Category: ಚಿಕ್ಕಮಗಳೂರು ನಗರ

  • ಜಿಲ್ಲೆಯಲ್ಲಿ ಪೋಷಣ ಅಭಿಯಾನ ಆರಂಭ

    ಜಿಲ್ಲೆಯಲ್ಲಿ ಪೋಷಣ ಅಭಿಯಾನ ಆರಂಭ

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ಇಂದಿನಿಂದ ೧೫ ದಿನಗಳ ಕಾಲ ಪೋಷಣ ಅಭಿಯಾನ ಯೋಜನೆಯಲ್ಲಿ ವಿವಿಧ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಹೇಳಿದರು.

    ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಇಂದು ನಡೆದ ಪೋಷಣ ಪಕ್ವಾಡ ಕಾರ್ಯಕ್ರಮದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಸರ್ಕಾರಿ ಕಾರ್ಯಕ್ರಮಗಳನ್ನು ಬಹಳ ಪರಿಣಾಮಕಾರಿಯಾಗಿ ಹಾಗೂ ವ್ಯವಸ್ಥಿತವಾಗಿ ರೂಪಿಸಿ ಹೆಚ್ಚು ಜನರಿಗೆ ತಲುಪುವಂತೆ ಅನುಷ್ಠಾನಗೊಳಿಸಲು ಅಧಿಕಾರಿಗಳು ಕ್ರಮ ವಹಿಸಬೇಕು ಎಂದ ಅವರು, ಪೋಷಣ ಅಭಿಯಾನ ಯೋಜನೆಯು ಕೇಂದ್ರ ಪುರಸ್ಕೃತ ಯೋಜನೆಯಾಗಿದೆ. ರಾಷ್ಟ್ರಾದ್ಯಂತ ಅನುಷ್ಠಾನಗೊಳ್ಳುತ್ತಿರುವ ಈ ಯೋಜನೆ ಕೇವಲ ಫಲಾನುಭವಿಗಳಿಗೆ ಸೀಮಿತಗೊಳ್ಳದೆ,

    ಮಾಹಿತಿ, ಶಿಕ್ಷಣ, ಸಂವಹನ ಮೂಲಕ ಜನಾಂದೋಲನ ಹಾಗೂ ಸಮುದಾಯ ಆಧಾರಿತ ಚಟುವಟಿಕೆಗಳನ್ನು ವಿವಿಧ ವೇದಿಕೆಗಳಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಸಮುದಾಯದ ಪ್ರತಿಯೊಬ್ಬರಿಗೂ ಆರೋಗ್ಯ ಹಾಗೂ ಪೌಷ್ಟಿಕತೆಯ ಮಹತ್ವದ ಅರಿವು ನೀಡುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

    ಸಮಗ್ರ ಶಿಶು ಅಭಿವೃದ್ಧಿ ಯೋಜನೆಯು ೦-೬ ವರ್ಷದ ಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ಮತ್ತು ಕಿಶೋರಿಯರ ಪೌಷ್ಟಿಕತೆಯ ಸ್ಥಿತಿಯನ್ನು ನಿರ್ದಿಷ್ಟ ಅವಧಿಗೆ ಅನುಗುಣವಾಗಿ ಸುಧಾರಣೆಗೊಳ್ಳುವಂತೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದ್ದು, ಒಟ್ಟಾರೆ ದಿನನಿತ್ಯದ ಆರೋಗ್ಯ ಹಾಗೂ ಪೌಷ್ಟಿಕತೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ಕೈಗೊಳ್ಳುವುದರಿಂದ ಧನಾತ್ಮಕ ಬದಲಾವಣೆಗಳೊಂದಿಗೆ ಜೀವನಮಟ್ಟ ಸುಧಾರಣೆಯಾಗಲಿದೆ.

    ಮಕ್ಕಳಲ್ಲಿನ ರಕ್ತಹೀನತೆ, ಮಹಿಳೆಯರು ಮತ್ತು ಹದಿಹರೆಯದ ಹೆಣ್ಣು ಮಕ್ಕಳಲ್ಲಿನ ರಕ್ತಹೀನತೆಯನ್ನು ಹಾಗೂ ಕಡಿಮೆ ತೂಕದ ಜನನ ಪ್ರಮಾಣವನ್ನು ಸಂಪೂರ್ಣ ಕಡಿಮೆಗೊಳಿಸುವುದು ಬಹಳ ಮುಖ್ಯ ಎಂದ ಜಿಲ್ಲಾಧಿಕಾರಿಗಳು, ಈ ಯೋಜನೆಯ ಯಶಸ್ಸಿಗೆ ವಿವಿಧ ಇಲಾಖೆಗಳ ಸಮನ್ವಯತೆ ಮುಖ್ಯವಾಗಿದ್ದು, ಈ ಬಗ್ಗೆ ಅರಿವು ಮೂಡಿಸಲು ಮುಂದಾಗಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

    ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹೆಚ್.ಎಸ್.ಕೀರ್ತನಾ, ಡಾ.ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಮಹಾಂತೇಶ್ ಭಜಂತ್ರಿ, ವಿವಿಧ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.

    Nutrition campaign begins in the district

  • ೩೧ ಕೋಟಿ ರೂ ವೆಚ್ಚದಲ್ಲಿ ಸಖರಾಯಪಟ್ಟಣ-ದೇವನೂರು ಕ್ಷೇತ್ರ ಅಭಿವೃದ್ಧಿ

    ೩೧ ಕೋಟಿ ರೂ ವೆಚ್ಚದಲ್ಲಿ ಸಖರಾಯಪಟ್ಟಣ-ದೇವನೂರು ಕ್ಷೇತ್ರ ಅಭಿವೃದ್ಧಿ

    ಚಿಕ್ಕಮಗಳೂರು: ಸಖರಾಯಪಟ್ಟಣ ಹಾಗೂ ದೇವನೂರು ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳ ರಸ್ತೆ ಅಭಿವೃದ್ಧಿಗೆ ಸರ್ಕಾರ ೩೧ ಕೋಟಿ ರೂ ಅನುದಾನ ಮಂಜೂರು ಮಾಡಿದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ತಿಳಿಸಿದರು.

    ಅವರು ಇಂದು ಚಿಕ್ಕದೇವನೂರಿನಲ್ಲಿ ಏರ್ಪಡಿಸಲಾಗಿದ್ದ ನಾಗರಾಳು, ಚಿಕ್ಕದೇವನೂರು, ದೇವನೂರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿ ಮಾತನಾಡಿದರು.

    ಈ ಮೂರು ಪಂಚಾಯಿತಿಗಳಿಗೂ ತಲಾ ೪೦ ಲಕ್ಷ ರೂ ಅನುದಾನ ಬಿಡುಗಡೆಯಾಗಿದೆ. ಕಬಳಿ ಬಸ್ ತಂಗುದಾಣದಿಂದ ಗುಣಸಾಗರದವರೆಗೆ ೧.೭೫ ಕೋಟಿ ರೂ ವೆಚ್ಚದಲ್ಲಿ ಡಾಂಬರ್ ರಸ್ತೆ ನಿರ್ಮಾಣ ಮಾಡಲಾಗುವುದೆಂದು ಹೇಳಿದರು.

    ಈ ಭಾಗದ ಬಹುತೇಕ ಎಲ್ಲಾ ಕಾಮಗಾರಿಗಳು ಮುಂದಿನ ಮೂರು ತಿಂಗಳೊಳಗೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ ಅವರು, ಕಬಳಿ ಗ್ರಾಮದಲ್ಲಿ ಸುಮಾರು ೧೦ ಲಕ್ಷ ರೂ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ ಎಂದರು.

    ಎರಡು ಕೋಟಿ ರೂ ವೆಚ್ಚದಲ್ಲಿ ಚಂದ್ರಶೇಖರ್‌ಪುರದಿಂದ ಬಾಣಾವರ ರಸ್ತೆವರೆಗೆ, ೧ ಕೋಟಿ ರೂ ವೆಚ್ಚದಲ್ಲಿ ಚಿಕ್ಕಬಾಣಾವರ ರಸ್ತೆ ಅಭಿವೃದ್ಧಿಪಡಿಸಲಾಗುವುದು. ಒಟ್ಟಾರೆಯಾಗಿ ಈ ಮೂರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಹಳ್ಳಿಗಳಲ್ಲಿ ಸಮಗ್ರ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದೆಂದು ಹೇಳಿದರು.

    ರಾಜ್ಯ ಸರ್ಕಾರ ೫ ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ ೫೯ ಸಾವಿರ ಕೋಟಿ ರೂ ಖರ್ಚು ಮಾಡುವ ಮೂಲಕ ಅನುಷ್ಠಾನ ಮಾಡಿದೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೊತೆಗೂಡಿ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ಈ ಭಾಗದ ರೈತರ ಜೀವನಾಡಿಯಾಗಿರುವ ಕೆರೆ ತುಂಬಿಸುವ ಯೋಜನೆಗೆ ಎತ್ತಿನ ಹೊಳೆ ಮೂಲಕ ಬೆಳವಾಡಿ, ದೇವನೂರು ಕೆರೆ, ಮಾಚೇನಹಳ್ಳಿ ಕೆರೆ ಭರ್ತಿಯಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಹಿಂದಿನ ಸರ್ಕಾರದಲ್ಲಿ ಮಂಜೂರಾಗಿದ್ದ ಭದ್ರಾ ಉಪಕಣಿವೆ ಯೋಜನೆಗೆ ಮೂರನೇ ಹಂತದ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಅನುಮೋದನೆ ದೊರೆಯಲಿದೆ. ನಂತರ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳನ್ನು ಆಹ್ವಾನಿಸಿ ಮೂರನೇ ಹಂತದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಕೆರೆ ತುಂಬಿಸುವ ಯೋಜನೆ ಅಭಿವೃದ್ಧಿಗೆ ಬದ್ಧ ಎಂದು ಹೇಳಿದರು.

