Category: ಜಿಲ್ಲಾ ಸುದ್ದಿ
-

ಜೀವನದಲ್ಲಿ ಬದಲಾವಣೆ ಬೆಳವಣಿಗೆ ಎರಡೂ ಮುಖ್ಯ
ಚಿಕ್ಕಮಗಳೂರು: ಶ್ರೀ ರಂಭಾಪುರಿ ಪೀಠ(ಬಾಳೆಹೊನ್ನೂರು)- ಅಸತ್ಯದಿಂದ ಸತ್ಯದೆಡೆಗೆ ಕತ್ತಲೆಯಿಂದ ಬೆಳಕಿನೆಡೆಗೆ ಸಾವಿನಿಂದ ಸಾವಿಲ್ಲದೆಡೆಗೆ ಮುನ್ನಡೆವ ಗುರಿ ಮನುಷ್ಯನದಾಗಬೇಕು. ಮೌಲ್ಯಾಧಾರಿತ ಜೀವನ ಬದುಕಿಗೆ ಬೆಲೆ ತರುತ್ತದೆ. ಜೀವನದಲ್ಲಿ ಬದಲಾವಣೆ ಮತ್ತು ಬೆಳವಣಿಗೆ ಎರಡೂ ಮನುಷ್ಯನಿಗೆ ಮುಖ್ಯವಾಗಿವೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು ಶುಕ್ರವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ವಸಂತೋತ್ಸವ ಹಾಗೂ ಭದ್ರಾ ನದಿ ತೀರದಲ್ಲಿ ಸುರಗಿ ಸಮಾರಾಧನೆ ಪೂಜೆ ನೆರವೇರಿಸಿ ಆಶೀರ್ವಚನ ನೀಡುತ್ತಿದ್ದರು.ಪ್ರಾರ್ಥನೆ ಮತ್ತು ನಂಬಿಕೆ ಎರಡೂ ಕಣ್ಣಿಗೆ ಕಾಣದಿರಬಹುದು. ಆದರೆ ಅಸಾಧ್ಯವಾದುದನ್ನು ಸಾಧಿಸುವ ಶಕ್ತಿ ಎರಡಕ್ಕೂ ಇದೆ. ಆಡಿದ ಮಾತು ಬಿಟ್ಟ ಬಾಣ ಕಳೆದುಕೊಂಡ ಸಮಯ-ನಂಬಿಗೆ ಎಂದಿಗೂ ಮರಳಿ ಬರುವುದಿಲ್ಲ. ಅಧರ್ಮ ತಾತ್ಕಾಲಿಕವಾಗಿ ಮೇಲೇರಿದರೂ ಅಂತಿಮವಾಗಿ ಬುಡ ಸಹಿತ ಸರ್ವ ನಾಶವಾಗುತ್ತದೆ.ದೇಹಶು॒ದ್ಧಿ ನುಡಿ ಶುದ್ಧಿ ಮತ್ತು ಮನಶುದ್ಧಿ ಇವುಗಳನ್ನು ಸಾಧಿಸಲು ನೆರವಾಗುವುದೇ ನಿಜವಾದ ಧರ್ಮ. ಕೈ ತುಂಬಾ ಕೆಲಸ ಕಣ್ತುಂಬ ನಿದ್ದೆ ಮನಸ್ಸು ತುಂಬಾ ನೆಮ್ಮದಿ ಹೃದಯ ತುಂಬಾ ಪ್ರೀತಿ ಮತ್ತು ಆರೋಗ್ಯ ಭಾಗ್ಯ ಇರುವಂತಹ ಜನರು ಜಗತ್ತಿನಲ್ಲಿ ನಿಜವಾದ ಶ್ರೀಮಂತರು. ಒಳ್ಳೆಯ ಮನಸ್ಸು ಇದ್ದರೆ ಒಳ್ಳೆ ದಿನ ಖಂಡಿತ ಬಂದೇ ಬರುತ್ತದೆ. ಕಾಯುವ ತಾಳ್ಮೆ ಬೇಕು. ಶ್ರೀ ಪೀಠದಲ್ಲಿ ವಸಂತೋತ್ಸವ ಪೂರೈಸಿ ಭದ್ರಾ ನದಿ ತೀರದಲ್ಲಿ ಸುರಗಿ ಸಮಾರಾಧನಾ ಪೂಜಾ ಕಾರ್ಯಗಳು ಯಶಸ್ವಿಯಾಗಿ ಜರುಗಿರುವುದು ತಮಗೆ ಅತೀವ ಸಂತೋಷ ತಂದಿದೆ ಎಂದರು.ಬಂದ ಎಲ್ಲ ಭಕ್ತರು ಭದ್ರಾ ನದಿಯಲ್ಲಿ ಮಂಗಲ ಸ್ನಾನ ಮಾಡಿ ತೀರ್ಥ ಪ್ರಸಾದ ಸೇವಿಸಿ ಪುನೀತರಾದ ದೃಶ್ಯ ಅಪೂರ್ವವಾಗಿತ್ತು. ಎಡೆಯೂರು ರೇಣುಕ ಶಿವಾಚಾರ್ಯರು, ಮುಕ್ತಿಮಂದಿರ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು, ಸುಳ್ಳ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರು, ಮಳಲಿಮಠದ ಡಾ|| ನಾಗಭೂಷಣ ಶಿವಾಚಾರ್ಯರು, ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯರು, ಎಮ್ಮಿಗನೂರು ಮಹಂತ ಶಿವಾಚಾರ್ಯರು, ಬಿಳಕಿ ರಾಚೋಟೇಶ್ವರ ಶಿವಾಚಾರ್ಯರು,ರಾಯಚೂರು ಶಾಂತಮಲ್ಲ ಶಿವಾಚಾರ್ಯರು, ಅಮ್ಮಿನಭಾವಿ ಅಭಿನವ ಶಾಂತಲಿಂಗ ಶಿವಾಚಾರ್ಯರು, ನೆಗಳೂರು ಗುರುಶಾಂತೇಶ್ವರ ಶಿವಾಚಾರ್ಯರು, ಹಂಪಸಾಗರ ನವಲಿ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯರು ಮೊದಲ್ಗೊಂಡು ಸುಮಾರು ೩೫ ಜನ ವಿವಿಧ ಮಠಾಧೀಶರು ಸುರಗಿ ಸಮಾರಾಧನೆ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಲಿಂ. ಕೊಂಡಜ್ಜಿ ತೋಟಪ್ಪನವರ ಮಕ್ಕಳಾದ ಹರಿಹರದ ಕೊಂಡಜ್ಜಿ ಪಂಚಾಕ್ಷರಿ ಸಹೋದರರು, ಅಬ್ಬಿಗೇರಿ ಹಿರೇಮಠದ ಶಿಷ್ಯ ಸದ್ಭಕ್ತ ಮಂಡಳಿಯವರು ಅನ್ನ ದಾಸೋಹ ಸೇವೆ ಸಲ್ಲಿಸಿದರು.Both change and growth are important in life. -

ಮುಗುಳವಳ್ಳಿ ಗ್ರಾ.ಪಂ ನೂತನ ಅಧ್ಯಕ್ಷೆ ಶೃತಿಉಮೇಶ್ ಅವಿರೋಧ ಆಯ್ಕೆ
ಚಿಕ್ಕಮಗಳೂರು: ತಾಲ್ಲೂಕು ಮುಗುಳವಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಶೃತಿ ಉಮೇಶ್ ಹಾಗೂ ಉಪಾಧ್ಯಕ್ಷರಾಗಿ ಮಾಗಡಿ ಮಲ್ಲೇಶಪ್ಪ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಅಂಕಿಸಂಖ್ಯೆ ಇಲಾಖೆಯ ಅಧಿಕಾರಿ ಶಿವಶಂಕರ್ ಘೋಷಿಸಿದರು.
ಇಂದು ಪಂಚಾಯಿತಿ ಕಚೇರಿಯಲ್ಲಿ ನಡೆದ ಅಧ್ಯಕ್ಷರು-ಉಪಾಧ್ಯಕ್ಷರ ಆಯ್ಕೆಯ ಬಳಿಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್. ದೇವರಾಜಶೆಟ್ಟಿ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡಿ, ಪಂಚಾಯಿತಿಯಲ್ಲಿ ಜನಪರ ಕೆಲಸಗಳನ್ನು ಕೈಗೊಳ್ಳುವ ಮೂಲಕ ಮುಂಬರುವ ತಾ.ಪಂ, ಜಿ.ಪಂ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಬೇಕು. ಈ ನಿಟ್ಟಿನಲ್ಲಿ ಜನರ ಆಶೋತ್ತರಗಳಿಗೆ ಸ್ಪಂದಿಸಿ ಕೆಲಸ ಮಾಡಿ ಎಂದು ಶುಭ ಹಾರೈಸಿದರು.
ಪಂಚಾಯಿತಿಯಲ್ಲಿ ಸುಸಜ್ಜಿತ ಗ್ರಾಮ ಪಂಚಾಯಿತಿ ಕಚೇರಿ ಕಟ್ಟಡ ನಿರ್ಮಾಣ ಮಾಡಲು ನಿರ್ಣಯ ಮಾಡಿ ಎಂದು ಸಲಹೆ ಮಾಡಿದ ಅವರು, ನಗರಕ್ಕೆ ಸಮೀಪ ಇರುವ ಈ ಗ್ರಾ.ಪಂ ಗೆ ಬಹಳ ದೊಡ್ಡ ಪ್ರಮಾಣದಲ್ಲಿ ರೆವಿನ್ಯೂ ಬರುತ್ತದೆ, ಈಗಾಗಲೇ ಪಂಚಾಯಿತಿ ವ್ಯಾಪ್ತಿಯಲ್ಲಿ ಲೇಔಟ್ ಪ್ರಾರಂಭವಾಗಿವೆ ಎಂದರು.
ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಇಂದು ಶಾಲು, ಹಾರ ಹಾಕಿ ಗೌರಿವಿಸುತ್ತಿದ್ದಾರೆ, ಅದು ಇವತ್ತಿಗೆ ಮಾತ್ರ, ನಾಳೆ ಕೆಲಸ ಮಾಡಲಿಲ್ಲ ಎಂದಾದರೆ ಬಯ್ಯುತ್ತಾರೆ, ಸಿಕ್ಕಿರುವ ಅಲ್ಪಾವಧಿಯಲ್ಲಿ ಸಮಾಜದ ಎಲ್ಲಾ ವರ್ಗದ ಜನರ ವಿಶ್ವಾಸ ಗಳಿಸಿ ಉತ್ತಮ ಕೆಲಸವನ್ನು ಮಾಡಿ ಎಂದು ಹೇಳಿದರು.
ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಮಾತನಾಡಿ, ಅಧಿಕಾರ ವಿಕೇಂದ್ರಿಕರಣ ಜಾರಿಯಾದ ಪರಿಣಾಮ ಇಂದು ಸಮಾನವಾಗಿ ಎಲ್ಲರಿಗೂ ಅಧಿಕಾರ ಸಿಗಲು ಸಾಧ್ಯವಾಗಿದೆ, ಈ ನಿಟ್ಟಿನಲ್ಲಿ ರಾಜಕೀಯ ಹಿನ್ನೆಲೆ ಇಲ್ಲದ ಶೃತಿ ಉಮೇಶ್ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಮಲ್ಲೇಶಪ್ಪ ಆಯ್ಕೆಯಾಗಿದ್ದಾರೆ ಎಂದರು.
ಗ್ರಾಮ ಪಂಚಾಯಿತಿಗಳು ಪ್ರಜಾಪ್ರಭುತ್ವದ ಬೇರು ಇದ್ದ ಹಾಗೆ, ಪಂಚಾಯಿತಿ ಮೂಲಕ ನಾಗರೀಕರಿಗೆ ದೊರೆಯಬಹುದಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಸ್. ನಿರಂಜನ್ ಮಾತನಾಡಿ, ರೆಸಾರ್ಟ್ ಸಂಸ್ಕೃತಿ, ಪ್ರವಾಸದಿಂದ ಹೊರತುಪಡಿಸಿ ಮುಗುಳವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು-ಉಪಾಧ್ಯಕ್ಷರ ಆಯ್ಕೆ ವಿಶೇಷವಾಗಿದೆ. ಸದಸ್ಯರು ಪಕ್ಷದ ಒಪ್ಪಂದದಂತೆ ನಡೆದುಕೊಂಡು ಒಗ್ಗಟ್ಟು ಪ್ರದರ್ಶಿಸಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದು ಶ್ಲಾಘಿಸಿದರು.
