Category: ಜಿಲ್ಲಾ ಸುದ್ದಿ

  • ಮಾ.೨೦-೨೧ ನಿರ್ಮಿತಿ ಕೇಂದ್ರದಲ್ಲಿ ಕಟ್ಟಡ ಕಾರ್ಮಿಕರಿಗೆ ತರಬೇತಿ

    ಮಾ.೨೦-೨೧ ನಿರ್ಮಿತಿ ಕೇಂದ್ರದಲ್ಲಿ ಕಟ್ಟಡ ಕಾರ್ಮಿಕರಿಗೆ ತರಬೇತಿ

    ಚಿಕ್ಕಮಗಳೂರು: ಕಟ್ಟಡ ಕಾರ್ಮಿಕರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕುಶಲ ಕಲೆಗಳನ್ನು ಪ್ರೋತ್ಸಾಹಿಸಲು ನಿರ್ಮಿತಿ ಕೇಂದ್ರದಲ್ಲಿ ಮಾ.೨೦ ಹಾಗೂ ೨೧ ರಂದು ಎರಡು ದಿನಗಳ ಕಾಲ ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾ ಸಿವಿಲ್ ಇಂಜಿನಿಯರ್‍ಸ್ ಅಸೋಷಿಯೇಷನ್ ಜಿಲ್ಲಾಧ್ಯಕ್ಷ ಜಿ. ರಮೇಶ್ ತಿಳಿಸಿದರು.

    ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಜಿಲ್ಲಾ ಸಿವಿಲ್ ಇಂಜಿನಿಯರ್‍ಸ್ ಅಸೋಷಿಯೇಷನ್, ನಿರ್ಮಿತಿ ಕೇಂದ್ರ ಮತ್ತು ಬೆಂಗಳೂರಿನ ಇನ್ಸ್ಟ್ರಕ್ಟ್ ಇವರುಗಳ ಸಂಯುಕ್ತಾಶ್ರಯದಲ್ಲಿ ಈ ಕುಶಲ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

    ಕಟ್ಟಡ ಕಾರ್ಮಿಕರು, ಅಪೇಕ್ಷಿತರು, ಕಟ್ಟಡ ಕಟ್ಟುವ ಕಲೆ, ನೀರು ಸೋರದ ಹಾಗೆ ಕಟ್ಟುವ ತಂತ್ರಜ್ಞಾನ ಹಾಗೂ ನೆಲಹಾಸು ಈ ವಿಭಾಗಗಳಲ್ಲಿ ತರಬೇತಿ ನೀಡಲಾಗುವುದು. ತರಬೇತಿ ಸಂಪೂರ್ಣ ಉಚಿತವಾಗಿ ನೀಡಲಿದ್ದು, ತರಬೇತಿಯಲ್ಲಿ ಭಾಗವಹಿಸುವವರಿಗೆ ದಿನಕ್ಕೆ ೭೦೦ ರೂಗಳಂತೆ ಊಟ ನೀಡಲಾಗುವುದು ಎಂದರು.

    ಈ ತರಬೇತಿಗೆ ಹಾಜರಾಗ ಬಯಸುವವರು ಇಂಜಿನಿಯರ್ ಪ್ರಮಾಣೀಕರಿಸಿದ ದೃಢೀಕರಣ ಪತ್ರದೊಂದಿಗೆ ನೊಂದಾಯಿಸಿಕೊಳ್ಳಬೇಕು. ತರಬೇತಿ ಮುಕ್ತಾಯಗೊಳಿಸಿದವರಿಗೆ ಕಟ್ಟಡ ಕಟ್ಟಲು ಅಗತ್ಯ ಇರುವ ಕರಣಿ, ತೂಕುಗುಂಡು ಮತ್ತು ಪಾದರಸ ಮಟ್ಟ ಇವುಗಳನ್ನೊಳಗೊಂಡ ಸಲಕರಣೆಗಳ ಕಿಟ್‌ನೊಂದಿಗೆ ಪ್ರಮಾಣ ಪತ್ರವನ್ನು ನೀಡಲಾಗುವುದು ಎಂದರು.

    ಮುಂಚಿತವಾಗಿ ನೊಂದಾಯಿಸಿಕೊಂಡವರಿಗೆ ಮಾತ್ರ ಅವಕಾಶವಿದ್ದು, ನೇರ ಪ್ರವೇಶವಿರುವುದಿಲ್ಲ. ಮಹಿಳೆಯರಿಗೆ ಪ್ರಥಮ ಆದ್ಯತೆ ನೀಡಲಾಗಿದ್ದು, ಕೆ.ಜಿ. ವೆಂಕಟೇಶ್, ಸಂಯೋಜಕರು-೯೪೪೮೫೫೪೬೭೬ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಇ ಅಬ್ದುಲ್ ಕಬೀರ್ ಉಪಸ್ಥಿತರಿದ್ದರು.

    Mar. 19 All-member meeting of retired state government employees

  • ಮಾ.೧೯ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸರ್ವಸದಸ್ಯರ ಸಭೆ

    ಮಾ.೧೯ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸರ್ವಸದಸ್ಯರ ಸಭೆ

    ಚಿಕ್ಕಮಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರಿಗೆ ಏ.೪ ರಂದು ಬೆಳಗ್ಗೆ ೧೦ ಗಂಟೆಗೆ ಬೆಂಗಳೂರಿನ ಪ್ರಿನ್ಸ್‌ಶೈನ್ ಅರಮನೆ ಆವರಣದಲ್ಲಿ ರಾಜ್ಯಮಟ್ಟದ ಕಾರ್ಯಾಗಾರ ಮತ್ತು ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಕೆ.ಎ. ಗೋಪಾಲಕೃಷ್ಣ ತಿಳಿಸಿದರು.

    ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ೭ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಯಥಾವತ್ ಜಾರಿ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಸಮಾವೇಶವನ್ನು ಉದ್ಘಾಟಿಸಲಿದ್ದು, ಇದೇ ವೇಳೆ ಅವರಿಗೆ ಅಭಿನಂದಿಸಲಾಗುವುದೆಂದು ಹೇಳಿದರು.

    ಈ ಸಂಬಂಧ ಸಮಾವೇಶದ ಯಶಸ್ವಿಗಾಗಿ ಮಾ.೧೯ ರಂದು ಬುಧವಾರ ಬೆಳಗ್ಗೆ ೧೧ ಗಂಟೆಗೆ ಚಿಕ್ಕಮಗಳೂರಿನ ಸಂಘದ ಕಚೇರಿಯಲ್ಲಿ ಜಿಲ್ಲಾಮಟ್ಟದ ಸರ್ವಸದಸ್ಯರ ಸಭೆಯನ್ನು ಕರೆಯಲಾಗಿದ್ದು, ಜಿಲ್ಲೆಯ ಎಲ್ಲಾ ತಾಲ್ಲೂಕಿನ ಸರ್ವ ಸದಸ್ಯರುಗಳು ಕಡ್ಡಾಯವಾಗಿ ಸಭೆಯಲ್ಲಿ ಭಾಗವಹಿಸುವ ಮೂಲಕ ಸಲಹೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

    ಪ್ರಮುಖ ಬೇಡಿಕೆಗಳು: ಸರ್ಕಾರಿ ನಿವೃತ್ತ ನೌಕರರಿಗೆ ಹಾಗೂ ಕುಟುಂಬ ಪಿಂಚಣಿದಾರರಿಗೆ ನಗರದು ರಹಿತ ಆರೋಗ್ಯ ಭಾಗ್ಯ ಸಂಧ್ಯಾಕಿರಣ ಯೋಜನೆಯನ್ನು ಅನುಷ್ಠಾನಗೊಳಿಸಬೇಕು, ೭೦ ರಿಂದ ೮೦ ವರ್ಷದೊಳಗಿನ ನಿವೃತ್ತ ಸರ್ಕಾರಿ ನೌಕರರಿಗೆ ಶೇ.೧೦ ರಷ್ಟು ಮೂಲ ಪಿಂಚಣಿಯಲ್ಲಿ ಆರ್ಥಿಕ ಸೌಲಭ್ಯ ನೀಡಬೇಕೆಂದು ಒತ್ತಾಯಿಸಿದರು.

    ೭ನೇ ವೇತನ ಆಯೋಗದ ವರದಿಯಂತೆ ೦೧-೦೭-೨೦೨೨ ರಿಂದ ನಿವೃತ್ತಿ ಹೊಂದಿದ ಸರ್ಕಾರಿ ನೌಕರರಿಗೆ ವೇತನ ನಗದೀಕರಣ ಬಿಟ್ಟು ಇತರೆ ಆರ್ಥಿಕ ಸೌಲಭ್ಯ ನೀಡಬೇಕು, ನಿವೃತ್ತ ನೌಕರರಿಗೆ ಅಂತ್ಯಸಂಸ್ಕಾರಕ್ಕಾಗಿ ಅನುದಾನ ಮೀಸಲಿಡಬೇಕು ಎಂದು ಆಗ್ರಹಿಸಿದರು.

    ಜಿಲ್ಲೆಯಿಂದ ಈ ಸಮಾವೇಶಕ್ಕೆ ಸುಮಾರು ೫೦೦ ಕ್ಕೂ ಹೆಚ್ಚು ನಿವೃತ್ತ ನೌಕರರು ಭಾಗವಹಿಸಲಿದ್ದಾರೆಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಹೆಚ್.ಆರ್ ವಿರುಪಾಕ್ಷಪ್ಪ, ಕಾರ್ಯದರ್ಶಿ ಹೆಚ್.ಕೆ. ಕೃಷ್ಣಮೂರ್ತಿ, ಖಜಾಂಚಿ ಕಾಳಯ್ಯ, ರಾಜ್ಯ ಪರಿಷತ್ ಸದಸ್ಯ ಬಿ. ಶಿವಣ್ಣ ಉಪಸ್ಥಿತರಿದ್ದರು.

    Mar. 19 State Government Retired Employees All-Members’ Meeting

  • ಕಾಣೆಯಾದ ‘ನೀಲಾ ಕಂಡಿರೇ’ ಯಶಸ್ವಿ ರಂಗ ಪ್ರಯೋಗ

    ಕಾಣೆಯಾದ ‘ನೀಲಾ ಕಂಡಿರೇ’ ಯಶಸ್ವಿ ರಂಗ ಪ್ರಯೋಗ

    ಚಿಕ್ಕಮಗಳೂರು: ಪುರುಷ ಪ್ರಧಾನವಾದ ನಮ್ಮ ಸಮಾಜದಲ್ಲಿ ಮಹಿಳೆಯರು ತಮ್ಮ ಒಳತುಮುಲಗಳನ್ನು ಬಹಿರಂಗವಾಗಿ ಹೇಳಿಕೊಳ್ಳಲಾಗದ ಸಂದಿಗ್ಧ ಪರಿಸ್ಥಿತಿಯನ್ನು ರಂಗದ ಮೇಲೆ `ಕಾಣೆಯಾದ ನೀಲಾ… ಕಂಡಿರೇ..’ ನಾಟಕ ಯಶಸ್ವಿಯಾಗಿ ಬಿಂಬಿಸಿದೆ ಎಂದು ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ ವಿಶ್ಲೇಷಿಸಿದರು.

