Category: ಚಿಕ್ಕಮಗಳೂರು ನಗರ

  • ಕೃಷ್ಣಾರಾಧಾ ವೇಷ ಸಂಸ್ಕೃತಿಯ ಪ್ರತೀಕ

    ಕೃಷ್ಣಾರಾಧಾ ವೇಷ ಸಂಸ್ಕೃತಿಯ ಪ್ರತೀಕ

    ಚಿಕ್ಕಮಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ ಹೊಸ ಆಲೋಚನೆ, ನೂತನ ಆವಿಷ್ಕಾರದೊಂದಿಗೆ ಜೆವಿಎಸ್ ಕಿಡ್ಸ್ ಎಲ್.ಕೆ.ಜಿ, ಯು.ಕೆ.ಜಿ ಮತ್ತು ನರ್ಸರಿ ಮಕ್ಕಳಿಗೆ ಹೊಸ ವಿಭಾಗ ತೆರೆಯಲು ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಖರ್ ತಿಳಿಸಿದರು.

    ಅವರು ಇಂದು ನಗರದ ವಿಜಯಪುರದ ಒಕ್ಕಲಿಗರ ಸಮುದಾಯ ಭವನದಲ್ಲಿ ಜೆವಿಎಸ್ ಶಾಲೆಯ ಶ್ರೀ ಕೃಷ್ಣ ಜನ್ಮಾಷ್ಠಮಿ ಹಬ್ಬದ ಅಂಗವಾಗಿ ಏರ್ಪಡಿಸಲಾಗಿದ್ದ ಐ.ಎಂ.ಜಿ.ಎಂ.ಎಂ ನರ್ಸರಿ, ಪೈಮರಿ ಮತ್ತು ಜೆವಿಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವೇಷಭೂಷಣ ರಾಧಾಕೃಷ್ಣ ಸ್ಪರ್ಧೇ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ಜೆವಿಎಸ್ ಶಾಲಾ ಸಿಬ್ಬಂದಿ ಶಿಕ್ಷಣದ ಜೊತೆಗೆ ಮಕ್ಕಳ ರಕ್ಷಣೆಗೆ ಅತಿ ಹೆಚ್ಚು ಆಸಕ್ತಿ ವಹಿಸಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು. ಕೃಷ್ಣ ಜನ್ಮಾಷ್ಠಮಿ ಪವಿತ್ರವಾದ ಹಬ್ಬದ ದಿನದಂದು ನಮ್ಮ ಎಲ್ಲಾ ಪುಟಾಣಿ ಮಕ್ಕಳು ಕೃಷ್ಣ, ರಾಧೆಯರಾಗಿ ವೇಷ ಧರಿಸಿ ಬಂದಿರುವುದು ಅವರ ಜೀವನದಲ್ಲಿ ಕೃಷ್ಣನ ರೀತಿ ಯಶಸ್ಸನ್ನು ಕಾಣಲಿ ಎಂದು ಶುಭ ಹಾರೈಸಿದರು.

    ಕೃಷ್ಣನ ಚಾಣುಕ್ಯತನ, ವೀರ ಬುದ್ಧಿ ಎಲ್ಲಾ ವಿದ್ಯಾರ್ಥಿಗಳಲ್ಲಿ ಅಳವಡಿಸಿಕೊಳ್ಳಲಿ ಎಂದು ಹೇಳಿದ ಅವರು, ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ, ನ್ಯಾಯ ನಿರ್ಣಾಯಕರು ಪಾರದರ್ಶಕ ನಿರ್ಧಾರ ನೀಡಲಿ ಎಂದು ಹೇಳಿದರು. ಹೆಣ್ಣು ಮಕ್ಕಳಿಗೆ ರಾಧೆ ವೇಷ ಹಾಕಿ ಬಂದಿರುವುದು ಸಂಸ್ಕೃತಿಯ ಪ್ರತೀಕ ಒಂದು ವಾರದಿದಲೇ ತಯಾರಿ ನಡೆಸಿರುವ ಪೋಷಕರು ಸಹಕರಿಸಿದ್ದಾರೆ ಎಂದು ಧನ್ಯವಾದಗಳನ್ನು ಅರ್ಪಿಸಿದರು.

    ಕೃಷ್ಣ ಜನ್ಮಾಷ್ಠಮಿಯ ಅಂಗವಾಗಿ ವೇಷಭೂಷಣ ಸ್ಪರ್ಧೆ ಏರ್ಪಡಿಸಿದ್ದು, ಕೃಷ್ಣನ ಇರುವಿಕೆಯನ್ನು ಮಹಾ ಭಾರತದ ಪುಸ್ತಕದಲ್ಲಿ ನೋಡುತ್ತೇವೆ, ವೇಷಭೂಷಣ ಸ್ಪರ್ಧೆಯ ಮೂಲಕ ಮಕ್ಕಳಲ್ಲಿ ಸಂಸ್ಕೃತಿ ಬಿಂಬಿಸಲು ಪೂರಕವಾಗಿದೆ ಎಂದರು.

    ಪಾಂಡವರು ಯುದ್ಧವನ್ನು ಗೆಲ್ಲುವುದಕ್ಕೆ ಶ್ರೀಕೃಷ್ಣನ ಪಾತ್ರ ಮುಖ್ಯಾವಾಗಿದ್ದು, ಕೃಷ್ಣನ ಜೀವನ ಚರಿತ್ರೆ ಚಿಕ್ಕವರಿಂದ ದೊಡ್ಡವರ ವರೆಗೆ ಪಾಠವಾಗಬೇಕು, ಯಶಸ್ಸಿನ ಗುಟ್ಟು, ಕೃಷ್ಣ ವಹಿಸಿದ ಪಾತ್ರ, ಮಹಾ ಭಾರತ ಯುದ್ಧದಲ್ಲಿ ಉಪಯೋಗಿಸಿದ ಬುದ್ಧಿವಂತಿಕೆಯಿಂದ ಪಾಂಡವರು ಗೆಲ್ಲಲು ಕಾರಣವಾಯಿತು ಎಂದು ವಿವರಿಸಿದರು.

    ಕೃಷ್ಣ ಗೋವುಗಳನ್ನು ಮೇಯಿಸುವ ಜೊತೆಗೆ ತರಲೆ ಬುದ್ಧಿ, ಅಮ್ಮನೊಂದಿಗೆ ತುಂಟಾಟದ ಬಗ್ಗೆ ಪುಸ್ತಕದಲ್ಲಿ ಅಧ್ಯಾಯನ ಮಾಡಿದ್ದು, ಕೃಷ್ಣ, ರಾಧೆ ಜೋಡಿ ಇಂದು ಎಲ್ಲರ ಮನಸ್ಸಿನಲ್ಲಿ ಉಳಿದಿದೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಸಹ ಕಾರ್ಯದರ್ಶಿ ರತೀಶ್ ಕುಮಾರ್, ಪಿ. ರಾಜು, ಅಶೋಕ್, ಮುಖ್ಯ ಶಿಕ್ಷಕ ವಿಜಿತ್ ವ್ಯವಸ್ಥಾಪಕರಾದ ತೇಜಸ್ ಮೂರ್ತಿ, ಅಭಿಷೇಕ್, ತೀರ್ಪುಗಾರರಾದ ಗೀತಾ ಪ್ರಕಾಶ್, ರೂಪ ರವಿ, ವೀಣಾ ವಿಕ್ರಮ್, ಶಿಕ್ಷಕರಾದ ಪ್ರಮೀಳಾ, ಲೀಲಾವತಿ, ಜ್ಯೋತಿ, ಸೇರಿದಂತೆ ಶಾಲಾ ಶಿಕ್ಷಕರು, ವಿದ್ಯಾರ್ಥಿ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    Krishna Radha costume is a symbol of culture

  • ಸ್ವಚ್ಚತೆ ಬಗ್ಗೆ ಅರಿವು ಮೂಡಿಸುವುದೇ ಸ್ವಚ್ಚತಾ ರ್‍ಯಾಲಿ ಉದ್ದೇಶ

    ಸ್ವಚ್ಚತೆ ಬಗ್ಗೆ ಅರಿವು ಮೂಡಿಸುವುದೇ ಸ್ವಚ್ಚತಾ ರ್‍ಯಾಲಿ ಉದ್ದೇಶ

    ಚಿಕ್ಕಮಗಳೂರು: ನಗರದ ನಾಗರೀಕರಲ್ಲಿ ಸ್ವಚ್ಚತೆಯ ಬಗ್ಗೆ ಹೆಚ್ಚು ಅರಿವು ಮೂಡಿಸುವ ಉದ್ದೇಶದಿಂದ ಸ್ವಚ್ಚತಾ ರ್‍ಯಾಲಿ, ಮ್ಯಾರಥಾನ್ ಫ್ಲಾಗಿಂಗ್ ಅಭಿಯಾನ ನಡೆಸಲಾಗುತ್ತಿದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ತಿಳಿಸಿದರು.

    ಅವರು ಇಂದು ತಾಲ್ಲೂಕು ಕಛೇರಿ ಆವರಣದಲ್ಲಿ ನಗರಸಭೆ, ಸ್ವಚ್ಚ ಭಾರತ್ ಮಿಷನ್, ೨.೦ ಯೋಜನೆಯಡಿಯಲ್ಲಿ ಸಾರ್ವಜನಿಕರಿಗೆ ಸ್ವಚ್ಚತೆ ಬಗ್ಗೆ ಅರಿವು ಮೂಡಿಸುವ ಸ್ವಚ್ಚತಾ ರ್‍ಯಾಲಿ, ಮ್ಯಾರಥಾನ್ ಫ್ಲಾಗಿಂಗ್ ಅಭಿಯಾನ, ಸಹಿ ಅಭಿಯಾನ ಜಾಥಕ್ಕೆ ಡೋಲು ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

    ೨೦೦೧-೦೨ ರಲ್ಲಿ ನಗರದಲ್ಲಿ ಸ್ವಚ್ಚತೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸ್ವಚ್ಚಾ ಟ್ರಸ್ಟ್ ಪ್ರಾರಂಭಿಸಲಾಯಿತು, ಮನೆ-ಮನೆ ಕಸ ಸಂಗ್ರಹದ ಮೂಲಕ ಸ್ವಚ್ಚತೆ ಕಾಪಾಡಬೇಕೆಂದು ನಾಗರೀಕರಲ್ಲಿ ಅರಿವು ಮೂಡಿಸಲಾಗಿತ್ತು, ಸ್ವಚ್ಚತೆ ಕಾಪಾಡುವಲ್ಲಿ ನಗರಸಭೆ ರಾಜ್ಯದಲ್ಲೇ ೨ನೇ ಸ್ಥಾನದಲ್ಲಿ ಇದೇ ಎಂದು ಹೇಳಿದರು.

