    ಮಲ್ಲೇನಹಳ್ಳಿ ಕಡೆಯಿಂದ ಪ್ರಮುಖ ದಾರಿಯಲ್ಲಿ ಬಹುತೇಕ ಭಕ್ತರು ಬಂದರೆ, ಮಾಣಿಕ್ಯಧಾರ ಜಲಪಾತದ ಕಡೆಯಿಂದಲೂ ಭಕ್ತರು ಸಾಲುಗಟ್ಟಿ ಬಂದರು. ಇನ್ನೊಂದೆಡೆ ಅರಿಶಿಣಗುಪ್ಪೆ ಕಡೆಯಿಂದ ತೋಟದೊಳಗಿನ ಮಾರ್ಗದಲ್ಲೂ ಹಲವರು ಬಂದು ದೇವಿಯ ದರ್ಶನ ಪಡೆದರು.

    ಬೆಟ್ಟ ಏರಿದವರ ಪೈಕಿ ಮೊಬೈಲ್‌ ಕ್ಯಾಮೆರಾಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳದವರೇ ಇಲ್ಲ. ಸವಿ ನೆನಪುಗಳನ್ನು ಹಿಡಿದಿಟ್ಟುಕೊಂಡರು. ಸಾಮಾಜಿಕ ಮಾಧ್ಯಮಗಳಿಗೆ ಫೋಟೊಗಳನ್ನು ಅಪ್‌ಲೋಡ್‌ ಮಾಡಿ ಖುಷಿಪಟ್ಟರು. ಈ ಸಂಭ್ರಮದಲ್ಲಿ ಬೆಟ್ಟ ಹತ್ತಿದ ಪ್ರಯಾಸ ಮರೆಯಾಗಿತ್ತು.

    ಬೆಟ್ಟ ಏರುವಾಗ ಕೆಲ ಭಕ್ತರು ಕಾಲು ಉಳುಕಿಸಿಕೊಂಡರು. ಇಬ್ಬರು ಮಹಿಳೆಯರು ಸುಸ್ತಾಗಿ ಅಸ್ವಸ್ಥಗೊಂಡರು. ಎಲ್ಲರನ್ನೂ ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತವಾಗಿ ಬೆಟ್ಟದಿಂದ ಹೊತ್ತುಕೊಂಡು ಬಂದು ಬೆಟ್ಟದ ಕೆಳಗೆ ಬಿಟ್ಟರು. ನಂತರ ಅವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.

    ರಾತ್ರಿ 7 ಗಂಟೆಗೆ ಬೆಟ್ಟದಲ್ಲಿ ಭಕ್ತರು ತಂದಿದ್ದ ಕಟ್ಟಿಗೆ ಹಾಗೂ ಬಟ್ಟೆಗೆ ಬೆಣ್ಣೆ ಸವರಿ ದೀಪೋತ್ಸವ ಕಾರ್ಯಕ್ರಮ ನಡೆಸಲಾಯಿತು. ಜಾರಿಕೆ ನಡುವೆ ಬೆಟ್ಟ ಏರಲು ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಹಾಗೂ ಸ್ವಯಂ ಸೇವಕರು ಮಳೆಯನ್ನು ಲೆಕ್ಕಿಸದೆ ಭಕ್ತರ ಸಹಾಯಕ್ಕೆ ನಿಂತಿದ್ದರು.

    ಅಗ್ನಿಶಾಮಕ ಸಿಬ್ಬಂದಿ ಅಲ್ಲಲ್ಲಿ ಹಗ್ಗಗಳನ್ನು ತಮ್ಮ ಸೊಂಟಕ್ಕೆ ಸಿಕ್ಕಿಸಿಕೊಂಡು ಭಕ್ತರು ಹಗ್ಗ ಹಿಡಿದು ಮೇಲೆ ಬರಲು ಸಹಕರಿಸಿದರು. ಅಲ್ಲಲ್ಲಿ ಕೆಲ ಸಂಘ–ಸಂಸ್ಥೆಗಳ ವತಿಯಿಂದ ಪಾನಕ, ಹಣ್ಣು, ನೀರು ವಿತರಣೆ ಮಾಡಿದರು. ಭಾನುವಾರ ರಾತ್ರಿ ಸುರಿದ ಮಳೆಯಿಂದ ಹಾನಿಯಾದ ರಸ್ತೆ ಗುಂಡಿಗಳು ಹಾಗೂ ವಾಹನ ನಿಲುಗಡೆ ಸ್ಥಳಗಳಲ್ಲಿ ತೊಂದರೆಯಾಗದಂತೆ ಪೊಲೀಸ್ ಸಿಬ್ಬಂದಿ ಸೋಮವಾರ ಬೆಳಿಗ್ಗೆಯೇ ವೆಟ್ ಮಿಕ್ಸ್ ಹಾಕಿ ಸರಿಪಡಿಸಿದರು

    Devotees who had traveled to Deviramma Hill to have darshan of Deviramma

  • ಅಪರಾಧವನ್ನು ದ್ವೇಷಿಸಬೇಕು ಹೊರತು-ಅಪರಾಧಿಯಲ್ಲ

    ಅಪರಾಧವನ್ನು ದ್ವೇಷಿಸಬೇಕು ಹೊರತು-ಅಪರಾಧಿಯಲ್ಲ

    ಚಿಕ್ಕಮಗಳೂರು:  ಅಪರಾಧವನ್ನು ದ್ವೇಷಿಸಬೇಕು ಹೊರತು, ಅಪರಾಧಿಯನ್ನಲ್ಲ. ಆಕಸ್ಮಿಕವಾಗಿ ಪೆಟ್ಟು ತಿಂದು ಶಿಕ್ಷೆಗೆ ಗುರಿಯಾಗುವ ವ್ಯಕ್ತಿಗಳು, ಬಿಡುಗಡೆ ಬಳಿಕ ಸಾತ್ವಿಕ ಜೀವನದಡಿ ಬಾಳ ನ್ನು ಮುನ್ನೆಡೆಸಬೇಕು ಎಂದು ಕಸಾಪ ರಾಜ್ಯ ಪ್ರಧಾನ ಕಾರ್ಯದರ್ಶಿ ಪಟೇಲ್ ಪಾಂಡು ಹೇಳಿದರು.

    ನಗರದ ಜಿಲ್ಲಾ ಕಾರಾಗೃಹದಲ್ಲಿ ಶನಿವಾರ ಸಂಜೆ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಮಹಿಳಾ ಘಟ ಕ, ಜಿಲ್ಲಾ ಕೇಂದ್ರ ಕಾರಾಗೃಹ, ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಸಹಯೋಗದಲ್ಲಿ ಹಮ್ಮಿ ಕೊಂಡಿದ್ಧ ಸಂಗೀತ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಆಸ್ತಿ, ಅಂತಸ್ತು ಹಾಗೂ ಹಣದ ದುರಾಸೆಗಾಗಿ ಮನುಷ್ಯ ಸನ್ನಿವೇಶನಕ್ಕೆ ಸಿಲುಕಿಕೊಂಡು ಮನಸ್ಸನ್ನು ಹತೋಟಿ ತರಲಾಗದೇ ತಪ್ಪುದಾರಿಯ ಗುಲಾಮರಾಗಿ ಬಿಡುತ್ತಾರೆ. ಹೀಗಾಗಿ ಮನಸ್ಸನ್ನು ಸ್ಥಿಮಿತಗೊಳಿಸಲು ಪುಸ್ತಕ, ಸಂಗೀತ ಹಾಗೂ ಸಾಹಿತ್ಯದ ಅಭ್ಯಾಸಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

    ಅಧರ್ಮದ ದಾರಿಯಲ್ಲಿ ಸಾಗುವ ವ್ಯಕ್ತಿಗಳು ಒಂದಲ್ಲೊಂದು ದಿನ ಶಿಕ್ಷೆ ಒಳಗಾಗುವನು. ಹಾಗಾಗಿ ವಿಶ್ವ ಮಾನವ ಸಂದೇಶದಂತೆ ಮೊದಲು ಮಾನವನಾಗು ಎಂಬ ತತ್ವ, ಆಲೋಚನೆಗಳ ಮೌಲ್ಯಗಳನ್ನು ಅರ್ಥೈ ಸಿಕೊಳ್ಳಬೇಕು. ದಾರ್ಶನಿಕರ ಕೀರ್ತನೆ, ವಚನಗಳ ಓದಿನಿಂದ ಜೀವನವು ಬದಲಾವಣೆಗೆ ನಾಂದಿಯಾಗಲಿದೆ ಎಂದು ಹೇಳಿದರು.

