Category: ರಾಜ್ಯ

  • ಸುಳ್ಳು ಜಾತಿ ಪ್ರಮಾಣಪತ್ರ ಸಾಬೀತಾದ 170 ಪ್ರಕರಣಗಳಲ್ಲಿ ತಕ್ಷಣ ಕ್ರಮ ತೆಗೆದುಕೊಳ್ಳಬೇಕು

    ಸುಳ್ಳು ಜಾತಿ ಪ್ರಮಾಣಪತ್ರ ಸಾಬೀತಾದ 170 ಪ್ರಕರಣಗಳಲ್ಲಿ ತಕ್ಷಣ ಕ್ರಮ ತೆಗೆದುಕೊಳ್ಳಬೇಕು

    ಬೆಂಗಳೂರು: ‘ಸುಳ್ಳು ಜಾತಿ ಪ್ರಮಾಣಪತ್ರ ಪಡೆದಿರುವ ಅರೋಪ ಸಾಬೀತಾಗಿರುವ 170 ಪ್ರಕರಣಗಳಲ್ಲಿ ತಕ್ಷಣ ಕ್ರಮ ತೆಗೆದುಕೊಳ್ಳಬೇಕು. ಸುಳ್ಳು ಪ್ರಮಾಣಪತ್ರ ಸಲ್ಲಿಸಿ ಸರ್ಕಾರದ ಸೌಲಭ್ಯ ಪಡೆದಿರುವುದು ಸಾಬೀತಾದರೆ, ಅದನ್ನು ಹಿಂಪಡೆಯಬೇಕು’ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

    ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ನಡೆದ 2025-26ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ನಿಯಂತ್ರಣ) ಜಾಗೃತ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ಸುಳ್ಳು ಜಾತಿ ಪ್ರಮಾಣಪತ್ರ ಪ್ರಕರಣಗಳಲ್ಲಿ ನ್ಯಾಯಾಲಯಗಳು ನೀಡಿರುವ ತೀರ್ಪುಗಳ ಅನ್ವಯ ಯಾಕೆ ಕ್ರಮ ಕೈಗೊಂಡಿಲ್ಲ ’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

    ಸುಳ್ಳು ಜಾತಿ ಪ್ರಮಾಣ ಪತ್ರ ಪ್ರಕರಣಗಳ ವಿಚಾರದಲ್ಲಿ ಇಲಾಖೆಗಳ ನಡುವೆ ಸಮನ್ವಯದ ಅಗತ್ಯವಿದೆ. ಈ ಬಗ್ಗೆ ಸಮಗ್ರ ವರದಿ ಸಲ್ಲಿಸಬೇಕು’ ಎಂದು ಅವರು ನಿರ್ದೇಶನ ನೀಡಿದ್ದಾರೆ. ‘ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ 60 ದಿನಗಳ ಒಳಗೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ಆದರೆ, ಕಳೆದ ಆರು ತಿಂಗಳಲ್ಲಿ ಶೇ 84ರಷ್ಟು ಪ್ರಕರಣಗಳಲ್ಲಿ ಮಾತ್ರ ನಿಗದಿತ ಅವಧಿಯ ಒಳಗೆ ಆರೋಪ ಪಟ್ಟಿ ಸಲ್ಲಿಸಲಾಗಿದೆ.

    ಆರೋಪ ಪಟ್ಟಿ ಸಲ್ಲಿಸುವ ವಿಚಾರದಲ್ಲಿ ಪೊಲೀಸರು ‌ಯಾವುದೇ ನೆಪ ಹೇಳಬಾರದು’ ಎಂದು ತಾಕೀತು ಮಾಡಿದ ಮುಖ್ಯಮಂತ್ರಿ, ‘56 ಪ್ರಕರಣ ಗಳಲ್ಲಿ ನ್ಯಾಯಾಲಯ ನೀಡಿರುವ ತಡೆಯಾಜ್ಞೆಗಳನ್ನು ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದೂ ಸೂಚನೆ ನೀಡಿದ್ದಾರೆ.

    ‘ದೌರ್ಜನ್ಯ ಪ್ರಕರಣಗಳ ತ್ವರಿತ ವಿಚಾರಣೆಗೆ 11 ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಪ್ರಕರಣಗಳ ಸರಿಯಾದ ವಿಚಾರಣೆ ನಡೆಸಿ, ತ್ವರಿತವಾಗಿ ನ್ಯಾಯ ಒದಗಿಸಲು ಕ್ರಮ ಕೈಗೊಳ್ಳಬೇಕು. ಪ್ರಸ್ತುತ ಶಿಕ್ಷೆಯ ಪ್ರಮಾಣ ಶೇ 10ರಷ್ಟಿದೆ. ಇದು ಹೆಚ್ಚಾಗಬೇಕು. ಆರೋಪಿಗಳ ಜೊತೆ ಪೊಲೀಸರು ಶಾಮೀಲಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

    ‘ರಾಜ್ಯದಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ (ಡಿಸಿಆರ್‌ಇ) 33 ಪೊಲೀಸ್‌ ಠಾಣೆಗಳನ್ನು ತೆರೆಯಲಾಗಿದೆ. ಇಲ್ಲಿ ಸಿಬ್ಬಂದಿ ಕೊರತೆಯಿದ್ದರೆ ಭರ್ತಿ ಮಾಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು. ದೌರ್ಜನ್ಯ ಪ್ರಕರಣಗಳಲ್ಲಿ ಪ್ರತಿ ದೂರು ದಾಖಲಿಸುವ ಪ್ರವೃತ್ತಿ ಹೆಚ್ಚುತ್ತಿರುವುದು ಗಮನಕ್ಕೆ ಬಂದಿದೆ. ಅಂತಹ ಪ್ರಕರಣಗಳಲ್ಲಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ದೂರಿನಲ್ಲಿ ಸತ್ಯಾಂಶವಿದ್ದರೆ ಮಾತ್ರ ಎಫ್‌ಐಆರ್‌ ದಾಖಲಿಸಬೇಕು’ ಎಂದಿದ್ದಾರೆ.

    ಸಚಿವರಾದ ಎಚ್.ಕೆ. ಪಾಟೀಲ, ಎಚ್.ಸಿ. ಮಹದೇವಪ್ಪ, ಕೆ.ಎಚ್. ಮುನಿಯಪ್ಪ, ಆರ್.ಬಿ. ತಿಮ್ಮಾಪುರ, ಶಾಸಕರಾದ ಎ.ಸಿ. ಶ್ರೀನಿವಾಸ್‌, ಎಚ್.ವಿ. ವೆಂಕಟೇಶ್‌, ಎ.ಆರ್.ಕೃಷ್ಣಮೂರ್ತಿ, ಪಿ.ಎಂ. ನರೇಂದ್ರ ಸ್ವಾಮಿ, ಬಸನಗೌಡ ತುರವಿಹಾಳ್‌, ಭಾಗೀರಥಿ ಮುರುಳ್ಯ, ಪರಿಷತ್‌ ಸದಸ್ಯರಾದ ಸುಧಾಮ್‌ ದಾಸ್, ಡಿ.ತಿಮ್ಮಯ್ಯ, ಶಾಂತಾರಾಂ ಸಿದ್ದಿ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಸಭೆಯಲ್ಲಿದ್ದರು.

