Category: ಚಿಕ್ಕಮಗಳೂರು ನಗರ

  • ನಾರಾಯಣಗುರು ಸಮುದಾಯ ಭವನಕ್ಕೆ ಅನುದಾನ ಕೋರಿ ಜಿಲ್ಲಾ ಸಚಿವರಿಗೆ ಮನವಿ

    ನಾರಾಯಣಗುರು ಸಮುದಾಯ ಭವನಕ್ಕೆ ಅನುದಾನ ಕೋರಿ ಜಿಲ್ಲಾ ಸಚಿವರಿಗೆ ಮನವಿ

    ಚಿಕ್ಕಮಗಳೂರು: : ನಗರದ ಉಪ್ಪಳ್ಳಿ ಬಡಾವಣೆಯ ಬಸವರಾಜ ಲೇಔಟ್‌ನಲ್ಲಿ ಸುಮಾರು ೪.೫೦ ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಜಿಲ್ಲಾ ಶ್ರೀ ನಾರಾಯಣಗುರು ಸಮುದಾಯ ಭವನಕ್ಕೆ ಅನುದಾನ ಬಿಡುಗಡೆ ಮಾಡುವಂತೆ ನಾರಾಯಣಗುರು ಸಮಿತಿ ಅಧ್ಯಕ್ಷ ಎಂ. ಕೃಷ್ಣಪ್ಪ ದಾಸರಹಳ್ಳಿ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಯಿತು.

    ಜಿಲ್ಲೆಯಲ್ಲಿ ಈಡಿಗ ಜನಾಂಗದವರು ೧.೫೦ ಲಕ್ಷಕ್ಕೂaz ಅಧಿಕ ಸಂಖ್ಯೆಯಲ್ಲಿ ಇದ್ದು, ಸಮಾಜವು ಆರ್ಥಿಕವಾಗಿ ಬಹಳ ಹಿಂದುಳಿದ ಸಮಾಜವಾಗಿರುತ್ತದೆ. ಈ ನಮ್ಮ ಸಮುದಾಯಕ್ಕೆ ಜಿಲ್ಲಾಮಟ್ಟದಲ್ಲಿ ಕಾರ್ಯಕ್ರಮಗಳನ್ನು ನಡೆಸಲು ಸಮುದಾಯ ಭವನದ ಅವಶ್ಯಕತೆ ಇದ್ದು, ಈ ಸಮುದಾಯ ಭವನಕ್ಕೆ ಸರ್ಕಾರದ ವತಿಯಿಂದ ಅನುದಾನ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು.

    ಸಮಜ ಬಾಂಧವರ ಹಲವಾರು ವರ್ಷಗಳ ಹೋರಾಟದ ಫಲವಾಗಿ ೧೦೪೦೦ ಅಡಿ ಅಳತೆಯ ನಿವೇಶನವನ್ನು ೩೨ ಲಕ್ಷಕ್ಕೆ ಸಮಾಜ ಬಾಂಧವರು ನೀಡಿದ ದೇಣಿಗೆ ಹಣದಲ್ಲಿ ಖರೀದಿಸಲಾಗಿದ್ದು, ಈಗಾಗಲೇ ಸಮುದಾಯ ಭವನ ಕಾಮಗಾರಿ ೪೮ ಲಕ್ಷ ರೂಗಳ ವೆಚ್ಚದಲ್ಲಿ ಪಿಲ್ಲರ್‌ಗಳನ್ನು ಅಳವಡಿಸಲು ಸಾಧ್ಯವಾಗಿದೆ. ಈಗಾಗಲೇ ಸಮಾಜ ಬಾಂಧವರು ೮೦ ಲಕ್ಷ ರೂಗಳನ್ನು ಸಾಲದ ರೂಪದಲ್ಲಿ ಪಡೆಯಲಾಗಿದೆ ಎಂದು ಮನವಿ ರೂಪದಲ್ಲಿ ತಿಳಿಸಿದ್ದಾರೆ.

    ಈ ಹಿಂದೆ ೨೫ ಲಕ್ಷ ರೂ ಅನುಮೋದನೆಯಾಗಿ ೧೮,೭೫,೦೦೦ ಬಿಡುಗಡೆಯಾಗಿದ್ದು, ಹಣದ ಕೊರತೆಯಿಂದಾಗಿ ಕಟ್ಟಡ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ. ಪ್ರಸ್ತುತ ಈ ನಿವೇಶನದಲ್ಲಿ ಮೂರು ಹಂತಸ್ತಿನ ಸಮುದಾಯ ಭವನ ಕಟ್ಟಲು ೪.೫೦ ಲಕ್ಷ ರೂ ಅಂದಾಜು ವೆಚ್ಚದ ಯೋಜನೆಯನ್ನು ಸಿದ್ಧಪಡಿಸಲಾಗಿದ್ದು, ಹಣ ಇಲ್ಲದ ಕಾರಣ ಕಾಮಗಾರಿ ಮುಂದುವರೆಸಲು ಸಾಧ್ಯವಾಗಿಲ್ಲ ಎಂದು ವಿವರಿಸಿದ್ದಾರೆ.

    ಈ ಎಲ್ಲಾ ಅಂಶಗಳನ್ನು ಸಚಿವರು ಗಂಭೀರವಾಗಿ ಪರಿಗಣಿಸಿ, ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದ ವತಿಯಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಸಿಫಾರಸ್ಸು ಮಾಡಬೇಕೆಂದು ಒತ್ತಾಯಿಸಿದ್ದಾರೆ.

    ಈ ಸಂದರ್ಭದಲ್ಲಿ ಸಮಿತಿಯ ಕಾರ್ಯಕಾರಿ ಸದಸ್ಯರುಗಳಾದ ಕೆ.ಎಂ. ಗುಣಶೇಖರ್, ಕೆ.ಸಿ. ಶಾಂತಕುಮಾರ್, ಅಯ್ಯಪ್ಪ, ಕುಂಜಪ್ಪ, ಮನೋಹರ್, ಚಂದ್ರಣ್ಣ ಕೋಟೆ, ಸಿ.ಆರ್. ಕುಮಾರ್, ಸಿ.ಆರ್. ಅಶೋಕ್ ಕುಮಾರ್, ಶ್ರೀಧರ್, ಚಂದ್ರು ಮತ್ತಿತರರು ಉಪಸ್ಥಿತರಿದ್ದರು.

    Appeal to the District Minister seeking funding for Narayanaguru Community Hall

  • ಡಿ.ಕೆ. ಶಿವಕುಮಾರ್ ಹೇಳಿಕೆ ಖಂಡಿಸಿ ಜಿಲ್ಲಾ ಬಿಜೆಪಿ ಪ್ರತಿಭಟನೆ

    ಡಿ.ಕೆ. ಶಿವಕುಮಾರ್ ಹೇಳಿಕೆ ಖಂಡಿಸಿ ಜಿಲ್ಲಾ ಬಿಜೆಪಿ ಪ್ರತಿಭಟನೆ

    ಚಿಕ್ಕಮಗಳೂರು: ರಾಜ್ಯ ಸರ್ಕಾರದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ರವರು ಸಂವಿಧಾನ ತಿದ್ದುಪಡಿ ಮಾಡಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಕೊಡುತ್ತೇವೆ ಎಂದು ಹೇಳಿಕೆ ನೀಡಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ಇಂದು ನಗರದ ಆಜಾದ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

    ಇಂದು ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಿಂದ ಮೆರವಣಿಗೆ ಹೊರಟ ಬಿಜೆಪಿ ಕಾರ್ಯಕರ್ತರು ಆಜಾದ್ ವೃತ್ತದಲ್ಲಿ ಸಮಾವೇಶಗೊಂಡು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾವಚಿತ್ರ ಇದ್ದ ಅನ್ನಭಾಗ್ಯ ಪೋಸ್ಟರ್‌ಗೆ ಕಲ್ಲು, ಮೊಟ್ಟೆಗಳಿಂದ ತೂರಾಟ ನಡೆಸಿ, ಡಿ.ಕೆ. ಶಿವಕುಮಾರ್ ಪ್ರತಿಕೃತಿ ದಹಿಸಲು ಮುಂದಾದಾಗ ಪೊಲೀಸರು ತಡೆದ ಘಟನೆ ನಡೆಯಿತು.

    ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್. ದೇವರಾಜ ಶೆಟ್ಟಿ ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ದಲಿತರು ಸೇರಿದಂತೆ ಎಲ್ಲಾ ವರ್ಗದ ಜನಾಂಗದ ವಿರೋಧಿ ಎಂಬಂತೆ ಡಿ.ಕೆ. ಶಿವಕುಮಾರ್‌ರವರು ಹೇಳಿಕೆ ನೀಡಿರುವುದು ಕನ್ನಡಿಗರ ಕನ್ನಡಿಯಾಗಿದೆ ಎಂದು ಆರೋಪಿಸಿದರು.

    ಈ ದೇಶದಲ್ಲಿ ಹಲವಾರು ಬಾರಿ ಪರಿಸ್ಥಿತಿಗೆ ಅನುಗುಣವಾಗಿ ಸಂವಿಧಾನ ತಿದ್ದುಪಡಿ ಮಾಡಿರುವುದರಲ್ಲಿ ಕಾಂಗ್ರೆಸ್ ಪಕ್ಷ ಅಗ್ರ ಸ್ಥಾನದಲ್ಲಿದೆ. ಕಳೆದ ಬಿಜೆಪಿ ಆಡಳಿತಾವಧಿಯಲ್ಲಿ ಕೆಲವು ಅಗತ್ಯ ಇರುವ ವಿಷಯಗಳಿಗೆ ಮಾತ್ರ ತಿದ್ದುಪಡಿ ಮಾಡಲಾಗಿದೆ ಎಂದು ಹೇಳಿದರು.

