Category: ರಾಜ್ಯ

  • 100 ಸ್ವಾಸ್ಥ್ಯ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸುವ ಗುರಿ

    100 ಸ್ವಾಸ್ಥ್ಯ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸುವ ಗುರಿ

    ಚಿಕ್ಕಬಳ್ಳಾಪುರ: ಸತ್ಯ ಸಾಯಿ ಬಾಬಾ ಅವರ 100ನೇ ಜನ್ಮದಿನದ ವೇಳೆಗೆ ದೇಶದಲ್ಲಿ 100 ಸ್ವಾಸ್ಥ್ಯ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸುವ ಗುರಿಯನ್ನು ಹಾಕಿಕೊಂಡಿದ್ದೇವೆ. ಒಟ್ಟಾರೆಯಾಗಿ ದೇಶದಲ್ಲಿ 6 ಸಾವಿರ ಸಾಯಿ ಸ್ವಾಸ್ಥ್ಯ ಆರೈಕೆ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶವಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಘೋಷಿಸಿದರು.

    ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ನವರಾತ್ರಿ ಹೋಮ, ಅತಿರುದ್ರ ಮಹಾಯಜ್ಞ ಮತ್ತು ದುರ್ಗಾ ಪೂಜೆಯ 7ನೇ ದಿನವಾದ ಭಾನುವಾರ (ಸೆ 28) ಸಂಜೆಯ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಸದ್ಗುರುಗಳು, ಪಂಚಾಯತಿ ಮಟ್ಟದಲ್ಲಿ ಆರೈಕೆ ಕೇಂದ್ರಗಳನ್ನು ತೆರೆಯಲಾಗುತ್ತದೆ. ತಾಲೂಕು ಮಟ್ಟದಲ್ಲಿ ಸಾಯಿ ಆರೋಗ್ಯ ಕೇಂದ್ರವನ್ನು ತೆರೆಯುವ ಗುರಿಯನ್ನು ಹೊಂದಿದ್ದೇವೆ. ಇದು 30 ರಿಂದ 40 ಹಾಸಿಗೆಗಳ ಸಾಮಾನ್ಯ ಆಸ್ಪತ್ರೆಯಾಗಿರುತ್ತದೆ. ನಂತರದ ಹಂತದಲ್ಲಿ ಸ್ಪೆಷಾಲಿಟಿ ಆಸ್ಪತ್ರೆ, ಮೆಡಿಕಲ್ ಕಾಲೇಜು ಇರುತ್ತವೆ ಎಂದು ವಿವರಿಸಿದರು.

    ಪ್ರಾಥಮಿಕ ಆರೋಗ್ಯ ಮಾದರಿಯನ್ನು ಉತ್ತೇಜಿಸಿದರೆ ಗರ್ಭಿಣಿ ಮತ್ತು ಶಿಶುಗಳ ಅಕಾಲಿಕ ಮರಣಗಳನ್ನು ಸುಲಭವಾಗಿ ತಡೆಯಬಹುದು. ಹಲವು ಕಾಯಿಲೆಗಳನ್ನು ಮುಂಚಿತವಾಗಿ ಪತ್ತೆ ಮಾಡುವುದರಿಂದ ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ಕೊಡಲು ಸಾಧ್ಯವಾಗುತ್ತದೆ ಎಂದರು.

    ಭಾರತದಲ್ಲಿ ಪ್ರತಿ ವರ್ಷ 25,000 ಕ್ಕೂ ಹೆಚ್ಚುತಾಯಂದಿರು ಮಗುವನ್ನು ಹೆರುವಾಗ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಮಗು ಅಥವಾ ತಾಯಿಯ ಸಾವನ್ನು ಸಂಪೂರ್ಣವಾಗಿ ತಪ್ಪಿಸಬಹುದು. ನಾವು ಅವರ ಸಮಸ್ಯೆಗಳನ್ನು ಸ್ವಲ್ಪ ಮೊದಲೇ ಕಂಡುಕೊಂಡು ಉತ್ತಮ ಆರೈಕೆಯನ್ನು ಮಾಡಬೇಕಾಗುತ್ತದೆ ಎಂದು ಹೇಳಿದರು.

    ಗುರುಕುಲಂ ಶಿಕ್ಷಣ, ಆರೋಗ್ಯ ವಾಹಿನಿ ಮೊಬೈಲ್ ಆಸ್ಪತ್ರೆ ಹಾಗೂ ಸಾಯಿ ಸ್ವಾಸ್ಥ್ಯ ಆರೈಕೆ ಕೇಂದ್ರಕ್ಕೆ ಬೆಂಬಲ ನೀಡುತ್ತಿರುವ ‘ವೇದಾಂತ್ ಮೋಟಾರ್ಸ್’ ಕಂಪನಿಗೆ ‘ಸಿಎಸ್ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ’ ನೀಡಿ ಗೌರವಿಸಲಾಯಿತು. ಕಂಪನಿಯ ಸಂಸ್ಥಾಪಕರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿವೇಕ್ ಸರಫ್ ಮತ್ತು ನಿರ್ದೇಶಕರಾದ ಸ್ಮಿತಾ ಸರಫ್ ಅವರು ಪ್ರಶಸ್ತಿ ಸ್ವೀಕರಿಸಿದರು.

    ನವರಾತ್ರಿಯ ಭಾಗವಾಗಿ ರಾಮತಾರಕ ಹೋಮ, ಆಂಜನೇಯ ಹೋಮ, ಸಾಯಿ ಗಾಯತ್ರಿ ಹೋಮ, ಬೆಂಗಾಲಿ ಶೈಲಿಯಲ್ಲಿ ದುರ್ಗಾ ಪೂಜೆ ಮತ್ತು ಆರತಿ ನೆರವೇತು. ಪೂರ್ಣಾಹುತಿ, ಅಷ್ಟಾವಧಾನ ಸೇವಾ, ಚತುರ್ವೇದ ಪಾರಾಯಣಂ, ಸಂಗೀತ, ಪಂಚವಾದ್ಯ ಹಾಗೂ ನಾದಸ್ವರದೊಂದಿಗೆ 7ನೇ ದಿನ ರುದ್ರಯಾಗ ಪೂರ್ಣಗೊಂಡಿತು.

    Target to establish 100 wellness health centers

  • ಬೇಧಭಾವವಿಲ್ಲದೇ ಎಲ್ಲರಿಗೂ ಸಮಾನವಾಗಿ ಚಿಕಿತ್ಸೆ ನೀಡಿ

    ಬೇಧಭಾವವಿಲ್ಲದೇ ಎಲ್ಲರಿಗೂ ಸಮಾನವಾಗಿ ಚಿಕಿತ್ಸೆ ನೀಡಿ

    ಬೆಂಗಳೂರು: ಫಾರ್ಮಸಿಸ್ಟ್ ಗಳು ವೈದ್ಯರಷ್ಟೇ ಪ್ರಮುಖರಾಗಿದ್ದು, ತಮ್ಮ ವೃತ್ತಿಯಲ್ಲಿ ಶ್ರೀಮಂತ ಬಡವ, ಜಾತಿಧರ್ಮಗಳೆಂದು ಬೇಧ ಮಾಡದೇ ಎಲ್ಲರಿಗೂ ಸಮಾನವಾಗಿ ಚಿಕಿತ್ಸೆ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

    ಅವರು ಇಂದು ಬೆಂಗಳೂರಿನ ಲಿಟಲ್ ಫ್ಲವರ್ ಶಿಕ್ಷಣ ಸಮೂಹದ ಕಾಲೇಜಿನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

    ಫಾರ್ಮಸಿಸ್ಟ್ ಗಳು ವೈದ್ಯರಷ್ಟೇ ಪ್ರಮುಖರಾಗಿದ್ದು, ಆರೋಗ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡುತ್ತಾರೆ. ಲಿಟಲ್ ಫ್ಲವರ್ ಶಿಕ್ಷಣ ಸಮೂಹದ ಮಾಲೀಕರಾದ ಡಾ.ಕೆ.ವೆಂಟಕಗಿರಿಯವರ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ಸಾವಿರಾರು ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ.

    ಇಲ್ಲಿ ಫಾರ್ಮಸಿಸ್ಟ್ ಶಿಕ್ಷಣ ಪಡೆದು ದೇಶವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ. ತಮ್ಮ ವೃತ್ತಿಯಲ್ಲಿ ಶ್ರೀಮಂತ ಬಡವ, ಜಾತಿಧರ್ಮಗಳೆಂದು ಬೇಧ ಮಾಡದೇ ಎಲ್ಲರಿಗೂ ಸಮಾನವಾಗಿ ಚಿಕಿತ್ಸೆ ನೀಡುವ ಕೆಲಸ ಮಾಡಬೇಕು ಎಂದರು.

    ಸಮಾಜದಲ್ಲಿನ ಬಡರೋಗಿಗಳಿಗೆ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡಬೇಕು. ಖಾಸಗಿ ಚಿಕಿತ್ಸಾ ವೆಚ್ಚಗಳನ್ನು ಭರಿಸಲು ಅಶಕ್ತರಾಗಿರುವ ಬಡರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯ ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದೆ. ಸರ್ಕಾರದ ಈ ಆಶಯದೊಂದಿಗೆ ಫಾರ್ಮಸಿಸ್ಟ್ ಗಳೂ ಕೈಜೋಡಿಸಿ, ಬಡರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವ ಮೂಲಕ ಸಾರಥಕ ಸೇವೆ ಸಲ್ಲಿಸಬೇಕು ಎಂದು ಮುಖ್ಯಮಂತ್ರಿಗಳು ಕೋರಿದರು.

    Treat everyone equally without discrimination.

  • ವೈದ್ಯಕೀಯ ಶಿಕ್ಷಣ ಪಡೆದವರು ಮಾನವ ಕುಲಕ್ಕೆ ಸೇವೆ ಸಲ್ಲಿಸಲು ಪೂರಕ

    ವೈದ್ಯಕೀಯ ಶಿಕ್ಷಣ ಪಡೆದವರು ಮಾನವ ಕುಲಕ್ಕೆ ಸೇವೆ ಸಲ್ಲಿಸಲು ಪೂರಕ

    ಚಿಕ್ಕಬಳ್ಳಾಪುರ: ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ಪ್ರದೇಶದ ಬಡವರ ಮಕ್ಕಳಿಗೆ ಉಚಿತ ವೈದ್ಯಕೀಯ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಒಂದು ವಿಶಿಷ್ಟ ವೈದ್ಯಕೀಯ ಕಾಲೇಜನ್ನು ಸತ್ಯ ಸಾಯಿ ಗ್ರಾಮದಲ್ಲಿ ನಿರ್ಮಿಸಿದ್ದೇವೆ. ಇಲ್ಲಿ ವೈದ್ಯಕೀಯ ಶಿಕ್ಷಣ ಪಡೆದವರು ಮಾನವ ಕುಲಕ್ಕೆ ಸೇವೆ ಸಲ್ಲಿಸಲು ಪೂರಕ ಮನಸ್ಥಿತಿ ಬೆಳೆಸಿಕೊಂಡಿರುತ್ತಾರೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.

    ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ ಮೂರನೇ ದಿನವಾದ ಬುಧವಾರ (ಸೆ 24) ಸಂಜೆಯ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಸದ್ಗುರು, ವೈದ್ಯಕೀಯ ಕಾಲೇಜು ಆರಂಭವಾಗಿ 3 ವರ್ಷಗಳು ಕಳೆದಿವೆ. ಶೀಘ್ರದಲ್ಲಿಯೇ ಆರಂಭವಾಗಲಿರುವ ಹೊಸ ಆಸ್ಪತ್ರೆಯಲ್ಲಿ ಪಿಜಿ ಕೋರ್ಸ್‌ಗಳನ್ನು ಪ್ರಾರಂಭಿಸುತ್ತೇವೆ. ಇದಕ್ಕಾಗಿ ಪರಿಶೀಲನೆ ನಡೆಯುತ್ತಿದ್ದು, ಪಿಜಿ ಕೋರ್ಸ್‌ಗಳಿಗೆ 50 ಸೀಟುಗಳನ್ನು ಸೇರಿಸಲಾಗುತ್ತದೆ. ಇದು ನಮ್ಮ ಮಕ್ಕಳ ಉನ್ನತ ಶೈಕ್ಷಣಿಕ ಪ್ರಯಾಣವನ್ನು ಮುಂದುವರಿಸಲು ಸಹಾಯ ಮಾಡುತ್ತದೆ ಎಂದರು.

    ಆಸ್ಪತ್ರೆಯಲ್ಲಿ ರೋಬೊಟಿಕ್ ಸರ್ಜರಿ ಪರಿಚಯಿಸುತ್ತಿದ್ದೇವೆ. ಇದಕ್ಕಾಗಿ ಶಸ್ತ್ರಚಿಕಿತ್ಸಕರಿಗೆ ರೋಬೊಟಿಕ್ ಶಸ್ತ್ರಚಿಕಿತ್ಸೆ ಬಗ್ಗೆ ತರಬೇತಿಗಳನ್ನು ಸಹ ಆಯೋಜಿಸುತ್ತಿದ್ದೇವೆ. ಈ ಅತ್ಯಾಧುನಿಕ ವಿಧಾನವನ್ನು ಆಸ್ಪತ್ರೆಯಲ್ಲಿ ಅಳವಡಿಸಿಕೊಂಡ ನಂತರ ಒಂದೇ ದಿನ ಅತಿ ಹೆಚ್ಚು ರೋಗಿಗಳಿಗೆ ವೇಗವಾಗಿ ಚಿಕಿತ್ಸೆ ನೀಡಲು ನೆರವಾಗುತ್ತದೆ. ಕೆಲವೇ ಕೆಲವು ಸವಲತ್ತು ಪಡೆದ ವೈದ್ಯರು ಮಾತ್ರ ಕಾರ್ಪೊರೇಟ್ ಆಸ್ಪತ್ರೆಗಳಿಗೆ ಹೋಗಿ ತರಬೇತಿ ಪಡೆಯಬಹುದು. ಹೀಗಾಗಿ ಈ ಸಂಬಂಧ ಕೆಲವು ಕಾರ್ಯಕ್ರಮಗಳನ್ನು ಕೈಗೊಳ್ಳಬೇಕಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ಶಸ್ತ್ರಚಿಕಿತ್ಸಕರಿಗೆ ಅವರ ಕೌಶಲ್ಯಗಳನ್ನು ಹೆಚ್ಚಿಸಲು ಪಠ್ಯಕ್ರಮವನ್ನು ಸಿದ್ಧಪಡಿಸಬಹುದು ಎಂದು ಅಭಿಪ್ರಾಯಪಟ್ಟರು.

    ರೋಗಿಗಳು ಆಸ್ಪತ್ರೆಯಲ್ಲಿ ಕಡಿಮೆ ಸಮಯವನ್ನು ಕಳೆದರೆ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಬೇಗ ಗುಣಮುಖರಾಗಿ ಕೆಲಸಕ್ಕೆ ಹೋಗಲು ನೆರವಾಗುತ್ತದೆ. ಒಂದು ದಿನ ಕೆಲಸದಿಂದ ದೂರವಿದ್ದರೂ ಅವರು ತಮ್ಮ ಆದಾಯವನ್ನು ಕಳೆದುಕೊಳ್ಳುತ್ತಾರೆ. ಇವರಲ್ಲಿ ಹಲವರು ತುಂಬಾ ಬಡವರಾಗಿದ್ದಾರೆ. ಆ ದಿನಕ್ಕೆ ಅವರು ಏನನ್ನೂ ತಿನ್ನಲು ಸಾಧ್ಯವಾಗದಂತಹ ಸಂದರ್ಭಗಳು ಇರುತ್ತವೆ. ಆದ್ದರಿಂದ ಬೇಗ ಕೆಲಸಕ್ಕೆ ಮರಳಿದರೆ ಅದು ಅವರಿಗೆ ಉತ್ತಮವಾಗಿರುತ್ತದೆ ಎಂದು ಹೇಳಿದರು.

    ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣಪ್ರಕಾಶ್ ಪಾಟೀಲ್ ಮಾತನಾಡಿ, ಸತ್ಯ ಸಾಯಿ ಬಾಬಾ ಅವರ ಸಾರ್ವಕಾಲಿಕ ಸೇವೆಯು ಯಾವುದೇ ಧರ್ಮ, ಜಾತಿ ಅಥವಾ ರಾಷ್ಟ್ರೀಯತೆಗೆ ಸೀಮಿತವಾಗಿರಲಿಲ್ಲ. ನಿಜವಾದ ಪ್ರಗತಿಯು ನಿಸ್ವಾರ್ಥ ಸೇವೆಯಿಂದ ಪ್ರಾರಂಭವಾಗುತ್ತದೆ. ಸಾಮಾಜಿಕ ಕಾರ್ಯಕ್ರಮಗಳ ಪ್ರಮಾಣವು ಜನರನ್ನು ನಿಸ್ವಾರ್ಥರನ್ನಾಗಿಸಲು ನೆರವಾಗುತ್ತದೆ ಎಂದು ಹೇಳಿದರು.

    ಐಲ್ಯಾಬ್ಸ್ ಗ್ರೂಪ್ ಅಂಡ್ ಶ್ರೀಸಿಟಿ ಸಂಸ್ಥಾಪಕರಾದ ಚಿಂತಲಪತಿ ಶ್ರೀನಿವಾಸ ರಾಜು ಅವರಿಗೆ ‘ಒಂದು ಜಗತ್ತು ಒಂದು ಕುಟುಂಬ ಜಾಗತಿಕ ನಾಯಕತ್ವ ಪುರಸ್ಕಾರ’ ನೀಡಿ ಗೌರವಿಸಲಾಯಿತು. ‘ಈಚ್ ಒನ್ ಎಜುಕೇಟ್ ಒನ್ ಸ್ಕಾಲರ್ ಶಿಪ್’ ಯೋಜನೆಗೆ ಬೆಂಬಲ ನೀಡುತ್ತಿರುವ ದೌಸೆಂಟ್ರಿಕ್ಸ್ (ThouCentric), ‘ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್’ ನ ‘ಬೆಳಿಗ್ಗಿನ ಪೌಷ್ಟಿಕ ಆಹಾರ ಯೋಜನೆ’ಗೆ ಬೆಂಬಲ ನೀಡುತ್ತಿರುವ ‘ಮಾವನಿರ್ ಸಿಸ್ಟಮ್ಸ್’ (Mavenir Systems Inc) ಕಂಪನಿ, ‘ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ’ಯ ಮೂಲಕ ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಗಳಿಗೆ ಬೆಂಬಲ ನೀಡುತ್ತಿರುವ ‘ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ’ (ಎನ್‌ಸಿಐ) ಕಂಪನಿಗಳಿಗೆ ಸಿಎಸ್ಆರ್ ಸರ್ಕಲ್ ಆಫ್ ಹಾನರ್’ ಪುರಸ್ಕಾರ’ ನೀಡಲಾಯಿತು. ಸದ್ಗುರು ಶ್ರೀ ಮಧುಸೂದನ ಸಾಯಿ ಅವರಿಂದ ಸಂಸ್ಥೆಯ ಉನ್ನತ ಅಧಿಕಾರಿಗಳು ಸ್ಮರಣಿಕೆ ಸ್ವೀಕರಿಸಿದರು.

    ಸತ್ಯ ಸಾಯಿ ಗ್ರಾಮದ ಯಾಗ ಶಾಲೆಯಲ್ಲಿ ಬೆಳಿಗ್ಗೆ ನವರಾತ್ರಿ ಹೋಮದ ಭಾಗವಾಗಿ ಪವಮಾನ ಹೋಮ, ಮೃತ್ಯುಂಜಯ ಹೋಮ, ಸಾಯಿ ಗಾಯತ್ರಿ ಹೋಮ, ಪೂರ್ಣಾಹುತಿ, ಅಷ್ಟಾವಧಾನ ಸೇವೆ, ಚತುರ್ವೇದ ಪಾರಾಯಣ, ಆಶ್ಲೇಷ ಬಲಿ ಪೂಜೆ ನಡೆಯಿತು. ವಿನಯ್ ಗುರೂಜಿ ಅವರು ಪಾಲ್ಗೊಂಡಿದ್ದರು.

    Those with medical education are equipped to serve humanity.

  • ಸತ್ಯಸಾಯಿ ಗ್ರಾಮದಲ್ಲಿ ಶೀಘ್ರ ಯಕ್ಷಗಾನ, ಜಾನಪದ ರಂಗಕಲೆ ಕಲಿಯಲು ಅವಕಾಶ

    ಸತ್ಯಸಾಯಿ ಗ್ರಾಮದಲ್ಲಿ ಶೀಘ್ರ ಯಕ್ಷಗಾನ, ಜಾನಪದ ರಂಗಕಲೆ ಕಲಿಯಲು ಅವಕಾಶ

    ಚಿಕ್ಕಬಳ್ಳಾಪುರ: ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಶೀಘ್ರದಲ್ಲಿಯೇ ಆರಂಭವಾಗಲಿರುವ ‘ನಾದ ಗುರುಕುಲಂ’ನಲ್ಲಿ ಯಕ್ಷಗಾನ ಮತ್ತು ಜಾನಪದ ರಂಗಕಲೆಗಳ ಅಭ್ಯಾಸಕ್ಕೂ ಅವಕಾಶ ಇರಲಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಘೋಷಿಸಿದರು. ನವರಾತ್ರಿ ಪ್ರಯುಕ್ತ ಬೆಂಗಳೂರಿನ ‘ಕಲಾ ಕದಂಬ ಆರ್ಟ್‌ ಸೆಂಟರ್‌’ನ ಕಲಾವಿದರು ಮಂಗಳವಾರ (ಸೆ 23) ನಡೆಸಿಕೊಟ್ಟ ‘ಮಹಿಷಾಸುರ ಮರ್ದಿನಿ’ ಯಕ್ಷಗಾನ ಮತ್ತು ಜಾನಪದ ಕಲೆಗಳ ಪ್ರದರ್ಶನದ ನಂತರ ಅವರು ಆಶೀರ್ವಚನ ನೀಡಿದರು.

