Category: ಚಿಕ್ಕಮಗಳೂರು ನಗರ
-

ಅಭಿವೃದ್ಧಿ ಕಾರ್ಯಗಳಲ್ಲೂ ಸರ್ಕಾರ ಮುಂಚುಣಿಯಲ್ಲಿದೆ
ಚಿಕ್ಕಮಗಳೂರು: ನಮ್ಮ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ವ್ಯವಸ್ಥಿತವಾಗಿ ತಲುಪಿಸುವುದಲ್ಲದೇ ವಿವಿಧ ಯೋಜನೆಗಳನ್ನು ರೂಪಿಸಿ ರಾಜ್ಯದ ಸರ್ವತೋಮುಖ ಅಭಿವೃದ್ಧಿ ಕಾರ್ಯದಲ್ಲು ಮುಂದಿದೆ ಎಂದು ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು.ಬೆಳವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳವಾಡಿ ಗ್ರಾಮದ ರಸ್ತೆ ಮತ್ತು ಮಸೀದಿ ಅಭಿವೃದ್ಧಿಗೆ ಅಲ್ಪ ಸಂಖ್ಯಾತರ ಇಲಾಖೆ ಮತ್ತು ವಕ್ಫ್ ಬೋರ್ಡ್ ಇಲಾಖೆ ವತಿಯಿಂದ ೪೦ ಲಕ್ಷ ರೂ ವೆಚ್ಚದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಶಂಕುಸ್ಥಾಪನೆ ನೆರೆವೇರಿಸಿ ಮಾತನಾಡಿ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರಲ್ಲಿ ಚುನಾವಣೆ ಪೂರ್ವದಲ್ಲಿ ಘೋಷಿಸಿದ ಯೋಜನೆಗಳು ಎಂದರುಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿಯೋಜನೆ ಹಾಗೂ ಯುವನಿಧಿಯಂತಹ ಪಂಚ ಗ್ಯಾರಂಟಿ ಯೋಜನೆಗಳನ್ನು ಕೇವಲ ೬ ತಿಂಗಳುಗಳಲ್ಲಿ ಜಾರಿಗೆ ತಂದು ಮಹಿಳಾ ಸಬಲೀಕರಣದೊಂದಿಗೆ ದೀನ ದಲಿತರನ್ನು ಹಸಿವು ಮುಕ್ತರನ್ನಾಗಿ ಮಾಡಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಶ್ರಮಿಸುತ್ತಿದೆ ಎಂದ ಅವರು ಕ್ಷೇತ್ರದ ಯಾವುದೇ ಗ್ರಾಮಕ್ಕೆ ಬೇಟಿ ನೀಡಿದರು ಅಲ್ಲಿರುವ ಷೋಷಿತ ಹಾಗೂ ಹಿಂದುಳಿದ ವರ್ಗಗಳ ಮಹಿಳೆಯರು ಸೇರಿದಂತೆ ಎಲ್ಲಾ ಮಹಿಳೆಯರು ಸಂತೋಷದಿಂದ ಸ್ವಾವಲಂಬಿಗಳಾಗಿ ತಮ್ಮ ಜೀವನವನ್ನು ನಿರ್ವಹಿಸುತ್ತಿದ್ದಾರೆ. ಮಹಿಳಾ ಸಬಲೀಕರಣವು ಸರ್ಕಾರದ ಧ್ಯೇಯ ಎಂದರು.ಗ್ಯಾರಂಟಿ ಯೋಜನೆಗಳೊಂದಿಗೆ ಸರ್ಕಾರವು ವಿವಿಧ ಯೋಜನೆಗಳನ್ನು ರೂಪಿಸಿ ರಾಜ್ಯದ ಸರ್ವತೋಮುಖ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುತ್ತಿದೆ. ಕ್ಷೇತ್ರದ ಎಲ್ಲಾ ಗ್ರಾಮಗಳಲ್ಲಿಯು ಜನರು ರಸ್ತೆ ಹಾಗೂ ಸಮುದಾಯ ಭವನಗಳಿಗೆ ಅನುದಾನದ ಬೇಡಿಕೆ ಇಡುತ್ತಿದ್ದಾರೆ. ಮುಖ್ಯಮಂತ್ರಿಗಳು ನಮ್ಮ ಮನವಿ ಮೇರೆಗೆ ೨೫ ಕೊಟಿ ರೂಗಳ ವಿಷೇಶ ಅನುದಾನವನ್ನು ನೀಡಿದ್ದಾರೆ.ಆ ಅನುದಾನದಲ್ಲಿ ಸುಮಾರು ೩ ಕೋಟಿಗೂ ಅಧಿಕ ಅನುದಾನದಲ್ಲಿ ಬೆಳವಾಡಿ, ಕೆ.ಬಿ ಹಾಳ್ ಹಾಗೂ ಮಾಚೇನಹಳಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗಾಗಿ ಇಂದು ಶಂಕುಸ್ಥಾಪನೆ ನಡೆಸಲಾಗಿದೆ. ಮಾಚೇನಹಳ್ಳಿ ತಾಂಡ್ಯದಿಂದ ಜಾವಗಲ್ ವರೆಗೂ ಸುಮಾರು ೫೦ ಲಕ್ಷ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ನಿರ್ವಹಿಸಲಾಗುತ್ತಿದೆ. ಸಾರ್ವಜನಿಕರಿಗೆ ಹೆಚ್ಚು ಅಗತ್ಯವಿರುವ ಅಂಶಗಳಿಗೆ ಮೊದಲು ಆದ್ಯತೆ ನೀಡಿದ್ದು ಇದೇ ರೀತಿ ಹಂತ ಹಂತವಾಗಿ ಕ್ಷೇತ್ರದ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಬಗರ್ ಹುಕ್ಕುಂ ಕಮಿಟಿ ಸದಸ್ಯರಾದ ಕೆಂಗೇಗೌಡ, ಶಂಕರ್ ನಾಯಕ್, ಅಮೀರ್ ಬೆಳವಾಡಿ, ಚಂದ್ರಶೇಖರ್, ಕೃಷ್ಣಮೂರ್ತಿ, ಹರೀಶ್, ನಾಗಣ್ಣ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.Foundation stone laid for development works at a cost of Rs 40 lakh by the Waqf Board Department -

ಬಿಜಿಎಸ್ ಆರೋಗ್ಯಪೂರ್ಣ ಸಮಾಜ ನಿರ್ಮಾಣದ ಸಂಕಲ್ಪ ಹೊಂದಿದ್ದರು
ಚಿಕ್ಕಮಗಳೂರು: ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮಾಡಬೇಕೆಂಬ ಉದ್ದೇಶದಿಂದ ಪರಮಪೂಜ್ಯ ಶ್ರೀ ಬಾಲಗಂಗಾಧನಾಥ ಸ್ವಾಮೀಜಿಗಳು ಎಲ್ಲಾ ವರ್ಗದ ಜನರ ತಲೆಗೊಂದು ಮರ ಇರಬೇಕೆಂಬ ಸಂಕಲ್ಪ ಮಾಡಿ ಪರಿಸರ ವನಕ್ರಾಂತಿಯನ್ನು ಮಾಡಿದ್ದರು ಎಂದು ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿ ಹೇಳಿದರು.
ಅವರು ಇಂದು ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಜಿಲ್ಲಾ ಒಕ್ಕಲಿಗರ ಸಂಘ ಏರ್ಪಡಿಸಿದ್ದ ಆದಿಚುಂಚನಗಿರಿ ಮಹಾ ಸಂಸ್ಥಾನದ ಜಗದ್ಗುರು ಭೈರವೈಕ್ಯ ಡಾ. ಶ್ರೀಶ್ರೀಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳ ೮೦ ನೇ ಜಯಂತ್ಯೋತ್ಸವ, ವಿದ್ಯಾರ್ಥಿ ವೇತನ ವಿತರಣೆ ಮತ್ತು ಸನ್ಮಾನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಹಿರಿಯ ಪರಮ ಪೂಜ್ಯರ ಹೆಸರಿನಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರ್ತಿಸಿ ಪ್ರೋತ್ಸಾಹಿಸುವ ಕಾರ್ಯ ನಿಜವಾದ ಪುಣ್ಯದ ಕಾರ್ಯ ಎಂದ ಅವರು, ದೇವರು ದೇವಾಲಯಗಳಿಂದ ಮಾತ್ರ ಪುಣ್ಯದ ಕಾರ್ಯ ಅಲ್ಲ, ಸಮಾಜಮುಖಿ ಕಾರ್ಯಗಳಿಂದ ಮಾತ್ರ ಸಾಧ್ಯ ಎಂದರು.
ಬಾಲಗಂಗಾಧರನಾಥ ಮಹಾಸ್ವಾಮಿಗಳು ದೇವಸ್ಥಾನ, ದೇವರು ಎಂಬುದಕ್ಕಿಂತ ಹೆಚ್ಚಾಗಿ ಸಮಾಜದಲ್ಲಿನ ಬಡವರು, ದೀನದಲಿತರು, ಅನಾಥರ ಸೇವೆ ಮಾಡಬೇಕೆಂದು ಹೇಳುತ್ತಿದ್ದರು. ಜೊತೆಗೆ ಅದನ್ನು ಸಾಧಿಸಿ ತೋರಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆಂದು ಹೇಳಿದರು.
ಈ ನಿಟ್ಟಿನಲ್ಲಿ ಜಿಲ್ಲಾ ಒಕ್ಕಲಿಗರ ಸಂಘ ಕಳೆದ ಮೂರುವರೆ ದಶಕಗಳಿಂದ ಇಂತಹ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತ ಬರುತ್ತಿರುವುದು ಶ್ಲಾಘನೀಯ ಎಂದ ಅವರು, ಪೂಜ್ಯ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳು ಒಂದು ವರ್ಗಕ್ಕೆ ಸೀಮಿತವಾಗಿಲ್ಲ, ಎಲ್ಲಾ ವರ್ಗದ ಜನ ಸಮುದಾಯ ಇಂತಹ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಬೇಕೆಂದು ತಿಳಿಸಿದರು.