    Immediate action should be taken in 170 cases of proven fake caste certificates

  • ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ಧರ್ಮಸ್ಥಳ ಪ್ರಕರಣ ವಹಿಸುವ ಅಗತ್ಯವಿಲ್ಲ

    ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ಧರ್ಮಸ್ಥಳ ಪ್ರಕರಣ ವಹಿಸುವ ಅಗತ್ಯವಿಲ್ಲ

    ಬೆಂಗಳೂರು: ಧರ್ಮಸ್ಥಳ ಪ್ರಕರಣದ ತನಿಖೆಯನ್ನು ಹೇಗೆ ಮಾಡಬೇಕು ಎಂಬುದನ್ನು ಪೊಲೀಸರು ನಿರ್ಧರಿಸುತ್ತಾರೆ. ತನಿಖೆಯಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ವಹಿಸುವ ಅಗತ್ಯವಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ ಸೋಮವಾರ ತಿಳಿಸಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಂಪರು ಪರೀಕ್ಷೆ ಬೇಕೋ, ಬೇಡವೋ ಎಂಬುದನ್ನು ನಾನು ನಿರ್ಧರಿಸಲು ಸಾಧ್ಯವಿಲ್ಲ. ಎಸ್ಐಟಿ ಸರಿಯಾಗಿಯೇ ತನಿಖೆ ನಡೆಸುತ್ತಿದೆ. ಹಲವು ಹೇಳಿಕೆಗಳು ಹೊರಬರುತ್ತಿರುವುದನ್ನು ನಾನು ಗಮನಿಸಿದ್ದೇನೆ. ಆದರೆ, ಹೇಳಿಕೆ ನೀಡುವುದರಿಂದ ಸತ್ಯ ಹೊರಬರುವುದಿಲ್ಲ. ರಾಜಕಾರಣಿಗಳು ಮೊದಲು ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಲಿ ಎಂದು ಬಿಜೆಪಿಗೆ ತಿರುಗೇಟು ನೀಡಿದರು.

    ತನಿಖೆಗೆ ಗಡುವು ನಿಗದಿಪಡಿಸಲು ಸಾಧ್ಯವಿಲ್ಲ. ‘ಇಷ್ಟು ಸಮಯದಲ್ಲಿ’ ತನಿಖೆಯನ್ನು ಮುಗಿಸಲು ನಾವು ಅವರಿಗೆ ಆದೇಶಿಸಲು ಆಗದು. ಸಾಧ್ಯವಾದಷ್ಟು ಬೇಗ ತನಿಖೆಯನ್ನು ಮುಗಿಸಲು ಮಾತ್ರ ನಾನು ಎಸ್ಐಟಿಗೆ ಸೂಚಿಸಿದ್ದೇನೆ ಎಂದರು.

    ಧರ್ಮಸ್ಥಳ ಚಲೋ ಕೈಗೊಂಡಿರುವ ಬಿಜೆಪಿ ಕುರಿತು ಪ್ರತಿಕ್ರಿಯಿಸಿದ ಅವರು, ಅವರೆಲ್ಲರೂ ಮಂಜುನಾಥನ ದರ್ಶನ ಪಡೆಯಲು ಹೋಗುತ್ತಿರಬೇಕು. ಅವರು ಹೋಗಲಿ. ದರ್ಶನಕ್ಕೆ ಹೋಗುವವರನ್ನು ತಡೆಯಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂಬುದೇ ನನ್ನ ವಿನಂತಿ ಎಂದು ಹೇಳಿದರು.

    ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಆರ್‌ಎಸ್‌ಎಸ್ ಗೀತೆಯನ್ನು ಪಠಿಸಿದ್ದರ ಮತ್ತು ಹೇಳಿಕೆ ನೀಡಿದ್ದರ ಕುರಿತು ಪ್ರತಿಕ್ರಿಯಿಸಿದ ಅವರು, ‘ನಾನು ಈ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಪರಮೇಶ್ವರ ಹೇಳಿದರು.

    There is no need to hand over the Dharmasthala case to the National Investigation Agency (NIA).

  • ಡಿಕೆ ಶಿವಕುಮಾರ್  ಕ್ಷಮೆ ಕೇಳಬೇಕು

    ಡಿಕೆ ಶಿವಕುಮಾರ್ ಕ್ಷಮೆ ಕೇಳಬೇಕು

    ನವದೆಹಲಿ: ವಿಧಾನಸಭೆಯಲ್ಲಿ ಡಿಕೆ ಶಿವಕುಮಾರ್ಕೆ ಪಿಸಿಸಿ ಅಧ್ಯಕ್ಷರಾಗಿ RSS ಸಂಘದ ಗೀತೆ ಹಾಡಿದ್ದು ತಪ್ಪು ಅವರು ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಹೇಳಿದ್ದಾರೆ.

    ನವದೆಹಲಿಯಲ್ಲಿ ಮಾತನಾಡಿದ ಹರಿಪ್ರಸಾದ್, ಉಪ ಮುಖ್ಯಮಂತ್ರಿಗಳಾಗಿ ಅದನ್ನು ಹಾಡಿದ್ದರೆ ತಕರಾರಿಲ್ಲ. ಆದರೆ ಕೆಪಿಸಿಸಿ ಅಧ್ಯಕ್ಷರಾಗಿ ಆರ್​ಎಸ್​ಎಸ್ ಗೀತೆ ಹಾಡಿದ್ದರೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಆರ್​ಎಸ್​​ಎಸ್ ಅನ್ನು ಈ ದೇಶದಲ್ಲಿ ಮೂರು ಬಾರಿ ಈಗಾಗಲೇ ನಿಷೇಧ ಮಾಡಿದ್ದಾರೆ.

    ಡಿಕೆ ಶಿವಕುಮಾರ್ ಉಪ ಮುಖ್ಯಮಂತ್ರಿಗಳಾಗಿ ಸಂಘದ ಪ್ರಾರ್ಥನೆ ಮಾಡಿದರೆ ನಮ್ಮದೇನು ಅಭ್ಯಂತರವಿಲ್ಲ ಎಂದರು. ಕಾರಣ ಸರ್ಕಾರ ಎಂಬುದು ಒಂದು ಪಕ್ಷದ್ದಲ್ಲ. ಇಡೀ ಏಳು ಕೋಟಿ ಕರ್ನಾಟಕ ಜನತೆಯ ಸರ್ಕಾರ ಎಂದು ಹೇಳಿದ್ದಾರೆ.

    ಮಹಾತ್ಮ ಗಾಂಧಿಯವರನ್ನು ಹತ್ಯೆ ಮಾಡಿದ ಸಂಘಟನೆ ಅದು. ಆ ಸಂಘಟನೆಯ ಪ್ರಾರ್ಥನೆ ಮಾಡುವುದು ಸರಿಯಲ್ಲ. ಕಾಂಗ್ರೆಸ್ ಅಧ್ಯಕ್ಷರಾಗಿ ಮಾಡಿದ್ದರೆ ಅವರು ಕ್ಷಮೆ ಕೇಳಬೇಕಾಗುತ್ತದೆ ಎಂದು ಹರಿಪ್ರಸಾದ್ ಹೇಳಿದರು.

    DK Shivakumar should apologize

  • ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದಿಂದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಬೇಟಿ

    ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದಿಂದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಬೇಟಿ

    ಚಿಕ್ಕಮಗಳೂರು: ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ರವರನ್ನು ಕರ್ನಾಟಕ ಮಾಧ್ಯಮ ಪತ್ರಕರ್ತ ಸಂಘದ ಪತ್ರಕರ್ತರ ಸಮಸ್ಯೆಗಳ ಕುರಿತು ರಾಜ್ಯಾಧ್ಯಕ್ಷರಾದ ಜಿ.ಎಂ. ರಾಜಶೇಖರ್ ಭೇಟಿ ಮಾಡಿ ಚರ್ಚಿಸಲಾಯಿತು.

    ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಮಾಧ್ಯಮ ಪತ್ರಕರ್ತ ಸಂಘದ ರಾಜ್ಯ ಸಂಘ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ರಾದ ಕೆ.ವಿ. ಪ್ರಭಾಕರ್ ರವರಿಗೆ ನಗರ- ಗ್ರಾಮೀಣ ಭಾಗದ ಪತ್ರಕರ್ತರ ಬೇಡಿಕೆಗಳು ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಗ್ರಾಮೀಣ ಭಾಗದ ಪತ್ರಕರ್ತರಿಗೆ ನೀಡುವ ಬಸ್ ಪಾಸ್ ಹಾಗೂ ಆರೋಗ್ಯ ವಿಮೆ. ಹಿರಿಯ ಪತ್ರಕರ್ತರ ನಿವೃತ್ತಿ ವೇತನ ಸೇರಿದಂತೆ ಪತ್ರಿಕೆಗಳ ಮಾಧ್ಯಮ ಪಟ್ಟಿ ಮತ್ತು ಮಾನ್ಯತೆ ಕಾರ್ಡ್ ಇನ್ನಿತರ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಗಮನಕ್ಕೆ ತರಲಾಗಿತ್ತು.