    ಬಿಜೆಪಿ ಅಧಿಕಾರಕ್ಕೆ ಬಂದರೆ ಈ ದೇಶದ ಸಂವಿಧಾನ ಬದಲಿಸುತ್ತಾರೆ ಎಂಬ ಸುಳ್ಳು ಹೇಳುತ್ತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ದೇಶದ ಉದ್ದಗಲಕ್ಕೂ ಜೋಡೋ ಪಾದಯಾತ್ರೆ ಮೂಲಕ ಪ್ರವಾಸ ಮಾಡಿ ಮತಪ್ರಚಾರ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಅಪಪ್ರಚಾರ ಮಾಡಿದರು ಎಂದು ಟೀಕಿಸಿದರು.

    ಅಲ್ಪಸಂಖ್ಯಾತರಿಗೆ ಗುತ್ತಿಗೆಯಲ್ಲಿ ಶೇ.೪ ರಷ್ಟು ಮೀಸಲಾತಿ ಕೊಡಬೇಕೆಂಬ ಸರ್ಕಾರದ ತೀರ್ಮಾನ ಕೈಗೊಂಡಾಗ ಸದನದ ಒಳಗೆ-ಹೊರಗೆ ನಾಯಕರುಗಳು ಪ್ರತೀರೋಧ ವ್ಯಕ್ತಪಡಿಸಿದ್ದು, ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರು ಅಂದರೆ ಕೇವಲ ಮುಸಲ್ಮಾನರಲ್ಲ ಎಂದು ಹೇಳಿದ ಕಾಂಗ್ರೆಸ್ ಪಕ್ಷ ಈ ಬಾರಿ ಮಂಡಿಸಿದ ಬಜೆಟ್ ಮುಸಲ್ಮಾನರ ಪರವಾಗಿದೆ ಎಂದು ಆರೋಪಿಸಿ ಬಿಜೆಪಿ ರಾಜ್ಯಾದಂತ ಪ್ರತಿಭಟನೆ ನಡೆಸುತ್ತಿದೆ ಎಂದು ತಿಳಿಸಿದರು.

    ಬಹುಸಂಖ್ಯಾತ ಹಿಂದುಗಳಿಗಾಗಿ ಈ ರಾಜ್ಯದ ಜನರ ಕಲ್ಯಾಣಕ್ಕಾಗಿ ಮಾಡಿರುವ ಪ್ರಸ್ತುತ ಬಜೆಟ್ ಅಲ್ಲ, ಇದರ ಮುಂದುವರೆದ ಭಾಗವಾಗಿ ಡಿ.ಕೆ. ಶಿವಕುಮಾರ್‌ರವರು ಸಂವಿಧಾನ ತಿದ್ದುಪಡಿ ಮಾಡಿ ಮುಸಲ್ಮಾನರಿಗೆ ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುತ್ತೇವೆಂಬ ಹೇಳಿಕೆಯನ್ನು ಖಂಡಿಸಿದರು.

    ಬಿಜೆಪಿ ನಗರ ಮಂಡಲ ಅಧ್ಯಕ್ಷ ಪುಷ್ಪರಾಜ್ ಮಾತನಾಡಿ, ಸಂವಿಧಾನ ಬದಲಿಸಿಯಾದರೂ ಮುಸಲ್ಮಾನರಿಗೆ ಗುತ್ತಿಗೆಯಲ್ಲಿ ಶೇ.೪ ರಷ್ಟು ಮೀಸಲಾತಿ ಕೊಡುತ್ತೇವೆಂದು ಡಿ.ಕೆ. ಶಿವಕುಮಾರ್ ಹೇಳಿಕೆಯನ್ನು ಖಂಡಿಸಿದ ಅವರು, ಕೂಡಲೇ ಇದರ ನೈತಿಕ ಹೊಣೆ ಹತ್ತು ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು.

    ಪ್ರತಿಭಟನೆಯಲ್ಲಿ ಎಸ್‌ಸಿ, ಎಸ್‌ಟಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ. ವೆಂಕಟೇಶ್, ಗ್ರಾಮಾಂತರ ಅಧ್ಯಕ್ಷ ವಿಜಯಕುಮಾರ್, ಜಿಲ್ಲಾ ಬಿಜೆಪಿ ಮುಖಂಡರಾದ ರಾಜಪ್ಪ, ರಂಗನಾಥ್, ಸೀತಾರಾಂಭರಣ್ಯ, ಬೀಕನಹಳ್ಳಿ ಸೋಮಣ್ಣ, ಕನಕರಾಜ್ ಅರಸ್, ಸಿ.ಆರ್. ಪ್ರೇಮ್‌ಕುಮಾರ್, ನರೇಂದ್ರ, ಲಕ್ಕಪ್ಪ, ಸಂತೋಷ್ ಕೋಟ್ಯಾನ್, ಜೆಸೆಂತ ಅನಿಲ್‌ಕುಮಾರ್, ಸುಜಾತ ಶಿವಕುಮಾರ್, ಜಯವರ್ಧನ್, ಮತ್ತಿತರರು ಭಾಗವಹಿಸಿದ್ದರು.

    District BJP protests against DK Shivakumar’s statement

  • ಸಾರ್ವಜನಿಕ ಕೆಲಸ ಮಾಡುವುದೇ ಎಲ್ಲ ರಾಜಕಾರಣಿಗಳ ಕೆಲಸವಾಗಿದೆ

    ಸಾರ್ವಜನಿಕ ಕೆಲಸ ಮಾಡುವುದೇ ಎಲ್ಲ ರಾಜಕಾರಣಿಗಳ ಕೆಲಸವಾಗಿದೆ

    ಚಿಕ್ಕಮಗಳೂರು:  ರೋಗಿಗಳಿಗೆ ಚಿಕಿತ್ಸೆ ನೀಡುವುದು ಸುಲಭದ ಕೆಲಸವಲ್ಲ. ವೈದ್ಯರಿಂದ ಜನ ತುಂಬಾ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಆರೋಗ್ಯದಲ್ಲಿ ಹೆಚ್ಚು ಕಮ್ಮಿ ಆದಲ್ಲಿ ಆರೋಪವನ್ನು ಎದುರಿಸಬೇಕಾತ್ತದೆ. ಈ ಎಲ್ಲ ಒತ್ತಡದ ಮಧ್ಯೆ ಕಾರ್ಯನಿರ್ವಹಿಸುವ ವೈದ್ಯ ಸಿಬ್ಬಂದಿ ಕಾರ್ಯ ಅವಿಸ್ಮರಣೀಯ ಎಂದು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.

    ನಗರದ ಮಲ್ಲೇಗೌಡ ಸರಕಾರಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಜಿ.ಪಂ, ವೈದ್ಯಕೀಯ ಶಿಕ್ಷಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಅರಳಗುಪ್ಪೆ ಮಲ್ಲೇಗೌಡ ಬೋಧಕ ಜಿಲ್ಲಾ ಆಸ್ಪತ್ರೆ ಇವರುಗಳ ಸಂಯುಕ್ತಾಶ್ರಯದಲ್ಲಿ ನೂತನವಾಗಿ ನಿರ್ಮಿಸಿರುವ ಹೊರರೋಗಿಗಳ ವಿಭಾಗದ ಕಟ್ಟಡವನ್ನು ಇಂದು ಉದ್ಘಾಟಿಸಿ ಅವರು ಮಾತನಾಡಿದರು.

    ಸಾರ್ವಜನಿಕ ಕೆಲಸ ಮಾಡುವುದೇ ಎಲ್ಲ ರಾಜಕಾರಣಿಗಳ ಕೆಲಸವಾಗಿದೆ. ಜನಸೇವೆ ನನ್ನ ಕರ್ತವ್ಯ ಎಂದು ಭಾವಿಸಿದ್ದೇನೆ. ನಮ್ಮಿಂದಲೂ ಕೆಲವು ಸಲ ತಪ್ಪಾಗುತ್ತವೆ. ಎಲ್ಲರ ಸಮಸ್ಯೆಗಳನ್ನು ಪರಿಹರಿಸಲು ಸರಕಾರದಿಂದ ಸಾಧ್ಯವಿಲ್ಲ. ಆದರೆ, ಎಲ್ಲರಿಗೂ ಒಳ್ಳೆಯದಾಗುವ ಕೆಲಸವನ್ನು ನಾವು ಮಾಡುತ್ತೇವೆ ಎಂದರು.

    ಎಲ್ಲವನ್ನೂ ಸರಕಾರದಿಂದಲೇ ಮಾಡಲಾಗದು ಅಂದಿನ ಕಾಲದಲ್ಲೇ ಮಲ್ಲೇಗೌಡ ಎಂಬುವರು ಆಸ್ಪತ್ರೆಗೆ ಜಾಗ ದಾನಮಾಡುವ ಮೂಲಕ ಜಿಲ್ಲೆಯಲ್ಲಿ ದಾನಿಗಳ ಪರಂಪರೆ ಹುಟ್ಟುಹಾಕಿದ್ದಾರೆ. ಆರ್ಥಿಕವಾಗಿ ಉತ್ತಮವಾಗಿರುವವರು ದಾನ ಮಾಡುವ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂದು ಮನವಿ ಮಾಡಿದರು.

    ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಆರೋಗ್ಯವೇ ಭಾಗ್ಯ, ಅರ್ಧ ಕಾಯಿಲೆ ಔಷಧಿ ಮಾತ್ರೆಯಿಂದ ವಾಸಿಯಾದರೆ, ವೈದ್ಯ ಸಿಬ್ಬಂದಿಯ ನಡವಳಿಕೆಯಿಂದ ಅರ್ಧ ಕಾಯಿಲೆ ವಾಸಿಯಾಗುತ್ತದೆ. ವೈದ್ಯರಿಗೆ ಒತ್ತಡ ಇರಬಹುದು, ಅದರ ನಡುವೆಯೂ ಬಹಳ ಸಹನೆ, ವಿಶ್ವಾಸದಿಂದ ಚಿಕಿತ್ಸೆ ನೀಡಿ, ಸುಸಜ್ಜಿತ ಆಸ್ಪತ್ರೆಯನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

    ಸಿ.ಟಿ.ರವಿ, ಎಚ್.ಡಿ.ತಮ್ಮಯ್ಯ ಜುಗಲ್‌ಬಂಧಿ

    ಶಾಸಕ ಎಚ್.ಡಿ.ತಮ್ಮಯ್ಯ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ತಮ್ಮ ಭಾಷಣದಲ್ಲಿ ಪರೋಕ್ಷವಾಗಿ ಪರಸ್ಪರ ಆರೋಪ, ಪ್ರತ್ಯಾರೋಪ ಮಾಡಿಕೊಳ್ಳುವ ಮೂಲಕ ವೇದಿಕೆ ಜುಗಲ್‌ಬಂದಿಗೆ ಕಾರಣವಾಯಿತು.

    ಸಿ.ಟಿ.ರವಿ ಮಾತನಾಡುವಾಗ ಚಿಕ್ಕಮಗಳೂರಿನ ಹೆಬ್ಬಾಗಿಲಲ್ಲಿರುವ ಬಸವನಹಳ್ಳಿ ಕೆರೆಗೆ ನಮ್ಮ ಅಧಿಕಾರವಧಿಯಲ್ಲಿ ಅನುದಾನವಿಟ್ಟು ಕಾಮಗಾರಿ ಆರಂಭಿಸಲಾಗಿತ್ತು. ಆದರೆ, ಅಲ್ಲಿ ಅವ್ಯವಹಾರದ ಆರೋಪ ಮಾಡಿ, ಕೆರೆ ಕಾಮಗಾರಿ ನಿಲ್ಲಿಸಿದ್ದಾರೆ ಎಂದು ಪರೋಕ್ಷವಾಗಿ ತಮ್ಮಯ್ಯ ಅವರನ್ನು ತಿವಿದರು.

    ಚಿಕ್ಕಮಗಳೂರಿಗೆ ಬಸವನಹಳ್ಳಿ ಕೆರೆ ಮುಕುಟವಿದ್ದಂತೆ, ಹೀಗಾಗಿ ಚಿಕ್ಕಮಗಳೂರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಸಚಿವರಿಗೆ ದೂರಿದರು. ಅಲ್ಲದೆ ವಸತಿ ಯೋಜನೆಗಳು ನೆನಗುದಿಗೆ ಬಿದ್ದಿವೆ, ಅದಕ್ಕೆ ಚುರುಕು ಮುಟ್ಟಿಸಿ ಎಲ್ಲರಿಗೂ ಮನೆ ನಿರ್ಮಿಸಿಕೊಡಿ ಎಂದರು.

    ಬೇಲೂರು ಹಾಸನ ರೈಲ್ವೇ, ರಸ್ತೆ ಅಭಿವೃದ್ಧಿ, ಏರ್‌ಸ್ಟ್ರಿಫ್, ಮೆಡಿಕಲ್ ಕಾಲೇಜಿಗೆ ಶಾಶ್ವತ ಅಸಿಸ್ಟೆಂಟ್ ಪ್ರೊಫೆಸರ್ ನೇಮಕ ಮಾಡುವಂತೆ ಆಗ್ರಹಿಸಿದರು.

    ಶಾಸಕ ಎಚ್.ಡಿ.ತಮ್ಮಯ್ಯ ತಮ್ಮ ಭಾಷಣದಲ್ಲಿ, ಹೊಟ್ಟೆ ನೋವಿಗೆ ವೈದ್ಯರು ಔಷಧಿ ನೀಡುತ್ತಾರೆ. ಆದರೆ ಅಸೂಯೆ ಮತ್ತು ಹೊಟ್ಟೆಕಿಚ್ಚಿಗೆ ಮದ್ದಿಲ್ಲ, ಸಾಮಾಜಿಕ ಜಾಲತಾಣದಲ್ಲಿ ಒಂದೇ ಒಂದು ರಸ್ತೆ ಅಭಿವೃದ್ಧಿಪಡಿಸಿರುವುದನ್ನು ಶಾಸಕರು ತೋರಿಸಲಿ ಎಂದು ಹೇಳಿದ್ದಾರೆ.

    ಮೂರು ವರ್ಷ ಕಳೆಯಲಿ ನೂರು ರಸ್ತೆ ಬೇಕಿದ್ದರೆ ತೋರಿಸುತ್ತೇನೆ. ೨ ವರ್ಷದಲ್ಲಿ ಡಾಕ್ಟರ್ ಓದಲು ಆಗುವುದಿಲ್ಲ, ೫ ವರ್ಷ ಆಗಲೇಬೇಕು. ಹಾಗೆಯೇ ಜನಪ್ರತಿನಿಧಿ ಆದವನಿಗೆ ೫ ವರ್ಷ ಅವಕಾಶ ಇರುತ್ತದೆ. ಆಗ ನಾನು ಅಭಿವೃದ್ಧಿ ಕಾರ್ಡ್ ಹಿಡಿದು ಜನರ ಬಳಿಗೆ ಬರುತ್ತೇನೆ ಎಂದು ಸಿ.ಟಿ.ರವಿಗೆ ಟಾಂಗ್ ನೀಡಿದರು.

    ಅಭಿವೃದ್ಧಿ ವಿಚಾರದಲ್ಲಿ ಪಕ್ಷ, ಜಾತಿ, ಬೇಧ ಮಾಡುವುದಿಲ್ಲ. ಪ್ರೀತಿಯ ರಾಜಕಾರಣದಿಂದ ಎಲ್ಲರನ್ನೂ ಗೆಲ್ಲಬಹುದು ಅಸೂಯೆ ಹೊಟ್ಟೆಕಿಚ್ಚಿನಿಂದ ಗೆಲ್ಲಲಾಗದು ಎಂದು ಹೇಳಿದರು.

    ಶಿವಮೊಗ್ಗ ಕಾಡಾ ನಿಗಮದ ಅಧ್ಯಕ್ಷ ಡಾ.ಅಂಶುಮಂತ್, ಕೃಷಿ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಎಚ್.ಹರೀಶ್, ಗ್ಯಾರಂಟಿ ಅಧ್ಯಕ್ಷ ಶಿವಾನಂದಸ್ವಾಮಿ, ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ಜಿ.ಪಂ ಸಿಇಒ ಎಚ್.ಎಸ್.ಕೀರ್ತನಾ, ಎಸ್ಪಿ ಡಾ.ವಿಕ್ರಂ ಅಮಟೆ, ಮೆಡಿಕಲ್ ಕಾಲೇಜ್ ಡೀನ್ ಡಾ,ಹರೀಶ್, ಜಿಲ್ಲಾಸರ್ಜನ್ ಡಾ.ಮೋಹನ್‌ಕುಮಾರ್, ಡಿಎಚ್‌ಒ ಡಾ.ಅಶ್ವಥ್ ಬಾಬು ಮತ್ತಿತರರಿದ್ದರು. ಡಾ.ಸಾಲಿಮಠ ಸ್ವಾಗತಿಸಿ, ಜಲಜಾಕ್ಷಿ ನಿರೂಪಿಸಿದರು.

    Doing public work is the job of all politicians.

  • 2025ರ ಅಂತ್ಯಕ್ಕೆ ಜಿಲ್ಲೆಯನ್ನು ಕ್ಷಯಮುಕ್ತಗೊಳಿಸಲು ಗುರಿ

    2025ರ ಅಂತ್ಯಕ್ಕೆ ಜಿಲ್ಲೆಯನ್ನು ಕ್ಷಯಮುಕ್ತಗೊಳಿಸಲು ಗುರಿ

    ಚಿಕ್ಕಮಗಳೂರು-ಕಾಫಿನಾಡು ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ಷಯರೋಗದ ಬಗ್ಗೆ ವಿವಿಧ ರೀತಿಯ ಜನಜಾಗೃತಿಯನ್ನು ಮೂಡಿಸುವ ಮೂಲಕ ೨೦೨೫ ರ ಅಂತ್ಯಕ್ಕೆ ಜಿಲ್ಲೆಯನ್ನು ಕ್ಷಯಮುಕ್ತಗೊಳಿಸಲು ಗುರಿಹೊಂದಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವಥ್‌ಬಾಬು ತಿಳಿಸಿದರು.

    ಅವರು ಇಂದು ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ, ಸರ್ಕಾರೇತರ ಸಂಘ-ಸಂಸ್ಥೆಗಳು, ವಿವಿಧ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಕ್ಷಯರೋಗದ ದಿನ ೨೦೨೫ ಮತ್ತು ಕ್ಷಯ ಮುಕ್ತ ಗ್ರಾಮ ಪಂಚಾಯಿತಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

    ಪ್ರತಿವರ್ಷ ಮಾ.೨೪ ಅನ್ನು ವಿಶ್ವ ಕ್ಷಯರೋಗ ದಿನವನ್ನಾಗಿ ಆಚರಣೆ ಮಾಡುತ್ತಿದ್ದು, ಟಿಬಿ ಕಾಯಿಲೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಈ ಕಾಯಿಲೆಯಿಂದಾಗುವ ಅನಾನುಕೂಲಗಳ ಬಗ್ಗೆ ಜಾತಾ ನಡೆಸಿ, ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

    ಈ ಸಂಬಂಧ ಜಿಲ್ಲಾದ್ಯಂತ ತಾಲೂಕು ಮಟ್ಟದಲ್ಲಿ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಮಟ್ಟದ ಜನಪ್ರತಿನಿಧಿಗಳಿಗೆ ವಿವಿಧ ರೀತಿಯ ಜನಪಯೋಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

    ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ.ಹರೀಶ್ ಬಾಬು ಮಾತನಾಡಿ, ಟಿ ಬಿ ರೋಗವನ್ನು ಪತ್ತೆ ಹಚ್ಚಿ ಗುಣಮುಖರಾಗಲು ಬೇಕಾದ ಚಿಕಿತ್ಸಾ ವಿಧಾನಗಳ ಮೂಲಕ ಈ ಕಾಯಿಲೆಗೆ ಇರುವ ಕಳಂಕವನ್ನು ಹೋಗಲಾಡಿಸುವ ಉದೇಶದೊಂದಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.

