ಚಿಕ್ಕಮಗಳೂರು: ಸರ್ವೋಚ್ಛ ನ್ಯಾಯಾಲಯದ ಆದೇಶದ ಮೇರೆಗೆ ಡೀಮ್ಡ್ (ಪರಿಭಾವಿತ) ಅರಣ್ಯ ಪ್ರದೇಶದ ಪುನರ್ ಪರಿಶೀಲನೆಗೆ ತಜ್ಞರ ಸಮಿತಿ ರಚಿಸಲಾಗಿದ್ದು, ಸಾರ್ವಜನಿಕರ ಸಾಕಷ್ಟು ಸಮಸ್ಯೆಗಳು ಪರಿಹಾರ ಕಾಣುವ ಸಾಧ್ಯತೆಗಳಿವೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು ತಿಳಿಸಿದರು.
ಅವರು ಇಂದು ನಗರದ ರಾಮನಹಳ್ಳಿಯಲ್ಲಿ ಜಿಲ್ಲಾ ಪೊಲೀಸ್ ಶಸಸ್ತ್ರ ಪಡೆ ಆವರಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನಾಗರೀಕ ಬಂದೂಕು ತರಬೇತಿ ಶಿಬಿರದ ಸಮಾರೋಪ ಹಾಗೂ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಮಾರ್ಚ್ ೬ ರಂದು ಸರ್ವೋಚ್ಛ ನ್ಯಾಯಾಲಯವು ನೀಡಿರುವ ಆದೇಶದ ಮೇರೆಗೆ ಮತ್ತೊಮ್ಮೆ ಪುನರ್ ವಿಮರ್ಶೆ ಮಾಡಲು ತಜ್ಞರ ಸಮಿತಿ ರಚಿಸಲಾಗಿದೆ. ಈ ಸಮಿತಿಯಲ್ಲಿ ಡೀಮ್ಡ್-೧ ಮತ್ತು ಡೀಮ್ಡ್-೨ ರಲ್ಲಿ ಉಂಟಾಗಿರುವ ವ್ಯತ್ಯಾಸಗಳನ್ನೆಲ್ಲವನ್ನೂ ಸರಿಪಡಿಸಿ ಸರ್ವೋಚ್ಛ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕಾಗಿದೆ ಎಂದು ಮಾಹಿತಿ ನೀಡಿದರು.
ಈ ಅವಕಾಶದಿಂದ ಸಾರ್ವಜನಿಕರಿಗೆ ಡೀಮ್ಡ್ ಅರಣ್ಯದಿಂದ ಎದುರಾಗುತ್ತಿರುವ ಮಂಜೂರಾತಿ, ಪೋಡಿ, ದರ್ಖಾಸ್ತು ಇನ್ನಿತರೆ ವಿಚಾರಗಳನ್ನು ಕಂದಾಯ ಇಲಾಖೆ ಗಮನಕ್ಕೆ ತರಲಾಗುವುದು. ಇದಕ್ಕಾಗಿ ೬ ಜನರನ್ನೊಳಗೊಂಡ ಜಿಲ್ಲಾ ಮಟ್ಟದ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ತಿಳಿಸಿದರು.
ಇದಲ್ಲದೆ ವಲಯ ಮಟ್ಟದ ಸಮಿತಿ ಮತ್ತು ರಾಜ್ಯ ಮಟ್ಟದ ಸಮಿತಿ ಇರುತ್ತದೆ. ಜಿಲ್ಲಾ ಮಟ್ಟದ ಸಮಿತಿ ಪರಾಮರ್ಶೆ ಮಾಡಿ ವಲಯ ಮಟ್ಟದ ಸಮಿತಿಗೆ ವರದಿ ಸಲ್ಲಿಸುತ್ತದೆ. ವಲಯ ಮಟ್ಟದ ಸಮಿತಿಯು ಅದನ್ನು ಪರಿಶೀಲಿಸಿ ರಾಜ್ಯ ಮಟ್ಟಕ್ಕೆ ಕಳಿಸಿಕೊಡುವುದು ನಂತರ ರಾಜ್ಯ ಮಟ್ಟದ ಸಮಿತಿಯು ಸಚಿವರಿಗೆ ಸಲ್ಲಿಸಿ ಅಂತಿಮ ವರದಿ ಸಿದ್ದಪಡಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗುವುದು ಎಂದು ಹೇಳಿದರು.