    ಆತ್ಮಶ್ರದ್ದೆ ಸಾಕ್ಷಿಕರಿಸಿದರೆ, ಅಗಾಧ ಶಕ್ತಿ ಉದ್ಬವವಾಗಲಿದೆ. ಶಕ್ತಿ ಸದ್ಬಳಕೆ ಮಾಡಿಕೊಳ್ಳದೇ, ಸನ್ನಿವೇಶಕ್ಕೆ ಬಲಿಕೊಟ್ಟರೆ, ಬಾಳೆಂಬ ಬಂಡಿಯಲ್ಲಿ ಎಡವಿ ಬೀಳುತ್ತೇನೆ. ಆಸೆಗಳು ದುರಾಸೆಗಳೆಂದು ಭಾವಿಸಿ, ಸುಖ-ದು ಃಖವನ್ನು ಸರಿಸಮಾನಾಗಿ ಅರಿತುಕೊಂಡರೆ ಜಗತ್ತಿನಲ್ಲಿ ಸುಲಭದ ಜೀವನದ ಜೊತೆಗೆ ಸಾಧನೆ ಮಾಡಬಹು ದು ಎಂದು ತಿಳಿಸಿದರು.

    ಕಾರಾಬಂಧಿಗಳು ಬಂಧನದಿಂದ ಮುಕ್ತರಾಗುವ ಸನ್ನಿಹಿತಕಾಲ ಬರಲಿದೆ. ಈ ನಡುವೆ ಕವಿಸಂತರ ಕೃತಿ ಗಳು, ಗಾಂಧಿತತ್ವದ ಅಹಿಂಸಾತ್ಮಕ ಚಿಂತನೆಗಳ್ಳ ಪುಸ್ತಕಗಳನ್ನು ಓದಬೇಕು. ಮಾನವ ಜನ್ಮ ಎಂಬುದು ಬಹು ದೊಡ್ಡದು. ಹಾಳುಮಾಡಿಕೊಂಡರೆ ಕೊನೆಗಳಿಗೆಯಲ್ಲಿ ತೀವ್ರ ಹತಾಸೆಗೆ ಒಳಗಾಗಬೇಕಾಗುತ್ತದೆ. ಹಾಗಾಗಿ ಮನಸ್ಸನ್ನು ಹತೋಟಿಯಲ್ಲಿಡಲು ಸಾಹಿತ್ಯಾತ್ಮಕ ಚಟುವಟಿಕೆ ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು.

    ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ ಸಾಹಿತ್ಯ, ಸಂಗೀತ ಮನಸ್ಸನ್ನು ಉಲ್ಲಾಸಗೊಳಿಸ ಲಿದೆ. ದಾರ್ಶನಿಕರ ಕೃತಿಗಳನ್ನು ಅಭ್ಯಾಸಿಸಿ ಇತರರಿಗೂ ತಿಳಿಸುವಂಥ ಕೆಲಸ ಮಾಡಬೇಕು. ಆದಷ್ಟು ಸಮ ಯ ಮನಸ್ಸನ್ನು ಸಂತೋಷದಿಂದ ಕಳೆಯಲು ಪ್ರಯತ್ನಿಸಬೇಕು. ಆಕಸ್ಮಿಕ ಜರುಗಿದ ಘಟನೆಗಳಿಗೆ ಶಿಕ್ಷೆ ಅನು ಭವಿಸಿ ಹೊಸಮನುಷ್ಯನಾಗಿ ಹೊರಹೊಮ್ಮಬೇಕು ಎಂದರು.

    ಪೊಲೀಸ್, ಕಾರಾಗೃಹ ಸಿಬ್ಬಂದಿ ಹಾಗೂ ಕಾರಾಬಂಧಿಗಳಿಗೆ ಸಾಹಿತ್ಯಾಭಿರುಚಿ ಬೆಳೆಸಲು ಪರಿಷತ್ತಿನಿಂ ದ ಕವಿಗೋಷ್ಠಿ ಹಮ್ಮಿಕೊಳ್ಳುವ ಚಿಂತನೆಯಿದೆ, ಅಧಿಕಾರಿಗಳ ಅಪ್ಪಣೆ ಮೇರೆಗೆ ಮುಂದಿನ ದಿನದಲ್ಲಿ ಕಾರಾಗೃ ಹದಲ್ಲಿ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡು ಕವಿವೇದಿಕೆ ಸೃಷ್ಟಿಸುವ ಗುರಿಯಿದೆ ಎಂದು ಹೇಳಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾರಾಗೃಹ ಅಧೀಕ್ಷಕ ಮಂಜುನಾಥ್ ಸದ್ಯದ ಲ್ಲೇ ನಾಡಿನ ಭವ್ಯವಾದ ಹಬ್ಬ ಕನ್ನಡ ರಾಜ್ಯೋತ್ಸವ ಆಚರಿಸಲು ಕಾಲಕೂಡಿ ಬರುತ್ತಿದೆ. ಜೊತೆಗೆ ಜಿಲ್ಲಾ ಕಸಾ ಪದಿಂದ ಸಂಗೀತ ಸಂಜೆ ಏರ್ಪಡಿಸಿ ಕಾರಾಬಂಧಿಗಳಿಗೆ ಸಾಮಾಜಿಕ ಬದ್ಧತೆ ಅರಿವು ಮೂಡಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

    ಇದೇ ವೇಳೆ ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ಹುಲಿಕೆರೆ ಪುಲಿಕೇಶಿ ಅ ವರಿಂದ ಸಂಗೀತ ಸಂಜೆ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ತಾಲ್ಲೂಕು ನಿಕಟಪೂರ್ವ ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್, ಜಿಲ್ಲಾ ಕಸಾಪ ಮಹಿಳಾ ಜಿಲ್ಲಾಧ್ಯಕ್ಷೆ ನಿರ್ಮಲ ಮಂಚೇಗೌಡ, ಪ್ರಧಾನ ಕಾ ರ್ಯದರ್ಶಿ ರೂಪನಾಯ್ಕ್, ತಾಲ್ಲೂಕು ಅಧ್ಯಕ್ಷೆ ವಿಜಯಲಕ್ಷ್ಮೀ, ಕಸಬಾ ಹೋಬಳಿ ಅಧ್ಯಕ್ಷ ವೀಣಾ ಮಲ್ಲಿ ಕಾರ್ಜುನ್ ಉಪಸ್ಥಿತರಿದ್ದರು.

    Crime should be hated not the criminal.

  • ಮಲ್ಲೇನಹಳ್ಳಿ ಗ್ರಾಮದ ಬಿಂಡಿಗಾ ದೇವೀರಮ್ಮ ಉತ್ಸವ ಆರಂಭ

    ಮಲ್ಲೇನಹಳ್ಳಿ ಗ್ರಾಮದ ಬಿಂಡಿಗಾ ದೇವೀರಮ್ಮ ಉತ್ಸವ ಆರಂಭ

    ಚಿಕ್ಕಮಗಳೂರು:  ತಾಲ್ಲೂಕಿನ ಮಲ್ಲೇನಹಳ್ಳಿ ಗ್ರಾಮದ ಬಿಂಡಿಗಾ ದೇವೀರಮ್ಮ ಉತ್ಸವ ಆರಂಭವಾಗಿದ್ದು, ಮೊದಲ ದಿನ ಭಕ್ತರು ಮಳೆ, ಚಳಿ, ಬಿಸಿಲು ಲೆಕ್ಕಿಸದೆ ಬೆಟ್ಟ ಏರಿ ದೇವಿಯ ದರ್ಶನ ಪಡೆದರು. ಬೆಳಿಗ್ಗೆ 6ರಿಂದಲೇ ದೇವೀರಮ್ಮ ಬೆಟ್ಟಕ್ಕೆ ಬರಿಗಾಲಿನಲ್ಲಿ ಭಕ್ತರು ಏರಲು ಆರಂಭಿಸಿದರು. ಇಡೀ ರಾತ್ರಿ ಮಳೆ ಸುರಿದಿದ್ದರಿಂದ ಹಾದಿ ಜಾರುತ್ತಿತ್ತು.

    ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಬಿಂಡಿಗ ದೇವಿರಮ್ಮ ದೇವಿಯನ್ನು ಕಣ್ತುಂಬಿಕೊಂಡು ಆಶೀರ್ವಾದ ಪಡೆಯಲು ಭಾನುವಾರ ಭಕ್ತ ಸಾಗರವೇ ಹರಿದಿತ್ತು. ಇಡೀ ದೇವೀರಮ್ಮ ಗುಡ್ಡ ಭಕ್ತರಿಂದ ತುಂಬಿಕೊಂಡಿತ್ತು. ಬೆಳಿಗ್ಗೆ ಮಳೆ ಬಿಡುವು ನೀಡಿದ್ದರೂ ಮೋಡ ಕವಿದ ವಾತಾವರಣ ಇತ್ತು. ಚಿಕ್ಕಮಗಳೂರು ನಗರದ ಬಸ್‌‍ ನಿಲ್ದಾಣದಿಂದ ಪ್ರತಿ ಐದು ನಿಮಿಷಕ್ಕೆ ಒಂದರಂತೆ ಮಲ್ಲೇನಹಳ್ಳಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಲ್ಲೇನಹಳ್ಳಿ ಕಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬೆಟ್ಟ ಏರಿದರೆ, ಮಾಣಿಕ್ಯಧಾರ ಜಲಪಾತ ಕಡೆಯಿಂದಲೂ ಭಕ್ತರು ಬಂದರು. ಇನ್ನೊಂದೆಡೆ ಅರಿಶಿನಗುಪ್ಪೆ ಕಡೆಯಿಂದಲೂ ಭಕ್ತರು ಬೆಟ್ಟ ಏರಿದರು.

    ಭಾನುವಾರ ಬೆಳಿಗ್ಗೆ ವಿಗ್ರಹವನ್ನು ಬೆಟ್ಟದ ಮೇಲಕ್ಕೆ ಹೊತ್ತೊಯ್ದು ಪ್ರತಿಷ್ಠಾಪಿಸಲಾಗಿತ್ತು. ಕಟ್ಟಿಗೆ ಹೊತ್ತು ತಂದವರು ಕೊಂಡಕ್ಕೆ ಹಾಕಿ ಹರಕೆ ಒಪ್ಪಿಸಿದರು. ಬೆಣ್ಣೆಬಟ್ಟೆ ಸುಡುವ ಕೈಂಕರ್ಯಕ್ಕೆ ಈ ಕಟ್ಟಿಗೆಗಳನ್ನು ಬಳಸಲಾಗುತ್ತದೆ. ಕಾಡುಮೇಡು, ತಗ್ಗುದಿಣ್ಣೆ, ಮೊನಚು, ಬೆಣಚು ಕಲ್ಲು, ಜಲ್ಲಿಕಲ್ಲು, ಕಡಿದಾದ ಬೆಟ್ಟದ ಹಾದಿಯಲ್ಲಿ ಭಕ್ತರು ಸಾಗಿದರು. ಹಾದಿಯುದ್ದಕ್ಕೂ ಒಬ್ಬರಿಗೊಬ್ಬರು ಆಸರೆಯಾಗಿ ಕೈಹಿಡಿದುಕೊಂಡು ನಡೆದರು. ಜಾರಿದವರ ಕೈಹಿಡಿದು ಎತ್ತಿ, ಹಿಂದೆ ಉಳಿದವರನ್ನು ಎಳೆದುಕೊಂಡು ಮುಂದೆ ಸಾಗಿದರು. ಕೆಲವರು ಬೆಟ್ಟದಲ್ಲಿನ ಹುಲ್ಲುಹಾಸಿನಲ್ಲಿ ಮಲಗಿ ವಿರಮಿಸಿದರು.

    ಬೆಟ್ಟ ಏರಿದವರ ಪೈಕಿ ಮೊಬೈಲ್‌ ಕ್ಯಾಮೆರಾಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳದವರೇ ಇಲ್ಲ. ಸವಿ ನೆನಪುಗಳನ್ನು ಹಿಡಿದಿಟ್ಟುಕೊಂಡರು. ವಾಟ್ಸಆ್ಯಪ್‌, ಫೆಸ್‌ಬುಕ್‌ ಸಾಮಾಜಿಕ ಮಾಧ್ಯಮಗಳಿಗೆ ಫೋಟೊಗಳನ್ನು ಅಪ್‌ಲೋಡ್‌ ಮಾಡಿ ಖುಷಿಪಟ್ಟರು. ಈ ಸಂಭ್ರಮದಲ್ಲಿ ಬೆಟ್ಟ ಹತ್ತಿದ ಪ್ರಯಾಸ ಮರೆಯಾಗಿತ್ತು. ಜಾತ್ರಾ ಮಹೋತ್ಸವದ ಅಂಗವಾಗಿ ಪೊಲೀಸ್‌ ಬಂದೋಬಸ್ತ್‌ ನಿಯೋಜಿಸಲಾಗಿತ್ತು. ಮಳೆ, ಚಳಿ, ಗಾಳಿಯ ನಡುವೆ ರಕ್ಷಣಾ ತಂಡ ಕಾರ್ಯನಿರ್ವಹಿಸಿತು. ಕಡಿದಾದ ಜಾಗದಲ್ಲಿ ಬೆಟ್ಟ ಏರಲು ಆಗದವರಿಗೆ ರಕ್ಷಣಾ ತಂಡ ಹಗ್ಗದ ಸಹಾಯದಲ್ಲಿ ನೆರವಾಯಿತು.

    ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಸ್ವಯಂ ಸೇವಕರ ತಂಡದ ಈ ಕಾರ್ಯಕ್ಕೆ ಎಲ್ಲರಿಂದ ಶ್ಲಾಘನೆ ವ್ಯಕ್ತವಾಯಿತು. ಮಲ್ಲೇನಹಳ್ಳಿ ಬಳಿ ವಾಹನ ದಟ್ಟಣೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿತ್ತು. ಕೈಮರ ಚೆಕ್‌ಪೋಸ್ಟ್ ಬಳಿಯ ವಾಹನಗಳನ್ನು ತಡೆದು ಬೇರೆಡೆಗೆ ಕಳುಹಿಸಲಾಯಿತು. ಇದೇ ಮೊದಲ ಬಾರಿಗೆ ಬೆಟ್ಟ ಏರಿ ದೇವಿಯ ದರ್ಶನ ಪಡೆಯಲು ಎರಡು ದಿನ ಅವಕಾಶ ನೀಡಲಾಗಿದೆ.

    ಸಾಮಾನ್ಯವಾಗಿ ನರಕ ಚತುರ್ದಶಿಯ ದಿನ ಬೆಟ್ಟದ ಮೇಲೆ ದೇವಿಯ ದರ್ಶನಕ್ಕೆ ಅವಕಾಶ ಇತ್ತು. ಮಳೆ ಮುನ್ಸೂಚನೆ ಇರುವುದರಿಂದ ರಾತ್ರಿ ವೇಳೆ ಬೆಟ್ಟ ಏರಲು ಅವಕಾಶ ನೀಡದೆ ಮುನ್ನ ದಿನವೇ ದೇವಿಯ ಉತ್ಸವ ಮೂರ್ತಿಯನ್ನು ಬೆಟ್ಟದ ತುದಿಗೆ ಕೊಂಡೊಯ್ದು ಪೂಜೆ ಸಲ್ಲಿಸಲಾಯಿತು. ಭಾನುವಾರ ಇಡೀ ದಿನ ಬೆಟ್ಟ ಏರಿದ ಭಕ್ತರು ದೇವಿಯನ್ನು ಕಣ್ತುಂಬಿಕೊಂಡರು. ಸೋಮವಾರ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆ ಇದೆ.

    ಮಲ್ಲೇನಹಳ್ಳಿ ಕಡೆಯಿಂದ ದೇವೀರಮ್ಮ ಬೆಟ್ಟ ಹತ್ತಲು ಬರುವ ಭಕ್ತರು, ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಬರುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ಮನವಿ ಮಾಡಿದ್ದಾರೆ. ಮಲ್ಲೇನಹಳ್ಳಿ ಪ್ರೌಢಶಾಲೆ ಆವರಣದಲ್ಲಿ ವಾಹನ ನಿಲುಗಡೆ ಅವಕಾಶ ಮಾಡಲಾಗಿತ್ತು. ವಿಪರೀತ ಮಳೆಯಿಂದ ನಿಲುಗಡೆ ಸಾಧ್ಯವಾಗುತ್ತಿಲ್ಲ. ವಾಹನಗಳ ನಿಲುಗಡೆ ಬೇರೆ ಜಾಗ ಇಲ್ಲದ ಕಾರಣ ಭಕ್ತರು ಚಿಕ್ಕಮಗಳೂರು ನಗರದಲ್ಲಿ ವಾಹನ ನಿಲ್ಲಿಸಿ ಬಸ್‌ಗಳಲ್ಲಿ ಬರುವುದು ಸೂಕ್ತ ಎಂದು ತಿಳಿಸಿದ್ದಾರೆ.

    ಕಡೂರು, ಸಖರಾಯಪಟ್ಟಣ, ಬಾಣಾವರ ಕಡೆಯಿಂದ ಬರುವ ಭಕ್ತರು ಐಡಿಎಸ್‌ಜಿ ಕಾಲೇಜು ಆವರಣದಲ್ಲೇ ತಮ್ಮ ವಾಹನಗಳನ್ನು ನಿಲ್ಲಿಸಬೇಕು. ಅಲ್ಲಿಂದ ಮಲ್ಲೇನಹಳ್ಳಿಗೆ ಹೋಗಿ ಬರಲು ಕೆಎಸ್ಆರ್‌ಟಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

    ಬೆಂಗಳೂರು, ಹಾಸನ, ಬೇಲೂರು, ಮೂಡಿಗೆರೆ, ಬಾಳೆಹೊನ್ನೂರು, ಶೃಂಗೇರಿ ಕಡಗಳಿಂದ ಚಿಕ್ಕಮಗಳೂರು ನಗರ ಮಾರ್ಗವಾಗಿ ಮಲ್ಲೇನಹಳ್ಳಿಗೆ ಬರುವ ಭಕ್ತರಿಗೆ ಐ.ಜಿ. ರಸ್ತೆ, ಎಂ.ಜಿ. ರಸ್ತೆ, ಡಿಎಸಿಜಿ ಪಾಲಿಟೆಕ್ನಿಕ್ ಆವರಣದಲ್ಲಿ ಖಾಸಗಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಬಸ್ ನಿಲ್ದಾಣ ಮತ್ತು ಟೌನ್‌ ಕ್ಯಾಂಟೀನ್ ವೃತ್ತದಿಂದ ಬಸ್ ವ್ಯವಸ್ಥೆ ಇದೆ ಎಂದು ವಿವರಿಸಿದ್ದಾರೆ. ತರೀಕೆರೆ ಹಾಗೂ ಲಿಂಗದಹಳ್ಳಿ ಕಡೆಗಳಿಂದ ಬರುವವರಿಗೆ ಕುಮಾರಗಿರಿಯಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ದೇವಸ್ಥಾನಕ್ಕೆ ಬಸ್ ವ್ಯವಸ್ಥೆ ಇದೆ ಎಂದು ಮಾಹಿತಿ ನೀಡಿದ್ದಾರೆ.

    Bindiga Deviramma festival begins in Mallenahalli village

  • ಮೇದ ಜನಾಂಗವು ಸದಾ ಸಮಾಜದೊಂದಿಗೆ ಗಟ್ಟಿಯಾಗಿ ಉಳಿದಿದೆ

    ಮೇದ ಜನಾಂಗವು ಸದಾ ಸಮಾಜದೊಂದಿಗೆ ಗಟ್ಟಿಯಾಗಿ ಉಳಿದಿದೆ

    ಚಿಕ್ಕಮಗಳೂರು:  ಮೇದ ಜನಾಂಗವು ಸದಾ ಸಮಾಜದೊಂದಿಗೆ ಗಟ್ಟಿಯಾಗಿ ಉಳಿದಿದೆ. ಆದಿಯಿಂದ ಅಂತ್ಯದವರೆಗೆ ಬಿದಿರನ್ನು ಪೂರೈಕೆ ಮಾಡುತ್ತಾ ಬಂದಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

    ಅವರು ನಗರದ ಅಂಬೇಡ್ಕರ್ ರಸ್ತೆಯ ನಗರ ಪೊಲೀಸ್ ಠಾಣೆ ಪಕ್ಕದಲ್ಲಿ ನಗರಸಭೆ ಅನುದಾನದಲ್ಲಿ ನಿರ್ಮಿಸಲಾಗುತ್ತಿರುವ ಮೇದ ಸಮುದಾಯಭವನ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ ಸಮಾಜದ ಮುಖಂಡರುಗಳಾದ ಪಿ.ರಾಜೇಶ್, ಕುಮಾರ್ ಮತ್ತಿತರರು ಇಲ್ಲಿ ಮೇದ ಸಮುದಾಯ ಭವನ ನಿರ್ಮಿಸಬೇಕು ಎಂದು ಕನಸು ಕಂಡಿದ್ದರು. ಅದಕ್ಕೆ ಹಿಂದಿದ್ದ ಶಾಸಕರು, ನಗರಸಭೆ ಆಡಳಿತ, ಜಿಲ್ಲಾಧಿಕಾರಿಗಳು ನೀರೆರೆದ ಪರಿಣಾಮ ಇಂದು ಭವನ ನಿರ್ಮಾಣ ಕಾಮಗಾರಿ ಆರಂಭವಾಗುತ್ತಿದೆ. ಅವರೆಲ್ಲರಿಗೂ ಧನ್ಯವಾದ ಸಲ್ಲಿಸುತ್ತೇವೆ ಎಂದರು.

    ನೆನೆಗುದಿಗೆ ಬಿದ್ದಿದ್ದ ಈ ಕಾಮಗಾರಿಗೆ ನಾವು ಶಾಸಕರಾದ ನಂತರ ನಗರೋತ್ಥಾನ ಯೋಜನೆಯಡಿ ಅನುದಾನ ಮಂಜೂರಾಗಿದ್ದರೂ ಹಣಕಾಸಿನ ಸಮಸ್ಯೆಯಿಂದ ಮೂರು ಬಾರಿ ಟೆಂಡರ್ ಮುಂದೂಡಲ್ಪಟ್ಟಿತ್ತು. ಇದೀಗ ಹಣ ಬಿಡುಗಡೆ ಮಾಡಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ ಎಂದರು.

    ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಮೇದ ಜನಾಂಗದ ಕೃಷ್ಣಪ್ಪ ಇತರರು ಇಲ್ಲಿ ಗರಡಿ ಮನೆಯನ್ನು ನಡೆಸಿಕೊಂಡು ಬಂದಿದ್ದರು. ಗರಡಿ ಮನೆಯನ್ನು ಇಂದಿಗೂ ಮುಂದುವರಿಸುವುದಾದರೆ ಅದಕ್ಕೆ ಅವಕಾಶ ಮಾಡಿಕೊಡಲು ಸಿದ್ದರಿದ್ದೇವೆ ಎಂದರು.

    ೨೦೨೨-೨೩ರಲ್ಲೇ ನಗರೋತ್ಥಾನದಡಿ ಈ ಸಮುದಾಯ ಭವನಕ್ಕೆ ಅನುದಾನ ಮಂಜೂರಾಗಿತ್ತು. ಬೇರೆ ಬೇರೆ ಕಾರಣಕ್ಕೆ ಟೆಂಡರ್ ಮುಂದೂಡಲ್ಪಟ್ಟಿತ್ತು. ಜನಮೆಚ್ಚುವಂತೆ ಗುಣಮಟ್ಟದ ಕೆಲಸ ಮಾಡಬೇಕು ಎಂದು ಸೂಚಿಸಿದರು.

    ಹಲವು ದೇಶಗಳು ಬಿದಿರನ್ನೇ ಉದ್ಯಮವನ್ನಾಗಿ ಮಾಡಿಕೊಂಡಿವೆ. ಬೆಂಗಳೂರಿನ ಏರ್‌ಪೋರ್ಟ್‌ನ ಟರ್ಮಿನಲ್-೨ ಗೆ ಹೋಗಿ ನೋಡಿದರೆ ಬಿದಿರಿನ ಸುಂದರ ಉಪಯೋಗ ಹೇಗೆ ಮಾಡಿಕೊಳ್ಳಬಹುದು ಎನ್ನುವುದನ್ನು ಕಾಣಬಹುದು ಎಂದರು.