    ನಗರದ ಕುವೆಂಪು ಕಲಾಮಂದಿರದಲ್ಲಿ ಭಾನುವಾರ ಸಂಜೆ ಕಲ್ಕಟ್ಟೆ ಪುಸ್ತಕದ ಮನೆ, ಕಲಾ ಸೇವಾ ಸಂಘ, ಬಿಲೀವ್ ಫಿಸಿಯೋಥೆರಪಿ ಕ್ಲಿನಿಕ್ ಹಾಗೂ ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್ ಸಹಯೋಗದಲ್ಲಿ ಪ್ರದರ್ಶನಗೊಂಡ ನಾಟಕ ವೀಕ್ಷಿಸಿದ ಬಳಿಕ ಅವರು ಮಾತನಾಡಿದರು.

    ಹೊರ ಹಾಕಲಾಗದ ತಮ್ಮ ಎಲ್ಲಾ ಭಾವನೆಗಳನ್ನು ನೀಲಾಳ ಮೂಲಕ ಇಬ್ಬರು ಮಹಿಳೆಯರು ಪ್ರಸ್ತುತಪಡಿಸುತ್ತಾರೆ. ಯಾವತ್ತೂ ನೀಲಾ ಕಾಣೆಯಾಗುವುದಿಲ್ಲ. ಅನೇಕ ಹೆಣ್ಣು ಮಕ್ಕಳು ತಮ್ಮ ನೈಜ ಭಾವನೆಗಳನ್ನು, ಕನಸುಗಳನ್ನು ಅರಳಿಸಿಕೊಳ್ಳಲಾಗದೆ ಹಿಂಜರಿಯುತ್ತಾ ತಾವೇ ಕಾಣೆಯಾಗುತ್ತಾರೆ. ಈ ಒಂದು ಗಂಟೆಯ ಈ ನಾಟಕ ಪುರುಷರಲ್ಲಿ ವೈಚಾರಿಕತೆಯ ಚಿಂತನೆಯನ್ನು ಹುಟ್ಟು ಹಾಕುತ್ತದೆ ಎಂದರು.

    ಹಿರಿಯ ಕಲಾವಿದ ಚಂದ್ರಮೂರ್ತಿ ಮಾತನಾಡಿ ನಾಟಕ ಉತ್ತಮವಾಗಿ ಮೂಡಿ ಬಂದಿದೆ. ಕಲಾವಿದರಿಬ್ಬರ ನಟನೆ ಸಹಜವಾಗಿತ್ತು. ಪ್ರಣಮ್ಯ ಕಶ್ಯಪ್ ಅವರ ಸಂಗೀತ ಉತ್ತಮವಾಗಿತ್ತು. ಇದು ರಾಜ್ಯ, ರಾಷ್ಟ್ರದ ಎಲ್ಲೆಡೆ ಪ್ರದರ್ಶನಗೊಳ್ಳಲಿ ಎಂದು ಆಶಿಸಿದರು.

    ಕ್ಯಾತನಬೀಡು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ರವೀಶ್ ಬಸಪ್ಪ ಮಾತನಾಡಿ, ಬೆಳಕು ವೇದನೆಯ ಆಲಾಪನೆ ಸಂದರ್ಭಕ್ಕನುಗುಣವಾಗಿ ಅಗತ್ಯವಿತ್ತು. ಆಂಗಿಕ ಅಭಿನಯ ಇನ್ನೊಂದಷ್ಟು ಬೇಕಿತ್ತು. ರಂಗದ ಮೇಲಿನ ಮೊದಲನೇ ಪ್ರಯೋಗ ಇದು. ಇನ್ನೆರಡು-ಮೂರು ಪ್ರಯೋಗವಾದ ಬಳಿಕ ಪರಿಪಕ್ವತೆಯಿಂದ ಜನಮೆಚ್ಚುಗೆಗೆ ಪಾತ್ರವಾಗುವ ಎಲ್ಲಾ ವಿಶ್ವಾಸವನ್ನು ಈ ನಾಟಕ ಮೂಡಿಸಿದೆ ಎಂದು ಹೇಳಿದರು.

    ನಿವೃತ್ತ ಕನ್ನಡ ಉಪನ್ಯಾಸಕಿ ಭಾರತಿ ಮಾತನಾಡಿ, ವಿಶಿಷ್ಟತೆಯನ್ನು, ತನ್ನೊಳಗಿನ ಅನನ್ಯತೆಯನ್ನು ಕಟ್ಟಿಕೊಟ್ಟ ನಾಟಕ ಇದು. ಹೆಣ್ಣಿನ ಅಸ್ಮಿತೆಯನ್ನು ವಿಶಿಷ್ಟ ರೀತಿಯಲ್ಲಿ ತೆರೆದಿಡುವುದರ ಜೊತೆಗೆ ತನ್ನೊಳಗಿನ ಬದುಕಿನ ಅದರಾಚೆಯ ನಡುವಿನ ಎಲ್ಲಾ ಭಾವನೆಗಳನ್ನು ಈ ನಾಟಕ ವ್ಯಕ್ತಪಡಿಸುತ್ತದೆ. ನೀಲಾ ಎಲ್ಲೋ ಒಬ್ಬಳಲ್ಲ. ಪುರುಷ ಪ್ರಧಾನ ವ್ಯವಸ್ಥೆಯ ನಡುವೆ ತನ್ನೊಳಗಿನ ಎಲ್ಲಾ ತುಮುಲಗಳನ್ನು, ಪಾತ್ರಗಳನ್ನು ತನ್ನದಲ್ಲದ ಬದುಕಿನ ನಡುವೆ ವಾಸ್ತವತೆಯನ್ನು ಸಾಕ್ಷೀಕರಿಸುವ ಪ್ರಯತ್ನ ಇದರಲ್ಲಿದೆ. ಹಾಗೆಯೇ ರಂಗ ಹಿನ್ನೆಲೆಯ ಹಾಡುಗಳು ಗಮನ ಸೆಳೆದಿವೆ ಎಂದರು.

    ನಾಟಕ ನಿರ್ದೇಶಕ ನಂದಕುಮಾರ್ ಮಾತನಾಡಿ, ಇದೊಂದು ಉತ್ತಮ ರಂಗ ಪ್ರಯೋಗ. ಚಿಕ್ಕಮಗಳೂರಿನಲ್ಲಿ ಇಂದಷ್ಟೇ ಕಲ್ಕಟ್ಟೆ ರಂಗ ಪಾದಾರ್ಪಣೆ ಮಾಡಿದೆ. ಇಂತಹ ಪ್ರದರ್ಶನಗಳು ಇಲ್ಲಿ ಇನ್ನೂ ಹೆಚ್ಚಾಗಬೇಕು. ಮಹಾಭಾರತವನ್ನು ಬರೆದವರು ವ್ಯಾಸರು. ಅದರಲ್ಲಿ ಕುಂತಿ ಹಾಗೂ ಗಾಂಧಾರಿಯ ವೇದನೆಗಳನ್ನು ತುಮುಲಗಳನ್ನು ಅಚ್ಚುಕಟ್ಟಾಗಿ ಚಿತ್ರಿಸಲಾಗಿದೆ. ಹಾಗೆಯೇ ರಾಮಾಯಣದಲ್ಲಿ ಸೀತೆ ಆಗಿರಬಹುದು, ಕೈಕೇಯಿ ಆಗಿರಬಹುದು. ಅದೇ ರೀತಿಯಲ್ಲಿ ನೀಲಾ ಕೂಡ ತನ್ನ ನೋವನ್ನು ತಾನು ಹೇಳಿಕೊಂಡಿದ್ದಾಳೆ. ಆಧುನಿಕ ರಂಗಭೂಮಿಯಲ್ಲಿ ಇದನ್ನು ಕಟ್ಟಿಕೊಟ್ಟಿದ್ದಾರೆ ಎಂದರು.

    ಮನಶ್ಯಾಸ್ತ್ರದ ವಿದ್ಯಾರ್ಥಿನಿ ಚಿನ್ಮಯಿ ಮಾತನಾಡಿ, ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಮಕ್ಕಳು ವಿವರಿಸಲು ಸಾಧ್ಯವಾಗದೇ ಇರುವ ಪರಿಸ್ಥಿತಿಯಲ್ಲಿ ಇದ್ದಾರೆ. ಈ ಕ್ರಮಕ್ಕೆ ತಡೆಯೊಡ್ಡಬೇಕಾಗಿರೋದು ನಾವೆ. ಇದು ರಂಗರೂಪದಲ್ಲಿದೆ. ದಿನನಿತ್ಯದ ಜೀವನದಲ್ಲಿ ನಮ್ಮ ಹೆಣ್ಣು ಮಕ್ಕಳ ಭಾವನೆಗಳಿಗೆ ಮನ್ನಣೆ ನೀಡಿ ಕಿವಿಯಾದಲ್ಲಿ ದೊಡ್ಡ ಬದಲಾವಣೆ ತರಬಹುದು ಎಂದರು.

    ರಂಗ ನಿರ್ದೇಶಕಿ ಶ್ವೇತಾ ವಿನೀತ್‌ಕುಮಾರ್ ಮಾತನಾಡಿ, ಪುರುಷ ಪ್ರಧಾನ ಸಮಾಜ ಇರುವುದು ಸರಿ. ಆದರೆ ಈ ವ್ಯವಸ್ಥೆ ಹೆಣ್ಣು ಮಾತ್ರ ಶೋಷಿತೆಯಲ್ಲ. ಇಬ್ಬರೂ ಕೂಡ ಸಮಾನವಾಗಿ ಶೋಷಿತರೆ. ಪ್ರಧಾನ ವ್ಯವಸ್ಥೆ ಎನ್ನುವುದು ಬರಿಯ ಮನಸ್ಸಿದೆಯಷ್ಟೆ. ಅದು ಗಂಡಿಂದಾಗಲಿ, ಹೆಣ್ಣಿಂದಾಗಲಿ ಸೃಷ್ಟಿಯಾಗಿರುವುದಲ್ಲ. ಗಂಡಿನಲ್ಲಿ ಇರಬಹುದಾದ ಎಲ್ಲಾ ಆರ್ದ್ರಾ ಗುಣಗಳನ್ನು ಈ ವ್ಯವಸ್ಥೆ ತುಂಡರಿಸುತ್ತಿದೆ. ಅದನ್ನು ಸರಿಪಡಿಸುವುದು ಇಬ್ಬರ ಕರ್ತವ್ಯ ಎಂದರಲ್ಲದೆ ಈ ನಾಟಕ ಇನ್ನಷ್ಟು ಪ್ರದರ್ಶನಗಳನ್ನು ಕಾಣಲಿ ಎಂದು ಆಶಿಸಿದರು.