೨೦೦೨ ರಲ್ಲಿ ಡೀಮ್ಡ್-೧ ಅರಣ್ಯ ಘೋಷಣೆ ಆಯ್ತು, ಎಲ್ಲಿ ಘೋಷಿತ ಅರಣ್ಯ ಪ್ರದೇಶಗಳಿಲ್ಲವೋ ಅಂತಹ ಕಡೆಗಳಲ್ಲಿ ಮುಂದೆ ಅರಣ್ಯ ಎಂದು ಘೋಷಿಸುವ ಸಲುವಾಗಿ ಗುರುತಿಸಲಾದ ಪರಿಭಾವಿತ ಅರಣ್ಯ ಇದಾಗಿರುತ್ತದೆ. ೨೦೧೪ ರಲ್ಲಿ ಡೀಮ್ಡ್-೨ ಎಂದು ಘೋಷಿಸಲಾಯಿತು. ಇದರ ಪರಿಣಾಮ ನಮ್ಮಲ್ಲಿದ್ದ ೧,೪೦,೦೦ ಹೆಕ್ಟೇರ್ ಡೀಮ್ಡ್ ಅರಣ್ಯ ಪ್ರದೇಶದ ಪೈಕಿ ಶೇ.೬೦ ರಷ್ಟು ಅಂದರೆ ೫೦ ಸಾವಿರ ಹೆಕ್ಟೇರ್ ಪ್ರದೇಶವನ್ನು ಹೊರತು ಪಡಿಸಲಾಯಿತು. ಈ ವೇಳೆ ಕೆಲವು ಅನಗತ್ಯ ಪ್ರದೇಶವನ್ನು ಸೇರ್ಪಡೆ ಮಾಡಲಾಗಿದೆ. ಇನ್ನೂ ಕೆಲವು ಪ್ರದೇಶವನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ ಎನ್ನುವ ಆಕ್ಷೇಪಗಳು ವ್ಯಕ್ತವಾಗಿದ್ದವು ಎಂದರು.
ಇದೀಗ ಡೀಮ್ಡ್ ಪುನರ್ ಪರಿಶೀಲನೆಗೆ ಸುಪ್ರೀಂಕೋರ್ಟ್ ಆದೇಶಿಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಾಕಷ್ಟು ಸಮಸ್ಯೆಗಳು ಪರಿಹಾರವಾಗುವ ಸಾಧ್ಯತೆಗಳಿವೆ ಎಂದು ವಿವರಿಸಿದರು.
ರಾಜ್ಯದಲ್ಲಿರುವ ೬೪೦೦ ಕಾಡಾನೆಗಳ ಪೈಕಿ ನಮ್ಮ ಜಿಲ್ಲೆಯಲ್ಲೇ ೬೦೦ ಆನೆಗಳಿಗೆ ಅದರಲ್ಲಿ ೪೪೦ ಆನೆಗಳು ಭದ್ರಾ ಹುಲಿ ಸಂರಕ್ಷಿತ ಪ್ರದೇಶ ಅರಣ್ಯದಲ್ಲಿವೆ. ಒಂದೂವರೆ ಲಕ್ಷ ಅರಣ್ಯ ಪ್ರದೇಶವನ್ನು ಅವರು ಆವಾಸ ಸ್ಥಾನವನ್ನಾಗಿ ಮಾಡಿಕೊಂಡಿವೆ ಎಂದು ತಿಳಿಸಿದರು.
ಕೊಪ್ಪ ವಿಭಾಗದಲ್ಲಿ ೧೩೦ ಆನೆಗಳಿವೆ, ಚಿಕ್ಕಮಗಳೂರು ಅರಣ್ಯ ವಿಭಾಗದಲ್ಲಿ ೩೫ ಆನೆಗಳಿವೆ, ಇದರಲ್ಲಿ ತತ್ಕೊಳ ಸಾರಗೋಡು ಭಾಗದಲ್ಲಿ ೨೫ ಆನೆಗಳಿವೆ. ಅವುಗಳನ್ನು ಕ್ಯಾಮೆರಾ ಟ್ಯಾಪಿಂಗ್ ಮಾಡಿ ಗಣತಿಯಲ್ಲಿ ಪ್ರತ್ಯೇಕವಾಗಿ ಗುರುತಿಸಿದ್ದೇವೆ ಎಂದರು.
ಇತ್ತೀಚಿನ ದಿನಗಳಲ್ಲಿ ಕಾಡಂಚಿನ ಗ್ರಾಮಗಳಿಗೆ ಆನೆಗಳು ಲಗ್ಗೆ ಇಟ್ಟು ಹಿಡುವಳಿ ಭೂಮಿಯಲ್ಲಿರುವ ಬೆಳೆಗಳನ್ನೇ ಪರ್ಯಾಯ ಆಹಾರವನ್ನಾಗಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ ಅವುಗಳ ನಿಯಂತ್ರಣಕ್ಕೆ ಇಲಾಖೆಯು ಟೆಂಟಕಲ್ ಬೇಲಿ ಅಳವಡಿಸಲಾರಂಭಿಸಿದೆ. ಈವರೆಗೆ ಸುಮಾರು ೪೦ ಕಿ.ಮೀ. ಬೇಲಿ ಅಳವಡಿಸಲಾಗಿದೆ ಎಂದು ತಿಳಿಸಿದರು.
