Category: ಚಿಕ್ಕಮಗಳೂರು ನಗರ

  • ಅಂಗನವಾಡಿ ಕೇಂದ್ರಗಳಿಂದಲೇ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಚಿಂತನೆ

    ಅಂಗನವಾಡಿ ಕೇಂದ್ರಗಳಿಂದಲೇ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಚಿಂತನೆ

    ಚಿಕ್ಕಮಗಳೂರು: ಅಂಗನವಾಡಿ ಕೇಂದ್ರಗಳಲ್ಲಿ ಮೊಂಟೆಸ್ಸರಿ, ನರ್ಸರಿ, ಎಲ್.ಕೆ.ಜಿ., ಯು.ಕೆ.ಜಿ. ಮಾದರಿಯ ತರಗತಿಗಳನ್ನು ಈ ವರ್ಷದಿಂದ ತೆರೆದು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಯೋಜನೆಯನ್ನು ಸರ್ಕಾರದಿಂದ ರೂಪಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲ ಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮೀ ಆರ್.ಹೆಬ್ಬಾಳ್ಕರ್ ತಿಳಿಸಿದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಹಾಗೂ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಇಂದು ನಗರದ ಕುವೆಂಪು ಕಲಾಮಂದಿರದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಂಗನವಾಡಿ ಕೇಂದ್ರಗಳು ಆರಂಭವಾಗಿ ೫೦ ವರ್ಷಗಳು ಕಳೆದಿದ್ದು, ಈ ಸುವರ್ಣ ಮಹೋತ್ಸವದ ನೆನಪಿನಲ್ಲಿ ಜಿಲ್ಲೆಯಲ್ಲಿ ಗುರುತಿಸಲಾಗಿರುವ ೧೩೦ ಅಂಗನವಾಡಿ ಕೇಂದ್ರಗಳನ್ನು ಈ ಯೋಜನೆಗೆ ಗುರುತಿಸಲಾಗಿದೆ ಎಂದು ಹೇಳಿದರು.

    ನಮ್ಮ ಸರ್ಕಾರ ಇರುವುದೇ ಜನರ ಅಭಿವೃದ್ಧಿಗಾಗಿ. ಮಹಿಳೆಯರನ್ನು ಯಜಮಾನಿ ಎಂದು ಗುರುತಿಸಿದ್ದು ನಮ್ಮ ಸರ್ಕಾರ. ಮಹಿಳೆಯರನ್ನು ಸ್ವಾಭಿಮಾನಿಗಳನ್ನಾಗಿ ಮಾಡಲು ನಮ್ಮ ಸರ್ಕಾರ ಗೃಹಲಕ್ಷ್ಮೀ ಯೋಜನೆಯನ್ನು ಜಾರಿ ಮಾಡಿತು. ನಮ್ಮ ಸರ್ಕಾರ ಯಾವುದೇ ಮಧ್ಯವರ್ತಿಗಳ ಪ್ರವೇಶಕ್ಕೆ ಅವಕಾಶವಿಲ್ಲದೆ ಸರ್ಕಾರದ ಹಣವನ್ನು ಅವರ ಖಾತೆಗೆ ನೇರವಾಗಿ ಜಮೆ ಮಾಡುತ್ತಿದೆ ಎಂದು ಹೇಳಿದರು.

    ಇಡೀ ರಾಜ್ಯಕ್ಕೆ ಅನುಕೂಲವಾಗುವಂತೆ ನಮ್ಮ ಸರ್ಕಾರ ಮಾದರಿ ಯೋಜನೆಗಳನ್ನು ರೂಪಿಸಿದ್ದು, ಚಿಕ್ಕಮಗಳೂರು ಜಿಲ್ಲೆ ಗ್ಯಾರಂಟಿ ಯೋಜನೆಗಳ ಅನು?ನದ ವಿಚಾರದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿದೆ. ಇಡೀ ರಾಜ್ಯದಲ್ಲಿ ಈ ಯೋಜನೆಗೆ ಸಂಬಂಧಿಸಿದಂತೆ ಮೂರು ಜಿಲ್ಲೆಗಳು ಅತ್ಯಂತ ಚುರುಕಾಗಿ ಕೆಲಸ ಮಾಡುತ್ತಿವೆ. ಅದರಲ್ಲಿ ಚಿಕ್ಕಮಗಳೂರು ಕೂಡ ಸೇರಿದೆ ಎಂದು ಹೇಳಿದರು.

    ಅಧ್ಯಕ್ಷತೆ ವಹಿಸಿದ್ದ ಚಿಕ್ಕಮಗಳೂರು ಕ್ಷೇತ್ರದ ಶಾಸಕ ಹೆಚ್.ಡಿ.ತಮ್ಮಯ್ಯ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳ ಜೊತೆಗೆ ಭೂ ಗ್ಯಾರಂಟಿ ಯೋಜನೆಯನ್ನು ಘೋಷಿಸಿದೆ. ದಶಕಗಳಿಂದ ಕಂದಾಯ ವ್ಯಾಪ್ತಿಗೆ ಬಾರದ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ ಅದರಲ್ಲಿನ ಕುಟುಂಬಗಳಿಗೆ “ಉಳುವವನೇ ಭೂಮಿಯ ಒಡೆಯ’ ಮಾದರಿಯಲ್ಲಿ “ವಾಸಿಸುವವನೇ ಮನೆಯ ಒಡೆಯ’ ಎಂದು ಹಕ್ಕುಪತ್ರಗಳನ್ನು ವಿತರಿಸುವುದು ಈ ಯೋಜನೆಯ ಉದ್ದೇಶ ಎಂದು ಹೇಳಿದರು.

    ಕರ್ನಾಟಕದ ಭೂಮಿಯ ಹಕ್ಕುಪತ್ರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಮಹತ್ವದ ಯೋಜನೆ ಇದಾಗಿದ್ದು, ಇದರಿಂದ ಲಕ್ಷಾಂತರ ಜನರಿಗೆ ತಮ್ಮ ಭೂಮಿಯ ಅಧಿಕೃತ ಮಾಲೀಕತ್ವ ಸಿಗಲಿದೆ. ಹಕ್ಕುಪತ್ರವು ಕರ್ನಾಟಕ ಸರ್ಕಾರವು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ನೀಡುವ ಆಸ್ತಿಗಳ ಸ್ವಾಮ್ಯದ ಪತ್ರವಾಗಿದೆ. ಸರಕಾರದ ಸ್ವಾಧೀನದಲ್ಲಿರುವ ಅದರೆ ಬಡವರಿಗಾಗಿ ಒದಗಿಸಿದ ಮನೆಗಳಿಗೆ ಇಂತಹ ಪತ್ರವನ್ನು ಸರ್ಕಾರ ನೀಡುತ್ತದೆ ಎಂದು ಹೇಳಿದರು.

    ನಮ್ಮ ಸರ್ಕಾರ ೨೦೦೦ ನಿವೇಶನಕ್ಕಾಗಿ ೪೨ ಎಕರೆ ಜಮೀನನ್ನು ಗುರುತಿಸಿ ರೈತರಿಗೆ, ಬಡವರಿಗೆ ಹಂಚಲು ಮುಂದಾಗಿದೆ. ೧೦ ಕೋಟಿ ರೂ. ವೆಚ್ಚದ ಡಾಂಬರೀಕರಣ ಕಾಮಗಾರಿಯನ್ನು ಮಳೆ ನಿಂತ ಮೇಲೆ ಪ್ರಾರಂಭ ಮಾಡಲಾಗುತ್ತದೆ. ಚಿಕ್ಕಮಗಳೂರಿನಲ್ಲಿ ಇನ್ನೂ ಒಂದೂವರೆ ವರ್ಷದಲ್ಲಿ ೨೦ ಕೋಟಿ ರೂ. ವೆಚ್ಚದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಿಸಲಾಗುತ್ತದೆ. ಜನರ ತೆರಿಗೆ ಹಣದಿಂದ ಜನರ ಬಾಳನ್ನು ಬೆಳಕಾಗಿಸುವ ಕೆಲಸ ನಾವು ಮಾಡುತ್ತಿದ್ದೇವೆ ಎಂದು ಹೇಳಿದರು.

    ಜಿಲ್ಲಾ ಗ್ಯಾರಂಟಿ ಯೋಜನೆಯ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ಐದು ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದು ಜನರ ಅಭಿವೃದ್ದಿಗೆ ಸಹಕಾರಿಯಾಗಿದೆ. ನಮ್ಮ ಸರ್ಕಾರದ ಗುರಿ ನಮ್ಮ ದೇಶದ ಅಭಿವೃದ್ಧಿ ಜೊತೆಗೆ ಜನರನ್ನು ಕೂಡ ಅಭಿವೃದ್ದಿಪಡಿಸುವ ಕೆಲಸ ನಾವು ಮಾಡಲು ಮುಂದಾಗಿದ್ದೇವೆ ಎಂದು ಹೇಳಿದರು.

