Category: ಚಿಕ್ಕಮಗಳೂರು ನಗರ

  • ವಿವೇಕಾನಂದ ವಿದ್ಯಾಸಂಸ್ಥೆಯ ಸುವರ್ಣಮಹೋತ್ಸವ

    ವಿವೇಕಾನಂದ ವಿದ್ಯಾಸಂಸ್ಥೆಯ ಸುವರ್ಣಮಹೋತ್ಸವ

    ಚಿಕ್ಕಮಗಳೂರು : ಬಡವರ ಮನಸ್ಸು ಖುಷಿಯಾದರೆ ನೂರು ಚಂಡಿಕಯಾಗ ಮಾಡಿದ ಫಲ ಸಿಗುತ್ತದೆ ಎಂದು ಗೌರಿಗದ್ದೆ ಶ್ರೀಕ್ಷೇತ್ರದ ಅವಧೂತ ಶ್ರೀವಿನಯ ಗುರೂಜೀ ಅಭಿಪ್ರಾಯಿಸಿದರು.

    ಶಿರವಾಸೆ ವಿವೇಕಾನಂದ ವಿದ್ಯಾಸಂಸ್ಥೆ ೫೦ವರ್ಷ ಪೂರ್ಣಗೊಳಿಸಿದ ಹಿನ್ನಲೆಯಲ್ಲಿ ಆಯೋಜಿಸಿರುವ ಎರಡುದಿನಗಳ ಸುವರ್ಣಮಹೋತ್ಸವ ಸಮಾರಂಭದಲ್ಲಿ ಇಂದು ಗುರುಶಿಷ್ಯರ ಸಮಾಗಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

    ತಿರುಗಾಟ, ವೇಷಭೂಷಣ, ಇಂಟರ್‌ನೆಟ್, ಮೊಬೈಲ್ ಸೇರಿದಂತೆ ನಾವು ಅನಗತ್ಯವಾಗಿ ನಿತ್ಯ ಮಾಡುವ ವೆಚ್ಚವನ್ನು ನಿಯಂತ್ರಿಸಿ ಅದೇ ಹಣವನ್ನು ಶಾಲೆ, ದೇವಸ್ಥಾನ, ಬಡವರ ಮನೆ ನಿರ್ಮಾಣಕ್ಕೆ ನೀಡಿದರೆ ಹೆಚ್ಚು ಉಪಯೋಗವಾಗುತ್ತದೆ. ಇವೆಲ್ಲವೂ ಚೆಂದ ಮಾಡಬಹುದು. ಇದೇ ನಿಜವಾದ ದೇವರಸೇವೆ. ಸನಾತನ ಧರ್ಮತತ್ತ್ವವು ಪರೋಪಕಾರವನ್ನೆ ಪ್ರತಿಪಾದಿಸುತ್ತದೆ ಎಂದರು.

    ನಮ್ಮ ದೇಹ ಬೆಳೆದರೂ ಅದೇ ಪ್ರಮಾಣದಲ್ಲಿ ಬುದ್ಧಿ ಬೆಳೆದಿಲ್ಲ. ದೇಶದೆಲ್ಲೆಡೆ ಬಹುತೇಕ ಎಲ್ಲ ಮಹಾಪುರುಷರ ಹೆಸರಿನಲ್ಲಿ ಬಾರ್‌ಗಳಿವೆ. ಆದರೆ ಇಬ್ಬರ ಹೆಸರಿನಲ್ಲಿ ಮಾತ್ರ ಬಾರ್ ತೆರೆದಿಲ್ಲ. ಅವೆಂದರೆ ಒಂದು ಮಹಾತ್ಮಾಗಾಂಧಿ, ಇನ್ನೊಂದು ಸ್ವಾಮಿವಿವೇಕಾನಂದ. ಏಕೆಂದರೆ ಈ ಹೆಸರುಗಳಿಗೆ ಪಾವಿತ್ರ್ಯ ಇದೆ ಎಂದರು.

    ಅಹಂಕಾರ ಮತ್ತು ಅಜ್ಞಾನ ಮನುಷ್ಯರಲ್ಲಿ ಒಟ್ಟಿಗೆ ಇರುತ್ತದೆ. ಇವನ್ನು ಬದಿಗಿರಿಸಿ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಆಗ ಮನೆ, ಹಳ್ಳಿ, ದೇಶಕ್ಕೆ ಕೊಡುಗೆ ಕೊಡಲು ಸಾಧ್ಯ. ತಂದೆ-ತಾಯಿಯರು ವಿಶ್ವವಿದ್ಯಾನಿಲಯವಿದ್ದಂತೆ. ಇವರಿಂದ ಸಂಸ್ಕಾರ ಕಲಿತು ಬೆಳೆದರೆ ಬೆಳಕಾಗಬಹುದು. ತಂದೆ ಕೆಟ್ಟರೆ ಮನೆ ಹಾಳು. ತಾಯಿ ಕೆಟ್ಟರೆ ಕುಲ ಹಾಳಾಗುತ್ತದೆ ಎಂಬ ಮಾತಿದೆ. ಹಬ್ಬ-ಹರಿದಿನಗಳು ಸುತ್ತಲಿನ ದ್ವೇಷ ಮರೆಯಲು ಹಿಂದಿನವರು ಮಾಡಿಕೊಟ್ಟ ಆಚರಣೆ. ನನ್ನೂರು, ಶಾಲೆ, ದೇವಸ್ಥಾನ, ಸುಗ್ಗಿಹಬ್ಬ, ಮಾರಿಹರಕೆ… ಇವೆಲ್ಲವೂ ಜನರನ್ನು ಬೆಸೆಯುವ ಸಾಧನಗಳೆಂಬುದನ್ನು ಅರಿಯಬೇಕು. ಶಾಲೆಯ ಸುವರ್ಣಮಹೋತ್ಸವ ಊರಹಬ್ಬವಾಗಿರುವುದು ಸಂತಸದ ಸಂಗತಿ ಎಂದರು.

    ಹಳ್ಳಿಗಳು ಸಂಸ್ಕೃತಿಯನ್ನು ಕಳೆದುಕೊಳ್ಳಬಾರದು. ಇಲ್ಲಿಯ ಯುವಕ ಯುವತಿಯರು ಪ್ರಕೃತಿ-ಸಂಸ್ಕೃತಿ ಎರಡನ್ನೂ ಕಾಪಾಡಲು ಸಂಕಲ್ಪಿಸಬೇಕು. ಬ್ಯುಸಿನೆಸ್ ಮೀಟ್‌ನಂತಹ ಯೋಜನೆಗಳು ಇಲ್ಲಿ ನಡೆಸಿದರೆ ಹಳ್ಳಿಯ ಪ್ರತಿಭಾನ್ವಿತರಿಗೆ ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ. ಈ ಸವಿನೆನಪಿಗಾಗಿ ಸಭಾಭವನ ನಿರ್ಮಿಸುವುದಾದರೆ ಲಕ್ಷರೂ. ತಮ್ಮ ಟ್ರಸ್ಟ್‌ನಿಂದ ನೀಡುವುದಾಗಿ ನುಡಿದ ವಿನಯಗುರೂಜೀ, ಶಿಕ್ಷಣಸಂಸ್ಥೆಯ ರೂವಾರಿ ಮುಳ್ಳೇಗೌಡರದು ಆದರ್ಶಬದುಕು ಎಂದರು.

    ನನ್ನಲ್ಲಿ ಬೆಳಕಿದೆ, ನಿಮ್ಮೆಲ್ಲರಲ್ಲೂ ಬೆಳಕಿದೆ ಇದನ್ನು ಅರ್ಥಮಾಡಿಕೊಳ್ಳಬೇಕು. ಲಕ್ಷ್ಯ ಇಟ್ಟು ಬದುಕಿದರೆ ವಿವೇಕಾನಂದರಾಗುತ್ತೇವೆ ಎಂದ ವಿನಯಗುರೂಜೀ, ಇಂದು ಅವರ ಹುಟ್ಟಿದ ದಿನ. ಅವರ ಹೆಸರಿನಲ್ಲೆ ಕಟ್ಟಿದ ವಿದ್ಯಾಸಂಸ್ಥೆ ಸುವರ್ಣಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಯೋಗಾಯೋಗ ಎಂದರು.

    ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹಿರಿಯಶಿಕ್ಷಕರುಗಳನ್ನು ಸನ್ಮಾನಿಸಿ ಮಾತನಾಡಿ ದಾನಗಳಲ್ಲೆ ವಿದ್ಯಾದಾನ ಶ್ರೇಷ್ಠ. ವಿದ್ಯೆಯಿಂದ ನಮ್ಮ ಬದುಕಿನ ಸ್ಥರವನ್ನು ಎತ್ತರಿಸಿಕೊಳ್ಳಬಹುದು. ಗುಡ್ಡಗಾಡು ಗ್ರಾಮೀಣ ಪ್ರದೇಶದ ನೂರಾರು ಹುಡುಗರು ಉತ್ತಮವಾಗಿ ಬದುಕು ಕಟ್ಟಿಕೊಳ್ಳಲು ಈ ಶಾಲೆ ಸಹಕಾರಿಯಾಗಿದೆ. ಮುಳ್ಳೇಗೌಡರು ಹಾಗೂ ಅವರ ಸ್ನೇಹಿತರ ಮುಂದಾಲೋಚನೆಯಿಂದ ಶಿಕ್ಷಣಸಂಸ್ಥೆ ನಿರ್ಮಾಣಗೊಂಡು ಸುವರ್ಣಮಹೋತ್ಸವ ಸಂಭ್ರಮಿಸುತ್ತಿರುವುದು ಹರ್ಷದಾಯಕ. ಇದರ ಸವಿನೆನಪಿಗೆ ಯಾವುದಾರೂ ಶಾಶ್ವತಕಾರ್‍ಯ ಆಗಬೇಕು. ತಾವೂ ಎಲ್ಲರೀತಿಯಿಂದಲೂ ಸಹಕಾರ ನೀಡುವುದಾಗಿ ರವಿ ನುಡಿದರು.

