Category: ರಾಜ್ಯ

  • ಯುಪಿಐ ಕ್ಯೂ ಆರ್ ಕೋಡ್ ಸ್ಟಿಕ್ಕರ್ ತೆಗೆಯುತ್ತಿವ ವ್ಯಾಪಾರಿಗಳು

    ಯುಪಿಐ ಕ್ಯೂ ಆರ್ ಕೋಡ್ ಸ್ಟಿಕ್ಕರ್ ತೆಗೆಯುತ್ತಿವ ವ್ಯಾಪಾರಿಗಳು

    ಬೆಂಗಳೂರು: ಯುಪಿಐ ಮೂಲಕ ವಾರ್ಷಿಕ ₹40 ಲಕ್ಷಕ್ಕಿಂತ ಹೆಚ್ಚು ವಹಿವಾಟು ನಡೆಸಿದ್ದ ಬೇಕರಿ, ಕಾಂಡಿಮೆಂಟ್ಸ್​ ಮತ್ತು ಇತರ ಅಂಗಡಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿರುವುದು ವ್ಯಾಪಾರಿಗಳಲ್ಲಿ ಆತಂಕ ಸೃಷ್ಟಿಸಿದೆ. ಪರಿಣಾಮ ಪ್ರಮುಖವಾಗಿ ಬೆಂಗಳೂರು ಸೇರಿ ರಾಜ್ಯದೆಲ್ಲೆಡೆ ಚಿಲ್ಲರೆ ವ್ಯಾಪಾರಿಗಳು ನಗದು ವ್ಯಾಪಾರಕ್ಕೆ ಮರಳುವ ಮನಸ್ಸು ಮಾಡುತ್ತಿದ್ದು, ತಮ್ಮ ಅಂಗಡಿಗಳಿಗೆ ಅಂಟಿಸಿದ್ದ ಯುಪಿಐ ಕ್ಯೂ ಆರ್ ಕೋಡ್ ಸ್ಟಿಕ್ಕರ್ ತೆಗೆಯುತ್ತಿದ್ದಾರೆ.

    ಯುಪಿಐ ಪ್ಲಾಟ್‌ಫಾರ್ಮ್‌ಗಳ ಮೂಲಕ್ ಮಾಹಿತಿ ಪಡೆದಿರುವ ಇಲಾಖೆ ರಾಜ್ಯದಲ್ಲಿ ಈವರೆಗೆ ಯುಪಿಐ ಮೂಲಕ ಹಣ ಪಡೆಯುತ್ತಿರುವ 65ಸಾವಿರ ವರ್ತಕರ ಮಾಹಿತಿ ಸಂಗ್ರಹಿಸಿದೆ. ಸುಮಾರು 5900 ವರ್ತಕರಿಗೆ ನೋಟಿಸ್‌ ನೀಡಿದೆ. ಜಿಎಸ್‌ಟಿ ಕಟ್ಟುವಂತೆ, ಜಿಎಸ್‌ಟಿಗೆ ನೋಂದಣಿ ಮಾಡಿಕೊಳ್ಳುವಂತೆ ನೋಟಿಸ್ ನೀಡಲಾಗಿದೆ. ಹಣ ವರ್ಗಾವಣೆ ಸಂದರ್ಭದಲ್ಲಿ ಸಂದೇಹ ಇರುವ ಕೆಲವರ ಮಾಹಿತಿ ನೀಡುವಂತೆ ಬ್ಯಾಂಕ್‌ಗೂ ಕೋರಿದೆ. ಈ ಮಾಹಿತಿ ದೊರೆತ ಬಳಿಕ ಎರಡು-ಮೂರನೇ ಹಂತದಲ್ಲಿ ಇನ್ನಷ್ಟು ಜನರಿಗೆ ನೋಟಿಸ್‌ ಹೋಗಲಿದೆ.

    ತೆರಿಗೆ ತಪ್ಪಿಸುವ ಉದ್ದೇಶದಿಂದ ಒಂದೇ ಅಂಗಡಿಗಳಲ್ಲಿ ಐದರಿಂದ ಒಂಬತ್ತು ಯುಪಿಐ ಐಡಿ ಇಟ್ಟುಕೊಂಡು ವಹಿವಾಟು ಮಾಡಿದವರ ಮಾಹಿತಿ ಇದೆ. ಅಲ್ಲದೆ, ಒಂದೇ ವಿಳಾಸದಲ್ಲಿ ನೋಂದಣಿ ಆದ ಹಲವು ಪ್ಯಾನ್ ಕಾರ್ಡ್‌ ಸಿಕ್ಕಿದ್ದು ಇವುಗಳಿಗೆ ಲಿಂಕ್‌ ಆದ ಬ್ಯಾಂಕ್‌ ಖಾತೆಗಳಿಗೆ ನಿರಂತರವಾಗಿ ಹಣ ವರ್ಗಾವಣೆ ಆಗಿದೆ. ಹೀಗಾಗಿ ತೆರಿಗೆ ಇಲಾಖೆಗೆ ಸಂದೇಹ ಇದೆ.

    ವಾರ್ಷಿಕ ₹40 ಲಕ್ಷಕ್ಕಿಂತ ಹೆಚ್ಚು ವಹಿವಾಟು ಮಾಡಿದವರಿಗೆ ನೋಟಿಸ್‌ ನೀಡಲಾಗಿದ್ದರೂ ಇದು ಸಣ್ಣಮಟ್ಟದ ವರ್ತಕರಲ್ಲೂ ಆತಂಕಕ್ಕೆ ಕಾರಣವಾಗಿದೆ. ವಿಶೇಷವಾಗಿ ಬೆಂಗಳೂರಲ್ಲಿ ಸಣ್ಣಮಟ್ಟದ, ಬೀದಿ ವ್ಯಾಪಾರಿಗಳು ಕೂಡ ಅಂಗಡಿಗಳ ಮುಂದೆ ಯುಪಿಐ ಸ್ಟಿಕರ್ ಅಂಟಿಸಿಕೊಂಡಿದ್ದಾರೆ. ನಿಂಬೆ ಹಣ್ಣು, ಚಾಕುಲೆಟ್‌ ಖರೀದಿಸಿದ ಗ್ರಾಹಕರೂ ₹10- ₹20 ಪೇಮೆಂಟ್ ಮಾಡುತ್ತಿದ್ದಾರೆ.