    ಸಂಗೀತ ನಿರ್ದೇಶಕ, ಗಝಲ್ ಗಾಯಕ ಇಮ್ತಿಯಾಜ್ ಸುಲ್ತಾನ್ ಮಾತನಾಡಿ, ಈ ರಂಗ ಪ್ರಯೋಗ ಅತ್ಯುತ್ತಮವಾಗಿ ಮೂಡಿ ಬಂದಿದೆ. ಮುಂಬಯಿ ಕನ್ನಡ ಸಂಘ ಮತ್ತು ದೆಹಲಿ ಕನ್ನಡ ಸಂಘದಲ್ಲಿ ಕೂಡ ಈ ಪ್ರಯೋಗ ಯಶಸ್ವಿಯಾಗಲಿ ಎಂದು ಹಾರೈಸಿದರು.

    ಶಿಕ್ಷಕಿ ಅನಿತಾ ಮಾತನಾಡಿ, ನೀಲಾ ಕಾಣೆಯಾದ ವಿಚಾರ ಬಂದಾಗ ದುಃಖದ ಆಲಾಪನೆ ಇನ್ನೂ ಪರಿಣಾಮಕಾರಿಯಾಗಿ ಮೂಡಿಬರಬೇಕಿತ್ತು. ಕಾಣೆಯಾಗಿರುವ ನೋವು ಕಾಣಿಸಬೇಕಿತ್ತು. ಕಲಾವಿದರ ಅಭಿನಯ ಉತ್ತಮವಾಗಿ ಮೂಡಿ ಬಂದಿದೆ. ಎಲ್ಲರ ಒಳಗೂ ನೀಲಾ ಕಳೆದು ಹೋಗಿರುವುದು ಗೊತ್ತಾಗಿರುತ್ತೆ. ನಾವು ನಮ್ಮೊಳಗೆ ಕಳೆದಿರುವ ನೀಲಾಳನ್ನು ಗುರುತಿಸಿಕೊಟ್ಟಿದ್ದೀರಾ ಎಂದರು.

    ರಂಗ ನಿರ್ದೇಶಕ ನೀನಾಸಂನ ಎಂ.ವಿನೀತ್‌ಕುಮಾರ್ ಮಾತನಾಡಿ, ಈ ನಾಟಕವನ್ನು ಕಲಾವಿದರನ್ನು ಅವಲಂಬಿಸಿ ಪ್ರದರ್ಶಿಸಲಾಗಿದೆ. ಯಾವುದೇ ಸ್ಪರ್ಧೆಗಲ್ಲ. ವಿವಿಧ ವಿನೋದಾವಳಿಗಳನ್ನು ಹಾಗಾಗಿ ಅವುಗಳ ಬಗ್ಗೆ ತಮಗೆ ಒಲವಿಲ್ಲ. ಹಾಗೆಂದು ಹೇಳಿದ್ದನ್ನೆಲ್ಲ ಸ್ವೀಕರಿಸಿದ್ದೇನೆ. ಆದರೆ ಅದನ್ನು ಅಳವಡಿಸಿಕೊಳ್ಳುವುದು, ಬಿಡುವುದು ಮುಂದಿನ ವಿಚಾರ. ರಂಗಭೂಮಿಯಲ್ಲಿ ನಟರನ್ನು ನಂಬಬೇಕೇ ಹೊರತು ವಿವಿಧ ವಿನೋದಾವಳಿಗಳಲ್ಲ ಎಂದರು.

    ಸವಿತಾ ನಾಗಭೂಷಣ್ ಕಥೆಯಾಧರಿತ ಈ ನಾಟಕಕ್ಕೆ ನಗರದ ಜೆ.ವಿ.ಎಸ್. ಶಿಕ್ಷಣ ಸಂಸ್ಥೆಯ ರಂಗಶಿಕ್ಷಕ ನೀನಾಸಂನ ಎಂ.ವಿನೀತ್‌ಕುಮಾರ್ ರಂಗಪಠ್ಯ, ವಿನ್ಯಾಸ ಮತ್ತು ನಿರ್ದೇಶನ ನೀಡಿದ್ದು, ಕಲ್ಕಟ್ಟೆ ಪುಸ್ತಕದ ಮನೆಯ ರೇಖಾ ನಾಗರಾಜರಾವ್ ಹಾಗೂ ಅಪೂರ್ವ ವೆಂಕಟೇಶ್ ರಂಗದ ಮೇಲೆ ಮನೋಜ್ಞವಾಗಿ ಅಭಿನಯಿಸಿದರು. ಪೂರ್ವಿ ಕಲ್ಯಾಣಿ ಸಂಗೀತ ಸಂಯೋಜನೆಯಲ್ಲಿ ಪ್ರಣಮ್ಯ ಕಶ್ಯಪ್ ಉತ್ತಮ ಹಿನ್ನೆಲೆ ಗಾಯನ ನೀಡಿ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ನಿರ್ದೇಶಕರು ಹಾಗೂ ಕಲಾವಿದರನ್ನು ಗೌರವಿಸಲಾಯಿತು.

    ನಾಟಕ ಪ್ರದರ್ಶನವನ್ನು ಕಲಾ ಸೇವಾ ಸಂಘದ ಅಧ್ಯಕ್ಷ ಕೆ.ಮೋಹನ್ ಉದ್ಘಾಟಿಸಿದರು. ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ, ಮಕ್ಕಳ ವೈದ್ಯ ಡಾ.ಜೆ.ಪಿ.ಕೃಷ್ಣೇಗೌಡ, ಸುರೇಂದ್ರ ಶೆಟ್ಟಿ, ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್, ವೈಷ್ಣವಿ ಎನ್.ರಾವ್ ಮಾತನಾಡಿದರು. ಬಿಲೀವ್ ಫಿಸಿಯೋ ಥೆರಪಿ ಕ್ಲಿನಿಕ್‌ನ ಜಿ.ರಮೇಶ್, ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್ ಮುಖ್ಯಸ್ಥ ಮಲ್ಲಿಗೆ ಸುಧೀರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊರಗಪ್ಪ ಪೂಜಾರಿ, ಎಐಟಿ ಕಾಲೇಜಿನ ಪ್ರಾಚಾರ್ಯ ಡಾ.ಸಿ.ಟಿ.ಜಯದೇವ್, ಟೈಲರ್‍ಸ್ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷ ಅಶೋಕ್ ಶೆಟ್ಟಿ, ಹಿರೇಮಗಳೂರು ರಾಕೇಶ್, ಪಂಚಮಿ ಚಂದ್ರಶೇಖರ್ ಮತ್ತಿತರರಿದ್ದರು. ನಾಗರಾಜರಾವ್ ಕಲ್ಕಟ್ಟೆ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

    The missing ‘Neela Kandire’ is a successful stage experiment

  • ಗ್ಯಾರಂಟಿ ಯೋಜನೆ ಬಳಕೆಯಲ್ಲಿ ಜಿಲ್ಲೆ ಪ್ರಥಮ ಸ್ಥಾನ

    ಗ್ಯಾರಂಟಿ ಯೋಜನೆ ಬಳಕೆಯಲ್ಲಿ ಜಿಲ್ಲೆ ಪ್ರಥಮ ಸ್ಥಾನ

    ಚಿಕ್ಕಮಗಳೂರು: ಪಂಚಗ್ಯಾರಂಟಿ ಯೋಜನೆ ಸದ್ಬಳಕೆಯಲ್ಲಿ ಜಿಲ್ಲೆ ಪ್ರಥಮ ಸ್ಥಾನಲ್ಲಿದ್ದು,ಪ್ರಥಮ ಸ್ಥಾನದಿಂದ ಕೈಜಾgದಂತೆ ವಿವಿಧ ಇಲಾಖೆ ಅಧಿಕಾರಿ ವೃಂದದೊಂದಿಗೆ ಸಭೆ ನಡೆಸಿ ಸಾಧಕ-ಬಾಧಕ ಚರ್ಚಿಸಲಾಗುತ್ತಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಹೇಳಿದರು.

    ನಗರದ ಜಿಲ್ಲಾ ಪಂಚಾಯಿತಿಯ ಗ್ಯಾರಂಟಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಇಂದು ಅವರು ಮಾತನಾಡಿ ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ರಾಜ್ಯ ಸರ್ಕಾರ ೫೧ ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿಗೆ ಮೀಸಲಿಟ್ಟು ಬಹುದೊಡ್ಡ ತೀರ್ಮಾನ ಕೈಗೊಂಡಿದೆ. ಅಲ್ಲದೇ ಜಿಲ್ಲೆಯ ಪ್ರತಿ ತಾಲ್ಲೂಕು ಮಟ್ಟದಲ್ಲೂ ಅಧ್ಯಕ್ಷರು ಸಭೆಗಳನ್ನು ನಡೆಸಿ ಜನಸಾಮಾನ್ಯರಿಗೆ ಗ್ಯಾರಂಟಿ ಯೋಜನೆಗಳ ಸೌಲಭ್ಯಗಳ ಕುರಿತು ಮಾಹಿತಿ ನೀಡುತಿದ್ದಾರೆ ಎಂದು ತಿಳಿಸಿದರು.

    ಜಿಲ್ಲೆಯಾದ್ಯಂತ ಏಪ್ರೀಲ್ ೨೦೨೪ರ ರಿಂದ ೨೦೨೫ ವರೆಗೆ ಗೃಹಲಕ್ಷ್ಮಿ ಯೋಜನೆಯಡಿ ೨,೭೦,೨೭೩ ಫಲಾನುಭವಿಗಳು ನೋಂದಾಯಿಸಿಕೊಂಡಿದ್ದ್ದು ಒಟ್ಟು ರೂ. ೫೨,೨೫,೧೮,೦೦೦ ಗಳನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾಹಿಸಲಾಗಿದೆ. ಎಂದ ಅವರು ವಿವಿಧ ತಾಂತ್ರಿಕ ಸಮಸ್ಯೆಗಳಿಂದ ಬಾಕಿ ಇರುವ ಫಲಾನುಭವಿಗಳಿಗೆ ಹಣ ವರ್ಗಾಹಿಸಲು ಅಗತ್ಯ ಕ್ರಮವಹಿಸಿ ಎಂದರು.