    ಜಗತ್ತು ಕಂಡ ಶ್ರೇಷ್ಠ ಜ್ಞಾನಿ ವಿವೇಕಾನಂದರು, ಬದುಕಿದ್ದು ಕಡಿಮೆ. ಆದರೆ ಸಾಧಿಸಿದ್ದು ಅದ್ವಿತೀಯ. ಚಿಕಾಗೋ ನಗರದ ವಿಶ್ವಧರ್ಮ ಸಮ್ಮೇಳನದಲ್ಲಿ ಕೇವಲ ನಾಲ್ಕೂವರೆನಿಮಿಷದ ಮಾತು ಇಡೀ ಜಗತ್ತನ್ನು ಅವರತ್ತ ಸೆಳೆಯಿತು. ಅವರಿಂದ ಪ್ರೇರಣೆ ಪಡೆದ ಸಾವಿರಾರು-ಲಕ್ಷಾಂತರ ಜನ ಬಾಳು ಹಸನು ಮಾಡಿಕೊಂಡರು. ಜೆ.ಆರ್.ಡಿ.ಟಾಟಾ ೧೯೦೫ರಲ್ಲಿ ಇಂಡಿಯನ್ ಇನ್ಸಿಟ್ಯೂಟ್ ಸೈನ್ಸ್ ಪ್ರಾರಂಭಿಸಿದ್ದು ವಿವೇಕಾನಂದರ ಸಲಹೆಯಂತೆ. ಇಲ್ಲೂ ಈ ಶಿಕ್ಷಣಸಂಸ್ಥೆಗೆ ಅವರೇ ಪ್ರೇರಣೆ ಎಂದ ಸಿ.ಟಿ.ರವಿ, ಕೊಟ್ಟಿದ್ದು ಎಂದೂ ಕೆಡುವುದಿಲ್ಲ ಎಂಬುದನ್ನು ಅರಿಯಬೇಕು. ಪಾಪ-ಪುಣ್ಯದ ವ್ಯತ್ಯಾಸ ಅರ್ಥಮಾಡಿಕೊಂಡು ಬದುಕಬೇಕೆಂದರು.

    ಸಿರಿಕಾಫಿ ರೆಸಾರ್ಟ್ ಮಾಲೀಕರಾದ ಸ.ನಾ.ರಮೇಶ್ ಸಾಧಕರನ್ನು ಗೌರವಿಸಿ ಮಾತನಾಡಿ ಭಾರತದ ಚೈತನ್ಯಶಕ್ತಿ ವಿವೇಕಾನಂದ ಎಂದು ಸ್ವರಚಿತ ಕವನ ವಾಚಿಸಿದರು. ಶಿವಮೊಗ್ಗ ಸೂಡ ಮಾಜಿಅಧ್ಯಕ್ಷ ಜ್ಯೋತಿಪ್ರಕಾಶ್, ವಿಶ್ರಾಂತ ಮುಖ್ಯ ಶಿಕ್ಷಕರುಗಳಾದ ಮಾಯಿಲಪ್ಪ, ರಾಮಪ್ಪ ಮತ್ತು ಎನ್.ಎಂ.ಅನುಸೂಯ ಮುಖ್ಯಅತಿಥಿಗಳಾಗಿ ಮಾತನಾಡಿದರು.

    ಸಾಧಕರುಗಳಾದ ಡಾ.ಎಚ್.ಎನ್.ಅಶೋಕ, ಡಾ.ಮಧುಸೂದನ್, ಬಾಲಮುರುಳಿಕೃಷ್ಣ, ಕೊಳಗಾಮೆ ಕಾಂತರಾಜ್, ಹಡ್ಲುಗದ್ದೆ ಶಿವಕುಮಾರ, ಸಾವಯವಕೃಷಿಕ ಉಮೇಶ್‌ರನ್ನು ಸನ್ಮಾನಿಸಲಾಯಿತು.

    ವಿದ್ಯಾಸಂಸ್ಥೆ ಉಪಾಧ್ಯಕ್ಷ ಎನ್.ಶ್ರೀಕಾಂತಶೆಟ್ಟಿ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ ಹಿರಿಯರಿಂದ ನಿರ್ಮಾಣಗೊಂಡಿರುವ ವಿದ್ಯಾಸಂಸ್ಥೆ ಅವರು ಹಾಕಿಕೊಟ್ಟ ಹಾದಿಯಲ್ಲೆ ಮುನ್ನಡೆಯುತ್ತಿದೆ. ವಿದ್ಯಾರ್ಥಿಗಳು ಆಸಕ್ತಿಯಿಂದ ಕಲಿತು, ಬದುಕುಕಟ್ಟಿಕೊಂಡು ಶಾಲೆಗೆ ನೆರವಾಗುತ್ತಿರುವುದು ಸಂತಸದ ಸಂಗತಿ ಎಂದರು.

    ಶಾಲಾಮುಖ್ಯ ಶಿಕ್ಷಕ ಸಾಬಣ್ಣಮಾದರ್ ಸ್ವಾಗತಿಸಿ, ವಾಸುಪೂಜಾರಿ ಮತ್ತು ರಾಜೇಶ್ ಕಾರ್‍ಯಕ್ರಮ ನಿರೂಪಿಸಿ, ನಿರ್ದೇಶಕ ಬಿ.ನೀ.ವಿಶ್ವನಾಥ್ ವಂದಿಸಿದರು. ಶಾಲೆಯಲ್ಲಿ ಈ ಹಿಂದೆ ಕಾರ್‍ಯನಿರ್ವಹಿಸಿರುವ ರವಿಕುಮಾರ್, ತುಂಗಾಭದ್ರ, ಸುಬ್ಬಲಕ್ಷ್ಮೀ ಸೇರಿದಂತೆ ೨೨ಶಿಕ್ಷಕರು ಹಾಗೂ ಸಿಬ್ಬಂದಿಗಳನ್ನು ಇದೇ ಸಂದರ್ಭದಲ್ಲಿ ಸಂಸ್ಥೆ ಅಧ್ಯಕ್ಷ ಭೋಜೇಗೌಡ, ಕಾರ್‍ಯದರ್ಶಿ ದೇವಣ್ಣಗೌಡ, ನಿರ್ದೇಶಕ ಶಿವಶಂಕರ್, ಕಲಾಪ್ರಸನ್ನಕುಮಾರ್ ಸನ್ಮಾನಿಸಿದರು.

    Golden Jubilee of Vivekananda Educational Institution

  • ಅದ್ದೂರಿಯಾಗಿ ಜರುಗಿದ ಶ್ರೀ ಬನಶಂಕರಿ ಅಮ್ಮನವರ ಜಾತ್ರಾ ಮಹೋತ್ಸವ

    ಅದ್ದೂರಿಯಾಗಿ ಜರುಗಿದ ಶ್ರೀ ಬನಶಂಕರಿ ಅಮ್ಮನವರ ಜಾತ್ರಾ ಮಹೋತ್ಸವ

    ಚಿಕ್ಕಮಗಳೂರು: ನಗರದ ಎಂ.ಜಿ.ರಸ್ತೆಯಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಬನಶಂಕರಿ ಅಮ್ಮನವರ ಬನದ ಹುಣ್ಣಿಮೆಯ ಜಾತ್ರಾಮಹೋತ್ಸವ ಸೋಮವಾರ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

    ದೇವಾಂಗ ಸಂಘ ಮತ್ತು ಬನಶಂಕರಿ ಮಹಿಳಾ ಸಂಘದ ವತಿಯಿಂದ ಆಯೋಜಿಸಿದ್ದ ಜಾತ್ರಾ ಮಹೋತ್ಸವದಲ್ಲಿ ಭಕ್ತರು ಪಾಲ್ಗೊಳ್ಳುವ ಮೂಲಕ ಬನಶಂಕರಿ ದೇವಿಯ ಕೃಪೆಗೆ ಪಾತ್ರರಾದರು.

    ದೇವಾಂಗ ಸಂಘದ ಅಧ್ಯಕ್ಷ ಭಗವತಿಹರೀಶ್ ಮಾತನಾಡಿ ದೇವಾಂಗ ಸಮಾಜದ ಕುಲದೇವತೆ ಬನಶಂಕರಿ ಅಮ್ಮನವರ ೧೦ ನೇ ವರ್ಷದ ಜಾತ್ರೆಯನ್ನು ವಿಜೃಂಭಣೆಯಿಂದ ನಡೆಸಲಾಗುತ್ತಿದ್ದು, ವಿಶೇಷ ಪೂಜೆ, ಹೋಮ, ಮದ್ಯಾಹ್ನ ಅನ್ನ ಸಂತರ್ಪಣೆ ನೆಡೆಸಲಾಗುತ್ತಿದ್ದು, ಸಂಜೆ ೫ ಗಂಟೆಗೆ ರಾಜ ಬೀದಿಗಳಲ್ಲಿ ಬನಶಂಕರಿ ಅಮ್ಮನವರ ಉತ್ಸವ ಮೆರವಣಿಗೆ ಮತ್ತು ೮ ಗಂಟೆಗೆ ಪ್ರಸಾದ ವಿತರಿಸಲಾಗುವುದು,

    ಅನಂತ ಶರ್ಮ ಅವರ ನೇತೃತ್ವದಲ್ಲಿ ಕುಲದೇವತಾ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ ಗಣಪತಿ ಪೂಜೆ, ಬನಶಂಕರಿ ಹೋಮ ಮಂತ್ರಗಳ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು. ಮಧ್ಯಾಹ್ನ ೧ ಗಂಟೆಯ ಪೂರ್ಣಾಹುತಿ ಬಳಿಕ ಪ್ರಸಾದ ವಿನಿಯೋಗ ಮಾಡಲಾಯಿತು ಎಂದು ತಿಳಿಸಿದರು.

    ದೇವಾಂಗ ಸಂಘದ ಗೌರವಾಧ್ಯಕ್ಷ ಶ್ರೀನಿವಾಸ್ ಮಾತನಾಡಿ ದೇವಾಂಗ ಸಂಘವು ಬನದ ಹುಣ್ಣಿಮೆಯ ಬನಶಂಕರಿ ಅಮ್ಮನವರ ಜಾತ್ರಾಮಹೋತ್ಸವಕ್ಕೆ ವಿವಿಧ ಭಾಗಗಳಿಂದ ಅನೇಕ ಭಕ್ತರು ಪ್ರತಿ ವರ್ಷ ಆಗಮಿಸುತ್ತಿದ್ದರು ಲೋಕಕಲ್ಯಾಣಾಥವಾಗಿ ವಿಶೇಷ ಪೂಜೆ ಪುನಸ್ಕಾರಗಳನ್ನು ಸಲ್ಲಿಸಿ ದೇವಿಗೆ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದರು.

    ಬನಶಂಕರಿ ಅಮ್ಮನವರ ೧೦ನೇ ವರ್ಷದ ಬನದ ಹುಣ್ಣಿಮೆ ಕಾರ್ಯಕ್ರಮವನ್ನು ರಾಜ್ಯಾದ್ಯಂತ ನಡೆಸಲಾಗುತ್ತಿದ್ದು, ಬಾದಾಮಿ ಬನಶಂಕರಿ ದೇವಾಲಯದಲ್ಲಿ ಇಂದು ಜಾತ್ರೋತ್ಸವ ನಡೆಯುತ್ತಿದ್ದು, ಇಂದು ಬೆಳಿಗ್ಗೆ ಆಂಜನೇಯ ದೇವಸ್ಥಾನದಲ್ಲಿ ಅಮ್ಮನವರಿಗೆ ಪೂಜೆ ಸಲ್ಲಿಸಿ ಹೋಮ ನಡೆಸಲಾಯಿತು, ಸಂಜೆ ೫ ಗಂಟೆಗೆ ಬನಶಂಕರಿ ಅಮ್ಮನವರ ಉತ್ಸವ ನಡೆಸಲಾಗುತ್ತಿದೆ ಹಾಗೂ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.