ಅಧ್ಯಕ್ಷ ಸ್ಥಾನ ಮುಳ್ಳಿನ ಹಾಸಿಗೆ ಇದ್ದಂತೆ, ಅದನ್ನು ಪದವಿ ಎಂದು ಭಾವಿಸದೆ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಸಮಾಧಾನದಿಂದ ಅಭಿವೃದ್ಧಿ ಕಾರ್ಯ ಕೈಗೊಳ್ಳಿ. ಜೊತೆಗೆ ಪಂಚಾಯಿತಿಗೆ ತಮ್ಮ ಸಮಸ್ಯೆಗಳನ್ನು ಹೊತ್ತು ಬರುವ ನಾಗರೀಕರೊಂದಿಗೆ ಸೌಜನ್ಯದಿಂದ ವರ್ತಿಸಿ ಆದ್ಯತೆ ಮೇರೆಗೆ ಅವರ ಕೆಲಸ ಮಾಡಿಕೊಡಿ ಎಂದು ಕಿವಿಮಾತು ಹೇಳಿದರು.
ಬಿಜೆಪಿ ಎಸ್‌ಸಿ ಮೋರ್ಚಾ ಮುಖಂಡ ಕೆ.ಪಿ. ವೆಂಕಟೇಶ್ ಮಾತನಾಡಿ, ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಿಂದ ಬರುವ ಸಾರ್ವಜನಿಕರು ತಮ್ಮ ವಿವಿಧ ರೀತಿಯ ಸಮಸ್ಯೆಗಳನ್ನು ಹೇಳಿದಾಗ ಸಮರ್ಪಕವಾಗಿ ಸ್ಪಂದಿಸಿ ಸಿಕ್ಕಿರುವ ಕಾಲಾವಕಾಶದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಪುಷ್ಪರಾಜ್, ಯೋಗೀಶ್, ಪರಮೇಶ್, ವಿಜಯಕುಮಾರ್, ದಿನೇಶ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಸವಿತ, ಉಮೇಶ್, ವನಿತ, ರಘುನಂದನ್, ಕಲಾವತಿ, ಶೇಖರ್, ಭಾಗ್ಯ, ಪಿಡಿಓ ಸುಮ ಮತ್ತಿತರರು ಉಪಸ್ಥಿತರಿದ್ದರು. ಮೊದಲಿಗೆ ರಾಜು ಸ್ವಾಗತಿಸಿದರು.
Shruti Umesh elected unopposed as new president of Mugulavalli Gram Panchayat
-

ಜೆವಿಎಸ್ ಶಾಲೆ ಪಠ್ಯ ಚಟುವಟಿಕೆಗೆ ಸೀಮಿತವಾಗಿಲ್ಲ
ಚಿಕ್ಕಮಗಳೂರು: ನಗರದ ಜೆವಿಎಸ್ ಶಾಲೆಯಲ್ಲಿ ಪಠ್ಯ ಚಟುವಟಿಕೆಗಳಿಗೆ ಸೀಮಿತವಾಗಿ ಪಾಠ-ಪ್ರವಚನ ನಡೆಸದೆ ಪ್ರಪಂಚದಲ್ಲಿ ನಡೆಯುವ ವ್ಯವಹಾರ, ಎಲ್ಲಾ ವಿದ್ಯಮಾನಗಳ ಬಗ್ಗೆ ಕಲಿಸಿದ್ದೇವೆಂದು ಭಾವಿಸಿದ್ದೇನೆ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ತಿಳಿಸಿದರು.
ಅವರು ಇಂದು ಜೆವಿಎಸ್ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಶಾರದಾ ಪೂಜಾ ಕಾರ್ಯಕ್ರಮ ಹಾಗೂ ಪ್ರವೇಶ ಪತ್ರ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಇದೊಂದು ಮರೆಯಲಾಗದ ಕಾಲಘಟ್ಟ. ಒಂದು ಹಂತ ಮುಗಿಸಿ ಮುಂದಿನ ಶಿಕ್ಷಣಕ್ಕೆ ಹೆಜ್ಜೆ ಇಡಲು ತಯಾರಿ ನಡೆಸುತ್ತಿದ್ದೀರಿ. ಶುಕ್ರವಾರದಿಂದ ಆರಂಭವಾಗುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಯಲ್ಲಿ ಬರುವ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗದೆ, ಭಯಪಡದೆ ಧೈರ್ಯದಿಂದ ಪರೀಕ್ಷೆ ಬರೆಯಿರಿ ಎಂದು ಕರೆ ನೀಡಿದರು.
ಎಲ್‌ಕೆಜಿ ಯಿಂದ ಹತ್ತನೇ ತರಗತಿವರೆಗೆ ಜೆವಿಎಸ್ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಹೋಗುತ್ತಾರೆ ಎಂಬ ಬಗ್ಗೆ ನಮಗೆ ಭಾವನೆ ಇದೆ. ಆದರೂ ಮುಂದಿನ ನಿಮ್ಮ ವ್ಯಾಸಂಗ ಉತ್ತಮ ಭವಿಷ್ಯದ ಕಡೆ ಇರಲಿ ಎಂದು ಹಾರೈಸಿದರು.
ವಿದ್ಯಾರ್ಥಿಗಳು ಪೋಷಕರ, ಶಿಕ್ಷಕರ, ಶಾಲೆಯ ಹೆಸರು ಉಳಿಸುವ ನಿಟ್ಟಿನಲ್ಲಿ ಸದಾ ವ್ಯಾಸಂಗದ ಕಡೆ ಹೆಚ್ಚು ಗಮನ ಹರಿಸಿ, ಋಣಾತ್ಮಕ ಆಲೋಚನೆಗಳಿಗೆ ಆಸ್ಪದ ಕೊಡದೆ ಧನಾತ್ಮಕ ಆಲೋಚನೆಗಳಿಗೆ ಒತ್ತುನೀಡಿ ಪರಿಶ್ರಮದಿಂದ ವಿದ್ಯಾರ್ಜನೆ ಮಾಡಿ ಎಂದು ಹೇಳಿದರು.
ಕಾರ್ಯದರ್ಶಿ ಪ್ರದೀಪ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಕಲರ್ ಡ್ರೆಸ್‌ನಲ್ಲಿ ಬಂದು ಇಡೀ ವರ್ಷ ವ್ಯಾಸಂಗ ಮಾಡಿದ ಈ ದಿನ ಶುಭದಿನದಂದು ಶಾರದಾದೇವಿ ಪೂಜೆ ಮಾಡಿ ಆಶೀರ್ವಾದ ಪಡೆದು ಪರೀಕ್ಷೆ ಬರೆಯಲು ಸಿದ್ದರಾಗಿದ್ದೀರಿ ಎಂದು ಭಾವಿಸಿದ್ದೇನೆ ಎಂದರು.
ಪ್ರತೀ ಕೆಲಸಕ್ಕೂ ಒಂದೊಂದು ದೇವತೆಗಳಿದ್ದು ಇವರನ್ನು ಪೂಜಿಸುವ ಮೂಲಕ ಕೆಲಸದಲ್ಲಿ ಯಶಸ್ಸು ಸಿಗಲಿ ಎಂದು ಪ್ರಾರ್ಥಿಸುತ್ತೇವೆ. ವಿಧ್ಯೆಗೆ ಸರಸ್ವತಿ, ಬೇರೆ ಕೆಲಸಕ್ಕೆ ಗಣಪತಿ, ಹಣಕ್ಕೆ ಲಕ್ಷ್ಮಿ ಹೀಗೆ ಹಲವಾರು ವೈವಿದ್ಯತೆ ಉಳ್ಳ ಭಾರತದಲ್ಲಿ ಜೀವಿಸುವ ನಮಗೆ ಇವೆಲ್ಲಾ ಒಂದು ಪಾಠ ಎಂದು ಹೇಳಿದರು.
ಸಾತ್ವಕ ಆಹಾರ ಸೇವಿಸಿ ಮಾನಸಿಕ ದೃಢತೆಯಿಂದ ಬುದ್ಧಿಶಕ್ತಿಯನ್ನು ಉಪಯೋಗಿಸಿ ಎಂದು ಹೇಳಿದ ಅವರು ಅಜ್ಞಾನ ನಮ್ಮನ್ನು ತಿನ್ನುತ್ತೆ ಎಂಬುದನ್ನು ಮನಗಂಡು ಪರೀಕ್ಷೆಯನ್ನು ಎದುರಿಸಿ ಎಂದು ಹಾರೈಸಿದರು.
ಇಂದೇ ಸರಸ್ವತಿ ಮುಂದೆ ಸಂಕಲ್ಪ ಮಾಡಿ ನಾವು ಮುಂದೇನಾಗಬೇಕೆಂದು ನಿರ್ಧರಿಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುವ ಮೂಲಕ ಶಾಲೆ, ಶಿಕ್ಷಕರಿಗೆ, ಪೋಷಕರಿಗೆ ಹೆಸರು ತನ್ನಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಸಿಇಓ ಕುಳ್ಳೇಗೌಡ, ವ್ಯವಸ್ಥಾಪಕ ತೇಜಸ್ ಮೂರ್ತಿ, ಕಾಲೇಜು ಪ್ರಾಂಶುಪಾಲೆ ತೇಜಸ್ವಿನಿ, ಮುಖ್ಯ ಶಿಕ್ಷಕ ವಿಜಿತ್, ಶಿಕ್ಷಕರಾದ ಪ್ರೀತಿ, ಪ್ರಮೀಳ, ಶ್ರೀಲತಾ ಮತ್ತಿತರರು ಉಪಸ್ಥಿತರಿದ್ದರು.
Admission letter distribution program at JVS School
-

ಸೂರ್ಯನ ತಾಪಮಾನ ತಡೆಯಲು ಆರೋಗ್ಯ ಸಲಹೆ
ಚಿಕ್ಕಮಗಳೂರು: ಈ ವರ್ಷ ಬೇಸಿಗೆಯಲ್ಲಿ ಸೂರ್ಯನ ತಾಪಮಾನ ಎಂದಿಗಿಂತ ಹೆಚ್ಚು ಇರಲಿದೆ ಎಂದು ಅಂದಾಜಿಸಲಾಗಿದೆ. ಸಾರ್ವಜನಿಕರು ಆರೋಗ್ಯ ಇಲಾಖೆಯ ಸೂಚನೆಗಳನ್ನು ಪಾಲಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್ಥಬಾಬು ತಿಳಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರು ಅವರು ಬಿಸಿಗಾಳಿ ಹಾಗೂ ನಿರಂತರವಾಗಿ ನಿಸರ್ಗದಲ್ಲಿ ಬದಲಾಗುವ ವಾತಾವರಣದಿಂದ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಬಿಸಿಗಾಳಿ ಮತ್ತು ಸನ್ ಸ್ಟ್ರೋಕ್ ಹೆಚ್ಚಾಗಿ ಕಂಡು ಬರುತ್ತದೆ. ದೇಹದಲ್ಲಿರುವ ಉಷ್ಣಾಂಶಕ್ಕಿಂತ ತಾಪಮಾನ ಏರಿಕೆ ಉಂಟಾದಾಗ ಹೆಚ್ಚು ಬೆವರು, ಸುಸ್ತು, ಬಾಯಾರಿಕೆ, ತಲೆಸುತ್ತುವುದು, ಕಣ್ಣು ಮಂಜಾಗು ವುದು ಕಂಡು ಬರುತ್ತದೆ. ಜೊತೆಗೆ ನಿರ್ಜಲೀಕ ರಣದಿಂದ ಮೂರ್ಛೆ ಬರಬಹುದು. ಆದ್ದರಿಂದ ಪ್ರತಿಯೊ ಬ್ಬರೂ ಪ್ರಖರ ಬಿಸಿಲಿನಿಂದ ಆದಷ್ಟು ದೂರವಿರಬೇಕು ಎಂದು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.
