Category: ಜಿಲ್ಲಾ ಸುದ್ದಿ

  • ಭಾರ್ಗವಿ LL.B.’ ಸ್ವಾಭಿಮಾನದ ಮಹಾ ಸಂಘರ್ಷದ ಕಥೆ ತಪ್ಪದೆ ನೋಡಿ!

    ಭಾರ್ಗವಿ LL.B.’ ಸ್ವಾಭಿಮಾನದ ಮಹಾ ಸಂಘರ್ಷದ ಕಥೆ ತಪ್ಪದೆ ನೋಡಿ!

    ಕಲರ್ಸ್ ಕನ್ನಡದಲ್ಲಿ ಹೊಸ ಧಾರಾವಾಹಿ
    ಮಾರ್ಚ್ 3 ರಿಂದ ಸೋಮವಾರದಿಂದ – ಶುಕ್ರವಾರ ರಾತ್ರಿ 8.30ಕ್ಕೆ

    ‘ಭಾರ್ಗವಿ LL. B.’, ತನ್ನ ತಂದೆಯ ಘನತೆಯನ್ನು ಮರಳಿ ಗಳಿಸಲು ಕಾನೂನಿನ ಪ್ರಪಂಚದಲ್ಲಿ ಎಲ್ಲ ಅಡೆತಡೆಗಳನ್ನು ಮೀರಿ
    ಬಲಿಷ್ಠ ಪ್ರಭಾವಶಾಲಿಗಳ ವಿರುದ್ಧ ಹೋರಾಡುವ ಧೀರ ಯುವತಿಯ ಸ್ಫೂರ್ತಿದಾಯಕ ಕತೆ.

    ಕಲರ್ಸ್ ಕನ್ನಡ, ಸದಾ ಪ್ರೇಕ್ಷಕರ ಹೃದಯವನ್ನು ಮುಟ್ಟುವ ಮನಮಿಡಿಯುವ ಕತೆಗಳ ಮೂಲಕ ಜನಪ್ರಿಯವಾಗಿದೆ. ಇದೀಗ, ನ್ಯಾಯ ಮತ್ತು ಅಧಿಕಾರದ ಮುಖಾಮುಖಿಯಾಗುವ ಹೃದಯಸ್ಪರ್ಶಿ ಕತೆ “ ‘ಭಾರ್ಗವಿ LL. B.’ ಅನ್ನು ಪ್ರೇಕ್ಷಕರಿಗೆ ತಲುಪಿಸುತ್ತಿದೆ. ಈ ಬಹುನಿರೀಕ್ಷಿತ ಧಾರಾವಾಹಿ ಮಾರ್ಚ್ 3 ರಿಂದ ಸೋಮವಾರದಿಂದ – ಶುಕ್ರವಾರ ರಾತ್ರಿ 8.30ಕ್ಕೆ ನಿಮ್ಮ ಕಲರ್ಸ್ ಕನ್ನಡದಲ್ಲಿ ಪ್ರಸಾರಗೊಳ್ಳಲಿದೆ.

    ಈ ಕಥೆ, ಧೈರ್ಯಶಾಲಿ ಹಾಗೂ ಮಧ್ಯಮ ವರ್ಗದ ಯುವತಿ ಭಾರ್ಗವಿ ಮತ್ತು ಅತ್ಯಂತ ಪ್ರಭಾವಶಾಲಿ ಮತ್ತು ಬಲಿಷ್ಠ ವಕೀಲ ಜಯಪ್ರಕಾಶ್ ಪಾಟೀಲ್ ನಡುವಿನ ಸ್ವಾಭಿಮಾನದ ಮಹಾ ಸಂಘರ್ಷದ ಕಥೆ ಹೇಳುತ್ತದೆ. ಭಾರ್ಗವಿಯ ಲಾಯರ್ ತಂದೆಯನ್ನು ಕೋರ್ಟಿನಲ್ಲಿ ಹೀನಾಯವಾಗಿ ಅವಮಾನಿಸಿ ತಲೆ ತಗ್ಗಿಸುವ ಹಾಗೆ ಮಾಡಿ ವಕೀಲಿಕೆಯನ್ನೇ ತ್ಯಜಿಸುವಂತೆ ಮಾಡಿದವನು ಜೆ.ಪಿ. ಪಾಟೀಲ್. ತನ್ನ ವೃತ್ತಿಜೀವನದಲ್ಲಿ ಒಂದೇ ಒಂದು ಸೋಲು ಕಾಣದ, ಗೆಲ್ಲಲು ಯಾವುದೇ ಕಾನೂನನ್ನು ಮುರಿಯುವ ಅವನಿಗೆ ವಕೀಲಿಕೆ ಎಂದರೆ ಅಧಿಕಾರ, ಪ್ರಭಾವ ಮತ್ತು ನಿಯಂತ್ರಕ ಶಕ್ತಿ. ಇದರ ತದ್ವಿರುದ್ಧ ಭಾರ್ಗವಿ. ನ್ಯಾಯ ದೊರಕಿಸಿ ಕೊಡಬೇಕಾದ ಸಂಧರ್ಭ ಬಂದಾಗ ಅವಳು ಯಾರನ್ನಾದರೂ ಎದುರಿಸಬಲ್ಲವಳು. ಅಧಿಕಾರ, ಹಣ, ಪ್ರಭಾವ ಇದ್ಯಾವುದಕ್ಕೂ ಕಿಂಚಿತ್ತೂ ಬೆಲೆ ಕೊಡದ ಅವಳು ನ್ಯಾಯಪರ, ಯಾರಿಗೂ ಹೆದರದ ದಿಟ್ಟ ಯುವತಿ. ತನ್ನ ಪ್ರೀತಿಯ ಅಪ್ಪ ಅಮ್ಮ ಮತ್ತು ತನ್ನ ಪುಟ್ಟ ಕುಟುಂಬವೇ ಅವಳ ಜೀವನ. ಭಾರ್ಗವಿಯ ಅಪ್ಪ ರವೀಂದ್ರ ಭಟ್ಕಳ್ ಕೂಡಾ ವಕೀಲನಾಗಿದ್ದು ವೃತ್ತಿಯಲ್ಲಿ ಯಶಸ್ಸು ಕಂಡಿರುವುದಿಲ್ಲ. ಮಗಳ ಕನಸಿಗೆ ತಂದೆ ಪೂರ್ತಿಯಾಗಿ ಬೆಂಬಲ ನೀಡಿದರೂ ಅಮ್ಮನಿಗೆ ಮಾತ್ರ ಲಾಯರ್ ವೃತ್ತಿ ಅನಗತ್ಯ ತೊಂದರೆಗಳನ್ನು ತರಬಹುದು ಎಂಬ ಆತಂಕ. ಮದುವೆಯಾಗಿ ಅವಳು ಸುಖವಾಗಿದ್ದರೆ ಸಾಕು ಅನ್ನುವುದು ಅಮ್ಮನ ಬಯಕೆ.

    ಭಾರ್ಗವಿಯ ಜೀವನ ಅನಿರೀಕ್ಷಿತ ತಿರುವು ಪಡೆಯುವುದು ಅವಳು, ಜೆಪಿ ಪಾಟೀಲ್ ನ ಮಗ ಅರ್ಜುನ್ ಪಾಟೀಲ್ ನನ್ನು ಭೇಟಿ ಮಾಡಿದಾಗ. ಶ್ರೀಮಂತ ಕುಟುಂಬದಲ್ಲಿ ಬೆಳೆದರೂ ಸಹೃದಯಿಯಾಗಿರುವ ಅರ್ಜುನ್ ಭಾರ್ಗವಿಯನ್ನು ಮೊದಲ ನೋಟದಲ್ಲೇ ಪ್ರೀತಿಸುತ್ತಾನೆ. ತನ್ನ ತಂದೆ ವಿರುದ್ಧ ಹೋರಾಟ ಮಾಡುತ್ತಿರುವ ವಕೀಲೆ ಎಂಬ ಅರಿವಿರದ ಅರ್ಜುನ್ ಭಾರ್ಗವಿಗೆ ಹತ್ತಿರವಾಗುತ್ತಾನೆ.

    ಇಂಥ ಸನ್ನಿವೇಶದಲ್ಲಿ ತನ್ನ ತಂದೆಯ ಗೌರವವನ್ನು ಮರಳಿ ಗಳಿಸಲು ಮತ್ತು ಅನ್ಯಾಯದ ವಿರುದ್ಧ ಹೋರಾಡಿ ಗೆಲ್ಲಲು ಭಾರ್ಗವಿ ಯಶಸ್ವಿಯಾಗುತ್ತಾಳಾ ಎನ್ನುವುದು ‘ಭಾರ್ಗವಿ LL.B.’ಯ ಮುಖ್ಯ ಕಥಾಹಂದರವಾಗಿದೆ. ‘ಭಾರ್ಗವಿ LL. B.’ -ಸಾಮಾಜಿಕ ಸಂಘರ್ಷ ಮತ್ತು ಕೌಟುಂಬಿಕ ಕಥನ ಹೊಂದಿರುವ ಅತ್ಯಂತ ಶಕ್ತಿಶಾಲಿಯಾಗಿ ನಿರೂಪಿತವಾಗಿರುವ ಎಲ್ಲರೂ ನೋಡಲೇಬೇಕಾದ ಧಾರಾವಾಹಿಯಾಗಿದೆ.

    ದಿಟ್ಟ ಭಾರ್ಗವಿ ಪಾತ್ರದಲ್ಲಿ ರಾಧಾ ಭಗವತಿ, ಅರ್ಜುನ್ ಪಾಟೀಲ್ ಪಾತ್ರದಲ್ಲಿ ಮನೋಜ್ ಕುಮಾರ್ ಕನ್ನಡ ಟೆಲಿವಿಶನ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಜೆಪಿ ಪಾಟೀಲ್ ಪಾತ್ರದಲ್ಲಿ ರಂಗಭೂಮಿಯ ಪ್ರಸಿದ್ಧ ಕಲಾವಿದ ಕೀರ್ತಿ ಭಾನು, ಹಾಗೂ ಕನ್ನಡದ ಖ್ಯಾತ ಕಲಾವಿದರಾದ ಅರುಣಾ ಬಾಲರಾಜ್, ಹನುಮಂತೇ ಗೌಡ, ಸುಜಾತಾ ಅಕ್ಷಯ, ‘ಮಾಯಾಬಜಾರ್’ ಖಾತಿಯ ಚೈತ್ರಾ ರಾವ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

    ‘ಅಂತರಪಟ’ ಧಾರಾವಾಹಿ ಮೂಲಕ ಶಕ್ತಿಶಾಲಿ ಮಹಿಳಾ ಪಾತ್ರ ಗಳನ್ನು ತೆರೆಗೆ ತಂದವರು ನಿರ್ಮಾಪಕಿ ಸ್ವಪ್ನ ಕೃಷ್ಣ, ‘ಭಾರ್ಗವಿ LL.B.’ ಮೂಲಕ ಮತ್ತೊಂದು ಮಹಿಳಾ ಪ್ರಧಾನ ಧಾರಾವಾಹಿಯನ್ನು ಮುಂದಿಡುತ್ತಿದ್ದಾರೆ “ಮುಂಗಾರು ಮಳೆ” ಕೃಷ್ಣ ಈ ಶೋಗೆ ಕ್ರಿಯೇಟಿವ್ ಹೆಡ್ ಆಗಿದ್ದಾರೆ. ಸಂಗೀತ ರಚನೆ ಮತ್ತು ಗಾಯನ ಶಶಾಂಕ್ ಶೇಷಗಿರಿ ಅವರದು, ಹಾಗೂ ಪ್ರಮೋದ ಮರವಂತೆ ಮನಸಿಗೆ ಮುಟ್ಟುವಂತಹ ಸಾಹಿತ್ಯ ರಚಿಸಿದ್ದಾರೆ.

    ಯಾರಿಗೂ ಹೆದರದ, ಅನ್ಯಾಯಕ್ಕೆ ತಲೆ ಬಾಗದ, ನ್ಯಾಯದ ಹಾದಿಯಲ್ಲಿ ತನ್ನ ತಂದೆಯ ಗೌರವ ಮರಳಿಗಳಿಸಲು ತನ್ನದೇ ಛಾಪು ಮೂಡಿಸಬೇಕು ಅನ್ನುವ ಭಾರ್ಗವಿ LL.B.’ ಯು ಅತ್ಯಂತ ಬಿಗಿಯಾದ ನಿರೂಪಣೆ ಮತ್ತು ಪ್ರಬಲ ತಾರಾಗಣದಿಂದ ಜನರಿಗೆ ಅತ್ಯಂತ ಆಪ್ತವಾಗುವ ಧಾರಾವಾಹಿ.