ಜಿಲ್ಲೆಯಲ್ಲಿ ಅಂದು ಆದಿಚುಂಚನಗಿರಿ ತಾಂತ್ರಿಕ ಮಾಹಾವಿದ್ಯಾಲಯವನ್ನು ಸ್ಥಾಪಿಸಿದ ಪರಿಣಾಮ ಎಲ್ಲಾ ಸಮುದಾಯದ ಪ್ರಸ್ತುತ ಸಾವಿರಾರು ವಿದ್ಯಾರ್ಥಿಗಳು ಹೊರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಸಾಲಿನಲ್ಲಿ ಒಕ್ಕಲಿಗ ಸಮುದಾಯ ಹೊರತುಪಡಿಸಿದೆ ಎಂದು ವಿಷಾಧಿಸಿದರು.
ಬಾಲಗಂಗಾಧರನಾಥ ಮಹಾಸ್ವಾಮಿಗಳು ಇಡೀ ಮನುಕುಲಕ್ಕೆ ಸಹಾಯಹಸ್ತ ನೀಡಲು ಅವತಾರವನ್ನು ತಾಳಿ ಬಂದಿದ್ದರು. ಇದು ನಮ್ಮ ಪುಣ್ಯ. ಎಲ್ಲರೂ ನಮ್ಮವರೇ ಎಂಬ ಭಾವನೆ ರಾಷ್ಟ್ರಕವಿ ಕುವೆಂಪು ಅವರಲ್ಲಿ ಅಡಗಿತ್ತು. ಅವರಂತೆ ಸಕಲ ಜೀವರಾಶಿಗಳನ್ನು ಉಳಿಸಿ ಬೆಳೆಸುವಂತ ಕಾರ್ಯವನ್ನು ಶ್ರೀಗಳು ಮಾಡಿದ್ದಾರೆ ಎಂದು ಬಣ್ಣಿಸಿದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಮಾತನಾಡಿ, ಕಳೆದ ೭೦ ವರ್ಷಗಳಲ್ಲಿ ಬಾಲಗಂಗಾಧರನಾಥ ಸ್ವಾಮಿಗಳು ಸ್ಮರಣೆ ಮಾಡಲು ಹಲವಾರು ಕಾರಣಗಳಿದ್ದು ಅವರ ಜೀವಿತಾವಧಿಯಲ್ಲಿ ಮಾಡಿರುವ ಸಾಧನೆಗಳು ಒಕ್ಕಲಿಗರ ಸಮಾಜಕ್ಕೆ ಗುರುತು ತಂದುಕೊಟ್ಟಿದೆ ಎಂದರು.
ಭಿಕ್ಷಾಟನೆ ಮೂಲಕ ಮಠವನ್ನು ಕಟ್ಟಿ ಬೆಳೆಸಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ್ದಾರೆ. ಅವರ ತ್ಯಾಗ, ಶ್ರಮ ಒಕ್ಕಲಿಗರಲ್ಲಿ ಒಮ್ಮತ ಮೂಡಿಸಲು ಪ್ರಯತ್ನ ಕಾರಣ. ಎಲ್ಲಾ ರೀತಿಯ ಸಮಾಜಮುಖಿ ಕಾರ್ಯಗಳ ಜೊತೆಗೆ ೫ ಕೋಟಿ ಸಸ್ಯಗಳನ್ನು ನೆಡುವ ಮೂಲಕ ರಾಜ್ಯದಲ್ಲೇ ಪರಿಸರ ಪ್ರೀತಿಸುವ ವನಕ್ರಾಂತಿ ಮಾಡಿದ್ದಾರೆಂದು ಬಣ್ಣಿಸಿದರು.
೪೫೦ ಕ್ಕೂ ಹೆಚ್ಚು ಸಂಘ-ಸಂಸ್ಥೆಗಳು, ಶಾಲಾ-ಕಾಲೇಜುಗಳನ್ನು ಸ್ಥಾಪಿಸಿದ ಏಕೈಕ ಬಾಲಗಂಗಾಧರನಾಥ ಶ್ರೀಗಳು ೧೯೮೫ ರಲ್ಲಿ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯವನ್ನು ಸ್ಥಾಪಿಸಿದ ಪರಿಣಾಮ ಶ್ರೀಗಳ ಹೆಸರಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ಹೊರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆಂದು ಹೇಳಿದರು.
ಬಿಜಿಎಸ್ ವಿಶ್ವವಿದ್ಯಾ ನಿಲಯದ ಕುಲಸಚಿವರಾದ ಡಾ. ಸಿ.ಕೆ. ಸುಬ್ರಾಯ ಮಾತನಾಡಿ, ಜಿಲ್ಲಾ ಒಕ್ಕಲಿಗರ ಸಂಘ ಜಿಲ್ಲೆಯನ್ನು ಶೈಕ್ಷಣಿಕವಾಗಿ, ಆಧ್ಯಾತ್ಮಿಕವಾಗಿ ವಿಶ್ವದಲ್ಲೇ ಹೆಸರು ಮಾಡಿರುವ ವಿಶೇಷವಾದ ಸಂಘವಾಗಿದ್ದು, ಶಿಸ್ತು, ಸಂಯಮ, ಗುಣಮಟ್ಟ ಹೊಂದಿದೆ ಎಂದು ಶ್ಲಾಘಿಸಿದರು.
ಬಾಲಗಂಗಾಧರನಾಥ ಶ್ರೀಗಳು ಕೆರೆಕಟ್ಟೆ ತುಂಬಿಸಿ ಹಸಿರು ಕ್ರಾಂತಿ ಮಾಡಿದ ಆಧುನಿಕ ಭಗೀರಥ ಎಂದು ಬಣ್ಣಿಸಿದ ಅವರು, ಒಬ್ಬ ವ್ಯಕ್ತಿ ಮನಸ್ಸು ಮಾಡಿದರೆ ಏನುಬೇಕಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ಶ್ರೀಗಳು ಸ್ಪಷ್ಟ ಉದಾಹರಣೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಗೌರವ ಕಾರ್ಯದರ್ಶಿ ಎಂ.ಎಸ್ ಪ್ರದೀಪ್ ಕುಮಾರ್, ಉಪಾಧ್ಯಕ್ಷ ಟಿ.ಡಿ. ಮಲ್ಲೇಶ್, ನಿರ್ದೇಶಕರುಗಳಾದ ಬಿ.ಸಿ.ಲೋಕಪ್ಪಗೌಡ, ಕೆ.ಬಿ.ಅನಂತೇಗೌಡ, ಕೆ.ಪಿ.ರಾಜೇಂದ್ರ, ರತೀಶ್ ಕುಮಾರ್ ಕೆ.ಯು, ಹರಿಣಾಕ್ಷಿ ನಾಗರಾಜ್, ಎಂ. ಅಶೋಕ್, ಎಂ.ಬಿ ಸತೀಶ್, ಯು.ಪಿ ಮನುಕುಮಾರ್, ಕೆ.ಪಿ ಪೃಥ್ವಿರಾಜ್, ಹೆಚ್.ಕೆ.ನವೀನ್, ಬಿ.ಸಿ.ಶ್ರೀನಾಥ್, ಟಿ.ರಾಜು, ಹೆಚ್.ಎಸ್ ಮೋಹನ್, ಕೆ.ಬಿ.ಸಜಿತ್, ಸಿ.ಟಿ.ರೇವತಿ. ಎಂ.ಬಿ ಸಂತೋಷ್, ಟಿ.ಎಂ ಉಮಾಶಂಕರ್, ಭವ್ಯನಟೇಶ್, ಪವಿತ್ರರತೀಶ್, ಹೋಯ್ಸಳ, ಮಂಜುಚೇತನ್, ಪ್ರಮೋದ್ ಸಿಇಓ ಕುಳ್ಳೇಗೌಡ, ವ್ಯವಸ್ಥಾಪಕರಾದ ತೇಜಸ್ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
80th Birth Anniversary of Dr. Sri Balagangadharnath Mahaswamy
-

ಶ್ರೀ ರಂಭಾಪುರಿ ಜಗದ್ಗುರುಗಳವರ ಫೆಬ್ರುವರಿ ಮಾಹೆಯ ಪ್ರವಾಸ ವಿವರ
ಶ್ರೀ ರಂಭಾಪುರಿ ಪೀಠ(ಬಾಳೆಹೊನ್ನೂರು): ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳವರ ೨೦೨೫ನೇ ಸಾಲಿನ ಫೆಬ್ರುವರಿ ಮಾಹೆಯ ಪ್ರವಾಸ ಕಾರ್ಯಕ್ರಮ ಈ ಕೆಳಗಿನಂತಿರುವುದಾಗಿ ಶ್ರೀ ಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್.ಬಾಳನಗೌಡ್ರ ತಿಳಿಸಿದ್ದಾರೆ.ದಿನಾಂಕ ೧ರಂದು ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕ ಹಂಪಸಾಗರದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳವರ ಪೀಠಾರೋಹಣದ ೩೪ನೇ ವರ್ಧಂತಿ ಮಹೋತ್ಸವ ಧರ್ಮ ಸಮಾರಂಭ, ೨ರಂದು ಕಲಘಟಗಿ ತಾಲೂಕ ಸುರಶೆಟ್ಟಿಕೊಪ್ಪದಲ್ಲಿ ಶ್ರೀ ಜಗದ್ಗುರು ರೇಣುಕ-ಶ್ರೀ ವೀರಭದ್ರಸ್ವಾಮಿ ಮೂರ್ತಿ ಪ್ರತಿಷ್ಠಾಪನಾ ಸಮಾರಂಭ, ೩ರಂದು ವಿಜಯಪುರ ಜಿಲ್ಲೆ ಲೋಣಿ(ಬಿ.