ಚಿಕ್ಕಮಗಳೂರು: ಗ್ರಾಹಕನ ಖಾತೆಯಿಂದ ಟಿಡಿಎಸ್ ಹಣ ಕಡಿತಗೊಳಿಸಿದ ವ್ಯವಹಾರದಲ್ಲಿ ಸೇವಾ ನ್ಯೂನತೆ ಎಸಗಿದ ಆರೋಪದಲ್ಲಿ ಬ್ಯಾಂಕ್ ವಿರುದ್ಧ ತೀರ್ಪು ನೀಡಿರುವ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಕಡಿತಗೊಳಿಸಿದ ಮೊತ್ತವನ್ನು ಬಡ್ಡಿ ಸಹಿತ ಹಿಂತಿರುಗಿಸುವಂತೆ ಹಾಗೂ ಪರಿಹಾರ, ಖರ್ಚು-ವೆಚ್ಚವನ್ನು ನೀಡುವಂತೆ ಆದೇಶ ನೀಡಿದೆ.
ನಗರದ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವ ಕಲ್ಯಾಣನಗರದ ವಿವೇಕಾನಂದ ಕಾಮತ್ ನಗರದ ಬ್ಯಾಂಕ್ ಆಫ್ ಬರೋಡದಲ್ಲಿ ಓ.ಡಿ. ಖಾತೆ ಹಾಗೂ ಉಳಿತಾಯ ಖಾತೆ ಹೊಂದಿದ್ದಾರೆ. ೨೦೨೦ರ ಆಗಸ್ಟ್‌ನಲ್ಲಿ ಟಿಡಿಎಸ್ ಹಣವೆಂದು ವಿವೇಕಾನಂದ ಕಾಮತ್ ಅವರ ಓ.ಡಿ.ಖಾತೆಯಿಂದ ಒಮ್ಮೆ ರೂ. ೩೦,೦೦೦, ಮತ್ತೊಮ್ಮೆ ೨೦,೦೦೦ ಒಟ್ಟು ೫೦,೦೦೦ ಹಾಗೂ ಉಳಿತಾಯ ಖಾತೆಯಿಂದ ರೂ.೭,೫೦೦ ಅನ್ನು ಕಡಿತಗೊಳಿಸಿದ್ದು, ಈ ಹಣವನ್ನು ಆದಾಯ ತೆರಿಗೆ ಇಲಾಖೆಗೆ ಪಾವತಿಸಿಲ್ಲವೆನ್ನಲಾಗಿದೆ.
ಅಲ್ಲದೆ, ಕಡಿತಗೊಳಿಸಿರುವ ಆದಾಯ ತೆರಿಗೆಯನ್ನು ಮರಳಿ ಪಡೆಯಲು ಅನುಕೂಲವಾಗುವಂತೆ ಆದಾಯ ತೆರಿಗೆ ಕಾಯ್ದೆ ಕಲಂ ೧೬(ಎ) ನಮೂನೆಯನ್ನು ಕೂಡ ನೀಡಿಲ್ಲವೆಂದು ಹೇಳಲಾಗಿದೆ. ಈ ಬಗ್ಗೆ ವಿಚಾರಿಸಿದಾಗ ಸೂಕ್ತ ಉತ್ತರವನ್ನು ನೀಡಿರಲಿಲ್ಲ. ಈ ಬಗ್ಗೆ ವಿವೇಕಾನಂದ ಕಾಮತ್ ೨೦೨೪ರ ನವೆಂಬರ್ ೨೧ ರಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿ, ಸೇವಾ ನ್ಯೂನತೆ ಎಸಗಿರುವುದಾಗಿ ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ಆರೋಪಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ಆಯೋಗವು ಇತ್ತೀಚೆಗೆ ತೀರ್ಪು ನೀಡಿದ್ದು, ಟಿಡಿಎಸ್ ಹೆಸರಿನಲ್ಲಿ ಕಡಿತಗೊಳಿಸಿದ ಮೊತ್ತವಾದ ರೂ.೬೮,೮೦೦ ಅನ್ನು ಶೇ.೯ರ ಬಡ್ಡಿ ದರದಲ್ಲಿ ೨೦೨೦ರ ಆಗಸ್ಟ್ ೨೯ ರಿಂದ ಕಾಮತ್ ಅವರಿಗೆ ಪಾವತಿಸುವಂತೆ ಹಾಗೂ ಪರಿಹಾರವಾಗಿ ರೂ.೧೦,೦೦೦ ಹಾಗೂ ಪ್ರಕರಣದ ಖರ್ಚು-ವೆಚ್ಚಕ್ಕಾಗಿ ರೂ.೫೦೦೦ಗಳನ್ನು ನೀಡುವಂತೆ ಆದೇಶ ನೀಡಿದೆ.
ಅಧ್ಯಕ್ಷರಾದ ಎನ್.ಆರ್.ಚೆನ್ನಕೇಶವ, ಸದಸ್ಯರಾದ ಈ.ಪ್ರೇಮಾ ಮತ್ತು ಡಾ.ಮಂಜುನಾಥ ಎಂ.ಬಮ್ಮನಕಟ್ಟಿ ಇವರನ್ನು ಒಳಗೊಂಡ ಆಯೋಗವು ಪ್ರಕರಣದ ವಿಚಾರಣೆ ನಡೆಸಿ ಈ ತೀರ್ಪು ನೀಡಿದ್ದು, ಬ್ಯಾಂಕ್‌ನ ಸೇವಾ ನ್ಯೂನತೆಯನ್ನು ಎತ್ತಿ ಹಿಡಿದಿದ್ದಾರೆ. ದೂರುದಾರರ ಪರವಾಗಿ ವಕೀಲರಾದ ಎನ್.ದೇವೇಂದ್ರಕುಮಾರ್ ಜೈನ್ ವಾದ ಮಂಡಿಸಿದ್ದರು.
Bank ordered to pay money with interest for service deficiency
