October 26, 2025
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಅನುದಾನ

ಚಿಕ್ಕಮಗಳೂರು: ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿ ಭಾರತದ ಭೂಪಟದಲ್ಲಿ ಗುರುತಿಸುವ ಪ್ರಯತ್ನ ಮಾಡುವುದಾಗಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ‘ಚಿಕ್ಕಮಗಳೂರಿಗೆ ಇನ್ನೂ 2 ಬಾರಿ ಭೇಟಿ ನೀಡಿದರೆ ನನಗೆ ಇಲ್ಲಿನ ಸ್ಪಷ್ಟ ಚಿತ್ರಣ ಸಿಗಲಿದೆ. ಜಿಲ್ಲೆಯಲ್ಲಿ ಹೆಚ್ಚು ಪ್ರವಾಸಿತಾಣಗಳಿವೆ. ಪ್ರವಾಸೋದ್ಯಮ ಮತ್ತು ಲೋಕೋಪಯೋಗಿ ಇಲಾಖೆಯಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದರೆ ಜಿಲ್ಲೆ ಆರ್ಥಿಕವಾಗಿ ಸಬಲವಾಗಲಿದೆ. ಆದ್ದರಿಂದ ಜಿಲ್ಲೆಯಲ್ಲಿ ಮತ್ತೊಮ್ಮೆ ಪರಿವೀಕ್ಷಣೆ ನಡೆಸಿ ಅಗತ್ಯ ಅನುದಾನ ನೀಡಲಾಗುವುದು’ ಎಂದು ಹೇಳಿದರು.

‘ಅರಣ್ಯ ಮತ್ತು ಕಂದಾಯ ಭೂಮಿ ಸಮಸ್ಯೆ ಇರುವ ಬಗ್ಗೆ ತಿಳಿದಿದ್ದೇನೆ. ಈ ಬಗ್ಗೆ ಕಂದಾಯ ಮತ್ತು ಅರಣ್ಯ ಸಚಿವರ ಗಮನ ಸೆಳೆದು ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡುತ್ತೇನೆ’ ಎಂದರು.

‘ಜಿಲ್ಲಾ ಕಾಂಗ್ರೆಸ್ ಕಚೇರಿ ಕಟ್ಟಡ ವೀಕ್ಷಿಸಿದ್ದೇನೆ. ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಘಟಕದಿಂದ ಈ ಕಚೇರಿ ಕಟ್ಟಡ ನಿರ್ಮಾಣಕ್ಕೆ ಆರ್ಥಿಕ ಸಹಾಯ ಮಾಡಲಾಗುವುದು. ಬೆಳಗಾವಿಯ ನಾಲ್ವರು ಅಧ್ಯಕ್ಷರನ್ನು ಇಲ್ಲಿಗೆ ಕರೆಸಿ ಸಹಾಯ ಮಾಡುವ ಬಗ್ಗೆ ಘೋಷಣೆ ಮಾಡುತ್ತೇವೆ’ ಎಂದು ಹೇಳಿದರು.

‘ಕೆಪಿಸಿಸಿಯಿಂದ ಭರ್ತಿ ಮಾಡಬೇಕಾದ ಹಲವು ಹುದ್ದೆಗಳು ಇನ್ನೂ ಬಾಕಿ ಇವೆ. ಮೂಲ ಕಾಂಗ್ರೆಸಿಗರಿಗೆ ಶೇ 70ರಷ್ಟು, ಹೊಸಬರಿಗೆ ಶೇ 30ರಷ್ಟು ಅನುಪಾತದಲ್ಲಿ ಅಧಿಕಾರ ಹಂಚಿಕೆ ಆಗಬೇಕು ಎಂದು ಪ್ರತಿಪಾದಿಸಿದ್ದೇನೆ. ಕಾರ್ಯಕರ್ತರಿಗೆ ಅತಿ ಶೀಘ್ರದಲ್ಲಿ ಅಧಿಕಾರ ಕೊಡಿಸುವ ಪ್ರಯತ್ನ ಮಾಡುತ್ತೇನೆ. 2028ರ ಚುನಾವಣೆಯನ್ನು ಕಾರ್ಯಕರ್ತರು ಸವಾಲಾಗಿ ಸ್ವೀಕರಿಸಬೇಕು’ ಎಂದು ತಿಳಿಸಿದರು. 

ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ‘ಚಿಕ್ಕಮಗಳೂರು ಕ್ಷೇತ್ರದಲ್ಲಿ ಮಳೆಯಿಂದ ಹಾನಿಯಾದ ರಸ್ತೆ, ಸೇತುವೆಗಳನ್ನು ಸಚಿವರು ವೀಕ್ಷಣೆ ಮಾಡಿದ್ದಾರೆ. ಮಹಲ್‌ನಿಂದ ಕೆಮ್ಮಣ್ಣುಗುಂಡಿ ತನಕ 15 ಕಿ.ಮೀ. ರಸ್ತೆ ಅಭಿವೃದ್ಧಿ ಸಂಬಂಧ ಅರಣ್ಯ ಸಚಿವರೊಂದಿಗೆ ಚರ್ಚಿಸಿ ಈಗಿರುವ ಅಡೆತಡೆ ಸರಿಪಡಿಸಿ ರಸ್ತೆ ಮಾಡಿಸಿಕೊಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದರು.

ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್‌ ಜಾರಕಿಹೊಳಿ, ಕಾಂಗ್ರೆಸ್ ಮುಖಂಡರಾದ ಮಂಜೇಗೌಡ, ಡಾ.ವಿಜಯಕುಮಾರ್, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ರೇಖಾ ಹುಲಿಯಪ್ಪಗೌಡ, ತನೋಜ್‌ ನಾಯ್ಡು, ಪ್ರಶಾಂತ್, ಮಹಮದ್ ಹನೀಫ್, ಅಕ್ಬರ್, ಮಲ್ಲೇಶಸ್ವಾಮಿ, ರಾಮಚಂದ್ರ ಇದ್ದರು.

More grants for tourism development in the district

Related posts

ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ದ್ವಿಭಾಷಾ ನೀತಿ ಜಾರಿಗೊಳಿಸಲು ಮನವಿ

Team Suddigara

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ಕೋಟೆ ರಂಗನಾಥ್ ಅವಿರೋಧ ಆಯ್ಕೆ

Team Suddigara

ಜಿಲ್ಲೆಗೆ 20 ಹೊಸ ಆರೋಗ್ಯ ಕ್ಷೇಮ ಕೇಂದ್ರ ಮಂಜೂರು

Team Suddigara

Leave a Comment

[t4b-ticker] [t4b-ticker]