    ನಮ್ಮ ಪುರಾಣಗಳು ಮತ್ತು ಇತರ ಮೌಲಿಕ ಜಾನಪದ ಕಥೆಗಳನ್ನು ಕಲಾತ್ಮಕವಾಗಿ ಕಟ್ಟಿಕೊಡುವ ಅಪರೂಪದ ಕಲೆ ಯಕ್ಷಗಾನ. ಡೊಳ್ಳು ಕುಣಿತ, ಪೂಜಾ ಕುಣಿತಗಳು ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಹಬ್ಬದ ವೈಖರಿಯನ್ನು ಬಿಂಬಿಸುತ್ತವೆ. ಕರ್ನಾಟಕದ ಶ್ರೀಮಂತ ಗ್ರಾಮೀಣ ಬದುಕಿನ ಇಣುಕುನೋಟವನ್ನು ಈ ಪ್ರದರ್ಶನಗಳು ನೀಡಿದವು. ನಮ್ಮನ್ನು ಬೇರೊಂದು ಲೋಕಕ್ಕೆ ಕೊಂಡೊಯ್ದಿದ್ದವು ಎಂದರು.

    ವಿವಿಧ ಕಲಾವಿದರು ಯಕ್ಷಗಾನ, ಡೊಳ್ಳು ಕುಣಿತ, ವೀರಗಾಸೆ, ಪೂಜಾ ಕುಣಿತ, ಬೇಡರ ವೇಷ ಮತ್ತು ತಮಟೆ ಪ್ರದರ್ಶನ ನೀಡಿದರು. ಕರ್ನಾಟಕದ ನೆಲಮೂಲ ಸಂಸ್ಕೃತಿ ಬಿಂಬಿಸುವ ಹಲವು ಜಾನಪದ ಕಲೆಗಳು ಸಭಿಕರ ಮನಸೂರೆಗೊಂಡವು. ಕಲಾ ಕದಂಬ ಆರ್ಟ್‌ ಸೆಂಟರ್‌’ನ ನಿರ್ದೇಶಕ ರಾಧಾಕೃಷ್ಣ ಉರಾಳ ಸೇರಿದಂತೆ ಎಲ್ಲ ಕಲಾವಿದರಿಗೂ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಸ್ಮರಣಿಕೆಗಳನ್ನು ನೀಡಿ ಅಭಿನಂದಿಸಿದರು.

    ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ ಎರಡನೇ ದಿನವಾದ ಮಂಗಳವಾರ ವೇದಮಂತ್ರ ಪಾರಾಯಣದೊಂದಿಗೆ 121 ಪುರೋಹಿತರು ಅತಿರುದ್ರ ಮಹಾ ಯಜ್ಞವನ್ನು ಮುಂದುವರಿಸಿದರು. ದುರ್ಗಾದೇವಿಯ ಎರಡನೇ ರೂಪವಾದ ಬ್ರಹ್ಮಚಾರಿಣಿಯನ್ನು ಅತ್ಯಂತ ಸಂಭ್ರಮ, ಸಡಗರ ಹಾಗೂ ವೈಭವದಿಂದ ಪೂಜಿಸಲಾಯಿತು. ವಿವಿಧ ಬಣ್ಣಗಳ ಹೂವುಗಳಿಂದ ಅಲಂಕೃತಗೊಂಡಿದ್ದ ದೇವಿ ಭಕ್ತರ ಕಣ್ಮನ ಸೆಳೆದಳು. ದೇವಿ ಮತ್ತು ಗಣಪತಿಯ ರಂಗೋಲಿ ಅತ್ಯಾಕರ್ಷಕವಾಗಿ ಕಂಡಿತು.

    ಸದ್ಗುರು ಶ್ರೀ ಮಧುಸೂದನ ಸಾಯಿ ಆಶೀರ್ವಚನ ನೀಡಿ, ದೇವರ ಅನುಗ್ರಹವಿಲ್ಲದೆ ನಾವು ಏನೂ ಸಾಧಿಸಲು ಸಾಧ್ಯವಿಲ್ಲ. ನಾವು ಎಷ್ಟೇ ಬುದ್ಧಿವಂತರಾಗಿರಹುದು, ಎಷ್ಟೇ ಸಮರ್ಥರಾಗಿದ್ದೇವೆ ಎಂದು ಭಾವಿಸಬಹುದು. ಆದರೆ ದೈವೀ ಅನುಗ್ರಹವಿಲ್ಲದೆ ಏನೂ ಮಾಡಲು ಸಾಧ್ಯವಿಲ್ಲ. ಇದೆಲ್ಲವೂ ದೇವರ ಅನುಗ್ರಹದಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ಹೇಳಿದರು.

    ಮನುಷ್ಯರಲ್ಲಿ ಅಹಂಕಾರ ನಿಸರ್ಗ ಸಹಜವಾದುದು. ಅಹಂಕಾರ ಮತ್ತು ಮಮಕಾರವನ್ನು ಬಿಟ್ಟು ಶರಣಾಗಬೇಕು. ದೇವರ ಪೂಜೆ ಮತ್ತು ಸೇವೆಯ ಪ್ರಕ್ರಿಯೆಯಿಂದ ಅಂತಿಮವಾಗಿ ನಮ್ಮ ಮನಸ್ಸು ಶರಣಾಗಲು ಸಿದ್ಧವಾಗುವ ಹಂತವನ್ನು ತಲುಪುತ್ತದೆ. ಈ ಎಲ್ಲಾ ಆಚರಣೆಗಳು ಮನಸ್ಸನ್ನು ಶರಣಾಗತಿಗೆ ಸಿದ್ಧಪಡಿಸುತ್ತವೆ ಎಂದರು.

    ಪ್ರತಿದಿನ ತಪ್ಪು ಮಾಡುತ್ತೇವೆ, ಪ್ರತಿ ದಿನ ಕ್ಷಮೆ ಕೇಳುತ್ತೇವೆ. ಅದು ಸರಿಯಲ್ಲ. ನಾವು ತಪ್ಪು ಮಾಡಬಾರದೆಂದು ಪ್ರಾರ್ಥಿಸಬೇಕು. ಕಲಿಯುವ ಯಾವುದೇ ವಿಷಯವು ನಮಗೆ ಮಾರ್ಗದರ್ಶನ ನೀಡಬೇಕು, ತಪ್ಪು ಪುನರಾವರ್ತನೆ ಆಗಬಾರದು. ಈ ಅದ್ಭುತವಾದ ಹಬ್ಬಗಳು ನಾವು ನಮ್ಮನ್ನು ಎಷ್ಟು ಅರ್ಪಿಸಿಕೊಂಡಿದ್ದೇವೆ ಎಂಬುದನ್ನು ಅಳೆಯಲು ಸಹಾಯ ಮಾಡುತ್ತವೆ. ನಮ್ಮ ಸ್ವಂತ ದೇವತೆಗೆ ಎಷ್ಟು ಹತ್ತಿರವಾಗಿದ್ದೇವೆ ಎಂಬುದನ್ನು ತಿಳಿಸುತ್ತದೆ. ಪ್ರತಿಯೊಂದು ಕೆಲಸಕ್ಕೂ ದೇವರ ಅನುಗ್ರಹ ಬೇಕು. ದೇವರ ಅನುಗ್ರಹವು ಶರಣಾದವರಿಗೆ ಮಾತ್ರವೇ ಸಿಗುತ್ತದೆ ಎಂದು ವಿವರಿಸಿದರು.

    Opportunity to learn Yakshagana folk theatre soon in Sathya Sai Grama

  • ಸಡಗರ ಸಂಭ್ರಮದಿಂದ ಜರುಗಿದ ಅತಿರುದ್ರ ಮಹಾಯಜ್ಞ

    ಸಡಗರ ಸಂಭ್ರಮದಿಂದ ಜರುಗಿದ ಅತಿರುದ್ರ ಮಹಾಯಜ್ಞ

    ಚಿಕ್ಕಬಳ್ಳಾಪುರ: ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ‘ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ’ದ 38ನೇ ದಿನವಾದ ಸೋಮವಾರ (ಸೆ 22) 11 ದಿನಗಳ ನವರಾತ್ರಿ ಉತ್ಸವದ ಮೊದಲ ದಿನ ಅತಿ ರುದ್ರ ಮಹಾ ಯಜ್ಞವು ಸಡಗರ ಸಂಭ್ರಮ ಹಾಗೂ ವೈಭವದಿಂದ ಆರಂಭವಾಯಿತು. ಸದ್ಗುರು ಶ್ರೀ ಮಧುಸೂದನ ಸಾಯಿ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಚಾಲನೆ ನೀಡಿದರು.

    ಶೃಂಗೇರಿ ಹಾಗೂ ವಿವಿಧ ಭಾಗಗಗಳಿಂದ ಬಂದಿರುವ 121 ಪುರೋಹಿತರು ಮಂತ್ರ ಪಠಣಗಳೊಂದಿಗೆ ಶಾಸ್ತ್ರೋಕ್ತವಾಗಿ ಅತಿ ರುದ್ರ ಮಹಾ ಯಜ್ಞದ ವಿಧಿ ವಿಧಾನಗಳನ್ನು ಆರಂಭಿಸಿದರು. ಗಣಪತಿ ಪೂಜೆಯೊಂದಿಗೆ ಯಾಗವನ್ನು ಆರಂಭಿಸಲಾಯಿತು. ನವರಾತ್ರಿ ಹೋಮ ಹಾಗೂ ದುರ್ಗಾ ಪೂಜೆಯು ಸತ್ಯ ಸಾಯಿ ಗ್ರಾಮದಲ್ಲಿ ನಡೆಯಲಿದೆ.

    ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಸದ್ಗುರು ಶ್ರೀ ಮಧುಸೂದನ ಸಾಯಿ, ಲೋಕಕಲ್ಯಾಣಕ್ಕಾಗಿ ಯಾಗಗಳನ್ನು ಮಾಡುತ್ತಿದ್ದೇವೆ. ಇದರಲ್ಲಿ ಬೇರೆ ಯಾವುದೇ ಉದ್ದೇಶವಿಲ್ಲ. ಜಗತ್ತಿನಲ್ಲಿ ಸಮೃದ್ಧಿ ಮತ್ತು ಶಾಂತಿ ನೆಲೆಸಬೇಕೆಂದು ನಮ್ಮ ಪ್ರಾರ್ಥನೆ. ಇದಕ್ಕಾಗಿ ಅತಿ ರುದ್ರ ಮಹಾ ಯಜ್ಞವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.

