ಚಿಕ್ಕಮಗಳೂರು: ಬಿಂಡಿಗಾ ಆದಿಶಕ್ತಿ ಶ್ರೀ ದೇವೀರಮ್ಮ ಜಾತ್ರೆ ಹಾಗೂ ದೀಪೋತ್ಸವದ ಹಿನ್ನೆಲೆಯಲ್ಲಿ ವಾಹನಗಳ ಸಂಚಾರ ಹಾಗೂ ನಿಲುಗಡೆ ವ್ಯವಸ್ಥೆಯನ್ನು ಕ್ರಮಬದ್ಧಗೊಳಿಸಿ ಆದೇಶ ಹೊರಡಿಸಿರುವ ಜಿಲ್ಲಾ ದಂಡಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಸಿ.ಎನ್.ಮೀನಾ ನಾಗರಾಜ್ ಅವರು ಅಕ್ಟೋಬರ್ ೧೯ರ ಬೆಳಿಗ್ಗೆ ೬ ಗಂಟೆಯಿಂದ ೨೦ರ ರಾತ್ರಿ ೧೦ ಗಂಟೆಯವರೆಗೆ ಸ್ಥಳೀಯರು ಹಾಗೂ ಭಕ್ತಾದಿಗಳ ವಾಹನಗಳನ್ನು ಹೊರತುಪಡಿಸಿ ತರೀಕೆರೆಯಿಂದ ಚಿಕ್ಕಮಗಳೂರು ಕಡೆಗೆ ಬರುವ ಇತರ ಎಲ್ಲಾ ವಾಹನಗಳು ಕಡ್ಡಾಯವಾಗಿ ಕಡೂರು ಮಾರ್ಗವಾಗಿ ಚಲಿಸುವಂತೆ ಸೂಚಿಸಿದ್ದಾರೆ.
ಬಿಂಡಿಗಾ ಹಾಗೂ ಮಲ್ಲೇನಹಳ್ಳಿ ಗ್ರಾಮದಲ್ಲಿ ಅಕ್ಟೋಬರ್ ೧೯ ರಿಂದ ೨೩ರವರೆಗೆ ನಡೆಯಲಿರುವ ಶ್ರೀ ದೇವೀರಮ್ಮನವರ ಜಾತ್ರೆ ಹಾಗೂ ದೀಪೋತ್ಸವದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಸಲ್ಲಿಸಿರುವ ವರದಿಯನ್ನು ಆಧರಿಸಿ ಅವರು ವಾಹನ ಸಂಚಾರ ಹಾಗೂ ನಿಲುಗಡೆ ಬಗ್ಗೆ ಅಗತ್ಯ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ಅಕ್ಟೋಬರ್ ೧೯ ಮತ್ತು ೨೦ ರಂದು ಚಿಕ್ಕಮಗಳೂರು-ಮಲ್ಲೇನಹಳ್ಳಿ ಮತ್ತು ತರೀಕೆರೆ-ಲಿಂಗದಹಳ್ಳಿ-ಮಲ್ಲೇನಹಳ್ಳಿ ಮಾರ್ಗದಲ್ಲಿ ಅನುಮತಿ ಇಲ್ಲದೆ ಸಂಚರಿಸುವ ಖಾಸಗಿ ಬಸ್‌ಗಳ ಸಂಚಾರವನ್ನು ನಿಷೇಧಿಸಲಾಗಿದೆ. ಅ.೧೯ ಮತ್ತು ೨೦ ರಂದು ತರೀಕೆರೆ-ಲಿಂಗದಹಳ್ಳಿ-ಸಂತವೇರಿ ಮಾರ್ಗವಾಗಿ ಬರುವ ಭಕ್ತಾದಿಗಳ ವಾಹನಗಳನ್ನು ಕುಮಾರಗಿರಿಯಲ್ಲಿ ಪಾರ್ಕಿಂಗ್ ಮಾಡುವುದು ಹಾಗೂ ಚಿಕ್ಕಮಗಳೂರು-ಕೈಮರಾ ಮಾರ್ಗವಾಗಿ ಬಿಂಡಿಗ ಮಲ್ಲೇನಹಳ್ಳಿಗೆ ಬರುವ ವಾಹನಗಳನ್ನು ನಿಗದಿಪಡಿಸಿರುವ ಮಲ್ಲೇನಹಳ್ಳಿ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮಾತ್ರ ಪಾರ್ಕಿಂಗ್ ಮಾಡುವುದು ಹಾಗೂ ಯಾವುದೇ ಕಾರಣಕ್ಕೂ ರಸ್ತೆಯ ಬದಿಯಲ್ಲಿ ವಾಹನ ನಿಲುಗಡೆ ಮಾಡುವುದನ್ನು ನಿಷೇಧಿಸಲಾಗಿದೆ. ಅಲ್ಲದೆ, ಮಲ್ಲೇನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಗೇಟ್‌ನಿಂದ ಕುಮಾರಗಿರಿ ಗೋಪುರದವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಯಾವುದೇ ರೀತಿಯ ವಾಹನಗಳನ್ನು ಪಾರ್ಕಿಂಗ್ ಮಾಡದಂತೆ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ದೇವಿ ದರ್ಶನಕ್ಕೆ ಸಮಯ ನಿಗದಿ: ಪ್ರತೀ ವರ್ಷ ದೀಪಾವಳಿ ಹಬ್ಬದ ಮುನ್ನಾದಿನ (ನರಕ ಚತುರ್ದಶಿ) ಬೆಟ್ಟಕ್ಕೆ ತೆರಳಿ ದರ್ಶನ ಪಡೆಯುತ್ತಿದ್ದು, ಈ ವರ್ಷದಿಂದ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಮತ್ತು ಜನಸಮೂಹ ನಿಯಂತ್ರಣ ಮಾಡುವ ದೃಷ್ಟಿಯಿಂದ ಅಕ್ಟೋಬರ್ ೧೯ರ ಬೆಳಿಗ್ಗೆ ೮ ಗಂಟೆಯಿಂದ ಸಂಜೆ ೪ ಗಂಟೆಯವರೆಗೆ ಹಾಗೂ ೨೦ ರಂದು ಬೆಳಿಗ್ಗೆ ೮ ಗಂಟೆಯಿಂದ ಮಧ್ಯಾಹ್ನ ೨ ಗಂಟೆಯವರೆಗೆ ಮಾತ್ರ ದೇವಿಯ ದರ್ಶನಕ್ಕೆ ಸಮಯ ನಿಗದಿಪಡಿಸಿದ್ದು, ಈ ಸಂದರ್ಭದಲ್ಲಿ ಶ್ರೀ ದೇವೀರಮ್ಮ ಬೆಟ್ಟದಲ್ಲಿ ಅಭಿಷೇಕ, ನಂತರ ಪೂಜಾ ವಿಧಿ-ವಿಧಾನಗಳು ನೆರವೇರಲಿವೆ.
ಈ ಎರಡು ದಿವಸಗಳಲ್ಲಿ ಸುಮಾರು ೮೦,೦೦೦ ದಿಂದ ೯೦,೦೦೦ ಭಕ್ತಾದಿಗಳು ವಿವಿಧ ಮಾರ್ಗಗಳಿಂದ ಬೆಟ್ಟ ಹತ್ತಿ ಶ್ರೀ ದೇವೀರಮ್ಮನ ದರ್ಶನ ಪಡೆಯಲಿದ್ದಾರೆ. ಈ ಸಂದರ್ಭದಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆಗೊಳಿಸುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಧಕ್ಕೆ ಉಂಟು ಮಾಡುವ ಸಾಧ್ಯತೆ ಇದೆ. ಜೊತೆಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸುವುದು ಅನಿವಾರ್ಯ ssಎಂದು ಅವರು ಮಾಹಿತಿ ನೀಡಿದ್ದಾರೆ.
Guidelines for vehicle parking during Deviramma Jatrotsav