    ಮಾರ್ಚ್ 3 ರಿಂದ ಸೋಮವಾರ-ಶುಕ್ರವಾರ ರಾತ್ರಿ 8:30ಕ್ಕೆ ಕಲರ್ಸ್ ಕನ್ನಡದಲ್ಲಿ ನ್ಯಾಯಕ್ಕಾಗಿ ಹೋರಾಡುವ ದಿಟ್ಟ ‘ಭಾರ್ಗವಿ ‘LL.B.’ಯ ಸ್ವಾಭಿಮಾನದ ಸಂಘರ್ಷದ ಕತೆ  ತಪ್ಪದೆ ನೋಡಿ!

    Bhargavi LL.B

  • ನಮ್ಮ ದೇಶದ ಭವಿಷ್ಯ ಯುವ ಜನತೆ ಕೈಯಲ್ಲಿದೆ

    ನಮ್ಮ ದೇಶದ ಭವಿಷ್ಯ ಯುವ ಜನತೆ ಕೈಯಲ್ಲಿದೆ

    ಚಿಕ್ಕಮಗಳೂರು: ನಮ್ಮ ದೇಶದ ಭವಿಷ್ಯ ಯುವ ಜನತೆಯ ಕೈಯಲ್ಲಿದೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ನಾವು ಈ ಉದ್ಯೋಗ ಮೇಳವನ್ನು ಹಮ್ಮಿಕೊಂಡಿದ್ದೇವೆ ಎಂದು ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.

    ನಗರದ ಐ.ಡಿ.ಎಸ್.ಜಿ. ಸರ್ಕಾರಿ ಕಾಲೇಜಿನಲ್ಲಿ ಭಾನುವಾರ ಸಂಕಲ್ಪ ಯೋಜನೆಯ ಸರ್ವರಿಗೂ ಉದ್ಯೋಗ ಕಾರ್ಯಕ್ರಮದಡಿ ಜಿಲ್ಲಾ ಮಟ್ಟದ ಕೌಶಲ್ಯ ರೋಜ್ ಗಾರ್ ಉದ್ಯೋಗ ಮೇಳ-೨೦೨೫ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ರಾಜ್ಯದಲ್ಲಿರುವ ನಿರುದ್ಯೋಗ ಯುವಕ ಯುವತಿಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದರು.

    ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಯಾವುದೇ ಪದವಿ, ಡಿಪ್ಲೋಮಾ ಪೂರೈಸಿರುವಂತಹ ವಿದ್ಯಾರ್ಥಿಗಳು ತಮ್ಮ ಮೂಲ ದಾಖಲೆಗಳೊಂದಿಗೆ ಇಂದು ನಡೆಯುತ್ತಿರುವ ಉದ್ಯೋಗ ಮೇಳದಲ್ಲಿ ಭಾಗವಹಿಸಿ ತಮ್ಮ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗ ಮೇಳದ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದರು.

    ಅವರಿಗೆ ಮುಂದೆ ತಮ್ಮ ಕಾಲಮೇಲೆ ತಾವು ನಿಂತುಕೊಳ್ಳಲು ನಾವು ತಯಾರು ಮಾಡುತ್ತಿದ್ದೇವೆ ಎಂದು ಈ ಸಂದರ್ಭದಲ್ಲಿ ಅವರು ಹೇಳಿದರು. ಬಂದಿರುವಂತಹ ಎಲ್ಲಾ ನಿರುದ್ಯೋಗ ಯುವಕ ಯುವತಿಯರಿಗೆ ಈ ಉದ್ಯೋಗ ಮೇಳದಲ್ಲಿ ಪ್ರತಿಯೊಬ್ಬರಿಗೂ ಉದ್ಯೋಗ ಸಿಗಲೆಂದು ಹಾರೈಸುತ್ತೇನೆ ಎಂದು ಹೇಳಿದರು.

    ಜಿ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೆಚ್.ಎಸ್ ಕೀರ್ತನಾ ಮಾತನಾಡಿ ನಾವು ಮಾಡುವ ಕೆಲಸದ ಮೇಲೆ ನಮಗೆ ಮೊದಲು ಗೌರವವಿರಬೇಕು. ಸಣ್ಣ ಕೆಲಸವೇ ಇರಲಿ , ದೊಡ್ಡ ಕೆಲಸವೇ ಇರಲಿ ಅದನ್ನು ಶ್ರಧ್ದೆಯಿಂದ ಮಾಡಿದರೆ ಯಶಸ್ಸು ಕಾಣಲು ಸಾಧ್ಯ. ಜಿಲ್ಲೆಯನ್ನು ಸಂಪೂರ್ಣವಾಗಿ ನಿರುದ್ಯೋಗ ಮುಕ್ತಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಿಂದ ಎಲ್ಲರಿಗೂ ಉದ್ಯೋಗ ಅವಕಾಶ ಸಿಗಲಿ ಎಂದು ಹೇಳಿದರು.

    ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಎಂ.ಸಿ. ಶಿವಾನಂದ ಸ್ವಾಮಿ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣ ಅವಕಾಶ ಇಂತಹ ಉದ್ಯೋಗ ಮೇಳದಿಂದ ಅವರಿಗೆ ಉದ್ಯೋಗದ ಅವಕಾಶ ದೊರಕುವಂತಾಗುತ್ತದೆ ಎಂದು ಹೇಳಿದರು.

    ಕ. ರಾ. ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ ಅಧ್ಯಕ್ಷರಾದ ಬಿ.ಹೆಚ್. ಹರೀಶ್ ಮಾತನಾಡಿ ತಮ್ಮ ಪದವಿಗೆ ತಕ್ಕಂತೆ ಉದ್ಯೋಗ ನಿಮಗೆ ಈ ಕಾರ್ಯಕ್ರಮದಿಂದ ಸಿಗಲಿ ಹಾಗೂ ಇದನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಗುರಿಯನ್ನು ಸಾಧಿಸಿಕೊಳ್ಳಿ ಎಂದು ಹೇಳಿದರು.

    ಜಿಲ್ಲಾ ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ದೇವೇಂದ್ರ ಅವರು ಮಾತನಾಡಿ ಎಲ್ಲರೂ ತಮ್ಮದೇ ಆದ ಕೌಶಲ್ಯ ಹೊಂದಿರುತ್ತಾರೆ. ಆ ಕೌಶಲ್ಯಕ್ಕೆ ತಕ್ಕ ವೇದಿಕೆ ಸಿಗದೇ ನಿರುದ್ಯೋಗಿಗಳಾಗಿರುತ್ತಾರೆ. ಅಂತವರಿಗೆ ಇದೊಂದು ಒಳ್ಳೆಯ ವೇದಿಕೆಯಾಗಿದೆ ಇದರ ಪ್ರಯೋಜನ ಪಡೆದುಕೊಂಡು ತಮ್ಮ ಕನಸ್ಸನ್ನು ನನಸಾಗಿಸಿಕೊಳ್ಳಿ ಎಂದು ಹೇಳಿದರು.

    ಜಿಲ್ಲಾ ಕೌಶಲ್ಯಾಭಿವೃಧ್ಧಿ ಇಲಾಖೆ ಅಧಿಕಾರಿ ಪ್ರಶಾಂತ್ ಹೆಚ್.ಸಿ ಅವರು ಪ್ರಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಐ.ಡಿ.ಎಸ್.ಜಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಪುಷ್ಪಭಾರತಿ ಆರ್.ಎ, ವಿವಿಧ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

    District Level Skill Roj Gar Job Fair-2025

     

  • ವಿಜೃಂಭಣೆಯಿಂದ ಜರುಗಿದ ಹೊರನಾಡಿನ ಅನ್ನಪೂರ್ಣೇಶ್ವರಿ ರಥೋತ್ಸವ

    ವಿಜೃಂಭಣೆಯಿಂದ ಜರುಗಿದ ಹೊರನಾಡಿನ ಅನ್ನಪೂರ್ಣೇಶ್ವರಿ ರಥೋತ್ಸವ

    ಮೂಡಿಗೆರೆ: ಕಳಸ ತಾಲ್ಲೂಕಿನ ಹೊರನಾಡಿನ ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವದ ರಥೋತ್ಸವವು ಭಾನುವಾರ ವಿಜೃಂಭಣೆಯಿಂದ ನೆರೆವೇರಿತು.

    ಭಾನುವಾರ ಬೆಳಿಗ್ಗೆ ಪೂಜೆಯ ನಂತರ ಉತ್ಸವ ಮೂರ್ತಿಯ ಸುತ್ತು ಸೇವೆ ನಡೆದು ನಂತರ ಸ್ತುತಿ ಪಾಠಕರು ಸ್ತುತಿ ಘೋಷಗಳನ್ನು ಪಟಿಸುತ್ತಾ,ಛತ್ರಿ ಛಾಮರ ಮಂಗಳವಾದ್ಯಗಳೊಂದಿಗೆ ಹೂವಿನ ಅಲಂಕಾರದೊಂದಿಗೆ ಸಿಂಗರಿಸಿ ಶ್ರೀ ದೇವರ ಉತ್ಸವ ಮೂರ್ತಿಯನ್ನು ಹೊತ್ತುಕೊಂಡು ಸುಂದರವಾಗಿ ಅಲಂಕರಿಸಿದ ಬ್ರಹ್ಮರಥದ ಬಳಿ ದೇವರನ್ನು ತರಲಾಯಿತು. ರಥದಬಳಿ ಬಂದ ಜಗನ್ಮಾತೆ ಅನ್ನಪೂರ್ಣೇಶ್ವರಿಯನ್ನು ಭವ್ಯ ರಥದಲ್ಲಿ ಕುಳ್ಳಿರಿಸಿ ಪೂಜೆಯನ್ನು ಮಾಡಲಾಯಿತು.

    ಶ್ರೀ ಕ್ಷೇತ್ರ ಹೊರನಾಡಿನ ಧರ್ಮಕರ್ತ ಡಾ.ಜಿ.ಭೀಮೇಶ್ವರ ಜೋಷಿ ಮಾತನಾಡಿ ವರ್ಷವಿಡಿ ಗರ್ಭಗುಡಿಯಲ್ಲಿ ರುವ ದೇವರು ಬರುವಂತ ಭಕ್ತರಿಗೆ ದರ್ಶನ ಕೊಡುತ್ತಾಳೆ. ರಥೋತ್ಸವದ ವಿಷೇಶ ದಿನದಲ್ಲಿ ಜಗನ್ಮಾತೆಯು ಹೊರಬಂದು ದಿವ್ಯ ರಥದಲ್ಲಿ ಕುಳಿತು ಭಕ್ತರಿಗೆ ದರ್ಶನ ನೀಡುವುದೇ ರಥೋತ್ಸವದ ವಿಷೇಶವಾಗಿದೆ ಎಂದು ತಿಳಿಸಿದರು.

    ಶ್ರೀ ಕ್ಷೇತ್ರದ ಹೊರನಾಡು ಅನ್ನಪೂರ್ಣೆಶ್ವರಿ ಅಮ್ಮನವರ ದಿವ್ಯ ರಥೋತ್ಸವದಲ್ಲಿ ಪಾಲ್ಗೊಂಡ ಭಕ್ತರಿಗೆ ರಥೋತ್ಸವದ ವಿವರಣೆ ನೀಡಿದ ಅವರು. ಶ್ರೀಕ್ಷೇತ್ರ ದಲ್ಲಿ ನಡೆಯುವ ರಥೋತ್ಸವದಲ್ಲಿ ಭಕ್ತರಿಗೆ ದೇವರ ದರ್ಶನ, ದೇವತಾ ಸಾನಿದ್ಯ ಮತ್ತು ದೇವರ ಸೇವಾ ಕಾರ್ಯವು ನೇರ ವಾಗಿ ಲಭಿಸುವುದು. ಕ್ಷೇತ್ರಕ್ಕೆ ಬರುವ ಪ್ರತಿಯೊಬ್ಬ ಭಕ್ತರು ಏಕ ಮನಸ್ಸಿನಿಂದ ಜಾತಿ ಭೇದ ಮರೆತು ಭಕ್ತಿ ಪ್ರಧಾನವಾಗಿ ರಥವನ್ನು ಎಳೆ ಯುವುದರೊಂದಿಗೆ ದೇವರ ಕೃಪೆಗೆ ಪಾತ್ರರಾಗುತ್ತಾನೆ ಎಂದರು.

    ರಥೋತ್ಸವಗಳಿಗೂ ಮಾನವ ಜೀವನದ ರಥಕ್ಕೂ ಒಂದಕ್ಕೊಂದು ಸಂಭಂಧವಿದೆ. ಜೀವನ-ಬದುಕು ಎಂಬ ರಥದಲ್ಲಿ ಸಂಸಾರದ ಒಳಗಿ ರುವ ಎಲ್ಲರು. ಏಕ ಮನಸ್ಸಿನಿಂದ ರಥವನು ಎಳೆದಾಗ ಹೇಗೆ ನಿರ್ದಿಷ್ಟ ಗುರಿ ತಲುಪಲು ಸಾಧ್ಯವೋ ಹಾಗೆಯೇ ದೇವರ ರಥವನ್ನು ನಿಶ್ಕಲ್ಮಷದಿಂದ ಭಕ್ತಿಭಾವದಿಂದ ಎಳೆದಲ್ಲಿ ಒಳಗಿನ ಪರಮಾತ್ಮನನ್ನು ಕಾಣಲು ಸಾಧ್ಯ ಎಂದರು.