    ಈ ಯಾಗವು ಜಗತ್ತಿಗೆ ಸಮೃದ್ಧಿಯನ್ನು ತರಲಿದೆ. ಲೋಕ ಹಿತ, ಲೋಕ ಕಲ್ಯಾಣ ಹಾಗೂ ಪರಹಿತಕ್ಕಾಗಿ ಇವನ್ನು ಮಾಡುತ್ತಿದ್ದೇವೆ. ಇವುಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಪೂಜೆ ಮಾಡಿದಾಗ ಎಲ್ಲ ದೇವತೆಗಳ ಆಶೀರ್ವಾದ ಖಂಡಿತ ಸಿಗುತ್ತದೆ. ಇವತ್ತು ದೇವಲೋಕದಲ್ಲಿ ಇರುವಂತೆ ಭಾಸವಾಗುತ್ತಿದೆ. ಎಲ್ಲ ದೇವತೆಗಳೂ ಇಲ್ಲಿದ್ದಾರೆ. ಅಧಿ ದೇವತೆಗಳು, ಕ್ಷೇತ್ರದ ದೇವತೆಗಳ ಉಪಸ್ಥಿತಿಯೂ ಇಲ್ಲಿದೆ. ಇವರ ಆಶೀರ್ವಾದ ಪಡೆಯುವ ನಾವು ತುಂಬಾ ಅದೃಷ್ಟಶಾಲಿಗಳು. ದೇವತೆಗಳು ಭೌತಿಕವಾಗಿ ಲಭ್ಯವಿಲ್ಲದಿದ್ದರೂ ಸೂಕ್ಷ್ಮ ಶಕ್ತಿಗಳಾಗಿ ನಮ್ಮೊಂದಿಗೆ ಇದ್ದಾರೆ ಎಂದರು.

    ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಅವರ ಇಡೀ ಜೀವನದಲ್ಲಿ ಪ್ರೀತಿ ಮತ್ತು ಸೇವೆ ವ್ಯಾಪಿಸಿಕೊಂಡಿದ್ದರು. ಅವರನ್ನು ಶಿವಶಕ್ತಿ ಎಂದು ನಂಬಿ ಪೂಜಿಸಲಾಗುತ್ತಿದೆ. ಜಗತ್ತಿನಾದ್ಯಂತ ಎಲ್ಲಾ ಭಕ್ತರಿಗೆ ನಮ್ಮ ಪ್ರೀತಿ ಮತ್ತು ಸೇವೆ ಯಾವಾಗಲೂ ಇರುತ್ತದೆ. 2015 ರಲ್ಲಿ ಅತಿ ರುದ್ರ ಮಹಾ ಯಾಗ ನಡೆಸುವಂತೆ ಸತ್ಯ ಸಾಯಿ ಬಾಬಾ ಹೇಳಿದ್ದರು. ಅದರಂತೆ ಯಾಗವನ್ನು ನಡೆಸಿಕೊಂಡು ಬರುತ್ತಿದ್ದೇವೆ. ಅತಿ ರುದ್ರ ಮಹಾ ಯಾಗ ಆರಂಭಿಸಿದ ನಂತರ ಈ ಭಾಗದಲ್ಲಿ ಮಳೆ ಉತ್ತಮವಾಯಿತು. ದೇವರ ಅನುಗ್ರಹದಿಂದ ಕಳೆದ 10 ವರ್ಷಗಳಿಂದ ಈ ಪ್ರದೇಶದಲ್ಲಿ ನೀರಿಗೆ ಕೊರತೆಯಾಗಿಲ್ಲ. ಯಜ್ಞಗಳು ಮಳೆ ಬರಲು ಸಹಕಾರಿ ಎಂದರು.

    ಭಾರತಕ್ಕೆ ಸ್ವಾತಂತ್ರ್ಯ ಬಂದು 100 ವರ್ಷಗಳಾಗುವ ಹೊತ್ತಿಗೆ ಜಿಡಿಪಿಯಲ್ಲಿ ವಿಶ್ವದಲ್ಲೇ ಅಗ್ರ ಸ್ಥಾನಕ್ಕೇರುತ್ತದೆ. ದೇಶದಲ್ಲಿರುವ ಹೆಚ್ಚಿನ ಯುವಜನರು ಪ್ರತಿಭಾನ್ವಿತರಾಗಿದ್ದಾರೆ. ಇವರೆಲ್ಲರೂ ದೇಶವನ್ನು ಖಚಿತವಾಗಿ ಮುಂದಕ್ಕೆ ಕೊಂಡೊಯ್ಯುತ್ತಾರೆ. ಪ್ರಧಾನಿ ಮತ್ತವರ ಸಂಪುಟದಲ್ಲಿರುವ ಶೋಭಾ ಕರಂದ್ಲಾಜೆ ಸೇರಿದಂತೆ ಎಲ್ಲರೂ ಅದ್ಭುತವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

    ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಸರ್ ಎಂ ವಿಶ್ವೇಶ್ವರಯ್ಯ ಅವರ ಹುಟ್ಟಿದ ಸ್ಥಳದಿಂದಾಗಿ ಗುರುತಿಸಿಕೊಂಡಿದ್ದ ಮುದ್ದೇನಹಳ್ಳಿಯು ಇದೀಗ ಸಾಮಾಜಿಕ ಮತ್ತು ಧಾರ್ಮಿಕ ಸೇವೆಗಳಿಂದ ಗುರುತಿಸಿಕೊಳ್ಳುತ್ತಿದೆ. ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಮುದ್ದೇನಹಳ್ಳಿಯನ್ನು ಸಂಪೂರ್ಣವಾಗಿ ಬದಲಾಯಿಸಿದ್ದಾರೆ. ಸದ್ಗುರುಗಳು ಈ ಸ್ಥಳವನ್ನು ಸ್ವರ್ಗವನ್ನಾಗಿ ಬದಲಾಯಿಸಿದ್ದಾರೆ. ಅವರಿಗೆ ಧನ್ಯವಾದ ಹೇಳುತ್ತೇನೆ ಎಂದರು.

    ದೇಶದಲ್ಲೇ ಅತ್ಯುತ್ತಮ ಆಸ್ಪತ್ರೆಯನ್ನು ನಿರ್ಮಿಸಿ ಆರೋಗ್ಯ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣ ಮತ್ತು ಪೌಷ್ಟಿಕ ಆಹಾರ ನೀಡುವ ಕೆಲಸ ಮಾಡುತ್ತಿದ್ದಾರೆ. ಒಂದು ಹೊಸ ಜಗತ್ತನ್ನು ನಿರ್ಮಾಣ ಮಾಡಬೇಕೆಂಬ ಸದ್ಗುರುಗಳ ಸಂಕಲ್ಪಕ್ಕೆ ನಾವೆಲ್ಲರೂ ಕೈಜೋಡಿಸಬೇಕು, ಅವರೊಂದಿಗೆ ಮುಂದಕ್ಕೆ ಸಾಗಬೇಕು. ಅವರ ಸಂಕಲ್ಪ ತುಂಬಾ ದೊಡ್ಡದಾಗಿದ್ದು, ನಾವೆಲ್ಲರೂ ಅವರೊಂದಿಗೆ ನಿಲ್ಲೋಣ ಎಂದು ಹೇಳಿದರು.

    The Atirudra Mahayagna was celebrated with great enthusiasm.

  • ಸಾಮಾಜಿಕ ನ್ಯಾಯದ ಬಗ್ಗೆ ಮಾಧ್ಯಮಗಳು ಜನರಲ್ಲಿ ಜಾಗೃತಿ ಮೂಡಿಸಲಿ

    ಸಾಮಾಜಿಕ ನ್ಯಾಯದ ಬಗ್ಗೆ ಮಾಧ್ಯಮಗಳು ಜನರಲ್ಲಿ ಜಾಗೃತಿ ಮೂಡಿಸಲಿ

    ಬೆಂಗಳೂರು, ಸೆಪ್ಟೆಂಬರ್ 19: ಸಮಾಜದಲ್ಲಿನ ಅಸಮಾನತೆಗೆ ಕಾರಣಗಳು ಹಾಗೂ ಸಾಮಾಜಿಕ ನ್ಯಾಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಮಾಧ್ಯಮಗಳು ತೊಡಗಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.

    ಅವರು ಇಂದು ಬೆಂಗಳೂರಿನ ವಾರ್ತಾ ಸೌಧದ ಸುಲೋಚನಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 2024 ನೇ ಕ್ಯಾಲೆಂಡರ್ ವರ್ಷದ ವಡ್ಡರ್ಸೆ ರಘುರಾಮ ಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ 2017 ರಿಂದ 2023 ನೇ ಕ್ಯಾಲೆಂಡರ್ ವರ್ಷದ ಪರಿಸರ ಮತ್ತು ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ದಲ್ಲಿ ಭಾಗವಹಿಸಿ ಮಾತನಾಡಿದರು.

    ಅಭಿಪ್ರಾಯಗಳು ವಸ್ತುಸ್ಥಿತಿಯಿಂದ ಕೂಡಿರಬೇಕು. ಅನೇಕ ಬಾರಿ ಊಹಾ ಪತ್ರಿಕೋದ್ಯಮ ಆಗಿರುತ್ತದೆ , ಅದು ಆಗಬಾರದು. ಸತ್ಯ ಅಸತ್ಯಗಳನ್ನು ಪತ್ತೆ ಹಚ್ಚಿ, ಸತ್ಯವನ್ನು ಶೋಧನೆ ಮಾಡುವ ಕಾರ್ಯವನ್ನು ಪತ್ರಿಕೋದ್ಯಮ ಮಾಡಬೇಕು. ಯಾವುದೇ ಕಾರಣಕ್ಕೂ ಒಬ್ಬ ವ್ಯಕ್ತಿಯು ತಪ್ಪು ಮಾಡದಿದ್ದರೂ, ಸುಮ್ಮನೆ ಆರೋಪಗಳನ್ನು ಮಾಡಬಾರದು. ಸರ್ಕಾರದಲ್ಲಿ ಎಲ್ಲವೂ ಸರಿಯಾಗಿರುವುದಿಲ್ಲ ನಿಜ, ಆದರೆ ಸರ್ಕಾರದ ಜನಪರ ವಿಚಾರಗಳನ್ನು ಜನರಿಗೆ ತಿಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಜನ ವಿರೋಧಿ ಕಾರ್ಯವನ್ನು ಸರ್ಕಾರ ಮಾಡಿದರೆ ಅದನ್ನೂ ಜನರಿಗೆ ತಿಳಿಸುವ ಕಾರ್ಯ ಮಾಡಬೇಕು ಎಂದರು.

