ಚಿಕ್ಕಬಳ್ಳಾಪುರ: ಸತ್ಯ ಸಾಯಿ ಬಾಬಾ ಅವರ 100ನೇ ಜನ್ಮದಿನದ ವೇಳೆಗೆ ದೇಶದಲ್ಲಿ 100 ಸ್ವಾಸ್ಥ್ಯ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸುವ ಗುರಿಯನ್ನು ಹಾಕಿಕೊಂಡಿದ್ದೇವೆ. ಒಟ್ಟಾರೆಯಾಗಿ ದೇಶದಲ್ಲಿ 6 ಸಾವಿರ ಸಾಯಿ ಸ್ವಾಸ್ಥ್ಯ ಆರೈಕೆ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶವಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಘೋಷಿಸಿದರು.
ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ನವರಾತ್ರಿ ಹೋಮ, ಅತಿರುದ್ರ ಮಹಾಯಜ್ಞ ಮತ್ತು ದುರ್ಗಾ ಪೂಜೆಯ 7ನೇ ದಿನವಾದ ಭಾನುವಾರ (ಸೆ 28) ಸಂಜೆಯ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಸದ್ಗುರುಗಳು, ಪಂಚಾಯತಿ ಮಟ್ಟದಲ್ಲಿ ಆರೈಕೆ ಕೇಂದ್ರಗಳನ್ನು ತೆರೆಯಲಾಗುತ್ತದೆ. ತಾಲೂಕು ಮಟ್ಟದಲ್ಲಿ ಸಾಯಿ ಆರೋಗ್ಯ ಕೇಂದ್ರವನ್ನು ತೆರೆಯುವ ಗುರಿಯನ್ನು ಹೊಂದಿದ್ದೇವೆ. ಇದು 30 ರಿಂದ 40 ಹಾಸಿಗೆಗಳ ಸಾಮಾನ್ಯ ಆಸ್ಪತ್ರೆಯಾಗಿರುತ್ತದೆ. ನಂತರದ ಹಂತದಲ್ಲಿ ಸ್ಪೆಷಾಲಿಟಿ ಆಸ್ಪತ್ರೆ, ಮೆಡಿಕಲ್ ಕಾಲೇಜು ಇರುತ್ತವೆ ಎಂದು ವಿವರಿಸಿದರು.
ಪ್ರಾಥಮಿಕ ಆರೋಗ್ಯ ಮಾದರಿಯನ್ನು ಉತ್ತೇಜಿಸಿದರೆ ಗರ್ಭಿಣಿ ಮತ್ತು ಶಿಶುಗಳ ಅಕಾಲಿಕ ಮರಣಗಳನ್ನು ಸುಲಭವಾಗಿ ತಡೆಯಬಹುದು. ಹಲವು ಕಾಯಿಲೆಗಳನ್ನು ಮುಂಚಿತವಾಗಿ ಪತ್ತೆ ಮಾಡುವುದರಿಂದ ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ಕೊಡಲು ಸಾಧ್ಯವಾಗುತ್ತದೆ ಎಂದರು.
ಭಾರತದಲ್ಲಿ ಪ್ರತಿ ವರ್ಷ 25,000 ಕ್ಕೂ ಹೆಚ್ಚುತಾಯಂದಿರು ಮಗುವನ್ನು ಹೆರುವಾಗ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಮಗು ಅಥವಾ ತಾಯಿಯ ಸಾವನ್ನು ಸಂಪೂರ್ಣವಾಗಿ ತಪ್ಪಿಸಬಹುದು. ನಾವು ಅವರ ಸಮಸ್ಯೆಗಳನ್ನು ಸ್ವಲ್ಪ ಮೊದಲೇ ಕಂಡುಕೊಂಡು ಉತ್ತಮ ಆರೈಕೆಯನ್ನು ಮಾಡಬೇಕಾಗುತ್ತದೆ ಎಂದು ಹೇಳಿದರು.
ಗುರುಕುಲಂ ಶಿಕ್ಷಣ, ಆರೋಗ್ಯ ವಾಹಿನಿ ಮೊಬೈಲ್ ಆಸ್ಪತ್ರೆ ಹಾಗೂ ಸಾಯಿ ಸ್ವಾಸ್ಥ್ಯ ಆರೈಕೆ ಕೇಂದ್ರಕ್ಕೆ ಬೆಂಬಲ ನೀಡುತ್ತಿರುವ ‘ವೇದಾಂತ್ ಮೋಟಾರ್ಸ್’ ಕಂಪನಿಗೆ ‘ಸಿಎಸ್ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ’ ನೀಡಿ ಗೌರವಿಸಲಾಯಿತು. ಕಂಪನಿಯ ಸಂಸ್ಥಾಪಕರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿವೇಕ್ ಸರಫ್ ಮತ್ತು ನಿರ್ದೇಶಕರಾದ ಸ್ಮಿತಾ ಸರಫ್ ಅವರು ಪ್ರಶಸ್ತಿ ಸ್ವೀಕರಿಸಿದರು.
ನವರಾತ್ರಿಯ ಭಾಗವಾಗಿ ರಾಮತಾರಕ ಹೋಮ, ಆಂಜನೇಯ ಹೋಮ, ಸಾಯಿ ಗಾಯತ್ರಿ ಹೋಮ, ಬೆಂಗಾಲಿ ಶೈಲಿಯಲ್ಲಿ ದುರ್ಗಾ ಪೂಜೆ ಮತ್ತು ಆರತಿ ನೆರವೇತು. ಪೂರ್ಣಾಹುತಿ, ಅಷ್ಟಾವಧಾನ ಸೇವಾ, ಚತುರ್ವೇದ ಪಾರಾಯಣಂ, ಸಂಗೀತ, ಪಂಚವಾದ್ಯ ಹಾಗೂ ನಾದಸ್ವರದೊಂದಿಗೆ 7ನೇ ದಿನ ರುದ್ರಯಾಗ ಪೂರ್ಣಗೊಂಡಿತು.
Target to establish 100 wellness health centers