    ಜಿಲ್ಲೆಯಲ್ಲಿ ಈಗಾಗಲೇ ಕ್ಷಯರೋಗ ಮುಕ್ತ ಗ್ರಾಮ ಪಂಚಾಯಿತಿ ಅಡಿಯಲ್ಲಿ ೫೭ ಗ್ರಾಮ ಪಂಚಾಯಿತಿಗಳನ್ನು ಟಿ.ಬಿ ಮುಕ್ತಗೊಳಿಸಿದ್ದೇವೆ. ೨೦೨೫ರ ಅಂತ್ಯಕ್ಕೆ ಜಿಲ್ಲೆಯ ೫೨೭ ಗ್ರಾಮ ಪಂಚಾಯಿತಿಗಳನ್ನು ಕ್ಷಯರೋಗ ಮುಕ್ತಗೊಳಿಸಲು ಗುರಿಹೊಂದಲಾಗಿದೆ ಎಂದರು.

    ಜಿಲ್ಲೆಯನ್ನು ಟಿಬಿ ಮುಕ್ತಗೊಳಿಸಲು ಹಲವಾರು ರೀತಿಯ ವಿವಿಧ ಹೋರಾಟಗಳನ್ನು ಮಾಡುತ್ತಿದ್ದು, ಈ ವರ್ಷದ ಘೋಷವಾಕ್ಯ ಹೌದು! ನಾವು ಕ್ಷಯರೋಗವನ್ನು ಕೊನೆಗಾಣಿಸಬಹುದು (ಬದ್ಧತೆ, ಹೂಡಿಕೆ, ವಿತರಣೆ) ಈ ಮೂಲಕ ಕ್ಷಯರೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಡಾ. ವಿದ್ಯಾಸಾಗರ್ ವಿಶೇಷ ಉಪನ್ಯಾಸ ನೀಡಿದರು, ಜಿಲ್ಲಾ ಆಯುಷ್ ಅಧಿಕಾರಿ ಡಾ. ಗೀತಾ ಎನ್.ವಿ.ಬಿ.ಡಿ.ಸಿ.ಪಿ ಅಧಿಕಾರಿ ಡಾ. ಬಾಲಕೃಷ್ಣ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಮಂಜುನಾಥ್, ಕುಟುಂಬ ಕಲ್ಯಾಣಾಧಿಕಾರಿ ಡಾ. ಶಶಿಕಲಾ, ಪ್ರಭುಕುಮಾರ್, ಕಿರಣ್‌ಕುಮಾರ್ ಉಪಸ್ಥಿತರಿದ್ದರು.

    ಕ್ಷಯ ಮತ್ತು ಗ್ರಾಮ ಪಂಚಾಯಿತಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಿದರು, ಕಾರ್ಯಕ್ರಮಕ್ಕು ಮೊದಲು ತಾಲ್ಲೂಕು ಪಂಚಾಯಿತಿ ಕಛೇರಿಯಿಂದ ಜಾಥಾ ಕಾರ್ಯಕ್ರಮ ನೆಡೆಯಿತು.

    The goal is to make the district tuberculosis-free by the end of 2025.

  • ಕುರುಬರಹಳ್ಳಿಯಲ್ಲಿ ಸಿಡಿಲು ಬಡಿದು ವೃದ್ದೆ ಬಲಿ

    ಕುರುಬರಹಳ್ಳಿಯಲ್ಲಿ ಸಿಡಿಲು ಬಡಿದು ವೃದ್ದೆ ಬಲಿ

    ಚಿಕ್ಕಮಗಳೂರು: ಸಿಡಿಲು ಬಡಿದು ವೃದ್ದೆ ಬಲಿಯಾಗಿರುವ ಘಟನೆ ತಾಲೂಕಿನ ಕುರುಬರಹಳ್ಳಿಯಲ್ಲಿ ನಡೆದಿದೆ.

    ನಾಗಮ್ಮ (65) ಸಿಡಿಲು ಬಡಿದು ಮೃತಪಟ್ಟ ವೃದ್ದೆ. ಬೇಲೂರು ಮೂಲದ ನಾಗಮ್ಮ ಮಗಳ ಮನೆಯಲ್ಲಿ ಶುಂಠಿ ನಾಟೆ ಮಾಡಲು ಬಂದಿದ್ದ ವೇಳೆ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.

    ಶುಂಠಿ ನಾಟಿ ಮಾಡುವ ಕೆಲಸ ಇದ್ದಿದ್ದರಿಂದ ನಾಗಮ್ಮ ದಂಪತಿಗಳನ್ನು ಅಳಿಯನೇ ಹೋಗಿ ಕರೆದುಕೊಂಡು ಬಂದಿದ್ದ.

    ಭಾನುವಾರ ಮಧ್ಯಾಹ್ನ ಮಳೆಯ ಬರುತ್ತಿದ್ದ ಸಂದರ್ಭದಲ್ಲಿ ಹೊಲದಲ್ಲಿ 12 ಜನರು ಕೆಲಸ ಮಾಡುತ್ತಿದ್ದರು. ಈ ವೇಳೆ ನಾಗಮ್ಮ ಅವರಿಗೆ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಸುರಿದ ಮೊದಲ ಮಳೆ ವೃದ್ದೆಯನ್ನು ಬಲಿ ಪಡೆದುಕೊಂಡಿದೆ.

    Elderly woman killed in lightning strike in Kurubarahalli

  • ಮೀಸಲು ಅರಣ್ಯ ಪ್ರದೇಶದ ಬೆಂಕಿ – ಆರೋಪಿಗಳ ಬಂಧನ

    ಮೀಸಲು ಅರಣ್ಯ ಪ್ರದೇಶದ ಬೆಂಕಿ – ಆರೋಪಿಗಳ ಬಂಧನ

    ಕಳಸ: ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ಅತಿ ಹೆಚ್ಚು ಕಾಡ್ಗಿಚ್ಚು ಪ್ರಕರಣಗಳು ಸಂಭವಿಸಿದ ಪರಿಣಾಮ ೪೦೦ ಎಕರೆಗೂ ಅಧಿಕ ಪ್ರದೇಶ ಹುಲ್ಲುಗಾವಲು ಅಪಾರ ಪ್ರಮಾಣದ ಸಸ್ಯ ಸಂಪತ್ತು ಹಾಗೂ ಕೀಟಗಳು ಬಲಿಯಾಗಿದ್ದವು.

    ಒಂದರ ಹಿಂದೆ ಒಂದು ಜಿಲ್ಲೆಯಾದ್ಯಂತ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಕಾಣಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಅರಣ್ಯ ಇಲಾಖೆ ಆಕಸ್ಮಿಕವಾಗಿ ಈ ರೀತಿ ಪ್ರಕರಣಗಳು ಸಂಭವಿಸುತ್ತಿವೆಯೇ ಅಥವಾ ಇದು ಕಿಡಿಗೇಡಿಗಳ ಕೃತ್ಯವೋ ಎಂದು ತಿಳಿಯಲು ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜನೆ ಮಾಡಿಲಾಗಿತ್ತು. ಜೊತೆಗೆ ಡೋನ್ ಕ್ಯಾಮರಾಗಳನ್ನು ಬಳಸಿ ಕಿಡಿಗೇಡಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿತ್ತು.

    ಇದೀಗ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕೆಳಗೋಡು ತುಂಗಭದ್ರಾ ಮೀಸಲು ಅರಣ್ಯ ಪ್ರದೇಶದ ಭತ್ತದರಾಶಿ ಗುಡ್ಡದಲ್ಲಿ ಕಾಡಿಗೆ ಬೆಂಕಿ ಇಡುತ್ತಿದ್ದ ಆರೋಪಿಗಳಾದ ದೇವರಾಜ್, ಗಗನ್, ರಕ್ಷಣ್, ಉಮೇಶ್, ಎಂಬ ನಾಲ್ವರು ಯುವಕರನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ವಶಕ್ಕೆ ಪಡೆದಿದ್ದಾರೆ.

    ಯುವಕರಿಂದ ಎರಡು ಕತ್ತಿ, ನಾಲ್ಕು ಮೊಬೈಲ್ ಫೋನ್‌ಗಳು, ಸೇರಿದಂತೆ ಬೆಂಕಿ ಇಡಲು ಬಳಸುತ್ತಿದ್ದ ಲೈಟ್ ಹಾಗೂ ಬೆಂಕಿ ಪೊಟ್ಟಣಗಳನ್ನು ವಶಕ್ಕೆ ಪಡೆದು ತನಿಖೆಯನ್ನು ಮುಂದುವರಿಸಲಾಗಿದೆ. ಇದೀಗ ಕಿಡಿಗೇಡಿಗಳನ್ನು ವಶಕ್ಕೆ ಪಡೆದ ನಂತರ ಜಿಲ್ಲೆಯಲ್ಲಿ ನಡೆದ ಕಾಡ್ಗಿಚ್ಚು ಪ್ರಕರಣಗಳು ಕಿಡಿಗೇಡಿಗಳ ಕೃತ್ಯದಿಂದಲೇ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗುತ್ತಿದೆ.