    ಈ ದೇಶಕ್ಕೆ, ಬೇರೆ-ಬೇರೆ ರಾಜ್ಯಕ್ಕೆ, ವಿಶ್ವ ಸಂಸ್ಥೆಯು ಮೆಚ್ಚುವಂತಹ ಪಂಚ ಗ್ಯಾರಂಟಿಯನ್ನು ನಾವು ಜಾರಿಗೆ ತಂದಿದ್ದೇವೆ. ನಮ್ಮ ಜಿಲ್ಲೆಯಲ್ಲಿ ೨,೬೧,೪೧೫ ಕುಟುಂಬದ ಯಜಮಾನಿಯರಿಗೆ ತಲಾ ರೂ.೨,೦೦೦ ದಂತೆ ಪ್ರತಿ ತಿಂಗಳು ೫೨.೮೦ ಕೋಟಿ ರೂ.ಗಳನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗುತ್ತಿದೆ. ಇದರ ಮೊತ್ತ ೯೯೩ ಕೋಟಿ ಆಗಿದೆ ಎಂದು ಹೇಳಿದರು. ನಮ್ಮ ಜಿಲ್ಲೆಯಲ್ಲಿ ಹೆಚ್ಚು ಮಳೆ ಇರುವುದರಿಂದ ನಗರದಲ್ಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಾವು ಈಗಲೇ ಎಚ್ಚರ ವಹಿಸಬೇಕು. ಘನ ತ್ಯಾಜ್ಯಗಳ ಕಸವನ್ನು ಗ್ರಾಮ ಪಂಚಾಯಿತಿಗಳಿಗೆ ಕನಿ? ೨ ಎಕರೆ ಜಾಗವನ್ನು ಸರ್ಕಾರ ನೀಡಿದರೆ, ಇನ್ನೂ ೩೦ ವ?ಗಳಲ್ಲಿ ನಾವು ಘನ ತ್ಯಾಜ್ಯ ಸಮಸ್ಯೆಯಿಂದ ಮುಕ್ತರಾಗಬಹುದು ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಮೂಡಿಗೆರೆ ಶಾಸಕಿ ನಯನ ಮೋಟಮ್ಮ, ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್, ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಹೆಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ, ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಹೆಚ್.ಹರೀಶ್, ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ತಾಲ್ಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಂ.ಮಲ್ಲೇಶಸ್ವಾಮಿ, ತಾಲ್ಲೂಕು ತಹಸೀಲ್ದಾರ್ ರೇಷ್ಮಾ, ಮುಂತಾದವರು ಉಪಸ್ಥಿತರಿದ್ದರು.

    The idea of ​​providing better education to children through Anganwadi centers

  • ಕಂದಾಯ ಭೂಮಿ ಅರಣ್ಯ ಇಲಾಖೆಗೆ ವರ್ಗಾಯಿಸದಿರಲು ಒತ್ತಾಯ

    ಕಂದಾಯ ಭೂಮಿ ಅರಣ್ಯ ಇಲಾಖೆಗೆ ವರ್ಗಾಯಿಸದಿರಲು ಒತ್ತಾಯ

    ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕಿನ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸದಂತೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮಾಜಿ ಶಾಸಕರು ಶುಕ್ರವಾರ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.

    ಬಳಿಕ ಮಾತನಾಡಿದ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮುಂದಿನ ಪೀಳಿಗೆಗೆ ಮೂಲಭೂತ ಸೌಲಭ್ಯವನ್ನು ಗಮನದಲ್ಲಿಟ್ಟುಕೊಂಡು ಕಂದಾಯ ಭೂಮಿಯನ್ನು ಅರಣ್ಯಕ್ಕೆ ಸೇರಿಸಬಾರದು. ಪ್ರಸ್ತುತ ೪/೧ ಆಗಿರುವ ಅನೇಕ ಗ್ರಾಮಗಳಲ್ಲಿ ೪/೧ ನೋಟಿಫಿಕೇಷನ್‌ನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

    ಇದೀಗ ಕಳಸ ತಾಲ್ಲೂಕಿನ ಎಸ್.ಕೆ.ಮೇಗಲ್, ಮಾವಿನಕೆರೆ, ಕಗ್ಗನಹಳ್ಳ, ಹೊರನಾಡು, ಬಾಳೂರು ಹೋಬಳಿಯ ಕಲ್ಮನೆ, ಹಾದಿಓಣಿ, ಕುವೆ, ತೆಲಗೂರು, ಆಲ್ದೂರು ಹೋಬಳಿಯ ಹಳಿಯೂರು, ಬನ್ನೂರು, ಆವ್ವಳ್ಳಿ, ಇಳೇಖಾನ್, ಬೆಳಗೋಡು, ವಸ್ತಾರೆ, ಬಾಚಿನಗಹಳ್ಳಿ, ಹಲಸುಮನೆ, ಕದ್ರಿಮಿದ್ರಿ ಗ್ರಾಮಗಳಲ್ಲಿ ೪/೧ ನೋಟಿಫಿಕೇಷನ್ ಪರಿವರ್ತನೆ ಮಾಡಲು ಅರಣ್ಯ ಇಲಾಖೆ ಸಿದ್ದತೆ ಮಾಡಿಕೊಂಡಿದೆ ಎಂದರು.

    ಈ ಹಿಂದೆ ಅನೇಕ ಕಂದಾಯ ಭೂಮಿಯನ್ನು ಅರಣ್ಯ ಭೂಮಿಯಾಗಿ ಪರಿವರ್ತನೆ ಮಾಡಲಾಗಿದೆ. ಅಂತ ಕಡೆಗಳಲ್ಲಿ ಕೂಡ ರೈತರು ಬೀದಿಪಾಲಾಗಿದ್ದಾರೆ. ಬಹುತೇಕ ಗ್ರಾಮದ ಭೂಮಿಗಳಲ್ಲಿ ಕೃಷಿಕರು, ನಿವೇ ಶನ ರಹಿತರು ವಾಸವಾಗಿದ್ದು ಜೊತೆಗೆ ಸಾವಿರಾರು ಮಂದಿ ನಿವೇಶನಕ್ಕಾಗಿ ಕಾದು ಕುಳಿತುಕೊಂಡಿದ್ದಾರೆ ಎಂದು ಹೇಳಿದರು.

    ಇನ್ನೂ ಕೆಲವೆಡೆ ಸಾವಿರಾರು ಕುಟುಂಬಗಳು, ಬೆಳೆಗಾರರ ಕೂಲಿಲೈನ್‌ಗಳಲ್ಲಿ ನಿವೇಶನಕ್ಕಾಗಿ, ಸ್ವಂತ ಮನೆ ನಿರ್ಮಿಸಿಕೊಳ್ಳಲು ಕನಸು ಕಾಣಲಾಗುತ್ತಿದೆ. ಅಂಗನವಾಡಿ ಶಾಲೆ, ಆಟದ ಮೈದಾನ, ಸಮುದಾಯ ಭವನ, ಸ್ಮಶಾನಕ್ಕೆ ಜಾಗವಿಲ್ಲದೇ ಆಹಾಕಾರಪಡುವಂತಾಗಿದೆ ಎಂದರು.

    ಆದ್ದರಿಂದ ಜಿಲ್ಲೆಯ ಯಾವುದೇ ಗ್ರಾಮದ ಕಂದಾಯ ಭೂಮಿಯನ್ನು ಅರಣ್ಯ ಎಂದು ಪರಿವರ್ತನೆ ಮಾಡಬೇಕಾದರೆ ಎಲ್ಲಾ ಮೂಲಭೂತ ಸೌಲಭ್ಯದ ಕೊರತೆಗಳನ್ನು ನೀಗಿಸಬೇಕಾಗಿದೆ ಮತ್ತು ಅರಣ್ಯಕ್ಕೆ ವರ್ಗಾಯಿಸಬೇಕಾದ ವೇಳೆಯಲ್ಲಿ ಮುಂದಿನ ಪೀಳಿಗೆಗೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರವನ್ನು ಕೈ ಗೊಳ್ಳಬೇಕು ಎಂದು ಒತ್ತಾಯಿಸಿದರು.

    ಈ ಸಂದರ್ಭದಲ್ಲಿ ಎಸ್ಸಿಎಸ್ಟಿ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಹುಣಸೇಮಕ್ಕಿ ಲಕ್ಷ್ಮಣ್, ಮು ಖಂಡರುಗಳಾದ ಹರೀಶ್ ಮಿತ್ರ, ಕಬ್ಬಿಕೆರೆ ಮೋಹನ್‌ಕುಮಾರ್, ಭಾರತಿ, ದಿವಾಕರ್ ಹಾಜರಿದ್ದರು.