    ಪ್ರಪಂಚದಲ್ಲಿ ಸ್ವಿಡ್ಜರ್ ಲ್ಯಾಂಡ್ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದ್ದು, ಅದೇ ರೀತಿ ಮಿನಿ ಸ್ವಿಡ್ಜರ್ ಲ್ಯಾಂಡಾಗಿ ಚಿಕ್ಕಮಗಳೂರು ಜಿಲ್ಲೆ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಿ, ಪ್ಲಾಸ್ಟಿಕ್ ಬಾಟಲಿ, ಕಸ ಸಂಪೂರ್ಣವಾಗಿ ನಿಷೇಧಿಸಲಾಗದಿದ್ದರೂ ಕಡಿಮೆ ಮಾಡಿ ನಿಯಂತ್ರಿಸಬೇಕೆಂದು ಕರೆ ನೀಡಿದರು.

    ಪ್ರಕೃತಿ ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬರು ಕೈ ಜೊಡಿಸಬೇಕು ಜೊತೆಗೆ ಜಲಮೂಲಗಳಿಗೆ ಪ್ಲಾಸ್ಟಿಕ್ ತ್ಯಾಜ್ಯ ಹಾಕಿ ಕಲಿಷಿತಗೊಳಿಸುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪರಿಸರ ಹಾಗೂ ನಗರಸಭೆ ಸಿಬ್ಬಂದಿಗಳಿಗೆ ಸೂಚನೆ ನೀಡಿ, ಬಾವಿ ಪ್ರಜೆಗಳಾದ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಸ್ವಚ್ಚತೆ ಬಗ್ಗೆ ಶಾಲೆಗಳಿಗೆ ತೆರಳಿ ಪರಿಸರ, ಪ್ರಕೃತಿ, ಕಸ ವಿಲೇವಾರಿ ಬಗ್ಗೆ ಪ್ರಾಥಮಿಕ ಹಂತದಲ್ಲಿ ಅರಿವು ಮೂಡಿಸಬೇಕಾದ ಅಗತ್ಯ ಇದೆ ಎಂದು ಹೇಳಿದರು.

    ಬಸವತತ್ವ ಪೀಠ ತತ್ವದ ಪೀಠಾಧ್ಯಕ್ಷ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಮಾತನಾಡಿ ದೇವರನ್ನು ಹೊರತುಪಡಿಸಿ ಸ್ವಚ್ಚತೆ ಅಗತ್ಯವಾಗಿದ್ದು, ನಗರ ಅತ್ಯಂತ ಸ್ವಚ್ಚ ನಗರ ಎಂದು ಹೆಸರುಗಳಿಸಿದ್ದು, ಪ್ರವಾಸೋದ್ಯಮದ ಮೂಲಕ ಅತಿ ಹೆಚ್ಚು ಹೆಸರು ಮಾಡುವ ಅವಕಾಶ ಜಿಲ್ಲಾ ಕೇಂದ್ರಕ್ಕೆ ಇದೇ ಎಂದು ತಿಳಿಸಿದರು.

    ನಗರದಲ್ಲಿ ವಾಸಿಸುವ ಎಲ್ಲರೂ ಸ್ವಚ್ಚತೆಯ ಬಗ್ಗೆ ಅಪಾರವಾದ ಕಾಳಜಿಯನ್ನು ವಹಿಸುವುದು ಅಗತ್ಯ ಎಂದು ಮನೆಯಲ್ಲಿ ಉತ್ಪತ್ತಿಯಾದ ಕಸವನ್ನು ಬೀದಿಗೆ ಹಾಕದೆ, ನಗರಸಭೆ ಗಂಟೆ ಗಾಡಿಗೆ ಹಾಕುವುದು ರೂಢಿಗತವಾಗಬೇಕೆಂದು ಕರೆ ನೀಡಿದರು. ಸ್ವಚ್ಚತೆ ಕುರಿತು ಗಂಭೀರ ಆಲೋಚನೆ ಮಾಡಬೇಕು ಈ ನಿಟ್ಟಿನಲ್ಲಿ ನಗರಸಭೆ ಮನೆ-ಮನೆ ಕಸ ಸಂಗ್ರಹಿಸಲು ಕೈಗೊಂಡ ದೊಡ್ಡ ಉಪಕ್ರಮದಿಂದ ಯಶಸ್ವಿಯಾಗಿದ್ದಾರೆ ಎಂದು ಶ್ಲಾಘಿಸಿದರು.

    ಈ ವಿಚಾರದಲ್ಲಿ ಎಲ್ಲರ ಸಹಭಾಗಿತ್ವ ಅಗತ್ಯವಾಗಿದ್ದು ಸಣ್ಣ-ಸಣ್ಣ ಕೊಡುಗೆ ಬಹಳ ದೊಡ್ಡ ಪರಿಣಾಮ ಬೀರುತ್ತದೆ ಎಂದು ಕಿವಿಮಾತು ಹೇಳಿದರು. ನಗರಸಭಾ ಅಧ್ಯಕ್ಷೆ ಶೀಲಾ ದಿನೇಶ್ ಮಾತನಾಡಿ ಬೀದಿ ನಾಟಕ ಮತ್ತು ಗೋಡೆ ಬರಹಗಳ ಮೂಲಕ ಸ್ವಚ್ಚತೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ, ಇದರ ಜೊತೆಗೆ, ನಗರದ ನಾಗರೀಕರ ಮನೆ-ಮನೆ ಕಸ ಸಂಗ್ರಹಣೆಗೆ ಗಂಟೆ ಗಾಡಿಗಳ ಮೂಲಕ ಆದ್ಯತೆ ನೀಡಬೇಕೆಂದು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಕುಮಾರೆ ಗೌಡ, ಪರಮೇಶ್, ಲಕ್ಷ್ಮಣ್, ಸ್ವಚ್ಚ ಟ್ರಸ್ಟ್‌ನ ಡಾ. ಶುಭ ವಿಜಯ್, ಬ್ರಹ್ಮ ಕುಮಾರೀಸ್‌ನ ರಾಜಯೋಗಿನಿ ಬಿ.ಕೆ ಭಾಗ್ಯಕ್ಕ, ರೋಟರಿ ಮತ್ತು ಲಯನ್ಸ ಕ್ಲಬ್ ಸದಸ್ಯರು, ನಗರಸಭೆ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.

    The purpose of the cleanliness rally is to create awareness about cleanliness.

  • ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ ಬಲಿದಾನ ಮಾಡಿದವರನ್ನು ಸ್ಮರಿಸಬೇಕು

    ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ ಬಲಿದಾನ ಮಾಡಿದವರನ್ನು ಸ್ಮರಿಸಬೇಕು

    ಚಿಕ್ಕಮಗಳೂರು: ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ, ಬಲಿದಾನ ಮಾಡಿದವರನ್ನು ಸ್ಮರಿಸಿ ನೆನಪು ಮಾಡಿಕೊಂಡಾಗ ಮಾತ್ರ ಸ್ವಾತಂತ್ರ್ಯ ದಿನಾಚರಣೆಗೆ ನಿಜ ಅರ್ಥ ಬರುತ್ತದೆ ಎಂದು ನಗರಸಭಾಧ್ಯಕ್ಷೆ ಶೀಲಾದಿನೇಶ್ ಹೇಳಿದರು.

    ಅವರು ಇಂದು ನಗರಸಭೆ ಆವರಣದಲ್ಲಿ ೭೯ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣೆ ನೆರವೇರಿಸಿ ಜನತೆಗೆ ಸ್ವಾತಂತ್ರ್ಯ ಸಂದೇಶವನ್ನು ನೀಡಿದರು.

    ಶಿಕ್ಷಣ ಮತ್ತು ಆರೋಗ್ಯಕ್ಕೆ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಿದಾಗ ಸ್ವತಂತ್ರ್ಯ ಹೋರಾಟದ ಬಗ್ಗೆ ಅರಿವು ಮೂಡಲು ಸಹಕಾರಿಯಾಗುತ್ತದೆ ಎಂದರು.

    ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ನಾಣ್ಣುಡಿಯಂತೆ ಭಾರತದ ಇತಿಹಾಸ, ಸ್ವಾತಂತ್ರ್ಯ ಹೋರಾಟದ ಬಗ್ಗೆ ಜಾಗೃತಿ ಮೂಡಿಸಿದಾಗ ದೇಶದ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ಹೇಳಿದರು.

    ಭಾರತದಲ್ಲಿ ಕಷ್ಟಸಾಧ್ಯವಾಗಿರುವ ಬಡತನ ನಿರ್ಮೂಲನೆ ಮತ್ತು ಸ್ವಚ್ಚತೆಗೆ ಆದ್ಯತೆ ನೀಡಿದಾಗ ಮಹಾತ್ಮ ಗಾಂಧೀಜಿ ಕಂಡ ಕನಸು ನನಸು ಮಾಡಬೇಕೆಂದು ಕರೆನೀಡಿದರು.

    ಪೌರಾಯುಕ್ತ ಬಿ.ಸಿ. ಬಸವರಾಜ್ ಮಾತನಾಡಿ, ಬ್ರಿಟೀಷರ ದಬ್ಬಾಳಿಕೆಯಿಂದ ಭಾರತ ದೇಶ ನಲುಗಿತ್ತು. ಇದನ್ನು ಕಿತ್ತುಹಾಕಲು ಸ್ವತಂತ್ರ್ಯ ಹೋರಾಟ ರೂಪಿಸಿದ ಮಹಾತ್ಮ ಗಾಂಧೀಜಿ, ಡಾ. ಬಿ.ಆರ್. ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ, ಸುಭಾಷ್ ಚಂದ್ರಬೋಸ್, ಗೋಪಾಲಕೃಷ್ಣ ಗೋಖಲೆ, ಬಾಲಗಂಗಾಧರ ತಿಲಕ್, ಬಿಪಿನ್ ಚಂದ್ರಪಾಲ್, ಪಂಡಿತ್ ಜವಾಹರಲಾಲ್ ನೆಹರು ಮುಂತಾದ ಮಹನೀಯರುಗಳನ್ನು ನೆನಪು ಮಾಡಿಕೊಳ್ಳುವ ಅಗತ್ಯ ಇದೆ ಎಂದರು.

