Category: ಚಿಕ್ಕಮಗಳೂರು

  • ನಾಡಪ್ರಭು ಕೆಂಪೇಗೌಡರು ಮುಂದಾಲೋಚನೆಯ ಅಪ್ರತಿಮ ವ್ಯಕ್ತಿ

    ನಾಡಪ್ರಭು ಕೆಂಪೇಗೌಡರು ಮುಂದಾಲೋಚನೆಯ ಅಪ್ರತಿಮ ವ್ಯಕ್ತಿ

    ಸಖರಾಯಪಟ್ಟಣ: ನಾಡಪ್ರಭು ಕೆಂಪೇಗೌಡರು ಮುಂದಾಲೋಚನೆಯಿಂದ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಿದ ಅಪ್ರತಿಮ ವ್ಯಕ್ತಿ ಎಂದು ಒಕ್ಕಲಿಗ ಸಂಘದ ಹೋಬಳಿ ಘಟಕದ ಅಧ್ಯಕ್ಷ ಎಸ್.ಆರ್.ಯೋಗೀಂದ್ರ ಹೇಳಿದರು.

    ಸಖರಾಯಪಟ್ಟಣದಲ್ಲಿ ಒಕ್ಕಲಿಗರ ಸಂಘದ ವತಿಯಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಬೆಂಗಳೂರು ನಗರಕ್ಕೆ ಗಡಿ ಗೋಪುರ ನಿರ್ಮಿಸುವ ಮೂಲಕ ಭವಿಷ್ಯದ ನಗರದ ರೂಪರೇಷೆಯನ್ನು ಅಂದೇ ನಿರ್ಮಿಸಿದ್ದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ ಎಂದರು.

    ನಿವೃತ್ತ ಲೆಕ್ಕಪರಿಶೋಧಕ ವೆಂಕಟೇಶ್ , ವಿಜಯನಗರದ ಅರಸರ ಮೇಲ್ಪಂಕ್ತಿಯನ್ನು ಅನುಸರಿಸಿದ ಕೆಂಪೇಗೌಡರು, ತಮ್ಮ ಆಡಳಿತದಲ್ಲಿ ಕೃಷಿ ಮತ್ತು ವ್ಯಾಪಾರಕ್ಕೆ ಅನುಕೂಲ ಕಲ್ಪಿಸಿ ಬೆಂಗಳೂರಿನ ಇತಿಹಾಸದಲ್ಲಿ ಅಜರಾಮರರಾದರು ಎಂದರು.

    ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಬೈಕ್ ಜಾಥಾ ನಡೆಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜಮ್ಮ, ಸದಸ್ಯರಾದ ಚೇತನ್, ಗಣೇಶಗೌಡ, ಅರುಣ್‌ಗೌಡ, ದೊಡ್ಡಮ್ಮ, ಮುಖಂಡರಾದ ರಾಮಲಿಂಗು, ಪುಟ್ಟಸ್ವಾಮಿ, ಸ. ರಾ. ಸತೀಶ್, ಮಿಥುನ್, ದರ್ಶನ್, ಉಲ್ಲಾಸ್, ಧರಣೇಶ್, ಪ್ರಮೋದ್, ಗ್ರಾಮಸ್ಥರು ಭಾಗವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.

    Nadaprabhu Kempegowda is an unparalleled figure of forward thinking.

  • ಗುರುಗಳ ಸಮಸ್ಯೆ ಬಗೆಹರಿಸಲು ಜನಪ್ರತಿನಿಧಿಗಳು ಶ್ರಮಿಸಬೇಕು

    ಗುರುಗಳ ಸಮಸ್ಯೆ ಬಗೆಹರಿಸಲು ಜನಪ್ರತಿನಿಧಿಗಳು ಶ್ರಮಿಸಬೇಕು

    ಚಿಕ್ಕಮಗಳೂರು: ಯಾರೇ ಆಗಲಿ ಐಎಎಸ್ ಅಧಿಕಾರಿ ಆಗಲು ಅದಕ್ಕೆ ಮೂಲ ಕಾರಣಕರ್ತರು ಶಿಕ್ಷಕರು, ಉಪನ್ಯಾಸಕರೇ ಆಗಿರುತ್ತಾರೆ. ದೇಶವನ್ನೇ ರೂಪಿಸುವ ಗುರುಗಳ ಸಮಸ್ಯೆಗಳನ್ನು ಬಗೆಹರಿಸಲು ಎಲ್ಲಾ ಜನಪ್ರತಿನಿಧಿಗಳು ಸೇರಿದಂತೆ ಸರ್ಕಾರ ಶ್ರಮಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

    ನಗರದ ಎಂಇಎಸ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯ ಅನುದಾನಿತ ಪದವಿಪೂರ್ವ ಕಾಲೇಜುಗಳ ನೌಕರರ ಸಂಘದ ರಾಜ್ಯ ಕಾರ್ಯಕಾರಣಿ ಸಭೆ ಹಾಗೂ ಜಿಲ್ಲಾ ಘಟಕದ ಉದ್ಘಾಟನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯರು ಆರು ವರ್ಷಗಳ ಕಾಲ ತಮ್ಮ ಅಧಿಕಾರ ಮುಗಿಸಿ ಹೋದ ನಂತರ ಪಿಂಚಣಿ ನೀಡುತ್ತಾರೆ. ಆದರೆ ಅನುದಾನಿತ ಶಾಲೆ ಹಾಗೂ ಕಾಲೇಜುಗಳ ಸಿಬ್ಬಂದಿ ೪೦ ವರ್ಷ ಸೇವೆ ಸಲ್ಲಿಸಿದರು ಪಿಂಚಣಿ ಸಿಗುತ್ತಿಲ್ಲ. ಅವರು ಯಾರು ಐಷಾರಾಮಿ ಜೀವನ ನಡೆಸಲು ಪಿಂಚಣಿ ಕೇಳುತ್ತಿಲ್ಲ ಎಂದು ಹೇಳಿದರು.

    ಸುದೀರ್ಘ ಕೆಲಸ ಮಾಡಿದವರಿಗೆ ನೆಮ್ಮದಿಯ ಬದುಕು ನೀಡಲು ಪಿಂಚಣಿ ನೀಡಲೇಬೇಕು. ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಸುಧೀರ್ಘ ಸೇವೆ ಸಲ್ಲಿಸಿದರು ಎನ್‌ಪಿಎಸ್ ಅಥವಾ ಓಪಿಎಸ್ ಸಿಗುತ್ತಿಲ್ಲ. ಇದನ್ನು ಪ್ರತಿಯೊಬ್ಬ ಜನಪ್ರತಿನಿಧಿಯೂ ಪ್ರಶ್ನೆ ಮಾಡಬೇಕಿದೆ ಎಂದರು.

    ನಿಮ್ಮ ಹಕ್ಕುಗಳಿಗಾಗಿ ನೀವು ಹೋರಾಟ ಆರಂಭಿಸಿದಾಗ ಅಂದು ಯಾರು ವಿರೋಧ ಪಕ್ಷದಲ್ಲಿ ಇರುತ್ತಾರೋ ಅವರು ಬಂದು ನಿಮ್ಮ ಸಮಸ್ಯೆ ಆಲಿಸುತ್ತಾರೆ. ಸಮಸ್ಯೆ ಆಲಿಸುವುದು ಮುಖ್ಯವಲ್ಲ ಸಮಸ್ಯೆ ಬಗೆಹರಿಸುವುದು ಮುಖ್ಯವಾಗಬೇಕು ಎಂದರು.

    ಗೋವಾ ಹಾಗೂ ಆಂಧ್ರಪ್ರದೇಶದಲ್ಲಿ ಅನುದಾನಿತ ಶಾಲಾ ಶಿಕ್ಷಕರು ಹಾಗೂ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರನ್ನು ಸರ್ಕಾರ ವಿಲೀನ ಮಾಡಿಕೊಂಡಿದೆ. ಇದನ್ನೇ ಕರ್ನಾಟಕದಲ್ಲಿಯೂ ಅನ್ವಯಿಸಲು ಯಾವುದೇ ಸಮಸ್ಯೆ ಇಲ್ಲ. ಈ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ಒತ್ತಾಯ ಮಾಡಿದರು.

    ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಶಿಕ್ಷಕರು ಎಂದೆಂದಿಗೂ ಗುರುಗಳೇ. ಗುರುಗಳು ಮಾಡುವ ಸೇವೆಯನ್ನು ಸೇವೆ ಎಂದು ಪರಿಗಣಿಸುವ ಜೊತೆಗೆ ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

    ಜಟಿಲ ಸಮಸ್ಯೆಗಳಿಂದ ಹೊರಬರಲು ಸಂಘಟನೆ ಅಗತ್ಯ. ಸಂಘಟನೆ ಗಟ್ಟಿಯಾದಾಗ ಸಮಸ್ಯೆಗಳನ್ನು ಸರ್ಕಾರದ ಮುಂದೆ ತಂದು ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಅನುದಾನಿತ ಕಾಲೇಜುಗಳ ಉಪನ್ಯಾಸಕರ ಸಂಘ ಆರಂಭಗೊಂಡಿರುವುದು ಸ್ವಾಗತಾರ್ಹ ಎಂದರು.

    ರಾಜ್ಯದಲ್ಲಿ ಶಿಕ್ಷಕರ ಹಾಗೂ ಉಪನ್ಯಾಸಕರ ಪರವಾಗಿ ವಿಧಾನ ಪರಿಷತ್ ಸದಸ್ಯ ಎಸ್. ಎಲ್.ಭೋಜೇಗೌಡ ಗಟ್ಟಿಯಾದ ಧ್ವನಿ ಎತ್ತಿದ್ದಾರೆ. ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ ಶಿಕ್ಷಣ, ಆರೋಗ್ಯ ಹಾಗೂ ಬದುಕಿನ ಬಗ್ಗೆ ಹೆಚ್ಚು ಒತ್ತು ಕೊಡುತ್ತವೆ. ಈ ನಿಟ್ಟಿನಲ್ಲಿ ಅನುದಾನಿತ ಕಾಲೇಜುಗಳ ಉಪನ್ಯಾಸಕರ ಸಮಸ್ಯೆ ಬಗ್ಗೆ ಹರಿಸಲು ವಿಧಾನ ಮಂಡಲದಲ್ಲಿ ವಿಷಯ ಪ್ರಸ್ತಾಪಿಸುವ ಭರವಸೆ ನೀಡಿದರು.

    ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಆಂಧ್ರ ಪ್ರದೇಶ ಹಾಗೂ ಗೋವಾದಲ್ಲಿ ಅನುದಾನಿತ ಶಿಕ್ಷಕರು ಹಾಗೂ ಉಪನ್ಯಾಸಕರನ್ನು ಸರ್ಕಾರಿ ಹುದ್ದೆಗಳಿಗೆ ವಿಲೀನಗೊಳಿಸಲಾಗಿದೆ. ಅಲ್ಲಿ ಹೇಗೆ ವಿಲೀನ ಕೊಡಿಸಲಾಗಿದೆ ಎಂಬ ಬಗ್ಗೆ ಮಾಹಿತಿ ತರಿಸಿಕೊಂಡು ನಾವು ಚರ್ಚೆ ಮಾಡಿ ನಮ್ಮ ರಾಜ್ಯದಲ್ಲಿಯೂ ಅದನ್ನು ಅನುಷ್ಠಾನಕ್ಕೆ ತರಲು ಕ್ರಮ ಕೈಗೊಳ್ಳಬೇಕಿದೆ ಎಂದರು.

    ಅನುದಾನಿತ ಶಾಲೆಗಳ ಶಿಕ್ಷಕರು ಹಾಗೂ ಕಾಲೇಜುಗಳ ಉಪನ್ಯಾಸಕರನ್ನು ವಿಲೀನಗೊಳಿಸಿಕೊಂಡಾಗ ಆರ್ಥಿಕ ಹೊರೆಯಾಗುತ್ತದೆಯೇ? ಅಥವಾ ಇನ್ನೇನಾದರೂ ಸಮಸ್ಯೆ ಇದೆಯೇ ಎಂಬುವ ಬಗ್ಗೆ ಚರ್ಚೆ ಮಾಡಬೇಕಿದೆ. ಈ ಬಗ್ಗೆ ವಿಧಾನ ಮಂಡಲದ ಅಧಿವೇಶನದಲ್ಲಿ ಚರ್ಚೆ ನಡೆಸುವ ಭರವಸೆ ನೀಡಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಅನುದಾನಿತ ಪದವಿಪೂರ್ವ ಕಾಲೇಜುಗಳ ನೌಕರರ ಸಂಘದ ಅಧ್ಯಕ್ಷ ಡಾ. ಎಚ್.ಹರೀಶ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಜಂಟಿ ನಿರ್ದೇಶಕ ಮಹಾಲಿಂಗಯ್ಯ, ಸಂಘದ ಜಿಲ್ಲಾಧ್ಯಕ್ಷ ಲೋಹಿತ್, ಪ್ರಮುಖರಾದ ನಾಗರಾಜರಾವ್ ಕಲ್ಕಟ್ಟೆ, ತಸ್ಲಿಮಾ ಫಾತಿಮಾ ಮತ್ತಿತರರಿದ್ದರು.

    Public representatives should work hard to resolve the problems of teachers

  • ಡಾ.ಸುಂದರೇಶ ಅಗಲಿಕೆಗೆ ಶ್ರೀ ರಂಭಾಪುರಿ ಜಗದ್ಗುರುಗಳ ಸಂತಾಪ

    ಡಾ.ಸುಂದರೇಶ ಅಗಲಿಕೆಗೆ ಶ್ರೀ ರಂಭಾಪುರಿ ಜಗದ್ಗುರುಗಳ ಸಂತಾಪ

    ಚಿಕ್ಕಮಗಳೂರು: ನಗರದ ಅನ್ನಪೂರ್ಣ ಆಸ್ಪತ್ರೆಯ ನಿರ್ಮಾಪಕರಾದ ಡಾ. ಸುಂದರೇಶ್ ಅವರ ಅಗಲಿಕೆಗೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ತಮ್ಮ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

    ಡಾ. ಸುಂದರೇಶ್ ಅವರು ಅನಾರೋಗ್ಯದಿಂದ ಅಕಾಲಿಕವಾಗಿ ಶಿವೈಕ್ಯರಾದ ವಿ?ಯ ತಿಳಿದು ಅತ್ಯಂತ ವಿ?ದವಾಯಿತು. ಶ್ರೀ ರಂಭಾಪುರಿ ಪೀಠದೊಂದಿಗೆ ನಿಕಟ ಸಂಬಂಧ ಹೊಂದಿದ ಶ್ರೀಯುತರ ಸೇವೆ ಅವಿಸ್ಮರಣೀಯ.

    ಧರ್ಮ ನಿಷ್ಠೆ ಕಾಯಕ ನಿಷ್ಠೆ ಹೊಂದಿ ಜೀವನದಲ್ಲಿ ಅದ್ಭುತ ಸಾಧನೆ ಮಾಡಿದ ಶ್ರೀಯುತರ ಅಗಲಿಕೆ ಅತ್ಯಂತ ನೋವನ್ನು ಉಂಟುಮಾಡುತ್ತದೆ.

    ಅಗಲಿದ ಅವರ ಪವಿತ್ರ ಆತ್ಮಕ್ಕೆ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರ ಸ್ವಾಮಿ ಚಿರಶಾಂತಿಯನ್ನು ಅನುಗ್ರಹಿಸಲಿ. ಅವರ ಅಗಲಿಕೆಯಿಂದ ಉಂಟಾದ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬ ವರ್ಗದವರಿಗೆ ಮತ್ತು ಹಿತೈಷಿಗಳಿಗೆ ಭಗವಂತ ಕರುಣಿಸಲೆಂದು ಶ್ರೀ ರಂಭಾಪುರಿ ಜಗದ್ಗುರುಗಳು ತಮ್ಮ ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.

    Sri Rambhapuri Jagadguru condoles the passing of Dr. Sundaresh

  • ಕಾಂಗ್ರೆಸ್ ನಾಯಕರ ಬಗ್ಗೆ ಬಿಜೆಪಿ ಅವಹೇಳನ ಖಂಡಿಸಿ ಯುವ ಕಾಂಗ್ರೆಸ್ ಪ್ರತಿಭಟನೆ

    ಕಾಂಗ್ರೆಸ್ ನಾಯಕರ ಬಗ್ಗೆ ಬಿಜೆಪಿ ಅವಹೇಳನ ಖಂಡಿಸಿ ಯುವ ಕಾಂಗ್ರೆಸ್ ಪ್ರತಿಭಟನೆ

    ಚಿಕ್ಕಮಗಳೂರು:  ಭಾರತ ದೇಶದಲ್ಲಿ ಸುದೀರ್ಘ ಆಡಳಿತ ನಡೆಸಿದ ಉಕ್ಕಿನ ಮಹಿಳೆ ಪ್ರಿಯದರ್ಶಿನಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಬಗ್ಗೆ ಹಗುರವಾಗಿ ಮಾತನಾಡಿರುವ ಬಿಜೆಪಿ ಮುಖಂಡರ ನಡೆಯನ್ನು ಖಂಡಿಸಿ ಇಂದು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.

    ನಗರದ ಅಜಾದ್ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಕೇಂದ್ರ ಸರ್ಕಾರ ಮತ್ತು ಬಿಜೆಪಿ ಮುಖಂಡರ ನಡೆಯನ್ನು ಖಂಡಿಸಿ ಘೋಷಣೆ ಕೂಗಿ ಹಿಟ್ಲರ್ ಎಂದು ಇಂದಿರಾ ಗಾಂಧಿಯವರನ್ನು ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಅವಮಾನಿಸಿರುವುದನ್ನು ಖಂಡಿಸಿದರು.

    ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ ಮಂಜೇಗೌಡ, ದೇಶದ ಅಭಿವೃದ್ಧಿಗೆ ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ ೨೦ ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೆ ತಂದು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ ಇವರ ಬಗ್ಗೆ ಬಿಜೆಪಿ ಮತ್ತು ಕೇಂದ್ರಸರ್ಕಾರ ಅವಹೇಳನ ಮಾಡಿದ್ದಾರೆಂದು ಆರೋಪಿಸಿದರು.

    ಬ್ರಿಟೀಷ್ ಆಡಳಿತದಿಂದ ಖಾಲಿ ಖಜಾನೆಯಾಗಿದ್ದ ಭಾರತ ದೇಶದಲ್ಲಿ ಸರ್ವರಿಗೂ ಸಮಾನತೆ ತಂದುಕೊಟ್ಟ ಧೀಮಂತ ನಾಯಕಿಯಾಗಿದ್ದಾರೆ. ಇಂತಹವರ ಬಗ್ಗೆ ಕ್ಷುಲ್ಲಕ ರಾಜಕೀಯಕ್ಕಾಗಿ ಅವಹೇಳನ ಮಾಡಿರುವುದನ್ನು ಖಂಡಿಸಿದರು.

    ಬಿಜೆಪಿ ಸೋಲಿನ ಭೀತಿಯಿಂದ ಹತಾಶೆಗೊಂಡು ಸಿ.ಟಿ. ರವಿ ಅವರು ಮನಬಂದಂತೆ ಮಾತನಾಡುತ್ತಿದ್ದಾರೆ, ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ರಾಜೀವ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿ ಇವರುಗಳನ್ನು ಕೀಳಾಗಿ ಕಾಣುವ ಮೂಲಕ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದ್ದಾರೆಂದು ದೂರಿದರು.

    ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಇಂದಿರಾ ಗಾಂಧಿ, ರಾಜೀವ್ ಗಾಂಧಿಯವರ ದೇಶಪ್ರೇಮವನ್ನು ಬಿಜೆಪಿ ಮುಖಂಡರಿಗೆ ಸಹಿಸಿಕೊಳ್ಳಲಾಗದೆ ಅವಹೇಳನಕಾರಿ ಹೇಳಿಕೆಯಲ್ಲಿ ತಲ್ಲೀನರಾಗಿದ್ದಾರೆಂದು ಟೀಕಿಸಿದ ಅವರು, ದೇಶಕ್ಕೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿದರು.