ಬೆಳಿಗ್ಗೆ ೧೧ರಿಂದ ಸಂಜೆ ೪ರ ತನಕ ಹೆಚ್ಚಿನ ತಾಪಮಾನವಿದ್ದು, ಗರ್ಭಿಣಿಯರು, ಮಕ್ಕಳು, ವೃದ್ಧರು ಮನೆಯಿಂದ ಹೊರಗೆ ಬರುವುದನ್ನು ಆದಷ್ಟು ಕಡಿಮೆ ಮಾಡಬೇಕು. ಸಡಿಲವಾದ ಕಾಟನ್ ಬಟ್ಟೆ, ಕೂಲಿಂಗ್ ಗ್ಲಾಸ್ ಧರಿಸಬೇಕು. ಹೆಚ್ಚಾಗಿ ನೀರು ಕುಡಿಯಬೇಕು ಎಂದು ತಿಳಿಸಿದ್ದಾರೆ.
ಕೆಲಸದ ಸ್ಥಳದಲ್ಲಿ ಕೆಲಸಗಾರರಿಗೆ ಕುಡಿಯಲು ತಣ್ಣನೆಯ ನೀರಿನ ವ್ಯವಸ್ಥೆ ಮಾಡಬೇಕು. ಪ್ರತಿ ೨೦ ನಿಮಿಷಗಳಿಗೊಮ್ಮೆ ಒಂದು ಗ್ಲಾಸ್ ಅಥವಾ ಅದಕ್ಕಿಂತ ಹೆಚ್ಚು ನೀರು ಕುಡಿಯಬೇಕು. ಕೆಲಸಗಾರರು ನೇರವಾದ ಸೂರ್ಯನ ಬೆಳಕಿನಲ್ಲಿ ಕೆಲಸ ನಿರ್ವಹಿಸದಂತೆ ಎಚ್ಚರ ವಹಿಸಬೇಕು.
ಕೆಲಸಗಾರರಿಗೆ ನೆರಳಿ ನಲ್ಲಿ ಕೆಲಸ ಮಾಡಲು ಅನುಕೂಲ ಆಗುವಂತೆ, ತಾತ್ಕಾಲಿಕ ಶೆಡ್ ನಿರ್ಮಿಸಬೇಕು. ಬೆಳಗಿನ ಅಥವಾ ಸಂಜೆಯ ಸಮಯದಲ್ಲಿ ನಿರ್ವಹಿಸುವಂತೆ ವೇಳಾಪಟ್ಟಿ ಸಿದ್ಧಗೊಳಿ ಸಬೇಕು ಎಂದು ಸಲಹೆ ನೀಡಿದ್ದಾರೆ.
ಹೊರಾಂಗಣ ಚಟುವಟಿಕೆಗಳ ಸಂದ ರ್ಭದಲ್ಲಿ ಕೆಲಸಗಾರರಿಗೆ ಪ್ರತಿ ೧ ಗಂಟೆಗೆ ೫ನಿಮಿಷಗಳ ಬಿಡುವು ನೀಡಬೇಕು. ರೇಡಿಯೊ, ಟಿ.ವಿ, ದಿನಪತ್ರಿ ಕೆಗಳು, ಹವಾಮಾನ ಇಲಾಖೆಯ ಜಾಲ ತಾಣದ ಮೂಲಕ ಮಾಹಿತಿ ಪಡೆಯಬ ಹುದು ಎಂದು ವಿವರಿಸಿದ್ದಾರೆ.
ಹೊರಾಂಗಣದಲ್ಲಿ ಕೆಲಸ ನಿರ್ವಹಿಸುವವರು ಹೆಚ್ಚಾಗಿ ತಿಳಿ ಬಣ್ಣದ ತುಂಬು ತೋಳಿನ ಅಂಗಿ ಹಾಗೂ ಪ್ಯಾಂಟ್ ಧರಿಸಬೇಕು ಎಂದು ಅಶ್ವತ್ಥಬಾಬು ಸಲಹೆ ನೀಡಿದ್ದಾರೆ. ಸೂರ್ಯನ ಶಾಖದಿಂದ ರಕ್ಷಿಸಿಕೊಳ್ಳಲು ತಲೆಯ ಭಾಗವನ್ನು ಮುಚ್ಚಿಕೊಳ್ಳಬೇಕು. ಬಿಸಿಗಾಳಿ ಮತ್ತು ಉಷ್ಣತೆಯ ಒತ್ತಡದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಕುರಿತು ಕೆಲಸಗಾರರಲ್ಲಿ ಅರಿವು ಮೂಡಿಸಲು ಶಿಬಿರಗಳನ್ನು ಆಯೋಜಿಸಬೇಕು.
ತಾಪಮಾನ ಹಾಗೂ ಮುನ್ಸೂಚನೆ ಕುರಿತು ಮಾಹಿತಿ ನೀಡುವ ವ್ಯವಸ್ಥೆಯನ್ನು ಕೆಲಸದ ಸ್ಥಳಗಳಲ್ಲಿ ಅಳವಡಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Health tips to prevent sunstroke
-

ಮಾದಕ ವಸ್ತುಗಳ ಸೇವನೆ ಆರೋಗ್ಯದ ಮೇಲೆ ದುಷ್ಪರಿಣಾಮ
ಚಿಕ್ಕಮಗಳೂರು: ಮಾದಕ ವಸ್ತುಗಳ ಸೇವನೆಗೆ ಒಳಗಾದರೆ ಅದರಿಂದ ಹೊರಬರುವುದು ಕಷ್ಟ ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವತ್ ಬಾಬು ಹೇಳಿದರು.
ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿಕ್ಕಮಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಚಿಕ್ಕಮಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಡಾ|| ಬಿ.ಆರ್. ಅಂಬೇಡ್ಕರ್ ಪದವಿ ಕಾಲೇಜು ಬಾಲಕರ ವಿದ್ಯಾರ್ಥಿನಿಲಯದಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ವ್ಯಸನದಿಂದಾಗುವ ದುಷ್ಪರಿಣಾಮ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ದುಶ್ಚಟಗಳು ವ್ಯಕ್ತಿಯ ಬದುಕು, ಕುಟುಂಬ ಮಾತ್ರವಲ್ಲದೆ ಸಮಾಜದ ಮೇಲೂ ನೇರ ಪರಿಣಾಮ ಬೀರುತ್ತದೆ. ಮಾದಕ ವಸ್ತು ಸೇವನೆ ವ್ಯಕ್ತಿಯ ಮೆದುಳು, ದೈಹಿಕ, ಮಾನಸಿಕ ಆರೋಗ್ಯ ಹಾಗೂ ಸಾಮಾಜಿಕ ಬದುಕಿಗೂ ಮಾರಕವಾಗಿದೆ. ಆರಂಭದಲ್ಲಿ ಕುತೂಹಲ ಅಥವಾ ಸ್ನೇಹಿತರ ಒತ್ತಡದಿಂದ ತೊಡಗುವ ಮದ್ಯ ಅಥವಾ ಕಡಿಮೆ ಬೆಲೆಗೆ ಸಿಗುವ ಪಾನ್ ವಸ್ತುಗಳ ಸೇವನೆ ಕೊನೆಗೆ ಮಾರಕ ಗಾಂಜಾ, ಅಫೀಮು, ಕೊಕೇನ್ ದಾಸರನ್ನಾಗಿಸುತ್ತದೆ. ಮೆದುಳಿನಲ್ಲಿ ಬದಲಾವಣೆ ತಂದು ಇನ್ನ? ಸೇವಿಸುವಂತೆ ಪ್ರೇರೇಪಿಸಿ ಕೊನೆಗೆ ವ್ಯಸನಿಗಳನ್ನಾಗಿಸುತ್ತದೆ. ಅಪರಾಧ ಕೃತ್ಯಗಳಿಗೆ ಪ್ರಚೋದನೆ ನೀಡುವ ವ್ಯಸನ ಅಪಘಾತಗಳಿಗೂ ಕಾರಣವಾಗುವುದು ಎಂದು ಹೇಳಿದರು.
ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಹೆಚ್.ಸಿ, ಪ್ರಶಾಂತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಮಾದಕ ದ್ರವ್ಯಗಳನ್ನು ವಿತರಿಸುವ ಜಾಲವನ್ನು ಮಟ್ಟ ಹಾಕಲು ಕಾನೂನಿನೊಂದಿಗೆ ಸಹಕರಿಸುವುದು, ಮಾದಕ ವಸ್ತುಗಳನ್ನು ಬಳಸುತ್ತಿರುವವರಿಗೆ ಅವುಗಳ ಮಾರಕ ಪರಿಣಾಮದ ಕುರಿತು ತಿಳುವಳಿಕೆ ನೀಡಿ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಹಾಗೂ ಯುವ ಜನತೆ ಮುಂದಾಗಬೇಕು. ಇತ್ತೀಚಿನ ದಿನಗಳಲ್ಲಿ ಅಮಲು ಪದಾರ್ಥ ಸೇವನೆ ಇಂದಿನ ಯುವ ಜನಾಂಗದಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವುದು ಆತಂಕ ಮೂಡಿಸುತ್ತಿದ್ದು, ಈ ದೃಷ್ಟಿಯಿಂದ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿ, ಇಂತಹ ವ್ಯಸನಗಳ ಸೇವನೆ ಒಂದು ರೀತಿಯ ಫ್ಯಾ?ನ್ ಎಂಬುದಾಗಿ ತಿಳಿದ ಯುವಕರು ಮಾದಕ ವಸ್ತುಗಳತ್ತ ಆಕರ್ಷಿತರಾಗಿ ನಿರಂತರ ಉಪಯೋಗಕ್ಕೆ ತೊಡಗುತ್ತಾರೆ. ಇಂತಹ ಕಾರ್ಯಕ್ರಮ ಆಯೋಜನೆಯಿಂದ ಜಾಗೃತಿ ಮೂಡಿಸಲು ಸಾಧ್ಯ. ಜೀವನದ ಗುರಿ ಹಾಗೂ ಹಾದಿ ತಪ್ಪಿಸುವ ಮಾದಕ ವ್ಯಸನ ಹಾಗೂ ವ್ಯಸನಿಗಳಿಂದ ದೂರವಿದ್ದು ಉತ್ತಮ ಹವ್ಯಾಸಗಳನ್ನು ಬೆಳೆಸಿ ಉತ್ತಮ ಭವಿ? ರೂಪಿಸಿಕೊಳ್ಳಿ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಾನಸಿಕ ಆರೋಗ್ಯ ತಜ್ಞರು ಡಾ|| ವಿನಯ್ ಕುಮಾರ್ ಕಾರ್ಯಕ್ರಮದಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ಸೇವನೆಯಿಂದಾಗು ದುಷ್ಪರಿಣಾಮಗಳ ಕುರಿತು ಉಪನ್ಯಾಸ ನೀಡಿದರು. ಮಾದಕ ವಸ್ತುಗಳ ಉಪಯೋಗ ಸಾಮಾನ್ಯವಾಗಿ ಪ್ರಪಂಚಾದ್ಯಂತ ಕಂಡು ಬರುವ ಒಂದು ದೊಡ್ಡ ಪಿಡುಗು. ಇದು ಗಂಡು-ಹೆಣ್ಣು, ಬಡವ-ಶ್ರೀಮಂತ ಎನ್ನುವ ಯಾವುದೇ ಭೇದ-ಭಾವವಿಲ್ಲದೆ ಎಲ್ಲೆಡೆಯೂ ಕಂಡು ಬರುವ ತೊಂದರೆ. ಸಾಮಾನ್ಯವಾಗಿ ಉಪಯೋಗಿಸುವ ಮಾದಕ ವಸ್ತುಗಳು: ಮದ್ಯ ತಂಬಾಕು, ಗಾಂಜಾ, ಕೋಕೇನ್, ನಿದ್ದೆ ಮಾತ್ರೆಗಳು, ಮಾದಕ ವಸ್ತುಗಳ ಚಟವು ವ್ಯಕ್ತಿಯ ಮೆದುಳಿನ ಮೇಲೆ ದೀರ್ಘ ಕಾಲದ ಮತ್ತು ಪ್ರಭಾವಿ ಪರಿಣಾಮ ಬೀರುತ್ತದೆ. ಮಾದಕ ವಸ್ತುಗಳ ಸೇವನೆಯ ತವಕ/ಹಪಹಪಿಸುವಿಕೆ, ಮಾದಕ ವಸ್ತುಗಳ ಸೇವನೆ ಮೇಲೆ ನಿಯಂತ್ರಣ ತಪ್ಪಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು, ಮಾದಕ ವಸ್ತುಗಳ ದು?ರಿಣಾಮಗಳಾಗುತ್ತಿದ್ದರೂ ಅದರ ಸೇವನೆ ಹಾಗೂ ಉಪಯೋಗ ಮುಂದುವರಿಸುವುದು. ವ್ಯಕ್ತಿಯು ತನ್ನ ಜವಾಬ್ದಾರಿಗಳನ್ನು ನಿರ್ಲಕ್ಷಿಸಲಾರಂಭಿಸುತ್ತಾನೆ.