    ರಥಗಳಲ್ಲಿ ದೇವರು ಕುಳಿತಾಗ ಅದು ಪ್ರತಿಯೊಬ್ಬ ಮನುಷ್ಯನು ಹಂತಹಂತವಾಗಿ ಗುರಿ ತಲುಪುವುದರ ಮೂಲಕ ಎತ್ತರಕ್ಕೆ ಬೆಳೆಯ ಬೇಕೆಂಬ ಸಂದೇಶವನ್ನು ನೀಡುತ್ತದೆ. ರಥೋತ್ಸವ ಎಂದರೆ ಅದು ಒಂದು ಹಬ್ಬದ ವಾತವಾರಣ. ರಥೋತ್ಸವಕ್ಕೆ ಬರುವ ಭಕ್ತರು ರಥೋತ್ಸವದ ನೆನಪಿಗಾಗಿ ದೇವಾಲಯದ ಸುತ್ತಲು ವಸ್ತುಗಳನ್ನು ಖರಿದಿಸುವುದು ಒಂದು ವಿಶೇಷ .ರಥೋತ್ಸವದಲ್ಲಿ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ಅಮ್ಮನವರ ಕೃಪೆಗೆ ಪಾತ್ರರಾದರು ಎಂದು ಹೇಳಿದರು.

    ಈ ಸಂದರ್ಭದಲ್ಲಿ ಅಂಕರಕಣ ಗಣಪತಿ ದೇವಾಲಯದ ಧರ್ಮಕರ್ತ ರಾಮನಾರಾಯಣ ಜೋಷಿ, ರಾಜಗೋಪಾಲ ಜೋಷಿ, ಗಿರೀಜಾ ಶಂಕರ್ ಜೋಷಿ ಕುಟುಂಬ ಪಾಲ್ಗೊಂಡು ರಥೋತ್ಸವವನು ಯಶಸ್ವಿಗೊಳಿಸಿದರು. ರಾಜಲಕ್ಷೀ ಭಿ ಜೋಸಿ ಮತ್ತು ಕುಟುಂಬವರ್ಗದವರು ಮಹಿಳೆಯರಿಗೆ ಬಳೆ ಮತ್ತು ರವಿಕೆ ಕಣವನ್ನು ವಿತರಿಸಿದರು.

    ಅಲಂಕೃತಗೊಂಡ ಭವ್ಯ ಬ್ರಹ್ಮ ರಥವನ್ನು ಶ್ವೇತ ವಸ್ತ್ರದಾರಿಗಳಾದ ಭಕ್ತಾದಿಗಳು ಎಳೆದರು.ರಥವೇರಿ ಕುಳಿತ ದೇವರೂ ತನ್ಮಯರಾಗಿ,ಚಿನ್ಮಯ ಮೂರ್ತಿಯಾಗಿ ಕಂಗೊಳಿಸುತ್ತಿದ್ದರು.ಈ ಒಂದು ಸುಂದರ ದೃಶ್ಯವನ್ನು ಭಕ್ತರು ಭಕ್ತಿಯಿಂದ ಕಣ್ತುಂಬಿಸಿಕೊಂಡರು

    Horanadu Annapoorneshwari Chariot Festival

  • ಸಿರಿಧಾನ್ಯ ಉತ್ಪನ್ನಗಳ ಬಳಕೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ

    ಸಿರಿಧಾನ್ಯ ಉತ್ಪನ್ನಗಳ ಬಳಕೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ

    ಚಿಕ್ಕಮಗಳೂರು: ಕಲಬೆರಕೆ ಆಹಾರ ಪದಾರ್ಥಗಳ ಹಾವಳಿಯಿಂದ ಆತಂಕ ಪಡುತ್ತಿರುವ ಸಂದರ್ಭದಲ್ಲಿ ಸಿರಿಧಾನ್ಯ ಉತ್ಪನ್ನಗಳ ಬಳಕೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

    ಅವರು ನಗರದ ಪಾಂಚಜನ್ಯ ಸಭಾಂಗಣದಲ್ಲಿ ಬೆಳವಾಡಿಯ ತೃಪ್ತಿ ಸಿರಿಧಾನ್ಯ ಸರಿ ಸಂಸ್ಥೆ, ಚಿಕ್ಕಮಗಳೂರು ಆರ್ಟ್ ಸೊಸೈಟಿ ಹಾಗೂ ಚಿತ್ರಕಲಾ ಶಿಕ್ಷಕರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ತೃಪ್ತಿ ಸಿರಿಧಾನ್ಯ ಸರಿ ಉತ್ಪನ್ನಗಳ ಬಿಡುಗಡೆ ಹಾಗೂ ಚಿತ್ರಕಲಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

    ಕಲಬೆರಕೆ ಇಲ್ಲದ ವಸ್ತುಗಳನ್ನು ಮಾರಾಟ ಮಾಡಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿಗೆ ವ್ಯವಸ್ಥೆ ತಲುಪಿದೆ. ಮುಖಕ್ಕಿಂತ ಮುಖವಾಡಕ್ಕೆ ಹೆಚ್ಚು ಪ್ರಚಾರ ಸಿಗುವಂತಾಗಿದೆ. ನಮ್ಮ ಯೋಚನೆ ಮತ್ತು ವಿಚಾರ ಎರಡೂ ವ್ಯವಸ್ಥೆಯ ಹತ್ತಿರಕ್ಕಿರಬೇಕು ಎಂದು ಅವರು ತಿಳಿಸಿದರು.

    ಕರ್ನಾಟಕ ಸರ್ಕಾರದಲ್ಲಿ ಆಹಾರ ಉತ್ಮನ್ನಗಳ ಗುಣ ಮಟ್ಟ ಪರೀಕ್ಷೆಗೆ ನಾಲ್ಕು ಪ್ರಯೋಗಾಲಯಗಳಿವೆ. ಹಣ್ಣುಗಳಿಗೆ ವಿಷಯುಕ್ತ ರಾಸಾಯನಿಕಗಳನ್ನು ಬೆರೆಸಿ ಬಣ್ಣ ಹೆಚ್ಚಿಸುವುದು ಸೇರಿದಂತೆ ಇತರೆ ಕಲಬೆರಕೆಗಳನ್ನು ಅದು ಪರೀಕ್ಷಿಸಬೇಕು. ಆದರೆ ಆ ನಾಲ್ಕೂ ಲ್ಯಾಬ್‌ಗಳು ಸಹ ಹಾಳಾಗಿವೆ ಸರಿಯಾದ ವರದಿ ಕೊಡುವ ಸ್ಥಿತಿಯಲ್ಲಿಲ್ಲ ಎಂದು ವರದಿಗಳು ಹೇಳುತ್ತವೆ. ಈ ರೀತಿ ಹಾಳುವ ಮಾಡುವ ವರ್ಗವೇ ಇದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಆಹಾರದ ಬಗ್ಗೆ ಆತಂಕ ಪಡುತ್ತಿರುವ ಸಂದರ್ಭದಲ್ಲಿ ಸಿರಿಧಾನ್ಯ ಉತ್ಪನ್ನಗಳ ಬಳಕೆ ಸೂಕ್ತ ಎಂದರು.

    ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ನಮ್ಮ ನಿಜವಾದ ಆಹಾರ ಪದ್ಧತಿಯನ್ನು ಮರೆತ ಕಾರಣಕ್ಕೆ ಜಿಗಿದಾಡಬೇಕಾದ ವಯಸ್ಸಿನಲ್ಲೇ ಕಾಯಿಲೆ ತಂದುಕೊಳ್ಳುತ್ತಿದ್ದೇವೆ. ಆಹಾರ ಔಷಧಿ ಆಗುವ ಬದಲಿಗೆ, ಔಷಧಿಯೇ ಆಹಾರವಾಗಿ ಬದಲಾಗಿರುವುದರ ಪರಿಣಾಮ ಇದು. ಮತ್ತೆ ಪಕೃತಿಯ ಜೊತೆಗೆ ನಮ್ಮ ಬದುಕನ್ನು ಪುನರ್ ಸ್ಥಾಪಿಸುವುದೊಂದೇ ಅದಕ್ಕಿರುವ ಪರಿಹಾರ ಎಂದು ಹೇಳಿದರು.

    ವಾತಾ, ಪಿತ್ತ, ಕಫ ಮೂರೂ ಸಮಚಿತ್ತದಲ್ಲಿದ್ದರೆ ನಮಗೆ ಇನ್ನಾವ ವೈದ್ಯರೂ ಬೇಕಿಲ್ಲ. ನಮ್ಮ ಆರೋಗ್ಯ ಕೆಟ್ಟಿತೆಂದು ಮೊದಲು ಸೂಚನೆ ಕೊಡುವುದೇ ಈ ಮೂರು ಸಂಗತಿ. ಅದನ್ನು ನಾವು ಆಹಾರದಲ್ಲೇ ನಿಯಂತ್ರಿಸಿಕೊಳ್ಳಲು ಸಾಧ್ಯವಿದೆ. ಆದರೆ ದುರ್ದೈವ ಆಹಾರವನ್ನೂ ನಾವು ವಿಷಮಯ ಮಾಡಿಬಿಟ್ಟಿದ್ದೇವೆ. ಅಕ್ಕಿ, ತರಕಾರಿ, ಹಣ್ಣು ಬೆಳೆಯುವುದು ಮತ್ತು ಸಂಸ್ಕರಿಸುವ ವೇಳೆ ಬಳಸುವ ರಾಸಾಯನಿಕಗಳು ವಿಷವಾಗಿ ಪರಿಣಮಿಸುತ್ತಿದೆ. ಇದಕ್ಕೆ ಪರಿಹಾರ ಹುಡುಕಿಕೊಳ್ಳಬೇಕಿದೆ. ವಿಚಾರ, ಆಹಾರ ಮತ್ತು ವಿಹಾರಗಳನ್ನು ಸರಿಪಡಿಸಿಕೊಂಡರೆ ಆರೋಗ್ಯ ಸರಿಯಾಗಿಟ್ಟಿಕೊಳ್ಳಲು ಉತ್ತಮ ಮಾರ್ಗ ಎಂದು ಹೇಳಿದರು.

    ವಿಷಮಯ ಆಹಾರದಿಂದ ತಪ್ಪಿಸಿಕೊಳ್ಳುವ ಪುಟ್ಟ ಪ್ರಯತ್ನವನ್ನು ತೃಪ್ತಿ ಸಿರಿಧಾನ್ಯ ಸರಿ ಸಂಸ್ಥೆ ಮಾಡುತ್ತಿದೆ. ಅದನ್ನು ಪ್ರೋತ್ಸಾಹಿಸಿ ಆರೋಗ್ಯ ಸುರಕ್ಷತೆಗೆ ಆಧ್ಯತೆ ನೀಡೋಣ ಎಂದರು.

    ತೃಪ್ತಿ ಸಿರಿಧಾನ್ಯ ಸರಿ ಸಂಸ್ಥೆಯ ರವೀಂದ್ರ ಬೆಳವಾಡಿ ಮಾತನಾಡಿದರು. ಚಿಕ್ಕಮಗಳೂರು ಆರ್ಟ್ ಸೊಸೈಟಿ ಅಧ್ಯಕ್ಷೆ ಲತಾ ರವೀಂದ್ರ ಅಧ್ಯಕ್ಷತೆ ವಹಿಸಿದ್ದರು. ಕೆನರಾ ಬ್ಯಾಂಕ್ ಅಧಿಕಾರಿ ಮನೋಜ್, ಜಂಟೀ ಕೃಷಿ ನಿರ್ದೇಶಕಿ ಎಚ್.ಎಲ್.ಸುಜಾತ, ಶಾಂತಿನಿಕೇತನ ಚಿತ್ರಕಲಾ ವಿದ್ಯಾಲಯದ ಪ್ರಾಂಶುಪಾಲ ವಿಶ್ವಕರ್ಮ ಆಚಾರ್ಯ, ಸಿರಿ ನೇಚರ್‍ಸ್ ರೂಟ್ಸ್‌ನ ರಮೇಶ್ ಇತರರು ಉಪಸ್ಥಿತರಿದ್ದರು. ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜು ಸ್ವಾಗತಿಸಿದರು.