    ಬಿಜೆಪಿಯವರು ಜನಾಕ್ರೋಶ ಯಾತ್ರೆಯನ್ನು ಕೇಂದ್ರ ಸರ್ಕಾರದ ವಿರುದ್ಧ ಮಾಡಬೇಕು, ಗ್ಯಾಸ್ ದರ ಹೆಚ್ಚಳವಾಗಿರುವುದನ್ನು ಮರೆಮಾಚಲು ರಾಜ್ಯಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿದರು.

    ತೊಗರಿ ಬೇಳೆ, ಸಕ್ಕರೆ, ಅಡುಗೆ ಎಣ್ಣೆ ಸೇರಿದಂತೆ ಎಲ್ಲಾ ಗೃಹೋಪಯೋಗಿ ವಸ್ತುಗಳ ದರವನ್ನು ಹೆಚ್ಚಳ ಮಾಡಿರುವ ಕೇಂದ್ರ ಸರ್ಕಾರ ಬಡವರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಟೀಕಿಸಿದ ಅವರು, ನುಡಿದಂತೆ ನಡೆದ ರಾಜ್ಯ ಸರ್ಕಾರಕ್ಕೆ ಮಸಿ ಬಳಿಯುವ ಯತ್ನವನ್ನು ಬಿಜೆಪಿ ಅವರು ಮಾಡುತ್ತ ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆಂದು ದೂರಿದರು.

    ಈ ಸಂದರ್ಭದಲ್ಲಿ ಸಖರಾಯಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಡಿಮನೆ ಸತೀಶ್, ಮೂರೂ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮಸ್ಥರು, ಅಧಿಕಾರಿಗಳು ಉಪಸ್ಥಿತರಿದ್ದರು.

    Sakharayapattana-Devanoor area development at a cost of Rs. 31 crore

  • ಸೀತಾಳಯ್ಯನಗಿರಿ-ಮುಳ್ಳಯ್ಯನಗಿರಿ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧ

    ಸೀತಾಳಯ್ಯನಗಿರಿ-ಮುಳ್ಳಯ್ಯನಗಿರಿ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧ

    ಚಿಕ್ಕಮಗಳೂರು: ತಾಲ್ಲೂಕಿನ ಸೀತಾಳಯ್ಯನಗಿರಿಯಿಂದ ಮುಳ್ಳಯ್ಯನಗಿರಿವರೆಗಿನ ರಸ್ತೆಗೆ ಕಾಂಕ್ರೀಟೀಕರಣ ಹಾಗೂ ಮೋರಿ ನಿರ್ಮಾಣ ಕಾಮಗಾರಿ ನಡೆಯಲಿದ್ದು, ಈ ರಸ್ತೆಯಲ್ಲಿ ಎರಡು ತಿಂಗಳ ಕಾಲ ಎಲ್ಲಾ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.

    ಈ ರಸ್ತೆಯ ಭಾಗವು ಅತ್ಯಂತ ಕಿರಿದಾಗಿದ್ದು, ಪ್ರವಾಸಿ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ರಸ್ತೆಯಲ್ಲಿ ಸಂಚರಿಸುತ್ತಿರುವುದರಿಂದ ಪ್ರಸ್ತಾಪಿತ ರಸ್ತೆಯ ಅಗಲೀಕರಣ ಹಾಗೂ ಉನ್ನತೀಕರಣ ಅವಶ್ಯಕವಾಗಿದ್ದು, ಸೀತಾಳಯ್ಯನಗಿರಿಯಲ್ಲಿರುವ ದೇವಸ್ಥಾನದಿಂದ ಮುಳ್ಳಯ್ಯನಗಿರಿ ತುದಿಯವರೆಗೂ ಸಂಪರ್ಕಿಸುವ ರಸ್ತೆಯನ್ನು ಅಭಿವೃದ್ಧಿಪಡಿಸಬೇಕಾಗಿದೆ ಎಂದು ಉಪ ವಿಭಾಗಾಧಿಕಾರಿಗಳು ಸಲ್ಲಿಸಿದ ವರದಿ ಹಾಗೂ ಹೆಚ್ಚಾಗಿ ಏರಿಳಿತಗಳಿಂದ ಕೂಡಿರುವ ಈ ರಸ್ತೆಯಲ್ಲಿ ಪ್ರಸ್ತುತ ಮೋರಿ ನಿರ್ಮಾಣದಂತಹ ಕಾಮಗಾರಿಗಳನ್ನು ಕೈಗೊಳ್ಳುವಾಗ ರಸ್ತೆಯನ್ನು ಅಗೆಯಬೇಕಾದ ಅನಿವಾರ್ಯತೆ ಇರುವುದರಿಂದ ವಾಹನ ಸಂಚಾರವನ್ನು ನಿಷೇಧಿಸುವಂತೆ ಲೋಕೋಪಯೋಗಿ ಇಲಾಖೆಯ ಚಿಕ್ಕಮಗಳೂರು ವಿಭಾಗದ ಕಾರ್ಯಪಾಲ ಇಂಜಿನಿಯರ್ ಸಲ್ಲಿಸಿದ ಕೋರಿಕೆ ಆಧರಿಸಿ ಜಿಲ್ಲಾಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.

    ಈಗಾಗಲೇ ಜಿಲ್ಲಾ ಪೊಲೀಸ್ ಅಧೀಕ್ಷಕರು ಈ ರಸ್ತೆಯಲ್ಲಿ ಎರಡು ತಿಂಗಳುಗಳ ಕಾಲ ವಾಹನ ಸಂಚಾರ ನಿಷೇಧಿಸಲು ಯಾವುದೇ ಅಭ್ಯಂತರವಿಲ್ಲ. ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಈ ಸಂಬಂಧ ವರದಿ ತರಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಮಾರ್ಚ್ ೧೫ ರಿಂದಲೇ ಈ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದ್ದು, ಒಟ್ಟು ಎರಡು ತಿಂಗಳುಗಳ ಕಾಲ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ

    Vehicular traffic banned on Seethalaiyanagiri-Mullaiyanagiri road

  • ಎಲ್ಲಾ ದೇವಸ್ಥಾನಗಳಲ್ಲಿ ಹಿಂದುಳಿದವರಿಗೆ ಪೂಜಿಸಲು ಕಾನೂನು ಜಾರಿಗೊಳಿಸಬೇಕು

    ಎಲ್ಲಾ ದೇವಸ್ಥಾನಗಳಲ್ಲಿ ಹಿಂದುಳಿದವರಿಗೆ ಪೂಜಿಸಲು ಕಾನೂನು ಜಾರಿಗೊಳಿಸಬೇಕು

    ಚಿಕ್ಕಮಗಳೂರು: ಅಯೋಧ್ಯೆಯ ರಾಮಮಂದಿರದಲ್ಲಿ ಮೂರ್ತಿ ಮತ್ತು ಜೀವ ಪ್ರತಿಷ್ಠಾಪನೆಯನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಮಾಡಿದರು, ಅದೇ ರೀತಿ ಎಲ್ಲಾ ದೇಗುಲಗಳಲ್ಲಿ ಹಿಂದುಳಿದ ವರ್ಗದವರಿಗೆ ಅವಕಾಶ ನೀಡುವ ಕಾನೂನು ಜಾರಿಗೆ ತರಲಿ ಎಂದು ಕಾರ್ಮಿಕ ಸಚಿವ ಲಾಡ್ ಹೇಳಿದರು.

    ಶೃಂಗೇರಿ ಕ್ಷೇತ್ರದ ಕೊಪ್ಪ ಪಟ್ಟಣದಲ್ಲಿ ನಡೆದ ಗಾಂಧಿ ಭಾರತ ಸಮಾವೇಶದ ಭಾಗವಹಿಸಲು ಆಗಮಿಸಿದಾಗ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ರವರು ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ವೇಳೆ ಯಾವ ಪುರೋಹಿತರಾಗಲಿ, ಬ್ರಾಹ್ಮಣರಾಗಲಿ ಇರಲಿಲ್ಲ ಮೋದಿ ಅವರು ಮಾತ್ರ ಇದ್ದರು. ಒಬಿಸಿ ವರ್ಗಕ್ಕೆ ಸೇರಿದವರು ಎಂದು ಮೋದಿ ಅವರೇ ಹೇಳಿಕೊಂಡಿದ್ದಾರೆ. ಗುಡಿ ಕಟ್ಟಿದವರು,ಮೂರ್ತಿ ಕೆತ್ತಿದ ಶಿಲ್ಪಿಗಳು ಸೇರಿ ಸಣ್ಣ ಸಮುದಾಯಗಳಿಗೆ ಮೂರ್ತಿ ಪ್ರತಿಷ್ಠಾಪನೆ ಅವಕಾಶ ಸಿಗಲಿಲ್ಲವೇಕೆ ಎಂದು ಪ್ರಶ್ನಿಸಿ, ವಕ್ಫು ತಿದ್ದುಪಡಿ ಮಸೂದೆ ರೀತಿಯಲ್ಲಿ ಹಿಂದುಳಿದವರಿಗೆ ದೇಗುಲದಲ್ಲಿ ಪೂಜಿಸಲು ಕಾನೂನು ಜಾರಿಯಾಗಬೇಕು ಎಂಬುದು ನನ್ನ ಮನವಿ ಎಂದರು.