    Demand not to transfer revenue land to the Forest Department

  • ಅಂಚೆ ಇಲಾಖೆಯಿಂದ ಕಾಫಿ ತೋಟಗಳ ಚಿತ್ರಣವಿರುವ ವಿಶೇಷ ಮುದ್ರೆ ಬಿಡುಗಡೆ

    ಅಂಚೆ ಇಲಾಖೆಯಿಂದ ಕಾಫಿ ತೋಟಗಳ ಚಿತ್ರಣವಿರುವ ವಿಶೇಷ ಮುದ್ರೆ ಬಿಡುಗಡೆ

    ಚಿಕ್ಕಮಗಳೂರು: ಅಂಚೆ ಇಲಾಖೆ ಕಾಫಿ ತೋಟಗಳ ಚಿತ್ರಣವಿರುವ ವಿಶೇಷ ಮುದ್ರೆಯನ್ನು ಹೊರತಂದಿದ್ದು, ಇನ್ನು ಮುಂದೆ ಮಲೆನಾಡಿನ ಕಾಫಿ ತೋಟಗಳ ಸೊಬಗು ಅಂಚೆ ಇಲಾಖೆಯ ಮೊಹರಿನಲ್ಲಿ ವಿಜೃಂಭಿಸಲಿದೆ.

    ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಇಲಾಖೆಯ ವಿಭಾಗೀಯ ಅಂಚೆ ಅದೀಕ್ಷಕ ಎನ್.ಬಿ. ಶ್ರೀನಾಥ್ ಜಿಲ್ಲೆಯ ಕಾಫಿ ತೋಟಗಳ ಚಿತ್ರಣವಿರುವ ವಿಶೇಷ ಮುದ್ರೆಯನ್ನು ಬಿಡುಗಡೆಗೊಳಿಸಿದರು.

    ಈ ವೇಳೆ ಮಾತನಾಡಿದ ಅವರು ಸಾರ್ವಜನಿಕರು ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಇಂದಿನಿಂದ ತಮ್ಮ ಪತ್ರಗಳಿಗೆ ಕಾಫಿ ತೋಟದ ಚಿತ್ರಣವಿರುವ ವಿಶೇಷ ಮೊಹರನ್ನು ಹಾಕಿಸಿಕೊಳ್ಳಬಹುದು ಎಂದು ಹೇಳಿದರು.

    ಕಳೆದ ೪೦ ವರ್ಷಗಳ ಹಿಂದೆ ಶೃಂಗೇರಿಯ ಶ್ರೀ ವಿದ್ಯಾಶಂಕರ ದೇವಾಲಯದ ಚಿತ್ರಣ ವಿರುವ ವಿಶೇಷ ಮುದ್ರೆಯನ್ನು ಅಂಚೆ ಇಲಾಖೆ ಹೊರತಂದಿದ್ದು, ಇದೀಗ ಕಾಫಿ ತೋಟಗಳ ಚಿತ್ರಣವಿರುವ ವಿಶೇಷ ಮೊಹರನ್ನು ಹೊರ ತರುವ ಮೂಲಕ ಅಂಚೆ ಇಲಾಖೆ ಜಿಲ್ಲೆಯ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ತಿಳಿಸಿದರು.

    ಕಾಫಿ ಮಂಡಳಿ ಉಪನಿರ್ದೇಶಕ ವೆಂಕಟರೆಡ್ಡಿ ಮಾತನಾಡಿ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ತನ್ನದೇ ಆದ ವಿಶೇಷ ಅಂಚೆ ಮೊಹರನ್ನು ಹೊಂದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

    ಸಹಾಯಕ ಅಂಚೆಪಾಲಕ ಎ.ಎಸ್. ಮುರಳಿಧರ್ ಮಾತನಾಡಿ ಚಿಕ್ಕಮಗಳೂರು ಜಿಲ್ಲೆಯ ಎರಡನೇ ವಿಶೇಷ ಅಂಚೆ ಮೊಹರು ಬಿಡುಗಡೆಗೊಂಡಿರುವುದು ಎಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

    ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಧಾನ ಅಂಚೆಪಾಲಕ ಸುನಿಲ್ ವಾಸ್ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

    ಕ್ಕಮಗಳೂರು ಉಪ ವಿಭಾಗದ ಅಂಚೆ ನಿರೀಕ್ಷಕ ಡಿ.ಎನ್. ಗಂಗಾಧರಪ್ಪ, ಮೂಡಿಗೆರೆ ಅಂಚೆ ನಿರೀಕ್ಷಕ ಷಣ್ಮುಖ ಹೆಚ್. ಚವಾಣ್, ಕೊಪ್ಪ ಅಂಚೆ ನಿರೀಕ್ಷಕ ಹರಿಪ್ರಸಾದ್ ರಾವ್, ಅಂಚೆ ಜೀವ ವಿಮಾ ಅಭಿವೃದ್ಧಿ ಅಧಿಕಾರಿ ಗಣೇಶ್ ನಾಯಕ್, ಅಂಚೆ ಮಾರುಕಟ್ಟೆ ಅಧಿಕಾರಿ ದೊಡ್ದೇಶ್, ಶಶಿರೇಖ, ಬಿ.ಎನ್. ಪ್ರದೀಪ್, ಕಾವ್ಯಶ್ರೀ ಉಪಸ್ಥಿತರಿದ್ದರು.

    Postal Department releases special stamp depicting coffee plantations

  • ಚಲವಾದಿ ನಾರಾಯಣಸ್ವಾಮಿ ಮೇಲಿನ ಹಲ್ಲೆ ಖಂಡಿಸಿ ಕಲ್ಬುರ್ಗಿ ಚಲೋ

    ಚಲವಾದಿ ನಾರಾಯಣಸ್ವಾಮಿ ಮೇಲಿನ ಹಲ್ಲೆ ಖಂಡಿಸಿ ಕಲ್ಬುರ್ಗಿ ಚಲೋ

    ಚಿಕ್ಕಮಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಕುಟುಂಬದ ಅಕ್ರಮ ಆಸ್ತಿಗಳ ವಿರುದ್ಧ ಸದನದಲ್ಲಿ ಧ್ವನಿ ಎತ್ತಿದ್ದಕ್ಕಾಗಿ ಆಸ್ತಿ ಹಿಂದುರುಗಿಸಿದ ಸೇಡಿನಿಂದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಬೆಂಬಲಿಗರು ಪರಿಷತ್ ಪ್ರತಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಅವರ ಮೇಲೆ ಹಲ್ಲೆಗೆ ಮುಂದಾಗಿ ಕೊಲೆ ಮಾಡುವ ಯತ್ನ ನಡೆಸಿರುವುದನ್ನು ಜಿಲ್ಲಾ ಬಿಜೆಪಿ ಖಂಡಿಸಿ ನಾಳೆ (ಮೇ.೨೪) ಕಲ್ಬುರ್ಗಿ ಚಲೋ ನಡೆಸಲಿದೆ.

    ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್. ದೇವರಾಜ್ ಶೆಟ್ಟಿ, ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕಲ್ಬುರ್ಗಿ ಚಲೋ ಕರೆನೀಡಿದ್ದು, ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡುವವರೆಗೂ ಬಿಜೆಪಿ ಹೋರಾಟ ಮಾಡಲಿದ್ದು, ಇದು ಕೇವಲ ವ್ಯಕ್ತಿಯ ವಿರುದ್ಧವಲ್ಲ, ನ್ಯಾಯ-ಸಂವಿಧಾನದ ರಕ್ಷಣೆ ಮತ್ತು ಸರ್ಕಾರದ ದಲಿತ ವಿರೋಧಿ ಧೋರಣೆಯ ವಿರುದ್ಧವಾಗಿದೆ ಎಂದು ಆರೋಪಿಸಿದರು.

    ಕಲ್ಬುರ್ಗಿಯ ಚಿತ್ತಾಪುರದಲ್ಲಿ ತಿರಂಗಾ ಯಾತ್ರೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಚಲವಾದಿ ನಾರಾಯಣಸ್ವಾಮಿ ಅವರನ್ನು ಗೃಹಬಂಧನದಲ್ಲಿಟ್ಟು ಅವರ ರಾಜಕೀಯ ವರ್ಚಸ್ಸಿಗೆ ಧಕ್ಕೆ ತರುವ ಈ ಘಟನೆಯು ಪೂರ್ವ ನಿಯೋಜಿತ ಮತ್ತು ರಾಜಕೀಯ ಪ್ರೇರಿತ ದಾಳಿ ಎಂದು ದೂರಿದರು.

    ಈ ಘಟನೆಯಲ್ಲಿ ಸಂವಿಧಾನ ಬದ್ಧವಾಗಿ ಹಾಗೂ ಕಾನೂನಾತ್ಮಕವಾಗಿ ರಕ್ಷಿಸಬೇಕಾದ ಪೊಲೀಸ್ ಅಧಿಕಾರಿಗಳು ಪ್ರಿಯಾಂಕ್ ಖರ್ಗೆ ಅವರ ಏಜೆಂಟರಂತೆ ವರ್ತಿಸುತ್ತಿದ್ದು, ಘಟನಾ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರಿದ್ದರೂ ಕಾಂಗ್ರೆಸ್ ಗೂಂಡಾ ಕಾರ್ಯಕರ್ತರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು.