    Trupti Siridhanya Saro product launch and painting competition

  • ಸ್ಪೂರ್ತಿದಾಯಕ ಉಪನ್ಯಾಸ ಆಧ್ಯಾತ್ಮಿಕ ಬಂಧುಗಳಿಗೆ ಆತ್ಮಸಾಕ್ಷಾತ್ಕಾರ

    ಸ್ಪೂರ್ತಿದಾಯಕ ಉಪನ್ಯಾಸ ಆಧ್ಯಾತ್ಮಿಕ ಬಂಧುಗಳಿಗೆ ಆತ್ಮಸಾಕ್ಷಾತ್ಕಾರ

    ಚಿಕ್ಕಮಗಳೂರು:- ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸುವರ್ಣ ಮಹೋತ್ಸವದ ಅಂಗವಾಗಿ ಇಂದು ಜಿಲ್ಲಾ ಆಟದ ಮೈದಾನದಲ್ಲಿ ಆಯೋಜಿಸಲಾಗಿದ್ದ ಬ್ರಹ್ಮಕುಮಾರಿ ಶಿವಾನಿ ದೀದೀಜಿಯವg ಸ್ವಾಸ್ಥ್ಯ,ಸಾಮರಸ್ಯ, ಹಾಗೂ ಸಂತೋಷ ಜೀವನಕ್ಕೆ ಜಾಗೃತಿ ಮೂಡಿಸುವ ಸ್ಪೂರ್ತಿದಾಯಕ ಉಪನ್ಯಾಸ ಸೇರಿದ್ದ ಆಧ್ಯಾತ್ಮಿಕ ಬಂಧುಗಳಿಗೆ ಆತ್ಮಸಾಕ್ಷಾತ್ಕಾರಗೊಳಿಸುವಲ್ಲಿ ಯಶಸ್ವಿಯಾಯಿತು.

    ಶನಿವಾರ ಮುಂಜಾನೆ ಯಿಂದಲೇ ಸುಭಾಷ್ ಚಂದ್ರಭೋಸ್ ಆಟದ ಮೈದಾನದಲ್ಲಿ ಹಾಕಿದ್ದ ಬೃಹತ್ ಪೆಂಡಾಲಿನಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಜಿಲ್ಲಾಸಂಚಾಲಕಿ ಭಾಗ್ಯಕ್ಕನವರ ಮಾರ್ಗದರ್ಶನದಲ್ಲಿ ಆಧ್ಯಾತ್ಮಿಕ ಪ್ರವಚನಗಳು ಆರಂಭಗೊಂಡವು.

    ಸುಮಾರು ೯.೩೦ರ ಸುಮಾರಿಗೆ ಸಾಂಕೇತಿಕವಾಗಿ ಉದ್ಘಾಟನೆಗೊಂಡ ಕಾರ್ಯಕ್ರಮದಲ್ಲಿ ಸುಮಾರು ಎರಡೂವರೆ ಗಂಟೆಗಳ ಕಾಲ ಬ್ರಹ್ಮಕುಮಾರಿ ಶಿವಾನಿ ದೀದೀಜಿಯವರ ನೀಡಿದ ಆಧ್ಯಾತ್ಮಿಕ ಪ್ರವಚನವನ್ನು ಕಣ್ಣು,ಕಿವಿ, ಮನಸ್ಸುಗಳನ್ನು ಕೇಂದ್ರಿಕರಿಸಿ ಬಹು ನಿಶ್ಯಬ್ಧತೆಯಿಂದ ಕುಳಿತು ಕೇಳಿಸಿಕೊಂಡ ನೂರಾರು ಸಂಖ್ಯೆಯ ಆಸ್ತಿಕರೊಳಗಿನ ಆಧ್ಯಾತ್ಮಿಕ ಚಿಂತನೆಗಳು ಜಾಗೃತಗೊಂಡವು.

    ಮಲಗುವ ಮೊದಲು ಮತ್ತು ನಿದ್ರೆಯಿಂದ ಎದ್ದ ನಂತರದ ಒಂದು ಗಂಟೆಗಳ ಕಾಲ ಟಿವಿ ಮತ್ತು ಮೊಬೈಲ್ ಗಳಿಂದ ದೂರವಿದ್ದು ಸಕಾರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದ ದೀದಿಜಿ ಮಲಗುವ ಮುನ್ನ ಮತ್ತು ಬೆಳಗ್ಗೆ ಎದ್ದ ನಂತರದ ಆ ಒಂದು ಗಂಟೆಯ ಅವಧಿ ಮನಸ್ಸು ಶಾಂತವಾಗಿರುವ ಸಮಯವಾದ್ದರಿಂದ ಪರಮಾತ್ಮನ ಧ್ಯಾನ ಮಾಡುವ ಮೂಲಕ ಆತ್ಮಸಂತೋಷ ಹೊಂದಬೇಕು ಎಂದು ಹೇಳಿದರು.

    ಇತ್ತೀಚಿನ ದಿನಗಳಲ್ಲಿ ಮನುಷ್ಯನ ಜೀವನಕ್ಕೆ ಮೊಬೈಲ್ ಅತ್ಯವಶ್ಯಕವಾಗಿದ್ದರೂ ಸಹ ಅವಶ್ಯಕತೆಗಷ್ಟೆ ಬಳಸುತ್ತೇವೆ ಎಂದು ಪ್ರತಿಯೊಬ್ಬರು ಸಂಕಲ್ಪಿಸಬೇಕಿದೆ ಎಂದು ಹೇಳಿದ ಅವರು ಇಂದಿನ ಮಕ್ಕಳು ಹುಟ್ಟಿನಿಂದಲೇ ಮೊಬೈಲ್ ಗೀಳಿಗೆ ಬಿದ್ದು ಹೇಳಿದ ಮಾತು ಕೇಳಿದೆ,ಸಿಟ್ಟು ಸೆಡವು ಗಳಿಗೆ ಬಲಿಯಾಗಿ,ಅಧ್ಯಯನದಲ್ಲಿಯೂ ಹಿಂದೆ ಉಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಆ ಹಿನ್ನೆಲೆಯಲ್ಲಿ ಟಿವಿ ಮತ್ತು ಮೊಬೈಲ್ ಮನುಷ್ಯನ ನೆಮ್ಮದಿ ಹಾಳು ಮಾಡುತ್ತಿದ್ದು ಮೊಬೈಲ್ ಗೀಳಿಯಿಂದ ಹೊರ ಬರುವಂತೆ ಪೋಷಕರು ಮಕ್ಕಳಿಗೆ ಹೇಳುವ ಮೊದಲು ತಾವು ಆ ಗೀಳಿನಿಂದ ಹೊರಬರುವ ಸಂಕಲ್ಪ ತೊಡಬೇಕಿದೆ ಎಂದು ಹೇಳಿದರು.

    ಇತ್ತೀಚಿನ ದಿನಗಳಲ್ಲಿ ಮನೆಗಳಲ್ಲಿ ಊಟ ಮಾಡುವಾಗ ಮೊಬೈಲ್ ಗಳನ್ನು ನೋಡುತ್ತಲೇ ಊಟ ಮಾಡುವುದು,ದೂರದರ್ಶನಗಳನ್ನು ನೋಡುತ್ತದೆ ಊಟ ಮಾಡುವುದರಿಂದ ಅವುಗಳಲ್ಲಿ ಬಿತ್ತರವಾಗುವ ನಕಾರತ್ಮಕ ಚಿಂತನೆಗಳು ಮನುಷ್ಯನ ಹೊಟ್ಟೆಗೆ ತಲುಪಿ ಮನುಷ್ಯನ ನಕಾರಾತ್ಮಕತೆಯೆಡೆಗೆ ಸೆಳೆದೊಯ್ಯುತ್ತದೆ ಈ ಬಗ್ಗೆ ಸದಾಜಾಗೃತರಾಗಿರಬೇಕೆಂದರು.

    ಇಂದಿನ ಒತ್ತಡದ ದಿನಮಾನಗಳಲ್ಲಿ ಕುಟುಂಬ ಸಹಿತ ಹೊರಗಿನ ಊಟ ತಿಂಡಿಗಳನ್ನು ಸೇವಿಸುವ ಪರಿಪಾಠ ಬೆಳೆಯುತ್ತಿದೆ ಅದು ತಪ್ಪಬೇಕು. ಪ್ರತಿಯೊಬ್ಬರ ಮನೆಯಲ್ಲಿಯೂತಾವೇ ತಯಾರಿಸುವ ಆಹಾರವನ್ನು ಸೇವಿಸಬೇಕು ಎಂದು ಹೇಳಿದ ಅವರು ಆಹಾರ ತಯಾರಿಸುವವರ ಮನಸ್ಥಿತಿಯೂ ಸಹ ಮನುಷ್ಯನ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ.

    ಸಂತೋಷ,ತೃಪ್ತಿ,ಸ್ವಚ್ಛತೆ ಸ್ವಚ್ಛತೆಯನ್ನು ಆಚರಿಸಿ ತಾವು ತಯಾರಿಸುವ ಆಹಾರವನ್ನು ಪ್ರಸಾದಂತೆ ಸಿದ್ಧಪಡಿಸಿ, ಪ್ರಸಾದಂತೆ ಸೇವಿಸುವ ಮೂಲಕ ತಮ್ಮ ಕುಟುಂಬಗಳನ್ನು ಸಂತೋಷವಾಗಿಟ್ಟು ಕೊಳ್ಳಬಹುದು ಈ ಬಗ್ಗೆ ಮಹಿಳೆಯರು ವಿಶೇಷವಾಗಿ ಗಮನ ಹರಿಸಬೇಕು ಎಂದು ಹೇಳಿದರು.

    ದಿನಮಾನಗಳಲ್ಲಿ ಶಾಂತಿ ಸಹನೆ ಸೇವಾ ಮನೋಭಾವ ಮೈಗೂಡಿಸಿಕೊಳ್ಳುವುದು ಬಹುದೊಡ್ಡ ಸವಾಲಾಗಿ ಪರಿಣಮಿಸಿದ್ದು ತಾವು ಮಾಡುವ ಕೆಲಸದಲ್ಲಿ ಆತ್ಮ ಸಂತೃಪ್ತಿಯನ್ನು ಹೊಂದುವುದರೊಂದಿಗೆ ಪರರ ನಿಂದೆಯಿಂದ ಟೀಕೆಗಳಿಂದ ದೂರವಿದ್ದರೆ ಮನುಷ್ಯನ ಅಗತ್ಯವಿರುವ ಶಾಂತಿಯುತ ಜೀವನ ತಾನೇ ತಾನಾಗಿ ದೊರೆಯುತ್ತದೆ.

    ಯಾರು ಶಾಂತಿ,ಸಹನೆಯನ್ನು ದಯಪಾಲಿಸುತ್ತಾರೋ ಅಂತಹವರು ಈ ಸಮಾಜಕ್ಕೆ ಕೊಡುಗುಗಳ ನೀಡುವ ದೇವರ ಸಮಾನರಾಗುತ್ತಾರೆ ಎಂದು ಹೇಳಿದ ಅವರು ಒಂದು ಹೊಲದಲ್ಲಿ,ಶ್ರದ್ಧೆ,ಪ್ರೀತಿಯಿಂದ ಬೀಜವನ್ನು ಬಿತ್ತಿ ಅದಕ್ಕೆ ಮಂತ್ರೋಧಕದಂತೆ ನೀರೆರದು ಅದರ ಪೋಷಣೆ ಮಾಡುವ ರೈತನ ಸೇವೆಗೆ ಬೆಳೆಯು ಸಹ ಉತ್ಕೃಷ್ಟವಾಗಿ ಬರುತ್ತದೆ. ಆದರೆ ವ್ಯಾವಹಾರಿಕ ದೃಷ್ಟಿಯಿಂದ ಮಾಡುವ ವ್ಯವಸಾಯವು ಸಹ ಸಮಾಜಕ್ಕೆ ಮಾರಕವಾದ ಬೆಳೆ ತಂದುಕೊಡುತ್ತದೆ ಎಂದು ದೃಷ್ಟಾಂತದ ಮೂಲಕ ವಿವರಿಸಿದರೂ.

    ಈ ಕಾರ್ಯಕ್ರಮದಲ್ಲಿ ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯಶ್ರೀಗಳು, ,ಬೇರುಗಂಡಿಮಠದ ಶ್ರೀಗಳು, ಚಂದ್ರಶೇಖರ ಶಿವಾಚಾರ್ಯ ಶ್ರೀಗಳು,ಜಯಬಸವಾನಂದ ಶ್ರೀಗಳು,ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಜಿಲ್ಲಾ ಸಂಚಾಲಕಿ ಭಾಗ್ಯಕ್ಕ, ವಿಧಾನಪರಿಷತ್ ಸದಸ್ಯರಾದ ಸಿ.ಟಿ ರವಿ.ಎಸ್.ಎಲ್ ಬೋಜೇಗೌಡ,ಕಾಂಗ್ರೆಸ್ ಮುಖಂಡ ಡಾ.ವಿಜಯ್ ಕುಮಾರ್,ಎ.ಐ.ಟಿ ಕಾಲೇಜಿನ ಉಪಕುಲಪತಿ ಸಿ.ಕೆಸುಬ್ಬರಾಯ,ಸಿ.ಟಿ ಜಯದೇವ, ಮಕ್ಖಲವೈದ್ಯ ಜೆಪಿ ಕ್ರಷ್ಣೇಗೌಡ ಪೋಲೀಸ್ ವರಿಷ್ಟಾಧಿಕಾರಿ ವಿಕ್ರಮ್ ಅಮಟೆ,ವಿದ್ಯಾಲಯದ ವಿಧ್ಯಾರ್ಥಿ ನಂದಕುಮಾರ್ ಸೇರಿದಂತೆ ಹಲವರಿದ್ದರು.

    Inspirational Lecture Self-Realization for Spiritual Brothers

  • ಭಾರತ ಆಧ್ಯಾತ್ಮಿಕ ಸಂಪದ್ಭರಿತವಾಗಿದ್ದು, ಜಗತ್ತು ಗೌರವದಿಂದ ನೋಡುತ್ತಿದೆ

    ಭಾರತ ಆಧ್ಯಾತ್ಮಿಕ ಸಂಪದ್ಭರಿತವಾಗಿದ್ದು, ಜಗತ್ತು ಗೌರವದಿಂದ ನೋಡುತ್ತಿದೆ

    ಚಿಕ್ಕಮಗಳೂರು: ಭಾರತ ಪ್ರಾಕೃತಿಕ, ಆಧ್ಯಾತ್ಮಕ, ಧಾರ್ಮಿಕ, ಸಾಂಸ್ಕೃತಿಕವಾಗಿ ಸಂಪದ್ಭರಿತ ದೇಶವಾಗಿದ್ದು, ಇಡೀ ಜಗತ್ತು ಅತ್ಯಂತ ಗೌರವದಿಂದ ನೋಡುವಂತಹ ಆಧ್ಯಾತ್ಮಿಕ ಆತ್ಮ ತೃಪ್ತಿಯನ್ನು ಹೊಂದಿದೆ ಎಂದು ಸುತ್ತೂರು ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಹೇಳಿದರು.

    ಅವರು ಇಂದು ಇಲ್ಲಿನ ಬಸವತತ್ವ ಪೀಠದಲ್ಲಿ ಏರ್ಪಡಿಸಲಾಗಿದ್ದ ಬಸವತತ್ವ ಸಮಾವೇಶ ಹಾಗೂ ಶ್ರೀಮಠದ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಚಿಕ್ಕಮಗಳೂರು ಜಿಲ್ಲೆ ಸೌಂದರ್ಯಭರಿತವಾಗಿದ್ದು, ಮಲೆನಾಡು, ಬಯಲು ಪ್ರದೇಶ ಹೊಂದಿರುವ ಅಪರೂಪದ ಜಿಲ್ಲೆ. ಐತಿಹಾಸಿಕ, ಧಾರ್ಮಿಕ ಕೇಂದ್ರಗಳಿರುವುದರ ಜೊತೆಗೆ ನಾನಾ ಕಾರಣಗಳಿಂದ ತನ್ನದೇ ಆದ ಮಹತ್ವ ಪಡೆದುಕೊಂಡಿದ್ದು, ಈ ಜಿಲ್ಲೆಯಲ್ಲಿ ಬಸವತತ್ವ ಪೀಠ ಸ್ಥಾಪನೆಯಾಗಿರುವುದು ಆರ್ಥಪೂರ್ಣ ಎಂದರು.

    ಧರ್ಮ ಎನ್ನುವುದು ಸಾವಿರಾರು ವರ್ಷಗಳ ವಿಕಾಸವಾಗಿದ್ದು ಈ ಬಗ್ಗೆ ಆತ್ಮಸಾಕ್ಷಿ ನಿರಂತರವಾಗಿ ನಡೆದಿದೆ, ದೊಡ್ಡ ಪರಂಪರೆ ದೇಶದಲ್ಲಿ ಬೆಳೆದಿದೆ. ೧೨ನೇ ಶತಮಾನದಲ್ಲಿ ಆಧ್ಯಾತ್ಮಿಕ ತಿರುವು, ಆಧ್ಯಾತ್ಮಕ ಮಗ್ಗಲು ಬದಲಿಸಿದವರು ವಿಶ್ವಗುರು ಬಸವಣ್ಣನವರು. ಅವರ ಬದುಕೇ ಒಂದು ಪ್ರಯೋಗಶಾಲೆಯಾಗಿತ್ತು ಎಂದು ಹೇಳಿದರು.

    ಕಾನೂನಿನ ನೆರಳಿನಿಂದ ಮಾಡಲು ಅಸಾಧ್ಯವಾಗಿರುವುದನ್ನು ಹೃದಯ ವೈಶಾಲ್ಯತೆಯಿಂದ ಸಾಧ್ಯ ಎಂಬುದನ್ನು ಇಡೀ ಜಗತ್ತಿಗೆ ವಚನಗಳ ಮೂಲಕ ತೋರಿಸಿದವರು ಬಸವಣ್ಣ ಎಂದು ಬಣ್ಣಿಸಿದರು.

    ಕರ್ನಾಟಕ ರಾಜ್ಯದ ಸಾಕ್ಷರತೆಯನ್ನು ಗಮನಿಸಿದರೆ ಬೇರೆ ರಾಜ್ಯಗಳಿಗಿಂತ ಸಾಕ್ಷರತೆ ಪ್ರಮಾಣ ಇಲ್ಲಿ ಹೆಚ್ಚಾಗಿದೆ. ರಾಜ್ಯದ ಮಠಮಾನ್ಯಗಳ ಕೊಡುಗೆ ಸಾಕ್ಷರತೆಯ ಬೆಳವಣಿಗೆಗೆ ಪೂರಕವಾಗಿದ್ದು, ಮಠಮಾನ್ಯಗಳು ಲೌಖಿಕ ಬದುಕಿನ ಜೊತೆಗೆ ಆಧ್ಯಾತ್ಮಿಕವನ್ನು ಪಸರಿಸುವ ಜವಾಬ್ದಾರಿಯನ್ನು ಹೊಂದಿದೆ ಎಂದರು.

    ನೂತನ ಕಟ್ಟಡ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠದ ೧೧೦೮ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಬಸವತತ್ವ ಪೀಠದ ಹಳೇ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡಲಾಗಿದೆ. ಹಾಗೆ ಭಕ್ತರು ಹಳೆಯ ಮನಸ್ಸನ್ನು ಕೆಡವಿ ಹೊಸ ಮನಸನ್ನು ಕಟ್ಟಬೇಕು ಆಗಮಾತ್ರ ಬಸವತತ್ವ ಸಮಾವೇಶದ ಆಶೋತ್ತರಗಳು ಪೂರೈಸಿದಂತಾಗುತ್ತದೆ ಎಂದರು.

    ವಿಶ್ವಗುರು ಬಸವಣ್ಣನವರನ್ನು ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ. ಬಸವಣ್ಣನವರ ವ್ಯಕ್ತಿತ್ವ-ಬದುಕು ಒಂದು ಮಗ್ಗಲಿಗೆ ಸಂಬಂಧಿಸಿದ್ದಲ್ಲ. ಸಾಮಾಜಿಕ, ಧಾರ್ಮಿಕ, ಆರ್ಥಿಕ ಚಿಂತನೆಯನ್ನು ಕೊಟ್ಟ ಮಹಾನ್ ಕ್ರಾಂತಿ ಪುರುಷ ಎಂದು ಬಣ್ಣಿಸಿದರು.

    ವಿಶ್ವಗುರು ಬಸವಣ್ಣನವರಿಗೆ ಸಾಂಸ್ಕೃತಿಕ ನಾಯಕ ಎಂಬುದನ್ನು ಮೀರಿಸುವಂತದ್ದು ಅವರ ಸಾಮಾಜಿಕ ಪರಿವರ್ತನೆಯ ಕಾಯಕವಾಗಿದ್ದು, ಇದನ್ನು ಬಹಿರಂಗವಾಗಿ ಪ್ರದಿಪಾಧಿಸುತ್ತೇನೆ ಎಂದು ಹೇಳಿದರು.

    ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ಹೆಚ್.ಡಿ. ತಮ್ಮಯ್ಯ ಸಾಮಾಜಿಕ, ಧಾರ್ಮಿಕ ಭಾವನೆ ಈ ಕ್ಷೇತ್ರದ ಜನರಲ್ಲಿ ಮೂಡಲು ಡಾ. ಬಸವ ಮರುಳಸಿದ್ಧ ಸ್ವಾಮಿಗಳು ಕಾರಣಕರ್ತರಾಗಿದ್ದಾರೆ. ಭಕ್ತರ ಕಡೆ ಗುರುಗಳ ನಡಿಗೆ ಎಂಬ ಬಸವತತ್ವ ಸಮಾವೇಶ ನಡೆಸುವ ಮೂಲಕ ಜನರಲ್ಲಿ ಬಸವಾದಿ ಶರಣರ ತತ್ವಗಳನ್ನು ಮನವರಿಕೆ ಮಾಡಿದ್ದು, ಕೇವಲ ಚಿಕ್ಕಮಗಳೂರಿಗೆ ಸೀಮಿತವಾಗಿದ್ದ ಬಸವತತ್ವ ಪೀಠವನ್ನು ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಈ ಮೂರು ಜಿಲ್ಲೆಗಳಿಗೆ ಶ್ರೀಗಳು ವಿಸ್ತರಿಸಿದ್ದಾರೆ ಎಂದರು.

    ಇಂದು ಒಂದೇ ವೇದಿಕೆಯಲ್ಲಿ ವಿವಿಧ ಮಠದ ಎಂಟು ಜಗದ್ಗುರುಗಳು ಆಸೀನರಾಗಿರುವುದನ್ನು ನೋಡುವುದು ನಮ್ಮೆಲ್ಲರ ಸೌಭಾಗ್ಯ, ಹಿಂದೆ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ್ ಬೊಮ್ಮಾಯಿ ಅವರು ಶ್ರೀಮಠಕ್ಕೆ ೩ ಕೋಟಿ ಅನುದಾನ ನೀಡಿದ್ದರು ಎಂದು ಹೇಳಿದರು.

    ಸರ್ಕಾರಕ್ಕೆ ಸಮಾನವಾಗಿ ವೀರಶೈವ ಲಿಂಗಾಯಿತ ಮಠಗಳು ಜ್ಞಾನ, ಶಿಕ್ಷಣ, ಅನ್ನದಾಸೋಹಗಳನ್ನು ನಡೆಸುತ್ತಾ ಬರುತ್ತಿದ್ದು, ವಚನಗಳ ಮೂಲಕ ಬಸವಣ್ಣ ತಮ್ಮ ತತ್ವಗಳನ್ನು ಸಮಾಜದಲ್ಲಿ ಬಿಂಬಿಸುವ ಮೂಲಕ ಜಗತ್ತಿಗೆ ಬೆಳಕಾಗಿದ್ದರು ಎಂದು ಹೇಳಿದರು.

    ಸರ್ಕಾರದ ೧.೫೦ ಕೋಟಿ ರೂ ಅನುದಾನದ ಜೊತೆಗೆ ಭಕ್ತರ ದೇಣಿಗೆಯಿಂದ ಸುಮಾರು ೩.೫೦ ಕೋಟಿ ರೂ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದೆ ಎಂದರು.

    ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಗುರುವಿನ ನಡಿಗೆ ಭಕ್ತರ ಕಡೆಗೆ ಎಂಬ ವಿನೂತನ ಕಾರ್ಯಕ್ರಮದ ಮೂಲಕ ಡಾ. ಬಸವ ಮರುಳಸಿದ್ಧ ಸ್ವಾಮಿಗಳು ಭಕ್ತರನ್ನು ಸಂಪರ್ಕಿಸಿ ಧರ್ಮ ಜಾಗೃತಿ ಮೂಡಿಸಿ ಭಾವನಾತ್ಮಕ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಿದರು ಎಂದು ತಿಳಿಸಿದರು.

    ಸುಮಾರು ೫೦ ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಬಸವತತ್ವ ಪೀಠ ಇಂದು ಅಸಂಖ್ಯಾತ ಭಕ್ತರನ್ನು ತನ್ನೆಡೆಗೆ ಸೆಳೆಯುತ್ತಿದೆ ಎಂಬುದಕ್ಕೆ ಇಂದು ಇಲ್ಲಿ ಸೇರಿರುವ ಜನಸ್ತೋಮವೇ ಹೇಳುತ್ತಿದೆ ಎಂದರು.

    ಮಠಮಾನ್ಯಗಳು, ಗುರುವರಿಯರು ಸಮಾಜಕ್ಕೆ ಮಾರ್ಗ ತೋರಿಸಲು ಕಾಯಕ ಮಾಡುತ್ತಿವೆ. ಹಿಂದುತ್ವದ ಸನಾತನ ಧರ್ಮದ ವಿಶ್ವಾಸವನ್ನು ವೃದ್ಧಿಗೊಳಿಸುವ ಸಲುವಾಗಿ ರಾಜಕಾರಣಕ್ಕೆ ಬಂದಿದ್ದೇವೆ. ಭೀತಿ ರಾಜಕಾರಣ ಮಾಡದೆ ಪ್ರೀತಿ ರಾಜಕಾರಣವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.