    ಬನಶಂಕರಿ ಮಹಿಳಾ ಸಂಘದ ಅಧ್ಯಕ್ಷೆ ಸುವರ್ಣಕೇಶವಮೂರ್ತಿ ಮಾತನಾಡಿ ಕಳೆದ ೨೦೧೩ ರಿಂದ ಬನಶಂಕರಿ ಅಮ್ಮನವರ ಜಾತ್ರಾಮಹೋತ್ಸವವನ್ನು ದೇವಾಂಗ ಸಮಾಜದ ಬಂಧುಗಳು ಒಗ್ಗಟ್ಟಾಗಿ ಆಚರಣೆ ಮಾಡುತ್ತಾ ಬಂದಿದ್ದು, ವಿಶೇಷವಾಗಿ ಮಹಿಳೆಯರಿಗೆ ಮಡಿಲು ತುಂಬುವ ಸೇವೆ, ಪ್ರಾರ್ಥನೆ, ಮೆರವಣಿಗೆ ಭಕ್ತರನ್ನು ಸೆಳೆಯುವಂತೆ ಮಾಡುತ್ತಿತ್ತು ಎಂದರು. ಹೋಮ ಕಾರ್ಯಕ್ರಮದಲ್ಲಿ ನಾಗಶ್ರೀ ತ್ಯಾಗರಾಜ್ ಭಾಗವಹಿಸಿದ್ದರು,

    ಈ ಸಂಧರ್ಭದಲ್ಲಿ ಉಪಾಧ್ಯಕ್ಷರಾದ ಸಿ.ಎನ್ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಟಿ. ತ್ಯಾಗರಾಜ್, ಖಜಾಂಚಿ ಜೆಎಸ್ ರವಿಶಂಕರ್, ಲೋಹಿತ್, ಕೃಷ್ಣಮೂರ್ತಿ, ಗೌರೀಶ್, ಚಂದ್ರು ನಿರ್ದೇಶಕರಾದ ರಾಮಚಂದ್ರ, ಮೋಹನ್‌ಕುಮಾರ್, ಗೋವಿಂದಶೆಟ್ಟಿ, ರಾಜಕುಮಾರ್, ಪ್ರಕಾಶ್, ನವೀನ್‌ಕುಮಾರ್, ಶಿವರಾಜ್, ನಗರಸಭೆ ಸದಸ್ಯರಾದ ದೀಪರವಿಕುಮಾರ್, ಧನಲಕ್ಷ್ಮೀಗೋಕುಲ್, ಉಪಾಧ್ಯಕ್ಷೆ ರಾಧರಾಜ್‌ಕುಮಾರ್, ನಿರ್ದೇಶಕರಾದ ಭಾಗ್ಯಮೋಹನ್, ಶ್ಯಾಮಲಾರಾಜು, ಮಂಜುಳಾಪುಟ್ಟರಾಜು, ರತ್ನರವಿಕುಮಾರ್ ಉಪಸ್ಥಿತರಿದ್ದರು.

    The grand festival of Sri Banashankari Amman was held

  • ಜ್ಯೂನಿಯರ್ ಕಾಲೇಜು ವಾರ್ಷಿಕೋತ್ಸವ

    ಜ್ಯೂನಿಯರ್ ಕಾಲೇಜು ವಾರ್ಷಿಕೋತ್ಸವ

    ಚಿಕ್ಕಮಗಳೂರು; ಸರಕಾರಿ ಶಾಲಾ, ಕಾಲೇಜುಗಳಲ್ಲಿ ಓದಿದ ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನ ಹೆಚ್ಚು. ಅವರು ನಾಟಿ ಹಣ್ಣಿದ್ದಂತೆ ಸಿಹಿ ಜಾಸ್ತಿ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಅಭಿಪ್ರಾಯಿಸಿದರು.

    ನಗರದ ಜ್ಯೂನಿಯರ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾಲೇಜು ವಾರ್ಷಿಕೋತ್ಸವ ಹಾಗೂ ಸಹಪಠ್ಯ ಚಟುವಟಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ ಸರಕಾರಿ ಜ್ಯೂನಿಯರ್ ಕಾಲೇಜು ಜಿಲ್ಲೆಯ ಪ್ರತಿಷ್ಟಿತ ಕಾಲೇಜುಗಳಲ್ಲಿ ಒಂದು. ಇಲ್ಲಿನ ವಿದ್ಯಾರ್ಥಿಗಳು ಖಾಸಗಿ ವಿದ್ಯಾರ್ಥಿಗಳಿಗಿಂತ ಯಾವುದರಲ್ಲೂ ಕಮ್ಮಿ ಇಲ್ಲ ಇಲ್ಲಿ ಓದಿದವರು ಸಮೃದ್ಧಬದುಕು ಕಟ್ಟಿಕೊಂಡಿದ್ದಾರೆ. ಸರಕಾರಿ ಶಾಲೆಯಲ್ಲಿ ಓದಿದ ಅಬ್ದುಲ್‌ಕಲಂ, ವಿಶ್ವೇಶ್ವರಯ್ಯ ಮತ್ತಿತರೆ ಗಣ್ಯರು ಜನಮಾನಸದಲ್ಲಿ ನೆಲಯೂರಲು ಸರಕಾರಿ ಶಾಲಾ, ಕಾಲೇಜುಗಳೇ ಮೂಲ ಕಾರಣ ಎಂದು ಹೇಳಿದರು.

    ವಿಧಾಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ವಿದ್ಯಾದದಾತಿ ವಿನಯಂ ಎನ್ನುವಂತೆ ವಿದ್ಯೆ ಕಲಿಯುತ್ತಿರುವ ವಿದ್ಯಾರ್ಥಿಗಳು ವಿನಯ ಬೆಳೆಸಿಕೊಳ್ಳಿ. ೩೮ ವರ್ಷದ ಹಿಂದೆ ಪಿಯುಸಿ ಓದುತ್ತಿದ್ದ ದಿನಗಳು ಇಂದು ನೆನಪಾಗುತ್ತಿದೆ. ಓದು ಒಕ್ಕಾಲು, ಬುದ್ದಿ ಮುಕ್ಕಾಲು ಹಿಂದಿನ ಗಾದೆ ಇಂದು ಒಕ್ಕಲು ಓದು ಮುಕ್ಕಾಲು ಬುದ್ದಿ ಎಂಬುದು ಈಗಿನ ಗಾದೆ ಎಂದರು.

    ಬುದ್ದಿವಂತನಾದವನು ಎಂತಹ ಅಪಾಯ ಸ್ಥಿತಿಯಲ್ಲಿದ್ದರೂ ಪಾರಾಗಬಲ್ಲ ಎಂದರು. ಹಿಂದಿನ ಅವಯಲ್ಲಿ ಎಂಆರ್‌ಪಿಎಲ್ ಸಂಸ್ಥೆಯ ಸಿಎಸ್‌ಆರ್ ನಿ ೭೫ ಲಕ್ಷರೂ ವೆಚ್ಚದಲ್ಲಿ ಒಂದು ಕಟ್ಟಡ, ಆರ್‌ಐಡಿಎಫ್ ಯೋಜನೆಯಡಿ ೨ ಕೋಟಿ ರೂ.ವೆಚ್ಚದಲ್ಲಿ ಮತ್ತೊಂದು ಕಟ್ಟಡ ನಿರ್ಮಿಸಲಾಗಿದೆ ಎಂದು ಹೇಳಿದರು.

    ವಾಗ್ಮಿ ಮಹೇಶ್ ಪ್ರಧಾನ ಉಪನ್ಯಾಸ ನೀಡಿ, ವಿದ್ಯಾರ್ಥಿಗಳಲ್ಲಿ ಸನ್ನಡತೆ ಬೀಜಬಿತ್ತಬೇಕು. ಗುರುಗಳಿಗೆ ಗೌರವಿಸುವ ಸದ್ಗುಣ ತುಂಬಬೇಕು. ಕಲೆ, ಸಂಸ್ಕೃತಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾಲೇಜಿನ ಉಪನ್ಯಾಸಕರು ಮುತುವರ್ಜಿ ವಹಿಸಬೇಕು ಎಂದು ಹೇಳಿದರು.

    ಕಾಲೇಜು ಪ್ರಾಂಶುಪಾಲ ಜಿ.ಬಿ.ವಿರೂಪಾಕ್ಷ ಪ್ರಾಸ್ತಾವಿಕವಾಗಿ ಮಾತನಾಡಿ, ಸರಕಾರಿ ಜ್ಯೂನಿಯರ್ ಕಾಲೇಜು ಆಳವಾಗಿ ಬೇರೂರಿರುವ ಅಶ್ವತ್ಥ ಮರ, ಇಲ್ಲಿ ವಿದ್ಯಾರ್ಜನೆ ಮಾಡಿರುವ ವಿದ್ಯಾರ್ಥಿಗಳು ರಾಜಕೀಯ, ಶೈಕ್ಷಣಿಕ ಹಾಗು ಔದ್ಯೋಗಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.

    ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಡಿಡಿಪಿಯು ಪುಟ್ಟಾನಾಯ್ಕ, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ರಫೀಕ್ ಅಹ್ಮದ್, ನಿಕಟಪೂರ್ವ ಅಧ್ಯಕ್ಷ ವೆಂಕಟೇಶ್ ಪೈ, ಸದಸ್ಯರಾದ ಪ್ರಜ್ವಲ್, ಸೀತರಾಮನ್, ಸುರೇಶ್ ಮತ್ತಿತರರಿದ್ದರು.

    Junior College Anniversary

  • ಕ್ರೀಡಾಕೂಟಗಳು ಸ್ನೇಹ,ಸಂಬಂಧ ಗಟ್ಟಿಗೊಳಿಸಲಿ

    ಕ್ರೀಡಾಕೂಟಗಳು ಸ್ನೇಹ,ಸಂಬಂಧ ಗಟ್ಟಿಗೊಳಿಸಲಿ

    ಚಿಕ್ಕಮಗಳೂರು: ಕ್ರೀಡಾಕೂಟಗಳು ಸ್ನೇಹ ಸಂಬಂಧ ಗಟ್ಟಿಗೊಳಿಸಿ ಕ್ರೀಡಾ ಮನೋಭಾವ ಬೆಳೆಸುವಂತೆ ಮಾಡಲಿ ಎಂದು ಎಲ್‌ಐಸಿ ಉಡುಪಿ ವಿಭಾಗೀಯ ಹಿರಿಯ ವ್ಯವಸ್ಥಾಪಕ ರಾಜೇಶ್‌ಮುಧೋಳ್ ಹೇಳಿದರು.