    ಶಕ್ತಿ ಯೋಜನೆಯು ಮಹಿಳಾ ಸಬಲೀಕರಣದ ಮಹತ್ವದ ಯೋಜನೆಯಾಗಿದ್ದು, ಈ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ಒಟ್ಟು ೩,೬೪,೯೯,೫೩೬ಅಭ್ಯರ್ಥಿಗಳು ಉಚಿತವಾಗಿ ಪ್ರಯಾಣಿಸುವ ಮೂಲಕ ಯೋಜನೆಯ ಸೌಲಭ್ಯ ಪಡೆದಿದ್ದಾರೆ. ನಿರುದ್ಯೋಗ ಸಮಸ್ಯೆ ಹೋಗಲಾಡಿಸುವ ಉದ್ದೇಶದಿಂದ ಜಾರಿಗೆ ತಂದಿರುವ ಯುವನಿಧಿ ಯೋಜನೆಯಡಿ ಜಿಲ್ಲೆಯಾದ್ಯಂತ ಒಟ್ಟು ೩,೯೩೫ ನೋಂದಾಯಿತ ಫಲಾನುಭವಿಗಳು ಒಟ್ಟು ೪,೭೦,೯೫,೫೦೦ ಯೋಜನೆಯ ಲಾಭ ಪಡೆದಿದ್ದಾರೆ ಎಂದ ಅವರು ಪ್ರತಿ ತಿಂಗಳು ಸಾರ್ವಜನಿಕರನ್ನೊಳಗೊಂಡ ಸಭೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿ ವಿವಿಧ ತಾಂತ್ರಿಕ ದೋಷಗಳಿಂದ ಪಂಚಗ್ಯಾರಂಟಿ ಯೋಜನೆಯಿಂದ ವಂಚಿತರಾಗಿರುವವರನ್ನು ಗುರುತಿಸಿ ಅರ್ಹರಿಗೆ ಯೋಜನೆಯ ಫಲ ದೊರಕುವಂತೆ ಕ್ರಮವಹಿಸಿ ಎಂದರು.

    ಜಿಲ್ಲೆಯಲ್ಲಿ ಒಟ್ಟು ೨,೫೯,೬೩೪ ಪಡಿತರ ಚೀಟಿದಾರರಿದ್ದಾರೆ ಇವುಗಳಲ್ಲಿ ೨,೪೯,೪೮೧ ಪಡಿತರ ಚೀಟಿಗಳು ಡಿಬಿಟಿ ಯೋಜನೆಗೆ ಅರ್ಹವಾಗಿದೆ. ಮಾರ್ಚ್ ತಿಂಗಳಿಂದ ಫೆಬ್ರವರಿ ಹಾಗೂ ಈ ತಿಂಗಳ ಪಡಿತರವನ್ನು ಹಣದ ಬದಲಾಗಿ ಪ್ರತಿ ವ್ಯಕ್ತಿಗೆ ೧೦ ಕೆ.ಜಿ ಅಕ್ಕಿ ವಿತರಿಸಲು ಸರ್ಕಾರ ಮುಂದಾಗಿದೆ,
    ಯಾವ ಯಾವ ಪಡಿತರದಾರರಿಗೆ ಅನ್ನಭಾಗ್ಯ ಯೋಜನೆಯ ಹಣ ವರ್ಗಾವಣೆಯಾಗಿಲ್ಲ ಅಂತಹ ಪಡಿತರದಾರರ ಹಾಗೂ ಅವರುಗಳು ಯಾವ ನ್ಯಾಯಬೆಲೆ ಅಂಗಡಿ ವ್ಯಾಪ್ತಿಗೆ ಬರುತ್ತಾರೆಂಬ ಮಾಹಿತಿಯನ್ನು ಆಯಾ ಭಾಗದ ಪ್ರಾಧಿಕಾರದ ಪ್ರತಿನಿಧಿಗಳಿಗೆ ನೀಡಬೇಕು, ಪ್ರತಿನಿಧಿಗಳಿಗೆ ಯೋಜನೆ ಸಂಬಂಧ ಸಹಕರಿಸುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

    ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಮಾಹಿತಿಯನ್ನು ಜಿಲ್ಲೆಯ ಪ್ರತಿ ನಾಗರೀಕರಿಗೂ ತಲುಪಿಸಲು ಕಾರ್ಯಕ್ರಮಗಳನ್ನು ಆಯೋಜಿಸಿ ವ್ಯಾಪಕ ಪ್ರಚಾರ ಮಾಡಿ ಅರಿವು ಮೂಡಿಸಲಾಗುತ್ತಿದೆ. ಯುವ ಜನತೆಗೆ ಉದ್ಯೋಗ ಸೃಷ್ಠಿಸಿ ಹಾಗೂ ಸ್ವಾವಲಂಭಿ ಬದುಕು ನಿರ್ಮಿಸಿಕೊಡುವ ಉದ್ದೇಶದಿಂದ ಆಸಕ್ತಿ ಇರುವ ಕ್ಷೇತ್ರಗಳಲ್ಲಿ ತರಬೇತಿ ನೀಡಿ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಕ್ರಮವಹಿಸಲಾಗುತ್ತಿದೆ ಎಂದ ಅವರು ಸಾರ್ವಜನಿಕ ಸ್ಥಳಗಳಲ್ಲಿ ಭಿತ್ತಿ ಪತ್ರಗಳು ಹಾಗೂ ಬ್ಯಾನರ್‌ಗಳನ್ನು ಆಳವಡಿಸಿ ಯೋಜನೆಗಳ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದರು.

    ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ ೩,೧೧,೪೦೯ ಫಲಾನುಭವಿಗಳಿದ್ದು ಒಟ್ಟು ೧೧೮,೨೯೩,೯೬೦ ರೂಗಳಷ್ಟು ವೆಚ್ಚ ಭರಿಸಲಾಗಿದೆ.೩,೫೩,೧೯೦ ಆರ್ಹಫಲಾನುಭವಿಗಳಿದ್ದಾರೆ. ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಸಮಿತಿ ಉಪಾಧ್ಯಕ್ಷರು, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

    District ranks first in the use of guarantee scheme

  • ಬೈಕ್ ಕಳ್ಳತನ ಆರೋಪಿ ಬಂಧನ

    ಬೈಕ್ ಕಳ್ಳತನ ಆರೋಪಿ ಬಂಧನ

    ಚಿಕ್ಕಮಗಳೂರು: ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ಆತನಿಂದ ೧೦.೫೦ಲಕ್ಷ ರೂ. ಮೌಲ್ಯದ ಹನ್ನೊಂದು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

    ನಗರದ ನಯಾಜ್ ಪಾಷ ಎಂಬುರು ಬೈಕ್ ಕಳ್ಳತನವಾಗಿದ್ದು, ಅವರು ನೀಡಿದ ದೂರಿನನ್ವಯ ಕಾರ್ಯಪ್ರವೃತ್ತರಾದ ಪೊಲೀಸರು ಹಾಸನ ಹುಣಸಿನಕೆರೆ ನಿವಾಸಿ ಸೈಯದ್ ಇಮ್ಹಾದ್ (೨೩) ಈತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಹನ್ನೊಂದು ಬೈಕ್‌ಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

    ಬಂಧಿತನಿಂದ ಕಳ್ಳತನವಾಗಿದ್ದ ಹನ್ನೊಂದು ಬೈಕ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಇವುಗಳ ಪೈಕಿ ಆರು ಬೈಕ್‌ಗಳು ಚಿಕ್ಕಮಗ ಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ದೂರು ದಾಖಲಾಗಿದ್ದು ಅವುಗಳಿಗೆ ಸಂಬಂಧಿಸಿದ್ದಾಗಿವೆ. ಒಂದು ಬೈಕ್‌ಗಳು ಬೆಂಗಳೂರು ಶೇಷಾದ್ರಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದೆ.

    ಉಳಿದಂತೆ ನಾಲ್ಕು ಬೈಕ್‌ಗಳು ಬೆಂಗಳೂರು ಒಂದು ಮೈಸೂರು ಒಂದು, ಹಾಸನ ಹೊಳೆನರಸೀಪುರ ಪಟ್ಟಣ ವ್ಯಾಪ್ತಿಯ ಒಂದು, ಒಂದು ಬೈಕ್ ಬೇಲೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪೊಲೀಸ್ ಸಿಬ್ಬಂದಿಗಳ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|ವಿಕ್ರಮ್ ಅಮಟೆ ಶ್ಲಾಘೀಸಿದ್ದಾರೆ.

    Bike theft suspect arrested

     

  • ಭದ್ರಾನದಿಯಲ್ಲಿ ಮುಳುಗಿ ರಾಜಸ್ತಾನಿ ಯುವಕರ ಸಾವು

    ಭದ್ರಾನದಿಯಲ್ಲಿ ಮುಳುಗಿ ರಾಜಸ್ತಾನಿ ಯುವಕರ ಸಾವು

    ಚಿಕ್ಕಮಗಳೂರು: ಪ್ರವಾಸಕ್ಕೆ ಬಂದಿದ್ದ ರಾಜಸ್ತಾನಿ ಯುವಕರ ಪೈಕಿ ಇಬ್ಬರು ಭದ್ರಾನದಿಯಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.

    ಭದ್ರಾನದಿಯ ವಶಿಷ್ಠಾಶ್ರಮದ ಸಂಜೀವ ಮೆಟ್ಟಿಲಿನ ತೂಗುಸೇತುವೆ ಬಳಿ ದುರ್ಘಟನೆ ನಡೆದಿದ್ದು, ಬೆಂಗಳೂರಿನಲ್ಲಿ ಚಿನ್ನದ ಕೆಲಸ ಮಾಡುವ ರಾಜಸ್ತಾನ ಮೂಲದ ಯುವಕರಾದ ಜಗದೀಶ್(೩೩) ಮತ್ತು ಚೋಟಾ ಸಿಂಗ್(೨೮) ಮೃತಪಟ್ಟಿದ್ದಾರೆ. ಹೋಳಿ ಹಬ್ಬ ರಜೆ ಹಿನ್ನಲೆ ೧೨ ಜನ ಯುವಕರು ಎರಡು ಕಾರಿನಲ್ಲಿ ಶನಿವಾರ ಕಳಸಕ್ಕೆ ಬಂದಿದ್ದರು.