ಕೆ.) ಗ್ರಾಮದಲ್ಲಿ ಶ್ರೀ ಗುರು ರೇವಣಸಿದ್ಧೇಶ್ವರ ಗೋಪುರ ಕಳಸಾರೋಹಣ ಸಮಾರಂಭ,೫ರಂದು ಮಹಾರಾಷ್ಟ್ರ ರಾಜ್ಯದ ಅಕ್ಕಲಕೋಟ ತಾಲೂಕ ಮೈಸಲಗಿಯಲ್ಲಿ ಧರ್ಮ ಜಾಗೃತಿ ಸಮಾರಂಭ, ೬ರಂದು ಅಕ್ಕಲಕೋಟ ತಾಲೂಕ ತಡವಾಳದಲ್ಲಿ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸುವರು. ದಿನಾಂಕ ೭ರಂದು ಕಲಬುರ್ಗಿಯಲ್ಲಿ ಶ್ರೀ ಚೌಧಾಪುರಿ ಹಿರೇಮಠದ ನವೀಕೃತ ಕಟ್ಟಡ ಹಾಗೂ ಗದ್ದುಗೆ ಪ್ರತಿಷ್ಠಾಪನಾ ಸಮಾರಂಭ, ೮ರಂದು ತಿಪಟೂರು ತಾಲೂಕ ಈಚನೂರಿನಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನ ಉದ್ಘಾಟನಾ ಸಮಾರಂಭ,೧೦ರಂದು ಬೆಳಿಗ್ಗೆ ೧೦ ಗಂಟೆಗೆ ಭದ್ರಾವತಿ ತಾಲೂಕ ವೈಸನಹಳ್ಳಿಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಮೂರ್ತಿ ಪ್ರತಿಷ್ಠಾಪನೆ-ಧರ್ಮ ಸಮಾರಂಭ, ಮಧ್ಯಾಹ್ನ ೧೨.೩೦ ಗಂಟೆಗೆ ಶಿವಮೊಗ್ಗ ಜಿಲ್ಲೆ ಹೊಳೆಹಟ್ಟಿ ಹಳೇ ಗ್ರಾಮದಲ್ಲಿ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸುವರು. ದಿನಾಂಕ ೧೨ರಂದು ಪೌರ್ಣಿಮೆಯ ನಿಮಿತ್ಯ ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ವಾಸ್ತವ್ಯ ಇದ್ದು ಭಕ್ತಾದಿಗಳಿಗೆ ದರ್ಶನಾಶೀರ್ವಾದ ನೀಡುವರು.ದಿನಾಂಕ ೧೫ರಂದು ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕ ತಿಪ್ಪಾಯಿಕೊಪ್ಪದಲ್ಲಿ ಇಷ್ಟಲಿಂಗ ಮಹಾಪೂಜಾ-ಸಮಾರಂಭ, ೧೬ರಂದು ಸಾಗರದಲ್ಲಿ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಹಾಗೂ ಇಷ್ಟಲಿಂಗ ಮಹಾಪೂಜಾ, ೧೭ರಂದು ಬೇಲೂರು ತಾಲೂಕ ಪಡುವಳಲು ಗ್ರಾಮದಲ್ಲಿ ನೂತನ ದೇವಾಲಯ ಉದ್ಘಾಟನಾ ಸಮಾರಂಭ, ೧೮ರಂದು ಸವದತ್ತಿ ತಾಲೂಕ ಹೂಲಿ ಗ್ರಾಮದಲ್ಲಿ ಲಿಂ.ಶ್ರೀ ಸಂಗಮೇಶ್ವರ ಅಜ್ಜನವರ ಪುಣ್ಯಾರಾಧನೆ ಧರ್ಮ ಸಮಾರಂಭ, ೧೯ರಂದು ಶಹಪುರ ತಾಲೂಕ ದೋರನಹಳ್ಳಿಯಲ್ಲಿ ಶ್ರೀ ಗುರು ಪಟ್ಟಾಧಿಕಾರ ಸಮಾರಂಭ, ದಿನಾಂಕ ೨೧ರಂದು ಸವಣೂರಿನಲ್ಲಿ ನೂತನ ಗೃಹ ಪ್ರವೇಶ-ಸಮಾರಂಭದಲ್ಲಿ ಪಾಲ್ಗೊಳ್ಳುವರು.ದಿನಾಂಕ ೨೨ರಂದು ಲಕ್ಷ್ಮೇಶ್ವರ ತಾಲೂಕ ಆಡರಕಟ್ಟಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಕಟ್ಟಡ ಉದ್ಘಾಟನೆ ಸಮಾರಂಭ, ೨೩ರಂದು ಹರಿಹರ ತಾಲೂಕ ಗುತ್ತೂರಿನಲ್ಲಿ ಇಷ್ಟಲಿಂಗ ಮಹಾಪೂಜಾ ಧರ್ಮ ಸಮಾರಂಭ, ೨೪ರಂದು ಹೊಳೆನರಸೀಪುರ ತಾಲೂಕ ನಿಡುವಣಿ ಗ್ರಾಮದಲ್ಲಿ ದೇವಾಲಯ ಉದ್ಘಾಟನೆ-ಧರ್ಮ ಸಮಾರಂಭ, ೨೬ರಂದು ವಿಜಯಪುರ ಜಿಲ್ಲೆ ನಾಗಠಾಣದಲ್ಲಿ ಶ್ರೀ ಉದಯಲಿಂಗೇಶ್ವರ ದೇವಸ್ಥಾನ ಉದ್ಘಾಟನಾ ಸಮಾರಂಭ, ೨೭ರಂದು ನರಗುಂದ ಪಂಚಗೃಹ ಹಿರೇಮಠದಲ್ಲಿ ಧರ್ಮ ಜಾಗೃತಿ ಸಮಾರಂಭ, ೨೮ರಂದು ಲಕ್ಷ್ಮೇಶ್ವರ ತಾಲೂಕ ಮುಕ್ತಿಮಂದಿರ ಕ್ಷೇತ್ರದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸುವರು.ಶ್ರೀ ರಂಭಾಪುರಿ ಜಗದ್ಗುರುಗಳವರ ಧಾರ್ಮಿಕ ಕಾರ್ಯಕ್ರಮಗಳ ಲಾಭವನ್ನು ಸಮಸ್ತ ಜನತೆ ಪಡೆದುಕೊಳ್ಳಬೇಕೆಂದು ಅವರು ವಿನಂತಿಸಿದ್ದಾರೆ.Details of Sri Rambhapuri Jagadguru’s February tour -

ಗ್ರಾಹಕರ ಹಕ್ಕುಗಳ ರಕ್ಷಣೆ ಎಲ್ಲರ ಹೊಣೆ
ಚಿಕ್ಕಮಗಳೂರು: ಗ್ರಾಹಕರ ಹಕ್ಕುಗಳ ರಕ್ಷಣೆ ಎಲ್ಲರ ಹೊಣೆಯಾಗಿದೆ. ಗ್ರಾಹಕರು ತಮ್ಮ ಹಕ್ಕುಗಳು ಹಾಗೂ ಜವಾಬ್ದಾರಿಗಳ ಬಗ್ಗೆ ಹೆಚ್ಚಿನ ಜ್ಞಾನ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಎನ್.ಆರ್. ಚನ್ನಕೇಶವ ಹೇಳಿದರು.ಜಿಲ್ಲಾಡಳಿತ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾನೂನು ಮಾಪನಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ವತಿಯಿಂದ ಇಂದು ನಗರದ ಬಸವನಹಳ್ಳಿಯ ಬಾಲಿಕಾ ಸರ್ಕಾರಿ ಪದವಿ ಪೂರ್ವ ಕಾಲೇಜಿ(ಪ್ರೌಢಶಾಲಾ ವಿಭಾಗ) ನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಗ್ರಾಹಕರು ಅಂದರೆ ನಾವೆಲ್ಲರು, ನಾವು ಇಂದು ನಮ್ಮ ಗ್ರಾಹಕ ಹಕ್ಕುಗಳ ಬಗ್ಗೆ ತಿಳಿಯುವುದು ಬಹಳ ಮುಖ್ಯವಾಗುತ್ತದೆ. ಖರೀದಿದಾರನ ಯೋಗ ಕ್ಷೇಮದ ದೃಷ್ಟಿಯಲ್ಲಿ ಗ್ರಾಹಕ ಹಕ್ಕುಗಳ ಅವಶ್ಯಕತೆ ಇದೆ. ಗ್ರಾಹಕ ಹಕ್ಕುಗಳ ಬಗ್ಗೆ ತಿಳಿಯದೇ ಹೋದರೆ ನಮಗೆ ಒಳಿತಿಲ್ಲ, ಗ್ರಾಹಕರ ರಕ್ಷಣೆ ಸಮಾಜದ ಧ್ವನಿಯಾದಾಗ ಮಾತ್ರ ಗ್ರಾಹಕರ ರಕ್ಷಣೆ ಸಾಧ್ಯ. ತಾವು ಖರೀದಿಸಲಾದ ವಸ್ತು ಹಾಗೂ ಅದರ ಸೇವೆ ಗುಣಮಟ್ಟದ್ದಾಗಿದೆಯೋ, ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.ಖರೀದಿಸಲಾದ ವಸ್ತುವಿನ ಬಿಲ್‌ನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಮೋಸ ಮಾಡುವವರು ತುಂಬಾ ಚಾಣಾಕ್ಷ ನಡೆ ಅನುಸರಿಸುತ್ತಾರೆ. ಇಂಥ ಕೃತ್ಯಗಳಿಗೆ ಕಡಿವಾಣ ಹಾಕಲು ಪ್ರತಿಯೊಬ್ಬರು ಸುಶಿಕ್ಷಿತರಾಗಿರಬೇಕು ಅದರಲ್ಲೂ ತಂತ್ರಜ್ಞಾನ ತಿಳಿದುಕೊಳ್ಳಬೇಕು. ಸಾರ್ವಜನಿಕರು ಮಾರುಕಟ್ಟೆಯಲ್ಲಿ ಯಾವುದೇ ವಸ್ತುಗಳನ್ನು ಖರೀದಿಸುವಾಗ ಎಚ್ಚರವಹಿಸುವುದು ಅತ್ಯವಶ್ಯಕವಾಗಿದೆ. ಗ್ರಾಹಕರ ಹಕ್ಕುಗಳ ಬಗ್ಗೆ ಅರಿವು ಹೊಂದಿದ್ದರೆ ಮಾರುಕಟ್ಟೆಯಲ್ಲಿ ವಸ್ತುಗಳ ಖರೀದಿ ಕಲಬೆರಕೆ ಬಗ್ಗೆ ಎಚ್ಚರ ವಹಿಸಲು ಸಾಧ್ಯ ಎಂದು ಹೇಳಿದರು.ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ವಿ. ಹನುಮಂತಪ್ಪ ಮಾತನಾಡಿ ಸಮಾಜದಲ್ಲಿ ಒಬ್ಬರನ್ನೊಬ್ಬರು ಅವಲಂಬಿಸಿರುವುದರಿಂದ ದಿನನಿತ್ಯ ಜೀವನಕ್ಕೆ ಅಗತ್ಯವಾದ ವಸ್ತುಗಳನ್ನು ಖರೀದಿಸುವಾಗ ನಡೆಯುವ ಮೋಸ, ವಂಚನೆಗೆ ಒಳಗಾಗುವುದನ್ನು ತಡೆಯಲು ಜಾಗೃತವಾಗಿರಬೇಕು ಎಂದ ಅವರು ಗ್ರಾಹಕರ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು.ಗ್ರಾಹಕರು ಎಷ್ಟೇ ಜಾಗೃತರಾಗಿದ್ದರೂ ಒಂದೊಮ್ಮೆ ಮೋಸ ಹೋಗುವುದು ಸಹಜ, ಇಂತಹ ಸಂದರ್ಭದಲ್ಲಿ ಮೋಸ ಹೋದ ಯಾವುದೇ ಗ್ರಾಹಕನು ತನಗಾದ ನಷ್ಟವನ್ನು ಹಿಂಪಡೆಯಲು ಗ್ರಾಹಕ ವೇದಿಕೆಗೆ ಲಿಖಿತ ರೂಪದಲ್ಲಿ ದೂರನ್ನು ಸಲ್ಲಿಸಬಹುದು.ಗ್ರಾಹಕರಿಗೆ ಸುರಕ್ಷತೆಯ ಹಕ್ಕನ್ನು ನೀಡಲಾಗಿದೆ. ಅವರು ಖರೀದಿಸುವ ಯಾವುದೇ ವಸ್ತು, ಸರಕು, ಅಥವಾ ಪಡೆಯುವ ಸೇವೆಯು ಸುರಕ್ಷಿತವಾಗಿರಬೇಕೆಂದು ಈ ಹಕ್ಕು ಹೇಳುತ್ತದೆ. ಸುರಕ್ಷತೆಯ ಹಕ್ಕನ್ನು ಕೇವಲ ಗ್ರಾಹಕ ಸಂರಕ್ಷಣಾ ಕಾಯ್ದೆ ಮಾತ್ರವಲ್ಲ ಇನ್ನೂ ಅನೇಕ ಕಾನೂನುಗಳಲ್ಲಿ ಅವಕಾಶ ನೀಡಲಾಗಿದ್ದು, ದೀರ್ಘ ಬಾಳಿಕೆಯ ವಸ್ತುಗಳು, ಔಷಧ, ಸೌಂದರ್ಯವರ್ಧಕ, ಆಹಾರ, ಪಾನೀಯ ಎಲ್ಲವು ಗ್ರಾಹಕರಿಗೆ ಸುರಕ್ಷಿತವಾಗಿರಬೇಕು ಎಂದು ಹೇಳಿದರು.ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮಹಿಳಾ ಸದಸ್ಯರಾದ ಪ್ರೇಮ .ಇ ಮಾತನಾಡಿ ಗ್ರಾಹಕರಿಗೆ ಅನಗತ್ಯವಾಗಿ ವಂಚಿಸುವ ಇ-ಕಾಮರ್ಸ್ ಮತ್ತು ಡಿಜಿಟಲ್ ವ್ಯವಹಾರ ಹಾಗೂ ಆನ್ ಲೈನ್‌ನಲ್ಲಿ ಖರೀದಿಸುವ ಗ್ರಾಹಕರಿಗೆ ಎಷ್ಟು ಅನುಕೂಲವೋ ಅಷ್ಟೇ ವಂಚನೆ ಪ್ರಕರಣಗಳು ಕೂಡ ಹೆಚ್ಚು. ಈ ಬಗ್ಗೆ ಗ್ರಾಹಕರು ಎಚ್ಚರಿಕೆಯಿಂದ ವ್ಯವಹಾರ ಮಾಡುವುದರ ಜೊತೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಬಹಳ ಮುಖ್ಯ ಎಂದು ಹೇಳಿದರು.ಚಿಕ್ಕಮಗಳೂರು ಉಪವಿಭಾಗದ ಉಪವಿಭಾಗಾಧಿಕಾರಿಗಳು ಹಾಗೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕಿ ರಶ್ಮಿ ಎಸ್.ಆರ್. ಸ್ವಾಗತಿಸಿದರು. ಬಸವನಹಳ್ಳಿ ಬಾಲಿಕ ಸ.ಪ.ಪೂ. ಕಾಲೇಜು (ಪ್ರೌಢಶಾಲಾ ವಿಭಾಗ) ಉಪ ಪ್ರಾಚಾರ್ಯರಾದ ಚಂದ್ರಮ್ಮ ಎಸ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟರ್ ಇಂದುಮತಿ ಬಾಯಿ, ಕಾನೂನು ಮಾಪನಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ರಾಜೀವ್ ಬಿ.ಎನ್., ಆಹಾರ ನಾಗರೀಕ ಸರಬಾರಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.National Consumer Day program -

ಸ್ಥಳೀಯ ಮಟ್ಟದಲ್ಲೇ ಸಾರ್ವಜನಿಕರ ಸಮಸ್ಯೆಗಳಿಗೆ ಸೂಕ್ತ ಪರಿಹಾರ
ಚಿಕ್ಕಮಗಳೂರು: ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಒಂದೂಗೂಡಿ ಸ್ಥಳೀಯ ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನಸಂಪರ್ಕ ಸಭೆಗಳನ್ನು ಆಯೋಜಿಸಿದರೆ ಸ್ಥಳೀಯ ಮಟ್ಟದಲ್ಲೇ ಸಾರ್ವಜನಿಕರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಿ ಉತ್ತಮ ಆಡಳಿತ ನೀಡಲು ಸಹಕಾರಿಯಾಗುತ್ತದೆ ಎಂದು ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಹೆಚ್.ಡಿ ತಮ್ಮಯ ಹೇಳಿದರು.
ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ವತಿಯಿಂದ ಇಂದು ಬೆಳವಾಡಿ, ಮಾಚೇನಹಳ್ಳಿ ಮತ್ತು ಕೆ.ಬಿ ಹಾಳ್ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಸರ್ಕಾರವು ಬಡ ಹಾಗೂ ಹಿಂದುಳಿದ ವರ್ಗದವರ ಅಭಿವೃದ್ಧಿಗಾಗಿ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಜನರಿಗೆ ತಲುಪಿಸುವಲ್ಲಿ ಪ್ರತಿಯೊಬ್ಬ ಅಧಿಕಾರಿಗಳು ಪ್ರಾಮಾಣಿಕವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು ಹಾಗೂ ಸಮಸ್ಯೆಗಳನ್ನು ಹೊತ್ತು ತರುವ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಅವರ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲೇ ಬಗೆಹರಿಸಲು ಅಗತ್ಯ ಕ್ರಮ ವಹಿಸಬೇಕು ಎಂದರು.
ಮುಖ್ಯ ಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಚುನಾವಣೆ ಪೂರ್ವದಲ್ಲಿ ಘೋಷಿಸಿದ ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿಯೋಜನೆ ಹಾಗೂ ಯುವನಿಧಿಯಂತಹ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಮಹಿಳಾ ಸಬಲೀಕರಣದೊಂದಿಗೆ ದೀನ ದಲಿತರನ್ನು ಹಸಿವು ಮುಕ್ತರನ್ನಾಗಿ ಮಾಡಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಶ್ರಮಿಸುತ್ತಿದೆ. ಈ ಗ್ಯಾರಂಟಿ ಯೋಜನೆಗಳನ್ನು ದೇಶದ ವಿವಿಧ ರಾಜ್ಯಗಳಲ್ಲಿ ಅನುಕರಣೆ ಮಾಡಿ ಜನರಿಗೆ ಉತ್ತಮ ಯೋಜನೆಗಳನ್ನು ಒದಗಿಸುತ್ತಿರುವುದು ನಮ್ಮ ಹೆಮ್ಮೆ ಎಂದರು.