    ನಗರದ ರಾಮನಹಳ್ಳಿ ಡಿಎಆರ್ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಎಲ್‌ಐಸಿ ವಿವಿಧ ಶಾಖೆಗಳ ಜಿಲ್ಲಾಮಟ್ಟದ ಮಲ್ನಾಡ್ ಕಪ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು

    ಡಿವಿಜನ್ ಹಂತದ ಕ್ರೀಡಾಕೂಟ ನಡೆಯುತ್ತಿದೆ. ಕಳೆದ ವರ್ಷದಂತೆಯೇ ಈಬಾರಿಯೂ ಉತ್ತಮ ಪ್ರದರ್ಶನ ನೀಡಿ. ಕ್ರೀಡಾ ಪರಿಶ್ರಮ, ಸಾಧನೆ ಅದು ಎಲ್‌ಐಸಿ ನ್ಯೂ ಬ್ಯುಸಿನೆಸ್ ಮತ್ತು ಆಡಳತದಲ್ಲೂ ಹೊರಹೊಮ್ಮಲಿ ಎಂದರು. ಎಲ್‌ಐಸಿ ಯ ಮೂರು ಹಂತದ ಅಕಾರಿ ಸಿಬ್ಬಂದಿ ಒಟ್ಟಾಗಿ ಸೇರಲು ಕ್ರೀಡಾ ಕೂಟಗಳು ಒಂದು ಉತ್ತಮ ವೇದಿಕೆ ಎಂದರು.

    ಎಂ.ಎನ್.ಚರಣ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಲ್ನಾಡ್ ಕಪ್ ೩ ನೇ ಬಾರಿ ನಡಯುತ್ತಿದೆ. ೨೦೨೨ ರಲ್ಲಿ ನಾನು ಮತ್ತು ಮೂಡಿಗೆರೆ ಶಾಖೆಯ ಮಂಜುನಾಥ್ ಸೇರಿ ಕ್ಲಬ್‌ನಲ್ಲಿ ಕ್ರೀಡಾಕೂಟದ ಬಗ್ಗೆ ಆಲೋಚಿಸಿದ್ದವು. ಅದು ಮುಂದುವರಿದು ಮಲೆನಾಡು ಕಪ್ ಕ್ರಿಕೆಟ್ ಆಟದಿಂದ ಕ್ರೀಡಾಕೂಟ ಶುರುವಾಯಿತು. ಈಗ ೨೦೨೪ ನೇ ವರ್ಷದ ಕ್ರೀಡಾಕೂಟ ಹಮ್ಮಿಕೊಂಡಿದ್ದು ಈ ಕ್ರೀಡೆಯೂ ನಮ್ಮೆಲ್ಲರಿಗೂ ಸ್ಪೂರ್ತಿಯಾಗಿ ನಮ್ಮ ಸ್ನೇಹ, ಸಂಬಂದ ಗಟ್ಟಿಗೊಳಿಸಲಿ, ಕ್ರೀಡಾ ಮನೋಭಾವಬೆಳೆಯಲಿ ಎಂದು ಹೇಳಿದರು.

    ಚಿಕ್ಕಮಗಳೂರು ಮುಖ್ಯಶಾಖೆಯ ಎಸ್‌ಡಿಎಂ, ಅಕಾರಿಗಳಾದ ಜಗದೀಶ್ ಭಂಡಾರಿ, ಎಬಿಎಂ ರಮೇಶ್, ಸೋಮ್ಲಾನಾಯ್ಕ, ಶ್ರೀನಿವಾಸ್, ರಾಜೇಶ್, ಪಿತಾಂಬರ್, ಶಂಕ್ರಪ್ಪ, ಡಿಎಒ ಯೋಗೀಶ್, ಮುತ್ತಯ್ಯ ಮತ್ತಿತರಿದ್ದರು. ಸೋಮಶೇಖರ್ ಸ್ವಾಗತಿಸಿ, ಶಾರದಮ್ಮ ಪ್ರಾರ್ಥಿಸಿದರು.

    LIC various branches district level Malnad Cup cricket tournament

  • ಹೆಣ್ಣು ಎಂದರೆ ಒಂದು ಕುಲವನ್ನು ಉದ್ಧಾರ ಮಾಡುವವಳು

    ಹೆಣ್ಣು ಎಂದರೆ ಒಂದು ಕುಲವನ್ನು ಉದ್ಧಾರ ಮಾಡುವವಳು

    ಚಿಕ್ಕಮಗಳೂರು: ಹೆಣ್ಣು ಎಂದರೆ ಒಂದು ಕುಲವನ್ನು ಉದ್ಧಾರ ಮಾಡುವವಳು. ಹೆಣ್ಣುತನಕ್ಕೆ ಪಾವಿತ್ರ್ಯತೆ ಇದೆ. ಹೆಣ್ಣುತನದ ಜವಾಬ್ದಾರಿಯನ್ನು ಅರಿತು ಬದುಕಿದ ದಿನ ನಿಜವಾದ ಮಹಿಳಾ ದಿನಾಚರಣೆ ಆಗುತ್ತದೆ ಎಂದು ಹರಿಹರಪುರ ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಹೇಳಿದರು.

    ಅವರು ಭಾನುವಾರ ನಗರದ ಕುವೆಂಪು ಕಲಾ ಮಂದಿರದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಕುರುಹಿನ ಶೆಟ್ಟಿ (ನೇಕಾರ) ಮಹಿಳಾ ಸಂಘದ ಎಂಟನೇ ವರ್ಷದ ವಾರ್ಷಿಕೋತ್ಸವ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಪುರಸ್ಕಾರ ಸಮಾರಂಭದಲ್ಲಿ ಅವರು ಪ್ರವಚನ ನೀಡಿದರು.

    ಜಗತ್ತಿನಲ್ಲಿ ಬಿಡುವಿಲ್ಲದ ಚಕ್ರವೊಂದಿದೆ ಅದು ಕಾಲ ಚಕ್ರ. ಅದನ್ನು ಹೊರತು ಪಡಿಸಿದರೆ ಮನೆಗಳಲ್ಲಿರುವ ತಾಯಂದಿರು. ಆಕೆ ಒಂದು ಪರುಷನ ಬೆಳವಣಿಗೆಗೆ ಮಹಿಳೆ ಐದು ರೀತಿ ಸಹಾಯ ಮಾಡುತ್ತಾಳೆ. ನಮಗೆ ಈ ಜಗತ್ತನ್ನು ತೋರಿಸಿದ್ದು ತಾಯಿ ಎಂದರು.

    ಏಳು ಮಕ್ಕಳನ್ನು ಹೆತ್ತ ತಾಯಿಗೆ ಅದು ಭಾರವಾಗಲಿಲ್ಲ. ಆ ಏಳು ಮಂದಿ ಮಕ್ಕಳು ಕೆಲಸಕ್ಕೆ ಸೇರಿದ ಮೇಲೆ ಹೆತ್ತ ತಾಯಿ ಭಾರವಾಗದಿರಲಿ. ಬಿಪಿ, ಶುಗರ್ ಮಾತ್ರೆ ಕೊಡದೆ ವೃದ್ಧಾಶ್ರಮಕ್ಕೆ ಬಿಡಲಾಗುತ್ತಿದೆ. ಆಕೆಗೆ ನೀವು ಎಷ್ಟೇ ಹಣ ಕೊಟ್ಟರು ಭಾವನೆ ಕೊಟ್ಟಂತಾಗುವುದಿಲ್ಲ ಎಂದರು.

    ಹೆತ್ತ ತಾಯಿಯ ಬಳಿ ಬೆಳೆಯದೆ, ಅಜಿಯ ತೊಡೆಯ ಮೇಲೆ ಮಲಗದೆ, ಹಬ್ಬಗಳಲ್ಲಿ ತಿಂಡಿ ತಿನಿಸುಗಳನ್ನು ಮಾಡಿಸಿಕೊಂಡು ತಿನ್ನುವಂತಹ ಸಹಜತೆಯೇ ಹೊರಟು ಹೋಗಿದೆ. ಈ ಹಿನ್ನೆಲೆಯಲ್ಲಿ ಎಷ್ಟೋ ಮಂದಿ ನಗರದ ಮಕ್ಕಳಿಗೆ ಸಂಸ್ಕಾರವೇ ಇಲ್ಲದಂತಾಗಿದೆ. ಏನೇ ಕೃತಕತೆ ಮಾಡಿದರೂ ಅಮ್ಮ ಎನ್ನುವ ಶಬ್ಧಕ್ಕೆ ಪರ್ಯಾಯವಿಲ್ಲ. ಎಷ್ಟೇ ದೊಡ್ಡ ರೌಡಿಯಾಗಿದ್ದರೂ ತಾಯಿ ತೀರಿಕೊಂಡಾಗ ಅಳುವುದನ್ನು ನಾವು ನೋಡಿದ್ದೇವೆ ಎಂದರು.

    ನಮ್ಮ ಪ್ರಧಾನಿಗಳು ತಾಯಿ ತೀರಿಕೊಂಡಾಗ ಸಾಮಾನ್ಯ ಮನುಷ್ಯರಂತೆ ಶವ ಂಸ್ಕಾರದ ಗೌರವವನ್ನು ಕೊಟ್ಟು ತಾಯಿಯ ಎದುರು ಎಲ್ಲರೂ ಚಿಕ್ಕವರು ಎನ್ನುವುದನ್ನು ತೋರಿಸಿಕೊಟ್ಟರು. ನಾವು ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿರುತ್ತೇವೆ. ಆದರೆ ಪ್ರಗತಿ ವಿಚಾರದಲ್ಲಿ ಸಕ್ರೀಯರಾಗುವುದಿಲ್ಲ ಎಂದು ವಿಷಾಧಿಸಿದರು.

    ಮಹಿಳಾ ದಿನಾಚರಣೆ ಆಚರಿಸುವಾಗ ಮೊದಲು ಮಹಿಳೆಯರು ಮಹಿಳೆಯರನ್ನು ದ್ವೇಷ ಮಾಡುವುದನ್ನು ಬಿಡಬೇಕು. ಉತ್ತರ ಕರ್ನಾಟಕದ ಭಾಗದಲ್ಲಿ ವೃದ್ಧಾಶ್ರಮಗಳು ಕಡಿಮೆ ಒಟ್ಟು ಕುಟುಂಬಗಳು ಅಲ್ಲಿ ಹೆಚ್ಚು. ಎಲ್ಲರೂ ಒಂದೇ ಮನೆಯಲ್ಲಿ ಜೋಳದ ರೊಟ್ಟಿ ತಟ್ಟಿ ಊಟ ಮಾಡುತ್ತಾರೆ. ಅಲ್ಲಿ ಭಾರೀ ದೊಡ್ಡದಾದ, ಸವಲತ್ತುಗಳಿರುವ ಮನೆಗಳಿಲ್ಲದಿದ್ದರು ಒಗ್ಗಟು ಉಂಟು ಅವರಲ್ಲಿ ವಿದ್ಯಾಭ್ಯಾಸ ಕಡಿಮೆ ಇದೆ. ನಮ್ಮಲ್ಲಿ ಎಂಬಿಬಿಎಸ್, ಎಂಬಿಎ ಎಲ್ಲ ಮಾಡಿದವರಿದ್ದಾರೆ. ಆದರೂ ಆ ರೀತಿ ಒಗ್ಗಟ್ಟಿಲ್ಲ. ಎಲ್ಲಿ ತಪ್ಪಾಗುತ್ತಿದೆ. ವಿದ್ಯೆಯೇ ಅಹಂಕಾರಕ್ಕೆ ದಾರಿಯಾಗುತ್ತಿದೆಯೇ ಎನ್ನುವುದನ್ನು ಆಲೋಚಿಸಬೇಕಿದೆ ಎಂದರು.

    ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಮನೆಯೊಂದಿಗೆ ಮನಶ್ಯಾಂತಿ, ಹಸಿವಿನೊಂದಿಗೆ ಭೋಜನ ಸಿಗುವಂತಾಗಲಿ, ಧನದೊಂದಿಗೆ ದಾನದ ಗುಣ ಬರಲಿ, ಹಾಸಿಗೆಯೊಂದಿಗೆ ನಿದ್ದೆಯೂ ಇರಬೇಕೆನ್ನುವ ರೀತಿ ಬದುಕು ಬೇಕೆನ್ನುವುದಾದರೆ ನಾವು ನಮಗೋಸ್ಕರ ಮಾತ್ರ ಎಂದು ಯೋಚಿಸದೆ ನಮ್ಮ ಬದುಕಿನ ಜೊತೆಗೆ ನೆರೆ ಹೊರೆಯವರ ಬದುಕಿನಲ್ಲೂ ನೆರವಾಗಬೇಕು ಎಂದರು.

    ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಸಂಘಟನೆಗೆ ಹೆಚ್ಚು ಶಕ್ತಿ ಇರುವುದರಿಂದ ಮಹಿಳೆಯರು ಸಂಘಟಿತರಾಗಿ ಹೋರಾಟ ಮಾಡುವುದರಿಂದ ಹಕ್ಕುಗಳನ್ನು ಪಡೆಯಬಹುದು. ಪುರುಷರಷ್ಟೇ ಮಹಿಳೆಯರಿಗೂ ಎಲ್ಲ ಅವಕಾಶಗಳನ್ನು ಕೊಟ್ಟಿರುವುದರಿಂದ ಮುಂದೆ ಬರಲು ಸಾಕಷ್ಟು ಸಾಧ್ಯತೆಗಳಿವೆ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

    ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್ ಮಾತನಾಡಿ, ಎಲ್ಲ ಕಾಲಘಟ್ಟದಲ್ಲೂ ಮಹಿಳೆಯರು ಈ ದೇಶದ ಉನ್ನತಿಯಲ್ಲಿ ತನ್ನ ಪಾತ್ರವನ್ನು ನಿರಂತರವಾಗಿ ವಹಿಸುತ್ತಾ ಬಂದಿದ್ದಾರೆ. ಆಧುನಿಕ ಕಾಲದಲ್ಲೂ ಭಾರತಕ್ಕೆ ಹೊಸದಿಕ್ಕನ್ನು ಕೊಡುತ್ತಾ ಮಹಿಳೆಯರು ಪುರುಷನಿಗೆ ಸಮಾನರಾಗಿ ಬೆಳೆಯಬೇಕು ಎನ್ನುವುದನ್ನು ತೋರಿಸುತ್ತಾರೆ ಎಂದರು.

    ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ ನಮ್ಮ ಕೈಲಾದ ಸಹಾಯವನ್ನು ಹಿಂದುಳಿದ ಸಮಾಜಕ್ಕೆ ನೀಡಿ ಮುಂದೆ ತರುವ ಕೆಲಸ ಎಲ್ಲಾ ರಾಜಕಾರಣಿಗಳಿಂದಾಗಬೇಕು ಎಂದು ಹೇಳಿದರು.

    ಜಿಲ್ಲಾ ಕುರುಹಿನ ಶೆಟ್ಟಿ(ನೇಕಾರ) ಮಹಿಳಾ ಸಂಘದ ಅಧ್ಯಕ್ಷೆ ಸಿ.ಎಸ್.ಪುಷ್ಪಾ ರಾಜೇಂದ್ರ ಆಧ್ಯಕ್ಷತೆ ವಹಿಸಿ ಮಾತನಾಡಿದರು. ಕೇಂದ್ರ ಕುರುಹಿನ ಶೆಟ್ಟಿ ಸಂಘದ ಅಧ್ಯಕ್ಷ ಬೆಂಗಳೂರಿನ ಅಂಬಾದಾಸ್ ಕಾಮೂರ್ತಿ, ಉಪಾಧ್ಯಕ್ಷ ಜಿ.ಟಿ.ಸೋಮಶೇಖರ್, ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ನೇಯ್ಗೆ ನುಡಿ ಮಾಸ ಪತ್ರಿಕೆ ಸಂಪಾದಕ ಡಿ.ಸಿ.ಬೆಳ್ಳಿಚುಕ್ಕಿ ವೀರೇಂದ್ರ, ಉಪನ್ಯಾಸಕಿ ನಾಗಶ್ರೀ ತ್ಯಾಗರಾಜ್, ಜಿಲ್ಲಾ ಶ್ರೀ ನೀಲಕಂಠೇಶ್ವರ ಕುರುಹಿನ ಶೆಟ್ಟಿ ಸಂಘದ ಅಧ್ಯಕ್ಷ ಎಚ್.ಇಂದುಕುಮಾರ್ ಇತರರು ಉಪಸ್ಥಿತಿತರಿದ್ದರು. ಜಯಾ ಶೇಖರ್ ಸ್ವಾಗತಿಸಿದರು.

    Eighth anniversary of the District Kuruhina Shetty Women’s Association

  • ಸಿ.ಟಿ. ರವಿ ದೊಡ್ಡ ಡ್ರಾಮಾ ಮಾಸ್ಟರ್-ಸುಳ್ಳಿಗೆ ಸುಳ್ಳು ಪೋಣಿಸಿ ಕತೆ ಹೆಣೆಯುವುದರಲ್ಲಿ ನಿಸ್ಸಿeಮ

    ಸಿ.ಟಿ. ರವಿ ದೊಡ್ಡ ಡ್ರಾಮಾ ಮಾಸ್ಟರ್-ಸುಳ್ಳಿಗೆ ಸುಳ್ಳು ಪೋಣಿಸಿ ಕತೆ ಹೆಣೆಯುವುದರಲ್ಲಿ ನಿಸ್ಸಿeಮ

    ಶೃಂಗೇರಿ: ಸಿ ಟಿ ರವಿ ಒಬ್ಬ ದೊಡ್ಡ ಡ್ರಾಮಾ ಮಾಸ್ಟರ್. ಸುಳ್ಳಿಗೆ ಸುಳ್ಳು ಪೋಣಿಸಿ ಕತೆ ಹೆಣೆಯುವುದರಲ್ಲಿ ನಿಸ್ಸಿeಮ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಟೀಕಿಸಿದ್ದಾರೆ.

    ಶೃಂಗೇರಿಯಲ್ಲಿ ಅವರು ಮಾಧ್ಯಮದವರಿಗೆ ಶನಿವಾರ ಪ್ರತಿಕ್ರಿಯೆ ನೀಡಿ  ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಕ್ಷಮೆ ಕೇಳದಿದ್ದರೆ ಹತ್ಯೆ ಮಾಡುವುದಾಗಿ ಸಿ.ಟಿ. ರವಿ ಅವರಿಗೆ ಬೆದರಿಕೆ ಪತ್ರ ಬಂದಿದೆ ಎಂದು ಕೇಳಿದಾಗ, “ಸಿ.ಟಿ. ರವಿ ದೊಡ್ಡ ಡ್ರಾಮಾ ಮಾಸ್ಟರ್ ಆಗಿದ್ದಾರೆ. ಅವರನ್ನು ರಾಷ್ಟ್ರೀಯ ನಾಯಕರು, ಬಿಜೆಪಿ ರಾಷ್ಟ್ರೀಯ ಪದಾಧಿಕಾರಿ ಎಂದು ಭಾವಿಸಿದ್ದೆ. ಅವರ ಮಾತು, ವಿಚಾರ ನೋಡಿದ ನಂತರ ಇಷ್ಟು ಕೀಳು ಮಟ್ಟಕ್ಕೆ ಇಳಿಯುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ.

    ಈ ಪ್ರಕರಣದಲ್ಲಿ ಅವರು ಬೇರೆ ಯಾರ ಮಾತು ಕೇಳಬೇಕಿಲ್ಲ. ಅವರ ಆತ್ಮಸಾಕ್ಷಿ ಮಾತನ್ನು ಕೇಳಲಿ. ಆ ರೀತಿ ಮಾತನಾಡಬಾರದಿತ್ತು ಎಂದು ಅವರ ಪಕ್ಷದ ನೂರು ನಾಯಕರು ನನ್ನ ಬಳಿ ಹೇಳಿದ್ದಾರೆ. ಅಚಾತುರ್ಯವಾಗಿ ಆ ರೀತಿ ಮಾತಾಡಿದ್ದೇನೆ ಕ್ಷಮೆ ಕೇಳುತ್ತೇನೆ ಎಂದಿದ್ದರೆ ಪ್ರಕರಣ ಮುಗಿಯುತ್ತಿತ್ತು. ಅದನ್ನು ಬಿಟ್ಟು ಸುಳ್ಳಿಗೆ ಸುಳ್ಳು ಸೇರಿಸಿಕೊಂಡು ಹೋದರೆ ಪ್ರಯೋಜನವಿಲ್ಲ. ಅವರ ಆರೋಪ ಸುಳ್ಳು. ಅವರದ್ದೇ ಅನೇಕ ತನಿಖಾ ತಂಡಗಳಿವೆಯಲ್ಲ ತನಿಖೆ ಮಾಡಿಸಲಿ” ಎಂದು ಕಿಡಿಕಾರಿದರು.

    ರವಿಗೆ ಸಾಮಾನ್ಯ ಪರಿಜ್ಞಾನ ಇಲ್ಲ:

    ನಕ್ಸಲರ ಶಸ್ತ್ರಾಸ್ತ್ರ ವಿಚಾರವಾಗಿ ರವಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಯಾರಾದರೂ ಮುಖ್ಯಮಂತ್ರಿಗಳ ಬಳಿ ಬಂದು ಶರಣಾಗುವಾಗ ಯಾರಾದರೂ ಬಂದೂಕು ಹಿಡಿದುಕೊಂಡು ಬರುತ್ತಾರಾ? ರವಿಗೆ ಇಷ್ಟು ಸಾಮಾನ್ಯ ಪ್ರಜ್ಞೆ ಇಲ್ಲವೇ? ವೀರಪ್ಪನ್ ಅವರಿಂದ ರಾಜಕುಮಾರ್ ಅವರನ್ನು ಕರೆ ತಂದಾಗ ಬಂದೂಕು ಸಮೇತ ಕರೆತರಲಾಗಿತ್ತೆ? ಈ ವಿಚಾರವನ್ನು ನಿಭಾಯಿಸಲು ಪೊಲೀಸ್ ಇಲಾಖೆ ಇದೆ. ಅವರು ಕೆಲವು ವಿಚಾರಗಳನ್ನು ಗೌಪ್ಯವಾಗಿತ್ತುಕೊಂಡು ಕರ್ತವ್ಯ ನಿಭಾಯಿಸುತ್ತಿದ್ದಾರೆ.