    ಕಳಸ ಸುತ್ತಮುತ್ತಲ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿದ ಯುವಕರು ಭಾನುವಾರ ಬೆಂಗಳೂರಿಗೆ ಮರಳುವ ಮೊದಲು ವಿಶಿಷ್ಠಾಶ್ರಮದ ತೂಗು ಸೇತುವೆ ನೋಡಲು ತೆರಳಿದ್ದರು. ೧೦ಜನ ಸ್ನೇಹಿತರು ತೂಗುಸೇತುವೆ ನೋಡಲು ತೆರಳಿದ್ದ ವೇಳೆ ಇಬ್ಬರು ಯುವಕರು ನೀರಿನಲ್ಲಿ ಈಜಾಡಲು ತೆರಳಿದ್ದಾರೆ.

    ಈಜು ಬಾರದೆ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮುಳುಗುತಜ್ಞ ಭಾಸ್ಕರ್ ನೆರವಿನಿಂದ ಇಬ್ಬರ ಮೃತದೇಹವನ್ನು ಹೊರತಗೆಯಲಾಗಿದ್ದು, ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Rajasthani youth dies after drowning in Bhadra river

  • ಸಂಗೀತ ಮನಕ್ಕೆ ಮುದ ನೀಡುತ್ತದೆ : ಶ್ರೀ ರಂಭಾಪುರಿ ಜಗದ್ಗುರುಗಳು

    ಸಂಗೀತ ಮನಕ್ಕೆ ಮುದ ನೀಡುತ್ತದೆ : ಶ್ರೀ ರಂಭಾಪುರಿ ಜಗದ್ಗುರುಗಳು

    ಶ್ರೀ ರಂಭಾಪುರಿ ಪೀಠ(ಬಾಳೆಹೊನ್ನೂರು): ಜೀವನದ ಜಂಜಾಟದಲ್ಲಿ ಮುಳುಗಿರುವ ಮನುಷ್ಯನಿಗೆ ಸಂಗೀತ ಮನಕ್ಕೆ ಮುದ ನೀಡುತ್ತದೆ. ಅನೇಕ ರೋಗಗಳಿಗೆ ಸಂಗೀತ ಸಂಜೀವಿನಿಯಾಗಿದೆ. ಗಿಡ ಮರಗಳೂ ಸಂಗೀತವನ್ನು ಆಸ್ವಾದಿಸುತ್ತವೆ ಎಂಬುದು ವೈಜ್ಞಾನಿಕ ಸತ್ಯವಾಗಿದೆ ಎಂದು  ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
    ಅವರು ಬುಧವಾರ ಸಂಜೆ  ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಜರುಗಿದ ಸಂಗೀತ-ಸೌರಭ ಹಾಗೂ ನಗೆ ಹಬ್ಬ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. ಸಂಗೀತ ಆಸ್ವಾದಿಸುವುದರ ಜೊತೆಗೆ ಮನುಷ್ಯನಿಗೆ ಹಾಸ್ಯ ಪ್ರಜ್ಞೆಯೂ ಮುಖ್ಯವಾದುದು. ನಗುವುದರಿಂದ ಮನಸ್ಸು ಉಲ್ಲಸಿತಗೊಳ್ಳುತ್ತದೆ ಮೈ ನರ ನಾಡಿಗಳು ಸಡಿಲಗೊಳ್ಳುತ್ತವೆ. ಉತ್ತಮ ಹಾಸ್ಯದ ಮೂಲಕ ಜನರನ್ನು ನಗಿಸುವುದೂ ಒಂದು ಕಲೆಯಾಗಿದೆ ಎಂದರು.
    ಮಲೆಬೆನ್ನೂರಿನ ಜೆಡಿಎಸ್ ಮುಖಂಡ ಬಿ.ಚಿದಾನಂದಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಸಮಾರಂಭದಲ್ಲಿ ಮುಕ್ತಿಮಂದಿರ, ಸುಳ್ಳ, ನಿಲೊಗಲ್ಲ, ಕಲಾದಗಿ, ಕವಲೇದುರ್ಗ, ಬಿಳಕಿ, ಬೇರುಗಂಡಿ, ಹಾರನಹಳ್ಳಿ ಕೆಂಭಾವಿ, ಸಿಂದಗಿ, ಸಂಗೊಳ್ಳಿ, ಸಿದ್ಧರಬೆಟ್ಟ, ಜಕ್ಕಲಿ-ಹಾರನಹಳ್ಳಿ ಮಠಗಳ ಶ್ರೀಗಳು ಉಪಸ್ಥಿತರಿದ್ದರು. ಕಲಬುರ್ಗಿ ಚವದಾಪುರಿ ಹಿರೇಮಠದ ಡಾ|| ರಾಜಶೇಖರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು.
    ಡಾ|| ರಾಜಗುರು ಗುರುಸ್ವಾಮಿ ಕಲಕೇರಿ ಇವರು ನಡೆಸಿಕೊಟ್ಟ ಸಂಗೀತ ಸೌರಭ ಜನಮನವನ್ನು ಸೂರೆಗೊಂಡಿತು. ‘ಸಾಹಿತ್ಯ-ಸಂಸ್ಕೃತಿ ಸಂವರ್ಧಿಸಲಿ ಶಾಂತಿ ಸಮೃದ್ಧಿ ಸರ್ವರಿಗಾಗಲಿ’ ಎಂಬ ಸ್ವರಚಿತ ಕವನದೊಂದಿಗೆ ಆರಂಭಿಸಿದ ಅವರು ಕಡಕೋಳ ಮಡಿವಾಳಪ್ಪನವರ ‘ಯಾಕ ಮಾಡತೀದಿ ಒಣ ಚಿಂತಿ’ ಹಾಗೂ ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳನ್ನು ಕುರಿತು ರಚಿಸಿದ ‘ಅಗಣಿತ ಚರಿತ ಮಹಾಸನ್ನಿಧಿ’ ಗೀತೆಗಳನ್ನು ಹಾಡಿದರು. ಇವರ ಸಂಗೀತಕ್ಕೆ  ಬಸಲಿಂಗಯ್ಯ ಹಿರೇಮಠ ತಬಲಾ ಸಾಥ ನೀಡಿದರೆ ಗುರುಲಿಂಗಸ್ವಾಮಿ ಹಿತ್ತಲ ಶಿರೂರ ಹಾರ್‍ಮೊನಿಯಂ ಸಾಥ ನೀಡಿದರು.
    ಟಿ.ವಿ.ಹಾಸ್ಯ ಕಲಾವಿದ ಶರಣು ಹಿರೇಮಠ ಹಲವಾರು ಸಂಗತಿಗಳನ್ನು ಹಾಸ್ಯ ಭರಿತವಾಗಿ ಹೇಳುವ ಮೂಲಕ ಜನರನ್ನು ನಗೆಗಡಲಲ್ಲಿ ತೇಲಿಸಿದರು.  ಗದಗ ಜಾನಪದ ಸಂಜೀವಿನಿಯ ಗವಿಸಿದ್ಧಯ್ಯ ಹಳ್ಳಿಕೇರಿಮಠ ಇವರು ಜಾನಪದ ಹಾಡುಗಳ ಮೂಲಕ ಜನತೆಯನ್ನು ರಂಜಿಸಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ ಜರುಗಿತು. ಸಿಂಧನೂರು-ಕನ್ನೂರು ಮಠದ ಸೋಮನಾಥ ಶಿವಾಚಾರ್ಯ ಸ್ವಾಮಿಗಳು ಸ್ವಾಗತಿಸಿದರು. ಮಳಲಿ ಸಂಸ್ಥಾನಮಠದ ಡಾ|| ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ನಿರೂಪಿಸಿದರು.
    ಸಮಾರಂಭದ ನಂತರ ಹುಬ್ಬಳ್ಳಿಯ ಜೀವಿ ಚಿತ್ರಾಲಯುದವರು ನಿರ್ಮಿಸಿರುವ ಗುರುಜೀವಿ ನಿರ್ದೇಶನದ ರೇಣುಕ ಬೋಧೆ ಟೆಲಿ ಫಿಲ್ಮ ಪ್ರದರ್ಶನವನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಉದ್ಘಾಟಿಸಿ ವೀಕ್ಷಿಸಿ ಶುಭ ಹಾರೈಸಿದರು. ರೇಣುಕ ಬೋಧೆ ಟೆಲಿ ಫಿಲ್ಮನಲ್ಲಿ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಶಿವನ ಸದ್ಯೋಜಾತ ಮುಖದಿಂದ ಉದ್ಭವಿಸಿದ ಕಾರಣವನ್ನು ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯರು ಕುಲ್ಯಪಾಕ ಸೋಮೇಶ್ವರ ಲಿಂಗದಿಂದ ಆವಿರ್ಭವಿಸಿ ಮಹಾಮುನಿ ಅಗಸ್ತ್ಯರಿಗೆ ವೀರಶೈವ ಧರ್ಮವನ್ನು ಬೋಧಿಸಲು ಬೋಧಿಸಿದ್ದನ್ನು ಸೊಗಸಾಗಿ ಚಿತ್ರೀಕರಿಸಿದ್ದಾರೆ.
    Music soothes the mind.
  • ನಮ್ಮ ಹಕ್ಕುಗಳನ್ನು ನ್ಯಾಯೋಚಿತವಾಗಿ ಪಡೆಯಬೇಕು

    ನಮ್ಮ ಹಕ್ಕುಗಳನ್ನು ನ್ಯಾಯೋಚಿತವಾಗಿ ಪಡೆಯಬೇಕು

    ಚಿಕ್ಕಮಗಳೂರು:  ವಿಶ್ವ ಗ್ರಾಹಕರ ಹಕ್ಕುಗಳ ದಿನ ನಾವೆಲ್ಲರೂ ಗ್ರಾಹಕರಾಗಿರುವ ಈ ಯುಗದಲ್ಲಿ ನಮ್ಮ ಹಕ್ಕುಗಳನ್ನು ಸೇವೆಗಳನ್ನು ಕೇಳಿ ಪಡೆಯಬೇಕಾದ ಅನಿವಾರ್ಯತೆ ಇದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಎನ್.ಆರ್. ಚನ್ನಕೇಶವ ಅವರು ಹೇಳಿದ್ದಾರೆ.

