October 26, 2025
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಮಲೆನಾಡು ಭಾಗದಲ್ಲಿ ಎಡೆಬಿಡದೆ ಸುರಿಯುತ್ತಿದೆ. 

ಮುಳ್ಳಯ್ಯನಗಿರಿ, ಕೆಮ್ಮಣ್ಣುಗುಂಡಿ, ಕುದುರೆಮುಖ, ಕಳಸ, ಕೊಪ್ಪ, ಶೃಂಗೇರಿ, ಬಾಳೆಹೊನ್ನೂರು, ಕೊಟ್ಟಿಗೆಹಾರ, ಆಲ್ದೂರು, ಎನ್.ಆರ್.ಪುರ, ಆಲ್ದೂರು ಸೇರಿ ಹಲವೆಡೆ ಮಳೆ ಸುರಿಯುತ್ತಿದೆ. ಚಿಕ್ಕಮಗಳೂರು ನಗರದಲ್ಲೂ ಭಾನುವಾರ ಬೆಳಿಗ್ಗೆಯಿಂದ ಜಿಟಿಜಿಟಿ ಮಳೆ ಸುರಿಯಿತು.

ಶೃಂಗೇರಿಯ ಸಮೀಪದ ಸುಂಕದ ಮಕ್ಕಿ– ನೆಮ್ಮಾರ್ ಸಮೀಪ ವಿಪರೀತ ಮಳೆಗೆ ಹೆದ್ದಾರಿ ಮೇಲೆ ಗುಡ್ಡದ ಮಣ್ಣು ಬಿದ್ದಿದೆ. ಇದರಿಂದ ಎಸ್.ಕೆ. ಬಾರ್ಡರ್ ಮತ್ತು ಕಾರ್ಕಳಕ್ಕೆ ಸಂಪರ್ಕ ಕಡಿತಗೊಂಡಿತ್ತು. 

ಮಳೆಯ ನಡುವೆ ಮುಳ್ಳಯ್ಯನಗಿರಿ ಭಾಗದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ಮಳೆಯ ನಡುವೆ ವಾಹನ ದಟ್ಟಣೆಯಲ್ಲಿ ಸಿಲುಕಿ ಪ್ರವಾಸಿಗರು ಪರದಾಡಿದರು.

ಬಿರುಸುಗೊಂಡ ಮಳೆ: ಮೂಡಿಗೆರೆ ತಾಲ್ಲೂಕಿನಾದ್ಯಂತ ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಎಡೆಬಿಡದೇ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಳಿಸಿತು.

ತೀವ್ರ ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ಸ್ಥಗಿತವಾಗಿದ್ದು, ಕಾರ್ಮಿಕರಿಗೆ ರಜೆ ಘೋಷಿಸಲಾಗಿತ್ತು. ಕಳೆದ 24 ಗಂಟೆಗಳಲ್ಲಿ ಕೊಟ್ಟಿಗೆಹಾರದಲ್ಲಿ 147.2 ಮಿ.ಮೀ, ಜನ್ನಾಪುರ 40 ಮಿ.ಮೀ, ಜಾಣಿಗೆ 73 ಮಿ.ಮೀ, ಪಟ್ಟಣದಲ್ಲಿ 35 ಮಿ.ಮೀ, ಮಗ್ಗಲಮಕ್ಕಿ 48 ಮಿ.ಮೀ ನಷ್ಟು ಮಳೆಯಾಗಿದೆ.

ನಿರಂತರ ಮಳೆ: ಆಲ್ದೂರು ಹೋಬಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಿರಂತರವಾಗಿ ಮಳೆ ಸುರಿಯಿತು. ಸಂಜೆ ವೇಳೆ ಕೊಂಚ ಬಿಡುವು ಪಡೆದುಕೊಂಡಿತು.

ಯಲಗುಡಿಗೆ, ಹೊಸಳ್ಳಿ, ತುಡುಕೂರು, ಬನ್ನೂರು, ಚಿಕ್ಕಮಾಗರವಳ್ಳಿ, ದೊಡ್ಡ ಮಾಗರವಳ್ಳಿ ಹಳಿಯೂರು, ತೋರಣ ಮಾವು, ಗುಲ್ಲನ್ ಪೇಟೆ, ಸತ್ತಿಹಳ್ಳಿ, ಹಾಂದಿ, ಹಂಗರವಳ್ಳಿ, ಬೈಗೂರು, ಆವತಿ, ಕೆರೆಮಕ್ಕಿ, ಮಾಗೋಡು, ಅರೇನೂರು, ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ.