ಶಾಲೆಗೆ ಮತ್ತು ಕಾಲೇಜಿಗೆ ಚಕ್ಕರ್ ಹೊಡೆದು ಮಾದಕ ವಸ್ತು ಬಳಸಲು ಹೋಗುವುದು ಕೆಲಸಕ್ಕೆ ಗೈರು ಹಾಜರಾಗುವುದು ಕೆಲಸ ಅರ್ಧಕ್ಕೆ ಬಿಟ್ಟು ಹೋಗುವುದು ಹೆಂಡತಿ ಮಕ್ಕಳನ್ನು ನಿರ್ಲಕ್ಷಿಸುವುದು ಮನೆ ಖರ್ಚಿಗೆ ದುಡ್ಡು ಕೊಡದೆ ಅದನ್ನು ಮಾದಕ ವಸ್ತುಗಳ ಖರೀದಿಯಲ್ಲಿ ಉಪಯೋಗಿಸುವುದು ಸಾಮಾಜಿಕ ಜವಾಬ್ದಾರಿಗಳನ್ನು ನಿರ್ಲಕ್ಷಿಸುವುದು.
ವ್ಯಕ್ತಿಯು ಅಪಾಯಕಾರಿ ಸನ್ನಿವೇಶಗಳಲ್ಲಿ ಮಾದಕ ವಸ್ತುಗಳನ್ನು ಬಳಸಲಾರಂಭಿಸುತ್ತಾನೆ ಹಾಗೂ ಮಾದಕ ವಸ್ತುವಿನ ಮತ್ತಿನಲ್ಲಿರುವಾಗ ಅಪಾಯಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮಾದಕ ವಸ್ತುಗಳನ್ನು ಬಳಸಿ ವಾಹನ ಚಲಾಯಿಸುವುದು, ಒಂದೇ ಸಿರಿಂಜಿನಲ್ಲಿ ಎಲ್ಲರೂ ಸೇರಿ ಇಂಜೆಕ್ಷನ್ ತೆಗೆದುಕೊಳ್ಳುವುದು, ಮಾದಕ ವಸ್ತು ತೆಗೆದುಕೊಳ್ಳಲು ಬಳಸಿದ ಸೂಜಿಯನ್ನೇ ಪದೇಪದೆ ಬಳಸುವುದು, ಇವುಗಳಿಂದ ಹಲವಾರು ತೊಂದರೆಗೆ ತುತ್ತಾಗುತ್ತಾರೆ. ಆದರಿಂದ ಇವುಗಳನ್ನು ತ್ಯಜೀಸಿ ಉತ್ತಮ ಜೀವನ ರೂಪಿಸಿಕೊಳ್ಳಿ ಎಂದು ಹೇಳಿದರು.
ಜಿಲ್ಲಾ ಗ್ರಂಥಾಲಯ ಅಧಿಕಾರಿ ಉಮೇಶ್ ಅನಾದಿ ಕಾಲದಿಂದಲೂ ಮಾದಕ ವಸ್ತುಗಳನ್ನು ಜನರು ಬಳಸುತ್ತಿದ್ದರು. ಆದರೆ ಅವು ಕೇವಲ ಮೋಜು ಅಥವಾ ಸಾಮಾಜಿಕ ಸಮಾರಂಭಗಳಲ್ಲಿ ಬಳಕೆಯಾಗುತ್ತಿದ್ದವು ಮತ್ತು ಅವುಗಳು ಮದ್ಯ, ಹೊಗೆಸೊಪ್ಪು, ಗಾಂಜಾ ಇತ್ಯಾದಿಗಳಿಗೆ ಸೀಮಿತವಾಗಿದ್ದವು.
ಸಮಯ ಕಳೆದಂತೆ ಹೊಸ-ಹೊಸ ರಾಸಾಯನಿಕ ಮಾದಕ ವಸ್ತುಗಳನ್ನು ತಯಾರಿಸಲಾಯಿತಲ್ಲದೇ, ಅವುಗಳನ್ನು ಉಪಯೋಗಿಸಲು ಹೊಸ ಹೊಸ ವಿಧಾನಗಳನ್ನೂ ಕೂಡ ಜನ ಅನ್ವೇಷಿಸತೊಡಗಿದರು. ಇದು ಒಂದು ಬೃಹತ್ ಮಾರುಕಟ್ಟೆಯಾಗಿ ಬೆಳೆದು ನಿಂತು ಜನರ ದೈಹಿಕ, ಮಾನಸಿಕ ಆರೋಗ್ಯ ಹದಗೆಟ್ಟಿಸಿತ್ತಲ್ಲದೆ, ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ತೊಡಕುಂಟು ಮಾಡತೊಡಗಿತು. ಇದರಿಂದ ಜನರ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತಲೆ ಇದೆ. ಇನ್ನಾದರೂ ಜನರು ಇವುಗಳ ವ್ಯಸನದಿಂದ ಮುಕ್ತರಾಗಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜೆ. ಮಂಜೇಗೌಡ ಎಲ್ಲಾರನ್ನು ಸ್ವಾಗತಿಸಿ, ಜಿಲ್ಲಾ ಗ್ರಂಥಾಲಯ ಪಾಲಕ ಮಹೇಶ್ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿದೇಶಕರು (ಗೇಡ್-೧) ರೇವಣ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಮಂಜುನಾಥ್, ಡಾ. ಬಿ.ಆರ್. ಅಂಬೇಡ್ಕರ್ ಪದವಿ ಕಾಲೇಜು ಬಾಲಕರ ವಿದ್ಯಾರ್ಥಿನಿಲಯದ ನಿಲಯ ಪಾಲಕ ಶಿವಶಂಕರ್, ಹಾಗೂ ವಿದ್ಯಾರ್ಥಿಗಳು ಮುಂತಾದವರು ಉಪಸ್ಥಿತರಿದ್ದರು.
Drug use has adverse effects on health
-

ಪ್ರವಾಸಿಗರು ಪೊಲೀಸ್ ಇಲಾಖೆಯ ಮಾರ್ಗಸೂಚಿ ಖಡ್ಡಾಯವಾಗಿ ಪಾಲಿಸಬೇಕು
ಚಿಕ್ಕಮಗಳೂರು: ಪ್ರವಾಸಿಗರು ಹಾಗೂ ಅತಿಥಿಗಳ ಭದ್ರತೆ ಮತ್ತು ಸುರಕ್ಷತೆ ದೃಷ್ಠಿಯಿಂದ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ಮಾರ್ಗಸೂಚಿಗಳನ್ನು ಖಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಡಾ.ವಿಕ್ರಮ ಅಮಟೆ ಅವರು ಜಿಲ್ಲೆಯ ಎಲ್ಲಾ ಹೋಂಸ್ಟೇ, ರೆಸಾರ್ಟ್ ಮತ್ತು ಲಾಡ್ಜ್ ಮಾಲೀಕರಿಗೆ ಸೂಚನೆ ನೀಡಿದರು.
ಅವರು ಇಂದು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಜಿ.ಪಂ. ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲೆಯ ಹೋಂಸ್ಟೇ, ರೆಸಾರ್ಟ್, ಲಾಡ್ಜ್‌ಗಳ ಮಾಲೀಕರು ಮತ್ತು ವ್ಯವಸ್ಥಾಪಕರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಜಿಲ್ಲೆಯಲ್ಲಿನ ಎಲ್ಲಾ ಪ್ರವಾಸಿ ತಾಣಗಳಲ್ಲಿನ ಹೋಂಸ್ಟೇಗಳು ರೆಸಾರ್ಟ್ ಮತ್ತು ಲಾಡ್ಜ್‌ಗಳಲ್ಲಿ ವಿದೇಶಿ ಪ್ರವಾಸಿಗರನ್ನು ಒಳಗೊಂಡಂತೆ ಎಲ್ಲಾ ಪ್ರವಾಸಿಗರ ಭದ್ರತೆ ಮತ್ತು ಸುರಕ್ಷತೆಯ ಸಂಬಂಧ ಸೂಕ್ತ ಕ್ರಮಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಹೊರ ವಲಯಗಳಲ್ಲಿ ಅಥವಾ ನಿರ್ಜನ ಪ್ರದೇಶಗಳಿಗೆ ಪ್ರವಾಸಿಗರನ್ನು ಕರೆದೊಯ್ಯುವ ಮುಂಚಿತವಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಅನುಮತಿ ಪಡೆಯಬೇಕು. ಅನುಮತಿಯಿಲ್ಲದೆ ಪ್ರವಾಸಿಗರನ್ನು ಕರೆದೊಯ್ದಲ್ಲಿ ದುಷ್ಕರ್ಮಿಗಳಿಂದ ಅಥವಾ ಕಾಡುಪ್ರಾಣಿಗಳಿಂದ ಸಂಭವಿಸುವ ದುರ್ಘಟನೆಗಳಿಗೆ ಸಂಬಂಧಪಟ್ಟ ಆಯಾ ಹೋಂಸ್ಟೇ, ರೆಸಾರ್ಟ್ ಅಥವಾ ಲಾಡ್ಜ್ ಮಾಲೀಕರುಗಳೆ ಜವಾಬ್ದಾರರಲ್ಲದೆ, ಶಿಕ್ಷಾರ್ಹ ಅಪರಾಧಕ್ಕೆ ಒಳಪಡುತ್ತಾರೆ ಎಂದು ಎಚ್ಚರಿಸಿದರು.
ಹೋಂ ಸ್ಟೇಗಳು, ರೆಸಾರ್ಟ್‌ಗಳಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಡ್ರಗ್ಸ್ ಮತ್ತು ಮಾದಕ ವಸ್ತುಗಳ ಬಳಕೆ ಕಡ್ಡಾಯವಾಗಿ ನಿಷೇಧಿಸಿ, ಅತಿಥಿಗಳಿಗೆ ಗೋಚರಿಸುವಂತೆ ಫಲಕಗಳನ್ನು ಅಳವಡಿಸಬೇಕು. ಪರವಾನಗಿ ಇಲ್ಲದೆ ಮದ್ಯ ಮಾರಾಟ ಮಾಡಬಾರದು, ಪಾರ್ಟಿಗಳು, ಇನ್ನಿತರೆ ಕಾರ್ಯಕ್ರಮಗಳಲ್ಲಿ ಮದ್ಯ ಬಳಸುವುದಾದರೆ ಕಾನೂನು ಪ್ರಕಾರ ಸಿಎಲ್ ೫ರ ಪರವಾನಗಿ ಪಡೆದುಕೊಳ್ಳಬೇಕು ಎಂದು ಸೂಚಿಸಿದರು.