    Merchants removing UPI QR code stickers

  • ದೇಶದ ಎಲ್ಲಾ ರಾಜ್ಯಗಳ ರಾಜಧಾನಿಯಲ್ಲಿ ಒಬಿಸಿ ಸಮುದಾಯದ ರ್‍ಯಾಲಿ

    ದೇಶದ ಎಲ್ಲಾ ರಾಜ್ಯಗಳ ರಾಜಧಾನಿಯಲ್ಲಿ ಒಬಿಸಿ ಸಮುದಾಯದ ರ್‍ಯಾಲಿ

    ಬೆಂಗಳೂರು: ಕೇಂದ್ರ ಸರ್ಕಾರ ನಡೆಸಲಿರುವ ಜಾತಿ ಆಧಾರಿತ ಜನಗಣತಿಗೆ ತೆಲಂಗಾಣ ಮಾದರಿ ಅನುಸರಿಸುವುದು, ಶಿಕ್ಷಣ, ರಾಜಕೀಯ ಸೇರಿ ಇನ್ನಿತರ ಕ್ಷೇತ್ರಗಳಲ್ಲಿ ಒಬಿಸಿ ಸಮುದಾಯಕ್ಕೆ ಮೀಸಲಾತಿ ಪ್ರಮಾಣ ಶೇ.50ರಿಂದ 75ಕ್ಕೆ ಹೆಚ್ಚಿಸಲು ಕೇಂದ್ರದ ಮೇಲೆ ಒತ್ತಡ, ಎಲ್ಲ ರಾಜ್ಯಗಳ ರಾಜಧಾನಿಯಲ್ಲಿ ರ್‍ಯಾಲಿ ನಡೆಸುವುದು ಸೇರಿ ಇನ್ನಿತರ ವಿಷಯಗಳ ಕುರಿತು ಎಐಸಿಸಿ ಹಿಂದುಳಿದ ವರ್ಗಗಳ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

    ಖಾಸಗಿ ಹೋಟೆಲ್‌ನಲ್ಲಿ ನಡೆದ ಎಐಸಿಸಿ ಹಿಂದುಳಿದ ವರ್ಗಗಳ ಸಲಹಾ ಸಮಿತಿಯ ಎರಡನೇ ದಿನದ ಸಭೆಯಲ್ಲಿ ಒಬಿಸಿ ಸಮುದಾಯದವನ್ನು ಒಗ್ಗೂಡಿಸುವುದು, ರಾಜಕೀಯ, ಆರ್ಥಿಕ, ಶೈಕ್ಷಣಿಕ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಅವರಿಗೆ ಬಲ ತುಂಬುವ ಕುರಿತು ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಕೇಂದ್ರ ಸರ್ಕಾರದ ಮೇಲೆ ಯಾವೆಲ್ಲ ವಿಚಾರಗಳ ಕುರಿತು ಒತ್ತಡ ಹೇರಬೇಕು ಎಂಬ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಸಭೆಯಲ್ಲಿ ಒಬಿಸಿ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮತ್ತು ಅವರಿಗೆ ಶಕ್ತಿ ತುಂಬುವಂತಹ ವಿಷಯಗಳ ಕುರಿತು ನಿರ್ಣಯಿಸಲಾಯಿತು.

    ಬಿಹಾರ ಎಲೆಕ್ಷನ್‌ವರೆಗೆ ಹೈಕಮಾಂಡ್ ಮೌನ: ಐದು ವರ್ಷ ನಾನೇ ಮುಖ್ಯಮಂತ್ರಿ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ರಾಜ್ಯ ಕಾಂಗ್ರೆಸ್‌ನಲ್ಲಿ ತೀವ್ರ ಸಂಚಲನ ಹುಟ್ಟುಹಾಕಿದ್ದರೂ ಹೈಕಮಾಂಡ್‌ ಮಾತ್ರ ಈ ಬಗ್ಗೆ ಯಾವ ಪ್ರತಿಕ್ರಿಯೆ ನೀಡದೆ ದಿವ್ಯ ಮೌನ ವಹಿಸಿದೆ. ಅಷ್ಟೇ ಅಲ್ಲ, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೂ ನಿರ್ದೇಶಿಸಿದೆ ಎನ್ನುತ್ತವೆ ಉನ್ನತ ಮೂಲಗಳು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ದಾಢಸಿ ಹೇಳಿಕೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದರೂ ಹೈಕಮಾಂಡ್‌ ಈ ರೀತಿ ಮೌನ ವಹಿಸಿರುವುದರ ಹಿಂದೆ ಬಿಹಾರ ಚುನಾವಣೆಯ ಲೆಕ್ಕಾಚಾರವಿದೆ ಎಂದು ಹೇಳಲಾಗುತ್ತಿದೆ.

    ಅದು ಸಿದ್ದರಾಮಯ್ಯ ಅವರ ಹೇಳಿಕೆ. ಉಪ ಮುಖ್ಯಮಂತ್ರಿಯಾಗಲಿ ಅಥವಾ ಹೈಕಮಾಂಡ್ ಆಗಲಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿದರೆ ಅದು ರಾಷ್ಟ್ರಮಟ್ಟದಲ್ಲಿ ಗೊಂದಲ ಸೃಷ್ಟಿಸುವ ಸಾಧ್ಯತೆಯಿದೆ. ಅಕ್ಟೋಬರ್‌ನಲ್ಲಿ ಬಿಹಾರ ಚುನಾವಣೆಯಿದ್ದು, ಈ ಹಂತದಲ್ಲಿ ಒಬಿಸಿ ಸಮುದಾಯದ ನಾಯಕರೊಬ್ಬರ ವಿಚಾರದಲ್ಲಿ ಗೊಂದಲ ಸೃಷ್ಟಿ ಮಾಡಿಕೊಳ್ಳುವ ಮನಸ್ಸು ಹೈಕಮಾಂಡ್‌ಗೆ ಇಲ್ಲ.ಹೀಗಾಗಿ, ಅಕ್ಟೋಬರ್‌ವರೆಗೆ ಈ ಬಗ್ಗೆ ಹೈಕಮಾಂಡ್‌ ಮೌನ ಮುಂದುವರೆಸುವ ಸಾಧ್ಯತೆಯೇ ಹೆಚ್ಚು ಎನ್ನುತ್ತವೆ ಮೂಲಗಳು.

    OBC community rallies in all state capitals of the country

  • ಕೆಎಸ್​​ಆರ್​​ಟಿಸಿ, ಬಿಎಂಟಿಸಿ ಸೇರಿ 4 ನಿಗಮಗಳಿಂದ ಸಾರಿಗೆ ಅನಿರ್ದಿಷ್ಟಾವಧಿ ಮುಷ್ಕರ

    ಕೆಎಸ್​​ಆರ್​​ಟಿಸಿ, ಬಿಎಂಟಿಸಿ ಸೇರಿ 4 ನಿಗಮಗಳಿಂದ ಸಾರಿಗೆ ಅನಿರ್ದಿಷ್ಟಾವಧಿ ಮುಷ್ಕರ

    ಬೆಂಗಳೂರು: ಸಾರಿಗೆ ನೌಕರರಿಗೆ 38 ತಿಂಗಳ ಭತ್ಯೆ ಮತ್ತು ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಆಗಸ್ಟ್​ 5ರಂದು ಬೆಳಿಗ್ಗೆ 6 ಗಂಟೆಯಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. ಕೆಎಸ್​ಆರ್​ಟಿಸಿ ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳ ನೌಕರರು ಮುಷ್ಕರಕ್ಕೆ ಮುಂದಾಗಿದ್ದಾರೆ.

    ಜನವರಿಯಲ್ಲೇ 4 ನಿಗಮದ ಸಾರಿಗೆ ನೌಕರರಿಗೆ 38 ತಿಂಗಳ ಭತ್ಯೆ ಹೆಚ್ಚಳ ಮಾಡಬೇಕಿತ್ತು ಆದರೆ ಈವರೆಗೆ ಮಾಡಿಲ್ಲ. ಹೀಗಾಗಿ ಸರ್ಕಾರದ ನಡೆ ಖಂಡಿಸಿ ಮುಷ್ಕರಕ್ಕೆ ಕರೆ ನೀಡಲಾಗಿದೆ.

    ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮುಖಂಡ ಅನಂತ ಸುಬ್ಬರಾವ್​​ ನೇತೃತ್ವದಲ್ಲಿ ಮುಷ್ಕರ ನಡೆಯಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಸಾರಿಗೆ ಮುಷ್ಕರದ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ಮಂಗಳವಾರ ಇ-ಮೇಲ್​ ಮೂಲಕ ಮುಷ್ಕರದ ನೋಟಿಸ್ ಕಳಿಸಿದ್ದೇವೆ ಎಂದು ತಿಳಿಸಿದ್ದಾರೆ.

    4 ನಿಗಮದ 1 ಲಕ್ಷದ 15 ಸಾವಿರ ನೌಕರರಿಗೆ 38 ತಿಂಗಳ ಭತ್ಯೆ ನೀಡಬೇಕಿತ್ತು. ಆದರೆ 2025 ಜುಲೈ ಬಂದರೂ ಇನ್ನೂ ಸಂಬಳ ಹೆಚ್ಚಳ ಮಾಡಲು ಮುಂದಾಗಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜುಲೈ 7ರಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ಮಾಡಿದ್ದರು.

    ಈ ಸಭೆಯಲ್ಲಿ ನೌಕರರ ವೇತನ ಪರಿಷ್ಕರಣೆಯ 38 ತಿಂಗಳ ಹಿಂಬಾಕಿ ಪಾವತಿ ಮತ್ತು ವೇತನ ಹೆಚ್ಚಳ ಬಗ್ಗೆ ಒಂದು ವಾರದೊಳಗೆ ಸಭೆ ಮಾಡುವುದಾಗಿ ಹೇಳಿದ್ದರು. ಆದರೆ 11 ದಿನ ಕಳೆದರೂ ಯಾವುದೇ ಸಭೆ ಕರೆಯಲಾಗಿಲ್ಲ. ಹೀಗಾಗಿ 4 ನಿಗಮಗಳ ನೌಕರರು ಮುಷ್ಕರ ನಡೆಸಲು ಮುಂದಾಗಿದ್ದಾರೆ.

    Indefinite transport strike by 4 corporations including KSRTC BMTC

  • ಬಿಜೆಪಿ ಶಾಸಕ ಭೈರತಿ ಬಸವರಾಜ್ ಸೇರಿ ಐವರ ವಿರುದ್ಧ ಎಫ್​ಐಆರ್​

    ಬಿಜೆಪಿ ಶಾಸಕ ಭೈರತಿ ಬಸವರಾಜ್ ಸೇರಿ ಐವರ ವಿರುದ್ಧ ಎಫ್​ಐಆರ್​

    ಬೆಂಗಳೂರು: ರೌಡಿಶೀಟರ್​ ಬಿಕ್ಲು ಶಿವ ಬರ್ಬರ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜ್ ಸೇರಿ ಐವರ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಬಿಕ್ಲು ಶಿವ ತಾಯಿ ವಿಜಯಲಕ್ಷ್ಮೀ ನೀಡಿದ ದೂರು ಆಧರಿಸಿ ಬೆಂಗಳೂರಿನ ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ಜಗದೀಶ್, ವಿಮಲ್, ಕಿರಣ್, ಅನಿಲ್, ಭೈರತಿ ಬಸವರಾಜ್​ ವಿರುದ್ಧ ಎಫ್ಐಆರ್​ ದಾಖಲಾಗಿದೆ. ಕೊಲೆಗೆ ಭೈರತಿ ಬಸವರಾಜ್ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪ ಕೇಳಿಬಂದಿದೆ.

    ಈ ಬಗ್ಗೆ ಕೆ.ಆರ್.ಪುರಂ ಬಿಜೆಪಿ ಶಾಸಕ ಭೈರತಿ ಬಸವರಾಜ್​ ಹೇಳಿಕೆ ನೀಡಿದ್ದು, ಬಿಕ್ಲು ಶಿವ ಕೊಲೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಕೊಲೆಯಾದವನ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ದೂರು ಕೊಟ್ಟ ತಕ್ಷಣ ಏಕಾಏಕಿ ನನ್ನ ವಿರುದ್ಧ ಕೇಸ್​ ದಾಖಲಿಸಿದ್ದಾರೆ. ಈ ಪ್ರಕರಣದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.

    ಯಾರೇ ದೂರು ಕೊಟ್ಟರೂ ಎಫ್​ಐಆರ್ ದಾಖಲಿಸಬಹುದಾ? FIR​ ದಾಖಲಿಸುವುದಕ್ಕೂ ಮುನ್ನ ನನ್ನಿಂದ ಮಾಹಿತಿ ಪಡೆದಿದ್ದಾರಾ? ಈ ವಿಚಾರದಲ್ಲಿ ನನ್ನ ಹೆಸರು ತಂದಿದ್ದಕ್ಕೆ ತುಂಬಾ ಬೇಸರವಾಗಿದೆ. ಇದರ ಹಿಂದೆ ರಾಜಕೀಯ ದುರುದ್ದೇಶ ಇರಬಹುದು. ನಾನು ಕಾನೂನು ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ.
    ಮಂಗಳವಾರ ರಾತ್ರಿ 8.30 ಸುಮಾರಿಗೆ ಬಿಕ್ಲು ಶಿವ ತನ್ನ ಮನೆಯಿಂದ ಹೊರಗಡೆ ಬಂದು ಪುಟ್ ಪಾತ್ ಮೇಲೆ ನಿಂತಿದ್ದ.

    ಈ ವೇಳೆ ಮನೆ ಸಮೀಪವೇ ಸ್ಕಾರ್ಪಿಯೋ ಕಾರಿನಲ್ಲಿ ಕಾದು ಕುಳಿತಿದ್ದ 7ರಿಂದ8 ಕೊಲೆಗಡುಕರು ಬಿಕ್ಲು ಶಿವನ ಮೇಲೆ ಎರಗಿದ್ದರು. ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಆತನನ್ನ ಕವರ್ ಮಾಡಿ ಹಲ್ಲೆ ಮಾಡಿದ್ದಾರೆ. ಕೊನೆಗೆ ರಸ್ತೆಯಲ್ಲಿ ನಿಂತಿದ್ದ ಕಾರುಗಳ ಮಧ್ಯೆ ಸಿಲುಕಿದ ಮನಸೋ ಇಚ್ಛೆ ಮಾರಾಕಸ್ತ್ರಗಳಿಂದ ಹೊಡೆದು ನೆತ್ತರು ಹರಿಸಿದ್ದಾರೆ. ಹೀಗಾಗಿ ಬಿಕ್ಲು ಶಿವ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದ.

