Category: ಚಿಕ್ಕಮಗಳೂರು

  • ಪೌರ ಕಾರ್ಮಿಕರ ಸಮಸ್ಯೆ ತಾಲೂಕು ಮಟ್ಟದಲ್ಲೇ ಪರಿಹರಿಸಲು ಸೂಚನೆ

    ಪೌರ ಕಾರ್ಮಿಕರ ಸಮಸ್ಯೆ ತಾಲೂಕು ಮಟ್ಟದಲ್ಲೇ ಪರಿಹರಿಸಲು ಸೂಚನೆ

    ಚಿಕ್ಕಮಗಳೂರು:  ಪೌರ ಕಾರ್ಮಿಕರ ಸಮಸ್ಯೆಯನ್ನು ತಾಲ್ಲೂಕು ಮಟ್ಟದ ಅಧಿಕಾರಿಗಳು ತಮ್ಮ ಹಂತದಲ್ಲಿ ಪರಿಹರಿಸಲು ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ಸೂಚಿಸಿದರು.

    ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮ್ಯಾನುಯಲ್ ಸ್ಕ್ಯಾವೆಂಜರ್‌ಗಳ ನೇಮಕಾತಿ ನಿ?ಧ ಮತ್ತು ಅವರ ಪುನರ್ವಸತಿ ಅಧಿನಿಯಮ ೨೦೧೩ ರನ್ವಯ ಜಿಲ್ಲಾ ಮಟ್ಟದ ಜಾಗೃತಿ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಪೌರ ಕಾರ್ಮಿಕರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು. ಅವರಿಗೆ ಸವಲತ್ತುಗಳನ್ನು ಕಲ್ಪಿಸುವತ್ತ ಗಮನ ಹರಿಸಬೇಕು ಎಂದ ಅವರು, ಸರ್ಕಾರ ಪೌರ ಕಾರ್ಮಿಕರಿಗಾಗಿ ನೀಡಿರುವ ಸವಲತ್ತುಗಳನ್ನು ಕೊಡುವಲ್ಲಿ ಅಧಿಕಾರಿಗಳು ವಿಳಂಬ ಮಾಡಬಾರದು ಎಂದರು.

    ಪೌರಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ಅವರಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆಯನ್ನು ಮಾಡಿಸಬೇಕು, ಗುರುತಿನ ಚೀಟಿಯನ್ನು ಕಡ್ಡಾಯವಾಗಿ ನೀಡಬೇಕೆಂದ ಅವರು, ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕವಾದ ವಿಶ್ರಾಂತಿ ಗೃಹಗಳನ್ನು ನಗರಸಭೆ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಮಾಡಬೇಕಲ್ಲದೆ, ಸರ್ಕಾರಿ ಆಸ್ಪತ್ರೆಗಳಲ್ಲೂ ಕೂಡ ಅವರಿಗೆ ವಿಶ್ರಾಂತಿ ಗೃಹಗಳನ್ನು ಕಲ್ಪಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಕಸ ಸಂಗ್ರಹಣೆಗಾಗಿ ಬರುವ ಪೌರ ಕಾರ್ಮಿಕರಿಗೆ ಕಡಿಮೆ ವೇತನ ನೀಡಲಾಗುತ್ತಿದ್ದು, ಕನಿಷ್ಠ ವೇತನವನ್ನಾದರೂ ನೀಡುವಂತೆ ಸಮಿತಿಯ ಸದಸ್ಯರಾದ ವೆಂಕಟೇಶ್ ಅವರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಈ ಮೊದಲು ಕಸ ಸಂಗ್ರಹಣೆಗೆ ಗುತ್ತಿಗೆ ನೀಡಲಾಗಿತ್ತು. ಗುತ್ತಿಗೆ ಅವಧಿ ಇನ್ನೂ ಒಂದು ತಿಂಗಳಲ್ಲಿ ಮುಗಿಯುತ್ತದೆ. ನಂತರ ಈ ಕುರಿತು ಕ್ರಮ ವಹಿಸುವಂತೆ ಪೌರಾಯುಕ್ತರಿಗೆ ಸೂಚಿಸಿದರು.

    ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಪ್ರತಿ ಮಾಹೆ ೫ನೇ ತಾರೀಖಿನೊಳಗೆ ವೇತನ ಪಾವತಿಸಲು ಕ್ರಮ ವಹಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ತಿಳಿಸಿದ ಅವರು, ಪೌರ ಕಾರ್ಮಿಕರಿಗೆ ರಜೆ ಮಂಜೂರು ಮಾಡಲು ಸಂಬಂಧಿಸಿದ ತಾಲ್ಲೂಕು ವೈದ್ಯಾಧಿಕಾರಿಗಳಿಗೆ ಕ್ರಮ ವಹಿಸುವಂತೆ ತಿಳಿಸಿದರು.

    ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಮಾಲತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್ಥಬಾಬು, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಮಿತಿಯ ಸದಸ್ಯರುಗಳು ಹಾಜರಿದ್ದರು.

    Instructions to resolve the problem of civic workers at the taluk level

  • ಸರ್ಫೇಸಿ ಕಾಯ್ದೆಯಡಿ ಇ-ಹರಾಜು ನಿಲ್ಲಿಸದಿದ್ದರೆ ಅನಿರ್ದಿಷ್ಟಾವಧಿ ಹೋರಾಟಕ್ಕೆ ಕೆಜಿಎಫ್ ನಿರ್ಧಾರ

    ಸರ್ಫೇಸಿ ಕಾಯ್ದೆಯಡಿ ಇ-ಹರಾಜು ನಿಲ್ಲಿಸದಿದ್ದರೆ ಅನಿರ್ದಿಷ್ಟಾವಧಿ ಹೋರಾಟಕ್ಕೆ ಕೆಜಿಎಫ್ ನಿರ್ಧಾರ

    ಚಿಕ್ಕಮಗಳೂರು:  ಸ್ವಾಭಿಮಾನಿ ರೈತ ಬೆಳೆಗಾರರ ಫಲವತ್ತಾದ ಭೂಮಿಯನ್ನು ಸರ್ಫೇಸಿ ಕಾಯ್ದೆ ಅಡಿ ಕೆಲವು ಬ್ಯಾಂಕ್ ಅಧಿಕಾರಿಗಳು ದುರುದ್ದೇಶದಿಂದ ಇ-ಹರಾಜು ಮಾಡುವುದನ್ನು ನಿಲ್ಲಿಸದಿದ್ದರೆ ಈ ಪಿಡುಗಿನ ವಿರುದ್ಧ ಬ್ಯಾಂಕ್‌ಗಳ ಮುಂದೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದೆಂದು ಕರ್ನಾಟಕ ಬೆಳೆಗಾರರ ಒಕ್ಕೂಟ ಎಚ್ಚರಿಸಿದೆ.

    ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕೆಜಿಎಫ್ ಅಧ್ಯಕ್ಷ ಹೆಚ್.ಬಿ. ಶಿವಣ್ಣ, ಬೆಳೆಗಾರರ ಸಾಲ ತೀರುವಳಿ ಆದ ನಂತರವೂ ಕೆನರಾ ಬ್ಯಾಂಕ್ ಮೂಡಿಗೆರೆ ಶಾಖೆಯ ಮೂಲ ದಾಖಲೆಗಳನ್ನು ಬೆಳೆಗಾರರಿಗೆ ಹಿಂದಿರುಗಿಸದೇ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದರು.