    ಈ ಬಗ್ಗೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ರಾದ ಕೆ.ವಿ. ಪ್ರಭಾಕರ್ ಅವರು ಪರಿಗಣಿಸಿ ಸಂಬಂಧಪಟ್ಟ ಇಲಾಖೆಗಳಿಗೆ ಕಳಿಸಲಾಗಿದ್ದು ಮುಂದಿನ ದಿನಗಳಲ್ಲಿ ಸಮಸ್ಯೆಗೆ ಸ್ಪಂದಿಸುವುದಾಗಿ ಮಾತನಾಡಿದರು. ಪತ್ರಕರ್ತರ ಸಮಸ್ಯೆ ಕುರಿತಂತೆ ರಾಜ್ಯಮಟ್ಟದಲ್ಲಿ ನಡೆಯುವ ಅಧಿಕಾರಿಗಳ ಹಾಗೂ ಮುಖ್ಯಮಂತ್ರಿಗಳು ,-ಸಚಿವರ ಸಭೆಗಳಿಗೆ ಕರ್ನಾಟಕ ಮಾಧ್ಯಮ ಪತ್ರ ಸಂಘವನ್ನು ಪರಿಗಣಿಸಬೇಕೆಂಬ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

    ಮುಂದಿನ ದಿನಗಳಲ್ಲಿ ಕರ್ನಾಟಕ ಮಾಧ್ಯಮ ಪತ್ರಕರ್ತ ಸಂಘದ ಸದಸ್ಯರುಗಳ ಪತ್ರಕರ್ತರ ಸಮಸ್ಯೆ ಕುರಿತಂತೆ ಚರ್ಚಿಸುವುದಾಗಿ ಭೇಟಿ ನೀಡಿದ ಸಂದರ್ಭದಲ್ಲಿ ರಾಜ್ಯಧ್ಯಕ್ಷರಿಗೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಸಂಘದ ಮೈಸೂರು ವಿಭಾಗದ ಉಪಾಧ್ಯಕ್ಷರಾದ ಟಿ ಪಿ ಕೃಷ್ಣನ್ ಹಾಗೂ ಪುರುಷೋತ್ತಮ್ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು

    Karnataka Media Journalists Association seeks media advisor to Chief Minister

  • ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ

    ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ

    ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ಪ್ರಕಟಗೊಂಡಿದೆ. ಐಪಿಸಿ ಸೆಕ್ಷನ್ 376(2)(k) ಅತ್ಯಾ1ಚಾರ ಅಪರಾಧಕ್ಕೆ ಜೀವಾವಧಿ ಶಿಕ್ಷೆಯಾಗಿದೆ.

    ಈ ಮೂಲಕ ಜೀವನ ಪರ್ಯಂತ ಜೈಲಿನಲ್ಲೇ ಇರುವ ಶಿಕ್ಷೆ ಪ್ರಕಟವಾಗಿದೆ. 376(2)(n) ಸೆಕ್ಷನ್ ಗೆ ಜೀವಾವಧಿ. 354 ಗೆ 3 ವರ್ಷ, 354(b) 3 ವರ್ಷ ಕಠಿಣ ಕಾರಗೃಹ ಶಿಕ್ಷೆ, ಒಟ್ಟು 11.35 ಲಕ್ಷ ದಂಡ ಜೊತೆಗೆ ಸಂತ್ರಸ್ತೆಗೆ ಪರಿಹಾರ ನೀಡುವಂತೆ ಕೋರ್ಟ್ ಆದೇಶ ಹೊರಬಿದ್ದಿದೆ.

    ಈ ಮೂಲಕ ಪ್ರಜ್ವಲ್ ರೇವಣ್ಣಗೆ ಬಹುದೊಡ್ಡ ಶಿಕ್ಷೆಯಾಗಿದೆ.

    ಯಾವ ಸೆಕ್ಷನ್‌ಗೆ ಎಷ್ಟು ದಂಡ?
    ಐಪಿಸಿ 376(2)(k), ಜೀವಾವಧಿ, 5 ಲಕ್ಷ
    ಐಪಿಸಿ 376(2)(n), – ಜೀವಾವಧಿ, 5 ಲಕ್ಷ
    ಐಪಿಸಿ 354(a) – 3 ವರ್ಷ ಕಠಿಣ ಜೈಲು, 25 ಸಾವಿರ ದಂಡ
    ಐಪಿಸಿ 354(b) – 7 ವರ್ಷ ಕಠಿಣ ಜೈಲು, 50ಸಾವಿರ ದಂಡ, ದಂಡ ಪಾವತಿಸದಿದ್ದಲ್ಲಿ 6 ತಿಂಗಳು ಸರಳ ಜೈಲು
    ಐಪಿಸಿ 354(c) – 3 ವರ್ಷ ಕಠಿಣ ಜೈಲು
    ಐಪಿಸಿ 506 – 2 ವರಗಷ ಕಠಿಣ ಜೈಲು 10 ಸಾವಿರ ದಂಡ
    ಐಪಿಸಿ 201 – 3ವರಗಷ ಕಠಿಣ ಜೈಲಿ, 25 ಸಾವಿರ ದಂಡ
    IT ACt 66(E) – 3 ವರ್ಷ ಕಠಿಣ, 25 ಸಾವಿರ ದಂಡ
    ಕೆ ಆರ್‌ ನಗರದ ಮನೆಗೆಲಸದವಳ ಮೇಲಿನ ಅತ್ಯಾ1ಚಾರ ಪ್ರಕರಣದ ವಿಚಾರಣೆ ನಡೆಸಿ ಶುಕ್ರವಾರ ದೋಷಿ ಎಂದು ಪ್ರಕಟಿಸಿದ್ದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶನಿವಾರ ಮಧ್ಯಾಹ್ನ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದೆ. ನ್ಯಾಯಮೂರ್ತಿ ಸಂತೋಷ್‌ ಗಜಾನನ ಭಟ್‌ ಅವರು ಈ ಆದೇಶ ಪ್ರಕಟಿಸಿದ್ದಾರೆ.

    ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376(2)(n) ಮತ್ತು 376(2)(k) ಅಡಿಯಲ್ಲಿ ಆರೋಪಗಳು ದಾಖಲಾಗಿದೆ. ಈ ಕಲಂಗಳು ನಿರಂತರ ಅತ್ಯಾ1ಚಾರ ಮತ್ತು ನೌಕರಿ ಮಾಡುತ್ತಿರುವ ಮಹಿಳೆಯ ಮೇಲೆ ನಡೆದ ಅತ್ಯಾ1ಚಾರಕ್ಕೆ ಸಂಬಂಧಪಟ್ಟದ್ದಾಗಿದೆ.

    ಮೊದಲ ಪ್ರಕರಣದಲ್ಲಿ ಮಾತ್ರವೇ ಪ್ರಜ್ವಲ್ ವಿರುದ್ಧ ತೀರ್ಪು ಪ್ರಕಟಗೊಂಡಿದ್ದು, ಇನ್ನೂ ಮೂರು ಪ್ರಕರಣಗಳು ಇದೇ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.

    ಇನ್ನು ಈ ಮೂರು ಪ್ರಕರಣದ ಒಂದು ಪ್ರಕರಣದಲ್ಲಿ ಪ್ರಜ್ವಲ್ ತಂದೆ ಮಾಜಿ ಸಚಿವ ಹೆಚ್‌ ಡಿ ರೇವಣ್ಣ ಮತ್ತು ತಾಯಿ ಭವಾನಿ ರೇವಣ್ಣ ವಿರುದ್ಧ ಕೂಡ ಆರೋಪ ಇದ್ದು, ಪ್ರಕರಣ ವಿಚಾರಣೆ ಹಂತದಲ್ಲಿದೆ.