    ಇನ್ನು ಜಮೀನು ವಿಚಾರಕ್ಕೆ ರೌಡಿಶೀಟರ್ ಬಿಕ್ಲು ಶಿವ ಹಾಗೂ ಬಿಜೆಪಿ ಶಾಸಕ ಭೈರತಿ ಬಸವರಾಜ್ ಹುಡುಗರ ನಡುವೆ ಗಲಾಟೆ ಆಗಿತ್ತು. ಕಿತ್ತಗಾನಹಳ್ಳಿ ಬಳಿ ಸಿಂಗಾರೆಡ್ಡಿ ಎಂಬುವವರಿಗೆ ಸೇರಿದ ಸರ್ವೆ ನಂ. 212 ಜಿಪಿಎ ಮಾಡಿಸಿಕೊಂಡಿದ್ದ ಬಿಕ್ಲು ಶಿವ, ಇದನ್ನ ರದ್ದುಪಡಿಸಬೇಕು ಮತ್ತು ಪೊಸಿಷನ್ ಬಿಟ್ಟುಕೊಡಬೇಕೆಂದು ಬೆದರಿಕೆ ಹಾಕುತ್ತಿದ್ದ ವಿಡಿಯೋವನ್ನು ರೌಡಿಶೀಟರ್ ಶಿವಪ್ರಕಾಶ್ ಕಡೆಯವರು ಮೊಬೈಲ್​ನಲ್ಲಿ ಸೆರೆಹಿಡಿದಿದ್ದರು.

    ಈ ಕುರಿತು ಬಿಕ್ಲು ಶಿವ ಈ ಹಿಂದೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಶಾಸಕ ಭೈರತಿ ಬಸವರಾಜ್, ಜಗದೀಶ್ ಅಲಿಯಾಸ್ ಜಗ್ಗ ಹಾಗೂ ಕಿರಣ್ ಸಹಚರರ ವಿರುದ್ಧ ದೂರು ನೀಡಿದ್ದ. ಭಾರತಿನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ಕೂಡ ದಾಖಲಾಗಿತ್ತು. ಪೊಲೀಸ್ ಆಯುಕ್ತರಿಗೆ ದೂರು ನೀಡಿ 4 ತಿಂಗಳಲ್ಲೇ ಬಿಕ್ಲು ಶಿವ ಕೊಲೆ ಆಗಿದೆ. ಅದೇ ಗ್ಯಾಂಗ್​ನಿಂದ ಕೊಲೆಯಾಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

    FIR against five people including BJP MLA Bhairati Basavaraj

  • ಮುಡಾ ಹರಗಣ ತನಿಖಾ ಸ್ಥಿತಿಗತಿ ವರದಿ ಸಲ್ಲಿಸುವಂತೆ ಕೋರ್ಟ್ ಸೂಚನೆ

    ಮುಡಾ ಹರಗಣ ತನಿಖಾ ಸ್ಥಿತಿಗತಿ ವರದಿ ಸಲ್ಲಿಸುವಂತೆ ಕೋರ್ಟ್ ಸೂಚನೆ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ವಿರುದ್ಧ ಕೇಳಿಬಂದಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಗರಣದ ತನಿಖಾ ಸ್ಥಿತಿಗತಿ ವರದಿ ಸಲ್ಲಿಸುವಂತೆ ನ್ಯಾಯಾಲಯ ಲೋಕಾಯುಕ್ತಕ್ಕೆ ಸೂಚನೆ ನೀಡಿತು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಮಂಗಳವಾರ ಖಾಸಗಿ ದೂರು ವಿಚಾರಣೆ ನಡೆಯಿತು. ವಿಚಾರಣೆಗೂ ಮುನ್ನ ಲೋಕಾಯುಕ್ತ ತನಿಖಾಧಿಕಾರಿ ಈವರೆಗಿನ ತನಿಖಾ ಪ್ರಗತಿ ವರದಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದರು.

    ಈ ವೇಳೆ, ದೂರುದಾರ ಸ್ನೇಹಮಯಿ ಕೃಷ್ಣ ಅವರು, “ತಾವು ಸಲ್ಲಿಸಿದ ದಾಖಲೆಗಳನ್ನು ಲೋಕಾಯುಕ್ತ ಪೊಲೀಸರು ಪರಿಗಣಿಸಿಲ್ಲ. ದಾಖಲೆ ಪರಿಗಣಿಸದೇ ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಅವರ ವಿರುದ್ಧ ಬಿ ರಿಪೋರ್ಟ್ ಸಲ್ಲಿಸಲಾಗಿದೆ. ಹೀಗಾಗಿ ತನಿಖಾಧಿಕಾರಿ ವಿರುದ್ಧ ಕ್ರಮ ಕೋರಿರುವ ಅರ್ಜಿಗಳನ್ನು ಪರಿಗಣಿಸಬೇಕು” ಎಂದು ಮನವಿ ಮಾಡಿದರು. ಎಲ್ಲ ದಾಖಲೆಗಳನ್ನು ಪರಿಗಣಿಸಲಾಗಿದೆ ಎಂದು ಲೋಕಾಯುಕ್ತ ಎಸ್​ಪಿಪಿ ಪೀಠಕ್ಕೆ ತಿಳಿಸಿದರು. ನ್ಯಾಯಾಲಯ ಜುಲೈ 28ರಂದು ತನಿಖಾ ಸ್ಥಿತಿಗತಿ ವರದಿ ಸಲ್ಲಿಸಲು ಸೂಚನೆ ನೀಡಿತು.

    ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಲೋಕಾಯುಕ್ತ ತನಿಖೆಗೆ ಹೈಕೋರ್ಟ್​ ಏಕ ಸದಸ್ಯ ಪೀಠ ಆದೇಶ ನೀಡಿತ್ತು. ಹಗರಣದ ತನಿಖೆ ನಡೆಸುತ್ತಿರುವ ಮೈಸೂರು ಲೋಕಾಯುಕ್ತ, ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ, ಸಂಬಂಧಿ ಹಾಗೂ ಜಮೀನು ಮಾಲೀಕರು ಅಕ್ರಮ ಎಸಗಿರುವ ಬಗ್ಗೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ ಎಂದು ನ್ಯಾಯಾಲಾಯಕ್ಕೆ ಬಿ ರಿಪೋರ್ಟ್​ ಸಲ್ಲಿಸಿದ್ದರು. ಈ ರಿಪೋರ್ಟ್​ ಅನ್ನು ಪ್ರಶ್ನಿಸಿ ದೂರುದಾರ ಸ್ನೇಹಮಯಿ ಕೃಷ್ಣ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

    ಅಲ್ಲದೆ, ದೂರುದಾರ ಸ್ನೇಹಮಯಿ ಕೃಷ್ಣ ಅವರು ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡುವಂತೆ ಹೈಕೋರ್ಟನ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಹಗರಣ ತನಿಖೆಯನ್ನು ಲೋಕಾಯುಕ್ತ ಪೊಲೀಸರು ಸರಿಯಾಗಿ ನೆಡಸಿಲ್ಲ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡುವಂತೆ ಮನವಿ ಮಾಡಿದ್ದಾರೆ.