    ಚಲವಾದಿ ನಾರಾಯಣಸ್ವಾಮಿ ಅವರ ಮೇಲೆ ನಡೆದ ಹಲ್ಲೆ, ಅಕ್ರಮ ಬಂಧನ ಮತ್ತು ವಾಹನ ನಾಶಮಾಡಿದ ಸಂದರ್ಭದಲ್ಲಿಯೂ ಪೊಲೀಸರು ಮೂಖಪ್ರೇಕ್ಷಕರಾಗಿದ್ದು, ಯಾವುದೇ ರೀತಿಯ ಕಾನೂನು ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿ ಖರ್ಗೆ ಅವರ ಕೈಗೊಂಬೆಯಂತೆ ವರ್ತಿಸಿದ್ದಾರೆಂದು ಲೇವಡಿ ಮಾಡಿದರು.

    ಖರ್ಗೆ ಕುಟುಂಬದ ಅಕ್ರಮ ಆಸ್ತಿಗಳ ಬಗ್ಗೆ ಸದನದಲ್ಲಿ ಹೋರಾಟ ನಡೆಸಿದ ಪರಿಣಾಮವಾಗಿ ಕೆಐಎಡಿಬಿಯು ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ನೀಡಿದ್ದ ೫ ಎಕರೆ ಭೂಮಿಯನ್ನು ಹಿಂದುರಿಗಿಸಲಾಯಿತು. ಇದರ ಸೇಡಿನಿಂದ ಕಲ್ಬುರ್ಗಿಯಲ್ಲಿ ಚಲವಾದಿ ನಾರಾಯಣರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹೇಳಿದರು.

    ರಾಜ್ಯದ ಪ್ರಮುಖ ದಲಿತ ನಾಯಕ ಚಲವಾದಿ ನಾರಾಯಣಸ್ವಾಮಿ ಅವರ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿ ಅವಾಚ್ಯ ಶಬ್ದಗಳಿಂದ ನಿಂಧಿಸಿ ದಿಗ್ಬಂಧನ ಹಾಕಿ ನಂತರ ಅವರ ಅಧಿಕೃತ ವಾಹನದ ಮೇಲೆ ಇಂಕ್ ಹಾಕಿ ವಿಕೃತಿ ಮೆರೆದಿದ್ದಾರೆ ಎಂದು ದೂರಿದರು.

    ದಲಿತರ ಮೇಲಿನ ದಾಳಿ ಇದೇ ಮೊದಲಲ್ಲ, ಜೇವರ್ಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶಾಸಕ ಬಸವರಾಜ್ ಮುತ್ತಿಮುಡ್ ಅವರ ಮೇಲೆ ಪೊಲೀಸ್ ದೌರ್ಜನ್ಯ ನಡೆಸಲಾಗಿತ್ತು. ಇಂತಹ ದಲಿತ ನಾಯಕರುಗಳ ಮೇಲಿನ ಹಲ್ಲೆ ನಡೆಸಿದವರ ಮೇಲೆ ರಾಜ್ಯಸರ್ಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.

    ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿಯವರಿಗೆ ಅನಧಿಕೃತವಾಗಿ ಬಂಧಿಸಿ ಹಲ್ಲೆ ನಡೆಸಿ ಬೆದರಿಕೆ ಒಡ್ಡಲಾಗಿದ್ದು, ಇದಕ್ಕೆ ಪ್ರತಿಯಾಗಿ ಚಿಕ್ಕಮಗಳೂರಿಗೆ ಆಗಮಿಸುತ್ತಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್‌ಕರ್ ಅವರಿಗೆ ಸ್ವಾಗತ ಕೋರುತ್ತೇವೆ. ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರುಗಳಾದ ಬಿ. ರಾಜಪ್ಪ, ಕೆ.ಪಿ ವೆಂಕಟೇಶ್, ಸೀತಾರಾಂಭರಣ್ಯ, ಹೆಚ್.ಎಸ್. ಪುಟ್ಟಸ್ವಾಮಿ, ಸುರೇಶ್, ಬಸವರಾಜ್ ಉಪಸ್ಥಿತರಿದ್ದರು.

    Kalaburagi Chalo condemns attack on Chalavadi Narayanaswamy

  • ಜಾತಿ ಸಮೀಕ್ಷೆಯಲ್ಲಿ ಉಪಜಾತಿ ನಮೂದಿಸಲು ಸಹಕರಿಸಿ

    ಜಾತಿ ಸಮೀಕ್ಷೆಯಲ್ಲಿ ಉಪಜಾತಿ ನಮೂದಿಸಲು ಸಹಕರಿಸಿ

    ಚಿಕ್ಕಮಗಳೂರು: ಜಾತಿ ಸಮೀಕ್ಷೆಗೆ ಮನೆಗೆ ಭೇಟಿ ನೀಡುವ ಗಣತಿದಾರರಿಗೆ ಪ.ಜಾ ಸಮುದಾಯದವರು ತಮ್ಮ ಜಾತಿ-ಉಪಜಾತಿಯನ್ನು ಸಮೀಕ್ಷೆ ಕಾಲಂನಲ್ಲಿ ಕಡ್ಡಾಯವಾಗಿ ನಮೂದಿಸಲು ಸಹಕರಿಸಿದಾಗ ಜಾತಿ ಸಮೀಕ್ಷೆ ಕಾರ್ಯ ಪರಿಪೂರ್ಣವಾಗುತ್ತದೆ ಎಂದು ಉಪವಿಭಾಗಾಧಿಕಾರಿ ಹಾಗೂ ನೋಡಲ್ ಅಧಿಕಾರಿ ದೇವರಾಜ್ ಮನವಿ ಮಾಡಿದರು.

    ಅವರು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗೌರವಾನ್ವಿತ ನ್ಯಾಯಮೂರ್ತಿ ಡಾ. ಹೆಚ್.ಎನ್ ನಾಗಮೋಹನ್‌ದಾಸ್ ಏಕ ಸದಸ್ಯ ವಿಚಾರಣಾ ಆಯೋಗ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ೨೦೨೫ ರ ತಾಲ್ಲೂಕು ಮಟ್ಟದ ಜಾತಿ ಸಮೀಕ್ಷೆಯ ಕುರಿತು ಮಾಹಿತಿ ಸಂಗ್ರಹಣೆಯ ತಾಲ್ಲೂಕು ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಈ ಸಮೀಕ್ಷೆಯಲ್ಲಿ ಪರಿಶಿಷ್ಟ ಜನಾಂಗದವರು ಪಡೆದಿರುವ ಶಿಕ್ಷಣ, ವೃತ್ತಿ, ವಾಸಿಸುವ ಪ್ರದೇಶ ಹೊಂದಿರುವ ಸೌಲಭ್ಯಗಳು ಇನ್ನೂ ಮುಂತಾದ ಅಗತ್ಯ ಸಾಮಾನ್ಯ ಮಾಹಿತಿಗಳನ್ನು ಜಾತಿ ಗಣತಿದಾರರಿಗೆ ನೀಡಬೇಕೆಂದು ವಿನಂತಿಸಿದರು. ಈ ರೀತಿಯ ಮಾಹಿತಿ ಕೊಡುವುದರಿಂದ ಈಗ ಲಭ್ಯವಿರುವ ಬಿಪಿಎಲ್ ಪಡಿತರ ಚೀಟಿ ಹಾಗೂ ಇನ್ನಿತರ ಸೌಲಭ್ಯಗಳನ್ನು ಕಡಿತ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಆಯೋಗದ ನಿರ್ದೇಶನದಂತೆ ಮಾತ್ರ ಜಾತಿ ಸಮೀಕ್ಷೆ ನಡೆಸಲು ಸೂಚನೆ ನೀಡಿದೆ ಎಂದು ಹೇಳಿದರು.

    ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಮೇ.೨೧ ರವರೆಗೆ ಒಟ್ಟು ೮೫೩೭೧ ಕುಟುಂಬಗಳ ಸಮೀಕ್ಷಾ ಕಾರ್ಯ ಪೂರ್ಣಗೊಂಡಿದ್ದು, ಇದರಲ್ಲಿ ಪ.ಜಾ ಕ್ಕೆ ಸೇರಿದ ಸುಮಾರು ೧೬೨೭೫ ಕುಟುಂಬಗಳು ಮತ್ತು ೬೯೦೯೬ ಕುಟುಂಬಗಳು ಪ.ಜಾ ವ್ಯಾಪ್ತಿಯ ಹೊರಗಿನವು ಎಂದು ಮಾಹಿತಿ ನೀಡಿದರು.

    ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನ್ ದಾಸ್ ಏಕ ವಿಚಾರಣಾ ಆಯೋಗದ ಶಿಫಾರಸ್ಸಿನಂತೆ ಪ.ಜಾ ಒಳ ಮೀಸಲಾತಿ ವರ್ಗೀಕರಣಗೊಳಿಸಲು ಜಾತಿ ಸಮೀಕ್ಷೆಯನ್ನು ಜಿಲ್ಲಾ ವ್ಯಾಪ್ತಿಯಲ್ಲಿ ನಡೆಸುತ್ತಿರುವ ಮಾದರಿಯಲ್ಲಿ ತಾಲ್ಲೂಕು ಮಟ್ಟದಲ್ಲಿ ಮೂರು ಹಂತಗಳಲ್ಲಿ ಸಮೀಕ್ಷೆ ನಡೆಸಲಾಗುವುದು ಎಂದರು.