    Former Hassan MP Prajwal Revanna sentenced to life imprisonment

  • ಮನುಷ್ಯ ಜೀವನವನ್ನು ಶುದ್ಧಗೊಳಿಸುವುದೇ ವೀರಶೈವ ಧರ್ಮದ ಗುರಿ

    ಮನುಷ್ಯ ಜೀವನವನ್ನು ಶುದ್ಧಗೊಳಿಸುವುದೇ ವೀರಶೈವ ಧರ್ಮದ ಗುರಿ

    ದಾವಣಗೆರೆ:ಮನುಷ್ಯ ಜೀವನದಲ್ಲಿ ಬದಲಾವಣೆ ಮತ್ತು ಬೆಳವಣಿಗೆ ಎರಡೂ ಮುಖ್ಯ. ಮೌಲ್ಯಾಧಾರಿತ ಜೀವನ ಬದುಕಿಗೆ ಬಲ ತರುತ್ತದೆ. ಮನುಷ್ಯ ಜೀವನವನ್ನು ಸುಂದರ ಶುದ್ಧಗೊಳಿಸುವುದೇ ವೀರಶೈವ ಲಿಂಗಾಯತ ಧರ್ಮದ ಗುರಿಯಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

    ಅವರು ಮಂಗಳವಾರ ನಗರದ ಶ್ರೀ ಮದಭಿನವ ರೇಣುಕ ಮಂದಿರ ಸಭಾಂಗಣದಲ್ಲಿ ಜರುಗಿದ ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

    ಮನಸ್ಸು ಬುದ್ದಿ ಮತ್ತು ಭಾವನೆಗಳು ಬೆಳೆದು ಬಂದಾಗ ಬದುಕು ಸಮೃದ್ಧ. ಬದುಕಿಗೆ ಜೀವಂತಿಕೆಯ ಮತ್ತು ಸಜ್ಜನಿಕೆಯನ್ನು ತುಂಬಿದ ಶ್ರೇಯಸ್ಸು ವೀರಶೈವ ಲಿಂಗಾಯತ ಸಮಾಜಕ್ಕಿದೆ. ಪ್ರಾಪಂಚಿಕ ಸಂಬಂಧಗಳು ಕೆಲವು ಸಂದರ್ಭದಲ್ಲಿ ಕೆಡಬಹುದು. ಆದರೆ ಗುರು ಶಿಷ್ಯರ ಸಂಬಂಧ ಯಾವಾಗಲೂ ಶಾಶ್ವತವಾಗಿರುತ್ತವೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಜೀವನದ ಮೌಲ್ಯಗಳ ಪರಿಪಾಲನೆಯಿಂದ ಬದುಕು ಉಜ್ವಲಗೊಳ್ಳುತ್ತದೆ. ಕಾರಣಾಂತರದಿಂದ ನಿಂತಿರುವ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಆಚರಣೆಯನ್ನು ಪ್ರಾರಂಭಿಸಬೇಕು.

    ದಾವಣಗೆರೆ ನಗರದಲ್ಲಿ ಜರುಗಿದ ಶೃಂಗ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ಜರುಗಿದ್ದು ತಮಗೆ ಸಂತಸ ತಂದಿದೆ ಎಂದ ಅವರು ಇದಕ್ಕಾಗಿ ಶ್ರಮಿಸಿದ ಸಮಿತಿಯ ಎಲ್ಲಾ ಸದಸ್ಯರಿಗೆ ಶುಭ ಹಾರೈಸಿದರು. ಶೃಂಗ ಸಭೆಯಲ್ಲಿ ಕೈಕೊಂಡ ೧೨ ನಿರ್ಣಯಗಳನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಪಂಚ ಪೀಠದ ಜಗದ್ಗುರುಗಳ ಪರವಾಗಿ ಮಂಡಿಸಿದರು.

    ಕಾಶೀ ಪೀಠದ ಡಾ. ಚಂದ್ರಶೇಖರ ಜಗದ್ಗುರುಗಳು ಮಾತನಾಡಿ ವಿವಿಧತೆಯಲ್ಲಿ ಏಕತೆ ಕಾಪಾಡಿಕೊಂಡು ಬರುವುದು ಭಾರತೀಯ ಸಂಸ್ಕೃತಿಯಾಗಿದೆ. ವೀರಶೈವ ಲಿಂಗಾಯತ ಧರ್ಮ ಸರ್ವ ಸಮುದಾಯಕ್ಕೂ ಸದಾಕಾಲ ಒಳಿನ್ನೇ ಬಯಸುತ್ತ ಬಂದಿದೆ. ವೀರಶೈವ ಧರ್ಮದ ಪಂಚ ಪೀಠಗಳು ಸ್ವಧರ್ಮ ನಿಷ್ಠೆಯ ಜೊತೆಗೆ ಪರಧರ್ಮ ಸಹಷ್ಣುತೆಯನ್ನು ಬೋಧಿಸುತ್ತಾ ಬಂದಿವೆ. ಪಂಚ ಪೀಠಾಧೀಶ್ವರರು ಉಳಿದ ವಿರಕ್ತ ಮಠಗಳನ್ನು ಕೂಡಿಕೊಂಡು ಸಮನ್ವಯ ಸಂದೇಶ ನೀಡುವಂತೆ ಅನೇಕ ರಾಜಕಾರಣಿಗಳು ಅಪೇಕ್ಷೆಪಟ್ಟಿದ್ದಾರೆ. ಈಗಾಗಲೇ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಅಭೂತ ಪೂರ್ವ ಕಾರ್ಯವನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಮಾಡಿದ್ದಾರೆ. ಮತ್ತೆ ಅಂತಹ ಕಾರ್ಯ ಮಾಡುವುದಾದರೆ ಉಳಿದ ಎಲ್ಲ ಸಮಾನ ಪೀಠಗಳು ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು, ಶ್ರೀ ಶ್ರೀಶೈಲ ಜಗದ್ಗುರು ಡಾ|| ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಜಗದ್ಗುರುಗಳು, ಕಾಶೀ ಪೀಠದ ನೂತನ ಜಗದ್ಗುರು ಡಾ|| ಮಲ್ಲಿಕಾರ್ಜುನ ವಿಶ್ವಾರಾಧ್ಯ ಜಗದ್ಗುರುಗಳು ಸಮಾರಂಭದ ಸಾನ್ನಿಧ್ಯ ವಹಿಸಿದ್ದರು.

    ಸಮಾರಂಭ ಉದ್ಘಾಟಿಸಿದ ಕೇಂದ್ರದ ರೇಲ್ವೆ ಮತ್ತು ಜಲಶಕ್ತಿ ಸಚಿವ ವಿ.ಸೋಮಣ್ಣ ಮಾತನಾಡಿ ದಾವಣಗೆರೆ ನಗರದಲ್ಲಿ ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನದಿಂದ ಸಮಾಜಕ್ಕೆ ಹೆಚ್ಚಿನ ಬಲ ಬಂದಂತಾಗಿದೆ. ಭಕ್ತರ ಬಾಳಿಗೆ ಪಂಚ ಪೀಠಗಳು ಬಹಳಷ್ಟು ಜ್ಞಾನಶಕ್ತಿ ಕ್ರಿಯಾಶಕ್ತಿ ತುಂಬಿವೆ. ಪಂಚಪೀಠಗಳ ದರ್ಶನ ಮಾಡಿದರೆ ಭಗವಂತನ ದರ್ಶನ ಪಡೆದ ಭಾವನೆ ಎಲ್ಲರಿಗೂ ಇದೆ. ವೀರಶೈವ ಲಿಂಗಾಯತ ಸಮಾಜ ಒಗ್ಗಟ್ಟಿನಿಂದ ಹೆಜ್ಜೆ ಹಾಕಿದರೆ ಅಸಾಧ್ಯವಾದುದು ಯಾವುದೂ ಇಲ್ಲವೆಂದರು. ಹಾವೇರಿ ಸಂಸದ ಮಾಜಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ ವೀರಶೈವ ಲಿಂಗಾಯತ ಸಮಾಜಕ್ಕೆ ಪಂಚ ಪೀಠಗಳು ಬಹು ದೊಡ್ಡ ಶಕ್ತಿ. ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಶ್ವ ಬಂಧುತ್ವದ ಸಂದೇಶ ಸರ್ವ ಜನಾಂಗಕ್ಕೂ ಅನ್ವಯಿಸುತ್ತವೆ ಎಂದು ಹರುಷ ವ್ಯಕ್ತಪಡಿಸಿದರು. ಮಾಜಿ ಸಂಸದ ಜಿ.ಎಂ.ಸಿದ್ಧೇಶ್ವರ ಮಾತನಾಡಿ ಮಾನವ ಧರ್ಮಕ್ಕೆ ಜಯವಾಗಲೆಂಬ ಸಂದೇಶ ಪಂಚಪೀಠಗಳದ್ದಾಗಿದೆ. ವೀರಶೈವ ಲಿಂಗಾಯತ ಧರ್ಮ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿದಿವೆ ಎಂದರು.

    ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ದಿ ಖಾತೆ ಸಚಿವ ಶರಣ ಪ್ರಕಾಶ ಪಾಟೀಲ ಮಾತನಾಡಿ ಕರ್ನಾಟಕ ರಾಜ್ಯಕ್ಕೆ ಮಠಾಧೀಶರ ಕೊಡುಗೆ ದೊಡ್ಡದು. ಇಲ್ಲಿ ಶಾಂತಿ ಸಮೃದ್ದಿ ಇದೆ. ಯುವಕರಿಗೆ ಒಳ್ಳೆಯ ಭವಿಷ್ಯವಿದೆ. ಮಠ ಮಾನ್ಯಗಳು ಬಹುದಿನಗಳಿಂದ ಒಳ್ಳೆಯ ಸಂದೇಶ ನೀಡುವ ಮೂಲಕ ಕೆಳಗೆ ಬಿದ್ದವರಿಗೆ ಆತ್ಮ ಸೈರ್ಯ ತುಂಬುವ ಕೆಲಸ ಮಾಡಿದ್ದಾರೆ. ನಮ್ಮ ನಡುವಳಿಕೆಯಿಂದ ಆಚಾರ ವಿಚಾರದಿಂದ ಜನ ವೀರಶೈವ ಲಿಂಗಾಯತರನ್ನು ಅಪ್ಪಿಕೊಳ್ಳುತ್ತಾರೆ ನಂಬುತ್ತಾರೆ. ಯುವ ಪೀಳಿಗೆಗೆ ನಮ್ಮ ಧರ್ಮದ ಪರಿಚಯವನ್ನು ಮಾಡಬೇಕಾಗಿದೆ. ಅವರಿಗೆ ಸರಿಯಾದ ಮಾರ್ಗದರ್ಶನ ಮಾಡುವ, ಅಷ್ಟಾವರಣ ಪಂಚಾಚಾರ ಷಟ್ಸ್ಥಲ ಸಿದ್ಧಾಂತವನ್ನು ಯುವಕರಿಗೆ ತಿಳಿಸಬೇಕಾಗಿದೆ. ಮಕ್ಕಳಿಗೆ ನಮ್ಮ ಆಚರಣೆ ಸಿದ್ಧಾಂತಗಳನ್ನು ಹೇಳಿಕೊಡಬೇಕಾಗಿದೆ. ನಿತ್ಯ ಲಿಂಗಪೂಜೆ ಮಾಡುವ ಕುರಿತು ತಿಳಿಸಬೇಕಾಗಿದೆ. ಪಂಚ ಪೀಠದ ಜಗದ್ಗುರುಗಳು ಒಳ್ಳೆಯ ಸಂದೇಶ ನೀಡಿದ್ದಾರೆ. ಎಲ್ಲರನ್ನು ಒಗ್ಗೂಡಿಸುವ ಕೆಲಸವಾಗಬೇಕಾಗಿದೆ. ನಮ್ಮ ಸಂಸ್ಕೃತಿ ಸಿದ್ಧಾಂತವನ್ನು ಪರಿಚಯಿಸುವ ಕೆಲಸ ಆಗಬೇಕಾಗಿದೆ. ಗುರು ವಿರಕ್ತರನ್ನು ಒಂದುಗೂಡಿಸುವ ಕೆಲಸ ಆಗಬೇಕು. ಪಂಚ ಪೀಠಾಧೀಶರ ಮಾರ್ಗದರ್ಶನದಲ್ಲಿ ನಾವು ನಡೆಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.

    ಮಾಜಿ ಶಾಸಕ ಮಹಿಮಾ ಪಟೇಲ್, ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್, ಹರಿಹರದ ಶಾಸಕ ಬಿ.ಪಿ.ಹರೀಶ್, ನರಗುಂದ ಶಾಸಕ ಮಾಜಿ ಸಚಿವ ಸಿ.ಸಿ.ಪಾಟೀಲರು ಮಾತನಾಡಿ ವೀರಶೈವ ಲಿಂಗಾಯತ ಧರ್ಮದ ಆದರ್ಶ ಚಿಂತನಗಳು ಸರ್ವ ಜನಾಂಗದ ಏಳ್ಗೆಗೆ ಅವಶ್ಯಕವಾಗಿದೆ. ಪರಸ್ಪರ ಸಹಕಾರದಿಂದ ಅರಿತು ಬಾಳಬೇಕೆಂದರು. ಮಾಜಿ ಸಂಸದ ಮಂಜುನಾಥ ಕುನ್ನೂರ, ಮಾಜಿ ಸಂಸದ ಆಯನೂರ ಮಂಜುನಾಥ, ಅರಸೀಕೆರೆ ಮಾಜಿ ಶಾಸಕರಾದ ಕೆ.ಪಿ.ಪ್ರಭುಕುಮಾರ್, ಜಿ.ಹೆಚ್.ಪರಮೇಶ್ವರ್, ಮಾಜಿ ಎಂ.ಎಲ್.ಸಿ. ಮಹಂತೇಶ ಕವಟಗಿಮಠ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಸಂಶೋಧಕ ಮತ್ತು ಆಧ್ಯಾತ್ಮ ಚಿಂತಕರಾದ ಭಂಡಿವಾಡದ ಡಾ||ಎ.ಸಿ.ವಾಲಿ ಅವರು ಮಾತನಾಡಿ ಉದಾತ್ತವಾದ ಜೀವನ ಮೌಲ್ಯ ಅರುಹಿದ ವೀರಶೈವ ಲಿಂಗಾಯತ ಧರ್ಮ ಅತ್ಯಂತ ಪ್ರಾಚೀನ ಇತಿಹಾಸ ಹೊಂದಿದೆ. ಧರ್ಮದ ಮೂಲ ತತ್ವ ಸಿದ್ಧಾಂತಗಳನ್ನು ಅರಿಯದ ಜನರಿಂದಾಗಿ ಕೆಲವರು ಅಡ್ಡ ಮಾರ್ಗದಲ್ಲಿ ನಡೆಯುತ್ತಿರುವುದು ಒಳ್ಳೆಯದಲ್ಲ. ಎಲ್ಲ ಒಳಪಂಗಡಗಳ ಜನರು ಒಂದಾಗಿ ಮೂಲ ಧರ್ಮದ ಶಕ್ತಿಯನ್ನು ಪುನರುತ್ಥಾನಗೊಳಿಸಲು ಪಂಚ ಪೀಠಗಳು ಸಂಕಲ್ಪದೊಂದಿಗೆ ಕಾರ್ಯೋನ್ಮುಖರಾಗಿರುವುದು ಭಕ್ತ ಸಂಕುಲಕ್ಕೆ ಸಂತೋಷ ತಂದ ಸಂಗತಿ ಎಂದರು. ಮುಕ್ತಿಮಂದಿರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ನೇತೃತ್ವ ವಹಿಸಿ ಮಾತನಾಡಿ ಎರಡು ದಿನಗಳ ಕಾಲ ಜರುಗಿದ ಶೃಂಗ ಸಮ್ಮೇಳನದಿಂದ ವೀರಶೈವ ಲಿಂಗಾಯತ ಸಮುದಾಯದ ಮೇಲೆ ಬಹಳಷ್ಟು ಪರಿಣಮವನು ಉಂಟು ಮಾಡಿದೆ ಎಂದರು. ಬಸವನಬಾಗೇವಾಡಿ ಶಿವಪ್ರಕಾಶ ಶಿವಾಚಾರ್ಯರು ಹೃದಯ ಹಂಬಲ ನುಡಿಗಳನ್ನಾಡಿ ಜೀವ ಶಿವನಾಗಲು ಅಂಗ ಲಿಂಗವಾಗಲು ಮತ್ತು ಭವಿ ಭಕ್ತನನ್ನಾಗಿ ಪರಿವರ್ತಿಸುವ ಶಕ್ತಿ ವೀರಶೈವ ಲಿಂಗಾಯತ ಧರ್ಮದಲ್ಲಿದೆ. ಧರ್ಮ ಪೀಠಗಳ ಮಾರ್ಗದರ್ಶನದಿಂದ ಮಾನವ ಜೀವನ ಸುಸಂಸ್ಕೃತಗೊಳ್ಳಲು ಸಾಧ್ಯವಾಗುವುದೆಂದರು.