    ಮೇದ ಸಮಾಜದ ಮುಖಂಡ, ಪತ್ರಕರ್ತ ಪಿ.ರಾಜೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ ಸಮಾಜದವರು ಆರ್ಥಿಕ ಮತ್ತು ಶೈಕ್ಷಣಿಕವಾಗಿ ಈಗ ಮುಂದುವರೆಯುತ್ತಿದ್ದಾರೆ, ನಮ್ಮ ಸಮುದಾಯಕ್ಕೆ ಸಮುದಾಯ ಬೇಕೆಂದು ಹಿಂದೆ ಜಿಲ್ಲಾಧಿಕಾರಿಗಳಾಗಿದ್ದ ರಮೇಶ್, ಶಾಸಕ ಸಿ.ಟಿ ರವಿ ಮತ್ತು ನಗರಸಭೆ ಆಯುಕ್ತರಾದ ಬಸವರಾಜ್ ಅವರಿಗೆ ಮನವಿ ಮಾಡಿದ್ದೆವು ಅವರ ಶ್ರಮ ಮತ್ತು ಈಗಿನ ಶಾಸಕರಾದ ಹೆಚ್.ಡಿ ತಮ್ಮಯ್ಯ ರವರ ನೇತೃತ್ವದಲ್ಲಿ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ನೆರೆವೇರಿಸಿರುವುದು ಅತ್ಯಂತ ಸಂತೋಷದ ವಿಷಯ ಎಂದರು.

    ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ನಾಸೀರ್, ಗುರುಮಲ್ಲಪ್ಪ, ಕವಿತಾ ಶೇಖರ್, ಮಾಜಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಪೌರಾಯುಕ್ತ ಬಸವರಾಜ್, ಮೇದಾ ಸಜಾಜದ ಅಧ್ಯಕ್ಷ ಪಟೇಲ್ ಕುಮಾರ್, ಸಮಾಜದ ಮುಖಂಡರುಗಳಾದ ಶೋಭಾ, ಜಗದೀಶ್, ಮಲ್ಲೇನಹಳ್ಳಿ ಶಂಕರ್, ಸುಮಾ, ಶೋಭಾ ಮಂಜುನಾಥ್, ಗುತ್ತಿಗೆದಾರರಾದ ಸಂತೋಷ್ ಕುಮಾರ್, ಪವನ್, ರವಿಶಂಕರ್, ಮತ್ತಿತರರು ಉಪಸ್ಥಿತರಿದ್ದರು.

    The Meda community has always remained strong with society

  • ಪೌರಕಾರ್ಮಿಕರ ಆರೋಗ್ಯ ಸದೃಢವಾಗಲು ಯೋಗಾಭ್ಯಾಸ ಅಗತ್ಯ

    ಪೌರಕಾರ್ಮಿಕರ ಆರೋಗ್ಯ ಸದೃಢವಾಗಲು ಯೋಗಾಭ್ಯಾಸ ಅಗತ್ಯ

    ಚಿಕ್ಕಮಗಳೂರು: ಪೌರಕಾರ್ಮಿಕರ ಆರೋಗ್ಯ ಮಾನಸಿಕ ಸದೃಢವಾಗಲು ದಿನದ ಒಂದು ಗಂಟೆ ಯೋಗಾಭ್ಯಾಸದ ತರಬೇತಿ ನೀಡುವ ಅಗತ್ಯ ಇದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.

    ಅವರು ಇಂದು ನಗರಸಭೆ ಸಭಾಂಗಣದಲ್ಲಿ ನಗರಸಭೆ, ಕರ್ನಾಟಕ ರಾಜ್ಯ ಪೌರ ನೌಕರರ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಪೌರ ಕಾರ್ಮಿಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

    ಪೌರಕಾರ್ಮಿಕರು ದುಶ್ಚಟಗಳಾದ ಮಾದಕ ವ್ಯಸನಗಳಿಂದ ದೂರವಾಗಿ ಆರೋಗ್ಯ ಕಾಪಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪೌರ ಕಾರ್ಮಿಕರು ಆರೋಗ್ಯವಾಗಿದ್ದಾಗ ಮಾತ್ರ ಎಲ್ಲಾ ನಾಗರಿಕರು ಆರೋಗ್ಯವಾಗಿರಲು ಸಾಧ್ಯ ಎಂದು ಹೇಳಿದರು.

    ಕೆಲವು ಪೌರಕಾರ್ಮಿಕರನ್ನು ಸರ್ಕಾರ ಖಾಯಂಗೊಳಿಸಿರುವ ಮಾದರಿಯಲ್ಲಿ ನೀರುಗಂಟಿಗಳನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆರಳಿ ಖಾಯಂಗೊಳಿಸುವಂತೆ ಮನವಿ ಮಾಡುವುದಾಗಿ ಭರವಸೆ ನೀಡಿದರು.

    ಡಾ. ಬಿ.ಆರ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಆಶಯದಂತೆ ಸಮಸಮಾಜ ನಿರ್ಮಾಣವಾಗಬೇಕೆಂಬ ಅವರ ಕನಸು ಇಂದು ಒಂದೇ ವೇದಿಕೆಯಲ್ಲಿ ಆಸೀನರಾಗಲು ಕಾರಣ ಬುದ್ಧ, ಬಸವ, ಅಂಬೇಡ್ಕರ್ ಸೇರಿದಂತೆ ಶರಣರ ಆಶಯ ಕಾರಣ ಎಂದು ಹೇಳಿದರು.

    ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಕಾಯಕ ಸಂಸ್ಕೃತಿಗೆ ಗೌರವ ಕೋಡುವ ಉದ್ದೇಶವೇ ಪೌರಕಾರ್ಮಿಕ ದಿನಾಚರಣೆಯ ಉದ್ದೇಶ ಎಂದು ಹೇಳಿದ ಅವರು, ಸ್ವಚ್ಚ ಕಾಯಕ ಮಾಡುವ ಪೌರಕಾರ್ಮಿಕರನ್ನು ಗೌರವದಿಂದ ಕಂಡಾಗ ಮಾತ್ರ ಸಮಾನತೆ, ಆರೋಗ್ಯ ಲಭಿಸುತ್ತದೆ ಎಂದು ಹೇಳಿದರು.

    ಪ್ರಧಾನಿ ನರೇಂದ್ರ ಮೋದಿಯವರು ಜಾತಿ, ಭೇದಕ್ಕೆ ಆಸ್ಪದವಿಲ್ಲದೆ ದುಡಿಯುವ ವರ್ಗಕ್ಕೆ ಗೌರವ ನೀಡಬೇಕೆಂಬ ಉದ್ದೇಶದೊಂದಿಗೆ ಪೌರಕಾರ್ಮಿಕರ ಪಾದಪೂಜೆ ಮಾಡಿ ಕಾಯಕ ಸಂಸ್ಕೃತಿ ಎತ್ತಿ ಹಿಡಿದಿದ್ದಾರೆಂದು ಶ್ಲಾಘಿಸಿದರು.

    ೭೪ ಮನೆಗಳಲ್ಲಿ ೨೪ ಬಾಕಿ ಇದ್ದು, ಉಳಿದ ಕಾರ್ಮಿಕರಿಗೂ ಮನೆಗಳನ್ನು ನಿರ್ಮಿಸಿಕೊಡಬೇಕು, ೩೫ ನೌಕರರು ಖಾಯಂ ಮಾಡಿದ್ದು, ಉಳಿದವರನ್ನು ಮಾಡಲು ತಾಂತ್ರಿಕ ಸಮಸ್ಯೆ ಎದುರಾಗಿದೆ. ಕೂಡಲೇ ಇದನ್ನು ನಿವಾರಿಸಿ ಖಾಯಂಗೊಳಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

    ಪೌರಾಯುಕ್ತ ಬಿ.ಸಿ ಬಸವರಾಜ್ ಸ್ವಾಗತಿಸಿ ಮಾತನಾಡಿ, ಪೌರಕಾರ್ಮಿಕರ ಬೆಳಗಿನ ಉಪಹಾರಕ್ಕೆ ೩೫ ರೂ ಗೌರವಧನ ಸಂಕಷ್ಟ ಭತ್ಯೆ, ವಿಮಾ ಸೌಲಭ್ಯ ಕಲ್ಪಿಸಲಾಗಿದೆ. ಇನ್ನೂ ಮುಂತಾದ ಸೌಲಭ್ಯಗಳನ್ನು ಹಂತ ಹಂತವಾಗಿ ನೀಡುವುದಾಗಿ ಹೇಳಿದರು.