    ಅವರ ಕರ್ತವ್ಯದಲ್ಲಿ ನಾವು ಹಸ್ತಕ್ಷೇಪ ಮಾಡುವಂತಿಲ್ಲ. ರಾಜ್ಯವನ್ನು ನಕ್ಸಲ್ ಮುಕ್ತ ಮಾಡಿರುವುದಕ್ಕೆ ಸಂತೋಷಪಡಬೇಕು. ಆದರೆ ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡಲಾಗುತ್ತಿದೆ. ಚುನಾವಣೆಗೆ ಇನ್ನು ಸಮಯವಿದೆ. ಚುನಾವಣೆ ಬಂದಾಗ ರಾಜಕೀಯ ಮಾಡಲಿ. ಈಗ ರಾಜ್ಯದ ಪ್ರಗತಿ ಬಗ್ಗೆ ಚರ್ಚೆ ಮಾಡಿ, ರಾಜ್ಯ ಹಾಗೂ ದೇಶ ಉಳಿಸುವ ಕೆಲಸ ಮಾಡೋಣ” ಎಂದು ತಿರುಗೇಟು ನೀಡಿದರು.

    C.T. Ravi is a great drama master.

  • ನಮ್ಮ ಮನೆಗಳನ್ನು ಕಾಪಾಡಿಕೊಳ್ಳುವಂತೆ ಮಠಗಳನ್ನು ಕಾಪಾಡಿಕೊಳ್ಳಬೇಕು

    ನಮ್ಮ ಮನೆಗಳನ್ನು ಕಾಪಾಡಿಕೊಳ್ಳುವಂತೆ ಮಠಗಳನ್ನು ಕಾಪಾಡಿಕೊಳ್ಳಬೇಕು

    ಶೃಂಗೇರಿ: “ನಾವು ನಮ್ಮ ಮನೆಗಳನ್ನು ಕಾಪಾಡಿಕೊಳ್ಳುವಂತೆ, ನಮ್ಮ ಮಠಗಳನ್ನು ಕಾಪಡಿಕೊಳ್ಳಬೇಕು. ಧರ್ಮ ಕಾಪಾಡುವ ಮಠಕ್ಕೆ ನಮ್ಮ ಕೈಲಾದ ನೆರವು ನೀಡಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

    ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿಗಳು ಸನ್ಯಾಸ ಸ್ವೀಕಾರ ಮಾಡಿ 50 ವರ್ಷಗಳು ಪೂರೈಸಿರುವ ಶುಭ ಸಂವತ್ಸರದ ಸಂದರ್ಭದಲ್ಲಿ ಶೃಂಗೇರಿಯಲ್ಲಿ ಶನಿವಾರ ಏರ್ಪಡಿಸಿದ್ದ “ಸುವರ್ಣ ಭಾರತೀ ಮಹೋತ್ಸವ” ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಶನಿವಾರ ಭಾಗವಹಿಸಿ ಮಾತನಾಡಿದರು.

    “ನಮ್ಮ ಹಿರಿಯರು, ಮನೆ ಹುಷಾರು, ಮಠ ಹುಷಾರು ಎಂದು ಹೇಳಿದ್ದಾರೆ. ನಾವು ನಮ್ಮ ಮನೆಗಳನ್ನು ಕಾಪಾಡಿಕೊಳ್ಳುವಂತೆ ನಮ್ಮ ಮಠಗಳನ್ನು ಕಾಪಾಡಿಕೊಳ್ಳಬೇಕು. ಇದು ನಮ್ಮೆಲ್ಲರ ಕರ್ತವ್ಯ. ನೀವು ಇಲ್ಲಿಗೆ ಬಂದು ಹಾಗೇ ಹೋಗಬೇಡಿ. ನೀವು ನೂರು ರೂಪಾಯಿ ಸಂಪಾದನೆ ಮಾಡಿದರೆ, ಒಂದು ರೂಪಾಯಿಯಾದರೂ ಧರ್ಮ ಉಳಿಸುವ ಮಠಕ್ಕೆ ನೀಡಬೇಕು. ಆಗ ಮಾತ್ರ ಮಠ ಉಳಿಯಲು ಸಾಧ್ಯ” ಎಂದು ಕರೆ ನೀಡಿದರು.

    “ಪ್ರವಚನ ಕೇಳಿ ನೆಮ್ಮದಿ ಪಡೆಯಲು ಬಂದಿದ್ದೇನೆ”

    “ಇಲ್ಲಿ ಧರ್ಮ ಕಾಪಾಡುವ ಸಾಗರವೇ ಸೇರಿದೆ. ಇದು ಭಾಗ್ಯ ಇದು ಭಾಗ್ಯ, ಇದು ಭಾಗ್ಯವಯ್ಯ, ಪದುಮನಾಭನ ಪಾದ ಭಜನೆ ಪರಮ ಸುಖವಯ್ಯ ಎಂಬ ಪುರಂದರ ದಾಸರ ಪದಗಳಂತೆ ಇಂತಹ ದೊಡ್ಡ ಭಕ್ತಿ ಸಾಗರದಲ್ಲಿ ವಿಧುಶೇಖರಭಾರತೀ ಮಹಾಸ್ವಾಮೀಜಿಗಳು ನೀಡಿರುವ ಪ್ರವಚನ ಕೇಳಿ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ನೆಮ್ಮದಿ ಪಡೆದುಕೊಳ್ಳಲು ನಾನು ಭಾಗವಹಿಸಿರುವುದು ನನ್ನ ಭಾಗ್ಯವಾಗಿದೆ” ಎಂದರು.

    “ಭಾರತೀತೀರ್ಥ ಮಹಾಸ್ವಾಮೀಜಿಗಳು ಸಮಾಜದಲ್ಲಿ ಧರ್ಮವನ್ನು ಉಳಿಸಲು ಸನ್ಯಾಸತ್ವ ಸ್ವೀಕರಿಸಿ 50 ವರ್ಷಗಳು ಪೂರೈಸಿವೆ. ಇವರು ಶಾರದ ಪೀಠದ 36ನೇ ಅಧ್ಯಕ್ಷರಾಗಿ ನಮ್ಮ ಕಣ್ಣಿಗೆ ದೇವರ ರೂಪದಲ್ಲಿ ಕಾಣುತ್ತಿದ್ದಾರೆ. ಅವರಲ್ಲಿ ನಾವು ಶಂಕರಚಾರ್ಯರನ್ನು ಕಾಣುತ್ತಿದ್ದೇವೆ. ವಿಧುಶೇಖರಭಾರತೀ ಸ್ವಾಮೀಜಿಗಳು ದೇಶ ಸುತ್ತಿ ನಮ್ಮ ಧರ್ಮ ಕಾಪಾಡಲು ಮಾರ್ಗದರ್ಶನ ನೀಡುತ್ತಿದ್ದಾರೆ” ಎಂದು ತಿಳಿಸಿದರು.

    “ಇಲ್ಲಿಗೆ ಬಂದಾಗ ನನಗೆ ಶಾಲೆಯಲ್ಲಿ ಕಲಿತ ಶ್ಲೋಕ ನೆನಪಾಯಿತು. ವಿದ್ಯಾ ದದಾತಿ ವಿನಯಂ ವಿನಯಾ ದದಾತಿ ಪಾತ್ರತಾಂ। ಪಾತ್ರತ್ವಂ ಧನಮಾಪ್ನೋತಿ ಧನಧರ್ಮಂ ತತಃ ಸುಖಮ್. ಅಂದರೆ ಮನುಷ್ಯನಿಗೆ ವಿದ್ಯೆ ಇದ್ದರೆ ವಿನಯ ಬರುತ್ತದೆ. ವಿನಯವಿದ್ದರೆ ಯೋಗ್ಯತೆ ಬರುತ್ತದೆ. ಯೋಗ್ಯತೆಯಿಂದ ಹಣ, ಹಣದಿಂದ ಧರ್ಮ, ಧರ್ಮದಿಂದ ಸುಖ ಪಡೆಯುತ್ತೇವೆ. ಅದರಂತೆ ಸುಖ ಪಡೆಯಲು ನಾವು ಇಲ್ಲಿಗೆ ಬಂದಿದ್ದೇವೆ. ನಾವು ನಮ್ಮ ಮನಸ್ಸಿನ ಶಾಂತಿ ಪಡೆಯಲು, ನಮ್ಮ ಕಷ್ಟಗಳ ನಿವಾರಣೆಗೆ ದೇವಾಲಯಕ್ಕೆ ಹೋಗುತ್ತೇವೆ. ಇಂತಹ ಪವಿತ್ರ ಶಾರದ ಪೀಠ ಸನ್ನಿದಿಯಲ್ಲಿ ನಾವೆಲ್ಲರೂ ಸೇರಿರುವುದು ನಮ್ಮ ಭಾಗ್ಯ” ಎಂದರು.

    “ಇಲ್ಲಿ ಶ್ರೀಗಳು ಹೇಳಿಕೊಟ್ಟ ಪಾಠ ಕಲಿತು, ಅವರು ಹೇಳಿದ ಸ್ತೋತ್ರಗಳನ್ನು ಅರ್ಥ ಮಾಡಿಕೊಂಡು ಬದುಕಿನಲ್ಲಿ ಬದಲಾವಣೆ ಮಾಡಿಕೊಳ್ಳಲು ಪ್ರಯತ್ನಿಸಿದ್ದೇವೆ. ನಾನು ಇಲ್ಲಿಗೆ ಬಂದಾಗ ಶ್ರೀಗಳು ಮಾತನಾಡುತ್ತಿದ್ದರು. ಮಾನವ ಧರ್ಮಕ್ಕೆ ಜಯವಾಗಲಿ, ವಿಶ್ವಕ್ಕೆ ಧರ್ಮದಿಂದ ಶಾಂತಿ ಸಿಗಲಿ ಎಂದು ಸಂದೇಶ ಸಾರಿದರು. ನಾನು ಗಂಟೆಗಟ್ಟಲೆ ಧರ್ಮದ ವಿಚಾರವಾಗಿ ಮಾತನಾಡಬಲ್ಲೆ. ನಮ್ಮ ಅನುಷ್ಠಾನ ಮಾಡುವಲ್ಲಿ ಮಠ ಕೆಲಸ ಮಾಡಿಕೊಂಡು ಬಂದಿದೆ” ಎಂದು ಹೇಳಿದರು.