    ಕಳೆದ ಮೂರು ವರ್ಷಗಳಿಂದ ಕಾಫಿ ಬೆಳೆಗಾರರ ಸಾಲ ವಸೂಲಾತಿಗಾಗಿ ಸರ್ಫೇಸಿ ಕಾಯ್ದೆ ಅಡಿಯಲ್ಲಿ ಬ್ಯಾಂಕ್‌ಗಳು ಇ-ಹರಾಜು ಮಾಡಲು ಮುಂದಾಗಿರುವ ಬಗ್ಗೆ ಪ್ರತಿರೋಧಿಸಿದ್ದು, ಇಂದೂ ಸಹ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.

    ಮೂಡಿಗೆರೆ ಕೆನರಾ ಬ್ಯಾಂಕ್ ಶಾಖೆಯಲ್ಲಿ ನಡುವಿನ ಮೊಳಕಲ್ ಗ್ರಾಮದ ಬೆಳೆಗಾರರಾದ ಕೆ.ಕೆ. ಸುರೇಶ್ ಇವರು ತೋಟದ ನಿರ್ವಹಣೆಗಾಗಿ ಸಾಲ ಪಡೆದುಕೊಂಡಿದ್ದು, ಹಲವಾರು ಕಾರಣಗಳಿಂದ ಸಾಲ ಮರುಪಾವತಿ ಮಾಡುವುದು ವಿಳಂಭವಾಗಿದ್ದು, ಕೆನರಾ ಬ್ಯಾಂಕ್‌ನ ಸೂಚನೆಯಂತೆ ಸುಮಾರು ೪೩ ಲಕ್ಷ ರೂಪಾಯಿಗಳನ್ನು ಜನವರಿ ತಿಂಗಳಿನಲ್ಲಿ ಮರುಪಾವತಿ ಮಾಡಿದ್ದರೂ ಇದೂವರೆಗೂ ಈ ಬೆಳೆಗಾರರಿಗೆ ಸಾಲದ ಭದ್ರತೆಗಾಗಿ ನೀಡಿದ್ದ ತೋಟದ ಮೂಲ ದಾಖಲೆಗಳನ್ನು ಹಿಂದುರಿಗಿಸದೇ ಬ್ಯಾಂಕ್ ಅಧಿಕಾರಿಗಳು ಅನುಚಿತ ವರ್ತನೆ ತೋರಿದ್ದಾರೆಂದು ದೂರಿದರು.

    ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಬೆಳೆಗಾರರ ಸಂಘಟನೆಗಳು, ಜನಪ್ರತಿನಿಧಿಗಳು ಹಾಗೂ ಎಲ್ಲಾ ಬ್ಯಾಂಕ್‌ಗಳ ಹಿರಿಯ ಅಧಿಕಾರಿಗಳ ಸಭೆಯನ್ನು ಕರೆಯಲಾಗಿತ್ತು, ಈ ಸಭೆಯಲ್ಲಿ ಸಂಸದರು ಸರ್ಫೇಸಿ ಕಾಯ್ದೆ ಅಡಿಯಲ್ಲಿ ರೈತ ಬೆಳೆಗಾರರ ಭೂಮಿಯನ್ನು ಹರಾಜು ಹಾಕುವುದನ್ನು ಸುಮಾರು ಆರು ತಿಂಗಳ ಕಾಲ ತಡೆ ಹಿಡಿಯುವಂತೆ ಹಾಗೂ ಬೆಳೆಗಾರರಿಗೆ ಬ್ಯಾಂಕ್‌ಗಳು ಓಟಿಎಸ್ ಮೂಲಕ ಸೌಹಾರ್ದಯುತವಾಗಿ ತಮ್ಮ ಸಾಲ ತೀರುವಳಿಯನ್ನು ಮಾಡಲು ಅವಕಾಶ ಕಲ್ಪಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು ಎಂದು ಹೇಳಿದರು.

    ಬೆಂಗಳೂರಿನ ಕಾಫಿ ಮಂಡಳಿಯಲ್ಲಿ ಅಧ್ಯಕ್ಷ ಎಂ.ಜೆ. ದಿನೇಶ್ ಅವರ ನೇತೃತ್ವದಲ್ಲಿ ರಾಜ್ಯಮಟ್ಟದ ಬ್ಯಾಂಕರ್‌ಗಳ ಸಭೆಯನ್ನು ಕರೆಯಲಾಗಿದ್ದು, ಅಲ್ಲಿಯೂ ಕೂಡ ಬೆಳೆಗಾರರ ತೋಟಗಳನ್ನು ಇ-ಹರಾಜು ಮಾಡುವುದನ್ನು ಬಿಟ್ಟು ಬ್ಯಾಂಕ್ ಹಾಗೂ ಬೆಳೆಗಾರರು ಪರಸ್ಪರ ಮಾತುಕತೆ ಮೂಲಕ ಋಣಮುಕ್ತರಾಗಲು ಅವಕಾಶ ಕಲ್ಪಿಸಿಕೊಡುವುದಾಗಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿತ್ತು ಎಂದು ಮಾಹಿತಿ ನೀಡಿದರು.

    ಇತ್ತೀಚಿನ ಬೆಳವಣಿಗೆಗಳಲ್ಲಿ ಕೆಲವು ಬ್ಯಾಂಕ್ ಹಿರಿಯ ಅಧಿಕಾರಿಗಳು ಸುಸ್ತಿದಾರರಾಗಿರುವ ಬೆಳೆಗಾರರ ಸಾಲವನ್ನು ಮಾತುಕತೆಗಳ ಮೂಲಕ ತೀರ್ಮಾನ ಮಾಡುವುದನ್ನು ಪರಿಗಣಿಸದೇ ಕೆಲವು ರಿಯಲ್ ಎಸ್ಟೇಟ್ ಬಂಡವಾಳ ಶಾಹಿಗಳ ಕೈಗೊಂಬೆಯಂತೆ ವರ್ತಿಸಿದ್ದಾರೆಂದು ಟೀಕಿಸಿದರು.

    ಈ ಘಟನೆಗಳನ್ನು ಸಧ್ಯದಲ್ಲೇ ನಿಯಂತ್ರಿಸದಿದ್ದಲ್ಲಿ ರೈತ ಬೆಳೆಗಾರರು ಜೀವನಾಧಾರವಾಗಿರುವ ತಮ್ಮ ಅಮೂಲ್ಯವಾದ ಭೂಮಿಯನ್ನು ರಿಯಲ್ ಎಸ್ಟೇಟ್ ಉದ್ದಿಮೆದಾರರಿಗೆ ಅನಿವಾರ್ಯವಾಗಿ ಒಪ್ಪಿಸಬೇಕಾಗಿರುತ್ತದೆ. ಇದಕ್ಕೆ ದುರಾಲೋಚನೆ ಮನಸ್ಥಿತಿಯ ಬ್ಯಾಂಕ್ ಅಧಿಕಾರಿಗಳು ಕಾರಣ ಎಂದು ಲೇವಡಿ ಮಾಡಿದರು.