    ಸ್ವತಂತ್ರ ಬಂದಾಗಿನಿಂದ ದೇಶದಲ್ಲಿ ದೇಶವಾಸಿಗಳಿಗೆ ಭಯಮುಕ್ತರಾಗಿ ಜೀವನ ನಡೆಸಲು ಸ್ವತಂತ್ರ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಸ್ವತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದವರನ್ನು ಸ್ಮರಿಸಬೇಕೆಂದು ಹೇಳಿದರು.

    ಈ ಸಂದರ್ಭದಲ್ಲಿ ನಗರಸಭೆ ಸದಸ್ಯರುಗಳಾದ ಎ.ಸಿ. ಕುಮಾರಗೌಡ, ಗೋಪಿ,ಲಕ್ಷ್ಮಣ್, ನಾಮಿನಿ ಸದಸ್ಯರಾದ ಪ್ರಕಾಶ್ ರೈ, ಪ್ರಸಾದ್ ಅಮೀನ್, ವಸೀಮ್, ಫಯಾಜ್ ಅಹಮದ್, ಯಶೋಧ ಹಾಗೂ ನಗರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.

    We should remember those who sacrificed their lives in the freedom struggle.

  • ಕೆರೆಗೆ ನೀರು ತುಂಬಿಸುವ ಕಾಮಗಾರಿಗೆ ಟೆಂಡರು ಪ್ರಕ್ರಿಯೆ ಜಾರಿ

    ಕೆರೆಗೆ ನೀರು ತುಂಬಿಸುವ ಕಾಮಗಾರಿಗೆ ಟೆಂಡರು ಪ್ರಕ್ರಿಯೆ ಜಾರಿ

    ಚಿಕ್ಕಮಗಳೂರು: ಭದ್ರಾ ಉಪ ಕಣಿವೆ ಯೋಜನೆಯಡಿ ಕಡೂರು ಮತ್ತು ಚಿಕ್ಕಮಗಳೂರು ತಾಲ್ಲೂಕುಗಳ ಕೆರೆಗಳಿಗೆ ನೀರು ತುಂಬಿಸಲು ರೂ.೪೦೭ ಕೋಟಿ ವೆಚ್ಚದ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದ್ದು, ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಮಾನ್ಯ ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ  ಕೆ.ಜೆ.ಜಾರ್ಜ್ ತಿಳಿಸಿದರು.

    ನಗರದಲ್ಲಿಂದು ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಕಡೂರು ತಾಲ್ಲೂಕು ವ್ಯಾಪ್ತಿಯಲ್ಲಿ ೨೫ ಕೆರೆಗಳಿಗೆ ನೀರು ಪೂರೈಸುವ ಮದಗದ ಕೆರೆ ಮತ್ತು ಕಾಲುವೆಗಳ ಆಧುನೀಕರಣ ಕಾಮಗಾರಿಯನ್ನು ರೂ.೫೦ ಕೋಟಿ ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ನೀಡಲಾಗಿದೆ. ಅಜ್ಜಂಪುರ ತಾಲ್ಲೂಕು ಗಡಿರಂಗಾಪುರ ಮತ್ತು ಇತರೆ ೧೯ ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ೪೮ ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.

    ಜಿಲ್ಲೆಯ ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಯ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆಯ ಒಟ್ಟು ರೂ. ೧೫೦ ಕೋಟಿಯ ೮೯ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಎನ್.ಆರ್.ಪುರ ಪಟ್ಟಣದ ರಸ್ತೆ ಅಭಿವೃದ್ಧಿಗಾಗಿ ರೂ ೬೦ ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.

    ಜಿಲ್ಲೆಯು ಸತತವಾಗಿ ಎರಡು ವರ್ಷಗಳಿಂದ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯನ್ನು ಜಾರಿಗೊಳಿಸುವಲ್ಲಿ ಪ್ರಥಮ ಸ್ಥಾನ ಪಡೆದಿದೆ. ಕಳೆದ ವರ್ಷ ೨೧ ಅಂಗನವಾಡಿ ಕೇಂದ್ರಗಳನ್ನು ಮಾದರಿ ಅಂಗನವಾಡಿ ಕೇಂದ್ರಗಳಾಗಿ ಉನ್ನತೀಕರಿಸಲಾಗಿದೆ. ಕೊಪ್ಪ ತಾಲ್ಲೂಕಿನಲ್ಲಿ ೫೦ ಹಾಸಿಗೆಯುಳ್ಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಾಮಗಾರಿ ಪೂರ್ಣಗೊಂಡಿದ್ದು, ಜಯಪುರ ಮತ್ತು ಲಕ್ಕವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ೩೦ ಹಾಸಿಗೆಯುಳ್ಳ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ ಎಂದು ಹೇಳಿದರು.

    ೨೦೨೪-೨೫ನೇ ಸಾಲಿನಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಮುಖ್ಯಮಂತ್ರಿಗಳ ಎಸ್.ಎಫ್.ಸಿ. ವಿಶೇಷ ಅನುದಾನದಡಿ ರೂ. ೧೦.೦೦ ಕೋಟಿಗಳ ಅನುದಾನ ಮಂಜೂರು ಮಾಡಲಾಗಿದೆ. ನಗರದಲ್ಲಿ ರೂ.೧೯.೮೦ ಕೋಟಿ ವೆಚ್ಚದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಿಸಲು ಅನುಮೋದನೆ ನೀಡಲಾಗಿದೆ. ತರೀಕೆರೆಯಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ರೂ.೯.೦೦ ಕೋಟಿಗಳು ಹಾಗೂ ಬಸ್ ಡಿಪೋ ನಿರ್ಮಿಸಲು ರೂ.೮.೮೦ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಕಡೂರಿನಲ್ಲಿ ಹಾಲಿ ಬಸ್ ನಿಲ್ದಾಣವನ್ನು ವಿಸ್ತರಿಸಲು ರೂ. ೬ ಕೋಟಿ ಹಾಗೂ ಬೀರೂರಿನಲ್ಲಿ ಬಸ್ ಘಟಕ ನಿರ್ಮಿಸಲು ರೂ.೨.೫೦ ಕೋಟಿ ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು.

    ಜಿಲ್ಲಾ ಆಡಳಿತ ಸೌಧದ ಎರಡನೇ ಹಂತದಲ್ಲಿ ರೂ. ೨೬.೪೮ ಕೋಟಿ ಕಾಮಗಾರಿಗೆ ಅನುಮೋದನೆ ದೊರೆತಿದೆ. ಕಳಸ ಹಾಗೂ ಅಜ್ಜಂಪುರ ತಾಲ್ಲೂಕುಗಳ ಆಡಳಿತ ಸೌಧ, ಕೊಪ್ಪ ತಾಲ್ಲೂಕಿನ ಎರಡು ನಾಡಕಚೇರಿ ಕಟ್ಟಡ ಕಾಮಗಾರಿಗಳಿಗೆ ರೂ.೧೨ ಕೋಟಿಗಳಿಗೆ ಅನುಮೋದನೆ ನೀಡಲಾಗಿದೆ. ತರೀಕೆರೆ ತಾಲ್ಲೂಕಿನಲ್ಲಿ ಮೌಲಾನಾ ಆಜಾದ್ ಮಾದರಿ ಶಾಲೆ ನಿರ್ಮಾಣ, ಮೆಟ್ರಿಕ್ ನಂತರದ ಅಲ್ಪಸಂಖ್ಯಾತರ ಬಾಲಕರ ವಿದ್ಯಾರ್ಥಿಗಳ ನಿಲಯ ಕಟ್ಟಡ ನಿರ್ಮಾಣಕ್ಕೆ ರೂ.೬.೫೯ ಕೋಟಿ ಬಿಡುಗಡೆಯಾಗಿದೆ. ಮೂಡಿಗೆರೆ ತಾಲ್ಲೂಕಿನ ಜನ್ನಾಪುರದಲ್ಲಿ ರೂ.೧೦.೭೫ ಕೋಟಿ ವೆಚ್ಚದ ೩೩/೧೧ ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ನಿರ್ಮಾಣ ಕಾಮಗಾರಿ ಪುಗತಿಯಲ್ಲಿದೆ. ಕಳೆದ ಎರಡು ವರ್ಷಗಳಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಿಂದ ಸಿ.ಎಸ್.ಆರ್. ಅನುದಾನದಡಿ ಜಿಲ್ಲೆಗೆ ಒಟ್ಟು ೧೦ ಕೋಟಿ ಅನುದಾನ ಒದಗಿಸಲಾಗಿದೆ ಎಂದು ಹೇಳಿದರು.

    ತರೀಕೆರೆ ತಾಲ್ಲೂಕಿನ ಅಮೃತಾಪುರ, ಕಡೂರು ತಾಲ್ಲೂಕಿನ ಸಿಂಗಟಗೆರೆ, ಚಿಕ್ಕಮಗಳೂರು ತಾಲ್ಲೂಕಿನ ಅಂಬಳೆ ಗ್ರಾಮಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಮತ್ತು ಚಿಕ್ಕಮಗಳೂರು ತಾಲ್ಲೂಕಿಗೆ ೨ ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣ ಹಾಗೂ ಪರಿಶಿಷ್ಟ ಜಾತಿ ಕಾಲೋನಿಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಒಟ್ಟು ರೂ. ೧೦೧.೨೧ ಕೋಟಿ ಬಿಡುಗಡೆಯಾಗಿದೆ. ಕಡೂರು ತಾಲ್ಲೂಕಿನಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆಯನ್ನು ನಿರ್ಮಾಣ ಮಾಡುವ ಉದ್ದೇಶಕ್ಕೆ ರೂ. ೩೪.೨೫ ಕೋಟಿ ಅನುದಾನ ಒದಗಿಸಲಾಗಿದೆ. ಜಿಲ್ಲೆಯ ೯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇ-ಖಾತಾ ಅಭಿಯಾನದಡಿ ಈವರೆವಿಗೂ ಒಟ್ಟು ೪೮೯೨ ಇ-ಖಾತೆಗಳನ್ನು ಸೃಜಿಸಿ ಆಸ್ತಿಗಳ ಮಾಲೀಕರುಗಳಿಗೆ ವಿತರಿಸಲಾಗಿದೆ ಎಂದರು.