    Fire in reserved forest area – accused arrested

  • ಹಸದವರಿಗೆ ಅನ್ನ-ಆಹಾರ ನೀಡುವುದು ಶ್ರೇಷ್ಠ

    ಹಸದವರಿಗೆ ಅನ್ನ-ಆಹಾರ ನೀಡುವುದು ಶ್ರೇಷ್ಠ

    ಚಿಕ್ಕಮಗಳೂರು: ಹಸದವರಿಗೆ ಅನ್ನ ,ಆಹಾರ ನೀಡುವುದು ಶ್ರೇಷ್ಠ ಎಂದು ಅಲ್ಲಾಹ ಹೇಳಿದ್ದಾರೆ. ಧರ್ಮ ಪಾಲನೆಗಾಗಿ ಪ್ರತಿ ವರ್ಷ ಸಮಾಜಸೇವಕ, ಉದ್ಯಮಿ ಅಕ್ಮಲ್ ಅವರು ರಂಜಾನ್ ಮಾಸದಲ್ಲಿ ಬಡವರಿಗೆ ಆಹಾರದ ಕಿಟ್ ನೀಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

    ನಗರದ ಷರೀಫ್ ಗಲ್ಲಿಯಲ್ಲಿ ರಂಜಾನ್‌ಹಬ್ಬದ ಪ್ರಯುಕ್ತ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಆಹಾರ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಉಳ್ಳವರು ಬಡವರಿಗೆ , ಹಸಿದವನಿಗೆ ದಾನ ಮಾಡುವುದು ಶ್ರೇಷ್ಠ. ಅದನ್ನು ಪೈಗಂಬರರಿಗೆ ಪ್ರೀತಿ. ಬಸವಣ್ಣ ಕೂಡ ಅದನ್ನೇ ಹೇಳಿದ್ದಾರೆ.

    ಬಡವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂಬುದು ಮಹಾಪುರುಷರ ಉದ್ದೇಶವಾಗಿತ್ತು. ಈ ಹಿನ್ನೆಲೆಯಲ್ಲಿ ಉದ್ಯಮಿ ಸಿ.ಎನ್.ಅಕ್ಮಲ್ ಅವರು ತಮ್ಮ ದುಡಿಮೆಯ ಹಣದಲ್ಲಿ ಒಂದು ಭಾಗವನ್ನು ಬಡವರಿಗೆ ಆಹಾರದ ರೂಪದಲ್ಲಿ ನೀಡುವ ಮೂಲಕ ಸಾರ್ಥಕ ಬದುಕು ಸೆವೆಸುತ್ತಿದ್ದಾರೆ ಎಂದು ಹೇಳಿದರು.

    ಈಶ್ವರ , ಅಲ್ಲ ಎರಡೂ ಒಂದೇ. ಅವರವರ ಭಕ್ತಿ, ಭಾವ ವಿಭಿನ್ನವಾದರೂ ಭಕ್ತಿ ಮಾರ್ಗ ಒಂದೇ. ಬಡವರಿಗೆ ದಾನ ಮಾಡುವುದು ಅಲ್ಲಾನ ಪ್ರೀತಿ ಗಳಿಸುವುದಕ್ಕೆ ಎಂಬುದನ್ನು ಅರಿತಿದ್ದೇನೆ ಎಂದರು.

    ದಾನಿ ಸಿ.ಎನ್.ಅಕ್ಮಲ್ ಮಾತನಾಡಿ, ದುಡಿಮೆಯ ಸಂಪತ್ತಿನಲ್ಲಿ ಶೇ.೨.೫ ರಷ್ಟನ್ನು ದಾನ ಕೊಡಬೇಕು ಎಂದು ಕುರಾನ್ ನಲ್ಲಿ ಹೇಳಿದೆ. ಅದನ್ನು ನಮ್ಮಜನರೆಲ್ಲಾ ತೆಗೆದರೆ ನಮ್ಮ ಸಮಾಜದಲ್ಲಿ ಒಂದಿಷ್ಟು ಬಡತನ ದೂರ ಮಾಡಬಹುದೇನೋ ಎಂದ ಅವರು ಮನೆ, ಮತ್ತೊಂದು ಕಳವು ಮಾಡಿದರೆ ಮಾತ್ರ ಕಳ್ಳತನ ಆಗುವುದಿಲ್ಲ. ಕುರಾನ್ ಪ್ರಕಾರ ಹಕ್ಕಿನಂತೆ ನಡೆದುಕೊಳ್ಳದವರು ಕೂಡ ಆ ಗುಂಪಿಗೆ ಸೇರುತ್ತಾರೆ ಎಂದು ಹೇಳಿದರು.

    ನಾನು ಜಾತಿ ಮತ ಧರ್ಮ ನೋಡದೆ ಎಲ್ಲ ಬಡವರಿಗೂ ಆಹಾರ ವಿತರಣೆ ಮಾಡುವುದನ್ನು ಮುಂದುವರಿಸಿಕೊಂಡು ಬಂದಿದ್ದೇನೆ ಎಂದು ಹೇಳಿದರು.
    ನಗರಸಭೆ ಮಾಜಿ ಅಧ್ಯಕ್ಷ ಅತೀಕ್‌ಖೈಸರ್, ಅಂಜುಮನ್ ಇಸ್ಲಾಮಿಯಾ ಸಂಸ್ಥೆ ಅಧ್ಯಕ್ಷ ಸಿರಾಜ್ ಅಹ್ಮದ್, ಮೌಲನಾಸಾಹಿಬ್, ಅಕ್ಬರ್ ಮತ್ತಿತರರಿದ್ದರು.

    Free food kit distribution program on the occasion of Ramadan

  • ಕರ್ನಾಟಕ ಬಂದ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ

    ಕರ್ನಾಟಕ ಬಂದ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ

    ಚಿಕ್ಕಮಗಳೂರು:  ಕೆಎಸ್‌ಆರ್‌ಟಿಸಿ ನಿರ್ವಾಹಕನ ಮೇಲಿನ ಮರಾಠಿಗರ ದೌರ್ಜನ್ಯ ಖಂಡಿಸಿ, ಕಳಸಬಂಡೂರಿ, ಮಹದಾಯಿ, ಎತ್ತಿನಹೊಳೆ ನೀರಾವರಿ ಯೋಜನೆಗಳನ್ನು ಶೀಘ್ರ ಜಾರಿ ಮಾಡುವಂತೆ ಆಗ್ರಹಿಸಿ, ಕನ್ನಡಪರ ಸಂಘಟನೆಗಳಿಂದ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

    ಜಿಲ್ಲೆಯ ಕನ್ನಡಪರ ಸಂಘಟನೆಗಳ ಜತೆಗೆ ದಲಿತ ಸಂಘರ್ಷ ಸಮಿತಿ, ರೈತ ಸಂಘ, ಬಿಎಸ್ಪಿ, ಆಟೋ ಚಾಲಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಜಿಲ್ಲಾ ಬಂದ್‌ಗೆ ಕರೆ ನೀಡಿ ಸಹಕರಿಸುವಂತೆ ಮನವಿ ಮಾಡಿದ್ದವು. ಆದರೆ, ನಿರೀಕ್ಷಿಸಿದಷ್ಟು ಬಂದ್‌ಗೆ ಬೆಂಬಲ ವ್ಯಕ್ತವಾಗಲಿಲ್ಲ. ಬೆಳಗ್ಗೆಯಿಂದಲೇ ಪ್ರತಿಭಟನಾ ಕಣಕ್ಕಿಳಿದ ವಿವಿಧ ಪಕ್ಷ, ಸಂಘಟನೆಯ ಕಾರ್ಯಕರ್ತರು ಅಂಗಡಿ ಬಾಗಿಲು ಮುಚ್ಚಿಸಲು ಮುಂದಾದರು.

    ಈ ಸಂದರ್ಭ ಪ್ರತಿರೋಧ ತೋರಿದ ಕೆಲವರ ಅಂಗಡಿಗಳನ್ನು ಬಲವಂತದಿಂದ ಮುಚ್ಚಿಸಲಾಯಿತು. ಸಾರಿಗೆ ನಿರ್ವಾಹಕನ ಮೇಲೆ ಮರಾಠಿಗರಿಂದ ದೌರ್ಜ್ಯನ್ಯ ನಡೆದಿದ್ದರೂ ಮೇಲಧಿಕಾರಿಗಳ ಆದೇಶದಿಂದ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಎಂದಿನಂತೆ ಆರಂಭವಾಯಿತು.

    ಈ ಸಂದರ್ಭ ಪ್ರತಿಭಟನಾಕಾರರು ಬಸ್‌ಗಳನ್ನು ಅಡ್ಡಗಟ್ಟಿ ಚಾಲಕ ನಿರ್ವಾಹರನ್ನು ತರಾಟೆಗೆ ತೆಗೆದುಕೊಂಡರು. ನಿಮಗಾಗಿ ನಾವು ಪ್ರತಿಭಟನೆ ಮಾಡಿ ಜೈಲಿಗೆ ಹೋಗುತ್ತೇವೆ ನೀವು ಮಾತ್ರ ಕರ್ತವ್ಯ ನಿರ್ವಹಿಸಿ ಕುಟುಂಬದೊಂದಿಗೆ ಸುಖವಾಗಿರಿ ಎಂದು ಹರಿಹಾಯ್ದರು. ಇನ್ನೂ ಕೆಲವು ಬಸ್ ಚಾಲಕ ನಿರ್ವಾಹಕರಿಗೆ ಮಾತಿನ ಚಾಟಿ ಬೀಸಿ ಕನ್ನಡದ ಶಾಲು ಹೊದಿಸಿ ಬೀಳ್ಕೊಟ್ಟರು.