    ಸಿ.ಟಿ. ರವಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ನಾಯಕರ ಬಗ್ಗೆ ಅವಾಚ್ಯವಾಗಿ ಮಾತನಾಡಿ, ಅವರ ಬೂಟ್ ನೆಕ್ಕುವ ಪದ ಬಳಸಿದರೆ ರವಿಯವರ ಎಲ್ಲಾ ಕಾರ್ಯಕ್ರಮಗಳಿಗೆ ಕಪ್ಪು ಬಾವುಟ ಪ್ರದರ್ಶಿಸುವುದಾಗಿ ಎಚ್ಚರಿಸಿದರು.

    ಕಾಂಗ್ರೆಸ್ ಪಕ್ಷ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರು ಹಾಕಿಕೊಟ್ಟಂತ ಸಂವಿಧಾನದ ಆಶಯದಂತೆ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬಂತೆ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಮೂರು ಅಂಗಗಳಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

    ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸುತ್ತೇವೆ ಎಂಬ ಹೇಳಿಕೆಯಿಂದಾಗಿ ಚುನಾವಣೆ ಸಂದರ್ಭದಲ್ಲಿ ಜನರಿಂದ ತಿರಸ್ಕಾರಗೊಂಡಿರುವ ಸಿ.ಟಿ. ರವಿ ಸಂವಿಧಾನದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಲೇವಡಿ ಮಾಡಿದರು.

    ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಜಾತಿ-ಜಾತಿಗಳ ಮಧ್ಯೆ ವಿಶಬೀಜ ಬಿತ್ತಿ ಅಧಿಕಾರಕ್ಕಾಗಿ ಆಸೆಪಡುತ್ತಿರುವ ನೀವು ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿದ್ದೀರಿ ಎಂದು ಕುಟುಕಿದರು.

    ಸಂವಿಧಾನ ಮತ್ತು ದೇಶದ ಜನರನ್ನು ರಕ್ಷಣೆ ಮಾಡುವುದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂಬುದನ್ನು ಮನಗಾಣಬೇಕು ಎಂದು ಹೇಳಿದರು.
    ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಲಾಕೇಶ್. ಆರ್, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಹಿರೇಮಗಳೂರು ರಾಮಚಂದ್ರ, ಜಗದೀಶ್, ಮಲ್ಲೇಶ್ ಸ್ವಾಮಿ, ಗಂಗಾಧರ್, ಲಕ್ಯಾ ಸಿದ್ದೇಶ್, ಹಿರೇಗೌಜ ಶಿವು, ನವೀನ್ ಎತ್ತಿನಮನೆ, ಅಭಿಷೇಕ್, ಆದರ್ಶ್ ಬಹುಜನ್, ಮದನ್, ಪವನ್ ಮತ್ತಿತರರು ಉಪಸ್ಥಿತರಿದ್ದರು.

    Youth Congress protests against BJP’s insults towards Congress leaders

  • ಚಿಕ್ಕಮಗಳೂರಿನಿಂದ ಹಿಂದೂಗಳ ಶ್ರದ್ಧಾಕೇಂದ್ರ ತಿರುಪತಿಗೆ ಹೊಸ ರೈಲು

    ಚಿಕ್ಕಮಗಳೂರಿನಿಂದ ಹಿಂದೂಗಳ ಶ್ರದ್ಧಾಕೇಂದ್ರ ತಿರುಪತಿಗೆ ಹೊಸ ರೈಲು

    ಚಿಕ್ಕಮಗಳೂರು:  ಕಾಫಿನಾಡಿನ ಜನರಿಗೆ ರೈಲ್ವೇ ಇಲಾಖೆ ಸಿಹಿ ಸುದ್ದಿ ನೀಡಿದೆ. ಚಿಕ್ಕಮಗಳೂರಿನಿಂದ ಹಿಂದೂಗಳ ಶ್ರದ್ಧಾಕೇಂದ್ರ ತಿರುಪತಿಗೆ ಹೊಸ ರೈಲು ಸಂಚಾರಕ್ಕೆ ಅನುಮೋದನೆ ನೀಡಿದೆ. ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರ ಅವಿರತ ಪ್ರಯತ್ನದ ಫಲವಾಗಿ ಜಿಲ್ಲೆಯ ಜನರ ಬಹುದಿನದ ಕನಸು ಇದೀಗ ನನಸಾಗಿದೆ.

    ರಾಜ್ಯ ರೈಲ್ವೆ ಖಾತೆ ಸಚಿವ ಸೋಮಣ್ಣರವರ ಸಹಕಾರದೊಂದಿಗೆ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಚಿಕ್ಕಮಗಳೂರು-ಬೆಂಗಳೂರು-ತಿರುಪತಿ ಎಕ್ಸ್ ಪ್ರೆಸ್ ರೈಲಿಗೆ ಅನುಮೋದನೆ ನೀಡಿದ್ದಾರೆ. ಸಧ್ಯ ಈ ರೈಲು ಪ್ರಾಯೋಗಿಕವಾಗಿ ವಾರಕ್ಕೊಂದು ಬಾರಿ ಸಂಚಾರ ನಡೆಸಲಿದ್ದು, ಪ್ರತಿ ಶುಕ್ರವಾರ ಸಂಜೆ ೫.೩೦ ಕ್ಕೆ ಚಿಕ್ಕಮಗಳೂರು ಬಿಟ್ಟು, ಶನಿವಾರ ಬೆಳಗ್ಗೆ ೭.೪೦ ಕ್ಕೆ ತಿರುಪತಿ ತಲುಪಲಿದೆ.

    ತಿರುಪತಿಯಿಂದ ಚಿಕ್ಕಮಗಳೂರಿಗೆ ಪ್ರತಿ ಗುರುವಾರ ರಾತ್ರಿ ೯ ಕ್ಕೆ ರೈಲು ಹೊರಡಲಿದ್ದು, ಶುಕ್ರವಾರ ಬೆಳಗ್ಗೆ ೧೦.೩೦ ಕ್ಕೆ ಚಿಕ್ಕಮಗಳೂರು ತಲುಪಲಿದೆ.
    ಚಿಕ್ಕಮಗಳೂರು ನಿಲ್ದಾಣದಿಂದ ಹೊರಡುವ ರೈಲು ಮಾರ್ಗ ಮಧ್ಯೆ ಸಖರಾಯಪಟ್ಟಣ, ಬಿಸಲೇಹಳ್ಳಿ, ಕಡೂರು, ಬೀರೂರು, ದೇವನೂರು, ಅರಸೀಕರೆ, ತಿಪಟೂರು, ತುಮಕೂರು, ಚಿಕ್ಕಬಾಣಾವರ, ಬೆಂಗಳೂರು, ಕೆ.ಆರ್.ಪುರಂ. ವೈಟ್ ಫೀಲ್ಡ್, ಬಂಗಾರಪೇಟೆ, ಕುಪ್ಪಂ, ಜೋಲಾರ್‌ಪೇಟ್, ಕಟ್ಪಾಡಿ, ಚಿತ್ತೂರು ಹಾಗೂ ಪಾಕಲಾದಲ್ಲಿ ನಿಲುಗಡೆ ನೀಡಲಿದೆ.

    ತಿರುಪತಿಗೆ ನೇರ ರೈಲು ಬಿಟ್ಟಿರುವುದರಿಂದ ಚಿಕ್ಕಮಗಳೂರು ತಾಲ್ಲೂಕು ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಜನತೆಗೆ ಅನುಕೂಲವಾಗಲಿದೆ. ಮಲೆನಾಡಿನ ೫ ತಾಲ್ಲೂಕುಗಳ ಜನರು ಜಿಲ್ಲಾ ಕೇಂದ್ರ ಚಿಕ್ಕಮಗಳೂರಿನಿಂದ ರೈಲು ಹತ್ತಲು ಅನುಕೂಲವಾದರೆ, ಬಯಲಿನ ೪ ತಾಲ್ಲೂಕುಗಳ ಜನರು ಕಡೂರು ಅಥವಾ ಬೀರೂರು ರೈಲ್ವೇ ನಿಲ್ದಾಣದಿಂದ ಪ್ರಯಾಣ ಬೆಳೆಸಲು ಅನುಕೂಲವಾಗಿದೆ.

    ಪ್ರಯಾಣಿಕರ ಬೇಡಿಕೆಯ ಮೇರೆಗೆ ನಂತರದ ದಿನಗಳಲ್ಲಿ ವಾರಕ್ಕೆ ಮೂರು ದಿನ ರೈಲು ಓಡಿಸುವ ಯೋಜನೆಯನ್ನು ಸಿದ್ಧಪಡಿಸಲಾಗಿದೆ.
    ಈ ರೈಲಿನ ಪ್ರಯೋಜನವನ್ನು ಬಳಸಿಕೊಳ್ಳುವಂತೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಮನವಿ ಮಾಡಿದ್ದಾರೆ. ಚಿಕ್ಕಮಗಳೂರಿಗೆ ಹೊಸ ರೈಲು ಘೋಷಣೆ ಆಗಿರುವುದರಿಂದ ಸಂಸದರಿಗೆ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.

    New train from Chikkamagaluru to Tirupati the Hindu pilgrimage center

  • ಬೆಂಗಳೂರು ನಿರ್ಮಾಣಕ್ಕೆ ಕೆಂಪೇಗೌಡರ ಕೊಡುಗೆ ಅಪಾರ

    ಬೆಂಗಳೂರು ನಿರ್ಮಾಣಕ್ಕೆ ಕೆಂಪೇಗೌಡರ ಕೊಡುಗೆ ಅಪಾರ

    ಚಿಕ್ಕಮಗಳೂರು:  ಬೆಂಗಳೂರು ನಗರ ನಿರ್ಮಾಣಕ್ಕೆ ನಾಡಪ್ರಭು ಕೆಂಪೇಗೌಡರ ಕೊಡುಗೆ ಅಪಾರ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ತಿಳಿಸಿದರು.

    ಜಿಲ್ಲಾಡಳಿತದ ವತಿಯಿಂದ ಇಂದು ನಗರದ ಕುವೆಂಪು ಕಲಾ ಮಂದಿರದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಕೆಂಪೇಗೌಡ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.