    ಕೊಪ್ಪ ಬ್ಲಾಕ್ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ಆಯೋಜಿಸಿದ್ದ ಗಾಂಧಿ ಭಾರತ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಉದ್ದೇಶಿಸಿ ಮಾತನಾಡುತ್ತಾ. ಇತಿಹಾಸದ ಸತ್ಯದ ಕುರಿತು ಬಿಜೆಪಿ ನಾಯಕರು ಎಂದು ಮಾತನಾಡುವುದಿಲ್ಲ ಬದಲಿಗೆ ಇತಿಹಾಸವನ್ನು ತಿರಿಚುವ ರಾಜಕೀಯಕ್ಕಾಗಿ ಹಿಂದೂತ್ವವನ್ನು ಚೆನ್ನಾಗಿ ಬಳಸಿಕೊಳ್ಳುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಡಾ. ಬಿ.ಆರ್. ಅಂಬೇಡ್ಕರ್ ವಿಚಾರಧಾರೆ ಅನುಷ್ಠಾನಕ್ಕೆ ತರುವುದು ಕಾಂಗ್ರೆಸ್ ಅಧಿಕಾರದಿಂದ ಬಿಜೆಪಿ ಹೊರಗುಳಿದರೆ ಮಾತ್ರ ಸಂವಿಧಾನ ಉಳಿತ್ತದೆ ಎಂದು ಹೇಳುತ್ತಾ. ಬಿಜೆಪಿ ನಾಯಕರು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ದೂಷಿಸುತ್ತಾರೆ. ನೆಹರು ಅವರಿಂದಲೇ ಭಾರತ ಒಡೆದು ಹೋಯಿತು ಎನ್ನುತ್ತಾರೆ, ದೇಶ ವಿಭಜನೆಯಾಗಿದ್ದರಿಂದ ಅನುಕೂಲವಾಗಿದ್ದು ಬಿಜೆಪಿಗೆ, ಹೀಗಾಗಿ ಬಿಜೆಪಿ ಕಚೇರಿಯಲ್ಲಿ ನೆಹರು ಫೋಟೋ ಹಾಕಿಕೊಳ್ಳ ಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

    ಬಿಜೆಪಿಯವರು ಪ್ರಚಾರಕ್ಕಾಗಿ ವ್ಯತಿರಿಕ್ತ ಹೇಳಿಕೆ ನೀಡುತ್ತಾರೆ, ಭಾರತ ಒಡದು ಹೋಗಿರುವುದಕ್ಕೆ ನೆಹರು ಕಾರಣ ಎಂಬ ಬಗ್ಗೆ ಮಾತನಾಡುವ ಬಿಜೆಪಿಯವರು ಒಂದು ವೇಳೆ ದೇಶ ಇಬ್ಬಾಗವಾಗದೇ ಮುಸಲ್ಮಾನ ಸಮುದಾಯ ಭಾರತದಲ್ಲಿ ಇದ್ದರೆ ಆಗ ಏನು ಮಾಡುತ್ತಿದ್ದರು. ಇಬ್ಬಾಗ ಆಗಿರುವುದು ಅನುಕೂಲ ಆಗಿದ್ದರೆ ಅದು ಬಿಜೆಪಿಗೆ ಎಂದರು.

    ಭಾರತದ ಸಾಲ 2.10 ಲಕ್ಷ ಕೋಟಿ ರು ಇದೆ, ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಾಗ ಒಂದು ತೊಲ ಬಂಗಾರದ ಬೆಲೆ ರೂ.27,000 ಇತ್ತು ಈಗ ಒಂದು ತೊಲಕ್ಕೆ 87,000 ಆಗಿದೆ. 15 ಲಕ್ಷ ಕೋಟಿ ಉದ್ಯಮಿಗಳ ಸಾಲ ಮನ್ನಾ ಮಾಡಲಾಗಿದೆ. ಕಳೆದ ಹತ್ತು ವರ್ಷದಲ್ಲಿ ಒಂದುವರೆ ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಜೆಪಿ ಹಿಂದೂ ಮತ್ತು ಮುಸ್ಲಿಂ ಸಮುದಾಯ ನಡುವೆ ಗೊಂದಲ ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು.

    ಶೃಂಗೇರಿ ಕ್ಷೇತ್ರದ ಶಾಸಕರಾದ ಟಿ.ಡಿ. ರಾಜೇಗೌಡರು ಮಾತನಾಡುತ್ತಾ ಬುದ್ಧ, ಬಸವ ಅಂಬೇಡ್ಕರ್ ನಾರಾಯಣ ಗುರುವಿನಂತಹ ಮಹಾನ್ ವ್ಯಕ್ತಿಗಳು ಕಟ್ಟಿದ ದೇಶ ಭಾರತ. ನಾಡಗೀತೆ, ರೈತ ಗೀತೆ ಆದರ್ಶದಂತೆ ನಡೆದುಕೊಂಡರೆ ಇಡೀ ಪ್ರಪಂಚ ನಿಬ್ಬೆರಗಾಗಿ ಭಾರತ ಕಡೆ ನೋಡುವಂತಾಗುತ್ತದೆ ಎಂದು ಹೇಳುತ್ತಾ. ಶೃಂಗೇರಿ ಕ್ಷೇತ್ರದಲ್ಲಿ ಕೆಲವರು ಯಾವುದೇ ಅಭಿವೃದ್ಧಿ ಆಗಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಅಭಿವೃದ್ಧಿ ಕಾಮಗಾರಿಗಳ ಪಟ್ಟಿ ನೀಡುತ್ತೇನೆ ಕ್ಷೇತ್ರದಲ್ಲಿ ಕೆಲಸ ಆಗಿದಿಯೋ ಇಲ್ಲವೇ ಎಂಬುದು ಅವರೇ ಸ್ಪಷ್ಟಪಡಿಸಿಕೊಳ್ಳಲಿ ಎಂದರು.

    ಕಾರ್ಮಿಕ ಸಚಿವ ಸಂತೋಷ್ ಲಾಡ್ ಗೆ ಮನವಿ ಸಲ್ಲಿಸಿ ಕಾಫಿ ಟೀ ಪ್ಲಾಂಟೇಶನ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಇಲ್ಲ ಕಾರ್ಮಿಕರಿಗೆ ಪ್ರತ್ಯೇಕ ಕ್ಷೇಮಾಭಿವೃದ್ಧಿ ಮಂಡಳಿ ರಚಿಸಬೇಕು, ಕಾರ್ಮಿಕರು ಪಿಂಚಣಿ ಪಡೆಯಲು ಅರ್ಜಿ ಸಲ್ಲಿಸುವ ಅವಧಿ ವಿಸ್ತರಿಸಬೇಕು ಎಂದು ಇದೇ ಸಂದರ್ಭದಲ್ಲಿ ಮನವಿ ನೀಡಿ ಒತ್ತಾಯಿಸಿದರು.

    ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಸಮಾವೇಶ ಉದ್ಘಾಟಿಸಿ ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟ ಸಂವಿಧಾನವೇ ಕಾಂಗ್ರೆಸ್ ಸಿದ್ಧಾಂತ, ಮಹಾತ್ಮ ಗಾಂಧಿ ಭೇಟಿ ಕೊಟ್ಟ ಸ್ಥಳವನ್ನು ಸ್ಮಾರಕವಾಗಿ ನಿರ್ಮಿಸುವ ನಿಟ್ಟಿನಲ್ಲಿ ತೀರ್ಮಾನ ಮಾಡಿದ್ದೇವೆ ಎಂದರು.

    ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಮಾತನಾಡುತ್ತಾ ಗಾಂಧೀಜಿ ಬಿಟ್ಟು ಭಾರತ ವಿರಲು ಸಾಧ್ಯವಿಲ್ಲ. ಗಾಂಧಿ ಬರುವ ಮುಂಚೆಯು ಸ್ವತಂತ್ರ ಸಂಗ್ರಾಮ ನಡೆಯುತ್ತಿತ್ತು, ಸೂಕ್ತ ನಾಯಕತ್ವ ಇರಲಿಲ್ಲ ಗಾಂಧಿಬಂದ ಬಳಿಕ ಹೋರಾಟಕ್ಕೆ ನಾಯಕತ್ವ ಸಿಕ್ಕಿತು. ಜಾತಿ, ಧರ್ಮ ಭೇದ ಇಲ್ಲದೆ ಎಲ್ಲರೂ ಅಣ್ಣತಮ್ಮಂದಿರಂತೆ ಬದುಕಬೇಕು ಎಂಬುದು ಸಂವಿಧಾನದ ಆಶಯ ಇದನ್ನೇ ಕಾಂಗ್ರೆಸ್ ಅನುಸರಿಸುತ್ತಿದೆ ಎಂದರು.

    ರಾಜ್ಯ ಕಾಂಗ್ರೆಸ್ ವಕ್ತಾರ ಸುದೀರ್ ಕುಮಾರ್ ಮುರುಳಿ ಮಾತನಾಡುತ್ತಾ ಗಾಂಧಿ ಕಾರ್ಯಕ್ರಮ ಕಾಂಗ್ರೆಸ್ ಮೂಲ ಮಂತ್ರ. ಗಾಂಧಿಯವರು ಅಸ್ಪೃಶ್ಯತೆ ಪಾಪ ಎಂದರೆ, ಅಂಬೇಡ್ಕರ್ ಅವರು ಅಸ್ಪೃಶ್ಯತೆ ಪಾಪ ಮಾತ್ರವಲ್ಲ ಅಪರಾಧ ಕೂಡ ಎಂದು ಹೇಳಿದರು ಎನ್ನುತ್ತಾ. ಶೃಂಗೇರಿ ಕ್ಷೇತ್ರದಲ್ಲಿ ಪ್ರೀತಿಯ ರಾಜಕಾರಣ ಮಾಡುತ್ತಿರುವುದು ಶಾಸಕ ಟಿ.ಡಿ. ರಾಜೇಗೌಡ, ಆದರೆ ದ್ವೇಷದ ರಾಜಕಾರಣ ಮಾಡುತ್ತಿರುವುದು ಬಿಜೆಪಿ ಅಭ್ಯರ್ಥಿಯಾಗಿದ್ದವರು. ಅವರಿಗೆ ವಯಸ್ಸಾಗಿದೆಯೇ ಹೊರತು ಬುದ್ದಿ ಬೆಳೆದಿಲ್ಲ ಗಾಂಧಿ ಭಾರತ ನಿರ್ಮಾಣ ಮಾಡಬೇಕೆ ಹೊರತು ಗೋಡ್ಸೆ ಭಾರತವಲ್ಲ ಎಂದು ಬಿಜೆಪಿಯ ಡಿ .ಎನ್. ಜೀವರಾಜ್ ಕುರಿತು ವ್ಯಂಗವಾದರು.