    ಈ ಕೂಡಲೇ ಡಿಎಲ್‌ಬಿಸಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ಕಟ್ಟುನಿಟ್ಟಾದ ಸೂಚನೆಗಳನ್ನು ನೀಡಿ ಬೆಳೆಗಾರರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದರು.

    ಪತ್ರಿಕಾಗೋಷ್ಠಿಯಲ್ಲಿ ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ, ಮುಖಂಡರಾದ ಜಯರಾಂ, ಸುರೇಶ್ ಗೌಡ, ಅಶೋಕ್ ಕುಮಾರ್, ಹಾಲಪ್ಪ, ರತೀಶ್ ಕುಮಾರ್, ಸುರೇಂದ್ರ, ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಮತ್ತಿತರರು ಉಪಸ್ಥಿತರಿದ್ದರು.

    KGF decides to continue indefinite protest if e-auctions under SARFAESI Act are not stopped

  • ಜಿಲ್ಲಾಧಿಕಾರಿಯಿಂದ ಕೆಎಸ್‌ಆರ್‌ಟಿಸಿ ಡಿಪೊ ಕಾಮಗಾರಿ ವೀಕ್ಷಣೆ

    ಜಿಲ್ಲಾಧಿಕಾರಿಯಿಂದ ಕೆಎಸ್‌ಆರ್‌ಟಿಸಿ ಡಿಪೊ ಕಾಮಗಾರಿ ವೀಕ್ಷಣೆ

    ಶೃಂಗೇರಿ: ಇಲ್ಲಿನ ತ್ಯಾವಣದಲ್ಲಿ ಕೆಎಸ್‌ಆರ್‌ಟಿಸಿ ಡಿಪೊ ಕಾಮಗಾರಿ ಸ್ಥಳಕ್ಕೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.

    ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಡಿಪೊ ಕಾಮಗಾರಿ ಇನ್ನು ಎರಡು ವರ್ಷದಲ್ಲಿ ಮುಗಿಯಲಿದೆ. ಈಗ ಮಳೆಗಾಲ ಆಗಿರುವುದರಿಂದ ಕಾಮಗಾರಿ ನಡೆಯುತ್ತಿಲ್ಲ. ಡಿಪೊದ ಒಳಗೆ ಬಸ್ ನಿಲ್ಲಲು ತಂಗುದಾಣ, ಕಟ್ಟಡ ಮತ್ತು ಡೀಸೆಲ್ ಟ್ಯಾಂಕ್ ನಿರ್ಮಾಣವಾಗಲಿದೆ.

    ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ನಾನೇ ಡಿಪೋದ ಸ್ಥಳ ಪರಿಶೀಲನೆ ಮಾಡಿದ್ದೇನೆ. ಇದರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ’ ಎಂದರು.

    ಬಳಿಕ ಜಿಲ್ಲಾಧಿಕಾರಿ ತಾಲ್ಲೂಕು ಕಚೇರಿಗೆ ಭೇಟಿ ನೀಡಿ ನಾಡ ಕಚೇರಿಯ ಕಾಮಗಾರಿ ಪರಿಶೀಲಿಸಿದರು. ತಹಶೀಲ್ದಾರ್ ಅನೂಪ್ ಸಂಜೋಗ್, ಶಿರೇಸ್ತೆದಾರ್ ಪ್ರವೀಣ್, ಜಗದೀಶ್, ಸಚಿನ್, ಆಹಾರ ನಿರೀಕ್ಷಕ ಬಿ.ಜಿ ನಾಗೇಶ್, ಇತರ ಅಧಿಕಾರಿಗಳು ಇದ್ದರು.

    ‘ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೊಪ್ಪ ತಾಲ್ಲೂಕು ಕಚೇರಿಯಲ್ಲಿ ನಡೆದ ಅವ್ಯವಹಾರ ಕುರಿತು ತನಿಖಾ ತಂಡ ರಚಿಸಿ ಆದೇಶಿಸಲಾಗಿದೆ. ವರದಿ ಬಳಿಕ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಪ್ರತಿಕ್ರಿಯಿಸಿದರು.

    Inspection of KSRTC Depot work by Collector

  • ಮಾದಕ ವಸ್ತುಗಳ ನಿಯಂತ್ರಣಕ್ಕೆ ಬಿಜೆಪಿ ಯುವ ಮೋರ್ಚಾ ಒತ್ತಾಯ

    ಮಾದಕ ವಸ್ತುಗಳ ನಿಯಂತ್ರಣಕ್ಕೆ ಬಿಜೆಪಿ ಯುವ ಮೋರ್ಚಾ ಒತ್ತಾಯ

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ವ್ಯಾಪಕವಾಗಿರುವ ಗಾಂಜಾ ಮಾರಾಟ ಹಾಗೂ ಸೇವನೆ ಸೇರಿದಂತೆ ಮಾದಕ ವಸ್ತುಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಮಂಗಳವಾರ ಎಸ್ಪಿ ವಿಕ್ರಮ ಅಮಟೆ ಅವರಿಗೆ ಮನವಿ ಸಲ್ಲಿಸಿದರು.

    ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಹಲವೆಡೆ ಯುವಜನತೆ ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗಿ ಗಲವೆ ಸೃಷ್ಟಿ ಮಾಡಿ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದ್ದಾರೆ. ಇಂಥವರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

    ಚಿಕ್ಕಮಗಳೂರು ನಗರದ ಸಾಯಿ ಮಧುವನ ಬಡಾವಣೆಯಲ್ಲಿರುವ ಪಾರ್ಕ್, ಗೌರಿ ಕಾಲುವೆ ನರಿಗುಡ್ಡನಹಳ್ಳಿ ವೃತ್ತದಲ್ಲಿರುವ ಖಾಲಿ ನಿವೇಶನಗಳು, ಎಐಟಿ ವೃತ್ತ, ವಾಜಪೇಯಿ ಲೇಔಟ್, ರೈಲ್ವೆ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರತಿದಿನ ಗಾಂಜಾ ಸೇವಿಸಿ ಕೆಲವರು ಬೈಕ್ ವೀಲಿಂಗ್ ಮಾಡುವ ಜೊತೆಗೆ ರಸ್ತೆಯಲ್ಲಿ ನಡೆದಾಡುವ ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಸಮಾಜದ ಸ್ವಾಸ್ಥ್ಯ ಕೆಡಿಸುವ ಇಂತಹ ಕೃತ್ಯಗಳು ಇನ್ನಷ್ಟು ಹೆಚ್ಚುವ ಮೊದಲೇ ಪೊಲೀಸ್ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ಮನವಿ ಸ್ವೀಕರಿಸಿ ಮಾತನಾಡಿದ ಎಸ್ಪಿ ವಿಕ್ರಮ ಅಮಟೆ, ಎಲ್ಲಿಯಾದರೂ ಮಾದಕ ವಸ್ತುಗಳ ಮಾರಾಟ ಹಾಗೂ ಸೇವನೆ ಬಗ್ಗೆ ಮಾಹಿತಿ ತಿಳಿದಲ್ಲಿ ಸಾರ್ವಜನಿಕರು ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ ಸಹಾಯವಾಣಿ 1908ಗೆ ಕರೆಮಾಡಿ ಮಾಹಿತಿ ನೀಡಬೇಕು. ಅಥವಾ ಡ್ರಗ್ ಫ್ರೀ ಕರ್ನಾಟಕ ಆಪ್ ಮೂಲಕ ಮಾಹಿತಿ ನೀಡಿದಲ್ಲಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದರು.

    ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಸೇರಿ ಸಮಾಜದಲ್ಲಿ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಬೇಕು. ಇದೊಂದು ಸಾಮಾಜಿಕ ಪಿಡುಗು. ಮಾದಕ ವಸ್ತು ಮಾರಾಟದ ಮೂಲ ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವ ಕೆಲಸ ನಿರಂತರವಾಗಿ ಮಾಡುತ್ತಿದ್ದೇವೆ. ಜನರು ಇನ್ನಷ್ಟು ಮುಕ್ತವಾಗಿ ಈ ಬಗ್ಗೆ ಮಾಹಿತಿ ನೀಡಿದಲ್ಲಿ ಪರಿಣಾಮಕಾರಿಯಾಗಿ ಮಾದಕ ವಸ್ತು ನಿಯಂತ್ರಣ ಸಾಧ್ಯವಾಗುತ್ತದೆ ಎಂದು ಹೇಳಿದರು.

    ಮಾದಕ ವಸ್ತು ಮಾರಾಟ ಮಾಡುವವರನ್ನು ಕಾನೂನು ಪ್ರಕಾರ ಶಿಕ್ಷೆಗೆ ಒಳಪಡಿಸಲಾಗುತ್ತದೆ. ಆದರೆ ಮಾದಕ ವಸ್ತು ಸೇವನೆ ಮಾಡುವವರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಿ ಬಳಿಕ ಅವರನ್ನು ಕೌನ್ಸಲಿಂಗ್ ಒಳಪಡಿಸಿ ಡಿಅಡಿಕ್ಷನ್ ಸೆಂಟರ್ ಗೆ ದಾಖಲು ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

    ಮನವಿ ಸಲ್ಲಿಸುವ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ಪ್ರಮುಖರಾದ ಸಚಿನ್ ಗೌಡ, ಅಂಕಿತಾ ಮತ್ತಿತರರಿದ್ದರು.

    BJP Yuva Morcha urges control of drugs

  • ಇನ್ನರ್‌ವೀಲ್ ಕ್ಲಬ್ ಸಮಾಜಮುಖಿ ಕಾರ್ಯಗಳಿಗೆ ಮುಂದಾಗಬೇಕು

    ಇನ್ನರ್‌ವೀಲ್ ಕ್ಲಬ್ ಸಮಾಜಮುಖಿ ಕಾರ್ಯಗಳಿಗೆ ಮುಂದಾಗಬೇಕು

    ಚಿಕ್ಕಮಗಳೂರು: ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ ಹಾಗೂ ಪರಿಸರ ರಕ್ಷಣೆ ಇಂತಹ ಅನೇಕ ಸಮಾಜಮುಖಿ ಉತ್ತಮ ಕಾರ್ಯಕ್ರಮಗಳನ್ನು ಇನ್ನರ್ ವೀಲ್ ಸಂಸ್ಥೆ ಆಯೋಜನೆ ಮಾಡುವ ಅಗತ್ಯ ಇದೆ ಎಂದು ಕರ್ನಾಟಕ ಮಹಿಳಾ ಸಹಕಾರ ಬ್ಯಾಂಕ್ ಅಧ್ಯಕ್ಷೆ ಬಿ.ಸಿ. ಗೀತಾ ಹೇಳಿದರು.

    ಅವರು ಟಿಎಂಎಸ್‌ನ ಎಂಎಲ್‌ವಿ ರೋಟರಿ ಸಭಾಂಗಣದಲ್ಲಿ ಇನ್ನರ್ ವೀಲ್ ಕ್ಲಬ್ ಚಿಕ್ಕಮಗಳೂರು ಜಿಲ್ಲೆ-೩೧೮ ಇದರ ೨೦೨೫-೨೬ನೇ ಸಾಲಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಯನಾ ಸಂತೋಷ್ ಅವರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಅಭಿನಂದಿಸಿ ಶುಭಾಶಯ ಕೋರಿ ಮಾತನಾಡಿದರು.

    ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸೇವೆಯನ್ನು ತಲುಪಿಸುವ ನಿಟ್ಟಿನಲ್ಲಿ ಇನ್ನರ್ ವೀಲ್ ಕ್ಲಬ್ ಪದಾಧಿಕಾರಿಗಳು ಯೋಜನೆ, ಯೋಚನೆಗಳ ಮೂಲಕ ಕರ್ತವ್ಯ ನಿರತರಾಗಬೇಕೆಂದು ಕರೆನೀಡಿದರು.

    ಸಮಾಜದಲ್ಲಿ ಆಶಕ್ತರನ್ನು ಕಂಡಾಗ ನಮ್ಮ ಸಹಾಯಹಸ್ತ ಬಯಸುವವರಿಗಾಗಿ ಅಂತಹ ಬಡವರನ್ನು ಗುರ್ತಿಸಿ ಸಹಾಯ ಸೇವೆ ನೀಡುವುದೇ ಇನ್ನರ್ ವೀಲ್ ಸಂಸ್ಥೆಯ ಪ್ರಮುಖ ಉದ್ದೇಶ ಎಂದ ಅವರು, ರೋಟರಿ ಕ್ಲಬ್ ಮತ್ತು ಇನ್ನರ್ ವೀಲ್ ಕ್ಲಬ್‌ನ ಹೆಚ್ಚು ಸದಸ್ಯರು ವಿಮುಖರಾಗುತ್ತಿದ್ದಾರೆ. ಈ ಮಧ್ಯೆ ಈ ಕ್ಲಬ್‌ನಲ್ಲಿ ದಾನಿಗಳಾಗಿರುವ ೧೫ ನೂತನ ಸದಸ್ಯರು ಸದಸ್ಯತ್ವ ಪಡೆದುಕೊಂಡಿರುವುದರಿಂದ ಈ ಮೂಲಕ ಕ್ಲಬ್ ಉತ್ತಮವಾಗಿ, ಸುಲಲಿತವಾಗಿ ನಡೆಯಲಿ ಎಂದು ಶುಭ ಹಾರೈಸಿದರು.

    ೧೯೭೩ ರಲ್ಲಿ ಇಂಗ್ಲೆಂಡಿನಲ್ಲಿ ಪ್ರಾರಂಭಗೊಂಡ ಇನ್ನರ್‌ವೀಲ್ ಕ್ಲಬ್ ಭಾರತದಲ್ಲಿ ೧೯೫೬ ರಲ್ಲಿ ಅಹಮದಾಬಾದ್‌ನಲ್ಲಿ ಆರಂಭವಾಯಿತು. ಇಂತಹ ಇಂಟರ್ ನ್ಯಾಷನಲ್ ಕ್ಲಬ್‌ಗೆ ನಾವುಗಳೆಲ್ಲರು ಸದಸ್ಯರಾಗಿರುವುದು ಸಂತಸದ ಜೊತೆಗೆ ಹೆಮ್ಮೆ ಎಂದು ಹೇಳಿದರು.