    `ಭೂ ಸುರಕ್ಷಾ ಯೋಜನೆ’ಯಡಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಗಣಕೀಕರಣ ಆರಂಭಿಸಲಾಗಿದೆ. ಚಿಕ್ಕಮಗಳೂರು, ಶೃಂಗೇರಿ ಹಾಗೂ ಕಳಸ ತಾಲ್ಲೂಕುಗಳಲ್ಲಿ ಈ ಕಾರ್ಯ ಮುಕ್ತಾಯಗೊಂಡಿದ್ದು, ಇದುವರೆಗೆ ಒಟ್ಟು ಒಂದು ಕೋಟಿ ಪುಟಗಳನ್ನು ಗಣಕೀಕರಣಗೊಳಿಸಲಾಗಿದೆ. ಉಳಿದ ತಾಲ್ಲೂಕುಗಳಲ್ಲಿ ಶೀಘ್ರದಲ್ಲಿಯೇ ಮುಕ್ತಾಯಗೊಳಿಸಲಾಗುವುದು. ಇದುವರೆಗೆ ೧೪,೦೮೮ ಡಿಜಿಟಲೀಕರಣಗೊಂಡ ಕಂದಾಯ ದಾಖಲೆಗಳನ್ನು ಆನ್‌ಲೈನ್ ಮೂಲಕ ವಿತರಿಸಲಾಗಿದೆ. ಜಿಲ್ಲೆಯಲ್ಲಿ ಇ-ಪೌತಿ ಖಾತೆ ಅಂದೋಲನದಲ್ಲಿ ಒಟ್ಟು ೯೭,೧೬೭ ಸರ್ವೆ ನಂಬರ್‌ಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ ೨೪೨೩ ಸರ್ವೆ ನಂಬರ್‌ಗಳ ಖಾತೆಯನ್ನು ಮೃತರ ವಾರಸುದಾರರ ಹೆಸರಿಗೆ ದಾಖಲಿಸಲಾಗಿದೆ ಎಂದು ತಿಳಿಸಿದರು.

    ಜಿಲ್ಲೆಯಲ್ಲಿ ೧೧೭ ಕಂದಾಯ ಗ್ರಾಮಗಳನ್ನು ಈ ಹಿಂದೆ ಗುರುತಿಸಲಾಗಿದ್ದು, ೯೫ ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಹೊಸದಾಗಿ ೩೨೦ ಉಪ ಗ್ರಾಮಗಳನ್ನು ಗುರುತಿಸಿದ್ದು, ಹಕ್ಕು ಪತ್ರಗಳನ್ನು ನೀಡಲು ಕ್ರಮ ವಹಿಸಲಾಗಿದೆ. ಅರ್ಹ ಫಲಾನುಭವಿಗಳಿಗೆ ಇದುವರೆಗೆ ೧೭೨೬ ಫಲಾನುಭವಿಗಳಿಗೆ ಗ್ರಾಮ ಪಂಚಾಯಿತಿಯಲ್ಲಿ ಇ-ಸ್ವತ್ತು ದಾಖಲು ಮಾಡಿಕೊಡಲಾಗಿದೆ ಎಂದರು.

    ಈ ಸಂದರ್ಭದಲ್ಲಿ ಶಾಸಕ ಹೆಚ್.ಡಿ ತಮ್ಮಯ್ಯ, ಟಿ.ಡಿ ರಾಜೇಗೌಡ, ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ,ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ,ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಹೆಚ್ ಹರೀಶ್, ನಗರಸಭೆ ಅಧ್ಯಕಷೆ ಶೀಲಾದಿನೇಶ್, ರಾಜ್ಯ ಪರಿಸರ ತಜ್ಞರ ಮೌಲ್ಯ ಮಾಪನ ಸಮಿತಿಯ ಅಧ್ಯಕ್ಷ ಎ.ಎನ್.ಮಹೇಶ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ, ತಹಸೀಲ್ದಾರ್ ರೇಷ್ಮಾ ಶೆಟ್ಟಿ ಉಪಸ್ಥಿತರಿದ್ದರು.

    Tender process launched for filling the lake with water

  • ಅಲ್ಲಂಪುರ ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷರಾಗಿ ಪೂರ್ಣಿಮಾ ಪ್ರದೀಪ್ ಅವಿರೋಧವಾಗಿ ಆಯ್ಕೆ

    ಅಲ್ಲಂಪುರ ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷರಾಗಿ ಪೂರ್ಣಿಮಾ ಪ್ರದೀಪ್ ಅವಿರೋಧವಾಗಿ ಆಯ್ಕೆ

    ಚಿಕ್ಕಮಗಳೂರು: ತಾಲ್ಲೂಕಿನ ಅಲ್ಲಂಪುರ ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಪೂರ್ಣಿಮಾ ಪ್ರದೀಪ್ ಅವಿರೋಧವಾಗಿ ಆಯ್ಕೆಯಾದರು.

    ಚುನಾವಣಾಧಿಕಾರಿಯಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಅವರು ಪೂರ್ಣಿಮಾ ಅವರ ಆಯ್ಕೆಯನ್ನು ಘೋಷಿಸಿದರು. ಈ ವೇಳೆ ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಬಿಜೆಪಿ ಮುಖಂಡ ಟಿ.ರಾಜಶೇಖರ್ ಅಲ್ಲಂಪುರ ದೊಡ್ಡ ಪಂಚಾಯ್ತಿಯಾಗಿದ್ದು, ಗಿರಿ ಭಾಗಕ್ಕೆ ತೆರಳುವ ಎಲ್ಲಾ ಪ್ರವಾಸಿಗರು ಈ ಗ್ರಾಮವನ್ನು ಹಾದುಹೋಗುವುದಿರಿಂದ ಅಭಿವೃದ್ಧಿ ಕಾರ್ಯಗಳು ವೇಗವಾಗಿ ನಡೆಯಬೇಕಾಗುತ್ತದೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.

    ಪೂರ್ಣಿಮಾ ಅವರ ಪತಿ ಪ್ರದೀಪ್ ಅವರು ಈ ಭಾಗದಲ್ಲಿ ಜನಾನುರಾಗಿಯಾಗಿದ್ದಾರೆ ಅಲ್ಲದೆ ಅಧ್ಯಕ್ಷರೊಂದಿಗೆ ಉತ್ತಮ ಸದಸ್ಯರ ತಂಡವೂ ಇದೆ. ಸ್ಥಳೀಯ ಬಿಜೆಪಿ ಮುಖಂಡರುಗಳ ವಿಶ್ವಾಸಕ್ಕೆ ಪಡೆದು ಪಂಚಾಯ್ತಿಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು. ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರ ಮಾರ್ಗದರ್ಶನದ ಜೊತೆಗೆ ಅವರು ಶಾಸಕರಾಗಿದ್ದಾಗ ಈ ಪಂಚಾಯ್ತಿ ಅಭಿವೃದ್ಧಿಗೆ ಮೂಲ ಕಾರಣಕರ್ತರೂ ಆಗಿದ್ದಾರೆ. ಮುಂದೆಯೂ ಅವರ ಮಾರ್ಗದರ್ಶನದಲ್ಲಿ ಪಂಚಾಯ್ತಿಯನ್ನು ಉನ್ನತ ಮಟ್ಟಕ್ಕೆ ಕೊಂಡೋಯ್ಯಬೇಕು ಎಂದರು.

    ಜಿ.ಪಂ. ಮಾಜಿ ಸದಸ್ಯ ಜೆಡಿ.ಲೋಕೇಶ್ ಮಾತನಾಡಿ, ಪೂರ್ಣಿಮಾ ಪ್ರದೀಪ್ ನೇತೃತ್ವದಲ್ಲಿ ಉತ್ತಮ ಕೆಲಸಗಳು ನಡೆದು ಪಂಚಾಯ್ತಿಗೂ, ಬಿಜೆಪಿಗೂ, ಸಿ.ಟಿ.ರವಿ ಅವರಿಗೂ ಒಳ್ಳೆಯ ಹೆಸರು ಬರುವಂತಾಗಲಿ ಎಂದರು.

    ನೂತನ ಅಧ್ಯಕ್ಷೆ ಪೂರ್ಣಿಮಾಪ್ರದೀಪ್ ಮಾತನಾಡಿ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಲು ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು, ಅಭಿವೃದ್ಧಿ ಕೆಲಸಗಳಿಗೂ ಎಲ್ಲಾ ಸದಸ್ಯರು ತಮ್ಮ ಸಲಹೆ, ಸಹಕಾರ ನೀಡಬೇಕೆಂದು ತಿಳಿಸಿದರು.

    ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ದ್ರಾಕ್ಷಾಯಿಣಿ ಪೂರ್ಣೇಶ್, ಮುಖಂಡರುಗಳಾದ ಮಂಜುನಾಥ್, ಸುರೇಶ್, ದೇವರಾಜ್, ಗೌರಮ್ಮ, ವೇಣು, ಮೋಹನ್, ಪಂಚಾಯ್ತಿ ಉಪಾಧ್ಯಕ್ಷ ಧಾನೇಶ್, ಸದಸ್ಯರುಗಳಾದ ಅರ್ಪಿತಾ, ವಸಂತಕುಮಾರ್, ಮಧುಸೂಧನ್ ರಾವ್, ಎ.ಟಿ.ರಮೇಶ್, ಶಿವರಾಜ್, ಜಯಂತಿ, ಪದ್ಮಾಕ್ಷಿ, ಕೃಷ್ಣ, ಎಚ್.ಆರ್.ಕಮಲ, ಶಿಲ್ಪ ಇತರರು ಇದ್ದರು.