    ಸಮಾವೇಶವನ್ನು ತಾಲೂಕು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕುಕ್ಕುಡಿಗಿ ರವೀಂದ್ರ ಅಧ್ಯಕ್ಷತೆ ವಹಿಸಿದ್ದರು, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ನುಗ್ಗಿ ಮಂಜುನಾಥ್ ಪ್ರಸ್ತಾವಿಕ ಮಾಡಿದರು, ಪ್ರಿಯಾಂಕ ರಾಜು ಸಂವಿಧಾನ ಪೀಠಿಕೆ ಪ್ರತಿಜ್ಞಾವಿಧಿಸಿದರು.

    ಕಿಸಾನ್ ಅಧ್ಯಕ್ಷ ಸಚಿನ್ ಮಿ ಘ, ಕೆಪಿಸಿಸಿ ವಕ್ತಾರ ಅನಿಲ್ ಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಜಿತ್. ಹರಿಹರಪುರದ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಕೆಟಿಮಿತ್ರ, ಮೇಗುಂದ ಹೋಬಳಿ ಘಟಕದ ಅಧ್ಯಕ್ಷ ಡಿ .ಬಿ. ರಾಜೇಂದ್ರ, ಕಸಬಾ ಹೋಬಳಿ ಘಟಕದ ಅಧ್ಯಕ್ಷ ಪ್ರಕಾಶ್ ಪೂಜಾರಿ, ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ದುರ್ಗಾ ಚರಣ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯಾನಂದ ಮುಂತಾದವರು ಉಪಸ್ಥಿತರಿದ್ದರು.

    ಈ ಸಮಾವೇಶದಲ್ಲಿ ಕಾಂಗ್ರೆಸ್ ಘಟಕದ ಪದಾಧಿಕಾರಿಗಳಿಗೆ ಹಾಗೂ ಸಹಕಾರ ಸಂಘಗಳಿಂದ ಆಯ್ಕೆಯಾದ ನಿರ್ದೇಶಕರುಗಳಿಗೆ ಸನ್ಮಾನಿಸಲಾಯಿತು.

    Laws should be implemented to allow backward classes to worship in all temples.

  • ಜಿಲ್ಲಾಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಸಾಂಸ್ಕೃತಿಕ ಸ್ಪರ್ಧಾ

    ಜಿಲ್ಲಾಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಸಾಂಸ್ಕೃತಿಕ ಸ್ಪರ್ಧಾ

    ಚಿಕ್ಕಮಗಳೂರು: ಕ್ರೀಡೆ ಆರೋಗ್ಯದ ಒಂದು ಭಾಗವಾಗಿದ್ದು, ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಇದು ಅತ್ಯುತ್ತಮ ಮಾರ್ಗ ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಹೇಳಿದರು.

    ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ಸಂಯುಕ್ತ ಆಶ್ರಯದಲ್ಲಿ ಇಂದು ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ರಾಜ್ಯ ಸರ್ಕಾರವು ಸರ್ಕಾರಿ ನೌಕರರ ಹಿತಾಸಕ್ತಿ ಕಾಪಾಡಲು ಅನೇಕ ಉಪಯುಕ್ತ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ನೌಕರರು ಕೆಲಸದ ಒತ್ತಡದಲ್ಲಿ ತಮ್ಮ ಕೌಟುಂಬಿಕ ಜೀವನ, ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ಪ್ರತಿದಿನ ವ್ಯಾಯಾಮ, ನಡಿಗೆ, ಯೋಗ ಮಾಡಿ, ಫಿಟ್‌ನೆಸ್ ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು.

    ಪ್ರತಿಯೊಬ್ಬರೂ ದೈಹಿಕ ಮತ್ತು ಮಾನಸಿಕ ಸದೃಢತೆಗೆ ಆರೋಗ್ಯ ಮುಖ್ಯವಾಗಿದೆ. ಉತ್ತಮವಾದ ಓದು, ವ್ಯಾಯಾಮಗಳು ಮನಸ್ಸಿಗೆ ಉಲ್ಲಾಸ, ವಿಶ್ರಾಂತಿ ನೀಡುತ್ತವೆ. ಖುಷಿಯಿಂದ ಕೆಲಸ ಮಾಡಲು ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮಗಳ ಅಗತ್ಯವಿದೆ ಎಂದು ಹೇಳಿದರು.

    ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ ಅವರು ಮಾತನಾಡಿ, ಎಲ್ಲಾ ಇಲಾಖೆಯ ನೌಕರರನ್ನು ಒಟ್ಟುಗೂಡಿಸಿದ್ದು, ಈ ಕಾರ್ಯಕ್ರಮ ಸಮಾನತೆಯಿಂದ ಮೂಡಿಬಂದಿದೆ. ನಿರಂತರ ಯೋಗ, ವ್ಯಾಯಾಮ, ಕ್ರೀಡಾ ಚಟುವಟಿಕೆಗಳು ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಸುಸ್ಥಿತಿ ಕಾಪಾಡಲು ಸಹಾಯ ಮಾಡುತ್ತವೆ. ಪ್ರತಿ ದಿನ ಯೋಗ, ವಾಕಿಂಗ್ ಮಾಡಬೇಕು ಎಂದು ಅವರು ಹೇಳಿದರು.

    ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಅವರು ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲುವು ಎಂಬುದು ಇಲ್ಲ. ಗೆಲುವು ಸಿಗುತ್ತದೆ ಅಥವಾ ಆ ಕ್ರೀಡೆಯಿಂದ ಹೊಸದನ್ನು ಕಲಿಯುತ್ತೇವೆ. ಆದ್ದರಿಂದ ಗೆಲುವು ಅಥವಾ ಕಲಿಕೆ ಮಾತ್ರ ಕ್ರೀಡೆಯಿಂದ ಸಿಗುತ್ತದೆ. ಕ್ರೀಡೆಗಳು ಪರಸ್ಪರ ವೈಯಕ್ತಿಕ ಸಂಬಂಧ, ಸೌಹಾರ್ದತೆ, ಸಹೋದರತ್ವ ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.

    ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಶಿವಾನಂದ ಸ್ವಾಮಿ ಮಾತನಾಡಿ, ಕ್ರೀಡೆ ನಮ್ಮನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರನ್ನಾಗಿ ಮಾಡುತ್ತದೆ. ಆರೋಗ್ಯವಂತ ಜೀವನಕ್ಕೆ ಕ್ರೀಡೆ ಬಹುಮುಖ್ಯ. ಪ್ರಾಚೀನ ಕಾಲದಿಂದಲೂ ಕ್ರೀಡೆಗೆ ಮಹತ್ವವಾದ ಸ್ಥಾನವನ್ನು ನೀಡಲಾಗಿದೆ. ರಾಮಾಯಣ, ಮಹಾಭಾರತದ ಕಾಲದಲ್ಲಿ ರಾಜರು ಕ್ರೀಡಾಕೂಟಗಳನ್ನು ಏರ್ಪಡಿಸುತ್ತಿದ್ದರು. ಕುಸ್ತಿ, ಬಿಲ್ಲುಗಾರಿಕೆ ಮುಂತಾದವನ್ನು ಕಾಣಬಹುದಾಗಿದೆ ಎಂದರು.

    ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರ ಪ್ರ್ರ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕಿ ಡಾ.ಹೆಚ್.ಪಿ. ಮಂಜುಳಾ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷ ಬಿ,ಎನ್.ಸುಂದ್ರೇಶ್, ಕಾರ್ಯದರ್ಶಿ ಟಿ. ಪದ್ಮರಾಜ್, ಗೌರವಾಧ್ಯಕ್ಷ ಸಿ.ಎನ್.ಮಂಜುನಾಥ್, ಕೊಪ್ಪ ತಾಲ್ಲೂಕು ಅಧ್ಯಕ್ಷ ರಾಘವೇಂದ್ರ, ವಿವಿಧ ತಾಲ್ಲೂಕು ಅಧ್ಯಕ್ಷರು ಹಾಗೂ ವಿವಿಧ ಇಲಾಖೆಗಳ ನೌಕರರು ಉಪಸ್ಥಿತರಿದ್ದರು.

    District Level Government Employees Sports Meet – Cultural Competition

  • ಜಾಗರ ಹೋಬಳಿ ಅಭಿವೃದ್ಧಿ ಕಾಮಗಾರಿಗಳಿಗೆ 21 ಕೋಟಿ ರೂ.ಗಳ ಅನುದಾನ

    ಜಾಗರ ಹೋಬಳಿ ಅಭಿವೃದ್ಧಿ ಕಾಮಗಾರಿಗಳಿಗೆ 21 ಕೋಟಿ ರೂ.ಗಳ ಅನುದಾನ

    ಚಿಕ್ಕಮಗಳೂರು:  ಈ ಕ್ಷೇತ್ರದ ಜಾಗರ ಹೋಬಳಿಯೊಂದಕ್ಕೆ ಅಭಿವೃದ್ಧಿ ಕಾಮಗಾರಿಗಳಿಗೆ ೨೧ ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗಿದ್ದು, ಕಾಮಗಾರಿ ಆರಂಭವಾಗಿದೆ ಎಂದು ಚಿಕ್ಕಮಗಳೂರು ಕ್ಷೇತ್ರದ ಶಾಸಕ ಹೆಚ್.ಡಿ.ತಮ್ಮಯ್ಯ ತಿಳಿಸಿದರು.