    ವಿವಿಧ ಪ್ರಾಂತ ಪ್ರದೇಶಗಳಿಂದ ಆಗಮಿಸಿದ ೩೦೦ಕ್ಕೂ ಹೆಚ್ಚಿನ ಶಿವಾಚಾರ್ಯರು ಉಪಸ್ಥಿತರಿದ್ದರು.

    ಅಣಬೇರು ರಾಜಣ್ಣ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ದೇವರಮನೆ ಶಿವಕುಮಾರ್, ಹಿರಿಯ ನ್ಯಾಯವಾದಿ ಗಂಗಾಧರ ಗುರುಮಠ, ವೀಣಾ ಕಾಶಪ್ಪನವರ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಪ್ರಾಸ್ತಾವಿಕ ನುಡಿ ಸಲ್ಲಿಸಿದರು. ಮುರಿಗೇಶ ಆರಾಧ್ಯರು ಸ್ವಾಗತಿಸಿದರು. ಬೀರೂರು ರುದ್ರಮುನಿ ಶಿವಾಚಾರ್ಯರು ಹಾಗೂ ಪ್ರಶಾಂತ ರಿಪ್ಪನ್‌ಪೇಟೆ ನಿರೂಪಿಸಿದರು.

    ಸಂಜೆ ಸಂಸ್ಕೃತಿ ಸಂವರ್ಧನೆಗಾಗಿ ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಅಭೂತಪೂರ್ವ ಪಾದಯಾತ್ರೆ ಶ್ರೀಶೈಲ ಮಠದಿಂದ ಶ್ರೀಮದಭಿನವ ರೇಣುಕ ಮಂದಿರದ ವರೆಗೆ ನಡೆಯಿತು.

    The goal of Veerashaiva religion is to purify human life.

  • ಎಸ್‌ಐಟಿಯಿಂದ ಧರ್ಮಸ್ಥಳ ಸರಣಿ ಹತ್ಯೆ ಆರೋಪ ಪ್ರಕರಣ ತನಿಖೆ

    ಎಸ್‌ಐಟಿಯಿಂದ ಧರ್ಮಸ್ಥಳ ಸರಣಿ ಹತ್ಯೆ ಆರೋಪ ಪ್ರಕರಣ ತನಿಖೆ

    ಬೆಂಗಳೂರು: ಧರ್ಮಸ್ಥಳ ಸರಣಿ ಹತ್ಯೆ ಆರೋಪ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಎಸ್‌ಐಟಿ ರಚಿಸಿ ತನಿಖೆಗೆ ಆದೇಶಿಸಿದ್ದಾರೆ.

    ಧರ್ಮಸ್ಥಳದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ಕೆಲ ದಶಕಗಳಲ್ಲಿ ನಡೆದ ಅಸಹಜ ಸಾವುಗಳ ಬಗ್ಗೆ ತನಿಖೆ ನಡೆಸುವಂತೆ ಭಾರೀ ಒತ್ತಡ ಬಂದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ 4 ಸದಸ್ಯರ ಐಪಿಎಸ್ ಅಧಿಕಾರಿಗಳ ಎಸ್‌ಐಟಿಯನ್ನು ರಚಿಸಿದೆ.

    ಎಸ್‌ಐಟಿಯ ನೇತೃತ್ವವನ್ನು ಪ್ರಣವ್ ಮೊಹಂತಿ ವಹಿಸಿಕೊಂಡಿದ್ದಾರೆ. SIT ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಕಚೇರಿಯಿಂದ ಕಾರ್ಯನಿರ್ವಹಿಸುತ್ತದೆ ಮತ್ತು ಅಗತ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಒದಗಿಸಲಾಗುತ್ತದೆ ಎಂದು ಆದೇಶದಲ್ಲಿ ಸೇರಿಸಲಾಗಿದೆ.

    ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತ (BNS) ನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ದಾಖಲಾಗಿರುವ ಅಪರಾಧ ಮತ್ತು “ಕರ್ನಾಟಕದಾದ್ಯಂತ ಇತರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ/ದಾಖಲಾಗಲಿರುವ ಎಲ್ಲಾ ಇತರ ಕ್ರಿಮಿನಲ್ ಪ್ರಕರಣಗಳನ್ನು” ತನಿಖೆ ಮಾಡಲು “ವಿಶೇಷ ತನಿಖಾ ತಂಡವನ್ನು ರಚಿಸುವುದು ಸೂಕ್ತ” ಎಂದು ಶನಿವಾರ ಹೊರಡಿಸಲಾದ ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ.

    ಧರ್ಮಸ್ಥಳ ದೇಗುಲದಲ್ಲಿ ಸ್ವಚ್ಛತಾ ಕಾರ್ಯ ಮಾಡಿಕೊಂಡಿದ್ದ ವ್ಯಕ್ತಿ ನೂರಾರು ಅಪರಿಚಿತ ಶವ ಹೂತಿದ್ದೇನೆ ಎಂದು ಹೇಳುತ್ತಿದ್ದಾರೆ. ಧರ್ಮಸ್ಥಳದಲ್ಲಿ ನಡೆದಿರುವ ಸರಣಿ ಕೊಲೆ ಹಾಗೂ ಮೃತದೇಹಗಳ ಅಂತ್ಯಕ್ರಿಯೆ ಗೌಪ್ಯವಾಗಿ ನಡೆದಿರುವ ಪ್ರಕರಣದ ತನಿಖೆಗೆ SIT ತಂಡ ರಚಿಸಬೇಕೆಂಬ ವಕೀಲರ ನಿಯೋಗ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿತ್ತು.ಪ್ರಕರಣದ ತನಿಖೆಗೆ ಎಸ್‌ಐಟಿ ತಂಡ ರಚಿಸಬೇಕು ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಸೇರಿದಂತೆ ಅನೇಕ ವಕೀಲರು ಸಿಎಂ ಗೆ ಮನವಿ ಸಲ್ಲಿಸಿದ್ದರು.

    ಧರ್ಮಸ್ಥಳ ಗ್ರಾಮದ ಅರಣ್ಯ ಪ್ರದೇಶಗಳಲ್ಲಿ ಅಕ್ರಮವಾಗಿ ಹಲವು ಶವಗಳನ್ನು ಹೂತಿಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ವ್ಯಕ್ತಿಯೋರ್ವ ತಾನೇ ಶವ ಹೂತಿಟ್ಟಿದ್ದೆ ಎಂದು ಪೊಲೀಸರ ಬಳಿ ಒಪ್ಪಿಕೊಂಡಿದ್ದಾರೆ. ಈ ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    SIT investigates Dharmasthala serial murder case

  • ಮಾಲೂರು ಕಾಂಗ್ರೆಸ್ ಶಾಸಕ ನಂಜೇಗೌಡ ಆಸ್ತಿ ಇ.ಡಿ ಮುಟ್ಟುಗೋಲು

    ಮಾಲೂರು ಕಾಂಗ್ರೆಸ್ ಶಾಸಕ ನಂಜೇಗೌಡ ಆಸ್ತಿ ಇ.ಡಿ ಮುಟ್ಟುಗೋಲು

    ಬೆಂಗಳೂರು: ಮಾಲೂರು ಕಾಂಗ್ರೆಸ್ ಶಾಸಕ ನಂಜೇಗೌಡ ಅವರ ಆಸ್ತಿಯನ್ನು ಇ.ಡಿ ಮುಟ್ಟುಗೋಲು ಹಾಕಿಕೊಂಡಿದೆ. ಕೆ.ವೈ.ನಂಜೇಗೌಡ ಹಾಗೂ ಇತರರಿಗೆ ಸೇರಿದ ಒಟ್ಟು 1.32 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ ಮಾಡಿದೆ. 2023ರಲ್ಲಿ ಕೋಮುಲ್ ನೇಮಕಾತಿ ಹಗರಣ ಸಂಬಂಧ 1.32 ಕೋಟಿ ರೂ. ಮೌಲ್ಯದ ಸ್ಥಿರ-ಚರಾಸ್ತಿಯನ್ನು ಜಪ್ತಿ ಮಾಡಿದೆ. ಈ ಬಗ್ಗೆ ಇಡಿ ಎಕ್ಸ್​​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

    2023ರ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ಲಿಮಿಟೆಡ್ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಪಟ್ಟಿದ್ದು, ಜುಲೈ 16, 2025ರಂದು ಅಧಿಕೃತವಾಗಿ ಈ ಮೌಲ್ಯದ ಆಸ್ತಿಯನ್ನು ಜಪ್ತಿಗೊಳಿಸಲಾಗಿದೆ ಎಂದು ED ಅಧಿಕೃತ ಎಕ್ಸ್​ ಖಾತೆಯಲ್ಲಿ ಸ್ಪಷ್ಟಪಡಿಸಿದೆ.