    ೧೬ನೇ ಶತಮಾನದ ವಿಜಯನಗರ ಸಾಮ್ರಾಜ್ಯದ ಆಡಳಿತ ಕಾಲದಲ್ಲಿದ್ದಂತೆ ಬೆಂಗಳೂರು ನಗರವನ್ನು ನಿರ್ಮಿಸಬೇಕೆಂಬ ದೂರದೃಷ್ಟಿ ಇಟ್ಟುಕೊಂಡಿದ್ದರು. ತಮ್ಮದೇ ಆದ ಕೊಡುಗೆ ನೀಡಿ ಈ ನಗರವನ್ನು ನಿರ್ಮಿಸಿ ತಮ್ಮ ಕನಸಿನ ನಗರಿಯನ್ನಾಗಿ ಮಾಡಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ಅವರು ಕಟ್ಟಿದ ಕೆರೆಗಳು. ರಸ್ತೆಗಳು, ಮಾರುಕಟ್ಟೆ ವ್ಯವಸ್ಥೆ ಇಂದಿಗೂ ನಮ್ಮ ಬೆಂಗಳೂರಿಗೆ ವಿಶೇಷ ಮೆರುಗು ತಂದುಕೊಟ್ಟಿವೆ. ಬೆಂಗಳೂರನ್ನು ಸಿಲಿಕಾನ್ ವ್ಯಾಲಿ ಆಫ್ ದಿ ವರ್ಲ್ಡ್ ಎಂದು ಕರೆದರೂ ತಪ್ಪಾಗಲಾರದು. ಈ ರೀತಿ ಬೃಹದಾಕಾರದಲ್ಲಿ ಬೆಳೆಯಲು ಹಾಗೂ ಈ ನಗರ ಇಂದು ವಿಶ್ವಮಾನ್ಯತೆ ಪಡೆಯಲು ಅವರು ಹಾಕಿಕೊಟ್ಟ ಮೇಲ್ಪಂಕ್ತಿಯೇ ಕಾರಣ ಎಂದರು.

    ಇಂದು ಸುಭದ್ರವಾದ ಬೆಂಗಳೂರು ನಿರ್ಮಾಣದ ಜೊತೆಗೆ ಜನಪರ ಕಾರ್ಯಕ್ರಮಗಳನ್ನು ಕೈಗೊಂಡರು. ಬಾಲ್ಯದಲ್ಲಿ ಚುರುಕಾಗಿಯೇ ಇದ್ದ ಅವರು ಗುರುಕುಲದಲ್ಲಿ ಸಾಮಾನ್ಯ ಶಿಕ್ಷಣದ ಜೊತೆಗೆ ರಾಜ ನೀತಿ, ಆರ್ಥಿಕ ತಿಳುವಳಿಕೆ, ಕುಸ್ತಿ, ಯುದ್ಧ ಕಲೆಗಳನ್ನು ಕಲಿತಿದ್ದರು. ವಿಜಯನಗರದ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಿರಿಯನ್ನು ಕಣ್ಣಾರೆ ಕಂಡಿದ್ದ ಅವರು ಎಲ್ಲ ವೈಭವಗಳನ್ನು ಪುನರ್ ಪ್ರತಿಷ್ಠಾಪಿಸುವ ಬಯಕೆ ಹೊಂದಿದ್ದರು. ರಾಜಧಾನಿ ಕಟ್ಟಿದ ನಂತರ ಅಲ್ಲಿ ನಾಲ್ಕು ಮಹಾದ್ವಾರಗಳನ್ನು ರಚಿಸಿದರು ಎಂದು ಹೇಳಿದರು. ವ್ಯಾಪಾರಿಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟು ಅವರ ವೃತ್ತಿಗನುಸಾರವಾಗಿ ಅಕ್ಕಿಪೇಟೆ, ರಾಗಿಪೇಟೆ, ಕುಂಬಾರಪೇಟೆ, ಬಳೆಪೇಟೆ ಹೀಗೆ ಅನೇಕ ಪೇಟೆಗಳನ್ನು ನಿರ್ಮಿಸಿದರು ಎಂದು ತಿಳಿಸಿದರು.

    ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ನಾಡ ಪ್ರಭು ಕೆಂಪೇಗೌಡರು ಉತ್ತಮ ಕೃಷಿ ಚಟುವಟಿಕೆಗಳಿಗೆ ಹಾಗೂ ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಹಲವಾರು ಕೆರೆಗಳನ್ನು ನಿರ್ಮಿಸಿದರು. ಧಾರ್ಮಿಕತೆಗೆ ಪ್ರತೀಕವಾಗಿ ದೇವಸ್ಥಾನಗಳನ್ನು ಕಟ್ಟಿಸಿದರಲ್ಲದೇ ವಿವಿಧ ಉದ್ಯಾನವನಗಳನ್ನು ನಿರ್ಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಬೆಂಗಳೂರನ್ನು ಜಾಗತಿಕವಾಗಿ ಗುರುತಿಸಲು ಕೆಂಪೇಗೌಡರ ಕೊಡುಗೆ ಅವಿಸ್ಮರಣೀಯವಾದದ್ದು. ನಾಡಪ್ರಭು ಕೆಂಪೇಗೌಡರ ಆದರ್ಶಗಳು ಇಂದು ನಮಗೆಲ್ಲರಿಗೂ ದಾರಿ ದೀಪವಾಗಿವೆ ಎಂದು ತಿಳಿಸಿದ ಅವರು ಇಂದು ವಿಶ್ವ ಭೂಪಟದಲ್ಲಿ ಬೆಂಗಳೂರು ರಾರಾಜಿಸುತ್ತಿರುವುದಕ್ಕೆ ಕೆಂಪೇಗೌಡರ ದೂರದೃಷ್ಟಿಯೇ ಕಾರಣ ಎಂದು ಹೇಳಿದರು.

    ಬಸವನಹಳ್ಳಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಹಿರಿಯ ಕನ್ನಡ ಉಪನ್ಯಾಸಕ ಡಾ.ಎಚ್.ಎಸ್.ಸತ್ಯನಾರಾಯಣ ಉಪನ್ಯಾಸ ನೀಡಿ, ಮಾನವ ಸಂಪನ್ಮೂಲವೇ ಒಂದು ನಾಡಿನ ಅತ್ಯಮೂಲ್ಯ ಸಂಪನ್ಮೂಲ ಎಂದು ಅರಿತಿದ್ದ ಕೆಂಪೇಗೌಡರು, ನಾಡಿನ ಕುಶಲಕರ್ಮಿಗಳ ಕೌಶಲವನ್ನು ದೇಶದ ಒಳಿತಿಗೆ ಹಾಗೂ ಪ್ರಗತಿಗೆ ಬಳಸಿದಾಗ ದೇಶವು ಪ್ರಗತಿಯ ಪಥದಲ್ಲಿ ಸಾಗುತ್ತದೆ ಎಂದು ಮನಗಂಡಿದ್ದರು. ಹೀಗಾಗಿಯೇ, ತಮ್ಮ ಕಾಲಮಾನದ ಎಲ್ಲ ಕ್ಷೇತ್ರದ ಅತ್ಯುತ್ತಮ ಪ್ರತಿಭೆಗಳನ್ನು ಗುರುತಿಸಿ ಆಶ್ರಯ ನೀಡಿದರು. ಅವರ ದೂರದೃಷ್ಟಿಯ ಫಲದಿಂದಾಗಿಯೇ ಬೆಂಗಳೂರಿಗೆ ಜಾಗತಿಕ ಮಟ್ಟದಲ್ಲಿ ‘ಸಿಲಿಕಾನ್ ಸಿಟಿ’ ಎಂಬ ಅಭಿದಾನ ದಕ್ಕಿತು ಎಂದರು.

    ಅಪ್ರತಿಮ ಕರ್ತೃತ್ವ ಶಕ್ತಿ ಹೊಂದಿದ್ದ ಧೀಮಂತ ನಾಯಕರಾದ ಅವರು, ಪ್ರಾಚೀನ ಕಾಲದಿಂದಲೂ ವಾಣಿಜ್ಯ ಪಥಗಳು ಸಾಗುತ್ತಿದ್ದ ಭೌಗೋಳಿಕವಾಗಿ ಆಯಕಟ್ಟಿನ ಪ್ರದೇಶದಲ್ಲಿ ಬೆಂಗಳೂರು ನಿರ್ಮಿಸಿದರು. ಕ್ರಿ.ಶ. ೧೫೩೭ರಲ್ಲಿ ಕೆಂಪೇಗೌಡರು ‘ದೇವರಾಯಪಟ್ಟಣ’ ಎಂಬ ಹೆಸರಿನಲ್ಲಿ ಉತ್ಪಾದನೆ ಮತ್ತು ವಾಣಿಜ್ಯ ಕೇಂದ್ರವಾಗಿ ರೂಪಿಸಿದ ತಮ್ಮ ಹೊಸ ರಾಜಧಾನಿ ಬೆಂಗಳೂರು ನಗರವನ್ನು ಕಟ್ಟಿ, ಅದಕ್ಕೆ ನಾಲ್ಕು ದಿಕ್ಕಿನಲ್ಲಿ ನಾಲ್ಕು ಗುಡಿ ಗೋಪುರಗಳನ್ನು ನಿರ್ಮಿಸಿದರು. ನಗರದ ಸುತ್ತ ಕಂದಕವುಳ್ಳ ಮಣ್ಣಿನ ಕೋಟೆ ನಿರ್ಮಿಸಿ, ಅದರ ಎಲ್ಲ ದಿಕ್ಕಿನಲ್ಲಿ ಕೆರೆಗಳನ್ನು ಕಟ್ಟಿಸಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿದರು. ಕುಶಲಕರ್ಮಿಗಳಿಗೆ ಅಗತ್ಯವಾದ ವೈವಿಧ್ಯಮಯ ವಸ್ತುಗಳ ಉತ್ಪಾದನೆ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಿದ್ದು ನಗರದ ಅಭಿವೃದ್ಧಿಗೆ ಕಾರಣವಾಯಿತು ಎಂದು ಹೇಳಿದರು.

    ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್, ಆಶಾಕಿರಣ ಅಂಧ ಮಕ್ಕಳ ಶಾಲೆಯ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ, ನಗರಸಭೆ ಹಂಗಾಮಿ ಅಧ್ಯಕ್ಷೆ ಅನು ಮಧುಕರ್, ಕುವೆಂಪು ಕಲಾ ಸೇವಾ ಸಂಘದ ಅಧ್ಯಕ್ಷ ಕೆ.ಮೋಹನ್, ಮುಖಂಡರಾದ ಕೆ.ಟಿ.ರಾಧಾಕೃಷ್ಣ, ಎಐಟಿ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಟಿ.ಜಯದೇವ್, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ.ಜಯಕುಮಾರ್, ತಹಸೀಲ್ದಾರ್ ರೇಷ್ಮಾಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

    Kempegowda’s contribution to the construction of Bangalore is immense.