    Purnima Pradeep elected unopposed as the new president of Allampura Gram Panchayat

  • ಡಿಸಿಸಿ ಬ್ಯಾಂಕಿನಿಂದ ಶೇ.3 ಬಡ್ಡಿದರದಲ್ಲಿ 30 ಕೋಟಿ ಮಧ್ಯಮಾವಧಿ ಸಾಲ ನೀಡಲು ಗುರಿ

    ಡಿಸಿಸಿ ಬ್ಯಾಂಕಿನಿಂದ ಶೇ.3 ಬಡ್ಡಿದರದಲ್ಲಿ 30 ಕೋಟಿ ಮಧ್ಯಮಾವಧಿ ಸಾಲ ನೀಡಲು ಗುರಿ

    ಚಿಕ್ಕಮಗಳೂರು: : ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿಂದ ೨೦೨೫-೨೬ನೇ ಸಾಲಿಗೆ ಶೇ.೩ ರ ಬಡ್ಡಿದರದಲ್ಲಿ ೩೦ ಕೋಟಿ ಮಧ್ಯಮಾವಧಿ ಸಾಲ ನೀಡುವ ಯೋಜನೆ ಜೊತೆಗೆ ಪ್ರಸ್ತುತ ಇರುವ ನಿವ್ವಳ ಲಾಭವನ್ನು ೮ ಕೋಟಿ ರೂಗಳಿಗೆ ಹೆಚ್ಚಿಸಲು ಗುರಿ ಹೊಂದಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಡಿ.ಎಸ್. ಸುರೇಶ್ ತಿಳಿಸಿದರು.

    ಅವರು ಇಂದು ಬ್ಯಾಂಕಿನ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಜ್ಯ ಬಜೆಟ್‌ನಲ್ಲಿ ತಿಳಿಸಲಾಗಿರುವಂತೆ ಜಿಲ್ಲೆಗೆ ಹಾಲು ಉತ್ಪಾದಕ ಘಟಕ ಸ್ಥಾಪಿತವಾದಲ್ಲಿ ರೈತಾಪಿ ವರ್ಗದವರಿಗೆ ಹೆಚ್ಚು ಹೆಚ್ಚು ಹಾಲು ಸಂಗ್ರಹಣೆ ಮಾಡಲು ದುಡಿಯುವ ಬಂಡವಾಳ ರೂಪದಲ್ಲಿ ೩೫ ಕೋಟಿ ರೂ ಸಾಲಸೌಲಭ್ಯ ನೀಡಲು ಉದ್ದೇಶಿಸಲಾಗಿದೆ ಎಂದರು.

    ರಾಜ್ಯ ಹಾಗೂ ಕೇಂದ್ರಸರ್ಕಾರ ಜಾರಿಗೊಳಿಸಿದ ಪ್ಯಾಕ್ಸ್ ಎಮ್.ಎಸ್.ಸಿ ಯೋಜನೆಯಡಿ ೩೨ ಕೋಟಿ ಸಾಲ ಮಂಜೂರು ಮಾಡಲಾಗಿದ್ದು, ಇನ್ನೂ ಹೊಸ ಸಂಘಗಳಿಗೆ ಸ್ವಂತ ಗೋದಾಮು ನಿರ್ಮಿಸಿಕೊಳ್ಳಲು ರಿಯಾಯಿತಿ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲು ಕ್ರಮ ವಹಿಸಲಾಗಿದೆ ಎಂದು ಭರವಸೆ ನೀಡಿದರು.

    ೨೦೨೫-೨೬ ನೇ ಸಾಲಿನಲ್ಲಿ ವಿವಿಧ ಯೋಜನೆಗಳ ಮೂಲಕ ೩೭೦ ಕೋಟಿ ರೂಗಳ ಕೃಷಿಯೇತರ ಸಾಲವನ್ನು ನೀಡಲು ಗುರಿಹೊಂದಲಾಗಿದೆ. ಇದರಿಂದಾಗಿ ಪ್ರಸಕ್ತ ವರ್ಷ ಬ್ಯಾಂಕಿನ ವಾರ್ಷಿಕ ವಹಿವಾಟು ೨೨೦೦ ಕೋಟಿ ರೂ ಮೀರುವ ಅಂದಾಜಿಸಲಾಗಿದೆ ಎಂದು ಹೇಳಿದರು.

    ಡಿಸಿಸಿ ಬ್ಯಾಂಕ್ ತನ್ನದೇ ಆದ ಸುಸಜ್ಜಿತ ಕಟ್ಟಡದಲ್ಲಿ ಬ್ಯಾಂಕಿನ ವಹಿವಾಟು ನಡೆಸುತ್ತಿದೆ. ಗ್ರಾಹಕರಿಗೆ ಬ್ಯಾಂಕಿನಿಂದ ಸಿಗುವ ಸೌಲಭ್ಯಗಳ ಕುರಿತು ಅರಿವು ಮೂಡಿಸಲು ಎಲ್ಲಾ ಶಾಖೆಗಳಲ್ಲೂ ದೂರದರ್ಶನ ಅಳವಡಿಸಿ ಗ್ರಾಹಕರನ್ನು ಜಾಗೃತಗೊಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಕೆಸಿಸಿ ಸಾಲಗಾರರನ್ನು ೫ ಲಕ್ಷಗಳಿಗೆ ಮಿತಿಗೊಳಿಸಿ ಅಪಘಾತ ವಿಮಾ ಸೌಲಭ್ಯ ಒದಗಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದರು.

    ಪ್ರಸಕ್ತ ವರ್ಷದ ಮಾ.೩೧ ಕ್ಕೆ ೬೫.೧೦ ಕೋಟಿ ಷೇರು ಬಂಡವಾಳವನ್ನು ಸಂಗ್ರಹಿಸಲಾಗಿದ್ದು, ಈ ನಿಟ್ಟಿನಲ್ಲಿ ಡಿಸಿಸಿ ಬ್ಯಾಂಕ್ ಅಭಿವೃದ್ಧಿ ಪಥದಲ್ಲಿ ಸಾಗಲು ಕಾರಣರಾದ ಮತ್ತು ಸಂಪೂರ್ಣ ಸಹಕಾರ ನೀಡಿದ ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳ ಸದಸ್ಯರಿಗೆ, ಆಡಳಿತ ಮಂಡಳಿ ಸದಸ್ಯರಿಗೆ ಎಲ್ಲಾ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳಿಗೆ, ಕಾರ್ಯನಿರ್ವಹಣಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.

    ಈ ಸಂದರ್ಭದಲ್ಲಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್, ಉಪಾಧ್ಯಕ್ಷ ಹೆಚ್.ಬಿ ಸತೀಶ್, ನಿರ್ದೇಶಕರುಗಳಾದ ಕೆ.ಆರ್. ಆನಂದಪ್ಪ, ಟಿ.ಎಲ್. ರಮೇಶ್, ಡಿ.ಸಿ ಶಂಕ್ರಪ್ಪ, ಹೆಚ್.ಬಿ ಶಿವಣ್ಣ, ಎಸ್.ಜಿ ರಾಮಪ್ಪ, ಹೆಚ್.ವಿ. ಸಂದೀಪ್ ಕುಮಾರ್, ಎಸ್.ಎನ್ ರಾಮಸ್ವಾಮಿ, ಎಂ.ಎಸ್ ನಿರಂಜನ್, ಎಂ. ಪರಮೇಶ್ವರಪ್ಪ, ಸಹಕಾರ ಸಂಘಗಳ ಉಪ ನಿಬಂಧಕರಾದ ಡಿ.ಎಸ್. ತೇಜಸ್ವಿನಿ, ಅಪೆಕ್ಸ್ ಬ್ಯಾಂಕ್ ನಾಮಿನಿ ಸದಸ್ಯ ಎಲ್.ಜಗದೀಶ್ ಹಾಗೂ ಸಹಕಾರ ಸಂಘಗಳ ಜಂಟಿ ನಿಬಂಧಕರಾದ ಪ್ರವೀಣ್ ಬಿ ನಾಯಕ್ ಉಪಸ್ಥಿತರಿದ್ದರು.

    DCC Bank aims to provide Rs 30 crore medium-term loan at 3% interest rate

  • ಅಮೇರಿಕಾದೊಂದಿಗೆ ವಾಣಿಜ್ಯ ಒಪ್ಪಂದ ಮಾಡಿಕೊಳ್ಳದಂತೆ ಆಗ್ರಹಿಸಿ ರೈತ ಸಂಘ ಮನವಿ

    ಅಮೇರಿಕಾದೊಂದಿಗೆ ವಾಣಿಜ್ಯ ಒಪ್ಪಂದ ಮಾಡಿಕೊಳ್ಳದಂತೆ ಆಗ್ರಹಿಸಿ ರೈತ ಸಂಘ ಮನವಿ

    ಚಿಕ್ಕಮಗಳೂರು: ಅಮೇರಿಕಾದೊಂದಿಗೆ ಸಮಗ್ರ ಆರ್ಥಿಕ ಹಾಗೂ ವಾಣಿಜ್ಯ ಒಪ್ಪಂದವನ್ನಾಗಲೀ ಮತ್ತು ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳಬಾರದು. ಅಮೇರಿಕ ವಿಧಿಸಿರುವ ಶೇ.೨೫ ರಷ್ಟು ಆಮದು ಸುಂಕವನ್ನು ಪ್ರತಿಭಟಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಯುಕ್ತ ಕಿಸಾನ್ ಮೋರ್ಚಾ, ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಆಗ್ರಹಿಸಿ ಇಂದು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿ ದ್ರೌಪದಿ ಮುರ್ಮುರವರಿಗೆ ಮನವಿ ಸಲ್ಲಿಸಿದರು.