    ಕೋಮುಲ್‌ ನೇಮಕಾತಿಯಲ್ಲಿ ಹಗರಣ ಸಂಬಂಧ ಸುಮಾರು 75 ಅಭ್ಯರ್ಥಿಗಳಿಂದ ಹಣ ಪಡೆದಿದ್ದಾರೆ. ಮಂಗಳೂರು ಯೂನಿವರ್ಸಿಟಿಯ ಸಿಬ್ಬಂದಿ ಜೊತೆಗೆ ಅವ್ಯಹಾರ ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಪ್ರತಿಯೊಬ್ಬ ಅಭ್ಯರ್ಥಿಗೂ ಕೂಡ ರಾಜಕಾರಣಿಗಳ ಶಿಫಾರಸು ಪತ್ರ ನೀಡಲಾಗಿತ್ತು. ಇ.ಡಿ ದಾಳಿ ವೇಳೆ ಶಿಫಾರಸು ಪತ್ರ ಸಮೇತ ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದರು. ಅಲ್ಲದೇ ಅಕ್ರಮ ಹಣ ವರ್ಗಾವಣೆ ಹಿನ್ನೆಲೆಯಲ್ಲಿ ನಂಜೇಗೌಡ ಮನೆ ಮೇಲೆ ಇಡಿ ದಾಳಿ ಮಾಡಿತ್ತು.

    ಕೋಮುಲ್ ಒಕ್ಕೂಟದ 13 ನಿರ್ದೇಶಕರ ಸ್ಥಾನಗಳಿಗೆ ಇತ್ತೀಚೆಗೆ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 9 ಮಂದಿ ಜಯ ಸಾಧಿಸುವುದರೊಂದಿಗೆ ಕೋಮುಲ್‌ ಕಾಂಗ್ರೆಸ್‌ ವಶವಾಗಿತ್ತು. ಜೆಡಿಎಸ್‌ – ಬಿಜೆಪಿ ಮೈತ್ರಿಕೂಟದ 4 ಜನ ನಿರ್ದೇಶಕರು ಮಾತ್ರ ಗೆದ್ದಿದ್ದರು. ಇನ್ನು ಕೋಲಾರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ (ಕೋಮುಲ್‌) ಅಧ್ಯಕ್ಷರಾಗಿ ಕಾಂಗ್ರೆಸ್‌ ಶಾಸಕ ಮಾಲೂರಿನ ಕೆ.ವೈ. ನಂಜೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಸತತ ಮೂರನೇ ಬಾರಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದು, ಕೆಎಂಎಫ್​ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

    Property of Malur Congress MLA Nanje Gowda confiscated

  • ಬೆಳಗಾವಿ ಕಾನೂನು ಸುವ್ಯವಸ್ಥೆ ಡಿಸಿಪಿಯಗಿ  ಎಎಸ್ಪಿ ನಾರಾಯಣ ಬರಮನಿ ಮುಂಬಡ್ತಿ

    ಬೆಳಗಾವಿ ಕಾನೂನು ಸುವ್ಯವಸ್ಥೆ ಡಿಸಿಪಿಯಗಿ ಎಎಸ್ಪಿ ನಾರಾಯಣ ಬರಮನಿ ಮುಂಬಡ್ತಿ

    ಧಾರವಾಡ: ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ವಜನಿಕವಾಗಿ ಕೈ ಎತ್ತಿ ಹೊಡೆಯಲು ಯತ್ನಿಸಿದ್ದರಿಂದ ಅವಮಾನಕ್ಕೊಳಗಾದ ಧಾರವಾಡ ಎಎಸ್ಪಿ ನಾರಾಯಣ ಬರಮನಿ ಲಾಟರಿ ಹೊಡೆದಿದ್ದಾರೆ.

    ಹೌದು… ಬೆಳಗಾವಿಯ ಕಾರ್ಯಕ್ರಮವೊಂದರಲ್ಲಿ ಸಿದ್ದರಾಮಯ್ಯನವರಿಂದ ಮುಜುಗರಕ್ಕೀಡಾಗಿ ಸ್ವಯಂ ನಿವೃತ್ತಿಗೆ ಪತ್ರ ಬರೆದಿದ್ದ ನಾರಾಯಣ ಬರಮನಿ ಅವರಿಗೆ ರಾಜ್ಯ ಸರ್ಕಾರ ಮುಂಬಡ್ತಿ ನೀಡಿದೆ.

    ಧಾರವಾಡ ಎಎಸ್ಪಿಯಾಗಿದ್ದ ನಾರಾಯಣ ಬರಮನಿ ಅವರಿಗೆ ಬೆಳಗಾವಿ ಕಾನೂನು ಸುವ್ಯವಸ್ಥೆ ಡಿಸಿಪಿ ಹುದ್ದೆ ನೀಡಲಾಗಿದೆ. ಈ ಮೂಲಕ ಸರ್ಕಾರ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದೆ.

    ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭದ್ರತಾ ವೈಫಲ್ಯಕ್ಕೆ ಸಂಬಂಧಿಸಿದಂತೆ ಕರ್ತವ್ಯದಲ್ಲಿದ್ದ ನಾರಾಯಣ ಬರಮನಿ ಅವರನ್ನು ವೇದಿಕೆಗೆ ಕರೆಸಿದ್ದ ಸಿಎಂ ಅಡ್ಡಿಪಡಿಸಲು ಪ್ರತಿಭಟನಾಕಾರರಿಗೆ ಯಾಕೆ ಅವಕಾಶ ನೀಡಿದ್ದೀರಿ ಎಂದು ಪ್ರಶ್ನಿಸಿ ಸಾರ್ವಜನಿಕವಾಗಿ ಹೊಡೆಯಲು ಕೈಎತ್ತಿದ್ದರು.

    ಸಾರ್ವಜನಿಕವಾಗಿ ಮುಜುಗರಕ್ಕೆ ಒಳಗಾದ ನಂತರ ಬರಮನಿ ಅವರು ಸ್ವಯಂ ನಿವೃತ್ತಿಗೆ ಮನವಿ ಸಲ್ಲಿಸಿದ್ದರು.

    ಈ ಸಂಬಂಧ ರಾಜ್ಯ ಸರ್ಕಾರ ಭಾರೀ ಟೀಕೆ ಗುರಿಯಾಗಿತ್ತು. ಕೊನೆಗೆ ನಾರಾಯಣ ಬರಮನಿ ಅವರನ್ನು ಹಿರಿಯ ಅಧಿಕಾರಿಗಳು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು.

    ನಂತರ ನಾರಾಯಣ ಬರಮನಿ ಅವರು ಕೆಲಸಕ್ಕೆ ಹಾಜರಾಗಿದ್ದರು. ಇದರ ಬೆನ್ನಲ್ಲೇ ಇದೀಗ ನಾರಾಯಣ ಬರಮನಿ ಅವರಿಗೆ ಮುಂಬಡ್ತಿ ನೀಡಿರುವು ಅಚ್ಚರಿಕೆ ಕಾರಣವಾಗಿದೆ.

    ಬೆಳಗಾವಿಯಲ್ಲಿ ಕಾಂಗ್ರೆಸ್ ಪ್ರತಿಭಟನಾ ಸಭೆ ವೇಳೆ ಸಿಎಂ ಭಾಷಣ ಮಾಡುತ್ತಿರುವಾಗಲೇ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ಮಾಡಿದ್ದರು.