    ಬಂದ್ ಕಾರಣಕ್ಕೆ ಸಾರಿಗೆ ಬಸ್ ಇರುವುದಿಲ್ಲ ಎಂದು ಕೆಲವರು ಅವತ್ತಿನ ಕಾರ್ಯಚಟುವಟಿಕೆಗೆ ಬ್ರೇಕ್ ಹಾಕಿದ್ದರು. ಆದರೆ, ರಸ್ತೆಯಲ್ಲಿ ಬಸ್ ಸಂಚರಿಸಿದ್ದರಿಂದ ಮತ್ತೆ ಯಥಾಸ್ಥಿತಿಯಲ್ಲಿ ಪ್ರಯಾಣಿಕರು, ಉದ್ಯೋಗಿಗಳು, ವಿದ್ಯಾರ್ಥಿಗಳು ಎಂದಿನಂತೆ ಪ್ರಯಾಣಿಸಿದರು. ಅಂತೂ ಕೆಎಸ್ಸಾರ್ಟಿಸಿ ಬಸ್ಸುಗಳು ಹಗಲೆಲ್ಲಾ ಯಾವುದೇ ಅಡಚಣೆಯಿಲ್ಲದೆ ಸಂಚಾರ ನಡೆಸಿದವು.

    ಆಸ್ಪತ್ರೆ, ಔಷಧಿ ಮಳಿಗೆಗೆಳು, ಹಾಲುಮಾರಾಟದ ಅಂಗಡಿಗಳು, ಹಣ್ಣು, ಎಳೆನೀರು ಅಂಗಡಿಗಳಲ್ಲಿ ಎಂದಿನಂತೆ ವ್ಯಾಪಾರ ನಡೆಯಿತು. ನಾಲ್ಕನೇ ಶನಿವಾರ ಆಗಿದ್ದರಿಂದ ಎಲ್ಲ ಸರಕಾರಿ ಕಚೇರಿಗಳು, ಬ್ಯಾಂಕ್‌ಗಳಿಗೆ ರಜೆ ಇತ್ತು. ಕೆಲವು ಶಾಲೆಗಳಲ್ಲಿ ಪರೀಕ್ಷೆ ನಿರಾತಂಕವಾಗಿ ನಡೆಯಿತು.
    ಆಟೋ ಸಂಘದಿಂದ ಬಂದ್‌ಗೆ ಬೆಂಬಲ ಘೋಷಿಸಿದ್ದರೂ ಬಹುತೇಕ ಆಟೋಗಳು ರಸ್ತೆಗಿಳಿದಿದ್ದವು. ಹೊಟೇಲ್‌ಗಳು ಅರ್ಧಬಾಗಿಲು ತೆರೆದು ವ್ಯಾಪಾರ ಮುಂದುವರಿಸಿದವು, ಪ್ರತಿಭಟನೆಕಾರರು ಸ್ವಲ್ಪ ಮರೆಯಾಗುತ್ತಿದ್ದಂತೆ ನಗರದ ಎಲ್ಲ ರಸ್ತೆಗಳಲ್ಲಿ ವರ್ತಕರು ವ್ಯಾಪಾರ ವಹಿವಾಟು ನಡೆಸಿದರು. ಕೆಲವರು ದಿನವಿಡಿ ಅಂಗಡಿ ಮುಚ್ಚಿದ್ದರು.

    ಕನ್ನಡಪರ ಸಂಘಟನೆಗಳ ಜತೆಗೆ ವಿವಿಧ ಪಕ್ಷ, ಸಂಘಟನೆಗಳ ನೂರಾರು ಕಾರ್ಯಕರ್ತರು ಕನ್ನಡದ ಬಾವುಟ ಹಿಡಿದು ನಗರದ ಎಂ.ಜಿ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮಾರ್ಗಮಧ್ಯೆ ಬಾಗಿಲು ತೆರೆದಿದ್ದ ಅಂಗಡಿಗಳ ಮಾಲೀಕರಿಗೆ ತರಾಟೆಗೆ ತೆಗೆದುಕೊಂಡು ಬಾಗಿಲು ಮುಚ್ಚಿಸಿದರು.

    ಕನ್ನಡಿಗರಿಗೆ ಅನ್ಯಾಯವಾದಾಗ ರಸ್ತೆಗಿಳಿದು ಪ್ರತಿಭಟಿಸಬೇಕು. ಆದರೆ, ಬಾಗಿಲು ತೆರೆದು ವ್ಯಾಪಾರ ಮಾಡುತ್ತಿರುವ ನೀವು ಕನ್ನಡ ದ್ರೋಹಿಗಳು ಎಂದು ಕಿಡಿಕಾರಿದರು. ಎಂಜಿ ರಸ್ತೆ ಮೂಲಕ ಆಜಾದ್ ಪಾರ್ಕಿನಲ್ಲಿ ಸಮಾವೇಶಗೊಂಡ ಕಾರ್ಯಕರ್ತರು ಅಲ್ಲಿ ಬಹಿರಂಗ ಸಭೆ ನಡೆಸಿದರು.

    ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಪಿ.ಸಿ.ರಾಜೇಗೌಡ ಮಾತನಾಡಿ, ಆಟೋ ಚಾಲಕರು ಬೀದಿಗಿಳಿಯಲ್ಲ ಎಂದು ಮಾತುಕೊಟ್ಟಿದ್ದರು. ಆದರೆ, ಇಂದು ಬೀದಿಗಿಳಿದಿದ್ದಾರೆ. ಸಾರಿಗೆ ಸಿಬ್ಬಂದಿ ಕೂಡ ಸಹಮತ ಸೂಚಿಸಿದ್ದರು. ಕರ್ತವ್ಯ ಮಾಡುತ್ತಿದ್ದಾರೆ. ಇದಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರು ನಿನ್ನೆ ನೀಡಿರುವ ಹೇಳಿಕೆ ಕಾರಣ ಎಂದರು.

    ಸರಕಾರದ ಮಾತಿನಿಂದ ಅವರು ಮನಸ್ಸು ಬದಲಾಯಿಸಿದ್ದಾರೆ. ಕನ್ನಡಗರಿಗೆ ಅನ್ಯಾಯವಾದಾಗ ಎಲ್ಲರೂ ಬೀದಿಗಿಳಿಯುವುದು ಅನಿವಾರ್ಯವಾಗಬೇಕು ಎಂದರು.

    ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಮಾತನಾಡಿದರು. ವಿವಿ ಸಂಘಟನೆಗಳ ಮುಖಂಡರಾದ ಹುಣಸೇಮಕ್ಕಿ ಲಕ್ಷ್ಮಣ, ಐ.ಕೆ ಓಂಕಾರೇಗೌಡ, ಅನಿಲ್‌ಆನಂದ್, ಜಂಷಿದ್‌ಖಾನ್, ಸುನಿಲ್‌ಕುಮಾರ್ ಮತ್ತತರೆ ರೈತ, ದಲಿತ, ವಿವಿಧ ಪಕ್ಷ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    Mixed response in the district to Karnataka bandh

  • ಲೋಕಸಭಾ ಕ್ಷೇತ್ರಪುನರ್ ವಿಂಗಡಣೆ -ಜನಸಂಖ್ಯೆ, ಭೌಗೋಳಿಕ ಆಧಾರ ಪರಿಗಣಿಸಿ

    ಲೋಕಸಭಾ ಕ್ಷೇತ್ರಪುನರ್ ವಿಂಗಡಣೆ -ಜನಸಂಖ್ಯೆ, ಭೌಗೋಳಿಕ ಆಧಾರ ಪರಿಗಣಿಸಿ

    ಚಿಕ್ಕಮಗಳೂರು: ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡುವ ಸಂದರ್ಭದಲ್ಲಿ ಜನಸಂಖ್ಯಾ ಆಧಾರ ಹಾಗೂ ಭೌಗೋಳಿಕ ಆಧಾರವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ಪರಿಶೀಲನೆ ನಡೆಸಿದ ಬಳಿಕ ಜಾರಿಮಾಡಬೇಕೆಂದು ಮಾಜಿ ಸಭಾಪತಿ ಬಿ.ಎಲ್. ಶಂಕರ್ ಅಭಿಪ್ರಾಯಿಸಿದರು.

    ಅವರು ಇಂದು ನಗರದ ಪ್ರಸ್ ಕ್ಲಬ್‌ನಲ್ಲಿ ಏರ್ಪಡಿಸಿದ್ದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಸಂವಾದ ನಡೆಸಿ ಐಡಿಎಸ್‌ಜಿ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕಾರ್ಯಾಗಾರದಲ್ಲಿ ಮಾತನಾಡಿದರು.

    ಕ್ಷೇತ್ರ ಪುನರ್ ವಿಂಗಡಣೆ ಪ್ರತಿ ೧೦ ವರ್ಷಗಳಿಗೊಮ್ಮೆ ನಡೆಯಬೇಕಿದ್ದು, ೨೦೧೧ ರಲ್ಲಿ ಕ್ಷೇತ್ರ ವಿಂಗಡಣೆ ಮಾಡಲಾಗಿದೆ. ೨೦೨೧ ರಲ್ಲಿ ಕ್ಷೇತ್ರ ವಿಂಗಡಣೆ ಆಗದಿರುವುದಕ್ಕೆ ಕೋವಿಡ್ ಕಾರಣದಿಂದ ಮುಂದೂಡಲಾಗಿದೆ. ಜನಗಣತಿ ಆಧರಿಸಿ ಈ ವರ್ಷ ಕ್ಷೇತ್ರ ಪುನರ್ ವಿಂಗಡಣೆ ಆಗುವ ಸಾಧ್ಯತೆ ಇದೆ ಎಂದು ಹೇಳಿದರು.