    ನಗರಸಭಾಧ್ಯಕ್ಷೆ ಶೀಲಾ ದಿನೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪಾಧ್ಯಕ್ಷೆ ಲಲಿತಾ ನಾಯ್ಕ್, ಮಾಜಿ ಅಧ್ಯಕ್ಷರುಗಳಾದ ಕವಿತಾ ಶೇಖರ್, ವರಸಿದ್ದಿ ವೇಣುಗೋಪಾಲ್ ಮಾತನಾಡಿದರು.

    ಈ ಸಂದರ್ಭದಲ್ಲಿ ನಗರಸಭೆ ಸದಸ್ಯರುಗಳಾದ ಎ.ಸಿ ಕುಮಾರ್‌ಗೌಡ, ಲಕ್ಷ್ಮಣ್, ಗುರುಮಲ್ಲಪ್ಪ, ಪರಮೇಶ್ ರಾಜ್ ಅರಸ್, ಸಿ.ಪಿ ಲಕ್ಷ್ಮಣ, ಅರುಣ್‌ಕುಮಾರ್, ಗೋಪಿ, ರೂಪಾ ಕುಮಾರ್, ಶಧಾಬ್ ಅಲಂ ಖಾನ್, ವಿಫುಲ್ ಕುಮಾರ್ ಜೈನ್, ಹುಣಸೇಮಕ್ಕಿ ಲಕ್ಷ್ಮಣ, ಪ್ರಕಾಶ್ ರೈ, ಪೌರ ಕಾರ್ಮಿಕ ಸಂಘದ ಅಧ್ಯಕ್ಷ ಅಣ್ಣಯ್ಯ, ಶಾಖಾ ಅಧ್ಯಕ್ಷ ಶ್ರೀನಿವಾಸ್, ಗೌರವಾಧ್ಯಕ್ಷ ನಾಗರಾಜ್, ಮತ್ತಿತರರು ಉಪಸ್ಥಿತರಿದ್ದರು.

    ಇದಕ್ಕೂ ಮುನ್ನ ತಾಲ್ಲೂಕು ಕಚೇರಿ ಆವರಣದಿಂದ ಡಾ. ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ರವರ ಭಾವಚಿತ್ರದೊಂದಿಗೆ ಜಾನಪದ ಕಲಾತಂಡಗಳ ಮೂಲಕ ಮೆರವಣಿಗೆ ಹೊರಟ ಪೌರ ಕಾರ್ಮಿಕರು ಹಾಗೂ ನಗರಸಭೆ ಸಿಬ್ಬಂದಿ ಎಂ.ಜಿ ರಸ್ತೆ ಮೂಲಕ ಸಾಗಿ ನಗರಸಭೆ ಆವರಣವನ್ನು ತಲುಪಿದರು.

    Yoga is essential for the health of civil servants

  • ರಕ್ತದಾನ ಜೀವ ಉಳಿಸುವ ಮಹತ್ವಾದಾನ

    ರಕ್ತದಾನ ಜೀವ ಉಳಿಸುವ ಮಹತ್ವಾದಾನ

    ಚಿಕ್ಕಮಗಳೂರು: ರಕ್ತದಾನ ಜೀವ ಉಳಿಸುವ ಮಹತ್ವಾದಾನ. ರಕ್ತದಾನ ಮಾಡು ವವರ ಆರೋಗ್ಯ ಸುಧಾರಿಸುವ ಜೊತೆಗೆ ದೈಹಿಕ, ಮಾನಸಿಕ ಹಾಗೂ ಶಾರೀರಿಕವಾಗಿ ಆರೋಗ್ಯವಾಗಿರಲು ಸಹಕಾರಿ ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶೆ ರಾಜೇಶ್ವರಿ ಹೇಳಿದರು.

    ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಶುಕ್ರವಾರ ಹೋಲಿಕ್ರಾಸ್ ಆಸ್ಪತ್ರೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಸಹಯೋಗದಲ್ಲಿ ವಕೀಲರಿಗೆ ಹಮ್ಮಿಕೊಂಡಿದ್ಧ ರಕ್ತದಾನ ಶಿಬಿರ ಹಾಗೂ ಉಚಿ ತ ಕಣ್ಣಿನ ತಪಾಸಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ರಕ್ತದಾನದಲ್ಲಿ ಹೆಚ್ಚು ಯುವವಕೀಲರು ಪಾಲ್ಗೊಂಡು ಶಿಬಿರ ಯಶಸ್ವಿಗೊಳಿಸಬೇಕು. ಪ್ರಕೃತಿ ಮನುಷ್ಯನಿ ಗಾಗಿ ಸಾಕಷ್ಟು ಕೊಡುಗೆಯನ್ನು ನೀಡಿದೆ, ಆದರೆ ಮನುಷ್ಯ ಅಲ್ಪಮಾನವನಾಗದೇ, ಮತ್ತೊಬ್ಬರ ಜೀವ ಉಳಿ ಸುವ ರೀತಿಯಲ್ಲಿ ರಕ್ತದಾನದಲ್ಲಿ ತೊಡಗಿಸಿಕೊಂಡರೆ ಸಮಾಜಕ್ಕೆ ಮಾದರಿಯಾಗುತ್ತಾರೆ ಎಂದರು.

    ತುರ್ತು ಚಿಕಿತ್ಸೆ ಅಥವಾ ಅಪಘಾತ ವೇಳೆಯಲ್ಲಿ ರಕ್ತವು ಬಹಳಷ್ಟು ಅವಶ್ಯಕತೆಯಿದೆ. ಹೀಗಾಗಿ ವಕೀಲ ರು ಸೇರಿದಂತೆ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಮುಂದಾಗಬೇಕು. ಓರ್ವನ ರಕ್ತದಾನದಿಂದ ಕನಿಷ್ಟ ಮೂರು ಮಂದಿ ಜೀವ ಉಳಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.

    ಹೋಲಿಕ್ರಾಸ್ ಆಸ್ಪತ್ರೆ ರಕ್ತನಿಧಿ ಅಧಿಕಾರಿ ಡಾ|| ಅನೀತ್‌ಕುಮಾರ್ ಮಾತನಾಡಿ ಮೊದಲು ಅನ್ನದಾನ ವು ಸರ್ವಶ್ರೇಷ್ಟವಾಗಿತ್ತು. ಇತ್ತೀಚೆಗೆ ಅನ್ನದಾನಕ್ಕೆ ಹೆಚ್ಚು ದಾನಿಗಳು ಹೆಚ್ಚು ತೊಡಗಿಸಿಕೊಂಡಿರುವ ಕಾರಣ, ರಕ್ತದಾನಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಅಲ್ಲದೇ ದೇಹದಲ್ಲಿನ ಕೊಲೆಸ್ಟ್ರಾಲ್ ಹಾಗೂ ಮಧುಮೇಹ ಕಾಯಿ ಲೆಗಳನ್ನು ಪತ್ತೆಹಚ್ಚಬಹುದು ಎಂದು ತಿಳಿಸಿದರು.

    ದೇಶದಲ್ಲಿ ರಕ್ತದ ಕೊರತೆಯಿಂದ ಅನೇಕರು ಜೀವ ಕಳೆದುಕೊಂಡು ಕುಟುಂಬವು ಬೀದಿಪಾಲಾಗುತ್ತಿದೆ. ರಕ್ತದಾನಕ್ಕಿಂತ ಹೆಚ್ಚು ಮನುಷ್ಯನ ಪ್ರಾಣ ಹಾರಿಹೋಗುತ್ತಿದೆ. ಹಾಗಾಗಿ ಯುವಜನತೆ ಎಚ್ಚೆತ್ತುಕೊಂಡು ಕನಿಷ್ಟ ಮೂರು ಹಾಗೂ ಮಹಿಳೆಯರು ಐದು ತಿಂಗಳಿಗೊಮ್ಮೆ ರಕ್ತದಾನ ಮಾಡಿದರೆ ಅಮೂಲ್ಯ ಜೀವ ಉಳಿಸಲು ಸಾಧ್ಯ ಎಂದರು.