    ಯುನೈಟೆಡ್ ಕಿಂಗ್‌ಡಮ್ ಜೊತೆಗಿನ ಸಮಗ್ರ ಹಾಗೂ ವಾಣಿಜ್ಯ ಒಪ್ಪಂದವು ಹೈನುಗಾರಿಕೆ, ತರಕಾರಿಗಳು ಮತ್ತು ಹಣ್ಣುಗಳು ಸೇರಿದಂತೆ ಸಂಸ್ಕರಿತ ಆಹಾರಗಳ ಆಮದನ್ನು ಹೆಚ್ಚಿಸುತ್ತದೆ. ಇದು ಭಾರತದಲ್ಲಿ ಆಹಾರ ಸಂಸ್ಕರಣೆಯಲ್ಲಿ ವಿದೇಶಿ ನೇರ ಹೂಡಿಕೆ ಹೆಚ್ಚಳಕ್ಕೆ ಕಾರಣವಾಗಿ ದೇಶದ ರೈತರ ಗಳಿಕೆ ಮತ್ತು ಸಣ್ಣ ಕೃಷಿ ವ್ಯಾಪಾರ ಸಂಸ್ಥೆಗಳ ಗಳಿಕೆಯನ್ನು ಇದರಿಂದಾಗಿ ಗಣನೀಯವಾಗಿ ಕಡಿಮೆಯಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

    ಕುಲಾಂತರಿ ತಳಿಗಳ ಬೆಳೆಗಳು ಆಹಾರಗಳು, ಆಹಾರ ಧಾನ್ಯಗಳು, ಸೋಯಾ, ಜೋಳ, ಹತ್ತಿ ಇತ್ಯಾದಿಗಳನ್ನು ಬೃಹತ್ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲು ಅಮೇರಿಕಾದೊಂದಿಗೆ ಮಾತುಕತೆ ನಡೆಯುತ್ತಿದ್ದು, ಇದು ಭಾರತದ ಆರ್ಥಿಕತೆಗೆ ಅನಿಯಂತ್ರಿತವಾಗಿ ಬಹು ರಾಷ್ಟ್ರೀಯ ಕಂಪನಿಗಳ ಪ್ರವೇಶವನ್ನು ಉತ್ತೇಜಿಸಲಾಗುತ್ತದೆ. ಇದನ್ನು ಕೂಡಲೇ ನಿಲ್ಲಿಸಿ ಏಕಪಕ್ಷೀಯವಾಗಿ ಅಮೇರಿಕ ಭಾರತದ ಮೇಲೆ ವಿಧಿಸಿರುವ ಶೇ. ೨೫ ರಷ್ಟು ಆಮದು ಸುಂಕವು ದೇಶದ ಸಾರ್ವಭೌಮತೆಗೆ ಗಂಭೀರ ಆಕ್ರಮಣವಾಗಿದ್ದು, ಕೂಡಲೇ ಭಾರತ ಸರ್ಕಾರ ಇದನ್ನು ವಿರೋಧಿಸುವಂತೆ ಒತ್ತಾಯಿಸಿದ್ದಾರೆ.

    ಎನ್‌ಪಿಎಫ್‌ಎಎಂ ಹಾಗೂ ಎನ್‌ಸಿಪಿಗಳನ್ನು ರದ್ದುಪಡಿಸಲು ಆಗ್ರಹಿಸಿ ಕೇಂದ್ರ ಸರ್ಕಾರ ಪರಿಚಯಿಸಿರುವ ಕೃಷಿ ಮಾರುಕಟ್ಟೆ ಕುರಿತ ರಾಷ್ಟ್ರೀಯ ನೀತಿ ಚೌಕಟ್ಟು ಮೂಲಭೂತವಾಗಿ ಎಪಿಎಂಸಿ ಆಧುನೀಕರಣ, ಆಹಾರ ಧಾನ್ಯ ನಿರ್ವಹಣೆ, ಆಹಾರ ದಾಸ್ತಾನು ಮತ್ತು ಆಹಾರ ಸಂಸ್ಕರಣೆಯಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ ಖಾಸಗಿ ಬಂಡವಾಳವನ್ನು ಉತ್ತೇಜಿಸುವ ನೀತಿಯಾಗಿದೆ ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

    ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಬಲಪಡಿಸಬೇಕು, ಕೋಮುವಾದಿ ಹಾಗೂ ವಿಚಿತ್ರಕಾರಿ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ತಡೆಯಬೇಕು. ಶಾಂತಿ ಸೌಹಾರ್ಧತೆ ಬಲಗೊಳ್ಳಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಡಿ.ಆರ್. ದುಗ್ಗಪ್ಪಗೌಡ, ರಾಜ್ಯ ಉಪಾಧ್ಯಕ್ಷ ಎಂ. ಮಹೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೃಷಭರಾಜ್, ಜಿಲ್ಲಾ ಸಂಚಾಲಕ ಸವಿಂಜಯ್ ಜೈನ್, ಮುಖಂಡರಾದ ಓಂಕಾರಪ್ಪ, ಹೆಚ್.ಆರ್. ಬಸವರಾಜಪ್ಪ, ಯು.ಡಿ. ಅಣ್ಣೇಗೌಡ, ಸಂತೋಷ್ ಹಗ್ಡೆ, ಸುದರ್ಶನ್ ಮತ್ತಿತರರು ಉಪಸ್ಥಿತರಿದ್ದರು

    Farmers’ association appeals to not sign trade deal with America

  • ರಸ್ತೆ ಗುಂಡಿಮುಚ್ಚಲು ಆಗ್ರಹಿಸಿ ಬಿಜೆಪಿ-ಜೆಡಿಎಸ್ ಜೋಳದಾಳ್‌ನಲ್ಲಿ ಪ್ರತಿಭಟನೆ

    ರಸ್ತೆ ಗುಂಡಿಮುಚ್ಚಲು ಆಗ್ರಹಿಸಿ ಬಿಜೆಪಿ-ಜೆಡಿಎಸ್ ಜೋಳದಾಳ್‌ನಲ್ಲಿ ಪ್ರತಿಭಟನೆ

    ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಅತಿ ಹೆಚ್ಚು ಮಳೆ ಬಿದ್ದ ಪರಿಣಾಮ ರಸ್ತೆಗಳು ಗುಂಡಿಗಳಿಂದ ಕೂಡಿದ್ದು, ಕೂಡಲೇ ರಸ್ತೆಗಳನ್ನು ದುರಸ್ಥಿಪಡಿಸಬೇಕೆಂದು ಆಗ್ರಹಿಸಿ ಇಂದು ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರು ಜೋಳದಾಳ್ ವೃತ್ತದಲ್ಲಿ ಬಾಳೆಗಿಡ ನೆಟ್ಟು ರಸ್ತೆತಡೆ ನಡೆಸಿ ವಿನೂತನ ಪ್ರತಿಭಟನೆ ನಡೆಸಿದರು.

    ಬಿಜೆಪಿ ಆಲ್ದೂರು ಮಂಡಲ ಹಾಗೂ ಜೆಡಿಎಸ್ ಪಕ್ಷದ ವತಿಯಿಂದ ಇಂದು ರಸ್ತೆ ಗುಂಡಿ ಮುಚ್ಚುವಂತೆ ಆಗ್ರಹಿಸಿ ಸರ್ಕಾರದ ಗಮನ ಸೆಳೆಯಲು ಆಯೋಜಿಸಲಾಗಿದ್ದ ರಸ್ತೆ ತಡೆ ಪ್ರತಿಭಟನೆಯಲ್ಲಿ ನೂರಾರು ಗ್ರಾಮಸ್ಥರು ಹಾಗೂ ಕಾರ್ಯಕರ್ತರು ಭಾಗವಹಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹಾಗೂ ಪರಾಜಿತ ಅಭ್ಯರ್ಥಿ ದೀಪಕ್ ದೊಡ್ಡಯ್ಯ ಸರ್ಕಾರ ಬಂದು ಎರಡೂವರೆ ವರ್ಷಗಳಾದರೂ ರಸ್ತೆಗಳ ಗುಂಡಿ ಮುಚ್ಚಿಲ್ಲ. ಶೀಘ್ರವೇ ರಸ್ತೆಗಳ ಗುಂಡಿಯನ್ನು ಮುಂಚಿ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿದ ಅವರು, ಅಭಿವೃದ್ಧಿಯಲ್ಲಿ ಶೂನ್ಯ ಸಾಧನೆ ಎಂದು ಆರೋಪಿಸಿದರು.

    ಶಾಸಕರು ಮತ್ತು ಜಿಲ್ಲಾ ಸಚಿವರು ಕ್ಷೇತ್ರ ಪ್ರವಾಸ ಕೈಗೊಂಡು ಜನಸಾಮಾನ್ಯರು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಬೇಕು. ಇನ್ನು ೧೫ ದಿನಗಳೊಳಗೆ ರಸ್ತೆಗಳನ್ನು ಅಭಿವೃದ್ಧಿಪಡಿಸದಿದ್ದರೆ ಇಡೀ ಕ್ಷೇತ್ರ ಬಂದ್ ಮಾಡಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

    ಪಂಚ ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಜನಪರ ಆಡಳಿತ ನೀಡುವಲ್ಲಿ ವಿಫಲವಾಗಿ ಮತದಾರರಿಗೆ ಮೋಸ ಮಾಡುತ್ತಿದೆ. ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಜೊತೆಗೆ ಕಾಡುಪ್ರಾಣಿಗಳ ದಾಳಿಯಿಂದ ಜನಸಾಮಾನ್ಯರು ತತ್ತರಿಸಿದ್ದು, ಜೀವ ಭಯದಲ್ಲಿದ್ದಾರೆಂದರು.

    ಪರಿಶಿಷ್ಟ ಜಾತಿ, ಪಂಗಡದ ಪರವಾಗಿ ಇದೆ ಎಂದು ಹೇಳುವ ಸರ್ಕಾರ ಎಸ್‌ಸಿ, ಟಿಎಸ್‌ಪಿ ೩೯ ಸಾವಿರ ಕೋಟಿ ರೂಗಳನ್ನು ಅನ್ಯ ಉದ್ದೇಶಕ್ಕೆ ಬಳಸಲಾಗಿದೆ. ಇದು ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ಗೆ ಮಾಡಿದ ಅವಮಾನ. ದಲಿತರು ಮತ್ತು ಹಿಂದುಳಿದವರಿಗೆ ಮಾಡಿದ ಅಪಮಾನ ಎಂದು ಆರೋಪಿಸಿದರು.

    ಜೆಡಿಎಸ್-ಬಿಜೆಪಿ ಒಗ್ಗೂಡಿದರೆ ರಾಜ್ಯದಲ್ಲಿ ಯಾವ ಶಕ್ತಿಯೂ ತಡೆಯಲು ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಿ.ಟಿ. ರವಿ, ಎಂ.ಕೆ. ಪ್ರಾಣೇಶ್ ಉತ್ತಮ ಆಡಳಿತ ನಡೆಸಿದ್ದಾರೆ ಎಂದು ಶ್ಲಾಘಿಸಿದರು.

    ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಡಿ.ಜೆ ಸುರೇಶ್ ಮಾತನಾಡಿ, ರಸ್ತೆಗಳು ಗುಂಡಿಬಿದ್ದು ಅಪಘಾತ ಸೃಷ್ಟಿಸುವತ್ತ ಪರಿವರ್ತನೆಯಾಗಿರುವುದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಸರ್ಕಾರ ಪರ್ಸೆಂಟೇಜ್‌ನಲ್ಲಿ ತೊಡಗಿರುವುದರಿಂದ ಅಭಿವೃದ್ಧಿಯಲ್ಲಿ ಶೂನ್ಯವಾಗಿದೆ ಎಂದು ದೂರಿದರು. ಸರ್ಕಾರ ಮತ್ತು ಅರಣ್ಯ ಇಲಾಖೆ ಕಾಡುಪ್ರಾಣಿಗಳ ಹಾವಳಿ ತಡೆಯುವಲ್ಲಿ ವಿಫಲವಾಗಿವೆ ಎಂದು ಆರೋಪಿಸಿದರು.

    ಬಿಜೆಪಿ ಮಂಡಲ ಅಧ್ಯಕ್ಷ ರವಿಬಸರವಳ್ಳಿ ಮಾತನಾಡಿ, ಗುಂಡಿಯಲ್ಲಿ ರಸ್ತೆ ಹುಡುಕುವ ಕೆಲಸ ನಡೆಯುತ್ತಿದ್ದು, ಇದರಿಂದ ಕೂಡಲೇ ಮುಕ್ತಿನೀಡಿ ಜನಸಾಮಾನ್ಯರ ಸಂಚಾರಕ್ಕೆ ಅನುಕೂಲ ಮಾಡಬೇಕೆಂದು ಆಗ್ರಹಿಸಿದರು. ಜಿಲ್ಲಾ ಉಸ್ತುವಾರಿ ಸಚಿವರು ಎಲಿಕ್ಯಾಪ್ಟರ್‌ನಲ್ಲಿ ಓಡಾಡುತ್ತಿರುವುದರಿಂದ ರಸ್ತೆಗಳ ದುಸ್ಥಿತಿ ಅವರಿಗೆ ಅರ್ಥವಾಗುತ್ತಿಲ್ಲ. ರಸ್ತೆಗಳಲ್ಲಿ ಓಡಾಡಿದರೆ ಮಾತ್ರ ಅದರ ಅರಿವಾಗುತ್ತದೆ. ದುರಸ್ಥಿ ವಿಳಂಭವಾದರೆ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.

    ಈ ಸಂದರ್ಭದಲ್ಲಿ ಬಿಜೆಪಿ ಆವುತಿ ಹೋಬಳಿ ಅಧ್ಯಕ್ಷ ಕೆರಮಕ್ಕಿ ಮಹೇಶ್, ಗ್ಯಾರಂಟಿ ಯೋಜನೆ ಹೆಸರನ್ನು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳು ಕಳೆದರು ಅಧಿಕಾರಕ್ಕೆ ಬಂದಿರುವ ಸಂಭ್ರಮಾಚರಣೆಯಲ್ಲಿಯೇ ತೊಡಗಿದ್ದು, ಇದುವರೆಗೂ ಯಾವುದೇ ರೀತಿಯ ಅಭಿವೃದ್ಧಿಯನ್ನು ಮಾಡಿಲ್ಲ ಎಂದರು.

    ಭಾರತೀಯ ಜನತಾ ಪಕ್ಷ ಹಾಗೂ ಜೆಡಿಎಸ್ ಪಕ್ಷ ರಾಜ್ಯದಲ್ಲಿ ಒಗ್ಗಟ್ಟಿನಿಂದ ಕೆಲಸವನ್ನು ಮಾಡುತ್ತಿದೆ, ನಮ್ಮ ಹೋರಾಟ ಆರಂಭವಾಗಿದ್ದು ಮುಂದಿನ ದಿನಗಳಲ್ಲಿ ಆಲ್ದೂರು-ಬಾಳೊಹೊನ್ನೂರು ರಸ್ತೆಯಲ್ಲಿರುವ ಪ್ರತಿಯೊಂದು ಗುಂಡಿಗಳಿಗೂ ಒಂದೊಂದು ಹೆಸರುಗಳನ್ನಿಟ್ಟು ಸರಣಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

    ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಗಳಿಗೆ ಅನುದಾನ ನೀಡುತ್ತಿಲ್ಲ, ಗ್ರಾಮ ಪಂಚಾಯಿತಿಗಳು ನಿಷ್ಕ್ರಿಯಗೊಂಡಿವೆ, ಇದೇ ರೀತಿಯ ಇನ್ನೂ ಅನೇಕ ಸಮಸ್ಯೆಗಳಿಗೆ ಕಾಂಗ್ರೆಸ್ ಸರ್ಕಾರ ಸ್ಪಂದಿಸುತ್ತಿಲ್ಲ, ಗ್ಯಾರಂಟಿ ಯೋಜನೆಯ ಮೂಲಕ ಅಧಿಕಾರಕ್ಕೆ ಬಂದಿರುವ ಅವರು ಗ್ಯಾರಂಟಿ ಯೋಜನೆಗಳ ಜೊತೆಯಲ್ಲಿ, ಮೂಲಭೂತ ಸೌಕರ್ಯಗಳನ್ನು ನೀಡುವಂತೆ ಈ ಮೂಲಕ ಸರ್ಕಾರಕ್ಕೆ ತಿಳಿಸಿದರು.

    ಬಿಜೆಪಿ ಮುಖಂಡರುಗಳಾದ ಪ್ರಸನ್ನ, ಬೂತನಕಾಡು ನಾಗೇಶ್, ಎನ್.ಎಂ.ಮಂಜುನಾಥ್, ಬೈಗೂರು ನಾಗೇಶ್, ಮೈಲಿಮನೆ ಕೃಷ್ಣಮೂರ್ತಿ, ಕುರುವಂಗಿ ವೆಂಕಟೇಶ್, ರವೀಂದ್ರ, ಅರವಿಂದ, ಸುಮಂತ್, ಭವ್ಯ ನಟೇಶ್, ಜ್ಯೋತಿ ಸುರೇಶ್, ಜೆಡಿಎಸ್‌ನ ಹೆಚ್.ಎನ್ ಕೃಷ್ಣೇಗೌಡ, ಸತೀಶ್, ರುದ್ರೇಗೌಡ, ನಂದನ್, ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

    BJP-JDS protest in Jholdal demanding closure of road

  • ಕಣ್ಣು-ಹಲ್ಲುಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ

    ಕಣ್ಣು-ಹಲ್ಲುಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ

    ಚಿಕ್ಕಮಗಳೂರು: – ಕಣ್ಣು ಹಾಗೂ ಹಲ್ಲುಗಳು ಮನುಷ್ಯನ ವೃದ್ದಾಪ್ಯದಲ್ಲಿ ಬರುವಂಥ ಕಾ ಯಿಲೆಗಳಾಗಿದ್ದು, ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ವಹಿಸಿದರೆ ಶರೀರವು ಅನಾರೋಗ್ಯಕ್ಕೆ ತುತ್ತಾಗಲಿದೆ ಎಂದು ನೇಚ ರ್ ಕನ್ಸರ್‌ವೇಷನ್ ಟ್ರಸ್ಟ್ ಅಧ್ಯಕ್ಷ ಡಾ|| ಕೆ.ಸುಂದರಗೌಡ ಎಚ್ಚರಿಕೆ ನೀಡಿದರು.

    ನಗರದ ನೆಹರು ರಸ್ತೆಯ ಆರ್ಯ ನಯನಜ ಶ್ರೀರಾಮಮಂದಿರ ಸವಿತಾ ಸಮಾಜದ ಸಭಾಂಗಣದಲ್ಲಿ ಪ್ರಸಾದ್ ನೇತ್ರಾಲಯ, ಆರ್ಯ ನಯನಜ ಸವಿತಾ ಸಮಾಜ, ಲಯನ್ಸ್ ಕ್ಲಬ್, ನೇಚರ್ ಕನ್ಸರ್‌ವೇಷನ್ ಟ್ರಸ್ಟ್ ವತಿಯಿಂದ ಮಂಗಳವಾರ ಏರ್ಪಡಿಸಿದ್ಧ ಉಚಿತ ಕಣ್ಣು, ದಂತ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಮಾನವನ ದೇಹದ ಬಹುಮಖ್ಯ ಅಂಗಾಂಗಳಾದ ಕಣ್ಣು, ಹಲ್ಲುಗಳನ್ನು ಕಾಪಾಡಲು ಪ್ರತಿಯೊಬ್ಬರು ಕಾಳಜಿ ವಹಿಸಬೇಕು. ಕನಿಷ್ಟ ಆರು ತಿಂಗಳಿಗೊಮ್ಮೆ ನೇತ್ರ, ದಂತಗಳ ತಪಾಸಣೆಗೆ ಒಳಪಡಿಸಿದರೆ ಸುರಕ್ಷಿತ ವಾಗಿ ರಕ್ಷಿಸಿಕೊಳ್ಳಲು ಸಾಧ್ಯವಾಗಿದ್ದು ಈ ಬಗ್ಗೆ ಅಸಡ್ಡೆ ತೋರಬಾರದು ಎಂದು ತಿಳಿಸಿದರು.

    ಇತ್ತೀಚಿನ ದಿನಗಳಲ್ಲಿ ಹಲ್ಲುಗಳ ಬಗ್ಗೆ ಕಾಳಜಿ ವಹಿಸದ ಕಾರಣ ಯುವಪೀಳಿಗೆಯಲ್ಲೂ ಹಲ್ಲಿನ ಬಾಧೆ ಗಳು ಹೆಚ್ಚಳಗೊಳ್ಳುತ್ತಿವೆ. ಜೊತೆಗೆ ಬಾಲ್ಯಾವಸ್ಥೆಯಲ್ಲೇ ಮಕ್ಕಳಿಗೆ ದಂತದ ಬಗ್ಗೆ ಪಾಲಕರು ಮುತುವರ್ಜಿ ಹಾಗೂ ಸುರಕ್ಷತೆ ವಹಿಸದ ಕಾರಣ ಸಣ್ಣ ವಯಸ್ಸಿನಲ್ಲೇ ಹಲ್ಲುಗಳನ್ನು ಕಳೆದುಕೊಳ್ಳುವ ಸ್ಥಿತಿ ನಿರ್ಮಾಣ ವಾಗುತ್ತಿದೆ ಎಂದರು.