    High Court orders submission of status report on Muda scam investigation

  • ಭೂ ಸ್ವಾಧೀನ ಕೈಬಿಡಲು ರಾಜ್ಯ ಸರ್ಕಾರ

    ಭೂ ಸ್ವಾಧೀನ ಕೈಬಿಡಲು ರಾಜ್ಯ ಸರ್ಕಾರ

    ಬೆಂಗಳೂರು: ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಭೂ ಸ್ವಾಧೀನ ಕೈಬಿಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

    ಕೆಐಎಡಿಬಿಯಿಂದ 13 ಗ್ರಾಮಗಳಲ್ಲಿ 1,777 ಎಕರೆ ಭೂ ಸ್ವಾಧೀನ ವಿರೋಧಿಸಿ ರೈತರು ಸುಮಾರು 1,200ಕ್ಕೂ ಹೆಚ್ಚು ದಿನಗಳಿಂದ ಹೋರಾಟ ನಡೆಸುತ್ತಿದ್ದರು. ರೈತರ ಹೋರಾಟಕ್ಕೆ ಮಣಿದಿರುವ ರಾಜ್ಯ ಸರ್ಕಾರ ಕೊನೆಗೂ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡಲು ನಿರ್ಧರಿಸಿದೆ.

    ವಿಧಾನಸೌಧದಲ್ಲಿ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರೈತರ ಜೊತೆಗಿನ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

    ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಚನ್ನರಾಯಪಟ್ಟಣ ಸುತ್ತಮುತ್ತಲಿನ 13 ಗ್ರಾಮಗಳ ಭೂ ಸ್ವಾಧೀನಕ್ಕೆ ಕೆಐಎಡಿಬಿಗೆ ಭೂಮಿ ನೀಡಲು ರೈತರು, ಸಂಘಟನೆಗಳು ಒಪ್ಪುತ್ತಿಲ್ಲ. ರಾಜ್ಯ ಸರ್ಕಾರ ಸಾಧಕ-ಭಾದಕಗಳ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಂಡಿದೆ ಎಂದು ತಿಳಿಸಿದರು.

    1,777 ಎಕರೆ ಡಿನೋಟಿಫಿಕೇಷನ್ ಕೈಬಿಟ್ಟಿದ್ದೇವೆ. ಆದರೆ, ಭೂಮಾಲೀಕರು ಸ್ವಯಂ ಪ್ರೇರಿತರಾಗಿ ಭೂಮಿ ನೀಡಲು ಮುಂದಾದರೆ ಖರೀದಿಸುತ್ತೇವೆ. ಬಲವಂತವಾಗಿ ಖರೀದಿಸುವುದಿಲ್ಲ .ಸ್ವಯಂ ಪ್ರೇರಿತರಾಗಿ ಭೂಮಿ ನೀಡುವವರಿಗೆ ಸೂಕ್ತ ಪರಿಹಾರ ನೀಡುತ್ತೇವೆ. ರಾಜ್ಯಕ್ಕೆ ಕೈಗಾರಿಕೆಗಳು ಬರಬೇಕು ಎಂಬುದು ನಮ್ಮ ಆಶಯವಾಗಿದೆ. ಸರ್ಕಾರದ ನಿರ್ಧಾರ ದೇವನಹಳ್ಳಿ ಪ್ರದೇಶಕ್ಕೆ ಮಾತ್ರ ಸಿಮೀತವಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

    State government to abandon land acquisition

  • ಕರ್ನಾಟಕ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ

    ಕರ್ನಾಟಕ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ

    ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಲಾಗಿದ್ದು, 34 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.

    ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿ ಪಾಲನೆಯಾಗುತ್ತಿಲ್ಲ ಎಂಬ ಪ್ರತಿಪಕ್ಷಗಳ ಆರೋಪ ಒಂದೆಡೆಯಾದರೆ, ಮತ್ತೊಂದೆಡೆ ಜೈಲುಗಳಲ್ಲಿ ನಡೆಯುತ್ತಿರುವ ವಿಪರೀತ ಅಕ್ರಮಗಳ ಬಗ್ಗೆ ಸರಣಿ ವರದಿಗಳಾಗುತ್ತಿರುವ ಸಂದರ್ಭದಲ್ಲೇ ಪೊಲೀಸ್ ಇಲಾಖೆ ಈ ಕ್ರಮ ಕೈಗೊಂಡಿದೆ.

    ಅಪರಾಧ ವಿಭಾಗ, ಸಂಚಾರ ವಿಭಾಗ ಸೇರಿದಂತೆ ಬೆಂಗಳೂರಿನ ವಿವಿಧ ವಿಭಾಗಗಳಲ್ಲಿಯೂ ಸರ್ಜರಿ ನಡೆದಿದೆ.

    ಐಪಿಎಸ್ ಅಧಿಕಾರಿಗಳ ವರ್ಗಾವಣೆ ವಿವರ (ವರ್ಗ ಮಾಡಿರುವ ಹುದ್ದೆ)