    ಜಿಲ್ಲಾಡಳಿತ, ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಟೌನ್ ಮಹಿಳಾ ಸಮಾಜ ಇವರುಗಳ ಸಂಯುಕ್ತಾಶ್ರಯದಲ್ಲಿ ಇಂದು ನಗರದ ಟಿ.ಎಂ.ಎಸ್  ಶಾಲಾ ಆವರಣದ ಸವೂರ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ಹಣ ಕೊಟ್ಟು ವಸ್ತು ಅಥವಾ ಸೇವೆ ಕೊಂಡುಕೊಳ್ಳುವವರೆಲ್ಲರೂ ಗ್ರಾಹಕರೇ ಆದರೆ ಹೆಚ್ಚಾಗಿ ಗ್ರಾಹಕರಿಗೆ ತಮಗೆ ಹಕ್ಕುಗಳಿವೆ ಎಂಬುದೇ ಗೊತ್ತಿರುವುದಿಲ್ಲ. ಇದನ್ನು ಎಲ್ಲರಿಗೂ ತಿಳಿಯುವುದು ತಮ್ಮ ಹಕ್ಕುಗಳನ್ನು ನ್ಯಾಯೋಚಿತವಾಗಿ ಪಡೆಯುವಂತೆ ಮಾಡುವುದೇ ಗ್ರಾಹಕರ ಹಕ್ಕುಗಳ ದಿನದ ಉದ್ದೇಶ ಎಂದು ಹೇಳಿದರು.

    ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ವಿ. ಹನುಮಂತಪ್ಪ ಅವರು ಮಾತನಾಡಿ ಪ್ರತಿ ವರ್ಷ ಮಾರ್ಚ್ ೧೫ ರಂದು ಎಲ್ಲಾ ದೇಶಗಳಲ್ಲಿ ವಿಶ್ವ ಗ್ರಾಹಕರ ಹಕ್ಕುಗಳ ದಿನವನ್ನಾಗಿ ಆಚರಿಸಲಾಗುತ್ತದೆ ಎಂದ ಅವರು ಗ್ರಾಹಕರಿಗೆ ನ್ಯಾಯ ಸಮ್ಮತವಾದ, ಸುರಕ್ಷಿತವಾದ ಮತ್ತು ಗುಣಮಟ್ಟ ಉತ್ಪನ್ನಗಳು ಸಿಗಬೇಕು ಎಂಬ ಉದ್ದೇಶದಿಂದ ೧೯೮೩ರಲ್ಲಿ ಕಾನೂನು ಜಾರಿಯಾಗಿ ಈ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದರು.

    ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ, ಗ್ರಾಹಕ ಸಂರಕ್ಷಣಾ ಕಾಯಿದೆ ೨೦೧೯ನ್ನು ಜಾರಿಗೊಳಿಸಿತು. ಇದರೊಡನೆ ಗ್ರಾಹಕರ ಸುರಕ್ಷತೆಗೆ ಆದ್ಯತೆ ಎಂಬ ವಾದಕ್ಕೆ ಮತ್ತಷ್ಟು ಕಾನೂನು ಬಲ ಹೆಚ್ಚಾಗಿದೆ. ದೋಷಪೂರಿತ ವಸ್ತು ಸರಬರಾಜು ಮಾಡಿ ಆದರಿಂದ ಗ್ರಾಹರಿಗೆ ನಷ್ಟ ಉಂಟಾದಲ್ಲಿ ಅಥವಾ ಗ್ರಾಹಕರಿಗೆ ಅನ್ಯಾಯವಾದಲ್ಲಿ ಕನಿಷ್ಠ ೬ ತಿಂಗಳು ಜೈಲು ಶಿಕ್ಷೆ ಮತ್ತು ಒಂದು ಲಕ್ಷದವರಿಗೂ ದಂಡ ವಿಧಿಸಬಹುದು. ಗ್ರಾಹಕರು ಶೀಘ್ರವಾಗಿ ಅನ್ಯಾಯವಾದಲ್ಲಿ ೫ ಲಕ್ಷ ರೂಪಾಯಿ ದಂಡ, ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ ಎಂದು ಹೇಳಿದರು.

    ಗ್ರಾಹಕರು ಶೋಷಣೆಗೆ ಒಳಗಾಗಿದ್ದರೆ ಅಥವಾ ಸೇವೆಗಳಲ್ಲಿ ಅತೃಪ್ತಿ ಹೊಂದಿದ್ದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿ ಪರಿಹಾರ ಕಂಡುಕೊಳ್ಳಬೇಕು ಎಂದರು.

    ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ಪ್ರೇಮಾ ಇ., ಕಾನೂನು ಮಾಪನಶಾಸ್ತ ಇಲಾಖೆಯ ಸಹಾಯಕ ನಿಯಂತ್ರಕರಾದ ಬಿ.ಎನ್. ರಾಜೀವ್ ಮಾತನಾಡಿದರು.

    ಟೌನ್ ಮಹಿಳಾ ಸಮಾಜದ ಅಧ್ಯಕ್ಷರಾದ ಗೀತಾ, ಎಂ.ಎಲ್. ಮೂರ್ತಿ ಮತ್ತಿತರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸವಿತ ಅವರು ಸ್ವಾಗತಿಸಿದರು. ಟೌನ್ ಮಹಿಳಾ ಸಮಾಜ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ ವಂದಿಸಿದರು.

    World Consumer Day program

  • ಪಾಕಿಸ್ತಾನ ಮೋಸದಾಟಕ್ಕೆ ಆಟಲ್‌ಜೀ ತಕ್ಕ ಉತ್ತರ

    ಪಾಕಿಸ್ತಾನ ಮೋಸದಾಟಕ್ಕೆ ಆಟಲ್‌ಜೀ ತಕ್ಕ ಉತ್ತರ

    ಚಿಕ್ಕಮಗಳೂರು: ರಾಷ್ಟ್ರದ ಉದ್ದಗಲಕ್ಕೂ ಹೆದ್ದಾರಿ, ಕೃಷಿ ಪದಾರ್ಥಗಳ ಸಾಗಾಣೆಗೆ ಗ್ರಾಮ್ ಸಡಕ್ ಹಾಗೂ ಪಾಕಿಸ್ತಾನದ ಮೋಸದಾಟಕ್ಕೆ ದಿಟ್ಟ ಹೆಜ್ಜೆಯಿಟ್ಟ ಆಟಲ್ ಬಿಹಾರಿ ವಾಜಪೇಯಿ ಅಪ ರೂಪದ ರಾಜಕಾರಣಿ ಎಂದು ಆಟಲ್‌ಜೀ ಜನ್ಮಶತಮಾನೋತ್ಸವ ಸಮಿತಿ ರಾಜ್ಯ ಸಂಚಾಲಕ ಜಗದೀಶ್ ಹಿರೇಮನಿ ಹೇಳಿದರು.

    ನಗರದ ಜಿಲ್ಲಾ ಬಿಜೆಪಿ ಪಾಂಚಜನ್ಯ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ಧ ಆಟಲ್ ಜೀ ವಿರಾಸತ್ ಜಿಲ್ಲಾ ಸಮ್ಮೇಳನದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿ ವಾಜಪೇಯಿ ರಾಜಕಾರಣಿಯಾಗಿ, ಪ್ರಧಾನ ಮಂತ್ರಿಯಾಗಿ ಕಾರ್ಯನಿರ್ವಹಿಸಿಲ್ಲ, ರಾಷ್ಟ್ರದ ಪ್ರತಿ ಪ್ರಜೆ ಯ ಪ್ರೀತಿ, ವಿಶ್ವಾಸ ವ್ಯಕ್ತಿಯಾಗಿ ರೂಪುಗೊಂಡ ಕಾರಣ ಅಜಾತಶೃತವಾಗಿ ಗುರುತಿಸಿಕೊಂಡಿದ್ದಾರೆ. ಬಾಲ್ಯ ದಿಂದಲೇ ಚತುರ ಹಾಗೂ ದೇಶಭಕ್ತಿ ರೂಢಿಸಿಕೊಂಡಿದ್ದ ಆಟಲ್‌ಜೀ, ರಾಷ್ಟ್ರದ ಹಿತ ಚಿಂತನೆಗೆ ವಿಶೇಷ ದೃಷ್ಟಿ ಕೋನ ಮೈಗೂಡಿಸಿಕೊಂಡಿದ್ದರು ಎಂದರು.

    ರಾಷ್ಟ್ರಕ್ಕಾಗಿ ನಿರಂತರ ದುಡಿಯುವ ಅಬಲವಿದ್ಧ ಆಟಲ್‌ಜೀ ಅವಿವಾಹಿತರಾಗಿ, ಸಂಪೂರ್ಣ ಬದು ಕನ್ನು ಭಾರತೆಂಬೆಗೆ ಮುಡಿಪಿಟ್ಟರು. ಬ್ರಿಟಿಷರ ಆಳ್ವಿಕೆಯ ಕಹಿ ಘಟನೆಗಳಿಂದಲೇ ಬೆಳೆದಿದ್ದ ಅವರಿಗೆ ಬಾಲ್ಯ ದಿಂದಲೇ ದೇಶಭಕ್ತಿ ಚಿಲುಮೆ ಚಿಗುರೊಡೆದಿತ್ತು. ಬಳಿಕ ಜನಸಂಘದಲ್ಲಿ ತೊಡಗಿ ಹಿಂದುತ್ವದ ಪ್ರತೀಕವಾಗಿ ಹೋರಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

    ಜನಸಂಘ ಸಂಘಟನೆ ಬಳಿಕ ದೇಶದ ಅಸ್ಮಿತೆ, ಸಂಸ್ಕೃತಿ ಉಳಿವಿಗಾಗಿ ೧೯೮೦ರಲ್ಲಿ ಪ್ರಬಲ ಬಿಜೆಪಿ ರಾಜ ಕೀಯ ಪಕ್ಷವನ್ನು ಸ್ಥಾಪಿಸಿದರು. ಪ್ರಪ್ರಥಮ ಸೋತರು ಕೂಡಾ ದೃತಿಗೆಡದೇ ಕಾರ್ಯಕರ್ತರ ಹುರುಪನ್ನು ಹೆಚ್ಚಿಸಿ ಬೆನ್ನಲುಬಾಗಿ ನಿಂತರು. ಮೊದಲ ಬಾರಿ ಸಂಸದರಾಗಿ ವಾಜಪೇಯಿ ಆಯ್ಕೆಗೊಂಡ ತಕ್ಷಣವೇ ಕಾಂ ಗ್ರೆಸ್ ನಾಯಕರಲ್ಲಿ ಹೆದರಿಕೆ, ಭಯ ಮನೆಮಾಡಿತು ಎಂದು ಹೇಳಿದರು.