    ಗಣತಿದಾರರು ಮನೆ ಮನೆಗೆ ಭೇಟಿನೀಡಿ ಸಮೀಕ್ಷೆ ಮಾಡುವಂತದ್ದಾಗಿದ್ದು, ಮತಗಟ್ಟೆವಾರು ಶಿಬಿರಗಳಲ್ಲಿ ಮತ್ತು ಸ್ವಯಂ ಘೋಷಣೆಯ ಮೂಲಕ ಈ ಮೂರು ಹಂತಗಳಲ್ಲಿ ಜಾತಿ ಸಮೀಕ್ಷೆ ನಡೆಸಲಾಗುವುದು ಎಂದು ವಿವರಿಸಿದರು.

    ಈಗಾಗಲೇ ಮೇ.೫ ರಿಂದ ಆರಂಭವಾಗಿದ್ದ ಜಾತಿ ಸಮೀಕ್ಷೆ ಕಾರ್ಯ ಮೇ.೧೭ ಕ್ಕೆ ಮುಕ್ತಾಯಗೊಂಡಿದ್ದು, ಗಡುವನ್ನು ಮೇ.೨೫ ರವರೆಗೆ ವಿಸ್ತರಿಸಿ ಸರ್ಕಾರ ಅದೇಶಿಸಿದೆ. ಶಿಬಿರದಲ್ಲಿ ಸಮೀಕ್ಷೆ ನಡೆಸುವವರು ಮೇ.೨೫ ರಿಂದ ೨೮ ರವರೆಗೆ ಸ್ವಯಂ ಘೋಷಣೆಯಡಿ ಮೇ.೧೯ ರಿಂದ ೨೮ ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದರು.

    ಸ್ವಯಂ ಘೋಷಣೆಯಲ್ಲಿ ಗಣತಿದಾರರು ಮನೆಗೆ ಬಂದಾಗ ಇಲ್ಲದಿರುವವರು ಆನ್‌ಲೈನ್ ಮೂಲಕ ವೆಬ್‌ಸೈಟ್ ಪೋರ್ಟಲ್‌ನಲ್ಲಿ ಘೋಷಣೆ ಮಾಡಿಕೊಳ್ಳಲು ಅವಕಾಶ ಇದೆ ಎಂದು ಹೇಳಿದರು.

    ಒಟ್ಟು ೪೩೧ ಗಣತಿದಾರರು ಈ ಜಾತಿ ಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಂಡಿದ್ದು, ಈಗಾಗಲೇ ಸಾಕಷ್ಟು ಮನೆಗಳಿಗೆ ಭೇಟಿನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಅಕ್ಕಪಕ್ಕದ ಮನೆಗಳಲ್ಲಿರುವವರ ಗಣತಿ ಕೈತಪ್ಪಿದ್ದರೆ ಮಾಹಿತಿಯನ್ನು ನೀಡುವ ಮೂಲಕ ಸಹಕರಿಸಬೇಕೆಂದು ಮನವಿ ಮಾಡಿದರು.

    ಸಭೆಯಲ್ಲಿ ಭಾಗವಹಿಸಿದ ಸಂಘಟನೆಗಳ ಮುಖಂಡರು ಬೇಡ, ಜಂಗಮ ಜನಾಂಗದ ಬಗ್ಗೆ ಮಾಹಿತಿ ನೀಡಿದ್ದಾರೆ. ಸಮೀಕ್ಷೆ ತಪ್ಪಾಗಿದ್ದಲ್ಲಿ ಸರಿಪಡಿಸಲು ಏನು ಕ್ರಮ ಎಂದು ಪ್ರಶ್ನಿಸಿದರು. ಈ ಎರಡು ಸಮಸ್ಯೆಗಳನ್ನು ಆಯೋಗದ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದರು.

    ಸಭೆಯಲ್ಲಿ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಹೆಚ್.ಡಿ. ರೇವಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ರವೀಶ್ ಮತ್ತು ದಲಿತಪರ ಸಂಘಟನೆಗಳ ಮುಖಂಡರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

    Help to enter sub-caste in caste survey

  • ಶಿಕ್ಷಣ ವಂಚಿತ ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚನೆ

    ಶಿಕ್ಷಣ ವಂಚಿತ ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚನೆ

    ಚಿಕ್ಕಮಗಳೂರು: ಅಲ್ಪಸಂಖ್ಯಾತರ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಎಚ್ಚರ ವಹಿಸಲು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು.ನಿಸಾರ್ ಅಹಮದ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಧಾನ ಮಂತ್ರಿಗಳ ಹೊಸ ೧೫ ಅಂಶಗಳ ಕಾರ್ಯಕ್ರಮ ಅನುಷ್ಠಾನದ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

    ಅಂಗನವಾಡಿ ಶಿಕ್ಷಕರಿಗೆ ಹಾಗೂ ಸಹಾಯಕಿಯರಿಗೆ ಮಕ್ಕಳನ್ನು ಅವರ ಮಾತೃ ಭಾಷೆಯಲ್ಲಿ ಮಾತನಾಡಿಸುವ ಸಾಮರ್ಥ್ಯ ಇರಬೇಕು ಹಾಗೂ ಅಂಗನವಾಡಿ, ಶಾಲಾ ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳನ್ನು ಗುರುತಿಸಿ ಅಂತವರನ್ನು ಪುನಃ ಶಾಲೆಗೆ ದಾಖಲಿಸಿ ಅವರಿಗೆ ವಿದ್ಯಾಭ್ಯಾಸ ನೀಡಲು ಸೂಚಿಸಿದರು.

    ಸಂವಾದದಲ್ಲಿ ಅಲ್ಪಸಂಖ್ಯಾತರ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿ ಬಗ್ಗೆ ಚರ್ಚಿಸಲಾಯಿತು. ಅಲ್ಪಸಂಖ್ಯಾತರ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ಪ್ರಧಾನ ಮಂತ್ರಿಗಳ ೧೫ ಅಂಶಗಳ ಕಾರ್ಯಕ್ರಮಕ್ಕೆ ಸಂಬಂಧಿಸಿದ ಇಲಾಖೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ಸಾಧ್ಯವಾದ? ಆರ್ಥಿಕ ಮತ್ತು ಭೌತಿಕ ಗುರಿಗಳಿಗೆ ಅನುಗುಣವಾಗಿ ಪ್ರಗತಿ ಸಾಧಿಸಲು ಸೂಚಿಸಿದರು.

    ಐ.ಟಿ.ಐ. ಕಾಲೇಜುಗಳಲ್ಲಿ ದಾಖಲಾತಿ ಹೆಚ್ಚಿಸುವ ಸಲುವಾಗಿ ಮನೆ ಮನೆ ಸಮೀಕ್ಷೆ ಮಾಡಿ ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣ ಹಾಗೂ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳ ಮನವೊಲಿಸಿ ಅವರನ್ನು ತಮ್ಮ ಕಾಲೇಜಿಗೆ ದಾಖಲಾತಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಸೂಚಿಸಿದರು.

    ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ಮಾತನಾಡಿ, ಉದ್ಯೋಗಸ್ಥ ಮಹಿಳಾ ವಸತಿ ನಿಲಯಗಳನ್ನು ಜಿಲ್ಲೆಯಲ್ಲಿ ಸ್ಥಾಪಿಸಲು ಸರ್ಕಾರದ ಹಂತದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಲು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಿಗೆ ಮನವಿ ಮಾಡಿದರು.

    ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರ ಆಪ್ತ ಸಹಾಯಕ ಮುಜೀಬುಲ್ಲಾ ಜಫಾರಿ, ಅಲ್ಪಸಂಖ್ಯಾತರ ಆಯೋಗದ ಸದಸ್ಯ, ನಿವೃತ್ತ ಐಎಎಸ್ ಅಧಿಕಾರಿ ಅಬ್ದುಲ್ ಖಾದರ್, ಜಿ.ಪಂ. ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

    Officials instructed to be vigilant about children deprived of education

  • ದೇಶದ ಆಸ್ತಿಯಾದ ಮಕ್ಕಳನ್ನು ಸಂರಕ್ಷಿಸುವುದು ಎಲ್ಲರ ಜವಾಬ್ದಾರಿ

    ದೇಶದ ಆಸ್ತಿಯಾದ ಮಕ್ಕಳನ್ನು ಸಂರಕ್ಷಿಸುವುದು ಎಲ್ಲರ ಜವಾಬ್ದಾರಿ

    ಚಿಕ್ಕಮಗಳೂರು: ಮಕ್ಕಳು ಈ ದೇಶದ ನಿಜವಾದ ಆಸ್ತಿ, ಅವರನ್ನು ಸಂರಕ್ಷಿಸುವುದು ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿ, ಮಕ್ಕಳ ರಕ್ಷಣೆಗಾಗಿ ಇರುವ ಯೋಜನೆಗಳು ಹಾಗೂ ಕಾಯ್ದೆಗಳನ್ನು ಅರಿತುಕೊಂಡು ಎಲ್ಲಾ ಇಲಾಖೆಗಳ ಸಂಯೋಜನೆಯೊಂದಿಗೆ ಕಾರ್ಯ ನಿರ್ವಹಿಸಬೇಕು ಎಂದು ಕರ್ನಾಟಕ ರಾಜ್ಯ ಮತ್ತು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಅವರು ತಿಳಿಸಿದರು.