    ಜಾಗರ ಹೋಬಳಿಯ ಶಿರವಾಸೆ ಹಾಗೂ ಮೇಲಿನಹುಲುವತ್ತಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಂi ಸೋಮವಾರ ನಡೆದ ಜನ ಸಂಪರ್ಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿ  ಕಸಬಾ, ಲಕ್ಯಾ, ಸಖರಾಯಪಟ್ಟಣ, ದೇವನೂರು ಕ್ಷೇತ್ರಕ್ಕೆ ೨೦ ಕೋಟಿ ರೂ.ಗಳಿಗೂ ಕಡಿಮೆ ಅನುದಾನವನ್ನು ಒದಗಿಸಲಾಗಿದೆ. ಜಾಗರ ಹೋಬಳಿಯೊಂದಕ್ಕೆ ಆದರೆ ಒಟ್ಟು ೨೧ ಕೋಟಿ ರೂ.ಗಳಲ್ಲಿ ೧೩ ಕೋಟಿ ರೂ.ಗಳನ್ನು ವಿಸ್ತೀರ್ಣ ದೊಡ್ಡದಾಗಿರುವ ಶಿರವಾಸೆ ಗ್ರಾ.ಪಂ.ಗೆ ನೀಡಲಾಗಿದ್ದು, ಕಡಿಮೆ ವಿಸ್ತೀರ್ಣವಿರುವ ಮೇಲಿನ ಹುಲುವತ್ತಿಗೂ ಉಳಿದ ಹಣ ಬಿಡುಗಡೆ ಮಾಡಲಾಗಿದ್ದು, ಈಗಾಗಲೇ ಕಾಮಗಾರಿಗಳನ್ನು ಆರಂಭಿಸಲಾಗಿದೆ. ಹೆಚ್ಚಿನ ಅವಶ್ಯಕತೆ ಇರುವಲ್ಲಿಗೆ ಪ್ರಥಮ ಆದ್ಯತೆ ನೀಡಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ಹೇಳಿದರು.

    ಜಾಗರದಿಂದ ನೆತ್ತಿಚೌಕದವರೆಗೆ ಐದು ಕೋಟಿ ರೂ.ನ ರಸ್ತೆ ಕಾಮಗಾರಿಗೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಕೆಲವೇ ದಿನಗಳಲ್ಲಿ ಹೊಂಡದಕಾನ್‌ವರೆಗೆ ೫ ಕೋಟಿ ರೂ.ವೆಚ್ಚದ ಪಿಡಬ್ಲ್ಯುಡಿ ರಸ್ತೆ ನಿರ್ಮಾಣವಾಗಲಿದೆ. ಹೊನ್ನಾಳದಿಂದ ಗಾಳಿಗುಡ್ಡದವರೆಗಿನ ೨ ಕೋಟಿ ರೂ.ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಇಲ್ಲಿಂದ ಮುಂದುವರಿದ ಭಾಗಕ್ಕೂ ಒಂದೊಂದು ಕೋಟಿ ರೂ.ನ ಎರಡು ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ೨೫ ಲಕ್ಷ ರೂ.ಗಳ ಶಿರವಾಸೆ ಕಾಂಕ್ರೀಟ್ ರಸ್ತೆ ಈಗಾಗಲೇ ಉದ್ಘಾಟಿಸಲಾಗಿದೆ. ಮೇಲಿನ ಹುಲುವತ್ತಿ ಗ್ರಾ.ಪಂ.ವ್ಯಾಪ್ತಿಯ ೪೦ ಲಕ್ಷ ರೂ. ವೆಚ್ಚದ ಸೇತುವೆಯನ್ನು ಉದ್ಘಾಟಿಸಲಾಗಿದೆ.

    ಹೊನ್ನಾಳದಿಂದ ಸಿದ್ದರಬಾನುವರೆಗಿನ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ೨ ಕೋಟಿ ರೂ.ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಇವಲ್ಲದೆ ೫, ೧೦, ೨೦ ಲಕ್ಷ ರೂ.ಗಳ ಸಣ್ಣ ಸಣ್ಣ ರಸ್ತೆ ಕಾಮಗಾರಿಗಳನ್ನು ಕೂಡ ಕೈಗೆತ್ತಿಕೊಳ್ಳಲಾಗಿದೆ. ಬಿಲ್ಲವ ಸಮುದಾಯದ ಸಮುದಾಯ ಭವನ ಮುಕ್ತಾಯಗೊಳಿಸಲು ೧೦ ಲಕ್ಷ ರೂ.ಗಳನ್ನು ಒದಗಿಸಲಾಗಿದೆ. ಅಗತ್ಯವಿದ್ದಲ್ಲಿ ಇನ್ನೂ ಹೆಚ್ಚಿನ ಅನುದಾನ ನೀಡುವುದಾಗಿ ತಿಳಿಸಿದರು.

    ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಬೆನ್ನತ್ತಿ ನಗರಕ್ಕೆ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಹುಡುಕಿಕೊಂಡು ಹೋಗುವ ಪರಿಸ್ಥಿತಿ ಆಗಬಾರದು. ಹಾಗಾಗಿ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಕರೆತಂದು ಸಮಸ್ಯೆಗಳನ್ನು ಆಲಿಸುವ ಕೈಜೋಡಿಸಲಾಗಿದೆ. ಇಲ್ಲಿ ಗ್ರಾಮಸ್ಥರು ನೀಡುವ ಅರ್ಜಿಗಳನ್ನು ಪಡೆದುಕೊಂಡು ಆ ಸಮಸ್ಯೆಗಳನ್ನು ಸಂಬಂಧಿಸಿದ ಇಲಾಖೆಯವರು ಬಗೆಹರಿಸಬೇಕು. ಆ ಸಮಸ್ಯೆಗಳನ್ನು ತಹಸೀಲ್ದಾರರು ಹಾಗೂ ತಾ.ಪಂ. ಇಒಗಳು ತಿಂಗಳಿಗೊಮ್ಮೆ ಸಮಸ್ಯೆಗಳ ಸ್ಥಿತಿಗತಿ ಬಗ್ಗೆ ಪರಿಶೀಲಿಸಬೇಕು. ಯಾವುದೇ ಕಾರಣಕ್ಕೂ ಮತ್ತೊಮ್ಮೆ ಸಭೆಯಲ್ಲಿ ಮೊದಲು ಪ್ರಸ್ತಾಪಿಸಿದ ಸಮಸ್ಯೆಗಳು ಪುನರಾವರ್ತನೆಯಾಗಬಾರದು. ಇಲ್ಲಿ ನಡೆಸುವ ಜನ ಸಂಪರ್ಕ ಸಭೆಗಳು ಕಾಟಾಚಾರದ ಸಭೆಗಳಾಗಬಾರದು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ತಿಳಿಸಿದರು.

    ೨೦೨೩ರಲ್ಲಿ ರಾಜ್ಯದಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯಮಟ್ಟದಲ್ಲಿ ಮುಖ್ಯಮಂತ್ರಿಗಳು, ಎಲ್ಲಾ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ತಮ್ಮ ಕ್ಷೇತ್ರದಲ್ಲಿ, ತಾಲ್ಲೂಕು ಮಟ್ಟದಲ್ಲಿ ಹಾಗೂ ಹೋಬಳಿ ಮಟ್ಟದಲ್ಲಿ ಶಾಸಕರು ಜನಸಂಪರ್ಕ ಸಭೆಗಳನ್ನು ನಡೆಸಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮ ಆರಂಭ ಮಾಡಲಾಯಿತು. ಸ್ಥಳೀಯ ಮಟ್ಟದಲ್ಲಿ ಸಮಸ್ಯೆ ಬಗೆಹರಿಸಿದರೆ ರಾಜ್ಯಮಟ್ಟಕ್ಕೆ ಹೋಗುವ ಪರಿಸ್ಥಿತಿ ಒದಗುವುದಿಲ್ಲ ಎಂದು ಎನ್ನುವ ಕಾರಣಕ್ಕಾಗಿ. ಅದರಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರು ಜಿಲ್ಲಾ ಮಟ್ಟದಲ್ಲಿ ಹಾಗೂ ತಾವು ತಾಲ್ಲೂಕು ಮಟ್ಟದಲ್ಲಿ ಈ ಸಭೆಯನ್ನು ಉದ್ಘಾಟಿಸಿದ್ದಾಗಿ ತಿಳಿಸಿದರು. ತಾಲ್ಲೂಕು ಮಟ್ಟಕ್ಕೂ ಬರಲು ಗ್ರಾಮಸ್ಥರಿಗೆ ತೊಂದರೆಯಾಗಬಹುದೆಂದು ನೇರವಾಗಿ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಕರೆದೊಯ್ದು ಜನರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಎರಡೆರಡು ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯ ಜನ ಸಂಪರ್ಕ ಸಭೆಗಳನ್ನು ನಡೆಸುವ ಕಾರ್ಯಕ್ರಮ ಆಯೋಜಿಸಿರುವುದಾಗಿ ತಿಳಿಸಿದರು.