    ಆರ್ಯ ನಯನಜ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಮಹಾಲಿಂಗಪ್ಪ ಮಾತನಾಡಿ ಆರ್ಥಿಕ ಸಂಕಷ್ಟ ದಿಂದ ಬಳಲುತ್ತಿರುವ ನಾಗರೀಕರಿಗೆ ನೇತ್ರ, ಹಲ್ಲು ಮತ್ತು ಶಸ್ತ್ರತಪಾಸಣೆ ನಡೆಸುವ ಮೂಲಕ ಸಾರ್ವಜನಿಕರ ಆರೋಗ್ಯವನ್ನು ಕಾಪಾಡಲು ಉಚಿತ ಶಿಬಿರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

    ಇತ್ತೀಚೆಗೆ ಮಕ್ಕಳ ಪಾಲನೆ, ಸಂಸಾರ ನಿರ್ವಹಣೆಯಲ್ಲಿ ಮನೆಯ ಹಿರಿಯರು ಸ್ವಂತ ಆರೋಗ್ಯದ ಬಗ್ಗೆ ಗಮನಹರಿಸುತ್ತಿಲ್ಲ. ಇದರಿಂದ ಅನಾರೋಗ್ಯ ಕಾಡುವ ಮೂಲಕ ಭವಿಷ್ಯದಲ್ಲಿ ಬಹುದೊಡ್ಡ ಸಮಸ್ಯೆ ಎದು ರಾಗಲಿದೆ. ಆದ್ದರಿಂದ ಅಲ್ಲಲ್ಲಿ ನಡೆಯುವ ಉಚಿತ ಶಿಬಿರದಲ್ಲಿ ಪಾಲ್ಗೊಳ್ಳಬೇಕು ಎಂದರು

    ಆರ್ಯ ನಯನಜ ಶ್ರೀರಾಮಮಂದಿರ ಸವಿತಾ ಸಮಾಜದ ಅಧ್ಯಕ್ಷ ಸಿ.ಎಂ.ಯೋಗೀಶ್ ಮಾತನಾಡಿ ಇಂದಿನ ಶಿಬಿರದಲ್ಲಿ ಒಟ್ಟು ೭೦ಕ್ಕೂ ಹೆಚ್ಚು ಮಂದಿ ಭಾಗವಹಿಸಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಒಟ್ಟಾರೆ ಸಾರ್ವಜ ನಿಕರ ಆರೋಗ್ಯ ದೃಷ್ಟಿಯಿಂದ ಶಿಬಿರಗಳನ್ನು ನಡೆಸಿ ಸ್ಪಂದಿಸುವ ಕಾರ್ಯ ಮಾಡಲಾಗಿದೆಎಂದು ಹೇಳಿದರು.

    ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಕುಮಾರ್, ಆರ್ಯ ನಯನಜ ಶ್ರೀರಾಮಮಂದಿರ ಸವಿತಾ ಸಮಾಜದ ಯುವವೇದಿಕೆ ಅಧ್ಯಕ್ಷ ಧನರಾಜ್, ಪ್ರಧಾನ ಕಾರ್ಯದರ್ಶಿ ಡಿ.ಶೇಷಾದ್ರಿ, ಖಜಾಂಚಿ ಎನ್.ಗಿರೀ ಶ್, ಸಮಾಜದ ಮುಖಂಡರುಗಳಾದ ನಾರಾಯಣ್, ಲಕ್ಷ್ಮೀಕಾಂತ್, ಲತೇಶ್, ಸಿ.ಶಿವಣ್ಣ, ಕೆ.ಟಿ.ಕೃಷ್ಣಮೂ ರ್ತಿ, ಎನ್.ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.

    Take special care of your eyes and teeth.

  • ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಆಶಾಕಾರ್ಯಕರ್ತೆಯರ ಪ್ರತಿಭಟನೆ

    ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಆಶಾಕಾರ್ಯಕರ್ತೆಯರ ಪ್ರತಿಭಟನೆ

    ಚಿಕ್ಕಮಗಳೂರು: ಮುಖ್ಯಮಂತ್ರಿಗಳು ಘೋಷಿಸಿದ ರಾಜ್ಯಸರ್ಕಾರದ ಗೌರವಧನ ಮತ್ತು ಕೇಂದ್ರದ ಭಾಗಶಃ ಪ್ರೋತ್ಸಾಹ ಧನ ಸೇರಿಸಿ ಮಾಸಿಕ ೧೦ ಸಾವಿರ ರೂ ಗ್ಯಾರಂಟಿಗೊಳಿಸುವ ಆದೇಶವನ್ನು ಏಪ್ರಿಲ್‌ನಿಂದ ಅನ್ವಯವಾಗುವಂತೆ ಆದೇಶ ಹೊರಡಿಸಿ ಗೌರವಧನ ನೀಡಬೇಕೆಂದು ಒತ್ತಾಯಿಸಿ ಇಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಶಾಖೆ ಆಜಾದ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

    ಜಿಲ್ಲೆಯಾದ್ಯಂತ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು ೫೦೦ ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ನಗರದ ಆಜಾದ್ ವೃತ್ತದಲ್ಲಿ ಸಮಾವೇಶಗೊಂಡು ಪ್ರತಿಭಟನೆ ನಡೆಸಿದರು. ನಂತರ ಅಪರ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ ಅವರಿಗೆ ಮನವಿ ಸಲ್ಲಿಸಿ ಕೂಡಲೇ ನಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.

    ರಾಜ್ಯ ಬಜೆಟ್‌ನಲ್ಲಿ ಎಲ್ಲಾ ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸಿದಂತೆ ಆಶಾ ಕಾರ್ಯಕರ್ತೆಯರಿಗೂ ೧ ಸಾವಿರ ರೂ ಪ್ರೋತ್ಸಾಹಧನ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿದರು. ಜನಸಂಖ್ಯೆಯ ಮಿತಿ, ಅವೈಜ್ಞಾನಿಕ ಮೌಲ್ಯಮಾಪನ ಶಿಕ್ಷಣದ ಹೆಸರಿನಲ್ಲಿ ಆಶಾ ಕಾರ್ಯಕರ್ತೆಯರನ್ನು ಕೈಬಿಡಲು ಹುನ್ನಾರ ನಡೆಸುತ್ತಿರುವ ಆದೇಶವನ್ನು ಕೈಬಿಡಬೇಕೆಂದು ಆಗ್ರಹಿಸಿದರು.

    ಸಂಘದ ಜಿಲ್ಲಾಧ್ಯಕ್ಷೆ ತಾರಾಕೃಷ್ಣ ಮಾತನಾಡಿ, ಸರ್ಕಾರ ಕೊಟ್ಟ ಮಾತಿನಂತೆ ಆಶಾ ಕಾರ್ಯಕರ್ತೆಯರಿಗೆ ೧೦ ಸಾವಿರ ರೂ ಗೌರವ ಧನ ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. ಬೇಡಿಕೆಗಳನ್ನು ತಕ್ಷಣವೇ ಈಡೇರಿಸದಿದ್ದರೆ ಇಂದು ಜಿಲ್ಲಾಮಟ್ಟದಲ್ಲಿ ಮುಂದೆ ರಾಜ್ಯಮಟ್ಟದಲ್ಲಿ ಪ್ರತಿಭಟನೆ ನಡೆಸಲು ಆಶಾ ಕಾರ್ಯಕರ್ತೆಯರು ಮುಂದಾಗುವುದಾಗಿ ಎಚ್ಚರಿಸಿದ ಅವರು, ಇಂದು ರಾಜ್ಯದ ೩೧ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸಲಾಗುವುದೆಂದು ಹೇಳಿದರು.

    ಕಳೆದ ವರ್ಷ ಬೆಂಗಳೂರಿನ ಸ್ವತಂತ್ರ ಮೈದಾನದಲ್ಲಿ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಆಗಮಿಸಿದ್ದ ಮುಖ್ಯಮಂತ್ರಿಗಳು ಇನ್ನೊಂದು ತಿಂಗಳಲ್ಲಿ ನಿಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದು, ಇದೂವರೆಗೂ ಕಾರ್ಯರೂಪಕ್ಕೆ ತಂದಿಲ್ಲ ಎಂದು ದೂರಿದರು.

    ಸಮಾಜ ಸೇವಕಿ ರಾಧಾಸುಂದ್ರೇಶ್ ಮಾತನಾಡಿ, ಆಶಾ ಕಾರ್ಯಕರ್ತೆರು ಮಾಡಿದ ಕೆಲಸಕ್ಕೆ ಸಮಾನಾಗಿ ವೇತನ ಕೊಡಿ ಎಂದು ಕೇಳುತ್ತಿದ್ದಾರೆ. ನ್ಯಾಯಯುತವಾಗಿರುವ ಅವರ ಬೇಡಿಕೆಗಳನ್ನು ಕೂಡಲೇ ಸರ್ಕಾರ ಇತ್ಯರ್ಥಪಡಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು. ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಈ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿದ ಅವರು, ಸರ್ಕಾರ ನುಡಿದಂತೆ ನಡೆಯಬೇಕೆಂದು ಹೇಳಿದರು.

    ಈ ಸಂದರ್ಭದಲ್ಲಿ ಎಐಟಿಯುಸಿ ಮುಖಂಡ ಶಿವಪ್ರಕಾಶ್, ಜಿಲ್ಲಾ ಕಾರ್ಯದರ್ಶಿ ಮೈನಾ, ಸಂಘದ ತಾಲ್ಲೂಕು ಅಧ್ಯಕ್ಷರುಗಳಾದ ಜ್ಯೋತಿ, ಗೀತಾ, ವಿಮಲಾಕ್ಷಿ.ಬಿ, ಗಾಯತ್ರಿ, ಪವಿತ್ರ, ನಿರ್ಮಲ, ರತ್ನಮ್ಮ, ಸಾವಿತ್ರಿ, ಪ್ರೇಮ, ರೇಷ್ಮ, ಶ್ರೀಲತ, ಆಶಾ, ರೇಣುಕ, ನಂದಿನಿ, ಶೀಲಾ, ನಾಗಮ್ಮ, ನಳಿನ, ಚಂದ್ರಿಕ, ಶಾಂತ, ಮಂಜುಳ, ಲಾವಣ್ಯ, ಮಾಲತಿ, ಕನ್ನಡ ಸೇನೆ ಅಧ್ಯಕ್ಷ ರಾಜೇಗೌಡ, ದಾಸರಹಳ್ಳಿ ಕೃಷ್ಣಪ್ಪ, ಮತ್ತಿತರರು ಇದ್ದರು.

    ASHA workers protest demanding fulfillment of various demands