    ಅಕ್ಷಯ್ ಮಚೀಂದ್ರ – ಡಿಸಿಪಿ, ಬೆಂಗಳೂರೂ ಕೇಂದ್ರ ವಿಭಾಗ

    ಅಜಯ್ ಹಿಲೋರಿ – ಜಂಟಿ ಪೊಲೀಸ್ ಆಯುಕ್ತ, ಅಪರಾಧ ವಿಭಾಗ

    ಪರಶುರಾಮ್ – ಡಿಸಿಪಿ, ವೈಟ್ ಫೀಲ್ಡ್ ವಿಭಾಗ

    ಕಾರ್ತಿಕ್ ರೆಡ್ಡಿ – ಜಂಟಿ ಪೊಲೀಸ್ ಆಯುಕ್ತ, ಸಂಚಾರ ವಿಭಾಗ

    ಅನೂಪ್ ಶೆಟ್ಟಿ – ಬೆಂಗಳೂರು ಪಶ್ಚಿಮ ವಿಭಾಗ ಡಿಸಿಪಿ, ಸಂಚಾರ

    ಶಿವಪ್ರಕಾಶ್ ದೇವರಾಜು – ಲೋಕಾಯುಕ್ತ ಎಸ್​ಪಿ, ಬೆಂಗಳೂರು

    ಜಯಪ್ರಕಾಶ್ – ಬೆಂಗಳೂರು ಉತ್ತರ ಸಂಚಾರ ವಿಭಾಗ, ಡಿಸಿಪಿ

    ಎಂ.ನಾರಾಯಣ್ – ಎಲೆಕ್ಟ್ರಾನಿಕ್ ಸಿಟಿ ವಿಭಾಗ, ಡಿಸಿಪಿ

    ಅನಿತಾ.ಬಿ ಹದ್ದಣ್ಣನವರ್ – ಬೆಂಗಳೂರು ಆಗ್ನೇಯ ವಿಭಾಗ ಡಿಸಿಪಿ

    ಸೈದಲು ಅಡಾವತ್ – ಸಿಐಡಿ, ಎಸ್​​ಪಿ

    ಬಾಬಾ ಸಾಬ್ ನ್ಯಾಮಗೌಡ – ಬೆಂಗಳೂರು ಉತ್ತರ ವಿಭಾಗ, ಡಿಸಿಪಿ

    ನಾಗೇಶ್ – ಬೆಂಗಳೂರು ವಾಯುವ್ಯ ವಿಭಾಗ, ಡಿಸಿಪಿ

    ಶ್ರೀಹರಿ ಬಾಬು – ಬೆಂಗಳೂರು ಸಿಸಿಬಿ ಡಿಸಿಪಿ

    ಸೌಮ್ಯಲತಾ – ಸಿಎಆರ್ ಹೆಡ್ ಕ್ವಾರ್ಟರ್ಸ್, ಡಿಸಿಪಿ

    ಎಂ.ಎನ್.ಅನುಚೇತ್ – ಡಿಐಜಿ ನೇಮಕಾತಿ ವಿಭಾಗ

    ವರ್ತಿಕಾ ಕಟೀಯಾರ್ – ಬಳ್ಳಾರಿ ವಲಯ, ಡಿಐಜಿ

    ಶಾಂತರಾಜು – ಎಸ್​​ಪಿ, ಗುಪ್ತಚರ ಇಲಾಖೆ

    ಸಿರಿಗೌರಿ – ಎಸ್​​ಪಿ, ರಾಜ್ಯ ಅಪರಾಧ ದಾಖಲೆ ವಿಭಾಗ

    ಸುಮನ್.ಡಿ ಪೆನ್ನೆಕರ್ – ಡಿಸಿಪಿ, ಇಂಟಲಿಜೆನ್ಸ್

    ಸಿಮಿ ಮರೀಯ ಜಾರ್ಜ್‌ – ಡಿಸಿಪಿ, ದಕ್ಷಿಣ ವಿಭಾಗ ಸಂಚಾರ

    ವೈ.ಅಮರನಾಥ್ – ಕಮಾಂಡೆಂಟ್ ಫಸ್ಟ್ ಬೆಟಾಲಿಯನ್ KSRP

    ಯಶೋಧ ವಟ್ಟಗೋಡಿ – ಎಸ್​ಪಿ, ಹಾವೇರಿ

    ಗುಂಜನ್ ಅರ್ಯಾ – ಎಸ್​ಪಿ, ಧಾರವಾಡ

    ಎಂ.ಗೋಪಾಲ್ – ಜಂಟಿ ನಿರ್ದೇಶಕ, ಎಫ್​​ಎಸ್​ಎಲ್ ಬೆಂಗಳೂರು

    ಸಿದ್ಧಾರ್ಥ ಗೋಯಲ್ – ಎಸ್​ಪಿ, ಬಾಗಲಕೋಟೆ

    ರೋಹನ್ ಜಗದೀಶ್ – ಎಸ್​ಪಿ, ಗದಗ

    ಶಿವಾಂಶು ರಜಪೂತ – ಎಸ್​ಪಿ, ಕೆಜಿಎಫ್

    ಜಿತೇಂದ್ರ ಕುಮಾರ್ – ಡಿಸಿಪಿ ಕಾನೂನು ಸುವ್ಯವಸ್ಥೆ, ಮಂಗಳೂರು ನಗರ

    ಎಂ.ಎನ್​​.ದೀಪನ್ – ಎಸ್​ಪಿ, ಉತ್ತರ ಕನ್ನಡ

    ಎಸ್​.ಜಾನವಿ – ಎಸ್​ಪಿ, ವಿಜಯನಗರ

    ಚಂದ್ರಗುಪ್ತ – ಐಜಿಪಿ, ಈಶಾನ್ಯ ಕಲಬುರಗಿ

    ಇಡಾ ಮಾರ್ಟಿನ್ ಮಾರ್ಬಾನಿಯಾಂಗ್ – ಡಿಐಜಿ, ಬೆಂಗಳೂರು ಪೊಲೀಸ್ ಹೆಡ್​ಕ್ವಾರ್ಟರ್ಸ್

    ಕಾರ್ತಿಕ್ ರೆಡ್ಡಿ – ಡಿಐಜಿ, ಜಂಟಿ ಆಯುಕ್ತರು, ಬೆಂಗಳೂರು ಸಂಚಾರ ಪೊಲೀಸ್

    ಈ ಹಿಂದೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್​​ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ್ದ ಕಾಲ್ತುಳಿತದ ನಂತರ ಕೆಲವು ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿತ್ತು. ಆದರೆ, ಇದೀಗ ದೊಡ್ಡಮಟ್ಟದಲ್ಲಿ ಇಲಾಖೆಗೆ ಸರ್ಜರಿ ಮಾಡಿದೆ.

    Major surgery for Karnataka Police Department

  • ಬೆಂಗಳೂರಿನ ಜನರಿಗೆ ಆಟೋ ಪ್ರಯಾಣ ದರ ಹೆಚ್ಚಳ

    ಬೆಂಗಳೂರಿನ ಜನರಿಗೆ ಆಟೋ ಪ್ರಯಾಣ ದರ ಹೆಚ್ಚಳ

    ಬೆಂಗಳೂರು: ನಮ್ಮೆ ಮೆಟ್ರೋ ರೈಲು ಟಿಕೆಟ್​ ದರ ಏರಿಕೆ ಬೆನ್ನಲ್ಲೇ ಬೆಂಗಳೂರಿನ ಜನರಿಗೆ ಮತ್ತೊಂದು ದರ ಏರಿಕೆಯ ಬಿಸಿ ತಟ್ಟಿದೆ. ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರ ಹೆಚ್ಚಿಸಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಆದೇಶ ಹೊರಡಿಸಿದ್ದಾರೆ. ಬೆಂಗಳೂರಿನಲ್ಲಿ ಸದ್ಯ ಎರಡು ಕಿಮೀ ಪ್ರಯಾಣಕ್ಕೆ ಆಟೋ ಮೀಟರ್ ದರ ಕನಿಷ್ಠ 30 ರೂಪಾಯಿ ಇದೆ. ಇದೀಗ ಆ ದರವನ್ನು ಎರಡು ಕಿಮೀಗೆ 36 ರುಪಾಯಿಗೆ‌ ಏರಿಕೆ ಮಾಡಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ನೂತನ ದರ ಆಗಸ್ಟ್​ 1 ರಿಂದ ಜಾರಿಗೆ ಬರಲಿದೆ.

    ಬೆಂಗಳೂರಿನಲ್ಲಿ ಕನಿಷ್ಠ ಎರಡು ಕಿಮೀ ಆಟೋ ಪ್ರಯಾಣ ದರ 30 ರೂ.ನಿಂದ 36ರೂ.ಗೆ ಹೆಚ್ಚಳವಾಗಿದೆ. ಈ ಮೂಲಕ 6 ರೂ. ಹೆಚ್ಚಿಸಲಾಗಿದೆ. ಕನಿಷ್ಠ ಪ್ರಯಾಣ ದರ ಬಳಿಕ ಪ್ರತಿ ಕಿಮೀ.ಗೆ 15 ರೂ.ನಿಂದ 18 ರೂ.ಗೆ ಏರಿಕೆ ಮಾಡಲಾಗಿದೆ. ಕಾಯುವಿಕೆ ದರ ಮೊದಲ ಐದು ನಿಮಿಷ ಉಚಿತವಾಗಿದೆ. ಮೊದಲ ಐದು ನಿಮಿಷದ ನಂತರ ಪ್ರತಿ 15 ನಿಮಿಷ ಅಥವಾ ಅದರ ಭಾಗಕ್ಕೆ 10 ರೂ. ನಿಗದಿ ಮಾಡಲಾಗಿದೆ.