    ಸಿರಿಗೆರೆ ಶ್ರೀಗಳನ್ನು ಆಧುನಿಕ ಭಗೀರಥ ಎಂದು ಕರೆಯುತ್ತಿದ್ದಾರೆ, ಅದಕ್ಕೆ ಅವರು ಕೈಗೊಂಡ ಕೆರೆ ತುಂಬಿಸುವ ಕಾಯಕ ಯೋಜನೆಗೆ ಬಲವಾಗಿ ನಿಂತು ನಮ್ಮಂತವರ ಕಿವಿ ಹಿಂಡಿ ಕೆಲಸ ಮಾಡಿಸಿ ಜನಸಾಮಾನ್ಯರಿಗೆ ನೀರೊದಗಿಸುವ ಕೆಲಸ ಮಾಡಿದ್ದಾರೆಂದು ಶ್ಲಾಘಿಸಿದರು.

    ಆನೆ ಮತ್ತು ಆಸೆ ಎರಡಕ್ಷರದ ಆನೆ ಹೊಟ್ಟೆ ತುಂಬಿಸಿದೆವು ಆದರೆ, ಆಸೆ ಹೊಟ್ಟೆ ತುಂಬಿಸಲಾಗಿಲ್ಲ, ಜನಪ್ರತಿನಿಧಿಗಳಾದವರು ಶಾಸಕರಾದರೆ ಮಂತ್ರಿಯಾಗಬೇಕು, ಮಂತ್ರಿಯಾದರೆ ಮುಖ್ಯಮಂತ್ರಿಯಾಗಬೇಕು ಎಂಬ ರಾಜಕೀಯದ ಹುದ್ದೆ ಆಸೆಗಳ ಬಗ್ಗೆ ವಿವರಿಸಿದರು.

    ಇದೇ ಸಂದರ್ಭದಲ್ಲಿ ಸಿದ್ದ ಸಂಸ್ಥಾನ ಮಠದ ಮನ್ಯಹಾರಾಜ ನಿರಂಜನ ಜಗದ್ಗುರು ಶ್ರೀ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿ, ಶಿವಮೊಗ್ಗದ ಮುರುಗರಾಜೇಂದ್ರ ಸಂಸ್ಥಾನ ಮಠದ ಮಲ್ಲಿಕಾರ್ಜುನ ಮುರುಗರಾಜೇಂದ್ರ ಮಹಾಸ್ವಾಮಿ, ಗದಗದ ಸಿದ್ದರಾಮ ಮಹಾಸ್ವಾಮೀಜಿ, ಪುಷ್ವಗಿರಿಯ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿ, ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್ ವಿಶೇಷ ಉಪನ್ಯಾಸ ನೀಡಿದರು. ಶಾಸಕರಾದ ಎಸ್.ಎಲ್. ಭೋಜೇಗೌಡ, ಡಾ. ಧನಂಜಯ ಸರ್ಜಿ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಕೆ.ಸಿ. ವಿರೂಪಾಕ್ಷ, ಗಾಯಿತ್ರಿಶಾಂತೇಗೌಡ, ಬಿ.ಹೆಚ್. ಹರೀಶ್, ಎಂ.ಸಿ. ಶಿವಾನಂದಸ್ವಾಮಿ, ಮಹಡಿಮನೆ ಸತೀಶ್, ಚಿದಾನಂದ್, ಡಾ. ಎಸ್. ವಿನಾಯಕ್, ಹೆಚ್.ಎಸ್. ರಾಜಶೇಖರ್, ಬಿ.ಆರ್. ಲೋಕೇಶ್, ಎ.ಆರ್. ರವಿ, ಪೌರಾಯುಕ್ತರಾದ ಬಸವರಾಜ್, ಮತ್ತಿತರರು ಉಪಸ್ಥಿತರಿದ್ದರು.

    Inauguration ceremony of the new building of Basavatatva Srimatthi

  • ನಗರದ ರಸ್ತೆಗಳ ಅಭಿವೃದ್ಧಿಗೆ ೧೦ ಕೋಟಿ ರೂ ಅನುದಾನ

    ನಗರದ ರಸ್ತೆಗಳ ಅಭಿವೃದ್ಧಿಗೆ ೧೦ ಕೋಟಿ ರೂ ಅನುದಾನ

    ಚಿಕ್ಕಮಗಳೂರು: -ಒಳಚರಂಡಿ ಮತ್ತು ಅಮೃತ್ ಯೋಜನೆಯಿಂದ ಹಾನಿಗೊಳಗಾಗಿರುವ ನಗರದ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಎಸ್‌ಎಫ್‌ಸಿ ಅನುದಾನದಲ್ಲಿ ೧೦ ಕೋಟಿ ರೂ ಬಿಡುಗಡೆ ಮಾಡಿದ್ದಾರೆಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು.

    ಅವರು ಇಂದು ನಗರಸಭೆಯಲ್ಲಿ ಏರ್ಪಡಿಸಲಾಗಿದ್ದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಚಿಕ್ಕಮಗಳೂರು ನಗರ ಪ್ರವಾಸಿ ತಾಣಗಳ ಕೇಂದ್ರವಾಗಿದ್ದು, ಪಕ್ಷಾತೀತವಾಗಿ ನಗರಸಭೆಯ ಎಲ್ಲಾ ವಾರ್ಡ್‌ಗಳ ರಸ್ತೆಗಳ ಅಭಿವೃದ್ಧಿಗೆ ಈ ಅನುದಾನವನ್ನು ಬಳಸಿ ನಗರದ ಸರ್ವತೋಮುಖ ಅಭಿವೃದ್ಧಿಪಡಿಸುವುದು ಪ್ರಮುಖ ಉದ್ದೇಶವಾಗಿದೆ ಎಂದರು.

    ಮೊದಲ ಆದ್ಯತೆಯಾಗಿ ನಗರದ ಕೆಲವು ಪ್ರಮುಖ ರಸ್ತೆಗಳನ್ನು ಆಯ್ಕೆಮಾಡಿಕೊಂಡು ವಾರ್ಡಿನ ಸದಸ್ಯರು ಪಕ್ಷ ನೋಡದೆ ಅವಶ್ಯಕತೆ ಇರುವಲ್ಲಿ ಮೊದಲ ಆದ್ಯತೆ ನೀಡಿ ಕೆಲಸ ಮಾಡಬೇಕೆಂದು ಸೂಚಿಸಿದರು.

    ಹೆಚ್ಚು ಜನರ ಓಡಾಟ, ಹೆಚ್ಚು ವಾಹನ ದಟ್ಟಣೆ ಇರುವ ರಸ್ತೆಗಳಿಗೆ ಮೊದಲ ಆದ್ಯತೆ ಮೇರೆಗೆ ತೆಗೆದುಕೊಂಡು ಕ್ರಿಯಾಶೀಲ ಯೋಜನೆ ತಯಾರಿಸಿ ಅತೀ ಶೀಘ್ರವಾಗಿ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಸಲಹೆ ನೀಡಿದರು.

    ಮುಂದಿನ ೩ ತಿಂಗಳು ಅಂದರೆ ಮಾಚ್, ಏಪ್ರಿಲ್, ಮೇ ಈ ಮಾಹೆಯ ಒಳಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಅಂದಾಜು ಪಟ್ಟಿ ತಯಾರಿಸಿ ಆಡಳಿತಾತ್ಮಕ ಅನುಮೋದನೆ ಪಡೆದು ಟೆಂಡರ್ ಪ್ರಕ್ರಿಯೆ ಮುಗಿಸಲು ಕಾಲಾವಕಾಶ ಬೇಕು. ಮಳೆಗಾಲ ಆರಂಭವಾಗುವುದರ ಒಳಗಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಿದರೆ ಸಾರ್ಥಕವಾಗುತ್ತದೆ ಎಂದರು.

    ನಗರದ ಪ್ರಮುಖ ರಸ್ತೆಗಳೆಂದರೆ ಬಸವನಹಳ್ಳಿ ಮುಖ್ಯರಸ್ತೆ, ರೈಲ್ವೆ ನಿಲ್ದಾಣ ರಸ್ತೆ, ಒಕ್ಕಲಿಗರ ಭವನಕ್ಕೆ ಹೋಗುವ ರಸ್ತೆ, ಆಂಜನೇಯ ದೇವಸ್ಥಾನದ ರಸ್ತೆ, ಬಾರ್‌ಲೈನ್ ರಸ್ತೆ, ಶರೀಫ್‌ಗಲ್ಲಿ, ಟೆಂಡರ್ ಚಿಕನ್‌ನಿಂದ ಮಾರ್ಕೇಟ್ ರಸ್ತೆಗೆ ಸಂಪರ್ಕಿಸುವ ರಸ್ತೆ, ಹೌಸಿಂಗ್ ಬೋರ್ಡ್‌ನ ಹೆಚ್‌ಐಜಿ ೩ನೇ ಹಂತದ ೬೦ ಅಡಿ ರಸ್ತೆ, ಕೋಟೆ ಸುಗ್ಗಿಕಲ್ ರಸ್ತೆ, ಉಂಡೇದಾಸರಹಳ್ಳಿ ಮುಂತಾದ ರಸ್ತೆಗಳ ಅಭಿವೃದ್ಧಿಗೆ ತುರ್ತುಕ್ರಮ ವಹಿಸುವಂತೆ ಸೂಚಿಸಿದರು.

    ನಗರದಲ್ಲಿ ಆದ್ಯತೆ ಮೇರೆಗೆ ೧೫ನೇ ಹಣಕಾಸು ಯೋಜನೆಯ ಅನುದಾನವನ್ನು ವಿದ್ಯುತ್ ಬೀದಿದೀಪ ಅಳವಡಿಕೆಗೆ ಬಳಸಲಾಗಿದೆ. ಮುಂದೆ ಬಿಡುಗಡೆಯಾಗುವ ಅನುದಾನದಲ್ಲಿ ಬೇಲೂರು ರಸ್ತೆ ಬಸ್ ತಂಗುದಾಣದಿಂದ ಹಿರೇಮಗಳೂರು ವರೆಗೆ ಹಾಗೂ ಟೌನ್ ಕ್ಯಾಂಟೀನ್‌ನಿಂದ ಮೌಂಟೇನ್ ವ್ಯೂ ಶಾಲೆವರೆಗೆ ಹಂತಹಂತವಾಗಿ ಬೀದಿದೀಪಗಳನ್ನು ಅಳವಡಿಸಲಾಗುವುದೆಂದು ಹೇಳಿದರು.

    ೨೦೧೨ ರಲ್ಲಿ ಆರಂಭಗೊಂಡ ಯುಜಿಡಿ ಕಾಮಗಾರಿ ೨೦೨೫ ಆದರೂ ಪೂರ್ಣವಾಗಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಮರು ಟೆಂಡರ್ ಕರೆದು ಕಾಮಗಾರಿಗೆ ಆದೇಶ ನೀಡುವಂತೆ ಸಲಹೆ ನೀಡಿದರು.

    ಅಮೃತ್ ಯೋಜನೆ ಸಹ ಪೂರ್ಣಗೊಂಡಿಲ್ಲ. ನೂತನವಾಗಿ ಜಾಕ್‌ವೆಲ್ ಪ್ರಾರಂಭಿಸಿ ಮೋಟಾರ್ ಅಳವಡಿಸಲು ನಿರ್ಧರಿಸಲು ನಿರ್ಧರಿಸಿದ್ದು, ಯಗಚಿ ಜಲಾಶಯದಿಂದ ನಗರಕ್ಕೆ ನೀರೊದಗಿಸುವ ಕಾರ್ಯದಲ್ಲಿ ಪರ್ಯಾಯ ಮೋಟಾರ್ ಇಡಬೇಕೆಂಬ ಸಾಮಾನ್ಯ ಜ್ಞಾನ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗೆ ಇಲ್ಲದಿರುವುದು ದುರದೃಷ್ಟಕರ ಎಂದು ಹೇಳಿದರು.

    ನಗರಸಭಾಧ್ಯಕ್ಷೆ ಸುಜಾತ ಶಿವಕುಮಾರ್ ಮಾತನಾಡಿ, ನಗರಸಭೆಯ ೩೫ ವಾರ್ಡ್‌ಗಳ ಅಭಿವೃದ್ಧಿಗೆ ಶಾಸಕರು ಸರ್ಕಾರದಿಂದ ೧೦ ಕೋಟಿ ರೂ ಅನುದಾನ ತಂದಿರುವುದಕ್ಕೆ ಅಭಿನಂದಿಸಿದರು.

    ಪ್ರವಾಸಿ ತಾಣಗಳ ಕೇಂದ್ರವಾಗಿರುವ ನಗರದ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಶಾಶ್ವತ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ, ಇದರಿಂದ ನಗರವನ್ನು ಸುಂದರವಾಗಿಸುವ ಗುರಿ ಹೊಂದಲಾಗಿದ್ದು, ನಗರಸಭೆ ತೆರಿಗೆ ಹಣವನ್ನು ಅಭಿವೃದ್ಧಿಗೆ ಬಳಸಿ ಸ್ವಚ್ಚ ನಗರ, ಸುಂದರ ನಗರವನ್ನಾಗಿಸಲು ನಿರ್ಧರಿಸಲಾಗಿದೆ ಎಂದರು.