  • ಆಧುನಿಕ ನಗರೀಕರಣದ ಅಡಿಪಾಯವೇ ಕೆಂಪೇಗೌಡರು

    ಆಧುನಿಕ ನಗರೀಕರಣದ ಅಡಿಪಾಯವೇ ಕೆಂಪೇಗೌಡರು

    ಚಿಕ್ಕಮಗಳೂರು:  ವಿಶ್ವಮಟ್ಟದಲ್ಲಿ ಬೆಂಗಳೂರನ್ನು ಪ್ರಗತಿಯತ್ತ ಕೊಂಡೊಯ್ಯಲು ಹಾ ಗೂ ಆಧುನಿಕ ನಗರೀಕರಣಕ್ಕೆ ಮೊಟ್ಟಮೊದಲ ಅಡಿಪಾಯ ಹಾಕಿದವರೇ ನಾಡುಪ್ರಭು ಕೆಂಪೇಗೌಡರು ಎಂ ದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಹೇಳಿದರು.

    ನಗರದ ಜಿಲ್ಲಾ ಬಿಜೆಪಿ ಪಾಂಚಜನ್ಯ ಕಚೇರಿಯಲ್ಲಿ ಶುಕ್ರವಾರ ನಡೆದ ನಾಡುಪ್ರಭು ಶ್ರೀ ಕೆಂಪೇಗೌಡರ ೫೧೬ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ ವಿಜಯನಗರ ಸಾಮ್ರಾಜ್ಯದ ಹಂಪಿಯ ವೈಭವವನ್ನು ಕಂಡು ಬೆರಗಾಗಿದ್ದ ಕೆಂಪೇಗೌಡರು ದೂರದೃಷ್ಠಿ ಯಿಂದ ನಿರ್ಮಿಸಿದ ಬೆಂಗಳೂರು ನಗರ ಕರ್ನಾಟಕ ರಾಜ್ಯದ ರಾಜಧಾನಿಯಾಗಿರುವುದಲ್ಲದೆ ಭಾರತದ ಪ್ರ ಮುಖ ನಗರಗಳಲ್ಲಿ ಒಂದಾಗುವ ಜೊತೆಗೆ ಗಾರ್ಡನ್‌ಸಿಟಿಯಾಗಿ ಪರಿವರ್ತನೆಯಾಗಿದೆ ಎಂದರು.

    ರಾಜಧಾನಿಯಲ್ಲ್ಲಿ ನೂರಾರು ದೇವಾಲಯ, ಬೆಂಗಳೂರನ್ನು ನಾಲ್ಕು ದಿಕ್ಕನ್ನು ಪ್ರತಿಬಿಂಬಿಸಲು ಕೋಟೆ ಗಳ ನಿರ್ಮಾಣ, ಸರ್ವ ಜನಾಂಗದ ಅಭಿವೃಧ್ದಿ ದೃಷ್ಟಿಯಿಂದ ಆಯಾ ಸಮಾಜಕ್ಕೆ ಮೀಸಲಿರಿಸಿದ ಹೆಸರಿನಲ್ಲಿ ಬಡಾವಣೆ ಹಾಗೂ ಹದಿನೇಳಕ್ಕೂ ಹೆಚ್ಚು ಪೇಟೆಗಳ ನಿರ್ಮಾಣಕ್ಕೆ ಮೂಲವೇ ಕೆಂಪೇಗೌಡರು ಎಂದು ಬಣ್ಣಿ ಸಿದರು.

    ಪ್ರಸ್ತುತ ದಿನಗಳಲ್ಲಿ ಬೆಂಗಳೂರು ಐಟಿಬಿಟಿ, ಯಾತ್ರಿಕ ನಗರೀಕರಣ ವಿಶ್ವಾದಾದ್ಯಂತ ಹೆಸರು ಸಂಪಾ ದಿಸಲು ಕೆಂಪೇಗೌಡರ ಕೊಡುಗೆ ಬಹಳಷ್ಟಿದೆ. ಅಲ್ಲದೇ ವರಮಾನ ವಿಚಾರದಲ್ಲೂ ತೆರಿಗೆ ರೂಪದಲ್ಲಿ ರಾಜ್ಯ ದಿಂದ ಬಹುದೊಡ್ಡ ಸಾಧನೆಯಿದೆ. ಇಂದಿಗೂ ರಾಜಧಾನಿಯಲ್ಲಿ ಕೋಟ್ಯಾಂತರ ಕುಟುಂಬ ಬೆಳಕು ಕಾಣ ಲು ಕೆಂಪೇಗೌಡರ ನಿರ್ಧಾರಗಳೇ ಕಾರಣ ಎಂದರು.

    ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ಮಾತನಾಡಿ ಕೆಂಪೇಗೌಡರು ಸ್ವಾರ್ಥಕ್ಕೆ ಆಸೆಪಡದೇ ಸ ಮಾಜದ ಹಿತದೃಷ್ಟಿಯಿಂದ ಸಾವಿರಾರು ಎಕರೆಯನ್ನು ಬೃಹತ್ ಬೆಂಗಳೂರು ನಿರ್ಮಾಣಕ್ಕೆ ಮೀಸಲಿಟ್ಟ ಯು ಗಪುರುಷ ಎಂದರೆ ತಪ್ಪಾಗಲಾರದು ಎಂದ ಅವರು ಇಂದಿನ ಯುವಪೀಳಿಗೆ ಕೆಂಪೇಗೌಡರ ಚರಿತ್ರೆ ಅಧ್ಯಯ ನಡೆಸಿ ಇತಿಹಾಸ ಅರಿಯಬೇಕಿದೆ ಎಂದು ಹೇಳಿದರು.

    ಕೆಂಪೇಗೌಡರ ಆಲೋಚನೆಗಳಿಂದ ನೂರಾರು ಕೆರೆಗಳು ಅಭಿವೃದ್ದಿಗೊಂಡರೆ, ಕೆಲವು ರಾಜಕಾರಣಿಗಳ ದುರಾಸೆಯಿಂದ ಕೆರೆಗಳನ್ನು ಮುಚ್ಚಿಸಿ ಸಾಮ್ರಾಜ್ಯವಾಗಿಸಿದ ಕಾರಣ ಮಳೆಗಾಲದಲ್ಲಿ ಬೆಂಗಳೂರಿನ ಕೆಲವು ಬಡಾವಣೆಗಳು ಜಲಾವೃತಗೊಳ್ಳುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಬಿಜೆಪಿ ಜಿಲ್ಲಾ ವಕ್ತಾರ ಸಿ.ಹೆಚ್.ಲೋಕೇಶ್ ಮಾತನಾಡಿ ಬೆಂಗಳೂರಿನಲ್ಲಿ ಸುಮಾರು ೧೦೦ ಕೆರೆಗಳ ಅಭಿವೃದ್ದಿ, ಬೃಹತ್ ನಾಲ್ಕು ಉದ್ಯಾನವನ ನಿರ್ಮಿಸಿ ವಾಯುವಿಹಾರಿಗಳಿಗೆ ಅನುಕೂಲ, ರಾಜಧಾನಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗಲು ಮೂಲವೇ ಕೆಂಪೇಗೌಡ ಮುಂದಾಲೋಚನೆಯಾಗಿದೆ ಎಂದರು.

    ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಅನುಮಧುಕರ್, ಬಿಜೆಪಿ ನಗರಾಧ್ಯಕ್ಷ ಕೆ.ಎಸ್.ಪುಷ್ಪರಾಜ್, ರಾಜ್ಯ ಎಸ್ಸಿ ಮೋರ್ಚಾ ಕಾರ್ಯದರ್ಶಿ ಸೀತರಾಮಭರಣ್ಯ, ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್‌ಕೋಟ್ಯಾನ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಜಸಂತಾ ಅನಿಲ್‌ಕು ಮಾರ್, ಮುಖಂಡರುಗಳಾದ ನಾರಾಯಣಗೌಡ, ಗೌತಮ್‌ಜೈನ್, ಜಯಣ್ಣ, ಸಚಿನ್‌ಗೌಡ, ವೈ.ಜಿ.ಸುರೇ ಶ್, ಓಂಕಾರೇಗೌಡ, ಬಸವರಾಜ್, ಹೆಚ್.ಕೆ.ಕೇಶವಮೂರ್ತಿ, ದುರ್ಗೇಶ್ ಮತ್ತಿತರರು ಉಪಸ್ಥಿತರಿದ್ದರು.

    Kempegowda is the foundation of modern urbanization.

  • ತುರ್ತು ಪರಿಸ್ಥಿತಿ ಘೋಷಣೆ  ಸಂವಿಧಾನದ ಹತ್ಯೆ ಮಾಡಿರುವ ದಿನ

    ತುರ್ತು ಪರಿಸ್ಥಿತಿ ಘೋಷಣೆ ಸಂವಿಧಾನದ ಹತ್ಯೆ ಮಾಡಿರುವ ದಿನ

    ಚಿಕ್ಕಮಗಳೂರು: ತುರ್ತು ಪರಿಸ್ಥಿತಿ ಘೋಷಣೆ, ಪ್ರಜಾತಂತ್ರ ವ್ಯವಸ್ಥೆಯ ಕತ್ತನ್ನು ಹಿಚುಕಿದ. ಸಂವಿಧಾನದ ಹತ್ಯೆ ಮಾಡಿರುವ ದಿನ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ್‌ ಪೂಜಾರಿ ಅವರು ಹೇಳಿದರು.
    ನಗರದ ರಂಗಣ್ಣನವರ ಛತ್ರದಲ್ಲಿ ಸಿಟಿಜನ್ಸ್‌ ಫಾರ್‌ ಸೋಶಿಯಲ್ ಜಸ್ಟೀಸ್‌ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ತುರ್ತು ಪರಿಸ್ಥಿತಿ – ಒಂದು ಕರಾಳ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತುರ್ತು ಪರಿಸ್ಥಿತಿ ಅತ್ಯಂತ ಘೋರವಾದ ಪ್ರಜಾಪ್ರಭುತ್ವದ ದಕ್ಕೆ ತರುವ ಘಟನೆಯಾಗಿದೆ ಎಂದರು.