ಗ್ಯಾರಂಟಿ ಯೋಜನೆಗಳೊಂದಿಗೆ ಸರ್ಕಾರವು ವಿವಿಧ ಯೋಜನೆಗಳನ್ನು ರೂಪಿಸಿ ರಾಜ್ಯದ ಸರ್ವತೋಮುಖ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುತ್ತಿದೆ. ಬೆಳವಾಡಿ, ಮಾಚೇನಹಳ್ಳಿ ಮತ್ತು ಕೆ.ಬಿ ಹಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮುಖ್ಯ ಮಂತ್ರಿಗಳ ವಿಶೇಷ ಅನುದಾನದೊಂದಿಗೆ ಒಟ್ಟು ೩ ಕೋಟಿ ೪೦ ಲಕ್ಷ ರೂಗಳಲ್ಲಿ ರಸ್ತೆ, ಸಮುದಾಯ ಭವನ ಹಾಗೂ ದೇವಸ್ಥಾನಗಳಿಗೆ ಅನುದಾನ ನೀಡಿ ಶಂಕು ಸ್ತಾಪನೆ ನಿರ್ವಹಿಸಿ ಕಾಮಗಾರಿಗಳನ್ನು ಚಾಲನೆ ನೀಡಲಾಗಿದೆ. ಇದೇ ರೀತಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗಾಗಿ ಅನೇಕ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
ಜನ ಸಂಪರ್ಕಗಳು ಕೇವಲ ನಾಮ ಮಾತ್ರಕ್ಕೆ ಅಲ್ಲದೆ ಈ ಸಭೆಗಳಲ್ಲಿ ವಿವಿಧ ಇಲಾಖೆ ವ್ಯಾಪ್ತಿಗೆ ಸಂಬಂಧಿಸಿದ ಪ್ರತಿಯೊಂದು ಅಹವಾಲುಗಳನ್ನು ಅಧಿಕಾರಿಗಳು ಪರಿಶೀಲಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂಧಿಸಿ ಸಮಸ್ಯೆ ಬಗೆಹರಿಸುವುದೇ ಸಭೆಯ ಮುಖ್ಯ ಉದ್ದೇಶ ಎಂದ ಅವರುಪ್ರತಿಯೊಬ್ಬರು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಕೆ.ಬಿ ಹಾಳ್ ಗ್ರಾಮಕ್ಕೆ ಪಶು ಆಸ್ಪತ್ರೆ ಅಗತ್ಯವಿದೆ ಜೊತಗೆ ಹಸು ಸಾಕಾಣಿಕೆಗೆ ಸಾಲ ಒದಗಿಸಿ ಕೊಡಬೇಕು. ಕುಡಿಯುವ ನೀರಿನ ವ್ಯವಸ್ಥೆ ಮತ್ತು ದಿನ ಪೂರ್ತಿ ವಿದ್ಯುತ್ ನೀಡಬೇಕೆಂದು ಬೆಳವಾಡಿ ಗ್ರಾಮದ ಸಗನಮ್ಮ ಮತ್ತು ಇತರರು ಶಾಸಕರಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ಚಿಕ್ಕಮಗಳೂರು ತಾಲ್ಲೂಕು ತಹಸೀಲ್ದಾರ್ ಡಾ. ಸುಮಂತ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ವಿಜಯ್ ಕುಮಾರ್, ತಾಲ್ಲೂಕು ಬಗರ್ ಹುಕ್ಕುಂ ಸದಸ್ಯರಾದ ಶಂಕರ್ ನಾಯಕ್ ಹಾಗೂ ಕೆಂಗೇಗೌಡ, ಬೆಳವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾವೇರಮ್ಮ, ಮಾಚೇನಹಳ್ಳಿ ನಸೀಮಾ ತಾಜ್ ಮತ್ತು ಕೆ.ಬಿ ಹಾಳ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಎಂ ಛಾಯಾ ಸೇರಿದಂತೆ ಮೂರು ಗ್ರಾಮ ಪಂಚಾಯಿತಿಗಳ ಉಪಾಧ್ಯಕ್ಷರುಗಳು ಸದಸ್ಯರುಗಳು, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
Public relations meeting held at Belawadi Gram Panchayat level
-

ಮೊರಾರ್ಜಿ ಪ್ರಾಂಶುಪಾಲರ ಅಮಾನತ್ತಿಗೆ ಸಚಿವರಿಗೆ ಮನವಿ
ಚಿಕ್ಕಮಗಳೂರು: ನ್ಯಾಯಬದ್ಧ ವಿಚಾರಣೆಗಾಗಿ ತೆರಳಿದ್ಧ ದಲಿತ ಮುಖಂಡರ ಮೇಲೆ ಹಲ್ಲೆಗೆ ಮುಂದಾದ ಬೀಕನಹಳ್ಳಿ ಮೊರಾರ್ಜಿ ಶಾಲೆ ಪ್ರಾಂಶುಪಾಲ ಹಾಗೂ ಸಿಬ್ಬಂದಿಗಳನ್ನು ಅಮಾನತ್ತು ಗೊಳಿಸಿ ಸೂಕ್ತ ಕ್ರಮ ವಹಿಸಬೇಕು ಎಂದು ದಸಂಸ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಭಾನುವಾರ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ದಸಂಸ ರಾಜ್ಯ ಸಮಿತಿ ಸದಸ್ಯ ಮರ್ಲೆ ಅಣ್ಣಯ್ಯ ಇತ್ತೀಚೆಗೆ ಮೊರಾರ್ಜಿ ಶಾಲೆಯ ನೌಕರರ ದೂರಿನ ಮೇರೆಗೆ ಶಾಲೆಗೆ ಭೇಟಿ ನೀಡಿದ್ದು ಪ್ರಾಂಶುಪಾಲರ ಜೊತೆ ನೂನ್ಯತೆ ಬಗ್ಗೆ ಚರ್ಚಿಸುವಾಗ ಶಾಲೆಯ ಸಿಬ್ಬಂದಿಗಳು, ಪ್ರಾಂಶುಪಾಲರ ಆದೇಶದಂತೆ ದಲಿತ ಮುಖಂಡರು ಹಾಗೂ ಮಹಿಳಾ ನೌಕರೆ ಗಂಡನ ಮೇಲೆ ಏಕಾಏಕಿ ಹಲ್ಲೆ ನಡೆಸಿ ಜಾತಿನಿಂದನೆ ಎಸಗಿದ್ದಾರೆ ಎಂದರು.
ಪ್ರಕರಣದ ಸಂಬಂಧ ಪ್ರಾಂಶುಪಾಲರು, ಸಿಬ್ಬಂದಿಗಳಿಗೆ ಜಾತಿ ನಿಂದನೆ ದೌರ್ಜನ್ಯ ಕಾಯ್ದೆಯಡಿ ದೂ ರು ದಾಖಲಿಸಿದ್ದು ಈ ಬಗ್ಗೆ ಯಾವುದೇ ಕ್ರಮ ವಹಿಸುತ್ತಿಲ್ಲ. ಅಲ್ಲದೇ ಪ್ರಾಂಶುಪಾಲರು ಶಾಲೆಯ ನಿರ್ವಾಣ ಸಮಿತಿ ಎಂಬ ಅಕ್ರಮ ಸಮಿತಿಯ ಹೆಸರಿನಲ್ಲಿ ಎತ್ತಿಕಟ್ಟಿ ಸಂಘಟನೆ ಪ್ರಮುಖರ ಮೇಲೆ ಇಲ್ಲಸಲ್ಲದ ದೂರು ಗಳನ್ನು ದಾಖಲಿಸಿದ್ದಾರೆ ಎಂದು ಆರೋಪಿಸಿದರು.
ಪ್ರಸ್ತುತ ದಸಂಸ ಸಂಘಟನೆ ಮೂರ್‍ನಾಲ್ಕು ದಶಕಗಳಿಂದ ಶೋಷಿತರ ಪರವಾಗಿ ಹೋರಾಟ ಮಾಡು ತ್ತಿದ್ದು ಈ ಆರೋಪದಿಂದ ಸಂಘಟನೆಗೆ ನೋವುಂಟಾಗಿದೆ. ಪ್ರಾಂಶುಪಾಲರು ತಪ್ಪನ್ನು ಮುಚ್ಚಿಕೊಳ್ಳಲು ರಾಜಕೀಯ ಪ್ರಭಾವ ಬಳಸುತ್ತಿದ್ದು, ಇದರಿಂದ ಶಾಲೆಯ ಹೆಸರು ಹಾಳು ಮಾಡುತ್ತಿರುವ ಕಾರಣ ಮಕ್ಕಳ ವಿದ್ಯಾಭ್ಯಾಸಕ್ಕೆ ತೀವ್ರ ಅಡ್ಡಿಯಾಗುತ್ತಿದೆ ಎಂದು ಹೇಳಿದರು.
ದೌರ್ಜನ್ಯ ಪ್ರಕರಣ ಸಂಬಂಧ ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗೆ ದೂರು ಸಲ್ಲಿಸಿದ್ದರೂ ಕ್ರಮ ಜರುಗಿಲ್ಲ. ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಮಧ್ಯಪ್ರವೇಶಿಸಿ ತಪ್ಪೆಸಗಿರುವ ಮೊ ರಾರ್ಜಿ ಶಾಲೆಯ ಪ್ರಾಂಶುಪಾಲರ ಅಮಾನತ್ತುಗೊಳಿಸಬೇಕು. ವಿಳಂಭ ನೀತಿ ಅನುಸರಿದರೆ ಜಿ.ಪಂ. ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ದಸಂಸ ತಾಲ್ಲೂಕು ಸಂಚಾಲಕರಾದ ಮಂಜಯ್ಯ, ಮಂಜುನಾಥ್ ನಂಬಿಯಾರ್, ಮುಖಂಡರುಗಳಾದ ಸಂತೋ? ಲಕ್ಯಾ, ಹೊನ್ನಪ್ಪ ದಂಟರಮಕ್ಕಿ, ಆರ್.ಶೇಖರ್ ಮತ್ತಿತರರಿದ್ದರು.
Morarji appeals to the minister to suspend the principal
-

ಅತ್ತಿಗುಂಡಿ ಶಾಲೆ ದುರಸ್ಥಿ ಕಾರ್ಯನಿರ್ವಹಿಸಿ ಕೊಡುವಂತೆ ಮನವಿ
ಚಿಕ್ಕಮಗಳೂರು: ಅತ್ತಿಗುಂಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಿಟಕಿ, ಬಾಗಿಲು ಸೇರಿದಂತೆ ಅಗತ್ಯವಿರುವ ವಿವಿಧ ದುರಸ್ಥಿ ಕಾರ್ಯಗಳನ್ನು ನಿರ್ವಹಿಸಿ ಶಾಲೆಗೆ ಉತ್ತಮ ವಾತಾವರಣ ನಿರ್ಮಿಸಿಕೊಡಬೇಕೆಂದು ಕಾಂಗ್ರೆಸ್ ಮುಖಂಡರಾದ ಉಪ್ಪಳ್ಳಿ ಭರತ್, ಜಿಲ್ಲಾ ಉಸ್ತುವಾರಿ ಸಚಿವರಾದ ಜಾರ್ಜ್ ಅವರಿಗೆ ಮನವಿ ನೀಡಿದರು
ನಗರದ ನಗರಸಭೆ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ಜಾಗರ ಹೋಬಳಿ ಅತ್ತಿಗುಂಡಿ ಸ.ಕಿ.ಪ್ರಾ ಶಾಲೆಯು ಮೆಳೆಯಿಂದಾಗಿ ಅಪಾರ ಪ್ರಮಾಣದ ಹಾನಿಯಾಗಿದ್ದು ಈಗಾಗಲೇ ಶಾಲೆಯ ಮೇಲ್ಚಾವಣಿ ದುರಸ್ಥಿ ಕಾರ್ಯವು ಪೂರ್ಣಗೊಂಡಿದೆ. ಆದರೆ. ಗಾರೆ, ನೆಲಕ್ಕೆ ಟೈಲ್ಸ್, ಕಿಟಕಿ, ಬಾಗಿಲು ದುರಸ್ಥಿ ಜೊತೆಗೆ ಶಾಲೆಗೆ ಸುಣ್ಣಬಣ್ಣದ ಅವಶ್ಯಕತೆ ಇದೆ ಎಂದರು.