    ಸರ್ಕಾರ ಬಿ ಖಾತೆಗೆ ಅನುಮೋದನೆ ನೀಡಿರುವುದರಿಂದ ಇದರಿಂದ ಬರುವ ಹಣದಲ್ಲಿ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಿ ಆಟದ ವಸ್ತುಗಳನ್ನು ಅಳವಡಿಸಿ ಸರ್ವರಿಗೂ ಸಮಬಾಳು, ಸಮಪಾಲು ಎಂಬ ಘೋಷಣೆಯೊಂದಿಗೆ ನಗರಸಭೆ ಕೆಲಸಕಾರ್ಯಗಳಿಗೆ ಮುಂದಾಗಿದೆ ಎಂದರು.

    ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಅನುಮಧುಕರ್, ಪೌರಾಯುಕ್ತ ಬಿ.ಸಿ. ಬಸವರಾಜು ಉಪಸ್ಥಿತರಿದ್ದರು.

    General meeting held at the municipal council

  • ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಬದಲಿ ವಾಹನ ಅಪಘಾತ

    ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಬದಲಿ ವಾಹನ ಅಪಘಾತ

    ಚಿಕ್ಕಮಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಪ್ರಯಾಣ ನಡೆಸುತ್ತಿದ್ದ ಕಾರಿನ ಹಿಂಬದಿ ಸಾಗುತ್ತಿದ್ದ ಪರ್ಯಾಯ ವಾಹನಕ್ಕೆ ಹಿಂಬದಿಯಿಂದ ಲಾರಿ ಗುದ್ದಿ ಅಪಘಾತ ಸಂಭವಿಸಿರುವ ಘಟನೆ ತಾಲೂಕಿನ ಲಕ್ಯಾ ಕ್ರಾಸ್ ನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.

    ಚಿಕ್ಕಮಗಳೂರಿನಲ್ಲಿ ನಡೆದ ಬಸವ ತತ್ವ ಪೀಠದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿ ವೈ ವಿಜಯೇಂದ್ರ ಅವರು ತಮ್ಮ ಬೆಂಗಾವಲು ವಾಹನ ಹಾಗೂ ಪರ್ಯಾಯ ವಾಹನದೊಂದಿಗೆ ಶಿವಮೊಗ್ಗದತ್ತ ಪ್ರಯಾಣ ಬೆಳೆಸಿದ್ದರು.

    ಈ ವೇಳೆ ಲಕ್ಯ ಕ್ರಾಸ್ ಬಳಿ ಪರ್ಯಾಯ ವಾಹನಕ್ಕೆ ಹಿಂಬದಿಯಿಂದ ಬಂದ ಲಾರಿ ಗುದ್ದಿದೆ. ಘಟನೆಯಲ್ಲಿ ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕಾರಿನ ಹಿಂಭಾಗ ಸಂಪೂರ್ಣ ಜಖಂಗೊಂಡಿದೆ.

    ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಪೊಲೀಸರು ಲಾರಿ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    BJP state president B Y Vijayendra substitute vehicle accident

  • ಬಸವತತ್ವದಂತೆ ನಮ್ಮನಡೆ ನುಡಿ ಇದೆಯೇ ಎಂಬ ಬಗ್ಗೆ ಚಿಂತನೆ ಅಗತ್ಯ

    ಬಸವತತ್ವದಂತೆ ನಮ್ಮನಡೆ ನುಡಿ ಇದೆಯೇ ಎಂಬ ಬಗ್ಗೆ ಚಿಂತನೆ ಅಗತ್ಯ

    ಚಿಕ್ಕಮಗಳೂರು: ಬಸವತತ್ವದ ಬಗ್ಗೆ ಮಾತನಾಡುತ್ತೇವೆ. ಬಸವಣ್ಣನವರನ್ನು ಕೊಂಡಾಡುತ್ತೇವೆ. ಆದರೆ ನಮ್ಮ ನುಡಿ-ನಡೆ ಆ ದಿಕ್ಕಿನಲ್ಲಿ ಸಾಗುತ್ತಿದೆಯೇ ಎಂದು ಚಿಂತನೆ ಮಾಡಬೇಕಿದೆ. ವೀರಶೈವ ಲಿಂಗಾಯತ ಸಮಾಜ ಎಂದರೆ ಆಲದ ಮರದಂತೆ. ಎಲ್ಲ ಸಮಾಜಗಳಿಗೂ ನಮ್ಮ ಸಮಾಜ ನೆರಳಿದ್ದಂತೆ. ಸಮಾಜವನ್ನು ಒಡೆದಾಳುವ ನೀತಿಯನ್ನು ಇಂದಿನ ಕಾಲಘಟ್ಟದಲ್ಲಿ ಕಾಣುತ್ತಿದ್ದೇವೆ. ಸಮಾಜ ಸಮಾಜಗಳ ಮಧ್ಯೆ ವಿಷ ಬೀಜ ಬಿತ್ತಿ ತಮ್ಮ ರಾಜಕೀಯ ಬೇಳೆಕಾಳು ಬೇಯಿಸಿಕೊಳ್ಳುವವರ ಬಗ್ಗೆ ಜಾಗೃತರಾಗಿರಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

    ನಗರದ ಹೊರವಲಯದ ದೊಡ್ಡಕುರುಬರಹಳ್ಳಿಯ ಶ್ರೀಬಸವತತ್ವ ಪೀಠದಿಂದ ಶುಕ್ರವಾರ ಆಯೋಜಿಸಲಾಗಿದ್ದ ಬಸವತತ್ವ ಸಮಾವೇಶದಲ್ಲಿ ದಾಕ್ಷಾಯಣಿ ಜಯದೇವಪ್ಪ ಅವರ ದಾಕ್ಷಾಯಣಿ ವಚನಗಳು ಎಂಬ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಬಸವಣ್ಣ ಅವರನ್ನು ವಿಶ್ವಗುರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಅವರು ಸಾಮಾಜಿಕ ಕ್ರಾಂತಿಯ ಸಂದೇಶ ನೀಡಿದ್ದಾರೆ. ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಅತ್ಯಂತ ಸರಳವಾಗಿ ಜನಸಾಮಾನ್ಯರ ಮಸಸ್ಸಿಗೆ, ಹೃದಯಕ್ಕೆ ತಟ್ಟುವ ರೀತಿಯಲ್ಲಿ ಮಾನವ ಧರ್ಮದ ಶ್ರೇಷ್ಟತೆ ಬಗ್ಗೆ ತಿಳಿಸಿಕೊಟ್ಟಿರುವವರು ಬಸವಣ್ಣನವರು. ಮನುಷ್ಯ ಕುಲವೆಲ್ಲಾ ಒಂದೇ ಕುಟುಂಬ ಎಂದು ತಿಳಿಸಿಕೊಟ್ಟು ಹೋದ ಮಹಾತ್ಮರು ಎಂದು ಬಣ್ಣಿಸಿದರು.

    ಅನೇಕ ಹರಗುರು ಚರಮೂರ್ತಿಗಳು ಕನ್ನಡ ನಾಡಿನಲ್ಲಿ ಏನೇ ಸಮಸ್ಯೆ ಬಂದಾಗಲೂ, ಸಮಾಜವನ್ನು ಒಡೆಯುವ ಷಡ್ಯಂತ್ರ ನಡೆದಾಗಲೂ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. ಇದನ್ನು ನಾವು ಜೀವನದಲ್ಲಿ ಎಂದಿಗೂ ಮರೆಯಬಾರದು. ನಾಡಿನ ಕೋಟ್ಯಂತರ ಮಕ್ಕಳಿಗೆ ಶಿಕ್ಷಣ ಅನ್ನ ನೀಡಿ ಪಾಲಿಸಿದವರು ಮಠಮಂದಿರಗಳು ಹಾಗೂ ಸ್ವಾಮೀಜಿಗಳು. ಸಮಾಜ ಕಟ್ಟುವ ಮೂಲಕ ಸಮಾಜವನ್ನು ಸರಿದಾರಿಯಲ್ಲಿ ಕೊಂಡೊಯ್ಯುತ್ತಿರುವವರೂ ಸ್ವಾಮೀಜಿಗಳು. ಜಗತ್ತಿನಲ್ಲಿ ಅನೇಕ ದಾರ್ಶನಿಕರು ಬಂದುಹೋಗಿದ್ದಾರೆ. ಆದರೆ ಬಸವತತ್ವಕ್ಕೆ ಸರಿದೂಗುವ ಗ್ರಂಥಗಳು ಜಗತ್ತಿನಲ್ಲಿ ಇಲ್ಲ ಎಂದು ಪ್ರತಿಪಾದಿಸಿದರು.

    ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ೨೦೪೭ಕ್ಕೆ ಭಾರತವನ್ನು ಅಭಿವೃದ್ಧಿ ಹೊಂದಿದ್ದ ರಾಷ್ಟçವನ್ನಾಗಿ ಮಾಡಲು ಸಂಕಲ್ಪ ಮಾಡಿ ತಪ್ಪಸ್ಸಿನಂತೆ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಪ್ರೇರಣೆಯಾಗಿರುವುದು ಬಸವತತ್ವ ಎಂಬುದು ವಿಶೇಷವಾಗಿದೆ. ರಾಜ್ಯದಲ್ಲಿ ಅನೇಕ ರಾಜಕಾರಣಿ, ಮುಖ್ಯಮಂತ್ರಿಗಳನ್ನು ನೋಡಿದ್ದೇವೆ. ಆದರೆ ಬಸವತತ್ವಗಳನ್ನು ಆಧಾರವಾಗಿಟ್ಟುಕೊಂಡು ಸರ್ವರಿಗೂ ಸಮಪಾಲು, ಸಮಬಾಳು, ಸಾಮಾಜಿಕ ನ್ಯಾಯ ಎಂಬ ನಿಟ್ಟಿನಲ್ಲಿ ನಾಡಿನ ಎಲ್ಲ ಸಮಾಜಗಳಿಗೂ ನ್ಯಾಯಕೊಟ್ಟ ಕೀರ್ತಿ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಸಲಲ್ಲುತ್ತದೆ.

    ಯಡಿಯೂರಪ್ಪ ಅವರು ಕೇವಲ ವೀರಶೈವ ಮಠಗಳಿಗೆ ಮಾತ್ರ ಅನುದಾನ ನೀಡಲಿಲ್ಲ. ಬದಲಿಗೆ ಎಲ್ಲ ಮಠಗಳಿಗೂ ಅನುದಾನ ನೀಡುವ ಕೆಲಸ ಮಾಡಿದರು. ಇದಕ್ಕೆ ಪ್ರಮುಖ ಕಾರಣ ನಾಡಿನ ಶಕ್ತಿ ಮಠ ಮಾನ್ಯಗಳೇ ಎಂಬುದಾಗಿತ್ತು. ಹೀಗಾಗಿ ಮಠಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಕರ್ತವ್ಯ ಎಲ್ಲ ಭಕ್ತರ ಮೇಲಿದೆ ಎಂದು ಹೇಳಿದರು.

    ಶಿಕಾರಿಪುರದ ಜನರ ಆಶೀರ್ವಾದದಿಂದ ಶಾಸಕನಾಗಿ, ಪಕ್ಷದ ರಾಜ್ಯಾಧ್ಯಕ್ಷನಾದ ನನ್ನ ಮೇಲೆ ಜನ ಯಾವ ರೀತಿಯ ಅಪೇಕ್ಷೆ ಇಟ್ಟುಕೊಂಡಿದ್ದಾರೆ ಎಂಬ ಅರಿವು ನನಗೆ ಇದೆ. ತಾಯಂದಿರ ಆಶೀರ್ವಾದ ಇದ್ದರೆ ಏನೇ ಸಮಸ್ಯೆಗಳು ಬಂದರೂ ಅದನ್ನು ಮೆಟ್ಟಿ ನಿಲ್ಲುವ ಶಕ್ತಿ ಬರುತ್ತದೆ. ಯಾವುದೇ ಕ್ಷೇತ್ರವನ್ನೂ ಸಮಸ್ಯೆ ಎಂಬುದು ಬಿಟ್ಟಿಲ್ಲ. ಸವಾಲುಗಳನ್ನು ಮೆಟ್ಟಿ ನಿಂತಾಗ ಮಾತ್ರ ನಮ್ಮ ಗುರಿಯನ್ನು ಮುಟ್ಟಲು ಸಾಧ್ಯವಿಲ್ಲ ಎಂದು ತಿಳಿಸಿದರು.