ಬಿರುಸಿನ ವರ್ಷಧಾರೆಯಿಂದ ರೈತರು ಸಂತಸಗೊಂಡಿದ್ದು, ಭತ್ತದ ನಾಟಿ ಚಟುವಟಿಕೆ ಗರಿಗೆದರಿವೆ. ಮಳೆ ಕೊಂಚ ಬಿಡುವು ನೀಡಿದರೆ ಇನ್ನಷ್ಟು ಅನುಕೂಲವಾಗಲಿದೆ ಎಂದು ಕೆರೆಮಕ್ಕಿ ಕಾಫಿ ಬೆಳೆಗಾರ ಮಹೇಶ್ ತಿಳಿಸಿದರು‌.

ಸಾಧಾರಣ ಮಳೆ: ಕಡೂರು ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಭಾನುವಾರ ಸಾಧಾರಣ ಮಳೆಯಾಗಿದೆ.

ಕಡೂರು ಪಟ್ಟಣ, ಬೀರೂರು ಪಟ್ಟಣ, ಹಿರೇನಲ್ಲೂರು, ಎಮ್ಮೆದೊಡ್ಡಿ, ಸಖರಾಯಪಟ್ಟಣ, ಪಂಚನಹಳ್ಳಿ, ಸಿಂಗಟಗೆರೆ, ಮೊದಲಾದ ಕಡೆ ಬೆಳಿಗ್ಗೆಯಿಂದ ಮೋಡಕವಿದ ವಾತಾವರಣವಿದ್ದು, ಆಗಾಗ ತುಂತುರು ಮಳೆ ಸುರಿದಿದೆ.

ಚುರುಕುಗೊಂಡ ಮಳೆ: ನರಸಿಂಹರಾಜಪುರ ತಾಲ್ಲೂಕಿನಾದ್ಯಂತ ಶನಿವಾರ ಬೆಳಿಗ್ಗೆಯಿಂದ ಕ್ಷೀಣಿಸಿದ್ದ ಮಳೆ ‌ರಾತ್ರಿಯಿಂದ ಚುರುಕು ಪಡೆದುಕೊಂಡಿದೆ.

ಭಾನುವಾರ ಬೆಳಿಗ್ಗೆಯಿಂದಲೇ ಬಿಟ್ಟು, ಬಿಟ್ಟು ಗಾಳಿ ಸಹಿತ ಮಳೆ ಸುರಿಯಿತು. ಮಧ್ಯಾಹ್ನದ ವೇಳೆಗೆ ಬಿರುಸು ಪಡೆಯಿತು. ಸಂಜೆ ಮೋಡ ಕವಿದ ವಾತಾವರಣ ಇತ್ತು.

ಬಿರುಸಿನ ಮಳೆ: ಕೊಪ್ಪ ಪಟ್ಟಣವೂ ಸೇರಿದಂತೆ ತಾಲ್ಲೂಕಿನಲ್ಲಿ ಭಾನುವಾರ ಬೆಳಿಗ್ಗೆಯಿಂದ ಸಂಜೆವರೆಗೆ ಬಿರುಸಿನ ಮಳೆಯಾಗಿದೆ. ಶನಿವಾರ ರಾತ್ರಿಯೂ ಮಳೆಯಾಗಿತ್ತು. ಗಾಳಿ, ಮಳೆಗೆ ಗ್ರಾಮೀಣ ಭಾಗದಲ್ಲಿ ಕೆಲವೆಡೆ ವಿದ್ಯುತ್ ವ್ಯತ್ಯಯವಾಗಿತ್ತು.

Heavy rains in the Malenadu region of Chikkamagaluru district

Related posts

ಮಾದಕ ವಸ್ತುಗಳ ಸೇವನೆ ಆರೋಗ್ಯದ ಮೇಲೆ ದುಷ್ಪರಿಣಾಮ 

Team Suddigara

ಸಿಎಂ-ಡಿಸಿಎಂ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

Team Suddigara

ಅ.19 ರಿಂದ 23 ರವರೆಗೆ ದೇವೀರಮ್ಮ ದೀಪೋತ್ಸವ

Team Suddigara

Leave a Comment

[t4b-ticker] [t4b-ticker]