    ಪ್ರಯಾಣಿಕರ ಲಗೇಜು ದರ ಮೊದಲ 20 ಕೆ.ಜಿ.ಗೆ ಉಚಿತವಾಗಿರಲಿದೆ. ಮೊದಲ 20ಕೆ.ಜಿ.ಯಿಂದ ನಂತರ ಪ್ರತಿ 20 ಕೆ.ಜಿ.ಗೆ ಅಥವಾ ಅದರ ಭಾಗಕ್ಕೆ 10 ರೂ. ನಿಗದಿ ಮಾಡಲಾಗಿದೆ. ಗರಿಷ್ಠ ಪ್ರಯಾಣಿಕರ ಲಗೇಜುಗಳು 50 ಕೆ.ಜಿ.ಗೆ ಸೀಮಿತಗೊಳಿಸಲಾಗಿದೆ. ರಾತ್ರಿ ವೇಳೆ ಸಾಮಾನ್ಯ ದರ+ಸಾಮಾನ್ಯ ದರದ ಅರ್ಧಪಟ್ಟು ಹೆಚ್ಚು ಪಡೆಯಬಹುದು. ಇದು ರಾತ್ರಿ 10 ಗಂಟೆಯಿಂದ ನಸುಕಿನ ಜಾವ 5 ಗಂಟೆಯವರೆಗೆ ಮಾತ್ರ ಅನ್ವಯವಾಗುತ್ತದೆ.

    ಆಟೋ ದರ ಏರಿಕೆ ಸಂಬಂಧ ಮೊದಲು ಮಾರ್ಚ್ ತಿಂಗಳಲ್ಲಿ ಸಭೆ ನಡೆದಿತ್ತು. ಸಭೆಯಲ್ಲಿ ಹಲವು ಆಟೋ ಸಂಘಟನೆಗಳು ಭಾಗಿಯಾಗಿದ್ದವು. ಆಟೋ ದರ ಪರಿಷ್ಕರಣೆ ಸಮಿತಿಯು ಆಟೋ ಚಾಲಕರ ಅಹವಾಲು ಕೇಳಿತ್ತು. ಅಲ್ಲದೆ ಸಭೆಯ ನಿರ್ಣಯವನ್ನು ಜಿಲ್ಲಾಧಿಕಾರಿಗಳಿಗೆ ಒಪ್ಪಿಸಿತ್ತು. ವರದಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ದರ ಏರಿಕೆಗೆ ಗ್ರೀನ್​ ಸಿಗ್ನಲ್​ ನೀಡಿದ್ದಾರೆ.

    ಸರ್ಕಾರ ಸೂಚಿಸಿದ ದರವನ್ನು ಮಾತ್ರ ಪ್ರಯಾಣಿಕರಿಂದ ತೆಗೆದುಕೊಳ್ಳಬೇಕೆಂದು ಆದೇಶ ಇದೆ. ಅದನ್ನು ಮೀರಿ ಪ್ರಯಾಣಿಕರಿಂದ ಹೆಚ್ಚಿನ ದರವನ್ನು ಪಡೆದುಕೊಂಡರೆ ಅಂತಹ ಕಂಪನಿಗಳ ವಿರುದ್ಧ ಮೊದಲು ನೋಟಿಸ್ ನೀಡಲಾಗುತ್ತದೆ. ನಂತರ ಕಠಿಣವಾದ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಆರ್​ಟಿಒ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು.

    Auto fares hiked for Bengaluru residents

  • ಇಂದು ದೇವನಹಳ್ಳಿ ಭೂಸ್ವಾಧೀನ ಮುಖ್ಯಮಂತ್ರಿ ಸಭೆ

    ಇಂದು ದೇವನಹಳ್ಳಿ ಭೂಸ್ವಾಧೀನ ಮುಖ್ಯಮಂತ್ರಿ ಸಭೆ

    ಬೆಂಗಳೂರು: ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿನ ಭೂಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ರೈತರು, ರೈತ ಸಂಘದ ಮುಖಂಡರು, ಹೋರಾಟಗಾರರ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ (ಜುಲೈ 15) ಸಭೆ ನಡೆಸಲಿದ್ದಾರೆ.

    ಅತ್ಯಾಧುನಿಕ ರಕ್ಷಣಾ ಮತ್ತು ವೈಮಾಂತರಿಕ್ಷ ಪಾರ್ಕ್‌ ಸ್ಥಾಪನೆಗಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ 13 ಗ್ರಾಮಗಳ ವ್ಯಾಪ್ತಿಯ 1,777 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು 2021ರಲ್ಲಿ ಪ್ರಾಥಮಿಕ ಅಧಿಸೂಚನೆ, 2022ರಲ್ಲಿ ಅಂತಿಮ ಆದೇಶ ಹೊರಡಿಸಲಾಗಿತ್ತು. ಭೂಸ್ವಾಧೀನ ವಿರೋಧಿಸಿ ಅಂದಿನಿಂದಲೂ ರೈತರು ಹೋರಾಟ ಮಾಡುತ್ತಾ ಬಂದಿದ್ದಾರೆ.

    ಚನ್ನರಾಯಪಟ್ಟಣ, ಮಟ್ಟಿಬಾರ್ಲು ಮತ್ತು ಶ್ರೋತ್ರೀಯ ತೆಲ್ಲೋಹಳ್ಳಿಗಳಲ್ಲಿನ ನೀರಾವರಿ, ಕೃಷಿ ಮತ್ತು ಜನವಸತಿಗಳನ್ನು ಪರಿಗಣಿಸಿ, 231.23 ಎಕರೆ, 185.18 ಎಕರೆ ಮತ್ತು 78.21 ಎಕರೆ ಸೇರಿ 495 ಎಕರೆ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವುದಾಗಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಜೂನ್‌ 24ರಂದು ಘೋಷಿಸಿದ್ದರು. ಆದರೆ, ರೈತರು ಸರ್ಕಾರದ ನಿರ್ಧಾರವನ್ನು ಒಪ್ಪದೇ ಎಲ್ಲ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ ಆಗ್ರಹಿಸಿ ಸಂಯುಕ್ತ ಹೋರಾಟ–ಕರ್ನಾಟಕದ ನೇತೃತ್ವದಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ರೈತರು ಹೋರಾಟ ಮುಂದುವರಿಸಿದ್ದರು.

    ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈ 5ರಂದು ರೈತ ಸಂಘದ ಮುಖಂಡರು, ಹೋರಾಟಗಾರರು, ಸ್ಥಳೀಯ ರೈತರ ಸಭೆ ಕರೆದಿದ್ದರು. ಕಾನೂನು ತೊಡಕುಗಳಿದ್ದು, ತಜ್ಞರ ಅಭಿಪ್ರಾಯ ಪಡೆದು ತೀರ್ಮಾನ ಕೈಗೊಳ್ಳಲು 10 ದಿನಗಳ ಸಮಯ ಕೇಳಿದ್ದರು. ನಿಗದಿಯಂತೆ ಸಭೆ ಮಂಗಳವಾರ ನಡೆಯಲಿದೆ.

    ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ‘ಕೃಷಿ ಮತ್ತು ಕೈಗಾರಿಕೆ ಎರಡನ್ನೂ ಸರಿದೂಗಿಸಿಕೊಂಡು ಹೋಗಬೇಕು ಎನ್ನುವುದು ಸರ್ಕಾರದ ಕಳಕಳಿ. ಸಿದ್ದರಾಮಯ್ಯ ಅವರು ಸಭೆಯಲ್ಲಿ ಚರ್ಚಿಸಿ, ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ’ ಎಂದಿದ್ದಾರೆ.