    ಹೃದಯ ಶ್ರೀಮಂತಿಕೆ ಹೊಂದಿದ್ದರೆ ಮನಸ್ಸು ಬಂದಾಗ ಇನ್ನೊಂದು ಮಹಿಳಾ ಜೀವನ ಸಂಧ್ಯಾ ಪ್ರಾರಂಭಿಸಬಹುದು ಎಂದು ಸಲಹೆ ನೀಡಿದ ಅವರು, ಆ ಶಕ್ತಿ ನಿಮ್ಮೆಲ್ಲರಲ್ಲಿದೆ ಎಂದು ಭಾವಿಸುತ್ತೇನೆ, ದೂರದೃಷ್ಟಿ ಜೊತೆಗೆ ಘೋಷವಾಕ್ಯವಿದ್ದಾಗ ಮಾತ್ರ ಇಂತಹ ಸಾರ್ವಜನಿಕ ಸಂಸ್ಥೆಗಳಲ್ಲಿ ಉತ್ತಮವಾಗಿ, ಸಾಂಘಿಕವಾಗಿ ನಡೆಯಲು ಸಾಧ್ಯ ಎಂದರು.

    ನೂತನ ಅಧ್ಯಕ್ಷರಾಗಿ ನಯನಾ ಸಂತೋಷ್ ಆಯ್ಕೆಯಾಗಿದ್ದು, ಮೂರನೇ ಬಾರಿಗೆ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸುತ್ತಿರುವುದು ತೃಪ್ತಿ ಮತ್ತು ಹೆಮ್ಮೆ ತಂದಿದೆ, ಇದೊಂದು ಇನ್ನರ್ ವೀಲ್ ಕ್ಲಬ್‌ಗೆ ತಾವು ಹೊಂದಿರುವ ಅವಿನಾಭಾವ ಸಂಬಂಧ ಎಂದು ಹೇಳಿದರು.

    ನೂತನ ಅಧ್ಯಕ್ಷರು ವೇದಿಕೆಯಲ್ಲಿ ಸಂತೋಷ, ದುಃಖ, ಆಶ್ಚರ್ಯ ಇವೆಲ್ಲವುಗಳ ಮಧ್ಯೆ ಇಂದು ವಿರಾಜಮಾನರಾಗಿ, ವಿಜೃಂಭಿಸಿ ವಿರಮಿಸುತ್ತಿದ್ದಾರೆ. ಇದಕ್ಕೆ ಎಲ್ಲಾ ರೀತಿಯ ಸಂತೋಷ ನಿಮ್ಮಿಂದ ದೊರೆಯಲಿ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದರು.

    ಜೀವನದಲ್ಲಿ ಸಂಸ್ಕೃತಿ ಸಂಸ್ಕಾರ ಇವುಗಳನ್ನು ಸರಿಯಾದ ರೀತಿಯಲ್ಲಿ ಉಳಿಸಿ-ಬೆಳೆಸಿದಾಗ ಮುಂದಿನ ಪೀಳಿಗೆಯನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯಲು ಸಹಕಾರಿಯಾಗಲಿದೆ, ಕಷ್ಟದ ಅರಿವು ತಮ್ಮ ಮಕ್ಕಳಲ್ಲಿ ಬೆಳೆಸಬೇಕು ಆಗ ಮಾತ್ರ ಮಕ್ಕಳು ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂದು ಕಿವಿಮಾತು ಹೇಳಿದರು.

    ನೂತನ ಅಧ್ಯಕ್ಷೆ ನಯನಾ ಸಂತೋಷ್ ಅಧಿಕಾರ ಸ್ವೀಕರಿಸಿ ಮಾತನಾಡಿ, ಜನಪರವಾಗಿ ಸೇವೆ ಸಲ್ಲಿಸುತ್ತಿರುವ ಇನ್ನರ್ ವೀಲ್ ಕ್ಲಬ್‌ಗೆ ತಾವು ಅಧ್ಯಕ್ಷರಾಗಿ ಆಯ್ಕೆಮಾಡಿರುವುದಕ್ಕೆ ಆಬಾರಿಯಾಗಿದ್ದೇನೆ, ಇದೂವರೆಗೆ ಕ್ಲಬ್‌ನ ಎಲ್ಲಾ ಸದಸ್ಯರು ನೀಡಿದ ಸಹಕಾರವನ್ನು ಸ್ಮರಿಸಿದರು.

    ಮಾಜಿ ಅಧ್ಯಕ್ಷೆ ಶಾಲಿನಿ ನಾಗೇಶ್ ಮಾತನಾಡಿ, ತಮ್ಮ ಅಧಿಕಾರವಧಿಯಲ್ಲಿ ಹಲವಾರು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿದ್ದು ತೃಪ್ತಿ ತಂದಿದೆ. ಈ ಎಲ್ಲಾ ಕಾರ್ಯಗಳಲ್ಲಿ ಸಹಕರಿಸಿದ ಕ್ಲಬ್‌ನ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.

    ಈ ಸಂದರ್ಭದಲ್ಲಿ ಕ್ಲಬ್‌ನ ಉಪಾಧ್ಯಕ್ಷೆ ಮಾಲವಿ ರಘುನಂದನ್, ಕಾರ್ಯದರ್ಶಿ ಶಾಲಿನಿ ನಾಗೇಶ್, ಖಜಾಂಚಿ ಸ್ನೇಹ ಸಂತೋಷ್, ಐಎಸ್‌ಓ ಸೌನಲ್ಯ ನಟರಾಜ್, ಎಡಿಟರ್ ನವ್ಯ ಅಮಿತ್ ಮತ್ತಿತರರು ಉಪಸ್ಥಿತರಿದ್ದರು.

    Innerwheel Club should take up social work

  • 2 ವರ್ಷಗಳ ಕಾಲ ನಗರದ ಜನರಿಗೆ ಕುಡಿಯುವ ನೀರಿಗೆ ತೊಂದರೆ ಇರುವುದಿಲ್ಲ

    2 ವರ್ಷಗಳ ಕಾಲ ನಗರದ ಜನರಿಗೆ ಕುಡಿಯುವ ನೀರಿಗೆ ತೊಂದರೆ ಇರುವುದಿಲ್ಲ

    ಚಿಕ್ಕಮಗಳೂರು: ನಗರಕ್ಕೆ ನೀರು ಪೂರೈಸುವ ಹಿರೇಕೊಳಲೆ ಕೆರೆಗೆ ಇಂದು ಬೆಳಿಗ್ಗೆ ಶಾಸಕ ಹೆಚ್.ಡಿ.ತಮ್ಮಯ್ಯ ಸಪತ್ನೀಕರಾಗಿ ಬಾಗಿನ ಅರ್ಪಿಸುವ ಮೂಲಕ ಪೂಜೆ ಸಲ್ಲಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಗರಕ್ಕೆ ಸುಮಾರು ೪೦ ವರ್ಷದಿಂದ ಗುರುತ್ವಾಕರ್ಷಣೆ ಮೂಲಕ ಕುಡಿಯುವ ನೀರಿನ ವ್ಯವಸ್ಥೆಯನ್ನು ಯಾವುದೇ ಖರ್ಚಿಲ್ಲದೆ ಸರಬರಾಜು ಮಾಡಲಾಗುತ್ತಿದೆ ಎಂದು ಹೇಳಿದರು.