ಅಂತಹ ಕಡೆಗಳಲ್ಲಿ ಸುಮಾರು ಶೇ.೯೦ ರಷ್ಟು ಆನೆಗಳ ಹಾವಳಿ ಕಡಿವಾಣ ಬಿದ್ದಿದೆ. ಇದನ್ನು ಮನಗಂಡು ಈ ವರ್ಷ ಮತ್ತೆ ಮೂಡಿಗೆರೆ ಪಟ್ಟಣದ ಸಂತೆ ಮೈದಾನದಿಂದ ಕಂಚಿನಕಲ್ ದುರ್ಗವರೆಗೆ ೨೫ ಕಿ.ಮೀ.ಅರಣ್ಯ ಪ್ರದೇಶದಲ್ಲಿ ಟೆಂಟಕಲ್ ಬೇಲಿ ಅಳವಡಿಸುವ ಕಾರ್ಯ ನಡೆಯುತ್ತಿದೆ. ಇದು ಪೂರ್ಣಗೊಂಡರೆ ಆ ಭಾಗದಲ್ಲಿ ಮತಷ್ಟು ಕಾಡಾನೆ ಹಾವಳಿಗೆ ಕಡಿವಾಣ ಬೀಳಲಿದೆ ಎಂದು ತಿಳಿಸಿದರು.
ಆನೆಗಳು ನೀರನ್ನರಸಿ ಹಿಡುವಳಿ ಪ್ರದೇಶದತ್ತ ಬರದಂತೆ ಅರಣ್ಯದಲ್ಲೇ ಕೆರೆಗಳನ್ನು ನಿರ್ಮಾಣ ಮಾಡಿದ್ದೇವೆ. ಈಗಲೂ ೧೦ ಕೆರೆಗಳನ್ನು ನಿರ್ಮಾಣ ಮಾಡಿ, ಮಳೆಗಾಲದಲ್ಲಿ ನೀರು ಸಂಗ್ರಹ ಮಾಡಲಾಗುವುದು ಎಂದು ತಿಳಿಸಿದರು.
ಇತ್ತೀಚೆಗೆ ಕಾಡು ಕೋಣಗಳ ಹಾವಳಿ ಹೆಚ್ಚಾಗಿ ಪ್ರಾಣಹಾನಿಗಳು ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶಕ್ಕೆ ಭೇಟಿ ನೀಡಿ, ಕಾಡು ಕೋಣಗಳನ್ನು ಹಿಡಿದು ಭದ್ರಾ ಅಭಯಾರಣ್ಯಕ್ಕೆ ಬಿಟ್ಟು ನಂತರ ಬೇರೆಡೆಗೆ ಬಿಡುವ ಕಾರ್ಯಾಚರಣೆ ಕೈಗೊಳ್ಳುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ ಅಮಟೆ ಮಾತನಾಡಿ, ತರಬೇತಿ ಪಡೆದವರು ಪರವಾನಗಿ ಪಡೆದ ನಂತರ ಬಂದೂಕುಗಳನ್ನು ದುರುಪಯೋಗಪಡಿಸಿಕೊಳ್ಳಬಾರದು, ಕಾಡು ಪ್ರಾಣಿಗಳಿಂದ ರಕ್ಷಣೆ, ಅಗತ್ಯ ಸಂದರ್ಭದಲ್ಲಿ ಆತ್ಮ ರಕ್ಷಣೆಗೆ ಮಾತ್ರ ಬಳಸಬೇಕು ಎಂದು ತಿಳಿಸಿದರು.
ಈ ಸಂದಂರ್ಭದಲ್ಲಿ ಆರ್‌ಪಿಐ ಸಹದೇವ್ ಉಪಸ್ಥಿತರಿದ್ದರು. ಬಂದೂಕು ತರಬೇತಿ ನೀಡಿದ ಸಿಬ್ಬಂದಿಗಳನ್ನು ಗೌರವಿಸಲಾಯಿತು. ಸುಮಾರು ೫೦೦ ಮಂದಿ ಶಿಬಿರಾರ್ಥಿಗಳಿಗೆ ಬಂದೂಕು ತರಬೇತಿ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು
Civilian Firearms Training Camp concludes