    ಇದರಿಂದ ಆಕ್ರೋಶಗೊಂಡಿದ್ದ ಸಿದ್ದರಾಮಯ್ಯ, “ಏಯ್‌.. ಯಾರಿಲ್ಲಿ ಎಸ್‌ಪಿ?” ಬಾರಯ್ಯ ಇಲ್ಲಿ ಎಂದು ವೇದಿ ಮೇಲೆ ಕರೆದು ನಾರಾಯಣ ಭರಮನಿ ಅವರ ಮೇಲೆ ಕೈ ಎತ್ತಿದ್ದರು.

    ಸಿದ್ದರಾಮಯ್ಯ ಅವರ ಈ ವರ್ತನೆಗೆ ಆಕ್ಷೇಪ ವ್ಯಕ್ತವಾಗಿತ್ತು. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಸಿದ್ದರಾಮಯ್ಯನವರ ವರ್ತನೆಗೆ ಸಾಕಷ್ಟು ಟೀಕೆ ಟಿಪ್ಪಣಿಗಳು ವ್ಯಕ್ತವಾಗಿದ್ದವು. ಸಾರ್ವಜನಿಕವಾಗಿ ಪೊಲೀಸ್ ಅಧಿಕಾರಿಯನ್ನು ಅವಮಾನಿಸುವುದು, ಅವಹೇಳನ ಮಾಡುವುದು ಸರಿಯಲ್ಲ ಟೀಕಿಸಿದ್ದರು.

    SP Narayan Baramani promoted to DCP of Belgaum Law and Order

  • ಖ್ಯಾತ ನಿರೂಪಕಿ ಅನುಶ್ರೀ ಮದುವೆ ಫಿಕ್ಸ್‌

    ಖ್ಯಾತ ನಿರೂಪಕಿ ಅನುಶ್ರೀ ಮದುವೆ ಫಿಕ್ಸ್‌

    ಬೆಂಗಳೂರು: ಮದುವೆ ಯಾವಾಗ…? ಮದುವೆ ಯಾವಾಗ…? ಎಂದು ಕೇಳುತ್ತಿದ್ದವರಿಗೆ ಕನ್ನಡದ ನಟಿ, ಖ್ಯಾತ ನಿರೂಪಕಿ ಅನುಶ್ರೀ ಕೊನೆಗೂ ಉತ್ತರ ಕೊಟ್ಟಿದ್ದಾರೆ?.

    ಇದೇ ಆಗಸ್ಟ್‌ 28ರಂದು ನಗುಮೊಗದ ಚೆಲುವೆ ಅನುಶ್ರೀ ಮದುವೆ ಬುಹುತೇಕ ಫಿಕ್ಸ್‌ ಆಗಿದೆ ಎಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ ಬೆಂಗಳೂರಿನಲ್ಲಿರುವ ಉದ್ಯಮಿ ರೋಷನ್‌ ಎನ್ನುವವರೊಂದಿಗೆ ಅನುಶ್ರೀ ಮದುವೆ ನಿಶ್ಚಯವಾಗಿದ್ದು, ಬೆಂಗಳೂರಿನಲ್ಲಿಯೇ ವಿವಾಹ ನಡೆಯಲಿದೆ ಎಂಬ ಸುದ್ದಿಗಳು ಗುರುವಾರ ವೈರಲ್ ಆಗಿದೆ. ಆದರೆ ಈ ಕುರಿತು ಅಧಿಕೃತವಾಗಿ ಅನುಶ್ರೀ ಮಾತನಾಡಿಲ್ಲ.

    ಅನುಶ್ರೀ ನಿರೂಪಣೆ ಮಾಡುತ್ತಿದ್ದ ಹಲವು ಕಾರ್ಯಕ್ರಮಗಳಲ್ಲಿ ತಮಾಷೆಗಾಗಿ ಅವರ ಮದುವೆ ವಿಚಾರ ಪ್ರಸ್ತಾಪ ಆಗುತ್ತಿತ್ತು. ಈ ವರ್ಷ “ನನ್ನ ಮದುವೆ ಗ್ಯಾರಂಟಿ” ಎಂದು ಹೇಳಿದ್ದ ಕನ್ನಡದ ಖ್ಯಾತ ನಿರೂಪಕಿ ಮುಂದಿನ ತಿಂಗಳು ಹಸೆಮಣೆ ಏರಲಿದ್ದಾರೆ ಎಂಬುದು ಸದ್ಯದ ಸುದ್ದಿ.

    ಮದುವೆ ಆಗುವ ಹುಡುಗನ ಬಗ್ಗೆಯೂ ಮಾತನಾಡಿದ್ದ ನಿರೂಪಕಿ, “ರೆಸ್ಪಾನ್ಸಿಬಲ್ ಆಗಿರಬೇಕು. ನನ್ನ ಲೈಫ್‌ ಬಗ್ಗೆ ಅಲ್ಲದಿದ್ರೂ ಅವನ ಲೈಫ್ ಪರವಾಗಿ ರೆಸ್ಪಾನ್ಸಿಬಲ್ ಆಗಿದ್ರೆ ಸಾಕು. ಆದರೆ, ಅವನೂ ಬದುಕಬೇಕು, ನನ್ನನ್ನು ಬದುಕೋಕೆ ಬಿಡಬೇಕು” ಎಂದಿದ್ದರು.

    ಹಲವು ಬಾರಿ ಅನುಶ್ರೀ ಮದುವೆ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಜನರು ಮರೆತು ಬಿಡುತ್ತಿದ್ದರು. ಈಗಲೂ ಸಹ ಗುರುವಾರ ಹಬ್ಬಿರುವ ಸುದ್ದಿಗಳ ಬಗ್ಗೆ, ಮದುವೆ ನಿಗದಿಯಾಗಿರುವ ಬಗ್ಗೆ ನಿರೂಪಕಿ ಅನುಶ್ರೀ ಅಧಿಕೃತವಾಗಿ ತಿಳಿಸಬೇಕಿದೆ.

    ಮಂಗಳೂರಿನ ಸುರತ್ಕಲ್ ಮೂಲದ ಅನುಶ್ರೀ, ಕನ್ನಡ ಕಿರುತೆರೆಯಲ್ಲಿ ತಮ್ಮದೆಯಾದ ಹವಾ ಸೃಷ್ಟಿಸಿದ್ದಾರೆ. ಖಾಸಗಿ ಟಿವಿಯ ವಿವಿಧ ಕಾರ್ಯಕ್ರಮ, ಚಲನಚಿತ್ರ ರಂಗದ ಅನೇಕ ಕಾರ್ಯಕ್ರಮದಲ್ಲಿ ತಮ್ಮ ನಿರೂಪಣೆ, ಮಾತಿನ ಶೈಲಿ ಮೂಲಕ ಹಲವಾರು ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ. ಕಾರ್ಯಕ್ರಮ ಎಷ್ಟು ಬೇಗ ಜನರ ಮನಸ್ಸಿಗೆ ನಾಟುತ್ತದೆಯೋ ಅನುಶ್ರೀ ಅವರ ನಿರೂಪಣೆಯೂ ಜನರಿಗೆ ಹತ್ತಿರವಾಗಿದೆ.

    ವೈಯಕ್ತಿಕ ಬದುಕಿನೊಂದಿಗೆ ವೃತ್ತಿ ಜೀವನದಲ್ಲೂ ಅನೇಕ ನೋವುಗಳ ಜತೆಗೆ ಹೋರಾಡಿ ಇಂದು ಸಿನಿಮಾ ಸ್ಟಾರ್‌ ನಟ-ನಟಿಯರೊಂದಿಗೆ ಗುರುತಿಸಿಕೊಳ್ಳುವ ಮಟ್ಟಿಗೆ ನಿರೂಪಕಿ ಅನುಶ್ರೀ ಬೆಳೆದು ನಿಂತಿದ್ದಾರೆ. ಕನ್ನಡ ಚಿತ್ರಗಳಲ್ಲಿ ನಟಿಸುವ ಮೂಲಕ ಬೆಳ್ಳಿ ತೆರೆಯಲ್ಲಿಯೂ ಅವರು ಅದೃಷ್ಟ ಪರೀಕ್ಷಿಸಿದ್ದಾರೆ.

    Famous presenter Anushree’s marriage is fixed.