    ಉತ್ತರ ಭಾರತದ ರಾಜ್ಯಗಳಲ್ಲಿ ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣೆ ಮಾಡಿದರೆ ಆ ರಾಜ್ಯಗಳಲ್ಲಿ ಲೋಕಸಭಾ ಸ್ಥಾನಗಳು ಹೆಚ್ಚಾಗಲಿದ್ದು, ದಕ್ಷಿಣ ಭಾರತ ರಾಜ್ಯಗಳಲ್ಲಿ ಲೋಕಸಭಾ ಸ್ಥಾನಗಳು ಕಡಿಮೆಯಾಗುವ ಸಾಧ್ಯತೆ ಇದ್ದು, ಈ ನಿಟ್ಟಿನಲ್ಲಿ ಜಾತಿ ಸಮೀಕ್ಷೆ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಅಸಮಾನತೆ ಇದ್ದರೆ ಅಂತಹ ಸಮುದಾಯಗಳಿಗೆ ಸಾಮಾಜಿಕ ಸಮಾನತೆ ಕೊಡಲು ಪ್ರಯತ್ನಗಳು ನಡೆಯುತ್ತಿದ್ದು, ಜಾತಿಗಣತಿ ನಡೆಸಬೇಕಿರುವುದು ಅನಿವಾರ್ಯ ಎಂದರು.

    ಈ ಹಿಂದೆ ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಗಳು ಜನಸಂಖ್ಯೆ ಆಧರಿಸಿ ಕ್ಷೇತ್ರ ಪುನರ್ ವಿಂಗಡಣೆ ಮಾಡುತ್ತಿದ್ದವು. ಕೆಲವು ರಾಜ್ಯಗಳು ಜನಸಂಖ್ಯಾ ನಿಯಂತ್ರಣ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದರಿಂದ ಜನಸಂಖ್ಯೆ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ರಾಜ್ಯದ ಈಗಿರುವ ಲೋಕಸಭಾ ಸ್ಥಾನಗಳ ಪೈಕಿ ಮೂರು ಸ್ಥಾನಗಳನ್ನು ಕಳೆದುಕೊಳ್ಳಲಿವೆ ಎಂದು ಹೇಳಿದರು.

    ಭೌಗೋಳಿಕವಾಗಿ ಪೂರ್ವೋತ್ತರ ರಾಜ್ಯದಲ್ಲಿ ಜನಸಂಖ್ಯೆ ಅನ್ವಯವಾಗುವುದಿಲ್ಲ. ಮಣಿಪುರ, ಸಿಕ್ಕಿಂ, ನಾಗಲ್ಯಾಂಡ್ ಮುಂತಾದ ರಾಜ್ಯಗಳು ಭೌಗೋಳಿಕ ಆಧಾರದಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಆಗುತ್ತವೆ. ಆದರೆ, ದಕ್ಷಿಣ ರಾಜ್ಯದಲ್ಲಿ ಜನಸಂಖ್ಯೆ ಆಧಾರದ ಜೊತೆಗೆ ಮಲೆನಾಡು, ಪಶ್ಚಿಮ ಘಟ್ಟ ಪ್ರದೇಶ ಹೊಂದಿರುವ ಕರಾವಳಿ ಪ್ರದೇಶವನ್ನು ಒಳಗೊಂಡಂತೆ ಜನಸಂಖ್ಯೆ ಮತ್ತು ಭೌಗೋಳಿಕ ಆಧಾರದಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಮಾಡಬೇಕೆಂದು ಒತ್ತಾಯಿಸಿದರು.

    ಪ.ಜಾ, ಪ.ಪಂ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಕ್ಷೇತ್ರಗಳನ್ನು ವಿಂಗಡಣೆ ಮಾಡಲಾಗುತ್ತದೆ. ಸಾಮಾಜಿಕ ಜವಾಬ್ದಾರಿ ಇರುವ ಕಾರಣ ಸ್ಥಾನಗಳು ಹೆಚ್ಚಾಗಲಿವೆ. ಮಹಿಳಾ ಮೀಸಲಾತಿ ಜಾರಿಯಾಗಿರುವ ಸಂಬಂಧ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಮಹಿಳೆಯರು ಸ್ಪರ್ಧೆ ಮಾಡುವ ಮೂಲಕ ಸಮಾನತೆ ಮೂಡಲಿದೆ ಎಂದು ವಿಶ್ಲೇಷಿಸಿದರು.

    ಒಟ್ಟು ೧೬೧೮ ಭಾಷೆಗಳು ಭಾರತದಲ್ಲಿವೆ. ಭಾಷೆ ಕಲಿಕೆಗೆ ಯಾವುದೇ ಮಾನದಂಡ ಇಲ್ಲ. ಮಾತೃಭಾಷೆ ಶಿಕ್ಷಣಕ್ಕೆ ಪರ್ಯಾಯ ಇಲ್ಲ, ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದರಿಂದ ಸಂವಹನಕ್ಕೆ ಸಹಕಾರಿಯಾಗಿ ಉಪಯುಕ್ತವಾಗುತ್ತದೆ. ಬಲವಂತ ಮತ್ತು ಕಾನೂನು ಮೂಲಕ ಭಾಷೆ ಹೇರಿಕೆ ಸರಿಯಲ್ಲ ಎಂದು ತಿಳಿಸಿದರು.

    ಹೀಗೆ ಹೇಳಿದರೆ ಮೂಲ ಅಸ್ಮಿತೆಗೆ ಕಾರಣವಾಗುತ್ತದೆ. ಹನಿಟ್ರ್ಯಾಪ್ ನೈತಿಕತೆ ಪ್ರಶ್ನೆಯಾಗಿದ್ದು, ಈ ಆಮಿಷ, ಹಣ, ಅಧಿಕಾರ ಸೇರಿದಂತೆ ಯಾವುದಾದರೂ ಒಂದು ವಿಷಯ ನಿಗ್ರಹಿಸುವ ಶಕ್ತಿಯನ್ನು ಜನಪ್ರತಿನಿಧಿಗಳು ಮೈಗೂಡಿಸಿಕೊಳ್ಳಬೇಕು. ಇದಾಗದಿದ್ದರೆ ಇವುಗಳನ್ನೇ ಅಸ್ತ್ರ ಮಾಡಿಕೊಂಡು ಅನೈತಿಕ ಚಟುವಟಿಕೆಗೆ ಎಳೆಯುತ್ತಾರೆ ಈ ಹಿನ್ನೆಲೆಯಲ್ಲಿ ಜಾಗರೂಕರಾಗಿರಬೇಕೆಂದು ಎಚ್ಚರಿಸಿದರು.

    ಬದುಕಿನ ವಿಚಾರದಲ್ಲಿ ಪ್ರಸ್ತುತ ಭಾವನೆಗಳು ಬೆಸೆಯುತ್ತಿವೆ. ತತ್ವ ಸಿದ್ಧಾಂತ ಇದ್ದ ಜಾಗಕ್ಕೆ ಹಣ ಬಂದು ನಿಂತಿದೆ. ಹಣದ ಮೇಲೆ ಆಯ್ಕೆಯಾಗುವವರಿಂದ ಸದನದಲ್ಲಿ ಅಸಂವಿಧಾನಿಕ ಪದ ಬಳಕೆಯಾಗುತ್ತಿದೆ ಎಂದು ವಿಷಾಧಿಸಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿಕ್ಕಮಗಳೂರು ಪ್ರಸ್‌ಕ್ಲಬ್ ಅಧ್ಯಕ್ಷ ಪಿ. ರಾಜೇಶ್ ವಹಿಸಿದ್ದರು. ಹಿರಿಯ ಉಪಾಧ್ಯಕ್ಷ ಸಿ.ಡಿ. ಚಂದ್ರೇಗೌಡ, ಪತ್ರಕರ್ತ ಉಮೇಶ್ ಕುಮಾರ್, ಅತಿಥಿ ಉಪನ್ಯಾಸಕ ಉಮೇಶ್ ಉಪಸ್ಥಿತರಿದ್ದರು. ಪ್ರಸ್‌ಕ್ಲಬ್ ಪ್ರಧಾನ ಕಾರ್ಯದರ್ಶಿ ಆರ್. ತಾರಾನಾಥ್ ಸ್ವಾಗತಿಸಿ, ನಿರೂಪಿಸಿದರು. ಇದೇ ಸಂದರ್ಭದಲ್ಲಿ ಐಡಿಎಸ್‌ಜಿ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಭಾಗವಹಿಸಿದ್ದರು.

    Guest of the Month event organized at the Press Club

  • ಬಿಜೆಪಿ-ಜೆಡಿಎಸ್ ಬೆಂಬಲಿತರು ಅತೀ ಹೆಚ್ಚು ನಿರ್ದೇಶಕ ಸ್ಥಾನ ಗೆದ್ದಿದ್ದಾರೆ

    ಬಿಜೆಪಿ-ಜೆಡಿಎಸ್ ಬೆಂಬಲಿತರು ಅತೀ ಹೆಚ್ಚು ನಿರ್ದೇಶಕ ಸ್ಥಾನ ಗೆದ್ದಿದ್ದಾರೆ

    ಚಿಕ್ಕಮಗಳೂರು: ಜಿಲ್ಲೆಯ ಸಹಕಾರಿ ಕ್ಷೇತ್ರದ ಇತಿಹಾಸದಲ್ಲಿ ಅತೀ ಹೆಚ್ಚು ನಿರ್ದೇಶಕ ಸ್ಥಾನಗಳನ್ನು ಬಿಜೆಪಿ ಮತ್ತು ಜೆಡಿಎಸ್ ಬೆಂಬಲಿತರು ಗೆದ್ದಿದ್ದಾರೆ ಅದಕ್ಕಾಗಿ ಎರಡೂ ಪಕ್ಷದ ಕಾರ್ಯಕರ್ತರು, ನಾಯಕರು ಮತ್ತು ನಿರ್ದೇಶಕರುಗಳನ್ನು ಅಭಿನಂದಿಸುತ್ತೇವೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

    ಅವರು ಶನಿವಾರ ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಸಹಕಾರಿ ಸಂಘಗಳ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಬಿಜೆಪಿ-ಜೆಡಿಎಸ್ ಬೆಂಬಲಿತ ನಿರ್ದೇಶಕರುಗಳಿಗೆ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ಚಿಕ್ಕಮಗಳೂರು ತಾಲ್ಲೂಕಿನ ೩೨ ಸೊಸೈಟಿಗಳ ಪೈಕಿ ೨೮ ರಲ್ಲಿ ಬಿಜೆಪಿ, ಜೆಡಿಎಸ್ ಬೆಂಬಲಿತರು ಗೆದ್ದಿದ್ದಾರೆ. ಉಳಿದ ೪ ಸೊಸೈಟಿಗಳಲ್ಲಿ ನಮ್ಮ ಸದಸ್ಯರು ಗೆದ್ದಿದ್ದರೂ ಬಹುಮತ ಇಲ್ಲ ಅಷ್ಟೇ ಎಂದರು.