    ಭಾರತೀತೀರ್ಥ ಮಹಾಸ್ವಾಮಿಗಳ ಪವಾಡ ಕಣ್ಣಾರೆ ಕಂಡಿದ್ದೇನೆ

    “ನಾನು ತಿರುಪತಿಗೆ ಹೋಗಿ ಮರಳುವಾಗ ನನ್ನ ಸ್ನೇಹಿತರು ಆದಿಕೇಶವಲು ಎಂಬುವವರ ಮನೆಗೆ ಭಾರತೀ ಶ್ರೀಗಳು ಹೋಗಿ ಅಲ್ಲಿ 2 ದಿನ ತಂಗಿದ್ದರು. ಅಲ್ಲಿ ದೇವಾಲಯದಲ್ಲಿ ಒಂದು ಹೂವಿನ ಹಾರ ಹಾಕಿದ್ದರು. 2 ದಿನಗಳ ನಂತರ ನಾನು ಕುಟುಂಬ ಸಮೇತರಾಗಿ ಹೋದಾಗ ಚಿತ್ತೂರಿನಲ್ಲಿ ಜನಸಾಗರವೇ ಸೇರಿತ್ತು. ಕಾರಣ ಅಲ್ಲಿ ಸ್ವಾಮೀಜಿಗಳು ಹಾಕಿದ್ದ ಹೂವಿನ ಹಾರ ಬೆಳೆಯುತ್ತಿತ್ತು. ಅದನ್ನು ನಾನು ಕಣ್ಣಾರೆ ಕಂಡಿದ್ದೆ. ಭಾರತೀ ಶ್ರೀಗಳ ಆ ಪವಾಡವನ್ನು ನಾನು ಕಣ್ಣಾರೆ ಕಂಡಿದ್ದೆ. ಅಷ್ಟು ದೊಡ್ಡ ಶಕ್ತಿ ಶಾರದ ಪೀಠದಲ್ಲಿದೆ” ಎಂದರು.

    ವಿಧುಶೇಖರಭಾರತೀ ಸ್ವಾಮೀಜಿಗಳ ಪಾಂಡಿತ್ಯಕ್ಕೆ ಶರಣಾಗಿದ್ದೇನೆ

    “ಯಾರ ಮಾತಿಗೂ ನಾವು ಅಂಜುವ ಅಗತ್ಯವಿಲ್ಲ. ನಾವು ಯಾರ ಅಣತಿಯಂತೆ ಇರುವುದು ಬೇಡ. ಯಾರನ್ನೂ ನಂಬಿ ನಾವು ಬದುಕುವುದು ಬೇಡ. ನಮ್ಮ ಜೀವನವನ್ನು ನಾವು ನಂಬೋಣ. ನಮ್ಮ ಧರ್ಮ, ದೇವರಲ್ಲಿ ವಿಶ್ವಾಸವಿಟ್ಟು ಬದುಕಿದಾಗ ಒಳ್ಳೆಯದಾಗುತ್ತದೆ. ಭಾರತೀ ಶ್ರೀಗಳು ಅನೇಕ ಶಿಷ್ಯಕೋಟಿಗಳನ್ನು ಬೆಳೆಸಿದ್ದಾರೆ, ವಿಧುಶೇಖರಭಾರತೀ ಸ್ವಾಮೀಜಿಗಳ ವಯಸ್ಸಿಗೆ ಅವರಲ್ಲಿರುವ ಪಾಂಡಿತ್ಯಕ್ಕೆ ನಾನು ಶರಣಾಗಿದ್ದೇನೆ. ಶ್ರೀಗಳ ಪಾದಗಳಿಗೆ ಸಾಷ್ಟಾಂಗ ನಮಸ್ಕಾರಗಳು. ಮುಂದಿನ ಐವತ್ತು ಅರವತ್ತು ವರ್ಷಗಳ ಕಾಲ ಈ ಮಠವನ್ನು ಇನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಿ, ಧರ್ಮ ಕಾಪಾಡುವ ಕೆಲಸ ಮುಂದುವರಿಯಲಿ. ನಮ್ಮ ಸಂಸ್ಕೃತಿ ಈ ದೇಶದ ಆಸ್ತಿ. ಅದನ್ನು ಕಾಪಾಡುವ ಕೆಲಸ ಮಠದಿಂದ ಆಗಲಿ. ನಾನು ಕೂಡ ಶ್ರೀಗಳ ಭಕ್ತನಾಗಿ ಅವರ ಪಾದಗಳ ಮುಂದೆ ಕೂತಿದ್ದೇನೆ” ಎಂದರು.

    We should protect monasteries like we protect our homes.

  • ವೈಕುಂಠ ಏಕಾದಶಿಗೆ ದೇವಾಲಯಗಲ್ಲಿ ಜನಸಾಗರ

    ವೈಕುಂಠ ಏಕಾದಶಿಗೆ ದೇವಾಲಯಗಲ್ಲಿ ಜನಸಾಗರ

    ಚಿಕ್ಕಮಗಳೂರು: ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ನಗರದ ಹಿರೇಮಗಳೂರು ಶ್ರೀ ಕೋದಂಡರಾಮಚಂದ್ರಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಸಾವಿರಾರು ಭಕ್ತರು ಸರತಿಯಲ್ಲಿ ಬಂದು ಉತ್ತರ ದಿಕ್ಕಿನ ಬಾಗಿಲ ಮೂಲಕ ವೈಕುಂಠ ದ್ವಾರವನ್ನು ಹಾದು ರಾಮನದರ್ಶನ ಪಡೆದರು.

    ಸಂಜೆವರೆಗೆ ಭಕ್ತಗಣ ನಿರಂತವಾಗಿ ಹರಿದು ಬರುತ್ತಲೇ ಇತ್ತು. ಕನ್ನಡದಲ್ಲೇ ಪ್ರಾರ್ಥನೆ, ಭಜನೆ ಮಾಡಿ, ಪೂಜೆ, ಪುನಸ್ಕಾರಗಳನ್ನು ನೆರವೇರಿಸಿದರು. ಉತ್ಸವ ಮೂರ್ತಿಗೆ ಪ್ರದಕ್ಷಿಣೆ ಹಾಕಿ, ಪ್ರಸಾದ ಸ್ವೀಕರಿಸಿದರು. ದೇವಸ್ಥಾನದ ಪ್ರಧಾನ ಅರ್ಚಕ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ನೇತೃತ್ವದ ತಂಡವು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿತು.

    ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಬೆಳಗ್ಗೆ ೫ ಗಂಟೆಗೆ ಶ್ರೀ ಕೋದಂಡರಾಮಚಂದ್ರಸ್ವಾಮಿಗೆ ಸುಪ್ರಭಾತ ಸೇವೆ, ವೇದಪಠಣ, ಅಭಿಷೇಕ, ವಿಶೇಷ ಪೂಜೆ, ಅಲಂಕಾರ ನಡೆಯಿತು. ಮಹಾಮಂಗಳಾರತಿ ನಂತರ ಬೆಳಗ್ಗೆ ೫.೩೦ ಕ್ಕೆ ಗರ್ಭಗುಡಿಯಿಂದ ಉತ್ಸವ ಮೂರ್ತಿಯನ್ನು ಹೊರತಂದು ದೇವಾಲಯದ ಪ್ರಾಂಗಣದಲ್ಲಿ ಮೆರವಣಿಗೆ ಮಾಡಲಾಯಿತು. ವೈಕುಂಠ ದ್ವಾರಕ್ಕೆ ಪೂಜೆ ಸಲ್ಲಿಸಿದ ಬಳಿಕ ವೈಕುಂಠ ದ್ವಾರದ ಮೂಲಕ ಉತ್ಸವ ಮೂರ್ತಿಯನ್ನು ಕೊಂಡೊಯ್ದು ಮೇಲ್ಬಾಗದಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಯಿತು.

    ವರ್ಷಕ್ಕೊಮ್ಮೆ ಮಾತ್ರ ವೈಕುಂಠದ್ವಾರದ ಬಾಗಿಲು ತೆರೆಯುವ ಹಿನ್ನೆಲೆಯಲ್ಲಿ ನಗರ ಮತ್ತು ಸುತ್ತಮುತ್ತಲ ಗ್ರಾಮ ಹಾಗೂ ರಾಜ್ಯದ ವಿವಿಧ ಭಾಗದಿಂದ ಭಕ್ತರು ಆಗಮಿಸಿದ್ದರು. ಮೈಕೊರೆವ ಮಾಗಿ ಚಳಿಯನ್ನು ಲೆಕ್ಕಿಸದೆ ಸರತಿ ಸಾಲಿನಲ್ಲಿ ಕಾಯುತ್ತಾ ನಿಂತು ವೈಕುಂಠ ದ್ವಾರ ತೆರೆಯುತ್ತಿದ್ದಂತೆ ಉತ್ಸವ ಮೂರ್ತಿಯೊಂದಿಗೆ ದ್ವಾರವನ್ನು ಪ್ರವೇಶಿಸಿದರು.

    ಭಕ್ತರಿಂದ ಭಜನೆ, ಭಗವದ್ಗೀತೆಯ ಪಠಣ, ನಾಮ ಸಂಕೀರ್ತನೆ ಜರುಗಿತು. ಸಹಸ್ರಾರು ಭಕ್ತರು ರಾಮನಾಮ ಲಿಪಿ ಬರೆದು ರಾಮನಾಮ ಲಿಪಿ ಮಂಟಪಕ್ಕೆ ಸಮರ್ಪಿಸಿದರು. ದೇವಾಲಯದ ವತಿಯಿಂದ ಭಕ್ತರಿಗೆ ಪೊಂಗಲ್ ಪ್ರಸಾದ ವಿತರಿಸಲಾಯಿತು. ಬೆಳಗಿನಿಂದ ರಾತ್ರಿಯವರೆಗೆ ನಗರ ಮತ್ತು ಸುತ್ತಮುತ್ತಲ ಗ್ರಾಮಗಳ ಭಕ್ತರು ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ವೈಕುಂಠ ದ್ವಾರವನ್ನು ಪ್ರವೇಶಿಸಿ ಸಂಭ್ರಮಿಸಿದರು.