    ಶಿರವಾಸೆ ಗ್ರಾ,ಪಂ ಅಧ್ಯಕ್ಷ ರಘುನಾಥ್ ಬಿ.ಆರ್., ಮೇಲಿನಹುಲುವತ್ತಿ ಗ್ರಾ.ಪಂ. ಅಧ್ಯಕ್ಷೆ ಜಾನಕೀರಾಮ್, ಜಿ.ಪಂ. ಉಪ ಕಾರ್ಯದರ್ಶಿ ಶಂಕರ್ ಕೊರವರ್, ತಾಲ್ಲೂಕು ತಹಸೀಲ್ದಾರ್ ಸುಮಂತ್‌ಕುಮಾರ್, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ವಿಜಯಕುಮಾರ್, ಶಿರವಾಸೆ ಗ್ರಾ.ಪಂ ಉಪಾಧ್ಯಕ್ಷೆ ರಾಧ, ಮೇಲಿನ ಹುಲುವತ್ತಿ ಗ್ರಾ.ಪಂ.ಉಪಾಧ್ಯಕ್ಷೆ ಕೆ.ಸಿ.ಭಾರತಿ, ಸದಸ್ಯರಾದ ಪ್ರೇಮಾಕ್ಷಿ ಎಸ್.ಅಮೀನ್, ದಾಕ್ಷಾಯಿಣಿ, ಶಿರವಾಸೆ ಗ್ರಾ.ಪಂ. ಸದಸ್ಯರಾದ ವಿಮಲಾ, ಪಾರ್ವತಿ, ಎಸ್. ಉಮಾ, ಗಣೇಶ್, ಟಿ.ಎಸ್.ರಘು, ಎನ್.ಪ್ರೀತಿ, ರವಿ ರೇವಣ್ಣ, ಮೇಲಿನ ಹುಲುವತ್ತಿ ಗ್ರಾಪಂ ಸದಸ್ಯೆ ಶಾರದಾಂಬ, ಡಿಹೆಚ್‌ಒ ಡಾ.ಅಶ್ವತ್ಥ್ ಬಾಬು, ತಾಲ್ಲೂಕು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

    Grant of Rs. 21 crore for Jagar Hobli development works

  • ಶ್ರೀ ಕೋದಂಡರಾಮಚಂದ್ರ ಸ್ವಾಮಿ ದೇವಾಲಯದಲ್ಲಿ ವಾರ್ಷಿಕ ರಾಮನವಮಿ

    ಶ್ರೀ ಕೋದಂಡರಾಮಚಂದ್ರ ಸ್ವಾಮಿ ದೇವಾಲಯದಲ್ಲಿ ವಾರ್ಷಿಕ ರಾಮನವಮಿ

    ಚಿಕ್ಕಮಗಳೂರು: ನಗರದ ನೇಕಾರಭೀದಿಯ ಶ್ರೀ ಕೋದಂಡರಾಮಚಂದ್ರ ಸ್ವಾಮಿ ದೇವಾಲಯದಲ್ಲಿ ವಾರ್ಷಿಕ ರಾಮನವಮಿ ಉತ್ಸವ ಭಾನುವಾರ ವೈಭವದಿಂದ ನಡೆಯಿತು.

    ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಜನ್ಮದಿನದ ಪ್ರಯುಕ್ತ ಬೆಳಿಗ್ಗೆ ದೇವಾಲಯದಲ್ಲಿ ಸುಪ್ರಭಾತ ಸೇವೆ. ದೇವತಾ ಪ್ರಾರ್ಥನೆ. ಪುಣ್ಯಾಹ. ನಾಂದಿ. ಶ್ರೀ ಕೋದಂಡರಾಮಚಂದ್ರ ಸ್ವಾಮಿಗೆ ಅಭಿಷೇಕ. ವಿಶೇಷ ಪೂಜೆ. ಅಲಂಕಾರ. ಗಣಪತಿ ಹೋಮ. ನವಗ್ರಹ ಹೋಮ. ಆಂಜನೇಯ ಹೋಮ. ಶ್ರೀರಾಮ ತಾರಕ ಮೂಲ ಮಂತ್ರ ಹೋಮ. ಸರ್ವತೋ ಮಂಡಲ ಪೂಜೆ. ವಸಂತ ಸೇವೆ ನಡೆದವು.

    ಈ ವೇಳೆ ಭಕ್ತರಿಂದ ಭಜನೆ. ನಾಮ ಸಂಕೀರ್ತನೆ ನಡೆದವು.ಸಂಜೆ ಉತ್ಸವ ಮೂರ್ತಿಗಳ ರಾಜಬೀದಿ ಮೆರವಣಿಗೆ. ದೇವಾಲಯದಲ್ಲಿ ಉಯ್ಯಾಲೆ ಸೇವೆ. ಮಹಾಮಂಗಳಾರತಿ. ತೀರ್ಥ ಪ್ರಸಾದ ವಿನಿಯೋಗ. ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಿತು.

    ಪ್ರಧಾನ ಅರ್ಚಕ ಕೆ. ವಿ. ಸತ್ಯ ಪ್ರಸನ್ನ ಮತ್ತು ಅರ್ಚಕ ವೆಂಕಟೇಶ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು. ಬೆಳಗಿನಿಂದ ರಾತ್ರಿವರೆಗೆ ನಡೆದ ಕಾರ್ಯಕ್ರಮಗಳಲ್ಲಿ ನೇಕಾರ ಬೀದಿ ಸೇರಿದಂತೆ ನೂರಾರು ಭಕ್ತರು ಸಡಗರ. ಸಂಭ್ರಮದಿಂದ ಪಾಲ್ಗೊಂಡಿದ್ದರು. ಹಬ್ಬದ ಅಂಗವಾಗಿ ಶ್ರೀ ಸೀತೆ. ಲಕ್ಷ್ಮಣ. ಆಂಜನೇಯ.ಶ್ರೀ ಕೋದಂಡರಾಮಚಂದ್ರ ಸ್ವಾಮಿಯ ವಿಗ್ರಹಗಳನ್ನು ರಜತಾಭರಣಗಳಿಂದ ಅಲಂಕರಿಸಲಾಗಿತ್ತು.

    Annual Rama Navami at Sri Kodandaramachandra Swamy Temple

  • ಕಲೆ, ಸಾಹಿತ್ಯ ಕ್ಷೇತ್ರದಲ್ಲಿ ಜಿಲ್ಲೆಗೆ ವಿಶೇಷ ಸ್ಥಾನಮಾನವಿದೆ

    ಕಲೆ, ಸಾಹಿತ್ಯ ಕ್ಷೇತ್ರದಲ್ಲಿ ಜಿಲ್ಲೆಗೆ ವಿಶೇಷ ಸ್ಥಾನಮಾನವಿದೆ

    ಚಿಕ್ಕಮಗಳೂರು: ಕನ್ನಡನಾಡು ಸಾಹಿತ್ಯ, ಸಂಗೀತ, ಕಲೆಗಳಿಗೆ ಜೀವತುಂಬಿದ ಬೀಡು. ಕವಿಸಂತರು, ಕೀರ್ತನೆಕಾರರ ಕೊಡುಗೆಯಿಂದ ಕನ್ನಡ ಭಾಷೆ ದೇಶಾದ್ಯಂತ ಮನ್ನಣೆ ಪಡೆದುಕೊಂಡಿದೆ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದರು.

    ನಗರದ ಹಿರೇಮಗಳೂರು ಸಮೀಪ ಶ್ರೀ ಕೋದಂಡರಾಮ ಸಮುದಾಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಮಹಿಳಾ ಘಟಕದ ಸೇವಾದೀಕ್ಷೆ ಸಮಾರಂಭ ಮತ್ತು ದತ್ತಿ ಉಪನ್ಯಾಸ ಕಾರ್ಯ ಕ್ರಮವನ್ನು ಭಾನುವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.

    ಸಾಹಿತ್ಯ ಕ್ಷೇತ್ರದಲ್ಲಿ ಚಿಕ್ಕಮಗಳೂರು ವಿಶೇಷ ಸ್ಥಾನಮಾನವಿದೆ. ರಾಷ್ಟ್ರಕವಿ ಕುವೆಂಪು ಜನನವಾದ ಊ ರಿನಲ್ಲಿ ಸಾಹಿತ್ಯಕ್ರಾಂತಿ ಯಥೆಚ್ಚವಾಗಿದೆ. ಅಲ್ಲದೇ ಪೂರ್ಣಚಂದ್ರ ತೇಜಸ್ವಿ ಕಥೆ, ಕಾದಂಬರಿಗಳು ಓದುಗರರಿ ಗೆ ವಿಶೇಷ ಅನುಭವ ನೀಡುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

    ಇತ್ತೀಚಿನ ಆಂಗ್ಲಭಾಷೆ ವ್ಯಾಮೋಹಕ್ಕೆ ಯುವಪೀಳಿಗೆ ದಾಸರಾಗುತ್ತಿದ್ದಾರೆ. ಎಡವಿ ಬಿದ್ದಾಗ ಬರುವಂಥ ಕನ್ನಡಪದ, ದೈನಂದಿನ ಕಾರ್ಯಗಳಲ್ಲಿ ತೋರುತ್ತಿಲ್ಲ. ಹೀಗಾಗಿ ಪಾಲಕರು ಮನೆಯಿಂದಲೇ ಭಾಷಾ ಸಂ ಸ್ಕೃತಿ, ಪರಂಪರೆ ಹಾಗೂ ಇತಿಹಾಸ ತಿಳಿಸುವ ಕಾರ್ಯವಾಗಬೇಕು ಎಂದರು.