    Devanahalli land acquisition chief minister meeting today

  • 500ನೇ ಕೋಟಿ ಮಹಿಳೆಗೆ ಸಾಂಕೇತಿಕವಾಗಿ ಟಿಕೆಟ್ ವಿತರಿಸಿದ ಸಿಎಂ

    500ನೇ ಕೋಟಿ ಮಹಿಳೆಗೆ ಸಾಂಕೇತಿಕವಾಗಿ ಟಿಕೆಟ್ ವಿತರಿಸಿದ ಸಿಎಂ

    ಬೆಂಗಳೂರು: ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯಡಿ 500ನೇ ಕೋಟಿಯ ಮಹಿಳಾ ಪ್ರಯಾಣಿಕರ ಪ್ರಯಾಣ ಸಂಭ್ರಮದ ಅಂಗವಾಗಿ ಸಾಂಕೇತಿಕವಾಗಿ 500ನೇ ಕೋಟಿಯ ಟಿಕೆಟನ್ನು ಇಂದು ವಿತರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು..

    ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಲಾಗಿತ್ತು. 2023ರ ಮೇ 20 ರಂದು ಸರ್ಕಾರ ಅಸ್ತಿತ್ವಕ್ಕೆ ಬಂದ ತಕ್ಷಣ ಜಾರಿಗೊಳಿಸಲು ಸಚಿವಸಂಪುಟದಲ್ಲಿ ಕೈಗೊಂಡ ತೀರ್ಮಾನದಂತೆ ಜೂನ್ 11 ರಂದು ಶಕ್ತಿ ಯೋಜನೆಗೆ ಚಾಲನೆ ನೀಡಲಾಯಿತು. ಅಂದಿನಿಂದ ರಾಜ್ಯದ ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯವನ್ನು ಕಲ್ಪಿಸಲಾಗಿರುವ ಬಗ್ಗೆ ಮುಖ್ಯಮಂತ್ರಿ ವಿವರಿಸಿದರು.

    ಸಿಗಂದೂರು ಕಾರ್ಯಕ್ರಮ-ಶಿಷ್ಠಾಚಾರ ಪಾಲನೆಯಾಗಿಲ್ಲ:

    ಸಿಗಂದೂರು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ಕಾರ್ಯಕ್ರಮದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ಸಾಗರ ತಾಲ್ಲೂಕಿನಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ಮುಂದೂಡುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ದೂರವಾಣಿ ಮೂಲಕ ಮಾತನಾಡಿ ಪತ್ರವನ್ನೂ ಬರೆಯಲಾಗಿತ್ತು. ಕೇಂದ್ರ ಸಚಿವರೂ ಕಾರ್ಯಕ್ರಮ ಮುಂದೂಡಲು ಸಮ್ಮತಿಸಿದ್ದರೂ, ಕೂಡ ಇಲ್ಲಿನ ಸ್ಥಳೀಯ ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು, ನನ್ನ ಗಮನಕ್ಕೆ ತಾರದೇ, ಕಾರ್ಯಕ್ರಮವನ್ನು ಇಂದೇ ಆಯೋಜಿಸಿದ್ದಾರೆ. ನನಗೆ ಪೂರ್ವನಿಯೋಜಿತ ಕಾರ್ಯಕ್ರಮಗಳಂತೆ ವಿಜಯಪುರ ಜಿಲ್ಲೆಗೆ ತೆರಳಬೇಕಾಗಿರುವುದರಿಂದ, ಸಾಗರ ತಾಲ್ಲೂಕಿನ ಕಾರ್ಯಕ್ರಮಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದರು.

    ಬಿಜೆಪಿಯ ಈ ನಡೆಯನ್ನು ಪ್ರತಿಭಟಿಸಲು ಸಂಬಂಧಪಟ್ಟ ಸಾಗರ ತಾಲ್ಲೂಕಿನ ಇಂದಿನ ಕಾರ್ಯಕ್ರಮವನ್ನು ಸರ್ಕಾರದ ಯಾವುದೇ ಸಚಿವರು, ಸ್ಥಳೀಯ ಶಾಸಕರು ಭಾಗವಹಿಸುತ್ತಿಲ್ಲ. ನಮ್ಮ ನಡುವೆ ತಿಕ್ಕಾಟವನ್ನು ಪ್ರಾರಂಭಿಸಿರುವುದು ಕೇಂದ್ರ ಸರ್ಕಾರವೇ. ಇಲ್ಲಿ ಶಿಷ್ಠಾಚಾರದ ಪಾಲನೆಯಾಗಿಲ್ಲ. ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ರಾಜ್ಯ ಸರ್ಕಾರದ ಪಾಲೂ ಇರುತ್ತದೆ. ಅಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಎಲ್ಲ ಶಿಷ್ಠಾಚಾರಗಳನ್ನೂ ತಪ್ಪದೇ ಪಾಲಿಸುತ್ತದೆ. ಇಂದಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಿಗಾಗಲಿ, ಸಂಬಂಧಪಟ್ಟ ಇಲಾಖಾ ಸಚಿವರನ್ನಾಗಲೀ, ಸ್ಥಳೀಯ ಶಾಸಕರನ್ನಾಗಲೀ ಆಮಂತ್ರಣ ನೀಡಲಾಗಿಲ್ಲ ಎಂದರು.

    ಕನ್ನಡದ ಮೇರುನಟಿ ಬಿ.ಸರೋಜಾದೇವಿ ನಿಧನ: ಮುಖ್ಯಮಂತ್ರಿಗಳ ಸಂತಾಪ

    ಭಾರತೀಯ ಚಿತ್ರರಂಗದ ಖ್ಯಾತ ಚಿತ್ರನಟಿ ಬಿ.ಸರೋಜಾದೇವಿ ಅವರ ನಿಧನದ ಬಗ್ಗೆ ಸಂತಾಪ ಸೂಚಿಸುತ್ತಾ ಮಾತನಾಡಿದ ಮುಖ್ಯಮಂತ್ರಿಗಳು, ಬಿ.ಸರೋಜಾದೇವಿಯವರು ಕನ್ನಡ ನಾಡು ಕಂಡ ಪ್ರತಿಭಾವಂತ ಕಲಾವಿದರಾಗಿದ್ದರು. ಬಹುಭಾಷಾ ನಟಿಯಾಗಿದ್ದ ಅವರು ಅಪ್ರತಿಮ ಕಲಾವಿದರಾಗಿದ್ದು, ಅವರ ಸಾವಿನಿಂದ ಇಡೀ ಕಲಾಜಗತ್ತು ಬಡವಾಗಿದೆ. ಸರೋಜಾದೇವಿಯವರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಅವರ ಕುಟುಂಬವರ್ಗ ಹಾಗೂ ಅಭಿಮಾನಿ ಬಳಗಕ್ಕೆ ದು:ಖವನ್ನು ಭರಿಸುವ ಶಕ್ತಿ ತುಂಬಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.

    CM symbolically distributes ticket to 500 crore women