    ರಾಜ್ಯದ ಕೆಲವೇ ಕೆಲವು ನಗರದ ಕುಡಿಯುವ ನೀರು ಸರಬರಾಜು ಮಾಡುವ ಗುರುತ್ವಾಕರ್ಷಣಾ ಕೆರೆಗಳಲ್ಲಿ ಈ ಹಿರೇಕೊಳಲೆ ಕೆರೆಯು ಒಂದು. ನಗರದ ೪೦ ಸಾವಿರ ಜನಸಂಖ್ಯೆಗೆ ಅನುಗುಣವಾಗಿ ಅಂದು ಈ ಕೆರೆಯನ್ನು ನಿರ್ಮಾಣ ಮಾಡಿ ಈ ನೀರನ್ನು ಜನರು ಕುಡಿಯುವುದಕ್ಕೆ ಬಳಸುತ್ತಿದ್ದಾರೆ. ಇಂತಹ ಸುಂದರವಾದ ಕೆರೆ ಇತಿಹಾಸದಲ್ಲಿ ಮೊದಲ ಬಾರಿಗೆ ಜೂನ್ ತಿಂಗಳಲ್ಲಿ ನೀರು ತುಂಬಿ ಕೋಡಿ ಬಿದ್ದಿದೆ ಎಂದು ಹೇಳಿದರು.

    ಅಮೃತ್ ಯೋಜನೆಯಡಿ ೨೪ ಗಂಟೆ ನೀರು ಪೂರೈಸಬೇಕಿತ್ತು. ಆದರೆ ತಾಂತ್ರಿಕ ಕಾರಣದಿಂದ ಎರಡು ದಿನಕೊಮ್ಮೆ ಸತತವಾಗಿ ನೀರನ್ನು ಸರಬರಾಜು ಮಾಡುತ್ತಿದ್ದೇವೆ ಎಂದ ಅವರು ಯಗಚಿ ಡ್ಯಾಂ ಹಾಗೂ ಹಿರೇಕೊಳಲೆ ಕೆರೆ ಕೋಡಿ ಬಿದ್ದಿರುವುದರಿಂದ ಇನ್ನು ಎರಡು ವರ್ಷಗಳ ಕಾಲ ನಗರದ ಜನರಿಗೆ ಕುಡಿಯುವ ನೀರಿಗೆ ಯಾವುದೇ ತೊಂದರೆ ಇರುವುದಿಲ್ಲ ಎಂದು ಹೇಳಿದರು.

    ನರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್, ತಹಶೀಲ್ದಾರ್ ರೇಷ್ಮಾಶೆಟ್ಟಿ, ಉಪಾಧಕ್ಷ ಅನುಮಧುಕರ್, ಹಿರೇಕೊಳಲೆ ಗ್ರಾ.ಪಂ ಅಧಕ್ಷೆ ಕವಿತಾ ಹಾಗೂ ಉಪಾಧ್ಯಕ್ಷರು, ಸದಸ್ಯರು, ಗಾಮಸ್ಥರು ಮುಂತಾದವರು ಹಾಜರಿದ್ದರು.

    The people of the city will not have any problem with drinking water for 2 years.

  • ಜನತೆಗೆ ಸಲ್ಲಿಸಿದ ಸೇವೆ ತೃಪ್ತಿ ತಂದಿದೆ

    ಜನತೆಗೆ ಸಲ್ಲಿಸಿದ ಸೇವೆ ತೃಪ್ತಿ ತಂದಿದೆ

    ಚಿಕ್ಕಮಗಳೂರು: ಕಳೆದ ೧೦ ತಿಂಗಳ ಅವಧಿಯಲ್ಲಿ ಚಿಕ್ಕಮಗಳೂರು ಜನತೆಗೆ ಸಲ್ಲಿಸಿದ ಸೇವೆ ತೃಪ್ತಿ ತಂದಿದೆ ಎಂದು ನಗರಸಭೆ ಅಧ್ಯಕ್ಷೆ ಸುಜಾತಶಿವಕುಮಾರ್ ತಿಳಿಸಿದರು.

    ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಹಿನ್ನೆಲೆ, ಇಂದು ನಗರಸಭೆಯಿಂದ ನೀಡಿದ ಬೀಳ್ಕೊಡುಗೆ ಸ್ವೀಕರಿಸಿ ಅವರು ಮಾತನಾಡಿದರು.

    ಅಧ್ಯಕ್ಷೆಯಾಗಿ ನನ್ನ ಕರ್ತವ್ಯವನ್ನು ನಾನು ನಿರ್ವಹಣೆ ಮಾಡಿದ್ದೇನೆ. ಆ ಕೆಲಸ ನನಗೆ ತೃಪ್ತಿತಂದಿದೆ. ನನ್ನಂತೆಯೇ ಸಮಾಜಕ್ಕೆ ಸೇವೆ ಸಲ್ಲಿಸುವವರು ಇನ್ನೂ ಅನೇಕರಿದ್ದಾರೆ. ಹೀಗಾಗಿ ಬೇರೆಯವರಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ನನ್ನ ಸ್ಥಾನ ತೆರವು ಮಾಡಿಕೊಡುತ್ತಿದ್ದೇನೆ ಎಂದರು.

    ೧೦ ತಿಂಗಳ ಕಾಲ ಎಲ್ಲರೂ ಒಂದು ಕುಟುಂಬದವರಂತೆ ಇದ್ದೆವು. ನನ್ನ ಅವಧಿಯಲ್ಲಿ ೫.೫೦ ಕೋಟಿ ರೂ ಬಜೆಟ್ ಮಂಡಿಸಿದ್ದೆವು. ಅನೇಕ ಕೆಲಸಗಳು ಚಾಲ್ತಿಯಲ್ಲಿವೆ. ಈಗ ಸರಕಾರದ ೧೦ ಕೋಟಿ ರೂ.ಅನುದಾನ ಬಂದಿದೆ, ಮಳೆಯಿಂದ ಕೆಲಸ ಮಾಡಲು ಆಗುತ್ತಿಲ್ಲ. ೧೫ನೇ ಹಣಕಾಸು, ನಗರಸಭೆ ಅನುದಾನದಿಂದ ಅನೇಕ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇವೆ. ಮುಂದೆ ಬಂದವರು ಅದನ್ನು ಕಾರ್ಯನಿರ್ವಹಣೆ ಮಾಡಲಿದ್ದಾರೆ ಎಂದು ಹೇಳಿದರು.