    ಸಮಾಜದಲ್ಲಿ ಜಾತಿ ವ್ಯವಸ್ಥೆ, ಅಸಮಾನತೆ ಇದೆ. ಸಾಮಾಜಿಕ ಅಸಮಾನತೆ ಬಗ್ಗೆ ಜನರಿಗೆ ತಿಳಿಸುವ ಕಾರ್ಯ ಮಾಡಬೇಕು. ಬಹುಸಂಖ್ಯಾತರಾಗಿರುವ ಜನ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿರುವುದು ಅಸಮಾನತೆಗೆ ಪ್ರಮುಖ ಕಾರಣ. ಇದನ್ನು ನೇರವಾಗಿ ಜನರಿಗೆ ತಿಳಿಸುವ ಪ್ರಯತ್ನದಲ್ಲಿ, ಯಾವುದೇ ರಾಜಿ ಇಲ್ಲದೆ, ಸಾಮಾಜಿಕ ನ್ಯಾಯ ಎಲ್ಲರಿಗೂ ಸಿಕ್ಕಿದೆಯೇ, ಇಲ್ಲವೇ, ಸಮಬಾಳು, ಸಮಪಾಲು ಅನುಷ್ಠಾನಕ್ಕೆ ಬಂದಿದೆಯೇ ಎಂಬುದನ್ನು ಪರಿಶೀಲಿಸಬೇಕು. ಸಾಮಾಜಿಕ ನ್ಯಾಯ ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗಿರಬೇಕಾದ ವಿಚಾರವಲ್ಲ. ಎಲ್ಲರಿಗೂ ದೇಶದ ವ್ಯವಸ್ಥೆಯಲ್ಲಿ ಇನ್ನೂ ಸಹ ಸಮಾನವಾದ ಅವಕಾಶ ಸಿಗದಿರಲು ಕಾರಣಗಳೇನು ಎಂಬ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಧ್ಯಮ ಮಾಡಬೇಕು ಎಂದರು.

    ಇತ್ತೀಚಿಗೆ ಟಿವಿ ಚಾನೆಲ್‌ಗಳು ಇನ್ನೊಬ್ಬರ ಹೇಳಿಕೆ ಬಗ್ಗೆ ಪ್ರತಿಕ್ರಿಯೆಯನ್ನು ಕೇಳಿ ಸುದ್ದಿ ಮಾಡುತ್ತವೆ. ಅದರಲ್ಲಿ ಅನೇಕ ವಿಚಾರಗಳು ಸಮಾಜಕ್ಕೆ ಸಂಬಂಧವೇ ಪಟ್ಟಿರುವುದಿಲ್ಲ. ಸಮಾಜಕ್ಕೆ ಸಂಬಂಧಪಟ್ಟಂತಹ ವಿಚಾರಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ. ಭಾನು ಮುಷ್ತಾಕ್‌ ದಸರಾ ಉದ್ಘಾಟನೆಯನ್ನು ವಿಷಯವನ್ನಾಗಿಸಲು ಹೊರಟರು. ಹೈಕೋರ್ಟ್‌ ಮತ್ತು ಸುಪ್ರಿಂಕೋರ್ಟ್‌ ಸಹ ಇದನ್ನು ವಜಾಗೊಳಿಸಿದೆ. ದಸರಾ ಹಬ್ಬ ಧಾರ್ಮಿಕ ವಿಚಾರವಲ್ಲ, ಅದು ನಾಡ ಹಬ್ಬವಾಗಿದ್ದು, ಸಾಂಸ್ಕೃತಿಕ ವಿಚಾರವಾಗಿದೆ. ನಮ್ಮಲ್ಲಿ ಸಹಬಾಳ್ವೆ ಇರಬೇಕು. ಸಮಾಜದಲ್ಲಿ ವೈವಿಧ್ಯತೆಯಲ್ಲಿ ಏಕತೆಯನ್ನು ನಿರ್ಮಾಣ ಮಾಡಬೇಕು. ಅಂಬೇಡ್ಕರ್ ಅವರು ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ನಾವು ವೈರುಧ್ಯಗಳಿಂದ ಕೂಡಿದ ಸಮಾಜಕ್ಕೆ ಕಾಲಿಡುತ್ತಿದ್ದೇವೆ. ಸಮಾಜದ ದುರ್ಬಲ ವರ್ಗದವರ ಅಭಿವೃದ್ಧಿಯಾದರೆ ಮಾತ್ರ ನಿಜವಾದ ಅಭಿವೃದ್ಧಿ ಎಂದು ಹೇಳಿದ್ದರು.

    ವಡ್ಡರ್ಸೆ ರಘುರಾಮ ಶೆಟ್ಟರು ಸಮ ಸಮಾಜ ನಿರ್ಮಾಣದ ಕನಸು ಕಂಡ ಪತ್ರಕರ್ತರು. ಜಾತಿ ಸಮಸ್ಯೆಗಳ ವಿರುದ್ಧ ಬರೆದವರು ಎಂದು ವಿವರಿಸಿದರು.

    ಪರಿಸರ ಅಭಿವೃದ್ಧಿ ಸಂರಕ್ಷಣೆಗೆ ಮಾಧ್ಯಮಗಳು ಹೆಚ್ಚು ಒತ್ತು ನೀಡಬೇಕು. ಪತ್ರಕರ್ತರು ಪರಿಸರ ನ್ಯಾಯಕ್ಕೆ ಬದ್ಧವಾಗಿರಬೇಕು. ಸ್ವಾತಂತ್ರ್ಯ ಪೂರ್ವದ ಮಾಧ್ಯಮ ರಂಗಕ್ಕೂ ಇಂದಿನ ಮಾಧ್ಯಮ ರಂಗಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಸ್ವಾತಂತ್ರ್ಯೋತ್ತರ ಪತ್ರಿಕೋದ್ಯಮ ಶ್ರೀಮಂತರ ಕೈಗಳಿಗೆ ಸಿಕ್ಕಿಹಾಕಿಕೊಂಡಿದೆ. ಪತ್ರಕರ್ತರು ಇದನ್ನು ಅರ್ಥ ಮಾಡಿಕೊಂಡು ಕರ್ತವ್ಯ ನಿರ್ವಹಿಸಬೇಕಿದೆ ಎಂದರು.

    ನಮ್ಮ ಸಮಾಜದಲ್ಲಿ ಜಾತಿ ವ್ಯವಸ್ಥೆ ಹೇಗೆ ಬೇರು ಬಿಟ್ಟಿದೆ ಎಂದರೆ ಐದಾರು ವರ್ಷಗಳಲ್ಲಿ, ಹತ್ತಿಪ್ಪತ್ತು ವರ್ಷಗಳಲ್ಲಿ ಹೋಗುವಂತದ್ದಲ್ಲ. ಆದರೆ ಅಸಮಾನತೆಯ ಮಟ್ಟವನ್ನು ಕಡಿಮೆ ಮಾಡಿ ಸಮ ಸಮಾಜ ನಿರ್ಮಾಣಕ್ಕೆ ನಮ್ಮ ಸರ್ಕಾರ ಅನೇಕ ಜನಪರ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಮಹಿಳೆಯರಿಗೂ ಸಮಾನತೆ ಬರಬೇಕು ಎನ್ನುವ ನಿಟ್ಟಿನಲ್ಲಿ ಮಹಿಳಾ ಸಬಲೀಕರಣಕ್ಕೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಎಲ್ಲರ ಅಭಿವೃದ್ಧಿಯೇ ನಿಜವಾದ ಅಭಿವೃದ್ಧಿ , ದುರ್ಬಲ ವರ್ಗದವರ ಅಭಿವೃದ್ಧಿಯೇ ನಿಜವಾದ ಅಭಿವೃದ್ಧಿ ಎಂದರು.

    ಬಹಳಷ್ಟು ಜನರು ಸಂವಿಧಾನವನ್ನೇ ಓದಿರುವುದಿಲ್ಲ ಇದೇ ಕಾರಣಕ್ಕೆ ನಮ್ಮ ಸರ್ಕಾರ, ಶಾಲಾ-ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ಓದುವಂತಹ ಕಾರ್ಯಕ್ರಮ ಹಮ್ಮಿಕೊಂಡಿತು ಸಂವಿಧಾನದ ಕರ್ತವ್ಯಗಳನ್ನು, ಹಕ್ಕುಗಳನ್ನು ತಿಳಿದುಕೊಂಡಲ್ಲಿ ಜನರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಸಹಾಯಕವಾಗುತ್ತದೆ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಕೆಲಸ ಮಾಡಿದರೆ ಸಮಾಜ, ನಾಡು ದೇಶ ಎಲ್ಲಕ್ಕೂ ಒಳ್ಳೆಯದಾಗುತ್ತದೆ ಎಂದರು.

    ಸುಮಾರು 2017ರಿಂದ ಬಾಕಿ ಇದ್ದ ಪ್ರಶಸ್ತಿಗಳನ್ನು ಇಂದು ಪ್ರದಾನ ಮಾಡಲಾಗಿದೆ ಆಯಾ ವರ್ಷದ ಪ್ರಶಸ್ತಿಗಳನ್ನು ಆಯಾ ವರ್ಷವೇ ನೀಡಿದರೆ ಉತ್ತಮ. ಅನೇಕ ವರ್ಷಗಳ ಪ್ರಶಸ್ತಿಗಳನ್ನು ಒಟ್ಟಿಗೆ ನೀಡುವುದು ಒಳ್ಳೆಯ ಪದ್ಧತಿಯಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.

    Let the media raise awareness among the people about social justice.

  • ಸೆ.22 ರಿಂದಲೇ ಮನೆ ಮನೆ ಸಮೀಕ್ಷೆಗೆ ಸಿ.ಎಂ ಚಾಲನೆ

    ಸೆ.22 ರಿಂದಲೇ ಮನೆ ಮನೆ ಸಮೀಕ್ಷೆಗೆ ಸಿ.ಎಂ ಚಾಲನೆ

    ಬೆಂಗಳೂರು: ‘ಇದೇ 22ರಿಂದಲೇ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭವಾಗಲಿದ್ದು, ಮುಂದೂಡುವ ಪ್ರಶ್ನೆಯೇ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

    ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಮೀಕ್ಷೆಯ ಕುರಿತು ಚರ್ಚೆ ನಡೆದಿತ್ತು. ಹಿಂದುಳಿದ ವರ್ಗಗಳ ಆಯೋಗವು ಸಮೀಕ್ಷೆಗಾಗಿ ಸಿದ್ಧಪಡಿಸಿ ರುವ ಕೈಪಿಡಿಯ ಜಾತಿ ಪಟ್ಟಿಯಲ್ಲಿ ಹೊಸ ಜಾತಿಗಳ ಸೇರ್ಪಡೆ ಹಾಗೂ ಹಿಂದೂ ಜಾತಿಗಳ ಹೆಸರಿನ ಜೊತೆಗೆ ಕ್ರಿಶ್ಚಿಯನ್ ಪದದ ಉಲ್ಲೇಖದ ಕುರಿತು ಕೆಲವು ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದರು. ಆಯೋಗದ ಈ ನಡೆಯನ್ನು ಬಿಜೆಪಿ ಅಸ್ತ್ರ ಮಾಡಿಕೊಂಡಿದ್ದು ಸರ್ಕಾರ, ಪಕ್ಷದ ವರ್ಚಸ್ಸಿಗೆ ಹಿನ್ನಡೆಯಾಗಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದರು. ಇದರಿಂದಾಗಿ, ಸಮೀಕ್ಷೆ ಮುಂದೂಡಿಕೆ ಯಾಗಬಹುದೆಂಬ ಚರ್ಚೆಗಳು ನಡೆದಿದ್ದವು.

    ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಸಿದ್ದರಾಮಯ್ಯ ಅವರು, ‘ಸಮೀಕ್ಷೆಯ ಬಗ್ಗೆ ಸರ್ಕಾರದ ಅಭಿಪ್ರಾಯ ಗಳನ್ನು ಈಗಾಗಲೇ ಹಿಂದುಳಿದ ವರ್ಗಗಳ ಆಯೋಗಕ್ಕೆ ತಿಳಿಸಲಾಗಿದೆ. ಆಯೋಗವು ಸಂವಿಧಾನ ಬದ್ಧವಾದ ಸಂಸ್ಥೆ. ಇಂತಹ ವಿಚಾರಗಳಲ್ಲಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವ ಅಧಿಕಾರ ಆಯೋಗಕ್ಕೇ ಇದೆ. ನಾವು ನಿರ್ದೇಶನ ನೀಡಲು ಬರುವುದಿಲ್ಲ. ಆಯೋಗ ನಿರ್ಧಾರ ಕೈಗೊಳ್ಳಲಿದೆ’ ಎಂದು ಹೇಳಿದರು.

    ‘ಸಚಿವ ಸಂಪುಟ ಸಭೆಯಲ್ಲಿ ಯಾವ ಗೊಂದಲವೂ ಆಗಿಲ್ಲ. ಸಮೀಕ್ಷೆ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ’ ಎಂದೂ ಸಿದ್ದರಾಮಯ್ಯ ಹೇಳಿದರು.

    ಜಾತಿವಾರು ಸಮೀಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ತುರ್ತು ವಿಚಾರಣೆ ನಡೆಸಿದ ಹೈಕೋರ್ಟ್, ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ, ಭಾರತ ಜನಗಣತಿ ಆಯುಕ್ತ ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ.

    ಅಖಿಲ ಭಾರತ ವೀರಶೈವ ಮಹಾಸಭಾ, ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ಹಾಗೂ ಹಿರಿಯ ವಕೀಲ ಕೆ.ಎನ್‌.ಸುಬ್ಬಾರೆಡ್ಡಿ ಸಲ್ಲಿಸಿದ್ದ ಅರ್ಜಿಗಳನ್ನು ಹಿರಿಯ ನ್ಯಾಯಮೂರ್ತಿ ಅನು ಶಿವರಾಮನ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

    ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ ವಿಚಾರಣೆಯನ್ನು ಇದೇ 22ಕ್ಕೆ ಮುಂದೂಡಿತು. ಇದೇ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಪ್ರಭುಲಿಂಗ ಕೆ.ನಾವದಗಿ, ‘ಮುಂದಿನ ವಿಚಾರಣೆ ತನಕ ಸರ್ಕಾರ ಸಮೀಕ್ಷೆ ಕಾರ್ಯಕ್ಕೆ ಮುಂದಾಗದಂತೆ ನಿರ್ದೇಶಿಸಬೇಕು’ ಎಂದು ಕೋರಿದರು.

    ಆಯೋಗದ ಪರ ಹಾಜರಿದ್ದ ಹಿರಿಯ ವಕೀಲ ರವಿವರ್ಮ ಕುಮಾರ್ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ‘ಈಗಾಗಲೇ ಸಮೀಕ್ಷೆ ಕಾರ್ಯ ಆರಂಭವಾಗಿದೆ. ಸುಮಾರು 1.5 ಕೋಟಿ ಮನೆಗಳ ವಿದ್ಯುತ್‌ ಮೀಟರ್‌ಗಳಿಗೆ ಸಮೀಕ್ಷೆಯ ಸ್ಟಿಕ್ಕರ್‌ಗಳನ್ನು ಅಂಟಿಸಲಾಗಿದೆ’ ಎಂದರು.

    ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಅರ್ಜಿದಾರರ ಮಧ್ಯಂತರ ಮನವಿಯನ್ನು ಯಥಾಕ್ರಮದಲ್ಲಿ ನಿಯಮಿತ ನ್ಯಾಯಪೀಠವೇ ವಿಚಾರಣೆ ವೇಳೆ ಪರಿಗಣಿಸಲಿದೆ’ ಎಂದು ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತು.

    ಸರ್ಕಾರದ ಸಲಹೆಯನ್ನು ಪರಿಗಣಿಸಿರುವ ಹಿಂದುಳಿದ ವರ್ಗಗಳ ಆಯೋಗ, ಜಾತಿ ಪಟ್ಟಿಯಲ್ಲಿರುವ ‘ಹಿಂದೂ ಕ್ರೈಸ್ತ’ ಎಂಬ ಉಲ್ಲೇಖವನ್ನು ಕೈಬಿಟ್ಟು ಸಮೀಕ್ಷೆ ನಡೆಸಲು ನಿರ್ಧರಿಸಿದೆ.

    ಹೊಸದಾಗಿ ಜಾತಿಪಟ್ಟಿ ನೀಡಬೇಕೇ ಅಥವಾ ಮುದ್ರಣಗೊಂಡಿರುವ ಕೈಪಿಡಿಯಲ್ಲಿನ ಪುಟದಲ್ಲಿ ಈ ವಿವರವನ್ನು ಮರೆಮಾಚಬೇಕೇ ಎಂಬ ತೀರ್ಮಾನವನ್ನು ಆಯೋಗ ಮಾಡಲಿದೆ ಎಂದು ಗೊತ್ತಾಗಿದೆ.

    ಈ ಬೆನ್ನಲ್ಲೇ, ಹಿಂದುಳಿದ ವರ್ಗಗಳ ಆಯೋಗವು ಸಮೀಕ್ಷಾ ಕಾರ್ಯಕ್ಕೆ ದಿನಾಂಕ ನಿಗದಿಪಡಿಸಿ ಅನುಮತಿ ನೀಡುವಂತೆ ಕೋರಿದ್ದ ಪ್ರಸ್ತಾವನೆಗೆ ರಾಜ್ಯ ಸರ್ಕಾರವು  ಒಪ್ಪಿಗೆ ಸೂಚಿಸಿದೆ.

    ‘ಆಯೋಗದ ವತಿಯಿಂದ ಎಲ್ಲಾ ನಾಗರಿಕರ ಸಮೀಕ್ಷೆಯನ್ನು ಸೆ.22 ರಿಂದ ಅ.7ರವರೆಗೆ ನಡೆಸುವುದಕ್ಕೆ ಅನುಮೋದನೆ ನೀಡಲಾಗಿದೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಶುಕ್ರವಾರ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.

    CM launches door-to-door survey from September 22nd

  • ಜಂಟಿ ಸಮೀಕ್ಷೆ ಮುಗಿಯುತ್ತಿದ್ದಂತೆ ಸಮರ್ಪಕವಾಗಿ ಪರಿಹಾರ ತಲುಪಿಸಿ

    ಜಂಟಿ ಸಮೀಕ್ಷೆ ಮುಗಿಯುತ್ತಿದ್ದಂತೆ ಸಮರ್ಪಕವಾಗಿ ಪರಿಹಾರ ತಲುಪಿಸಿ

    ಕಲ್ಬುರ್ಗಿ:  ಜಂಟಿ ಸಮೀಕ್ಷೆ ಮುಗಿಯುತ್ತಿದ್ದಂತೆ ಬೆಳೆ ಹಾನಿಗೆ ಸಮರ್ಪಕವಾಗಿ ಪರಿಹಾರ ತಲುಪಿಸಿ. ಮಾನವ- ಜಾನವಾರು ಜೀವ ಹಾನಿಗಳಿಗೆ ಶೇ100 ರಷ್ಟು ಪರಿಹಾರ ಒದಗಿಸಿರುವ ರೀತಿಯಲ್ಲೇ ಬೆಳೆ ಹಾನಿಗೂ ಒದಗಿಸಿ ಎಂದು ಸಿ.ಎಂ.ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಕಲ್ಬುರ್ಗಿ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಿ ಅತಿವೃಷ್ಠಿಯಿಂದ ಸಂಭವಿಸಿದ ಬೆಳೆ ಹಾನಿ ಕುರಿತಂತೆ ಮಾಹಿತಿ ಪಡೆದು, ಜಂಟಿ ಸಮೀಕ್ಷೆ ನಡೆದಿರುವ ಪ್ರಮಾಣದ ಬಗ್ಗೆ ಮಾಹಿತಿ ಪಡೆದ ಬಳಿಕ ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಸಲಹೆ ಸೂಚನೆಗಳನ್ನು ನೀಡಿದರು.

    ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಅಜಯ್ ಸಿಂಗ್ ಅವರು ಪರಿಸ್ಥಿತಿಯನ್ನು ವಿವರಿಸಿ, “ತಾವು ಸಿಎಂ ಆಗಿರುವಾಗ ಕಳೆದ ಬಾರಿಗಿಂತ ಈ ಬಾರಿ ಉತ್ತಮ ಮಳೆ ಆಗಿದೆ. ವಾಡಿಕೆಗಿಂತ ಶೇ17 ರಷ್ಟು ಮಳೆ ಹೆಚ್ಚಾಗಿದೆ. 37 ಮಾನವ ಜೀವ ಹಾನಿ ಪ್ರಕರಣಗಳು ವರದಿಯಾಗಿದ್ದು ಎಲ್ಲಾ ಪರಿಹಾರ ನೀಡಲಾಗಿದೆ. ಜಾನವಾರು ಪ್ರಾಣ ಹಾನಿ 175 ಪ್ರಕರಣ ವರದಿಯಾಗಿದ್ದು ಎಲ್ಲದಕ್ಕೂ ಪರಿಹಾರ ನೀಡಲಾಗಿದೆ. ಸಂಪೂರ್ಣ ಮನೆ ಹಾನಿ, ಭಾಗಶಃ ಹಾನಿ ಆಗಿರುವ ಎಲ್ಲಾ ಪ್ರಕರಣಹಳಲ್ಲೂ ಪರಿಹಾರ ನೀಡಲಾಗಿದೆ ಎಂದರು.

    ಬೀದರ್, ಕಲ್ಬುರ್ಗಿ, ಕೊಪ್ಪಳ, ಯಾದಗೀರ್ ಜಿಲ್ಕೆಗಳಲ್ಲಿ ಮಳೆಯಿಂದ ಹೆಚ್ಚು ಹಾನಿ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.‌

    ನಿರಂತರ ಜೋಳು ಮಳೆ ಇರುವುದರಿಂದ ಬೆಳೆ ಹಾನಿಯ ಸಂಪೂರ್ಣ ಜಂಟಿ ಸಮೀಕ್ಷೆಗೆ ಅಡ್ಡಿ ಆಗುತ್ತಿದೆ. ಹೀಗಾಗಿ ನಿಗಧಿತ ಅವಧಿಯೊಳಗೆ ಜಂಟಿ ಸಮೀಕ್ಷೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಮಳೆ ನಿಂತ ಬಳಿಕ ಎಂಟತ್ತು ದಿನಗಳ ಹೆಚ್ಚುವರಿ ಅಗತ್ಯ ಬೀಳಬಹುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿಗಳಿಗೆ ವಿವರಿಸಿದರು.