    ಬಡವರ ಕೇರಿಗಳಿಗೆ ನುಗ್ಗಿ ಗಂಡಸರ ಸಂತಾನಹರಣ ಮಾಡಿಸುವಂತಹ ಘೋರ ಕೃತ್ಯ ಮಾಡಿದರು. ಸುಮಾರು ಒಂದು ಕೋಟಿ ಜನರಿಗೆ ಬಲವಂತವಾಗಿ ಸಂತಾನಹರಣ ಮಾಡಿದರು. ಕರ್ನಾಟಕದಲ್ಲಿ ಐದು ಜನ ಜೈಲಿನಲ್ಲಿ ಸಾವನ್ನಪಿದರು. ಭಾರತದಲ್ಲಿ 2 ಸಾವಿರಕ್ಕೂ ಹೆಚ್ಚು ಮಂದಿ ಜೈಲಿನಲ್ಲಿಯೇ ಸತ್ತರು. ಅಧಿಕಾರವನ್ನು ಉಳಿಸಿಕೊಳ್ಳಲು ತುರ್ತು ಪರಿಸ್ಥಿತಿ ಹೇರಿದರು. ಪ್ರಜಾಪ್ರಭುತ್ವದ ದೇಗುಲವಾಗಿರುವ ಪಾರ್ಲಿಮೆಂಟ್‌, ವಿಧಾನಸಭೆ, ವಿಧಾನಪರಿಷತ್‌ ಆಳುವವರ ಆಟದ ಅಂಗಳವಾದವು ಎಂದು ಹೇಳಿದರು.
    ಸಂವಿಧಾನ ಹತ್ಯೆ ಮಾಡಿದರು, ಕೋರ್ಟ್‌ಗಳ ಬಾಯಿ ಬಂದ್‌ ಮಾಡಿದರು, ಪತ್ರಿಕೆಗಳನ್ನು ನಿರ್ಬಂಧಿಸಿದವರು ಇಂದು ಸಂವಿಧಾನವನ್ನು ಕೈಯಲ್ಲಿ ಹಿಡಿದು ಸಂವಿಧಾನದ ರಕ್ಷಣೆ ಮಾಡಿ ಎಂದು ಹೇಳುತ್ತಿದ್ದಾರೆ. ಸಂವಿಧಾನ ಗಂಡಾಂತರದಲ್ಲಿ ಇಲ್ಲ, ಇವರು ಗಂಡಾಂತರದಲ್ಲಿ ಇದ್ದಾರೆ ಎಂದರು.

    ಪ್ರಧಾನ ಭಾಷಣ ಮಾಡಿದ ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಚನ್ನಬಸಪ್ಪ ಅವರು, 1975 ರ ಕರಾಳ ದಿನಗಳು ಇಂದಿನ ಯುವ ಪೀಳಿಗೆಗೆ ಗೊತ್ತಿಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನ ಯಾವ ಯಾವ ಹಂತದಲ್ಲಿ ಕಗ್ಗೊಲೆ ಮಾಡಬಹುದು ಎಂಬುದನ್ನು ಆಗಿನ ಪ್ರಧಾನ ಮಂತ್ರಿ ಇಂದಿರಾಗಾಂಧಿಯವರು ಕಾಂಗ್ರೆಸ್‌ ನಾಯಕರಿಗೆ ಹೇಳಿಕೊಟ್ಟಿದ್ದಾರೆ ಎಂದರು.

    ಆರ್‌ಎಸ್‌ಎಸ್‌ ಸ್ಥಾಪನೆ ಆಗದೆ ಹೋಗಿದ್ದರೆ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಾವು ಎಲ್ಲಿಗೋ ಹೋಗುತ್ತಿದ್ದೇವು, ಇಂದಿರಾಗಾಂಧಿಯವರು ತುರ್ತು ಪರಿಸ್ಥಿತಿ ಹೇರಿ ಸುಮ್ಮನೆ ಕೋರಲಿಲ್ಲ. ಹೋರಾಟವನ್ನು ಹತ್ತಿಕ್ಕುವ ಕೆಲಸ ಅವರು ಮಾಡಿದರು. ಜಯಪ್ರಕಾಶ್‌ ನಾರಾಯಣ ನೇತೃತ್ವದ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡಿದರು. 1.25 ಲಕ್ಷ ಜನ ಕೈದಿಯಲ್ಲಿ ಇರಬೇಕಾದ ಜೈಲಿನಲ್ಲಿ 1.75 ಲಕ್ಷ ಜನರನ್ನು ತುಂಬುವ ಕೆಲಸ ಮಾಡಿದರು ಎಂದು ಹೇಳಿದರು.

    ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಮಾತನಾಡಿ, ನೆರೆಯ ರಾಷ್ಟ್ರಗಳು ಯುದ್ಧ ಘೋಷಣೆ ಮಾಡಿಲ್ಲ, ಭೂಕಂಪ ಪ್ರಳಯ ನೆರೆ ಪ್ರಾಕೃತಿಕ ವಿಕೋಪಗಳು ಸಹ ತಲೆದೋರಿಲ್ಲ, ಆದರೂ ತುರ್ತು ಪರಿಸ್ಥಿತಿ ಹೇರಿದರು. ಇಂದಿರಾಗಾಂಧಿ ಅವರು ಆಯ್ಕೆ ಸಂಬಂಧ ಅಲಹಬಾದ್‌ ನ್ಯಾಯಾಲಯ ತೀರ್ಪು ನೀಡಿತು. ಗುಜರಾತ್‌ನಲ್ಲಿ ಕಾಂಗ್ರೆಸ್‌ ವಿರುದ್ಧ ಜನತಾ ತೀರ್ಪು ಬಂದಿತ್ತು. ಒಂದೆಡೆ ಜನತಾ ತೀರ್ಪು, ಇನ್ನೊಂದೆಡೆ ನ್ಯಾಯಾಲಯದ ತೀರ್ಪು. ಹೀಗಾಗಿ ಜನ ಆಕ್ರೋಶ, ವಿದ್ಯಾರ್ಥಿಗಳು ಹೋರಾಟಕ್ಕೆ ಇಳಿದರು. ಇಂದಿರಾಗಾಂಧಿಯವರು ದೇಶದ ರಕ್ಷಣೆಗಾಗಿ ಅಲ್ಲ, ತನ್ನ ಖುರ್ಚಿಯ ರಕ್ಷಣೆಗಾಗಿ ತುರ್ತು ಪರಿಸ್ಥಿತಿ ಹೇರಿದರು ಎಂದರು.
    ತುರ್ತು ಪರಿಸ್ಥಿತಿ ಹೇರಿ ಸಂವಿಧಾನದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರು.

    ಸಂವಿಧಾನ ಕೋಮ ಸ್ಥಿತಿಯಲ್ಲಿತ್ತು. ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್‌ ನಡೆಸಿದ ಮಾರಣಾಂತಿಕ ಹಲ್ಲೆ ಕಾರಣದಿಂದ ಸಂವಿಧಾನ ಕೋಮದಲ್ಲಿತ್ತು. ದೇಶಕ್ಕಿಂತ ತಾವು ದೊಡ್ಡವರೆಂದು ಕೆಲವರು ಭಾವಿಸಿದ್ದಾರೆ. ದೇಶಕ್ಕಿಂತ ಯಾರೂ ಕೂಡ ದೊಡ್ಡವರು ಇಲ್ಲ. ಆದರೆ, ಕಾಂಗ್ರೆಸ್ಸಿಗರು ಭಾವಿಸಿದ್ದರೂ, ಸಂವಿಧಾನಕ್ಕಿಂತ ತಾವು ದೊಡ್ಡವರೆಂದು ಇಂದಿರಾಗಾಂಧಿ ಭಾವಿಸಿದ್ದರು ಎಂದು ಹೇಳಿದರು.

    ಪ್ರಧಾನಮಂತ್ರಿ, ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಲೋಕಸಭೆ ಅಧ್ಯಕ್ಷರನ್ನು ಯಾವುದೇ ನ್ಯಾಯಾಲಯ ಪ್ರಶ್ನಿಸುವಂತ್ತಿಲ್ಲ. ಪೂರ್ವಾನ್ವ ಯವಾಗುವಂತೆ, ಸಂವಿಧಾನಕ್ಕಿಂತ ತಾವು ದೊಡ್ಡವರೆಂದು ಇಂದಿರಾಗಾಂಧಿ ಭಾವಿಸಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷದವರಿಂದ ಕ್ಷಮಾಪಣೆ ಬರುತ್ತದೆ ಎಂದಿದ್ದೇವೆ. ಆದರೆ, ಬರಲಿಲ್ಲ, ಹುಟ್ಟು ಗುಣ ಸುಟ್ಟರೂ ಹೋಗುವುದಿಲ್ಲ ಎಂದರು.

    ಕುರ್ಚಿ ಉಳಿಸಲು ಅಲ್ವ ಸರ್ವಾಧಿಕಾರಿಯಂತೆ ವರ್ತಿಸಿದರು. ಜಗಜೀವನ್‌ರಾಂ ಕಾಂಗ್ರೆಸ್‌ ಯಾಕೆ ಬಿಟ್ರೂ ಗೊತ್ತಾ ಖರ್ಗೆಯವರೇ, ರಾಜಕೀಯ ನೇತಾರರು, ವಕೀಲರು, ಡಾಕ್ಟರ್‌ಗಳನ್ನು ಜೈಲಿಗೆ ಹಾಕಿದ್ರಲಾ ನಿಮಗೆ ನಾಚಿಕೆಯಾಗಬೇಕು. ಅಂಬೇಡ್ಕರ್‌ ಬದುಕಿದ್ರೆ ಈ ಕಾಂಗ್ರೆಸ್ಸಿಗರು ಅವರನ್ನು ಸಹ ಜೈಲಿಗೆ ಹಾಕುತ್ತಿದ್ದರು. ಇವರುಗಳು ಸಂವಿಧಾನದ ಭಕ್ಷಕರು. ನಿರಂತರ ಜಾಗೃತಿ ಮಾತ್ರ ಸಂವಿಧಾನದ ರಕ್ಷಣೆ ಮಾಡುತ್ತದೆ ಎಂದು ಹೇಳಿದರು.

    ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ನಗರಾಧ್ಯಕ್ಷ ಪುಷ್ಪರಾಜ್‌ ಸ್ವಾಗತಿಸಿದರು. ಬಿಜೆಪಿ ರೈತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಸಿ. ಕಲ್ಮರುಡಪ್ಪ ಕಾರ್ಯಕ್ರಮ ನಿರೂಪಿಸಿದರು.

    The day the Constitution was assassinated, the state of emergency declared

  • ಜಂಟಿಸರ್ವೇ ಬಳಿಕ ಪ್ಲಾಂಟೇಶನ್ ಭೂಮಿ ಗುತ್ತಿಗೆ ಅರ್ಜಿ ವಿಲೇವಾರಿ

    ಜಂಟಿಸರ್ವೇ ಬಳಿಕ ಪ್ಲಾಂಟೇಶನ್ ಭೂಮಿ ಗುತ್ತಿಗೆ ಅರ್ಜಿ ವಿಲೇವಾರಿ

    ಚಿಕ್ಕಮಗಳೂರು: ಪ್ಲಾಂಟೇಶನ್ ಭೂಮಿಯನ್ನು ಗುತ್ತಿಗೆಗೆ ನೀಡುವ ಯೋಜನೆಗೆ ಅರ್ಜಿ ಸಲ್ಲಿಸಲು ಮತ್ತಷ್ಟು ಕಾಲಾವಕಾಶ ನೀಡಲಾಗಿದ್ದು, ಜಂಟಿ ಸರ್ವೇ ಪೂರ್ಣಗೊಂಡು ಅರಣ್ಯ ಮತ್ತು ಕಂದಾಯ ಭೂಮಿಯ ನಿಖರ ಮಾಹಿತಿ ಲಭ್ಯವಾದ ಬಳಿಕ ಅರ್ಜಿ ವಿಲೇವಾರಿ ಪ್ರಕ್ರಿಯೆಯನ್ನು ಅಭಿಯಾನದ ಮಾದರಿಯಲ್ಲಿ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

    ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಂದು ಜಿಲ್ಲೆಯ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಹಳ ದಿನಗಳಿಂದ ಜಂಟಿ ಸರ್ವೇ ಆಗದೆ ಬಾಕಿ ಉಳಿದಿದೆ. ಇದೀಗ ಜಂಟಿ ಸರ್ವೇ ಕೈಗೊಳ್ಳಲು ಅರಣ್ಯ ಇಲಾಖೆಯೊಂದಿಗೆ ಸೇರಿ ನಿಯಮಾವಳಿಗಳನ್ನು ರೂಪಿಸಿ, ಸುತ್ತೋಲೆಗಳನ್ನು ಹೊರಡಿಸಿ, ಹಿಂದಿನಿಂದಲೂ ಉಳಿದಿದ್ದ ಕೆಲಸಕ್ಕೆ ಚಾಲನೆ ನೀಡಲಾಗಿದ್ದು, ಜಂಟಿ ಸರ್ವೇಯನ್ನು ಕಾರ್ಯ ರೂಪಕ್ಕೆ ತಂದಿರುವುದಾಗಿ ತಿಳಿಸಿದರು.

    ಜಂಟಿ ಸರ್ವೇ ಆಗದೆ ಅರ್ಜಿ ವಿಲೇವಾರಿ ಮಾಡಲು ಸಾಧ್ಯವಿಲ್ಲ. ಅರಣ್ಯ ಮತ್ತು ಕಂದಾಯ ಜಮೀನಿನ ನಿಖರತೆ ತಿಳಿಯದಿದ್ದಲ್ಲಿ ಅರ್ಜಿ ವಿಲೇವಾರಿ ಪ್ರಕ್ರಿಯೆ ಸಾಧ್ಯವಾಗದು. ಹಿಂದೆ ಆಗಿರುವಂತೆ ಕಂದಾಯ ಜಮೀನೆಂದು ಅರಣ್ಯ ಭೂಮಿಯನ್ನು ಮಂಜೂರು ಮಾಡಿರುವಂತಹ ತಪ್ಪುಗಳು ಪುನರಾವರ್ತನೆಯಾಗಬಹುದು. ಹೀಗಾಗಿ ಜಂಟಿ ಸರ್ವೇ ಪೂರ್ಣಗೊಂಡ ಬಳಿಕವಷ್ಟೇ ಪ್ಲಾಂಟೇಶನ್ ಭೂಮಿ ಗುತ್ತಿಗೆಗೆ ನೀಡುವ ಕುರಿತ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತದೆ. ಎರಡು ವರ್ಷಗಳಲ್ಲಿ ಸಾಕಷ್ಟು ಕಾರ್ಯಗಳು ನಡೆದಿದ್ದು, ಇನ್ನೂ ಸಾಕಷ್ಟು ಕೆಲಸಗಳು ಆಗದೆ ಬಾಕಿ ಉಳಿದಿವೆ. ಹಿಂದೆ ಭೂಮಿ ಮಂಜೂರಾದ ಪ್ರಕರಣಗಳಲ್ಲಿ ಕಾಲ ಕಾಲಕ್ಕೆ ದಾಖಲಾತಿಗಳನ್ನು ನೀಡುವ ಕಾರ್ಯ ನಡೆದಿದ್ದಲ್ಲಿ ಇಷ್ಟೊಂದು ಸಮಸ್ಯೆಯಾಗುತ್ತಿರಲಿಲ್ಲ ಎಂದರು.

    ಪೌತಿ ಖಾತೆ ಬದಲಾವಣೆ ಮಾಡುವ ಪ್ರಕ್ರಿಯೆ ಹಿಂದಿನಿಂದಲೂ ಕಾಲ ಕಾಲಕ್ಕೆ ಆಗಬೇಕಿತ್ತು. ಅದು ಬಾಕಿ ಉಳಿದಿವೆ. ಅವುಗಳ ಖಾತೆಯನ್ನೂ ನಾವು ಬದಲಾವಣೆ ಮಾಡಬೇಕಾಗಿದೆ. ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಖಾತೆ ಬದಲಾವಣೆ ಮಾಡಲಾಗಿದ್ದರೂ ಇನ್ನೂ ಸಾಕಷ್ಟು ಪ್ರಕರಣಗಳು ನಮ್ಮ ಮುಂದಿವೆ. ನಮ್ಮ ಸಿಬ್ಬಂದಿಗೆ ಕೆಲಸದ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಇ-ಆಫೀಸ್ ವ್ಯವಸ್ಥೆಯನ್ನು ತಾಲ್ಲೂಕು ಕಚೇರಿ ಹಾಗೂ ನಾಡ ಕಚೇರಿವರೆಗೂ ವಿಸ್ತರಿಸಿದ್ದೇವೆ. ಗ್ರಾಮ ಲೆಕ್ಕಿಗರಿಗೆ ಲ್ಯಾಪ್‌ಟಾಪ್ ಒದಗಿಸಲಾಗಿದ್ದು, ಅವರು ಕ್ಷೇತ್ರದಲ್ಲಿ ಕಾರ್ಯನಿರತರಾಗಿದ್ದಾಗಲೇ ನೇರವಾಗಿ ಅಲ್ಲಿಂದಲೇ ಅಪ್‌ಲೋಡ್ ಮಾಡುವಂತಾದರೆ ಅವರಿಗೂ ಕೆಲಸದ ಒತ್ತಡ ಕಡಿಮೆಯಾಗಲಿದೆ. ಆಗಬೇಕಾಗಿರುವ ಕೆಲಸಗಳಿಗೆ ಹೆಚ್ಚಿನ ಗಮನವನ್ನು ನೀಡಬೇಕಾಗಿದೆ ಎಂದರು

    ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡ ನಿರ್ಮಾಣ ಆಗಬೇಕೆನ್ನುವುದು ಬಹುದಿನಗಳ ಬೇಡಿಕೆ. ಇದೀಗ ನಿಂತು ಹೋಗಿರುವ ಕಾಮಗಾರಿಯ ಎರಡನೇ ಹಂತಕ್ಕೆ ಅಗತ್ಯ ಅನುದಾನ ಮಂಜೂರಾದಲ್ಲಿ ಈ ಜಿಲ್ಲೆಯ ಬಹುದಿನಗಳ ನಿರೀಕ್ಷೆ ಈಡೇರಲಿದೆ. ಜಿಲ್ಲೆಯಲ್ಲಿ ಹೊಸ ತಾಲ್ಲೂಕುಗಳ ರಚನೆಗೆ ಪೂರಕವಾಗಿ ಕಳಸ ಹಾಗೂ ಅಜ್ಜಂಪುರಕ್ಕೆ ತಾಲ್ಲೂಕು ಆಡಳಿತ ಕಚೇರಿಯನ್ನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.

    ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಪ್ರಕರಣಗಳನ್ನು ಹೊರ ತೆಗೆದು ಅವುಗಳಿಗೆ ಶಾಶ್ವತ ಪರಿಹಾರವನ್ನು ಒದಗಿಸುವ ಮೂಲಕ ಜನರು ನೆಮ್ಮದಿಯಿಂದ ಬದುಕಬೇಕು ಎನ್ನುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ. ಹಿಂದೆ ೧೦, ೩೦, ೪೦, ೫೦ ವರ್ಷಗಳಿಂದ ಮಂಜೂರಾಗಿರುವ ಭೂಮಿಗಳಿಗೆ ಇಂದಿಗೂ ಪೋಡಿ ಮಾಡಿಕೊಡದೇ ಇರುವುದರಿಂದ ಆ ಜನರು ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಹಿಂದೆ ಜಮೀನು ಮಂಜೂರು ಮಾಡುವತ್ತ ಮಾತ್ರ ಗಮನ ಹರಿಸಲಾಗಿತ್ತು. ಅಂದೇ ಪೋಡಿಗಳನ್ನು ದುರಸ್ತಿಪಡಿಸಿ ದಾಖಲಾತಿಗಳನ್ನು ಒದಗಿಸಿದ್ದರೆ ಇಂದು ಇಷ್ಟೊಂದು ಕಡತಗಳು ಕಳೆದುಹೋಗಿವೆ ಎನ್ನುವ ಸಮಸ್ಯೆಗಳು ಎದುರಾಗುತ್ತಿರಲಿಲ್ಲ. ಅಂಥವುಗಳನ್ನು ಹುಡುಕಿ ಅವುಗಳನ್ನು ಅಭಿಯಾನದ ರೂಪದಲ್ಲಿ ಕಾರ್ಯಗತಗೊಳಿಸುವ ಕಾರ್ಯವನ್ನು ಇಲಾಖೆ ಕೈಗೆತ್ತಿಕೊಂಡಿದೆ ಎಂದು ಹೇಳಿದರು.