    ರಾಷ್ಟ್ರದ ಪ್ರಧಾನಿ ಹುದ್ದೆ ಅಲಂಕರಿಸುವರು ಎಂದು ಮೊದಲೇ ಹೇಳಿದ್ದ ನೆಹರು ಮಾತಿಗೆ ಸಂಸದರಾದ ಆಟಲ್‌ಜೀ ಗುರಿಯೇ ಭವ್ಯ ಭಾರತದ ನಿರ್ಮಾಣವಾಗಿತ್ತು. ಅಲ್ಲದೇ ದೇಶವ್ಯಾಪಿ ಪ್ರವಾಸ ಕೈಗೊಂಡರು. ವಿಶೇಷವಾಗಿ ಕರ್ನಾಟಕ ಹಾಗೂ ಆಟಲ್‌ಜೀಗೂ ಅವಿನಾಭವ ಸಂಬಂಧವಿದೆ. ರಾಜ್ಯಾದ್ಯಂತ ಪ್ರವಾಸ ಕೈ ಗೊಂಡು ದಕ್ಷಿಣ ಭಾರತದಲ್ಲಿ ಕಮಲ ಅರಳಿತು ಎಂದರು.

    ಭಾಜಪ ಅಧಿಕಾರಕ್ಕೂ ಮುನ್ನ ವಿಶ್ವದ ಅನೇಕ ದೇಶಗಳು, ಭಾರತವನ್ನು ನೋಡುವ ದೃಷ್ಟಿಕೋನವೇ ಬೇರೆಯಿತ್ತು. ಆಟಲ್‌ಜೀ ಪ್ರಧಾನ ಮಂತ್ರಿಯಾದ ಬಳಿಕ ಇಡೀ ಜಗತ್ತು ಭಾರತದ ಗಟ್ಟಿತನದ ಮಾತನ್ನು ಕೇಳುವ ವ್ಯವಸ್ಥೆ ನಿರ್ಮಾಣಗೊಂಡಿತು. ಶತ್ರುಗಳನ್ನು ಸದೆಬಡಿಯಲು ಸೈನಿಕರಿಗೆ ಶಕ್ತಿತುಂಬಿ ಕಾರ್ಗಿಲ್ ವಿಜ ಯೋತ್ಸವ ರೂವಾರಿಯಾದರು ಎಂದು ಬಣ್ಣಿಸಿದರು.

    ೧೯೮೮ರಲ್ಲಿ ಪ್ರೋಖ್ರಾನ್ ಪರಮಾಣು ಪರೀಕ್ಷೆಗಳನ್ನು ನಡೆಸಿ, ಭಾರತವನ್ನು ವಿಶ್ವದ ಎದುರಿಗೆ ಪರಮಾ ಣು ಶಕ್ತಿ ರಾಷ್ಟ್ರವನ್ನಾಗಿ ಮಾಡಿದರು. ಪ್ರಮುಖ ನಗರಗಳನ್ನು ಹೆದ್ದಾರಿಗಳ ಮೂಲಕ ಸಂಪರ್ಕಿಸುವ ಸುವ ರ್ಣ ಚತುಷ್ಷಥ ಯೋಜನೆಯನ್ನು ಪ್ರಾರಂಭಿಸಿದರು. ಸರ್ವ ಶಿಕ್ಷಣದಡಿ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಉಚಿತವಾಗಿಸುವ ಅಭಿಯಾನ ಕಾರಣರಾದವರು ಎಂದರು.

    ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯ ದರ್ಶಿ ಹೆಚ್.ಸಿ.ಕಲ್ಮರುಡಪ್ಪ ರಾಜಕೀಯ ಮುತ್ಸದಿ ಜೊತೆಗೆ ಕವಿ ಹೃದಯದ ಆಟಲ್‌ಜೀ, ಪ್ರತಿ ಕಾರ್ಯಕ್ರಮ ದಲ್ಲಿ ದಿಕ್ಸೂಚಿ ಭಾಷಣಕ್ಕೆ ಹೆಸರಾದವರು. ಅಲ್ಲದೇ ಆಟಲ್ ಜೀ ಭಾಷಣವೆಂದರೆ ದೇಶ ಭಕ್ತಿಯಿಂದ ಕೂಡಿ ದ ಕಾರಣ ಕೆಲವು ವಿ.ಪಕ್ಷ ನಾಯಕರು ಆಲಿಸುತ್ತಿದ್ದರು ಎಂದರು.

    ರಾಷ್ಟ್ರದಲ್ಲಿ ಎಡಪಂಥೀಯ ಆಳ್ವಿಕೆಯನ್ನು ಸರಿಸಿ, ನೈಜ ಸತ್ಯವನ್ನು ಜನತೆಗೆ ಪರಿಚಯಿಸಲು ಹಾಗೂ ದೇಶದ ಅಸ್ಮಿತೆ, ರಾಷ್ಟ್ರೀಯತೆ ಉಳಿವಿಗಾಗಿ ಬಿಜೆಪಿ ಪಕ್ಷ ಸ್ಥಾಪಿಸಿ ಪ್ರಬಲತೆಗೆ ಹೆಚ್ಚಿಸಿದರು. ಕಾಂಗ್ರೆಸ್ ಸರ್ಕಾ ರದಲ್ಲಿ ಸೈನಿಕರು ದುರ್ಬಲರಿದ್ದರು. ಬಿಜೆಪಿ ಅಧಿಕಾರದಲ್ಲಿ ಸೈನಿಕರಿಗೆ ಅತೀವ ಶಕ್ತಿ ದೊರೆತು, ಶತೃಗಳಿಗೆ ತಕ್ಕಪಾಠ ಕಲಿಸಲು ಕಾರಣೀಭೂತರು ಆಟಲ್‌ಜೀ ಕಾರ್ಯತಂತ್ರ ಎಂದು ತಿಳಿಸಿದರು.

    ಗ್ರಾಮೀಣ ಪ್ರದೇಶಕ್ಕೆ ಗುಣಮಟ್ಟದ ರಸ್ತೆ, ಸರ್ವಶಿಕ್ಷಣಕ್ಕೆ ಒತ್ತು ಹಾಗೂ ಆಧುನಿಕತೆಯ ಜಗತ್ತಿನಲ್ಲಿ ಬೆರಳತುದಿಯಲ್ಲಿ ಕ್ರಾಂತಿಗೆ ಮೂಲಬೇರು ವಾಜಪೇಯಿ ಎಂದ ಅವರು ಕೇವಲ ಒಂದು ಸ್ಥಾನದಿಂದ ಸೋ ತು, ಅಧಿಕಾರ ಹಿಡಿಯುವಲ್ಲಿ ವಿಫಲರಾದರೂ ಹೊರತು, ಇತರೆ ಪಕ್ಷಕ್ಕೆ ಮೋರೆ ಹೋಗದೇ ಪ್ರಾಮಾಣಿಕತೆ ಮರೆದವರು ಎಂದರು.

    ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ಮಾತನಾಡಿ ರಾಜ್ಯದಲ್ಲೇ ಮೊದಲ ಬಾರಿಗೆ ಜಿಲ್ಲೆಯಿಂ ದ ಆಟಲ್ ಜೀ ವಿರಾಸತ್ ಜಿಲ್ಲಾ ಸಮ್ಮೇಳನಕ್ಕೆ ಆರಂಭಗೊಂಡಿದೆ ಎಂದ ಅವರು ಚಿಕ್ಕಮಗಳೂರು, ಆಲ್ದೂ ರು ಭಾಗದಲ್ಲೂ ಅಂದಿನ ಕಾಲಘಟ್ಟದಲ್ಲಿ ವಾಜಪೇಯಿ ಭೇಟಿ ನೀಡಿರುವ ಪುರಾವೆಗಳಿವೆ ಎಂದು ತಿಳಿಸಿ ದರು.

    ಇಂದಿನ ಗ್ರಾ.ಪಂ. ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸುವ ಕಾಲವಿದೆ. ಆದರೆ ಅಂದು ರಾಷ್ಟ್ರದ ಪ್ರಧಾನ ಮಂತ್ರಿ ಸ್ಥಾನಕ್ಕೆ ವಾಜಪೇಯಿ, ಅಡ್ವಾಣಿ ಸೂಕ್ತ. ಅಡ್ವಾಣಿ, ವಾಜಪೇಯಿ ಸೂಕ್ತ ಎನ್ನುವ ಸನ್ನಿವೇಶವಿತ್ತು. ಹಾಗಾಗಿ ಅಧಿಕಾರ ಶಾಶ್ವತ ವಲ್ಲ, ಅಭಿವೃದ್ದಿ ಕಾರ್ಯಗಳೇ ಶಾಶ್ವತ ಎಂಬುದು ಹಿರಿಯರ ತೋರಿದ ರೀತಿ ಯನ್ನು ಕಾರ್ಯಕರ್ತರು ಅರ್ಥೈಸಿಕೊಳ್ಳಬೇಕು ಎಂದರು.

    ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರೇಮ್‌ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಡಾ. ನರೇಂದ್ರ, ಪುಣ್ಯಪಾಲ್, ರವೀಂದ್ರ ಬೆಳವಾಡಿ, ವಕ್ತಾರ ಸಿ.ಹೆಚ್.ಲೋಕೇಶ್, ನಗರಾಧ್ಯಕ್ಷ ಕೆ.ಎಸ್.ಪುಷ್ಪ ರಾಜ್, ಗ್ರಾಮಾಂತರ ಮಂಡಲ ಅಧ್ಯಕ್ಷ ವಿಜಯ್‌ಕುಮಾರ್, ಸಿಡಿಎ ಮಾಜಿ ಅಧ್ಯಕ್ಷ ಕೋಟೆ ರಂಗನಾಥ್, ಜಿ.ಪಂ. ಮಾಜಿ ಅಧ್ಯಕ್ಷ ಚೈತ್ರಶ್ರಿ ಮಾಲತೇಶ್, ಮುಖಂಡರುಗಳಾದ ದೀಪಕ್‌ದೊಡ್ಡಯ್ಯ, ಸೀತಾರಾಮಭರ ಣ್ಯ, ಜಸಂತಾ ಅನಿಲ್‌ಕುಮಾರ್, ವೀಣಾ, ಸವಿತಾ ರಮೇಶ್, ಹಿರಿಯರಾದ ಕೃಷ್ಣಸ್ವಾಮಿ, ಎನ್.ಕೇಶವ, ಉದಯ್ ಮತ್ತಿತರರಿದ್ದರು.