    ಯಾವುದೇ ಕ್ಷೇತ್ರದಲ್ಲೇ ಇರಲಿ ಎಲ್ಲರನ್ನೂ ಮೆಚ್ಚಿಸಲು ಸಾಧ್ಯವಿಲ್ಲ. ರಾಮನನ್ನು ರಾವಣ ಒಪ್ಪಲಿಲ್ಲ, ಕೃಷ್ಣನನ್ನು ಕಂಸ ಒಪ್ಪಲಿಲ್ಲ. ಧರ್ಮರಾಯನನ್ನು ದುರ್ಯೋದನ ಒಪ್ಪಲಿಲ್ಲ. ನಾವು ಯಾವುದೇ ಕೆಲಸ ಮಾಡುವಾಗಲೂ ನಮ್ಮನ್ನು ಕಾಲೆಳೆಯುವವರು ಇz್ದÉÃ ಇರುತ್ತಾರೆ. ಇಂದು ಸ್ವಾಮೀಜಿಗಳನ್ನೂ ಜನ ಬಿಡುವುದಿಲ್ಲ. ಹೀಗಿರುವಾಗ ಆಡಿಕೊಳ್ಳುವವರು ರಾಜಕಾರಣಿಗಳನ್ನು ಬಿಡುತ್ತಾರೆಯೇ ಎಂದು ಪ್ರಶ್ನಿಸಿದ ಅವರು, ನದಿ ಕಲ್ಲು ಮುಳ್ಳುಗಳನ್ನು ಲೆಕ್ಕಿಸದೆ ಹರಿದು ತನ್ನ ಗುರಿ ಮುಟ್ಟುತ್ತದೆ. ಹಾಗೆಯೇ ನಾವು ನಮ್ಮ ಜೀವನದಲ್ಲಿ ಏನೇ ಸವಾಲು ಮುಂದೆ ಬಂದರೂ ಅದನ್ನು ಸಹಿಸಿಕೊಂಡು ಮುನ್ನೆಡೆದು ಗುರಿ ತಲುಪಬೇಕು ಎಂದು ಹೇಳಿದರು.

    ಚಿಕ್ಕಮಗಳೂರಿನಲ್ಲಿ ಸುಂದರವಾಗಿರುವ ಭವ್ಯ ಬಸವತತ್ವ ಪೀಠದ ನೂತನ ಮಠ ಶ್ವೇತ ಮಂದಿರದ ರೀತಿ ನಗರದ ಮಧ್ಯೆ ಎದ್ದು ನಿಂತಿರುವುದು ಸದ್ಭಕ್ತರ ಪ್ರೀತಿಯ ಸಂಕೇತ ಎಂದರು. ಸಮಾವೇಶದಲ್ಲಿ ಆಶೀರ್ವಚನ ನೀಡಿದ ಸಿಂಧಿಗೆರೆಯ ಶ್ರೀ ಕರಡಿಗವಿ ಮಠದ ಶ್ರೀಶಿವಶಂಕರ ಶಿವಯೋಗಿ ಸ್ವಾಮೀಜಿ, ಬಸವ ತತ್ವ ಗಳನ್ನು ಮೈಗೂಡಿಸಿಕೊಂಡು ಸುತ್ತಮುತ್ತಲಿನ ಭಕ್ತರ ಮನಸ್ಸನ್ನು ಗೆದ್ದಿದ್ದ ಲಿಂಗೈಕ್ಯ ಶ್ರೀ ಜಯಚಂದ್ರಶೇಖರ ಸ್ವಾಮೀಜಿಗಳು ಲಿಂಗೈಕ್ಯರಾದ ನಂತರ ಅವರ ಮಠಕ್ಕೆ ಉತ್ತರಾಧಿಕಾರಿಯಾಗಿ ಬಂದ ಡಾ. ಶ್ರೀ ಬಸವಮರಳಸಿದ್ದ ಸ್ವಾಮೀಜಿಗಳು ಬಸವತತ್ವ ಆಚರಣೆ ಹಾಗೂ ಪ್ರಸಾರದಲ್ಲಿ ಸಿದ್ಧಹಸ್ತರು. ಇವರು ಶ್ರೀ ಮಠಕ್ಕೆ ಉತ್ತರಾಧಿಕಾರಿಗಳಾಗಿ ಬಂದಿರುವುದೇ ಭಕ್ತರ ಸುದೈವ ಎಂದರು.

    ಈ ಸಂದರ್ಭದಲ್ಲಿ ಉದ್ಯಮಿ ಶಾಲಿನಿ ನಾಲ್ವಾಡ್, ಹಿರಿಯ ಸಂಶೋಧಕ ವೀರಣ್ಣ ರಾಜು ದಂಪತಿ, ಕಾರ್ಗಿಲ್ ಯೋಧ ಕ್ಯಾಪ್ಟನ್ ನವೀನ್ ನಾಗಪ್ಪ ದಂಪತಿಯನ್ನು ಸನ್ಮಾನಿಸಲಾಯಿತು. ಬಸವತತ್ವ ಪೀಠದ ಡಾ.ಶ್ರೀ ಬಸವಮರುಳಸಿದ್ಧ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಯಳನಾಡು ಮರದ ಶ್ರೀ ಜ್ಞಾನ ಪ್ರಭು ಸಿದ್ದರಾಮ ಸ್ವಾಮೀಜಿ, ಶ್ರೀಶಂಕರ ದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

    ಸಂಸದ ಕೋಟ ಶ್ರೀನಿವಾಸ ಪೂಜಾರಿ,ಶಾಸಕ ಎಚ್.ಡಿ.ತಮ್ಮಯ್ಯ, ಮಾಜಿ ಶಾಸಕ ಬೆಳ್ಳಿ ಪ್ರಕಾಶ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ, ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ, ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್, ಸಿಡಿಎ ಅಧ್ಯಕ್ಷ ನಯಾಜ್ ಅಹಮದ್, ಪ್ರಮುಖರಾದ ಕೋಟೆ ರಂಗನಾಥ್, ದೀಪಕ್ ದೊಡ್ಡಯ್ಯ ಮತ್ತಿತರರಿದ್ದರು.

    The book “Dakshayani Vachanagalu” was released.

  • ಮಾ.೧ ಜಿಲ್ಲಾ ಆಟದ ಮೈದಾನದಲ್ಲಿ ಶಿವಾನಿ ದೀದೀ ಅವರಿಂದ ಉಪನ್ಯಾಸ

    ಮಾ.೧ ಜಿಲ್ಲಾ ಆಟದ ಮೈದಾನದಲ್ಲಿ ಶಿವಾನಿ ದೀದೀ ಅವರಿಂದ ಉಪನ್ಯಾಸ

    ಚಿಕ್ಕಮಗಳೂರು:  ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ಸ್ಥಳೀಯ ಸೇವಾ ಕೇಂದ್ರದ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಮಾ.೧ ರಂದು ನಗರದಲ್ಲಿ ಪ್ರಥಮ ಬಾರಿಗೆ ಸ್ವಾಸ್ಥ್ಯ, ಸಾಮರಸ್ಯ ಹಾಗೂ ಸಂತೋಷ ಜೀವನದ ಜಾಗೃತಿ ಉಪನ್ಯಾಸ ಕಾರ್ಯಕ್ರಮ ಆಯೋಜಿಸಿದ್ದು ಸಾರ್ವಜನಿಕರು, ಆಧ್ಯಾತ್ಮಿಕ ಒಲವಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಂಸ್ಥೆಯ ಜಿಲ್ಲಾ ಸಂಚಾಲಕಿ ಭಾಗ್ಯ ಮನವಿ ಮಾಡಿದರು.

    ಪತ್ರಿಕಾಗೋಷ್ಠಿಯಲ್ಲಿ ಇಂದು ಈ ಬಗ್ಗೆ ಮಾಹಿತಿ ನೀಡಿದ ಅವರು, ನಗರದ ಜಿಲ್ಲಾ ಆಟದ ಮೈದಾನದಲ್ಲಿ ಬೆಳಗ್ಗೆ ೯.೩೦ಕ್ಕೆ ಆರಂಭವಾಗುವ ಆಧ್ಯಾತ್ಮಿಕ ಉಪನ್ಯಾಸ ಕಾರ್ಯಕ್ರಮವನ್ನು ಪ್ರೇರಣಾದಾಯಿ ಚಿಂತಕಿ, ಅಂತರಾಷ್ಟ್ರೀಯ ಆಧ್ಯಾತ್ಮಿಕ ಪ್ರೇರಣಯುಕ್ತ ಮಾರ್ಗದರ್ಶಕರೂ ಹಾಗೂ ರಾಷ್ಟ್ರಪತಿ ಅವರಿಂದ ನಾರಿಶಕ್ತಿ ಪ್ರಶಸ್ತಿ ಪುರಸ್ಕೃತರಾದ ಬ್ರಹ್ಮಕುಮಾರಿ ಶಿವಾನಿ ದೀದೀಜಿ ಅವರು ನಡೆಸಿಕೊಡಲಿದ್ದಾರೆ ಎಂದರು.

    ದೀದೀಜಿ ಅವರು ಬ್ರಹ್ಮಕುಮಾರೀಸ್ ಸಂಸ್ಥೆಯ ರಾಯಭಾರಿಯೂ ಹೌದು. ಆಧ್ಯಾತ್ಮಿಕ ಶಕ್ತಿಯನ್ನು ಜಗತ್ತಿಗೆ ಪಸರಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ. ಅವರ ಆಗಮನ ತ್ರಿವೇಣಿ ಸಂಗಮ ಎಂದರೆ ತಪ್ಪಾಗದು ಎಂದರು. ಶ್ರೀ ಶಿವಾನಿ ದೀದೀಜಿ ಅವರು ಬಾಲ್ಯದಿಂದ ಆಧ್ಯಾತ್ಮಿಕ ಒಲವು ಹೊಂದಿದವರೇನಲ್ಲ. ಅವರ ತಾಯಿ ಬ್ರಹ್ಮ ಕುಮಾರೀಸ್ ಸಂಸ್ಥೆಗೆ ತರಬೇತಿಗೆ ಹೋಗುತ್ತಿದ್ದಾಗ ದೀದೀಜಿಯೂ ಹೋಗುತ್ತಿದ್ದರು. ತದನಂತರ ಸಂಪೂರ್ಣ ತಮ್ಮ ಜೀವನವನ್ನೇ ಆಧ್ಯಾತ್ಮಿಕತೆಗೆ ತೊಡಗಿಸಿಕೊಂಡಿದ್ದಾರೆ. ಇಂದು ಎಷ್ಟೋ ಮಂದಿ ಬೆಳಗ್ಗೆ ಅವರ ಆಧ್ಯಾತ್ಮಿಕ ಪ್ರವಚನವನ್ನು ಯೂಟ್ಯೂಬ್‌ನಲ್ಲೇ ಕೇಳಿಯೇ ದೈನಂದಿನ ದಿನಚರಿ ಮುಂದುವರಿಸುವರಿದ್ದಾರೆ.

    ಸಮಸ್ಯೆಗಳಿಗೆ ಸರಳ ಸೂತ್ರ ಅವರು ಹೇಳಿಕೊಡುತ್ತಾರೆ. ಎಲ್ಲ ವಿಷಯಗಳಲ್ಲೂ ಸಮಗ್ರ ಪರಿಣತಿ ಹೊಂದಿದ್ದು, ಆಧ್ಯಾತ್ಮಿಕ ಶಕ್ತಿ ತುಂಬಲಿದ್ದಾರೆ. ಅವರು ನಮ್ಮ ಜಿಲ್ಲೆಗೆ ಬಂದಿರುವುದೇ ನಮ್ಮ ಭಾಗ್ಯ. ೫ ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ, ಈಗಾಗಲೇ ಹಲವರು ನೋಂದಣಿ ಮಾಡಿಕೊಂಡಿದ್ದಾರೆ.

    ಅಂದು ಕೆಲವು ಮಠಾಧೀಶರು ಆಗಮಿಸಲಿದ್ದಾರೆ. ಬೆಳಗ್ಗೆ ಸರಿಯಾಗಿ ೯.೩೦ ಕ್ಕೆ ಉಪನ್ಯಾಸ ಆರಂಭವಾಗಲಿದೆ. ಅದಕ್ಕೂ ಮುನ್ನ ಸಂಸ್ಥೆಯ ವಿದ್ಯಾರ್ಥಿಗಳಿಗೆ ರಾಜಯೋಗ ಕಾರ್ಯಕ್ರಮ ಇರುತ್ತದೆ. ಮಾ.೨, ೩ ಮತ್ತು೪ ರಂದು ಬೆಳಗ್ಗೆ ಮತ್ತು ಸಂಜೆ ಬ್ರಹ್ಮಾಕುಮಾರಿ ವೀಣಾ ಅಕ್ಕನವರಿಂದ ಮೂರುದಿನ ಉಚಿತ ರಾಜಯೋಗ ಶಿಬಿರ ಬಸವನಹಳ್ಳಿ ಜ್ಞಾನ ಪ್ರಕಾಶ ಭವನದಲ್ಲಿ ನಡೆಯಲಿದ್ದು, ಅದರ ಪ್ರಯೋಜನವನ್ನೂ ಪಡೆಯಬಹುದಾಗಿದೆ ಎಂದರು.

    ಸಂಸ್ಥೆಯ ಕೊಪ್ಪ ಸಂಚಾಲರಾದ ಪುಷ್ಪ, ನಂದಕುಮಾರ್ ಗೋಷ್ಠಿಯಲ್ಲಿದ್ದರು.

    Lecture by Shivani Didi on Mar. 1