    ಜಿಲ್ಲೆಯ ಕಸಾಪದಲ್ಲಿ ಮಹಿಳಾ ಘಟಕವು ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ. ಅಡುಗೆ ಅ ಥವಾ ಕೆಲಸಕ್ಕೆ ಸೀಮಿತರಾಗದೇ ನಾಡಿನ ಸೌಗಂಧವನ್ನು ಪರಿಚಯಿಸುವ ಕಾರ್ಯ ಶ್ಲಾಘನೀಯ. ಹೀಗಾಗಿ ಕನ್ನಡ ಕೆಲಸದಲ್ಲಿ ಹೆಚ್ಚು ಮಹಿಳಾ ಮಣಿಯರು ತೊಡಗಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

    ಹಿರಿಯ ವೈದ್ಯ ಡಾ|| ಜೆ.ಪಿ.ಕೃಷ್ಣೇಗೌಡ ಮಾತನಾಡಿ ಕನ್ನಡವೆಂದರೆ ಕೇವಲ ಭಾಷೆಯಲ್ಲ, ಉಸಿರೆಂದು ಭಾವಿಸಬೇಕು. ಪ್ರತಿನಿತ್ಯದ ಕೆಲಸ-ಕಾರ್ಯಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಕೆ ಮಾಡಬೇಕು. ಈ ನಡೆಯಿಂ ದಲೇ ಕನ್ನಡ ಸೊಗಡನ್ನು ಎಲ್ಲೆಡೆ ಪಸರಿಸಲು ಸಾಧ್ಯ ಎಂದ ಅವರು ನೂತನ ಮಹಿಳಾ ಅಧ್ಯಕ್ಷರು ಹೆಚ್ಚಿನ ಒತ್ತನ್ನು ನಾಡಿನ ಸೇವೆಗೆ ಮುಡಿಪಿಡಬೇಕು ಎಂದು ಹೇಳಿದರು.

    ತಾಲ್ಲೂಕು ಮಹಿಳಾ ಘಟಕದ ನೂತನ ಅಧ್ಯಕ್ಷೆ ನಿರ್ಮಲ ಮಂಚೇಗೌಡ ಮಾತನಾಡಿ ನಾಡಿನ ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸದಾ ಕಾರ್ಯೋನ್ಮುಖರಾಗುತ್ತೇನೆ. ಜೊತೆಗೆ ಹಿರಿಯರ, ಪದಾಧಿಕಾರಿಗಳ ಮಾ ರ್ಗದರ್ಶನದಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಕನ್ನಡಾಭಿಮಾನಗಳ ಋಣ ತೀರಿಸುವ ಕೆಲಸ ಮಾಡು ವುದಾಗಿ ತಿಳಿಸಿದರು.

    ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ರಾಜ್ಯದಲ್ಲಿ ಮೊದಲ ಬಾರಿಗೆ ಚಿಕ್ಕಮಗಳೂರು ಜಿಲ್ಲೆ ಕಸಾಪ ಮಹಿಳಾ ಸ್ಥಾಪಿಸಿ ಯಶಸ್ವಿಗೊಂಡ ಹಿನ್ನೆಲೆಯಲ್ಲಿ ಇದೀಗ ಮೈಸೂರು, ಬೀದ ರ್ ಜಿಲ್ಲೆಗಳಲ್ಲಿ ಮಹಿಳಾ ಘಟಕ ಸ್ಥಾಪಿಸುತ್ತಿವೆ. ಹೀಗಾಗಿ ಮಹಿಳೆಯರು ಕನ್ನಡದ ತೇರನ್ನು ಎಳೆದು ಭಾ ಷಾ ಸಂಸ್ಕೃತಿ ಬೆಳವಣಿಗೆಗೆ ಸಹಕರಿಸಬೇಕು ಎಂದು ಕಿವಿಮಾತು ಹೇಳಿದರು.

    ಮಹಿಳಾ ಘಟಕದ ಪದಾಧಿಕಾರಿಗಳು : ನಿರ್ಮಲ ಮಂಚೇಗೌಡ (ಅಧ್ಯಕ್ಷೆ), ಸುಜಾತ ಶಿವಕಮಾರ್ (ಗೌ.ಅಧ್ಯಕ್ಷ), ರೂಪ ನಾಯ್ಕ್ (ಗೌ.ಕಾರ್ಯದರ್ಶಿ), ಆರಾಧನಾ ಸೋಮಶೇಖರ್ (ಕೋಶಾಧ್ಯಕ್ಷ), ರೇಖಾ ಹುಲಿಯಪ್ಪಗೌಡ, ಜಸಂತಾ ಅನಿಲ್‌ಕುಮಾರ್ (ಕಾಯಾಧ್ಯಕ್ಷರು), ಕಲಾವತಿ ರಾಜಣ್ಣ, ಕವಿತಾ ಶೇಖರ್ (ಪ್ರಧಾನ ಸಂಚಾಲಕಿ), ವಿಶಾಲ ನಾಗರಾಜ್, ಪುಷ್ಪರಾಜೇಂದ್ರ (ಸಂಘಟನಾ ಕಾರ್ಯದರ್ಶಿ) ಮತ್ತಿತರರು ಆಯ್ಕೆಯಾದರು.
    ಕಾರ್ಯಕ್ರಮದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಉಪನ್ಯಾಸಕಿ ನಾಗಶ್ರೀ ತ್ಯಾಗರಾಜ್ ಉಪಪನ್ಯಾಸ ನೀಡಿ ದರು. ಕಸಾಪ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್ ಸೇವಾಧೀಕ್ಷೆ ಬೋಧಿಸಿದರು. ನಿಕಟಪೂರ್ವ ಅಧ್ಯಕ್ಷೆ ಸವಿತಾ ಸತ್ಯನಾರಾಯಣ್, ತಾಲ್ಲೂಕು ಕಸಾಪ ಅಧ್ಯಕ್ಷ ದಯಾನಂದ್ ಮಾವಿನಕೆರೆ, ನಗರಾಧ್ಯಕ್ಷ ಸಚಿನ್‌ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.

    The district has a special status in the field of art and literature.

     

  • ಹಿಂದೂಗಳ ಸುರಕ್ಷತೆಗಾಗಿ ಉಗಮಗೊಂಡ ಪಕ್ಷ ಬಿಜೆಪಿ

    ಹಿಂದೂಗಳ ಸುರಕ್ಷತೆಗಾಗಿ ಉಗಮಗೊಂಡ ಪಕ್ಷ ಬಿಜೆಪಿ

    ಚಿಕ್ಕಮಗಳೂರು: ವ್ಯಭಾರತ ವಿಭಜನೆಗೊಂಡ ಬಳಿಕ ನೆರೆದೇಶದಲ್ಲಿ ಸಿಲುಕಿಕೊಂಡ ಸಮಗ್ರ ಹಿಂದೂ ಅಣ್ಣ-ತಮ್ಮಂದಿರು ಹಾಗೂ ಮಾತೆಯರ ಸುರಕ್ಷತೆಗಾಗಿ ಮೊಟ್ಟಮೊದಲು ಉಗಮಗೊಂಡ ಪಕ್ಷ ಭಾರತೀಯ ಜನತಾ ಪಾರ್ಟಿ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ಹೇಳಿದರು.

    ನಗರದ ಪಾಂಚಜನ್ಯ ಕಚೇರಿಯಲ್ಲಿ ನಗರ ಬಿಜೆಪಿ ಮಂಡಲ ವತಿಯಿಂದ ಏರ್ಪಡಿಸಿದ್ಧ ಭಾರತೀಯ ಜನತಾ ಪಾರ್ಟಿ ೪೫ನೇ ಸಂಸ್ಥಾಪನ ದಿನದ ಪ್ರಯುಕ್ತ ದ್ವಜಾರೋಹಣ ನೆರವೇರಿಸಿ ಹಾಗೂ ಪಕ್ಷಗಾಗಿ ದು ಡಿದ ಮಹಾನಾಯಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಭಾನುವಾರ ಅವರು ಮಾತನಾಡಿದರು.

    ರಾಷ್ಟ್ರ ಹಿತಗಾಗಿ ಶ್ಯಾಮ್ ಪ್ರಕಾಶ್ ಮುಖರ್ಜಿ ನೆಹರು ಮಂತ್ರಿ ಮಂಡಲದ ಸ್ಥಾನವನ್ನು ತ್ಯಜಿಸಿ ಭಾರ ತಾಂಭೆಯ ಸೇವೆಗೆ ಮುಡಿಪಿಟ್ಟರು. ಸ್ವಾತಂತ್ರ್ಯ ಪೂರ್ವದಲ್ಲಿ ಪಶ್ಚಿಮ ಬಂಗಾಳ ರಾಜ್ಯವನ್ನು ಪಾಕಿಸ್ತಾನಕ್ಕೆ ಬಿಡಬೇಕೆಂಬ ನಿರ್ಧಾರ ಕೈಗೊಂಡಾಗ, ಸಾರಸಗಟಾಗಿ ವಿರೋಧಿಸಿ ರಾಷ್ಟ್ರದ ನೆಲವನ್ನು ಭಾರತೀಯರಿಗೆ ಉಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

    ಹಿಂದೂರಾಷ್ಟ್ರ ಕಲ್ಪನೆಯೊಂದಿಗೆ ಜನಸಂಘ ರಾಷ್ಟ್ರದಲ್ಲಿ ಹೆಮ್ಮರವಾಗಿ ಬೆಳೆಯಿತು. ಅಂದಿನ ಕಾಂಗ್ರೆಸ್ ಸರ್ಕಾರ ಈ ಬೆಳವಣಿಗೆ ಸಹಿಸದೇ ಅನೇಕ ತೊಂದರೆ ನೀಡಿದ್ದನ್ನು ಮನಗಂಡು ಜನಸಂಘ ವಿಸರ್ಜಿಸಿ ಮು ಂಚೂಣಿ ನಾಯಕರಾದ ವಾಜಪೇಯಿ, ಅಡ್ವಾಣಿ ಸಾರಥ್ಯದಲ್ಲಿ ೧೯೮೦ರಲ್ಲಿ ಬಿಜೆಪಿ ಪಕ್ಷ ಉಗಮಗೊಂಡು ರಾಷ್ಟ್ರ ರಾಜಕಾರಣಕ್ಕೆ ಸಂಸದರನ್ನು ಕೊಡುಗೆ ನೀಡಿತು ಎಂದು ಹೇಳಿದರು.

    ರೈತಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಸಿ.ಕಲ್ಮರುಡಪ್ಪ ಮಾತನಾಡಿ ರಾಷ್ಟ್ರದ ಅಸ್ಮಿತೆ ಉ ಳಿವಿಗಾಗಿ ವೈಚಾರಿಕತೆಯಡಿ ಭಾರತೀಯ ಜನತಾ ಪಾರ್ಟಿಯನ್ನು ಸ್ಥಾಪಿಸಿ ಕಾರ್ಯಕರ್ತರನ್ನು ಸಂಘಟಿಸಿ ತು. ವ್ಯಕ್ತಿಗಿಂತ ರಾಷ್ಟ್ರ ಮುಖ್ಯ, ದೇಶದ ಹಿತವೇ ಸ್ವಹಿತ ಎಂಬ ತತ್ವವನ್ನು ಸಾರಿದ ಮೊದಲ ಪಕ್ಷ ಭಾಜಪ ಎಂದು ತಿಳಿಸಿದರು.

    ಭಾಜಪವು ಅಧಿಕಾರಕ್ಕೆ ಜೋತುಬೀಳದೇ ಸ್ವಾತಂತ್ರ್ಯ ಹೋರಾಟಗಾರ ಮೊರಾರ್ಜಿ ದೇಸಾಯಿ ಅವರ ನ್ನು ದೇಶದ ೪ನೇ ಪ್ರಧಾನಿ ಸೂಚಿಸಿತು. ಬಳಿಕ ಪ್ರಧಾನಮಂತ್ರಿ ಹುದ್ದೆಗೂ ವಾಜಪೇಯಿ ಹಾಗೂ ಅಡ್ವಾಣಿ ಯು ಆಸೆಪಟ್ಟಿಲ್ಲ. ಈ ಮಹಾನೀಯರ ಔಹಾರ್ದತೆ, ಆದರ್ಶ ಇಂದಿನ ರಾಜಕೀಯ ಮುಖಂಡರುಗಳು ಅ ಳವಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಜೆಪಿ ನಗರಾಧ್ಯಕ್ಷ ಕೆಂಪನಹಳ್ಳಿ ಪುಷ್ಪರಾಜ್ ಬಿಜೆಪಿ ಆರಂಭದಲ್ಲಿ ಅನೇಕ ಸವಾಲು, ಸಂಕಷ್ಟವನ್ನು ಧೈರ್ಯವನ್ನು ಎದುರಿಸಿದ ಕಾರಣ ಇಂದು ರಾಷ್ಟ್ರದಲ್ಲೇ ಹೆಚ್ಚು ಲೋಕಸಭಾ ಸದಸ್ಯರು, ಶಾಸಕರು, ವಿಧಾನ ಪರಿಷತ್ ಸದಸ್ಯರನ್ನು ಒಳಗೊಂಡಿದೆ. ಅಲ್ಲದೇ ಹೆಚ್ಚಿನ ಸದಸ್ಯತ್ವ ನೋಂದಾಯಿಸಿ ಪ್ರಪಂಚದ ದೊಡ್ಡಪಕ್ಷವಾಗಿದೆ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಹಿಂದುಳಿದ ವರ್ಗ ಮೋ ರ್ಚಾದ ರಾಜ್ಯ ಕಾರ್ಯದರ್ಶಿ ಬಿ.ರಾಜಪ್ಪ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್, ನಗರ ಸಭಾ ಅಧ್ಯಕ್ಷೆ ಸುಜಾತ ಶಿವಕುಮಾರ್, ಮಾಜಿ ಅಧ್ಯಕ್ಷ ಕವಿತಾ ಶೇಖರ್, ಉಪಾಧ್ಯಕ್ಷೆ ಅನುಮಧುಕರ್, ನಗರಸಭೆ ಸದಸ್ಯರಾದ ಮಧುಕುಮಾರ್, ರೂಪ, ಯುವಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್, ಮು ಖಂಡರುಗಳಾದ ಜಸಂತಾ ಅನಿಲ್‌ಕುಮಾರ್, ವೀಣಾ, ಹೆಚ್.ಕೆ.ಕೇಶವಮೂರ್ತಿ, ಸಚ್ಚಿನ್‌ಗೌಡ, ದಿನೇಶ್, ಪ್ರದೀಪ್, ಎಸ್‌ಡಿ ಎಂ ಮಂಜು, ನಾರಾಯಣ್, ಬ್ಯಾಟರಿ ಮಂಜುನಾಥ್ ಮತ್ತಿತರರಿದ್ದರು.

    BJP is a party that was born for the safety of Hindus.

  • ಕಾಂಗ್ರೆಸ್ ಶಾಸಕರನ್ನು ಎಫ್‌ಐಆರ್‌ನಲ್ಲಿ ದಾಖಲಿಸಲು ಬಿಜೆಪಿ ಒತ್ತಾಯ

    ಕಾಂಗ್ರೆಸ್ ಶಾಸಕರನ್ನು ಎಫ್‌ಐಆರ್‌ನಲ್ಲಿ ದಾಖಲಿಸಲು ಬಿಜೆಪಿ ಒತ್ತಾಯ

    ಚಿಕ್ಕಮಗಳೂರು:  ಬಿಜೆಪಿ ಮುಖಂಡನ ಆತ್ಮಹತ್ಯೆ ಪ್ರಕರಣದಲ್ಲಿ ವಿರಾಜಪೇಟೆ ಹಾಗೂ ಮಡೀಕೆರೆ ಶಾಸಕರ ಹೆಸರನ್ನು ಎಫ್‌ಐಆರ್‌ನಲ್ಲಿ ದಾಖಲಿಸಬೇಕು ಎಂದು ಬಿಜೆಪಿ ನಗರ ಘಟಕದಿಂದ ಶಿರ ಸ್ತೇದಾರ್ ಹೇಮಂತ್‌ಕುಮಾರ್ ಮುಖಾಂತರ ರಾಜ್ಯಪಾಲರಿಗೆ ಮುಖಂಡರುಗಳು ಶನಿವಾರ ಮನವಿ ಸಲ್ಲಿ ಸಿದರು.

    ಈ ಕುರಿತು ಮಾತನಾಡಿದ ಬಿಜೆಪಿ ನಗರಾಧ್ಯಕ್ಷ ಕೆಂಪನಹಳ್ಳಿ ಪುಷ್ಪರಾಜ್ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಿಂದ ಹಲವಾರು ಹಿಂದೂ ಕಾರ್ಯಕರ್ತರ ಹತ್ಯೆ ಪ್ರಕರಣಗಳು ಹೆಚ್ಚಳಗೊಂಡಿವೆ. ಅಲ್ಲದೇ ಹಿಂದೂ ಸಮಾಜಕ್ಕೆ ಕಡೆಗಣಿಸಿ ಒಲೈಕೆ ರಾಜಕಾರಣ ಮಾಡುತ್ತಿವೆ ಎಂದು ಆರೋಪಿಸಿದರು.

    ಕಾಂಗ್ರೆಸ್ ಶಾಸಕರಾದ ಎ.ಎಸ್.ಪೊನ್ನಣ್ಣ ಮತ್ತು ಡಾ.ಮಂಥರಗೌಡರ ಬೆಂಬಲಿಗರ ಬೆದರಿಕೆ ಮತ್ತು ಕಿರುಕುಳದಿಂದ ಬೇಸತ್ತು ಕೊಡಗಿನ ಬಿಜೆಪಿ ಮುಖಂಡ ವಿನಯ್ ಸೋಮಯ್ಯ ಆತ್ಮಹತೆಗೆ ಶರಣಾಗಿದ್ದಾರೆ. ಈ ಶಾಸಕರೇ ಆತ್ಮಹತ್ಯೆಗೆ ನೇರ ಕಾರಣ ಮರಣಪತ್ರ ಬರೆದಿಟ್ಟರೂ ಕ್ರಮ ಕೈಗೊಳ್ಳದಿರುವುದು ದುರ್ದೈವ ಎಂದು ಹೇಳಿದರು.

    ಈ ಪ್ರಕರಣದಲ್ಲಿ ಶಾಸಕರ ಹೆಸರನ್ನು ಕೈಬಿಟ್ಟು ಬೆಂಬಲಿಗರ ವಿರುದ್ಧ ಎಫ್‌ಐಆರ್ ದಾಖಲಿಸಿದೆ. ನೈಜ ವಾಗಿ ಆತ್ಮಹತ್ಯೆಯಲ್ಲಿ ಶಾಸಕರ ಬೆದರಿಕೆ, ಕಿರುಕುಳ ಎಂಬುದು ಸ್ಪಷ್ಟವಾಗಿದ್ದರೂ ಶಾಸಕರ ವಿರುದ್ಧ ಎಫ್‌ಐ ಆರ್‌ನಲ್ಲಿ ಸೇರಿಸದೇ ರಾಜ್ಯಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಹೇಳಿದರು.

    ಕೂಡಲೇ ರಾಜ್ಯಪಾಲರು ಶಾಸಕರು ಹೆಸರನ್ನು ಎಫ್‌ಐಆರ್‌ನಲ್ಲಿ ದಾಖಲಿಸದಿದ್ದರೆ ಜಿಲ್ಲೆಯಾದ್ಯಂತ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಓಬಿಸಿ ಅಧ್ಯಕ್ಷ ಸಿ.ಟಿ.ಜಯ ವರ್ಧನ್, ನಗರ ಉಪಾಧ್ಯಕ್ಷರಾದ ಸತೀಶ್, ವೆಂಕಟೇಶ್, ರೇವನಾಥ್, ಪ್ರಧಾನ ಕಾರ್ಯದರ್ಶಿ ಎಂ.ಜಿ. ಬಸವರಾಜ್, ಕಾರ್ಯದರ್ಶಿ ಮಧು, ಮುಖಂಡರುಗಳಾದ ಸೀತರಾಮಭರಣ್ಯ, ಚಮೀನ್ ಮತ್ತಿರರಿದ್ದರು.

    BJP demands registration of Congress MLAs in FIR