ಪ್ರಮುಖವಾಗಿ ಬಾಂಗ್ಲಾ, ಪಾಕಿಸ್ಥಾನದ ಪ್ರಜೆಗಳ ಬಗ್ಗೆ ಗಮನಹರಿಸಬೇಕು. ಇವರೊಂದಿಗೆ ಯಾವುದೇ ವಿದೇಶಿ ಪ್ರಜೆಗಳ ಆಗಮನದ ಬಗ್ಗೆ ತಕ್ಷಣ ಮಾಹಿತಿ ನೀಡಬೇಕು ಎಂದರು.
ಎಲ್ಲಾ ನೌಕರರ ಪೂರ್ವಾಪರ ಪರಿಶೀಲನೆಯ ಮಾಡಬೇಕು. ಸಿಸಿ ಟಿವಿ, ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ದೃಶ್ಯಾವಳಿಗಳನ್ನು ಕನಿಷ್ಠ ಮೂರು ತಿಂಗಳವರೆಗೆ ಸಂಗ್ರಹಿಸಿಡಬೇಕು. ಸುತ್ತಲಿನ ಸಾರ್ವಜನಿಕ ಶಾಂತಿಗೆ ಭಂಗವಾಗದಂತೆ ನೋಡಿಕೊಳ್ಳಬೇಕು. ಪೊಲೀಸ್ ಇಲಾಖೆಯ ಪೂರ್ವಾನುಮತಿಯಿಲ್ಲದೆ ಡಿಜೆ, ಧ್ವನಿವರ್ಧಕಗಳು, ಸಂಗೀತ ವ್ಯವಸ್ಥೆಗಳನ್ನು ಬಳಸಬಾರದು. ವಾಹನದ ವಿವರಗಳು ಸೇರಿದಂತೆ ಎಲ್ಲಾ ಅತಿಥಿಗಳ ಚೆಕ್-ಇನ್ ಮತ್ತು ಚೆಕ್-ಔಟ್ ಸಂಪೂರ್ಣ ಮಾಹಿತಿಯನ್ನು ರಿಜಿಸ್ಟರ್‌ನಲ್ಲಿ ನಮೂದಿಸಬೇಕು. ಭಾವಚಿತ್ರವಿರುವ ಗುರುತಿನ ಚೀಟಿಗಳನ್ನು ಸಂಗ್ರಹಿಸಬೇಕು. ಪೊಲೀಸ್ ಭೇಟಿಯ ಸಮಯದಲ್ಲಿ ಅದನ್ನು ಹಾಜರುಪಡಿಸಬೇಕು ಎಂದರು.
ಸ್ಥಳೀಯ ಪೊಲೀಸ್ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಬೀಟ್ ಕಾನ್‌ಸ್ಟೇಬಲ್‌ಗಳು ಹಠಾತ್ ತಪಾಸಣೆ ನಡೆಸಬೇಕು. ಆಗಾಗ ಮಾಲೀಕರ ಸಭೆ ನಡೆಸಬೇಕು. ವನ್ಯ ಪ್ರಾಣಿಗಳು, ಪರಿಸರಕ್ಕೆ ಹಾನಿ ಉಂಟುಮಾಡುವ ಚಟುವಟಿಕೆಗೆ ಅನುಮತಿಸಬಾರದು. ಕಸ, ತ್ಯಾಜ್ಯ ಹಾಕಿ ಪರಿಸರಕ್ಕೆ ಧಕ್ಕೆ ತರಬಾರದು. ಸುಸ್ಥಿರ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು. ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸುವ ನಾಮಫಲಕವನ್ನು ಅಳವಡಿಸಬೇಕು. ಫೈರ್ ಕ್ಯಾಂಪ್‌ಗಳಿಂದ ಸುತ್ತಲ ಪ್ರದೇಶದಲ್ಲಿ ಶಾಂತಿಗೆ ಭಂಗವಾಗಬಾರದು. ನೈಸರ್ಗಿಕ ಜಲ ಮೂಲಗಳನ್ನು ಹೋಂಸ್ಟೇ, ರೆಸಾರ್ಟ್‌ಗೆ ಬಳಸಬಾರದು. ಅಗತ್ಯವಿದ್ದಲ್ಲಿ ಕಡ್ಡಾಯವಾಗಿ ಸ್ಥಳೀಯ ಅಧಿಕಾರಿಗಳಿಂದ ಅನುಮತಿ ಪಡೆಯಬೇಕು ಎಂದರು.
ಪರವಾನಗಿಯ ಪ್ರತಿಯನ್ನು ಸಾರ್ವಜನಿಕರಿಗೆ ಪ್ರದರ್ಶಿಸಬೇಕು. ಅಗ್ನಿ ಸುರಕ್ಷತಾ ಭದ್ರತಾ ಕ್ರಮಗಳು ಜಾರಿಯಲ್ಲಿರಬೇಕು. ಚಾರಣ ಮತ್ತು ಇತರ ಹೊರಾಂಗಣ ಚಟುವಟಿಕೆಗಳನ್ನು ಆಯೋಜಿಸುವ ಮೊದಲು ಸಂಬಂಧಪಟ್ಟ ಇಲಾಖೆಗಳಿಂದ ಪೂರ್ವಾನುಮತಿ ಪಡೆಯಬೇಕು. ವಿದೇಶಿ ಪ್ರಜೆಗಳು ಸೇರಿದಂತೆ ಎಲ್ಲಾ ಅತಿಥಿಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದರು.
ಸಭೆಯಲ್ಲಿ ಡಿವೈಎಸ್ಪಿ ಶೈಲೇಂದ್ರ, ಡಿಎಫ್‌ಓಗಳಾದ ಕೆ.ಸಿ.ಆನಂದ್, ಚಿಕ್ಕಮಗಳೂರು ವಿಭಾಗದ ರಮೇಶ್ ಬಾಬು, ಕೊಪ್ಪದ ನಂದೀಶ್ ಎಸಿಎಫ್ ಶಿವರಾತ್ರಿಶ್ವರ ಸ್ವಾಮಿ, ಭದ್ರಾ ವೈಲ್ಡ್‌ಲೈಫ್‌ನ ಉಮರ್ ಬಾಷಾ, ತರೀಕೆರೆ ಎಸಿಎಫ್ ಎ.ಎಸ್.ಮೋಹನ್, ಪ್ರವಾಸೋದ್ಯಮ ಇಲಾಖೆಯ ಸಮಾಲೋಚಕ ನಾಗರಾಜ್ ಚಿಟ್ಟ ಸೇರಿದಂತೆ ಜಿಲ್ಲೆಯ ಹೋಂಸ್ಟೇ, ರೆಸಾರ್ಟ್, ಲಾಡ್ಜ್ ಮಾಲೀಕರು ಮತ್ತು ವ್ಯಸ್ಥಾಪಕರು ಉಪಸ್ಥಿತರಿದ್ದರು.
Tourists must follow the guidelines of the police department.
-

ನಾಗರೀಕ ಬಂದೂಕು ತರಬೇತಿ ಶಿಬಿರದ ಸಮಾರೋಪ
ಚಿಕ್ಕಮಗಳೂರು: ಸರ್ವೋಚ್ಛ ನ್ಯಾಯಾಲಯದ ಆದೇಶದ ಮೇರೆಗೆ ಡೀಮ್ಡ್ (ಪರಿಭಾವಿತ) ಅರಣ್ಯ ಪ್ರದೇಶದ ಪುನರ್ ಪರಿಶೀಲನೆಗೆ ತಜ್ಞರ ಸಮಿತಿ ರಚಿಸಲಾಗಿದ್ದು, ಸಾರ್ವಜನಿಕರ ಸಾಕಷ್ಟು ಸಮಸ್ಯೆಗಳು ಪರಿಹಾರ ಕಾಣುವ ಸಾಧ್ಯತೆಗಳಿವೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು ತಿಳಿಸಿದರು.
ಅವರು ಇಂದು ನಗರದ ರಾಮನಹಳ್ಳಿಯಲ್ಲಿ ಜಿಲ್ಲಾ ಪೊಲೀಸ್ ಶಸಸ್ತ್ರ ಪಡೆ ಆವರಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನಾಗರೀಕ ಬಂದೂಕು ತರಬೇತಿ ಶಿಬಿರದ ಸಮಾರೋಪ ಹಾಗೂ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಮಾರ್ಚ್ ೬ ರಂದು ಸರ್ವೋಚ್ಛ ನ್ಯಾಯಾಲಯವು ನೀಡಿರುವ ಆದೇಶದ ಮೇರೆಗೆ ಮತ್ತೊಮ್ಮೆ ಪುನರ್ ವಿಮರ್ಶೆ ಮಾಡಲು ತಜ್ಞರ ಸಮಿತಿ ರಚಿಸಲಾಗಿದೆ. ಈ ಸಮಿತಿಯಲ್ಲಿ ಡೀಮ್ಡ್-೧ ಮತ್ತು ಡೀಮ್ಡ್-೨ ರಲ್ಲಿ ಉಂಟಾಗಿರುವ ವ್ಯತ್ಯಾಸಗಳನ್ನೆಲ್ಲವನ್ನೂ ಸರಿಪಡಿಸಿ ಸರ್ವೋಚ್ಛ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕಾಗಿದೆ ಎಂದು ಮಾಹಿತಿ ನೀಡಿದರು.
ಈ ಅವಕಾಶದಿಂದ ಸಾರ್ವಜನಿಕರಿಗೆ ಡೀಮ್ಡ್ ಅರಣ್ಯದಿಂದ ಎದುರಾಗುತ್ತಿರುವ ಮಂಜೂರಾತಿ, ಪೋಡಿ, ದರ್ಖಾಸ್ತು ಇನ್ನಿತರೆ ವಿಚಾರಗಳನ್ನು ಕಂದಾಯ ಇಲಾಖೆ ಗಮನಕ್ಕೆ ತರಲಾಗುವುದು. ಇದಕ್ಕಾಗಿ ೬ ಜನರನ್ನೊಳಗೊಂಡ ಜಿಲ್ಲಾ ಮಟ್ಟದ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ತಿಳಿಸಿದರು.
ಇದಲ್ಲದೆ ವಲಯ ಮಟ್ಟದ ಸಮಿತಿ ಮತ್ತು ರಾಜ್ಯ ಮಟ್ಟದ ಸಮಿತಿ ಇರುತ್ತದೆ. ಜಿಲ್ಲಾ ಮಟ್ಟದ ಸಮಿತಿ ಪರಾಮರ್ಶೆ ಮಾಡಿ ವಲಯ ಮಟ್ಟದ ಸಮಿತಿಗೆ ವರದಿ ಸಲ್ಲಿಸುತ್ತದೆ. ವಲಯ ಮಟ್ಟದ ಸಮಿತಿಯು ಅದನ್ನು ಪರಿಶೀಲಿಸಿ ರಾಜ್ಯ ಮಟ್ಟಕ್ಕೆ ಕಳಿಸಿಕೊಡುವುದು ನಂತರ ರಾಜ್ಯ ಮಟ್ಟದ ಸಮಿತಿಯು ಸಚಿವರಿಗೆ ಸಲ್ಲಿಸಿ ಅಂತಿಮ ವರದಿ ಸಿದ್ದಪಡಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗುವುದು ಎಂದು ಹೇಳಿದರು.