    ಕನ್ನಡ ಭವನವನ್ನು ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ಲೈಬ್ರರಿಗೆ ಬಿಟ್ಟುಕೊಡಬೇಕು ಎಂದು ಮನವಿ ಮಾಡುತ್ತೇನೆ. ಮುಂದೆಯೂ ನನ್ನ ವಾರ್ಡಿನ ಜನತೆಗೆ ನ್ಯಾಯ ಒದಗಿಸುತ್ತೇನೆ. ನಗರಸಭೆ ಎಲ್ಲ ಅಧಿಕಾರಿ, ಸಿಬ್ಬಂದಿ ಒಟ್ಟಾಗಿ ಕಾರ್ಯನಿರ್ವಹಣೆ ಮಾಡಿದ್ದರಿಂದ ಯಶಸ್ಸು ಕಾಣಲು ಸಾಧ್ಯ ಎಂದು ಹೇಳಿದರು.

    ರೇವಣಸಿದ್ದೇಶ್ವರ ಮಹಸಭಾದ ಜಿಲ್ಲಾಧ್ಯಕ್ಷರಾಗಿ ನನ್ನನ್ನು ಆಯ್ಕೆ ಮಾಡಿದ್ದು ಅಲ್ಲೂ ಒಂದು ಸೇವೆ ಮಾಡಲು ನನಗೆ ಅವಕಾಶ ದೊರೆತಿದೆ ಎಂದರು.
    ನಗರಸಭೆ ಪೌರಾಯುಕ್ತ ಬಿ.ಸಿ.ಬಸವರಾಜು ಮಾತನಾಡಿ, ಅಧ್ಯಕ್ಷರು ಅಲ್ಪ ಅವಧಿಯಲ್ಲೇ ಉತ್ತಮವಾದ ಸೇವೆ ಸಲ್ಲಿಸಿದ್ದಾರೆ. ಇವರು ಅಧ್ಯಕ್ಷರಾದ ನಂತರ ಪಾರ್ಕ್ ಉದ್ಘಾಟನೆ, ಡಿಜಿಟಲ್, ಓಪನ್‌ಏರ್ ಥೀಯೇಟರ್, ಐಡಿಎಸ್‌ಜಿ ಕಾಲೇಜ್ ಆವರಣದಲ್ಲಿ ೨ ಶೌಚಾಲಯ ಮತ್ತಿತರೆ ಅನೇಕ ಕಾಮಗಾರಿಗಳು ಉದ್ಘಾಟನೆ ನೆರವೇರಿವೆ ಎಂದು ಹೇಳಿದರು.

    ಅಧ್ಯಕ್ಷೆ ಸುಜಾತ ಶಿವಕುಮಾರ್ ಅವಧಿಯಲ್ಲಿ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ತಾಪನೆ ನೆರವೇರಿಸಿದ್ದೇವೆ. ಇದಲ್ಲದೆ ನಗರಸಭೆಯ ೮-೬೦ ಕೋಟಿ ಅನುದಾನದಲ್ಲಿ ರಸ್ತೆ, ಚರಂಡಿ ಮತ್ತಿತರೆ ಕಾಮಗಾರಿ ನಡೆಸಲಾಗಿದೆ. ಇದ್ದಷ್ಟು ಕಾಲ ಉತ್ತಮ ಸೇವೆ ಸಲ್ಲಿಸಿದ್ದಾರೆ. ಅವರ ಮಾರ್ಗದರ್ಶನ ಮುಂದೆಯೂ ಇರಲಿ ಎಂದು ಹೇಳಿದರು.

    ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಮುತ್ತಯ್ಯ, ನಗರಸಭೆ ಸದಸ್ಯರು, ಅಧಿಕಾರಿಗಳಾದ, ವ್ಯವಸ್ಥಾಪಕ ರವಿ, ಲತಾಮಣಿ, ಚಂದ್ರಶೇಖರ್, ಆರೋಗ್ಯ ನಿರೀಕ್ಷಕರಾದ ವೆಂಕಟೇಶ್, ಕಮಲಮ್ಮ, ಮಿಥುನ, ಸಿಬ್ಬಂದಿಗಳು ಉಪಸ್ಥಿತರಿದ್ದರು.

    The service rendered to the people has brought satisfaction.

  • ಭಾರತದಲ್ಲಿ ಹುಟ್ಟಿದ ಯೋಗಕ್ಕೆ ಆರು ಸಾವಿರ ವರ್ಷಗಳ ಇತಿಹಾಸ

    ಭಾರತದಲ್ಲಿ ಹುಟ್ಟಿದ ಯೋಗಕ್ಕೆ ಆರು ಸಾವಿರ ವರ್ಷಗಳ ಇತಿಹಾಸ

    ಚಿಕ್ಕಮಗಳೂರು: ನಮ್ಮ ದೇಶದ ಸಂಸ್ಕೃತಿಯನ್ನು ಬಿಟ್ಟು ಪಾಶ್ಚಿಮಾತ್ಯ ದೇಶಗಳ ಸಂಸ್ಕೃತಿಗಳತ್ತ ವಾಲುತ್ತಿರುವುದು ದುರದೃಷ್ಟಕರ ಸಂಗತಿ ಎಂದು ಶಾಲಾ ಮುಖ್ಯ ಶಿಕ್ಷಕ ಯೋಗೀಶ್ ಎಂದರು

    ಅವರು ಮಾಡೆಲ್ ಆಂಗ್ಲ ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿ ಭಾರತದಲ್ಲಿ ಹುಟ್ಟಿದ ಯೋಗಕ್ಕೆ ಆರು ಸಾವಿರ ವರ್ಷಗಳ ಇತಿಹಾಸವಿದ್ದು, ಶರೀರ ಮತ್ತು ಮನಸ್ಸು ಎರಡನ್ನೂ ಒಂದೆಡೆ ಕೇಂದ್ರೀಕರಿಸುವುದು ಯೋಗದ ಮಹತ್ವವಾಗಿದೆ ಎಂದರು.

    ಯೋಗದ ಮಹತ್ವವನ್ನು ಅರಿತು ಪ್ರತಿಯೊಬ್ಬರು ಯೋಗವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯವಾಗಿ ಇರಬೇಕೆಂದು ತಿಳಿಸಿದರು.
    ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಟಿ. ಎಸ್. ನಿರಂಜನ್ ಮಾತನಾಡಿ ಜೂನ್ ೨೧ ಸುಧೀರ್ಘ ಹಗಲಿನ ದಿನವಾಗಿದ್ದು ಹಗಲಿನ ಸದುಪಯೋಗ ಪಡೆಯುವುದಕ್ಕಾಗಿ ಈ ಯೋಗ ದಿನಾಚರಣೆಯನ್ನು ಇಂದು ಆಚರಿಸುತ್ತಿರುವುದಾಗಿ ತಿಳಿಸಿದರು.

    ಪತಂಜಲಿ ಮಹರ್ಷಿ ಅವರು ಯೋಗಾಸನದ ಪಿತಾಮಹರಾಗಿದ್ದಾರೆ. ಪ್ರತಿದಿನ ಯೋಗ ಅಭ್ಯಾಸ ಮಾಡುವುದರಿಂದ ದೈಹಿಕ ಶಕ್ತಿ ಹೆಚ್ಚುತ್ತದೆ, ಮನಸ್ಸಿನ ಚಲತೆ ಕಡಿಮೆಯಾಗಿ ಏಕಾಗ್ರತೆ ಉಂಟಾಗುತ್ತದೆ ಮತ್ತು ಮನಸ್ಸು ಶಾಂತವಾಗುತ್ತದೆ ಎಂದು ತಿಳಿದರು.