ಶಾಲೆಯಲ್ಲಿ ಒಟ್ಟು ೧೧ ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ. ಬಡ ಹಾಗೂ ಕೂಲಿ ಕಾರ್ಮಿಕರ ಮಕ್ಕಳು ಈ ಶಾಲೆಯಲ್ಲಿದ್ದು ಪ್ರತಿಯೊಬ್ಬರಿಗು ಉತ್ತಮ ಶಿಕ್ಷಣ ಕೊಡಿಸಿ ಅವರ ಶೈಕ್ಷಣಿಕ ಬದುಕು ಸಫಲವಾಗೊಳಿಸುವ ಜವಾಬ್ದಾರಿ ನಮ್ಮೆಲ್ಲರದಾಗಿದೆ ಎಂದ ಅವರು ಶೀಘ್ರವಾಗಿ ಶಾಲೆಯ ಎಲ್ಲಾ ದುರಸ್ಥಿ ಕಾರ್ಯವನ್ನು ಕೈಗೊಂಡು ಪೂರ್ಣಗೊಳಿಸಿ ಕಲಿಕೆಗೆ ಉತ್ತಮ ವಾತಾವರಣ ನಿರ್ಮಿಸಿಕೊಟ್ಟು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕರಿಸಬೇಕು ಎಂದರು.
Appeal to carry out the repair work of Attigundi School
-

ಪಶು-ಪಕ್ಷಿಗಳೊಂದಿಗಿನ ಒಡನಾಟವು ಮಾನಸಿಕ ನೆಮ್ಮದಿ
ಚಿಕ್ಕಮಗಳೂರು: ಪಶು, ಪಕ್ಷಿಗಳೊಂದಿಗಿನ ಒಡನಾಟವು ಮಾನಸಿಕ ನೆಮ್ಮದಿಯನ್ನು ನೀಡುತ್ತದೆ. ಪ್ರತಿಯೊಬ್ಬರು ಪ್ರಾಣಿ, ಪಕ್ಷಿಗಳನ್ನು ಪ್ರೀತಿಸಿ ಅವುಗಳನ್ನು ಸಂರಕ್ಷಿಸಬೇಕು ಎಂದು ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶು ವೈದಕೀಯ ಸೇವಾ ಇಲಾಖೆ ಚಿಕ್ಕಮಗಳೂರು, ಕರ್ನಾಟಕ ಪಶುವೈದಕೀಯ ಸಂಘ(ರಿ), ಚಿಕ್ಕಮಗಳೂರು ಜಿಲ್ಲೆ ಹಾಗೂ ಚಿಕ್ಕಮಗಳೂರು ಕೆನಲ್ ಕ್ಲಬ್ ವತಿಯಿಂದ ಚೈತ್ರೋತ್ಸವದ ಅಂಗವಾಗಿ ಇಂದು ನಗರದ ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭೂಮಿಯು ಪ್ರತಿಯೊಂದು ಜೀವಿಗೂ ಆಶ್ರಯ ತಾಣವಾಗಿದೆ. ಪ್ರತಿಯೊಂದು ಜೀವಿಗೂ ಜೀವಿಸುವ ಹಕ್ಕಿದೆ. ಮನುಷ್ಯನ ದುರಾಸೆ ಹಾಗೂ ಸ್ವಾರ್ಥದಿಂದ ಹಲವಾರು ಜೀವಿಗಳು ಅವನತಿ ಹೊಂದುತ್ತಿವೆ. ಇಂತಹ ಸಂದರ್ಭದಲ್ಲಿ ಪ್ರಾಣಿಗಳನ್ನು ಪ್ರೀತಿಸಿ ಅವುಗಳನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಲ್ಲೂ ಮನುಷ್ಯರಿಗಿಂತ ಪ್ರಾಣಿಗಳ ಮೇಲಿನ ಒಲವು ಹೆಚ್ಚುತ್ತಿದೆ. ಇಂದಿನ ಯುವ ಜನತೆಗೆ ಶ್ವಾನದಲ್ಲಿರುವ ವಿಶೇಷ ತಳಿಗಳನ್ನು ಪರಿಚಯಿಸುವುದು ನಮ್ಮ ಜವಾಬ್ದಾರಿಯಾಗಿದೆ. ಆದ್ದರಿಂದ ಶ್ವಾನ ಪ್ರದರ್ಶನದ ಕಾರ್ಯಕ್ರಮ ಆಯೋಜಿಸಿದ್ದು, ಈ ಕಾರ್ಯಕ್ರಮದ ಮೂಲಕ ಶ್ವಾನಗಳ ವಿವಿಧ ತಳಿಗಳನ್ನು ಪರಿಚಯಿಸಲು ಇದು ಉತ್ತಮ ವೇದಿಕೆಯಾಗಿದೆ ಎಂದ ಅವರು ಪ್ರತಿಯೊಬ್ಬರು ಪ್ರಾಣಿ ಸಂರಕ್ಷಣೆಗೆ ಒಂದಾಗಿ ಎಂದರು
ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೀರ್ತನಾ ಹೆಚ್.ಎಸ್. ಮಾತನಾಡಿ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಲ್ಲಿ ರಾಷ್ಟ್ರೀಯ ಹಬ್ಬಗಳ ಮೇಲಿನ ಒಲವು ಕ್ಷೀಣಿಸುತ್ತಿದೆ. ಪ್ರತಿಯೊಬ್ಬರು ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವ ಹಿನ್ನಲೆಯನ್ನು ಅರಿತು ಕೊಳ್ಳಬೇಕು. ಕೇವಲ ಅಧಿಕಾರಿಗಳು ಜನ ಪ್ರತಿನಿಧಿಗಳ ಶ್ರಮದಿಂದ ಕಾರ್ಯಕ್ರಮಗಳು ಯಶಸ್ವಿಯಾಗುವುದಿಲ್ಲ.
ಇದರಲ್ಲಿ ಸಾರ್ವಜನಿಕರ ತೊಡಗಿಸಿಕೊಳ್ಳುವಿಕೆಯು ಬಹುಮುಖ್ಯವಾಗಿದೆ. ಆದ್ದರಿಂದ ರಾಷ್ಟ್ರೀಯ ಹಬ್ಬದ ಸಂದರ್ಭದಲ್ಲಿ ಚೈತ್ರೋತ್ಸವದಂತಹ ಕಾರ್ಯಕ್ರಮಗಳು ಸಾರ್ವಜನಿಕರ ಗಮನ ಸೆಳೆಯಲು ಸಹಕಾರಿಯಾಗಿವೆ ಎಂದ ಅವರು. ಪ್ರತಿಯೊಬ್ಬ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.
ಶ್ವಾನ ಉತ್ಸವದಲ್ಲಿ ಪೊಲೀಸ್ ಶ್ವಾನಗಳ ಪ್ರದರ್ಶನವು ವಿಶೇಷತೆಯಿಂದ ಕೂಡಿದ್ದು, ಪ್ರೇಕ್ಷಕರ ಗಮನ ಸೆಳೆದಿತ್ತು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ಪಶುಪಾಲನಾ ಮತ್ತು ಪಶು ವೈದಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ಮೋಹನ್ ಕುಮಾರ್, ತೋಟಗಾರಿಕಾ ಇಲಾಖೆ ಉಪನಿರ್ದೇಶಕಿ ಪೂರ್ಣಿಮಾ, ಕೆನಲ್ ಕ್ಲಬ್ ಅಧ್ಯಕ್ಷ ಕವೀಶ್ ಕುಮಾರ್, ನಳಿನ ಡೀಸಾ ಸೇರಿದಂತೆ ಮುಂತಾದವರಿದ್ದರು.
District level dog show
-

ಅಭಿವೃದ್ದಿ ಕಾಮಗಾರಿಗಳ ಮೂಲಕ ಸುಂದರ ನಗರ ನಿರ್ಮಿಸುವುದು ನಮ್ಮ ಗುರಿ
ಚಿಕ್ಕಮಗಳೂರು: ಸರ್ಕಾರವು ಹಲವಾರು ಯೋಜನೆಗಳನ್ನು ರೂಪಿಸಿ ರಾಜ್ಯದ ಸಮಗ್ರ ಅಭಿವೃದ್ದಿಗಾಗಿ ಶ್ರಮಿಸುತ್ತಿದೆ. ಜಿಲ್ಲೆಯ ಅಭಿವೃದ್ದಿಗೆ ವಿವಿಧ ಕಾಮಗಾರಿಗಳನ್ನು ಕೈಗೊಂಡು ಸ್ವಚ್ಚ ಹಾಗೂ ಸುಂದರ ನಗರ ನಿರ್ಮಿಸುವುದು ನಮ್ಮ ಗುರಿ ಎಂದು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಜೆ. ಜಾರ್ಜ್ ಹೇಳಿದರು.
ನಗರ ಸಭೆ ವತಿಯಿಂದ ಇಂದು ನಗರಸ ಸಭೆ ಆವರಣದಲ್ಲಿ ಆಯೋಜಿಸಿದ್ದ ನಗರಸಭೆ ವ್ಯಾಪ್ತಿಯಲ್ಲಿ ೧೫ ನೇ ಹಣಕಾಸು ಯೋಜನೆ ಮತ್ತು ನಗರೋತ್ಥಾನ ಹಂತ-೪ ರ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು
ಜಿಲ್ಲೆಯಾದ್ಯಂತ ಮಳೆಯಿಂದಾಗಿ ಅನೇಕ ರಸ್ತೆಗಳು ಹದಗೆಟ್ಟಿವೆ. ಇವುಗಳ ದುರಸ್ಥಿಗೆ ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆಗೊಳಿಸಿ ಶೀಘ್ರವಾಗಿ ರಸ್ತೆ ದುರಸ್ಥಿ ಕಾರ್ಯ ಹಾಗೂ ಹೊಸ ರಸ್ತೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದರು.