೨೦೦೨ ರಲ್ಲಿ ಡೀಮ್ಡ್-೧ ಅರಣ್ಯ ಘೋಷಣೆ ಆಯ್ತು, ಎಲ್ಲಿ ಘೋಷಿತ ಅರಣ್ಯ ಪ್ರದೇಶಗಳಿಲ್ಲವೋ ಅಂತಹ ಕಡೆಗಳಲ್ಲಿ ಮುಂದೆ ಅರಣ್ಯ ಎಂದು ಘೋಷಿಸುವ ಸಲುವಾಗಿ ಗುರುತಿಸಲಾದ ಪರಿಭಾವಿತ ಅರಣ್ಯ ಇದಾಗಿರುತ್ತದೆ. ೨೦೧೪ ರಲ್ಲಿ ಡೀಮ್ಡ್-೨ ಎಂದು ಘೋಷಿಸಲಾಯಿತು. ಇದರ ಪರಿಣಾಮ ನಮ್ಮಲ್ಲಿದ್ದ ೧,೪೦,೦೦ ಹೆಕ್ಟೇರ್ ಡೀಮ್ಡ್ ಅರಣ್ಯ ಪ್ರದೇಶದ ಪೈಕಿ ಶೇ.೬೦ ರಷ್ಟು ಅಂದರೆ ೫೦ ಸಾವಿರ ಹೆಕ್ಟೇರ್ ಪ್ರದೇಶವನ್ನು ಹೊರತು ಪಡಿಸಲಾಯಿತು. ಈ ವೇಳೆ ಕೆಲವು ಅನಗತ್ಯ ಪ್ರದೇಶವನ್ನು ಸೇರ್ಪಡೆ ಮಾಡಲಾಗಿದೆ. ಇನ್ನೂ ಕೆಲವು ಪ್ರದೇಶವನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ ಎನ್ನುವ ಆಕ್ಷೇಪಗಳು ವ್ಯಕ್ತವಾಗಿದ್ದವು ಎಂದರು.
ಇದೀಗ ಡೀಮ್ಡ್ ಪುನರ್ ಪರಿಶೀಲನೆಗೆ ಸುಪ್ರೀಂಕೋರ್ಟ್ ಆದೇಶಿಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಾಕಷ್ಟು ಸಮಸ್ಯೆಗಳು ಪರಿಹಾರವಾಗುವ ಸಾಧ್ಯತೆಗಳಿವೆ ಎಂದು ವಿವರಿಸಿದರು.
ರಾಜ್ಯದಲ್ಲಿರುವ ೬೪೦೦ ಕಾಡಾನೆಗಳ ಪೈಕಿ ನಮ್ಮ ಜಿಲ್ಲೆಯಲ್ಲೇ ೬೦೦ ಆನೆಗಳಿಗೆ ಅದರಲ್ಲಿ ೪೪೦ ಆನೆಗಳು ಭದ್ರಾ ಹುಲಿ ಸಂರಕ್ಷಿತ ಪ್ರದೇಶ ಅರಣ್ಯದಲ್ಲಿವೆ. ಒಂದೂವರೆ ಲಕ್ಷ ಅರಣ್ಯ ಪ್ರದೇಶವನ್ನು ಅವರು ಆವಾಸ ಸ್ಥಾನವನ್ನಾಗಿ ಮಾಡಿಕೊಂಡಿವೆ ಎಂದು ತಿಳಿಸಿದರು.
ಕೊಪ್ಪ ವಿಭಾಗದಲ್ಲಿ ೧೩೦ ಆನೆಗಳಿವೆ, ಚಿಕ್ಕಮಗಳೂರು ಅರಣ್ಯ ವಿಭಾಗದಲ್ಲಿ ೩೫ ಆನೆಗಳಿವೆ, ಇದರಲ್ಲಿ ತತ್ಕೊಳ ಸಾರಗೋಡು ಭಾಗದಲ್ಲಿ ೨೫ ಆನೆಗಳಿವೆ. ಅವುಗಳನ್ನು ಕ್ಯಾಮೆರಾ ಟ್ಯಾಪಿಂಗ್ ಮಾಡಿ ಗಣತಿಯಲ್ಲಿ ಪ್ರತ್ಯೇಕವಾಗಿ ಗುರುತಿಸಿದ್ದೇವೆ ಎಂದರು.
ಇತ್ತೀಚಿನ ದಿನಗಳಲ್ಲಿ ಕಾಡಂಚಿನ ಗ್ರಾಮಗಳಿಗೆ ಆನೆಗಳು ಲಗ್ಗೆ ಇಟ್ಟು ಹಿಡುವಳಿ ಭೂಮಿಯಲ್ಲಿರುವ ಬೆಳೆಗಳನ್ನೇ ಪರ್ಯಾಯ ಆಹಾರವನ್ನಾಗಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ ಅವುಗಳ ನಿಯಂತ್ರಣಕ್ಕೆ ಇಲಾಖೆಯು ಟೆಂಟಕಲ್ ಬೇಲಿ ಅಳವಡಿಸಲಾರಂಭಿಸಿದೆ. ಈವರೆಗೆ ಸುಮಾರು ೪೦ ಕಿ.ಮೀ. ಬೇಲಿ ಅಳವಡಿಸಲಾಗಿದೆ ಎಂದು ತಿಳಿಸಿದರು.
ಅಂತಹ ಕಡೆಗಳಲ್ಲಿ ಸುಮಾರು ಶೇ.೯೦ ರಷ್ಟು ಆನೆಗಳ ಹಾವಳಿ ಕಡಿವಾಣ ಬಿದ್ದಿದೆ. ಇದನ್ನು ಮನಗಂಡು ಈ ವರ್ಷ ಮತ್ತೆ ಮೂಡಿಗೆರೆ ಪಟ್ಟಣದ ಸಂತೆ ಮೈದಾನದಿಂದ ಕಂಚಿನಕಲ್ ದುರ್ಗವರೆಗೆ ೨೫ ಕಿ.ಮೀ.ಅರಣ್ಯ ಪ್ರದೇಶದಲ್ಲಿ ಟೆಂಟಕಲ್ ಬೇಲಿ ಅಳವಡಿಸುವ ಕಾರ್ಯ ನಡೆಯುತ್ತಿದೆ. ಇದು ಪೂರ್ಣಗೊಂಡರೆ ಆ ಭಾಗದಲ್ಲಿ ಮತಷ್ಟು ಕಾಡಾನೆ ಹಾವಳಿಗೆ ಕಡಿವಾಣ ಬೀಳಲಿದೆ ಎಂದು ತಿಳಿಸಿದರು.
ಆನೆಗಳು ನೀರನ್ನರಸಿ ಹಿಡುವಳಿ ಪ್ರದೇಶದತ್ತ ಬರದಂತೆ ಅರಣ್ಯದಲ್ಲೇ ಕೆರೆಗಳನ್ನು ನಿರ್ಮಾಣ ಮಾಡಿದ್ದೇವೆ. ಈಗಲೂ ೧೦ ಕೆರೆಗಳನ್ನು ನಿರ್ಮಾಣ ಮಾಡಿ, ಮಳೆಗಾಲದಲ್ಲಿ ನೀರು ಸಂಗ್ರಹ ಮಾಡಲಾಗುವುದು ಎಂದು ತಿಳಿಸಿದರು.
ಇತ್ತೀಚೆಗೆ ಕಾಡು ಕೋಣಗಳ ಹಾವಳಿ ಹೆಚ್ಚಾಗಿ ಪ್ರಾಣಹಾನಿಗಳು ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶಕ್ಕೆ ಭೇಟಿ ನೀಡಿ, ಕಾಡು ಕೋಣಗಳನ್ನು ಹಿಡಿದು ಭದ್ರಾ ಅಭಯಾರಣ್ಯಕ್ಕೆ ಬಿಟ್ಟು ನಂತರ ಬೇರೆಡೆಗೆ ಬಿಡುವ ಕಾರ್ಯಾಚರಣೆ ಕೈಗೊಳ್ಳುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ ಅಮಟೆ ಮಾತನಾಡಿ, ತರಬೇತಿ ಪಡೆದವರು ಪರವಾನಗಿ ಪಡೆದ ನಂತರ ಬಂದೂಕುಗಳನ್ನು ದುರುಪಯೋಗಪಡಿಸಿಕೊಳ್ಳಬಾರದು, ಕಾಡು ಪ್ರಾಣಿಗಳಿಂದ ರಕ್ಷಣೆ, ಅಗತ್ಯ ಸಂದರ್ಭದಲ್ಲಿ ಆತ್ಮ ರಕ್ಷಣೆಗೆ ಮಾತ್ರ ಬಳಸಬೇಕು ಎಂದು ತಿಳಿಸಿದರು.
ಈ ಸಂದಂರ್ಭದಲ್ಲಿ ಆರ್‌ಪಿಐ ಸಹದೇವ್ ಉಪಸ್ಥಿತರಿದ್ದರು. ಬಂದೂಕು ತರಬೇತಿ ನೀಡಿದ ಸಿಬ್ಬಂದಿಗಳನ್ನು ಗೌರವಿಸಲಾಯಿತು. ಸುಮಾರು ೫೦೦ ಮಂದಿ ಶಿಬಿರಾರ್ಥಿಗಳಿಗೆ ಬಂದೂಕು ತರಬೇತಿ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು
Civilian Firearms Training Camp concludes
-

ಸಂಜೀವಿನಿ ಸ್ವ-ಸಹಾಯ ಸಂಘಗಳು ತಯಾರಿಸಿರುವ ವಸ್ತುಗಳನ್ನು ಖರೀದಿಸಲು ಕರೆ
ಚಿಕ್ಕಮಗಳೂರು: ಜಿಲ್ಲೆಯ ಸಂಜೀವಿನಿ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು ಉತ್ಪಾದಿಸಿರುವ ವಿವಿಧ ಬಗೆಯ ಆಹಾರ ಪದಾರ್ಥಗಳು ಹಾಗೂ ಕರಕುಶಲ ವಸ್ತುಗಳನ್ನು ಖರೀದಿಸುವ ಮೂಲಕ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಸಿ.ಎನ್. ಮೀನಾನಾಗರಾಜ್ ಕರೆನೀಡಿದರು.
ಅವರು ಇಂದು ನಗರದ ಆಜಾದ್ ವೃತ್ತದಲ್ಲಿ ಜಿಲ್ಲಾ ಪಂಚಾಯಿತಿ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ-ಸಂಜೀವಿನಿ ಇವರುಗಳ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ಜಿಲ್ಲಾಮಟ್ಟದ ಗ್ರಾಮೀಣ ಸ್ವ-ಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಸಂಜೀವಿನಿ ಸ್ವ-ಸಹಾಯ ಸಂಘಗಳ ಮಹಿಳೆಯರು ಸ್ವತಃ ಮನೆಯಲ್ಲಿ ತಯಾರಿಸಿರುವ ತಿಂಡಿ ತಿನಿಸು, ವಿವಿಧ ಬಗೆಯ ಚಟ್ನಿಪುಟಿ ಮತ್ತು ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಇಂದಿನಿಂದ ನಾಲ್ಕು ದಿನಗಳವರೆಗೆ ನಡೆಯಲಿದ್ದು, ವಸ್ತುಗಳ ಪ್ರದರ್ಶನಕ್ಕೆ ಬೇರೆ ಬೇರೆ ಮಳಿಗೆಗಳನ್ನು ಸಿದ್ಧಗೊಳಿಸಿದ್ದೇವೆ, ಇದು ವ್ಯಾಪಾರಕ್ಕೆ ಉತ್ತೇಜನ ನೀಡುವ ಪ್ರಯತ್ನವಾಗಿದೆ ಎಂದರು.
ಸಾರ್ವಜನಿಕರು ಈ ಎಲ್ಲಾ ಮಳಿಗೆಗಳಿಗೆ ಭೇಟಿನೀಡಿ ತಿಂಡಿ ತಿನಿಸುಗಳನ್ನು ಖರೀದಿಸುವ ಮೂಲಕ ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳನ್ನು ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.
ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್. ಕೀರ್ತನ ಮಾತನಾಡಿ, ಇಂದಿನಿಂದ ಶನಿವಾರದವರೆಗೆ ಸುಮಾರು ವಿವಿಧ ಬಗೆಯ ೭೦ ಆಹಾರ ಮಳಿಗೆಗಳು ಹಾಗೂ ಕರಕುಶಲ ವಸ್ತುಗಳು, ಗುಡಿ ಕೈಗಾರಿಕೆ ವಸ್ತುಗಳ ಮಳಿಗೆಗಳನ್ನು ಪ್ರಾರಂಭಿಸಲಾಗಿದ್ದು, ಅಡುಗೆ ಸಾಮಾಗ್ರಿ, ಅಲಂಕಾರಿಕ ವಸ್ತುಗಳು, ಬಟ್ಟೆಗಳು ಇಲ್ಲಿ ಮಾರಾಟಕ್ಕೆ ಲಭ್ಯವಿದೆ ಎಂದರು.