    ಕಡೂರು ತಾಲ್ಲೂಕಿನಲ್ಲಿ ೩೦ ಸೊಸೈಟಿಗಳ ಪೈಕಿ ೨೬ ಸೊಸೈಟಿಗಳನ್ನ ಬಿಜೆಪಿ-ಜೆಡಿಎಸ್ ಬೆಂಬಲಿತರು ಗೆದ್ದಿದ್ದಾರೆ. ಅದೇ ರೀತಿ ತರೀಕೆರೆ ತಾಲ್ಲೂಕಿನ ೨೫ ಸಹಕಾರ ಸಂಘಗಳ ಪೈಕಿ ೧೯ ರಲ್ಲಿ ಬಿಜೆಪಿ-ಜೆಡಿಎಸ್ ಬೆಂಬಲಿಗರು ಗೆದ್ದಿದ್ದಾರೆ. ನ.ರಾ.ಪುರ ತಾಲ್ಲೂಕಿನ ೬ ಸೊಸೈಟಿ ಪೈಕಿ ೫ ರಲ್ಲಿ, ಕೊಪ್ಪ ತಾಲ್ಲೂಕಿನ ೧೨ ಸಹಕಾರ ಸಂಘಗಳ ಪೈಕಿ ೬ ರಲ್ಲಿ, ಶೃಂಗೇರಿ ತಾಲ್ಲೂಕಿನ ೬ ಸೊಸೈಟಿ ಪೈಕಿ ೩ ರಲ್ಲಿ ಹಾಗೂ ಮೂಡಿಗೆರೆ ತಾಲ್ಲೂಕಿನ ೧೪ ಸೊಸೈಟಿಗಳ ಪೈಕಿ ೯ ರಲ್ಲಿ ಬಿಜೆಪಿ-ಜೆಡಿಎಸ್ ಬೆಂಬಲಿತರು ಗೆದ್ದಿದ್ದಾರೆ ಎಂದು ವಿವರಿಸಿದರು.

    ಈ ಚುನಾವಣೆ ಗೆಲುವಿಗೆ ಕಡೂರು ಭಾಗದಲ್ಲಿ ಮಾಜಿ ಶಾಸಕ ಬೆಳ್ಳಿ ಪ್ರಕಾಶ್, ಮಾಜಿ ಶಾಸಕ ದಿವಂಗತ ಎಸ್.ಎಲ್.ಧರ್ಮೇಗೌಡರ ಪುತ್ರ ಸೋನಲ್ ಗೌಡ ಅವರು ಸಹ ಸಹಕಾರ ಮಾಡಿದ್ದಾರೆ ಎಂದರು. ಸಹಕಾರ ಕ್ಷೇತ್ರದ ಹಣಕಾಸು ಸಂಸ್ಥೆಗಳನ್ನು ಕೆಡಲು ಬಿಡಬಾರದು. ಸೊಸೈಟಿ ಎಂದರೆ ಜಡವಸ್ತುವಲ್ಲ. ನಿರ್ದೇಶಕರುಗಳ ಮೇಲೆ ವಿಶ್ವಾಸ ಇಟ್ಟು ಜನ ಹಣವನ್ನು ಠೇವಣಿ ಇಡುತ್ತಾರೆ. ಆ ನಂಬಿಕೆ ಉಳಿಸಿಕೊಳ್ಳುವ ಕೆಲಸ ಎಲ್ಲಾ ನಿರ್ದೇಶಕರುಗಳಿಂದಾಗಬೇಕು ಎಂದು ಸಲಹೆ ಮಾಡಿದರು.

    ಜೆಡಿಎಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ, ಎರಡೂ ಪಕ್ಷ ಒಂದಾಗಿದ್ದರೆ ಯಾವ ರೀತಿ ಚುನಾವಣೆ ಗೆಲ್ಲಬಹುದು ಎನ್ನುವುದನ್ನು ಸಹಕಾರ ಕ್ಷೇತ್ರದ ಚುನಾವಣೆಯಲ್ಲಿ ಕಾರ್ಯಕರ್ತರು ತೋರಿಸಿಕೊಟ್ಟಿದ್ದಾರೆ. ಅಧಿಕಾರ ಸಿಕ್ಕರೂ, ಸಿಗದಿದ್ದರೂ ಎಲ್ಲಿಯೂ ಹೊಂದಾಣಿಕೆ ಕೊರತೆ ಆಗಬಾರದು ಎಂದು ಕರೆ ನೀಡಿದರು.

    ಹೊಂದಾಣಿಕೆ ವಿಚಾರದಲ್ಲಿ ಎರಡೂ ಪಕ್ಷಗಳು ಬಹಳ ಮುಂದೆ ಸಾಗಬೇಕಿದೆ. ಅದಕ್ಕಾಗಿ ಒಗ್ಗಟ್ಟಿನ ಬಲವನ್ನು ಇನ್ನಷ್ಟು ಹೆಚ್ಚಾಗಿ ತೋರಿಸಬೇಕಿದೆ. ಮುಂಬರುವ ಜಿಲ್ಲಾ ಬ್ಯಾಂಕ್ ಚುನಾವಣೆಯಲ್ಲಿ ಮತದಾನದಲ್ಲಿ ಭಾಗವಹಿಸುವ ಸಂದರ್ಭದಲ್ಲಿ ಪಕ್ಷದ ನಾಯಕರು ತಗೆದುಕೊಳ್ಳುವ ತೀರ್ಮಾನವನ್ನು ದೂರದೃಷ್ಠಿಯಿಂದ ಒಪ್ಪಿಕೊಳ್ಳಬೇಕಾಗುತ್ತದೆ ಎಂದರು.

    ಸಹಕಾರಿ ಕ್ಷೇತ್ರ ನೇರವಾಗಿ ರೈತರೊಟ್ಟಿಗೆ ಸಂಪರ್ಕ ಇರುವ ಕ್ಷೇತ್ರ. ಕೆಲಸ ಮಾಡಲು ಇಲ್ಲಿ ಸಿಗುವ ಅವಕಾಶ, ವೇದಿಕೆಯಾಗಿದೆ. ರೈತರಿಗೆ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಪ್ರಾಮಾಣಿಕವಾಗಿ ಸಾಲ ಕೊಡಿಸಲು ಅವಕಾಶವಿದೆ. ಶೂನ್ಯ ಬಡ್ಡಿದರದಲ್ಲಿ ೫ ಲಕ್ಷ ರೂ. ಸಾಲ ಕೊಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ ಆದರೆ ಈ ವರೆಗೆ ಒಬ್ಬನೇ ಒಬ್ಬ ರೈತರಿಗೆ ೫ ಲಕ್ಷ ರೂ. ಸಾಲ ಸಿಕ್ಕಿಲ್ಲ. ಅಲ್ಲದೆ ಮಧ್ಯಮಾವಧಿ ಮತ್ತು ಧೀರ್ಘಕಾಲದ ಸಾಲ ೧೫ ಲಕ್ಷಕ್ಕೆ ಹೆಚ್ಚಿಸಿರುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಯಾರೊಬ್ಬರಿಗೂ ೧೫ ಲಕ್ಷ ಸಾಲ ಸಿಕ್ಕಿಲ್ಲ. ಈ ಸರ್ಕಾರ ಎರಡೂ ಬಾರಿ ಬಜೆಟ್‌ನಲ್ಲಿ ಘೋಷಿಸಿದ್ದು ಸುಳ್ಳಾಗಿದೆ ಎಂದರು.

    ಸಹಕಾರಿ ಸಂಸ್ಥೆಗಳ ಕತ್ತು ಹಿಸುಕುವ ಕೆಲಸ ಆಗುತ್ತಿದೆ. ಅವುಗಳಿಗೆ ಸ್ವಾಯತ್ತತೆ ಬರಬೇಕೆಂದರೆ ಎಲ್ಲಾ ನಿರ್ದೇಶಕರು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದರು.

    ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಗುಣಸಾಗರ ವಿಜಯಕುಮಾರ್ ಮಾತನಾಡಿದರು. ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ, ಜಿಲ್ಲಾ ಉಪಾಧ್ಯಕ್ಷ ಈಶ್ವರಳ್ಳಿ ಮಹೇಶ್, ಮುಖಂಡರುಗಳಾದ ನಿರಂಜನ್, ಬೀಕನಹಳ್ಳಿ ಸೋಮಶೇಖರ್, ರಾಜೀವ್ ಪ್ರಕಾಶ್, ಕೆ.ಪಿ.ವೆಂಕಟೇಶ್, ಚಿಕ್ಕದೇವನೂರು ರವಿ, ಬಸವರಾಜಪ್ಪ ಇತರರು ಹಾಜರಿದ್ದರು.

    BJP-JDS supporters have won the most director seats.