    ಡೆಂಗ್ಯೂ, ಅಪಘಾತಗಳಂಥ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಬಹಳಷ್ಟಿದೆ. ಆ ನಿಟ್ಟಿನಲ್ಲಿ ಶಾಲಾ-ಕಾ ಲೇಜು, ಸಾರ್ವಜನಿಕರಲ್ಲಿ ರಕ್ತದ ಮಹತ್ವದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಅದರಂತೆ ಇಂದು ವಕೀ ಲರಿಗಾಗಿ ರಕ್ತದಾನ ಹಾಗೂ ಕಣ್ಣಿನ ತಪಾಸಣೆ ಆಯೋಜಿಸಿ ಪೂರಕವಾಗಿ ಆಸ್ಪತ್ರೆ ಕೆಲಸ ಮಾಡುತ್ತಿದೆ ಎಂ ದು ಹೇಳಿದರು.

    ಶಿಬಿರದಲ್ಲಿ ವಕೀಲರಿಗೆ ಕಣ್ಣಿನ ಸಮಸ್ಯೆ ಕಂಡುಬಂದಲ್ಲಿ ಆಸ್ಪತ್ರೆ ವತಿಯಿಂದ ಶಸ್ತ್ರಚಿಕಿತ್ಸೆ, ವೈದ್ಯರ ಸಲಹೆ ಯನ್ನು ಸಂಪೂರ್ಣ ಉಚಿತವಾಗಿ ನೀಡುತ್ತಿದ್ದು, ಕೇವಲ ಲೆನ್ಸ್‌ಗಳಿಗೆ ಮಾತ್ರ ಆರ್ಥಿಕ ವೆಚ್ಚವನ್ನು ರೋಗಿ ಗಳು ಭರಿಸಬೇಕಾಗಿದ್ದು, ಒಟ್ಟಾರೆ ಸಾಮಾಜಿಕ ಕಾರ್ಯಕ್ರಮದಡಿ ಆಸ್ಪತ್ರೆ ತೊಡಗಿಸಿಕೊಂಡಿದೆ ಎಂದರು.

    ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಹನುಮಂತ ಪ್ಪ, ಕೌಟುಂಬಿಕ ನ್ಯಾಯಾಲಯ ನ್ಯಾಯಾಧೀಶ ಪ್ರಕಾಶ್, ವಕೀಲರ ಸಂಘದ ಖಜಾಂಚಿ ಡಿ.ಬಿ.ದೀಪಕ್, ವಕೀಲರುಗಳಾದ ರಮೇಶ್, ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.

    The life-saving importance of blood donation

  • ದೇವಿರಮ್ಮ ಜಾತ್ರೋತ್ಸವದಲ್ಲಿ ವಾಹನ ನಿಲುಗಡೆಗೆ ಮಾರ್ಗಸೂಚಿ 

    ದೇವಿರಮ್ಮ ಜಾತ್ರೋತ್ಸವದಲ್ಲಿ ವಾಹನ ನಿಲುಗಡೆಗೆ ಮಾರ್ಗಸೂಚಿ 

    ಚಿಕ್ಕಮಗಳೂರು: ಬಿಂಡಿಗಾ ಆದಿಶಕ್ತಿ ಶ್ರೀ ದೇವೀರಮ್ಮ ಜಾತ್ರೆ ಹಾಗೂ ದೀಪೋತ್ಸವದ ಹಿನ್ನೆಲೆಯಲ್ಲಿ ವಾಹನಗಳ ಸಂಚಾರ ಹಾಗೂ ನಿಲುಗಡೆ ವ್ಯವಸ್ಥೆಯನ್ನು ಕ್ರಮಬದ್ಧಗೊಳಿಸಿ ಆದೇಶ ಹೊರಡಿಸಿರುವ ಜಿಲ್ಲಾ ದಂಡಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಸಿ.ಎನ್.ಮೀನಾ ನಾಗರಾಜ್ ಅವರು ಅಕ್ಟೋಬರ್ ೧೯ರ ಬೆಳಿಗ್ಗೆ ೬ ಗಂಟೆಯಿಂದ ೨೦ರ ರಾತ್ರಿ ೧೦ ಗಂಟೆಯವರೆಗೆ ಸ್ಥಳೀಯರು ಹಾಗೂ ಭಕ್ತಾದಿಗಳ ವಾಹನಗಳನ್ನು ಹೊರತುಪಡಿಸಿ ತರೀಕೆರೆಯಿಂದ ಚಿಕ್ಕಮಗಳೂರು ಕಡೆಗೆ ಬರುವ ಇತರ ಎಲ್ಲಾ ವಾಹನಗಳು ಕಡ್ಡಾಯವಾಗಿ ಕಡೂರು ಮಾರ್ಗವಾಗಿ ಚಲಿಸುವಂತೆ ಸೂಚಿಸಿದ್ದಾರೆ.

    ಬಿಂಡಿಗಾ ಹಾಗೂ ಮಲ್ಲೇನಹಳ್ಳಿ ಗ್ರಾಮದಲ್ಲಿ ಅಕ್ಟೋಬರ್ ೧೯ ರಿಂದ ೨೩ರವರೆಗೆ ನಡೆಯಲಿರುವ ಶ್ರೀ ದೇವೀರಮ್ಮನವರ ಜಾತ್ರೆ ಹಾಗೂ ದೀಪೋತ್ಸವದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಸಲ್ಲಿಸಿರುವ ವರದಿಯನ್ನು ಆಧರಿಸಿ ಅವರು ವಾಹನ ಸಂಚಾರ ಹಾಗೂ ನಿಲುಗಡೆ ಬಗ್ಗೆ ಅಗತ್ಯ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

    ಅಕ್ಟೋಬರ್ ೧೯ ಮತ್ತು ೨೦ ರಂದು ಚಿಕ್ಕಮಗಳೂರು-ಮಲ್ಲೇನಹಳ್ಳಿ ಮತ್ತು ತರೀಕೆರೆ-ಲಿಂಗದಹಳ್ಳಿ-ಮಲ್ಲೇನಹಳ್ಳಿ ಮಾರ್ಗದಲ್ಲಿ ಅನುಮತಿ ಇಲ್ಲದೆ ಸಂಚರಿಸುವ ಖಾಸಗಿ ಬಸ್‌ಗಳ ಸಂಚಾರವನ್ನು ನಿಷೇಧಿಸಲಾಗಿದೆ. ಅ.೧೯ ಮತ್ತು ೨೦ ರಂದು ತರೀಕೆರೆ-ಲಿಂಗದಹಳ್ಳಿ-ಸಂತವೇರಿ ಮಾರ್ಗವಾಗಿ ಬರುವ ಭಕ್ತಾದಿಗಳ ವಾಹನಗಳನ್ನು ಕುಮಾರಗಿರಿಯಲ್ಲಿ ಪಾರ್ಕಿಂಗ್ ಮಾಡುವುದು ಹಾಗೂ ಚಿಕ್ಕಮಗಳೂರು-ಕೈಮರಾ ಮಾರ್ಗವಾಗಿ ಬಿಂಡಿಗ ಮಲ್ಲೇನಹಳ್ಳಿಗೆ ಬರುವ ವಾಹನಗಳನ್ನು ನಿಗದಿಪಡಿಸಿರುವ ಮಲ್ಲೇನಹಳ್ಳಿ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮಾತ್ರ ಪಾರ್ಕಿಂಗ್ ಮಾಡುವುದು ಹಾಗೂ ಯಾವುದೇ ಕಾರಣಕ್ಕೂ ರಸ್ತೆಯ ಬದಿಯಲ್ಲಿ ವಾಹನ ನಿಲುಗಡೆ ಮಾಡುವುದನ್ನು ನಿಷೇಧಿಸಲಾಗಿದೆ. ಅಲ್ಲದೆ, ಮಲ್ಲೇನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಗೇಟ್‌ನಿಂದ ಕುಮಾರಗಿರಿ ಗೋಪುರದವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಯಾವುದೇ ರೀತಿಯ ವಾಹನಗಳನ್ನು ಪಾರ್ಕಿಂಗ್ ಮಾಡದಂತೆ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