ಜಿಲ್ಲೆಯ ಪಾರಂಪರಿಕ ಆಹಾರ ಪದ್ಧತಿಯಾದ ಉಪ್ಪಿನಕಾಯಿ, ಅಪ್ಪಳ ಸೇರಿದಂತೆ ವಿವಿಧ ಆಹಾರ ಉತ್ಪನ್ನಗಳನ್ನು ಮಾರಾಟ ಮಾಡುವ ಮಳಿಗೆಗಳನ್ನು ಆರಂಭಿಸಿದ್ದು ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ತ್ರೀಶಕ್ತಿ ಸ್ವ-ಸಹಾಯ ಸಂಘಗಳ ಮಹಿಳೆಯರಿಗೆ ಉತ್ತೇಜನ ನೀಡಿ ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.
ನಗರಸಭಾಧ್ಯಕ್ಷೆ ಸುಜಾತಶಿವಕುಮಾರ್ ಮಾತನಾಡಿ, ಮನೆಯಲ್ಲಿ ತಯಾರಿಸಿದ ವಿವಿಧ ಬಗೆಯ ಆಹಾರದ ವಸ್ತುಗಳು ಹಾಗೂ ಗುಡಿಕೈಗಾರಿಕೆಯ ವಸ್ತುಗಳ ಇಲ್ಲಿ ಪ್ರದರ್ಶನ ಏರ್ಪಡಿಸಿದ್ದು, ಸಾರ್ವಜನಿಕರು ಖರೀದಿಸುವ ಜೊತೆಗೆ ಮಹಿಳೆಯರ ಆರ್ಥಿಕ ಸದೃಢತೆಗೆ ಸಹಕರಿಸಬೇಕೆಂದು ವಿನಂತಿಸಿದರು.
ಸರ್ಕಾರದಿಂದ ವಿವಿಧ ಯೋಜನೆಗಳಡಿ ಸಿಗುವ ಸೌಲಭ್ಯಗಳನ್ನು ಪಡೆದುಕೊಂಡು ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಮಹಿಳೆಯರು ಕುಟುಂಬ ನಿರ್ವಹಣೆಗೆ ಮುಂದಾಗಬೇಕು, ರೊಟ್ಟಿ ತಯಾರಿಕೆ, ಶುಚಿ ರುಚಿಯಾದ ಪುಳಿಯೊಗರೆ, ಖಾದ್ಯ ತೈಲಗಳು, ಖಾದಿ ಮೇಳ, ಲಾವಂಚ ಬೇರಿನ ಟೋಪಿ, ಆಟಿಕೆಗಳು ನೋಡುಗರನ್ನು ಮನಸೂರೆಗೊಳ್ಳುತ್ತಿವೆ ಎಂದರು.
ನಗರಸಭೆ ಪೌರಾಯುಕ್ತ ಬಿ.ಸಿ. ಬಸವರಾಜ್ ಮಾತನಾಡಿ, ಗ್ರಾಮೀಣ ಪ್ರದೇಶದ ಮಹಿಳೆಯರ ಜೀವನೋಪಾಯಕ್ಕಾಗಿ ಗೃಹಬಳಕೆ ವಸ್ತುಗಳ ಮಾರಾಟ ಮಾಡುವ ಉದ್ದೇಶದಿಂದ ನಗರದ ಆಜಾದ್ ವೃತ್ತದಲ್ಲಿ ವಿವಿಧ ಬಗೆಯ ೭೦ ಮಳಿಗೆಗಳನ್ನು ಆರಂಭಿಸಲಾಗಿದೆ ಎಂದು ಹೇಳಿದರು.
ಬಡ ಹೆಣ್ಣುಮಕ್ಕಳು ತಯಾರಿಸಿರುವ ಆರೋಗ್ಯಪೂರ್ಣ ಆಹಾರ ಪದಾರ್ಥಗಳನ್ನು ನಾಗರೀಕರು ಖರೀದಿಸುವ ಮೂಲಕ ಮಹಿಳೆಯರು ಆರ್ಥಿಕ ಸಬಲರಾಗಲು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಡೇನಲ್ಮ್ ಯೋಜನೆಯಡಿ ಬೀದಿಬದಿ ವ್ಯಾಪಾರಿಗಳಿಗೆ ಪ್ರಾರಂಭದಲ್ಲಿ ೧೦ ಸಾವಿರ ನೀಡುತ್ತಿದ್ದು, ಈಗಾಗಲೇ ೧೬೦೦ ಕ್ಕೂ ಹೆಚ್ಚು ಫಲಾನುಭವಿಗಳಿಗೆ ಸಾಲಸೌಲಭ್ಯ ನೀಡಲಾಗಿದೆ. ಸಮರ್ಪಕವಾಗಿ ಸಾಲ ಮರುಪಾವತಿ ಮಾಡಿದ ೬೦೦ ಕ್ಕೂ ಹೆಚ್ಚು ಫಲಾನುಭವಿಗಳಿಗೆ ೨೦ ಸಾವಿರ ರೂಗಳಂತೆ ಸಾಲ ನೀಡಲಾಗಿದೆ ಎಂದು ವಿವರಿಸಿದರು.
ಸುಮಾರು ೫೦೦ ಜನರಿಗೆ ೫೦ ಸಾವಿರ ರೂ ಸಾಲ ವಿತರಣೆ ಮಾಡಲಾಗಿದ್ದು, ಉತ್ತಮ ವಹಿವಾಟು ನಡೆಸಿ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡಿದವರಿಗೆ ೧ ಲಕ್ಷ ರೂಗಳಿಂದ ೫ ಲಕ್ಷ ರೂಗಳವರೆಗೆ ಸಾಲಸೌಲಭ್ಯ ದೊರೆಯಲಿದೆ. ಇದನ್ನು ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳುವಂತೆ ಕರೆನೀಡಿದರು.
ಕೇಂದ್ರ ಮತ್ತು ರಾಜ್ಯಸರ್ಕಾರದ ವಿವಿಧ ಜನಪರ ಯೋಜನೆಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸ್ವ-ಸಹಾಯ ಸಂಘಗಳು ಬಳಸಿಕೊಳ್ಳುವ ಮೂಲಕ ಸಹಾಯಧನದ ಪ್ರಯೋಜನವನ್ನು ಪಡೆದುಕೊಂಡು ಸ್ವಾವಲಂಬಿ ಜೀವನ ನಡೆಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಮಾಲತೇಶ್ ಬಜಂತ್ರಿ, ಯೋಜನಾ ನಿರ್ದೇಶಕರಾದ ನಯನ, ಡಿಪಿಎಂಎನ್.ಆರ್.ಎಲ್.ಎಂ ರಾಜೇಂದ್ರ ಉಪಸ್ಥಿತರಿದ್ದರು.
Exhibition of products made by women of district level rural self-help groups
-

ಸೀತಾಳಯ್ಯನಗಿರಿಯ ಶ್ರೀ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ
ಚಿಕ್ಕಮಗಳೂರು: ನಾಡಿನ ಪ್ರಸಿದ್ಧ ಸೀತಾಳಯ್ಯನಗಿರಿಯ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಜಾತ್ರಾ ಮಹೋತ್ಸವ ಮತ್ತು ರಥೋತ್ಸವವು ಎಂಟೂರು ಗ್ರಾಮಸ್ಥರು ಹಾಗೂ ಎರಡೂರು ಮಠದ ಸಾರಥ್ಯ ದಲ್ಲಿ ಅತ್ಯಂತ ವಿಜೃಂಭ್ರಮಣೆಯಿಂದ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಅತ್ಯಂತ ಶ್ರದ್ದಾಭಕ್ತಿಯಿಂದ ಯಶಸ್ವಿಗೊಂಡಿತು.
ತಳ್ಳಿಹಳ್ಳ, ಕಟ್ರುಮನೆ, ಇಳೆಹೊಳೆ, ಜಕ್ಕನಹಳ್ಳಿ, ಉಳುವಾಗಿಲು, ಕಬ್ಬಿನಹಳ್ಳಿ, ಹಿರೇಕೊಳಲೆ, ಬ್ಯಾಗದಹಳ್ಳಿ, ನರಗನಹಳ್ಳಿ, ಚಿಕ್ಕಕೊಳಲೆ ಗ್ರಾಮಸ್ಥರು ಹಾಗೂ ಮುಳ್ಳಪ್ಪಸ್ವಾಮಿ, ಸೀತಾಳಯ್ಯನಗಿರಿ ಮತ್ತು ಹೊಸಪುರ ನಾರಕಂತೆ ಮಠದ ಸಹಭಾಗಿತ್ವದಲ್ಲಿ ವಿವಿಧ ಗ್ರಾಮಗಳ ದೇವರ ಅಡ್ಡೆ ಹೊತ್ತಿ ಕುಣಿಸುತ್ತಾ ಗ್ರಾಮಸ್ಥರು ದೇ ವಾಲಯ ಸುತ್ತಲು ಮೆರವಣಿಗೆ ನಡೆಸಿದರು.
ಪ್ರತಿ ಗ್ರಾಮದಿಂದ ಸುಮಾರು ೪೦ಕ್ಕೂ ಹೆಚ್ಚು ಗ್ರಾಮಸ್ಥರು ಪೂರ್ವಿಕರ ಶೈಲಿಯ ಸಾಂಪ್ರದಾಯಿಕ ವಸ್ತ್ರ, ಪಂಚೆ, ಶಲ್ಯ, ಕೋಟು ಹಾಗೂ ಪೇಟಾ ಧರಿಸಿ ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಗ್ರಾಮಗಳ ದೇವರನ್ನು ಮೆರವಣಿಗೆ ಬಳಿಕ ಶ್ರೀ ಮಲ್ಲಿಕಾರ್ಜುನ ಸನ್ನಿಧಿಧಾನಕ್ಕೆ ಎಂಟೂರು ಗ್ರಾಮಸ್ಥರು ಗರ್ಭಗುಡಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಹೊಸಪುರದ ನಾರಕಂತೆ ಮಠದಲ್ಲಿ ಇರಿಸಿರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ ವಿಗ್ರಹ ಮೂರ್ತಿಯನ್ನು ಕರೆತಂದು ಶ್ರೀ ಸೀತಾಳಯ್ಯನಗಿರಿಯಲ್ಲಿ ವಿಶೇಷಪೂಜೆ ಸಲ್ಲಿಸಿ ರಥಕ್ಕೆ ಕುಳ್ಳಿರಿಸಲಾಯಿತು. ಸಾವಿರಾರು ಭಕ್ತ ಗಣ ರಥವನ್ನು ಎಳೆಯುತ್ತಿದ್ಧಂತೆ ಅಕ್ಕಪಕ್ಕ ನೆರೆದಿದ್ದ ಭಕ್ತಾಧಿಗಳು ರಥಕ್ಕೆ ಬಾಳೆ ಹಣ್ಣು ತೂರಿ ಭಕ್ತಿ ಪರಮಾ ಶರಾದರು.
ಮಹಿಳೆಯರು, ಮಕ್ಕಳು ಹಾಗೂ ವೃದ್ದರು ದೂರದಿಂದಲೇ ಭವ್ಯ ರಥದಲ್ಲಿ ಅಲಂಕೃತಗೊಂಡಿದ್ಧ ಶ್ರೀ ಮಲ್ಲಿಕಾರ್ಜುನ ಸ್ವಾಮಿಗೆ ಭಕ್ತಿಪೂರ್ವವಾಗಿ ನಮಸ್ಕರಿಸಿದರು ಸಂಜೆ ರಥೋತ್ಸವ ಪೂರ್ಣಗೊಂಡ ನಂತರ ಗ್ರಾಮದೇವರುಗಳು ಮರಳಿ ಗ್ರಾಮಕ್ಕೆ ವಾಪಸಾದವು. ನಾಳೆ ಸೀತಾಳಯ್ಯನಗಿರಿ ಯಲ್ಲಿ ಓಕುಳಿ ಪೂರ್ಣಗೊ ಂಡು ಜಾತ್ರಾಮಹೋತ್ಸವ ಪೂರ್ಣಗೊಳ್ಳಲಿದೆ.