    ಪ್ರತಿಯೊಬ್ಬರು ಜೀವನದಲ್ಲಿ ಯೋಗವನ್ನು ಅಳವಡಿಸಿಕೊಂಡು ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಮಕ್ಕಳಿಗೆ ಕರೆ ಕೊಟ್ಟರು. ಪ್ರಾಣಾಯಾಮ, ಭುಜಂಗಾಸನ, ಹಸ್ತ ಪಾದಾಸನ, ಶವಾಸನ,ಚಕ್ರಾಸನ, ಉತ್ತಾನಾಸನ, ಸುಖಾಸನ ಮುಂತಾದ ಆಸನಗಳನ್ನು ಅಭ್ಯಾಸ ಮಾಡಿಸಿದರು . ಶಿಕ್ಷಕರು ಮತ್ತು ಮಕ್ಕಳು ಯೋಗ ತಾಲೀಮಿನಲ್ಲಿ ಪಾಲ್ಗೊಂಡರು.

    ‘ಹಸಿರು ಮಿತ್ರ’ ಎಂದೇ ಹೆಸರು ಪಡೆದಿರುವ ಮಾಡೆಲ್ ಶಾಲೆಯ ಹಚ್ಚ- ಹಸಿರಿನ ಆವರಣದಲ್ಲಿ ಶ್ವೇತವರ್ಣ ವಸ್ತ್ರಧಾರಿಗಳಾಗಿದ್ದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಯೋಗ ಮಾಡಿದರು, ಕಾರ್ಯಕ್ರಮದಲ್ಲಿ ಶಾಲೆಯ ಬೋಧಕ ಮತ್ತು ಬೋಧಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ನಿರಂಜನ್ ಸ್ವಾಗತಿಸಿ, ಯೋಗೀಶ್ ವಂದಿಸಿದರು.

    Yoga which originated in India has a six thousand year history.

  • ಹಿರೇಮಗಳೂರಿನಲ್ಲಿ ಶಾಸಕ ಹೆಚ್.ಡಿ. ತಮ್ಮಯ್ಯ ಅದ್ಧೂರಿ ಹುಟ್ಟುಹಬ್ಬ ಆಚರಣೆ

    ಹಿರೇಮಗಳೂರಿನಲ್ಲಿ ಶಾಸಕ ಹೆಚ್.ಡಿ. ತಮ್ಮಯ್ಯ ಅದ್ಧೂರಿ ಹುಟ್ಟುಹಬ್ಬ ಆಚರಣೆ

    ಚಿಕ್ಕಮಗಳೂರು: ಬಡವರ ಬಂಧು ದೀನ ದಲಿತರ ಆಶಾಕಿರಣ, ಜನಪ್ರಿಯ ಶಾಸಕ ಹೆಚ್.ಡಿ. ತಮ್ಮಯ್ಯ ಅವರ ೫೬ನೇ ಹುಟ್ಟು ಹಬ್ಬದ ಅಂಗವಾಗಿ ಇಂದು ಅವರ ಅಭಿಮಾನಿಗಳು, ಹಿತೈಷಿಗಳು, ಸ್ನೇಹಿತರು ಶಾಸಕರ ನಿವಾಸಕ್ಕೆ ತೆರಳಿ ಕೇಕ್ ಕತ್ತರಿಸಿ ಸಿಹಿ ತಿನಿಸಿ ಸಂಭ್ರಮಿಸಿದರು.

    ಇಂದು ಬೆಳಗ್ಗೆ ನೂರಾರು ಸಂಖ್ಯೆಯಲ್ಲಿ ಸೇರಿದ ಶಾಸಕರ ಅಭಿಮಾನಿಗಳು ಶಾಸಕ ತಮ್ಮಯ್ಯ ಅವರ ಹುಟ್ಟೂರಾದ ಹಿರೇಮಗಳೂರಿನಲ್ಲಿ ಪಟಾಕಿ ಸಿಡಿಸಿ ಮೆರವಣಿಗೆ ಮೂಲಕ ಬೃಹತ್ ಹಾರವನ್ನು ಜೆಸಿಬಿ ಮೂಲಕ ಹಾಕಿ ಶುಭಾಶಯ ಕೋರಿದರು.

    ಇದರ ಅಂಗವಾಗಿ ಹಿರೇಮಗಳೂರಿನ ಕೋದಂಡರಾಮ ಸ್ವಾಮಿ ದೇವಾಲಯ ಸೇರಿದಂತೆ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆಯನ್ನು ಏರ್ಪಡಿಸಿದ್ದ ಗ್ರಾಮಸ್ಥರು ಶಾಸಕರಿಗೆ ಮುಂದೆ ಇನ್ನಷ್ಟು ಭವಿಷ್ಯ ಉಜ್ವಲಗೊಳ್ಳುವ ಜೊತೆಗೆ ಆಯುರ್ ಆರೋಗ್ಯ ನೀಡುವಂತೆ ದೇವರಲ್ಲಿ ಪ್ರಾರ್ಥಿಸಿದರು.

    ಪತ್ನಿ ಮಂಗಳ ಅವರ ಜೊತೆ ಆಗಮಿಸಿದ ಶಾಸಕ ಹೆಚ್.ಡಿ. ತಮ್ಮಯ್ಯ ಅವರನ್ನು ಹಿರೇಮಗಳೂರು ಗ್ರಾಮಸ್ಥರು, ಮಹಿಳೆಯರು ಪೂರ್ಣಕುಂಭ ಸ್ವಾಗತದೊಂದಿಗೆ ಭರಮಾಡಿಕೊಂಡರು. ಶಾಲಾ ಮಕ್ಕಳು ಆರತಿ ಮಾಡುವ ಮೂಲಕ ಹುಟ್ಟುಹಬ್ಬಕ್ಕೆ ಕಳೆಗಟ್ಟಿಸಿದರು.

    ರಾಜ್ಯಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ತುಂಬಿರುವ ಈ ಸಂದರ್ಭದಲ್ಲಿ ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವುದರ ಜೊತೆಗೆ ಸರ್ಕಾರದ ಜನಪರ ಸೌಲಭ್ಯಗಳನ್ನು ಬಡವರು, ಕೂಲಿಕಾರ್ಮಿಕರ, ಶೋಷಿತರ ಮನೆಬಾಗಿಲಿಗೆ ತಲುಪಿಸುವಲ್ಲಿ ಕ್ರಮವಹಿಸುತ್ತಿರುವುದು ಶ್ಲಾಘನೀಯ.

    ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್ ಅಹಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ. ಮಂಜೇಗೌಡ, ಅಭಿಮಾನಿಗಳಾದ ಹಿರೇಮಗಳೂರು ರಾಮಚಂದ್ರ, ಜಯರಾಜ್ ಅರಸ್, ರಾಜು, ಜಗದೀಶ್, ಗಂಗಾಧರ್ ಸೇರಿದಂತೆ ಶಾಲಾ ಮುಖ್ಯೋಪಾದ್ಯಾಯರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಾಸಕರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರು.

    MLA H.D. Thammayya’s birthday celebration in Hiremagaluru