    ದೇವಿ ದರ್ಶನಕ್ಕೆ ಸಮಯ ನಿಗದಿ: ಪ್ರತೀ ವರ್ಷ ದೀಪಾವಳಿ ಹಬ್ಬದ ಮುನ್ನಾದಿನ (ನರಕ ಚತುರ್ದಶಿ) ಬೆಟ್ಟಕ್ಕೆ ತೆರಳಿ ದರ್ಶನ ಪಡೆಯುತ್ತಿದ್ದು, ಈ ವರ್ಷದಿಂದ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಮತ್ತು ಜನಸಮೂಹ ನಿಯಂತ್ರಣ ಮಾಡುವ ದೃಷ್ಟಿಯಿಂದ ಅಕ್ಟೋಬರ್ ೧೯ರ ಬೆಳಿಗ್ಗೆ ೮ ಗಂಟೆಯಿಂದ ಸಂಜೆ ೪ ಗಂಟೆಯವರೆಗೆ ಹಾಗೂ ೨೦ ರಂದು ಬೆಳಿಗ್ಗೆ ೮ ಗಂಟೆಯಿಂದ ಮಧ್ಯಾಹ್ನ ೨ ಗಂಟೆಯವರೆಗೆ ಮಾತ್ರ ದೇವಿಯ ದರ್ಶನಕ್ಕೆ ಸಮಯ ನಿಗದಿಪಡಿಸಿದ್ದು, ಈ ಸಂದರ್ಭದಲ್ಲಿ ಶ್ರೀ ದೇವೀರಮ್ಮ ಬೆಟ್ಟದಲ್ಲಿ ಅಭಿಷೇಕ, ನಂತರ ಪೂಜಾ ವಿಧಿ-ವಿಧಾನಗಳು ನೆರವೇರಲಿವೆ.

    ಈ ಎರಡು ದಿವಸಗಳಲ್ಲಿ ಸುಮಾರು ೮೦,೦೦೦ ದಿಂದ ೯೦,೦೦೦ ಭಕ್ತಾದಿಗಳು ವಿವಿಧ ಮಾರ್ಗಗಳಿಂದ ಬೆಟ್ಟ ಹತ್ತಿ ಶ್ರೀ ದೇವೀರಮ್ಮನ ದರ್ಶನ ಪಡೆಯಲಿದ್ದಾರೆ. ಈ ಸಂದರ್ಭದಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆಗೊಳಿಸುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಧಕ್ಕೆ ಉಂಟು ಮಾಡುವ ಸಾಧ್ಯತೆ ಇದೆ. ಜೊತೆಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸುವುದು ಅನಿವಾರ್ಯ ssಎಂದು ಅವರು ಮಾಹಿತಿ ನೀಡಿದ್ದಾರೆ.

    Guidelines for vehicle parking during Deviramma Jatrotsav

  • ಬ್ಯಾಂಕಿನ ಸಾಲಸೌಲಭ್ಯ ಪಡೆದು ಉದ್ದಿಮೆ ಸ್ಥಾಪಿಸಿ

    ಬ್ಯಾಂಕಿನ ಸಾಲಸೌಲಭ್ಯ ಪಡೆದು ಉದ್ದಿಮೆ ಸ್ಥಾಪಿಸಿ

    ಚಿಕ್ಕಮಗಳೂರು:  ಸರಿಯಾದ ಹಣಕಾಸಿನ ವ್ಯವಸ್ಥೆ ಇದ್ದಾಗ ಮಾತ್ರ ಉದ್ಯಮ ಸ್ಥಾಪಿಸಲು ಸಾಧ್ಯ. ಈ ನಿಟ್ಟಿನಲ್ಲಿ ಬ್ಯಾಂಕಿನಲ್ಲಿ ದೊರೆಯುವ ಸಾಲಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಉದ್ಯಮಿ ಮುನೀರ್ ಅಹಮದ್ ಹೇಳಿದರು.

    ಅವರು ಇಂದು ಡಿಐಸಿಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ, ವಾಣಿಜ್ಯ ಇಲಾಖೆ, ಸರ್ಕಾರಿ ಪಾಲಿಟೆಕ್ನಿಕ್ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಒಂದು ದಿನದ ಅರಿವು ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿ ಕಾಪರ್ ಸಲ್ಫೇಟ್ ಕೇರಳದಿಂದ ರಾಜ್ಯಕ್ಕೆ ಬರುತ್ತಿತ್ತು. ಇದು ದುಬಾರಿಯಾಗಿದ್ದನ್ನು ಮನಗಂಡು ಉದ್ಯಮವನ್ನು ಸ್ಥಾಪಿಸಿ ಟನ್‌ಗೆ ೫ ಸಾವಿರ ರೂ ಕಡಿಮೆ ದರದಲ್ಲಿ ಗ್ರಾಹಕರಿಗೆ ನೀಡಿದ ಪರಿಣಾಮ ಉದ್ಯಮ ಲಾಭದಾಯಕವಾಗಿ ನಡೆಯುತ್ತಿದೆ ಎಂದು ಹೇಳಿದರು.

    ಪ್ರತಿಯೊಬ್ಬರೂ ಇಂತಹ ಉದ್ಯಮಗಳನ್ನು ಸ್ಥಾಪಿಸುವ ಮೂಲಕ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಿ ಎಂದು ಸಲಹೆ ನೀಡಿದರು.

    ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಶಾಂತರಾಂ ಹೆಗಡೆ ಮಾತನಾಡಿ, ಹೇಳಿದರೆ ಕೇಳಿದವರಿಗೆ ಲಾಭ ಎಂಬಂತೆ ಇಂದಿನ ಕಾರ್ಯಾಗಾರದಲ್ಲಿ ಅನುಭವಿ ಸಂಪನ್ಮೂಲ ವ್ಯಕ್ತಿಗಳು ಆಗಮಿಸಿದ್ದು, ಅವರ ಉಪಯುಕ್ತವಾದ ಮಾಹಿತಿಗಳನ್ನು ಪಡೆದು ಉದ್ಯಮಶೀಲರಾಗಿ ಎಂದು ಹೇಳಿದರು.

    ಕಾಫಿ ಡೇ ಸಿದ್ಧಾರ್ಥ ಹೆಗ್ಡೆ ಅವರು ದೇಶಾದ್ಯಂತ ಉದ್ಯೋಗ ಕಲ್ಪಿಸುವಲ್ಲಿ ಹೆಸರು ಮಾಡಿದ್ದು, ಈ ಸಭೆಯಲ್ಲಿ ಬ್ಯಾಂಕಿನ ಉದ್ಯೋಗಿಗಳು ಮತ್ತು ಉದ್ಯಮಿಗಳು ಭಾಗವಹಿಸಿದ್ದು, ಹಿಂದೆ ವ್ಯಾಪಾರ ಪರವಾನಗಿ, ಸಾಲಕ್ಕೆ ವರ್ಷಾನುಗಟ್ಟಲೆ ಸುತ್ತಾಡಬೇಕಿತ್ತು, ಇಂದು ಸೌಲಭ್ಯ ನೀಡಲು ಅವರೇ ಆಗಮಿಸಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ವಿನಂತಿಸಿದರು.

    ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಮಹೇಶ್ ಕುಮಾರ್ ಮಾತನಾಡಿ, ಕೇಂದ್ರಸರ್ಕಾರ ರ್‍ಯಾಂಪ್ ಯೋಜನೆಯಡಿ ಹಲವಾರು ಉದ್ಯೋಗಗಳನ್ನು ಸೃಷ್ಟಿಸಿದ್ದು, ಅಂತಿಮ ವರ್ಷದ ತಾಂತ್ರಿಕ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಲಿದ್ದು, ಸ್ವ-ಉದ್ಯೋಗ ಸ್ಥಾಪನೆಗೆ ಬೇಕಾದ ಜ್ಞಾನವನ್ನು ಕೊಡಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿದೆ ಎಂದರು.

    ಈ ಸಂದರ್ಭದಲ್ಲಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಶ್ರೀಧರ್ ಮೂರ್ತಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಮಹೇಶ್, ಕುಮಾರ್, ರಘು ಪ್ರಸಾದ್, ಚಿಕ್ಕಪ್ಪ ಲಕ್ಷ್ಮೀ ನಾರಾಯಣ್ ಉಪಸ್ಥಿತರಿದ್ದರು.

    Get a bank loan and start a business