Seethalayyanagiri Sri Mallikarjuna Swamy Chariot Festival
-

ಬೇಸಿಗೆ ನಿರ್ವಹಣೆಗೆ ವಿಶೇಷ ನೆರವು ಕೋರಿ ಮುಖ್ಯಮಂತ್ರಿಯವರಿಗೆ ಪ್ರಸ್ತಾವನೆ
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಉದ್ಭವಿಸಬಹುದಾದ ಸಮಸ್ಯೆಗಳನ್ನು ಬಗೆಹರಿಸಲು ವಿಶೇಷ ನೆರವು ಕೋರಿ ಮುಖ್ಯಮಂತ್ರಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿಯೂ ಆಗಿರುವ ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಉದ್ಭವಿಸಬಹುದಾದ ಪರಿಸ್ಥಿತಿ ಕುರಿತು ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಸಚಿವ ಕೆ.ಜೆ.ಜಾರ್ಜ್, ಬೇಸಿಗೆಯನ್ನು ನಿಭಾಯಿಸಲು ಕೈಗೊಳ್ಳಬೇಕಾದ ಕಾರ್ಯಕ್ರಮಗಳು ಮತ್ತು ಅದಕ್ಕೆ ಬೇಕಾದ ಅನುದಾನದ ಬಗ್ಗೆ ಪ್ರಸ್ತಾವನೆ ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
“ಈ ಪ್ರಸ್ತಾವನೆಯೊಂದಿಗೆ ಮುಖ್ಯಮಂತ್ರಿಯವರನ್ನು ಭೇಟಿಯಾಗಿ, ಹೆಚ್ಚುವರಿ ಅನುದಾನ ಕೋರಿ ಮನವಿ ಸಲ್ಲಿಸಲಾಗುವುದು. ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಕಳೆದ ವರ್ಷದ ಬೇಸಿಗೆಯಲ್ಲಿ ಕೈಗೊಂಡ ಕಾಮಗಾರಿಗಳಿಗೆ ೩.೬೦ಕೋಟಿ ರೂ. ಅನುದಾನ ಬಿಡುಗಡೆಯಾಗಬೇಕಿದೆ. ಅದೇ ರೀತಿ ಈ ಬಾರಿಯ ನಿರ್ವಹಣೆಗೆ ಅನುದಾನ ಬೇಕಾಗಿದೆ. ಈ ಎರಡೂ ವಿಚಾರಗಳನ್ನು ಮುಂದಿಟ್ಟುಕೊಂಡು ಇಲಾಖೆ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು,” ಎಂದು ಸಚಿವರು ತಿಳಿಸಿದರು.
“ಕಳೆದ ವರ್ಷ ತೀವ್ರ ಬರಗಾಲವಿದ್ದರೂ ಜಿಲ್ಲೆಯಲ್ಲಿ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದೇವೆ. ಅದೇ ರೀತಿ ಈ ವರ್ಷವೂ ಬೇಸಿಗೆಯಲ್ಲಿ ಜನರಿಗೆ ಹೆಚ್ಚು ಸಮಸ್ಯೆಯಾಗದಂತೆ ನೋಡಿಕೊಳ್ಳಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ನೀರು, ವಿದ್ಯುತ್ ಸೇರಿದಂತೆ ಯಾವುದೇ ರೀತಿಯ ಸಮಸ್ಯೆ ಬಂದರೂ ಅದನ್ನು ಬಗೆಹರಿಸಲು ಈಗಲೇ ಯೋಜನೆ ಸಿದ್ಧಪಡಿಸಬೇಕು,” ಎಂದು ಸೂಚಿಸಿದರು.
“ಪ್ರಸ್ತುತ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ೬.೨೩ ಕೋಟಿ ರೂ. ಲಭ್ಯವಿದೆ. ತುರ್ತು ಸಂದರ್ಭದಲ್ಲಿ ಈ ಹಣ ಬಳಸಿಕೊಂಡು ಸಮಸ್ಯೆಗೆ ಸ್ಪಂದಿಸಬೇಕು. ಕೆರೆಗಳ ಹೂಳೆತ್ತುವ ಕಾರ್ಯವನ್ನು ವೈಜ್ಞಾನಿಕವಾಗಿ ಕೈಗೊಂಡು ಕೆರೆಗಳನ್ನು ಸಂರಕ್ಷಿಸಿಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಗಮನ ಹರಿಸಬೇಕು,” ಎಂದು ಹೇಳಿದರು.
ಜಿಲ್ಲೆಯ ಪರಿಸ್ಥಿತಿ ಕುರಿತು ವಿವರ ನೀಡಿದ ಜಿಲ್ಲಾಧಿಕಾರಿ ಮೀನಾ ನಾಗರಾಜ್, “ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಯಾವುದೇ ಭಾಗದಲ್ಲಿ ತೀವ್ರತರ ಸಮಸ್ಯೆಗಳು ಉದ್ಭವಿಸಿಲ್ಲ. ೪ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಕ್ರಮ ವಹಿಸಲಾಗಿದೆ. ಕಳೆದ ಬಾರಿ ಹೆಚ್ಚು ಮಳೆಯಾಗಿದ್ದರಿಂದ ಬಯಲುಸೀಮೆ ಭಾಗಗಳಲ್ಲಿ ಅಂತರ್ಜಲ ಪ್ರಮಾಣ ಏರಿಕೆಯಾಗಿದೆ. ಕೆರೆಗಳನ್ನು ತುಂಬಿಸುವ ಕಾರ್ಯವನ್ನೂ ಕೈಗೊಳ್ಳಲಾಗಿದ್ದು, ತರೀಕೆರೆ ತಾಲೂಕಿನಲ್ಲಿ ಏತ ನೀರಾವರಿ ಯೋಜನೆ ಮೂಲಕ ೭೯ ಕೆರೆಗಳನ್ನು ತುಂಬಿಸಲಾಗಿದೆ. ಭದ್ರಾ ಜಲಾಶಯ ಭಾಗದಲ್ಲಿ ೭೩ ಕೆರೆಗಳನ್ನು ಭರ್ತಿ ಮಾಡಲಾಗಿದೆ. ಆರೋಗ್ಯ ಸಮಸ್ಯೆ ಉದ್ಭವವಾಗದಂತೆ ಮತ್ತು ಅರಣ್ಯದಲ್ಲಿ ಬೆಂಕಿ ದುರಂತ ಸಂಭವಿಸುವುದನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗುತ್ತಿದೆ,” ಎಂದು ಮಾಹಿತಿ ನೀಡಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಟಾಸ್ಕ್ ಫೋರ್ಸ್ ಮೂಲಕ ಕಳೆದ ವರ್ಷ ಕೈಗೊಂಡ ಪರಿಹಾರ ಕಾರ್ಯಕ್ರಮಗಳಿಗೆ ೩.೬ ಕೋಟಿ ರೂ. ಬಿಡುಗಡೆಯಾಬೇಕಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದಾಗ, ಜಿಲ್ಲೆಯ ಶಾಸಕರ ಜತೆಗೆ ಈ ಬಗ್ಗೆ ಇಲಾಖೆ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು ಎಂದು ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
“ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ. ಹೀಗಾಗಿ ಜಿಲ್ಲೆಗೆ ಅಗತ್ಯ ವಿದ್ಯುತ್ ನೀಡಲು ಯಾವುದೇ ತೊಂದರೆ ಆಗುವುದಿಲ್ಲ. ಆದರೆ, ಸರಬರಾಜು ವ್ಯವಸ್ಥೆಯಲ್ಲಿ ಸಮಸ್ಯೆ ಇರುವುದರಿಂದ ಮತ್ತು ಅಕ್ರಮ ಪಂಪ್ ಸೆಟ್ ಗಳನ್ನು ಬಳಸುತ್ತಿರುವುದರಿಂದ ಒತ್ತಡ ತಡೆದುಕೊಳ್ಳಲು ಸಾಧ್ಯವಾಗದೆ ಟ್ರಾನ್ಸ್ ಫಾರ್ಮರ್ ಗಳು ಹಾನಿಗೊಳಗಾಗುತ್ತವೆ. ಈ ರೀತಿಯ ತಾಂತ್ರಿಕ ಸಮಸ್ಯೆ ಉದ್ಭವಿಸದಂತೆ ಲಿಂಕ್ ಲೈನ್ ಮೂಲಕ ಅಗತ್ಯ ವಿದ್ಯುತ್ ಪೂರೈಸಲು ಕ್ರಮ ವಹಿಸಲಾಗುವುದು,” ಎಂದರು.
“ರೈತರಿಗೆ ವಿದ್ಯುತ್ ಸಮಸ್ಯೆ ಉದ್ಭವವಾಗಬಾರದು ಎಂಬ ಕಾರಣಕ್ಕೆ ಕುಸುಮ್-ಬಿ ಯೋಜನೆಯಡಿ ರೈತರಿಗೆ ಸೋಲಾರ್ ಪಂಪ್ ಸೆಟ್ ಗಳನ್ನು ಒದಗಿಸಲಾಗುತ್ತದೆ. ಕುಸುಮ-ಸಿ ಯೋಜನೆಯಡಿ ಫೀಡರ್ ಸೋಲರೈಸೇಷನ್ ಮೂಲಕ ಆಯಾ ಫೀಡರ್‌ಗಳ ವ್ಯಾಪ್ತಿಯಲ್ಲೇ ವಿದ್ಯುತ್ ಉತ್ಪಾದಿಸಿ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಸಲಾಗುತ್ತಿದೆ. ಜಿಲ್ಲೆಯ ಜನಪ್ರತಿನಿಧಿಗಳು ಈ ಬಗ್ಗೆ ಆಸಕ್ತಿ ವಹಿಸಿ ರೈತರು ಸೋಲಾರ್ ಪಂಪ್ ಸೆಟ್ ಗಳನ್ನು ಅಳವಡಿಸಿಕೊಳ್ಳುವಂತೆ ನೋಡಿಕೊಳ್ಳಬೇಕು. ಅದೇ ರೀತಿ ಕುಸುಮ್-ಸಿ ಯೋಜನಯಡಿ ಫೀಡರ್ ಸೋಲರೈಸೇನ್ ಗೆ ಅಗತ್ಯ ಭೂಮಿ ಒದಗಿಸಲು ಕ್ರಮ ಕೈಗೊಳ್ಳಬೇಕು,” ಎಂದು ಮನವಿ ಮಾಡಿದರು.
ಸಭೆಯಲ್ಲಿ ವಿಧಾನ ಪರಿಷತ್ ಉಪಸಭಾಪತಿಗಳಾದ ಎಂ.ಕೆ. ಪ್ರಾಣೇಶ್, ಶಾಸಕ ಮತ್ತು ಕ್ರೆಡಲ್ ಅಧ್ಯಕ್ಷರಾದ ಟಿ.ಡಿ ರಾಜೇಗೌಡ, ಶಾಸಕರಾದ ಜಿ.ಎಚ್. ಶ್ರೀನಿವಾಸ್, ಎಚ್.ಡಿ. ತಮ್ಮಯ್ಯ, ಕೆ.ಎಸ್.ಆನಂದ್, ನಯನ ಮೋಟಮ್ಮ, ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ, ಎಸ್.ಎಲ್. ಭೋಜೇಗೌಡ, ಡಾ. ಧನಂಜಯ ಸರ್ಜಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೆಚ್.ಎಸ್. ಕೀರ್ತನಾ, ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಜಿಲ್ಲಾ ಉಪಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್ ಬಾಬು ಮತ್ತಿತರರು ಹಾಜರಿದ್ದರು.
Proposal to the Chief Minister seeking special assistance for summer management