    ಸದ್ಯ ದ್ರೋಣ್ ಕ್ಯಾಮರಾ ಮೂಲಕ ಮಾಡಿರುವ ಬೆಳೆ ಹಾನಿ ವಿಡಿಯೊವನ್ನು ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ತೋರಿಸಿ ವಿವರಿಸಿದರು. ಸಭೆಯ ಬಳಿಕ ಮುಖ್ಯಮಂತ್ರಿಗಳು ಅಫ್ಜಲಪುರ ವಿಧಾನಸಭಾ ಕ್ಷೇತ್ರದ ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು.

    Deliver adequate compensation as soon as the joint survey is completed.

  • ಕುರುಬ ಸಮುದಾಯವನ್ನು ST ಗೆ ಸೇರಿಸಲು ಮತ್ತೆ ಕೇಂದ್ರಕ್ಕೆ ಶಿಫಾರಸ್ಸು

    ಕುರುಬ ಸಮುದಾಯವನ್ನು ST ಗೆ ಸೇರಿಸಲು ಮತ್ತೆ ಕೇಂದ್ರಕ್ಕೆ ಶಿಫಾರಸ್ಸು

    ಕಲ್ಬುರ್ಗಿ:  ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7 ರವರೆಗೆ ನಡೆಯಲಿರುವ ಸಮೀಕ್ಷೆ ವೇಳೆ ಕುರುಬ ಅಂತಲೇ ಜಾತಿ ಹೆಸರನ್ನು ಬರೆಸಿದರೆ ಮಾತ್ರ ಸಮಾಜದ ಸ್ಥಿತಿ ಗತಿಯ ಸ್ಪಷ್ಟ ಚಿತ್ರಣ ಮತ್ತು ಸಾಮಾಜಿಕ‌ ಅನುಕೂಲಗಳು ಸಿಗುತ್ತವೆ ಎಂದು ಕರೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು
    ರಾಜ್ಯದ ಎಲ್ಲಾ ಜಾತಿ ಸಮುದಾಯಗಳ ಸ್ಪಷ್ಟ ಸ್ಥಿತಿ ಅರಿಯಲು ಸಮೀಕ್ಷೆ ನಡೆಸಲಾಗುತ್ತಿದೆ ಎಂದರು.

    ಕರ್ನಾಟಕ ರಾಜ್ಯ ಕುರುಬಗೊಂಡ ಸಂಘ ಮತ್ತು ಸಂಗೊಳ್ಳಿ ರಾಯಣ್ಣ ಯುವಕ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಯಣ್ಣ ಅವರ ಮೂರ್ತಿ ಅನಾವರಣಗೊಳಿಸಿ, ನಗರ ಸಿಟಿ ಬಸ್ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣರ ಹೆಸರು ನಾಮಕರಣ ಮಾಡಿ ಮಾತನಾಡಿದರು.

    ಕುರುಬ ಸಮುದಾಯವನ್ನು ST ಗೆ ಸೇರಿಸಲು ಹಿಂದೆಯಶ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಇದನ್ನು ಕೇಂದ್ರ ಸರ್ಕಾರ ವಾಪಾಸ್ ಕಳುಹಿಸಿದೆ. ಹೀಗಾಗಿ ಮತ್ತೆ ಹೆಚ್ಚುವರಿ ಅಂಕಿ ಅಂಶಗಳು ಮತ್ತು ದಾಖಲೆಗಳ ಸಮೇತ ಕೇಂದ್ರಕ್ಕೆ ಮತ್ತೆ ಶಿಫಾರಸ್ಸು ಕಳುಹಿಸಲಾಗುವುದು ಎಂದು ಸಿ.ಎಂ ಭರವಸೆ ನೀಡಿದರು.

    ರಾಯಣ್ಣ ಜನ್ಮ ದಿನ ಸ್ವಾತಂತ್ರ್ಯೋತ್ಸವದ ಆಗಸ್ಟ್ 15. ರಾಯಣ್ಣರನ್ನು ಬ್ರಿಟಿಷರು ಗಲ್ಲಿಗೆ ಏರಿಸಿದ್ದು ಜನವರಿ 26ರ ಗಣರಾಜ್ಯೋತ್ಸವ ದಿನದಂದು. ಇದು ಕಾತಾಳೀಯ ಆದರೂ ಸತ್ಯವಾದ ಸಂಗತಿ ಎಂದರು. ಸ್ವಾತಂತ್ರ್ಯ ಸೇನಾನಿ ರಾಯಣ್ಣ ಯುವಕರಿಗೆ ಪ್ರೇರಣೆ ಆಗಿದ್ದಾರೆ ಎಂದರು.‌

    ಶೇ7 ರಷ್ಟಿರುವ ಕುರುಬ ಸಮುದಾಯ ಶಿಕ್ಷಣದಲ್ಲಿ ಬಹಳ ಹಿಂದುಳಿದಿದೆ. ಆದ್ದರಿಂದ ಸಮುದಾಯದ ಪ್ರತಿಯೊಬ್ಬರೂ ವಿದ್ಯಾವಂತರಾಗುವುದು ಅವಶ್ಯವಾಗಿದೆ. ಸಮುದಾಯವನ್ನು ಶಿಕ್ಷಣ ಕ್ಷೇತ್ರದಲ್ಲಿ ಉನ್ನತೀಕರಿಸಬೇಕಿದೆ ಎಂದರು.

    ಇಡೀ ರಾಜ್ಯ ಪ್ರವಾಸ ಮಾಡಿ ಕನಕ ಗುರುಪೀಠ ಸ್ಥಾಪಿಸಿದೆವು. ಪೀಠದ ಉದ್ದೇಶ, ಎಲ್ಲಾ ಶೋಷಿತ ಸಮುದಾಯಗಳಿಗೂ ಶಿಕ್ಷಣ ಕೊಡುವುದೇ ಆಗಿತ್ತು. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ನಾರಾಯಣಗುರು ಇಬ್ಬರೂ ಶಿಕ್ಷಣದಿಂದ ಸ್ವತಂತ್ರ ರಾಗಬಹುದು, ಸ್ವಾಭಿಮಾನಿಗಳಾಗಬಹುದು ಎಂದು ಹೇಳಿದ್ದಾರೆ. ಜಾತಿ ವ್ಯವಸ್ಥೆಯ ಕಾರಣಕ್ಕೆ ಅಸಮಾನತೆ ಸೃಷ್ಟಿಯಾಗಿದೆ ಎಂದರು.

    ಜಾತಿ ರಹಿತ, ವರ್ಗ ರಹಿತ ಸಮಾಜ ಆಗಬೇಕು ಎನ್ನುವುದು ಬುದ್ದ, ಬಸವ, ಅಂಬೇಡ್ಕರ್ ಎಲ್ಲರ ಆಶಯವಾಗಿತ್ತು. ನಮ್ಮ ಸರ್ಕಾರ ಕೂಡ ಅಸಮಾನತೆ ಹೋಗಲಾಡಿದರು ಹತ್ತು ಹಲವು ಭಾಗ್ಯಗಳನ್ನು ನೀಡಿ, ಗ್ಯಾರಂಟಿಗಳನ್ನು ಜಾರಿಗೆ ತಂದಿದೆ ಎಂದರು.

    ಆರ್ಥಿಕ ಚಲನೆ ಇಲ್ಲದ ಸಮಾಜ ಪ್ರಗತಿ ಕಾಣಲು ಸಾಧ್ಯವಿಲ್ಲ. ಆದ್ದರಿಂದ ಆರ್ಥಿಕವಾಗಿ, ಸಾಮಾಜಿಕವಾಗಿ ಶೋಷಿತ ಸಮುದಾಯಗಳು ಚಲನೆ ಕಂಡುಕೊಳ್ಳಬೇಕು. ಆಗಲೇ ಬುದ್ದ, ಬಸವ, ಅಂಬೇಡ್ಕರ್ ಕನಸು ನನಸಾಗುತ್ತದೆ. ಈ ಕನಸು ನನಸಾಗುವ ಕಾರಣಕ್ಕೇ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗಲೇ ಹಿಂದುಳಿದವರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡಿಸಿದ್ಧೆ ಎಂದರು.

    ಇಡೀ ರಾಜ್ಯ ಸುತ್ತಿ ಮಠ ಮಾಡಿದ್ದು ನಾವು. ಆದರೆ ಈಗ ಕೆಲವು ಡೋಂಗಿ ಜನ‌ ನಾವೇ ಮಠ ಮಾಡಿದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ. ಅವರ ಮಾತು ನಂಬಬೇಡಿ. ತೀರ್ಮಾನ ನಿಮಗೆ ಬಿಡ್ತೀನಿ. ನಿಮ್ಮ ಪ್ರೀತಿ, ವಿಶ್ವಾಸ ಸದಾ ನನ್ನ ಮೇಲೆ ಇರಲಿ. ನಾನು ರಾಜಕಾರಣ ಮಾಡೋದೇ ಸಾಮಾಜಿಕ ನ್ಯಾಯಕ್ಕಾಗಿ. ನಾನು ಅಧಿಕಾರದಲ್ಲಿ ಇರಲಿ, ಬಿಡಲಿ ಸಾಮಾಜಿಕ ನ್ಯಾಯಕ್ಕಾಗಿಯೇ ಕೆಲಸ ಮಾಡ್ತೀನಿ. ನಾವೆಲ್ಲರೂ ಕನಕದಾಸರು ಮತ್ತು ಸಂಗೊಳ್ಳಿ ರಾಯಣ್ಣ ಅವರು ನಡೆದ ದಾರಿಯಲ್ಲೇ ನಡೆಯೋಣ ಎಂದು ಕರೆ ನೀಡಿದರು.

    Recommendation to the Center again to include the Kuruba community in ST

  • ಕಾಂಗ್ರೆಸ್ ಸರ್ಕಾರ ಎಂದೆಂದಿಗೂ ನುಡಿದಂತೆ ನಡೆಯುವ ಸರ್ಕಾರ

    ಕಾಂಗ್ರೆಸ್ ಸರ್ಕಾರ ಎಂದೆಂದಿಗೂ ನುಡಿದಂತೆ ನಡೆಯುವ ಸರ್ಕಾರ

    ಬೆಂಗಳೂರು: ಕಾಂಗ್ರೆಸ್ ಸರ್ಕಾರ ಎಂದೆಂದಿಗೂ ನುಡಿದಂತೆ ನಡೆಯುತ್ತದೆ. ಯುಕೆಪಿ ಹಂತ 3 ಯೋಜನೆಯ ತ್ವರಿತ ಅನುಷ್ಠಾನಕ್ಕೆ ಸರ್ಕಾರದ ಆದ್ಯತೆ ನೀಡಿದ್ದು, ಈ ದಿಸೆಯಲ್ಲಿ ರಾಜ್ಯಕ್ಕೆ ಸಮೃದ್ಧಿ ತರಬಲ್ಲ ಐತಿಹಾಸಿಕ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

    ಅವರು ಇಂದು ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದ ವಿಶೇಷ ಸಚಿವ ಸಂಪುಟ ನಡೆಸಿದ ನಂತರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದರು.

    ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಮತ್ತು ನ್ಯಾಯಾಧೀಕರಣದ ತೀರ್ಪಿನಂತೆ ಆಲಮಟ್ಟಿ ಜಲಾಶಯದ ಎತ್ತರವನ್ನು 519.6 ಮೀ. ನಿಂದ 524.256 ಮೀ. ಗೆ ಏರಿಸಲು ಅನುಮತಿ ನೀಡಲಾಗಿದೆ. ಜಲಾಶಯದ ಎತ್ತರವನ್ನು ಹೆಚ್ಚಿಸುವುದರಿಂದ ಆಲಮಟ್ಟಿಯ ಹಿನ್ನೀರಿನಿಂದ ಸುಮಾರು 75000 ಎಕರೆಗೂ ಹೆಚ್ಚು ಜಮೀನು ಮುಳುಗಡೆಯಾಗುವ ಸಂಭವವಿದೆ. ಈ ಜಮೀನಿಗೆ 5.94 ಲಕ್ಷ ಹೆಕ್ಟೇರ್(ಸುಮಾರು 14 ರಿಂದ 15 ಲಕ್ಷ ಎಕರೆ) ಕ್ಕೂ ಭೂಮಿಯ ನೀರಾವರಿ ಕಲ್ಪಿಸಬಹುದಾಗಿದೆ. ಯುಕೆಪಿ ಹಂತ 3 ಬೃಹತ್ ನೀರಾವರಿ ಯೋಜನೆಯಾಗಿದ್ದು, ಈ ಭಾಗದ ರೈತರ ಜಮೀನಿಗೆ ನೀರೊದಗಿಸಿ, ಅವರ ಜೀವನ ಮಟ್ಟದ ಸುಧಾರಣೆಯಾಗಲಿದೆ ಎಂದರು.

    ಇಂದು ನಡೆದ ವಿಶೇಷ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಸಂಬಂಧಿಸಿದಂತೆ ರೈತರು, ರೈತ ಹೋರಾಟ ಸಂಘಗಳು, ಸಂಬಂಧಪಟ್ಟ ಶಾಸಕರು, ಸಚಿವರೊಂದಿಗೆ ಚರ್ಚೆ ನಡೆಸಿ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಯೋಜನೆಗೆ ರೈತರಿಂದ ಸ್ವಾಧೀನಪಡಿಸಿಕೊಳ್ಳುವ ನೀರಾವರಿ ಜಮೀನಿಗೆ ಎಕರೆಯೊಂದಕ್ಕೆ 40 ಲಕ್ಷ ರೂ, ಖುಷ್ಕಿ ಒಣಭೂಮಿಯ ಎಕರೆಯೊಂದಕ್ಕೆ 30 ಲಕ್ಷ ಪರಿಹಾರವನ್ನು ನೀಡಬೇಕೆಂದು ಸಚಿವ ಸಂಪುಟ ತೀರ್ಮಾನಿಸಿದೆ ಎಂದರು.

    ಕಾಲುವೆ ತೋಡಲು ಸುಮಾರು 51,837 ಎಕರೆ ಬೇಕಾಗಿದ್ದು, ಇದರಲ್ಲಿ 23631 ಎಕರೆ ಭೂಮಿಯ ಸ್ವಾಧೀನ ಪ್ರಕ್ರಿಯೆ ನಡೆಸಿ, ಕಾಮಗಾರಿ ಕೈಗೊಳ್ಳಲಾಗಿದೆ. ಕಾಲುವೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡ ಭೂಮಿಗೆ ಸಂಬಂಧಿಸಿದಂತೆ ಒಣಭೂಮಿಯ ಎಕರೆಯೊಂದಕ್ಕೆ 25 ಲಕ್ಷ ಹಾಗೂ ನೀರಾವರಿ ಜಮೀನಿಗೆ ಎಕರೆಯೊಂದಕ್ಕೆ 30 ಲಕ್ಷ ಪರಿಹಾರ ಒದಗಿಸಲು ತೀರ್ಮಾನಿಸಲಾಗಿದೆ. ಕಾಲುವೆ ನಿರ್ಮಾಣದಲ್ಲಿ ಜಮೀನು ಕಳೆದುಕೊಂಡವರು ಯೋಜನೆಯ ಫಲಾನುಭವಿಗಳಾಗುತ್ತಾರೆ ಎಂದರು.

    ಭೂಸ್ವಾಧೀನಪಡಿಸಿಕೊಂಡ ಜಮೀನುಗಳಿಗೆ ಪರಿಹಾರವನ್ನು ಮೂರು ಆರ್ಥಿಕ ವರ್ಷದೊಳಗೆ ನೀಡಲು ತೀರ್ಮಾನಿಸಲಾಗಿದೆ. ಯೋಜನೆಗೆ ಭೂಸ್ವಾಧೀನಪಡಿಸಿಕೊಳ್ಳಲು ರೈತರ ಮನವೊಲಿಸುವುದಾಗಿ ಸಂಬಂಧಪಟ್ಟ ಸಚಿವರು, ಶಾಸಕರು, ರೈತಮುಖಂಡರು ತಿಳಿಸಿದ್ದಾರೆ. ರಾಜ್ಯದ ಜನರಿಗೆ ಒಳಿತು ಮಾಡುವ ಈ ಸಾರ್ಥಕ ಯೋಜನೆಗೆ ಭೂಮಿ ನೀಡಲು ರೈತರು ಸಮ್ಮತಿಸಬಹುದೆಂಬ ಭರವಸೆಯಿದೆ. ಇದೊಂದು ಐತಿಹಾಸಿಕ ತೀರ್ಮಾನ. 2023ರಲ್ಲಿ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಪರಿಹಾರದ ಮೊತ್ತ ಕಡಿಮೆಯಿದ್ದುದ್ದರಿಂದ , ಯಾವ ರೈತರೂ ಭೂಮಿ ನೀಡಲು ಒಪ್ಪಲಿಲ್ಲ ಹಾಗೂ ಯೋಜನೆಗೆ ಚಾಲನೆಯೂ ದೊರೆಯದೇ ನೆನೆಗುದಿಗೆ ಬಿದ್ದಿತ್ತು ಎಂದರು.

    ಈ ಹಿಂದೆ ಬೆಳಗಾವಿಯಲ್ಲಿ ಉತ್ತರ ಕರ್ನಾಟಕದ ಶಾಸಕರು, ರೈತಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಒಂದೇ ಬಾರಿಗೆ Consent award ನೀಡುವ ಬಗ್ಗೆ ಪರಿಗಣಿಸಿದ್ದರೂ, ಪರಿಹಾರಧನ ನಿಗಧಿಯಾಗಿರಲಿಲ್ಲ. ಕಾಂಗ್ರೆಸ್ ಸರ್ಕಾರ ಎಂದೆಂದಿಗೂ ನುಡಿದಂತೆ ನಡೆಯುವ ಸರ್ಕಾರ. ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಸರ್ಕಾರ ಆದ್ಯತೆ ನಿಡುತ್ತದೆ. ಆದರೆ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಇದುವರೆಗೂ ಅಧಿಸೂಚನೆ ಹೊರಡಿಸಿಲ್ಲ. ಯೋಜನೆಯ ತ್ವರಿತ ಅನುಷ್ಠಾನಕ್ಕೆ ಅನುಕೂಲವಾಗುವಂತೆ ಅಧಿಸೂಚನೆ ಹೊರಡಿಸಲು ಕೇಂದ್ರದವರನ್ನು ಹಲವು ಬಾರಿ ಭೇಟಿ ಮಾಡಿ ಅಧಿಸೂಚನೆ ಹೊರಡಿಸುವಂತೆ ಒತ್ತಾಯಿಸಲಾಗಿದೆ ಎಂದರು.

    ರೈತರಿಗೆ ಪರಿಹಾರ ಧನ ಕೊಡುವ ನಿರ್ಣಯದಿಂದ ಸರ್ಕಾರದ ಮೇಲಾಗುವ ಆರ್ಥಿಕ ಹೊರೆಯ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, 1,33,867 ಎಕರೆ ಜಮೀನು ಯೋಜನೆಗೆ ಬೇಕಾಗಿದ್ದು, 75,563 ಎಕರೆ ಮುಳುಗಡೆಯಾಗಲಿದೆ 51,837 ಎಕರೆ ಕಾಲುವೆ ನಿರ್ಮಾಣಕ್ಕೆ ಬೇಕಾಗಿದೆ. ರೈತರ ಪುನರ್ವಸತಿ ಹಾಗೂ ಪುನರ್ವವ್ಯಸ್ಥೆ ಕಾರ್ಯಗಳಿಗೆ 6469 ಎಕರೆಗಳ ಅವಶ್ಯಕತೆಯಿದೆ. ಇದರಿಂದ ಸುಮಾರು 20 ಗ್ರಾಮಗಳು , ಕೆಲವು ಪಟ್ಟಣ ವಾರ್ಡ್ ಗಳು ಮುಳುಗಡೆಯಾಗುತ್ತಿದ್ದು, ಒಟ್ಟು 1,33,867 ಎಕರೆಗೆ ಭೂಸ್ವಾಧೀನ ಪರಿಹಾರ ನೀಡುವ ಐತಿಹಾಸಿಕ ತೀರ್ಮಾನವನ್ನು ಉಪಮುಖ್ಯಮಂತ್ರಿಗಳು ತಿಳಿಸಿದರು. ಈ ಉದ್ದೇಶಕ್ಕಾಗಿ ಪ್ರತಿವರ್ಷ ಸುಮಾರು 15 ರಿಂದ 20 ಸಾವಿರ ಕೋಟಿ ರೂಗಳ ವೆಚ್ಚ ಬರಲಿದೆ. ಒಟ್ಟಾರೆ ಈ ಯೋಜನೆಗೆ ಸುಮಾರು 70 ಸಾವಿರ ಕೋಟಿ ರೂ. ಗಳು ವೆಚ್ಚವಾಗುವ ಅಂದಾಜು ಇದೆ ಎಂದು ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ವಿವರಿಸಿದರು.

    ಕೇಂದ್ರದ ಅಧಿಸೂಚನೆ ಬರುವ ಮುಂಚೆಯೇ , ಕಾಮಗಾರಿ ಪ್ರಾರಂಭಿಸಬಹುದೇ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ಕಾಲುವೆ ನಿರ್ಮಾಣದ ಕೆಲಸ ಈಗಾಗಲೇ ಪ್ರಾರಂಭಿಸಲಾಗಿದ್ದು, ಅಧಿಸೂಚನೆಯಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದರು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಶ್ರೀ ಹೆಚ್.ಕೆ.ಪಾಟೀಲ್ ಹಾಗೂ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ಉಪಸ್ಥಿತರಿದ್ದರು.

    The Congress government is a government that always does what it says.