    Crowds throng temples on Vaikuntha Ekadashi

  • ಸಾಂಪ್ರದಾಯಿಕ ಕೈಗಾರಿಕೆಗಳ ಪುನರುತ್ಪಾದನೆ ಯೋಜನೆಗೆ ನಿಧಿ ಬಿಡುಗಡೆ ಮಾಡಲು ಪ್ರಸ್ತಾವನೆ

    ಸಾಂಪ್ರದಾಯಿಕ ಕೈಗಾರಿಕೆಗಳ ಪುನರುತ್ಪಾದನೆ ಯೋಜನೆಗೆ ನಿಧಿ ಬಿಡುಗಡೆ ಮಾಡಲು ಪ್ರಸ್ತಾವನೆ

    ಚಿಕ್ಕಮಗಳೂರು:  ರಾಜ್ಯದಲ್ಲಿ ಕಾಳು ಮೆಣಸು, ಕಾಫಿ ಅಡಿಕೆ, ಇವುಗಳ ಸಂಸ್ಕರಣೆಗಾಗಿ ಚಿಕ್ಕಮಗಳೂರಿನಲ್ಲಿಯೇ ಸಂಸ್ಕರಣೆ ಘಟಕವನ್ನು ಸ್ಥಾಪಿಸಲು ಕೇಂದ್ರ ಸರ್ಕಾಕರಕ್ಕೆ ಅನುದಾನ ಬಿಡುಗಡೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಉಡುಪಿ ಚಿಕ್ಕಮಗಳೂರು  ಲೋಕಸಭಾ ಕ್ಷೇತ್ರದ ಸಂಸದರಾದ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.
    ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ  ಇಂದು  ನಡೆದ  ಭಾರತ ಸರ್ಕಾರದ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ಕಾರ್ಯಕ್ರಮದ ಸಾಂಪ್ರದಾಯಿಕ ಕೈಗಾರಿಕೆಗಳ ಪುನರುತ್ಪಾದನೆಗಾಗಿ  ನಿಧಿಯ ಯೋಜನೆಯ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ಕೆಂದ್ರ ಸರ್ಕಾರದಿಂದ  ಶೇಕಡಾ ೯೦% ಅನುದಾನ  ಪಡೆದು ಉಳಿದ ಶೇಕಾಡ ೧೦%  ಅನುದಾನವನ್ನು  ಫಲಾನುಭವಿಗಳು ಭರಿಸಿ ಒಟ್ಟು ೨.೫೦ ಕೋಟಿಯಿಂದ ೫ ಕೋಟಿಯ ಯೋಜನೆ ಇದಾಗಿದೆ. ಇನ್ನು ಈ ಯೋಜನೆಯಡಿ ಕಾಳು ಮೆಣಸು, ತೆಂಗು, ಕಾಫಿ,  ಅಡಿಕೆ, ಖಾದಿ ಕೈಗಾರಿಕೆ, ಗ್ರಾಮ ಕೈಗಾರಿಕೆ, ಕಾಯರ್ ಇಂಡಸ್ಟ್ರೀಸ್ , ಇಂತಹ ಸಂಪ್ರದಾಯಿಕ ಕೈಗಾರಿಕೆಗಳು ಈ ಯೋಜನೆಯ ವ್ಯಾಪ್ತಿಗೆ ಬರುತ್ತವೆ ಎಂದ ಅವರು ಈ ಯೋಜನೆಯ ಮೂಲ ಉದ್ದೇಶ ಸಾಂಪ್ರದಾಯಿಕ ಕೈಗಾರಿಕೆ ಮತ್ತು ಕುಶಲಕರ್ಮಿಗಳನ್ನು ಸಾಮೂಹಿಕವಾಗಿ ಸಂಘಟಿಸಲು ಅವರನ್ನು ಸ್ಪರ್ಧಾತ್ವಕವಾಗಿಸಲು ಹಾಗೂ ಅವರ ಧೀರ್ಘಾವಧಿಯ ಸುಸ್ಥಿರತೆ ಹಾಗೂ ಪ್ರಮಾಣ ಆರ್ಥಿಕತೆಗೆ ಬೆಂಬಲವನ್ನು ಒದಗಿಸುವುದು.
    ಸಾಂಪ್ರಾದಾಯಿಕ ಉದ್ಯಮದ ಕುಶಲಕರ್ಮಿಗಳು ಮತ್ತು ಉತ್ಪಾದಕರಿಗೆ ನಿರಂತರ ಉದ್ಯೋಗವನ್ನು ಒದಗಿಸುವುದಲ್ಲದೇ ಹೊಸ ಉತ್ಪನ್ನಗಳಿಗೆ ಬೆಂಬಲ ನೀಡುವುದು. ಸುಧಾರಿತ ಪ್ಯಾಕೇಜಿಂಗ್ ಮತ್ತು ಮಾರ್ಕೆಟಿಂಗ್ ಮೂಲಸೌಕರ್ಯವನ್ನು ಸುಧಾರಿಸುವ ಮೂಲಕ ಅಂತಹ ಕ್ಲಷ್ಟರ್‌ಗಳ ಸಾಮೂಹಿಕ ಉತ್ಪನ್ನಗಳ ಮಾರುಕಟ್ಟೆ ಸಾಮರ್ಥ್ಯವನ್ನು ಹೆಚ್ಚಿಸುವುದು ಈ ಯೋಜನೆ ಒಳಗೊಂಡಿದೆ ಎಂದು ಹೇಳಿದರು.
    ಸಭೆಯಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್., ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಜಾತ, ಉಪನಿರ್ದೇಶಕ ವೆಂಕಟೇಶ್ ಚೌಹಾಣ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
    Traditional Industries Regeneration Project
  • ಎ.ಎನ್ ಮಹೇಶ್ ಗೆ ಪ್ರೈಡ್ ಆಫ್ ಕರ್ನಾಟಕ ವಾರ್ಷಿಕ ಪ್ರಶಸ್ತಿ

    ಎ.ಎನ್ ಮಹೇಶ್ ಗೆ ಪ್ರೈಡ್ ಆಫ್ ಕರ್ನಾಟಕ ವಾರ್ಷಿಕ ಪ್ರಶಸ್ತಿ

    ಚಿಕ್ಕಮಗಳೂರು: ಬೆಂಗಳೂರಿನ ಪ್ರೆಸ್ ಕ್ಲಭ್ ಆಫ್ ಬೆಂಗಳೂರು ಸಂಸ್ಥೆ ಕೊಡಮಾಡುವ ಪ್ರತಿಷ್ಟಿತ ಪ್ರೈಡ್ ಆಫ್ ಕರ್ನಾಟಕ ವಾರ್ಷಿಕ ಪ್ರಶಸ್ತಿಗೆ ಕರ್ನಾಟಕ ರಾಜ್ಯ ಪರಿಸರ ಮೌಲ್ಯಮಾಪನ ತಜ್ಞರ ಸಮಿತಿಯ ಅಧ್ಯಕ್ಷರಾಗಿರುವ ಎ.ಎನ್ ಮಹೇಶ್ ಆಯ್ಕೆಯಾಗಿದ್ದಾರೆ.

    ಪತ್ರಕರ್ತರ ಪ್ರಾತಿನಿಧಿಕ ಸಂಸ್ಥೆಯಾದ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ದೇಶದ ಅತ್ಯುನ್ನತ ಪ್ರತಿಷ್ಠಿತ ಕ್ಲಬ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ೫೫ ವರ್ಷಗಳ ಇತಿಹಾಸವಿರುವ ಬೆಂಗಳೂರು ಪ್ರೆಸ್‌ಕ್ಲಬ್ ಪ್ರತಿವರ್ಷ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಾ ಬಂದಿದ್ದು,ಈಬಾರಿ ಎ.ಎನ್ ಮಹೇಶ್‌ರವರನ್ನು ಆಯ್ಕೆಮಾಡಿದೆ.

    ಜ.ರಂದು ೧೧ ರ ಶನಿವಾರದಂದು ಸಂಜೆ ೫.೩೦ ಕ್ಕೆ ಪ್ರೆಸ್‌ಕ್ಲಬ್ ಆವರಣದಲ್ಲಿ ನಡೆಯುವ ವರ್ಣರಂಜಿತ ಹಾಗೂ ಸುಂದರ ಸಮಾರಂಭದಲ್ಲಿ ಸರ್ಕಾರದ ಆನೇಕ ಸಚಿವರು ಹಾಗೂ ಅತಿಥಿ ಗಣ್ಯರು ಈ ಪ್ರಶಸ್ತಿಯನ್ನು ಪ್ರಧಾನ ಮಾಡಿ ಅಭಿನಂದಿಸಲಿದ್ದಾರೆ.

    ದೇಶದ ಪ್ರತಿಷ್ಠಿತ ವ್ಯಕ್ತಿಗಳಾದ ಭಾರತದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಭಾರತರತ್ನ ಪ್ರಶಸ್ತಿ ಪುರಸ್ಕೃತ ಕನ್ನಡಿತ ಡಾ.ಸಿ.ಎನ್.ಆರ್ ರಾವ್, ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ, ಲೋಕಾಯುಕ್ತ ಎನ್. ವೆಂಕಟಾಚಲಯ್ಯ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್, ಪದ್ಮಶ್ರೀ ಪುರಸ್ಕೃತ ಡಾ. ಸಿ.ಎನ್. ಮಂಜುನಾಥ್, ಅಂತರರಾಷ್ಟ್ರೀಯ ಕ್ರಿಕೆಟ್ ಪಟು ಅನಿಲ್ ಕುಂಬ್ಳೆ, ಔಟ್‌ಲುಕ್ ಪತ್ರಿಕೆಯ ಸಂಪಾದಕ ಕೃಷ್ಣ ಪ್ರಸಾದ್, ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತೆ ಕುಮಾರಿ ಅಶ್ವಿನಿ ಅಕ್ಕುಂಜೆ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ.ಚಂದ್ರಶೇಖರ ಕಂಬಾರ, ಸಾಮಾಜಿಕ ಹೋರಾಟಗಾರ, ಪರಿಸರವಾದಿ, ಸಮಾಜ ಪರಿವರ್ತನ ಸಮುದಾಯ ಸಂಸ್ಥೆಯ ಅಧ್ಯಕ್ಷರಾದ ಎಸ್.ಆರ್. ಹಿರೇಮಠ, ಇಸ್ರೋ ಅಧ್ಯಕ್ಷ ಡಾ.ಕೆ. ರಾಧಾಕೃಷ್ಣನ್, ೨೦೧೭ರ ಶತಮಾನದ ಶ್ರೀಗಳು ಕಾಯಕಯೋಗಿ ಶ್ರೀ ಶಿವಕುಮಾರ್ ಸ್ವಾಮೀಜಿ, ಇನ್ಫೋಸಿಸ್ ಪ್ರತಿಷ್ಠಾನ ಅಧ್ಯಕ್ಷರಾದ ಶ್ರೀಮತಿ ಸುಧಾಮೂರ್ತಿ, ವಿಪ್ರೊ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಅಜೀಂ ಪ್ರೇಮ್‌ಜಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೆಂದ್ರ ಹೆಗ್ಗಡೆ, ಸೇರಿದಂತೆ ಅನೇಕ ಗಣ್ಯಾತಿಗಣ್ಯರಿಗೆ ಸಾಧಕರಿಗೆ ಪ್ರೆಸ್‌ಕ್ಲಬ್ ಆಫ್ ಬೆಂಗಳೂರು ಪ್ರಶಸ್ತಿ ನೀಡಿ ಗೌರವಿಸುತ್ತಾ ಬಂದಿದೆ.

    A.N.Mahesh receives Pride of Karnataka Annual Award