    Special lecture at the Aatal Ji Virasat District Conference

  • ಮಹಿಳೆಯರನ್ನು ಹಿಂದಕ್ಕೆ ಇಟ್ಟರೆ ರಾಷ್ಟ್ರದ ಏಳಿಗೆ ಸಾಧ್ಯವಿಲ್ಲ

    ಮಹಿಳೆಯರನ್ನು ಹಿಂದಕ್ಕೆ ಇಟ್ಟರೆ ರಾಷ್ಟ್ರದ ಏಳಿಗೆ ಸಾಧ್ಯವಿಲ್ಲ

    ಚಿಕ್ಕಮಗಳೂರು: ಸ್ವಾಮಿ ವಿವೇಕಾನಂದರ ಮಾತಿನಂತೆ, ಸಮಾಜದಲ್ಲಿ ಮಹಿಳೆಯರನ್ನು ಹಿಂದಕ್ಕಿಟ್ಟು ರಾಷ್ಟ್ರವನ್ನು ಮೇಲೆತ್ತಲು ಸಾಧ್ಯವಿಲ್ಲ. ಆದ್ದರಿಂದ ಸಮಾಜದ ಹಿತಕ್ಕಾಗಿ, ಸರ್ವತೋಮುಖ ಅಭಿವೃದ್ಧಿಗಾಗಿ ಮಹಿಳೆಯರು ಸಮಾಜದಲ್ಲಿ ಮುಂದೆ ಬರಲು ಪುರುಷರು ಸ್ವಾತಂತ್ರ್ಯ ಹಾಗೂ ಪೂರಕ ವಾತಾವರಣವನ್ನು ಕಲ್ಪಿಸಿಕೊಡಬೇಕು ಎಂದು ಚಿಕ್ಕಮಗಳೂರು ವಿಧಾನ ಸಭೆ ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು.
    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಮಹಿಳಾ ಆಯೋಗ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ, ಇವರು ಸಂಯುಕ್ತಾಶ್ರಯದಲ್ಲಿ ಇಂದು ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
    ಮಹಿಳೆಯರಿಗೆ ಸಿಗಬೇಕಾದ ಸೌಕರ್ಯ ಮತ್ತು ಸ್ವಾತಂತ್ರ್ಯ  ಹಾಗೂ ಕುಟುಂಬದಲ್ಲಿ ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ ಹಾಗೂ ಸವಲತ್ತುಗಳನ್ನು ನೀಡಿದರೆ ರಾಷ್ಟ್ರ ಮುಂದಕ್ಕೆ ಹೋಗುವುದರಲ್ಲಿ ಅನುಮಾನವಿಲ್ಲ ಎಂದರು.
    ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್ ಮಾತನಾಡಿ, ಈ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಶೋಷಣೆ ತಪ್ಪಿದ್ದಲ್ಲ. ಆಧುನಿಕ ಹೆಣ್ಣು ಮಕ್ಕಳು ಸಹ ನಾನಾ ರೀತಿಯ ಮಾನಸಿಕ ಶೋಷಣೆಗೆ ಒಳಗಾಗುತ್ತಿದ್ದಾರೆ. ಪ್ರತಿ ಹೆಣ್ಣು ಮಕ್ಕಳು ವಿದ್ಯಾವಂತರಾಗಿ, ವೈಚಾರಿಕವಾಗಿ ಬೆಳೆಯಬೇಕು ಆಗ ಹೆಣ್ಣು ಸ್ವತಂತ್ರ್ಯವಾಗಿ ಸಬಲೆಯಾಗಬಲ್ಲಳು, ಸಮಾನತೆಯ ಜೊತೆಗೆ ಒಗ್ಗಟ್ಟಿನಲ್ಲಿ ಸಹ ಮಹಿಳೆಯರು ಸದಾ ಮುಂದಿರುವುದು ದೇಶದ ಆರ್ಥಿಕ ಅಭಿವೃದ್ಧಿಗೆ ಸಾಕ? ಅನುಕೂಲವಾಗಲಿದೆ. ಪ್ರತಿ ವ? ಮಾರ್ಚ್ ೮ರಂದು ಅಂತರರಾಷ್ಟ್ರೀಯ ಮಹಿಳೆಯರ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಮಹಿಳೆಯರ ಸಾಧನೆಗೆ ಮನಃಪೂರ್ವಕ ಗೌರವ ಸೂಚಿಸುವ ದಿನ ಇದಾಗಿದೆ. ಇಂದು ಮಹಿಳೆಯರ ಸಾಧನೆ ಎಲ್ಲಾ ಕ್ಷೇತ್ರಗಳಲ್ಲಿಯೂ ಇದೆ. ಪ್ರಮುಖವಾಗಿ ತಾಂತ್ರಿಕ, ಸಂಶೋಧನಾ ಹಾಗೂ ಉತ್ಪಾದನಾ ಕ್ಷೇತ್ರಗಳಲ್ಲಿ ಮಹಿಳೆಯರು ದೇಶಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ತಮ್ಮ ಬುದ್ಧಿಶಕ್ತಿಯಿಂದ ಅದೆ? ಸಮಸ್ಯೆಗಳಿಗೆ ಪರಿಹಾರಗಳನ್ನು ತಂದು ಕೊಟ್ಟಿದ್ದಾರೆ ಎಂದು ಹೇಳಿದರು.
    ಮಾಜಿ ಸಚಿವರಾದ ಮೊಟ್ಟಮ್ಮ ಮಾತನಾಡಿ ಒಬ್ಬ ವ್ಯಕ್ತಿಯ ಜೀವನದಲ್ಲಿ ಮಹಿಳೆಯ ಪಾತ್ರ ತುಂಬಾ ದೊಡ್ಡದಿರುತ್ತದೆ. ಆಕೆ ತಾಯಿಯಾಗಿ, ಸೋದರಿಯಾಗಿ, ಪತ್ನಿಯಾಗಿ ಬಾಳಿಗೆ ಬೆಳಕಾಗುತ್ತಾಳೆ. ವೈಯಕ್ತಿಕವಾಗಿ ಮನೆಯ ಅರ್ಧ ಜವಾಬ್ದಾರಿಯನ್ನು ಹೊರುವ ಜೊತೆಗೆ ಒಬ್ಬ ಶಿಕ್ಷಕಿಯಾಗಿ, ಇಂಜಿನಿಯರ್ ಆಗಿ, ಪೈಲೆಟ್ ಆಗಿ ಕೂಡ ತನ್ನ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾಳೆ. ಸಮಾಜದ ಕಟ್ಟುಪಾಡುಗಳ ಹೊರತಾಗಿಯೂ ಕೂಡ ಈಗಿನ ಆಧುನಿಕ ದಿನಗಳಲ್ಲಿ ಆಕೆ ಸಾಧನೆಯ ಶಿಖರವನ್ನು ಮುಟ್ಟುತ್ತಿದ್ದಾಳೆ. ಹಾಗಾಗಿ ವಿಶ್ವದಾದ್ಯಂತ ಮಹಿಳೆಯರಿಗಾಗಿ ಗೌರವಾನ್ವಿತವಾಗಿ ಈ ಒಂದು ದಿನವನ್ನು “ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ” ಯನ್ನಾಗಿ ಆಚರಿಸುವ ಮೂಲಕ ಮೀಸಲಿಡಲಾಗಿದೆ. ಮಹಿಳೆಯರಿಗೆ ಎಲ್ಲಾ ಕ್ಷೇತ್ರದಲ್ಲಿಯೂ ಅವಕಾಶ ಕೊಡುವುದು ಮುಂದಿನ ಮಹತ್ತರ ಬೆಳವಣಿಗೆಗೆ ದಾರಿದೀಪವಾಗಲಿದೆ ಎಂದು ಹೇಳಿದರು.
    ಜಿ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೆಚ್.ಎಸ್ ಕೀರ್ತಾನ ಮಾತನಾಡಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಮಹಿಳೆಯರ ಸಾಧನೆಗಳನ್ನು ಗುರುತಿಸಲು, ಲಿಂಗ ಸಮಾನತೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮಹಿಳಾ ಸಬಲೀಕರಣವನ್ನು ಉತ್ತೇಜಿಸಲು ವಾರ್ಷಿಕವಾಗಿ ಆಚರಿಸಲಾಗುತ್ತದೆ. ಈ ಜಾಗತಿಕ ಕಾರ್ಯಕ್ರಮವು ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳನ್ನು ಚರ್ಚಿಸಲು ಮತ್ತು ಅವರ ಹಕ್ಕುಗಳನ್ನು ಬೆಂಬಲಿಸುವ ಅಭಿಯಾನಗಳನ್ನು ಒದಗಿಸಲು ಒಂದು ವೇದಿಕೆಯನ್ನು ಒದಗಿಸುತ್ತದೆ ಎಂದು ಹೇಳಿದರು.
    ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಉಪ ನಿರ್ದೇಶಕರು ಮಹಾಂತೇಶ್ ಭಜಂತ್ರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
    ಕಾರ್ಯಕ್ರಮದಲ್ಲಿ ಜಿ. ಪಂ ಉಪಕಾರ್ಯದರ್ಶಿ ಶಂಕರ್ ಕೊರವರ ,ಡಯಟ್ ಉಪನಿರ್ದೇಶಕಿ ಕೆ.ಎಂ ಸುನೀತಾ, ಜಂಟಿ ನಿರ್ದೇಶಕಿ ಸುಜಾತಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಪೂರ್ಣಿಮಾ, ನಗರಾಭಿವೃಧ್ದಿ ಪ್ರಾಧಿಕಾರ ಆಯುಕ್ತರು ನಾಗರತ್ನ, ಹೋಮ್ ಗಾರ್ಡ್ ಅಧಿಕಾರಿ ನಜ್ಹೀಮ್ ತಾಜ್, ಮಹಿಳಾ ಮತ್ತು ಮಕ್ಕಳಾ ಅಭಿವೃಧ್ದಿ ಇಲಾಖೆಯ ಎಲ್ಲಾ ತಾಲ್ಲೂಕಿನ ಶಿಶು ಅಭಿವೃದ್ದಿ ಯೋಜನಾಧಿಕಾರಿ ಮತ್ತು ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ಮಹಿಳಾ ಮೇಲ್ವಿಚಾರಕರು, ಎಲ್ಲಾ ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿಯರು, ಮತ್ತು ಹಲವಾರು ಸಂಘ ಸಂಸ್ಥೆಯ ಮುಖ್ಯಸ್ಥರು ಉಪಸ್ಥಿತರಿದ್ದರು.
    International Women’s Day