    ಹಿಂದೆ ಅರ್ಜಿ ಕೊಟ್ಟವರಿಗೆ ಮಾತ್ರ ಪೋಡಿ ಮಾಡಿಕೊಡಲಾಗುತ್ತಿತ್ತು. ಇದರಿಂದ ಯಾರು ಶಕ್ತರಿದ್ದಾರೆ ಅಂಥವರು ಮಾತ್ರ ಪ್ರಯೋಜನ ಪಡೆದುಕೊಳ್ಳುತ್ತಿದ್ದರು. ಇದೀಗ ನಾವೇ ರೈತರ ಮನೆ ಬಾಗಿಲಿಗೆ ಹೋಗಿ ಪೋಡಿ ಮಾಡಿಕೊಡುವ ಪ್ರಕ್ರಿಯೆಯನ್ನು ಆರಂಭಿಸಿದ್ದೇವೆ. ಹಿಂದಿನ ದಾಖಲೆಗಳನ್ನು ಪರಿಶೀಲಿಸಿದಾಗ, ಮೂರು ವರ್ಷದಲ್ಲಿ ಕೇವಲ ೫೮೦೦ ಪ್ರಕರಣಗಳು ಮಾತ್ರ ಪೋಡಿ ದುರಸ್ತಿಯಾಗಿದ್ದವು. ಅಭಿಯಾನ ಆರಂಭವಾಗಿ ಕಳೆದ ಏಳೆಂಟು ತಿಂಗಳಲ್ಲಿ ನಾವು ರೈತರಿಗೆ ಮಂಜೂರಾದ ೮೨ ಸಾವಿರ ಜಮೀನುಗಳನ್ನು ಅಳತೆ ಮಾಡಲಾಗಿದೆ. ನಮ್ಮ ಇಲಾಖೆಯ ಅಧಿಕಾರಿಗಳೇ ಮನೆ ಬಾಗಿಲಿಗೆ ಹೋಗಿ ಈ ಕೆಲಸ ಮಾಡಿಕೊಟ್ಟಿದ್ದಾರೆ. ಇದರಿಂದಾಗಿ ಅವರಿಗೆ ದೊರೆಯದಿದ್ದ ಎಲ್ಲಾ ಹಕ್ಕುಗಳು ದೊರಕಿವೆ ಎಂದು ತಿಳಿಸಿದರು.

    ಕಂದಾಯ ಗ್ರಾಮ ಉಪ ಗ್ರಾಮಗಳನ್ನು ಮಾಡಿರುವುದರಿಂದ ಕಳೆದ ಎರಡು ವರ್ಷಗಳಲ್ಲಿ ಸುಮಾರು ೧.೧೧ ಲಕ್ಷಗಳಷ್ಟು ಜನರಿಗೆ ಹಕ್ಕುಪತ್ರಗಳನ್ನು ನೀಡಲಾಗಿದೆ. ಈ ಜಿಲ್ಲೆಯಲ್ಲಿ ೩೦೦ ಗ್ರಾಮಗಳನ್ನು ೩೦೦ ಉಪ ಗ್ರಾಮಗಳನ್ನು ಅರ್ಹವಾಗಿರುವವೆಂದು ಗುರುತಿಸಲಾಗಿದೆ. ಅವೆಲ್ಲವನ್ನು ಸರಿಪಡಿಸಿದರೆ ಸುಮಾರು ಈಗಾಗಲೇ ಆಗಿರುವ ಪ್ರಕರಣಗಳ ಹೊರತಾಗಿ ಇನ್ನೂ ೬೦೦ ವಸತಿ ಪ್ರದೇಶಗಳಿಗೆ ದಾಖಲೆ ಒದಗಿಸುವಂತಹ ಕಾರ್ಯ ಆಗಲಿದೆ. ಅದನ್ನು ಮುಂದಿನ ಆರು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ ಎಂದರು.

    ಮಲೆನಾಡು ಪ್ರದೇಶಗಳಲ್ಲಿ ಹೆಚ್ಚು ಮಳೆ ಬೀಳುವ ಸಂದರ್ಭದಲ್ಲಿ ಗುಡ್ಡದ ಮೇಲೆ ಹಾಗೂ ಗುಡ್ಡದ ಕೆಳಗೆ ವಾಸಿಸುವ ಜನರನ್ನು ಮುಂಚಿತವಾಗಿ ಬೇರೆಡೆಗೆ ವಾಸಿಸಲು ವ್ಯವಸ್ಥೆ ಮಾಡಬೇಕು. ಸಮಸ್ಯೆಯಾಗುವ ಮೊದಲೇ ಪ್ರಾಣಹಾನಿಯಾಗುವುದನ್ನು ತಡಗಟ್ಟಲು ಕ್ರಮ ವಹಿಸಬೇಕು. ಮಲೆನಾಡು ಹಾಗೂ ಕರಾವಳಿ ಪ್ರದೇಶಗಳ ಗುಡ್ಡ ಕುಸಿತವನ್ನು ತಡೆಯಲು ೪೦೦ ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಅನುದಾನ ಬಂದ ತಕ್ಷಣ ಹಣ ಬಿಡುಗಡೆ ಮಾಡಲಾಗುವುದು. ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಸಭೆಯಲ್ಲಿ ಶಾಸಕ ಹಾಗೂ ಕ್ರೆಡಿಲ್ ಅಧ್ಯಕ್ಷ ಟಿ.ಡಿ.ರಾಜೇಗೌಡ, ಶಾಸಕರುಗಳಾದ ಜಿ.ಹೆಚ್.ಶ್ರೀನಿವಾಸ್, ಕೆ.ಎಸ್.ಆನಂದ್, ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್., ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು, ಭದ್ರಾವತಿ ಉಪವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ, ಕೊಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಲ್.ನಂದೀಶ್ ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕರಡ್ಡಿ, ಉಪವಿಭಾಗಾಧಿಕಾರಿಗಳಾದ ಕಾಂತರಾಜ್, ಸುದರ್ಶನ್ ಬಿ.ಕೆ., ಎಲ್ಲಾ ತಾಲ್ಲೂಕುಗಳ ತಹಸೀಲ್ದಾರರು ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

    Disposal of plantation land lease application after joint survey

  • ರಾಜ್ಯಾದ್ಯಂತ ತೆರೆಕಂಡ ‘ಎಕ್ಸ್ ಅಂಡ್ ವೈ’ ಚಲನಚಿತ್ರ

    ರಾಜ್ಯಾದ್ಯಂತ ತೆರೆಕಂಡ ‘ಎಕ್ಸ್ ಅಂಡ್ ವೈ’ ಚಲನಚಿತ್ರ

    ಚಿಕ್ಕಮಗಳೂರು : ರಾಮಾ ರಾಮಾ ರೇ, ಒಂದಲ್ಲ ಎರಡಲ್ಲ ‘ಮ್ಯಾನ್ ಆಫ್ ದಿ ಮ್ಯಾಚ್ ಚಲನಚಿತ್ರಗಳ ಖ್ಯಾತಿಯ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಡಿ. ಸತ್ಯಪ್ರಕಾಶ್ ನಿರ್ಮಿಸಿ ನಿರ್ದೇಶಿಸಿರುವುದರ ಜೊತೆಗೆ ಪ್ರಮುಖ ಪಾತ್ರಗಳಲ್ಲೂ ನಟಿಸಿರುವ ಬಹು ನಿರೀಕ್ಷಿತ ‘ಎಕ್ಸ್ ಅಂಡ್ ವೈ’ ಚಲನಚಿತ್ರ ಇಂದು ರಾಜ್ಯಾದ್ಯಂತ ತೆರೆ ಕಂಡಿದೆ.

    ಚಿತ್ರದ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದ್ದು, ಇತ್ತೀಚಿಗಷ್ಟೇ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಇದರಲ್ಲಿ ನಿರ್ದೇಶಕರು ಪ್ರೇಕ್ಷಕರ ಮನಃ ಸೆಳೆದಿದ್ದಾರೆ. ಚಿತ್ರವನ್ನು ನೋಡುವ ಕಾತರವನ್ನು ಪ್ರೇಕ್ಷಕರಲ್ಲಿ ಹೆಚ್ಚಿಸಿದ್ದಾರೆ, ವಿಭಿನ್ನ ಕಂಟೆಂಟ್ ಹೊಂದಿರುವ ಈ ಚಿತ್ರದ ಟ್ರೈಲರ್ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ರಾಜ್ಯಾದ್ಯಂತ ‘ಎಕ್ಸ್ ಅಂಡ್ ವೈ’ ಚಲನಚಿತ್ರ ಇಂದು ಎಲ್ಲಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ನಿರ್ದೇಶಕ ಡಿ. ಸತ್ಯಪ್ರಕಾಶ್ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರಕ್ಕೆ ಲವಿತ್ ಛಾಯಾಗ್ರಹಣ, ಬಿ.ಎಸ್. ಕೆಂಪರಾಜು ಸಂಕಲನ, ಕೌಶಿಕ್ ಹರ್ಷ ಸಂಗೀತ ನಿರ್ದೇಶನ ಹಾಗೂ ವರದರಾಜ್ ಕಾಮತ್ ಅವರ ಕಲಾ ನಿರ್ದೇಶನವಿದೆ.

    ಈ ಚಲನಚಿತ್ರವನ್ನು ಸತ್ಯ ಪಿಕ್ಚರ್‍ಸ್ ನಿರ್ಮಿಸಿ ಡಿ. ಸತ್ಯಪ್ರಕಾಶ್, ಬೃಂದಾ ಆಚಾರ್ಯ, ಅಥರ್ವ ಪ್ರಕಾಶ್, ಅಯನ, ದೊಡ್ಡಣ್ಣ, ಸುಂದರ್, ವೀಣಾ ಸುಂದರ್, ಹರಿಣಿ, ಧರ್ಮಣ್ಣ ಕಡೂರು, ತೇನಪ್ಪನ್ ಮುಂತಾದವರು ಈ ಚಿತ್ರದ ತಾರಾಗಣದಲ್ಲಿದ್ದಾರೆ.

    The movie ‘X and Y’ opened across the state