ಶೃಂಗೇರಿ: `ದಿನ ಪತ್ರಿಕೆಗಳಿಗೆಗಳಿಗೆ ತನ್ನದೇ ಆದ ಗೌರವಗಳು ಇದೆ. ದೃಷ್ಯ ಮಾಧ್ಯಮಗಳಲ್ಲಿ ಒಮ್ಮೆ ತೋರಿಸಿದ ವಿಡೀಯೋ ಅಳಿಸಿ ಹೋಗುತ್ತದೆ. ಆದರೆ ಪತ್ರಿಕೆಗಳಲ್ಲಿ ಶಾಶ್ವತವಾಗಿ ಅಕ್ಷರ ಉಳಿದಿರುತ್ತದೆ. ನ್ಯಾಯಾಲಯವು ಇಂದಿಗೂ ದಿನ ಪತ್ರಿಕೆಗಳ ಲಿಖಿತವೇ ಸಾಕ್ಷಿಗಳಾಗಿ ಪರಿಗಣಿಸುತ್ತಾರೆ. ಆಧುನಿಕ ತಂತ್ರಜ್ಞಾನವು ಸಾಕಷ್ಟು ಬೆಳೆದರೂ ಮುದ್ರಣ ಮಾಧ್ಯಮವು ತನ್ನ ಬರವಣಿಗೆಯ ಮೌಲ್ಯವನ್ನು ಇಂದಿಗೂ ಉಳಿಸಿಕೊಂಡು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.
ಶೃಂಗೇರಿಯ ಶಾರದಾ ನಗರದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಪತ್ರಕರ್ತರ ಭವನದ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿ `ಸಮಾಜದ ಅವಿಭಾಜ್ಯ ಅಂಗವಾಗಿ ಕೆಲಸ ಮಾಡುತ್ತಿರುವ ಪತ್ರಕರ್ತರ ಭವನದ ನಿರ್ಮಾಣಕ್ಕೆ ಸರ್ಕಾರದಿಂದ ಕೂಡಾ ಹೆಚ್ಚಿನ ಅನುದಾನ ನೀಡುತ್ತೇವೆ. ವರದಿಗಾರರಿಗೂ ಸಾಕಷ್ಟು ಸಮಸ್ಯೆಗಳು ಇದ್ದು, ಸರ್ಕಾರದ ವತಿಯಿಂದ ಅವರಿಗೆ ನೀಡುವ ಸೌಲಭ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸುತ್ತೇವೆ. ಶೃಂಗೇರಿ ಕ್ಷೇತ್ರಕ್ಕೆ ಪತ್ರಕರ್ತರ ಭವನದ ಅವಶ್ಯಕತೆ ಇದ್ದು ಅದು ಸುಸಜ್ಜಿತವಾಗಿ ನಿರ್ಮಾಣಗೊಳ್ಳಬೇಕು ಎಂಬ ಆಶಯ ನಮ್ಮಲ್ಲಿದ್ದು ರೂ.೧೦ ಲಕ್ಷ ಅನುದಾನವನ್ನು ಶೀರ್ಘ್ರದಲ್ಲಿ ನೀಡುತ್ತೇನೆ’ ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಚ್.ಎಸ್.ವೇಣುಗೋಪಾಲ್ ಮಾತನಾಡಿ, `ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಪತ್ರಿಕಾ ಅಂಗವಾಗಿದ್ದು ಅವರು ನಿರಂತರ ಕಾರ್ಯ ಪ್ರವೃತ್ತರಾಗಿ ಉತ್ತಮ ಸುದ್ಧಿಗಳನ್ನು ಜನತೆಗೆ ತಲುಪಿಸುತ್ತಿದ್ದಾರೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಿಸುವ ಭವನಕ್ಕೆ ಪಟ್ಟಣ ಪಂಚಾಯಿತಿ ವತಿಯಿಂದ ಸದಾ ಸಹಕಾರವಿದೆ’ ಎಂದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಂ ರಾಜಶೇಖರ್ ಮಾತನಾಡಿ, `ಶೃಂಗೇರಿ ಕ್ಷೇತ್ರಕ್ಕೆ ಸಾಕಷ್ಟು ಗಣ್ಯರು ಭೇಟಿ ನೀಡುತ್ತಿದ್ದು ಪತ್ರಿಕಾಗೋಷ್ಠಿ ನಡೆಸಲು ಹಾಗೂ ವಿವಿಧ ಪ್ರಾಂತ್ಯಗಳಿಂದ ಬರುವ ಪತ್ರಕರ್ತರಿಗೆ ವಸತಿ ವ್ಯವಸ್ಥೆಯನ್ನು ಒಳಗೊಂಡ ಭವ್ಯ ಕಟ್ಟಡ ನಿರ್ಮಿಸುವ ಆಶಯ ನಮ್ಮದಾಗಿದೆ. ನಮ್ಮ ಆಶಯಗಳಿಗೆ ಕ್ಷೇತ್ರದ ಶಾಸಕರು, ಸಂಸದರು, ಜನಪ್ರತಿನಿಧಿಗಳು ಹಾಗೂ ದಾನಿಗಳ ಸಹಕಾರ ಬೇಕು. ಭವನ ನಿರ್ಮಾಣಗೊಂಡ ಬಳಿಕ ಸಾರ್ವಜನಿಕರು ಕೂಡಾ ಭವನವನ್ನು ಬಳಸಿಕೊಳ್ಳಬಹುದು. ನಮ್ಮ ಉದ್ದೇಶ ದೊಡ್ಡದಿದ್ದು ಜನರು ನಮ್ಮ ಜೊತೆ ನಿರಂತರ ಸ್ಪಂದಿಸಬೇಕು’ ಎಂದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾರನಕೊಡಿಗೆ ನಟರಾಜ್, ಅಜ್ಜಂಪುರ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಂಜುನಾಥ್, ಜಿಲ್ಲಾ ಸಮಿತಿ ಪದಾಧಿಕಾರಿ ಗೋಪಾಲ್, ಪತ್ರಕರ್ತರಾದ ಪ್ರದೀಪ್ ಹೆಬ್ಬಾರ್, ರಮೇಶ್, ದಿನೇಶ್ ಅಂಗುರ್ಡಿ, ಗೋಪಾಕೃಷ್ಣ, ರಂಜಿತ್, ರಮೇಶ್, ಅಭಿನವ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ವೆಂಕಟೇಶ್, ಎ.ಪಿ.ಎಂ.ಸಿ ಅಧ್ಯಕ್ಷ ಭಾಸ್ಕರ್ ನಾಯ್ಕ್, ಬೇಗಾರ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಲಕ್ಷ್ಮೀಶ ಮತ್ತು ಕಾಂಗ್ರೆಸ್ ಮುಖಂಡರು ಇದ್ದರು.
Work on the Journalists’ Hall in Sringeri begins