    ಇಂದು ನಗರದ ಜಿಲ್ಲಾ ಪಂಚಾಯಿತಿ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಕಂದಾಯ, ಕಾರ್ಮಿಕ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳ ಇಲಾಖೆಗಳು ಒಂದು ತಂಡದ ರೀತಿ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಫೋಕ್ಸೋ ಕಾಯ್ದೆ, ಬಾಲ್ಯ ವಿವಾಹ ನಿ?ಧ ಕಾಯ್ದೆ, ಭ್ರೂಣ ಹತ್ಯೆ ನಿ?ಧ ಕಾಯ್ದೆ, ಮಕ್ಕಳ ಮಾರಾಟ ನಿ?ಧ ಕಾಯ್ದೆ -ಈ ಕಾಯ್ದೆಗಳನ್ನು ಮಕ್ಕಳ ಸಂರಕ್ಷಣೆಗಾಗಿ ಸರ್ಕಾರ ಕಾನೂನು ಜಾರಿಗೆ ತಂದಿದೆ. ಅಭಿವೃದ್ಧಿ ಆಯೋಗದ ನೇತೃತ್ವದಲ್ಲಿ ಬಾಲ್ಯ ವಿವಾಹ ತಡೆ ಕಾಯ್ದೆ ರಾಜ್ಯ ಮಟ್ಟದಲ್ಲಿ ಮಾತ್ರ ಇದೆ. ಜಿಲ್ಲಾ, ತಾಲ್ಲೂಕು, ಗ್ರಾಮ ಪಂಚಾಯಿತಿ ಹಾಗೂ ಗ್ರಾಮ ಮಟ್ಟದಲ್ಲಿ ಬಾಲ್ಯ ವಿವಾಹ ತಡೆಗಟ್ಟುವ ಸಮಿತಿಗಳು ಆಸ್ತಿತ್ವದಲ್ಲಿವೆ. ತಾಲ್ಲೂಕು ಮಟ್ಟದ ಸಮಿತಿ ಸಭೆಗಳು ೩ ತಿಂಗಳಿಗೊಮ್ಮೆ ತಹಶೀಲ್ದಾರ್ ನೇತೃತ್ವದಲ್ಲಿ ಸಭೆಯನ್ನು ಕಡ್ಡಾಯವಾಗಿ ನಡೆಸಬೇಕು ಎಂದು ಹೇಳಿದರು.

    ಅಭಿವೃದ್ಧಿ ಯೋಜನಾಧಿಕಾರಿ ಮತ್ತು ಇತರ ಇಲಾಖೆಗಳ ಅಧಿಕಾರಿಗಳು ಸೇರಿ ಸಭೆಯನ್ನು ನಡೆಸಿ, ತಮ್ಮ ಕಾರ್ಯ ವ್ಯಾಪ್ತಿಯ ಸ್ಥಿತಿಗತಿಗಳನ್ನು ಅರಿತುಕೊಂಡು ಬಾಲ್ಯ ವಿವಾಹ ಪ್ರಯತ್ನಗಳನ್ನು ಪರಿಣಾಮಕಾರಿಯಾಗಿ ತಡೆಯಬೇಕು. ಒಂದು ವೇಳೆ ಬಾಲ್ಯವಿವಾಹ ನಡೆದಿದ್ದರೆ ಅದಕ್ಕೆ ಪ್ರೋತ್ಸಾಹಿಸಿದ ಪೋ?ಕರು, ಸಂಬಂಧಿಕರು, ಕಲ್ಯಾಣ ಮಂಟಪದ ಮಾಲೀಕರು, ಪುರೋಹಿತರನ್ನು ಕಾನೂನು ಕ್ರಮಕ್ಕೆ ಒಳಪಡಿಸಬೇಕು ಹಾಗೂ ಅಂತಹ ಮಕ್ಕಳ ಪುನರ್ ವಸತಿಗೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

    ಆಯೋಗದ ಸದಸ್ಯ ಶಶಿಧರ್ ಕೊಸಂಬೆ ಮಾತನಾಡಿ ಮೆಸ್ಕಾಂ ಅಧಿಕಾರಿಗಳಿಗೆ ಇತ್ತೀಚಿನ ದಿನಗಳಲ್ಲಿ ದಿನದಿಂದ ದಿನಕ್ಕೆ ಶಾಲೆ, ಅಂಗನವಾಡಿ, ವಸತಿ ನಿಲಯಗಳ ಮೇಲಿನ ವಿದ್ಯುತ್ ತಂತಿಗಳಿಂದಾಗುವ ಅಪಾಯ ತಪ್ಪಿಸುವಂತೆ ಸೂಚಿಸಿದರು.

    ಕೃಷಿ ಹೊಂಡ, ಕೆರೆ, ಕಟ್ಟೆ, ಬಾವಿಗಳಲ್ಲಿ ಮಕ್ಕಳು ಬಿದ್ದು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಇಂತಹ ಘಟನೆಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಆಯೋಗದ ಇನ್ನೋರ್ವ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ, ಸರ್ಕಾರಿ ಆಸ್ಪತ್ರೆಗಳಲ್ಲಿರುವ ಶಿಶು ಆರೈಕೆ ಗೃಹಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗಳನ್ನು ಅವಲಂಬಿಸದೆ ಸರ್ಕಾರಿ ಆಸ್ಪತ್ರೆಯಲ್ಲಿರುವ ವ್ಯವಸ್ಥೆಯನ್ನೇ ಬಳಸಿಕೊಳ್ಳವಂತೆ ಸೂಚಿಸಿದರು.

    ಮಹಿಳಾ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿಗಾಗಿ ಬಯೋಮೆಟ್ರಿಕ್‌ಗಳನ್ನು ಕಡ್ಡಾಯವಾಗಿ ಆಳವಡಿಸುವಂತೆ ಹಾಗೂ ಪೌಷ್ಟಿಕಾಂಶ, ಶುಚಿ-ರುಚಿಯಾದ ಆಹಾರವನ್ನು ನೀಡುವುದರ ಜೊತೆಗೆ ಸ್ನಾನಗೃಹಗಳಲ್ಲಿ ಬಿಸಿ ನೀರಿನ ವ್ಯವಸ್ಥೆ ಸಮರ್ಪಕವಾಗಿ ಕಲ್ಪಿಸಿ ಚರ್ಮ ರೋಗ ಬಾರದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

    ಸಭೆಯಲ್ಲಿ ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ, ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯರಾದ ಮಂಜು, ವೆಂಕಟೇಶ್, ಅಪರ್ಣಾ ಎಮ್.ಕೊಳ್ಳಾ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

    It is everyone’s responsibility to protect the country’s children its assets.

  • ಜಿಲ್ಲಾಸ್ಪತ್ರೆಯಲ್ಲಿ ಬ್ರೆಸ್ಟ್ ಕ್ಯಾನ್ಸರ್ ಪತ್ತೆಗೆ ಮ್ಯಾಮೋಗ್ರಾಫಿ ಮೆಷಿನ್ ಅಳವಡಿಕೆ

    ಜಿಲ್ಲಾಸ್ಪತ್ರೆಯಲ್ಲಿ ಬ್ರೆಸ್ಟ್ ಕ್ಯಾನ್ಸರ್ ಪತ್ತೆಗೆ ಮ್ಯಾಮೋಗ್ರಾಫಿ ಮೆಷಿನ್ ಅಳವಡಿಕೆ

    ಚಿಕ್ಕಮಗಳೂರು:  ಇಲ್ಲಿನ ಮಲ್ಲೇಗೌಡ ಸಾರ್ವಜನಿಕ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಮಹಿಳೆಯರ ಬ್ರೆಸ್ಟ್ ಕ್ಯಾನ್ಸರ್ ಪತ್ತೆಗೆ ಅನುಕೂಲವಾಗುವಂತೆ ಸುಮಾರು ೭೫ ಲಕ್ಷ ರೂ ವೆಚ್ಚದಲ್ಲಿ ಮ್ಯಾಮೋಗ್ರಾಫಿ ಸ್ಕ್ರೀನಿಂಗ್ ಮೆಷಿನ್ ಅಳವಡಿಸಲಾಗಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು.

    ಅವರು ಇಂದು ಜಿಲ್ಲಾಸ್ಪತ್ರೆಯಲ್ಲಿ ಮ್ಯಾಮೋಗ್ರಾಫಿ ಮೆಷಿನ್ ಪರಿಶೀಲಿಸಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರಾಜ್ಯದಲ್ಲಿ ಮಹಿಳೆಯರ ಬ್ರೆಸ್ಟ್ ಕ್ಯಾನ್ಸರ್ ಸ್ಕ್ರೀನಿಂಗ್ ಮೂಲಕ ಪತ್ತೆಗೆ ಹಚ್ಚಲು ಎಲ್ಲಾ ಜಿಲ್ಲಾ ಕೇಂದ್ರಗಳ ಆಸ್ಪತ್ರೆಗಳಿಗೆ ಈ ಮೆಷಿನ್ ಅಳವಡಿಸಲು ಸೂಚಿಸಿದ್ದಾರೆ ಎಂದರು.

    ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಮೆಷಿನ್ ಇಂದಿನಿಂದಲೇ ಕಾರ್ಯಾರಂಭ ಮಾಡಿದ್ದು, ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಸರ್ಕಾರ ಹಲವಾರು ಜನಪರ ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದು ಹೇಳಿದರು.

    ಜಿಲ್ಲೆಯಲ್ಲಿ ಬ್ರೆಸ್ಟ್ ಕ್ಯಾನ್ಸರ್ ಸಂಬಂಧಿತ ಮಹಿಳೆಯರು ಪಕ್ಕದ ಜಿಲ್ಲೆಗಳಾದ ಹಾಸನ, ಶಿವಮೊಗ್ಗಕ್ಕೆ ಹೋಗಬೇಕಾಗಿದ್ದು, ಇಂದು ಸರ್ಕಾರಿ ಆಸ್ಪತ್ರೆಯಲ್ಲಿ ಮ್ಯಾಮೋಗ್ರಾಫಿ ಸ್ಕ್ರೀನಿಂಗ್ ಮೆಷಿನ್ ಅಳವಡಿಸಿರುವುದರಿಂದ ಇದರ ಸದುಪಯೋಗವನ್ನು ಪಡೆದುಕೊಂಡು ಇಲ್ಲೇ ಚಿಕಿತ್ಸೆ ಲಭ್ಯವಾಗಲಿದೆ ಎಂದು ವಿವರಿಸಿದರು.

    ಸಾರ್ವಜನಿಕರ ಅನುಕೂಲಕ್ಕಾಗಿ ಬ್ರೆಸ್ಟ್ ಕ್ಯಾನ್ಸರ್ ಪತ್ತೆಗೆ ಇಬ್ಬರು ರೇಡಿಯೋಲಾಜಿಸ್ಟ್ ನೇಮಕ ಮಾಡಲಾಗಿದೆ ಎಂದ ಅವರು, ಸಿಎಸ್‌ಆರ್ ಅನುದಾನದಲ್ಲಿ ಸುಮಾರು ೨೬ ಲಕ್ಷ ರೂ ವೆಚ್ಚದಲ್ಲಿ ಪಾವತಿಸಿ ಉಪಯೋಗಿಸುವ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಸುಲಭ ಶೌಚಾಲಯ ಮತ್ತು ಸ್ನಾನಗೃಹ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

    ಆಸ್ಪತ್ರೆಗೆ ಬರುವ ರೋಗಿಗಳ ಸಂಬಂಧಪಟ್ಟವರಿಗೆ ಇದರ ಪ್ರಯೋಜನ ಲಭ್ಯವಾಗಬೇಕೆಂಬ ಉದ್ದೇಶದೊಂದಿಗೆ ಸುಲಭ ಶೌಚಾಲಯ, ಸ್ನಾನಗೃಹ ನಿರ್ಮಾಣ ಮಾಡಲು ನಿರ್ಧರಿಸಿದ್ದು, ಇನ್ನೆರಡು ತಿಂಗಳಲ್ಲಿ ಸಾರ್ವಜನಿಕ ಲೋಕಾರ್ಪಣೆಯಾಗಲಿದೆ ಎಂದು ತಿಳಿಸಿದರು.

    ಸಿರವಾಸೆ ಮತ್ತು ಕಳಸಾಪುರ ಈ ಎರಡು ಆಸ್ಪತ್ರೆಗಳಲ್ಲಿ ಮಾತ್ರ ವೈದ್ಯರ ಕೊರತೆ ಇದ್ದು, ಈಗಾಗಲೇ ನೇಮಕ ಮಾಡಿದ್ದೇವೆ, ಉಳಿದಂತೆ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಆಸ್ಪತ್ರೆಗಳಲ್ಲಿ ವೈದ್ಯರಿದ್ದಾರೆ ಎಂದು ಸ್ಪಷ್ಟಪಡಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಸರ್ಜನ್ ಡಾ. ಮೋಹನ್ ಕುಮಾರ್ ಉಪಸ್ಥಿತರಿದ್ದರು.

    Mammography machine installed at district hospital to detect breast cancer

  • ಕ್ಷೇತ್ರದಲ್ಲಿ 596 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿ

    ಕ್ಷೇತ್ರದಲ್ಲಿ 596 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿ

    ಚಿಕ್ಕಮಗಳೂರು: ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ೨ ವರ್ಷದ ಅವಧಿಯಲ್ಲಿ ಒಟ್ಟು ೫೨೯ ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಅದರಲ್ಲಿ ಬಹಳಷ್ಟು ಕಾಮಗಾರಿಗಳು ಮುಕ್ತಾಯದ ಹಂತದಲ್ಲಿವೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ತಿಳಿಸಿದರು.

    ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಧಿಕಾರಕ್ಕೆ ಬಂದು ೨ ವರ್ಷದಲ್ಲಿ ನುಡಿದಂತೆ ೫ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಪೂರೈಸಿದ್ದೇವೆ. ೬ನೇ ಗ್ಯಾರಂಟಿಯಾಗಿ ಭೂಗ್ಯಾರಂಟಿ ಮೂಲಕ ಹೊಸ ಕಂದಾಯ ಗ್ರಾಮಗಳಿಗೆ ಹಕ್ಕುಪತ್ರ ನೀಡಲಿದ್ದೇವೆ. ಬಡವರ, ಶೋಷಿತರ ಏಳಿಗೆಗಾಗಿ ಮುಖ್ಯಮಂತ್ರಿ ಸಿದ್ರಾಮಯ್ಯ ಅವರು ಈ ಯೋಜನೆ ಅನುಷ್ಠಾನ ಮಾಡುತ್ತಿದ್ದಾರೆ ಎಂದು ಹೇಳಿದರು.

    ಭದ್ರಾ ಉಪಕಣಿವೆ ಯೋಜನೆಯಲ್ಲಿ ಚಿಕ್ಕಮಗಳೂರು ವಿಭಾಗಕ್ಕೆ ದೊರೆಯುವ ಹಣವನ್ನು ಹೊರತುಪಡಿಸಿ ೫೨೯ ಕೋಟಿ ರೂ ಅನುದಾನ ಸರಕಾರ ಒದಗಿಸಿದೆ. ನಗರದ ಜಿಲ್ಲಾಸ್ಪತ್ರೆಗೆ ೭೫ ಲಕ್ಷ ರೂ. ವೆಚ್ಚದ ಮ್ಯಾಮೋಗ್ರಫಿ ಯಂತ್ರವನ್ನು ಅಳವಡಿಸಿದ್ದು, ಅದು ಬ್ರಸ್ಟ್ ಕ್ಯಾನ್ಸರ್ ಪತ್ತೆಗೆ ಸಹಕಾರಿಯಾಗಲಿದೆ. ಆಸ್ಪತ್ರೆ ಆವರಣದಲ್ಲಿ ೨೫ ಲಕ್ಷ ರೂ.ವೆಚ್ಚದಲ್ಲಿ ಸುಲಭ ಶೌಚಾಲಯ, ಸ್ನಾನಗ್ರಹ ನಿರ್ಮಿಸಲಾಗುವುದು. ಬಸವತತ್ವ ಪೀಠದ ಮೂಲಸೌಕರ್ಯಗಳ ಅಭಿವೃದ್ಧಿಗೆ ೫೦ ಲಕ್ಷ ರೂ, ಜಿಲ್ಲಾಧಿಕಾರಿಗಳ ಕಚೇರಿ ಪ್ರಜಾಸೌಧಕ್ಕೆ ೫೬ ಕೋಟಿ ರೂ. ಮಂಜೂರಾತಿ ದೊರೆತಿದೆ ಎಂದು ಹೇಳಿದರು.

    ಕ್ಷೇತ್ರದಲ್ಲಿ ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ ೬.೫೦ ಕೋಟಿ ರೂ., ಜಿಲ್ಲಾ ಮುಖ್ಯರಸ್ತೆ ಮತ್ತು ಇತರೆ ರಸ್ತೆಗಳ ಅಭಿವೃದ್ಧಿಗೆ ೪೧.೫ ಕೋಟಿ ರೂ, ಕಳೆದ ವರ್ಷ ನೆರೆ ಹಾವಳಿಯಿಂದ ಹಾನಿಯಾದ ರಸ್ತೆ ಸೇತುವೆ ಅಭಿವೃದ್ಧಿಗೆ ೨೯೦ ಲಕ್ಷ ರೂ, ಜಿಲ್ಲಾ ಗ್ರಾಹಕರ ಆಯೋಗದ ಕಟ್ಟಡದ ನವೀಕರಣ ೩೬.೨೬ ಲಕ್ಷ ರೂ. ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.