ಜಿಲ್ಲೆಯು ಪ್ರವಾಸಿ ಸ್ಥಳಗಳಿಗೆ ಪ್ರಸಿದ್ದವಾಗಿದ್ದು ಜಿಲ್ಲೆಯಲ್ಲಿರುವ ಪ್ರತಿ ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಉತ್ತಮ ವ್ಯವಸ್ಥೆ ಕಲ್ಪಿಸಿ ಜಿಲ್ಲೆಯನ್ನು ಇನಷ್ಟು ಸುಂದರಗೊಳಿಸಲು ಕ್ರಮವಹಿಸಲಾಗಿದೆ ಎಂದ ಅವರು ಸಾರ್ವಜನಿಕರ ಪ್ರತಿ ಅಗತ್ಯತೆಗಳನ್ನು ಅರಿತು ಜಿಲ್ಲೆಯನ್ನು ಅಭಿವೃದ್ದಿಗೊಳಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ಡಿ. ತಮ್ಮಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿ ನಗರದ ಕತ್ರಿಮಾರಮ್ಮ ದೇವಸ್ಥಾನದಿಂದ ಬೋಳರಾಮೇಶ್ವರ ದೇವಸ್ಥಾನದವರೆಗೆ ರೂ. ೫೦ ಲಕ್ಷ ವೆಚ್ಚದಲ್ಲಿ (ಐ.ಜಿ. ರಸ್ತೆ) ರಸ್ತೆ ವಿಭಜಕದಲ್ಲಿ ೫೪ ಪೋಲ್‌ಗಳು, ೧ ಹೈಮಾಸ್ಟ್ ಲೈಟ್ ೧೨೦ ಲೈಟ್‌ಗಳು ಬೀದಿ ದೀಪಗಳನ್ನು ಅಳವಡಿಸುವುದು. ರೂ. ೪೫ ಲಕ್ಷ ವೆಚ್ಚದಲ್ಲಿ ಬೋಳರಾಮೇಶ್ವರ ದೇವಸ್ಥಾನದಿಂದ ರಾಂಪುರದವರೆಗೆ ಡಿವೈಡರ್‌ಗೆ ಅಕ್ಟಾಗನಲ್ ಪೋಲ್, ೬೪ ಪೋಲ್‌ಗಳು ೧೨೪ ಲೈಟ್‌ಗಳು ಅಳವಡಿಸಲು.
ಕಣಿವೆ ರುದ್ರೇಶ್ವರ ದೇವಸ್ಥಾನದಿಂದ ಕತ್ರಿಮಾರಮ್ಮ ದೇವಸ್ಥಾನ, ಶೃಂಗಾರ್ ಸರ್ಕಲ್, ತೊಗರಿಹಂಕಲ್ ಸರ್ಕಲ್, ನೆಲ್ಲೂರು ಗೇಟ್, ರಾಂಪುರ ಸರ್ಕಲ್ ವರೆಗೆ ರೂ. ೨೯೩.೨೩ ಲಕ್ಷ ವೆಚ್ಚದಲ್ಲಿ ಟ್ಯೂಬಲರ್ ಪೋಲ್ ಮತ್ತು ಎಲ್.ಇ.ಡಿ ಬೀದಿ ದೀಪ ಅಳವಡಿಸುವುದು. ಮತ್ತು ಚಿಕ್ಕಮಗಳೂರು ನಗರದ ವಿವಿಧೆಡೆ ಹೈಮಾಸ್ಟ್ ಮತ್ತು ಮಿನಿ ಮಾಸ್ಟ್ ಲೈಟ್, ೮೦ ಡೆಕೋರಟೀವ್ ಪೋಲ್ ಗಳು ೩೨ ಹೈಮಾಸ್ಟ್ ಲೈಟ್, ೩೪೬ ಲೈಟ್‌ಗಳು ಅಳವಡಿಸುವ ಕಾಮಗಾರಿಗಳಿಗಾಗಿ ಇಂದು ಶಂಕು ಸ್ಥಾಪಿಸಲಾಗಿದೆ ಎಂದ ಅವರು ಈ ಕಾಮಗಾರಿಗಳನ್ನು ಗುಣಮಟ್ಟದಿಂದ ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದರು.
ನಗರಸಭಾ ಆವರಣದಲ್ಲಿನ ಉದ್ಯಾನವನದ ಸಮಗ್ರ ಅಭಿವೃದ್ಧಿಯ ಕಾಮಗಾರಿಯು (ಮ್ಯೂಸಿಕಲ್ ಫೌಂಟೆನ್ ನಿರ್ಮಾಣ ಮತ್ತು ಮ್ಯೂಸಿಕಲ್ ಫೌಂಟೆನ್ ಸುತ್ತಲೂ ಕಲ್ಪಿಸುವುದು ಹಾಗೂ ನಿರ್ಮಾಣ) ರೂ ೨೮೦.೫೦ ಲಕ್ಷ ವೆಚ್ಚದಲ್ಲಿ, ಪಾರ್ಕ್ ಅಭಿವೃದ್ಧಿ, ಪಾತ್ ವೇ ನಿರ್ಮಾಣ, ಗ್ಯಾಜಿಬೋ ನಿರ್ಮಾಣ, ಸ್ವಾಗತ ಕಮಾನು, ಮ್ಯೂಸಿಕಲ್ ಫೌಂಟೆನ್ ನಿರ್ಮಾಣ, ಆಸನ ವ್ಯವಸ್ಥೆ, ಓಪನ್ ಏರ್ ಥಿಯೇಟರ್ ಮತ್ತು ರಸ್ತೆ ಅಭಿವೃದ್ಧಿಗೊಳಿಸಲಾಗಿದೆ. ರೂ. ೩೮.೭೫ ಲಕ್ಷ ವೆಚ್ಚದಲ್ಲಿ ಚಿಕ್ಕಮಗಳೂರು ನಗರಸಭಾ ಕಛೇರಿ ಆವರಣದಲ್ಲಿ ಆಸ್ಪಿರೇಷನಲ್ ಶೌಚಾಲಯ ನಿರ್ಮಿಸಿಲಾಗಿದ್ದು, ಮಹಿಳೆಯರಿಗೆ ೦೩ ಸಂಖ್ಯೆ ಶೌಚಾಲಯಗಳು, ಮಹಿಳಾ ವಿಶೇಷ ಚೇತನರಿಗೆ ೦೧ ಸಂಖ್ಯೆ ಶೌಚಾಲಯ,
ಪುರುಷರಿಗೆ ೦೫ ಸಂಖ್ಯೆ ಶೌಚಾಲಯಗಳು ಮತ್ತು ೦೩ ಯುರಿನಲ್‌ಗಳು, ಪುರುಷ ವಿಶೇಷ ಚೇತನರಿಗೆ ೦೧ ಸಂಖ್ಯೆ ಶೌಚಾಲಯ ವಿಂಗಡಿಸಿ ನಿರ್ಮಿಸಲಾಗಿದೆ ಹಾಗೂ ರೂ. ೧೪.೦೦ ಲಕ್ಷ ವೆಚ್ಚದಲ್ಲಿ ನಗರಸಭಾ ಆವರಣದಲ್ಲಿರುವ ಶ್ರೀ ಗಣಪತಿ ದೇವಸ್ಥಾನವನ್ನು ಅಭಿವೃದ್ಧಿಪಡಿಸುವ ಸಂಪೂರ್ಣ ನವೀಕರಣ ಕಾಮಗಾರಿಗಳನ್ನು ೧೫ನೇ ಹಣಕಾಸು ಮತ್ತು ನಗರಸಭಾ ನಿಧಿಯಲ್ಲಿ ಪೂರ್ಣಗೊಳಿಸಲಾಗಿದೆ ಎಂದ ಅವರು. ಜಿಲ್ಲೆಯ ಸಮಗ್ರ ಅಭಿವೃದ್ಧಿಯನ್ನು ಹಂತ ಹಂತವಾಗಿ ನೆರವೇರಿಸಲಾಗುವುದು ಎಂದರು.
ವಿಧಾನ ಪರಿಷತ್ ಶಾಸಕ ಸಿ.ಟಿ. ರವಿ ಮಾತನಾಡಿ ಜಿಲ್ಲೆಯ ಅಭಿವೃದ್ಧಿಗಾಗಿ ಶಂಕು ಸ್ಥಾಪನೆಗೊಳಿಸುವ ಪ್ರತಿಯೊಂದು ಕಾಮಗಾರಿಗಳ ಅನುಷ್ಠಾನ ಕಾರ್ಯವನ್ನು ವಿಳಂಬಗೊಳಿಸದೆ ಹಂತ ಹಂತವಾಗಿ ಕಾಮಗಾರಿಗಳನ್ನು ಸಮಗ್ರ ಯೋಜನೆ ರೂಪಿಸಿ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಅಧಿಕಾರಿಗಳು ಕ್ರಮವಹಿಸಬೇಕು ಎಂದ ಅವರು ಯಾವುದೇ ವ್ಯಕ್ತಿಗೆ ಅಧಿಕಾರ ಶಾಶ್ವತವಲ್ಲ ನಮ್ಮ ಶ್ರೇಷ್ಠತೆಯನ್ನು ಕಾಯಕದ ಮೂಲಕ ತಿಳಿಸಬೇಕು ಎಂದು ಹೇಳಿದರು. ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಅವರು ಮಾತನಾಡಿದರು. ನಗರಸಭೆ ಪೌರಾಯುಕ್ತರು ಬಿ.ಸಿ. ಬಸವರಾಜು ಎಲ್ಲರನ್ನೂ ಸ್ವಾಗತಿಸಿದರು.,
ಕಾರ್ಯಕ್ರಮದಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೆಚ್.ಎಸ್. ಕೀರ್ತನಾ, ಚಿಕ್ಕಮಗಳೂರು ಉಪವಿಭಾಗಾಧಿಕಾರಿ ರಶ್ಮಿ ಎಸ್.ಆರ್., ಭದ್ರಾ ಕಾಡಾ ಶಿವಮೊಗ್ಗ ಅಧ್ಯಕ್ಷರಾದ ಡಾ. ಅಂಶುಮಂತ್, ಕ.ರಾ. ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ ಅಧ್ಯಕ್ಷರಾದ ಬಿ.ಹೆಚ್. ಹರೀಶ್, ನಗರಸಭೆ ಉಪಾಧ್ಯಕ್ಷೆ ಅನು ಮಧುಕರ್ ಮುಂತಾದವರು ಉಪಸ್ಥಿತರಿದ್ದರು.