    ನಗರದ ಗ್ರಾಮೀಣ ಬಸ್ ನಿಲ್ದಾಣದ ಉನ್ನತೀಕರಣಕ್ಕೆ ೧೯.೮೭ ಕೋಟಿ ರೂ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ರಸ್ತೆ, ಸೇತುವೆ, ಚರಂಡಿ ಕಾಮಗಾರಿಗೆ ೧೦ ಕೋಟಿ ರೂ ಬಿಡುಗಡೆ ಮಾಡಲಾಗಿದೆ. ಎಸ್ಸಿಎಸ್ಟಿ ಕಾರ್ಯಕ್ರಮದಡಿ ೧.೫೦ ಕೋಟಿ, ಗ್ರಾಮೀಣ ರಸ್ತೆ ನಿರ್ವಹಣೆಗೆ ೮೮ ಲಕ್ಷ ರೂ, ಜಲಸಂಪನ್ಮೂಲ ಇಲಾಖೆಗೆ ವಿವಿಧ ಜಲಮೂಲಗಳ ಅಭಿವೃದ್ಧಿಗೆ ೨೫ ಕೋಟಿರೂ ಅನುಮೋದನೆ ನೀಡಲಾಗಿದೆ. ಭದ್ರಾ ಉಪಕಣಿವೆ ಯೋಜನೆ ಅಡಿ ಕೆರೆ ತುಂಬಿಸುವ ಕಾಮಗಾರಿಗೆ ೪೦೭.೫೦ ಕೋಟಿ ರೂ ಮೊತ್ತಕ್ಕೆ ಟೆಂಡರ್ ಕರೆಯಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.

    ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣ ಅಭಿವೃದ್ಧಿಗೆ ಈ ಹಿಂದೆ ೩೩೭.೨೨ ಲಕ್ಷ ಹಣ ಬಿಡುಗಡೆಯಾಗಿತ್ತು ಬಾಕಿ ೧.೯೩ ಕೋಟಿ ಹಣದ ಜತೆಗೆ ಕಾಮಗಾರಿಯನ್ನು ಪೂರ್ಣಗೊಳಿಸಲು ಅಗತ್ಯವಿರುವ ೫ ಕೋಟಿರೂಗಳನ್ನು ಸಿಎಸ್‌ಆರ್ ನಿಧಿಯಡಿ ನೀಡಲು ಜಿಲ್ಲಾ ಸಚಿವರು ಒಪ್ಪಿದ್ದು, ಶೀಘ್ರದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಕಲ್ಯಾಣ ನಗರದ ಒಳಾಂಗಣ ಕ್ರೀಡಾಂಗಣದ ಬಾಸ್ಕೆಟ್‌ಬಾಲ್ ಅಂಕಣಕ್ಕೆ ಮರದ ನೆಲಹಾಸು ಅಳವಡಿಸುವ ಕಾಮಗಾರಿಗೆ ೭೫ ಲಕ್ಷ ರೂ ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು.

    ನಗರದ ವಿವಿಧ ರಸ್ತೆ ಡಾಂಬರೀಕರಣಕ್ಕೆ ೧೦ ಕೋಟಿ ರೂ ವಿಶೇಷ ಅನುದಾನ ಬಂದಿದೆ. ಪ್ರಗತಿ ಕಾಲೋನಿ ಯೋಜನೆ ಅಡಿ ೨೫೦ ಲಕ್ಷ ರೂ, ಮಲ್ಲೇನಹಳ್ಳಿ ಮೊರಾರ್ಜಿ ಶಾಲಾ ಕಟ್ಟಡಕ್ಕೆ ೨೨ ಕೋಟಿ ರೂ., ಸೇರಿದಂತೆ ಕ್ಷೇತ್ರದಲ್ಲಿ ಒಟ್ಟು ೫೨೯ ಕೋಟಿ ರೂ.ಗಳ ಕಾಮಗಾರಿಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಿದರು.

    ಕ್ಷೇತ್ರದ ೨೧೬ ಗ್ರಾಮಗಳ ಫಲಾನುಭವಿಗಳಿಗೆ ೯೪ಡಿ ಅಡಿ ಕಂದಾಯ ಗ್ರಾಮ ಹಾಗೂ ಉಪಗ್ರಾಮಗಳ ಘೋಷಣೆಯೊಂದಿಗೆ ಹಕ್ಕುಪತ್ರ ನೀಡಲಾಗುವುದು ಎಂದರು. ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ ಮಾತನಾಡಿ, ಚಿಕ್ಕಮಗಳೂರು ಕ್ಷೇತ್ರಕ್ಕೆ ಪಂಚಗ್ಯಾರಂಟಿ ಯೋಜನೆಗಳಿಗಾಗಿ ಈವರೆಗೆ ೩೨೭ ಕೋಟಿ ರೂ ವಿನಿಯೋಗಿಸಲಾಗಿದೆ ಎಂದು ಹೇಳಿದರು.

    ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ. ಮಂಜೇಗೌಡ, ಸಖರಾಯಪಟ್ಟಣ ಬ್ಲಾಕ್ ಕಾಂಗ್ರೆಸ್ ಆಧ್ಯಕ್ಷ ಮಹಡಿಮನೆ ಸತೀಶ್, ಸಿಡಿಎ ಅಧ್ಯಕ್ಷ ನಯಾಜ್ ಅಹಮದ್, ಮುಖಂಡರಾದ ತನೋಜ್, ಮಲ್ಲೇಶಸ್ವಾಮಿ, ಪ್ರವೀಣ್, ಸಾದಬ್ ಆಲಂ ಖಾನ್, ರೂಬಿನ್‌ಮೊಸೆಸ್ ಇದ್ದರು.

    Various development works worth Rs. 596 crore have been undertaken.

  • ಜಿಲ್ಲೆಯಲ್ಲಿ ರೆಡ್ ಅಲರ್ಟ್ : ಕ್ರಮಕ್ಕೆ ಸಾರ್ವಜನಿಕರಿಗೆ ಸೂಚನೆ

    ಜಿಲ್ಲೆಯಲ್ಲಿ ರೆಡ್ ಅಲರ್ಟ್ : ಕ್ರಮಕ್ಕೆ ಸಾರ್ವಜನಿಕರಿಗೆ ಸೂಚನೆ

    ಚಿಕ್ಕಮಗಳೂರು: ಪೂರ್ವ ಮುಂಗಾರು ಮಳೆ ಪ್ರಾರಂಭವಾಗಿದ್ದು, ಮುಂದಿನ ೨ ದಿನಗಳು ಹೆಚ್ಚಿನ ಮಳೆಯಾಗುವ ಸಾದ್ಯತೆ ಇರುವುದರಿಂದ ಜಿಲ್ಲೆಯಲ್ಲಿ ಮೇ ೨೧ ರಂದು ರೆಡ್ ಅಲರ್ಟ್ ಹಾಗೂ ಮೇ ೨೨ ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮವಹಿಸಬೇಕಿದ್ದು, ಸಾರ್ವಜನಿಕರಿಗೆ ಮುಂದಿನ ಎರಡು ದಿನಗಳು ಅಥವಾ ಮಳೆ ಕಡಿಮೆಯಾಗುವವರೆಗೆ ಈ ಕೆಳಕಂಡ ಸೂಚನೆಗಳನ್ನು ಪಾಲಿಸುವಂತೆ ಕೋರಲಾಗಿದೆ.

    ಸಾರ್ವಜನಿಕರು ನದಿಗಳಿಗೆ ಅಥವಾ ತಗ್ಗು ಪ್ರದೇಶಗಳಿಗೆ ತೆರಳದಂತೆ ಕಟ್ಟೆಚ್ಚರ ವಹಿಸುವುದು. ಸಾರ್ವಜನಿಕರು ಜಾನುವಾರುಗಳನ್ನು ಶುಚಿಗೊಳಿಸಲು ಅಥವಾ ಬಟ್ಟೆಗಳನ್ನು ತೊಳೆಯಲು ಹಳ್ಳ. ಕೆರೆ ಕಟ್ಟೆಗಳಿಗೆ ತೆರಳಬಾರದು. ಹಾಗೂ ಮಳೆಯಿಂದಾಗಿ ಧರೆ, ಗುಡ್ಡ ಕುಸಿತ ಉಂಟಾಗುವ ಸಂಭವವಿರುವುದರಿಂದ ಸಾರ್ವಜನಿಕರು ಎಚ್ಚರ ವಹಿಸುವುದು

    ಈ ಸೂಚನೆಗಳನ್ನು ಪಾಲಿಸುವ ಮೂಲಕ ಸಾರ್ವಜನಿಕರು ಯಾವುದೇ ಅಪಾಯಕಾರಿ ಘಟನೆಗಳಿಗೆ ಅವಕಾಶ ಕೊಡದೆ ಜಿಲ್ಲಾಡಳಿತಕ್ಕೆ ಸಹಕಾರ ನೀಡಲು ಕೋರಿದೆ ಹೆಚ್ಚಿನ ಮಾಹಿತಿಗಾಗಿ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ-೦೮೨೬೨-೨೩೮೯೫೦ ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಜಿಲ್ಲಾಧಿಕಾರಿ ಹಾಗೂ ಅಧ್ಯಕ್ಷರು ತಿಳಿಸಿದ್ದಾರೆ.

    Red alert in the district: Public advised to take action