Our goal is to build a beautiful city through development works.
-

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ‘ಪಂಚಾಯಿತಿ ಕಟ್ಟೆ ಮತ್ತು ಗ್ರಾಮ ಸ್ಪಂದನ’
ಚಿಕ್ಕಮಗಳೂರು: ಸಾರ್ವಜನಿಕರ ದೂರು ಮತ್ತು ಅಹವಾಲುಗಳನ್ನು ಪಂಚಾಯಿತಿ ಮಟ್ಟದಲ್ಲಿ ಸ್ವೀಕರಿಸಿ ಇತ್ಯರ್ಥಪಡಿಸಲು ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾಡಳಿತದ ವತಿಯಿಂದ ಆರಂಭಿಸಿರುವ ‘ಪಂಚಾಯಿತಿ ಕಟ್ಟೆ ಮತ್ತು ಗ್ರಾಮ ಸ್ಪಂದನ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ವಿಸ್ತರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತ ಭಾನುವಾರ ಏರ್ಪಡಿಸಿದ್ದ ಗಣ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ, ಧ್ವಜ ವಂದನೆ ಸ್ವೀಕರಿಸಿ ಮಾತನಾಡಿದ ಅವರು, “ಕಡೂರು ತಾಲೂಕಿನಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದ್ದ ‘ಪಂಚಾಯಿತಿ ಕಟ್ಟೆ ಮತ್ತು ಗ್ರಾಮ ಸ್ಪಂದನ’ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಹೀಗಾಗಿ ಈ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಪರಿಣಾಮಕಾರಿಯಾಗಿ ಮುಂದುವರಿಸಲು ಕ್ರಮ ವಹಿಸಲಾಗಿದೆ”, ಎಂದರು.
“ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸುವ ಜತೆಗೆ ಜಿಲ್ಲೆಯ ಅಭಿವೃದ್ಧಿ ಕಾರ್ಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ ಉತ್ತಮ ರೀತಿಯಲ್ಲಿ ಸಾಧನೆ ಮಾಡಲಾಗುತ್ತಿದೆ. ನಾಗರಿಕ ಸೇವೆಗಳನ್ನು ಕಾಲಮಿತಿಯಲ್ಲಿ ಒದಗಿಸುವ ಸಕಾಲ ಯೋಜನೆಯ ಅನುಷ್ಠಾನದಲ್ಲಿ ನಮ್ಮ ಜಿಲ್ಲೆಯು ಇತ್ತೀಚಿನ ರ‍್ಯಾಂಕ್ ಪಟ್ಟಿಯಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಪಡೆದಿದೆ. ‘ಪೋಡಿ ಮುಕ್ತ’ ಆಂದೋಲನ ಯೋಜನೆ ಅನುಷ್ಠಾನದಲ್ಲಿ ಜಿಲ್ಲೆ ಮುಂಚೂಣಿಯಲ್ಲಿದೆ”, ಎಂದು ಸಚಿವರು ಮಾಹಿತಿ ನೀಡಿದರು.
“ನಮ್ಮ ದೇಶ ಸ್ವತಂತ್ರ ಭಾರತ ಎಂದು ಹೆಮ್ಮೆ ಪಡಲು ಹಾಗೂ ಗಣರಾಜ್ಯವಾಗಿ ರೂಪುಗೊಳ್ಳಲು ಆಗಿರುವ ತ್ಯಾಗ, ಬಲಿದಾನಗಳಿಗೆ ಲೆಕ್ಕವೇ ಇಲ್ಲ. ನಮ್ಮ ಪೂರ್ವಜರು ನಮ್ಮ ಭವಿಷ್ಯಕ್ಕಾಗಿ ತಮ್ಮ ರಕ್ತ, ಬೆವರುಗಳನ್ನು ಹರಿಸಿ ಸ್ಥಾಪಿಸಿದ ನಮ್ಮ ನೆಲದಲ್ಲಿ ಭಾರತೀಯ ಪ್ರಜೆಗಳಾದ ನಾವು ಸ್ವಾತಂತ್ರ್ಯದ ಉಸಿರಿನೊಂದಿಗೆ ಶಾಂತಿ ಹಾಗೂ ಸೌಹಾರ್ದಯುತ ಬದುಕಿನ ಅನುಭವವನ್ನು ಪಡೆಯುತ್ತಿದ್ದೇವೆ. ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ರಚನೆಯಾದ ಸಂವಿಧಾನದಿಂದಾಗಿ ‘ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು’ ಕಲ್ಪಿಸಲು ಸಾಧ್ಯವಾಗಿದೆ”, ಎಂದರು.
“ಉತ್ತರದ ಕಾಶ್ಮೀರದಿಂದ ದಕ್ಷಿಣದ ತಮಿಳುನಾಡುವರೆಗೂ ಹಾಗೂ ಪಶ್ಚಿಮದ ಗುಜರಾತ್ ನಿಂದ ಪೂರ್ವದ ಅಸ್ಸಾಂ ವರೆಗೂ ವಿವಿಧ ಧಾರ್ಮಿಕ ಆಚರಣೆಯುಳ್ಳ ದೊಡ್ಡ ಭೂಭಾಗಗಳು, ವಿಭಿನ್ನ ಆಹಾರ ಪದ್ಧತಿ ಮತ್ತು ಸಾಂಸ್ಕೃತಿಕ ಹಿನ್ನೆಲೆಯುಳ್ಳ ಹಲವು ಬುಡಕಟ್ಟು ಪ್ರದೇಶಗಳನ್ನೂ ಒಳಗೊಂಡ ನಮ್ಮ ದೇಶಕ್ಕೆ ಸರಿಹೊಂದುವ ಸಂವಿಧಾನದ ಅವಶ್ಯಕತೆ ಇದ್ದ ಕಾಲಘಟ್ಟದಲ್ಲಿ ವಿಶ್ವದ ಅತಿದೊಡ್ಡ ಲಿಖಿತ ಸಂವಿಧಾನವನ್ನು ಅತ್ಯಂತ ಸಮರ್ಪಕವಾಗಿ ರಚನೆ ಮಾಡಿದ್ದು ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದ ಸಮಿತಿಯ ಅತಿ ದೊಡ್ಡ ಸಾಧನೆ. ಹಲವು ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ಅವುಗಳಲ್ಲಿರುವ ಉತ್ತಮ ಅಂಶಗಳನ್ನು ನಮ್ಮ ದೇಶದ ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಈ ಸಂವಿಧಾನವು ಭಾರತವನ್ನು ಒಂದು ಪ್ರಬಲ ಪ್ರಜಾಪ್ರಭುತ್ವ ರಾಷ್ಟ್ರವಾಗಿಸಲು ಮತ್ತು ಎಲ್ಲಾ ನಾಗರಿಕರಿಗೆ ಸಮಾನ ಹಕ್ಕುಗಳು ಮತ್ತು ಅವಕಾಶಗಳನ್ನು ಒದಗಿಸಲು ಸಹಾಯ ಮಾಡಿದೆ”, ಎಂದು ಹೇಳಿದರು.
“ದೇಶದ ಸಂವಿಧಾನದ ಬಹಳ ಮುಖ್ಯ ಅಂಶವಾದ ಸಾಮಾಜಿಕ ಹಾಗೂ ಆರ್ಥಿಕ ಸಮಾನತೆಯನ್ನು ತನ್ನ ಎಲ್ಲಾ ಪ್ರಜೆಗಳಿಗೆ ನೀಡುವ ದೃಷ್ಟಿಯಿಂದ ನಮ್ಮ ಸರ್ಕಾರವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ನಂತರ ಸಮಾನತೆಯ ಆಶಯವನ್ನು ಸಾರುವ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಸಮರ್ಪಕವಾಗಿ ಅನುಷ್ಠಾನ ಮಾಡುತ್ತಿದೆ”, ಎಂದು ವಿವರಿಸಿದರು.
ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಗೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, “ನಮ್ಮ ಜಿಲ್ಲೆಯ ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಶಾಂತಿಯುತವಾಗಿ ದತ್ತ ಜಯಂತಿ, ಉರುಸ್ ಆಚರಣೆ, ಸಾರ್ವಜನಿಕ ಗಣಪತಿ ಉತ್ಸವ, ಹಾಗೂ ಕ್ರಿಸ್‌ಮಸ್ ಆಚರಣೆಯಂತಹ ಧಾರ್ಮಿಕ ಕಾರ್ಯಕ್ರಮಗಳು ಶಾಂತಿಯುತವಾಗಿ ಸಂಪನ್ನಗೊಳ್ಳುವ ಮೂಲಕ ಸಂವಿಧಾನದ ಜಾತ್ಯತೀತ ಆಶಯಗಳನ್ನು ಈಡೇರಿಸುತ್ತಿದೆ”, ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ಎಚ್.ಡಿ.ತಮ್ಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಉಪ ಸಭಾಪತಿ ಎಂ.ಕೆ ಪ್ರಾಣೇಶ್, ಸದಸ್ಯರಾದ ಎಸ್.ಎಲ್. ಭೋಜೇಗೌಡ, ಸಿ.ಟಿ.ರವಿ, ಭದ್ರಾ ಕಾಡಾ ಅಧ್ಯಕ್ಷ ಡಾ. ಅಂಶುಮಂತ್, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಅಧ್ಯಕ್ಷ ಬಿ.ಎಚ್. ಹರೀಶ್, ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್ ಅಹಮದ್, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ಜಿಪಂ ಸಿಇಓ ಕೀರ್ತನಾ ಮತ್ತಿತರರು ಪಾಲ್ಗೊಂಡಿದ್ದರು.
‘Panchayat Katte and Gram Spandana’ across Chikkamagaluru district